(ಅದೇ ಮನೆ. ರಾತ್ರಿ ಸಮಯ ಮಂದಪ್ರಕಾಶ. ಗೋವಿಂದ ಯೋಚನೆ ಮಾಡುತ್ತ ಅತ್ತಿತ್ತ ಅಡ್ಡಾಡುತ್ತಿದ್ದಾನೆ. ಅವನ ಅಡ್ಡಾಡುವಿಕೆ ರಂಗದ ಮುಂಭಾಗದಲ್ಲಿ ನಡೆದಿದೆ. ಸ್ವಲ್ಪ ಹೊತ್ತಾದ ಬಳಿಕ ಸೋಫಾದ ಮುಂದೆ ಹುಶಪ್ಪ ಬಂದು ಸ್ಥಳ ನೋಡಿ, ಏನನ್ನೋ ಧ್ಯಾನಿಸಿದಂತೆ, ಲೆಕ್ಕ ಹಾಕಿದಂತೆ ಮಾಡಿ, ತಿರುಗಿ ಹೋಗುವಾಗ ಗೋವಿಂದ ಅವನನ್ನು ನೋಡುತ್ತಾನೆ.)

ಗೋವಿಂದ : ಯಾರವರಾ?

ಹುಶಪ್ಪ : ನಾನsರೀ.

ಗೋವಿಂದ : (ಗುರುತಿಸಿ)
ನೀನs? ಯಾಕಿನ್ನೂ ಮಲಗಲಿಲ್ಲೇನ?

ಹುಶಪ್ಪ : ತಲೀಮ್ಯಾಲ ಕೆಲಸ ಇಟ್ಟಕೊಂಡ ಹೆಂಗರಿ ಮಲಗಲಿ?

ಗೋವಿಂದ : ಅದೇನಪಾ ಅಂಥಾ ಕೆಲಸ?

ಹುಶಪ್ಪ : ಒಂದs ಯಾಡ್ಡ?

ಗೋವಿಂದ : ಅಂತೂ ಭಾಳ ಕಡೀತೀಯಪ! ಬಾ ಬಾ ಮಾಡೀಯಂತ; ಕೂತು ನಾಕ ಮಾತ ಮಾತಾಡೋಣ.

ಹುಶಪ್ಪ : (ತಕ್ಷಣವೇ ಕೂತು)
ಅಯ್ಯೋ ಎಪ್ಪ! ನನ್ನ ಜೋಸಿ ಮಾತಾಡವರನ್ನ ಕಂಡರ ನನಗೂ ಒಂದ ನಮೂನಿ ಆಗತೈತ್ರಿ. ಇನ್ನೊಬ್ಬರ ಮಾತಾಡತಿದ್ದರ ನಾ ಎಂದೂ ಯಾಕ? ಏನ? ಅಂತ ಕೇಳಾಣಿಲ್ಲ ಖರೆ, ನನ್ನ ಜೋಡಿ ಮಾತಾಡಾಕ ಯಾರೂ ಬರಾಣs ಇಲ್ಲ ನೋಡ್ರಿ!

ಗೋವಿಂದ : ನಾ ಬಂದೀನಲ್ಲಪಾ, ಆಗಲಿಲ್ಲಾ? ಅದಿರಲಿ, ನಿನ್ನ ಹೆಸರೇನಂದಿ?

ಹುಶಪ್ಪ : ನನಗ ಹೆಸರs ಇಲ್ಲರಿ. ಅದಕ್ಕs ನನಗ್ಯಾರೂ ನನ್ನ ಹೆಸರ ಹಿಡದ ಕರಿಯೋದ ಇಲ್ರಿ. ನಮ್ಮ ಸಾಹೇಬರಿಲ್ಲರೇ?

ಗೋವಿಂದ : ಇದ್ದಾರ.

ಹುಶಪ್ಪ : ಅವರಿಗೂ ನನ್ನ ಹೆಸರ ಗೊತ್ತಿಲ್ರಿ. ಅವರೂ ನನಗ ಹುಶ್s ಅಂತs ಕರೀತಾರ.

ಗೋವಿಂದ : ಹುಶ್?

ಹುಶಪ್ಪ : ಓ ಯಾಕ್ಕರದಿರಿ?

ಗೋವಿಂದ : (ನಗುತ್ತ)
ಏನ ಬೆರಿಕಿ ಇದ್ದೀಯೋ? ನೀನೂ ನಿನ್ನ ಸಾಹೇಬನ್ಹಾಂಗ ಭಲೆ ನಾಟಕ ಮಾಡಾವಪಾ! ಹೆಸರೇನಂದಿ? ಹುಶ್ ಹುಶ್?

ಹುಶಪ್ಪ : ಓ, ಓ ಯಾಕ ಕರದಿರಿ?

ಗೋವಿಂದ : (ಮತ್ತೆ ನಗುತ್ತ)
ಊಹೂ, ಕರೀಲಿಲ್ಲ ಮಾರಾಯಾ, ಹಾಂಗs ಅಂದ ನೋಡಿದೆ. ಆದರೂ ನಿನಗೆ ತಂದೀ ತಾಯೀ ಇಟ್ಟ ಹೆಸರೊಂದ ಇರಬೇಕಲ್ಲ?

ಹುಶಪ್ಪ : ನನಗ ಗೊತ್ತs ಇಲ್ಲ ಬಿಡಿರಿ. ನಮ್ಮ ಮನ್ಯಾಗೊಂದ ಕ್ವಾಣ ಇತ್ತರೀ. ಅದರ ಡುಬ್ಬದ ಮ್ಯಾಲ ಕುಂತ ಹುಶ್ ಹುಶ್ ಅಂತ ಕಾಯತಿದ್ನಿ. ನಮ್ಮ ಸಾಹೇಬರು ನೋಡಿದರು. ನಾನೂ ಕ್ವಾಣಧಾಂಗ ಸ್ವಲ್ಪ ಧಡ್ಡನs ಅನ್ರೆಲ್ಲ; ಸಾಹೇಬರು ನನಗೂ ಹುಶ್ ಹುಶ್ ಅಂತಾರ.

