(ತೆರೆ ಸರಿದಾಗ ಒಂದು ಸಾಮಾನ್ಯ ಮನೆಯ ಪಡಸಾಲೆ. ರಂಗದ ಎಡಕ್ಕೊಂದು ಬಾಗಿಲು, ಬಲಗಡೆಗೊಂದು, ಎಡಬಾಗಿಲು ಮನೆಯ ಒಳಕ್ಕೆ ಒಯ್ದರೆ ಬಲಬಾಗಿಲು ಹೊರಕ್ಕೆ. ಪಡಸಾಲೆಯ ಮಧ್ಯದಲ್ಲಿ ಒಂದು ಸೋಫಾ. ಅದರ ಕಡೆಗೆ ಇನ್ನೆರಡು ಕುರ್ಚಿಗಳು. ಸೋಫಾದ ಮೇಲೆ ಗೋವಿಂದಪ್ಪ, ವಯಸ್ಸು ಐವತ್ತರ ಮೇಲೆ; ಅವನ ಪಕ್ಕದಲ್ಲಿ ಕಾಶಿ, ವಯಸ್ಸು ಮೂವತ್ತೈದು ಕೂತಿದ್ದಾರೆ. ಇಬ್ಬರೂ ಕಪ್ಪು ಚಾಳೀಸು ಹಾಕಿದ್ದಾರೆ. ಅದನ್ನು ಮತ್ತೆ ಸರಿಪಡಿಸಿಕೊಳ್ಳುತ್ತ ಆಕಳಿಸುತ್ತಿದ್ದಾರೆ. ಸ್ವಲ್ಪ ಹೊತ್ತು ನೀರವ.)

ಗೋವಿಂದ : ದೇವೀ, ಬೇಸರವಾಯಿತೆ?

ಕಾಶಿ : (ಆಕಳಿಸುತ್ತ)
ಇಲ್ಲ ಆರ್ಯಪುತ್ರಾ, ತಮಗೆ ಬೇಸರವಾಯಿತೆ?

ಗೋವಿಂದ : ಇಲ್ಲ ಇಲ್ಲ.
(ದೊಡ್ಡದಾಗಿ ಎಂದು ಆಕಳಿಸಿ ಅವಳ ಗಮನ ಸೆಳೆದು) ಪ್ರಿಯೆ, ನಾನೀಗ ಏನು ಮಾಡಿದೆನೆಂದು ಗೊತ್ತಾಯಿತೆ?

ಕಾಶಿ : ಗೊತ್ತಿಲ್ಲ.

ಗೋವಿಂದ : ಗೊತ್ತಾಗದಿದ್ದರೆ ಕೇಳಬೇಕು: ಆರ್ಯಪುತ್ರಾ, ಏನು ಮಾಡಿದಿರಿ? – ಅಂತ.

ಕಾಶಿ : ಆರ್ಯಪುತ್ರಾ, ತಾವೀಗ ಏನು ಮಾಡಿದಿರಿ?

ಗೋವಿಂದ : ಪ್ರಿಯೆ, ನಾನೀಗ ಆಕಳಿಸಿದೆ!

ಕಾಶಿ : ಆಹಾ! ಆರ್ಯಪುತ್ರರು ಆಕಳಿಸಿದಿರಾ! ತಾವು ಆಕಳಿಸಿದ ಮೇಲೆ ಅದು ಅದ್ಭುತವಾಗಿಯೇ ಇರಬೇಕು. ತಮ್ಮ ಸುವಿಶಾಲ ಬಾಯನ್ನು ತೆರೆದು, ದಾಳಿಂಬದ ಬೀಜಗಳೋ ಎಂಬಂಥ ದಂತಪಂಕ್ತಿಯ ಮಧ್ಯದೊಳಗಿಂದ ‘ಆ’ ಎಂಬ ಧ್ವನಿ ಬಂದು, ತಮ್ಮ ಉಸಿರಿನ ವಾಸನೆಯಿಂದ ಅರಮನೆಯೆಲ್ಲ ಪರಿಮಳದಿಂದ ತುಂಬಿ ಹೋಗಿದೆ.

ಗೋವಿಂದ : ಹೌದು ದೇವೀ, ಮಹಾವ್ಯಕ್ತಿಗಳು ಆಕಳಿಸಿದರೂ ಅದ್ಭುತವೆ!
(ಸ್ವಲ್ಪ ಹೊತ್ತು ನೀರವ. ಕಾಶಿ ಚಾಳೀಸು ತೆಗೆಯಬೇಕೆಂದಿರುವಾಗ ಗೋವಿಂದ ತಡೆಯುವನು)
ಪ್ರಿಯೆ, ಬೇಸರವಾಯಿತೆ?

ಕಾಶಿ : ಆರ್ಯಪುತ್ರಾ, ಇಲ್ಲ, ತಮಗೆ ಬೇಸರವಾಯಿತೆ?
( ಮಾತು ಹೇಳುತ್ತಿರುವಂತೆ ಗೋವಿಂದ ಒಂದು ತಗಣೆ ಕೊಂದು ಕೈ ಮೂಸಿ ನೋಡಿಕೊಳ್ಳುವನು.)

ಗೋವಿಂದ : ದೇವೀ, ನಾನೀಗ ಏನು ಮಾಡಿದೆ ಗೊತ್ತೆ?

ಕಾಶಿ : ಗೊತ್ತಿಲ್ಲ.

ಗೋವಿಂದ : ಗೊತ್ತಿಲ್ಲದಿದ್ದರೆ ಕೇಳಬೇಕು : ಆರ್ಯಪುತ್ರಾ, ಏನು ಮಾಡಿದಿರಿ? ಅಂತ.

ಕಾಶಿ : ಆರ್ಯಪುತ್ರಾ, ಏನು ಮಾಡಿದಿರಿ?

ಗೋವಿಂದ : ದೇವೀ, ನಾನೊಂದು ಬೇಟೆಯಾಡಿದೆ.

ಕಾಶಿ : ಆಹಾ! ಆರ್ಯಪುತ್ರರು ಬೇಟೆಯಾಡಿದರೆ? ಎಂಥ ಪ್ರಾಣಿಯನ್ನು?

ಗೋವಿಂದ : ತಗಣೆ ಎಂಬರದನು. ನರಕೋಟಿಯ ನೆತ್ತರು ಹೀರಿ ಮಲೇರಿಯಾ ಹಬ್ಬಿಸುವ ಭಯಂಕರ ಕಾಡುಪ್ರಾಣಿ ಅದು. ಕಚ್ಚಿಸಿಕೊಂಡ ನರಹುಳುಗಳೆಲ್ಲ ಒದ್ದಾಡಿ ಸೆಟೆದು ಸಾಯುವದನ್ನು ನೋಡಲಾರದೆ ಕೊಂದುಬಿಟ್ಟೆ!

