ಚಿಂತಲಪಲ್ಲಿ ವೆಂಕಟರಾಯರ ಜ್ಯೇಷ್ಠ ಪುತ್ರಿ ವೆಂಕಟಲಕ್ಷ್ಮಮ್ಮ ಹಾಗೂ ಅಶ್ವತ್ಥ ನಾರಾಯಣರಾಯರ ಸುಪುತ್ರರಾಗಿ ಜನಿಸಿದ ಕೃಷ್ಣಮೂರ್ತಿಯವರಿಗೆ ತಾತಾ ವೆಂಕಟರಾಯರೂ. ಸೋದರಮಾವ ಚಿಂತಲಪಲ್ಲಿ ರಾಮಚಂದ್ರರಾಯರೂ ಗುರುಗಳಾಗಿ ದೊರೆತುದೊಂದು ಮಹಾಯೋಗ. ಈ ಯೋಗವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಪ್ರಚಂಡ ಯೋಗ್ಯತೆಯೂ ಸೇರಿ ಕೃಷ್ಣಮೂರ್ತಿಯವರು ಕರ್ನಾಟಕದ ಅತ್ಯಂತ ಶ್ರೇಷ್ಠ ಗಾಯಕರಾಗಿ ರೂಪುಗೊಂಡದ್ದು ಸಂಗೀತ ಕ್ಷೇತ್ರದ ಯೋಗವೆನ್ನಬಹುದು. ಇದಕ್ಕೆ ಮತ್ತೊಂದು ಸಹಾಯಕವಾದ ಅಂಶವೆಂದರೆ ಆಗಿನ ಸಂಗೀತ ಜಗತ್ತಿನ ಶ್ರೇಷ್ಠರೆಲ್ಲರೂ ವೆಂಕಟರಾಯರ – ರಾಮಚಂದ್ರರಾಯರ ಮನೆಗೆ ಆಗಮಿಸುತ್ತಿದ್ದುದು. ಸಂಗೀತ ಗೋಷ್ಠಿಗಳು ಮನೆಯಲ್ಲೇ ಅದ್ಭುತವಾಗಿ ನಡೆಯುತ್ತಿದ್ದುದು ಅಂತಹ ಪಾಂಡಿತ್ಯ ಪೂರ್ಣ ಸಂಗೀತವು ಸದಾ ಕವಿಗಳಿಗೆ ಇಳಿಯಲು ಅವಕಾಶವಿದ್ದುದು. ಸಂಗೀತ ಲಕ್ಷ್ಯ-ಲಕ್ಷಣಗಳೆರಡರಲ್ಲೂ ಪ್ರಬುದ್ಧರಾಗಿದ್ದ ಕೃಷ್ಣಮೂರ್ತಿಯವರ ಶಿಷ್ಯ ಸಂಪತ್ತು ಅಪಾರ.

ಭವ್ಯವಾದ ವ್ಯಕ್ತಿತ್ವ ಅದಕ್ಕೆ ತಕ್ಕಂತೆ ಧ್ವನಿವರ್ಧಕದ ಅಗತ್ಯ ಸ್ವಲ್ಪವೂ ಬೇಕಾಗಿರದ ತುಂಬು ಶರೀರ. ವಿದ್ವತ್ಪೂರ್ಣವಾದ ಹಾಡಿಕೆ. ಅದರಲ್ಲೂ ಪಲ್ಲವಿ, ಪ್ರಸ್ತುತಿಯಲ್ಲಿ ಪ್ರಚಂಡ ಸಾಧನೆ. ಇಷ್ಟೆಲ್ಲಾ ಅತಿ ಉತ್ತಮಾಂಶಗಳು ಸೇರಿದ್ದ ಕೃಷ್ಣಮೂರ್ತಿಯವರು ತಮ್ಮ ವಿನಯ, ಸೌಹಾರ್ದ, ಸರಳತೆ ಸಜ್ಜನಿಕೆಗಳಿಂದಾಗಿ ಸಹೃದಯರ ಸ್ನೇಹಿತರ ಸೈನ್ಯವನ್ನೇ ಹೊಂದಿದ್ದರೆನ್ನಬಹುದು.

‘ದಾಸ ಸಾಹಿತ್ಯ’, ‘ದಾಸರ ಶುಭ ದಿನ’ ಕೃಷ್ಣಮೂರ್ತಿಯವರು ತಮ್ಮ ತುಂಬು ಧ್ವನಿಯಿಂದ ಮೂಡಿಸಿರುವ ಧ್ವನಿ ಸುರುಳಿಗಳು.

‘ಗಾನ ಭೂಷಣ’, ‘ಗಾಯಕ ಚತುರೆ’, ‘ಕಲಾ ಭೂಷಣ’, ‘ಗಾಯನ ಲಯ ಸಾಮ್ರಾಟ್‌‘ಗಾನ ವಿದ್ಯಾನಿಧಿ’, ‘ಗಂಧರ್ವ ಕಲಾ ನಿಧಿ’, ‘ಗಾನ ಸುಧಾ ನಿಧಿ’, ‘ಕರ್ನಾಟಕ ಕಲಾ ತಿಲಕ’ ಇತ್ಯಾದಿ ಅಯಾಚಿತವಾಗಿ ಬಂದ ಬಿರುದುಗಳಿಂದಲೂ, ಪ್ರಶಸ್ತಿಗಳಿಂದಲೂ ಮಾನ್ಯರಾಗಿದ್ದರು.

ಹಾಡುತ್ತ ಹಾಡುತ್ತಲೇ ಘಾಟಿಯ ಸುಬ್ರಹ್ಮಣ್ಯನ ಸನ್ನಿಧಾನದಲ್ಲಿ ತಮ್ಮ ಜೀವ ಜ್ಯೋತಿಯನ್ನು ಭಗವಂತನಿಗೆ ಬೆಳಗಿ ೧೯-೧೨-೧೯೯೬ ರಂದು ಅಮರರಾದರು. ಅವರ ಹೆಸರನ್ನು ಸ್ಮರಿಸುತ್ತ ದೀಪ ಹಚ್ಚುತ್ತಿರುವ ಶಿಷ್ಯ ಕೋಟಿಗೆ ಅವರ ಸ್ಮರಣಿಯೇ ಸ್ಫೂರ್ತಿದಾಯಕ.