ಗೋವಿಂದ : ಅದೆಲ್ಲಾ ಬರೋಬರಿಯೋ, ಹುಶಪ್ಪ. ನೀವು ಸಾಹೇಬರು ಎಲ್ಲಿಯವರಾ? ಯಾರ ಪೈಕಿ? ಇಲ್ಲಿಗ್ಯಾಕ ಬಂದಾರ – ಅದನsಟು ಹೇಳಲ್ಲ.

ಹುಶಪ್ಪ : ಅವರ ಗುರುತ ನಿಮಗಿಲ್ಲದ ಹ್ಯಾಂಗರಿ? ನಗೋ ಮಾತಂದ್ರ ನೀವ ಎಷ್ಟ ಸಲ ನನ್ನ ಕಂಡೀರಿ? ಒಂದ ಸಲ ಆದರೂ ಗುರುತಾ ಹಿಡದ್ದೀರಿ? ಯಾರೋ ಪೇಪರ್ ಮಾರೋ ಹುಡುಗ ಇದ್ದಿದ್ದಾನಂತ ದಾಟಿ ಹೋಗತೀರಾಯ್ತು!

ಗೋವಿಂದ : ಯಾರ ನಾನ? ಛೇ ಛೇ…. ಒಮ್ಮಿ ನೋಡಿದರ ಹಾಂಗೆಲ್ಲಾ ಮರ್ಯಾವಲ್ಲ ತಗೀ.

ಹುಶಪ್ಪ : ಹೂ. ಮರ್ಯಾಕಿಲ್ಲ, ಮರತವರ್ಹಾಂಗ ಇರತೀರಿ.

ಗೋವಿಂದ : ನಿನ್ನ ಮುಂದ್ಯಾತರ ಸೋಗೋ, ಮಾರಾಯಾ?

ಹುಶಪ್ಪ : ಹೇಳ್ರಿ ಹಂಗಾದರ; ಹೋದ ತಿಂಗಳು ಸುಭಾಸರೋಡಿನಾಗ ಇಪ್ಪತ್ತನಾಲ್ಕ ರೂಪಾಯಿ ಐವತ್ತ ಪೈಸಾ ಕೊಟ್ಟ ಎರಡ ಚಾಳೀಸ ಕೊಂಡಿರಿ. ಆಗ ನಾ ನಮಸ್ಕಾರ ಮಾಡ್ನಿ, ನೆನಪೈತ್ರಿ?

ಗೋವಿಂದ : (ಕಂಡವರಂತೆ ನಟಿಸುತ್ತ)
ಆಹಾ! ನೀನs ಅಲ್ಲ? ಹೌಂದ್ಹೌಂದು, ನೆನಪಾತ ಬಿಡು. ಗಣೇಶ ಬೀಡಿ ಸೇದತಿದ್ದಿ ಹೌಂದಲ್ಲ?

ಹುಶಪ್ಪ : ಹೂ! ‘ಯಾಕಪಾ ಆರಾಮ ಇದ್ದೀಯೇನೋ?’ ಅಂದಿರಿ.

ಗೋವಿಂದ : ಆಗ ನೀ ಏನಂದಿ? ‘ಹೂನ್ರಿ’ ಅಂದೆಲ್ಲ?

ಹುಶಪ್ಪ : ಊಹೂ, ‘ಹೌದರಿ’ ಅಂದ್ನಿ.

ಗೋವಿಂದ : ಹಾ! ಹೌದರಿ ಅಂದೆಲ್ಲ? ಹೌಂದ್ಹೌಂದ.

ಹುಶಪ್ಪ : ಒಂದು ಮಾತ ಹೇಳಿ ನಿಮ್ಮನ್ನ ನಗಿಸಲಿ?

ಗೋವಿಂದ : ಅದೇನಪಾ?

ಹುಶಪ್ಪ : ನಿಮಗಿನ್ನೂ ನನ್ನ ಗುರುತs ಸಿಕ್ಕಿಲ್ರಿ!

ಗೋವಿಂದ : ಎಲಾ ಇವನ!

ಹುಶಪ್ಪ : ನಗಸೋ ಮಾತ ಇನ್ನೊಂದ ಹೇಳಲಿ?

ಗೋವಿಂದ : ಆಗಲೆಪ!

ಹುಶಪ್ಪ : ಆಗಳೆ ನೀವು ಸುಳ್ಳs ಹೇಳಿದಿರಿ.

ಗೋವಿಂದ : ಹೌಂದಪಾ ಹೌಂದೊ! ಈ ಜಗತ್ತಿನಾಗ ಸುಳ್ಳ ಹೇಳಾವ ನಾ ಒಬ್ಬಾವನs. ನೀವೆಲ್ಲಾ ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳು! ಮುಸಡೀ ನೋಡಿದರ ತಿಳೀತದಲ್ಲ,-ಹರಿಶ್ಚಂದ್ರನ್ಹಾಂಗs ತುಟಿ, ಅದs ಮೂಗು, ಅದs ತೇಜಸ್ಸು, ಕಳೆ….