ಕಾಶಿ : ಆಹಾ! ಲೋಕಕಲ್ಯಾಣಕ್ಕಾಗಿ ತಗಣೆಯನ್ನು ಬೇಟೆಯಾಡಿ ಕೊಂದ ಧೀರನೂ, ಕಲಿಯುಗವಿಪರೀತನೂ ಆದ ತಮ್ಮ ಕೈಹಿಡಿದು ಧರ್ಮಪತ್ನಿಯಾದ ನಾನೇ ಧನ್ಯಳು! ನಾನೇ ಧನ್ಯಳು!
(ಕಾಶಿ ಚಾಳೀಸು ತೆಗೆಯತೊಡಗುವಳು.)

ಗೋವಿಂದ : ಹಾ! ಪ್ರಿಯೆ, ತೆಗೆಯಬೇಡ! ಇಲ್ಲಿ ಈ ಅರಮನೆಯ ಮಾಲೀಕನನ್ನು ಕರೆದುಕೊಂಡು ಬರುವಂಥವಳಾಗು.

ಕಾಶಿ : (ಬಾಗಿಲವರೆಗೆ ಹೋಗಿ ತಾನೇ ಬಾಗಿಲು ಬಡಿಯುವಳು. ಮುಂದೆ ಬರುವ ನಂಜಯ್ಯನನ್ನು ಅತಿಶಯೋಕ್ತಿಯ ಧಾಟಿಯಲ್ಲಿ ಅನುಕರಿಸುತ್ತ) ಯಜಮಾನರು ಇರುವರೇ?

ಗೋವಿಂದ : ಯಾರಲ್ಲಿ? ಒಳಗೆ ಬರಬಹುದು.

ಕಾಶಿ : ಸಿಕ್ಕರಲ್ಲ ಯಜಮಾನರು! ನೋಡಿ ಸ್ವಾಮಿ, ನನಗೆ ಉಗಿಯೋದಕ್ಕೆ ಬರೋದಿಲ್ಲ ಅಂತಲ್ಲ. ಥೂ! ನೋಡಿದಿರಾ ಹ್ಯಾಗುಗದೆ! ಉಗಿಯೋದೇನು? ಬಾಯಲ್ಲಿ ರಸ ಇದ್ದವರಿಗೆಲ್ಲಾ ಬರುತ್ತದೆ. ರಸವೇನು? ರೋಗ ಬಂದರೆ ರಸ ತಾನೇ ಬಸಿಯುತ್ತದೆ. ಅದಲ್ಲ ನಾ ಹೇಳಬೇಕಾದ್ದು; ಮುಖ್ಯ ವಿಷಯ ಇಷ್ಟು: ನೀವು ಹಿಂದಿನ ಬಾಕಿ ತೀರಿಸದೆ ಈ ಮನೆಯಲ್ಲಿ ಇರಲಿಕ್ಕಾಗೋದಿಲ್ಲ. ನಿಷ್ಠುರವಾದೆ ಅಂತ ಮುನಿಸ್ಕೋಬೇಡಿ. ಒಂದೋ ಬಾಡಿಗೆ ಚುಕ್ತಾ ಮಾಡಬೇಕು. ಇಲ್ಲವೊ ಈಗಲೇ ಈ ಮನೆ ಬಿಟ್ಟುಬಿಡಬೇಕು. ಹ್ಯಾಗನುಕೂಲವೋ ಹಾಗ್ಮಾಡಿ. ಉಗಿಯೋದಕ್ಕೆ ಬರುತ್ತದೆ ಅಂತ ಸಿಕ್ಕ ಸಿಕ್ಕಲ್ಲಿ ಉಗೀಬಹುದಾ? ಅದಲ್ಲ ನಾ ಹೇಳಬೇಕಾದ್ದು….

ಗೋವಿಂದ : ಬಾಯ್ಮುಚ್ಚು! ಈ ಮನೆ ಎಷ್ಟಕ್ಕೊಡ್ತಿ, ಅದ್ಹೇಳು?

ಕಾಶಿ : ಬಾಡಿಗೆ ಕೊಡೋದಕ್ಕೆ ದಿಕ್ಕಿಲ್ಲ, ಬೆಲೆ ಹೇಳಲಾ?

ಗೋವಿಂದ : ಲೋ ನಾಯಿಮಗನೇ, ಕತ್ತೇ ಮಗನೇ, ನಾ ಅಂದರ ಯಾರಂತ ತಿಳಕೊಂಡೀಯೋ? ಆಕಳಿಸಿ ಆಕಳಿಸಿ ಉಸಿರಿನ ಪರಿಮಳದಿಂದ ಇಡೀ ಮನೆ ನಾರುವ ಹಾಗೆ ಮಾಡಿದವರು ಯಾರು? ಲೋಕ ಕಲ್ಯಾಣಕ್ಕಾಗಿ ನರಭಕ್ಷಕ ತಗಣೆಯನ್ನು ಕೊಂದ ಕಲಿಯುಗ ವಿಪರೀತ ಯಾರು? ಯಾರೂ? ನಾನು! ಈಗಲಾದರೂ ತಿಳಿಯಿತೋ? ಹೇಳು, ಈ ಮನೆಯ ಕಿಮ್ಮತ್ತೆಷ್ಟು?

ಕಾಶಿ : ನೋಡಿ ಸ್ವಾಮಿ, ನನಗೆ ಉಗಿಯೋದಕ್ಬರೋದಿಲ್ಲ ಅಂತಲ್ಲ….
(ಚಾಳೀಸು ತೆಗೆಯತೊಡಗುವಳು.)

ಗೋವಿಂದ : (ತಡೆದು)
ಹಾ ಹಾ? ಅದು ಆಮೇಲೆ, ಈಗ್ಹೇಳು.

ಕಾಶಿ : ನೋಡಿ ಸ್ವಾಮಿ, ಮುಖ್ಯ, ಬಾಯಲ್ಲಿ ರಸ ತುಂಬಿದೇಂತ ಮನೇಲಿ ಉಗೀಲಿಕ್ಕಾಗುತ್ತಾ? ಅದಲ್ಲ ನಾ ಹೇಳಬೇಕಾದ್ದು. ಇರೋ ವಿಷಯ ಇಷ್ಟು: ಸೈಟಿಗೆ ಹತ್ತು ಸಾವಿರ, ಅದೂ ಆಗಿನ ಕಾಲ್ದಲ್ಲಿ! ಮನೆ ಕಟ್ಟಿಸೋದಕ್ಕೆ ಐವತ್ತು ಸಾವಿರ. ಮತ್ತೆ ನೀವೇ ನೋಡಿದ್ದೀರಲ್ಲ; ಎರಡು ಸಲ ರಿಪೇರಿ ಮಾಡಿಸ್ದೆ – ಅದು ಹನ್ನೆರಡುನೂರು.

ಗೋವಿಂದ : ನಾ ನಿನಗೆ ಮೊದಲೇ ಹೇಳಿಲ್ಲವೆ-ಗಣಿತದಲ್ಲಿ ನಾ ಧಡ್ಡಾಂತ? ಮುಖ್ಯ ವಿಷಯಕ್ಕೆ ಉಗೀದೇ ಟೋಟಲ್ ಹೇಳು.

