ಸುಮಾರು ೧೯೩೨ನೇ ಇಸವಿ. ಮದ್ರಾಸಿನ ಹಿಂದೂ ಪತ್ರಿಕೆ ಕನ್ನಡ ನೆಲದ ಯುವ ಕಲಾವಿದನ ಬಗ್ಗೆ ಬರೆದಿದೆ. ಚಂಬೈಯವರ ಶಾರೀರ, ಜಿ.ಎನ್‌.ಬಿ. ರವರ ಬಿರ್ಕಾ ಮತ್ತು ಫ್ಯಾಷನ್‌, ಅರಿಯಾಕ್ಕುಡಿಯವರ ವಿದ್ವತ್ತು; ಈ ಮೂರು ಅಂಶಗಳು ಮಿಳಿತವಾದ ಹದವಾದ ಮಿಶ್ರಣ ಈ ಯುವಗಾಯಕನದ್ದು, ಈ ಗಾಯಕನ ಬಾಯಲ್ಲಿ ಸರಸ್ವತಿ ನಲಿದಾಡುತ್ತಿದ್ದಾಳೆ. ಅಂದಿನ ಗಾಯನಕ್ಕೆ ಮೈಸೂರು ಟಿ. ಚೌಡಯ್ಯನವರ ಪಿಟೀಲು, ಫಾಲ್ಗಾಟ್‌ ಮಣಿ ಅಯ್ಯರ್ ರವರ ಮೃದಂಗ, ವಿಲ್ವಾದ್ರಿ ಅಯ್ಯರ್ ರವರ ಘಟ, ದಕ್ಷಿಣಾಮೂರ್ತಿ ಪಿಳ್ಳೆಯವರ ಖಂಜರಿ”[ವಿವರಣೆಗೆ ನೋಡಿ; ‘ಕನ್ನಡ ಪ್ರಭ’ ಎಂ.ಎ. ಜಯರಾಮರಾವ್‌ ೧೪.೭.೧೯೮೫].

ಇಂತಹದೊಂದು ಪ್ರಸಿದ್ಧ ಪತ್ರಿಕೆಯ ಪ್ರಶಂಸೆಯನ್ನು ಪಡೆದ ತನ್ನ ನೆಲದ ಯುವ ಗಾಯಕನ ಬಗ್ಗೆ ಮೈಸೂರು ರಾಜ್ಯ ಅಚ್ಚರಿಯಿಂದ ಕಣ್ಣರಳಿಸಿತು. ಅಂದೇ ಅಂದಿನ ಪ್ರಭುಗಳಾಗಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು ದೂತರನ್ನಟ್ಟಿ ಕರೆಸಿ ಆ ಯುವಕನ ಸಂಗೀತವನ್ನು ಕೇಳಿ ಆನಂದಿಸಿ ಆಸ್ಥಾನಕ್ಕೆ ತೆಗೆದುಕೊಂಡರು. ಇಂತಹ ಅಪರೂಪದ ಸಂದರ್ಭವನ್ನು ಮೈಸೂರ ಆಸ್ಥಾನದಲ್ಲಿ ಸೃಷ್ಟಿಸಿದ ಕಲಾವಿದರು ಚಿಂತಲಪಲ್ಲಿ ರಾಮಚಂದ್ರರಾಯರು.

ಪರಂಪರೆಯ ಕುಡಿ: ಎಂಟು ಶತಮಾನಗಳ ಅವ್ಯಾಹತ ಸಂಗೀತ ವಾಹಿನಿಯನ್ನುಳ್ಳ ಚಿಂತಲಪಲ್ಲಿ ಪರಂಪರೆಯಲ್ಲಿ, ಆ ಕಲಾದೇಗುಲದ ಆಧಾರಸ್ತಂಭವಾಗಿ ಕಾಲ ಕಾಲಕ್ಕೆ ಸಂಗೀತರಾಯ ತಿಮ್ಮಣ್ಣ, ಗವಿರಂಗಪ್ಪನವರು ಹೊರಹೊಮ್ಮಿದರೆ ಆ ದೇಗುಲದ ಕಲಶ ಪ್ರಾಯವಾಗಿ ಹೊರಹೊಮ್ಮಿದವರು ಚಿಂತಲಪಲ್ಲಿ ವೆಂಕಟರಾಯರು. ಆ ಕಲಾ ಕಲಶದ ಮೇಲಿನ ಅಪೂರ್ವ ಚಿಂತಾಮಣಿಯಂತೆ ಮೆರೆದವರು ಚಿಂತಲಪಲ್ಲಿ ರಾಮಚಂದ್ರರಾಯರು.

ಅಂದಿನ ಮಹಾವಿದ್ವಾಂಸರ ಪಂಕ್ತಿಯಲ್ಲಿದ್ದ ಚಿಂತಲಪಲ್ಲಿ ವೆಂಕಟರಾಯರು ಹಾಗೂ ರಾಮಕ್ಕನವರ ದ್ವಿತೀಯ ಪುತ್ರರಾಗಿ ೧೪,೧೧.೧೯೧೬ರಲ್ಲಿ ಇವರ ಜನನ. ವೆಂಕಟರಾಯರಿಗೆ ವೆಂಕಟಲಕ್ಷಮ್ಮನೆಂಬ ಮಗಳು, ತದನಂತರ ಸುಬ್ಬರಾಯರೆಂಬ ಜೇಷ್ಠ ಪುತ್ರರಿದ್ದು ನಂತರ ಜನಿಸಿದ ಮಗನಿಗೆ ತಮ್ಮ ಆರಾಧ್ಯ ದೈವ ಆಂಜನೇಯನ ಪ್ರಭು ಶ್ರೀರಾಮಚಂದ್ರನ ಹೆಸರನ್ನೇ ಇಟ್ಟರು. ಹೆಸರೂ ಅನ್ವರ್ಥವಾಗುವಂತೆ ಪಿತೃವಾಕ್ಯವನ್ನು ಪಿತನ ಕೀರ್ತಿಯನ್ನು ರಾಮಚಂದ್ರರಾಯರು ಹಾಗೆಯೇ ಬೆಳಗಿದರು ಸಹಾ. ರಾಮಚಂದ್ರರಾಯರ ನಂತರ ವೆಂಕಟರಾಯರಿಗೆ ಅಚ್ಚಮ್ಮ ಹಾಗೂ ಸೀತಮ್ಮನೆಂಬ ಹೆಣ್ಣು ಮಕ್ಕಳೂ ಇದ್ದರು. ಸಂಸ್ಕಾರದಿಂದ ಕುಟುಂಬದಲ್ಲಿ  ಎಲ್ಲರೂ ಸಂಗೀತಗಾರರಾಗಿದ್ದುದರಿಂದ ವೆಂಕಟರಾಯರ ಎಲ್ಲ ಮಕ್ಕಳೂ ಸಂಗೀತವನ್ನು ಚೆನ್ನಾಗಿಯೇ ಹಾಡುತ್ತಿದ್ದರು.

