ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಅಭೂತಪೂರ್ವಸಾಧನೆಯನ್ನು ಮಾಡಿ, ದೊಡ್ಡ ಪರಂಪರೆಯ ನವ ನಿರ್ಮಾಪಕರಾಗಿ ಸದ್ಗುರು ಶ್ರೀತ್ಯಾಗರಾಜರ ಶಿಷ್ಯ ಪರಂಪರೆ ಅನುಸ್ಯೂತವಾಗಿ ಕರ್ನಾಟಕದಲ್ಲಿ ಹರಿದು ಬರುವಂತೆ ಮಾಡಿದ ಯಶಃಕಾಯರು ಆಸ್ಥಾನ ಸಂಗೀತರತ್ನ ವಿದ್ವಾನ್ ಚಿಂತಲಪಲ್ಲಿ ವೆಂಕಟರಾಯರು. ಎಂಟುನೂರು ವರ್ಷಗಳಿಂದಲೂ ಐತಿಹಾಸಿಕವಾಗಿ ಹೊಯ್ಸಳರ, ವಿಜಯನಗರ ಅರಸರ, ಮೈಸೂರು ಅರಸರ ನಿರಂತರ ಆಸ್ಥಾನಿಕರಾಗಿ ಬಂದ ಚಿಂತಲಪಲ್ಲಿ ಪರಂಪರೆ ಇವರಿಂದ ಪುನಜ್ಜೀವನಗೊಂಡು ತನ್ನದೇ ಆದ ವಿಶಿಷ್ಟ ಛಾಪನ್ನು ಸಂಗೀತ ಕ್ಷೇತ್ರದಲ್ಲಿ ಹೊಂದಿದೆ.

ಅತಿ ಪ್ರಾಚೀನ ಪರಂಪರೆ: ಸಂಗೀತ ಸಾರಸ್ವತ ಕ್ಷೇತ್ರದಲ್ಲಿ ‘ಚಿಂತಲಪಲ್ಲಿ’ ಮನೆತನವು ಎಂಟು ಶತಮಾನಗಳಿಗೂ ಮಿಗಿಲಾದ ಭವ್ಯ ಇತಿಹಾಸವನ್ನು ಹೊಂದಿದೆ. ಬಹುಶಃ ಇಡೀ ವಿಶ್ವದಲ್ಲಿ ಸಂಗೀತ ಕ್ಷೇತ್ರದಲ್ಲಿ ಇಷ್ಟು ವರ್ಷಗಳ ಜೀವಂತ ಪರಂಪರೆಯನ್ನು ಹೊಂದಿದ ಇನ್ನೊಂದು ಪರಂಪರೆ ಸಿಗುವುದಿಲ್ಲ. ಈ‘ಚಿಂತಲಪಲ್ಲಿ’ ಒಂದು ಗ್ರಾಮದ ಹೆಸರು ಮಾತ್ರವಲ್ಲದೆ ಪರಂಪರೆಯ ಅಭಿಧಾನವೂ ಸಹಾ. ಸುಮಾರು ೧೨ನೇ ಶತಮಾನದ ಕಾಲದಿಂದಲೂ ಈ ಗ್ರಾಮ ಪರಂಪರೆ ಇದ್ದುದಕ್ಕೆ ಆಧಾರಗಳಿವೆ. ಕೋಲಾರ ಜಿಲ್ಲೆಯ ಗೌರೀಬಿದನೂರು ತಾಲ್ಲೂಕಿನ ಒಂದು ಗ್ರಾಮ ಈ ಚಿಂತಲಪಲ್ಲಿ. ಆಂಧ್ರದ ಗಡಿಯಲ್ಲಿರುವುದರಿಂದಾಗಿ ಇದು ‘ಚಿಂತಲಪಲ್ಲಿ’ಯಾಗಿದ್ದರೂ ಕನ್ನಡದಲ್ಲಿ ಇದಕ್ಕೆ ಹುಣೆಸೇಹಳ್ಳಿ ಎಂದೇ ಹೆಸರಿದೆ. ಈ ಗ್ರಾಮದ ದಿನ್ನೆಯೊಂದರ ಬಳಿಯೆ ದೇವಸ್ಥಾನದ ಅವಶೇಷಗಳಲ್ಲಿನ ಒಂದು ಕಲ್ಲಿನ ಕಂಬದಲ್ಲಿ ಶಿಲಾಶಾಸನವೊಂದಿದೆ. ಈ ಶಾಸನದ ಪ್ರಕಾರ ಹೊಯ್ಸಳರ ದೊರೆ, ವೀರಬಲ್ಲಾಳನು ಈ ಊರಿಗೆ ಆಗಮಿಸಿದ್ದನೆಂದೂ, ಈ ಊರಿಗೆ ತನ್ನ ಹೆಸರನ್ನು ಪ್ರತ್ಯಯವಾಗಿ ಸೇರಿಸಿ ಚಿಂತಲ ಬಲ್ಲಾಳಪುರವೆಂದು ಕರೆದು ಇದರ ಬದಿಯ ಊರುಗಳನ್ನು ಗಾತ್ರಕ್ಕನುಗುಣವಾಗಿ ಚಿಕ್ಕ ಹಾಗೂ ದೊಡ್ಡ ಬಲ್ಲಾಳ (ಬಳ್ಳಾಪುರ)ಗಳೆಂದು ಉದ್ಗರಿಸಿರುವರೆಂಬುದಾಗಿ ಈ ಶಾಸನದಲ್ಲಿ ಇದ್ದು, ಈ ಚಿಂತಲ ಬಲ್ಲಾಳಪುರದ “ಗಾಣರು” (ಗಾಯಕರು), ಭಾರತಿಕರು, (ಭರತನಾಟ್ಯವನ್ನು ಬಲ್ಲವರು), ಮದ್ದಗಳಿಗರು, ಆವುಜಕಾರರಿಗೆ “ಉಂಬಳಿ”ಯನ್ನು ನೀಡಿರುವ ಉಲ್ಲೇಖವಿದೆ

[ಈ ಶಾಸನದ ಬಹು ಪಾಲು ಆಂಸಗಳು ಬಿ.ಎಲ್. ರೈಸ್‌ರವರ ಎಪಿಗ್ರಾಫಿಯಾ ಕರ್ನಾಟಕದಲ್ಲಿ ಪ್ರಕಟಿಗೊಂಡಿವೆ] ಹೀಗಿರುವುದರಿಂದಾಗಿ ಬಲ್ಲಾಳನ ಕಾಲದಿಂದಲೂ ಈ ಪರಂಪರೆ ಸಂಗೀತದಲ್ಲಿ ಹೆಸರುವಾಸಿಯಾಗಿರುವುದು ವಿದಿತವಾಗಿದೆ. ಮಲ್ಲಿಕಾಫರನ ದಾಳಿಯಿಂದ ಹೊಯ್ಸಳರ ಸಾಮ್ರಾಜ್ಯ ನಶಿಸಿ, ಮುಂದೆ ವಿಜಯನಗರ ಸ್ಥಾಪನೆಯಾದನಂತರ ಈ ಮನೆತನದವರು ಸಂಗೀತಸೇವೆಯನ್ನು ವಿಜಯನಗರ ಅರಸರಲ್ಲೂ ಆಸ್ಥಾನಿಕರಾಗಿ ಮುಂದುವರೆಸಿಕೊಂಡು ಬಂದರು. ಅದಕ್ಕೆ ಸ್ಪಷ್ಟ ದಾಖಲೆ ಸಿಗುವುದು ಈ ಚಿಂತಲಪಲ್ಲಿ ಮನೆತನದ ಪೂರ್ವಿಕರೂ ವಾಗ್ಗೇಯಕಾರರೂ ಆದ ಚೆಲುವಿಂದಲ ಗವಿರಂಗಪ್ಪ ಅಥವಾ ಗವಿರಂಗದಾಸರಿಂದ.