ಕಾಶಿ : ನೋಡಿ ಸ್ವಾಮಿ, ಮುಖ್ಯ ವಿಷಯ, ಉಗಿಯೋದಕ್ಕೆ….

ಗೋವಿಂದ : ಆಗಲೇ ಉಗಿದಾಯ್ತಲ್ಲ. ಮುಂದ್ಹೇಳು

ಕಾಶಿ : ಒಟ್ಟು ಬೆಲೆ ನೋಡಿ; ಒಂದ ಲಕ್ಷಕ್ಕಿಂತ ಒಂದೇ ಒಂದು ಪೈಸಾ ಕಡಿಮೆ ಬಂದರೂ ನಾ ಈ ಮನೆ ಕೊಡೋದಿಲ್ಲ.

ಗೋವಿಂದ : ಇಷ್ಟೇನಾ? ತಗೋ ಎರಡ ಲಕ್ಷ. ನನ್ನ ಹೆಸರ್ಹೇಳಿ ಬದಿಕ್ಕೋ ಹೋಗು.
(ದುಡ್ಡು ಕೊಟ್ಟ ಹಾಗೆ ನಟಿಸುವನು.)

ಕಾಶಿ : ತಕ್ಕೊಂಡಂತೆ ನಟಿಸುತ್ತಾ
ಹೌದಾ, ನನಗ್ಗೊತ್ತಿತ್ತು ದೇವರೂ, ತಾವು ದೊಡ್ಡವರೂ ಅಂತ!
ಬಾಯಲ್ಲಿ ರಸ ತುಂಬಿದ ಕೂಡ್ಲೆ ಉಗಿದರಾಯ್ತೆ?

ಗೋವಿಂದ : ಸಾಕು ಸಾಕು, ಹೊರಟ್ಹೋಗಿಲ್ಲಿಂದ.
(ಕಾಶಿ ಬಾಗಿಲ ಕಡೆಗೆ ಹೊರಟಿರುವಷ್ಟರಲ್ಲಿ)
ದೇವೀ

ಕಾಶಿ : (ತಿರುಗಿ ಬಂದು ಮತ್ತೆ ಮೊದಲಿನಂತೆ ಮಾತಾಡುವಳು)
ಹಾ! ಆರ್ಯಪುತ್ರಾ

ಗೋವಿಂದ : ದೇವೀ, ನಾನೀಗ ಏನು ಮಾಡಿದೆ ಗೊತ್ತಾ?

ಕಾಶಿ : ಗೊತ್ತಿಲ್ಲ.

ಗೋವಿಂದ : ಗೊತ್ತಿಲ್ಲದಿದ್ದರೆ ಕೇಳಬೇಕು : ಆರ್ಯಪುತ್ರಾ, ಏನು ಮಾಡಿದಿರಿ? ಅಂತ.

ಕಾಶಿ : ಆರ್ಯಪುತ್ರಾ, ಏನು ಮಾಡಿದಿರಿ?

ಗೋವಿಂದ : ಪ್ರಿಯೆ, ಈ ಮನೆ ಕೊಂಡುಬಿಟ್ಟೆ!

ಕಾಶಿ : ಹೌದೆ? ಈ ಮನೆ ಕೊಂಡು ನನ್ನ ಹೆಸರಿಗೇ ಮಾಡಿದಿರಂತೆ!

ಗೋವಿಂದ : ಹೌದು.

ಕಾಶಿ : ಆರ್ಯಪುತ್ರಾ, ನೋಡಿದಿರಾ? ನನ್ನ ಮನೆ ಎಷ್ಟು ಚೆನ್ನಾಗಿ ಕಾಣುತ್ತಿದೆ! ಇವತ್ತೇ ಆ ಹಾಳು ಮುದಿಯನನ್ನ ಓಡಿಸಿ ಬಿಡ್ತೀನಿ.

ಗೋವಿಂದ : ಅದಾವ ಮುದಿಯನು?

ಕಾಶಿ : (ಗೋವಿಂದನಿಗೆ ಗೊತ್ತಿಲ್ಲದಂತೆ ಚಾಳೀಸು ತೆಗೆಯುವಳು. ಇನ್ನು ಮೇಲಿನ ಅವಳ ಮಾತು ಸಹಜವಾಗಿರುತ್ತದೆ.)
ಕೇಳಬಾರದ? ಈಗ ನಾಕೈದ ದಿನದಿಂದ ಭರ್ತಿ ರಾತ್ರ್ಯಾಗ ಯಾರೋ ಅತ್ಥಾಂಗ ಕೇಳತೈತಿ!

ಗೋವಿಂದ : ಅದೇನು ಹೇಳುತ್ತಿರುವೆ, ದೇವೀ? ಚಾಳೀಸು ಯಾಕೆ ತೆಗೆದೆ?

ಕಾಶಿ : ಅಯ್ಯ, ಆ ಮಸಡೀಮ್ಯಾಲಿನ ಬಣ್ಣಾ ಅಳಿಸಿ ಹಾಕ್ರಿ; ನನಗವನ ಗುರುತಿಲ್ಲ.

ಗೋವಿಂದ : ದೇವೀ, ಹಾಗೆಲ್ಲ ಕಲಿಯುಗವಿಪರೀತನಿಗೆ ತಿಳಿಸದೆ ಚಾಳೀಸು ತೆಗೆದದ್ದು ತಪ್ಪು. ಎಲ್ಲಿ, ಇನ್ನೊಮ್ಮೆ ಚಾಳೀಸು ಧರಿಸುವಂಥವಳಾಗು.

ಕಾಶಿ : ಹಗಲ ರಾತ್ರಿ ಬಣ್ಣದಾಗ ಇರ್ಲಾಕ ನನಗ ಆಗಾಣಿಲ್ಲಾ. ನನಗ ಅರ್ಜೆಂಟ ಏನೋ ಹೇಳಬೇಕಾಗೇತಿ. ನೀವು ಮನಿಶೆರೊಳಗೆ ಬರ್ತೀರೋ? ಕೈಕಾಲು ಕಟ್ಟಿ ಎಳಕೊಂಬರ್ಲೊ?

ಗೋವಿಂದ : ಆಲ್‌ರೈಟ್
(ಚಾಳೀಸು ತೆಗೆಯುವನು. ಇನ್ನು ಮೇಲಿನ ಅವನ ಮಾತೂ ಸಹಜವಾಗಿರುತ್ತದೆ?
ಏನಂಥಾ ಅರ್ಜೆಂಟ ವಿಚಾರ?

ಕಾಶಿ : ಈಗ ಖರೆ ನಂಜಯ್ಯ ಬರತಾನ. ಏನಾದರೂ ಹೊಸ ಸುಳ್ಳ ಹೊಸೀತೀರೋ? ಇಲ್ಲಾ ‘ಆರ್ಯಪುತ್ರ, ದೇವಿ’ – ಅಂತ-ಕೂಡತೀರೊ?

