(ಅದೇ ದೃಶ್ಯ. ಗೋವಿಂದ ಆಲೋಚನಾಮಗ್ನನಾಗಿ ಕುರ್ಚಿಯಲ್ಲಿ ಕೂತಿದ್ದಾನೆ.)

ಗೋವಿಂದ : ಕಾಶೀ! ಕಾಶೀ! ಕಾಶೀ! ನಂದಾ ನಿಂದಾ ಏನ ಬಾಳ್ವೆ ಇದಾ? ಹೋಗೋ ಮೊದಲ ನೀ ಹೇಳಿದ್ದ ಖರೆ : ನಿಂದೂ ನನಗ ತಿಳೀಲೇ ಇಲ್ಲ. ಅದೊಂದ ನಾಯಿ ಇತ್ತು, ಆಡಿಸಿಕೊಂಡಿದ್ದಿ. ಆಗ ನಿನ್ನ ಎದಿ ಮ್ಯಾಲ ಕೈಯಿಟ್ಟ ಏನ ಕೇಳಿದರೂ ಕೊಡತಿದ್ದಿ; ಏನ ಹೇಳಿದರೂ ಹೌದಂತಿದ್ದಿ. ನಾಯಿ ಕಳದ ಮ್ಯಾಲ ಬಯ್ಯೋದಕ್ಕಲ್ದs ನೀ ಎದಕ್ಕೂ ಬಾಯಿ ತಗೀಲೇ ಇಲ್ಲ. ನಾ ಹೇಳಿದ್ದಕ್ಕ ನಾಲಿಗ್ಯಾಗ ಹೌದಂದಿ, ಕಣ್ಣ ಮೂಲ್ಯಾಗ ಅಲ್ಲಂದಿ; ಖರೆ ಯಾವುದೋ, ಸುಳ್ಳ ಯಾವುದೋ! ಆದರೂ ಹೋಗೋ ಕಾಲಕ್ಕ ಖರೇ ತಿಳಿಸಿ ಹೋದಿ, ಇದs ದೊಡ್ಡದು. ನಾ-ನೀ ಮೊದಲಿನ್ಹಾಂಗs ಇದ್ದಿದ್ದರ ನೀ ಸತ್ತಾಗ ಒಂದೆರಡ ಕಣ್ಣೀರ ಹಾಕಬೇಕಂತ ಇಟ್ಟಕೊಂಡಿದ್ದೆ. ಈಗ ನನಗ ನಾನs ಕಣ್ಣೀರ ಹಾಕಬೇಕಷ್ಟs. ನೀ ಏನs ಅನ್ನು,- ನಿನ್ನ ರಕ್ತದ ಒತ್ತಡ ಮಾತ್ರ ಘನಗರ್ದಿ. ಗಂಡಸರನ್ನ ಕಂಡ ಕೂಡ್ಲೆ ನೀ ಮನಸಿನಾಗ ಬೆರಳ ಸೀಪತಿದ್ದಿ, ನನಗ ಗೊತ್ತಿತ್ತು. ಆದರೂ ಮಂದಿ ಏನಂದಾರು-ಅಂತ ತಡಕೊಂಡಿದ್ದಿ. ಏನ ಬೆರಿಕಿ! ಜಗತ್ತಿನಾಗಿನ್ನೂ ತೆಕ್ಕಿ ಖಾಲೀ ಅವs ಅಂತ ಗೊತ್ತಾಗೋದs ತಡ, ಓಡಿ ಹೋದೆಲ್ಲ! ನಾನೂ ಓಡಿಹೋಗವನs ಆದರೇನ ಮಾಡ್ಲಿ?
(ಸುತ್ತ ಯಾರೂ ಇಲ್ಲದ್ದನ್ನು ಗಮನಿಸಿ ಇದೇ ಸಮಯವೆಂದು ಓಡಿ ಹೋಗಲು ಅವಸರದಿಂದ ಹೊರಡುವನು. ಅನಿರೀಕ್ಷಿತವಾಗಿ ಸರಸು ಬರುವಳು.)

ಸರಸು : ಮಾವ, ಇನ್ನೂ ಆ ಕಳ್ಳಬುದ್ಧಿ ಬಿಟ್ಟಿಲ್ಲ, ಹೌದಲ್ಲ?

ಗೋವಿಂದ : ನೋಡವಾ, ನೀವ್ಯಾರು? ನಿಮಗೇನ ಬೇಕು? ನನ್ನಿಂದೇನಾಗಬೇಕು? ನನಗ್ಯಾಕ ಗಂಟ ಬಿದ್ದೀರಿ? ತಾಯೀ ಅಂದ ಕೈ ಮುಗೀತೇನು, ಹೇಳಬಾರದ?

ಸರಸು : ಇದೇನ ಮಾವಾ, -‘ಏ ಸರಸೂ, ಒಂದ ಕಪ್ ಚಾ ಮಾಡು’ ಅನ್ನೋದ ಬಿಟ್ಟ ಹಿಂಗಂತೀರಿ?