ತ್ರಿಮೂರ್ತಿಗಳಿಗೂ ಹಿಂದಿನ ಪರಂಪರೆ: ಗವಿಯಪ್ಪ (ಗವಪ್ಪ, ಗವಿರಂಗಪ್ಪ ಜನರ ಬಾಯಲ್ಲಿ ಮಲುಂದೆ ಗವಿರಂಗದಾಸರು) ನವರು ತೆಲುಗಿನಲ್ಲಿ ಒಳ್ಳೆಯ ವಾಗ್ಗೇಯಕಾರರು. ಸಂಗೀತ ತ್ರಿಮೂರ್ತಿಗಳಿಗೂ ಮುಂಚೆ ಕೀರ್ತನೆಗಳನ್ನು ರಚಿಸಿದವರು. ಇವರ ಒಂದು ಕೃತಿಯಲ್ಲಿ “ದೇವರಾಯುಡೇ ಮನಸದಾಶಿವುಡು ಪಾವನಗಂಗಾಧರುಡು ಗಜ ವೇಟಕಾರುಡು” ಎಂಬ ಸಾಲು ಚಿಂತನಾರ್ಹವಾದದ್ದು. ವಿಜಯನಗರ ಸಾಮ್ರಾಟ ಪ್ರೌಢದೇವರಾಯನನ್ನು ಕುರಿತು ಶ್ಲೇಷೆಯಿಂದ ಸ್ತುತಿಸಿರುವ ಕೀರ್ತನೆಯಿದು. ಈ ದೇವರಾಯನಿಗೆ “ಗಜಬೇಂಟೆಕಾರ” ಎಂಬ ಬಿರುದಿತ್ತೆಂದು ಕೆ.ಎ. ನೀಲಕಂಠಶಾಸ್ತ್ರಿ ಮೊದಲಾದ ಇತಿಹಾಸಕಾರರು ಉಲ್ಲೇಖಿಸುತ್ತಾರೆ. ಈ ದೇವರಾಯರನು ಸಂಗಮ ವಂಶದವನು. ಕೃಷ್ಣದೇವರಾಯನಿಗಿಂತಲೂ ಹಿಂದಿನವನು. ಈ ವಿವರಣೆಗಳಿಂದಾಗಿ ಚಿಂತಲಪ್ಲಲಿ ಮನೆತನದವರು ವಿಜಯನಗರ ಅರಸರಲ್ಲೂ ಸೇವೆಯಲ್ಲಿದ್ದುದು ತಿಳಿಯುತ್ತದೆ. ಈ ಗವಿರಂಗಪ್ಪನವರ ೯೭ ಕೃತಿಗಳು ಇದುವರೆಗೂ ದೊರೆತಿದ್ದು ಕೆಲವನ್ನು ಪ್ರಕಟಿಸಲಾಗಿದೆ. ಮುಂದೆ ಈ ಪರಂಪರೆಗೆ ಪವಾಡ ಸದೃಶವಾದ ಹೆಗ್ಗಳಿಕೆಯನ್ನು ತಂದುಕೊಟ್ಟವರು. ‘ಸಂಗೀತ ರಾಯ ತಿಮ್ಮಣ್ಣ’ನವರು.

ಕಲ್ಲು ವೀಣೆ ಮಿಡಿದದ್ದು: ೧೫೬೫ರಲ್ಲಿ ತಾಳಿಕೋಟೆ ಯುದ್ಧದಲ್ಲಿ ವಿಜಯನಗರ ಪತನಾನಂತರ ಷಾಹಿರಾಜ್ಯಗಳಲ್ಲೊಂದಾದ ಬಿಜಾಪುರ ಸುಲ್ತಾನ ಮಹಮದ್ ಷಾ ಬ್ಯಾಹನು ತನ್ನ ಸೇನಾನಿ ನವಾಬ್ ರಣದುಲ್ಲಾಖಾನ್ ಹಾಗೂ ಭೈರೂತ್‌ಖಾನರನ್ನು ಬೆಂಗಳೂರು ಕೆಂಪೇಗೌಡನ ಮೇಲೆ ದಾಳಿಯಿಡಲು ಕಳುಹಿಸಿದಾಗ ರಣದುಲ್ಲಾಖಾನ್ ಪೆನುಗೊಂಡೆಗೆ ದಾಳಿಯಿಟ್ಟ. ಚಿಂತಲಪಲ್ಲಿ ಮನೆತನದವರು ಮುಂದೆ ಪೆನುಗೊಂಡೆಯಲ್ಲಿ ಆಸ್ಥಾನಿಕರಾಗಿದ್ದರು. ಈ ಸಮಯದಲ್ಲಿ ಖಾನನು ಚಿಂತಲಪಲ್ಲಿಗೆ ದಾಳಿಮಾಡಿ ಅಲ್ಲಿನ ಜನರನ್ನು ಹಿಂಸಿಸಿ ಆಕಾಲದ, ಅಲ್ಲಿನ ಖ್ಯಾತ ವೈಣಿಕ ಗಾಯಕರಾಗಿದ್ದ ತಿಮ್ಮಣ್ಣನವರನ್ನು ಸೆರೆಹಿಡಿಯುತ್ತಾನೆ. “ನಾದ ಸರಸ್ವತಿ ನಿನಗೆ ಒಲಿದಿದ್ದಲ್ಲಿ ಈ ದೇವಾಲಯದ ಕಲ್ಲಿನ ಕಂಬಕ್ಕೇ ತಂತಿಕಟ್ಟಿ ವೀಣೆ ನುಡಿಸಿತೋರಿಸಬೇಕೆಂದೂ ಇಲ್ಲವಾದರೆ ಇಡೀ ಊರಿಗೆ ಬೆಂಕಿ ಇಡುವೆ” ಎಂದ ನವಾಬನ ಸವಾಲನ್ನು ಸ್ವೀಕರಿಸಿ ತಮ್ಮಣ್ಣನವರು ಹಾಗೆಯೇ ಮಾಡಿತೋರಿಸಿದಾಗ ಆ ವೀಣಾನಾದವನ್ನು ಕೇಳಿ ಗಾಬರಿಯೂ ಅಚ್ಚರಿಯೂ ಒಟ್ಟಿಗೆ ಆದ ಖಾನನು ಆನಂದಪಟ್ಟು ಸರೆಯಲ್ಲಿದ್ದವರನ್ನೆಲ್ಲಾ ಬಿಟ್ಟು, ಚಿಂತಲಪಲ್ಲಿ ಹಾಗೂ ಇನ್ನಿತರ ಗ್ರಾಮಗಳನ್ನು ದತ್ತಿಯಾಗಿ ಕೊಟ್ಟು ಈ ಘಟನೆಯನ್ನು ತಾಮ್ರಪಟ ಶಾಸನವೊಂದರಲ್ಲಿ ಕೊರೆಯಿಸಿ ಅಪಾರ ಸಂಪತ್ತು ಹಾಗೂ ಖಿಲ್ಲತ್ತನ್ನು ನೀಡಿದ. (ಈ ಬಗ್ಗೆ ಬಿ.ವಿ.ಕೆ ಶಾಸ್ತ್ರಿಯವರ ‘ಕಲೆಯ ಗೊಂಚಲು’ ಪುಸ್ತಕದಲ್ಲಿ ವಿವರಣೆಯಿದೆ) ಬಹುಶಃ ಇದು ವೈಶ್ಚಿಕ ಸಂಗೀತದಲ್ಲಿ ಮಹತ್ವದ ಘಟನೆ. ಇದು ದಂತಕಥೆಯಂತಾಗದೆ, ಚಾರಿತ್ರಿಕವಾಗಿ ಶಾಸನದಲ್ಲಿ ದಾಖಲಾಗಿರುವುದೂ ಅಲ್ಲದೆ ತಿಮ್ಮಣ್ಣ ಹಾಗೂ ಅವರ ವಂಶಸ್ಥರು ಈ ದತ್ತಿಗಳಿಗೆ ಮುಂದೆ ಕಂದಾಯಗಳನ್ನು ಪಾವತಿ ಮಾಡಿರುವ ದಾಖಲೆಗಳು ನಮಗೆ ಸತ್ಯಸಾಕ್ಷಿಗಳನ್ನೊದಗಿಸುತ್ತವೆ. ನವಾಬನಿಂದ ‘ಸಂಗೀತರಾಯ’ ಎನಿಸಿಕೊಂಡ ತಿಮ್ಮಣ್ನನವರ ಭವ್ಯವಾದ ಪಂಚಲೋಹದ ವಿಗ್ರಹವು ಚಿಂತಲಪಲ್ಲಿಯ ಆಂಜನೇಯಸ್ವಾಮಿ ದೇವಾಲಯದಲ್ಲಿ ಇಂದಿಗೂ ಪೂಜಿಸಲ್ಪಡುತ್ತದೆ. ‘ಸಂಗೀತರಾಯ’ನ ಮುಂದಿನ ವಂಶಸ್ಥರೂ ರಾಯರೆಂಬ ಪ್ರತ್ಯಯವನ್ನು ಸೇರಿಸಿಕೊಳ್ಳುವ ಪದ್ಧತಿ ಅಂದಿನಿಂದ ಬೆಳೆದುಬಂದಿತು.