ಗೋವಿಂದ : ಅವ ಬರೋದಿನ್ನೂ ಅರ್ಧತಾಸು.

ಕಾಶಿ : ಈ ಸಲ ಅಂತಿಂಥಾ ಸುಳ್ಳಿಗಿ ಅವ ಹೋಗಾಣಿಲ್ಲಾ.

ಗೋವಿಂದ : ಪ್ರತಿಸಲ ದೊಡ್ಡ ದೊಡ್ಡ ಸುಳ್ಳಿಗೇ ಮೋಸ ಹೋಗೋದಂದರ ಹೆಂಗ? ಒಂದೊಂದ ಸಲ ಸಣ್ಣ ಸಣ್ಣ ಸುಳ್ಳಿಗೂ ‘ಹೂ’ ಅನ್ನಬೇಕು.

ಕಾಶಿ : ಅವ ಅನ್ನಾಣಿಲ್ಲ, ಮುಂದ?

ಗೋವಿಂದ : ಅನ್ನಾಣಿಲ್ಲ ಅಂದರ, ದೊಡ್ಡ ಸುಳ್ಳ ಹೇಳಾಣಿಲ್ಲ.

ಕಾಶಿ : ಹೇಳಾಣಿಲ್ಲ ಅಂದರ ಬಾಡಿಗೇ ಕೊಡು ಅಂತಾನ.

ಗೋವಿಂದ : ಕೊಡಂದರ ದುಡ್ಡಿಲ್ಲ.

ಕಾಶಿ : ದುಡ್ಡಿಲ್ಲಂದರ ಮನೀ ಬಿಟ್ಟ ಹೊರಬೀಳು.

ಗೋವಿಂದ : ಹೊರಬೀಳು, ಹೊರಬೀಳು. ಇಷ್ಟು ದಿನ ನಾ ಹೇಳೇನಿ, ಈಗ ನೀ ಒಂದ್ಸಲ, ಹೌದನ್ನೋ ಹಾಂಗ ಸುಳ್ಳು ಹೇಳs ನೋಡೋಣು.

ಕಾಶಿ : ನಿಮಗ ಸಾಧಿಸಿದಾಂಗ ನನಗ್ಹೆಂಗ ಬಂದೀತು? ನಾ ನಿಮ್ಹಾಂಗ ಗಂಡಸ? ನಮ್ಮ ನಾಯಿ ಇದ್ದಿದ್ದರೆ….

ಗೋವಿಂದ : ಆ ನಾಯೀಮಗನ ಮ್ಯಾಲ ಛೂ ಬಿಡಬಹುದಿತ್ತು.

ಕಾಶಿ : ಇಲ್ಲೇ ಎಲ್ಲಾದರೂ ಇದ್ದಿದ್ದೀತ, ಹೋಗಿ ಹುಡಿಕ್ಕೊಂಡು ಬರಬಾರದ?

ಗೋವಿಂದ : ಧಾರಾವಾಡದಂಥಾ ಊರಾಗ ಕಳಕೊಂಡ ಮಂದಿ ಸಿಗಾಣಿಲ್ಲಾ; ನಿನ್ನ ನಾಯಿ ಸಿಕ್ಕೀತೇನ?

ಕಾಶಿ : ಸಿಕ್ಕೀತೇನಂತ ಬಾಯಲೆ ಪುರ್ ಮಾಡಿದರ ಸಿಗತೈತಿ? ಗಂಡಸಾಗಿ ಗಡಗಡ ಹೋಗಬೇಕು. ಒಂದ ಬಿಟ್ಟ ಹತ್ತ ಓಣಿ ತಿರಗಬೇಕು. ನಾಕಮಂದಿ ಅವ್ವಕ್ಕ ಗೋಳ್ನ ಕೇಳಬೇಕು: ಕುಂತಿರೋ ಅವ್ವಾ, ನಿಂತಿರೋ ಅಕ್ಕಾ, ನನ್ನ ಹಣಚಿಕ್ಕ ನಾಯಿ ಸಿಕ್ಕಿದ್ದರ ಕೊಡುವಂಥವರಾಗಿರಿ-

ಗೋವಿಂದ : ಅಡಪ ಹತ್ತಿದ ನಾಯೀ ಇಷ್ಟು ದಿನ ಮುನ್ಸೀಪಾಲ್ಟಿಯವರು ಬಿಟ್ಟಾರೇನ?

ಕಾಶಿ : ಅಡಪ ಹತ್ತಿದರೇನಾತು? ನಾಯಂದರ ನಾಯಿ. ಮಂದೀ ನಾಯೀ ಹಾಂಗ ಮೈ ತುಂಬಿಕೊಂಡ ತೆಕ್ಯಾಗ ಈಡಾಗತಿರಲಿಲ್ಲ, ಖರೆ. ಆದರೂ ‘ನಾಗ್ಯಾ ನಾಗ್ಯಾ ಛೂ’ ಅಂದರ ಬಾಲಾ ಆಡಿಸಿಕೊಂಡ ವೊವ್ ವೊವ್ ವೊವ್ ಅಂತಿತ್ತ. ಬೆನ್ನ ಮ್ಯಾಲ ಕೈಯಾಡಿಸಿದರ ಕುಂಯ್ ಕುಂಯ್ ಕುಂಯಂತ ಎಷ್ಟ ಚಂದ ರಾಗ ಎಳೀತಿತ್ತ! ಮುನ್ಸೀಪಾಲ್ಟಿಯವರಿಗೆ ಇಷ್ಟೂ ತಿಳಿಯಾಣಿಲ್ಲಾ?

ಗೋವಿಂದ : ಮಾತಾಡ ಮಾತಾಡ; ಎಷ್ಟಂದರೂ ಬಾಯಿ ಮಾಡೋಹಾಂಗ ಎದಕ್ಕೂ ಸಪ್ಪಳಾ ಮಾಡಾಕ ಆಗಾಣಿಲ್ಲ.

ಕಾಶಿ : ಹಿಂಗೆಲ್ಲಾ ಸೋಪ ಹಚ್ಚಿ ಜಾರಿಕೊಳ್ಳಾಕ ಯಾರಿಗಿ ಬರಾಣಿಲ್ಲಾ? ಅಪ್ಪಣೆ ಕೊಡ್ರಿ ನಾ ಹೋಗತೇನ. ಈ ಮನೀಗಿ ಬಂದ ಏನ ಸುಖ ಕಂಡೀನಿ? ಉಟ್ಟೇನಂದರ ಒಂದ ಚೆಂದ ಸೀರಿಲ್ಲಾ, ತೊಟ್ಟೇನಂದರ ಒಂದ ಕುಪ್ಪಸಿಲ್ಲಾ.