ಗೋವಿಂದ : ಇನ್ನೇನ ಹೇಳ್ಲಿ? ನಿನ್ನ ಚಪ್ಪಲಿ ತಲೀಮ್ಯಾಲಿಟ್ಟಕೊಂಡ ಕುಣೀಲ್ಯಾ? ಸಾಕಲ್ಲ- ಇಷ್ಟ ಹೊತ್ತ ಬೈದಿರಿ, ಅಣಕಿಸಿದಿರಿ, ಹಲ್ಲ ಮುರ್ಯಾಕ ಬಂದಿರಿ, ಇರೋದೊಂದ ಹೇಂತೀನ ಕೊಂದಿರಿ. ನನ್ನ ಕೊಲ್ಲಬೇಕಂತೀರಿ ಹೌಂದಲ್ಲೊ? ಯಾರಂತ ಹೇಳಿಯಾದರೂ ಕೊಲ್ಲರಿ. ಹೆಸರ ಗೊತ್ತಾದರ ನಿಶ್ಚಿಂತ ಸಾಯಬಹುದು. ನಿನಗಿನ್ನೂ ದಯಾ ಮಯಾ ಕರುಣಾ ಬರಲಿಲ್ಲಲ್ಲ ಎವ್ವಾ! ನಿನಗೂ ನನ್ನ ಸರಿ ಅಪ್ಪ ಇದ್ದಿದ್ದಾನು. ನಾನs ಅವನಂತ ತಿಳಿಕೊಂಡ ಉದ್ಧಾರ ಮಾಡಬಾರದ?

ಸರಸು : (ಒಮ್ಮೆಲೆ ಬಾಯಿಮಾಡಿ ಅಳುತ್ತ)
ಅಯ್ಯೋ ಎವ್ವಾ….

ಗೋವಿಂದ : ಯಾಕ ಏನಾಯ್ತು?

ಸರಸು : ನೀವು ನನ್ನ ಮಾವನವರ ಅಲ್ಲ ಹಾಂಗಾದರ?

ಗೋವಿಂದ : ನಾ ಯಾಕ ನಿನ್ನ ಮುಂದ ಸುಳ್ಳ ಹೇಳಲೇ ಹಡೆದವ್ವಾ?

ಸರಸು : ಹಾಗಂತ ಅವರs ಹೇಳಿದರು.

ಗೋವಿಂದ : ಛೇ ಛೇ, ನಾ ಸುಳ್ಳ ಹೇಳಿದರ ನಾಲಗ್ಯಾಗ ಹುಳಾ ಬೀಳಾಕಿಲ್ಲಾ?

ಸರಸು : ಈ ಮಾತ ಖರೇ ಏನ್ರಿ?

ಗೋವಿಂದ : ನನ್ನಾಣಿ ನಿನ್ನಾಣಿ ಖರೆ.

ಸರಸು : ಅವರೂ ಆಣಿ ಮಾಡಿಯೇ ಹೇಳಿದ್ದರು.

ಗೋವಿಂದ : ಏನಂತ?

ಸರಸು : ನೀವs ನನ್ನ ಮಾವಂತ.

ಗೋವಿಂದ : ಹಾ ನೋಡಿದಿಲ್ಲ? ನಿನಗೂ ಪೇಚ ಹಾಕ್ಯಾನ. ಮತ್ತೇನ ಹೇಳದಾ?

ಸರಸು : ಆ ಮುದಿಕಿ, ಅಂದರ ನಿಮ್ಮ ಹೆಂಡ್ತಿ-ನಮ್ಮತ್ತೆ ಅಂದರು.

ಗೋವಿಂದ : ಏನ್ಸುಳ್ಳಾ! ಏನ್ಸುಳ್ಳಾ!

ಸರಸು : ನೀವು ದೊಡ್ಡ ಸಂಸ್ಥಾನಿಕರು ಅಂತ ಹೇಳಿದರು.

ಗೋವಿಂದ : ಛೇ, ನೀನs ನೋಡೀಯಲ್ಲs ನಮ್ಮವ್ವಾ. ಬಾಡಿಗೀ ತೀರಿಸಿಲ್ಲಾ?

ಸರಸು : ನೀವು ಈ ಭಾಗದೊಳಗೆ ಭಾಳ ಪ್ರಸಿದ್ಧರು ಅಂತಂದ್ರು.

ಗೋವಿಂದ : ಹೂ. ಸಾಲಗಾರರಿಗೆಲ್ಲಾ ನಾ ಪ್ರಸಿದ್ಧ ಮತ್ತ.

ಸರಸು : (ಮತ್ತೆ ಅಳುತ್ತ)
ನನಗೆ ಮೋಸ ಮಾಡಿ ಮದಿವ್ಯಾದರು.

ಗೋವಿಂದ : ನೋಡಿದಿಲ್ಲ? ನನಗ ಅನ್ನಿಸಿತ್ತು: ಇವ ನನಗಿಂತ ಭಾರೀ ಆಸಾಮಿ ಅಂತ. ಏನ ಮಂದಿ! ಛೇ! ಇಷ್ಟ ಸುಳ್ಳ?

ಸರಸು : ಕಾಲ ಬೀಳತೇನು, ನಿಮ್ಮ ಜೋಡೀ ನನ್ನನ್ನೂ ಕರಕೊಂಡ ಹೋಗ್ರೀ.

ಗೋವಿಂದ : ಖರೆ ಖರೇನ?

ಸರಸು : ಹೂನ್ರಿ. ಇವರು ಇಂಥಾ ಮೋಸಗಾರರಂತ ನನಗ ತಿಳೀಲಿಲ್ಲರಿ.

ಗೋವಿಂದ : ಚಿಂತೀ ಮಾಡಬ್ಯಾಡ. ನೀ ನನಗ ಸಾಮೀಲಾದರ ಇಬ್ಬರೂ ಕೂಡಿಕೊಂಡs ಹೋಗೋಣು. ನಿನ್ನ ತೌರುಮನಿ ಯಾವುದು ಹೇಳು, ಅಲ್ಲೀತನಕ ಬಂದು ಮುಟ್ಟಿಸಿ ಬರತೇನ, ಏನವಾ.

