ಸುಕ್ಷೇತ್ರ ಬುಗ್ಗಿ

ತಾ. ಚಿಂಚೋಳಿ
ದೂರ: ೧ ಕಿ.ಮೀ.

ಚಿಂಚೋಳಿ ಪಟ್ಟಣದಿಂದ ಉತ್ತರಕ್ಕೆ ೧ ಕಿ.ಮೀ ದೂರ ಕ್ರಮಿಸಿದರೆ ನಿಸರ್ಗದ ಮಡಿಲಲ್ಲಿ ಮುಲ್ಲಾಮಾರಿ ನದಿಯ ದಡದಲ್ಲಿ ೫ ಲಿಂಗಗಳು ಸ್ಥಾಪನೆ ಮಾಡಲಾಗಿದೆ. ಇದು ಪಾಂಡವರು ವನವಾಸದಲ್ಲಿದ್ದಾಗ ಅವರು ಪೂಜೆಗೆಂದು ಸ್ಥಾಪಿಸಿದರೆಂದು ಹೇಳಲಾಗುತ್ತದೆ. ಇಲ್ಲಿ ಬಸವಣ್ಣನ ಒಂದು ಚಿಕ್ಕ ಮೂರ್ತಿ ಸ್ಥಾಪಿಸಿದ್ದಾರೆ. ಅದರ ಮುಂದೆ ಚೌಕಾಕಾರದ ೩’x  ೨’ = ೬’ ಅಡಿ ವಿಸ್ತೀರ್ಣದ ಹೊಂಡವಿದೆ. ಅದರೊಳಗಿಂದ ನೀರು ಬುಗ್ಗೆಯಾಗಿ ಸದಾಕಾಲ ಉಕ್ಕಿ ಬರುತ್ತದೆ. ಈ ಹೊಂಡದಲ್ಲಿ ನೀರಿನ ರಭಸಕ್ಕೆ ಉಸುಕು ಕೂಡಾ ಸದಾ ಮೇಲೆ ಬರುತ್ತದೆ.

ಈ ನೀರಿನ ವಿಶೇಷತೆ ಎಂದರೆ ಇಲ್ಲಿ ಸ್ನಾನ ಮಾಡಿದರೆ ದಿನವಿಡಿ ಚೈತನ್ಯವಿರುತ್ತದೆ ಎಂದು ಹೇಳುವುದುಂಟು. ಮತ್ತೊಂದು ವಿಶೇಷತೆ ಇಲ್ಲಿ ಎಷ್ಟೇ ಜನ ನೀರಿನಲ್ಲಿಳಿದು ಕುಣಿದು ಕುಪ್ಪಳಿಸಿದರೂ ಕೂಡ ನೀರು ತಿಳಿಯಾಗಿಯೇ ಇರುತ್ತದೆ.

ಇಲ್ಲಿ ಬುಗ್ಗಿಯಾಗಿ ಬರುವ ನೀರು ಕಾಶಿಯಿಂದ ಬರತ್ತದೆಂಬ ಭಾವನೆಯನ್ನು ಜನರು ಹೊಂದಿರುತ್ತಾರೆ. ಇದು ಮಕ್ಕಳಿಗೆ ವೀಕ್ಷಿಸಲು ಪ್ರೇಕ್ಷಣಿಯ ಸ್ಥಳವಾಗಿದೆ.

ಪ್ರತಿ ವರ್ಷ ಶಿವರಾತ್ರಿಯಂದು ಇಲ್ಲಿನ ಲಿಂಗಗಳಿಗೆ ಪೂಜೆ ಮಾಡುವ ಪ್ರತೀತಿ ಇದೆ. ಹುಣ್ಣಿಮೆ ಅಮವಾಸ್ಯೆಯಂದು ಕೂಡಾ ಇಲ್ಲಿಗೆ ಬಂದು ಜನರು ಪೂಜೆ ಸಲ್ಲಿಸುತ್ತಾರೆ. ಒಟ್ಟಾರೆ ಇದು ಚಿಂಚೋಳಿಯ ಪ್ರೇಕ್ಷಣಿಯ ಸ್ಥಳವಾಗಿದೆ.

