ಇತಿಹಾಸದ ಬೆಳಕಿನಲ್ಲಿ: ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ೮೦೦ ವರ್ಷಗಳ ದೀರ್ಘ ಇತಿಹಾಸದ ವೈಶಿಷ್ಟವನ್ನು ಚಿಂತಲಪಲ್ಲಿ ಪರಂಪರೆ ಪಡೆದಿರುವುದು ವಿದಿತವಾದದ್ದೇ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಅದು ಪಡೆದ ಪವಾಡ ಸದೃಶ ತಿರುವು ಹಾಗೂ ಕಳೆದ ಶತಮಾನದಲ್ಲಿ ಚಿಂತಲಪಲ್ಲಿ ವೆಂಕಟರಾಯರು ಹಾಗೂ ರಾಮಚಂದ್ರರಾಯರು ಮೈಸೂರು  ಸಾಮ್ರಾಜ್ಯದಲ್ಲಿಲ ಪಡೆದ ಖ್ಯಾತಿಯ ಬೆನ್ನಲ್ಲೇ ಅದೇ ಕಾಲದಲ್ಲಿ ಆ ಪರಂಪರೆಯ ಬೆಳಕಿನಲ್ಲಿ ಬೆಳಗಿದ ವಿದ್ವನ್ಮಣಿಗಳ ಸಾಲು ಸಹಾ ಇತಿಹಾಸದಷ್ಟು ದೀರ್ಘವಾದದ್ದೇ. ವಿದ್ವಾನ್‌ ಚಿಂತಲಪಲ್ಲಿ ವೆಂಕಟಾಚಲಯ್ಯ, ಚಿಂತಲಪಲ್ಲಿ ಶೇಷಗಿರಿರಾವ್‌, ಚಿಂತಲಪಲ್ಲಿ ವೆಂಕಟರಾಮಯ್ಯ, ಚಿಂತಲಪಲ್ಲಿ ಸುಬ್ಬರಾವ್‌, ಕರ್ನಾಟಕ ಕಲಾಶ್ರೀ ಚಿಂತಲಪಲ್ಲಿ ರಂಗರಾವ್‌… ಹೀಗೆ ಸಾಗುತ್ತ ಹೋದಂತೆ ಅದರಲ್ಲಿ ಗಾಯನ, ಬೋಧನೆಗಳಲ್ಲಿ ಪ್ರಸಿದ್ಧಿಯನ್ನು ಪಡೆದ ಮತ್ತೊಂದು ಹೆಸರು ಗಾನಸುಧಾನಿಧಿ, ಕರ್ನಾಟಕ ಕಲಾಶ್ರೀಕ ಚಿಂತಲಪಲ್ಲಿ ಕೃಷ್ಣಮೂರ್ತಿಯವರದ್ದು ಎದ್ದು ತೋರುವಂಥದ್ದು. ಚಿಂತಲಪಲ್ಲಿ ಪರಂಪರೆಯನ್ನು ಆ ಮನೆತನದ ಹೆಣ್ಣುಮಕ್ಕಳು ಹಾಗೂ ಗಂಡು ಮಕ್ಕಳ ಪರಂಪರೆಯವರಿಬ್ಬರೂ ಬೆಳೆಸಿದರು, ಪೋಷಿಸಿದರು. ಆ ಹೆಣ್ಣು ಮಕ್ಕಳ ಪರಂಪರೆಗೆ ಸೇರಿದವರು ಕೃಷ್ಣಮೂರ್ತಿಯವರು.

ಚಿಂತಲಪಲ್ಲಿ ವೆಂಕಟರಾಯರ ಜೇಷ್ಠ ಪುತ್ರಿ ವೆಂಕಟಲಕ್ಷ್ಮಮ್ಮ ಕೃಷ್ಣಮೂರ್ತಿಯವರ ತಾಯಿ. ತಂದೆಯವರಾದಕ ಗುಡಿಬಂಡೆಯ ವೇ.ಬ್ರ.ಶ್ರೀ ಅಶ್ವತ್ಥನಾರಾಯಣರಾಯರ ತಾಯಿ ಸಹಾ ಚಿಂತಲಪಲ್ಲಿಯವರೇ. ವೆಂಕಟರಾಯರ ಚಿಕ್ಕಪ್ಪ ಭಾಸ್ಕರರಾವ್‌ ಎಂಬುವವರ ಮಗಳು ಅಶ್ವತ್ಥಮ್ಮನವರು ಅಶ್ವತ್ಥನಾರಾಯಣರಾಯರ ತಾಯಿ. ಹೀಗಾಗಿ ತಾಯಿ, ತಂದೆ ಎರಡೂ ಕಡೆ ಸಂಗೀತ ಕುಟುಂಬದ ಹಿನ್ನೆಲೆ ಹಾಗೂ ರಕ್ತಗತವಾಗಿ ಬಂದ ಸಂಗೀತ ಇವು ಕೃಷ್ಣಮೂರ್ತಿಗಳಿಗೆ ಅಯಾಚಿತವಾಗಿ ಬಂದ ಭಾಗ್ಯ . ೧೯೨೦ನೇ ಇಸವಿಯಲ್ಲಿ ಚಿಂತಲಪಲ್ಲಿಯಲ್ಲಿ ತಾತನ ಮನೆಯಲ್ಲಿ ಜನನ. ನಾಲ್ಕು ಜನ ಸಹೋದರರು, ನಾಲ್ಕು ಜನ ಸಹೋದರಿಯನ್ನು ಹೊಂದಿದ ದೊಡ್ಡ ಕುಟುಂಬ ಕೃಷ್ಣಮೂರ್ತಿಯವರದ್ದು. ಅಶ್ವತ್ಥನಾರಾಯಣರಾಯರ ಜೇಷ್ಠಪುತ್ರರಾಗಿ ಜನಿಸಿದ ಇವರು ಬೆಳೆದದ್ದು., ಕಲಿತದ್ದು ಎಲ್ಲಾ ತಾತನವರ ಹಾಗೂ ಮಾವನವರ ಬಳಿಯಲ್ಲೇ.