ಸರಸು : ಸುಟ್ಟಿತು ತೌರಮನಿ. ಇವರ ಜೋಡೀ ಓಡಿ ಬಂದೇನಿ, ತೌರಮನೀಗಿ ಹೆಂಗಂತ ಮುಖ ತೋರಸ್ಲಿ? ನನ್ನ ಪಾರಮಾಡಿ ಮದಿವೀ ಮಾಡಿಕೊಳ್ತೀರಿ?

ಗೋವಿಂದ : ಮದಿವಿ?

ಸರಸು : ಹೂ.

ಗೋವಿಂದ : ಹಾಸಿಕೊಂಡೇನಂದರ ಒಂದ ಜಮಖಾನ ಇಲ್ಲಾ, ಅದರ ಮ್ಯಾಲೊಂದ ಹೆಣ್ಣ ಬೇಕs ನನಗ? ಮಗಳ ಸರಿ, ಸಣ್ಣ ವಯಾದಾಕಿ, ಹೆಂಗ ಮದಿವ್ಯಾದೇನು?

ಸರಸು : ನೀವೇನ ಥೇಟ ಮುದುಕರ್ಹಾಂಗs ಆಡತೀರಲ್ರೀ? ತೊಗಲ ಮುಪ್ಪಾದರ ಒಳಗಿನ ಹುಳಿ ಮುಪ್ಪಾಗಬಲ್ದs? ಹೆಚ್ಚು ಕಮ್ಮಿ ಆದರ ಹೊಂದಿಕೋ ಬೇಕು. ಅದಕ್ಕs ನಿಮ್ಮ ಹೇಂತೀ ಮ್ಯಾಲ ಭಾಳ ಸಿಟ್ಟ ಬರತಿತ್ತರಿ ನನಗ!

ಗೋವಿಂದ : ಯಾಕಂದಿ?

ಸರಸು : ಯಾಕಂದರ ಮನಸ್ಸಿನಾಗs ಹೇಳಿಕೋತಿದ್ಲು; ಇವ ಖರೆ ಗಂಡಸಲ್ಲ,- ಅದು ತನಗೂ ತಿಳಿದ ಬಿಟ್ಟೈತಿ. ಅದಕ್ಕs ನನ್ನ ಮ್ಯಾಲ ಸಂಶೆ ತಗೋತಾನಂತ.

ಗೋವಿಂದ : ಅಲ್ಲಾ? ನನಗೂ ಗೊತ್ತಿತ್ತದು. ಇನ್ನೇನ ಅಂದಕೋತಿದ್ಲು?

ಸರಸು : ಭಾಡ್ಯಾ! ಪ್ರೀತಿ ಮಾಡತೇನಂತ ತೆಕ್ಕಿ ಒಡ್ಡತಾನು, ಹೋಗಿ ತಬ್ಬಿದರ ಹೊಡ್ಯಾಕ ಸುರು ಮಾಡತಾನ. ಜಿಗಟಿದ್ದರ ಹಿಂಗ ಮಾಡ್ಯಾನು? ಮತ್ತ ಬಿಳೀ ಕೂದಲಿಗಿ ಕಪ್ಪ ಬಣ್ಣಾ ಹಚ್ಚಿಕೊಳ್ತಾನ – ಒಳಗ ಹಚ್ಚಿಕೊಳ್ಲಿ, ಹೌದಂದೇನ.

ಗೋವಿಂದ : ಅಂತಿದ್ಲು?

ಸರಸು : ನಾ ಹಾಂಗೆಂದೂ ಅನ್ನೋದಿಲ್ಲ. ಮದಿವೀ ಮಾಡಿಕೊಳ್ತೀರಿ ಹೌಂದಲ್ಲ?

ಗೋವಿಂದ : ಹಿಂಗಂದಿ?

ಸರಸು : ಇವರ್ನ ಬಿಟ್ಟ ಓಡಿಬಂದರ ಮತ್ತೆಲ್ಲಿ ಹೋಗ್ಲಿ ಹೇಳ್ರಿ?

ಗೋವಿಂದ : ಯಾಕ ಚಡಪಡಸ್ತಿ? ಜಗತ್ತಿನಾಗ ಇನ್ನೂ ಎಷ್ಟೊಂದ ತೆಕ್ಕಿ ಖಾಲೀ ಅವ!

ಸರಸು : ಜಗತ್ತs ಬ್ಯಾರಿ, ನೀವs ಬ್ಯಾರಿ! ನಿಮಗಿದ್ಧಾಂಗ ಜಗತ್ತಿಗೇನ ಒಂದ ಮೊದಲೈತಿ? ಒಂದ ತುದಿ ಐತಿ? ನೀವಷ್ಟ ದೂರ ನಿಂತ ಮಾತಾಡಿದರ ಇಲ್ಲಿ ನನ್ನ ಮೈಯಾಗ ತೂತ ಬೀಳತಾವ!

ಗೋವಿಂದ : ನೀನs ತಯ್ಯಾರಿದ್ದರ ನಾ ಯಾಕ ಒಲ್ಲೆನ್ನಲಿ?

ಸರಸು : ಹಾಂಗಾದರ ಹೋಗೋನ್ನಡೀರಿ ಮತ್ತ.