 

ಚಂದ್ರಪಳ್ಳಿ ಜಲಾಶಯ

ತಾ.ಚಿಂಚೋಳಿ
ದೂರ: ೧೨ ಕಿ.ಮೀ

ಇದು ಚಿಂಚೋಳಿಯಿಂದ ೧೨ ಕಿ.ಮೀ ದೂರದಲ್ಲಿ ನಿಸರ್ಗದ ಮಡಿಲಲ್ಲಿ ನಿರ್ಮಿಸಲಾದ ಈ ಜಲಾಶಯವು ೧೯೬೯-೭೦ ರಲ್ಲಿ ೯೯ ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಪ್ರಾರಂಭವಾದ ಯೋಜನೆ ೨.೦೧ ಕೋಟಿ ರೂ. ವೆಚ್ಚದಲ್ಲಿ ೧೯೭೩-೭೪ ರಲ್ಲಿ ಮುಕ್ತಾಯಗೊಂಡಿದ್ದು, ಕರ್ನಾಟಕ ಸರ್ಕಾರದ ಮಟ್ಟದಲ್ಲಿಯೇ  ನಿರ್ಧಾರ ಕೈಗೊಂಡು ನಿರ್ಮಿಸಿದ ಇತಿಹಾಸ ಹೊಂದಿದೆ. ಯೋಜನೆಯ ಕೀರ್ತಿ ಅಂದಿನ ದಕ್ಷ ಆಡಳಿತಗಾರರಾದ ದಿವಂಗತ ಶ್ರೀ ವಿರೇಂದ್ರ ಪಾಟೀಲರಿಗೆ ಸಲ್ಲುತ್ತದೆ.

ಈ ಕೆರೆಯು ನಿಸರ್ಗದ ಮಡಿಲಲ್ಲಿ ಏಳು ಗುಡ್ಡಗಳ ಮಧ್ಯ ಸುಂದರ ಸ್ಥಳದಲ್ಲಿ ನಿರ್ಮಿಸಿದ್ದು, ನೋಡುಗರಿಗೆ ಕಣ್ಣಿಗೆ ಹಬ್ಬದೂಟವನ್ನುಂಟು ಮಾಡುತ್ತದೆ. ಗುಡ್ಡದ ಮೇಲೆ ನಿರ್ಮಿಸಲಾಗಿದೆ. ಪ್ರವಾಸಿಗರು ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಬಂದು ಇಲ್ಲಿನ ವಿಶೇಷತೆಯುಳ್ಳ ಸೀಬೆ ಹಣ್ಣು ಸವಿದು ಅದರ ಸವಿಯನ್ನು ಮೆಲುಕುಹಾಕುತ್ತಾ ತಮ್ಮ – ತಮ್ಮ ಮನೆಗಳಿಗೆ ಕೊಂಡೊಯ್ಯುತ್ತಾರೆ.

ಇಲ್ಲಿನ ಕೆರೆಯಲ್ಲಿ ಮಕ್ಕಳಿಗೆ ಮನೋರಂಜನೆಗಾಗಿ ಚಿಕ್ಕ – ಚಿಕ್ಕ ದೋಣಿಗಳ ವ್ಯವಸ್ಥೆ ಮಾಡಲಾಗಿದೆ. ಇದು ಚಂದ್ರಪಳ್ಳಿಗೆ ಅಂಟಿಕೊಂಡಿರುವುದರಿಂದ ಪ್ರಾವಾಸಿಗರಿಗೆ ಅವಶ್ಯಕ ವಸ್ತುಗಳು ಸಿಗುತ್ತವೆ. ಒಟ್ಟಾರೆ ಜುಲೈ, ಅಗಷ್ಟ  ತಿಂಗಳಿಂದ ಇಲ್ಲಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿವೆ. ಚಿಂಚೋಳಿಯಿಂದ ಸಾರಿಗೆ ವ್ಯವಸ್ಥೆ ಇದೆ. ಒಟ್ಟಾರೆ ಇದು ಒಂದು ಸುಂದರವಾದ ಪ್ರವಾಸಿ ತಾಣವಾಗಿದೆ.

 

ಎತ್ತಿ ಪೋತಾ ಜಲಪಾತ

ತಾ. ಚಿಂಚೋಳಿ
ದೂರ: ೪೦ ಕಿ.ಮೀ.