ವೆಂಕಟರಾಯರ ಜನನವಿದ್ಯಾಭ್ಯಾಸ

ಮಕ್ಕಳಿಲ್ಲದ ಮನೆಗೆ ಬೆಳಕು: ಈ ಚಿಂತಲಪಲ್ಲಿ ವಂಶದ ಆದಿನಾರಾಯಣಪ್ಪ ಹಾಗೂ ಆದಿಲಕ್ಷಮ್ಮನೆಂಬ ದಂಪತಿಗಳಿಗೆ ಮಗನಾಗಿ ವೆಂಕಟರಾಯರು ೧೭.೮.೧೮೭೪ರಲ್ಲಿ ಜನಿಸಿದರು. ಆದಿನರಾಯಣಪ್ಪನವರ ತಮ್ಮಂದಿರಾದ ಭಾಸ್ಕರರಾವ್ ಹಾಗೂ ವೆಂಕಟನರಸಪ್ಪನವರು ಆಗ್ಗೆ ಹಿರಿಯ ಸಂಗೀತ ವಿದ್ವಾಂಸರಾಗಿದ್ದು ಸಂಡೂರು ರಾಜನ ಆಸ್ಥಾನದಲ್ಲಿದ್ದರು. ಆದಿನಾರಾಯಣಪ್ಪನವರ ಸಂಬಂಧಿಗಳಾದ ಪುಟ್ಟಮ್ಮನೆಂಬುವರು ಮಕ್ಕಳಿಲ್ಲದ್ದರಿಂದಾಗಿ ವೆಂಕಟರಾಯರನ್ನು ಮೂರನೇ ತಿಂಗಳಿನಲ್ಲಿಯೇ ‘ಉಪ್ಪು-ತವಡನ್ನು ನೀಡುವ ಮೂಲಕ’ ದತ್ತು ತೆಗೆದುಕೊಂಡರಂತೆ. [ಆಗ್ಗೆ ದತ್ತು ಸ್ವೀಕಾರ ಮಾಡುವಾಗ ಹೀಗೆ ವಸ್ತುಗಳನ್ನು ನೀಡಿ ಕೊಂಡುಕೊಳ್ಳವ ಶಾಸ್ತ್ರ ಮಾಡುತ್ತಿದ್ದರೆಂದು ಆಚಾರ] ಹೀಗೆ ಬಡದಂಪತಿಗಳಿಗೆ ಜನಿಸಿದರೂ ವೆಂಕಟರಾಯರು ಅನುಕೂಲಸ್ಥರಾದ ದತ್ತು ತಾಯಿಯ ಆರೈಕೆಯಲ್ಲಿ ಮುದ್ದಿನ ಕೂಸಾಗಿ ಬೆಳೆದರು. ಈ ದತ್ತು ಮಗನಿಗೆ ಪುಟ್ಟಮ್ಮನವರು ಬೆಣ್ಣೆಯನ್ನು ಮೈಗೆ ತಿಕ್ಕಿ ಅಭ್ಯಂಜನವನ್ನು ಮಾಡಿಸುತ್ತಿದ್ದರಂತೆ.

 

ಆರ್ಷೆಯ ಗುರುಪರಂಪರೆಯ ವಟವೃಕ್ಷದಡಿಯಲ್ಲಿ

ಮೈಸೂರು ಸದಾಶಿವರಾಯರ ಪರಂಪರೆ: ಚಿಂತಲಪಲ್ಲಿ ವೆಂಕಟರಾಯರ ಜೀವನದ ಬಹುದೊಡ್ಡ ಸೌಭಾಗ್ಯಗಳಲ್ಲಿ ಮಹಾವಿದ್ವಾಂಸರುಗಳ ಬಳಿಯ ಶಿಷ್ಯತ್ವವೂ ಒಂದು. ಈ ಗುರು ಪರಂಪರೆಯ ಪ್ರಭಾವದಿಂದಾಗಿ ಅವರು ಎರಡು ರೀತಿಯಲ್ಲಿ ತ್ಯಾಗರಾಜರ ನೇರ ಶಿಷ್ಯ ಪರಂಪರೆಗೆ ಸೇರಿಕೊಂಡರು. ವೆಂಕಟರಾಯರು ಬಾಲ್ಯದಲ್ಲಿ ಶಾಲೆಗೆ ಸೇರಿದರೂ ಲೌಕಿಕ ಶಿಕ್ಷಣ ಅಂಟದ ಕಾರಣ ಅವರ ಶಾಲಾ ಮಾಸ್ತರರೇ ಹುಡುಗನನ್ನು ಕರೆತಂದು ಮನೆಗೆ ಬಿಟ್ಟು ಸಂಗೀತ ಶಿಕ್ಷಣವನ್ನು ಕೊಡಿಸಲು ಹೇಳಿದರಂತೆ. ಚಿಕ್ಕಪ್ಪಂದಿರಾದ ಭಾಸ್ಕರರಾವ್ ಹಾಗೂ ವೆಂಕಟನರಸಪ್ಪನವರು ವೆಂಕಟರಾಯರಿಗೆ ಬಾಲ ಪಾಠಗಳನ್ನು ಹೇಳಿಕೊಟ್ಟರು. ಆಗ ವೆಂಕಟರಾಯರಿಗೆ ಐದು ವರ್ಷ. ಅದೇ ಕಾಲದಲ್ಲಿ ರಾಯಲಸೀಮೆಗೆ ಬಂದಿದ್ದ ಮಹಾನ್ ವಾಗ್ಗೇಯಕಾರ ಮೈಸೂರು ಸದಾಶಿವರಾಯರ ಮುಂದೆ ಐದು ವರ್ಷದ ಈ ಹುಡುಗ ತ್ಯಾಗರಾಜರ, ರೀತಿಗೌಳ ರಾಗದ ‘ಚೆರರಾವದೇಮಿರಾ ರಾಮಯ್ಯ ‘ಕೃತಿಯನ್ನು ಹಾಡಿದಾಗ ಸಂತಸಗೊಂಡ ರಾಯರು ತಮ್ಮೊಡನೆ ಈ ಹುಡುಗನನ್ನು ಕಳುಹಿಸಲು ಭಾಸ್ಕರರಾಯರಿಗೆ ಹೇಳಿದಾಗ, ಇಂತಹ ದಿವ್ಯ ಅವಕಾಶದಿಂದ ವಿಧಿಯಿಲ್ಲದೆ ಪುಟ್ಟಮ್ಮನವರು ಆ ಬಾಲಕನೊಂದಿಗೆ ಮೈಸೂರಿಗೆ ಹೊರಟು, ದೇವಾಲಯವೊಂದರ ಗಜ ಶಾಲೆಯಲ್ಲಿ ಉಳಿದುಕೊಂಡು ಸದಾಶಿವರಾಯರ ಬಳಿ ಪಾಠವನ್ನು ಹೇಳಿಸಿದರಂತೆ. ಸುಮಾರು ೧೮೮೪-೧೮೮೫ರಲ್ಲಿ ಸದಾಶಿವರಾಯರು ಕಾಲವಾಗುವವರೆಗೆ ಐದು ವರ್ಷಗಳ ಕಾಲ ಅವರ ಬಳಿ ಶಿಷ್ಯವೃತ್ತಿ ಮಾಡಿದ ವೆಂಕಟರಾಯರು, ಸದಾಶಿವರಾಯರ ನಿಧನಾನಂತರ, ಸದಾಶಿವರಾಯರ ಪ್ರಖ್ಯಾತ ಶಿಷ್ಯರಾಗಿದ್ದ ಹಾನಗಲ್ಲು ಚದಂಬರಯ್ಯನವರಲ್ಲಿ ಶಿಷ್ಯತ್ವವನ್ನು ವಹಿಸಿದರು. ಚಿದಂಬರಯ್ಯನವರ ಬಳಿ ಪಾಠವನ್ನು ಮಾಡುತ್ತಲೇ ಚಿದಂಬರಯ್ಯನವರ ಆಜ್ಞೆಯಂತೆ ಮೈಸೂರಿನಲ್ಲಿ ಪ್ರಖ್ಯಾತರಾಗಿದ್ದ ಮಹಾ ವಿದ್ವಾಂಸ ಕರೂರು ರಾಮಸ್ವಾಮಿ ಅಪ್ಪರವರಲ್ಲೂ ಶಿಕ್ಷಣವನ್ನು ಮುಂದುವರೆಸಿದರು. [ಕರೂರು ರಾಮಸ್ವಾಮಿ ಅಪ್ಪರವರು ಖ್ಯಾತರಾದ ಬಿಡಾರಂ ಕೃಷ್ಣಪ್ಪನವರಿಗೂ ಗುರುಗಳಾಗಿದ್ದರು]. ಹೀಗಾಗಿ ಸದಾಶಿವರಾಯರು, ಚಿದಂಬರಯ್ಯನವರ ಪಾಠಾಂತರದಿಂದಾಗಿ ತ್ಯಾಗರಾಜರ, ವೆಂಕಟರಮಣ ಭಾಗವತರ, ಸದಾಶಿವರಾಯರ ಅನೇಕ ಕೃತಿಗಳು ವೆಂಕಟರಾಯರಿಗೆ ದಕ್ಕಿದರೆ, ರಾಮಸ್ವಾಮಪ್ಪನವರಿಂದಾಗಿ ಕರೂರು ಸಂಪ್ರದಾಯದ ‘ಗರ್ಭಪುರಿವಾಸಂಕಿತ’ದ ಅನೇಕ ಕೃತಿಗಳು ವೆಂಕಟರಾಯರ ಕೃತಿ ಭಂಡಾರದ ಸ್ವತ್ತಾದವು.

