ಶಂಕರ : ಒಳಗಿನ ಮಾಡ ಯಾವ ದಿಕ್ಕಿಗಿ ಮುಖ ಮಾಡ್ತಿ?

ಹುಶಪ್ಪ : ಉತ್ತರದಿಕ್ಕಿಗಿ ಮಾಡೋಣಲ್ರಿ.

ಶಂಕರ : ಹೂ, ಒಂದ ಸಲ ಅಳತೀ ಮಾಡಿಕೊಳ್ತೀ ಏನ್ನೋಡ.

ಹುಶಪ್ಪ : (ಗೋವಿಂದನನ್ನು ತೋರಿಸುತ್ತ)
ಅಳತೀ ಮಾಡಾಕೇನ, ಇದರs ಕಾಣತಾರಲ್ರಿ.

ಶಂಕರ : ಅವರೀ ತಪ್ಪಲಾ, ಹೂವಾ, ಊದಬತ್ತಿ ತಯಾರದಾವಿಲ್ಲೋ?

ಹುಶಪ್ಪ : ಹೂನ್ರಿ.

ಶಂಕರ : ಲಗೂ ಅಗದ ಬಿಡ ಹಾಂಗಾದರ. ನಾ ಒಳಗಿರತೇನ…. ಅಂಧಾಂಗ ಮಲಗೋ ರೂಮಿನಾಗ ತೋಡಿದರ ಹೆಂಗ?

ಹುಶಪ್ಪ : ಅದೂಪಾಡs. ಹಾಸಿಗ್ಯಾಗ ಮಲಗಬಹುದು, ಬ್ಯಾಸರಾದರ ಗೋರ್ಯಾಗ ಮಲಗಬಹುದು.

ಶಂಕರ : ಅಷ್ಟ ಮಾಡ ಹಾಂಗಾದರ (ಹೋಗುತ್ತಾನೆ.)

ಹುಶಪ್ಪ : (ಗೋವಿಂದನನ್ನು ಕುರಿತು)
ಅಂಧಾಂಗ ಪಿಕಾಸಿ ಎಲ್ಲಿ ಐತಿ ಅಂದ್ರಿ?

ಗೋವಿಂದ : (ಗಡಬಡಿಸಿ)
ಆ? ನನ್ನ ಕೇಳಿದಿ?

ಹುಶಪ್ಪ : ಹೂ. ಪಿಕಾಸಿ ಎಲ್ಲಿಟ್ಟೀರಿ?

ಗೋವಿಂದ : ಏನಂದಿ?

ಹುಶಪ್ಪ : (ಕಿವುಡರಿಗೆ ಹೇಳುವಂತೆ)
ಪಿಕಾಸಿ ಪಿಕಾಸಿ, ಪಿಕಾಸೀ ಎಲ್ಲಿಟ್ಟೀರಿ?

ಗೋವಿಂದ : ಎದಕ್ಕ ಬೇಕಾಗಿತ್ತು?

ಹುಶಪ್ಪ : ಮಾತಂದರ ಸಾಕು, ಮಂದಿ ಹಿಗ್ಗಿ ಸಾಯತಾರ. ಪಿಕಾಸಿ ಎಲ್ಲಿಟ್ಟೀರಿ ಹೇಳ್ರಿ ಅಂದ್ರ,

ಗೋವಿಂದ : ಹಿತ್ತಾಲದೊಳಗ ಅದ. ಯಾಕ ಬೇಕಿತ್ತು?
(ಹುಶಪ್ಪ ಒಳಗೆ ಹೋಗುವನು. ಸ್ವಲ್ಪ ಹೊತ್ತು ನೀರವ. ಕಾಶಿ ಮೆಲ್ಲಗೆ ದನಿ ಎತ್ತುವಳು.)

ಕಾಶಿ : ನನಗ ಭಾಳ ಹೆದರಿಕಿ ಆಗತೈತಿರೀ. ನನ್ನ ಕನಸಿನಾಗ ಒಬ್ಬ ಕರೀ ಹುಡುಗ ಬರತಾನ, ಅಂತಿದ್ನೆಲ್ಲ, ಅವನsರಿ.

ಗೋವಿಂದ : ಈಗ ಹೋದ ಅವನ?

ಕಾಶಿ : ಇವನಲ್ಲ, ಮೊದಲ ಹೋದ್ನಲ್ಲ, ಆತ.

ಗೋವಿಂದ : ಕನಸಿನಾಗ ಬಂದರ ಏನಾಗತದ ಬಿಡ.