"ಮಾನವಾನಾಗಿ ಹುಟ್ಟಿದ ಮೇಲೆ ಏನೇನ್ ಮನೋಹರ ಕಂಡಿ ಜೀವನದಲ್ಲಿ ಒಮ್ಮೆ ನೋಡು ಜೋಗದ್ ಗುಂಡಿ"

ಎನ್ನುವ ಕವಿವಾಣಿಯ ಜೋಗ ಜಲಪಾತದ ಮಹತ್ವವನ್ನು ವರ್ಣಿಸಿದಾಗ ಹಿಂದುಳಿದ ಪ್ರದೇಶವೆಂದೇ ಹೆಸರಾದ ಹೈದರಾಬಾದ ಕರ್ನಾಟಕ ಪ್ರದೇಶದ ಚಿಂಚೋಳಿ ತಾಲೂಕಿನಲ್ಲಿಯೂ ಸಹ ಸುಂದರವಾದ ಜಲಪಾತವೊಂದು ಎಲೆ ಮರೆಯ ಕಾಯಿಯಂತೆ ಹರಿಯುತ್ತಿದೆ ಎಂದರೆ ಯಾರಿಗೂ ಆಶ್ಚರ್ಯವಾಗಬಹುದು.

“ಎತ್ತಿ ಪೋತಾ” ಎಂಬ ಪದ ತೆಲುಗು ಭಾಷೆಯಿಂದ ಬಂದಿದೆ. ಇದರ ಅರ್ಥ ಮೇಲಿಂದ ಧುಮ್ಮಿಕ್ಕುವುದು ಎಂದು ಈ ಸ್ಥಳ ಆಂಧ್ರದ ಗಡಿ ಪ್ರದೇಶಕ್ಕೆ ಹೊಂದಿರುವುದರಿಂದ ತೆಲುಗು ಭಾಷೆ ಪ್ರಚಲಿತದಲ್ಲಿದೆ. ಇದು ತಾಲೂಕಾ ಕೇಂದ್ರದಿಂದ ಪೂರ್ವ ದಿಕ್ಕಿಗೆ ಸರಿ. ೪೦ ಕಿ.ಮೀ ದೂರವಿದ್ದು ಗುಲಬರ್ಗಾದ ಮಲೆನಾಡು ಎಂದು ಪ್ರಸಿದ್ಧವಾದ ಕುಂಚಾವರಂ ಘಟ್ಟ ಶ್ರೇಣಿಯಲ್ಲಿ ವಂಟಿಚಿಂತಾದಿಂದ ೧ ಕಿ.ಮೀ ಕ್ರಮಿಸಿದರೆ ಈ ಸುಂದರ ನಯನ ಮನೋಹರ ದೃಶ್ಯವಿರುವ ತಾಣ ಗೋಚರಿಸುತ್ತದೆ.

ಇಲ್ಲಿ ಮೇಲಿಂದ ರಭಸವಾಗಿ ಧುಮ್ಮಿಕ್ಕುವ ಜಲಧಾರೆಯನ್ನು ನೋಡಲು ಕರ್ನಾಟಕವಲ್ಲದೆ ಬೇರೆ ರಾಜ್ಯಗಳಿಂದಲೂ ಕೂಡಾ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಇದು ಸುತ್ತಲೂ ಬೆಟ್ಟ – ಗುಡ್ಡಗಳನ್ನು ಹೊಂದಿದ್ದು, ಮಳೆಗಾಲದಲ್ಲಿ ಎಲ್ಲಾಕಡೆ ಹಚ್ಚ ಹಸಿರಿನಿಂದ ಕಂಗೊಳಿಸುತ್ತದೆ ಒಟ್ಟಾರೆ ಇದೊಂದು ಉತ್ತಮ ಪ್ರೇಕ್ಷಣಿಯ ಸ್ಥಳವಾಗಿ ಪ್ರಸಿದ್ಧಿಯಾಗಿದೆ.

 

ನಾಗರಾಳ ಜಲಾಶಯ

ತಾ. ಚಿಂಚೋಳಿ
ದೂರ: ೨೩ ಕಿ.ಮೀ.