ಗೋವಿಂದ : ಸೀರಿ ಕಳ್ಯಾಕ ಬರ್ತದsನ ಹೊರತು ಉಡಾಕ ಬರೋದs ಇಲ್ಲ ನಿನಗ. ಮತ್ತು ಸೀರಿ ಬೇಕಂತಿ. ಆದರೂ ನನ್ನ ಪ್ರಿಯ ಮಡದಿಯೇ, ಒಂದು ಮಾತು ಹೇಳುವೆನು ಕೇಳು: ಉಡೋಸೀರಿ, ತೊಡೋ ಕುಪ್ಪಸ ಯಾವುದೂ ಶಾಶ್ವತ ಅಲ್ಲಾ! ಕಾಣಬಾರದ? ನೀ ಸಾಕಿದ ನಾಯಿ ಹೆಂಗ ನಿನ್ನ ಮುಂದs ಗಪ್ಪಗಾರಾಯ್ತು?

ಕಾಶಿ : ಹೋಗಿ ಯಾಕ ಹುಡಿಕ್ಕೊಂಡ ಬರಬಾರದು?

ಗೋವಿಂದ : ಹೊಚ್ಚಲ ಹೊರಗ ಕಾಲಿಡೋದs ತಡ, ಸಾಲಗಾರರೆಲ್ಲಾ ಮುಗಿಬಿದ್ದ “ಮಗನ ಹತ್ತೆಂಟ ರೂಪಾಯಿ ಸಾಲಾ ತೀರಸಲಿಲ್ಲ; ಏನ ಬಾಳ್ವೆ ಮಾಡಿದಿ?” ಅಂತ ಮಾನಾ ಕಳೀತಾರ – ಹೋಗಂದಿ?

ಕಾಶಿ : ಅಂಥಾ ಮಾನಾ ಇಟ್ಟಕೊಂಡ ಮನ್ಯಾಗ ಕೂತರ ನಂಜ್ಯಾ ಬಿಡತಾನೇನ?

ಗೋವಿಂದ : ಒಬ್ಬನ ಮುಂದ ಮಾನ ಹೋಗೋದಕ್ಕೂ, ಸಭಾದಾಗ ಹೋಗೋದಕ್ಕೂ ಅಂತರ ಇಲ್ಲೇನ? ಅದನ್ನೆಲ್ಲಾ ಏನ ಮಾಡತಿ? ನಾಳಿ, ನಾಡಿದ್ದ ನಾ ಕಾಶೀ ಯಾತ್ರಾ ಹೊಂಡತೇನ. ನಿನಗೂ ಕಾಶೀ ನೋಡಬೇಕಂತ ಭಾಳ ಮನಸ್ಸಿತ್ತು; ಅದಕ್ಕ ನೀನೂ ನನ್ನ ಜೋಡಿ ನಡಿ. ಅಲ್ಲಿ ಒಂದು ಮನೀ ಮಾಡೋಣು; ಹೊಸಾ ಸೀರಿ, ಕುಪ್ಪಸಾ ಏನ ಬೇಕ ಅದನ್ನೆಲ್ಲಾ ಉಟ್ಟ ತಿರಿಗೀಯಂತ. ನೀ ಜೋಡಿ ಇದ್ದರ ನನಗೂ ಧೈರ್ಯ ಬರತದ, ಏನಂತಿ?

ಕಾಶಿ : ಬಾಡಿಗೀ ಕೊಡದ ನಂಜ್ಯಾ ಬಿಟ್ಟಾನ್ಹೆಂಗ?

ಗೋವಿಂದ : ಬಿಡದೇನ ಮಾಡತಾನ? ಅವನs ಹೇಳಿಲ್ಲಾ? ಈ ವಾರ ಹಿಂದಿನ ಬಾಕಿ ಕೊಟ್ಟಿರ ಇರ್ರಿ, ಇಲ್ಲದಿದ್ದರ ಮನಿ ಬಿಡರಿ ಅಂತ?

ಕಾಶಿ : ಅಯ್ಯೋ ದೇವರs ಇನ್ನು ಇಂಥಾದ್ನೆಲ್ಲಾ ಎಷ್ಟು ದಿನ ಕೇಳಬೇಕಂತ ಬರದೀಯೋ ನನ್ನ ಹಣ್ಯಾಗ?

ಗೋವಿಂದ : ಹೌದ? ನನಗs ನಿನಗs ಇರೋ ಅಂತರ ಇದು. ನನಗದು ಗೊತ್ತದ, ನಿನಗ್ಗೊತ್ತಿಲ್ಲಾ.

ಕಾಶಿ : ವಯಸ್ಸ ಹ್ವಾಧಾಂಗ ಮಂದಿ ಗಣಿತದಾಗ ಹುಷಾರಾಗಿ ಅಂದ ಮಾತ ಪೈಸಾಕ ಪೈಸಾ ನಡಿಸಿಕೊಡತಾರಂತ. ನೀವು ಇದ್ದ ಮನೀ ಬಾಡಿಗಿ ತೀರಿಸಲಿಲ್ಲ.

ಗೋವಿಂದ : ಅಲ್ಲಂದರ ಅದನ್ನs ಹಾಡತಾಳಲ್ಲೊ! ಮೊದಲಿನ್ಹಾಂಗ ಮಾತಾಡಾಕs ಬರಾಣಿಲ್ಲ. ನಿನಗ. ದಿನಾ ಬೆಳಿಗ್ಗೆದ್ದ ನೀ ಯಾಕ ಬಾಯಿ ತೊಳಕೋಬಾರದು?

ಕಾಶಿ : ನಾಯಿ ಬಾಯಿ ತೊಳಕೊಂಡ ನಕ್ಕರ ನಂಜ್ಯಾಯೇನೂ ನನ್ನ ಬಾಯಿ ನೋಡಿ ಬಾಡಿಗಿ ಬಿಡಾಣಿಲ್ಲ.

ಗೋವಿಂದ : ಅದೂ ಖರೆ! ಹರಕ ಹಾಸಿಗಿ, ಮಗಾ ಅವಾ ಯಾಕ ಅಡವಿಟ್ಟಕೊಂಡಾನು?

ಕಾಶಿ : ಹೌಂದ ಹೌಂದ, ಗೊತ್ತಿಗಿ ಹಚ್ಚಿ ಮಾತಾಡಿದವರೆಲ್ಲಾ ನಿಮಗ ಹರಕ ಹಾಸಿಗೀ ಹಾಂಗs ಕಾಣತಾರ.

ಗೋವಿಂದ : ಅದಕ್ಕ ಹೇಳ್ತಿನ್ನಾ, ನಿನ್ನ ಜೋಡಿ ಮಾತಾಡೋವಾಗೆಲ್ಲಾ ಚಾಳೀಸ ಹಾಕಿಕೊಳ್ಳತೇನs ಅಂತ. ನೀ ಕೇಳಬೇಕಲ್ಲ. ಹೋಗಲಿ ಬಿಡು, ನಂಜ್ಯಾ ಬಂದ ಮ್ಯಾಲ ಏನ ಹೇಳೋದು, ಏನ ಬಿಡೋದು ನೋಡಿಕೊಂಡರಾಯ್ತು. ಸಿಟ್ಟಾದೇನ? ಬಾ, ಬಾ, ಒಂದಾಟ ಇಸ್ಪೀಟಾಡೋಣು ಬಾ.

ಕಾಶಿ : ಇಷ್ಟ ದಿನ ಆಡಿ ಸೋತದ್ದs ಸಾಲದೇನೋ?

ಗೋವಿಂದ : ಸೋತದ್ದ ಸೋತದ್ದ ಸೋತದ್ದಂತ ನೀ ಯಾರs ಜಡ್ಜ್‌ಮೆಂಟ್ ಕೊಡಾಕ? ಏನೋ ಥಂಡ್ಯಾಗ ಹಾಸಿಕೊಳ್ಳಾಕ ಇರಲೆಂತ ಮದಿವ್ಯಾದರ, ಇಲ್ಲದ ಕಿತಾಪತೀನs ಮಾಡ್ತಿ?

ಕಾಶಿ : ಇದ್ದದ್ದ ಇದ್ದಾಂಗ ಹೇಳಿದರೆ ಬದ್ದಿಗಿ ಬಳ್ಳೊಳ್ಳಿ ಒರಿಸಿಧಾಂಗ ಆಗತಿತ್ತಂತ. ಏನೋ ದೊಡ್ಡ ಮನಸ ಮಾಡಿ, ಅದೂ ನಾ ಅಂತ, ನಿಮ್ಮ ಬಾಯಿ ಕಣ್ಣಿಗಿಂತ ಸಣ್ಣದಿದ್ದರೂ ಮದಿವ್ಯಾದೆ. ನೀವು ಆಕಳಿಸೋವಾಗೆಲ್ಲಾ ಹೇಸಿ, ಹೇಸಿ, ಎಷ್ಟ ಸಲ ‘ತಾರಾ ಮಂಡೋದರೀ ಸೀತಾ’ ಅಂತ ಹಳೀ ಗರತೇರ ಹೆಸರ ಜಪಾ ಮಾಡೇನ ಗೊತ್ತ ಐತಿ? ಪಾಪ, ಹಿಂದಿಲ್ಲಾ ಮುಂದಿಲ್ಲಾ, ಒಂದ ಬಳಗಿಲ್ಲಾ; ನನ್ನ ಹೊರತ ಇದಕ್ಯಾರ ದಿಕ್ಕಿದ್ದಾರ ಅಂತ ಸುಮ್ಮನಾದರ ಏನೇನೋ ಮಾತಾಡತೀರಿ. ತಟಕಾದರೂ ಉಪಕಾರ ಬುದ್ಧಿ ಬ್ಯಾಡಾ? ಕೈ ಹಿಡದ ಇಪ್ಪತ್ತು ವರ್ಷ ಬಾಳ್ವೆ ಮಾಡಿದರೂ ಅವ್ವಾ ಅನ್ನಾಕ ಒಂದ ಮಗಳ್ನ ಕೊಡೋವಷ್ಟ ತಾಕತ್ತಿಲ್ಲ ನಿಮಗ.

ಗೋವಿಂದ : ಹಾ! ಹೊಳೀತ ನೋಡ ಸುಳ್ಳ! ಬರಲಿ ಮಗಾ ನಂಜ್ಯಾ!
(ಬಾಗಿಲು ಬಡಿದ ಸದ್ದು. ಕಾಶಿ ಇವನನ್ನೇ ನೋಡುವಳು)
ಏನೂ ಚಿಂತೀ ಮಾಡಬ್ಯಾಡ. ಇಂಥಾ ಅದ್ಭುತ ಸುಳ್ಳ ನನ್ನ ಜನ್ಮದಾಗನs ಹೊಳದಿಲ್ಲ. ಕೇಳಿ ಮಗಾ ನಂಜ್ಯಾ ನಾಯೀ ಹಾಂಗ ಕಾಲ ನೆಕ್ಕದಿದ್ದರ ನನಗ ಇನ್ನೊಮ್ಮೆ ಆರ್ಯಪುತ್ರಾ ಅನ್ನಬ್ಯಾಡ. ತಗೀ ಬಾಗಲಾ-

ಕಾಶಿ : ಅಯ್ಯs, ಇನ್ನೊಮ್ಮಿ ತಿಳದ ನೋಡ್ರೀ-

ಗೋವಿಂದ : ನೀ ಚಿಂತೀ ಬಿಟ್ಟ ಬಾಗಲಾ ತಗೀಯ. ಉಳಿದವರೆಲ್ಲಾ ದುಡದ ಗೆದ್ದರ ನಾ ಚ್ಯಾಷ್ಟೀ ಮಾಡಿ ಗೆಲ್ಲತೇನ, ಹೋಗ ನೀ.

ಕಾಶಿ : ಅದೇನೋ, ನನ್ನ ಮುಂದಷ್ಟ ಹೇಳಬಾರದ?

ಗೋವಿಂದ : ನಿನ್ನ ಕೈ ಹೊಟ್ಟೀಮ್ಯಾಲಿಟ್ಟಕೋ, ಹೇಳತೇನ. (ಹಾಗೇ ಮಾಡುವಳು, ಇವನು ಚಾಳೀಸು ಹಾಕಿ ಬಾಗಿಲು ತೆಗೆಯುವನು. ನಂಜಯ್ಯನ ಪ್ರವೇಶ)

ನಂಜಯ್ಯ : ಸಿಕ್ಕರಲ್ಲ ಯಜಮಾನರು! ನೋಡಿರಿ ಸಾಹೇಬರs ನನಗ ಉಗಳಾಕ ಬರೋದಿಲ್ಲಾ ಅಂತಲ್ಲ. ಥೂ! ನೋಡಿದಿರಿ ಹ್ಯಾಂಗ ಉಗಳಿದೆ? ಉಗಳಾಕೇನ್ರಿ? ಬಾಯಾಗ ಜೊಲ್ಲ ಇದ್ದವರಿಗೆಲ್ಲಾ ಬರತೈತಿ. ಜೊಲ್ಲೇನ್ರಿ! ರೋಗ ಬಂದರ ಜೊಲ್ಲ ತಾನs ಬಸೀತೈತಿ! ನಾ ಹೇಳೋದು ಅದಲ್ಲ. ನೀವು ಈ ಸಲ ಮಾತ್ರ ಸುಳ್ಳ ಹೇಳಾಕ ಆಗೋದಿಲ್ಲ. ಏನೋ ನೀವ್ಹೇಳೋ ಸುಳ್ಳು ಮಜಮಜಾ ಇರ್ತಾವಂತ ಇಲ್ಲೀತನಕ ಬಾಯ್ಮುಚ್ಚಿಕೊಂಡ ಕುಂತಿದ್ದೆ. ನನ್ನ ಮಗಳು ಚೊಚ್ಚಿಲ ಬಸರಿ, ಹಡೀಲಿಕ್ಬಂದಾಳ. ನನಗೀಗ ಭಯಂಕರ ಅಡಚಣೆ ಅವ. ನಿಂತ ಕಾಲ ಮ್ಯಾಲ ಬಾಡಿಗೀ ಎಣಿಸಿದರ, ಬರೋಬರಿ. ಇಲ್ಲದಿದ್ದರ ನೀವs ಸೈ, ಪೋಲೀಸರs ಸೈ. ಥೂ! ಉಗಳಾಕೇನ್ರಿ? ಬಾಯಿ ಇದ್ದವರಿಗೆಲ್ಲಾ ಬರತೈತಿ!