ಹುಶಪ್ಪ : ಹೌಂದ್ಹೌಂದ್ರಿ. ಈಗ ಬರೋಬರಿ ಗುರುತಾ ಹಿಡದಿರಿ ನೋಡರಿ. ನನಗೂ ಹಾಂಗs! ಒಬ್ಬನ ಮುಸಡಿ ನೋಡಿದ್ಕೂಡ್ಲೆ-ಅವನ ಜಾತಿ ಯಾವುದು? ಅವಗ ಎಷ್ಟ ಮೊಳ ಉದ್ದಗಲದ ಗೋರಿ ಬೇಕು? ಹೆಂಗ ಹುಗೀಬೇಕು?- ಎಲ್ಲಾ ಹೊಳದ ಬಿಡತೈತಿ. ನೀವು ಒಮ್ಮಿ ನಾಟಕದಾಗ ಅದೇನೋ ಆಗಿದ್ದಿರಿ. ಹೇಳತಿದ್ದಿರಿ: ನಾನೀಸೋ ಹೊಳಿ ಹಿಂಗೊಂದ್ಸಲ ನೋಡಿದರ ಸಾಕು, ಅದರ ಆಳ, ಅಗಲಾ ಹೇಳಿ ಬಿಡತೇನಂತ. ನನಗ ಗಾಬರಿ ಆತ! ಬಣ್ಣ ಅಳಸ್ತಿದ್ರಿ, ನಾ ಅಲ್ಲಿಗೇ ಬಂದ ‘ಭಲಾ ಹುಲಿ’ ಘನ ಈಸ್ಯಾಡತಿರಬೇಕಲ್ಲಾ ನೀವು? ಅಂತಂದರ-ನೀವಂದಿರಿ; ನನಗ ಈಸಾಕs ಬರಾಣಿಲ್ಲಂತ. ಅಂದಂತೂ ನೋಡ್ರಿ, ನೆಲದ ಮ್ಯಾಲ ಹೊರಳ್ಯಾಡಿ ನಕ್ಕಿನಿ.

ಗೋವಿಂದ : (ಮರೆಸಲೆತ್ನಿಸುತ್ತ)
ಅದಿರ್ಲೆಪಾ ಹುಶಪ್ಪಾ. ನಿಮ್ಮ ಸಾಹೇಬರ ಹೆಸರಷ್ಟ ಹೇಳಲ್ಲ….

ಹುಶಪ್ಪ : ಅವರಿಗೆಲ್ಲಿ ಹೆಸರಿರಬೇಕ್ರಿ?

ಗೋವಿಂದ : ಹಂಗ ಹೆಂಗಾದೀತೋ? ನನ್ನ ಹೆಸರ ಗೋವಿಂದ, ನಿನ್ನ ಹೆಸರ ಹುಶಪ್ಪ, ಹಾಂಗ ಅವರಿಗೂ ಒಂದ ಹೆಸರಿರಬೇಕಲ್ಲ; ಆ ಹೆಸರೇನಂದರ….

ಹುಶಪ್ಪ : ಯಮ, ಯಮ! ಯಮದೈತ. ಬಿಡರೀ ನನ್ನ ಮಾತ ಬಿಡತೀರಿ, ಇನ್ಯಾರದೋ ಕೇಳತೀರಿ.

ಗೋವಿಂದ : ಆಗಲಿ; ಅದೇನ ನಿನ್ನ ಮಾತ ಹೇಳಪಾ.

ಹುಶಪ್ಪ : ನಾನೂ ನಿಮ್ಹಾಂಗs ಮುಖಾ ನೋಡಿ ಮೊಳಾ ಹಾಕಾವನ್ನಲಿಲ್ರೆ?

ಗೋವಿಂದ : ಅಂದಿ.

ಹುಶಪ್ಪ : ಆದರೂ ನನಗು ನಿಮಗು ಒಂದ ಘರಕೈತಿ ನೋಡ್ರಿ, ಸತ್ತ ಮ್ಯಾಲ ನಿಮ್ಮನ್ನ ಹೆಂಗ ಹುಗೀತಾರಂತ ನಿಮಗ ಗೊತ್ತೈತ್ರಿ? ಗೊತ್ತಿಲ್ಲ ಹೌಂದಲ್ರಿ? ಅಷ್ಟs ಯಾಕ? ಹೆಂಗ ಸಾಯಬೇಕಂಬೂದೂ ಗೊತ್ತಿಲ್ಲ. ಅದಕ್ಕs ನಾ ಹೇಳತೇನ್ರಿ: ಯುನಿವರ್ಸಿಟಿ ಒಳಗ ಸಿಕ್ಕಸಿಕ್ಕದ್ದ ಕಲಿಸೋದಕಿಂತ- ಹೆಂಗ ಸಾಯಬೇಕು, ಹೆಂಗ ಹುಗೀಬೇಕು – ಇದನೆಲ್ಲಾ ಕಲಿಸೋದು ಚಲೋ ಅಂತೀನ್ನಾ, ಖರೇನೊ, ಸುಳ್ಳರಿ?

ಗೋವಿಂದ : ಖರೆ, ಖರೆ.

ಹುಶಪ್ಪ : ನಿಮ್ಮಷ್ಟ ಬುದ್ಧಿ ಇವರ್ಯಾರಿಗೂ ಇಲ್ಲ ನೋಡ್ರಿ. ಮನ್ನಿ, ಅದ್ಯಾವುದೋ ದೊಡ್ಡ ಮನಿಶ್ಯಾ ಅಂತ. ಮಂತ್ರೀಗಿಂತ್ರೀ ಆಗಿ ಬೆಳಕೊಂಡಾವ. ಅವ ಸಾಯೋದ ನೋಡಾಕ ಸಾವಿರಾರ ಮಂದಿ ಕೂಡ್ಯಾರ. ಅದರಾಗs ಒಂದಷ್ಟ ಮಂದಿ ಅಳೋದಕ್ಕ ಕಣ್ಣೀರ ತಯ್ಯಾರ ಮಾಡಿಕೊಂಡs ಕುಂತಾರ! ಎಷ್ಟ ಅದ್ದೂರಿ ಮಾಡಿ ಸಾಯಬೇಕ, ಹೌಂದಲ್ರಿ? ಅಂಥಾವ ಕಾಲ ಸೆಟಿಸಿ ನಾಯೀ ಹಾಂಗ ಸತ್ತನಲ್ರಿ! ಸೆಟದ ಕೈಯಾ ಕಾಲಾ ಮುರದ ಗೋರ್ಯಾಗ ಹಾಕಬೇಕಾತ! ಸತ್ತಾ; ಹುಗದಿ. ಇದರಾಗೇನ ಶಾಣೇತನ ಬಂತಪಾ?- ಅಂತ ಕೇಳ್ರೆಲ್ಲ.