ಸೋದರಮಾವನ ಮುದ್ದಿನ ಅಳಿಯನಾಗಿ: ಕೃಷ್ಣಮೂರ್ತಿಯವರ ತಾಯಿಯ ತಮ್ಮ ಆಸ್ಥಾನ ವಿದ್ವಾನ್‌ ಚಿಂತಲಪಲ್ಲಿ ರಾಮಚಂದ್ರರಾಯರಿಗೆ ಅಲ್ಲಿ ಮದುವೆಯಾದ ಹೊಸತು. ತಮಗೆ ಇನ್ನೂ ಮಕ್ಕಳಿಲ್ಲದ ಕಾಲದಲ್ಲಿ ಅಕ್ಕನ ಮಗ ಕೃಷ್ಣಮೂರ್ತಿ ಅವರ ಬಾಯಲ್ಲಿ ಕಿಟ್ಟು ಆಗಿಹೋದ. ಆತನನ್ನು ಮೂರನೇ ವಯಸ್ಸಿನಲ್ಲೇ ತಮ್ಮ ಮನೆಗೆ ಕರೆತಂದು ಸಾಕಿದ್ದೇ ಅಲ್ಲದೆ ಚೌಲ ಮಾಡಿಸಿದ್ದು ಸಹಾ ಮಾವನವರಾದ ರಾಮಚಂದ್ರರಾಯರೇ. ರಾಮಚಂದ್ರರಾಯರ ಶ್ರೀಮತಿಯವರಾದ ಲಕ್ಷ್ಮೀದೇವಮ್ಮ ಕಿಟ್ಟುವಿನ ಬಾಯಲ್ಲಿ ಅತ್ತಿಗೆ. ತಮ್ಮ ಮಕ್ಕಳಿಗಿಂತ ಮುಂಚಿನವನದ ಕಿಟ್ಟುವಿಗೆ ಎಣ್ಣೆ ಒತ್ತಿ ನೀರೆರೆದು ಮುಚ್ಚಟೆಯಾಗಿ ಸಾಕಿ ಶೇಷಾದ್ರಿಪುರದ ಆರ್ಯ ವಿದ್ಯಾಶಾಲೆಗೆ ಸೇರಿಸಿದರು. ಅಲ್ಲಿ ಎಲ್‌.ಎಸ್‌. ನವರೆಗೆ ಓದಿದ ನಂತರ ಶೇಷಾದ್ರಿಪುರಂ ಹೈಸ್ಕೂಲ್‌ನಲ್ಲಿ ಎಸ್.ಎಸ್‌.ಎಲ್‌.ಸಿ. ಯವರೆ ವಿದ್ಯಾಭ್ಯಾಸ, ಇದಿಷ್ಟು ಅವರ ಲೌಕಿಕಕ ವಿದ್ಯಾಭ್ಯಾಸದ ವಿವರಗಳು.

ಮನೆಯಲ್ಲೇ ಗುರುಕುಲ: ತಾತನಿಗೆ ಮೊಮ್ಮಗ, ಮಾವನಿಗೆ ಮುದ್ದಿನ ಅಳಿಯನಾಗಿದ್ದರೂ ಇದು ಸಂಗೀತ ಶಿಕ್ಷಣದ ಸಮಯ ಬಂದಾಗ ನಡೆಯುತ್ತಿರಲಿಲ್ಲ. ಶಿಕ್ಷಣದ ಸಂದರ್ಭದಲ್ಲಿ ಕಟ್ಟು ನಿಟ್ಟಾಗಿರಬೇಕಾದದ್ದು ಒಂದು ನಿಯಮವೇ ಆಗಿತ್ತು. ಕಿಟ್ಟುವಿನ ತಾಯಿ ಸೊಗಸಾಗಿ ನಳಚರಿತ್ರೆ, ಧ್ರುವಚರಿತ್ರೆ ಮುಂತಾದವನ್ನು ಹಾಡುತ್ತಿದ್ದವರು. ತಾಯಿ ಮತ್ತೆ ತಾತ ವೆಂಕಟರಾಯರ ಬಳಿ ಬಾಲಪಾಠಗಳು, ಮುಂದೆ ಉನ್ನತ ಶಿಕ್ಷಣವೆಲ್ಲ ಮಾವನವರ ಬಳಿ. ಮನೆಯಲ್ಲಿ ಇಪ್ಪತ್ತುನಾಲ್ಕು ಗಂಟೆಯೂ ಸಂಗೀತವೇ. ಕಿಟ್ಟುವಿನ ಜೊತೆಗೆ ಪಾಠ ಕಲಿಯುತ್ತಿದ್ದ ಇನ್ನಿತರರಲ್ಲಿ ವೆಂಕಟರಾಯರ ತಮ್ಮನ ಮಗ ವೆಂಕಟರಾಮಯ್ಯ, ಚಿಕ್ಕಕರಿಗಿರಿರಾವ್‌, ದೊಡ್ಡಕರಿಗಿರಿರಾವ್‌ ಶ್ರೀರಂಗನಹಳ್ಳಿ ನರಸಿಂಹ, ನಾದಸ್ವರ ಮುಂತಾದವರು. ಬೆಳಿಗ್ಗೆ ನಾಲ್ಕು ಗಂಟೆಗೆಲ್ಲಾ ತಾತನವರು ಎದ್ದು, ಭುಜದ ಮೇಲಿನ ಶಲ್ಯವನ್ನು ಚಾಟಿಯಂತೆ ಹಿಡಿದು ಸಾಲಾಗಿ ಮಲಗಿದ್ದ ಶಿಷ್ಯರನ್ನೆಲ್ಲಾ ಅದರಲ್ಲಿ ಮೃದುವಾಗಿ ಬಡಿದು ಎಬ್ಬಿಸುತ್ತಿದ್ದರು. ಮನೆಯಲ್ಲಿ ಅಥವಾ ಮನೆಯ ಹತ್ತಿರದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬೆಳಗಿನ ಅಕಾರ ಸಾಧನೆ. ಇವರನ್ನೆಲ್ಲಾ ಎಬ್ಬಿಸಿ ತಾತ, ಮತ್ತು ಮಾವ ಮತ್ತೆ ಹಾಸಿಗೆಯ ಮೇಲೆ ಮಲಗಿ ಕಾಲು ಅಲ್ಲಾಡಿಸುತ್ತಾ ಇವರು ಹಾಡುವುದನ್ನು ಕೇಳುತ್ತಾ ಇರುವುದು. ಇವರೆಲ್ಲರೂ ಒಬ್ಬೊಬ್ಬರು ಒಂದೊಂದು ಕಡೆ ನಾನಿಲ್ಲಿ, ನೀನು ಅಲ್ಲಿ ಎಂದು ಜಗಳವಾಡುತ್ತಾ ತಂಬೂರಿ ಹಿಡಿದುಕೊಂಡು ಹಾಡುವುದು. ತಾತ, ಮಾವನವರು ಮಲಗಿದ್ದರೂ ಕಿವಿಗಳು ಇವರತ್ತಲೇ. ಅಪ್ಪಿ ತಪ್ಪಿ, ತಪ್ಪು ಹಾಡಿದರೆ ಮಲಗಿದಲ್ಲಿನಿಂದಲೇ ತಿದ್ದಿಹಾಡಿ “ಲಾ ಸರಿಯಾಗಿ ಹೀಗೆ ಹಾಡೂ, ಮುಂ…..” ಎಂಬ ಬಯ್ಗಳ, ಅದಕ್ಕೂ ಮೀರಿದರೆ ಎದ್ದು ಬಂದು ಕಯ್ಗೆ ಸಿಕ್ಕಿದ್ದರಲ್ಲಿ ಒಂದೆರಡು ಇಕ್ಕಿಬಿಡುವುದು. ಆಮೇಲೆ ನೋಯಿತೇನೋ ಎಂದು ಮರುಗುವುದು. (ಒಮ್ಮೆಯಂತೂ ವೆಂಕಟರಾಮಯ್ಯನವರಿಗೆ ವೆಂಕಟರಾಯರು ಉರಿಯುತ್ತಿರುವ ಲಾಟೀನಿನಿಂದಲೇ ಇಕ್ಕಿಬಿಟ್ಟಿದ್ದರಂತೆ).

ಪಾಠ ಅಷ್ಟಾದರೆ ಕೇಳ್ಮೆ ಇನ್ನಷ್ಟು. ಮಾವನವರ ಮಲ್ಲೇಶ್ವರದ ಮನೆಗೆ, ತಾತನ ಊರಿನ ಚಿಂತಲಪಲ್ಲಿಯ ಮನೆಗೆ ನೂರಾರು ಜನ ವಿದ್ವಾಂಸರ ಆಗಮನ. ಅನೇಕ ಪಕ್ಕವಾದ್ಯಗಾರರುಗಳ ಸಹವಾಸ, ಸಾಹಚರ್ಯ. ಬೆಳಗಿನಿಂದಲೇ ಬರುವ ಅತಿಥಿಗಳಿಗೆ ಕಾಫಿ-ತಿಂಡಿಯ ಸರಬರಾಜು, ಸಂಗೀತ. ಮಧ್ಯಾಹ್ನ ಊಟ, ಸಂಗೀತ, ಸಂಜೆ ಮಾವನ ಕಚೇರಿಗಳಿಗೆ ಪಿನ್‌ಪಾಟ್‌ ಹಾಡಿಕೆ. ಕಚೇರಿ ಇಲ್ಲದ ಮಧ್ಯಾಹ್ನ ತಾತ, ಮಾವನವರು ಒಂದೊಂದು ಕಡೆ ಮಲಗಿರುತ್ತಿದ್ದರು. ಮಲಗಿದ್ದಲ್ಲಿಂದಲೇ ಯಾರೋ ಒಬ್ಬರು ಒಂದು ರಾಗವನ್ನೋ ಕೃತಿಯನ್ನೋ ಗುನುಗಲು ಪ್ರಾರಂಭಿಸುವರು. ಆಗ ಇನ್ನೊಂದು ಕಡೆ ಅದಕ್ಕೆ ಧ್ವನಿ ಸೇರುವುದು. ಮಲಗಿದಲ್ಲಿಂದಲೇ ಒಂದೆರಡು ಆವರ್ತ ಸ್ವರಗಳ ವಿನಿಕೆಯಾದೊಡನೆ ಎದ್ದು ಕೂಡುವರು. “ಕಿಟ್ಟೂ, ವೆಂಕಟರಾಮೂ ತಂಬೂರಿ ತೆಕ್ಕೊಳ್ರೋ” ಎಂಬ ಆಜ್ಞೆಯಾಗುವುದು. ಸರಿ, ಪುರ್ಣ ಪ್ರಮಾಣದ ಗಾಯನ. ಗಾಯನದಲ್ಲಿ ಸ್ಪರ್ಧೆ, ನಾನು ಹೆಚ್ಚು ನೀನು ಹೆಚ್ಚು ಎಂಬಂತೆ ನಡೆಯಲು ಪ್ರಾರಂಭವಾಗುವುದು. ಅದೇ ವೇಳೆಗೆ ಅಯ್ಯಾಮಣಿ ಅಯ್ಯರರೋ ಅಥವಾ ಪುಟ್ಟಾಚಾರ್ಯರೋ ಆಗಮಿಸಿಬಿಟ್ಟರಂತೂ ಮುಗಿಯಿತು. ವಾದ್ಯಗಳೂ ಜೊತೆಗೆ ಸೇರಿಬಿಡುವುದು. ಯಾರೋ ಶಿಷ್ಯರು ಅಷ್ಟರಲ್ಲಿ ಬೇಗ ಹೋಗಿ ಒಂದಿಷ್ಟು ಎಲೆ, ಅಡಿಕೆ, ಕಂದವಿಲಾಸ ನಶ್ಯ, ಅಡಿಗೆ ಮನೆಯಿಂದ ಒಂದಷ್ಟು ಕಾಫಿಯನ್ನು ತಂದು ಮುಂದಿಟ್ಟು ವಾತಾವರಣದ ರಂಗೇರಿಸಿಬಿಡುವರು. ರಾತ್ರಿ ಹತ್ತೊ ಹನ್ನೊಂದೋ ಆಗಿ ಬಂದವರಿಗೆಲ್ಲ ಊಟಕ್ಕೇಳಿಸುವರು. ಹೀಗೆ ಆ ಗುರುಕುಲ ‘ವೆಂಕಟರಾಯನ ಛತ್ರ’ ಎಂದೇ ಕರೆಸಿಕೊಂಡು ಬಿಟ್ಟಿತ್ತು. ಕೆಲವೊಮ್ಮೆ ಸಂಜೆ ಮಾವನ ಕಚೇರಿ ಇದ್ದಲ್ಲಿ ಅಥವಾ ಅವರ ಕಚೇರಿ ಇಲ್ಲದಿದ್ದಾಗ ಅನ್ಯರ ಕಚೇರಿಗಳನ್ನು ಕೇಳಲು ಹೋಗುವಾಗ ಪ್ರತಿದಿನವೂ ಮನೆಯ ಮುಂದೆ ವರ್ತನೆ ಒಪ್ಪಿಸಿದಂತೆ ಜಟಕಾ ಸಾಬಿಯ ಬಂಡಿ ಸದಾ ಸಿದ್ಧ. ಹೋಗಿ ಕಚೇರಿ ಕೇಳಿ ಬಂದು ರಾತ್ರಿ ಊಟದ ಸಮಯದಲ್ಲೂ ಅಂದಿನ ಕಚೇರಿಯ ವೈಶಿಷ್ಟ್ಯ, ಲೋಪಗಳನ್ನು ಕುರಿತ ಚರ್ಚೆ ಬಿಸಿಯೇರಿ, ಕೈಒಣಗಿ ಮನೆಯ ಹೆಂಗಸರ ಎಚ್ಚರಿಸುವಿಕೆಯಿಂದ ಹಾದಿಗೆ ಬರುತ್ತಿದ್ದ ಕಾಲವನ್ನು ಕೃಷ್ಣಮೂರ್ತಿಗಳು ಸದಾ ನೆನಪಿಸಿಕೊಳ್ಳುತ್ತ ಕಣ್ಣೀರು ಮಿಡಿಯುತ್ತಿದ್ದುದುಂಟು.

