ಸುಪ್ರಸಿದ್ಧ ಚಿಂತಲಪಲ್ಲಿ ಮನೆತನದಲ್ಲಿ ಪ್ರಖ್ಯಾತ ವೈಣಿಕ ವಿದ್ವಾನ್‌ ಹೆಚ್‌. ಸುಬ್ಬರಾವ್‌ಅವರ ಸುಪುತ್ರರಾಗಿ ೧೮-೨-೧೯೧೮ರಲ್ಲಿ ಕೋಲಾರ ಜಿಲ್ಲೆಯ ಚಿಂತಲಪಲ್ಲಿಯಲ್ಲಿ ಜನಿಸಿದರು. ಇವರ ತಾತ ಹಾಗೂ ತಂದೆ ರಂಗರಾಯರಿಗೆ ಪ್ರಾರಂಭದ ಸಂಗೀತ ಶಿಕ್ಷಣ ನೀಡಿದರು. ನಂತರ ವಿದ್ವಾನ್‌ ಡಿ. ಸುಬ್ಬರಾಮಯ್ಯ, ಚಿಂತನಪಲ್ಲಿ ಶೇಷಗಿರಿರಾವ್‌, ಪಾಲ್ಘಾಟ್‌ ಸೋಮೇಶ್ವರ ಭಾಗವತರಲ್ಲಿ ಗಾಯನವನ್ನೂ, ಎಲ್‌. ರಾಜಾರಾವ್‌ ಮತ್ತು ಶಂಕರ ನಾರಾಯಣ ಶಾಸ್ತ್ರಿಗಳಲ್ಲಿ ವೀಣಾ ವಾದನವನ್ನೂ ಸತತವಾಗಿ ಅಭ್ಯಾಸ ಮಾಡಿದರು.

ಸಂಪ್ರದಾಯ ಶೀಲತೆ, ಸಾಹಿತ್ಯ ಶುದ್ಧಿ, ಭಾವಪೂರ್ಣತೆ, ಲಯಜ್ಞಾನ ಹಾಗೂ ಉತ್ತಮ ಮನೋಧರ್ಮದಿಂದ ಕೂಡಿದ ಇವರ ಕಛೇರಿಗಳು ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲಿಯೂ ಪ್ರಖ್ಯಾತವಾದ ಸಭೆಗಳಲ್ಲಿಯೂ, ಉತ್ಸವಾದಿಗಳಲ್ಲಿಯೂ ಅಸಂಖ್ಯಾತವಾಗಿ ನಡೆದಿವೆ.

ಶಿಕ್ಷಕರಾಗಿಯೂ ಇವರ ಸೇವೆ ಗಣನೀಯ. ಹಲವಾರು ಉತ್ತಮ ವೇದಿಕೆ ವಿದ್ವಾಂಸರುಗಳನ್ನು ಕ್ಷೇತ್ರಕ್ಕೆ ನೀಡಿರುತ್ತಾರೆ. ಇವರ ಸಾಧನೆಗಳನ್ನು ಗುರುತಿಸಿ ತ್ಯಾಗರಾಜ ಗಾನಸಭೆ ‘ಸಂಗೀತ ನಿಧಿ’ಯೆಂದು, ಬೆಂಗಳೂರು ರಾಮೋತ್ಸವ ಸಮಿತಿ ‘ಕಲಾ ಭೂಷಣ’ ಎಂದೂ, ಸಿದ್ಧಾಶ್ರಮ ಸ್ವಾಮಿಗಳು ‘ಸಂಗೀತ ವಿದ್ಯಾಭೂಷಣ’ ಎಂದೂ, ರಾಜ್ಯ ಸಂಗೀತ ನೃತ್ಯ ಅಕಾಡೆಮಿಯು ‘ಕರ್ನಾಟಕ ಕಲಾಶ್ರೀ’ ಎಂದೂ ಗೌರವಿಸಿದೆ.

ಶ್ರೀಯುತರ ನಿಧನದಿಂದಾಗಿ ಐದಾರು ಶತಮಾನಗಳ ಪರಂಪರೆ ಹೊಂದಿರುವ ಚಿಂತಲಪಲ್ಲಿ ವೃಕ್ಷದ ಒಂದು ರೆಂಬೆ ಕಳಚಿದಂತಾಯಿತು.