ಕಾಶಿ : ಬಂದ ಕೈ ಮಾಡಿ ‘ಅವ್ವಾ, ಇಲ್ಲಿ ಬಾ’ ಅಂತ ಕರೀತಾನ್ರಿ!

ಗೋವಿಂದ : ಹೆದರಿದ್ದೀಯಲ್ಲಾ. ಅದಕ್ಕs ಹಾಂಗ ಆಗತದ. ಕನಸಿನಾಗ ಭಾಳ ಎಚ್ಚರದಿಂದ ಇರಬೇಕs! ಅವ್ವಾ ಅಂದಕೂಡ್ಲೆ ಸಡಗರ ಮಾಡಿ ‘ಓ’ ಅಂದೀ ಮತ್ತ; ಗೊಟಕ್ಕಂದೀ.

ಕಾಶಿ : ಇಲ್ಲಿ ಅದೇನೋ ಅಗೀಬೇಕಂತ ಅಳತೀ ಮಾಡಿದರು, ಅದೇನ್ರಿ?

ಗೋವಿಂದ : ಯಾರಿಗ್ಗೊತ್ತ? ಅವರೀ ಹೂವಾ, ತಪ್ಪಲಾ ಅಂತಿದ್ದರು. ಗೋರೀಗೀರೀ ಅಗೀತಾರೊ ಏನೊ!

ಕಾಶಿ : ಗಂಡಸರಾಗಿ ನೀವ್ಯಾಕ ಅವರ್ನ ತಡೀಬಾರದು? ಹೇಳ್ರೆಲ್ಲ; ಮಕ್ಕಳ್ರಾ, ಇವ ನನ್ನ ಮನಿ, ಸಿಕ್ಕಸಿಕ್ಹಾಂಗ ತಗ್ಗ ತೋಡಿದರ ಒದ್ದ ಮುದ್ದೀ ಮಾಡೇನಂತ.

ಗೋವಿಂದ : ನಾ ಒಬ್ಬಾವ, ಅವರಿಬ್ಬರು; – ಕೇಳ್ಯಾರೇನ? ಹೆಚ್ಚು ಕಮ್ಮಿ ಆದರ ನನ್ನs ಮುದ್ದೀ ಮಾಡವೊಲ್ಲರ? ಹೂ ಅಂದರ, ಇವರ ಯಾಕ?- ಸಾವಿರಾರ ಮಂದಿನ್ನೂ ಹೌಂದನ್ನೋ ಹಾಂಗ ಕಾರಣ ಕೊಟ್ಟು ಮೊಣಕಾಲ ಮ್ಯಾಲ ನಡಿಸೇನ. ಈ ಸೂಳೀಮಕ್ಕಳೋ, ಹೂ ಅನ್ನಬೇಕಲ್ಲ ಹೇಳಿದರ.

ಕಾಶಿ : ಯಾರಂತ ಹೆಸರಾದರೂ ಕೇಳ್ತೀ……

ಗೋವಿಂದ : ಮನಸಿನಾಗs ಸಾಕಷ್ಟು ಸಲ ಕೇಳೇನಿ. ಆದರ ಅವರ ಉತ್ತರಾನs ಕೊಡೋದಿಲ್ಲ.
(ತಕ್ಷಣವೆ ಉಪಾಯ ಹೊಳೆದು, ಅವಸರದಿಂದ)
ಕಾಶೀ, ನಾವಿಬ್ಬರೂ ಈ ಮನೀ ಬಿಟ್ಟ, ಓಡಿಹೋದರ ಹೆಂಗ?

ಕಾಶಿ : ನಂಜ್ಯಾ ಸುಮ್ಕಿದ್ದಾನು?

ಗೋವಿಂದ : ಈ ನನ್ನ ಮಗಾ ಸೊಸೀ ಇದ್ದಾರಲ್ಲಾ, ಕೊಟ್ಟಕೊಳ್ಲಿ, ಲಗೂ ಏಳಿ.

ಕಾಶಿ : ಇನ್ನೊಮ್ಮಿ ವಿಚಾರ ಮಾಡಿ ನೋಡ್ರಿ.

ಗೋವಿಂದ : ಮತ್ತs ಹಾದ್ಯಾಗಿನ ಹಾಳಗ್ವಾಡೀ ಹಾಂಗ ಅಡ್ಡ ನಿಂತಿ ಹೌಂದಲ್ಲ?