ಗೋವಿಂದ : ನಾವಿಬ್ಬರೂ ಓಡಿಹೋದರ ನಿನ್ನ ಗಂಡಗ ಸಂಶೆ ಬರ್ತದಲ್ಲಾ? ಅದಕ್ಕ ಮೊದಲ ನನ್ನ ಪಾರುಮಾಡು. ನಾ ಹೋಗಿ ಸ್ನೇಶನ್ನದಾಗ ನಿಂತಿರತೇನು, ಆಮ್ಯಾಲ ನೀ ಬಾ. ಇದ್ಹೆಂಗ?

ಸರಸು : ಹಾಂಗಿದ್ದರ ನಾ ಹೇಳಿದಾಂಗ ಕೇಳ್ರಿ. ನೀವು ಎರಡೂ ಕೈಯಾ ಮಣಕಾಲಾ ಊರಿ ನಡೀರಿ. ಏಕದಂ ಅವರ್ಯಾರಾದರೂ ಬಂದರ ವೊವ್ ವೊವ್ ವೊವ್ ಅಂತನ್ನಬೇಕs ಮತ್ತ. ಅಂದರ ‘ಹಚ್ಯಾ ನಾಯಿ ಇಲ್ಲಿ ಯಾಕ ಬಂದೈತಿದಾ? ಹೊರಗ್ಹಾಕೊ’ ಅಂತಾರ. ಹುಶಪ್ಪ ಬಂದ ಹೊರಗ ಹಾಕತಾನ, ಹೋಗಿಬಿಡ್ರಿ. ಒಂದ ಗುಟ್ಟ ಹೇಳಿರತೇನ, ಯಾರ ಮುಂದ ಹೇಳಬ್ಯಾಡ್ರಿ, ನಮ್ಮ ಯಜಮಾನರಿಗಿ ಕುಂತ ನಿಂತವರೆಲ್ಲಾ ಮನಿಶೇರ್ಹಾಂಗ, ಬಗ್ಗಿದವರೆಲ್ಲಾ ನಾಯಿs ಹಾಂಗ ಕಾಣತಾರ!

ಗೋವಿಂದ : ಖರೇ ಹೌಂದಲ್ಲ!

ಸರಸು : ನನ್ನ ನಂಬಿ ನೋಡ್ರಿ. ಅಂಧಾಂಗ ಕೊರಳಾಗೊಂದ ಬೆಲ್ಟ ಕಟ್ಟಿಕೊಳ್ರಿ. ಮುನಸೀಪಾಲ್ಟಿ ಮಂದಿ ‘ಇದ್ಯಾವದೋ ಭಿಡಾಡಿ ನಾಯಂ’ತ ಕೊಂದ ಒಗದಾರು! ನಿಮಗವರೇನೂ ಮಾಡಾಂಗಿಲ್ಲ. ನಾಯಂತ ತಿಳದ ಸುಮ್ಮನs ಕುಂತಿರತಾರ. ನಿಮ್ಮ ಮ್ಯಾಲ ಕೈ ಮಾಡಿದರ ನನಗ ‘ಹುಚ್ಚರಂಡೇ’ ಅಂತ ಬೈಯಿರಿ, ಆಯ್ತಿಲ್ಲೋ?

ಗೋವಿಂದ : ಬೆಲ್ಟ ಎಲ್ಲಿಂದ ತರೋದು?

ಸರಸು : (ಹಾ ಎನ್ನುವುದರೊಳಗಾಗಿ ಒಳಹೋಗಿ ಬೆಲ್ಟು ತರುವಳು)
ತಗೊಳ್ರಿ, ಲಗೂ ಬಗ್ಗರಿ ಮತ್ತ. ಅವ ಕೊಲ್ಲತೀವಿ, ಕೊಲ್ಲತೀನಿ ಅಂತಿದ್ದ. ನಾ ಏನೇನೋ ಕೇಳ್ತಿದ್ದೆ-ಉದಾ: ಯಾರನ್ನ? ಯಾಕ? ಹೆಂಗ?- ಅಂತ.
(ಗೋವಿಂದ ಬೆಲ್ಟು ಕಟ್ಟಿಕೊಂಡು ಬಗ್ಗಿ ಕೈಕಾಲೂರಿ ನಡೆಯುವನು)
ಸ್ಟೇಷನ್ನದಾಗ ಇರ್ತೀರಿ ಹೌಂದಲ್ಲ?

ಗೋವಿಂದ : ಓಹೋ!
(ಹಾಗೇ ನಡೆದಾಗ ಶಂಕರ, ಹುಶಪ್ಪ ಮಾತಾಡಿಕೊಂಡೇ ಬರುವರು, ಗೋವಿಂದ ಹೆದರಿ ಅಲ್ಲಿಯೇ ಸ್ವಲ್ಪ ಹೊತ್ತು ನಿಂತು, ನಿಧಾನವಾಗಿ ನಡೆಯುವನು.)

ಸರಸು : ನೋಡ್ರಿ ಸಾಹೇಬರ, ಮಂತ್ರೀಗಿ ಬೈದ ಬಾ ಅಂದರ ಬಂದೇನು! ಈ ಕೊಲ್ಲೋ ಕೆಲಸ ನನ್ನ ಕೈಯಿಂದಾಗಾಣಿಲ್ಲ ತಗೀರಿ. ಮನ್ನಿ ಮನ್ನಿ ಮೂರ ಸಾವಿರ ಮಂದಿ ಪೋಲೀಸರನ್ನ ನೇಮಿಸಿಕೊಂಡಿದಾರಂತ; ಪೇಪರ ಓದಲಿಲ್ಲರಿ?

