ಹಳೆಯ ಮೈಸೂರು ಸಂಸ್ಥಾನದ ‘ಸಂಗೀತ ರತ್ನ’ ಬಿರುದಿಗೆ ಪಾತ್ರರಾದ ಹಿರಿಯ ಕಲಾವಿದ ಚಿಂತಲಪಲ್ಲಿ ವೆಂಕಟರಾಯರು ಹಲವು ಶತಮಾನಗಳ ಸಂಗೀತ ಪರಂಪರೆ ಹೊಂದಿದ್ದ ಚಿಂತಲಪಲ್ಲಿ ಮನೆತನದವರು. ಬಿಜಾಪುರದ ಸುಲ್ತಾನರ ಕಾಲದಲ್ಲೇ ಪ್ರವರ್ಧಮಾನಕ್ಕೆ ಬಂದ ಸಂಗೀತಗಾರರ ಮನೆತನದವರಾಗಿ ಗೌರಿಬಿದನೂರಿನ ಹುಣಸನ ಹಳ್ಳಿಯಲ್ಲಿ ೧೮೭೪ರಲ್ಲಿ ಜನಿಸಿದರು. ಚಿಕ್ಕಪ್ಪಂದಿರಾದ ಭಾಸ್ಕರರಾವ್‌ ಮತ್ತು ವೆಂಕಟದಾಸಪ್ಪನವರಿಂದ ಪ್ರಭಾವಿತರಾಗಿ ತಮ್ಮ ಆರನೆಯ ವಯಸ್ಸಿನಿಂದಲೇ ಸಂಗೀತಾಭ್ಯಾಸವನ್ನು ಆರಂಭಿಸಿ ಕರೂರು ರಾಮಸ್ವಾಮಿ, ಪಕ್ಕ ಹನುಮಂತಾಚಾರ್, ಪಲ್ಲವಿ ಶೇಷಯ್ಯರ್ ಮತ್ತು ಹಾನಗಲ್‌ ಚಿದಂಬರಯ್ಯ ಅವರುಗಳಲ್ಲಿ ಶಿಕ್ಷಣವನ್ನು ಮುಂದುವರೆಸಿ ಪ್ರಾವೀಣ್ಯತೆ ಗಳಿಸಿದರು.

ಯುವಕರಾಗಿದ್ದಾಗಲಿಂದಲೇ ಸಂಗೀತ ಕಛೇರಿಗಳನ್ನು ನಡೆಸಲು ಪ್ರಾರಂಭಿಸಿ ಶೀಘ್ರವಾಗಿ ವಿಖ್ಯಾತರಾಗಿ ದೇಶದ ಅನೇಕ ನಗರಗಳಲ್ಲಿ ಅರಸೊತ್ತಿಗೆಗಳಲ್ಲಿ ಹಾಡಿ ಮನ್ನಣೆ ಪಡೆದರು. ಮೈಸೂರು ಸಂಸ್ಥಾನದಿಂದಲೂ, ಬರೋಡ ದರ್ಬಾರಿನಿಂದಲೂ ಸನ್ಮಾನಿತರಾಗಿದ್ದ, ಶ್ರೀಯುತರು ನಾನಾ ಸಂಸ್ಥೆಗಳ ಹಾಗೂ ರಾಜ್ಯದ ಸಂಗೀತ ನೃತ್ಯ ಅಕಾಡೆಮಿಯಿಂದ ಪುರಸ್ಕೃತರಾಗಿದ್ದರು.

ಅವರ ಸುಪುತ್ರ ರಾಮಚಂದ್ರರಾಯರು ಶಿಷ್ಯರೂ ಆಗಿದ್ದು, ತಂದೆಯಂತೆಯೇ ಕಿರಿಯ ವಯಸ್ಸಿನಿಂದಲೇ ಸಂಗೀತ ಕ್ಷೇತ್ರದಲ್ಲಿ ಖ್ಯಾತರಾಗಿ ತಮ್ಮ ಹಾಗೂ ತಂದೆಯ ಕೀರ್ತಿ ಉಜ್ವಲವಾಗಿ ಉಳಿಯಲು ಕಾರಣರಾದರು.