ಕಾಶಿ : ಹೂ. ನಡೀರಿ ಹಾಂಗಾದರ….
(ಇಬ್ಬರೂ ಗಡಿಬಿಡಿಯಿಂದ ಹೊರಡುವಷ್ಟರಲ್ಲಿ ಶಂಕರ ಬಂದು ಸಿಳ್ಳು ಹೊಡೆಯುವನು. ಹುಶಪ್ಪಓಂ ಸಾಹೇಬರಎಂದು ಓಡಿ ಬಂದು ನಿಲ್ಲುವನು. ಗೋವಿಂದ, ಕಾಶಿ ಇಬ್ಬರೂ ಮತ್ತೆ ಸೋಪಾದ ಮೇಲೆ ಮುದುಡುವರು.)

ಶಂಕರ : ಮದಿವೀ ತಯ್ಯಾರಿ ಎಲ್ಲಾ ಮುಗೀತೇನೊ?

ಹುಶಪ್ಪ : ಎಲ್ಲಾ ಎಲ್ಲಾ ಮುಗೀತ್ರಿ; ಜೋಡ ಗಾದೀ, ಜೋಡ ದಿಂಬಾ, ಡಬಲ್ ರಗ್ಗಾ; ಇನ್ನೇನ ಅಳತೀ ಮಾಡಿ ಹಾಸಿಗೀ ಮಾಡಿದರಾಯ್ತರಿ.

ಶಂಕರ : ಮತ್ತ ಅದನ್ನ ಯಾವಾಗ ಮಾಡಾವ?

ಹುಶಪ್ಪ : ನೀವು ಹೂ ಅನ್ರಿ, ಅಷ್ಟರಾಗs ಮಾಡಿರತೇನ.
(ಹೋಗುವನು)

ಶಂಕರ : ದರಿದ್ರ ನನ ಮಗ,
(ಎನ್ನುತ್ತ ಗೋವಿಂದ ಕಾಶಿಯರನ್ನು ಗಮನಿಸಿ)
ಅರೆ! ಅಪ್ಪಾ, ಅವ್ವಾ ಇಬ್ಬರೂ ಎದ್ದ ಹೊರಟ್ಹಾಂಗ ಕಂಡಿತಲ್ಲ!

ಗೋವಿಂದ : (ತಡಬಡಿಸಿ)
ಏನಿಲ್ಲ ಹಾಂಗs ವಾಕಿಂಗ್ ಹೋಗಿ ಬರೋಣಂತ….

ಶಂಕರ : ಸರಿರಾತ್ರ್ಯಾಗ?

ಗೋವಿಂದ : ಬೆಳಗಾಗಿಲ್ಲಾ?

ಶಂಕರ : ಚಾಳೀಸ ಹಾಕದಿದ್ದಾಗ್ಲೂ ನಿಮಗ ಅನಕೂಲ ಟೈಮs ಕಾಣ್ತದಲ್ಲಾ!

ಗೋವಿಂದ : ಹಂಗೇನಿಲ್ಲಾ?….

ಶಂಕರ : ಹೆಂಗಂದಿರಿ?

ಗೋವಿಂದ : ಅಂದರ….

ಶಂಕರ : ಅಂದರ ಏನಂದಿರಿ?

ಗೋವಿಂದ : ಎಲೀ ಇವನ; ಉಸರಾಡಾಕ್ಕೊಡ್ತೀಯಿಲ್ಲೊ?

ಶಂಕರ : ಉಸಿರಾಡಪ್ಪಾ; ಭಗವಂತ ಗಾಳೀ ಕೊಟ್ಟ ಮರತಾನ. ಏ ಸರಸೀ, ಆ ಕಿಟಕೀ ಬಾಗಲಾ ತಗಿಯೋ, ನಿಮ್ಮ ಮಾವ ಉಸಿರಾಡಿಸಬೇಕಂತ.
(ನಿಧಾನವಾಗಿ ಸರಸೂ ಬರುವಳು)

ಗೋವಿಂದ : ಕೂನಾ ಗುರುತಾ ಹೇಳದs ಮಾತಿಗೊಮ್ಮಿ ವೊವ್ ಅಂದರ ಎದಕ್ಕ ಬಂತರಿ? ಯಾರಾ, ಎಂತಾ, ಹೇಳದs ಕೇಳದs ಬಾಯಿ ಬಲ್ಹಾಂಗ ಮಾತಾಡಿದರ? ಆಗ ನಾವೂ ಕಾರಪುಡಿ ಆಗಬೇಕಾಗತದ.

ಕಾಶಿ : ಸುಮ್ಮನಿರ್ರಿ.

ಸರಸು : ಅತ್ತೇ, ಒಂದು ಟೊಮ್ಯಾಟೊ ತಗೊಳ್ರಿ, ನಿಮ್ಮ ಗಡಿಗ್ಯಾಗಿಟ್ಟ ಕುದಿಸಹೋಗ್ರಿ. ಆಮ್ಯಾಲ ಮಾವನವರ ಕಾರಪುಡಿ ಒಗ್ಗರಣೆ ಕೊಟ್ಟೀರಂತ.

