ಚಿಂತಲಪಲ್ಲಿ ವೆಂಕಟರಾವ್ಕನ್ನಡನಾಡಿನ ಹಿರಿಯ ಸಂಗೀತ ವಿದ್ವಾಂಸರು. ತಮ್ಮ ಜೇನಿನಂತಹ ಸಂಗೀತದಿಂದ ಮಹಾರಾಜರಿಂದ ಕಡು ಬಡವರವರೆಗೆ ಸಾವಿರಾರು ಮಂದಿಯನ್ನು ತಣಿಸಿದರು. ದೇವರನಾಮಗಳನ್ನೇ ಹಾಡಿ ಗಂಟೆಗಟ್ಟಲೆ ಕಛೇರಿ ನಡೆಸುವ ಸಮರ್ಥರು. ಸೌಜನ್ಯದ ಮೂರ್ತಿ.

 

 

ಚಿಂತಲಪಲ್ಲಿ ವೆಂಕಟರಾವ್

ಸಂಗೀತ ಒಂದು ಗಾಂಧರ್ವ ವಿದ್ಯೆ. ಈ ವಿದ್ಯೆಯಲ್ಲಿ ಸಿದ್ಧಿ ಪಡೆಯಲು ಪೂರ್ವಸಂಸ್ಕಾರ ಹಾಗೂ ತಪಸ್ಸಿನಂತಹ ನಿಷ್ಠಾಪೂರ್ಣ ಸಾಧನೆ ಅಗತ್ಯ. ಇಂತಹ ಸಾಧನೆಯಿಂದ ಸಂಗೀತ ಪ್ರಪಂಚದಲ್ಲಿ ಅಜರಾಮರ ಎನಿಸಿದವರು ಶ್ರೀ  ಚಿಂತಲಪಲ್ಲಿ ವೆಂಕಟರಾಯರು.

ಸಂಗೀತಗಾರ ಕಣ್ಮರೆಯಾದರೂ, ಆ ಕಲಾವಿದನ ನಾದ ರಸಿಕರ ಮನದಲ್ಲಿ ಗುಣಗುಣಿಸುತ್ತಲೇ ಇರುತ್ತದೆ, ಇದು ಸಂಗೀತ ಕಲೆಯ ಒಂದು ಮಹಾಗುಣ. ಚಿಂತಲಪಲ್ಲಿ ವೆಂಕಟ ರಾಯರ ಸಂಗೀತ ಕೇಳುವ ಸೌಭಾಗ್ಯ ಪಡೆದಿದ್ದವರೆಲ್ಲ, ಅವರ ಹೆಸರು ಕೇಳುತ್ತಿದ್ದಂತೆಯೇ ಯಾವುದೋ ರಸಲೋಕದಲ್ಲಿ ಕಣ್ಣು ತೇಲಿಸುತ್ತಾರೆ. ಮುಖದಲ್ಲಿ ಪ್ರಸನ್ನತೆ ಹರಡಿಕೊಳ್ಳುತ್ತದೆ. ‘ಓ ವೆಂಕಟರಾಯರ ಸಂಗೀತ! ಆ ಕಂಠ, ಆ ವಿದ್ವತ್ತು, ಮರೆಯಲಾದೀತೆ!’ ಎನ್ನುತ್ತಾರೆ. ‘ಭಾವಪೂರ್ಣ ಸಂಗೀತ ದಲ್ಲಿ ಸಭಿಕರನ್ನೂ ತಾದಾತ್ಮ್ಯಗೊಳಿಸಿ, ಭಾವತರಂಗಗಳನ್ನು ಹೊಡೆದೆಬ್ಬಿಸಿ, ತನ್ನೊಡನೆ ಅವರನ್ನು ಬೇರೊಂದು ಲೋಕಕ್ಕೆ ಕೊಂಡೊಯ್ಯು ತ್ತಿದ್ದ ಮಹಾನ್ ಕಲಾವಿದ ಅವರು’ ಎಂದು ಉದ್ಗರಿಸುತ್ತಾರೆ.

ಸಂಗೀತದ ಭೂಮಿಯಲ್ಲಿ ಜನನ

ವೆಂಕಟರಾಯರ ಜನನವಾದದ್ದು  ಚಿಂತಲಪಲ್ಲಿ ಯಲ್ಲಿ, ೧೮೭೪ ರ ಆಗಸ್ಟ್ ಹದಿನೇಳರಂದು.

ಕೋಲಾರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥಕ್ಕೆ ಸಮೀಪದಲ್ಲಿದೆ ಈ ಪುಟ್ಟಗ್ರಾಮ. ಕರ್ನಾಟಕದ ಈ ಹಳ್ಳಿ ಆಂಧ್ರಪ್ರದೇಶದ ಗಡಿಯಲ್ಲಿದ್ದು ತೆಲುಗಿನ ಪ್ರಾಬಲ್ಯವೂ ಹೆಚ್ಚು. ಆದ್ದರಿಂದಲೇ ಕನ್ನಡದ ಹುಣಿಸೇನ ಹಳ್ಳಿ ತೆಲುಗಿನಲ್ಲಿ  ಚಿಂತಲಪಲ್ಲಿ ಎಂದೇ ಪ್ರಸಿದ್ಧಿ ಪಡೆದಿದೆ.

ಚಿಂತಲಪಲ್ಲಿ ಸಂಗೀತದ ಭೂಮಿ. ಸಂಗೀತಾ ಭಿಮಾನಿಗಳ ಬೀಡು. ಭವ್ಯ ಸಂಗೀತದ ಹಿನ್ನೆಲೆಯೇ ಇದೆ ಈ ಗ್ರಾಮಕ್ಕೆ.

ವೆಂಕಟರಾಯರು ಪುರಾತನ ಸಂಗೀತ ವಂಶಕ್ಕೆ ಸೇರಿದವರು. ವಿಜಯನಗರದ ವೈಭವದ ಕಾಲದಲ್ಲಿಯೇ ಈ ವಂಶದ ಕಲಾವಿದರಿದ್ದರೆಂಬ ಪ್ರತೀತಿ. ಆದರೆ ೧೬ ನೇ ಶತಮಾನದಿಂದ ಖಚಿತ ಮಾಹಿತಿ ದೊರಕುತ್ತದೆ.

ಶ್ರೀ ವೆಂಕಟರಾಯರ ಪೂರ್ವಿಕರು ಈ ಗ್ರಾಮದಲ್ಲಿನ ಕಲ್ಲಿನ ಕಂಬಗಳ ನಡುವೆ ತಂತಿ ಕಟ್ಟಿ ವೀಣೆಯಂತೆ ನುಡಿಸಿ ಸಂಗೀತದ ಹೊನಲು ಹರಿಸಿ ತಮ್ಮ ಪಾಂಡಿತ್ಯ  ಪ್ರದರ್ಶಿಸಿದ್ದರಂತೆ ಇದು ನಡೆದದ್ದು ವಿಜಾಪುರ ಸುಲ್ತಾನರ  ಕಾಲದಲ್ಲಿ. ಸುಮಾರು ೩೫೦ ವರ್ಷಗಳ ಹಿಂದೆ, ಆಗಿನ ಸೇನಾಧಿಪತಿ ರಣದುಲ್ಲಾಖಾನ್ ಎಂಬಾತ ಈ ವಿದ್ವತ್ತನ್ನು ಕಂಡು ಹಿರಿಹಿರಿ ಹಿಗ್ಗಿ ಈ ಮನೆತನದವರಿಗೆ  ಚಿಂತಲಪಲ್ಲಿಯೂ ಸೇರಿದಂತೆ ಏಳು ಗ್ರಾಮಗಳನ್ನು ಬಳುವಳಿಯಾಗಿ ನೀಡಿದನಂತೆ. ಅಲ್ಲದೆ ಈ ರೀತಿ ವೀಣೆ ನುಡಿಸಿದ ವಂಶದ ಹಿರಿಯರಿಗೆ ‘ಸಂಗೀತರಾವ್’ ಎಂಬ ಬಿರುದು ನೀಡಿ ಗೌರವಿಸಿದನಂತೆ.

ಮಕ್ಕಳಿಲ್ಲದ ಮನೆಗೆ ಬೆಳಕು

ಈ ವಂಶದ ಆದಿನಾರಾಯಣಪ್ಪ ಹಾಗೂ ಆದಿಲಕ್ಷ್ಮಿ ಇವರ ತುಂಬಿದ ಕುಟುಂಬದಲ್ಲಿ ವೆಂಕಟರಾಯರು ಜನಿಸಿದರು. ಆದರೆ ಸಂಬಧಿಕರಾದ ಹಿರಿಯರೊಬ್ಬರು, ಅವರ ಹೆಸರೂ ವೆಂಕಟರಾಯರೆಂದೇ, ತಮಗೆ ಮಕ್ಕಳಿಲ್ಲದ್ದರಿಂದ  ಕಿರಿಯ ವೆಂಕಟರಾಯನನ್ನು ದತ್ತು ತೆಗೆದುಕೊಂಡರು. ಹೀಗಾಗಿ ಮೂರು ತಿಂಗಳ ಮಗುವಾಗಿದ್ದಾಗಲೇ, ವೆಂಕಟ ರಾಯರು ಇನ್ನೊಂದು ಮನೆ ಬೆಳಗಲು ಹೊರಟರು. ಅವರ ಹೊಸ ತಾಯಿಯ ಹೆಸರು ಪುಟ್ಟಮ್ಮ, ಈ ದಂಪತಿಗಳು ಕಿರಿಯ ವೆಂಕಟರಾಯನನ್ನು ತುಂಬ ಅಕ್ಕರೆಯಿಂದ, ಮಮತೆ ಯಿಂದ ನೋಡಿಕೊಂಡರು. ಹುಡುಗನ ವಿದ್ಯಾಭ್ಯಾಸ್ಕಕ್ಕೆ ಎಲ್ಲ ಏರ್ಪಾಡುಗಳನ್ನು ಮಾಡಿದರು.

ಸಂಗೀತದ ಒಲವು

ಆದರೆ ಹುಡುಗನ ಲಕ್ಷ್ಯವೆಲ್ಲ ಸಂಗೀತದ ಕಡೆಗೇ. ಶಾಲೆಯ ಪಾಠದಲ್ಲಿ ಮನಸ್ಸೇ ಇಲ್ಲ.  ಯಾವಾಗಲೂ ಏನಾ ದರೂ ಹಾಡುತ್ತಿರುವುದು, ಸಂಗೀತ ಕೇಳಿ ಬಂದೆಡೆ ಓಡಿ ಹೋಗಿ ಕುಳಿತು ಕೇಳಿ ತನ್ಮಯನಾಗುವುದು, ಹುಡುಗನ ಅಭಿರುಚಿ ಗುರುತಿಸಿದ ಶಾಲಾಮಾಸ್ತರರು ತಂದೆಗೆ ಹೇಳಿ ಕಳುಹಿಸಿ ವಿಷಯ ತಿಳಿಸಿದರು. ‘ಇವನಿಗೆ ಸಂಗೀತದಲ್ಲೇ ಉತ್ತಮ ಭವಿಷ್ಯ. ಅದನ್ನು ಕಲಿಸುವ  ಏರ್ಪಾಡುಮಾಡಿ’ ಎಂದು  ಸಲಹೆ ಕೊಟ್ಟರು. ಆ ವೇಳೆಗಾಗಲೇ ಮನೆಯವರೂ ಹುಡುಗನ ಒಲವನ್ನು ಗುರುತಿಸಿದ್ದರು. ಆ ಬಗ್ಗೆಯೇ ಚಿಂತಿಸುತ್ತಿದ್ದರು. ಮಾಸ್ತರರೂ ಹೇಳಿದ ಮೇಲೆ ಹುಡುಗನ ಭವಿಷ್ಯ ನಿರ್ಧಾರವಾಯಿತು. ಚಿಕ್ಕಪ್ಪಂದಿರಾದ ಶ್ರೀ ಭಾಸ್ಕರರಾಯರು ಹಾಗೂ ಶ್ರೀ ವೆಂಕಟನರಸಪ್ಪನವರು ಬಾಲಕ ವೆಂಕಟರಾಯನಿಗೆ ಸಂಗೀತದ ಮೊದಲ ಪಾಠಗಳನ್ನು ಮನೆಯಲ್ಲಿಯೇ ಹೇಳಿಕೊಟ್ಟರು. ಹುಡುಗ ನಿರಾಯಾಸವಾಗಿ ಸಂಗೀತ ಕಲಿಯಲಾರಂಭಿಸಿದ.