ಕಿಟ್ಟು ಪುಟ್ಟು: ಕೃಷ್ಣಮೂರ್ತಿಗಳ ವೇದಿಕೆಯ ಪ್ರವೇಶವಾದದ್ದು ತಮ್ಮ ೧೩ನೆಯ ವಯಸ್ಸಿನಲ್ಲಿ, ಅಲಸೂರು ಪೇಟೆ ರಾಮಮಂದಿರದಲ್ಲಿ. ಅಂದು ಬಿ.ಟಿ. ರಾಜಣ್ಣ ಮತ್ತು ಪುಟ್ಟಾಚಾರ್ಯರ ವಾದ್ಯ ಸಹಕಾರ. ಆಗ ಪ್ರಾರಂಭವಾದ ಕಚೇರಿ ಜೀವನ ತಮ್ಮ ಅಂತಿಮ ಕ್ಷಣದವರೆಗೆ ಮುಂದುವರೆಯಿತು. ಪುಟ್ಟಾಚಾರ್ಯರೊಡನೆಯ ಸ್ನೇಹವಂತೂ ಅವಿಚ್ಛಿನ್ನವಾದದ್ದು. ಮುಂದೆ ಎಲ್ಲೆ ಕಚೇರಿಯಾಗಲಿ ಕಿಟ್ಟು ಹಾಡಿಕೆ ಪುಟ್ಟಾಚಾರ್ ಮೃದಂಗ. ಈ ಕಿಟ್ಟು, ಪುಟ್ಟು ಜೋಡಿ ಬಹಳಕಾಲ ಮುಂದುವರೆಯಿತು. ಹಾಗೆಯೇ ತದನಂತರದ ಕಾಲದಲ್ಲಿ ಆರ್.ಆರ್. ಕೇಶವಮೂರ್ತಿ, ಬಿ.ಟಿ. ರಾಜಣ್ಣ, ಚಿಕ್ಕಬಳ್ಳಾಪುರದ ಗೋವಿಂದಸ್ವಾಮಿ, ಎಂ.ಎಸ್‌. ಸುಬ್ರಹ್ಮಣ್ಯಂ, ತುಮಕೂರು ರಾಮಯ್ಯ, ಸುಬ್ರಹ್ಮಣ್ಯ ಶಾಸ್ತ್ರಿ, ಎ.ವಿ. ವೆಂಕಟರಮಣಯ್ಯ, ಶೇಷಗಿರಿರಾವ್‌ (ರಾಜಣ್ಣಿ) ಇವರುಗಳು ಪಿಟೀಲಿನಲ್ಲಿ ಸಹಕಾರವಾದರೆ ಅಯ್ಯಾಮಣಿ, ಕುಂಜುಮಣಿ, ಪಳನಿಸ್ವಾಮಿ, ಎಂ.ಎಲ್‌. ವೀರಭದ್ರಯ್ಯ, ರಾಮಾಚಾರ್ ಹೆಚ್‌.ಪಿ. ಎಂ.ಎಸ್‌. ರಾಮಯ್ಯ, ಟಿ.ಎ.ಎಸ್‌. ಮಣಿ, ವಯ್ಯಾಪುರಿ ಮುಂತಾದವರು ಮೃದಂಗದಲ್ಲಿ ಆಗ್ಗೆ ವೇದಿಕೆಗಳಲ್ಲಿ ಇವರ ಜೊತೆ ವಿಜೃಂಭಿಸುತ್ತಿದ್ದವರು. ಜೊತೆಗೆ ಆಗಿನ ಅನೇಕ ವರ್ಧಿಷ್ಣು ಕಲಾವಿದರನ್ನೂ ತಮ್ಮೊಡನೆ ಹಾಕಿಕೊಂಡು ನುಡಿಸಲು ಪ್ರೋತ್ಸಾಹಿಸಿ ಒಂದು ಹಂತಕ್ಕೆ ತರಲು ಕಾರಣಕರ್ತರು ಕೃಷ್ಣಮೂರ್ತಿಗಳು. ವಿದ್ವಾನ್‌ ಎಸ್‌. ಶೇಷಗಿರಿರಾವ್‌ ಪಿಟೀಲು, ವಿದ್ವಾನ್‌ ಟಿ.ಎಸ್‌. ಚಂದ್ರಶೇಖರ್ ಮೃದಂಗ, ವಿದ್ವಾನ್‌ ಟಿ.ಎಸ್‌. ಕೃಷ್ಣಮೂರ್ತಿ ಪಿಟೀಲು, ವಿದ್ವಾನ್‌ ಗುಂಡಪ್ಪ ಮೃದಂಗ, ವಿದ್ವಾನ್‌ ಟಿ.ಎ.ಎಸ್‌. ಮಣಿ ಮೃದಂಗ, ಇವರೆಲ್ಲರೂ ಇಂದಿಗೂ ಈ ದೃಷ್ಟಿಯಿಂದ ಕೃಷ್ಣಮೂರ್ತಿಯವರನ್ನು ಸ್ಮರಿಸುತ್ತಾರೆ.

ನೆರೆಹೊರೆಯವಾದ್ಯಗಳೊಡನೆ: ಕೃಷ್ಣ ಮೂರ್ತಿಗಳು ತಮ್ಮ ಸಂಗೀತ ಜೀವನದಲ್ಲಿ ನೆರೆರಾಜ್ಯದ ಅನೇಕ ಪ್ರಸಿದ್ಧ ಪಕ್ಕ ವಾದ್ಯಗಾರರೊಡನೆಯೂ ಹಾಡಿ ಸೈ ಎನಿಸಿಕೊಂಡರು . ಬೆಂಗಳೂರಿನ ಶಂಕರ ಜಯಂತಿ ಮಹೋತ್ಸವದಲ್ಲಿ ಎಂ.ಎಸ್‌. ಗೋಪಾಲಕೃಷ್ಣನ್‌ ಪಿಟೀಲಿನೊಡನೆ ಹಾಡಿದ ರೀತಿ, ಕೋಲಾರದಲ್ಲಿ ಮದ್ರಾಸ್‌ ಕಣ್ಣನ್‌ರವರ ಪಕ್ಕವಾದ್ಯದಲ್ಲಿ, ಗಾನಕಲಾಪರಿಷತ್ತಿನಲ್ಲಿ ಕೆ. ಕಮಲಾಕರರಾವ್‌ರೊಂದಿಗೆ ಹಾಗೂ ಮದ್ರಾಸಿನಲ್ಲಿ ಟಿ.ವಿ. ಗೋಪಾಲಕೃಷ್ಣನ್‌ರವರೊಡನೆ ಹಾಡಿದ ಸಂದರ್ಭದಲ್ಲಿ ಅವರು ಹಾಡಿದ ವಿಶೇಷ ಪಲ್ಲವಿಗಳು, ಸ್ವರಗಳ ತಂತ್ರದ ಬಗ್ಗೆ ಆ ವಿದ್ವನ್ಮಣಿಗಳು ಈಗಲೂ ನೆನಪಿಸಿಕೊಳ್ಳುವುದುಂಟು.