ಗೋವಿಂದ : ನಿನ್ನ ಪದಾ ಮುಗೀತೊ?

ನಂಜಯ್ಯ : ಎಲೀ ಇವನಾಪ್ಪನ! ತಲೀಗಿಲೀ ಕೆಟ್ಟೈತೇನ್ರಿ-ನಾ ನೀ ಅಂತೀರಿ? ಪದಾ ಹೇಳಾಕ ನಾ ದಾಸಯ್ಯನs? ಆದರೂ ಸಾಹೇಬರs ಅಂದ ಮಾತಾಡತೇನು- ಸಾಹೇಬರ ನಮ್ಮ ಬಾಡಿಗೀ ಕೊಡತೀರೋ? ಇಲ್ಲಾ….

ಗೋವಿಂದ : ಪೋಲೀಸರಿಗಿ ಹೇಳಲ್ಯೊ? ಹೌಂದಲ್ಲ?

ನಂಜಯ್ಯ : ಹೌದು. ಉಗಳಾಕ ಬರೈತೈತಂತ….

ಗೋವಿಂದ : ತಡೀಯಲೇ, ಉಗಳೀಯಂತ. ಪೋಲೀಸರ ಮ್ಯಾಲ ಯಾರು?

ನಂಜಯ್ಯ : ಮತ್ತ ಗಾಣಾ ತಿರಗಾಕ ಸುರು ಮಾಡಿದಿರಿ ಹೌಂದಲ್ಲ? ನಾ ಹೇಳೀನಿ. ಉಗಳಾಕೇನೂ….

ಗೋವಿಂದ : ಏ ಹೇಳೊ. ಪೋಲೀಸರ ಮ್ಯಾಲ ಯಾರು?

ನಂಜಯ್ಯ : ಆಗಲಿ, ಪೋಲೀಸರ ಮ್ಯಾಲ ಪೋಜದಾರ.

ಗೋವಿಂದ : ಪೋಜದಾರನ ಮ್ಯಾಲ ಯಾರು?

ನಂಜಯ್ಯ : ಸರಕಾರ.

ಗೋವಿಂದ : ಸರಕಾರದ ಮ್ಯಾಲ ಯಾರು?

ನಂಜಯ್ಯ : ಸರಕಾರದ ಮ್ಯಾಲ ಯಾರಿರತಾರ್ರಿ?

ಗೋವಿಂದ : ತಡಿ, ಆ ಸರಕಾರದ ಮ್ಯಾಲ ಉಗಳತೀಯೇನು?

ನಂಜಯ್ಯ : ಎಲೀ ಇವರ! ನೋಡಿರಿ ಸಾಹೇಬರs ನನಗ ನಿಮ್ಮ ಗುಟ್ಟೆಲ್ಲಾ ಗೊತ್ತಾಗ್ಯದs. ನೀವು ಚಾಳೀಸ ಹಾಕಿದಾಗ ನಾ ಏನ ಮಾತಾಡಿದರೂ ನಿಮಗ ನಗೀ ಬರ್ತದಂತ. ಅದಕ್ಕ ನೀವು ಹೀಂಗ ಚ್ಯಾಷ್ಟಿ ಮಾಡತೀರಿ. ಈಗೇನ ಆ ಚಾಳೀಸ ತಗೀತೀರೊ, ಇಲ್ಲಾ ನಾನs ಕಸೀಲ್ಯೊ?

ಗೋವಿಂದ : ಇವನಾಪ್ಪನ! ಹಿಂಗ್ಯಾಕ ದುಸಮುಸಿ ಮಾಡತೀಯೋ? ನಗೀ ಬರೋಹಾಂಗ ಮಾತಾಡ್ತಿ, ಮತ ಯಾಕ ನಗತೀರಿ-ಅಂತಿ. ಹೇಳಿಲ್ಲೆ, ಸರಕಾರದ ಮ್ಯಾಲ ಉಗಳತೀಯೇನು?

ನಂಜಯ್ಯ : ನೀವಿದನೆಲ್ಲಾ ಯಾಕ್ಹೇಳಬೇಕಂದರ?

ಗೋವಿಂದ : ಹೇಳಂದರ, ಉಗಳತೀಯೇನು?

ನಂಜಯ್ಯ : ಇಲ್ಲ.

ಗೋವಿಂದ : ಹಾಂಗಾದರ ಸುಮ್ಮಗ ಹಲ್ಲಾಗ ನಾಲಿಗಿ ಇಟ್ಟಕೊಂಡ ಹೋಗು.

ನಂಜಯ್ಯ : ನೋಡ್ರಿ ಸಾಹೇಬರ, ನಾಯಿಗಿ ಹಚ್ಯಾ ಅಂಧಾಂಗ ನನ್ನ ಜೋಡೀ ಮಾತಾಡಿದರ ಭಾರೀ ಸಿಟ್ಟ ಬರತೈತಿ ನನಗ.

ಗೋವಿಂದ : ಏ ಹುಂಬಾ. ಆದ ಸರಕಾರದೊಳಗ ನನ್ನ ಮಗಾ, ಈಕಿ ಹೊಟ್ಟಿ ಹಿಡಕೊಂಡಾಳಲ್ಲಾ….
(ಕಾಶಿಗೆ)
ಇದ ಅಲ್ಲೇನ?

ಕಾಶಿ : ಹೂ

ಗೋವಿಂದ : ಹೂ, ಇದs ಹೊಟ್ಟೆಯಿಂದ ಹುಟ್ಟಿದ ನಮ್ಮ ಮಗಾ-ಮಂತ್ರೀ ಆಗ್ಯಾನ

ನಂಜಯ್ಯ : (ನಗುತ್ತ)
ನೋಡಿದಿರಿಲ್ಲ, ಮತ್ತ ಎಂಥಾ ಮಜಾ ಹೇಳಿದಿರಿ? ಸುಳ್ಳ ಹೇಳಾಕ ಕಲೀಬೇಕು, ನಿಮ್ಮಿಂದs. ಬ್ಯಾರೇದವರು ರೊಟ್ಟಿ ತಿಂದ ಬದಕ್ಯಾರು, ಅಂಬಲಿ ಕುಡದ ಬದಕ್ಯಾರು. ಸಾಹೇಬರs, ನೀವು ಮಾತ್ರ ಸುಳ್ಳ ಹೇಳೇ ಬದಕವರು. ಅಲ್ರೀ, ನಿನ್ನಿ ಬಂದಾಗ ಮಗ ಹುಟ್ಟಿರಲಿಲ್ಲ. ಇಂದ ಬರೂದರೊಳಗs ಹುಟ್ಟಿ ಆಗಲೇ ಮಂತ್ರಿ ಆಗ್ಯಾನಲ್ಲ!