ಕದಲೇವಾಡುಗಾಡೇ ರಾಮುಡು: ವೆಂಕಟರಾಯರು ಶ್ಯಾನುಭೋಗ ವಂಶಸ್ಥರು. ತಮ್ಮ ನಂತರ ಮಕ್ಕಳಲ್ಲಿ ಶ್ಯಾನುಭೋಗಿಕೆಯೂ ಇರಲೆಂಬ ಆಶಯ. ದೊಡ್ಡ ಮಗ ಸುಬ್ಬರಾಯನೇನೋ ತಕ್ಕ ಮಟ್ಟಿಗೆ ಶಾಲೆಗೆ ಹೋಗತೊಡಗಿದ್ದ. ಆದರೆ ರಾಮಚಂದ್ರ ಮಾತ್ರ ಶಾಲೆಗೆ ಹೋದರೂ ಸಂಗೀತ, ಮನೆಯಲ್ಲಿದ್ದರೂ ಸಂಗೀತವೇ. ಒಳ್ಳೆಯ ಶಾರೀರ. ತ್ಯಾಗರಾಜರ ನಾರಾಯಣ ಗೌಳ ರಾಗದ ‘ಕಲೇವಾಡುಗಾಡೇ’ ಕೃತಿಯನ್ನು ಸೊಗಸಾಗಿ ಹಾಡುತ್ತಿದ್ದ. ಆಗ್ಗೆ ಮನೆಗೆ ನಾರಾಯಣ ಸ್ವಾಮಿ ಅಪ್ಪ, ಭೈರವಿ ಕೆಂಪೇಗೌಡ ಮುಂತಾದ ಮಹಾವಿದ್ವಾಂಸರುಗಳು ಚಿಂತಲಪಲ್ಲಿಗೆ ಬರುತ್ತಿದ್ದರು. ಅವರ ಮುಂದೆ ಮಗನನ್ನು ಹಾಡಿಸಲೋಸುಗ ವೆಂಕಟರಾಯರು ಮಗನಿಗೆ ನಾರಾಯಣಗೌಳದ ಕೃತಿಯನ್ನು ಹಾಡೆಂದರೆ ‘ನಾಲ್ಕಾಣೇ ಕೊಟ್ಟ ಹೊರತೂ ಹಾಡೆ’ ಎಂದು ಬಿಟ್ಟ. ಕೆಂಪೇಗೌಡರು “ಓಹೋ ಈಗಿನಿಂದ ಕಚೇರಿ ಸಂಪಾದನೆಯೋ? ಸಂಗೀತದಲ್ಲಿ ಒಳ್ಳೆಯ ಸಿದ್ಧಿ ಸಂಪಾದನೆ ಎರಡೂ ನಿನಗಾಗುತ್ತದೆ. ಹಿಡಿ ಈ ಕಾಸನ್ನು” ಎಂದು ತಮ್ಮಲ್ಲಿದ್ದ ಕಾಸನ್ನು ಕೊಟ್ಟು ‘ಈ ರಾಮ ಕಾಸು ಕೊಡುವವರೆಗೆ ಕದಲುವುದಿಲ್ಲ’ ಎಂದು ಅದೇ ಕೃತಿಯ ಸಾಲನ್ನು  ಹೇಳಿ, ಹಾಡಿಸಿ, ಕೇಳಿ ಸಂತೋಷಪಟ್ಟರು. ಅದೇ ವೇಳೆಗೆ ಭೈರಾಗಿಗಳಂತೆ ತಂಬೂರಿಯನ್ನು ಧರಿಸಿ ಊರು ಊರನ್ನು ಸುತ್ತುತ್ತ ಸಂಗೀತ ಹಾಡುತ್ತಲಿದ್ದ ಅವಧೂತಚರ್ಯೆಯ ಕರಪುಶೇಷಯ್ಯರೆಂಬ ಯೋಗಿಗಳು ವೆಂಕಟರಾಯರಿಗೆ ಆಪ್ತರಾಗಿದ್ದು ಅಲ್ಲಿಗೆ ಯೋಗಾಯೋಗದಂತೆ ಬಂದರು. ಬಂದವರೇ ‘ವೆಂಕಟರಾಯಪ್ಪ, ನಿನ್ನ ಮಗನಿಗೆ ಭವಿಷ್ಯ ಸಂಗೀತದಲ್ಲೇ ಇದೆ. ಮುಂದೆ ನೀವಿಬ್ಬರೂ ಸಮಾನಸ್ಕಂದರಾಗಿ ಹೋರಾಟ ಮಾಡಬೇಕಾಗಿ ಬರುವಷ್ಟು ಯೋಗ್ಯತೆ ಈ ಹುಡುಗನಿಗಿದೆ. ಆದ್ದರಿಂದ ಮಗನ ಅಭ್ಯುದಯವನ್ನು ಗಮನಿಸಬೇಕಾದ್ದು ತಂದೆಯ ಕರ್ತವ್ಯವಾದ್ದರಿಂದ ಇನ್ನು ನೀನು ಸಂಗೀತ ಕಚೇರಿ ಹೆಚ್ಚಾಗಿ ಕೊಡುವುದನ್ನು ನಿಲ್ಲಿಸು. ಕೇವಲ ಅರಮನೆ, ಗುರಮನೆ, ವಿಶ್ವಾಸಿಗಳಿಗೆ ಮಾತ್ರ ನಿನ್ನ ಸಂಗೀತ ಮೀಸಲಾಗಿರಲಿ. ಈ ತ್ಯಾಗಕ್ಕಾಗಿ ನನಗೊಂದು ತಂಬೂರಿ ದಾನ ಮಾಡಿ ಬಿಡು ಎಂದರು. ಅದಕ್ಕೆ ಒಪ್ಪಿದ ವೆಂಕಟರಾಯರು ತಂಬೂರಿದಾನ ಮಾಡಿ ಅಂದಿನಿಂದ ತಮ್ಮ ಸಂಗೀತವನ್ನು ತುಂಬಾ ಬೇಡಿದರೆ ಮಾತ್ರ ಕಚೇರಿ, ಇಲ್ಲದಿದ್ದರೆ ದೇವರ ಮುಂದೆ ಎಂಬ ಭಾವವನ್ನು ತಳೆದರು.

ವೆಂಕಟರಾಯರ ತಮ್ಮ ವೆಂಕಟಾಚಲಯ್ಯ ಎಂಬುವವರಿದ್ದರು. ಅವರಿಗೆ ಆಗ್ಗೆ ಮಕ್ಕಳಿಲ್ಲದ್ದರಿಂದ ಅಣ್ಣನ ಮಗ ರಾಮಚಂದ್ರರಾಯರನ್ನೇ ಮಗನಂತೆ ಸಾಕಿ ಬಾಲಪಾಠಗಳನ್ನು ಹೇಳಿಕೊಟ್ಟರು. ತಂದೆಯ ಬಳಿ ಪ್ರೌಢ ಶಿಕ್ಷಣ ಪಡೆದು ಎಂಟನೆಯ ವಯಸ್ಸಿನಲ್ಲೇ ಮಲ್ಲೇಶ್ವರದ ಗಣಪತಿಯ ದೇವಾಸ್ಥಾನದಲ್ಲಿ ರಾಮಚಂದ್ರರಾಯರು ಮೊದಲ ಕಚೇರಿ ನಡೆಸಿದರು. ತನ್ನ ಮಗನ ಭವಿಷ್ಯ ನೆನೆದು ವೆಂಕಟರಾಯರು ಹಿಗ್ಗಿದರು.

ಆಂಧ್ರ, ತಮಿಳುನಾಡು, ಮಲಯಾಳ ಬಾಣಿಗಳ ಸಂಗಮ: ವೆಂಕಟರಾಯರು ಆಗ್ಗೆ ಆಂಧ್ರದಲ್ಲಿ ಹೆಸರುವಾಸಿಯಾಗಿದ್ದು ಅಲ್ಲಿನ ಸಂಗೀತದ ವಿಶೇಷಗಳನ್ನೆಲ್ಲಾ ಅರಿತಿದ್ದು ತಮ್ಮ ಮಗನಿಗೆ ಧಾರೆಯೆರೆದಿದ್ದರು. ರಾಮಚಂದ್ರರಾಯರು ಆಗ್ಗೆ ಸಂಗೀತದಲ್ಲಿ ಅಭಿವೃದ್ಧಿ ಹೊಂದುತ್ತಿರುವುದನ್ನು ಕಂಡ ವೆಂಕಟರಾಯರ ಹಿತೈಷಿಗಳೂ ಖ್ಯಾತ ನ್ಯಾಯವಾದಿಗಳೂ ಆಗಿದ್ದ ಜಸ್ಟಿಸ್‌ ಸೋಮನಾಥ ಅಯ್ಯರ್, ನಾಗೇಶ ಅಯ್ಯರ್, ಸಾಹಿತಿ ಕೆ.ವಿ. ಅಯ್ಯರ್, ಪುಟ್ಟೂರಾಯರು (ಕೆ.ಕೆ. ಮೂರ್ತಿಗಳ ತಂದೆ) ಮೊದಲಾದವರು ರಾಮಚಂದ್ರರಾಯರನ್ನು ಮದ್ರಾಸಿನಲ್ಲಿ ಸ್ವಲ್ಪ ಕಾಲ ಅಭ್ಯಸಿಸಿ ಅಲ್ಲಿನ ಜನರಿಂದ ಶಹಭಾಸ್‌ಗಿರಿ ಗಿಟ್ಟಿಸಿದಲ್ಲಿ ಮಾತ್ರವೇ ಕನ್ನಡ ನೆಲ ಮನ್ನಣೆ ನೀಡುತ್ತದೆ. ಆದ್ದರಿಂದ ಅಲ್ಲಿಗೆ ತೆರಳಲು ಸೂಚಿಸಿದರು. ಈ ಮಾತು ರಾಮಚಂದ್ರರಾಯರ ಜೀವನದಲ್ಲಿಕ ನಿಜವೂ ಆಯಿತು. ಅಷ್ಟೇ ಅಲ್ಲದೆ ವೆಂಕಟರಾಯರಿಗೆ ತಮ್ಮ ಶೈಲಿಯ ಜೊತೆಗೆ ಮದ್ರಾಸಿನ, ಕೇರಳದ ಮಲಯಾಳ ಶೈಲಿಯ ಸಂಗೀತದ ಅಂಶಗಳನ್ನೂ ಮಗನಿಗೆ ತಿಳಿಸಿಕೊಟ್ಟು ಒಂದು ಹೊಸ ರೂಪವನ್ನು ಆ ಸಂಗೀತಕ್ಕೆ ಕೊಡುವ ಹಂಬಲ. ಹೀಗಾಗಿ ಫಾಲ್ಘಾಟ್‌ ಶೈಲಿಯ ಒಳ್ಳೆಯ ಗುರುಗಳಾಗಿದ್ದ ಫಾಲ್ಗಾಟ್‌ ಸೋಮೇಶ್ವರ ಭಾಗವತರಲ್ಲಿ ಹಾಗೂ ಮದ್ರಾಸಿನಲ್ಲಿ ಪೊನ್ನಯ್ಯ ಪಿಳ್ಳೆಯವರ ಹತ್ತಿರ ಶಿಕ್ಷಣ ಕೊಡಿಸಲು ಯೋಚಿಸಿ ಮಗನನ್ನು ಚಿದಂಬರದ ಅಣ್ಣಾಮಲೈ ವಿಶ್ವವಿದ್ಯಾನಿಲಯಕ್ಕೆ ಕರೆದುಕೊಂಡು ಹೋದರು.