ಗೋವಿಂದ : ಆ?

ಹುಶಪ್ಪ : ಸತ್ತಾ, ಹುಗದಿ. ಇದರಾಗೇನ ಶಾಣೇತನ ಬಂತು? ಅಂತ ಕೇಳ್ರಿ.

ಗೋವಿಂದ : ಕೇಳಿಕೊಂಡೆಲ್ಲ?

ಹುಶಪ್ಪ : ನೀವ್ಕೇಳ್ರಿ.

ಗೋವಿಂದ : ‘ಹೂ’ ಏನ ಶಾಣೇತನ ಬಂತಪಾ?

ಹುಶಪ್ಪ : ಛೇ, ಪೂರಾ ಕೇಳ್ರಿ.

ಗೋವಿಂದ : ಪೂರಾ ಏನಂದಿ?

ಹುಶಪ್ಪ : ಸತ್ತಾ, ಹುಗದಿ. ಇದರಾಗೇನ ಶಾಣೇತನ ಬಂತಪಾ?

ಗೋವಿಂದ : ‘ಹೂ’ ಸತ್ತಾ, ಹುಗದಿ, ಇದರಾಗೇನ ಶಾಣೇತನ ಬಂತಪಾ?

ಹುಶಪ್ಪ : ನೀವಾಗಿದ್ದರ, ದೊಡ್ಡ ಮನಿಶಾ ಅಂತ ದೊಡ್ಡ ಗೋರಿ ತೋಡತಿದ್ದಿರಿ. ನನಗ, ಇದ ಮೊದಲs ಗೊತ್ತಿತ್ತಂತs ನಾಯೀ ಅಳತೀ ಗೋರೀ ತೋಡಿದ್ನೆಲ್ಲಾ! ಹೆಂಗೈತಿ?

ಗೋವಿಂದ : ಭೇಶ್ ಭೇಶ್; ಘನ ತಲಿವಾನಪಾ ನೀನು!

ಹುಶಪ್ಪ : ತಲಿ ಅಂದರ ಅಂತಿಂಥಾ ತಲಿ ಅಂದೀರಿ ಮಾತ್ರ! ನೋಡೋಣು; ಸಾಯೋದರೊಳಗ ಎಷ್ಟ ಪ್ರಕಾರ ಅದಾವ ಹೇಳ್ರಿ?

ಗೋವಿಂದ : ಸಾಯೋದರೊಳಗೂ ಪ್ರಕಾರ ಅದಾವು? ಅವ್ಯಾವಪಾ?

ಹುಶಪ್ಪ : ಒಟ್ಟ ಒಂದನೂರಾ ಎಂಟ ಪ್ರಕಾರ ಅದಾವರಿ! ಕೆಲವರು ಜೀವ ಹೋಗಿ ಸಾಯತಾರ, ಕೆಲವರು ಹೋಗದ ಸಾಯತಾರ, ಕೆಲವರು ಹರೇದಾಗs ಸತ್ತ ಮುದುಕರಾಗೋತನಕ ಜೀವಂತ ಇರತಾರ, ಕೆಲವರು ಹುಟ್ಟಿದಾಗs ಸತ್ತ ತೋರಿಕೆಗಾಗಿ ನಡದಾಡತಿರತಾರ, ಸಾವಿನಾಗs ಇಷ್ಟ ಪ್ರಕಾರ ಇದ್ದರ, ಗೋರಿಯೊಳಗೂ ಇರಬೇಕೋ ಬ್ಯಾಡ್ರೊ?

ಗೋವಿಂದ : ಇರಬೇಕಾಯ್ತಲ್ಲ.

ಹುಶಪ್ಪ : ಹಾ! ಅದಕ್ಕs ಕೆಲವರಿಗಿ ಮನೀನs ಗೋರಿ. ಕೆಲವರಿಗಿ ಆಫೀಸೇ ಗೋರಿ. ಇನ್ನ ಕೆಲವರಿಗಿ ಜಗತ್ತs ಗೋರಿ. ಕೆಲವರಿಗಿ ಹೆಣ್ಣ, ಹರೆ, ಚಟ, ಏನ ಒಂದೋ? ಎರಡೋ?

ಗೋವಿಂದ : ಅದಿರ್ಲೆಪಾ….