ಗೋವಿಂದ : ಏ ಹುಚ್ಚಾ, ಎಬಡಾ, ನನ್ನ ಸಿಟ್ಟಿಗಿ ಈಡಾಗಿ ಯಾಕ ಹಾಳಾಗ್ತಿ? ಕೇಳಿಲ್ಲಿ, ಖಾಸ ನನ್ನ ಮಗ ಶಿವಶಂಕರ ಅಂತ ಹೆಸರು, ನಾವು ಶಂಕರಾ ಅಂತೀವಿ, ಅವ ಇಂದ ತನ್ನ ಹೆಂಡತೀನ್ನ, ಅಂದರ ನಮ್ಮ ಸೊಸೀನ್ನ-ಹೆಸರು ಸರಸ್ವತಿ, ನಾವು ಸರಸೂ ಅಂತೀವಿ, -ಆಕೀನ್ನ ಕರಕೊಂಡು, ಮ್ಯಾಲ ಪಿವನನ್ನ ಕರಕೊಂಡು ಬರತಾನ. ಇನ್ನೇನ ತಾಸರ್ಧಾತಾಸಿನ್ಯಾಗ ಬಂದಾರ. ಬಂದ ಮ್ಯಾಲಾದರೂ ನಂಬ್ತೀಯೋ ಇಲ್ಲೋ, ಏ ಮೂರಬರೆ ಧಡ್ಡಾ?

ನಂಜಯ್ಯ : (ಸ್ವಗತ)
ಹುಚ್ಚ ನಾನೊ! ನೀವೊ! ಒಂದ ವ್ಯಾಳೆ ಯಾರಾದರೂ ನಿಮಗ ಮಗಾ ಸೊಸೀ ಆಗಿ ನಾಟಕ ಮಾಡಾಕ ಬಂದಾರಂದರ ನಿಮಗ ಅಂಥವರು ಯಾರೂ ದಿಕ್ಕಿಲ್ಲಾ.
(ಪ್ರಕಾಶ)
ಸಾಹೇಬರs, ಕೈ ಮುಗದ ಇದೊಂದ ದಿನ ಬಾಡಿಗಿ ಕೇಳಾಣಿಲ್ಲ.
ನನಗ ಹುಚ್ಚ ಮಾತ್ರ ಹಚ್ಚಬ್ಯಾಡ್ರಿ, ಇಷ್ಟ ದಿನ ಮಜಮಜಾ ಸುಳ್ಳ ಹೇಳತಿದ್ದಿರಿ, ಈಗ ಭಯಂಕರ ಸುರು ಮಾಡಿದಿರೆಪಾ!

ಗೋವಿಂದ : ಅಲ್ಲೊ, ನನ್ನ ಹೇಂತಿಗಿ ಒಂದ ಹೊಟ್ಟಿ ಅದ ಅಂತ ಹೇಳಿದರ ಅದೂ ಸುಳ್ಳ?

ನಂಜಯ್ಯ : ಅದಕ್ಯಾರ ಸುಳ್ಳಂದಾರು?

ಗೋವಿಂದ : ಆಕಿಗಿ ಹೊಟ್ಟಿ ಇದ್ದ ಖರೆ ಆದರ, ಆಕೀ ಹೊಟ್ಯಾಗ ಹುಟ್ಟಿದ ಮಗನೂ ಖರೆ ಅಂಧಾಂಗಾಯ್ತು. ನಾ ಹೇಳೋದೂ ಇಷ್ಟs ಮತ್ತ; ಬರೋಬರಿ ಹೌಂದಲ್ಲ. ಗಣಿತ? ಇಂದ ಬೆಳಿಗ್ಗಿ “ನನ್ನ ಹೊಟ್ಟಿ ಯಾಕೋ ಗವಗವ ಅಂತದರೀ” ಅಂದ್ಲು. ಇದ್ಯಾಕಪಾ ಹಿಂಗಾತು?- ಅಂತ ತಲೀಮ್ಯಾಲ ಕೈ ಇಟ್ಟಕೊಂಡ ಕೂತಿದ್ವಿ,-ಮಗನ ತಾರ ಬಂತಲ್ಲ; ಕಮಿಂಗ್ ಟುಡೇ ಬೈ ಏರ್! ಅವ ಬರೋವಷ್ಟರೊಳಗs ಕರಳ ಹರದ ಬಿದ್ದಾವಂತ ಹೊಟ್ಟಿ ಹಿಡಕೊಂಡ ನಿಂತಾಳ. ಅಲ್ಲೇನ?

ಕಾಶಿ : (ಅಳುತ್ತ)
ಹೌಂದು.

ಗೋವಿಂದ : ಯಾಕಳತೀಯೆ? ಬರತಾನ. ಇಷ್ಟ ದಿನ ತಡದೀಯಂತ ಇನ್ನ ಆರ್ಧಾ ತಾಸ ತಡೀಲಿಕ್ಕಾಗೋದಿಲ್ಲಾ? ನೋಡ ನಂಜಯ್ಯಾ, ನೀ ಇನ್ನಮ್ಯಾಲ ಬಾಡಿಗೀ ಚಿಂತೀ ಮಾಡಬ್ಯಾಡ. ಅಷ್ಟs ಅಲ್ಲ, ನಿನಗಿನ್ನೇನಾದರೂ ಸರಕಾರದೊಳಗ ಕೆಲಸ ಆಗಬೇಕಿದ್ದರ ಹೇಳ ಮತ್ತ, ಘನ ವಶೀಲಿ ನನ್ನ ಮಗಂದು. ಅವನ ಮಾತಿನಾಗ ನೋಡಪಾ-ಗುಂಡ ತೇಲತಾವು, ಬೆಂಡ ಮುಳುಗತಾವು!

ನಂಜಯ್ಯ : (ನಗುತ್ತ)
ಚೇ ಚೇ, ಅವನ್ಯಾರೋ ಕ್ಯಾನ್ಸರ್ ರೋಗಿಷ್ಟ, ನಿಮ್ಮ ಮಗನ ಹೆಸರ ತಗೊಂಡ ಹಣೀಗಿ ಬೂದಿ ಹಚ್ಚಿದರ ರೋಗ ಹೋಯ್ತಂತ ಗೊತ್ತಿಲ್ರಿ?

ಗೋವಿಂದ : ಹಾಂಗೆಲ್ಲ ಚ್ಯಾಷ್ಟೀ ಮಾಡಬ್ಯಾಡ: ನನ್ನ ಮಗ….

ನಂಜಯ್ಯ : ಅವನ ಹೆಸರ ಶಿವಶಂಕರ, ನೀವು ಶಂಕರಾ ಅಂತಿದ್ದಿರಿ.

ಗೋವಿಂದ : ಹೂ, ಶಂಕರಗ ಗೊತ್ತಾದರ ನಿನ್ನ ಮನಿ ಬೂದಿ ಮಾಡ್ಯಾನು.