ಅಣ್ಣಾಮಲೈ ವಿ.ವಿ.ಯಲ್ಲಿ ಸಂಗೀತ ಪ್ರಾಧ್ಯಪಕರಾಗಿದ್ದ ತಂಜಾವೂರು ಪೊನ್ನಯ್ಯ ಪಿಳ್ಳೈ ವೆಂಕಟರಾಯರನ್ನು ಬರಮಾಡಿಕೊಂಡು ರಾಮಚಂದ್ರರಾಯರ ಸಂಗಿತವನ್ನು ಕೇಳಿ ಇವನಿಗೆ ನಾನು ಏನು ಹೇಳಿಕೊಡುವುದಿದೆ? ಇವನಲ್ಲಿ ನಾನೇ ಕಲಿಯುವುದು ಬಹಳಷ್ಟಿದೆ! ಎಂದರಂತೆ. ಆದರೂ ವೆಂಕಟರಾಯರ ಆಗ್ರಹದ ಮೇರೆಗೆ ಒಪ್ಪಿಕೊಂಡ ಪೊನ್ನಯ್ಯನವರು ರಾಮಚಂದ್ರರಾಯರಿಗೆ ತಮ್ಮ ಮನೆಯ ಬಳಿ ಕೋಣೆಯೊಂದನ್ನು ಬಾಡಿಗೆಗೆ ಕೊಳ್ಳಲು ಹೇಳಿದರಂತೆ. ಬೆಳಿಗ್ಗೆ ತಾವು ಸಾಧನೆ ಮಾಡುವಗ ರಾಮಚಂದ್ರರಾಯರನ್ನೂ ಕರೆಸಿಕೊಂಡು ಚರ್ಚೆ ಮಾಡುತ್ತಾ ತಮ್ಮ ಅನೇಕ ರಚನೆಗಳನ್ನೂ ರಾಯರಿಗೆ ಪಾಠ ಹೇಳಿ ವಿಶ್ವ ವಿದ್ಯಾನಿಲಯದ ಸಂಗೀತದ ಕೋರ್ಸಿನ ಸರ್ಟಿಫಿಕೆಟ್‌ ನೀಡಿ ಆಶೀರ್ವಾದಿಸಿದರಂತೆ. ಅಲ್ಲಿಂದ ಮತ್ತೆ ತಾಯ್ನಾಡಿಗೆ ಮರಳಿದ ರಾಯರು ಫಾಲ್ಗಾಟ್‌ ಸೋಮೇಶ್ವರ ಭಾಗವತರಲ್ಲಿ ವಿದ್ಯಾಭ್ಯಾಸ ಮುಂದುವರೆಸಿದರು. ಭಾಗವತರು ಮಲೆಯಾಳ ರಾಜ್ಯದಿಂದ ಬೆಂಗಳೂರಿಗೆ ಬಂದು ನೆಲೆಸಿದ್ದು ಅನೇಕ ಶಿಷ್ಯರುಗಳನ್ನು ನೀಡಿದ್ದಾರೆ. (ಭಾಗವತರು ವಿದ್ವಾನ್‌ ಟಿ.ಎ.ಎಸ್‌ ಮಣಿಯವರ ತಂದೆ ಅರುಣಾಚಲ ಭಾಗವತರ ಅಣ್ಣ) ಭಾಗವತರಲ್ಲಿ ಅನೇಕ ವರ್ಷದ ಅಭ್ಯಾಸದ ಜೊತೆಗೆ ಆಗ್ಗೆ ತಮಗಿದ್ದ ಪ್ರತಿಭೆ ಪಾಂಡಿತ್ಯ, ಕಂಚು ಶಾರೀರದಿಂದಾಗಿ ದಕ್ಷಿಣಾದ್ಯಂತ ಕಚೇರಿಗಳನ್ನು ನೀಡತೊಡಗಿದರು. ರಾಮಚಂದ್ರರಾವ್‌ ಟಿ. ಚೌಡಯ್ಯ, ಎಚ್‌. ಪುಟ್ಟಾಚಾರ್, ಇಲ್ಲವೇ ರಾಮಚಂದ್ರರಾವ್‌ ಆರ್.ಆರ್. ಕೇಶವಮೂರ್ತಿ, ಅಯ್ಯಾಮಣಿ ಅಯ್ಯರ್- ಈ ತಂಡವು ಸಂಗೀತ ದಕ್ಷಿಣ ದೇಶದಲ್ಲಿ ಮನೆಮಾತಾಯಿತು.

ಮೈಸೂರು ಅರಸರ ಕರೆ: ಆಗ್ಗೆ ರಾಮಚಂದ್ರರಾಯರ ಗಾಯನ ವೈಖರಿಯನ್ನು ಬಹುವಾಗಿ ಮೆಚ್ಚಿಕೊಂಡಿದ್ದ ಟಿ. ಚೌಡಯ್ಯನವರು ತಮ್ಮೊಂದಿಗೆ ರಾಯರನ್ನು ಮದ್ರಾಸಿಗೆ ಕರೆದುಕೊಂಡು ಹೋದರು. ಅಲ್ಲೆಲ್ಲ ರಾಯರ ಕಚೇರಿ ನಡೆಯಿತು. ಅಲ್ಲಿನ ಕಚೇರಿಯೊಂದರಲ್ಲಿ ರಾಯರು ಹಾಡಿದ ಅಸಾವೇರಿ ರಾಗ ಹಾಗೂ ರಾರಾ ಮಾಯಿಂಟಿದಾಕಾ ಕೃತಿಯನ್ನು ಹಿಂದೂ, ಪತ್ರಿಕೆಯಲ್ಲಿ ವಿಶೇಷವಾಗಿ ಮೇಲೆ ಪ್ರವೇಶಿಕೆಯಲ್ಲಿ ಹೇಳಿದಂತೆ ವರ್ಣಿಸಲಾಗಿತ್ತು. ಆಗಿನ ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ಮದ್ರಾಸಿನಲ್ಲಲಿ ನಡೆಯುವ ಸಂಗೀತಗಳ ವಿಮರ್ಶೆಯನ್ನೆಲ್ಲಾ ಹಿಂದೂ ಪತ್ರಿಕೆಯಲ್ಲಿ ಓದುತ್ತಿದ್ದರು. ಅದರಲ್ಲಿ ತಮ್ಮ ರಾಜ್ಯದ ಯುವ ಕಲಾವಿದನ್ನು ಹೀಗೆ ಹೊಗಳಿದ್ದನ್ನು ಕಂಡು ಆಶ್ಚರ್ಯಪಟ್ಟು, ಇದುವರೆಗೆ ಈತನ ಬಗ್ಗೆ ನನಗೇಕೆಕ ಗಮನ ಬರಲಿಲ್ಲ? ಎಂದು ಕೊಂಡು ಇನ್ನು ೨೪ ಗಂಟೆಗಳ ಒಳಗಾಗಿ, ಆ ಬಾಲಕಲನ ಸಂಗೀತವನ್ನು ತಾವು ಕೇಳಬೇಕೆಂದು ಆಜ್ಞಾಪಿಸಿ ದೂತರನ್ನಟ್ಟಿದರು . ಆ ವೇಳೆಗೆ ಮದರಾಸಿನ ಕಚೇರಿಗಳನ್ನು ಮುಗಿಸಿ ರಾಮಚಂದ್ರರಾಯರು ಕಲ್ಲಿಕೋಟೆಗೆ ಹೋಗಿದ್ದರು. ದೂತರು ಬರಿಗೈಯಲ್ಲಿ ಬಂದರು . ಕೊನೆಗೆ ಕಲ್ಲಿಕೋಟೆಯ ಸಭೆಯಲ್ಲಿ ರಾಯರಿಗೆ ರಾಜಮಾಣಿಕ್ಯಂ ಪಿಳ್ಳೆಯವರ ವಾದ್ಯವಿರುವುದನ್ನು ಪತ್ತೆ ಹಚ್ಚಿದ ಮುತ್ತಯ್ಯ ಭಾಗವತರು ಅಂತೂ ಇಂತೂ ಶ್ರಮಿಸಿ ಅವರ ಜಾಡನ್ನು ಪತ್ತೆ ಮಾಡಿ ಕರೆಸಿದರು.