ಪಲ್ಲವಿ ಶೇಷಯ್ಯರ್‌ರಲ್ಲಿ ಪಲ್ಲವಿಸಿದ ಲಯ ಕುಸುಮ: ವೆಂಕಟರಾಯರ ಸಂಗೀತಕ್ಕೆ ತಿರುವು ನೀಡಿದ ಪ್ರಸಂಗವೆಂದರೆ ತ್ಯಾಗರಾಜರ ಪ್ರಶಿಷ್ಯರಾಗಿದ್ದ ಪಲ್ಲವಿ ಶೇಷಯ್ಯರ ಬಳಿ ಗುರುಕುಲಕ್ಕೆ ಸೇರಿದ ಘಟನೆ. ಈ ಪ್ರಸಂಗವನ್ನು ಶ್ರೀ ಪಿ. ಸಾಂಬಮೂರ್ತಿಯವರು, ತಮ್ಮ (           ) ಗ್ರಂಥಗಳಲ್ಲಿ, ಬಿ.ವಿ.ಕೆ. ಶಾಸ್ತ್ರಿಯವರು ಮುರಳಿವಾಣಿಯ (       ) ಲೇಖನದಲ್ಲಿ, ಡಾ.ವಿ.ಎಸ್. ಸಂಪತ್ಕುಮಾರಾಚಾರ್ಯರು ‘ಸದ್ಗುರು ತ್ಯಾಗರಾಜರು’ ಗ್ರಂಥಗಳಲ್ಲಿ ವಿವರಿಸಿದ್ದಾರೆ. ಅವುಗಳ ಅಭಿಮತದಂತೆ ವೆಂಕಟರಾಯರು ೧೮೯೭ರಲ್ಲಿ ಹಿಂದೂಪುರದ ಛಾಯಮ್ಮನ ದೇವಸ್ಥಾನದಲ್ಲಿ ತಮ್ಮ ಸ್ನೇಹಿತರೊಡನೆ ಬೆಳಿಗ್ಗೆ ಚರ್ಚೆ ಸಾಧನೆ ಮಾಡುತ್ತ ಪಲ್ಲವಿಯೊಂದನ್ನು ಹಾಡಿದ ಸಂದರ್ಭದಲ್ಲಿ ಅದರಲ್ಲಿನ ಲೆಕ್ಕಾಚಾರವೊಂದು ತಪ್ಪೆಂದು ಸ್ನೇಹಿತರೊಬ್ಬರು ವಾದಕ್ಕೆ ಇಳಿದಾಗ ಅವರ ಹಾಡುಗಾರಿಕೆಯನ್ನು ದೇವಾಲಯದ ಬಾವಿಯೊಂದರ ಬಳಿ ಕೇಳುತ್ತ ಕುಳಿತಿದ್ದ ತೇಜಸ್ವಿ ಮೂರ್ತಿಯೊಬ್ಬರು ಬಂದು ‘ಅವರೇನು ತಪ್ಪು ಮಾಡಿದ್ದಾರೆ? ಅವರ ತಾಳ-ಕಲ್ಪನಾ ಸ್ವರಗಳ ಮಾದರಿಯೆಲ್ಲವೂ ಅತ್ಯಂತ ಸಮರ್ಪಕವಾಗಿವೆ ಎಂದರಂತೆ. ಆ ವ್ಯಕ್ತಿ “ವಿಶಾಲವಾದ ಹಣೆಯಲ್ಲಿ ವಿಭೂತಿ ಕುಂಕುಮಗಳನ್ನು ಧರಿಸಿದ್ದು ಕೊರಳಲ್ಲಿ ರುದ್ರಾಕ್ಷಿಯ ಸರವನ್ನು ದೊಡ್ಡದಾದ ಶಿಖೆಯನ್ನು ಬಿಟ್ಟು ತೇಜಃ ಪುಂಜವಾದ ಕಣ್ಣುಗಳಿಂದ ಕೂಡಿದ್ದರಂತೆ”, ಅವರನ್ನ ಉ ನೀವು ಯಾರೆಂದು ಕೇಳಿದಾಗ ನಾನು ನೇಯ್ಕಾರಪಟ್ಟಿ ಪಲ್ಲವಿಶೇಷಯ್ಯರ್ ಎಂದರಂತೆ. ಅಷ್ಟೇ ಅಲ್ಲದೆ ಶೇಷಯ್ಯರು ವೆಂಕಟರಾಯರನ್ನು ಮೆಚ್ಚಿಕೊಂಡಾಗ ಮೈಸೂರಿಗೆ ಹೊರಡುತ್ತಿದ್ದ ಶೇಷಯ್ಯರ ಹಿಂದೆ ವೆಂಕಟರಾಯರೂ ಹೊರಟರಂತೆ. ಅಂದಿನಿಂದ ರಾಯರು ಶೇಷಯ್ಯರ್‌ರವರ ಅವಿಚ್ಛಿನ್ನ ಶಿಷ್ಯರಾಗಿ ಮೈಸೂರು ಹಾಗೂ ಸೇಲಂನಲ್ಲಿ ಗುರುಕುಲ ವಾಸವನ್ನು ಮಾಡಿದರೆಂದು ತಿಳಿದುಬರುತ್ತದೆ. ಮೈಸೂರಿನ ಚಾಮರಾಜ ಒಡೆಯರ ಮೇಲೆ ಶೇಷಯ್ಯರ್ ಧನ್ಯಾಸಿಯ ತಿಲ್ಲಾನವನ್ನು ರಚಿಸಿ ಹಾಡಿದಾಗ, ರಾಮನಾಡ್ ಮಹಾರಾಜನ ಬಳಿ ಪಲ್ಲವಿ ಸ್ಪರ್ಧೆಯಲ್ಲಿ ಹಾಡಿದಾಗ ಅವರೊಂದಿಗೆ ವೆಂಕಟರಾಯರು ಹಾಗೂ ಶೇಷಯ್ಯರ ಮತ್ತೋರ್ವ ಶಿಷ್ಯ ಮಣತ್ತಟ್ಟೈ ದೊರೆಸ್ವಾಮಯ್ಯರ್ ಹಾಗೂ ಶೇಷಯ್ಯರ ಸೋದರ ಕೋದಂಡರಾಮಯ್ಯರು ಸಹಾ, ಸಹಗಾಯನವನ್ನು ಮಾಡಿದ್ದರೆಂದೂ ವೆಂಕಟರಾಯರ ಬರವಣಿಗೆಗಳಲ್ಲಿ ತಿಳಿದುಬರುತ್ತದೆ. ವೆಂಕಟರಾಯರು ಪಲ್ಲವಿಯ ಗಾಯನದಲ್ಲಿ, ಲಯ ಭಾಗದ, ತಾನದ ಸಿದ್ಧಿಯನ್ನು ಪಡೆದದ್ದು ಶೇಷಯ್ಯನವರ ಗುರು ಕುಲದಿಂದ. ಪಲ್ಲವಿಗಳನ್ನು ೧೬ ಕಾಲಗಳಲ್ಲಿ ನಿರೂಪಣೆ ಮಾಡುವ ಸಾಮರ್ಥ್ಯ ವೆಂಕಟರಾಯರಿಗಿತ್ತೆಂದು ಮೇಲೆ ಉಕ್ತವಾದ ಗ್ರಂಥಗಳು ವರ್ಣಿಸುತ್ತವೆ. ವೆಂಕಟರಾಯರಿಂದಲೇ ಮೈಸೂರಿಗೆ ಶೇಷಯ್ಯರ್ ಕೃತಿಗಳು ಬಳಕೆಗೆ ಬಂದವೆಂದು ಹಿರಿಯ ವಿದ್ವಾಂಸ ಎಂ. ಎ. ನರಸಿಂಹಾಚಾರ್ಯರು ಹೇಳಿರುವುದುಂಟು. [ನೋಡಿ; ಅನನ್ಯ ಅಭಿವ್ಯಕ್ತಿ ಸಂಪುಟ ೪, ಸಂಚಿಕೆ ೧ ಆಗಸ್ಟ್ ೨೦೦೧] ಶೇಷಯ್ಯರ ಪಂತುವರಾಳಿಯ ಎಂತವೇಡಿನಗಾನಿ, ಮುಖಾರಿಯ ಕೋಪಮೇಲ, ಆರಭಿಯ ಪಾಲಿಂಪರಾವ ದೇಮಿ, ನೀಲಾಂಬರಿಯ ಮನಸುನ ನೀಪಾದ ಕೃತಿಗಳೇ ಅಲ್ಲದೆ ಶೇಷಯ್ಯರ ಮಾನವತಿ, ತಾನರೂಪಿ, ಮಾಂಜಿ, ಸೈಂಧವಿ, ಶುದ್ಧ, ಸೇನಾವತಿ ಮುಂತಾದ ಅಪೂರ್ವ ರಾಗಗಳ ಕೃತಿಗಳನ್ನು ವೆಂಕಟರಾಯರು ಕಚೇರಿಯಲ್ಲಿ ಹಾಡುತ್ತಿದ್ದರಂತೆ.

