ನಂಜಯ್ಯ : (ಮಾತಿನ ಧಾಟಿ ಬದಲಿಸಿ)
ಸಾಹೇಬರ, ಈಗ ನಾಕೈದ ದಿನದಿಂದ, ಭರ್ ರಾತ್ರ್ಯಾಗ ಒಬ್ಬ ಮುದುಕ ಅಳತಾನ, ಕೇಳೀರೇನ?

ಗೋವಿಂದ : ಯಾರಾದರೂ ಇರಬಹುದು: ಕಳಕೊಂಡಬರು, ಅನಾಥರು, ಒಬ್ಬರ? ಇಬ್ಬರ?

ಕಾಶಿ : ಹೌಂದ್ಹೌಂದು. ಯಾರೋ ಮುದುಕ ಮುಖಕ್ಕ ಸೆರಗ ಹಾಕ್ಯೊಂಡ ಅತ್ಹಾಂಗ ಇರತೈತಿ!

ಗೋವಿಂದ : ಯಾವನೋ ಮುದುಕನೋ, ತದಕನೋ ಯಾರ ಅತ್ತರ ನಮಗೇನ?
(ಹೇಳಹೇಳುತ್ತ ಚಾಳೀಸು ತೆಗೆಯುವನು.)

ಕಾಶಿ : ಯಾರಾದರೂ ಬಂದ ಇಲ್ಲಿ ಯಾಕ ಅಳಬೇಕೆಂದರ? ರಾತ್ರಿ ಯಾಳೆ, ಹೆಣ್ಣ ಬಾಲಿ, ಸೀರೀ ಒಳಗs ನಡಗತೇನ, ನಿಮಗೇನಾ? ಒಮ್ಮಿ ಕನಸಿನಾಗ ನಾ ಅವನ ತಲೀ ಸವರಿ ಸಮಾಧಾನ ಮಾಡಿಧಾಂಗಿತ್ತ. ಫಕ್ಕನ ಎಚ್ಚರಾದಾಗ ನನ್ನ ಕೈ ನಿಮ್ಮ ತಲೀಮ್ಯಾಲಿತ್ತ!

ಗೋವಿಂದ : (ನೋವನ್ನನುಭವಿಸಿ ಅದನ್ನು ತೋರಗೊಡದೆ)
ಆ ಮುದುಕನಾ? ನಾ ಕಂಡೀನೇಳು. ಅವನಿಗೊಂದ ತುದಿ ಇತ್ತು, ಒಂದ ಮೊದಲಿತ್ತು; ಅವ ನಾಕೈದ ಮೈಲ ದೂರ ನಿಂತ ಮಾತಾಡಿದರೂ ಇಲ್ಲಿದ್ದವರ ಮೈತುಂಬ ತೂತ ಬೀಳತಿದ್ದುವು, ಅವನs ಹೌಂದಲ್ಲ?

ಕಾಶಿ : ಅಯ್ಯ ನಿಮ್ಮ ತೆಲಿ! ಪಾಯಿಖಾನೆ ಮ್ಯಾಲ ‘ಪುರುಷರು’ ಅಂತ ಬರದಲ್ಲಿ ಒಂದ ಚಿತ್ರ ಇರ್ತsದಲ್ಲ-ಹಾಗಿಂದ್ದ,-ಕರ್ರಗ ಕರೀ ಮಸ್ಯಾಗ ಬರಧಾಂಗ.

ಗೋವಿಂದ : (ಇನ್ನಷ್ಟು ನೋವನ್ನನುಭವಿಸಿ ಅದನ್ನು ತೋರಗೊಡದೆ)
ಹಾ! ಅವನs? ತಿಳೀತು ಬಿಡು. ಮನ್ನಿ ಗುಡೀಗಿ ಹೋದಾಗ ಮೈತುಂಬ ಕೂದಲಾ-ಕರ್ರಗ ಕೂತಿದ್ದ. ನನ್ನ ನೋಡಿ ಹೋಳೀ ಪದಾ ಹಾಡಲಿಕ್ಸುರು ಮಾಡಿದಾ. ನಾನೂ ಜನಗಣಮನ ಹಾಡಬೇಕಂತಿದ್ದೆ….