ನ ಭೂತೋ ನ ಭವಿಷ್ಯತಿ: ಮೈಸೂರು ಅರಸರು ಸಂಗೀತ ಕೇಳುತ್ತಿದ್ದ ಪರಿಯೆಂದರೆ, ಕಾಲುಗಂಟೆಗೇ ಅವರು ಪರಾಕು ಆದರೆ (ಎದ್ದು ಬಿಟ್ಟರೆ) ಸಂಗೀತ ಪ್ರಯೋಜನವಿಲ್ಲ; ಅರ್ಧಗಂಟೆ ಕೇಳಿದರೆ ಸುಮಾರಾದ ಸಂಗೀತ; ಮುಕ್ಕಾಲು ಗಂಠೆ ಕೇಳಿದರೆ ಆ ಸಂಗೀತ ಬಹು ಉತ್ತಮ ಸಂಗೀತ; ಒಂದು ಗಂಟೆ ಕಚೇರಿಕ ಕೇಳಿದ್ದಂತೂ ಒಂದಿಬ್ಬರು ಮೂವರದ್ದು ಮಾತ್ರ ; ಆದರೆ ರಾಮಚಂದ್ರರಾಯರ ಕಚೇರಿಯಂತೂ ಮೈಸೂರು ಸಂಸ್ಥಾನದಲ್ಲೇ ದೊಡ್ಡ ದಾಖಲೆ ಸೃಷ್ಟಿಸಿಬಿಟ್ಟಿತು. ಸಂಗೀತೋಪಾಸಕರಾದ ಪ್ರಭುಗಳು ತಮ್ಮ ಖಾಸಗಿ ದಿವಾನ್‌ಖಾನೆಯಲ್ಲಿಯೇ ರಾಯರ ಕಚೇರಿಯನ್ನೇರ್ಪಡಿಸಿ ಹೊರಗೆ ಧ್ವನಿವರ್ಧಕ ಹಾಕಿ ಜನರೆಲ್ಲ ಕೇಳುವಂತೆ ಮಾಡಿದರು. ಅಂದು ರಾಮಚಂದ್ರರಾಯರ ಕಚೇರಿಯನ್ನು ಪ್ರಭುಗಳು ಒಂದೂ ಮುಕ್ಕಾಲು ಗಂಟೆ ಕೇಳಿ ಆಸ್ಥಾನಿಕರನ್ನೆಲ್ಲ ಆಶ್ಚರ್ಯಕ್ಕೆ ಒಳಪಡಿಸಿದರು. ಪ್ರಭುಗಳು ಇಷ್ಟು ಹೊತ್ತು ಕಚೇರಿ ಕೇಳಿದ ದಾಖಲೆ ಹಿಂದೆ ಇಲ್ಲವಾಗಿತ್ತು; ಮುಂದೆಯೂ ಯಾರದ್ದು ಆಗಲಿಲ್ಲ; ಆ ಸಂಗೀತದ ನಂತರ “ಮಗೂ! ನೀನು ೧೬ ವರ್ಷದ ಹುಡುಗ, ಆದರೂ ಇಂದಿನಿಂದ ಆಸ್ಥಾನ ವಿದ್ವಾಂಸನಪ್ಪ ನೀನು, ನಾವು ಕರೆದಾಗೆಲ್ಲ ಬರಬೇಕು” ಎಂದು ಹೇಳಿ ಪೂರ್ವೋತ್ತರಗಳನ್ನು ವಿಚಾರಿಸಿ ವೆಂಕಟರಾಯರನ್ನೂ ಕರೆಸಿ ಅವರ ಸಂಗೀತವನ್ನೂ ಕೇಳಿ ಇಬ್ಬರನ್ನೂ ಆಸ್ಥಾನಕ್ಕೆ ತೆಗೆದುಕೊಂಡರು. ತಂದೆಗಿಂತ ಈ ವಿಷಯದಲ್ಲಿ ಮಗ ಮುಂದಾದ! ತಂದೆ ಮಕ್ಕಳಿಬ್ಬರ ಶೈಲಿಯೂ ವಿಭಿನ್ನವಾಗಿದ್ದುದನ್ನೇ ಗಮನಿಸಿದ ಪ್ರಭುಗಳು ಬಿರ್ಕಾ ತುಂಬಿದ ಹುರುಪಿನ ಶೈಲಿಯ ಇಕಂಚು ಶಾರೀರದ ರಾಮಚಂದ್ರರಾಯರ, ಹಾಗೆಯೇ ಗಜಗಾಂಭೀರ್ಯದ ವೆಂಕಟರಾಯರಿಬ್ಬರ ಶೈಲಿಗೆ ಮಾರು ಹೋಗಿ ಇಬ್ಬರದ್ದೂ ಒಂದು ಯುಗಳ ಗಾಯನವನ್ನು ಏರ್ಪಡಿಸಿ ತಂದೆ ಮಕ್ಕಳಿಬ್ಬರೂ ಪೈಪೋಟಿಯಿಂದ ಹಾಡುವುದನ್ನು ಕೇಳಿ ಸಂತಸಪಟ್ಟರು.

‘ಶ್ರೀ ರಾಘವಂ’ ಅಲೆ: ೧೯೪೭-೪೮ರಲ್ಲಿ ಜಿ.ಎನ್‌.ಬಿ. ಉಚ್ಛ್ರಾಯಸ್ಥಿತಿಯಲ್ಲಿದ್ದ ಕಾಲ. ಅವರ ಕಲ್ಯಾಣಿರಾಗದ ವಾಸುದೇವಯನಿ ರೆಕಾರ್ಡಿಗೆ ಬಹು ಬೇಡಿಕೆ. ಇಂತಹ ಸಮಯದಲ್ಲಿ ಕೊಲಂಬಿಯಾ ಗ್ರಾಮಫೋನ್‌ ಕಂಪೆನಿ ರಾಂಚಂದ್ರರಾಯರ ಕೆಲವು ಧ್ವನಿಮುದ್ರಿಕೆಗಳನ್ನು ಹೊರತಂದಿತು. ಓರಜೂಪು (ಕನ್ನಡ ಗೌಳ), ಶಿವೇ ಪಾಹಿಮಾಂ (ಕಲ್ಯಾಣಿ), ಸಾರಸದಳ ನಯನ (ಬಿಲಹರಿ), ಮುಟ್ಟಬೇಡ ಮುಟ್ಟಬೇಡ (ಧನ್ಯಾಸಿ) ಈ ವರೆಕು (ಶಂಕರಾಭರಣ), ಶ್ರೀರಾಘವಂ ಶ್ಲೋಕ (ರಾಗಮಾಲಿಕೆ)ಗಳನ್ನು ಮುದ್ರಿಸಿದ್‌ಆಗ ಅದಕ್ಕೆ ಬಹುಬೇಡಿಕೆ. ಅದಕ್ಕೆ ಟಿ. ಚೌಡಯ್ಯ, ಫಾಲ್ಘಾಟ್‌ ಮಣಿ ಅಯ್ಯರ್, ವಿಲ್ವಾದ್ರಿ ಅಯ್ಯರ್ ರ ಪಕ್ಕವಾದ್ಯ, ಅದರಲ್ಲೂ ಶ್ರೀರಾಘವಂ ಮುದ್ರಿಕೆಯಲ್ಲಿ ರಾಯರು ಹಾಡಿದ ಅಪಾರಗವಾದ ಬಿರ್ಕಾಗಳನ್ನು ಕೇಳಿ ನಾಗಸ್ವರದ ರಾಜರತ್ನಂ ಪಿಳ್ಳೈ ನಾನು ನುಡಿಸಿದಂತೆ ಈ ಹುಡುಗ ಹಾಡುತ್ತಾನೆಂದು ನೀಡಿದ ಶಹಭಾಷ್‌ಗಿರಿಯು ಪ್ರಚಾರವಾಗಿ ರಾಯರ ಕಚೇರಿಗೆ ಬಹುಬೇಡಿಕೆಗಳು ಬಂದವು.