ಶಿಕ್ಷಣ, ಸಾಧನೆ

ಮುಂದೆ ಸಂಗೀತದಲ್ಲಿ ಪ್ರೌಢಶಿಕ್ಷಣ ಆಗಿನ ಕಾಲದ ಮಹಾವಿದ್ವಾಂಸರುಗಳಿಂದ. ಸಂಗೀತ ಪ್ರಪಂಚದಲ್ಲಿ ಶಾಶ್ವತ ಸ್ಥಾನ ಗಳಿಸಿಕೊಂಡಿರುವ ಶ್ರೀ ಹಾನಗಲ್ ಚಿದಂಬರಯ್ಯ, ಶ್ರೀ ಕರೂರು ರಾಮಸ್ವಾಮಪ್ಪ, ಶ್ರೀ ಪಕ್ಕಾ ಹನುಮಂತಾಚಾರ್ ಹಾಗೂ ಶ್ರೀ ನೇಕಾರಪಟ್ಟಿ ಶೇಷಯ್ಯನವರಲ್ಲಿ ವೆಂಕಟರಾಯರ ಸಂಗೀತ ಶಿಕ್ಷಣ ಮುಂದುವರಿದು ಅರಳ ಲಾರಂಭಿಸಿತು.  ಚಿಂತಲಪಲ್ಲಿಯವರ ಗುರುಗಳಾದ ಪಲ್ಲವಿ ಶೇಷಯ್ಯರ್ ಅವರ ತಂದೆ ನೇಕಾರಪಟ್ಟಿ ಸುಬ್ಬಯ್ಯ ನವರು ಸಾಕ್ಷಾತ್ ತ್ಯಾಗರಾಜರ ಶಿಷ್ಯರು ಹೀಗಾಗಿ ಮಹಾನುಭಾವ ತ್ಯಾಗರಾಜರ ಸತ್ಸಂಪ್ರದಾಯದಲ್ಲೇ ವೆಂಕಟರಾಯರ ಸಂಗೀತ ಬೆಳೆದು ಬಂದಿತು ಎನ್ನಬಹುದು. ಆರನೆಯ ವರ್ಷ ದಲ್ಲೇ ಸಂಗೀತಪಾಠ ಆರಂಭಿಸಿದರು.

ಗುರುಗಳ ಮನೆಯಲ್ಲೇ ಅವರ ವಾಸ. ಬೆಳಗಿನ ಝಾವ ನಾಲ್ಕು ಗಂಟೆಗೆ ಎದ್ದು ಕಂಠದವರೆಗೆ ತಣ್ಣೀರಿನಲ್ಲಿ ನಿಂತು ಅಕಾರ ಸಾಧನೆ, ಅನಂತರ ಗುರುಸೇವೆ, ಗುರುಗಳು ಏಳುವ ವೇಳೆಗೆ ಅವರ ಅಗತ್ಯಗಳನ್ನು ಪೂರೈಸುವುದು, ಮತ್ತೆ ಸಂಗೀತದ ಅಭ್ಯಾಸ ಮುಂದುವರಿಸಿ ಬೆಳಿಗ್ಗೆ ಹತ್ತು ಗಂಟೆಯವರೆಗೆ ಹೇಳಿಕೊಟ್ಟದ್ದನ್ನೆಲ್ಲ ಕಲಿತುಕೊಳ್ಳುವುದು, ಮಧ್ಯಾಹ್ನ ಗುರುಗಳಿಗೆ ಹಿಂದಿನಪಾಠ ಒಪ್ಪಿಸುವುದು, ಸಂಜೆ ಪುನಃ ಗುರುಗಳಿಂದ ಹೊಸ ಪಾಠ, ಇದು ಅವರ ದಿನಚರಿ, ಸುಮಾರು ಇಪ್ಪತ್ತು ವರ್ಷಗಳ ಕಾಲ ಸತತವಾಗಿ ನಡೆದ ಸಾಧನೆ.

ಹುಡುಗ ಸಂಗೀತವನ್ನು ಶ್ರದ್ಧೆಯಿಟ್ಟು ಕಲಿತ. ದೈವದತ್ತವಾಗಿ ಒಲಿದು ಬಂದಿದ್ದ ಕಂಠಶ್ರೀ. ಪ್ರತಿಭೆ ಮಿಂಚಲು ಇನ್ನೇನು ಬೇಕು? ಸ್ವಾಭಾವಿಕವಾಗಿಯೇ  ಚಿಂತಲಪಲ್ಲಿ ವೆಂಕಟರಾಯರು ಸಂಗೀತದ ಉತ್ತುಂಗ ಶಿಖರವೇರಿ ವಿಜೃಂಭಿಸಿದರು.

ಮನಸ್ಸಿಗೆ ನಾಟುವ ಸಂಗೀತ

ಶ್ರೀ ವೆಂಕಟರಾಯರದು, ಆರ್ಷೇಯ ಸಂಪ್ರದಾಯ ಬದ್ಧ ಸಂಗೀತ. ಅಪ್ಪಟ, ಶುದ್ಧ, ಭಾವಪೂರ್ಣ ಹಾಡುಗಾರಿಕೆ.

ಅವರ ಸಂಗೀತ ಕೇಳಿದ್ದವರೆಲ್ಲ ನೆನೆಯುವುದು ಅವರ ಶಾರೀರದ ಬಲಿಷ್ಠತೆ, ದಾರ್ಢ್ಯ, ಶ್ರುತಿಯೊಡನೆ ಅವರ ಕಂಠಶ್ರೀ ಮಿಳಿತವಾದುದೇ ತಡ, ಅವರ ಶಾರೀರದ ಪ್ರಭಾವ ಸಭಿಕರ ಮೇಲೆ ಸಮ್ಮೋಹನಾಸ್ತ್ರ ಬೀರುತ್ತಿತ್ತು. ತಮ್ಮ ಸಂಗೀತ ಗಂಗೆ ಯಲ್ಲಿ ಸಭಿಕರ ತಾದಾತ್ಮ್ಯ ಸಾಧಿಸಿ ತಮ್ಮೊಡನೆ ಅವರನ್ನೂ ರಸಲೋಕಕ್ಕೆ ಕೊಂಡೊಯ್ಯುವ ಶಕ್ತಿಯಿದ್ದ ಮಹಾನ್ ಕಲಾವಿದ ವೆಂಕಟರಾಯರು. ಶಾಸ್ತ್ರೀಯ ಸಂಗೀತದ ಕಟ್ಟು ನಿಟ್ಟಿನ ಪಾಲನೆ, ಅವರ ಪಲ್ಲವಿ ಹಾಡುಗಾರಿಕೆಯಲ್ಲಿ ಎದ್ದು ಕಾಣುತ್ತಿತ್ತು. ಸ್ವರವಿನ್ಯಾಸ, ರಾಗಾಲಾಪನೆಯಲ್ಲೂ ಅವರದು ಎತ್ತಿದ ಕೈ. ಯಾವುದೇ ರೀತಿಯ ಕೃತಕ ಅಲಂಕಾರವಿಲ್ಲ. ಮನಸ್ಸಿಗೆ ನೇರವಾಗಿ ನಾಟುವ ಸಂಗೀತ, ಅವರ ಹಾಡುಗಾರಿಕೆ ಕೇಳಿದ ಪಂಡಿತ ಪಾಮರರೆಲ್ಲ ‘ಭೇಷ್! ಇದು ಗಂಡು ಹಾಡುಗಾರಿಕೆ, ಗಟ್ಟಿ ಸಂಗೀತ’ ಎಂದು ಉದ್ಗರಿಸುತ್ತಿದ್ದರು.

ಸಂಗೀತದ ಎಲ್ಲ ಪ್ರಕಾರಗಳಲ್ಲೂ ಅವರದು ಸಂಪೂರ್ಣ ಪಾಂಡಿತ್ಯ. ಕಾಂಬೋಧಿ, ಭೈರವಿ ರಾಗಗಳು ಅವರಿಗೆ  ಬಹಳ ಪ್ರೀತಿಯ ರಾಗಗಳಂತೆ. ಈ ಯಾವುದಾದರೊಂದು ರಾಗವನ್ನು ಹಾಡುತ್ತಾ ಹಾಡುತ್ತಾ ತನ್ಮಯರಾಗಿ ತಮ್ಮನ್ನು ತಾವೇ ಮರೆಯುತ್ತಿದ್ದುದೂ ಉಂಟು.

ಸಂಗೀತ ಕೇಳಿದ ಸರ್ಪ

ಇಂತಹುದೇ ಒಂದು ಸಂದರ್ಭ.   ಸ್ವಗ್ರಾಮ  ಚಿಂತಲಪಲ್ಲಿಯಲ್ಲಿ ಒಮ್ಮೆ ಹಾಡುತ್ತಾ ಕುಳಿತರು. ಬಾಹ್ಯ ಲೋಕದ ಅರಿವೇ ಅವರಿಗಿರಲಿಲ್ಲ. ಸಂಗೀತದ ರಸ ಲೋಕದಲ್ಲಿ ಲೀನರಾಗಿ ಹೋಗಿದ್ದರು. ದೊಡ್ಡ ನಾಗರ ಹಾವೊಂದು ಸದ್ದಿಲ್ಲದೆ ಹರಿದು ಬಂತು. ಅಲ್ಲೇ ಸ್ವಲ್ಪ ದೂರದಲ್ಲಿ ಮುದುಡಿ ಕುಳಿತು ಸಂಗೀತ ಕೇಳಿತು. ವೆಂಕಟರಾಯರಿಗೆ ಇದರ ಅರಿವೇ ಇಲ್ಲ. ಮನೆಯವರಿಗೆಲ್ಲ ಗಾಬರಿಯೋ ಗಾಬರಿ. ಸರ್ಪ ಬಂದು ಕುಳಿತಿದೆ, ಏನು ಮಾಡಿದರೆ ಎಂತೋ? ಇವರೋ ಮೈಮರೆತು ಹಾಡುತ್ತಿದ್ದಾರೆ. ಇವರನ್ನು ಈ ರಸಲೋಕದಿಂದ ಎಳೆದು ತರುವುದು ಕಷ್ಟಸಾಧ್ಯವೇ ಸರಿ. ಆದರೆ ಸರ್ಪ ಕಚ್ಚಿದರೆ ಏನು ಗತಿ! ಈ ಸಂದಿಗ್ಧದಲ್ಲೇ ಕೆಲಸಮಯ ಕಳೆಯಿತು. ಸಂಗೀತಕ್ಕೆ ಮಾತ್ರ ತಡೆ ಬರಲಿಲ್ಲ, ಅವರ ಸಂಗೀತ ಭೋರ್ಗರೆದು ಅಡೆತಡೆಯಿಲ್ಲದೆ, ತನ್ನದೇ ಆದ ಲಾಸ್ಯದೊಡನೆ ಮುಂದುವರಿದೇ ಇತ್ತು. ಕೆಲಕಾಲ ಗಂಧರ್ವಗಾನ ಕೇಳಿದ ಸರ್ಪ ಮನೆಯವರ ಗಮನ ಮತ್ತೆ ತನ್ನ ಕಡೆಗೆ ತಿರುಗುವ ವೇಳೆಗೆ ಅಲ್ಲಿರಲೇ ಇಲ್ಲ. ಅದು ಎಲ್ಲಿಂದ ಬಂತು? ಎಲ್ಲಿಗೆ ಹೋಯಿತು? ಯಾರಿಗೂ ತಿಳಿಯದು.

ಚಿಂತಲಪಲ್ಲಿಯವರ ಕಛೇರಿಗಳು

ಆಗಿನ ಕಾಲದಲ್ಲಿ ಧ್ವನಿವರ್ಧಕಗಳ ಹೆಸರೇ ಇಲ್ಲ. ಧ್ವನಿಯಿದ್ದವರಷ್ಟೇ ಹಾಡುಗಾರಿಕೆಯಲ್ಲಿ ಈಸಿ ಜೈಸಬಲ್ಲ ಕಾಲ. ವೆಂಕಟರಾಯರಿಗೆ ಈ ಬಗ್ಗೆ ಸಮಸ್ಯೆಯೇ ಇರಲಿಲ್ಲ. ಸಹಸ್ರಾರು ಜನರು ಕುಳಿತು ತಲ್ಲೀನರಾಗಿ ಕೇಳುತ್ತಿದ್ದ ಅವರ ಕಛೇರಿಗಳು ತುಂಬ ಯಶಸ್ವಿಯಾಗಿ ನಡೆಯುತ್ತಿದ್ದವು.

ಅಂದಿನ ದಿನಗಳಲ್ಲಿ ಸಾಮಾನ್ಯವಾಗಿ ಕಛೇರಿಗಳು ನಡೆಯುತ್ತಿದ್ದುದು ರಾತ್ರಿ ಕಾಲದಲ್ಲಿ. ರಾತ್ರಿ ಒಂಬತ್ತು ಗಂಟೆಗೆ ಆರಂಭವಾದರೆ ಬೆಳಿಗ್ಗೆ ಎರಡು ಮೂರು ಗಂಟೆಯವರೆಗೆ ಮುಂದುವರಿಯುತ್ತಿತ್ತು. ವೆಂಕಟರಾಯರಿಗೆ ತಮ್ಮ ಸಂಗೀತ ಕಛೇರಿಗಳಿಗೆ ಕಾಲದ ಮಿತಿ ವಿಧಿಸುವುದು ಸರಿಬರುತ್ತಿರಲಿಲ್ಲ. ಅವರ ದೃಷ್ಟಿಯಲ್ಲಿ ಮನೋಧರ್ಮಕ್ಕೇ ಪ್ರಾಶಸ್ತ್ಯ. ಮಂಗಳ ಹಾಡಿದಾಗಲೇ ಕಛೇರಿಯ ಮುಕ್ತಾಯ. ಎಷ್ಟೋ ವೇಳೆ ಒಂದೇ ರಾಗವನ್ನು ಮೂರು ನಾಲ್ಕು ಗಂಟೆಗಳ ಕಾಲ ಹಾಡಿ ಬೆರಗು ಗೊಳಿಸಿದ್ದೂ ಉಂಟು. ಹಾಗೆಯೇ ಮೂರು ನಾಲ್ಕು ಗಂಟೆಗಳಲ್ಲಿ ಹತ್ತಿಪ್ಪತ್ತು ಕೃತಿಗಳನ್ನು ಹಾಡಿ ರಸಿಕರನ್ನು ತಣಿಸಿದ್ದೂ ಉಂಟು.