ಶಂಕರ : ಹೇಳಿದಷ್ಟ ಕೇಳ.
(ಕದ್ದು ನಿಧಾನವಾಗಿ ಹೋಗುತ್ತಿರುವ ಗೋವಿಂದನನ್ನು ನೋಡಿ)
ಅರೆ! ಮನ್ಯಾಗ ನಾಯಿ ಬಂದೈತಲ್ಲೊ! ಏ ಹುಶ್ಯಾ, ಏನೋ ಇದು? ಸೂಳೀಮಗನs ಮನೀ ಹೀಂಗs ಕಾಯೋದಾ? ನಮ್ಮಪ್ಪ ಎಲ್ಲಿ ಹೋದರು?

ಹುಶಪ್ಪ : ನಂಗೊತ್ತಿಲ್ಲರಿ.

ಶಂಕರ : ಒಳಗ ಇದ್ದಾರೇನ್ನೋಡು
(ಹುಶಪ್ಪ ಹೋಗುವನು)
ನಿನಗೆಷ್ಟ ಹೇಳಬೇಕು? ಮೊದಲs ಮುದುಕಾ, ಹೊರಗ ಕತ್ತಲಿ, ಅವ್ವ ಹೋದದ್ದ ಭಾಳ ಮನಸ್ಸಿಗಿ ಹಚ್ಚಿಕೊಂಡನೋ ಏನೋ! ಸರಸೂ, ನೀ ನೋಡೀಯೇನs?

ಸರಸು : (ನಗುತ್ತ)
ಇಲ್ಲವಲ್ಲ!

ಶಂಕರ : ಎಲ್ಲಿ ಹೋದರು ಹಾಂಗಾದರ? ಯಾವದೋ ಸಾಕಿದ ನಾಯಂತ ಕಾಣತದ.

ಹುಶಪ್ಪ : (ಓಡಿಬಂದು)
ಊಹೂ. ಹಾಂಗೇನ ತಿಳೀಬ್ಯಾಡ್ರಿ, ಜೈನರೇನೋ ‘ಅಹಿಂಸಾ ಸಂಘ’ ಮಾಡಿ ಭಿಡಾಡಿ ನಾಯಿಗೆಲ್ಲಾ ಪಟ್ಟೀ ಕಟ್ಟತಾರಂತ. ಯಾವದು ಭಿಡಾಡಿ ನಾಯಿ, ಯಾವದು ಸಾಕಿದ ನಾಯಿ ಅಂತ ಗೊತ್ತಾಗೋದs ಇಲ್ಲ.

ಶಂಕರ : (ಗೋವಿಂದನ ಸುತ್ತ ಮುತ್ತ ಪರೀಕ್ಷಿಸಿ ನೋಡಿ)
ಇದಕ್ಕ ಬಾಲs ಇಲ್ಲಲ್ಲೊ?

ಹುಶಪ್ಪ : ಕುಂಡ್ಯಾಗ ಹಾಕಿಕೊಂಡೈತೇನ ನೋಡ್ರೀ.

ಶಂಕರ : ಇಲ್ಲಾ.

ಹುಶಪ್ಪ : ಹಾಂಗಾದರ ಇದ ಜಾತಿವಂತ ನಾಯೀನs ಇರಬೇಕ ಬಿಡ್ರಿ. ಬ್ಯಾಟೀ ನಾಯಿದ್ದರ ಬಾಲಾ ಬೇಕಂತs ಕತ್ತರಸ್ತಾರ.

ಶಂಕರ : ಯಾಕ?

ಹುಶಪ್ಪ : ಯಾಕಂದರ ಬ್ಯಾಟಿ ಆಡೋವಾಗ ಮಿಕ ಬಂದ ಬಾಲಾ ಹಿಡಿದಾವಂತ! ಇಲ್ಲಾ ಕುಂಡ್ಯಾಗ ಹಾಕ್ಕೊಳ್ಲಿಕ್ಕಾದರೂ ಕಲಿಸ್ತಾರ, ಇಲ್ಲಾ ಕತ್ತರಿಸಿ ಹಾಕತಾರ

ಶಂಕರ : ಕಣ್ಣ ಕಿಸದ ಹಿಂದ ಎಲ್ಯಾದರೂ ಅದs ಏನ್ನೋಡೋ-

ಹುಶಪ್ಪ : (ಹಿಂದೆ ಹೋಗಿ ಬಾಗಿ ನೋಡುತ್ತಿರುವಾಗ ಗೋವಿಂದ ವೊವ್ ವೊವ್ ಬೊಗಳುವನು)
ಛೇ, ನಾಯಿ ಘನ ಚೂಟಿ ಐತಿ ಬಿಡಿರಿ! ಇಂಥಾ ನಾಯಿಗೇನರಿ? ಹಾರೋರ ಬೋಳೇರ ಕೇಳಿದಷ್ಟ ರೊಕ್ಕಾ ಕೊಟ್ಟ ಕೊಳ್ಳತಾರ. ಮಾರೋನಂತೀರಿ?

ಶಂಕರ : ಛೇ ಛೇ, ಯಾರ ನಾಯೀನೊ ಏನೋ! ಹೊರಗ ಹಾಕಿ ಬಿಡು.

ಹುಶಪ್ಪ : ಹಚ್ ಹಚ್ ಹಚ್ಯಾ! ನಡೀ ಹೊರಗ
(ಗೋವಿಂದ ಒಂದೆರಡು ಅಡಿ ಮುಂದುವರಿಯುವನು)

ಸರಸು : ಅಯ್ಯ! ತಡಿಯೋ! ಈ ನಾಯೀ ಮುಖಾ ನಮ್ಮ ಮಾವನವರ ಮುಖ ಧಾಂಗs ಇಲ್ಲರಿ?