ತಮ್ಮ ಗುರುಕುಲವಾಸವನ್ನು ಕುರಿತು ನಾಗಮಣಿ ಎಸ್.ರಾವ್‌ರವರಿಗೆ ನೀಡಿದ ಆಕಾಶವಾಣಿಯ ಸಂದರ್ಶನದಲ್ಲಿ ವೆಂಕಟರಾಯರೇ ಹೀಗೆ ಹೇಳಿಕೊಂಡಿದ್ದಾರೆ. “ಗುರುಗಳ ಮನೆಯಲ್ಲೇ ವಾಸ. ಬೆಳೆಗಿನ ಝಾವ ನಾಲ್ಕು ಗಂಟೆಗೇ ಎದ್ದು ಕಂಠದವರೆಗೆ ತಣ್ಣೀರಲ್ಲಿ ನಿಂತು ಆಕಾರ ಸಾಧನೆ, ಅನಂತರ ಗುರುಸೇವೆ. ಗುರುಗಳು ಏಳುವ ವೇಳೆಗೆ ಅವರ ಅಗತ್ಯಗಳನ್ನು ಪೂರೈಸುವುದು. ಮತ್ತೆ ಸಂಗೀತಾಭ್ಯಾಸ ಮುಂದುವರೆಸಿ ಬೆಳಿಗ್ಗೆ ಹತ್ತು ಗಂಟೆಯವರೆಗೆ ಹೇಳಿಕೊಟ್ಟಿದ್ದನ್ನೆಲ್ಲ ಕಲಿತುಕೊಳ್ಳುವುದು. ಮಧ್ಯಾಹ್ನ ಗುರುಗಳಿಗೆ ಹಿಂದಿನ ಪಾಠ ಒಪ್ಪಿಸುವುದು. ಸಂಜೆ ಪುನಃ ಗುರುಗಳಿಂದ ಹೊಸ ಪಾಠ ಇದು ಸುಮಾರು ೨೦ ವರ್ಷಗಳ ಕಾಲ ಸತತವಾಗಿ ನಡೆದ ಸಾಧನೆ”.

ಹರಿದಾಸ ಪರಂಪರೆ ಹಾಗೂ ವೆಂಕಟರಾವ್: ವೆಂಕಟರಾಯರ ಚಿಂತಲಪಲ್ಲಿ ಚೀಕಲಪರವಿಯ ವಿಜಯದಾಸರ ವಂಶಕ್ಕೆ ಸೇರಿದ್ದೆಂದು ಅಭಿಮತವಿದೆ. ಅದಲ್ಲದೆ ಸೋಸಲೆ ವ್ಯಾಸರಾಜರು ಕ್ಷೇತ್ರ ಪರ್ಯಟನೆಯ ಸಂದರ್ಭದಲ್ಲಿ ಚಿಂತಲಪಲ್ಲಿಗೆ ಬಂದು ಪ್ರಾಣದೇವರನ್ನು ಪ್ರತಿಷ್ಠಾಪಿಸಿ ಮುದ್ರಾಧಾರಣೆಯನ್ನು ಅಲ್ಲಿನ ಜನರಿಗೆ ಮಾಡಿದರು. ಖಾದ್ರಿಯ ನರಸಿಂಹ ದೇವರ ಪರಮಭಕ್ತರಾಗಿದ್ದ ತಿಮ್ಮಣ್ಣ ಅಥವಾ ತಿಪ್ಪಣದಾಸ (ತಿಪ್ಪಣಾರ್ಯ)ರು ಹನುಮದ್ವಿಲಾಸವೆಂಬ ಚಂಪೂ ಗ್ರಂಥವನ್ನು ಬರೆದಿದ್ದು, ಇವರು ವೆಂಕಟರಾಯರ ಪೂರ್ವಜರು. ಹೀಗಾಗಿ ಹರಿದಾಸ ಪರಂಪರೆಯಲ್ಲೇ ಬಂದ ಚಿಂತಲಪಲ್ಲಿ ಮನೆತನದಲ್ಲಿ ವಿಜಯದಾಸರ ಅಪರೂಪ ಸುಳಾದಿಗಳನ್ನು ಹಾಡುವ ಸಂಪ್ರದಾಯವಿದೆ. ವಿಜಯದಾಸರೇ ಅಲ್ಲದೆ ಕಮಲೇಶ ವಿಠಲಾಂಕಿತರಾದ ಸುರಪುರದ ಆನಂದದಾಸರು ಮೈಸೂರು ಸದಾಶಿವರಾಯರ ಮನೆಗೆ ಆಗಾಗ್ಗೆ ಬರುತ್ತಿದ್ದುದನ್ನು ಬೇಲೂರು ಕೇಶವದಾಸರು ತಮ್ಮ ಕರ್ನಾಟಕ ಭಕ್ತ ವಿಜಯದಲ್ಲಿ ಹೇಳಿದ್ದಾರೆ. ಈ ದೇವರ ನಾಮಗಳಿಗೆ ವೆಂಕಟರಾಯರು ಧಾತುವನ್ನು ನೀಡುತ್ತಿದ್ದರೆಂದು ತಿಳಿದು ಬರುತ್ತದೆ. ಬೆಹಾಗ್ ರಾಗದಲ್ಲಿ ಪ್ರಸಿದ್ಧವಾಗಿರುವ ‘ಕಂಡು ಧನ್ಯನಾದೆ ಉಡುಪಿ ಕೃಷ್ಣನ’ ಎಂಬ ಸುರಪುರ ಆನಂದದಾಸರ ಕೀರ್ತನೆಗೆ ರಾಗ ಹಾಕಿದವರು ವೆಂಕಟರಾಯರೇ. ಇದನ್ನು ವೆಂಕಟರಾಯರ ಬಳಿ ಅರಿಯಾಕ್ಕುಡಿ ರಾಮಾನುಜ ಅಯ್ಯಂಗಾರ್ಯರು ಪಾಠಮಾಡಿ ಕಲಿತದ್ದನ್ನು ಇಂದಿಗೂ ಸ್ಮರಿಸುತ್ತಾರೆ. ‘ಯಾಕೆ ಬಂದೆ ಎಲೆ ಜೀವ, ಸಾರಿದೆನೋ ನಿನ್ನ’ ಮುಂತಾದ ದೇವರ ನಾಮಗಳಿಗೆ ವೆಂಕಟರಾಯರ ವರ್ಣಮಟ್ಟೇ ಇಂದಿಗೂ ಪ್ರಚಲಿತದಲ್ಲಿದೆ. ಇದಕ್ಕೆ ಬಹು ಕಾ‌ಋಣ ಕರ್ತರಾದವರೆಂದರೆ ವೆಂಕಟರಾಯರ ಮತ್ತೋರ್ವ ಗುರುಗಳಾದ ಪಕ್ಕಾ ಹನುಮಂತಾಚಾರ್ಯರು. ಆಚಾರ್ಯರು ರಾಯಲ ಸೀಮೆಯವರು. ಇವರಿಂದ ವೆಂಕಟರಾಯರು ದಾಸರ ಕೃತಿಗಳನ್ನು ಸಾಹಿತ್ಯ ಬಿಡಿಸಿ ಹಾಡುವ ಅಪೂರ್ವ ಕಲೆಯನ್ನು ಸಿದ್ಧಿಸಿಕೊಂಡರು. ಪಕ್ಕಾ ಹನುಮಂತಾಚಾರ್ಯರ ಇಳಿವಯಸ್ಸಿನಲ್ಲಿ ಅವರ ಬಳಿ ಪಾಠ ಮಾಡಿದ ಮತ್ತೊಬ್ಬ ಕರ್ನಾಟಕದ ಕಲಾವಿದರೆಂದರೆ ಪದ್ಮಚರಣ್ (ಎ.ವಿ. ಕೃಷ್ಣಮಾಚಾರ್ಯರು.)