ರಾಯರು ತಮ್ಮ ಸಂಗೀತ ಜೀವನದಲ್ಲಿ ಸತ್ವಪರೀಕ್ಷೆ ಗೊಳಗಾದ ಸನ್ನಿವೇಶಗಳೆಷ್ಟೋ! ಅಂತಹ ಪರಿಸ್ಥಿತಿಯನ್ನು ಎದುರಿಸಲೆಂದೇ ಅವರು ತಮ್ಮ ಬತ್ತಳಿಕೆಯಲ್ಲಿ ಅನೇಕ ಅಪರೂಪ, ಅಪೂರ್ವ ಹಾಗೂ ಕ್ಲಿಷ್ಟವಾದ ಪಲ್ಲವಿಗಳನ್ನು ಯಾವಾಗಲೂ ಹೊಂದಿರುತ್ತಿದ್ದರು.

ವೆಂಕಟರಾಯರು ಸ್ವಯಂ ಮೃದಂಗವಾದನದಲ್ಲಿ ಸಾಕಷ್ಟು ಪರಿಶ್ರಮ ಹೊಂದಿದ್ದ ರೆಂದೂ ಹೇಳುತ್ತಾರೆ.

ಅವರಿಗೆ ಪಕ್ಕವಾದ್ಯ ನುಡಿಸಲು ಪಳಗಿದ ವಾದ್ಯಗಾರರೂ ಎರಡೆರಡು ಸಲ ಯೋಚಿಸುತ್ತಿದ್ದರು. ಕೀರ್ತಿಶೇಷ ಸೋಸಲೆ ರಾಮದಾಸರು ವೆಂಕಟರಾಯರ ಕಛೇರಿಗಳಲ್ಲಿ ಖಂಜರ ನುಡಿಸುತ್ತಿದ್ದರು. ವೇದಿಕೆಯ ಮೇಲೆ ಅವರಿಬ್ಬರ ಸಮ್ಮಿಲನ, ವಿದ್ವತ್ ಪ್ರದರ್ಶನ ಸಭಿಕರಿಗೆ ಒಂದು ಅಪೂರ್ವ ಅನುಭವ ರಸದೂಟ.

ಗಾಂಭಿರ್ಯ, ಸೌಜನ್ಯ

ವೆಂಕಟರಾಯರದು ಒಳ್ಳೆಯ ಮೈಕಟ್ಟು, ಆರು ಅಡಿ ಎತ್ತರದ ನೀಳಕಾಯ. ಕಪ್ಪು ಬಣ್ಣ. ಉದ್ದ ಮೂಗು, ವಿದ್ವತ್ ಮಿಂಚುತ್ತಿದ್ದ ಹೊಳಪಿನ ಕಣ್ಣುಗಳು. ಅವರ ಘನ ವ್ಯಕ್ತಿತ್ವದ ಸಂಕೇತವಾಗಿದೆಯೋ ಎಂಬಂತಿದ್ದ ದಟ್ಟವಾದ ದೊಡ್ಡ ಮೀಸೆ. ಅವರ ಜೀವನ ಸಂಧ್ಯೆಯಲ್ಲೂ ಮೀಸೆ ಹಾಗೆಯೇ ಇತ್ತು. ಬಣ್ಣ ಮಾತ್ರ ಬೆಳ್ಳಿಯಾಗಿತ್ತು. ಅವರ ಸೌಮ್ಯ ಗಂಭೀರ ಮುಖಮುದ್ರೆ ಗೌರವ ಮತ್ತು ವಿಶ್ವಾಸ ಹುಟ್ಟಿಸುವಂತಿತ್ತು. ಯಾವಾಗಲೂ ಸ್ನೇಹ ಪೂರ್ಣ ಸರಸನಗು. ತೊಂಬತ್ತು ವರ್ಷವಾದರೂ ಸೊಂಟ ಬಗ್ಗಿರಲಿಲ್ಲ. ಒಮ್ಮೆ ನೋಡಿ ಮಾತನಾಡಿಸಿದವರು ಮತ್ತೆ ಮತ್ತೆ ಅವರನ್ನು ಕಾಣಬೇಕು, ಮಾತನಾಡಿಸಬೇಕು ಎನ್ನಿಸುವಂತಹ ಸ್ನೇಹಮಯಿ.

ಕಟ್ಟುನಿಟ್ಟು ಜೀವನದ ಒಳ್ಳೆಯ ಆರೋಗ್ಯ ಅವರದು. ಕೊನೆಯ ದಿನಗಳವರೆಗೂ ಪ್ರತಿದಿನ ಮೂರು ನಾಲ್ಕು ಕಿಲೋ ಮೀಟರ್ ದೂರವಾದರೂ ನಡೆಯುವ ಅಭ್ಯಾಸ. ಈ ನಡಿಗೆಯ ಸಮಯದಲ್ಲೇ ಆಪ್ತೇಷ್ಟರ ಮನೆಗೆ ಭೇಟಿ, ಯೋಗಕ್ಷೇಮ ವಿಚಾರಣೆ. ಹಿರಿಯರೇ ಮನೆ ಬಾಗಿಲಿಗೆ ಬಂದು ಯೋಗಕ್ಷೇಮ ವಿಚಾರಿಸಿದಾಗ ನಾಚಿಕೊಂಡ ಕಿರಿಯರು, ‘ನಾವೇ ಬರುತ್ತಿದ್ದೆವು; ನೀವೇಕೆ ಶ್ರಮ ತೆಗೆದುಕೊಳ್ಳುತ್ತೀರಿ?’ ಎಂದು ವಿನಯದಿಂದ ನುಡಿದರೆ, “ನಾನು ನಿಮ್ಮನ್ನು ನೋಡುವುದೇ ಶ್ರೇಯಸ್ಸು’ ಎಂದು ಆಶೀರ್ವದಿಸಿ ಮುನ್ನಡೆಯುತ್ತಿದ್ದರು.

’ಇನ್ನು ನಾನು ಇಲ್ಲಿರಲಾರೆ’

ಪ್ರತಿಭೆ ಮಿಂಚಿ ಬೆಳಗುತ್ತಿದ್ದರೂ, ಮನಸ್ಸಿನ  ಅಭಿಲಾಷೆ ಈಡೇರಲು ಕಾಲ ಕೂಡಿಬರಬೇಕು. ವೆಂಕಟ ರಾಯರ ಜೀವನದಲ್ಲಂತೂ ಇದು ನಿಜ.

ಸ್ವತಃ ಕಲಾವಿದರೂ, ಕಲಾಪ್ರೇಮಿಗಳೂ ಆಗಿದ್ದ ಕೃಷ್ಣರಾಜ ಒಡೆಯರು ಅಂದಿನ ಮೈಸೂರು ಮಹಾರಾಜರು. ಅವರನ್ನು ಭೇಟಿಮಾಡಬೇಕು, ಅವರ ಮುಂದೆ ಹಾಡಿ ಸೈ ಅನ್ನಿಸಿಕೊಳ್ಳಬೇಕು, ಅವರು ಆನಂದಿಸುವುದನ್ನು ಕಾಣಬೇಕು ಎಂಬ ವೆಂಕಟರಾಯರ ಆಸೆ ಕೈಗೂಡಲು ಬಹಳ ದಿನಗಳೇ ಕಾಯಬೇಕಾಯಿತು.

ನಾಲ್ವಡಿ ಕೃಷ್ಣರಾಜ ಒಡೆಯರ ಆಸ್ಥಾನವು ಸಂಗೀತ ಹಾಗೂ ಇತರ ಕಲೆಗಳ  ಪ್ರೋತ್ಸಾಹಕ್ಕೆ ತುಂಬ ಹೆಸರು ಪಡೆದಿತ್ತು. ದೇಶದ ಎಲ್ಲ ಕಡೆಗಳಿಂದ ವಿದ್ವಾಂಸರು ಬಂದು ಹಾಡಿ, ಪುರಸ್ಕಾರ, ಗೌರವ ಪಡೆದು ಸಂತೃಪ್ತರಾಗಿ ಹಿಂದಿರುಗುತ್ತಿದ್ದರು. ಮಹಾರಾಜರಿಗೆ ಸಂಗೀತದಲ್ಲಿ ಆಳ ವಾದ ಜ್ಞಾನ, ಆದ್ದರಿಂದ ಆಸ್ಥಾನಕ್ಕೆ ಬರುತ್ತಿದ್ದ ಬಹುಮಂದಿ ವಿದ್ವಾಂಸರಿಗೆ, ಇಂತಹ ದೊರೆಯ ಮೆಚ್ಚುಗೆ ಪಡೆದರೆ ವಿದ್ಯೆ ಕಲಿತದ್ದಕ್ಕೂ ಸಾರ್ಥಕ ಎಂಬ ಹಂಬಲ.

ವೆಂಕಟರಾಯರಿಗೂ ಈ ಕಲಾವಿದ – ದೊರೆಯ ಮುಂದೆ ಹಾಡಿ ಅವರನ್ನು ಮೆಚ್ಚಿಸುವ ಆಸೆ. ಆದರೆ ಹೇಗೋ ಏನೋ ಅವರಿಗೆ ಅವಕಾಶ ದೊರೆಯಲಿಲ್ಲ. ಸ್ವಲ್ಪ ಒತ್ತಾಯ ಪಡಿಸಿದಾಗ ಆಸ್ಥಾನದ ಸುತ್ತಮುತ್ತಲಿನವರಾರೋ ‘ಇವರು ಹಾಡೋ ಸಂಗೀತಕ್ಕೆ ರಾಜಮರ್ಯಾದೆ ಬೇರೆ ಬೇಕಂತೇನು’ ಎಂಬ ಸಣ್ಣ ಮಾತನ್ನಾಡಿದರಂತೆ. ವೆಂಕಟರಾಯರ ಕಿವಿಗೂ ಈ ಮಾತು ಬಿತ್ತು, ಅವರದು ಮೊದಲೇ ಕೆಚ್ಚಿನ ಜೀವ. ಇಂತಹ ಸಣ್ಣ ಮಾತನ್ನು ಸಹಿಸುವುದುಂಟೆ! ‘ಇನ್ನು ನಾನಿಲ್ಲಿರಲಾರೆ, ಆಸ್ಥಾನ ತಾನಾಗಿಯೇ ನನ್ನನ್ನು ಆಹ್ವಾನಿಸಿ ಕರೆದು ಹಾಡಿಸುವವರೆಗೆ ನಾನು ಹಾಡುವವನಲ್ಲ’ ಎಂದು ಹಠತೊಟ್ಟು ರೋಷದಿಂದ ಮೈಸೂರು ಸಂಸ್ಥಾನವನ್ನೇ ಬಿಟ್ಟು ಹೊರಟರಂತೆ.

ಅಲ್ಲಿಂದ ಮುಂದೆ ಅವರ ಓಡಾಟ, ಸಂಗೀತ ಕಛೇರಿಗಳೆಲ್ಲ ರಾಯಲಸೀಮೆ ಹಾಗೂ ಆಂಧ್ರಪ್ರದೇಶ ದಲ್ಲಿಯೇ ಪೆನುಗೊಂಡೆ, ಅನಂತಪುರ ಮುಂತಾದ ಕಡೆ ಕಛೇರಿ. ಬರೋಡ, ಗದ್ವಾಲ್, ಸಂಡೂರು ಅರಸರಿಂದ ಮನ್ನಣೆ. ಅವರು ಮೈಸೂರು ಸಂಸ್ಥಾನದ ಆಸ್ಥಾನದಲ್ಲಿ ಮಹಾರಾಜರ ಮುಂದೆ ಹಾಡಿದ್ದು ಬಹುವರ್ಷಗಳ ಅನಂತರ, ಅದೂ ಅಲ್ಲಿಂದ ಆಹ್ವಾನ ಬಂದನಂತರವೇ. ಆ ವೇಳೆಗೆ ಈಗಲೇ ಅವರಿಗೆ ಅರವತ್ತೆರಡು-ಅರವತ್ತಮೂರು ವರ್ಷ ವಯಸ್ಸಾಗಿದ್ದು, ಸಂಗೀತ ಕ್ಷೇತ್ರದಲ್ಲಿ ಹೆಸರು, ಕೀರ್ತಿ, ಸಂಪತ್ತು ಎಲ್ಲ ಗಳಿಸಿದ್ದರು.

ಮಗನ ಕಛೇರಿ ಮೊದಲು

ಆ ಕಛೇರಿ ನಡೆದ ರೀತಿಯೂ ಒಂದು ವಿಪರ್ಯಾಸವೇ.