ನಂಜಯ್ಯ : ಛೇ, ಅಲ್ಲ ತಗೀರಿ; ಅವ ಇಷ್ಟ ದಿನ ಗುಬ್ಬೀ ಕಂಪನ್ಯಾಗ ಇದ್ದನಂತ. ರಾಜಾ, ಮಂತ್ರೀ, ವಿಟ, ದೇಶಭಕ್ತ ಯಾರ ಬೇಕಾದವರ ಪಾರ್ಟ್ ಹಾಕತಿದ್ದನಂತ. ನಾಟಕ ಮುಗದ ಮ್ಯಾಲೂ ಜನ ಅವನ ಗುರುತಾನ ಹಿಡೀತಿರಲಿಲ್ಲಂತ. ಜನರಂತೂ ಮುದ್ದಾಂ ಕರದೂ ಕರದೂ ಅವನಿಗೇ ಮೋಸ ಹೋಗತಿದ್ದರಂತ, ನೋಡ್ರಿ! ಒಂದ ದಿನಾ, ಯಾಕೋ ಏನೋ ಓಡಿಬಂದ ನಮ್ಮ ಮನೀ ಹೊಕ್ಕಾ. ಮೂಗಿನಿಂದ ರಕ್ತ ಬಳಬಳ ಬಸೀತಿತ್ತು. ಯಾರೋ ಕಲ್ಲ ಎಸದರಂತ ಹೇಳಿದ. ಕರಕೊಂಡ ಹೋಗಿ ತೊಳಕೊಳ್ಳಾಕ ನೀರ ಕೊಟ್ಟೆ. ಮುಖ ಒರಿಸಿಕೊಂಡ ಕನ್ನಡಿ ಮುಂದ ಕೂತ್ನೋ ಇಲ್ಲೊ? ಸುರು ಮಾಡಿದನಲ್ಲ-ನಾಟಕ! ತಾನ ಕೊಲ್ಲಿಸಿಕೊಳ್ಳಾವ, ತಾನs ಕೊಲ್ಲಾವ! ಅವನ ನಾಟಕ ನೋಡಿದಾಗೆಲ್ಲಾ ನಕ್ಕಿದ್ನಿ ಖರೆ, ಅಂದ ಮಾತ್ರ ಹೊಟ್ಯಾಗ ಭಾಳs ತಳಮಳ ಆಯ್ತ ನೋಡ್ರಿ. (ಬಾಗಿಲು ಬಡಿದ ಸದ್ದು. ಎಲ್ಲರೂ ಕಡೆ ನೋಡುವರು. ಗೋವಿಂದ ಚಾಳೀಸು ಹಾಕಿಕೊಳ್ಳುವನು.)