ಕಾಶಿ : (ನೋವಿನಿಂದ)
ಕೇಳಿದಿರಿ?

ಗೋವಿಂದ : ಇನ್ನ ಸಾಕು ಅಂದೆ. ಯಾರೋ ದಿಕ್ಕಿಲ್ಲದವರ ಬಂದು ನನ್ನ ಮನ್ಯಾಗ ಗುದ ಮುರಿಗಿ ಹಾಕೋದನ್ನ ನಾ ಸಹಿಸೋದಿಲ್ಲ. ಇದು ನಾ ಇದ್ದ ಮನಿ. ನನಗ ಅಕ್ಕಲದ ಹಲ್ಲ ಬಂದದ್ದು ಈ ಮನ್ಯಾಗ. ದನಿ ಒಡೆದದ್ದು ಇಲ್ಲೆ. ಮಕಮೀಸಿ ಮೂಡಿದ್ದಿಲ್ಲೆ.

ಶಂಕರ : ಆ ಮೀಸೀ ಬೋಳಿಸಿಕೊಂಡು ನಾಟಕದ ಮೀಸೀ ಹಚ್ಚಿಕೊಂಡದ್ದಿಲ್ಲೆ.

ಗೋವಿಂದ : ತಮ್ಮ ತಮ್ಮ ಭಾಗ್ಯದ ಫಲ ತಿನ್ನಾಕ ಎಲ್ಲಾರಿಗೂ ತಮ್ಮ ತಮ್ಮ ಹಲ್ಲ ಇರತಾವ್ರೀ.

ಸರಸು : ಮಾವನವರು ಇನ್ನೂ ಹಲ್ಲಿನ ಸೆಟ್ ಹಾಕ್ಸಿಲ್ಲಂಧಾಂಗಾಯ್ತು.

ಗೋವಿಂದ : ಏ, ಯಾರ್ರೀ ನೀವು? ಹೆಸರಿಲ್ಲ, ಗುರುತಿಲ್ಲ. ಅಪ್ಪಾ ಅಂತ ಒಳಗ ಬಂದ ನಮಗ ಯಾಕಾ ಏನಾ ಅಂತೀರಿ. ಪೋಲೀಸರಿಗಿ ಹೇಳಿದರ ನಿಮ್ಮ ಚರ್ಮದಾಗ ಹತ್ತ ಜೋಡ ಚಪ್ಪಲಿ ಮಾಡತಾರ ನೆನಪಿರ್ಲಿ. ಈಗೇನ ಸುಮ್ಮನ ಬಂದ ಬಾಗಲಿಂದ ಹೊಂಟ್ಹೋಗತೀರೊ?

ಸರಸು : (ಸಹಾನುಭೂತಿ ನಟಿಸುತ್ತ)
ತಂದೀ ಮಕ್ಕಳ ಜಗಳ. ಹೌದನ್ನಬಾರದು, ಅಲ್ಲನ್ನಬಾರದು.

ಶಂಕರ : ಮನೀ ಬಾಡಿಗೀ ಮಗ ಸೊಸಿ ಕೊಟ್ಟಕೊಳ್ಲಿ ಅಂತ ನೀವs ಹೊಂಟಿದ್ರಿ.

ಗೋವಿಂದ : ನೋಡಪಾ, ನೀ ಯಾವನಾರ ಆಗಿರು. ನಿನ್ನ ಗುರುತಿಲ್ಲ. ನಿನಗ ಹೇಳಬೇಕಾದ ಗರ್ಜಿಲ್ಲದಿದ್ದರೂ, ಹೇಳತೇನ ಕೇಳು: ಈ ಮನ್ಯಾಗ ನನಗ ಇರೋಹಕ್ಕಿದ್ಹಾಂಗ ಬ್ಯಾಡಾದಾಗ ಹೊರಗ ಹೋಗಾಕೂ ಹಕ್ಕ ಅದ. ಅದಕ್ಕ ಹೊಂಟೇನಿ. ನನ್ನ ಮಾತು, ಹೋಗಾವ ನಾನು, ತಿಳೀತ? ಛೇ, ನನ್ನ ತೊಗಲಿನಾಗ ನೀವs ಮಾಂಸ ತುಂಬಿಧಾಂಗ ಆಡತೀರಲ್ರಿ?