ಹುಶಪ್ಪ : ನಮಗೊಬ್ಬ ಖಾಸ ಗಿರಾಕಿ ಇದ್ದಾನ್ರಿ,-ಛೇ, ಈ ಮಾತಂತೂ ನೀವು ಕೇಳಾಕs ಬೇಕು, ಖಾಸ ಗಿರಾಕಿ ಇದ್ದರೀ. ಮೊದಲ ಗುಬ್ಬೀ ಕಂಪನ್ಯಾಗ ಇದ್ದ. ಲಾಲೂನ ಪಾರ್ಟ್ ಮಾಡತಿದ್ದ. ಮಂದೀನ್ನ ನಗಸ್ತಿದ್ದಾ. ನಕ್ಕವರು ಸಿಕ್ಕಸಿಕ್ಹಾಂಗ ಸಾಲಾ ಕೊಟ್ಟರು. ಕೊಟ್ಟವರು ತಿರುಗಿ ಕೇಳಿದರು,-ಮುಖ ತಪ್ಪಿಸ್ಯಾಡಿದ. ಕೊಟ್ಟವರು, ಗುರುತಾ ಹಿಡಿದರು. ಇನ್ಹೆಂಗಪಾ?-ಅನ್ನೋದರೊಳಗ ಒಂದು ಕರೀ ಚಾಳೀಸ ಸಿಕ್ಕಿತು. ಹಾಕಿಕೊಂಡ ನೋಡತಾನು: ಜಗತ್ತೆಲ್ಲಾ ಕರ್ರಗ!
(ಗೋವಿಂದ ನೋವನ್ನು ಮುಚ್ಚಿಡಲು ಪ್ರಯತ್ನಿಸುತ್ತ, ಸಾಧ್ಯವಾಗದೆ ಮುಂದಿನ ಮಾತು ಮುಗಿಯುವ ಹೊತ್ತಿಗೆ ನಿಷ್ಠುರನಾಗುತ್ತಾನೆ.)
ಬಣ್ಣ ಬಣ್ಣದ ಸಾಲಗಾರರೆಲ್ಲಾ ಗುರುತಾ ಕಳಕೊಂಡರು. ‘ಸಿಕ್ಕಿತಲೇ ಬದುಕೋ ಹಂಚಿಕಿ’ ಅಂತ ಕೂಗಾಡ್ತಿದ್ದ. ಅಷ್ಟರಾಗs ನಾ-ನನ್ನ ಬಣ್ಣ ಮೊದಲs ಕರ್ರಗ, ಅದ ನನ್ನ ತಪ್ಪ? – ಕಂಡಿನಿ. ಎಲ್ಲಾರೂ ಬಣ್ಣ ಬದಲಿ ಮಾಡಿಕೊಂಡಾಗ ನಾ ಒಬ್ಬನ ನನ್ನ ಖರೇ ಬಣ್ಣದಾಗ ಸಿಕ್ಕಿನೋ ಇಲ್ಲೋ? ಗುರುತಿಲ್ಲದವರ್ಹಾಂಗ ಚಡಪಡಿಸಿದ. ಅವ ಅರೀಧಾಂಗಿದ್ದರ ನಾ ಯಾಕ ಮ್ಯಾಲ ಬಿದ್ದ ಗುರುತಾ ಹೇಳ್ಲಿ?

ಗೋವಿಂದ : (ಥಟ್ಟನೇ ಅವನ ಮೈ ಮೇಲೇರಿ ಹೋಗಿ ಹುಶಪ್ಪನ ಕೈತಿರುವಿ ಬೆನ್ನ ಹಿಂದೆ ತಂದು ಅವನ ಮುಖ ಮೇಲೆ ಬರುವಂತೆ ಮಾಡಿ)
ಏ, ನೀ ಯಾರು, ನಿನ್ನ ಸಾಹೇಬ ಯಾರು,- ಹೇಳತೀಯೊ? ಗುದ್ದಿ ಹಲ್ಲ ಮುರಿ ಅಂತಿಯೊ?

ಹುಶಪ್ಪ : (ಹೆದರಿದಂತೆ ನಟಿಸುತ್ತ)
ಹೇಳ್ತೇನ್ರೀ, ನನ್ನ ಹಲ್ಲ ಮುರೀಬ್ಯಾಡ್ರಿ.

ಗೋವಿಂದ : ಹೇಳ ಹಂಗಾದರ.

ಹುಶಪ್ಪ : ನಾ ಹೇಳಿದ್ದ ನಮ್ಮ ಸಾಹೇಬರ ಮುಂದ ಹೇಳಾಣಿಲ್ಲರಿ?

ಗೋವಿಂದ : ಇಲ್ಲ ಹೇಳು.

ಹುಶಪ್ಪ : ಖರೇನs ಹೇಳಾಣಿಲ್ಲರಿ?

ಗೋವಿಂದ : ಇಲ್ಲ ಹೇಳಂದರ.

ಹುಶಪ್ಪ : ಮತ್ತ ನೋಡ್ರಿ, ಗೊತ್ತಾದರ ನನ್ನ ನೌಕರಿಂದ ವಜಾ ಮಾಡತಾರ.

ಗೋವಿಂದ : ಇಲ್ಲ ಬೊಗಳೊ.

ಹುಶಪ್ಪ : ಏನ ಬೊಗಳಲಿ?

ಗೋವಿಂದ : ನಿಮ್ಮ ಸಾಹೇಬ ಯಾರು? ಅವನ ಹೆಂಡ್ತಿ ಯಾರು? ಅದ್ಹೇಳು.

ಹುಶಪ್ಪ : ಯಾರಿಗೂ ಹೇಳಬ್ಯಾಡ್ರಿ ಮತ್ತ. ಇಲ್ಲಿ ಬರ್ರಿ. (ಗೋವಿಂದ ಕೈ ಬಿಟ್ಟು ಅವನ ಬಾಯ ಹತ್ತಿರ ಕಿವಿ ತರುವನು. ಹುಶಪ್ಪ ಕಿವಿಯಲ್ಲಿ ಹೇಳಿದಂತೆ ದೊಡ್ಡದಾಗಿ ಹೇಳುತ್ತ)
ನಮ್ಮ ಸಾಹೇಬರು, ನಿಮ್ಮ ಮಗ. ಅವರ ಹೆಂಡ್ತಿ ನಿಮ್ಮ ಸೊಸಿ, ನಾ ಅವರ ಪಿವನ…. ಹೆ ಹೆ ಹೆಂಗ ಬಿದ್ದಿರಿ? ಹೆಂಗ ಬಿದ್ದಿರಿ? (ಎನ್ನುತ್ತ, ಗೋವಿಂದನನ್ನು ಅಸಡ್ಡೆಯಿಂದ ತೋರಿಸಿ ನಗುತ್ತ ಒಳಗೆ ಹೋಗುವನು.)