ಮಗ ಶ್ರೀ  ಚಿಂತಲಪಲ್ಲಿ ರಾಮಚಂದ್ರರಾಯರೂ ಕರ್ನಾಟಕ ಸಂಗೀತದ ದೊಡ್ಡ ವಿದ್ವಾಂಸರು. ಒಳ್ಳೆಯ ಶಾರೀರ; ಮನೋಧರ್ಮ. ಅವರು ಕಿರಿವಯಸ್ಸಿನಲ್ಲಿಯೇ ತಂದೆಯ ಹೆಸರು ಉಳಿಸುವ ಮಗನಾಗಿ ಮಿಂಚಿದರು. ಹುಡುಗನ ಸಂಗೀತ ಕೇಳಿದವರು, ಪ್ರತಿಭೆಗೆ ತಲೆ ದೂಗಿದವರು, ಈ ಕಿರಿಯ ಕಲಾವಿದ ಮಹಾರಾಜರ ಮುಂದೆ ಹಾಡಬೇಕೆಂದುಕೊಂಡರು. ಸರಿ ಅರ್ಜಿಯನ್ನು ಕೊಡಿಸಿದರು. ಕಛೇರಿಗೆ ಬೇಗನೆ ಅವಕಾಶ ಸಿಗುವ ಸೂಚನೆಗಳು ಕಂಡವು. ತಂದೆ  ಚಿಂತಲಪಲ್ಲಿ ವೆಂಕಟರಾಯರು ಮಗ ರಾಮಚಂದ್ರರಾಯರನ್ನು ಮೈಸೂರಿಗೆ ಕರೆದುಕೊಂಡು ಹೋಗಿ ಆಪ್ತರೊಬ್ಬರ ಮನೆಯಲ್ಲಿ ಇಳಿದುಕೊಂಡರು. ಏಳೆಂಟು ದಿನಗಳು ಕಾದರೂ ಅರಮನೆಯಿಂದ ಯಾವ ಸುದ್ದಿಯೂ ಇಲ್ಲ. ವೆಂಕಟ ರಾಯರಿಗೆ ಮತ್ತೆ ಬೇಸರವಾಯಿತು. ಮಗ ನನ್ನು ಅಲ್ಲಿಯೇ ಬಿಟ್ಟು ತಾವು ಹಳ್ಳಿಗೆ ಹಿಂದಿರುಗಿದರು. ಅವರು ಅತ್ತ ಹೊರಟ ದಿನವೇ ಇತ್ತ ಕಛೇರಿ ಏರ್ಪಾಡಾದ ಸುದ್ದಿ ಬಂತು.

ಬಾಲಕ ರಾಮಚಂದ್ರರಾಯರ ಹಿರಿಯ ಮಟ್ಟದ ಸಂಗೀತ ಕೇಳಿ ಆನಂದಿಸಿದ ಮಹಾರಾಜರು, ಇವರು ಯಾರ ಮಗ ಎಂದು ವಿಚಾರಿಸಿ ಎಲ್ಲ ವಿವರಗಳನ್ನೂ  ತಿಳಿದುಕೊಂಡರು.

ಬಯಸಿದ ಅವಕಾಶ-ಸವಾಲು

ಅನಂತರ ಸ್ವತಃ ಮಹಾರಾಜರೇ  ಚಿಂತಲಪಲ್ಲಿ ವೆಂಕಟರಾಯರಿಗೆ ಹೇಳಿ ಕಳುಹಿಸಿ ಕರೆಸಿಕೊಂಡು ಅವರ ಸಂಗೀತ ಕೇಳಿ ಬ್ರಹ್ಮಾನಂದ ಪಟ್ಟರು. ‘ನಮ್ಮವರ ಪ್ರತಿಭೆ ನಮ್ಮ ಅರಿವಿಗೆ ಬರಲು ಇಷ್ಟು ತಡವಾಯಿತೇ?’ ಎಂದು ಬೇಸರಪಟ್ಟರು.

ಬರಿ ದೇವರನಾಮಗಳ ಸಂಗೀತ ಅವರದು ಎಂದು ವೆಂಕಟರಾಯರಿಗೆ ಆಗದಿದ್ದ ಯಾರೋ ಕೆಲವರು ಮಹಾರಾಜರ ಮುಂದೆ ಅವರನ್ನು ಅಲ್ಲಗಳೆದಿದ್ದರಂತೆ. ವೆಂಕಟರಾಯರಿಗೆ ಇದೇ ಒಂದು ಸವಾಲಾಯಿತು. ‘ದೇವರ ನಾಮಗಳೇನು, ಕಡಿಮೆ ಸಂಗೀತವೇ? ಅದರಲ್ಲೇನು ಸತ್ವವಿಲ್ಲವೇ’? ಎಂದು ಮನಸ್ಸಿನಲ್ಲೇ ನಿರ್ಧಾರ ಮಾಡಿ ಹಾಡಲಾರಂಭಿಸಿದರಂತೆ.

ನಾಲ್ವಡಿ ಕೃಷ್ಣರಾಜ ಒಡೆಯರವರೋ ಸ್ವತಃ ದೊಡ್ಡ ವಿದ್ವಾಂಸರು. ಅವರ ಮುಂದೆ ಹಾಡಲು ದೀರ್ಘಕಾಲ ಕಾದಿದ್ದ ನಂತರ ದೊರೆತ ಅವಕಾಶ ಪ್ರಥಮ ಕಛೇರಿ. ಆಹ್ವಾನಿತರಾದ ಕೆಲವೇ ಶ್ರೋತೃಗಳ ಮುಂದೆ ಪ್ರೌಢಿಮೆಯ ಪ್ರದರ್ಶನ ವಾಗಬೇಕು. ತಮ್ಮ ಪರಿಪಕ್ವ ಸಂಗೀತದ ಪರಿಚಯ ಮಾಡಿಕೊಡಬೇಕು. ವೆಂಕಟರಾಯರು ಹಾಡಲಾರಂಭಿಸಿ ದರು. ಒಂದಾದ ಮೇಲೊಂದರಂತೆ ಹರಿದು ಬಂದ ದೇವರನಾಮಗಳ ಕಛೇರಿ, ದೇವರನಾಮಗಳಲ್ಲೇ ಮೂಡಿಬಂದ ಸಂಗೀತ ರಸಧಾರೆಯ ಪ್ರೌಢಿಮೆ ಮಹಾರಾಜರನ್ನು ಅಚ್ಚರಿಗೊಳಿಸಿತು. ಸಂಗೀತ, ಸಾಹಿತ್ಯಗಳ ಮೇಲಣ ಅವರ ಪ್ರಭುತ್ವಕ್ಕೆ, ಅಸೀಮ ಪಾಂಡಿತ್ಯಕ್ಕೆ ಮಹಾರಾಜರು ವಿಸ್ಮಿತರಾದರು. ಕಛೇರಿ ಮುಗಿಯಿತು.

ಹೃದಯ ತುಂಬಿ ಬಂದು ಬಾಯಿಕಟ್ಟಿದ್ದ ಮೆಲುನುಡಿಯಲ್ಲಿ ಕೃಷ್ಣರಾಜ ಒಡೆಯರವರು, ನಿಧಾನವಾಗಿ ಮೆಚ್ಚುಗೆಯ ಮಾತುಗಳನ್ನಾಡಿದರಂತೆ, ‘ನಮ್ಮ ಸಂಸ್ಥಾನದ ಸಂಗೀತದ ದೊಡ್ಡ ನಿಧಿ ನೀವು. ನಿಮ್ಮದು ಅಪಾರ ಜ್ಞಾನ. ನಿಮ್ಮ ಸಂಗೀತ ಕೇಳಿ ನಾವಿಂದು ಕೃತಾರ್ಥರಾದೆವು’ ಎಂದು.

ಅನಂತರ ಮಹಾರಾಜರು ವೆಂಕಟರಾಯರನ್ನು ಒಳಕ್ಕೆ ಕರೆಸಿಕೊಂಡು ಒಬ್ಬರೇ ಕುಳಿತು ಖಾಸಗಿಯಾಗಿ ಮಾತುಕತೆ ನಡೆಸಿದರಂತೆ ಅದುವರೆಗೂ ಆಸ್ಥಾನಕ್ಕೆ ಬಾರದಿದ್ದ ಕಾರಣದ ಬಗ್ಗೆಯೂ ವಿಚಾರಿಸಿದರಂತೆ ವೆಂಕಟರಾಯರು, ‘ಬಂದಿದ್ದರೆ ಹಾಡಬಹುದಿತ್ತು. ಆದರೆ ಎಲ್ಲದಕ್ಕೂ ಪ್ರಾಪ್ತಿ ಬರ ಬೇಕು. ಆ ಪ್ರಾಪ್ತಿ ಲಭ್ಯವಾದದ್ದು ಈಗ. ಈ ಸಂಸ್ಥಾನ ನನಗೆ ಮಾತೃದೇವತೆಯಂತೆ. ಮಾತೃಸೇವೆ ಯೊಂದನ್ನು ಇನ್ನೂ ಮಾಡಿಲ್ಲ ಎಂಬ ಕೊರಗು ನನ್ನನ್ನು ಇದುವರೆಗೂ ಕಾಡಿಸುತ್ತಿತ್ತು. ಈಗ ತಮ್ಮ ಕೃಪೆಯಿಂದ ಆ ಕೊರಗು ನೀಗಿತು, ಹಾಡಿ ಧನ್ಯನಾದೆ’ ಎಂದರಂತೆ.

ಕೃಷ್ಣರಾಜರ ಅಭಿಮಾನ

ಮಾರನೆಯ ದಿನವೇ ಅರಮನೆಯಿಂದ ಮತ್ತೆ ಆಹ್ವಾನ ತಂದೆ- ಮಗ ಇಬ್ಬರೂ ಜೊತೆಯಲ್ಲಿ ಹಾಡಬೇಕೆಂಬ ಸೂಚನೆ. ಅನಂತರ ಮತ್ತೆ ವೆಂಕಟರಾಯರ ಸಂಗೀತ. ಹೀಗೆ ಹಲವಾರು ದಿನ, ಪದೇ ಪದೇ ವೆಂಕಟ ರಾಯರ ಸಂಗೀತ ಕೇಳಿ ಮಹಾರಾಜರು ಆನಂದಿಸಿದರು. ರಾಯರಿಗೆ ನಗದು ಬಹುಮಾನ, ಚಿನ್ನದ ಘನ-ಪದಕ, ಜೋಡಿ ಶಾಲು, ಕಮ್ಮರ್ ಬಂದ್ ಇವುಗಳನ್ನು ನೀಡಿ ಸನ್ಮಾನಿಸಿದರು. ಈ ಕಮ್ಮರ್ ಬಂದನ್ನು ವೆಂಕಟರಾಯರು ಕಡೆಗಾಲದವರೆಗೂ ಜೋಪಾನ ವಾಗಿಟ್ಟುಕೊಂಡಿದ್ದು ಮುಖ್ಯ ಸಂದರ್ಭಗಳಲ್ಲೆಲ್ಲ ಅಭಿಮಾನದಿಂದ ಕೋಟಿನ ಮೇಲೆ ಧರಿಸುತ್ತಿದ್ದರು.

ಅಂದಿನ ದಿನಗಳಲ್ಲಿ ಮೈಸೂರು ಅರಮನೆಯ ನವರಾತ್ರಿ ಉತ್ಸವ ಎಂದರೆ ಕಲಾವಿದರುಗಳಿಗೆ ಒಂದು ಅಪೂರ್ವ ಅವಕಾಶ ಪ್ರತಿಭಾ ಪ್ರದರ್ಶನಕ್ಕೆ, ಮಹಾರಾಜರ ದೃಷ್ಟಿಗೆ ಬೀಳುವುದಕ್ಕೆ ಒಂದು ಸುಸಮಯ. ವಿದ್ವಾಂಸರು ಗಳೆಲ್ಲ ಆ ಉತ್ಸವಕ್ಕೆ ತಾವಾಗಿಯೇ ಹೋಗಿ ಹಾಡುವ ರೂಢಿ ಇತ್ತು. ಆದರೆ ವೆಂಕಟರಾಯರು ತಾವಾಗಿ ಹೋಗಿ ಮುಂದಿನ ನವರಾತ್ರಿ ಉತ್ಸವದಲ್ಲಿ ಭಾಗವಹಿಸಲಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರು ಇದನ್ನು ಗಮನಿಸಿದರು. ತಾನಾಗಿಯೇ ಬರುವ ಆಸಾಮಿ ಇವರಲ್ಲ ಎಂದು ಮನಗಂಡು ವೆಂಕಟರಾಯರನ್ನು ಆಸ್ಥಾನ ವಿದ್ವಾಂಸರೆಂದು ಪರಿಗಣಿಸಿ ನವರಾತ್ರಿಯ ನಂತರ ಪ್ರಕಟಿಸಿದರು. ಇದೊಂದು ರೀತಿಯಲ್ಲಿ ಅರಮನೆಯ ಸರ್ವ ಕಾಲದ ಆಹ್ವಾನವಿದ್ದಂತೆ. ನವರಾತ್ರಿ, ಮಹಾರಾಜರ ವರ್ಧಂತಿ ಮತ್ತು ಇತರ ವಿಶೇಷ ಸಂದರ್ಭಗಳಲ್ಲೆಲ್ಲ ಆಸ್ಥಾನ ವಿದ್ವಾಂಸರುಗಳು ಮೈಸೂರಿನಲ್ಲಿಯೇ ಇದ್ದು ಕಛೇರಿಗಳನ್ನು ಮಾಡಬೇಕಾಗುತ್ತಿತ್ತು. ಅಲ್ಲದೆ ಮಹಾರಾಜರು ತಮಗೆ ಬೇಕೆನಿಸಿದಾಗಲೆಲ್ಲ ಹೇಳಿಕಳುಹಿಸಿ ಕರೆಸಿಕೊಂಡು ಸಂಗೀತ ಕೇಳಿ ಸುಖಿಸುತ್ತಿದ್ದರು.