ಶಂಕರ : ಆದರೂ ಖಾಸ ಮಗನಿಗೇ ಹೇಳದs ಕೇಳದs ಹೋಗೋದಂದರ ನಾಕ ಮಂದಿ ನನಗೇನ ಅಂದಾರು?

ಹುಶಪ್ಪ : (ಓಡಿಬಂದು)
ನಾ ಹೇಳ್ತೇನ್ರಿ.

ಶಂಕರ : ನಾಕ ಮಂದಿ ನನಗೇನ ಅಂತಾರಲೇ?

ಹುಶಪ್ಪ : ಏನೋ ಹುಚ್ಚಾ, ಹುಲೀ ಅಂಥಾ ಮಗಾ ಇದ್ದು ಅವ್ವ ಅಪ್ಪನ ಹೊರಗ ಹಾಕಿದೆಲ್ಲೊ?….

ಶಂಕರ : ಅಂತಾರ.

ಗೋವಿಂದ : (ದೈನ್ಯದಿಂದ)
ಅಪ್ಪಾ, ಕಾಲ್ಹಿಡದ ಕುಂಡೀ ಎಳೀತೇನ ನೀ ಯಾರ ಹೇಳೊ. ನಿನಗೇನ ಬೇಕಾಗ್ಯದ, ಏನಾಗಬೇಕ ಹೇಳೊ. ವಯಸ್ಸಾಗಿ ಒಂದ ಕಾಲ ಮನ್ಯಾಗ ಇನ್ನೊಂದ ಕಾಲ ಗೋರ್ಯಾಗಿಟ್ಟಕೊಂಡ ನಾವs ದಿನ ಎಣಿಸಿಕೊಂಡ ಕುಂತಿದ್ದರ….

ಸರಸು : ನೀವಿನ್ನೊಂದ ಕಾಲಿಡಾಕ ಗೋರೀ ತೋಡಾಕ ಬಂದಾರ್ರೀ.

ಶಂಕರ : ಹುಶ್!

ಹುಶಪ್ಪ : ಸಾಹೇಬರ….

ಶಂಕರ : ಇವನ ಹಲ್ಲ ಮುರದ ಇಲ್ಲಿ ಎಣಿಸೊ.

ಹುಶಪ್ಪ : (ಓಡಿಹೋಗಿ ಬಂದು ಸುತ್ತಿಗೆ ತಂದು ಗೋವಿಂದನ ಬಳಿಗೆ ಹೋಗಿ ಹಲ್ಲು ಮುರಿಯಲು ಸಿದ್ಧನಾಗಿ)
ಬಾಯಿ ತಗೀರಿ.

ಕಾಶಿ : ಖರೆಖರೆ ಮುರೀತಿರೇನ? ಅಯ್ಯೋ, ಏ ನಂಜಯ್ಯಾ….
(ಎಂದು ಕಿರುಚುವಷ್ಟರಲ್ಲಿ ಸರಸು ಮಧ್ಯದಲ್ಲಿ ಬರುವಳು. ಅವಳನ್ನು ನೋಡಿ ಕಾಶಿ ಅಲ್ಲೇ ಮುದುಡಿ ಬಾಯಿ ಮುಚ್ಚಿಕೊಂಡಿರುವಳು. ಹುಶಪ್ಪ ಗೋವಿಂದನ ಸಮೀಪ ಹೋಗುತ್ತಿರುವಂತೆ ಗೋವಿಂದ ಹಿಂದೆ ಹಿಂದೆ ಸರಿಯುತ್ತಿದ್ದಾನೆ.)

ಹುಶಪ್ಪ : ಬಾಯಿ ತಗೀರೆಂದ್ರ,
(ಕಾಶಿಗೆ)
ಅವ್ವಾರ, ನೀವಾದರೂ ಹೇಳ್ರಿ. ಮತ್ತ ಹಲ್ಲಿನ ಸೆಟ್ ಹಾಕಸಾಕ ಬರಾಣಿಲ್ಲಾ? ತಗಿತಗೀರಿ-

ಗೋವಿಂದ : ಏ ಏ, ನೋಡs ಮತ್ತ, ಪೋಲೀಸ್ ಪೋಲೀಸ್…. ಅಲ್ಲ ತಗೀ, ಸುಮ್ಮನ ಹೋಗs ಮತ್ತ….
(ನಡುಗುತ್ತ ಹಿಂದೆ ಸರಿಯುತ್ತ ಸೋಫಾದ ಮೇಲೆ ಕುಕ್ಕರಿಸುವನು. ಹುಶಪ್ಪ ಹಾಗೇ ಅವನ ಕುತ್ತಿಗೆ ಹಿಸುಕುವುದಕ್ಕೆ ಕೈಹಾಕಿ, ಸ್ವಲ್ಪ ಹಿಸುಕಿ, ಅಳತೆ ನೋಡಿ ಕಡೆ ಬಂದು, ಎರಡೂ ಹಸ್ತ ಕೂಡಿಸಿ ಶಂಕರನಿಗೆ ಗೋವಿಂದನ ಕುತ್ತಿಗೆಯಳತೆ ತೋರಿಸುತ್ತ ಹೇಳುತ್ತಾನೆ. ಗೋವಿಂದ ಸತ್ತವನಂತೆ ಹಾಗೇ ಕೂತಿರುತ್ತಾನೆ.)