ಗೋವಿಂದ : (ನಿರಾಶನಾಗಿ ಕಡೆ ಅಡ್ಡಾಡುತ್ತ.)
ದರಿದ್ರ ಸೂಳೀಮಕ್ಕಳು. ಹಾದರಿಗಿತ್ತೀ ಮಕ್ಕಳು!

ಕಾಶಿ : (ಬಂದು ಇವನು ಬಯ್ಯುತ್ತ ಅಡ್ಡಾಡುವುದನ್ನು ನೋಡಿ ಬಾಯ ಮೇಲೆ ಕೈ ಇಟ್ಟುಕೊಂಡು ಅವನಿಗೆ ಕಾಣಿಸಿಕೊಳ್ಳುವಳು.)
ಅಯ್ಯs ನಿಮ್ಮನ್ನ ನೀವ ಬಯ್ಕೊಳ್ಳೋದ ಸಾಕ ಮಾಡ್ರಿ. ಬಂದ ನಿಂತೇನ, ನನ್ನ ಕಡೆ ಅಷ್ಟ ನೋಡರಿ.

ಗೋವಿಂದ : (ಗಮನಿಸಿ)
ಹೂ! ಬಂದ್ಯಾ, ಇಷ್ಟ ಹೊತ್ತ ಎಲ್ಲಿ ಹೋಗಿದ್ದಿ?

ಕಾಶಿ : ಎಲ್ಲಿ ಹೋಗಲಿ? ಗೋರಸ್ತಾನ ಸೈತ ಸಿಟ್ಟಾಗೇತಿ ನನ್ನ ಮ್ಯಾಲ.

ಗೋವಿಂದ : ಕಾಶೀ,

ಕಾಶಿ : ಹೂ?

ಗೋವಿಂದ : ಇಲ್ಲಿ ಬಾ.
(ಇಬ್ಬರೂ ಸೋಫಾದ ಮೇಲೆ ಕೂರುವರು)
ನಮ್ಮ ಮನೀಗಿ ಬಂದಾರಲ್ಲ….

ಕಾಶಿ : ಹೂ, ಅಲ್ಲರೀ, ಹಿಂತಾವರ ಹೀಂಗ ಮಗಾ ಸೊಸೀ ಆಗಿ ಬರ್ತಾರಂತ ಮೊದಲs ನನಗ ಯಾಕ ಹೇಳಲಿಲ್ಲಾ? ಅವರ ಜೋಡಿ ನೀವು ತೊಡಿ ಬಡದ ಎಷ್ಟೊಂದ ನಕ್ಕಿರಿ. ನಾನೂ ನಕ್ಕೇನಂದರ ನನ್ನ ಕಣ್ಣಾಗ ಕಣ್ಣೀರ ಬರ್ತಿದ್ವು.

ಗೋವಿಂದ : ಹೇಳೋದ ಪೂರಾ ಕೇಳs. ನಿನಗೇನಾದರೂ ಅವರ ಗುರುತ ಅದs ಏನು?

ಕಾಶಿ : ಈ ಮುದಿ ವಯಸ್ಸ ಇನ್ನೂ ಏನೇನ ಮಾಡಿಸೀತೋ, ದೇವರs ಬಲ್ಲ!

ಗೋವಿಂದ : ಮೆತ್ತಗ ಮಾತಾಡ, ಕೇಳಿಸೀತ, ಇಲ್ಲೆ ಮಲಗ್ಯಾರ.

ಕಾಶಿ : ಯಾಕ? ನಿಮ್ಮ ಗುರುತಿನವರೆಲ್ಲೇನ ಅವರು?

ಗೋವಿಂದ : (ಇನ್ನೂ ಹತ್ತಿರ ಬರುವಂತೆ ಕೈಸನ್ನೆಯಿಂದ ಕರೆದು) ಅಲ್ಲ.

ಕಾಶಿ : ಅಲ್ಲಾ?

ಗೋವಿಂದ : ಊಹೂ.

ಕಾಶಿ : ಇನ್ಯಾರ ಇದ್ದಿದ್ದಾರು?

ಗೋವಿಂದ : ಯಾರೋ ಏನೊ!

ಕಾಶಿ : ಯಾರೋ ಏನೊ ಅಂದರ? ಸಿಕ್ಕಸಿಕ್ಕವರಿಗಿ ಒಬ್ಬರ ಮನೀ ಹೋಗೋ ಧೈರ್ಯ ಹೆಂಗ ಬಂದೀತು?

ಗೋವಿಂದ : ನನಗೂ ಅದs ಬಗೀಹರಿವೊಲ್ದs! ನೋಡಲಿಲ್ಲಾ-ನಾವಂದದ್ದೆಲ್ಲಾ ಕೇಳಿಕೊಂಡ- ಥೇಟ್ ನಮ್ಮ ಮಗಾ ಸೊಸೀ ಹಾಂಗs ಆಗಿಬಂದು ಹೆಂಗ ಗುದಮುರುಗಿ ಹಾಕಿದರು?

ಕಾಶಿ : ಯಾರೋ ಯಾರಿಗಿ ನಮ್ಮ ಮನಸಿನಾಗಿಂದೆಲ್ಲಾ ಹೆಂಗ ತಿಳದೀತು?