ತಮ್ಮ ಸಂಗೀತಕ್ಕೆ ತಮ್ಮ ನಾಡಿನಲ್ಲೇ ಸಾಕಷ್ಟು ಪ್ರೋತ್ಸಾಹ ಸಿಗದೆ ವಿರಕ್ತಭಾವ ತಾಳಿದ್ದ ವೆಂಕಟರಾಯರನ್ನು ಮಹಾರಾಜರು ಮತ್ತೊಮ್ಮೆ ಸಂಗೀತದ ವಾಸ್ತವಿಕ ಪ್ರಪಂಚಕ್ಕೆ ಎಳೆದುತಂದರು.

ಅನಂತರವೂ ಕೂಡ ವೆಂಕಟರಾಯರು ಸಾರ್ವಜನಿಕ ಕಛೇರಿಗಳಿಗೆ ಒಪ್ಪಿಕೊಳ್ಳುತ್ತಿದ್ದುದು ಕಡಿಮೆಯೇ. ಅಭಿಮಾನಿಗಳ ಬಲವಂತ ಹೆಚ್ಚಾದರೆ ಒಂದೊಂದು ಕಛೇರಿ ಅಷ್ಟೆ.

ಮಹಾರಾಜರು ಬೆಂಗಳೂರಿಗೆ ಬಂದಾಗಲೆಲ್ಲ ವೆಂಕಟರಾಯರನ್ನು ಕರೆಸಿಕೊಳ್ಳುತ್ತಿದ್ದರು. ಸಂಗೀತದ ಕೊಂಡಿಯಿಂದ ಅವರವರಲ್ಲಿ ಆತ್ಮೀಯ ಭಾವನೆಯೂ ಬೆಳೆದುಬಂದಿತು. ಆದರೆ ವೆಂಕಟರಾಯರು ಎಂದೂ ಈ ಸ್ನೇಹದ ಸಲ್ಲದ ಲಾಭ ಪಡೆದವರಲ್ಲ.

ಒಮ್ಮೆ ಶ್ರೀ ಕೃಷ್ಣರಾಜ ಒಡೆಯರ್ ಅವರೇ ಹೇಳಿದರಂತೆ ‘ನಿಮ್ಮ ಸಂಗೀತದಿಂದ ನಾವು ತುಂಬ ಸಂತೋಷ ಪಟ್ಟಿದ್ದೇವೆ. ನಿಮಗೇನಾದರೂ ಬೇಕಿದ್ದರೆ ಕೇಳಬಹುದು’ಎಂದು.

ವೆಂಕಟರಾಯರದು ದಿಟ್ಟ ಸ್ವಬಾವ, ಅವರ ಮಾತೂ ಹಾಗೆಯೇ.

‘ಮಾತೃಸೇವೆಯ ಸೌಭಾಗ್ಯ ನೀವು ಕಲ್ಪಿಸಿದಿರಿ. ನಾನು ಧನ್ಯನಾದೆ. ಇನ್ನು ನನಗೂ, ನಿಮಗೂ ಕೊಡುವವನು ಒಬ್ಬನೇ. ಆ ಭಗವಂತನಿದ್ದಾನೆ. ಅವನ ಕೃಪೆ ಬೇಕು. ಆಳುವ ದೊರೆ ನಿಮ್ಮ ಅಭಿಮಾನವಿರಬೇಕು. ಅಷ್ಟಿದ್ದರೆ ಸಾಕು’ ಎಂದು ವಿನಯದಿಂದಲೇ ಆದರೆ ದಿಟ್ಟವಾದ ಉತ್ತರ ನೀಡಿದರಂತೆ!

ಮಹಾರಾಜರು ನಕ್ಕು ಸುಮ್ಮನಾದರು. ಆದರೆ ಅವರಿಗೆ ತಿಂಗಳ ವೇತನ ಗೊತ್ತುಮಾಡಿ ಆಜ್ಞೆ ಮಾಡಿದರಂತೆ.

ಜಯಚಾಮರಾಜರ ಗೌರವ

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ನಿಧನದ ನಂತರ ದುಃಖತಪ್ತರಾದ ವೆಂಕಟರಾಯರು ಮೈಸೂರಿಗೇ ಹೋಗಿರಲಿಲ್ಲ

ಅನಂತರ ಸಿಂಹಾಸನಕ್ಕೆ ಬಂದ ಶ್ರೀ ಜಯ ಚಾಮರಾಜ ಒಡೆಯರ್ ಅವರೂ ಸಹ ದೊಡ್ಡಪ್ಪನಂತೆಯೇ ಸಂಗೀತ ಪ್ರೇಮಿಗಳು. ಅಷ್ಟೇ ಅಲ್ಲ ಸ್ವತಃ ಸಂಗೀತ ಪಾರಂಗತರು ಹಾಗೂ ವಾಗ್ಗೇಯಕಾರರು. ಬಾಲ್ಯದಿಂದ ದೊಡ್ಡಪ್ಪನವರ ಜೊತೆ ಕುಳಿತು ವೆಂಕಟರಾಯರ ಸಂಗೀತವನ್ನು ಕೇಳಿ ಆನಂದಪಟ್ಟಿದ್ದವರು. ಈ ಕಲಾವಿದರ ಬಗ್ಗೆ ದೊಡ್ಡಪ್ಪ ತೋರುತ್ತಿದ್ದ ಆಸ್ಥೆಯನ್ನೂ ಬಲ್ಲವರು. ನವರಾತ್ರಿಯ ಸಂದರ್ಭದಲ್ಲಿ ಶ್ರೀ ವೆಂಕಟರಾಯರಿಗೆ ಆಹ್ವಾನ ಕಳುಹಿಸಿ ಕರೆಸಿಕೊಂಡರು.  ಸಂಗೀತ ರತ್ನ’ ಬಿರುದು ನೀಡಿ ಬಂಗಾರದ ತೋಡ ತೊಡಿಸಿ, ಜೋಡಿಶಾಲು ಹೊದಿಸಿ ಸನ್ಮಾನಿಸಿದರು.

ಅರಮನೆಯ ಅಭಿಮಾನ ವೆಂಕಟರಾಯರನ್ನು ಕಟ್ಟಿ ಹಾಕಿತ್ತು. ಜಯಚಾಮರಾಜ ಒಡೆಯರ್ ಅವರಿಗೂ ರಾಯರನ್ನು ಕಂಡರೆ ತುಂಬ ಅಭಿಮಾನ, ಗೌರವ.

ದೇಶಕ್ಕೆ ಸ್ವಾತಂತ್ರ್ಯ ಬಂದು ಮೈಸೂರು ಸಂಸ್ಥಾನ ಭಾರತದಲ್ಲಿ ವಿಲೀನಗೊಂಡು ರಾಜ – ಮಹಾರಾಜರುಗಳ ಸ್ಥಾನಮಾನದಲ್ಲಿ ಪರಿವರ್ತನೆಯಾಯಿತಷ್ಟೆ. ಕಲಾವಿದರು ಗಳಿಗೆ ಅರಮನೆ ನೀಡುತ್ತಿದ್ದ ವೇತನವೂ ಆಗ ನಿಂತು ಹೋಯಿತು. ಮಹಾರಾಜರೇ  ಈ ಬಗ್ಗೆ ಕಾಗದ ಬರೆದು, ‘ಬದಲಾದ ಪರಿಸ್ಥಿತಿಯಲ್ಲಿ ಇದು ಅನಿವಾರ್ಯ. ಆದರೆ ಅರಮನೆಯೆಡೆಗೆ ನಿಮ್ಮ ಅಭಿಮಾನ ಯಥಾರೀತಿ ಯಾಗಿರಬೇಕು’ ಎಂದು ತಿಳಿಸಿದ್ದರಂತೆ. ಅನಂತರವೂ ಕೂಡ ಖಾಸಗಿಯಾಗಿ ವೆಂಕಟರಾಯರು ಶ್ರೀ ಜಯಚಾಮರಾಜ ಒಡೆಯರ್ ಅವರ ಸಮ್ಮುಖದಲ್ಲಿ ಹಾಡಿದ್ದುಂಟು, ಅವರೂ ಆಗಾಗ್ಗೆ ಕೈಲಾದ ಸಹಾಯ ಮಾಡುತ್ತಲೇ ಇದ್ದರು.

ಅರಮನೆಯ, ಅದರಲ್ಲೂ ನಾಲ್ವಡಿ ಕೃಷ್ಣರಾಜ ಒಡೆಯರ ಆದರ ಅಭಿಮಾನಗಳನ್ನು ಜೀವನದ ಕಡೆಯವರೆಗೂ  ಚಿಂತಲಪಲ್ಲಿ ವೆಂಕಟರಾಯರು ಸ್ಮರಿಸಿ ಕೊಳ್ಳುತ್ತಲೇ ಇದ್ದರು. ಹಲವೊಮ್ಮೆ ಕೃತಜ್ಞತೆ, ಅಭಿಮಾನ, ಆನಂದ ಎಲ್ಲ ಮೇಳಗೊಂಡು ಕಣ್ಣೀರಾಗಿ ಹರಿಯುತ್ತಿತ್ತು.

ಸನ್ಮಾನ -ಬಿರುದುಗಳು

ಮೈಸೂರು ಅರಮನೆಯ ಸನ್ಮಾನ, ಬಿರುದುಗಳಿಗೂ ಮುಂಚಿತವಾಗಿಯೇ ವೆಂಕಟರಾಯರು ರಾಯಲಸೀಮೆ, ಆಂಧ್ರಪ್ರದೇಶಗಳಲ್ಲಿ ದಿಗ್ವಿಜಯ ನಡೆಸಿದ್ದರು.

ಕನ್ನಡ ಸಾಹಿತ್ಯ ಪರಿಷತ್ತು ವೆಂಕಟರಾಯರಿಗೆ ‘ಸಂಗೀತ ವಿದ್ಯಾನಿಧಿ’ ಎಂಬ ಬಿರುದು ನೀಡಿ ಗೌರವಿಸಿತು.

೧೯೫೮ರಲ್ಲಿ ಮೈಸೂರಿನಲ್ಲಿ ನಡೆದ ಪ್ರಥಮ ಸಂಗೀತ ಸಮ್ಮೇಳನಕ್ಕೆ ವೆಂಕಟರಾಯರೆ ಅಧ್ಯಕ್ಷರು. ‘ಗಾನ ಕಲಾಸಿಂಧು’ ಪ್ರಶಸ್ತಿ ಪ್ರದಾನವಾದುದೂ ಈ ಸಂದರ್ಭದಲ್ಲಿಯೇ. ೧೯೬೦ ರಲ್ಲಿ ಆಂಧ್ರಪ್ರದೇಶದ ಸಂಗೀತ ನಾಟಕ ಅಕಾಡೆಮಿಯ ಫೆಲೋಷಿಪ್ ಲಭ್ಯವಾಯಿತು.

೧೯೬೨ ರಲ್ಲಿ ಕರ್ನಾಟಕ ರಾಜ್ಯದ ಸಂಗೀತನಾಟಕ ಅಕಾಡೆಮಿ ಈ ಹಿರಿಯ ಕಲಾವಿದರನ್ನು ಗೌರವಿಸಿತು.

ಇವು  ಚಿಂತಲಪಲ್ಲಿ ವೆಂಕಟರಾಯರ ಸಂಗೀತ ಸಾಧನೆಯ ಭವ್ಯ ಜೀವನಕ್ಕೆ, ನಾಡು, ನುಡಿ, ಜನತೆ ತಮ್ಮ ನಮನ ಸಲ್ಲಿಸಿದ ಪುಣ್ಯ ಘಳಿಗೆಗಳು.

೧೯೬೭ ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ವೆಂಕಟರಾಯರಿಗೆ ಪ್ರಶಸ್ತಿ ಪ್ರಕಟಿಸಿತು.

‘ಇಳಿವಯಸ್ಸಿನಲ್ಲಿ, ಬಯಕೆಯೆಲ್ಲ ಆರಿ, ವೈರಾಗ್ಯದ ಹಾದಿಯಲ್ಲಿ ಹೆಜ್ಜೆಯಿಟ್ಟವರಿಗೆ ಈ ಬಿರುದು ಬಾವಲಿಗಳ ಪ್ರಯೋಜನವಾದರೂ ಏನು? ಉತ್ಸಾಹ, ಹುಮ್ಮಸ್ಸು ಮಿಗಿಲಾಗಿ ಆರೋಗ್ಯ ಎಲ್ಲವೂ ಪುಟಿಯುತ್ತಿರುವಾಗಲೇ ಕಲಾವಿದನನ್ನು ಪುರಸ್ಕರಿಸಿ ಬೆನ್ನು ತಟ್ಟಿದರೆ ಕಲೆ ಬೆಳೆದು ಉಳಿಯಲು ಅನುಕೂಲವಾದೀತು.’ ಈ ಭಾವನೆ ರಾಯರನ್ನು ಕಾಡಿಸುತ್ತಿತ್ತು. ಅಲ್ಲದೆ ಅನಾರೋಗ್ಯ ಬೇರೆ. ಅವರು ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ಹೋಗಲಿಲ್ಲ. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಬೆಂಗಳೂರಿನಲ್ಲಿಯೇ ಒಂದು ವಿಶೇಷ ಸಮಾರಂಭ ಏರ್ಪಡಿಸಿ ಪ್ರಶಸ್ತಿಯನ್ನು ಇಲ್ಲಿಗೆ  ತಂದು ಕೊಟ್ಟಿತು.