ಶಿಷ್ಯ ಪರಂಪರೆ:

ಸದ್ಗುರು ಶ್ರೀ ತ್ಯಾಗರಾಜರು

|

|                                                                                 |

ವಾಲಾಜಪೇಟೆ ವೆಂಕಟರಮಣ ಭಾಗವತರು                          ನೇಮಂ ಸುಬ್ಬಯ್ಯರ್

|                                                                                 |

ಮೈಸೂರು ಸದಾಶಿವರಾಯರು                                           ನೇಕಾರ ಪಟ್ಟಿ ಪಲ್ಲವಿಶೇಷಯ್ಯರ್

|                                                                                 |

ಹಾನಗಲ್ ಚಿದಂಬರಯ್ಯ                                                   ಚಿಂತಲಪಲ್ಲಿವೆಂಕಟರಾವ್

|

ಚಿಂತಲಪಲ್ಲಿ ವೆಂಕಟರಾವ್

 

ಸಾಧನೆ ಮನ್ನಣೆ: ಪ್ರತಿಭೆಯ ಜೊತೆಗೆ ಪಾಠ-ಸಾಧನೆಗಳಿಂದ ವೆಂಕಟರಾಯರು ಬಹು ಬೇಗನೆ ಜನ ಮನ್ನಣೆಯನ್ನು ಗಳಿಸಿದರು. ಪಾಠವು ಮೈಸೂರು ರಾಜ್ಯದಲ್ಲಿಯಾದರು ಅವರ ಬಹು ಹೆಚ್ಚಿನ ಸಾಧನೆ, ಮನ್ನಣೆಗಳು ನಡೆದದ್ದು ರಾಯಲಸೀಮೆಯಲ್ಲಿ. ಗದ್ವಾಲ್, ಸಂಡೂರು, ಬರೋಡ ಮುಂತಾದ ರಾಜರುಗಳ ಮುಂದೆ ಹಾಡಿ ಖಿಲ್ಲತ್ತುಗಳನ್ನು, ತೋಡಾಗಳನ್ನು ಪಡೆದ ವೆಂಕಟರಾಯರು ಆಂಧ್ರದಲ್ಲಿ, ಅದರ ಭಾಗವಾದ ರಾಯಲಸೀಮೆಯಲ್ಲಿ ಪ್ರಖ್ಯಾತರಾದ್ದರಿಂದ ಅವರ ಹುಣಸೇನಹಳ್ಳಿ ಚಿಂತಲಪಲ್ಲಿಯಾಗಿ ಮನೆ ಮಾತಾಯಿತು. ಇಷ್ಟಾದರೂ ಮೈಸೂರು ಅರಸರ ಮುಂದೆ ಅವರು ಹಾಡಲು ಆಸ್ಥಾನಿಕರು ಬಿಡಲೇ ಇಲ್ಲ. ಮಹಾರಾಜರ ದರ್ಶನಕ್ಕಾಗಿ ಹಲವು ಬಾರಿ ಪ್ರಯತ್ನಿಸಿ ಜಿಗುಪ್ಸೆಗೊಂಡ ರಾಯರು ತಮ್ಮ ಸಂಗೀತವನ್ನು ‘ದೇವರ ನಾಮಗಳ ಸಂಗೀತ’ವೆಂದು ಉಪೇಕ್ಷೆ ಮಾಡಿದ ಕೆಲವು ಆಸ್ಥಾನಿಕರ ಸಣ್ಣ ಮಾತಿನಿಂದ ನೊಂದರಾಯರು ‘ಮತ್ತೆ ಪ್ರಭುಗಳೇ ಹೇಳಿ ಕರೆಸುವವರೆಗೆ ಇಲ್ಲಿ ಹಾಡಲಾರೆ’ಎಂದು ಮೈಸೂರಿನಿಂದ ಹೊರಟು ಹೋದರಂತೆ. [ವಿವರಣೆಗೆ ನೋಡಿ; ಚಿಂತಲಪಲ್ಲಿ ವೆಂಕಟರಾವ್, ರಾಷ್ಟ್ರೋತ್ಥಾನ ಸಾಹಿತ್ಯ ಪರಿಷತ್, ಭಾರತ-ಭಾರತಿ ಪುಸ್ತಿಕೆ] ಮುಂದೆ ಮೈಸೂರು ಅರಸರ ಮುಂದೆ ಅವರು ಹಾಡಿದಾಗ ರಾಯರಿಗೆ ಅರವತ್ತು ವರ್ಷ ವಯಸ್ಸು!