ಮದ್ರಾಸಿನ ಅತಿ ಶ್ರೀಮಂತರಾದ ಚೆಟ್ಟಿಯಾರರೊಬ್ಬರ ಮನೆಯಲ್ಲಿ ಮದುವೆ ಸಂದರ್ಭ. ವರಪೂಜೆಯಂದು ರಾಮಚಂದ್ರರಾಯರದು, ಮದುವೆಯಂದು ಜಿ.ಎನ್‌.ಬಿ.,ಮಾರನೇ ದಿನ ಎಂ.ಎಸ್‌, ಸುಬ್ಬುಲಕ್ಷ್ಮಿಯವರ ಕಚೇರಿ ಏರ್ಪಾಟಾಗಿತ್ತು. ಅಂದು ರಾಮಚಂದ್ರರಾಯರು ಕಲ್ಯಾಣಿ ರಾಗವನ್ನು ಅದ್ಭುತವಾಗಿ ವಿಸ್ತರಿಸಿ ಏತಾವುನ್ನಾರ ಕೃತಿಯನ್ನು ಹಾಡಿದರಂತೆ. ಮಾರನೆಯ ದಿನ ಜಿ.ಎನ್‌.ಬಿ. ಸಹಾ ಕಲ್ಯಾಣಿಯನ್ನೇ ಹಾಡಲು ಪ್ರಾರಂಭಿಸಿದಾಗ ಮದುವೆಯ ಛತ್ರದ ಬಾಗಿಲಿನಲ್ಲಿದ್ದ ವ್ಯವಸ್ಥಾಪಕರು ಹಾಗೂ ಕೆಲವು ಶ್ರೋತೃಗಳು ಬಂದು ಜಿ.ಎನ್‌.ಬಿ.ಯವರಿಗೆ ಕೈಜೋಡಿಸಿ, ರಾಮಚಂದ್ರರಾಯರು ನೆನ್ನೆ ಹಾಡಿದ ಕಲ್ಯಾಣಿ, ಇನ್ನೂ ಕಿವಿಯಲ್ಲಿ ಮನಸ್ಸಿನಲ್ಲಿ ವಿಹರಿಸುತ್ತಿದೆ. ದಯಮಾಡಿ ಅದನ್ನು ಅಳಿಸುವ ಪ್ರಯತ್ನ ಮಾಡದಿರಿ ಎಂದರಂತೆ ಮತ್ತು ಜಿ.ಎನ್‌.ಬಿ. ಯವರ ಕಚೇರಿಯನ್ನೂ ಕೇಳಿ ಹೋಗಲು ಕುಳಿತಿದ್ದ ರಾಮಚಂದ್ರರಾಯರನ್ನು ತೋರಿಸಿದರಂತೆ. ಜಿ.ಎನ್‌.ಬಿ. ಆಗ ‘ಈ ಹುಡುಗ ಹಾಗೆ ಹಾಡುತ್ತಾನೆಯೇ? ಕೇಳಬೇಕೆಂದು ಹೇಳುತ್ತಾ ಬೇರೆ ರಾಗವನ್ನು ಹಾಡಿ ಮುಗಿಸಿ ಅಂದಿನ ರಾತ್ರಿಯೇ ರಾಯರ ‘ಶ್ರೀ ರಾಘವಂ’ ರೆಕಾರ್ಡನ್ನು ಕೇಳಿ, ಅದರಲ್ಲಿನ ಬಿರ್ಕಾಗಳನ್ನು ಆಲಿಸಿ ಸಂತಸಪಟ್ಟು, ಇನ್ನು ಮುಂದೆ ರಾಮಚಂದ್ರರಾಯರಿದ್ದಾಗ ಅವರ ಮೇಲಿನ ಗೌರವಾಭಿಮಾನದ ಕುರುಹಾಗಿ ಕಚೇರಿಯಲ್ಲಿ ನಾನು ಬಿರ್ಕಾಹಾಡುವುದಿಲ್ಲ ಎಂದರಂತೆ. ಈ ಸುದ್ದಿಯನ್ನು ತಿಳಿದು ಸಂತಸಪಟ್ಟ ನಾಲ್ವಡಿಯವರು ಜಯಚಾಮರಾಜ ಒಡೆಯರು ಮದುವೆಯ ಸಂದರ್ಭದಲ್ಲೂ ರಾಮಚಂದ್ರರಾಯರದೇ ಕಚೇರಿ ಆಗಬೇಕೆಂದು ಹಂಬಲಿಸಿ ಏರ್ಪಾಡು ಮಾಡಿ, ಆ ದಿನ ರಾಯರಿಗೆ ಸುವರ್ಣ ಪದಕ ಹಾಗೂ ತೋಡಾವನ್ನಿತ್ತು ಕಮ್ಮರ್ ಬಂದನ್ನು ಹೊದಿಸಿ ಸನ್ಮಾನಿಸಿದರು.

ಮೈಸೂರು ರಾಜ್ಯದ ಹಂಬಲ: ರಾಮಚಂದ್ರರಾಯರ ಆಗಿನ ಪ್ರಖ್ಯಾತಿಯನ್ನು ಕಂಡ ಶ್ರೇಷ್ಠ ನೃತ್ಯಪಟು ರುಕ್ಮಿಣಿದೇವಿ ಅರುಂಡೇಲ್‌ರವರು ರಾಯರನ್ನು ಮದ್ರಾಸಿಗೆ ವಾಸಕ್ಕೆ ಕರೆಸಿಕೊಳ್ಳಲು ಮಾಡಿದ ಪ್ರಯತ್ನವೆಲ್ಲಾ ವಿಫಲವಾಯಿತು. ಮದ್ರಾಸಿನಲ್ಲಿ ನೆಲೆನಿಂತರೆ ಅವರ ಭವಿಷ್ಯ ಅತ್ಯುತ್ತಮವಾಗಿರುತ್ತದೆಂದೂ ಬೇಕಾದರೆ ತಮ್ಮ ಕಲಾಕ್ಷೇತ್ರದ ಪ್ರಾಂಶುಪಾಲರಾಗಿ ಬರಬೇಕೆಂದು ಕರೆನೀಡಿದರೂ ರಾಯರು “ಮೈಸೂರು ರಾಜ್ಯದ ಮೇಲೆ ನನಗೆ ಜೀವ. ನಾನು ಇಲ್ಲೇ ಕಡೆ ತನಕಕ ಇರಬೇಕು. ಅನ್ನ ಇಟ್ಟ ನಾಡು ಇದು” ಎಂದು ಹೇಳಿ ಅವರ ಕೋರಿಕೆಯನ್ನು ವಿನಯದಿಂದ ತಿರಸ್ಕರಿಸಿದರಂತೆ.

ಛಲವಾದಿ ಹಾಘೂ ಸತ್ಯ ನಿಷ್ಠ ವ್ಯಕ್ತಿತ್ವ: ರಾಯರ ಸಂಗೀತ ಕಚೇರಿಗಳು ಆಗ್ಗೆ ತಿರುಚ್ಚಿ ಬಾನುಲಿಕೇಂದ್ರದಿಂದ ಪ್ರಸಾರವಾಗುತ್ತಿದದು ಮುಂದೆ ಮೈಸೂರು ಬೆಂಗಳೂರು ಕೇಂದ್ರಗಳಲ್ಲೂ ಪ್ರಸಾರವಾಗುತ್ತಿದ್ದವು. ಕೆಲಕಾಲ ನಂತರ ಆಕಾಶವಾಣಿಯ ಆಡಿಷನ್‌ ಪದ್ಧತಿಯಲ್ಲಿ ಆದ ಕೆಲವು ಪ್ರಮಾದಗಳಿಂದ ಡಿ. ಸುಬ್ಬರಾಮಯ್ಯ, ಚಂದ್ರಪ್ಪ ಮುಂತಾದ ಅನೇಕ ಹಿರಿಯರಿಗೆ ಆದಂತೆ ರಾಮಚಂದ್ರ ರಾಯರಿಗೂ ಅಸಮಾಧಾನಗಳುಂಟಾದವು. ಇದನ್ನು ರಾಯರು ಮಾತ್ರ ಸಹಿಸಲಿಲ್ಲ. ನ್ಯಾಯಾಲಯದ ಮೆಟ್ಟಿಲನ್ನೇ ಹತ್ತಿಬಿಟ್ಟರು . ತನ್ನ ವಿದ್ವತ್ತು ಯೋಗ್ಯತೆಗಳು ಯಾರಿಗೂ ತಲೆಬಾಗುವುದಿಲ್ಲವೆಂದು ಹರಿಹಾಯ್ದರು. ಇವರ ನಿರಂತರ ಛಲದಿಂದ ಕೂಡಿದ ಹೋರಾಟ ಇವರಿಗೆ ಜಯವನ್ನು ತಂದಿತು. ಬಾನುಲಿಕೇಂದ್ರ ಇವರಿಗಾದ ಅಸಮಾಧಾನಕ್ಕೆ ಕ್ಷಮೆ ಕೋರಿ ಉತ್ತಮ ದರ್ಜೆಯನ್ನು ನೀಡಿತು. ಇದು ಅವರ ಧೈರ್ಯಕ್ಕೆ ದ್ಯೋತಕ. ವ್ಯಕ್ತಿತ್ವದಲ್ಲೂ ತುಂಬಾ ಸರಳರಾಗಿ. ಸಜ್ಜನಿಕೆಯಿಂದ ಕೂಡಿದವರಾಗಿದ್ದರು. ಅವರ ಮೌಲ್ಯ ನಿಷ್ಠೆಯನ್ನು ಕುರಿತು ಬಿ.ವಿ.ಕೆ. ಯವರು (೨೧.೭.೧೯೮೫ ಪ್ರಜಾವಾಣಿ;ಪ ಕಲಾರಂಗ) ಹೀಗೆ ಅಭಿಪ್ರಾಯ ಪಡುತ್ತಾರೆ. “ರಾಮಚಂದ್ರಾರಾಯರದು ಸೌಜನ್ಯ ಸ್ವಭಾವ. ಗರ್ವವಿಲ್ಲ, ಸರಳ ಪ್ರಕೃತಿ. ಅನೇಕರಿಗೆ ವಿದ್ಯಾದಾನ ಮಾಡಿದ್ದಾರೆ. ಆದರೆ ಸ್ವಂತ ವಿಷಯವನ್ನು ಮೆರೆಸರು. ಹಳೆಯ ಮೌಲ್ಯಗಳ ಬಗೆಗೆ ನಿಷ್ಠೆ”.