ಹಸೆಗೆದ್ದು ಬಂದ ರಾಯರು

ವೆಂಕಟರಾಯರದು ಸುಖೀ ಕುಟುಂಬ, ಸಂಗೀತ ಸಾಧನೆಯ ಕಷ್ಟ ಅರಿತಿದ್ದ ಪತ್ನಿ ಅವರನ್ನು ಸಂಸಾರದ ನಿತ್ಯ ಕರ್ಮಗಳಲ್ಲಿ ಜಗ್ಗಾಡಿಸದೆ  ಸಂಗೀತ ದೇವಿಯ ಸೇವೆಗೆ ಅನುವು ಮಾಡಿಕೊಟ್ಟಿದ್ದರು. ಮನೆಯ ಯಾವ ತೊಂದರೆಯೂ ಅವರನ್ನು ಬಾಧಿಸದಂತೆ ತಾನೇ ನೋಡಿಕೊಳ್ಳುತ್ತಿದ್ದರು. ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ಸೇರಿದಂತೆ ಐವರು ಮಕ್ಕಳು.

ಅವರ ಮನೆಯಲ್ಲಿ ಯಾವಾಗಲೂ ೮-೧೦ ವಿದ್ಯಾರ್ಥಿಗಳಿಗೆ ಊಟ, ಪಾಠ ಎಲ್ಲವೂ ಅಲ್ಲಿಯೇ. ಮಗನಿಗೂ ಅವರದೆ ಮೊದಲ ಪಾಠ. ವಿದ್ಯಾರ್ಥಿಗಳಲ್ಲಿ ಇತರ ಜಾತಿಗೆ ಸೇರಿದವರೂ ಇದ್ದರು. ಆದರೆ ವೆಂಕಟರಾಯರ ದೃಷ್ಟಿಯಲ್ಲಿ ಎಲ್ಲರೂ ಒಂದೇ. ಎಲ್ಲರಿಗೂ ಜೊತೆಯಲ್ಲೇ ಪಾಠ. ಮಗನ ಅಭ್ಯುದಯ ಕಂಡು ಹರ್ಷಿಸುವ ಸೌಭಾಗ್ಯ ರಾಯರದಾಗಿತ್ತು.  ಚಿಂತಲಪಲ್ಲಿ ರಾಮಚಂದ್ರರಾಯರದೂ ಪ್ರೌಢಸಂಗೀತ, ಇವರ ಕಛೇರಿಗಳನ್ನು ಕೇಳಿ ‘ಭೇಷ್, ಭೇಷ್!’ ಎಂದು ಉದ್ಗರಿಸಿ, ‘ದೇವರು ನನಗೆ ಒಳ್ಳೆಯ ವರಪುತ್ರನನ್ನು ಕೊಟ್ಟ’ ಎಂದು ಸ್ನೇಹಿತರ ಮುಂದೆಲ್ಲ ಬಾಯಿತುಂಬ ಹೇಳಿಕೊಂಡು ಸಂತೋಷ ಪಡುತ್ತಿದ್ದರು.

೧೯೩೨-೩೩ರ ಸುಮಾರು. ವೆಂಕಟರಾಯರ ಮಕ್ಕಳು  ಚಿಂತಲಪಲ್ಲಿ ರಾಮಚಂದ್ರರಾಯರ ಸಂಗೀತವನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಡಿಸಲಾಗಿತ್ತು. ರಾಮಚಂದ್ರ ರಾಯರಿಗೆ ಮಹಾರಾಜರಿಂದ ಪ್ರಶಸ್ತಿ ದೊರೆತ ಹೊಸದು. ಜನ ಪರಿಷತ್ತಿನ ಭವನದ ಒಳಗೆ, ಹೊರಗೆ, ಎಲ್ಲೆಡೆ ಕಿಕ್ಕಿರಿದು ತುಂಬಿದ್ದರು.

ಕಛೇರಿ ಆರಂಭವಾಗುವ ಹೊತ್ತಾಯಿತು. ರಾಮಚಂದ್ರರಾಯರು ಮಾತ್ರ ಬರುವ ಸುಳಿವೇ ಇಲ್ಲ. ತಂದೆ ವೆಂಕಟರಾಯರು ಓಡೋಡುತ್ತ ಬಂದರು. ‘ಹುಡುಗನಿಗೆ ಜ್ವರ ಬಂದು ಬಿಟ್ಟಿದೆ. ಶಕ್ತಿಯಿಲ್ಲದೆ ಮಲಗಿದ್ದಾನೆ’ ಎಂದು ಸಂಚಾಲಕರಲ್ಲಿ ಕ್ಷಮೆ  ಯಾಚಿಸಿದರು. ಈ ಸಂಗೀತ ಕಛೇರಿ ವ್ಯವಸ್ಥೆ ಮಾಡಿದ್ದವರು ಬೇರಾರೂ ಅಲ್ಲ, ಕನ್ನಡ ಸಾಹಿತ್ಯದ ದಿಗ್ಗಜ ಡಿ.ವಿ. ಗುಂಡಪ್ಪನವರು. ಅವರೂ ಜಗ್ಗಲಿಲ್ಲ. ‘ಹುಡುಗ ವಿಶ್ರಾಂತಿ ತೆಗೆದುಕೊಳ್ಳಬೇಕಾದ್ದೇನೋ ಸರಿ, ಆದರೆ ಇಲ್ಲಿ ನೆರೆದಿರುವ ಜನರನ್ನು ನೋಡಿ. ಇವರಿಗೆಲ್ಲ ನಾನು ಏನು ಸಮಾಧಾನ ಹೇಳಲಿ?’ ಎಂದರು.

ವೆಂಕಟರಾಯರಿಗೂ ದಿಕ್ಕು ತೋಚದಂತಾಗಿತ್ತು. ‘ನಾನೇನು ಮಾಡಲಿ?’ ಎಂದು ದೈನ್ಯ ಮುಖದಿಂದ ಕೇಳಿದರು.

ಡಿ.ವಿ. ಗುಂಡಪ್ಪನವರು ‘ಹಸೆಗೆಬನ್ನಿ’ ಎಂದು ನುಡಿದು, ಹಸೆಗೆ ಬಾರೇ ಕುಸುಮನೇತ್ರೆ’ ಎಂದು ಪಂಕ್ತಿ ಹಾಡಿದರು.

ವೆಂಕಟರಾಯರು ‘ಮುದುಕನಾಗಿ ಬಿಟ್ಟೆನೆಲ್ಲ” ಎಂದು ಮೆಲು ನುಡಿದರು! ಆದರೆ ಗುಂಡಪ್ಪನವರು ಬಿಟ್ಟಾರೆಯೇ? ‘ನಿಮ್ಮ ಊರು ಹುಣಿಸೆಹಳ್ಳಿ, ಹುಣಸೇಮರ ಹಳೆಯದಾದಷ್ಟೂ ಅದರ ಕಾಯಿ ಸೊಗಸು’ ಎಂದರು!

ಸರಿ, ಒತ್ತಾಯಕ್ಕೆ ಕಟ್ಟುಬಿದ್ದ ವೆಂಕಟರಾಯರು ಹಾಡಲು ಕುಳಿತೇಬಿಟ್ಟರು. ಅಂದು ಏರ್ಪಾಟಾಗಿದ್ದುದು ದೊಡ್ಡ ಕಛೇರಿ. ಹಾಗಾಗಿ  ಪಕ್ಕವಾದ್ಯಗಳನ್ನು ನುಡಿಸಲು ಬಂದಿದ್ದ ಪಿಟೀಲು ಹಾಗೂ ಮೃದಂಗ ವಿದ್ವಾಂಸರೂ ಗಟ್ಟಿಗರೇ. ವೆಂಕಟರಾಯರು ವರ್ಣದೊಂದಿಗೆ ಕಛೇರಿ ಆರಂಭಿಸಿದರು. ಒಂದೆರಡು ಸಾಧಾರಣ ಕೃತಿಗಳನ್ನು ಹಾಡಿ ತಮ್ಮ ಮನೋಧರ್ಮವನ್ನು ಕುದುರಿಸಿಕೊಂಡರು. ಅನಂತರ ಆರಂಭವಾಯಿತು ಅವರ ಪ್ರತಿಭೆಯ ಹರಿವು. ಸಂಗೀತದ ಹೊನಲು ಹರಿಯಿತು. ಪಿಟೀಲು ವಿದ್ವಾಂಸರು ವಾದ್ಯವನ್ನು ಕೆಳಗಿಟ್ಟು ಕೈಕಟ್ಟಿ ಕುಳಿತು ತಾವೂ ಅವರ ಸಂಗೀತವನ್ನು ಸವಿ ಯಲಾರಂಭಿಸಿದರು. ಒಂದೊಂದು ಆವರ್ತ ಮುಗಿಯುತ್ತಲೇ ಕಮಾನು ಹಾಕಿದ ಶಾಸ್ತ್ರ ಮಾಡಿ ವೆಂಕಟರಾಯರಿಗೆ ಕೈಮುಗಿದು ವಾದ್ಯವನ್ನು ಕೆಳಗಿಡುತ್ತಿದ್ದರು. ಹೀಗೆ ಮುಂದುವರಿಯಿತು. ರಸದೌತಣ, ಮೂರುಗಂಟೆಗಳ ಕಾಲ, ಕೊನೆಯಲ್ಲಿ ಒಂದೆರಡು ದೇವರನಾಮ ಹಾಡಿ ರಾಯರು ಕಛೇರಿ ಮುಗಿಸಿದರು.

ಚಿಂತಲಪಲ್ಲಿ ವೆಂಕಟರಾಯರು, ಸೋದರ ಸಂಬಂಧಿ ವೆಂಕಟಾಚಲಯ್ಯ ಎಂಬುವರೊಡನೆ ಜೊತೆಯಾಗಿ ಹಾಡುತ್ತಿದ್ದರು. ಅದನ್ನು ಕೇಳಿರುವ ಸಂಗೀತ ಪ್ರೇಮಿಗಳು ಐವತ್ತು ವರ್ಷಗಳ ನಂತರವೂ ಆ ಕಛೇರಿಗಳ ಕಂಪು ನೆನೆದು ಆನಂದಿಸುತ್ತಾರೆ. ಅವರಿಬ್ಬರೂ ಸೇರಿ ಹಾಡುತ್ತಿದ್ದ-

‘ಎನ್ನಗಾ- ಮನಸುಕು ರಾನಿ
ಪನ್ನಗಶಾಯಿ ಸೊಗಸು’

ಎಂಬ ನೀಲಾಂಬರಿ ರಾಗದ ತ್ಯಾಗರಾಜರ ಕೃತಿ ಸಂಗೀತಾನುಭವದ ಸೀಮಾರೇಖೆ ಎಂದು ಅದನ್ನು ಕೇಳಿದ ಹಿರಿಯರು ಹೇಳುತ್ತಾರೆ. ಹಾಡುವವರ ಕಣ್ಣಿನಲ್ಲೂ ಕಂಬನಿ ಕೇಳುವವರ ಕಣ್ಣಿನಲ್ಲೂ ಕಂಬನಿ. ಅಂತಹ ರಸಾನುಭವದ ಕಛೇರಿಗಳು ಅವರವು.

ಅವರ ಸಂಗೀತ ಸಂಪತ್ತು

‘ಗಂಭೀರ ನಾದದ, ಹೃದಯಸ್ಪರ್ಶಿ ಸಂಗೀತ ಅವರದು. ತಮಗರಿವಿಲ್ಲದೆ ತಾನಾಗಿಯೇ ಬಂದ ಸುಸ್ವರ ಸಂಗತಿಗಳಿಗೆ ಮಾರುಹೋಗಿ ಕಣ್ಣಂಚಿನಲ್ಲಿ ಹನಿ ತುಳುಕಿಸುತ್ತಿದ್ದ ಮೃದುಹೃದಯದ ಕಲಾವಿದರು ರಾಯರು. ಸಂಗೀತದಲ್ಲಿ ತಮಗೆ ಸಿಕ್ಕಿದ ಸೌಂದರ್ಯ, ಆನಂದಾನುಭವ ಗಳನ್ನು  ಲಕ್ಷಾಂತರ ಮಂದಿಗೆ ಹಂಚಿ ಸಂತೋಷಪಡಿಸಿದ ಉದಾರ ಅನುಭಾವಿ, ಸಾರ್ಥಕ ಜೀವಿ’ ಎಂದು ಇಂದಿನ ಜನಪ್ರಿಯ ಕಲಾವಿದರೊಬ್ಬರು ಅವರನ್ನು ನೆನೆದರು.