ಗೋವಿಂದ : ನೋಡು ನಂಜಯ್ಯ, ಬಂದರಂತ ಕಾಣತದ; ನೀ ಆಮ್ಯಾಲ ಬಾ. (ಹೋಗಿ ಬಾಗಿಲು ತೆಗೆಯುವನು. ಒಳಕ್ಕೆ ಸಂಭ್ರಮದಿಂದ ಶಂಕರ, ಸರಸ್ವತಿ, ಅವರ ಹಿಂದಿನಿಂದ ಸೂಟಕೇಸು ಹೊತ್ತ ಅಳುಬರುವರು. ಶಂಕರ ಸಂತೋಷಾತಿಶಯದಿಂದಅಪ್ಪಾ’ ‘ಅಮ್ಮಎಂದು ಕೂಗಿ ಉತ್ಸಾಹದಿಂದ ಗೋವಿಂದ, ಕಾಶಿಯರ ಕಾಲಿಗೆರಗುವನು. ಕಾಶಿಯನ್ನು ತಬ್ಬಿಕೊಳುವನು. ಕಾಶಿ ಇವರು ಯಾರೆಂದು ತಿಳಿಯದೆ ಚಡಪಡಿಸುವಳು. ಸರಸ್ವತಿಯು ಇವರಿಬ್ಬರ ಕಾಲುಮುಟ್ಟಿ ನಮಸ್ಕರಿಸುವಳು. ಗೋವಿಂದ, ಕಾಶಿ, ನಂಜಯ್ಯಮೂವರೂ ದಿಗ್ಭ್ರಮೆಯಿಂದ ಬಾಯಿ ತೆರೆದುಕೊಂಡೇ ನಿಲ್ಲುವರು. ಶಂಕರ ಕುರ್ಚಿಯಲ್ಲಿ ಕೂತು ಬೂಟು ಬಿಚ್ಚುತ್ತ ಮಾತನಾಡುತ್ತಾನೆ. ಮಧ್ಯೆ ಆಳು ಸಾಮಾನು ತಂದು ಒಳಗಡೆ ಇಡುತ್ತಿದ್ದಾನೆ.)

ಶಂಕರ : ಹಾಳಾದ ಕಾರಿನ ಸಹವಾಸ ಬ್ಯಾಡಂತ ಏರೋಪ್ಲೇನ್‌ದೊಳಗ ಬಂದರ ಸರ್ಕಾರೀ ಬಸ್ ಬೇಕು, ಇದು ಬ್ಯಾಡ. ಅಮ್ಮಾ, ಅದ್ಯಾಕ ಹಾಂಗ ನಿಂತಿ? ಸರಸೂ, ಚಾ ಮಾಡs. ನನ್ನ ತಾರ ಮುಟ್ಟಲಿಲ್ಲೇನು?
(ಆಳಿಗೆ)
ಶ್ಯೊ! ನನ್ನ ಫೈಲಿರೋ ಸೂಟಕೇಸ್ ಆ ರೂಮಿನೊಳಗಿಡೊ.

ನಂಜಯ್ಯ : (ಹಲ್ಲುಗಿಂಜುತ್ತ)
ಸಾಹೇಬರs ನನ್ನ ಹೆಸರು….

ಶಂಕರ : ನಂಜಯ್ಯಾಂತ

ನಂಜಯ್ಯ : ಎಲೀ ಇವನ! ನನ್ನ ಹೆಸರೂ ಆಗಲೇ….

ಶಂಕರ : ಹೇಳಿಬಿಟ್ಟಾರ, ಅಪ್ಪಾ.

ನಂಜಯ್ಯ : ಆದರೂ ನೋಡ್ರಿ, ನಾ ಹೇಳೋದು….

ಶಂಕರ : ಉಗಳಾಕೆ ಬರ್ತsದಂತ ಸಿಕ್ಕಸಿಕ್ಕಲ್ಲಿ ಉಗಳಬಾರದು. ಹೌಂದಲ್ಲ? ಉಗಳೋದ ಬಿಟ್ಟ ಹೇಳಿದರs ನೀ ಹೇಳಬೇಕಾದ್ದ ಕೇಳೋದು.

ನಂಜಯ್ಯ : (ಹಲ್ಲುಕಿರಿಯುತ್ತ)
ಹೆ ಹೆ ಆಗಲ್ರಿ. ನಾ ಹೇಳೋದು ನಿಮಗೂ ತಿಳಿದs ಇರಬೇಕು….

ಶಂಕರ : ಹಲ್ಲ ಕಿಸದೆಲ್ಲ – ನಿನಗ ಯಾಕಿಷ್ಟು ಉಗಳೋ ಚಟ ಅದs ಅಂತ ತಿಳೀತು.

ನಂಜಯ್ಯ : ಅಂದರ ನೋಡ್ರಿ, ಈ ಮನೀ ಬಾಡಿಗೀ….