ಹುಶಪ್ಪ : ಇಷ್ಟ ಅದ ನೋಡ್ರಿ. ಅಂದರ, ಅರಜೀವಾಗಾಕ ಐದ ಮಿನಿಟು, ಪೂರಾ ಹೋಗಬೇಕಾದರ ಯೋಳ ಮಿನಿಟು. ಒಟ್ಟಿನ ಮ್ಯಾಲ, ಒದ್ದಾಡದs ಹೋಗೋ ಜೀವಾ ಅಲ್ಲ.

ಶಂಕರ : ಅದನ್ನ ಅವಗ ತೋರಿಸಿ-ಇನ್ನೊಮ್ಮೆ ಹಿಂಗೇನಾದರೂ ಹೊರಬೀಳೂ ಖಟಪಟಿ ಮಾಡಿದರ ಯೋಳ ಮಿನಿಟ ಹಿಡೀತದ ಅಂತ ಹೇಳು.
(ಶಂಕರ ಸರಸು ಹೋಗುವರು)

ಹುಶಪ್ಪ : ಇನ್ನೊಮ್ಮೆ ಹೊರಬೀಳೊ ಖಟಪಟಿ ಮಾಡಬ್ಯಾಡ್ರಿ. ತಕರಾರ ಮಾಡದs ಮನಸ್ಸಿನಾಗ ಅಳಾವ ಭಾಳ ದೊಡ್ಡ ಮನಿಶ್ಯಾ, ಏನ್ರೆಪಾ?
(ಗೋವಿಂದ ಇನ್ನೂ ಹಾಗೇ ಕೂತಿದ್ದಾನೆ. ಶಂಕರ ಸರಸು ಹೋಗಿರುವುದರಿಂದ ಧೈರ್ಯಗೊಂಡು ಕಾಶಿ ಗೋವಿಂದನನ್ನು ಅಲುಗಿಸುತ್ತ.)

ಕಾಶಿ : ಏಳ್ರಿ, ಅವರೆಲ್ಲಾ ಹೋಗ್ಯಾರೇಳ್ರಿ.

ಹುಶಪ್ಪ : ಏಳಾಣಿಲ್ಲೊ ಏನೊ! ನಾ ಇವರ ಕುತಿಗಿ ಎಷ್ಟ ಮಿನಿಟಿ ಹಿಡದಿದ್ನಿ ಹೇಳ್ರಿ?

ಕಾಶಿ : ಎಚ್ಚರಾಗರಿ, ಏಳ್ರಿ.

ಹುಶಪ್ಪ : ನಾ ಐದ ಮಿನಿಟ ಹಿಡಿದಿರಬೇಕೇನ್ರಿ? ಇಲ್ಲಾ! ಮತ್ಹೆಂಗ ಸತ್ತರು?

ಕಾಶಿ : ಅಯ್ಯೋ, ಎಚ್ಚರಾಗಿರಿ….
(ಎಚ್ಚರಿಸುತ್ತಿದ್ದಂತೆ ಅವನು ಸತ್ತು ಹೋಗಿರುವನೆಂದು ಹೆಚ್ಚು ಹೆಚ್ಚು ಖಚಿತವಾಗುತ್ತದೆ. ಮಾತನಾಡುತ್ತಿದ್ದವಳು ಬರಬರುತ್ತ ಹಾಡಿಕೊಂಡು ಆಳುತ್ತಾಳೆ.)
ನಾವ್ ಮೊದಲ ಚಾಳೀಸ ಹಾಕಬಾರದಿತ್ತರೀ….
ಹಾಕಬಾರದ ಹಾಕಿ ಕಕ್ಕೊ ಕಾರಭಾರ ಆಯ್ತೊ-!
ನನ್ನ ಹಿರಿಯ್ಯಾ||