ವೆಂಕಟರಾಯರು ಶ್ರೀ ತ್ಯಾಗರಾಜಾದಿ ತ್ರಿಮೂರ್ತಿ ಗಳ ಕೃತಿಗಳು, ಹರಿದಾಸರ ಪದಗಳು, ಕ್ಷೇತ್ರಯ್ಯನ ಪದಗಳು ಇವುಗಳ ಜೊತೆಗೆ ಕನ್ನಡ ಮತ್ತು ತೆಲುಗು ಜಾವಳಿಗಳನ್ನೂ ಹಾಡುತ್ತಿದ್ದರು. ಅವರ ಸಂಗ್ರಹದಲ್ಲಿ ನೂರಾರು ಅಪೂರ್ವ ಕನ್ನಡ ಜಾವಳಿಗಳಿದ್ದುವಂತೆ, ಅಪಾರ ಸಂಖ್ಯೆಯ ದೇವರ ನಾಮಗಳೂ ಅವರಿಗೆ ಕಂಠಪಾಠ ವಾಗಿತ್ತು. ಜಾವಳಿಗಳನ್ನು ಹಾಡುವಾಗ ಸಾಹಿತ್ಯದ ಶೃಂಗಾರ ಅವರ ಕಣ್ಣು, ತುಟಿಗಳಲ್ಲಿ ಮಿಂಚುತ್ತಿದ್ದರೆ, ದೇವರನಾಮ ಗಳನ್ನು ಹಾಡುವಾಗ ಹೃದಯ ತೋಡಿಕೊಳ್ಳುವ ಭಕ್ತಿ ಭಾವ – ತಲ್ಲೀನತೆ, ಭಾವಪ್ರಜ್ಞೆ ಅವರ ಸಂಗೀತದ ಜೀವಾಳ.

’ಬೇರೆಯವರು ಹಾಡಬೇಕೆ?’

ತುಮಕೂರಿನಲ್ಲಿ ಲಾಯರ್ ವೆಂಕಟನರಸಯ್ಯ ಸಂಗೀತ ಪ್ರಿಯರು, ರಸಿಕರು. ಊರಿಗೆ ಬರುವ ಸಂಗೀತಗಾರರಿಗೆಲ್ಲ ಆಶ್ರಯದಾತರು. ಅವರ ಮನೆಯಲ್ಲೇ ಸಂಗೀತಗಾರರ ಬಿಡಾರ, ಚರ್ಚೆ, ಕಛೇರಿ. ಒಮ್ಮೆ ಟೈಗರ್ ವರದಾಚಾರ್ಯರು, ವಾಗ್ಗೇಯಕಾರ ಮೈಸೂರು ವಾಸುದೇವಾಚಾರ್ಯರು,  ಚಿಂತಲಪಲ್ಲಿ ವೆಂಕಟ ರಾಯರು ಮುಂತಾದ ಸಂಗೀತ ಪಟುಗಳು ಅಲ್ಲಿ ಸೇರಿದ್ದರು.  ಚಿಂತಲಪಲ್ಲಿಯವರ ಕಛೇರಿ ನಡೆಯಿತು. ಕೇಳುತ್ತಿದ್ದವರು ಬೇರೊಂದು ಲೋಕದಲ್ಲಿ ವಿಹರಿಸಿದರು. ಕಛೇರಿ ಮುಗಿಯಿತು. ಸಭಿಕರು ಇನ್ನೂ ಕುಳಿತೇ ಇದ್ದರು.  ಅಲ್ಲಿ ಸೇರಿದ್ದ ಇತರ ಮಹಾನ್ ವಿದ್ವಾಂಸರುಗಳ ಸಂಗೀತದ ರುಚಿಯನ್ನು ನೋಡಬೇಕೆಂಬ ಆಸೆ ಅವರಿಗೆ. ಈ ಬಗ್ಗೆ ಪ್ರಾರ್ಥನೆಯೂ ಬಂತು.

ಟೈಗರ್ ವರದಾಚಾರ್ಯರು ಎದ್ದು ನಿಂತರು. ಹಾಡುವರೇನೋ ಎಂದು ಕಾದಿದ್ದ ಜನಕ್ಕೆ ಒಂದೇ ಮಾತಿನಲ್ಲಿ ಸಮಾಧಾನ ಮಾಡಿದರು.

‘ವೆಂಕಟರಾಯರ ಅಮೋಘ ಸಂಗೀತದ ನಂತರ ಬೇರೆಯವರು ಹಾಡಿ ಕಳೆಗೆಡಿಸಬೇಕೆ? ಬೇಡ’ ಎಂದು ಹೇಳಿ ಕುಳಿತರು.

ಸಭಿಕರೂ ಅದಕ್ಕೆ ಸಮ್ಮತಿ ವ್ಯಕ್ತಪಡಿಸಿದರೇನೋ ಎಂಬಂತೆ ಮೌನವಾಗಿ ಚದುರಿದರು.

ತೃಪ್ತಿ ತಂದ ಸಂಗೀತ

ಒಮ್ಮೆ ಗುಡಿಬಂಡೆಯಲ್ಲಿ ವೆಂಕಟರಾಯರ ಸಂಗೀತ. ಸಮುದ್ರದ ಮೊರೆತದಂತೆ ಹರಿದು ಬರುತ್ತಿದ್ದ ವಿದ್ವತ್ಪೂರ್ಣ, ಮನೋಜ್ಞ ಸಂಗೀತ ಸಭಿಕರನ್ನೆಲ್ಲ ಮಂತ್ರ ಮುಗ್ಧರನ್ನಾಗಿಸಿತ್ತು. ಬಡ ಸಂಗೀತ ಪ್ರೇಮಿಯೊಬ್ಬನನ್ನೂ ಆ ಕಛೇರಿ ಎಳೆದು ತಂದಿತು. ಒಳಗೆ ಹೋಗಲು ಪ್ರವೇಶ ಸಿಗಲಿಲ್ಲ. ಅಪಾರ ಜನಸಂದಣಿ. ಅವನನ್ನು ಕೇಳುವವರೇ ಇಲ್ಲ, ಹೊರಗೆ, ಬಾಗಿಲಬಳಿ ಆತ ತದೇಕಚಿತ್ತನಾಗಿ ನಿಂತು ಸಂಗೀತ ಆಲಿಸಿದ. ಕಛೇರಿ ಮುಗಿದು ಜನ ಹೊರಡಲಾರಂಭಿಸಿದ ಕೂಡಲೇ ಆತ ಒಳ ನುಗ್ಗಿದ. ಆನಂದ ತುಂಬಿ ಬಂದು, ಭಕ್ತಿ ಪರವಶತೆಯ ಭಾವದಿಂದ ಕಣ್ಣೀರು ಸುರಿಸುತ್ತಿದ್ದ ಆತ. ವೆಂಕಟರಾಯರ ಬಳಿ ಬಂದು ನಿಂತ, ಏನು ಹೇಳಬೇಕೋ ತಿಳಿಯದು. ತನ್ನದೆಲ್ಲವನ್ನೂ ಈ ಸಂಗೀತಗಾರನಿಗೆ ಅರ್ಪಿಸಿ ಬಿಡುವ ಭಾವ. ಅವರ ಸಂಗೀತ ತಂದ ತೃಪ್ತಿ, ಸಂತೋಷ ಮುಖದ ಮೇಲೆ ಅಚ್ಚೊತ್ತಿತ್ತು. ಕಷ್ಟಪಟ್ಟು ಧ್ವನಿ ಎತ್ತಿದ. ‘ನನ್ನದೆಲ್ಲ ನಿಮಗೆ ಕೊಡುವ ಇಚ್ಛೆ. ಆದರೆ ನಾನು ಬಡವ. ನನ್ನಲ್ಲಿ ಇರುವುದು ಕೇವಲ ಎರಡು ಎತ್ತುಗಳು. ಅವನ್ನೇ ಸ್ವೀಕರಿಸಿ ನನ್ನನ್ನು ಕೃತಾರ್ಥನನ್ನಾಗಿ ಮಾಡಿ’ ಎಂದು ಕೈಮುಗಿದು ಕೇಳಿಕೊಂಡ. ವೆಂಕಟರಾಯರ ಹೃದಯವೂ ತುಂಬಿ ಬಂತು. ಆತನ ಬೆನ್ನು ತಟ್ಟಿ ‘ನಿನ್ನ ಎತ್ತುಗಳು ನಿನಗೆ ಜೀವನಾಧಾರ. ಅದನ್ನೇ ಕೊಟ್ಟು ಬಿಟ್ಟರೆ ಮುಂದೆ ಏನು  ಮಾಡುತ್ತಿ? ನಡಿ, ಅವನ್ನು ಒಂದು ಗಾಡಿಗೆ ಕಟ್ಟು, ಆ ಗಾಡಿಯಲ್ಲಿ ನನ್ನನ್ನು ನಮ್ಮ ಊರಿಗೆ ತಲುಪಿಸಿಬಿಡು, ಅಷ್ಟು ಸಾಕು. ಎತ್ತುಗಳು ನನಗೆ ತಲುಪಿದಂತಾಯ್ತು’ ಎಂದರು. ಅವರನ್ನು ತನ್ನ ಗಾಡಿಯಲ್ಲಿ ಕೂಡಿಸಿಕೊಂಡ ಆ ಬಡ ಸಂಗೀತಪ್ರೇಮಿಯ ಸಂತೋಷ ಹೇಳತೀರದು.

ಬಡವರ ಬಗ್ಗೆ ವೆಂಕಟರಾಯರ ಅನುಕಂಪ ಅಸೀಮ. ಅವರುಗಳ ಮನೆಯಲ್ಲಿ ಉಪನಯನ, ಮದುವೆ ಮುಂತಾದ ಸಮಾರಂಭಗಳು ನಡೆದರೆ ಉದಾರವಾಗಿ ನೆರವಾಗುತ್ತಿದ್ದರು.

ಬೆಂಗಳೂರು ಚಿಕ್ಕಪೇಟೆಯ ಹೆಸರಾಂತ ಒಂದು ಹೋಟೆಲಿನ ಮಹಡಿಯ ಮೇಲೆ ಅನಂತಶಾಸ್ತ್ರಿಗಳು ಎಂಬುವರು ವಾಸವಾಗಿದ್ದರು. ಸಂಜೆಯ ವೇಳೆಯಲ್ಲಿ ಸಂಗೀತ ಪ್ರೇಮಿಗಳಾದ ಅವರ ರಸಿಕ ಮಿತ್ರರು ಅಲ್ಲಿ ಸೇರುತ್ತಿದ್ದರು. ವೆಂಕಟರಾಯರೂ, ತಮ್ಮ ಬೆಂಗಳೂರು ಮೊಕ್ಕಾಂನಲ್ಲಿ ಅಂದಿನ ದಿನಗಳಲ್ಲಿ ಅಲ್ಲಿ ತಂಗುತ್ತಿದ್ದುದು ವಾಡಿಕೆ. ಅವರ ಭೇಟಿಗೆಂದು ಹಲವು ವಿದ್ವಾಂಸರು ಅಲ್ಲಿ ಸೇರುವುದು, ಸಂಗೀತ ಶಾಸ್ತ್ರ ವಿಚಾರಗಳನ್ನು ಕುರಿತು ವಿಚಾರ ವಿನಿಮಯ ಮಾಡಿ ಕೊಳ್ಳುವುದು, ಚರ್ಚೆ ನಡೆಸುವುದು- ಈ ಕಾರ್ಯಕ್ರಮ ಗಳು ವಿಪುಲವಾಗಿ ನಡೆಯುತ್ತಿದ್ದವು. ಸೋದಾಹರಣ ಸಂಗೀತದ ಹೊನಲನ್ನೇ ಹರಿಸುತ್ತಿದ್ದರು. ಆ ಕಿರು ಕಛೇರಿಗಳ ಸವಿಯನ್ನು, ವಿಶೇಷವಾಗಿ ವೆಂಕಟರಾಯರ ತುಂಬು ಕಂಠದ ಗಂಡು ಹಾಡುಗಾರಿಕೆಯನ್ನು, ರಾಯರನ್ನು ಬಲ್ಲ ಹಿರಿಯ ವಿದ್ವಾಂಸರೊಬ್ಬರು ನೆನೆದು ’ಅಂದು ಸವಿದ ಸಂಗೀತ ಎಂದೂ ಮರೆಯಲಾಗದಂಥದು’ ಎಂದು ಸ್ಮರಿಸಿಕೊಂಡರು.

ಕಿರಿಯರಲ್ಲಿ ಆಸ್ಥೆ

ಬೆಂಗಳೂರಿನಲ್ಲಿ ಮಗ ಶ್ರೀ ರಾಮಚಂದ್ರರಾಯರು ನೆಲೆಸಿದ ನಂತರ ಮನೆಗೆ ಬರುತ್ತಿದ್ದ ಅವರ ಶಿಷ್ಯರನ್ನು ಕಂಡರೆ, ವೆಂಕಟರಾಯರಿಗೆ ಮೊಮ್ಮಕ್ಕಳನ್ನು ಕಂಡಷ್ಟೇ ಅಭಿಮಾನ. ಆ ಶಿಷ್ಯರಿಗೂ ಅಷ್ಟೇ. ಈ ತಾತನ ಸಂಗೀತ ಹೇಗೋ, ಹಾಗೇ, ತಾತನೂ ಅಚ್ಚು ಮೆಚ್ಚು. ‘ಅವರನ್ನು ಕಂಡಾಗಲೆಲ್ಲ ನಮಗೆ ಭೀಷ್ಮಾಚಾರ್ಯರೇ ಜೀವಂತವಾಗಿ ಎದ್ದು ಬಂದಂತಾಗುತ್ತಿತ್ತು’ ಎನ್ನುತ್ತಾರೆ ಈ ಶಿಷ್ಯ ಸಮ ದಾಯಕ್ಕೆ ಸೇರಿದ ಉದಯೋನ್ಮುಖ ಕಲಾವಿದರೊಬ್ಬರು. ಕಾರಣಾಂತರದಿಂದ ಒಬ್ಬ ಶಿಷ್ಯ ಪಾಠಕ್ಕೆ ಬರದಿದ್ದರೆ, ಅವನ ಮನೆಗೇ ಹುಡುಕಿಕೊಂಡು ಹೋಗಿ ಅವನನ್ನು ಕಿವಿ ಹಿಡಿದು ಎಳೆದುಕೊಂಡು ಬರುತ್ತಿದ್ದರಂತೆ. ಇಂತಹ ಸಂದರ್ಭಗಳಲ್ಲಿ ಶಿಷ್ಯರು ಏಟು ತಿಂದದ್ದೂ ಉಂಟು. ಅಷ್ಟೊಂದು ಆಸ್ಥೆ ರಾಯರದು. ಒಳ್ಳೆಯ ಸಂಗೀತ ಬೆಳೆಯಬೇಕು, ಕಿರಿಯರು ಕಲಿಯಬೇಕು ಎಂಬ ಕಳಕಳಿ. ಶಿಷ್ಯರ ಹಾಡುಗಾರಿಕೆ ಏರುಪೇರಾದರೆ, ಅವರ ಕೈಯಲ್ಲಿ ತಂಬೂರಿ ಮೀಟಿಸಿ, ತಾವೇ ಹಾಡಿ ತೋರಿಸಿಕೊಡುತ್ತಿದ್ದರು.