ಮುಲ್ಲಾಮಾರಿ ನದಿಯು ಚಿಂಚೋಳಿ ತಾಲೂಕಿನಲ್ಲಿ ಹರಿಯುವ ಕಾಗಿಣಾ ನದಿಯ ಒಂದು ಪ್ರಮುಖ ಉಪನದಿ. ಈ ನದಿಯು ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದ ಹತ್ತಿರ ಉಗಮವಾಗಿ ಚಿಂಚೋಳಿ ತಾಲೂಕಿನಲ್ಲಿ ಹರಿದು ಕಾಗಿಣಾ ನದಿಯಲ್ಲಿ ವಿಲೀನಗೊಳ್ಳುತ್ತದೆ.

ಇದಕ್ಕೆ ನಾಗರಾಳ ಕೆರೆಯೆಂದು ಕರೆಯುವ ವಾಡಿಕೆ ಇದೆ. ಇದಕ್ಕೆ ಈ ಹೆಸರು ಬರಲು ಕಾರಣವೇನೆಂದರೆ ನಾಗರಾಳ ಎಂಬ ಗ್ರಾಮ ಸಂಪೂರ್ಣವಾಗಿ ಮುಳುಗಡೆ ಹೊಂದಿರುವುದರಿಂದ ನಾಗರಾಳ ಕೆರೆ ಎಂಬ ಹೆಸರು ಬಂದಿದೆ.

ಮುಲ್ಲಾಮಾರಿ ಯೋಜನೆ ಬರಗಾಲ ಕಾಮಗಾರಿ ಅಡಿಯಲ್ಲಿ ೧೯೭೩-೭೪ ರಲ್ಲಿ ಯೋಜನೆ ಕಾರ್ಯ ಪ್ರಾರಂಭಗೊಂಡಿದ್ದು, ಕೇಂದ್ರ ಜಲ ಆಯೋಗ ಮತ್ತು ರಾಜ್ಯ ಸರ್ಕಾರದ ಆಡಳಿತಾತ್ಮಕ ತಾಂತ್ರಿಕ ಮಂಜೂರಾತಿ ಪಡೆದ ಯೋಜನೆ ಆಣೆಕಟ್ಟು ತತ್ಸಂಬಂಧ ಕಾಮಗಾರಿ ೨೦೦೧ ರಲ್ಲಿ ಪೂರ್ಣಗೊಳಿಸಿ ನೀರು ಸಂತ್ರಹಿಸಲಾಗಿದೆ. ಪ್ರಾಯೋಗಿಕವಾಗಿ ಹಾಗೂ ಅಧಿಸೂಚಿಸಿದ ಕ್ಷೇತ್ರ ಸೇರಿ ೨೦೦೫ – ೦೬ ರಲ್ಲಿ ಪೂರ್ಣ ಮಟ್ಟಕ್ಕೆ ನೀರು ಸಂಗ್ರಹಿಸುತ್ತದೆ. ಮುಖ್ಯ ಕಾಲುವೆಯ ೫೬ ಕಿ.ಮೀ. ವರೆಗೆ ನೀರು ಹರಿಸಿ ನೀರಾವರಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ತಾಲೂಕಿನ ೨೫ ಗ್ರಾಮಗಳ ಒಟ್ಟು ೮೧೦೦ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಿದೆ.

 

ಮುಖ್ಯಮಂತ್ರಿ
ದಿ|| ವೀರೇಂದ್ರ ಪಾಟೀಲರು

ಹಿಂದುಳಿದ ಹೈದ್ರಾಬಾದ ಕರ್ನಾಟಕದ ಪ್ರದೇಶದಿಂದ ಬಂದು ಅಪ್ರತಿಮ ಚಾಣಕ್ಷ ರಾಜಕಾರಣಿ ವಿರೇಂದ್ರ ಪಾಟೀಲರಾಗಿದ್ದರು. ಇವರು ೨೮ ಫೆಬ್ರವರಿ ೧೯೨೪ ರಂದು ಗುಲಬರ್ಗಾ ಜಿಲ್ಲೆಯ ಚಿಂಚೋಳಿ ತಾಲೂಕಿನ ಹೂಡದಳ್ಳಿಯಲ್ಲಿ ಜನಿಸಿದರು. ತಂದೆ ಬಸಪ್ಪಗೌಡರು, ತಾಯಿ – ಚನ್ನಮ್ಮ ಗೌಡತಿ ಇವರದು ದೊಡ್ಡ ಕುಟುಂಬ.