ಬ್ಯಾಡ್ರೀ ಅಂತ ತಲಿತಲೀ ಬಡಕೊಂಡ ಹೇಳಿದರ,
ನನ್ನ ಮಾತ ಕೇಳಲಿಲ್ಲೋ
ನನ್ನ ಯಜಮಾನ||

ಹುಶಪ್ಪ : ಹಾಡಿಕೊಂಡ ಯಾಕಳ್ತೀರಿ ಬಿಡ್ರಿ. ಅವರಿಗೇನಾಗೇತಿ? ನೆನಪಾತ ಬಿಡ್ರಿ, – ನಾ ಮೂರs ಮಿನಿಟ ಅವರ್ನ ಹಿಡಿದಿದ್ನಿ. ಮೂರು ಮಿನಿಟನಾಗ? ಛೇ, ಛೇ ಶಕ್ಯs ಇಲ್ಲ.

ಕಾಶಿ : ನಿನ್ನ ಬ್ಯಾಸಿಗ್ಗಿ ತಂಪ ಆದ್ನಿ
ಚಳೀಗಿ ಜಳಾ ಆದಿನೋ||
ನನ್ನ ಗೋವಿಂದಾ||

ಹುಶಪ್ಪ : ಹೋದವರು ಅತ್ತರ ತಿರಿಗಿ ಬರತಾರೇನ್ರಿ? ನಿಮ್ಮ ಹಾದೀ ನೋಡಿಕೊಂಡ ಪಾರಾಗೋದ ಬಿಡತೀರಿ, ಗೋವಿಂದಾ ಗೋವಿಂದಾ ಅಂತ ಅಳತೀರಿ. ನಿಮ್ಮ ಮ್ಯಾಲ ನಮ್ಮ ಸಾಹೇಬರಿಗೇನ ಸಿಟ್ಟ ಐತಿ?

ಕಾಶಿ : ಆದರೂ,
ನೀ ನನ್ನ ಕಾಪಾಡಲಿಲ್ಲೊ|
ನನ್ನ ಗೋವಿಂದಾ||

ಹುಶಪ್ಪ : ಹುಚ್ಚಿಗೇನರೆ ಆಗಬೇಕೇನ್ರಿ? ಇವರಂತೂ ಹೆಂಗೂ ಸತ್ಹಾಂಗ ಕುಂತಾರ. ಹಾಂಗ ನೋಡಿದರ ಇವರ್ನ ಕಟ್ಟಿಕೊಂಡ ನೀವೇನ ಪಡದಿರಿ? ಒಂದು ಚಂದ ಉಡಲಿಲ್ಲಾ, ತೊಡಲಿಲ್ಲಾ. ಹೆಂಗರೆ ಆಗವೊಲ್ದಂದರ ‘ಅವ್ವಾ’ ಅನ್ನಾಕ ಒಂದ ಮಗ ಹುಟ್ಟಲಿಲ್ಲ. ಅನುಕೂಲದ ಹೆಸರ ಹೇಳಿ ಹೇಸಿಗೀ ಜೋಡಿ ಎಷ್ಟಂತ ಇರ್ತೀರಿ? ನಿನಗ ಇದೆಲ್ಲಾ ಗೊತ್ತಿಲ್ಲಂದಿರಿ? ತಿರಗಾಮುರಗಾ ಎಣಿಸಿದರ ನಿಮಗೆ ಭಾಳ ವಯಸ್ಸನೂ ಆಗಿಲ್ಲ. ಈ ಜಗತ್ತಿನಾಗಿನ್ನೂ ಎಷ್ಟೊಂದ ತೆಕ್ಕಿ ಖಾಲಿ ಅದಾವು!

ಕಾಶಿ : ನಿನ್ನ ಬೆನ್ನ ಕಡೆ ನೋಡಿದರ ಗುರತ ಹತ್ತತಿರಲಿಲ್ಲಾ.
ಆದರೂ ನಿನ್ನ ಬೆನ್ನ ಹತ್ತಿನೋ|
ನನ್ನ ಗೋವಿಂದಾ||

ಹುಶಪ್ಪ : ನೀವs ಹೂ ಅಂದರ ಅನುಕೂಲ್ಯಾಕರೀ?- ಸುಖಕ್ಕ ಸುಖಾನs ತೆಕ್ಕಿ ಹಾಯತೈತಿ, ಪಾರಾಗರಿ.

ಕಾಶಿ : (ಅಳು ನಿಲ್ಲಿಸಿ)
ಹೊಂಟ್ಹೋಗಂದೀ?