ಶಂಕರ : ಎಷ್ಟು?

ನಂಜಯ್ಯ : ಎಷ್ಟೇನು? ಅವರು ಈ ಮನೀಗಿ ಬಂದಾಗಿಂದ ಒಂದs ಕೆಂಪಾನ ಪೈಸಾ ಕೊಟ್ಟಿದ್ದರ ಕೇಳ್ರಿ….

ಶಂಕರ : ಹೂ.

ನಂಜಯ್ಯ : ನೀವು ಯಾರಾದರೂ ಆಗಿರ್ರಿ; ಅದ್ಯಾಕೆ ಬೇಕ ನನಗ? ಅವರ ಪಾಲಿನ ಬಾಡಿಗೀ ತೀರಿಸಿದರ….

ಶಂಕರ : ಹೂ.

ನಂಜಯ್ಯ : ಭಾಳ….

ಶಂಕರ : ಹೂ….

ನಂಜಯ್ಯ : ಉಪಕಾರ

ಶಂಕರ : ಹೂ

ನಂಜಯ್ಯ : ಆಗತದರಿ

ಶಂಕರ : ಹೂ, ಈ ಮನೀ ಕಿಮ್ಮತ್ತ ಎಷ್ಟ್ರಿ?

ನಂಜಯ್ಯ : ನೋಡರಿ ಸಾಹೇಬರs; ನೀವು ಚ್ಯಾಷ್ಟಿ ಮಾಡರಿ, ಇಲ್ಲಾ ಹಾಂಗs ಕೇಳ್ರಿ. ಕೇಳಿದ್ದಕ್ಕ ಹೇಳಿದರೇನೂ ತಪ್ಪಿಲ್ಲ. ಈ ಮನೀಗಿ ಒಂದ ಲಕ್ಷಕ್ಕಿಂತ ಒಂದs ಒಂದ ಪೈಸಾ ಕಮ್ಮಿ ಬಂದರೂ ನಾ ಕೊಡೋದಿಲ್ಲ.

ಶಂಕರ : ಇಷ್ಟs ಹೌಂದಲ್ಲ? ಶ್ಯೂ, ಇವಗ ಎರಡು ಲಕ್ಷ ರೂಪಾಯಿ ಕೊಡೊ.

ಹುಶಪ್ಪ : ಹೂ, ಉಡಿ ಒಡ್ಡಪಾ. ಐವತ್ತ ಸಾವಿರ, ಒಂದ ಲಕ್ಷ….
(ಕೊಟ್ಟವರಂತೆ ನಟಿಸುವನು. ನಂಜಯ್ಯ ಮೊದಲು ಕೈ ಒಡ್ಡ ಹೋಗಿ ಅವನ ನಟನೆ ನೋಡಿ ಕೈ ಹಿಂದಕ್ಕೆ ತಕ್ಕೊಳ್ಳುತ್ತಾನೆ. ಹುಶಪ್ಪ ಒತ್ತಾಯದಿಂದ ಅವನ ಜೇಬಿನಲ್ಲಿ ದುಡ್ಡು ತುರುಕುವಂತೆ ನಟಿಸುವನು.)
ಒಂದ ಲಕ್ಷ ಐವತ್ತ ಸಾವಿರ, ಎರಡ ಲಕ್ಷ-

ನಂಜಯ್ಯ : (ಶಂಕರನಿಗೆ)
ಛೇ ಛೇ ಇದೇನ್ರೀ, ನೀವೂ ಸುರು ಮಾಡಿದಿರಲ್ಲ? ನೋಡ್ರೀ ನನಗ ವಯಸ್ಸಾಗಿ ಈಗೀಗ ಚ್ಯಾಷ್ಟಿ ಮಾಡಿದರೂ ನಗಿ ಬರೋದಿಲ್ಲ. ಕೊಡೋ ಕುವ್ವತ್ತಿದ್ದರ ಕೊಡಬೇಕು, ಇಲ್ಲಾ ಬಾಯಿ ಮುಚ್ಚಿಕೊಂಡಿರಬೇಕು.