ಅರವತ್ತರಲ್ಲೂ ಕುಗ್ಗದ ಕಾವು: ಈ ಶೀರ್ಷಿಕೆಯಡಿಯಲ್ಲಿ ಬಿ.ವಿ.ಕೆ. ಶಾಸ್ತ್ರಿಗಳು ರಾಯರ ಸಂಗೀತವನ್ನು ಕುರಿತು ಹೀಗೆ ಬರೆಯುತ್ತಾರೆ: “ರಾಮಚಂದ್ರರಾಯರು ಸಂಗೀತ ಕ್ಷೇತ್ರದಲ್ಲಿ ಒಂದು ತಾರಾಮಂಡಲದಂತೆ ಕಾಣಿಸಿಕೊಂಡರು. ವೇದಿಕೆಯ ಮೇಲೆ ಬಹುಕಾಲ ವಿಜೃಂಭಿಸಿದರು. ಈ ಶತಮಾನದ ೩-೪ನೆಯ ದಶಕಗಳಲ್ಲಿ ರಾಮಚಂದ್ರರಾಯರ ಕಚೇರಿಗಳಿಗೆ ಪರೀಕ್ಷೆಯಂತೆ ಜನ ನೆರೆಯುತ್ತಿದ್ದುದು ಅನೇಕರ ಅನುಭವ. ತೆಳುವಾದ ವ್ಯಕ್ತಿ. ಸಿಲ್ಕ್ ಜುಬ್ಬಾ, ಮಲ್ಲು ಪಂಚೆ, ವೇದಿಕೆಯ ಮೇಲೆ ಥಳಥಳಿಸುವ ವ್ಯಕ್ತಿ. ಹಾಡುಗಾರಿಕೆಯೂ ಆಷ್ಟೇ ಬಿಗಿ ಆದರೆ, ಲಾಲಿತ್ಯ ಪೂರ್ಣ. ಸಾಂಪ್ರದಾಯಿಕ ರುಚಿ ಮತ್ತು ಭಾವದಿಂದ ಕೂಡಿದ ರಾಗ ಪೋಷಣೆ ಕೀರ್ತನೆಗಳು ಅಚ್ಚು ಕಟ್ಟು. ಸ್ವರ ಪ್ರಸ್ತಾರವೂ ಅಷ್ಟೇ ಅಲಂಕಾರಯುತ. ಸ್ವರ ಸರಪಳಿಗಳೂ ಲೆಕ್ಕಾಚಾರದ ಗುಂಪುಗಳೂ ಉಂಟು. ಒಳ್ಳೆಯ ತಾಳನಿರ್ಣಯ. ಎಷ್ಟೇ ಆಗಲಿ, ರಾಮಚಂದ್ರರಾಯರು ಮೃದಂಗ ವಾದನವನ್ನು ಚೆನ್ನಾಗಿ ಅಭ್ಯಾಸ ಮಾಡಿದವರಲ್ಲವೇ, ಅವರ ಪಲ್ಲವಿಯ ಪ್ರಾವೀಣ್ಯಕ್ಕೆ ಇದೂ ಪೂರಕ.”

ಕೇವಲ ಚಿಕ್ಕ ವಯಸ್ಸಿನಲ್ಲಿಯೇ ಕಚೇರಿ ವೇದಿಕೆಯ ಮೇಲೆ ಪ್ರಕಾಶ ಮಾನವಾಗಿ ಕಾಣಿಸಿಕೊಂಡ ರಾಮಚಂದ್ರರಾಯರಿಗೆ ಕೆಲಸಮಯದಲ್ಲೇ ಕಚೇರಿಯ ತಂತ್ರ ಮತ್ತು ವೇದಿಕಾ ಕಲೆಯ ಮೇಲಿನ ಅಧಿಪತ್ಯ ಕರಗತವಾದುದರಲ್ಲಿ ಆಶ್ಚರ್ಯವಿಲ್ಲ. ಅವರದು ಬಾಲಪ್ರತಿಭೆ. ಕಚೇರಿಯಲ್ಲಿ ಗಾಯಕನಾಗಿ ಅವರ ಸ್ಥಾನ ಪ್ರಧಾನ. ಪಕ್ಕವಾದ್ಯಗಳು ಗಾಯಕನ ಕಲ್ಪನೆಗಳಿಗೆ ಪೂರಕವಾಗಿರಬೇಕೇ ವಿನಃ ಮೀರುವಂತಿರ ಬಾರದು. ಹಾಗಾಗುವಾಗ ಸ್ಥಿತಿಯನ್ನು  ಹತೋಟಿಯಲ್ಲಿಡಬೇಕಾದುದು ಗಾಯಕನ ಕರ್ತವ್ಯ. ಈ ರೀತಿಯ ನಡವಳಿಕೆ. ಆದುದರಿಂದ ಅವರ ಕಚೇರಿಯಲ್ಲಿ ಕೇಳಿ ಬರುತ್ತಿದ್ದುದು. ರಾಮಚಂದ್ರರಾಯರ ಕಲ್ಪನೆಯೇ ವಿನಾ ಪಕ್ಕವಾದ್ಯಗಳದಲ್ಲ. ಆದುದರಿಂದ ಅವರಿಗೆ ಯಾವ ಪಕ್ಕವಾದ್ಯಗಾರರೂ ಒಂದೇ, ನಿಭಾಯಿಸಬಲ್ಲ ಮನೋಧರ್ಮ.

ರಾಮಚಂದ್ರರಾಯರಿಗೆ ನುಡಿಸದ ಪಕ್ಕವಾದ್ಯಗಾರರೇ ಇಲ್ಲ. ಟಿ.ಚೌಡಯ್ಯ ಆರ್.ಆರ್. ಕೇಶವಮೂರ್ತಿ, ತಾಯಪ್ಪ, ಬಿ.ಟಿ..ರಾಜಣ್ಣ, ಚಿಕ್ಕಬಳ್ಳಾಪುರದ ಗೋವಿಂದ ಸ್ವಾಮಿ, ಶೇಷಗಿರಿರಾವ್‌, ಗುರುರಾಜಪ್ಪ, ಎಂ.ಎಸ್‌.ಸುಬ್ರಹ್ಮಣ್ಯಂ, ಮುಂತಾದ ನಮ್ಮ ನಾಡಿನವರೂ. ಲಾಲ್‌ಗುಡಿ ಜಯರಾಮನ್‌, ಗೋಪಾಲಕೃಷ್ಣನ್‌, ಆರ್.ಎಸ್‌.ಎಂ.ಎಸ್‌. ವಿ.ವಿ. ಸುಬ್ರಹ್ಮಣ್ಯಂ, ಎಂ.ಚಂದ್ರಶೇಖರನ್‌, ಅಳಗಿರಿಸ್ವಾಮಿ, ವೀರರಾಘವನ್‌, ದ್ವಾರಂ ಮುಂತಾದ ಹೊರ ನಾಡಿನವರೂ, ಲಯವಾದ್ಯದಲ್ಲಿ ಅಯ್ಯಾಮಣಿ ಅಯ್ಯರ್, ಪುಟ್ಟಾಚಾರ್, ರಾಮಾಚಾರ್, ಎಂ.ಎಸ್‌. ರಾಮಯ್ಯ, ಮೂಗಯ್ಯ , ಎಂ.ಎಲ್‌. ವೀರಭದ್ರಯ್ಯ, ಟಿ.ಎ. ಎಸ್‌. ಮಣಿ, ವಯ್ಯಾಪುರಿ, ಕೃಷ್ಣಮಣಿ, ಶಿಂಗಾರಂ ಪಿಳ್ಳೆ, ಪಳನಿ ಸ್ವಾಮಿ ಮುಂತಾದವರು ನಮ್ಮಲ್ಲೂ, ಹೊರನಾಡಿನ ಫಾಲ್ಗಾಟ್‌ ಮಣಿಅಯ್ಯರ್, ವಿಲ್ವಾದ್ರಿ ಅಯ್ಯರ್, ಪಳನಿ, ದಕ್ಷಿಣಾಮೂರ್ತಿ ಪಿಳ್ಳೆ, ಮುರುಗ ಭೂಪತಿ, ಕಾರೈಕ್ಕುಡಿಮಣಿ, ಶಿವರಾಮನ್‌, ಟಿ.ಕೆ. ಮೂರ್ತಿ, ಗುರುವಾಯೂರ್ ದೊರೈ, ಫಾಲ್ಘಾಟ್‌ ರಘು, ವೆಲ್ಲೂರು ರಾಮಭದ್ರನ್‌ ಮುಂತಾದ ಎಲ್ಲ ವಿದ್ವಾಂಸರೂ ಅವರಿಗೆ ಪಕ್ಕವಾದ್ಯ ನುಡಿಸಿರುವುದುಂಟು.