ಚಿಂತಲಪಲ್ಲಿ ಸಹೋದರರು: ಕೃಷ್ಣಮೂರ್ತಿಗಳು ತಮ್ಮ ಸಹಪಾಠಿ ಹಾಗೂ ಭಾವನವರೂ ಆದ ವಿದ್ವಾನ್‌ ಚಿಂತಲಪಲ್ಲಿ ವೆಂಕಟರಾಮಯ್ಯನವರ ಜೊತೆ ದ್ವಂದ್ವ ಗಾಯನವನ್ನು ಸುಮಾರು ೩೦ ವರ್ಷಗಳ ಕಾಲ ಚಿಂತಲಪಲ್ಲಿಕ ಸಹೋದರರು ಎಂಬ ಅಭಿಧಾನದಿಂದ ಹಾಡಿದ್ದುಂಟು. ಆಗ್ಗೆ ಈ ಸಹೋದರರು ಹಾಡಲು ಕುಳಿತರೆ ಆ ಹುರುಪಿನ ಗಾಯನ, ಪೈಪೋಟಿ, ಹತ್ತಾರು ಕಡೆ ಕ್ಲಿಷ್ಟವಾದ ಎಡುಪುಗಳು ಇದರಿಂದ ಎಷ್ಟೋಬಾರಿ ಈ ಇಬ್ಬರಕ ಗಾಯನಕ್ಕೆ ಪಕ್ಕವಾದ್ಯಗಾರರೇ ನುಡಿಸಲು ಹಿಂದೇಟು ಹಾಕುತ್ತಿದ್ದುದುಂಟು. ಮುಂದೆ ವೆಂಕಟರಾಮಯ್ಯನವರ ವಿದೇಶ ಪ್ರವಾಸ, ತದನಂತರದ ಅವರ ಅಕಾಲಿಕ ಮರಣದಿಂದಾಗಿ ಈ ಜೋಡಿ ಭಿನ್ನವಾಯಿತು.

ಗಾಯನ ಶೈಲಿ-ಪಲ್ಲವಿ ಪ್ರಾವೀಣ್ಯ ಕೃಷ್ಣಮೂರ್ತಿಗಳ  ಹಾಡಿಕೆ ತುಂಬಾ ಗಂಭೀರವಾದ ಗಮಕಯುಕ್ತವಾದ ಶೈಲಿಯಿಂದ ಕೂಡಿರುವಂಥದ್ದು. ತಾಳಭಾಗದಲ್ಲಿ ಅವರಿಗಿದ್ದ ಖಚಿತತೆ ನಿಖರತೆಗಳು, ಕೃತಿಗಳನ್ನು ಹಾಡುವಾಗ ಅವರು ತೆಗೆದುಕೊಳ್ಳುತ್ತಿದ್ದ ಖಚಿತವಾದ ಕಾಲಪ್ರಮಾಣಗಳು ಕಚೇರಿಗೆ ವಿಶೇಷವಾದ ತೂಕವನ್ನು ನೀಡುತ್ತಿದ್ದವು. ಕಲ್ಪನಾಸ್ವರಗಳಲ್ಲಂತೂ ಅವರಿಗಿದ್ದ ಪಾಂಡಿತ್ಯ ಅಸಾಧಾರಣವಾದದ್ದು. ಸರ್ವಲಘುವಿನ ಪುಂಖಾನು ಪುಂಖವಾದ ಸ್ವರಗಳು, ಕೃತಿಗಳಲ್ಲಿ ವಾದ್ಯಗಾರರು, ಕೇಳುಗರು ಊಹಿಸಿರದಂತಹ ಎಡೆಗಳಲ್ಲಿ ಜಾಣತನದಿಂದ ಕೂಡಿರುವ ಎಡುಪುಗಳು ಗಾಯನಕ್ಕೆ ಮೆರುಗನ್ನು ನೀಡುತ್ತಿದ್ದವು.

ಪಲ್ಲವಿಯ ಗಾಯನದಲ್ಲಂತೂ ಚಿಂತಲಪಲ್ಲಿ ಕಲಾವಿದರ ಶ್ರೇಷ್ಠತೆಯನ್ನು ಇವರೂ ಉಳಿಸಿ ಬೆಳೆಸಿಕೊಂಡುಬಂದರು. ಗಾನಕಲಾ ಪರಿಷತ್ತಿನಲ್ಲಿ ೫ ಕಳೆಗೆಳ ಒಂದು ಪಲ್ಲವಿಯನ್ನು ಅತಿ ಕ್ಲಿಷ್ಟವಾಗಿ ಹಾಡಿದ ರೀತಿಯನ್ನು ಶ್ಲಾಘಿಸುತ್ತ ಡಾ.ಬಿ. ದೇವೇಂದ್ರಪ್ಪನವರು “೩೫ ತಾಳಗಳಲ್ಲೇ ಎಷ್ಟು ಅದ್ಭುತವಾಗಿ ಪಲ್ಲವಿಯನ್ನು ಹಾಡಬಹುದು ಎನ್ನುವ ವಿಷಯ ಬೆರಗುಗೊಳಿಸುವಂಥದ್ದು. ಇಂದು ಈ ಪಲ್ಲವಿಗೆ ತನಿ ನುಡಿಸಲು ಅವಕಾಶ ಬೇಡ, ಏಕೆಂದರೆ ಇವರು ಹಾಡಿದ್ದಕ್ಕೆ ತನಿ ನುಡಿಸುವುದೂ ಒಂದು ಸಾಹಸವಾದೀತು.” ಎಂದಿದ್ದುಂಟು. ಕಚೇರಿಯಲ್ಲಿ ಕೂರುವಾಗಲೂ ಸಿಂಹದಂತೆ ಒಂದು ಚೂರೂ ಬಗ್ಗದೆ ನೇರವಾಗಿ ವೇದಿಕೆಗೆಕ ಕಳೆಯೇರುವಂತೆ ಅವರು ಕೂರುತ್ತಿದ್ದ ನಿಲುವು, ಸದೃಢವಾಗಿದ್ದ ಆ ದೇಹ, ನಗುಮುಖದ ಫಾಲದ ಮೇಲೆ ರಾರಾಜಿಸುತ್ತಿದ್ದ ವಿಭೂತಿ ಕುಂಕುಮಗಳು ದೈವೀಕವಾದ ವಾತಾವರಣವನ್ನು ನೀಡುತ್ತಿದ್ದವು.