ಶಂಕರ : (ಸಿಟ್ಟಾದಂತೆ ನಟಿಸುತ್ತ)
ಯಾಕ? ನಾಲಿಗೀ ಭಾಳ ಸಡ್ಲ ಬಿಡತಿ? ಕೊಡಂತಿಯೇನ ಬರಿ? ನಮ್ಮಪ್ಪ ನಿನಗ ಅಷ್ಟ ಹಗರಾಗಿ ಕಂಡರಲ್ಲಾ?

ಸರಸು : ಅಯ್ಯ, ನಿಮಗ ಅಪ್ಪಾದರ ನನಗ ಮಾವ ಆಗಲಿಲ್ಲಾ? ನೋಡಿ ಮಾತಾಡ್ರೀ ಅಂದರ.

ಹುಶಪ್ಪ : (ಪರೀಕ್ಷಿಸಿ ನೋಡುತ್ತ)
ಸಾಹೇಬರ ಹೌಂದರೀ! ಒಂದ ಸಲ ನೋಡ್ರಿ.

ಶಂಕರ : ಸಲಿಗೀ ನಾಯಿ ತಲೀಗೇರಿತಂತ. ಯಾಕಲಾ ಮಗನs?-ನಮ್ಮಪ್ಪಂದರ ಯಾರಂತ ತಿಳಿದೀಯೊ? ಅವರು ಕೊಂದ ಹಾಕಿದಷ್ಟು ತಗಣಿ ನೀ ನಿನ್ನ ಜನ್ಮದಾಗ ನೋಡೀಯೇನ? ಆs ಅಂತ ಆಕಳಿಸಿದರ ಉಸಿರಿನ ಪರಿಮಳದಿಂದ ಇಡೀ ಮನಿ ಘಮಘಮಾ ಘಮಾಡಿಸ್ತಿತ್ತ. ಕರೀಕಂಬಳಿ ಗದ್ದಿಗೀ ಹಾಸಿ, ರೋಖ ರೂಪಾಯಿ ಎರಡ ಲಕ್ಷ ಎಣಿಸಿ, ಈ ಮನೀ ಕೊಂಡ ‘ತಗೋ ಮಗನs’ ಅಂತ ನನಗ ಬಿಟ್ಟಹೋದರು. ಅವs ಎಲ್ಲಿ? ಈ ಪಿಸ್ ನಾಯಿ ಎಲ್ಲಿ?

ಹುಶಪ್ಪ : ಒಂದs ಸಲ ನೋಡ್ರೀ.

ಶಂಕರ : ಎಲ್ಲಿ ನೋಡೋಣು
(ನೋಡುತ್ತಾನೆ. ಗೋವಿಂದ ಮುಖ ಕೆಳಗೆ ಹಾಕುವನು)
ಎಲ ಎಲಾ! ಹೌಂದಲ್ಲೊ? ನಾಯಿ ಕೂಡಾ ಮನಿಶೇರ್ಹಾಂಗ ಇರ್ತಾವಲ್ಲೊ! ಅದ ಹೌದು! ಅದs ಮೂಗಾ, ಅವs ಕಣ್ಣಾ! ಆದರೂ ನಮ್ಮಪ್ಪಂತ ಅನ್ನಾಕ ನಾಯೇನ ತಯ್ಯಾರಿಲ್ಲ ಬಿಡು. ಯಾರಿಗ್ಗೊತ್ತ? ಇದ ನನ್ನ ಅಣ್ಣೋ ತಮ್ಮೋ ಇರಬೇಕ. ಇಲ್ಲದಿದ್ದರ ಎಲ್ಲೀದೋ ನಾಯಿ ಇಲ್ಲಿಗ್ಯಾಕ ಬರಬೇಕು? ನೀ ಏನs ಅನ್ನು, ನಮ್ಮಪ್ಪನ ಕಾರಭಾರ ಘನ ದೊಡ್ಡುವು!

ಸರಸು : ಇದ್ದರೂ ಇರಬೇಕ್ರಿ. ಯಾಕಂದರ ನಮ್ಮತ್ತೆ ಸವತಿಮತ್ಸರದಿಂದ ನಾಯಿ ನಾಯಿ ಅನ್ನತಿರಲಿಲ್ರಿ?

ಶಂಕರ : ಇರಬೇಕೇನು? ನಮ್ಮಣ್ಣs ಹೌದಿವ!

ಹುಶಪ್ಪ : ಛೇs, ಹೋಗೋ ನಿನ್ನ! ಇದs ನಿಮ್ಮಪ್ಪರೀ.

ಶಂಕರ : ನಾನಿದನು ಒಪ್ಪಲಾರೆ.

ಹುಶಪ್ಪ : ನಾಯಿ ಅಂಗೀಧೋತ್ರ ಉಡತಾವೇನ್ರಿ?

ಶಂಕರ : ನಮ್ಮಪ್ಪ ಶ್ರೀಮಂತ,-ಮಗನಿಗೆ ಹಾಕಿರಬಾರದ್ಯಾಕ?

ಹುಶಪ್ಪ : ಬರೋಬರಿ ಬಿಡ್ರಿ, ಹೊರಗ ಹೊಡೀಲೇನ್ರಿ?