ಶಂಕರ : ಏ, ಯಾರದೋ ಈ ಮನಿ?

ನಂಜಯ್ಯ : ನಮ್ಮಪ್ಪಂದು, ನಂದು.

ಶಂಕರ : ಹಾಂಗಂತ ಯಾರ ಹೇಳತಾರ?

ನಂಜಯ್ಯ : ಯಾರ ಯಾಕ ಹೇಳಬೇಕು? ಕೋರ್ಟ ಐತಿ, ಕಚೇರಿ ಐತಿ.

ಶಂಕರ : ಕೋರ್ಟುಕಚೇರಿ ಮ್ಯಾಲ ಯಾರು?
(ನಂಜಯ್ಯ ಸಿಟ್ಟಿನಿಂದ ಸುಮ್ಮನಿರುವನು. ಗೋವಿಂದನಿಗೆ)
ಯಾರಪ್ಪಾ?

ಗೋವಿಂದ : (ಗಡಬಡಿಸಿ)
ನಾ ಹೇಳಲ್ಯಾ? ಜಜ್ಜ್!

ಸರಸು : ಜಜ್ಜನ ಮೇಲೆ ಯಾರು?

ಗೋವಿಂದ : ಸರಕಾರ

ಸರಸು : ಆ ಸರಕಾರ ಯಾರು?
(ಗೋವಿಂದ ಸುಮ್ಮನಿರುವರು.)
ಆ ಸರಕಾರವೇ ನಮ್ಮ ಯಜಮಾನ್ರು-ಶಂಕರ! ಶಂಕರ ಸರಕಾರs ಆರ್ಡರ್ ಕೊಡತಾರs….

ಶಂಕರ : ಆರ್ಡರ್, ಆರ್ಡರ್, ಈ ಮನೆ ನಮ್ಮಪ್ಪಂದು!

ಸರಸು : ನೀನೂ ಹೇಳಿದೆ: ಈ ಮನೆ ನಮ್ಮಪ್ಪಂದು; ನಮ್ಮ ಯಜಮಾನರೂ ಹೇಳಿದರು: ನಮ್ಮಪ್ಪಂದು. ಆದ್ದರಿಂದ ಮನೆ ನಿಮ್ಮಪ್ಪಂದಾದರೂ ನಮ್ಮ ಮಾವನವರದೇ. ನಿಮ್ಮಪ್ಪನ ಮನೆಗೆ ನೀ ‘ನಂದು’ ಅಂತೀ. ನಾ ನಮ್ಮ ಮಾವನವರ ಮನೆಗೆ ‘ನಂದು’ ಅಂತೀನಿ. ‘ನಂದು’ ‘ನಂದು’ ಕಾಮನ್. ಆದ್ದರಿಂದ ಈ ಮನೆ ನಂದೇ! ಇಸ್ಥಾಬೇ

ಹುಶಪ್ಪ : (ಇದ್ದಕ್ಕಿದ್ದಂತೆ ಗೋವಿಂದನ ಬಳಿಗೆ ಓಡಿಬಂದು)
ಮನ್ಯಾಗ ಪಿಕಾಸಿ ಐತೇನ್ರಿ?

ಗೋವಿಂದ : ಯಾಕ್ಬೇಕಿತ್ತು? ಹಿತ್ತಲದೊಳಗ ಅದ.