ಬಯಸದೆ ಬಂದ ಸನ್ಮಾನಗಳು: ಕೃಷ್ಣಮೂರ್ತಿಗಳು ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ, ಗೋವಾ ಇಲ್ಲೆಲ್ಲಾ ಸಂಚರಿಸಿ ನೀಡಿದ ಕಚೇರಿಗಳಿಗಾಗಿ, ಅವರ ಸಂಗೀತ ಸೇವೆಗಾಗಿ ಸಂದ ಪ್ರಶಸ್ತಿ ಸನ್ಮಾನಗಳು ಹಲವಾರು. ಆದರೆ ಎಂದೂ ಅದರ ಬೆನ್ನ ಹಿಂದೆ ಬೀಳಲಿಲ್ಲ. ತಮಗೆ ನ್ಯಾಯವಾಗಿ ಸಿಗಬೇಕಾದ್ದನ್ನೂ ಸಿಗದಂತೆ ಮಾಡಿದಾಗಲೂ ಕೊರಗಲಿಲ್ಲ. ಬಂದಷ್ಟನ್ನು ಗೌರವವಾಗಿ ಸ್ವೀಕರಿಸಿದರು. ಬರಬೇಕಾದ್ದು ಬರದಿದ್ದಾಗ “ಯಾರಿಗೆ ಕೊಟ್ಟರೂ ಸಂಗೀತಕ್ಕೆ ಕೊಡ್ತಾರೆ, ಹೋಗಲಿ ಬಿಡು, ಬರಬೇಕಾದ್ದು ಬರದಿದ್ದರೂ ಪರವಾಗಿಲ್ಲ. ಬರಬಾರದ್ದು  ಬರಬಾರದು ನೋಡು!” ಎಂದು ಶ್ಲೇಷೆಯಿಂದ ಹೇಳಿಬಿಟ್ಟರು. ಅವರಿಗೆ ಸಂದ ಹಲ ಕೆಲವು ಪ್ರಶಸ್ತಿಗಳಲ್ಲಿಕ ಡಾ.ಬಿ. ದೇವೇಂದ್ರಪ್ಪನವರು ಮಾರುತಿ ಸೇವಾ ಸಮಾಜದಿಂದ ನೀಡಿದ ಗಾನಭೂಷಣ, ಸಿದ್ಧಗಂಗಾ ಸಂಸ್ಥಾನದಿಂದ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ನೀಡಿದ ಗಾಯಕ ಚತುರ, ಶ್ರೀ ತ್ಯಾಗರಾಜ ಗಾನ ಸಭಾದಿಂದ ಕಲಾಭೂಷಣ, ಆದರ್ಶ ಭಾರತೀಯ ಸಾಂಸ್ಕೃತಿಕ ಸಂಸತ್‌ ನೀಡಿದ ಗಾಯನ ಲಯ ಸಾಮ್ರಾಟ್‌ ಹಾಗೆಯೇ ಗಾನವಿದ್ಯಾ ನಿಧಿ, ಗಾನಸುಧಾ ನಿಧಿ, ಗಂಧರ್ವಕಲಾನಿಧಿ, ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ೧೯೯೩, ೯೪ನೇ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿಗಳು ಗಮನಾರ್ಹವಾದವು.