ಪ್ರಶಸ್ತಿ-ಸನ್ಮಾನಗಳು: ರಾಯರು ಪ್ರಶಸ್ತಿಗಳನ್ನೂ ಅವಕಾಶಗಳನ್ನೂ ಅರಸಿ ಬೆನ್ನಟ್ಟಿ ಹೋದವರಲ್ಲ. ಅರಸರ ಆಸ್ಥಾನ ವಿದ್ವಾಂಸರಾಗಿ ವಿಜೃಂಭಿಸಿದಾಗಲೂ, ಸ್ವಾತಂತ್ಯ್ರಾ ನಂತರ ತಮಗೆ ಸಿಗಬೇಕಾದ ಮನ್ನಣೆ ಗೌರವಗಳು ತಪ್ಪಿದಾಗಲೂ ಸರಸ್ವತಿಯ ಸೇವೆಯಲ್ಲಿ ವಿಚಲಿತರಾದವರಲ್ಲ. ಅವರಿಗೆ ಸಂಗೀತದಲ್ಲಿ ಈಗ್ಗೆ ಕಾಡುತ್ತಿರುವ ರಾಜಕಾರಣವನ್ನು ಕಂಡರೆ ಅಸಹ್ಯ. ಶಕ್ತಿ ಸಾಧನೆಯಿಲ್ಲದವರೂ ವಿಜೃಂಭಿಸುತ್ತಿವುದನ್ನು ಕಂಡಾಗ ನಕ್ಕರೂ ಅದು ಅವರಿಗೆ ಜಿಗುಪ್ಸೆ ತರುವಂಥದ್ದಾಗಿತ್ತು. ಸಂಗೀತ ಸಾಮ್ರಾಟ್‌ ಎಂಬ ಬಿರುದನ್ನು ಹೊಂದಿರುವ ತಾವು. ಈಗ ರಾಜರು ಹೇಗೆ ರಾಜ್ಯ ಹೋದರೂ ಗೌರವಕ್ಕೆ ಚ್ಯುತಿ ಬರದಂತೆ ಜೀವಿಸಿದರೋ ಹಾಗೆಯೇ ತಾವು ಇರಬೇಕೆಂಬ ಸಂಕಲ್ಪವನ್ನು ಹೊಂದಿದ್ದರು. ಇಷ್ಟಿದ್ದಾಗ್ಯೂ ಅವರ ಸಾಧನೆಯನ್ನು ಮನಗಂಡ ಸರ್ಕಾರ ಸಂಸ್ಥೆಗಳು ತಾವಾಗಿ ನೀಡಿದ ಸನ್ಮಾನಗಳನ್ನು ಮಾತ್ರ ಒಪ್ಪಿಕೊಂಡರು. ಅದರಲ್ಲಿ ಸೋಸಲೆ ವ್ಯಾಸರಾಜಮಠಾಧೀಶರಿಂದ ದೊರೆತ ಸ್ವರ್ಣಪದಕ, ಆಸ್ಥಾನ ಸಂಗೀತ ಚೂಡಾಮಣಿ, ೧೯೬೯ರ ಮೈಸೂರು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಸಂಗೀತಕಲಾಭಿವರ್ಧಿನಿ ಸಭಾಪತಿಯ ಸನ್ಮಾನ, ೧೯೭೭ರಲ್ಲಿ ಬೆಂಗಳೂರು ಗಾಯನ ಸಮಾಜದ ಒಂಬತ್ತನೇ ಸಮ್ಮೇಳನಾಧ್ಯಕ್ಷರಾಗಿ ಸಂಗೀತ ಕಲಾರತ್ನಪ್ರಶಸ್ತಿ, ದೇಶದ ಹಿರಿಯ ಗಾಯಕರಾದ ಬಿ. ದೇವೇಂದ್ರಪ್ಪನವರು ಸನ್ಮಾನಿಸಿ ನೀಢಿದ ಸಂಗೀತ ಸಾಮ್ರಾಟ್‌ ಪ್ರಶಸ್ತಿ, ಶ್ರೀ ತ್ಯಾಗರಾಜ ಗಾನಸಭೆಯ ಕಲಾಭೂಷಣ ಹೀಗೆ ಹತ್ತು ಹಲವುಗಳನ್ನು ಹೆಸರಿಸಬಹುದು.

ದೊಡ್ಡ ಸಂಸಾರ– ಶಿಷ್ಯ ಕೋಟಿ: ರಾಮಚಂದ್ರರಾಯರದ್ದು ದೊಡ್ಡ ಕುಟುಂಬ-ಆರು ಜನ ಗಂಡು ಮಕ್ಕಳು, ಐದು ಜನ ಹೆಣ್ಣು ಮಕ್ಕಳನ್ನು ಹೊಂದಿದ ರಾಯರಿಗೆ ಸಹಧರ್ಮಿಣಿಯಾಗಿ, ಅವರ ಕಷ್ಟ ಕಾರ್ಪಣ್ಯಗಳ ಸಮಯದಲ್ಲೂ ಎಡೆಬಿಡದೆ ಸಹಕರಿಸಿದವರು ಲಕ್ಷ್ಮೀದೇವಮ್ಮನವರು. ಸುಮಾರು ನಲವತ್ತರಕ್ಕೂ ಹೆಚ್ಚಿನ ಮೊಮ್ಮಕ್ಕಳು, ಹದಿನೈದಕ್ಕೂ ಹೆಚ್ಚು ಮರಿಮಕ್ಕಳನ್ನು ಹೊಂದಿದ್ದರು. ರಾಯರು ಮಾಡಿದ ಮತ್ತೊಂದು ವಿಶೇಷವೆಂದರೆ ಎಲ್ಲಾ ಮಕ್ಕಳು, ಮೊಮ್ಮಕ್ಕಳಿಗೂ ಸಂಗೀತ ಶಿಕ್ಷಣವನ್ನು ನೀಡಿದ್ದು. ಅಷ್ಟೇ ಅಲ್ಲದೆ ವೆಂಕಟರಾಯರ ಮೊಮ್ಮಕ್ಕಳೂ ಸೇರಿದಂತೆ ಹತ್ತು ಹಲವು ಜನರು ಚಿಂತಲಪಲ್ಲಿಯ ಛಾತ್ರದಡಿಯಲ್ಲಿ ಕಲಾವಿದರಾಗಿ ಮನ್ನಣೆ ಪಡೆದಿದ್ದಾರೆ. ರಾಯರ ಚಿಕ್ಕಪ್ಪನ ಮಗ ದಿ. ಚಿಂತಲಪಲ್ಲಿ ವೆಂಕಟರಾಮಯ್ಯ, ಸೋದರಳಿಯಂದಿರಾದ ದಿ. ಚಿಂತಲಪಲ್ಲಿ ಕೃಷ್ಣಮೂರ್ತಿ ಮುಂತಾದವರಿಗೆ ಶಿಕ್ಷಣವನ್ನೂ ಸಂಗೀತ ಶಿಕ್ಷಣವನ್ನೂ ನೀಡಿದರು. ಮಕ್ಕಳಲ್ಲಿ ಹಿರಿಯವರಾದ ದಿ. ಚಿಂತಲಪಲ್ಲಿ ಸೂರ್ಯನಾರಾಯಣರಾಯರು ಖ್ಯಾತರಾಗಿದ್ದು ಚಂದ್ರಶೇಖರರೊಡನೆ ಸೇರಿ ಶಿವರಾಮನ್‌, ಟಿ.ಕೆ. ಮೂರ್ತಿ, ವೆಲ್ಲೂರು ರಾಮಭದ್ರನ್‌, ಎಂ.ಚಂದ್ರಶಶೇಖರನ್‌, ಟಿ. ರುಕ್ಮಿಣಿ ಮುಂತಾದಕ ದೊಡ್ಡ ಪಕ್ಕವಾದ್ಯಗಳೊಡನೆ ಕಚೇರಿ ನೀಡಿದ್ದರು. ರಾಯರ ಮಕ್ಕಳಲ್ಲಿ ಅಶ್ವತ್ಥನಾರಾಯಣ, ಚಂದ್ರಶೇಖರ್ ಮತ್ತು ಮಕ್ಕಳು, ಶ್ರೀನಿವಾಸ್‌, ಅಲ್ಲದೆ ಮೊಮ್ಮಗ ಶ್ರೀಕಾಂತಂನಾಗೇಂದ್ರ ಶಾಸ್ತ್ರೀ ಸಂಗೀತ ಕ್ಷೇತ್ರದಲ್ಲಿದ್ದಾರೆ.