ಮಗನ ನಂತರ ತಂದೆ ಆಸ್ಥಾನಕ್ಕೆ: ವೆಂಕಟರಾಯರ ದ್ವಿತೀಯ ಪುತ್ರ ಚಿಂತಲಪಲ್ಲಿ ರಾಮಚಂದ್ರರಾಯರು ತಮ್ಮ ೧೫ನೇ ವಯಸ್ಸಿನಲ್ಲೇ ತಮಿಳುದೇಶದಲ್ಲಿ ಪ್ರಸಿದ್ಧಿಗೆ ಬಂದುದನ್ನು ಮನಗಂಡ ಮೈಸೂರಿನ ಅಂದಿನ ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ರಾಮಚಂದ್ರರಾಯರನ್ನು ಮೊದಲು ಆಸ್ಥಾನಕ್ಕೆ ಕರೆಸಿ ಹಾಡಿಸಿ ಆಸ್ಥಾನಕ್ಕೆ ತೆಗೆದುಕೊಂಡರು. ತದನಂತರ ರಾಮಚಂದ್ರರಾಯರ ಪೂರ್ವೋತ್ತರ ಗಳನ್ನು ವಿಚಾರಿಸಿ ವೆಂಕಟರಾಯರನ್ನೂ ತಾವೇ ಚಿಂತಲಪಲ್ಲಿಯಿಂದ ಕರೆಸಿದರು. ವೆಂಕಟರಾಯರು ಅಂದು ಕೃಷ್ಣರಾಜ ಒಡೆಯರ ಮುಂದೆ ನೀಡಿದ ಕಚೇರಿ ಸ್ಮರಣಾರ್ಹವಾದದ್ದು, ಅದನ್ನು ಬಿ.ವಿ.ಕೆ. ಶಾಸ್ತ್ರಿಯವರು ಹೀಗೆ ವರ್ಣಿಸುತ್ತಾರೆ. Venkata Rao’s concert that days was a revelation to many of the Rasikas and Vidwans Todi and the celebrated Kriti of Tyagaraja “Enduku daya Radura” perfectly set off the challenging mood of the composition. The exposition of the Raga was virile and full-blooded and had no subtle frills while improvising the passage of “Jagela” in the Kriti. Venkata Rao’s well modulated voice left a profound impact…. not content with the first recital the Maharaja had another schedule for the following evening, and enjoyed the music of Venkata Rao for an equal duration, conferring on him the title “Sangeetha Ratna”. Infact following these recitals, the Maharaja, it is said, sought to know where this “jewel” had been hiding all these years. His “officers and vidwans could provide no immediate answer” [B.V.K. Illustrated Weekly of India – 1966].

ಮುಂದೆ ದೇವರನಾಮಗಳನ್ನು ಹಾಡಿಯೇ ಪ್ರಭುಗಳ ಕಣ್ಣಲ್ಲಿ ನೀರು ತರಿಸಿದ ವೆಂಕಟರಾಯರ ಸಂಗೀತವನ್ನೇ ಕೇಳಿದ ಪ್ರಭುಗಳು “ನಮ್ಮ ಸಂಸ್ಥಾನದ ದೊಡ್ಡ ನಿಧಿ ನೀವು. ನಿಮ್ಮ ಸಂಗೀತ ಕೇಳಿ ನಾವಿಂದು ಕೃತಾರ್ಥರಾದೆವು” ಎಂದರಂತೆ. ಜೊತೆಗೆ ತಂದೆ ಮಕ್ಕಳಿಬ್ಬರ ಸಂಗೀತವನ್ನೂ ಒಟ್ಟಿಗೆ ಪ್ರಭುಗಳು ಏರ್ಪಡಿಸಿ ಆಗಾಗ್ಗೆ ಕೇಳುತ್ತಿದ್ದರಂತೆ. ಮುಂದೆ ಬಂದ ಜಯಚಾಮರಾಜ ಒಡೆಯರೂ ವೆಂಕಟರಾಯರ ಮೇಲೆ, ಭಕ್ತಿ ಗೌರವಗಳನ್ನಿರಿಸಿಕೊಂಡು ತಮ್ಮ ಆಸ್ಥಾನದ ರತ್ನರಲ್ಲೊಬ್ಬರನ್ನಾಗಿ ಸನ್ಮಾನಿಸಿ ವೃಷನಾಮ ಸಂವತ್ಸರ ಗೆಜೆಟ್‌ನಲ್ಲಿ ದಾಖಲಿಸಿರುವುದನ್ನೂ ನೋಡಬಹುದು.

ಅಪೂರ್ವ ಪ್ರಸಂಗಗಳು: ವೆಂಕಟರಾಯರ ಸಂಗೀತವನ್ನು ಕೇಳಿದ ಟೈಗರ್ ವರದಾಚಾರ್ಯರು ವೆಂಕಟರಾಯರ ಮುಂದೆ, ನಾವು ಹಾಡಲು ಕಳೆಕಟ್ಟಿಸಲು ಸಮರ್ಥರಲ್ಲವೆಂದದ್ದು, ಒಮ್ಮೆ, ಸರ್ಪವೊಮದು ವೆಂಕಟರಾಯರ ಸಂಗೀತವನ್ನು ಕೇಳುತ್ತಾ ತಲೆದೂಗಿದ್ದು, ರೈತನೊಬ್ಬನು ಅವರ ಸಂಗೀತಕ್ಕೆ ಮನಸೋತು ತನ್ನ ಜೀವನಾಧಾರವಾದ ಎತ್ತು-ಬಂಡಿಗಳನ್ನೇ ಕೊಡುಗೆ ನೀಡಲು ಬಂದದ್ದು, ಮಹಾರಾಜರೇ ಸ್ವತಃ ವೆಂಕಟರಾಯರಿಗೆ ‘ಏನುಬೇಕೋ ಕೇಳಿಕೊಳ್ಳಿ ಕೊಡುತ್ತೇವೆ’ ಎಂದಾಗಲೂ ಭಗವತ್ ಕೃಪೆಯೊಂದೇ ಸಾಕು ಎಂದು ವೆಂಕಟರಾಯರು ಹೇಳಿದ್ದು ಮುಂತಾದ ಹತ್ತು ಹಲವು ಪ್ರಸಂಗಗಳು “ಚಿಂತಲಪಲ್ಲಿ ವೆಂಕಟರಾವ್” ಭಾರತ-ಭಾರತಿ ಪುಸ್ತಿಕೆಯಲ್ಲಿ ದಾಖಲಾಗಿದೆ, ಸಹೃದಯಿಗಳು ಪರಾಂಬರಿಸಬಹುದು.

 

ಸಾಹಿತಿಗಳು ಕಂಡಂತೆ ರಾಯರು: ಖ್ಯಾತ ಸಾಹಿತಿ ಡಿ.ವಿ.ಜಿ. ತಮ್ಮ ‘ಕಲೋಪಾಸಕರು’ ಗ್ರಂಥದಲ್ಲಿ ವೆಂಕಟರಾಯರನ್ನು ಹಳೆಯ ಹುಲಿಯೆಂದೂ, ಕೆಚ್ಚಿನಲ್ಲಿ ಆತ ಸಿಂಹ ಎಂದೂ ಕರೆದಿದ್ದಾರೆ. ೧೯೩೨ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಗ ರಾಂಚಂದ್ರರಾಯರಿಗೆ ಜ್ವರ ಬಂದದ್ದರಿಂದ ಅವರ ಬದಲಾಗಿ ರಾಯರು ಹಾಡಿದ್ದನ್ನು ಮತ್ತು ವೆಂಕಟರಾವ್ ಹಾಗೂ ಅವರ ತಮ್ಮ, ವೆಂಕಟಾಚಲಯ್ಯನವರಿಬ್ಬರೂ ಸೇರಿ ನೀಲಾಂಬರಿಯ ‘ಎನ್ನಗಾ ಮನಸುಕುರಾನಿ’ ಕೃತಿಯನ್ನು ಹಾಡಿದ್ದನ್ನೂ ಡಿ.ವಿ.ಜಿ. ಸ್ಮರಿಸುತ್ತಾರೆ. ಎ.ಎನ್. ಮೂರ್ತಿರಾಯರಂತೂ ತಮ್ಮ ‘ಗಾನವಿಹಾರ’ ಪುಸ್ತಕದಲ್ಲಿ ತ್ಯಾಗರಾಜರ ಹಾಗೂ ಕನಕದಾಸರ ಕೃತಿಗಳ ಅರ್ಥ ಕಣ್ಣಿಗೆ ಕಟ್ಟುವಂತೆ ವೆಂಕಟರಾಯರು ಹಾಡಿದ್ದನ್ನು ವಿವರಿಸಿದ್ದಾರೆ.