ಶಂಕರ : ತಡಿ, ತಡಿ, ಇನ್ನೊಂದ ಸಲ ನೋಡೋಣು.
(ಪರೀಕ್ಷಿಸಿ ನೋಡಿ ಆಶ್ಚರ್ಯ ನಟಿಸುತ್ತ)
ಹೌಂದಲ್ಲೊ! ನಾ ಹೇಳಿದ್ದಿಲ್ಲಾ ನಿನಗ-ನನ್ನ ಕಣ್ಣ ಮಂದ ಕಾಣತಾವಂತ, ಈಗ ಗುರುತ ಸಿಕ್ಕಿತ ನೋಡ. ಇದ ನಮ್ಮಪ್ಪನೂ ಅಲ್ಲೊ? ಯಾವದೋ ನಾಯಿ! ಅಂಗೀ ಧೋತ್ರ ಉಟ್ಟಿತ್ತು,- ನಮ್ಮಪ್ಪನs ಇರಬೇಕಂತ ಮನೀ ಹೊಕ್ಕಿನೆಪಾ! ಇದ ನೋಡಿದರ ನಾಯಿ! ನಾವು ಯಾವದೋ ತಪ್ಪ ಮನೀ ಹೊಕ್ಕಿವಲ್ಲೊ! ಹೊಡಿ ಹೊಡಿ, ಹೊರಗ ಹಾಕು.
(ಹುಶಪ್ಪ ಹಚ್ಯಾ ಎಂದು ಹೊಡೆಯಲಾರಂಭಿಸುವನು. ಗೋವಿಂದ ಮುಖ ಎತ್ತಿ ಒಂದು ಸಲ ಕ್ರೂರದೃಷ್ಟಿಯಿಂದ ಎಲ್ಲರನ್ನೂ ನೋಡುವನು. ಶಂಕರ ಸರಸು ಜೊತೆ ಮಾತಾಡುತ್ತಲೇ ಇರುವನು.)

ಶಂಕರ : ನಿನಗೂ ಕಣ್ಣಿಲ್ಲೇನ? ಹೇಳಬಾರದ?

ಸರಸು : ನೀವು ನನಗ ನಿಮ್ಮಪ್ಪನ್ನ ಮೊದಲ ತೋರಿಸಿದ್ದಿರೇನ?

ಶಂಕರ : ನನಗೆ ಭಾರೀ ದೊಡ್ಡ ಆಘಾತ ಆಗ್ಯsದ. ನಾ ಈಗ ಕನಿಷ್ಟ ಪಕ್ಷ ಮೂರ್ಛೆ ಹೋಗಬೇಕು! ಎಲ್ಲಿ ಬೀಳಲಿ?
(ಹುಶಪ್ಪನಿಗೆ)
ಹಾಕಲ್ಲೊ ಹೊರಗ.

ಹುಶಪ್ಪ : ಅಯ್ಯಯ್ಯೊ! ಈ ನಾಯೀ ಒಳಗಿಂದ ನಿಮ್ಮಪ್ಪ ಉದಯ ಆಗತಾನ ನೋಡ್ರೀ!
(ಗೋವಿಂದ ನಿಷ್ಠುರವಾಗಿ ಕೊರಳಪಟ್ಟಿ ಬಿಚ್ಚಿಕೊಂಡು ಏಳುತ್ತಾನೆ. ತಿರಸ್ಕಾರದಿಂದ ಅವರ ಕಡೆ ನೋಡುತ್ತಿರುವಾಗ ಸರಸು ಚಪ್ಪಾಳೆ ತಟ್ಟುತ್ತ)

ಸರಸು : ಮಾವ ಬಂದರು! ಮಾವ ಬಂದರು! ಮಾವ ಬಂದರು.

ಹುಶಪ್ಪ : (ಕಣ್ಣು ಉಜ್ಜಿಕೊಳ್ಳುತ್ತ)
ಇದೇನ ಹೊಯ್ಕಪಾ?

ಶಂಕರ : ನಾ ಹೇಳಿದ್ದಿಲ್ಲಾ ಮಗನs -ನಮ್ಮಪ್ಪ ಗುಬ್ಬೀ ಕಂಪನ್ಯಾಗಿದ್ದ. ಯಾರ ಬೇಕಾದವರ ಪಾರ್ಟ್ ಹಾಕತಿದ್ನಂತ? ಈಗ ಕೇಳು: ನೀ ಯಾರಂತ?