ದೊಡ್ಡ ಸಂಸಾರದ ಜೊತೆಗೆ ಶಿಷ್ಯರನ್ನೂ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಅವರು ಅಪಾರವಾದ ಶಿಷ್ಯ ಕೋಟಿಯನ್ನು ಸಂಗೀತ ಕ್ಷೇತ್ರಕ್ಕೆ ನೀಡಿದ್ದಾರೆ. ಅನೇಕ ಕಲಾವಿದರುಗಳಿಗೆ ಉದಾ: ಪಿಟೀಲು ಶೇಷಗಿರಿರಾವ್‌, ಪಳನಿಸ್ವಾಮಿ ಮುಂತಾದವರಿಗೆ ಮನೆಯಲ್ಲಿ ಅನ್ನವಿಟ್ಟು ಸಲಹಿದ್ದಾರೆ. ಅವರ ಶಿಷ್ಯರುಗಳಲ್ಲಿ ಎಂ.ಟಿ. ಶೆಲ್ವನಾರಾಯಣ, ಆರ್.ಚಂದ್ರಿಕಾ, ಪಿಟೀಲು ಭುವನೇಶ್ವರಯ್ಯ, ಮೈಸೂರು ಸಹೋದರಿಯರಾದ ಕಮಲಾ ಮತ್ತು ರಾಜಲಕ್ಷ್ಮಿ, ಹೊಳಲಿ ಲಕ್ಷ್ಮೀನರಸಿಂಹಶಾಸ್ತ್ರೀ, ಹಾವೇರಿ ವೈ. ಪ್ರಹ್ಲಾದಾಚಾರ್ಯ, ನಟಿ, ಗಾಯಕಿ ಬಿ. ಜಯಶ್ರೀ, ಎನ್‌.ಎಲ್‌. ಚೆಲುವರಾಜು, ಡಿ.ಆರ್. ಸರೋಜಾ, ಸೀತಮ್ಮ, ಕಮಲಮ್ಮ, ಭದ್ರಗಿರಿ ಕೇಶವದಾಸರು ಹಾಗೂ ಸರ್ವೋತ್ತಮ ದಾಸರು, ಕೆ.ಗುರುರಾಜ್‌, ವಾರುಣಿಜಯತೀರ್ಥಾಚಾರ್ ಮುಂತಾದವರು ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಚಿಂತಲಪಲ್ಲಿ ಬಾಣಿಯನ್ನು ಮುಂದುವರೆಸುವುದು ರಾಮಚಂದ್ರರಾಯರ ಬಹು ಮುಖ್ಯ ಅಭಿಲಾಷೆಗಳಲ್ಲೊಂದಾಗಿತ್ತು.

ರಾಮಚಂದ್ರರಾಯರಿಗಿದ್ದ ಇನ್ನೊಂದು ಆಸೆ, ತಾವು ಹಾಡುತ್ತಲೇ ಭಗವಂತಹ ಸಾನ್ನಿಧ್ಯವನ್ನು ಸೇರಬೇಕೆಂಬುದು. ಅದಕ್ಕೆ ಹೊಂದುವಂತೆ ೧೯೮೫ರ ಜುಲೈ ಒಂದರಂದು ಹಾಡುತ್ತಿರುವಾಗಲೇ ಅಸ್ವಸ್ಥರಾದರು. ಜುಲೈ ಎರಡರಂದು ಅವರ ಆತ್ಮ ಕುಸುಮ ಕಲಾಸರಸ್ವತಿಯ ಮುಡಿಗೇರಿತು. ಅವರ ನಿಧನಕ್ಕೆ ಕನ್ನಡದ ಪತ್ರಿಕೆಯೊಂದು ಹೀಗೆ ಸಂತಾಪ ಸಲ್ಲಿಸುತ್ತದೆ. ‘ಸಂಗೀತವನ್ನೆ ಉಸಿರಾಗಿಸಿಕೊಂಡಿದ್ದ, ಅದ್ವಿತೀಯ ಸ್ಥಾನ ಪಡೆದಿದ್ದ ಆ ಮಹಾನ್‌ ಕಲಾಜ್ಯೋತಿ, ನಂದಿ ಹೋಗಿದೆ. ಒಟ್ಟಿನಲ್ಲಿ ಚಿಂತಲಪಲ್ಲಿ ಗಾಯನ ಶೈಲಿಗೆ ಸಮ ಚಿಂತಲಪಲ್ಲಿ ಗಾಯನವೇ ಹೊರತು ಬೇರೆಯಲ್ಲ”

 

ಆಕರ ಸಾಮಗ್ರಿ

. ಚಿಂತಲಪಲ್ಲಿ ವೆಂಕಟರಾವ್‌-ನಾಗಮಣಿ ಎಸ್‌ ರಾವ್‌-ರಾಷ್ಟ್ರೋತ್ಥಾನ ಸಾಹಿತ್ಯ, ಬೆಂ. ೧೯(೧೯೭೮)

. ಗಾನವಿಹಾರ-ಎ.ಎನ್‌.ಮೂರ್ತಿರಾವ್‌.ಡಿ.ವಿ.ಕೆ. ಮೂರ್ತಿ ಮೈಸೂರು ೪ (೧೯೯೫)

.. ಸದ್ಗುರು ತ್ಯಾಗರಾಜರು -ಡಾ. ವಿ.ಎಸ್‌. ಸಂಪತ್ಕುಮಾರಾಚಾರ್ಯ-ಗೀತಾಬುಕ್‌ಹೌಸ್‌-ಮೈಸೂರು ೧.

. ಕಲೋಪಾಸಕರು-ಡಿ.ವಿ. ಗುಂಡಪ್ಪ-ಕಾವ್ಯಾಲಯ ಪ್ರಕಾಶನ-ಮೈಸೂರು

. ಮುರಳಿ ವಾಣಿ-B.V.K. Shastry Felicitation Volume ೧೯೯೯

. ಮುರಳಿ ಗೊಂಚಲು-ಬಿ.ವಿ.ಕೆ.ಶಾಸ್ತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

. ಅನನ್ಯ ಅಭಿವ್ಯಕ್ತಿ-ಸಂಪುಟ ೪ ಸಂಚಿಕೆ ೧, ಆಗಸ್ಟ್‌ ೨೦೦೧, ಅನನ್ಯ ಮಲ್ಲೇಶ್ವರಂ ೩.

. IIIustrated Weekly of India-B.V.K. ೧೯೬೬

೧೦. The Hindu – June 9 – 1969

೧೧. ಪ್ರಜಾವಾಣಿ -೧೪.೭.೧೯೮೫(ಕಲಾರಂಗ)-B.V.K.

೧೨. ಕನ್ನಡಪ್ರಭ -೧೪.೭.೧೯೮೫, ಎಂ.ಎ. ಜಯರಾಮ್‌ರಾವ್‌

೧೩.  ಸಂಗೀತ ಕಲೆಗೆ ಮೈಸೂರು ಒಡೆಯರ ಪ್ರೋತ್ಸಾಹ ಮತ್ತು ಕೊಡುಗೆ-ಪ್ರಾಚ್ಯ ವಸ್ತು ಸಂಗ್ರಹಾಲಯ ಮೈಸೂರು ೧೯೯೬

೧೪. ನಮ್ಮ ಸಂಗೀತ ಕಲಾವಿದರು-(ಸಂ).ಟಿ.ಬಿ. ನರಸಿಂಹಾಚಾರ್ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೮೩

೧೫. ಕರ್ನಾಟಕ ಭಕ್ತ ವಿಜಯ -ಬೇಲೂರು ಕೇಶವದಾಸರು – ಡಿ.ವಿ.ಕೆ. ಮೂರ್ತಿ-ಮೈಸೂರು -೪-೧೯೯೪

೧೬. ಕರ್ನಾಟಕ ಕವಿಚರಿತೆ -೩. ಆರ್. ನರಸಿಂಹಾಚಾರ್ಯ-ಕ.ಸಾ.ಪ. ೧೯೭೪.