ಹುಶಪ್ಪ : ಚಂದ ಚಂದ ಕಾರಣಾ ಬಿಟ್ಟ ದರಿದ್ರ ಕಾರಣಾ ಹಿಡದ ಕೂತೀರಿ. ಸತ್ತದ್ದs ಖರೆ ಆದರ-ನಂಜಯ್ಯ ಬಂದ ನಿಮ್ಮನ್ನ ಬಾಡಿಗೀ ಕೇಳತಾನ. ಏನ್ಹೇಳತೀರಿ? ನಮ್ಮ ಸಾಹೇಬರಂತೂ ಊರ ಸುಟ್ಟರೂ ಹನುಮಪ್ಪ ಹೊರಗ!

ಕಾಶಿ : ಹೋಗಂದಿ?

ಹುಶಪ್ಪ : ಅಷ್ಟs ಅಲ್ಲ. ನಂಜಯ್ಯಗ ಗೊತ್ತಾಗೂ ಮೊದಲs ಓಡಿ ಹೋಗ್ರಿ ಮತ್ತ.

ಕಾಶಿ : ಹಂಗಾದರ ಹೋಗಲ್ಯಾ? ಈ ಹೆಣ?

ಹುಶಪ್ಪ : ಅವರು ಸತ್ತಿಲ್ರೀ. ದಂಗಬಡದ ಸತ್ತವರ್ಹಾಂಗ ಕೂತಾರಷ್ಟs. ಎದ್ದ ಕೇಳಿದರ ನೀವು ಸತ್ತಿರಿ ಅಂತ ತಿಳದ ಹೋದರಂತ ಹೇಳತೇನ ಹೋಗ್ರಿ.

ಕಾಶಿ : ಎದ್ದ ಕೇಳಿದರ ಹೇಳು : ನೀ ಯಾವ ಪಾರ್ಟ್ ಹಾಕಿದ್ದೆಂತ ಕಡೀಕೂ ನನಗ ತಿಳೀಲಿಲ್ಲಾ. ಆದರ ನಂದೂ ನಿನಗ ತಿಳೀಲಿಲ್ಲಂತ ಹೇಳು.
(ಓಡಿಹೋಗುವಳು. ಹುಶಪ್ಪ ಹಣೆ ಹಣೆ ಬಡಕೊಳ್ಳುತ್ತ ಕೂಡ್ರುವನು.)

ಹುಶಪ್ಪ : ಏನ ಮಂದಿ! ಏನ ನಾಟಕ! ಏನ ಕಂಪನಿ!
(ಕೂಡಲೇ ಶಂಕರ, ಸರಸಿ ರಂಗದ ಇನ್ನೊಂದು ಬದಿಯಿಂದ ಓಡಿ ಬಂದು ಕಾಶಿಯ ಬೆನ್ನುಹತ್ತುವರು. ಹುಶಪ್ಪನೂ ಅವರೊಂದಿಗೆ ಓಡುವನು. ಈಗ ಗೋವಿಂದನೊಬ್ಬನೇ ರಂಗದ ಮೇಲೆ ಇದ್ದಾನೆ. ದೊಡ್ಡ ದನಿ ತೆಗೆದು ಗಹಗಹಿಸಿ ನಗುತ್ತಾನೆ. ಅಷ್ಟರಲ್ಲಿ ಕಾಶಿ ಭಯಂಕರವಾಗಿ ಕಿರುಚಿದ್ದು ಕೇಳಿಸುತ್ತದೆ. ಸ್ವಲ್ಪ ಹೊತ್ತು ನೀರವ. ಗೋವಿಂದ ದಿಗ್ಭ್ರಾಂತನಾಗಿ ಕೂತಿದ್ದು ತಕ್ಷಣವೇ ಉಪಾಯ ಹೊಳೆದು, ಅವಸರದಿಂದ ಹೊರಟಿರುವಷ್ಟರಲ್ಲಿ ಶಂಕರ, ಸರಸು, ಹುಶಪ್ಪ ಮೂವರೂ ಕಾಶಿಯ ಹೆಣ ತಂದು ಸೋಫಾದ ಮೇಲೆ ಚೆಲ್ಲುತ್ತಾರೆ. ಗೋವಿಂದ ಮತ್ತೆ ಕುರ್ಚಿಯಲ್ಲಿ ಮುದುಡುತ್ತಾನೆ. ಹುಶಪ್ಪ ಒಳಗಡೆ ಹೋಗಿ, ಅಲ್ಲಿಂದಲೇಗೋರಿ ತಯಾರಾಗೇತಿ ಬರ್ರಿ‘, ಎನ್ನುವನು. ಶಂಕರ, ಸರಸು ಕಾಶಿಯ ಹೆಣ ಒಳಗೆ ಒಯ್ಯುವರು.)

ತೆರೆ