ಹುಶಪ್ಪ : ಬುದ್ಧಿವಂತರ ಲೆಕ್ಕಾಚಾರಂದರ ಹೀಂಗ!
(ನಂಜಯ್ಯನಿಗೆ)
ನೋಡಿದಿಲ್ಲ, ಹೆಂಗ ಪಿಕಾಸಿ ತಯಾರ ಮಾಡಿ ಇಟ್ಟಕೊಂಡಾರ? ನೀ ನೋಡು, ಎದ್ದರ ಬಾಡಿಗಿ, ಬಿದ್ದರ ಬಾಡಿಗಿ, ಥೂ! ಹೋಗ್ಹೋಗ, ಇಂದ ಶನಿವಾರ, ನಾ ಧಡ್ರ ಮುಖ ನೋಡಬಾರದು.

ನಂಜಯ್ಯ : (ಶಂಕರನಿಗೆ)
ನೋಡ್ರಿ ಸಾಹೇಬರs, ನಾಳಿ ಬಾ ಅಂದರ ಬಂದೇನು, ನನಗ ಇಂಥಾದ್ದ ತಡಕೊಳ್ಳೋದ ಆಗೋದಿಲ್ಲರಿ.

ಶಂಕರ : ನಾಳಿ ಮತ್ತು ಯಾಕ ಬರತಿ? ಹೋಗ್ಹೋಗು.

ಸರಸು : ಹೋಗರಿ.

ನಂಜಯ್ಯ : ನೋಡ್ರಿ, ನಾ ಹೇಳಿರತೇನ. ನನಗ ಉಗಳಾಕೆ ಬರಾಣಿಲ್ಲ ಅಂತಲ್ಲ….

ಸರಸು : ಥೂ! ನೋಡಿದ್ರಿ ಹೆಂಗ ಉಗಳಿದೆ?
(ಎಂದು ಹೇಳುತ್ತ ಸರಸು ಬಂದು ನಂಜಯ್ಯನ ಕತ್ತಿನ ಮೇಲೆ ಕೈಹಾಕಿ ಸಹಜವಾಗಿ ಅವನನ್ನು ಹೊರದಬ್ಬುವಳು. ‘ನೋಡ್ರಿ ಮತ್ತ, ನನಗೂ ಸಿಟ್ಟ ಬರತೈತಿಎಂದು ಗೊಣಗುತ್ತ ನಂಜಯ್ಯ ಹೋಗುವನು. ಕಾಶಿ, ಗೋವಿಂದರನ್ನುಳಿದು ಎಲ್ಲರೂ ನಗುವರು. ಹೀಗೆ ಮನಸಾರೆ ನಕ್ಕು ಗೋವಿಂದನ ಕಡೆಗೆ ನೋಡಿದಾಗ ಗಡಬಡಿಸಿ ಏನು ಮಾಡಬೇಕೆಂದು ತೋಚದೆ ಅವನೂ ಗಹಗಹಿಸಿ ನಕ್ಕಂತೆ ನಟಿಸುವನು. ಕಾಶಿ ಮೂಲೆಯಲ್ಲಿ ಹುದುಗಿದ್ದಾಳೆ. ಇದನ್ನು ಕಂಡು ಮತ್ತೆ ಮೂವರೂ ನಕ್ಕಾಗ ಗೋವಿಂದನೂ ಅವರೊಂದಿಗೆ ನಗುವನು; ನಗುತ್ತ ಶಂಕರನ ಭುಜದ ಮೇಲೆ ಕೈ ಹಾಕುವನು.)

ಗೋವಿಂದ : ಏನ ಬೆರಿಕಿ! ಏನ ಬೆರಿಕಿ! ಏನ ಬೆರಿಕಿ ಮಂದಿರೀ ನೀವು! ನಂಜ್ಯಾಗ ನಾ ಹೆಂಗ ಅಪಮಾನ ಮಾಡಬೇಕಂದಿದ್ದೆ, ಹಾಂಗs ಮಾಡಿದಿರಲ್ಲ ನೀವು! ಛೇ ಛೇ ಛೇ,- ನಾನು ರಗಡs ಆಡೀನಿ, ಹಿಂಗ? ಛೆ! ಛೆ!

ಶಂಕರ : ಮಕ್ಕಳಂದಮ್ಯಾಲ ಅಪ್ಪನ ಛಾತಿ ಇರಬೇಕಲ್ಲ.