ಗೋವಿಂದ : (ತಾಳ್ಮೆಗೆಟ್ಟು)
ಏ, ನಾ ಹೇಳಿಲ್ಲಾ ನಿನಗ-ಹುಬ್ಬ ಗಂಟ ಹಾಕಿದಾಗೊಮ್ಮಿ ಸುಡದ ಹೆಣಧಾಂಗ ಕಾಣತಿ, ಹಾಕಬ್ಯಾಡಂತ? ಹೇಳಿದಷ್ಟ ನಂಬಬೇಕ! ಯಾರೋ ಬಂದಾರ. ಬಂದವರ ಗುರುತಿಲ್ಲ; ಗುರುತಿದ್ದಿದ್ದರ ಹೇಳತಿದ್ದಿಲ್ಲಾ?

ಕಾಶಿ : ಹೌಂದ್ಹೌಂದ….

ಗೋವಿಂದ : ಮೆತ್ತಗ ಮಾತಾಡ.

ಕಾಶಿ : (ಮೆತ್ತಗೆ, ಆದರೂ ಕೇಳಿಸುವಂತೆ) ಹೌಂದ್ಹೌಂದ; ರೋಗದ ನಾಯೀ ಸುತ್ತ ನೊಣ ಭಾಳ ಹಾರ್ಯಾಡತಾವ.

ಗೋವಿಂದ : ಥೂ! ದೇವರ ನಿನ್ನ ನಾಲಿಗ್ಗಿ ಒಂದೆರಡ ಎಲುವ ಯಾಕ ಹಾಕಲಿಲ್ಲೊ! ಹೋಗಿ ಮುಸಡಿ ಮುಚ್ಚಿಕೊಂಡ ಮಲಗಬಾರದ?

ಕಾಶಿ : ಅದ್ಯಾಕ ಮಲಗಲಿ? ಚಾಳೀಸ ಹಾಕ್ಕೊಂಡ ನಿಮಗಿನ್ನೂ ‘ಆರ್ಯಪುತ್ರಾ’ ಅಂತೇನ.

ಗೋವಿಂದ : (ಒಪ್ಪಂದ ಮಾಡಿಕೊಳ್ಳುವ ದಾಟಿಯಲ್ಲಿ)
ಹೀಂಗ ನಾ ನೀ ಒಂದಕ್ಕೊಂದ ಅಂದರ ಬಿಡತಾರೇನ? ಏನಾದರೂ ಪಾರಾಗೋ ಹಂಚಿಕೀ ಮಾಡೋದ ಬಿಡತಿ; ಒಳ್ಳೇ ಟೈಮದಾಗ ಅಣಗಸಾಕ ನಾಲಿಗೀ ಮಸೀತಿ. ನಮ್ಮ ಮನಸಿನಾಗಿಂದ ಸೈತ ಒಡನುಡೀತಾರ; ಇನ್ನೂ ಏನೇನ ಮಾಡತಾರೊ! ತಿಳಕೋಬಾರದ?

ಕಾಶಿ : ಯಾರಿಗೋ ಹೇಳಿ ನೀವs ಕರಕೊಂಬಂದ್ರಿ ಅಂತಿದ್ದೆ. ಅವರ್ಯಾರಂಬೂದಾದರೂ ಹೇಳ್ರಿ.

ಗೋವಿಂದ : ಗೊತ್ತಿಲ್ಲದ್ದಕ್ಕs ಅಲ್ಲೇನs ನಿನ್ನ ಕೇಳಿದ್ದು? ಸೂಳೀಮಕ್ಕಳು ಕೂನಿಲ್ಲಾ, ಗುರುತಿಲ್ಲಾ, ಕ್ವಾಣಾ ಎಲ್ಲಿ ಕಟ್ಟಲೀ ಅಂತ ಬಂದಾರs ಏನ ಮಾಡ್ತಿ? ಏನೋ ಒಂದ ಅನ್ನೂದರಾಗs ಏನೇನೋ ಆಗಿಹೋಯ್ತು.

ಕಾಶಿ : ನೋಡಿ ಮರತಿದ್ದರ ನೆನಪ ಮಾಡಿಕೊಳ್ರಿ.

ಗೋವಿಂದ : ಗುರುತ ಇದ್ದರ ಹೌಂದಲ್ಲೊ ನೆನಪಾಗಬೇಕು. ಇಂಥಾ ಪ್ರಸಂಗದಾಗೂ ಚ್ಯಾಷ್ಟಿ ಮಾಡತೀನೇನ?
(ತಿಳಿಸಿ ಹೇಳಲಾಗದೆ ಬೇಸತ್ತು)
ಈ ಹೆಂಗಸರ ಸೌಭಾಗ್ಯನs ಇಷ್ಟ. ನೋಡು, ನಾ ಹೇಳಿಧಾಂಗ ಕೇಳಿದರ ಇಬ್ಬರೂ ಪಾರಾಗತೇವ. ಕೇಳತಿ?

ಕಾಶಿ : ಹೆಣ್ಣ ಬಾಲಿ, ನಾ ಏನ್ಮಾಡಲಿ?

ಗೋವಿಂದ : (ಅಣಕಿಸುತ್ತ)
ಹೆಣಾಬಾಲಿ! ಗಂಡಗ ಉಗುಳಿ ಜಳಕಾ ಮಾಡಸೋವಾಗ?

ಕಾಶಿ : ತಪ್ಪಾತರೀ.

ಗೋವಿಂದ : ಹಾಂಗಿದ್ದರ ಒಂದ ಕೆಲಸ ಮಾಡು, ಹೌsರಗ ನಂಜ್ಯಾನ ಮನೀಗಿ ಹೋಗು; ಯಾರೋ ಬಂದ ಮನೀ ಹೊಕ್ಕಾರ,- ಪೋಲೀಸರನ್ನ ಕರಕೊಂಬಾ ಅನ್ನು.