 

ಪ್ರಶಸ್ತಿಸನ್ಮಾನ: ಗದ್ವಾಲ್, ಸಂಡೂರು, ಪೆನುಗೊಂಡ, ಬರೋಡ ರಾಜರುಗಳಿಂದ ಖಿಲ್ಲತ್ತನ್ನೂ ಮುಂದೆ ಮೈಸೂರು ಮಹಾರಾಜರಿಂದ ಆಸ್ಥಾನ ವಿದ್ವಾನ್ ಪದವಿ, ಸಂಗೀತ ರತ್ನ ಬಿರುದನ್ನೂ ಗಳಿಸಿದ ವೆಂಕಟರಾಯರಿಗೆ ಕನ್ನಡ ಸಾಹಿತ್ಯ ಪರಿಷತ್ತು ‘ಸಂಗೀತ ವಿದ್ಯಾನಿಧಿ’ ಬಿರುದನ್ನು ನೀಡಿ ಗೌರವಿಸಿತು. ೧೯೫೮ರ ಮೈಸೂರಿನ ಪ್ರಥಮ ಸಂಗೀತ ಸಮ್ಮೇಳನದ ಅಧ್ಯಕ್ಷರಾಗಿ ‘ಗಾನಕಲಾಸಿಂಧು’, ೧೯೬೦ರಲ್ಲಿ ಆಂದ್ರಪ್ರದೇಶ ಸಂಗೀತನಾಟಕ ಅಕಾಡೆಮಿಯ ಫೆಲೋಷಿಪ್, ೧೯೬೫ರಲ್ಲಿ ಕರ್ನಾಟಕ ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳೇ ಅಲ್ಲದೆ ೧೯೬೭ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಶ್ರೀಮತಿ ಇಂದಿರಾಗಾಂಧಿಯವರ ಅಧ್ಯಕ್ಷತೆಯಲ್ಲಿ ಪ್ರಶಸ್ತಿಯನ್ನು ಪ್ರಕಟಿಸಿತು. ‘ಉತ್ಸಾಹ ಹುಮ್ಮಸ್ಸು, ಆರೋಗ್ಯ ಇರುವಾಗಲೇ ಕಲಾವಿದರನ್ನು ಪುರಸ್ಕರಿಸಿ ಬೆನ್ನು ತಟ್ಟಿದರೆ ಒಳಿತು’ ಎಂಬ ಭಾವದಿಂದ ಅವರು ದೆಹಲಿಗೆ ಹೋಗಲೇ ಇಲ್ಲ. ಕೇಂದ್ರ ಅಕಾಡೆಮಿಯೆ ಬೆಂಗಳೂರಿನಲ್ಲಿ ಒಂದು ವಿಶೇಷ ಸಮಾರಂಭ ಏರ್ಪಡಿಸಿ ಪ್ರಶಸ್ತಿಯನ್ನು ಇಲ್ಲಿಗೇ ತಂದು ಕೊಟ್ಟಿತು. ತಮ್ಮ ೯೬ನೇ ವಯಸ್ಸಿನಲ್ಲಿ ತಮ್ಮ ಸ್ವಂತ ಊರಾದ ಚಿಂತಲಪಲ್ಲಿಯ ಸ್ವಗೃಹದಲ್ಲೇ ವೆಂಕಟರಾಯರು ೧೯೬೯ರ ಜೂನ್ ೬ರಂದು ಇಹಲೋಕ ಯಾತ್ರೆಯನ್ನು ಮುಗಿಸಿದರು. ಅಂದು ಡಿ.ವಿ.ಜಿ. “ಸಂಗೀತದಲ್ಲಿ ತಮಗೆ ಸಿಕ್ಕಿದ ಸೌಂದರ್ಯ, ಆನಂದಾನುಭವಗಳನ್ನು ಲಕ್ಷಾಂತರ ಮಂದಿಗೆ ಹಂಚಿ ಸಂತೋಷ ಪಡಿಸಿದ ಉದಾರ ಅನುಭಾವಿ, ಸಾರ್ಥಕ ಜೀವಿ” ಎಂದು ನೆನೆದರು.

 

ಪರಂಪರೆಯ ಮುಂದುವರಿಕೆಶಿಷ್ಯ ಸಂಪತ್ತು: ವೆಂಕಟರಾಯರ ಈ ಪರಂಪರೆಯನ್ನು ಅತ್ಯಂತ ಯಶಸ್ವಿಯಾಗಿ ಮುಂದುವರೆಸಿದ ಅವರ ಸಾರ್ಥಕ ಪುತ್ರ, ಚಿಂತಲಪಲ್ಲಿರಾಮಚಂದ್ರರಾಯರು, ಮೊಮ್ಮಗ ಚಿಂತಲಪಲ್ಲಿ ಕೃಷ್ಣಮೂರ್ತಿಗಳೇ ಅಲ್ಲದೆ ಚಿಂತಲಪಲ್ಲಿಯ ಮನೆತನದಲ್ಲಿ ನೂರಾರು ಕಲಾಕುಸುಮಗಳೂ ಸೇರಿದಂತೆ ಕುರುಡಿ ವೆಂಕಣ್ಣಾಚಾರ್ಯ, ಮುನಿರಾಮಯ್ಯ ಮುಂತಾದ ಹಲವು ವಿದ್ವಾಂಸರುಗಳೂ ವೆಂಕಟರಾಯರ ಪಥಾನುಗಾಮಿಗಳಾಗಿದ್ದಾರೆ. ಒಟ್ಟಿನಲ್ಲಿ ರಾಯರು ಪೂರ್ವದಿಂದ ಬಂದ ತಮ್ಮ ಸಂಪತ್ತನ್ನೂ ಪರಂಪರೆಯನ್ನೂ ಸಾರ್ಥಕವಾಗಿ ಮುಂದಿನ ಪೀಳಿಗೆಗೆ ತಲುಪಿಸಿದ ಸುವರ್ಣ ಸೇತು.

 

ಚಿಂತಲಪಲ್ಲಿ ಸಂಗೀತ ವೃಕ್ಷ

ಚಿಂತಲಪಲ್ಲಿ ವೆಂಕಟರಾವ್ ಚಿಂತಲಪಲ್ಲಿ ವೆಂಕಟಾಚಲಯ್ಯ

(ಎರಡು ಗಂಡು ಹಾಗೂ ಮೂವರು ಹೆಣ್ಣುಮಕ್ಕಳು)                               ಚಿಂತಲಪಲ್ಲಿ ವೆಂಕಟರಾಮಯ್ಯ

ಗಂಡು ಮಕ್ಕಳ ಪರಂಪರೆ ಹೆಣ್ಣುಮಕ್ಕಳ ಪರಂಪರೆ ವೆಂಕಟಾಚಲಪತಿ      ಶ್ರೀನಿವಾಸ್

ಚಿಂತಲಪಲ್ಲಿ ರಾಮಚಂದ್ರರಾವ್              ವೆಂಕಟಲಕ್ಷ್ಮಮ್ಮ (ಮಗಳು)

(೬ ಮಂದಿ ಪುತ್ರರು, ೫ ಮಂದಿ ಹೆಣ್ಣು ಮಕ್ಕಳು)

 

ದಿ. ಸೂರ್ಯನಾರಾಯಣರಾವ್                               ಚಿಂತಲಪಲ್ಲಿ ಕೃಷ್ಣಮೂರ್ತಿ

ಅಶ್ವತ್ಥ ನಾರಾಯಣ                                              ರಮೇಶ್             ಸುಬ್ಬಗಂಗ

ಚಂದ್ರಶೇಖರ್

ಸುಶೀಲಾ.[ಶ್ರೀಕಾಂತಂ ನಾಗೇಂದ್ರಶಾಸ್ತ್ರಿ]                 ಎ. ಸುಬ್ಬರಾಮಯ್ಯ

[ಮಗಳು] [ದೌಹಿತ್ರ]                                              ಗುಡಿಬಂಡೆ ಸಹೋದರರು

ಶ್ರೀನಿವಾಸ್                                                        (ಹನುಮಂತ ಭಟ್ಟ ಹಾಗೂ ಕುಮಾರಸ್ವಾಮಿ)

 

(ಈ ಮನೆತನದಲ್ಲಿ ಕಚೇರಿ ಇಲ್ಲವೆ ಕಲಾಸೇವೆ ಮಾಡಿಖ್ಯಾತರಾಗಿರುವವರನ್ನು ಮಾತ್ರ ಈ ವೃಕ್ಷದಲ್ಲಿ ಸೇರಿಸಲಾಗಿದೆ.)