ಸಂಗೀತ ಕೇಳುವುದರಲ್ಲಂತೂ ಅವರದು ಅಪಾರ ಆಸಕ್ತಿ, ತಾವು ಅಷ್ಟೊಂದು ಘನ ವಿದ್ವಾಂಸರಾದರೂ ಈ ಕಿರಿಯರ ಕಛೇರಿಗಳಿಗೂ ಹೋಗಿ, ಕುಳಿತು ಕೇಳಿ, ಅವರನ್ನು ಹುರಿದುಂಬಿಸಿ ಮಾರ್ಗದರ್ಶನ ಮಾಡುವ ಔದಾರ್ಯ ಅವರದು.

ಅವರ ವಯಸ್ಸು ತೊಂಬತ್ತು ದಾಟಿದ್ದ ನಂತರವೂ, ಹಲವಾರು ಕಛೇರಿಗಳಲ್ಲಿ ಅವರನ್ನು ಕಾಣಬಹುದಿತ್ತು. ಪೂರ್ತಿ ಸಂಗೀತ ಕೇಳಿ ನಾಲ್ಕು ಸ್ನೇಹಮಯ ಮಾತುಗಳನ್ನಾಡಿ ಅನಂತರ ಹೊರಡುತ್ತಿದ್ದರು. ಸಭೆಯಲ್ಲಿ ರಾಯರನ್ನು ಕಂಡರೆ ಸಾಕು, ಸಂಗೀತಗಾರರ ಮನೋಧರ್ಮ ಉಕ್ಕೇರುತ್ತಿತ್ತಂತೆ. ಅಂತಹ ಸ್ಥಾನ ರಾಯರಿಗೆ ಸಂಗೀತಗಾರರಲ್ಲಿ.

ವೆಂಕಟರಾಯರಿಗೆ ಸುಮಾರು ೮೫ ವರ್ಷ ವಯಸ್ಸಿರಬಹುದು. ಧ್ವನಿಮುದ್ರಣಕ್ಕಾಗಿ ಆಕಾಶವಾಣಿಗೆ ಬಂದಿದ್ದರು. ಆಗಲೂ ಅವರದು ಕಂಚಿನ ಕಂಠ. ಈ ವೃದ್ಧರ ಧ್ವನಿಯೇ ಇದು! ಎಂದು ಅಚ್ಚರಿಪಡುವಂತಹ ಶಾರೀರ, ಆ ಇಳಿ ವಯಸ್ಸಿನಲ್ಲಿಯೂ.

ಕೇದಾರಗೌಳ ರಾಯರ ಮೆಚ್ಚಿನ ರಾಗಗಳಲ್ಲೊಂದು. ಒಮ್ಮೆ ವೀಣೆ ದೊರೆಸ್ವಾಮಿ ಅಯ್ಯಂಗಾರ್ ಹಾಗೂ ಪಿಟೀಲು ಚೌಡಯ್ಯನವರ ಸಹ ಕಛೇರಿ. ಮೆಲ್ಲಗೆ ವೆಂಕಟರಾಯರು ಪಿಸುಗುಟ್ಟಿದರಂತೆ, ‘ಸ್ವಲ್ಪ ಎಲ್ಲಾದರೂ ಕೇದಾರಗೌಳ ಸೇರಿಸಿಬಿಡು’ ಅಂತ.

ಅವರ ಅಭಿಮಾನ ಅಂತಹುದು. ಹಾಡಿಸಿ, ಅನುಭವಿಸಿ ಬೆನ್ನು ತಟ್ಟುವ ಮಹಾಗುಣ. ಜೀವನದಲ್ಲಿ ಅವರು ಸರಸಿ, ಯಾವುದನ್ನೂ ಮನಸ್ಸಿಗೆ ಹಚ್ಚಿಕೊಂಡು ಕೊರಗುವ ಸ್ವಭಾವವಲ್ಲ.  ಏನೇ ಆಗಲಿ ಎದುರಿಸಿ ಗೆಲ್ಲುವ ದಿಟ್ಟರವರು.

ಹಳೆಯ ಕಾಲದ ಹುಲಿ

ಖ್ಯಾತ ಸಾಹಿತಿ ಡಿ. ವಿ ಗುಂಡಪ್ಪನವರು ತಮ್ಮ ಒಂದು ಲೇಖನದಲ್ಲಿ  ಚಿಂತಲಪಲ್ಲಿ ವೆಂಕಟರಾಯರನ್ನು ಹಳೆಯಕಾಲದ ಹುಲಿ ಎಂದು ಬಣ್ಣಿಸಿದ್ದಾರೆ. ಮುಂದೆ ಅವರೇ ಇದಕ್ಕೆ ವಿವರಣೆ ನೀಡುತ್ತಾ ಸಂಗೀತಗಾರರಿಗೆ ಹುಲಿಯ ಉಪಮಾನ ಕೊಡುವುದರ ಔಚಿತ್ಯ ಸರಿಹೋಗಲಾರದೇನೋ. ಆದರೆ ಯಾರೊಬ್ಬರ ಧೈರ್ಯ, ಶೌರ್ಯ ತಿಳಿಸಿ ಹೇಳಲು ಹುಲಿಯ ಹೆಸರೇ ಸರಿ. ಅಂಥಾದ್ದು ವೆಂಕಟರಾಯರ ಎದೆಗಾರಿಕೆ ಎಂದಿದ್ದಾರೆ.

ಕೆಚ್ಚಿನಲ್ಲಿ ಆತ ಸಿಂಹ ಎಂಬ ಮಾತನ್ನಂತೂ ಆ ಕಾಲದ ಎಲ್ಲರೂ ಒಪ್ಪುತ್ತಾರೆ.

ವೆಂಕಟರಾಯರು ಎಲ್ಲರೊಂದಿಗೂ ಬೆರೆ ಯುತ್ತಿದ್ದರು. ಸ್ವಾಭಾವಿಕವಾಗಿ ವಿನಯಪರರು, ಆದರೆ “ಯಾರದೇನು ಹೆಚ್ಚು, ನಾನು ಯಾರಿಗೂ ಕಡಿಮೆಯಿಲ್ಲ” ಎಂಬ ಭಾವವೂ ಅವರಲ್ಲಿ ಸದಾ ಜಾಗೃತವಾಗಿರುತ್ತಿತ್ತು. ಈ ಗುಣದಿಂದಾಗಿಯೇ ಅವರು ಪರರ ಆಶ್ರಯಕ್ಕಾಗಿ ಎಂದೂ ಕೈಚಾಚಿದವರಲ್ಲ; ಇಲ್ಲವೆಂದು ಕೊರಗಿದವರಲ್ಲ. ತಮಗೆ ದೊರೆತದ್ದರಲ್ಲಿಯೇ ತೃಪ್ತಿ. ಆದ್ದರಿಂದಲೇ ಅವರಷ್ಟೇ ವಿದ್ವತ್ತಿನ ಕೆಲವು ವಿದ್ವಾಂಸರು ಪಡೆದ ಅಪಾರ ಪ್ರಚಾರ ವೆಂಕಟ ರಾಯರಿಗೆ ದೊರಕಲಿಲ್ಲ. ಆದರೆ ಅಂದಿನ ಸಂಗೀತತಜ್ಞರು, ಸಂಗೀತ ಪ್ರೇಮಿಗಳು ಅವರನ್ನು ಎಂದೂ ಮರೆಯಲಾರರು. ಇದ್ದುದರಲ್ಲಿಯೇ ತೃಪ್ತರಾಗಿ, ಕಲಾ ಪ್ರಪೂರ್ಣರಾಗಿ, ಬಂಧುಮಿತ್ರರೊಂದಿಗೆ ಒಂದಾಗಿ ತುಂಬು ಜೀವನ ನಡೆಸಿದ ಹಿರಿಯ ವ್ಯಕ್ತಿ ಅವರು.

ಮಾರುತಿಯ ಭಕ್ತರು

ಶ್ರೀ ವೆಂಕಟರಾಯರು ಅಪಾರ ದೈವಭಕ್ತರು. ಆಂಜನೇಯ ಇವರ ಇಷ್ಟದೈವ. ತಮ್ಮ ಕಛೇರಿಗಳಿಂದ ಬಂದ ಹಣದಿಂದಲೇ ಪ್ರಾಣದೇವನಿಗೆ  ಚಿಂತಲಪಲ್ಲಿಯಲ್ಲಿ ಒಂದು ದೇವಸ್ಥಾನ ಕಟ್ಟಿಸಿ ಪೂಜೆಗೆ ವ್ಯವಸ್ಥೆ ಮಾಡಿದ್ದರು. ರಾಮ ನವಮಿ, ಹನುಮಜಯಂತಿಗಳನ್ನು ಸಂಭ್ರಮದಿಂದ ಆಚರಿಸಿ ಬೇರೆ ಬೇರೆ ಕಡೆಗಳಿಂದ ಖ್ಯಾತ ವಿದ್ವಾಂಸರನ್ನು ಕರೆಸಿ ಒಂದು ವಾರದ ಕಾಲ ಸಂಗೀತ ಸೇವೆ ಸಲ್ಲುವಂತೆ ಏರ್ಪಾಡು ಮಾಡುತ್ತಿದ್ದರು. ಈ ವ್ಯವಸ್ಥೆ ದೇವಸ್ಥಾನದಲ್ಲಿ ಇಂದಿಗೂ ನಡೆದುಕೊಂಡು ಬಂದಿದೆ. ಸುತ್ತಮುತ್ತಲ ಗ್ರಾಮಸ್ಥರೆಲ್ಲ ಆ ದಿನಗಳಲ್ಲಿ  ಚಿಂತಲಪಲ್ಲಿಗೆ ಬಂದು ಸಂಗೀತ ಕೇಳಿ ಆನಂದಿಸಿ ಹಿಂತಿರುಗುತ್ತಾರೆ.

ರಾಯರ ಕಡೆಯ ದಿನಗಳು

ವೆಂಕಟರಾಯರು ಕೊನೆಗಾಲದಲ್ಲಿ ಕಾಯಿಲೆ ಬಿದ್ದರು. ಆರೇಳು ತಿಂಗಳು ಬೆಂಗಳೂರಿನಲ್ಲಿ ಮಗನ ಮನೆಯಲ್ಲಿ ಹಾಸಿಗೆ ಹಿಡಿದು ಮಲಗಿದರು. ಮಾರುತಿಯ ಭಕ್ತರಾದ ಅವರಿಗೆ ಅವನ ಕರೆ ಬಂತೇನೋ! ಹಳ್ಳಿಗೆ ಹೋಗಬೇಕು, ಪ್ರಾಣದೇವರ ದರ್ಶನ ಮಾಡಬೇಕು ಎಂಬ ಗೀಳು ಹಿಡಿಯಿತು. ಹೊರಟು ನಿಂತರು. ಅಡ್ಡ ಬರಬೇಡಿ ಎಂದು ಕಾಡಿ ಬೇಡಿ ಎಲ್ಲರನ್ನು ಒಪ್ಪಿಸಿ ಹಳ್ಳಿಗೆ ಹೊರಟೇ ಬಿಟ್ಟರು. ಅನಂತರ ಕೆಲವೇ ದಿನಗಳಲ್ಲಿ ದೈವಾಧೀನರಾದರು. ಈ ಹಿರಿಯ ಜೀವ ೧೯೬೯ ರ ಜೂನ್ ೬ ರಂದು ಇಹಲೋಕ ಯಾತ್ರೆ ಮುಗಿಸಿತು.

ಸಂಗೀತವೇ ಅವರ ಜೀವನ, ಅವರ ಜೀವನವೇ ಸಂಗೀತ. ಈ ರೀತಿಯ ಏಕಭಕ್ತಿ, ಏಕನಿಷ್ಠೆ ಅವರನ್ನು ಆ ಕ್ಷೇತ್ರದ ಉತ್ತುಂಗ ಶಿಖರಕ್ಕೆ ಕೊಂಡೊಯ್ದಿತ್ತು. ಆ ಮಹಾಕಲಾವಿದರ ಪಂಕ್ತಿಯ ಲ್ಲೊಂದು ಶ್ರೇಷ್ಠ ರತ್ನವಾದರು.