ಗೋವಿಂದ : ಮಕ್ಕಳು?
(ನೆನಪಿಸಿಕೊಂಡು ನಗುವನು)
ಅದೆಲ್ಲಾ ಬರೋಬರಿ. ನೀವು ಯಾರು? ಏನು? ಎಂತಾ ಒಂದೂ ಗೊತ್ತಾಗಲಿಲ್ಲಲ್ಲ?

ಶಂಕರ : ನಾವs? ನಾ ನಿಮ್ಮ ಮಗ ಶಿವಶಂಕರ. ಸಣ್ಣಂದಿರತ ‘ಶಂಕರಾ, ಏ ಶಂಕರಾ, ಸಾಲೀ ಕಲ್ತ ಸರಕಾರ ಆಗಬೇಕಪಾ’ ಅಂತಿದ್ರಿ.

ಸರಸು : ನಾ ನಿಮ್ಮ ಸೊಸಿ, ಸರಸ್ವತಿ, ‘ಸರಸೂ, ಏ ಸರಸೂ, ಒಂದ್ ಕಪ್ ಚಾ ಮಾಡು’ ಅಂತಿದ್ರಿ.

ಗೋವಿಂದ : (ಮನಸಾರೆ ನಗುತ್ತ)
ಅದೆಲ್ಲಾ ಬರೋಬರಿ ಅಂದ್ನೆಪಾ! ನಂಜಯ್ಯ ಹೋದ, ಇನ್ನ ಮ್ಯಾಲ ನಾಟಕ ಸಾಕಲ್ಲ. ಈಗ ನಾವೂ ನೀವೂ ಕೂನಾ ಗುರುತಾ ಮಾಡಿಕೊಳ್ಳೋಣು; ನಂದಂತೂ ನಿಮಗ ಗೊತ್ತs ಅದ; ನಿಮ್ಮದು ನನಗಷ್ಟ ತಿಳಿಸರಲ್ಲ.

ಸರಸು : ಮನೀಮಂದೀ ಗುರುತಾ ಕೇಳತೀರಲ್ಲಾ, ಏನ್ಹೇಳೋಣ! ನಮ್ಮ ಮಾವನವರಿಗೊಳ್ಳೇ ಮರವು. ಒಂದ ದಿನಾ ಉಸಿರಾಡೋದೂ ಮರೀತೀರಿ. ನಿಮಗೆ ನಿಮ್ಹೆಸರಾದರೂ ನೆನಪದsನೊ ಇಲ್ಲೊ! ಏನ್ರೀ ಮಾವ ನಿಮ್ಮ ಹೆಸರು?

ಗೋವಿಂದ : ಹೆಹೆಹೆ ನನ್ನ ಹೆಸರ ಹೆಂಗ ಮರವಾದೀತು? ನನ್ನ ಹೆಸರ…. (ಮೂವರೂ ನಗುತ್ತ ದೂರದಲ್ಲಿದ್ದ ಕಾಶಿಯನ್ನು ತಂದು ಗೋವಿಂದನ ಪಕ್ಕದಲ್ಲಿ ಕೂರಿಸುವರು. ಆಮೇಲೆ ಮೂವರೂ ಕೈ ಕೈ ಹಿಡಿದು ಅವರ ಸುತ್ತುವರಿಯುತ್ತ)

ಮೂವರು : ಗೋವಿಂದಾ ಗೋವಿಂದಾ ಗೋವಿಂದಾ
ಅಪ್ಪನ ಹೆಸರು ಗೋವಿಂದಾ| ಗೋವಿಂದಾ|
ಅವ್ವನ ಹೆಸರು ಕಾಶವ್ವಾ| ಕಾಶವ್ವಾ|
ಗೋವಿಂದಾ ಗೋವಿಂದಾ ಗೋವಿಂದಾ….

ತೆರೆ