ವಿದ್ಯಾಭ್ಯಾಸ: ಇವರು ಚಿಂಚೋಳಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಹಾಗೂ ಕಲಬುರ್ಗಿಯ ಆಶಿಫಗಂಜ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಮುಗಿಸಿದರು. ಆಗಲೇ “ವಂದೇ ಮಾತರಂ” ಚಳುವಳಿಯಲ್ಲಿ ಭಾಗವಹಿಸಿ ಶಾಲಾ ಶಿಕ್ಷಣದಿಂದ ತಾತ್ಕಾಲಿಕವಾಗಿ ಹೊರಗೆ ಬಂದರು. ನಂತರ ಹೈದ್ರಾಬಾದ್ ನಲ್ಲಿ ವಿದೇಶವರ್ಧಿನಿ ಪ್ರೌಢಶಾಲೆಯಲ್ಲಿ ಮೆಟ್ರಿಕ್ ಶಿಕ್ಷಣ ಪೂರೈಸಿದರು.

ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಬಿ.ಎ., ಎಲ್.ಎಲ್.ಬಿ ಶಿಕ್ಷಣ ಪಡೆದು ೧೯೪೭ ರಲ್ಲಿ ಚಿಂಚೋಳಿಯಲ್ಲಿ ವಕೀಲ ವೃತ್ತಿ ಆರಂಭಿಸಿದರು. “ಕ್ವಿಟ್ ಕೋರ್ಟ್” ಚಳುವಳಿಯಲ್ಲಿ ಭಾಗವಹಿಸಿದ್ದರು.

ರಾಜಕೀಯ ಜೀವನ: ೧೯೫೨ ರಲ್ಲಿ ನಡೆದ ಪ್ರಥಮ ವಿಧಾನಸಭಾ ಚುನಾವಣೆಯಲ್ಲಿ ಆಳಂದದ ಕ್ಷೇತ್ರದಿಂದ ಆಯ್ಕೆಯಾದರು. ಆನಂತರ ೧೯೫೭ ರಲ್ಲಿ ಚಿಂಚೋಳಿಯಿಂದ ಶಾಸಕರಾಗಿ ಹಾಗೂ ೧೯೬೨ ರಲ್ಲಿ ಮತ್ತೆ ಚಿಂಚೋಳಿಯಿಂದ ವಿಧಾನಸಭೆಗೆ ಆಯ್ಕೆಯಾಗಿ ಲೋಕೋಪಯೋಗಿ ಸಚಿವರಾದರು. ೧೯೬೮ ರಿಂದ ೧೯೭೧ ರವರೆಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು.

ರಾಜಕೀಯ ಉನ್ನತಿ: ೧೯೮೦ ರಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. ೧೯೮೪ ರಲ್ಲಿ ಗುಲ್ಬರ್ಗಾದಿಂದ ಸಂಸದರಾಗಿ ಪುನಃ ಆಯ್ಕೆಯಾಗಿ ಕೇಂದ್ರದಲ್ಲಿ ಪೆಟ್ರೋಲಿಯಂ ಸಚಿವರಾಗಿದ್ದರು. ೧೯೯೦ ರಿಂದ ೧೯೯೧ ರ ವರೆಗೆ ಕರ್ನಾಟಕ ರಾಜ್ಯದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ಅನಾರೋಗ್ಯದಿಂದ ತಮ್ಮ ಸ್ಥಾನ ಕಳೆದುಕೊಂಡು ಪಾಟೀಲರು ೧೯೯೭ ಮಾರ್ಚ್ ೧೪ ರಂದು ಲಿಂಗೈಕ್ಯರಾದರು.

ಹೈದ್ರಾಬಾದ್ ಕರ್ನಾಟಕದ ಅಭಿವೃದ್ಧಿಗಾಗಿ ಹೆಚ್.ಕೆ.ಡಿ.ಬಿ. ಯನ್ನು ಸ್ಥಾಪಿಸಿದರು. ಈ ಭಾಗದ ಅನೇಕ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ರೈತರ ಬಾಳು ಬಂಗಾರವಾಗಲು ಶ್ರಮಿಸಿದ್ದರು.