ಪಾಠಾಧಿಕಾರಿ ಗುರು: ಕೃಷ್ಣಮೂರ್ತಿಗಳಿಗೆ ಕೀರ್ತಿ ತಂದ ಇನ್ನೊಂದು ಖ್ಯಾತಿಯೆಂಧರೆ ಅವರ ಸಂಗೀತ ಬೋಧನೆ. ಗುರುಗಳ ಹೆಸರನ್ನು ಶಾಶ್ವತವಾಗಿಸುವಂತಹ ನೂರಾರು ಶಿಷ್ಯರನ್ನು ಸಂಗೀತಲೋಕಕ್ಕೆ ಅವರು ನೀಡಿದರು. ಕಲಾ ಪ್ರಪಂಚದಲ್ಲಿ ಆಗ ಪ್ರಸಿದ್ಧಿಯಲ್ಲಿದ್ದ ದಿ. ಬಂಗಾರು ಪೇಟೆ ಕೃಷ್ಣಮೂರ್ತಿ, ಈಗ ಪ್ರಸಿದ್ಧಿಯಲ್ಲಿರುವ ಆಕಾಶವಾಣಿ ಕಲಾವಿದೆ ಸಿ.ಕೆ. ತಾರಾ. ಖ್ಯಾತ ಹಿನ್ನೆಲೆಗಾಯಕಿ ದಿ. ಬೆಂಗಳೂರು ಲತಾ, ಖ್ಯಾತ ನಟಿ ಬಿ. ಸರೋಜಾದೇವಿ.  ಖ್ಯಾತ ಕಲಾವಿದೆ ಪ್ರಸನ್ನಕುಮಾರಿ ಸತ್ಯಂ, ಲೇಖಕಿ ಶುಭಾಂಗಿ ಆರ್. ಗೊರೂರು, ಪಿಟೀಲು ವಾದಕ ಕೃಷ್ಣಮೂರಿರ್ತ, ರಮೇಶ್‌, ಪಂಚಧಾರಾ ಸಹೋದರಿಯರು, ಕೃಷ್ಣಮೂರ್ತಿಧಯವರ ತಮ್ಮಂದಿರಾದ ಗುಡಿಬಂಡೆ ಸಹೋದರರು, ಅವರ ಮಕ್ಕಳಾದ ಚಿಂತಲಪಲ್ಲಿ ಕೆ. ರಮೇಶ್‌, ಸುಬ್ಬ ಗಂಗಾ, ಅಳಿಯ ಶ್ರೀನಿವಾಸ್‌ ಮುಂತಾದವರು ಸಂಗೀತ ಪ್ರಪಂಚಕ್ಕೆ ಕೃಷ್ಣಮೂರ್ತಿಯವರು ಅರ್ಪಿಸಿರುವ ಕಲಾ ಕುಸುಮಗಳು.

ದಾಸವಾಣಿ: ದಾಸರ ಕೃತಿಗಳನ್ನು, ಹಾಗೂ ರಾಘವೇಂದ್ರ ಸ್ವಾಮಿಗಳ ಮೇಲೆ ದೇವರನಾಮಗಳೂನ್ನು ಹಾಡುವುದರಲ್ಲಿ ಅವರಿಗೆ ಎಲ್ಲಿಲ್ಲದ ತಲ್ಲೀನತೆ-ಭಕ್ತಿ, ಭಾವ. ಅಂದಿನ ಮೈಸೂರು ಆಕಾಶವಾಣಿ, ಬೆಂಗಳೂರು ಆಕಾಶವಾಣಿಗಳಲ್ಲೂ ಇವನ್ನು ಹಾಡಿದ್ದ ಖ್ಯಾತಿ ಅವರದ್ದು. ಇವರು ಹಾಡಿರುವ ದೇವರನಾಮಗಳ ದಾಸವಾಣಿ ಹಾಗೂ ಶುಭದಿನ ಎಂಬ ಹೆಸರಿನ ಧ್ವನಿಸುರುಳಿಗಳನ್ನೂ ಹೊರತರಲಾಗಿದೆ. ದಾಸದ ಇಂದಿನ ದಿನವೆ ಶುಭದಿನವು ರಚನೆಗೆ ನೀಲಾಂಬರಿಯಲ್ಲಿ ಅವರು ನೀಡಿದ ಸ್ವರ ಸಂಯೋಜನೆ, ಕಾನಡದಲ್ಲಿ ಕಣ್ತುಂಬ ನೋಡ ಬನ್ನಿ, ಮೋಹನದಲ್ಲಿ ನೀಡಿದ ಚಿ. ರಾಘವೇಂದ್ರರ ರಚನೆ ಮೋಹಯನ ಮುರಳಿಯ ಹಾಗೆಯೆ ಅವರು ಪ್ರಸಿದ್ಧಿಗೆ ತಂದ ಯಾದವ ನೀ ಬಾ, ಮುಯ್ಯಕ್ಕೆ ಮುಯ್ಯ ತೀರಿತೋ, ರಾಘವೇಂದ್ರ ಪ್ರಭುವೇ ಮುಂತಾದವುಗಳು ಇಂದಿಗೂ ಜನಮನದಲ್ಲಿ ನಿಂತಿದೆ.

ಸುಬ್ರಹ್ಮಣ್ಯನ ಪದತಲದಲ್ಲಿ: ಹಾಡುತ್ತ ಹಾಡುತ್ತಲೇ ಭಗವಂತನನ್ನು ಸೇರಬೇಕೆಂಬ ಅವರ ಆಕಾಂಕ್ಷೆ ಈಡೇರಿದ್ದು ಘಾಟಿಯ ಸುಬ್ರಹ್ಮಣ್ಯದಲ್ಲಿ. ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ದೇವರ ಮುಂದೆ ಹಾಗೆಯೆ ಅಲ್ಲೇ ಸುಬ್ರಹ್ಮಣ್ಯನ ಪದತಲದಲ್ಲಿ ೨೯.೧೨.೧೯೯೬ರಂದು ತಮ್ಮನ್ನು ಸೇರಿಸಿಕೊಂಡ ಕೃಷ್ಣಮೂರ್ತಿಗಳನ್ನು ಚಿಕ್ಕಂದಿನಿಂದಲೂ ಬಲ್ಲ ನನಗೆ ಅವರನ್ನು ನೆನೆದಾಗಲೆಲ್ಲ ಅವರ ನೀಲಾಂಬರಿ ರಾಗದ ರಾಮಚಂಧ್ರ ರಘುನಂದನ ದಾಶರಥೇ ಕೃತಿಯ ನಾದದೊಂದಿಗೇ ಎನಿಸುತ್ತದೆ…. ಕೃಷ್ಣಮೂರ್ತಿ ಕಣ್ಣಮುಂದೆ ನಿಂತಿದಂತಿದೆ…