ಹಲವಾರು ಶತಮಾನಗಳ ಅವಿಚ್ಛಿನ್ನ ಸಂಗೀತ ಪರಂಪರೆಯನ್ನು ಹೊಂದಿರುವ ಚಿಂತಲಪಲ್ಲಿ ಮನೆತನದಲ್ಲಿ ವೆಂಕಟರಾಯರ ಸುಪುತ್ರರಾಗಿ ೧೯೧೬ರಲ್ಲಿ ಜನಿಸಿದವರು ರಾಮಚಂದ್ರರಾಯರು. ಚಿಕ್ಕಪ್ಪ ವೆಂಕಟಾಚಲಯ್ಯನವರಲ್ಲಿ ಬಾಲ ಪಾಠಗಳನ್ನು ಕಲಿತು ತಂದೆಯವರಿಂದಲೇ ಉನ್ನತ ಶಿಕ್ಷಣ ಹೊಂದಿದ ರಾಯರು ಮುಂದೆ ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ತಂಜಾವೂರು ಪೊನ್ನಯ್ಯ ಪಿಳ್ಳೆಯವರಿಂದ ವಿದ್ಯಾ ಗ್ರಹಣ ಮಾಡಿ ವಿಶ್ವವಿದ್ಯಾಲಯದ ಸಂಗೀತ ಪ್ರಶಸ್ತಿ ಪತ್ರವನ್ನು ಪಡೆದರು. ಬೆಂಗಳೂರಿಗೆ ಮರಳಿದ ನಂತರ ಪಾಲ್ಘಾಟ್‌ಸೋಮೇಶ್ವರ ಭಾಗವತರಲ್ಲೂ ವಿದ್ಯಾಭ್ಯಾಸ ಮುಂದುವರೆಸಿ ತಮ್ಮ ಗಾಯನ ಶೈಲಿಯಲ್ಲಿ ಕರ್ನಾಟಕ ತಂಜಾವೂರು ಕೇರಳಗಳ ಮೂರು ಬಾನಿಗಳ ಹದವಾದ ಮಿಳಿತವನ್ನು ರೂಢಿಸಿಕೊಂಡರು.

ಮೈಸೂರು ಮಹಾರಾಜರು ರಾಯರ ಗಾಯನದ ವೈಖರಿಯ ಬಗ್ಗೆ ಅರಿತು ಸನ್ನಿಧಾನದಲ್ಲಿ ಅವರ ಕಛೇರಿಯನ್ನು ಏರ್ಪಡಿಸಿ ಆಲಿಸಿದ್ದೇ ಅಲ್ಲದೆ ರಾಯರನ್ನು  ಅವರ ತಂದೆ ವೆಂಕಟರಾಯರನ್ನೂ ಆಸ್ಥಾನಕ್ಕೆ ಸೇರಿಸಿಕೊಂಡರು. ಅರಮನೆ ಗುರು ಮನೆಗಳಿಂದ ಅವರಿಗೆ ಸಂದ ಗೌರವಗಳಿಗೆ ಲೆಕ್ಕವೇ ಇಲ್ಲ! ಸೋಸಲೆ ವ್ಯಾಸರಾಜ ಮಠಾಧೀಶರಿಂದ ಸ್ವರ್ಣಪದಕ; ಆಸ್ಥಾನ ಸಂಗೀತ ಚೂಡಾಮಣಿ; ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ; ಸಂಗೀತ ಕಲಾಭಿವರ್ಧಿನಿ ಸಭಾಪತಿಯ ಸನ್ಮಾನ; ಸಂಗೀತ ಕಲಾ ರತ್ನ; ಸಂಗೀತ ಸಾಮ್ರಾಟ್‌; ಕಲಾಭೂಷಣ ಇತ್ಯಾದಿ ಹಲವಾರು ಗೌರವ ಸನ್ಮಾನಗಳನ್ನು ಗಳಿಸಿದ ರಾಯರು ಉತ್ತಮ ಗುರುವಾಗಿ ಶಿಷ್ಯರನೇಕರನ್ನು ಸಂಗೀತ ಜಗತ್ತಿಗೆ ನೀಡಿ ೧೯೮೫ರಲ್ಲಿ ಭಗವತಿ ಶಾರದೆಯ ಅಡಿದಾವರೆಗಳನ್ನು ಸೇರಿದರು.