ಗೋವಿಂದ : (ನಿರ್ಧಾರದಿಂದ ಹೊಡೆಯುವ ಪೂರ್ವತಯಾರಿಯೆಂಬಂತೆ ಕೈಯ ಬೆಲ್ಟನ್ನು ತಿರುಗಿಸುತ್ತ)
ಮುಗಿತೋ? ಇನ್ನೂ ಅದsನೋ? ಇದ್ದರ ಹೇಳ್ರಿ. ಇನ್ನ ಐದ ಮಿನಿಟಿ ಕೊಡತೇನ.
(ಮೂವರೂ ಭುಜ ಹಾರಿಸುತ್ತ ಸೊಂಡಿ ಮುರಿದು ನಿರ್ಲಕ್ಷತನ ಸೂಚಿಸುವರು.)
ನೀವು ಯಾರು ಅನ್ನೋದ ನನಗೀಗ ಗೊತ್ತಾಯ್ತು. ಇದ ನನ್ನ ಮಗ, ಈಕಿ ಸೊಸಿ, ಇವ ನಮ್ಮಾಳು; ಹೌಂದಲ್ಲ?
(ಯಾರೂ ಮಾತಾಡುವುದಿಲ್ಲ. ಆದರೆ ಅಧೈರ್ಯರಾಗುತ್ತಾರೆ.)
ಹೂ ಅಂತೀರೋ? ಸೂಳೀಮಕ್ಕಳಾಗುತೀರೊ?
(ಮತ್ತೆ ಸ್ತಬ್ಧ)
ನಾ ಯಾರಂತ ಕೇಳಿದೆಲ್ಲ? ನಾ ಸಾಲಾ ಇಸಕೊಂಡದ್ದ ಹೌಂದು. ತೀರಸದs ಇದ್ದದ್ದೂ ಹೌಂದು. ಬಾಡಿಗೀ ಕೊಟ್ಟಿಲ್ಲ, ಅದೂ ಹೌಂದು. ಗುಬ್ಬೀ ಕಂಪನ್ಯಾಗಿದ್ದೆ, ಮಂದೀನ್ನಗಿಸಿ ಸಾಲಾ ತಂದೆ, ಸಾಲಗಾರರಿಂದ ತಪ್ಪಿಸಿಕೊಳ್ಳಾಕ ಚಾಳೀಸ ಕೊಂಡೆ-ಇದೆಲ್ಲ ಹೌಂದು. ಈಗ ಹೇಳ್ಲಿ ನೀವ್ಯಾರಂತ? ನಿಮಗ ಹೆಸರs ಇಲ್ಲ, ಮನಿಶೇರಿಗಿ ಹುಟ್ಟಿದರ ಹೆಸರಿರತಿದ್ದವು. ನೀವೆಲ್ಲಾ ಈ ಚಾಳೀಸಿಗಿ ಹುಟ್ಟಿದವರು!
(ಉಳಿದ ಮೂವರೂ ನಿಧಾನವಾಗಿ ಕೈ, ಮೊಳಕಾಲು ಊರ ತೊಡಗುವರು.)
ಈಗ ನನ್ನ ಬಗ್ಗೆ ನನಗೇನ ಭ್ರಾಂತಿಯಿಲ್ಲ, ತೀರಸಬೇಕಾದ ಸಾಲಾ ಚಾಕರಿ ಇದ್ದ ತೀರಸ್ತೇನ. ಇಷ್ಟ ಗೊತ್ತಾಗದಕ್ಕ, ನಿಮ್ಮನ್ನ ಎದುರಿಸಲಾರದs ಕಾಶಿ ಜೀವಾ ಕೊಟ್ಲು. ನಾಯೀ ಸುದ್ದೀ ಒಂದ ಕೇಳಿದ್ದಿರೇನೊ! ಅದಕ್ಕ ನಾಯೀ ಮಾಡಿದಿರಲ್ಲಾ? ಮಕ್ಕಳ್ರಾ, ನಿಮ್ಮನ್ನs ನಾಯೀ ಮಾಡಿ ಬಗ್ಗಿಸಿ ಹೋಗತೇನ-
(ಬಾಗಿದವರು ಗುರ್ ಎನ್ನತೊಡಗುವರು.)
ಆದರೂ ಈ ಜಗತ್ತ ವ್ಯಾಖ್ಯಾನ ಮಾಡಾಕ ಹಗರಾತ ನನಗ. ಆದರ ಈಗ ನಾ ಸ್ವತಂತ್ರ, ಮಾಡಿದ್ದಕ್ಕ ಹೆಗಲ ಕೊಡಾಕ ಸ್ವತಂತ್ರ! ಭಾರ ಇಳವಾಕ ಸ್ವತಂತ್ರ! ಕಳಕೊಂಡದ್ದೆಲ್ಲಾ ಮತ್ತ ಗಳಿಸಾಕ ಸ್ವತಂತ್ರ. ಈಗ ನೀವ್ಯಾರೇನೂ ಮಾಡಲಾರಿರಿ. ನಿಮ್ಮ ಮುಂದs ಈ ಮನೀ ಬಿಟ್ಟ ಹೋಗತೇನ. ಹೋಗಾಕ ನಿಮ್ಮಂಥಾ ನಾಯೀ ಅಪ್ಪಣೆ ಬೇಕಿಲ್ಲ. ಹಾದ್ಯಾಗ ಎಡವಿದ ಕಲ್ಲ ತಗದ ಒಗ್ಯಾಕ ಯಾ ಸರಕಾರದ ಅಪ್ಪಣಿ ಬೇಕಿಲ್ಲ. ಎಡವಿ ಬಿದ್ದಿದ್ದರೂ ನನ್ನ ಹಲ್ಲ ಮುರದಿಲ್ಲ. ಮೂವತ್ತೆರಡೂ ಪೂರಾ ಘಟ್ಟೀ ಅವ, – ನನ್ನ ಪಾಲಿನ ಪಂಚಾಮೃತ ಉಣ್ಣಾಕ! ಏs ಹೋಗತೇನ,- ನಾಯಾಗಿ ಅಲ್ಲ, ಮನಿಶ್ಯಾ ಆಗಿ, ಗಂಡಸಾಗಿ! ನಿಲ್ಲಸ್ತಿ ತಾಕತ್ತಿದ್ದರ….
(ಹೋಗುವನು. ಮೂವರೂ ಅವನು ಹೋದ ದಿಕ್ಕಿಗೆ ವೊವ್ ವೊವ್ ವೊವ್ ಎಂದು ಬೊಗಳುತ್ತಿದ್ದಂತೆ)

ತೆರೆ