ಕಾಶಿ : ಮಗಾ ಸೊಸೀ ಅಂತ ನಂಜ್ಯಾಗ ಬ್ಯಾರಿ ಹೇಳೀರಿ.

ಗೋವಿಂದ : ಮಗಾ ಅಲ್ಲಾ, ಸೊಸೀ ಅಲ್ಲಾ, ಚ್ಯಾಷ್ಟಿ ಮಾಡಾಕ ಹೋಗಿ ಕುತ್ತಿಗಿ ತನಕ ಬಂದsದ, ಬಾ ಅಂತ್ಹೇಳ.

ಕಾಶಿ : ಬರ್ತಾನೋ ಇಲ್ಲೊ.

ಗೋವಿಂದ : ಹೆಂಗಸ ಕರದರ ಯಾಕ ಬರಾಣಿಲ್ಲ ಹೋಗs. ಕರಳ ಕರಗೋ ಹಾಂಗ ಅತ್ತೂ ಕರದೂ ಕಾಲ್ಹಿಡಿ. ಬೇಕಾದರ ನನ್ನ ಗಂಡನ ಮೈಕಟ್ಟ ಭಾಳ ತೆಳ್ಳಗ ಅದ, ನೀನs ಕಾಪಾಡೋ ಅಂತ ಅವನ ರಟ್ಟೀ ಹಿಡದ ಕರಿ, ಬರ್ತಾನ್ಹೋಗ.

ಕಾಶಿ : ಹೊರಗ ಕತ್ತಲಿ ಗವ್ವಿಡದೈತಿ, ನನಗ ಅಂಜಿಕಿ ಬರತೈತ್ರೀ.

ಗೋವಿಂದ : ಕೂರ್ಹಾಂಗಾದರ, ಅವರ ಮಾಡಿದ್ದ ಮಾಡಿಸಿಕೊಂಡ.

ಕಾಶಿ : ಹೋಗಂತೀರಿ?

ಗೋವಿಂದ : ಅದನ್ನ ಬಿಟ್ಟ ಬ್ಯಾರೇ ಹಾದೀನs ಇಲ್ಲ.

ಕಾಶಿ : ಅಯ್ಯೊ! ಹಾದ್ಯಾಗ ಆ ಕರೀ ಹುಡುಗ ಕಂಡರ ಹೆಂಗ ಮಾಡ್ಲಿ?

ಗೋವಿಂದ : ಅವ ಒಳಗಿದ್ದಾನ ಹೋಗs.

ಕಾಶಿ : ಹೋಗಂತೀರಿ?

ಗೋವಿಂದ : ಕಣಿ ಕೇಳಿ ಬಾ. ಇಷ್ಟರಾಗ ಕರಕೊಂಬರತಿದ್ದಿಲ್ಲಾ?
‘ಹೋಗಂತೀರಿ’, ‘ಹೋಗಂತೀರಿ’ ಅನ್ನಲಿಲ್ಲಾ ಹೋಗಂತ?

ಕಾಶಿ : (ದೈನ್ಯದಿಂದ)
ನೀವs ಹೋಗಿ ಬರ್ರಿ.

ಗೋವಿಂದ : ನಾ ಹೊಂಟರ ಇವರೆಲ್ಲಾ ಕೂಡಿ ನನ್ನ ಹರದ ಹನ್ನೆರಡ ಮಾಡಾಕಿಲ್ಲೇನs? ಮಾಡವೊಲ್ಲರಂತ ಹೋದರ ನಂಜ್ಯಾ ನನ್ನ ಮಾತ ನಂಬ್ಯಾನಾ?

ಕಾಶಿ : ಹೋಗಂತೀರಿ?
(ಎಂದು ನಿಧಾನವಾಗಿ ಏಳುವಷ್ಟರಲ್ಲಿ ಶಂಕರ, ಹುಶಪ್ಪ ಇಬ್ಬರೂ ಅಳತೆ ಪಟ್ಟಿ ಹಿಡಿದು ಬರುತ್ತಾರೆ. ಗೋವಿಂದ, ಕಾಶಿಯರ ಬಗ್ಗೆ ನಿರ್ಲಕ್ಷ್ಯತನದಿಂದ, ಅವರಿಲ್ಲವೇ ಇಲ್ಲವೆಂಬಂತೆ ಅವರ ಮುಂಭಾಗದಲ್ಲಿಯೇ ಲೆಕ್ಕ ಹಾಕುತ್ತಾರೆ. ಗೋವಿಂದ, ಕಾಶಿ ಹೆದರಿ ಮುದುಡಿಯಾಗಿ ಕೂತು ಮಾತಾಡುವವನ ಬಾಯನ್ನೇ ಬಾಯಿ ತೆರೆದುಕೊಂಡು ಮಿಕಿ ಮಿಕಿ ನೋಡುತ್ತಿರುತ್ತಾರೆ.)

ಶಂಕರ : ನೋಡು, ಆರ ಮೊಳ ಉದ್ದ, ಮೂರ ಮೊಳ ಅಗಲ; ಇಲ್ಲಿ ಅಗದ ಬಿಡು.

ಹುಶಪ್ಪ : ಅರ ಮೊಳ ಯಾಕರಿ? ಮೂರ ಮೊಳ ಉದ್ದ, ಎರಡ ಮೊಳ ಅಗಲ, ಸಾಕಲ್ಲ. ಇಲ್ಲಿ ನೋಡ್ರಿ.
(ಕೈಯಿಂದ ಅಳತೆ ಮಾಡಿ ನೆಲ ತೋರಿಸುತ್ತ)
ಇಷ್ಟಗಲ, ಇಷ್ಟುದ್ದ, – ಹಿಂಗ