ತಾಲ್ಲೂಕು ಕೇಂದ್ರದಿಂದ : ೨೮ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೭೦ ಕಿ.ಮೀ

ಜವಹಾರ್ ನವೋದಯ ಶಾಲೆ

ಜವಹಾರ್ ನವೋದಯ ಶಾಲೆ

ಚಿಂತಾಮಣಿಯಿಂದ ೨೮ ಕಿ.ಮೀ. ದೂರದಲ್ಲಿ ಚೇಳೂರು ರಸ್ತೆಯ ಏನಿಗದಲೆ ಗ್ರಾಮದ ಬಳಿ ಜವಹಾರ್ ನವೋದಯ ವಸತಿ ಶಾಲೆಯನ್ನು ೧೯೮೬ರಲ್ಲಿ ಸ್ಥಾಪಿಸಲ್ಪಟ್ಟಿದೆ. ೬ ರಿಂದ ೧೨ನೇ ತರಗತಿಯವರೆಗೆ ಸಹ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳ ಪ್ರತಿಭಾವಂತ ಮಕ್ಕಳನ್ನು ಆಯ್ಕೆ ಪರೀಕ್ಷೆಯ ಮೂಲಕ ದಾಖಲಾತಿ  ಮಾಡಿಕೊಳ್ಳಲಾಗುತ್ತದೆ. ೩೦ ಎಕರೆ ಜಮೀನಿನಲ್ಲಿರುವ ಈ ಶಾಲೆಯು ಅತ್ಯಂತ ಉತ್ತಮವಾದ ಶೈಕ್ಷಣಿಕ ಸೌಲಭ್ಯಗಳನ್ನು ಒಳಗೊಂಡಿದ್ದು ಪ್ರವಾಸ ದರ್ಶನಕ್ಕೆ ಯೋಗ್ಯ ಸ್ಥಳವಾಗಿದೆ. ಈ ಶಾಲೆಯು ಪೂರ್ಣವಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

 

ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ

ತಾಲ್ಲೂಕು ಕೇಂದ್ರದಿಂದ : ೩೫ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೭೭ ಕಿ.ಮೀ

ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ

ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ

ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯು ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ೧೯೯೭-೯೮ನೇ ಸಾಲಿನಲ್ಲಿ ಸ್ಥಾಪನೆಯಾಗಿದೆ. ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಒಡೆತನದಲ್ಲಿ ನಡೆಯುತ್ತಿರುವ ಈ ಶಾಲೆಯು ಸುಂದರವಾದ ಪ್ರಕೃತಿ ಮಡಿಲಲ್ಲಿ ಸ್ವತಂತ್ರ ಕ್ಯಾಂಪಾಸ್ ಹೊಂದಿದ್ದು, ಸಂದರ್ಶನಕ್ಕೆ ಯೋಗ್ಯ ಸ್ಥಳವಾಗಿದೆ. ೬ ರಿಂದ ೧೦ನೇ ತರಗತಿಯವರೆಗೆ ವಸತಿ ಶಾಲೆಯಾಗಿ ಸಹ ಶಿಕ್ಷಣ ಹೊಂದಿರುವ ಈ ಶಾಲೆಯಲ್ಲಿ ಆಧುನಿಕ ಶೈಕ್ಷಣಿಕ ಚಟುವಟಿಕೆಗಳನ್ನು ವ್ಯವಸ್ಥೆಗೊಳಿಸಿದೆ. ಏನಿಗದಲೆಯ ನವೋದಯ ಶಾಲೆಯಿಂದ ೬ ಕಿ.ಮೀ. ದೂರದಲ್ಲಿದ್ದು ವಾಹನ ಸಂಚಾರಕ್ಕೆ ಉತ್ತಮ ರಸ್ತೆ ಇದೆ. ಈ ಶಾಲೆಗೆ ಹೊಂದಿಕೊಂಡಂತೆ ಬೆಟ್ಟದ ಮೇಲೆ ಶ್ರೀ ನರಸಿಂಹಸ್ವಾಮಿ ದೇವಾಲಯ ಹಾಗೂ ಅರಣ್ಯ ಇಲಾಖೆಯ ವಸತಿ ಗೃಹವಿದೆ.

 

ಮುರುಗಮಲ್ಲ

ತಾಲ್ಲೂಕು ಕೇಂದ್ರದಿಂದ : ೧೧ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೫೩ ಕಿ.ಮೀ

ಮುರುಗಮಲ್ಲ

ಮುರುಗಮಲ್ಲ

ಮುರುಗಮಲ್ಲ ಅಥವಾ ಪ್ರಾಚೀನ ಮುರಗಮಲೆ ಸುಮಾರು ೬೦೦ ಅಡಿ ಎತ್ತರವಿರುವ ಬೆಟ್ಟದ ಮೇಲಿರುವ ಕೋಟೆಯಾಗಿದೆ. ಕ್ರಿ.ಶ. ೧೮ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇಲ್ಲಿರುವ ಪೀರ್ ಫಕೀರ್ ಷಾವಲ್ಲಿ ದರ್ಗಾ ಟಿಪ್ಪುಸುಲ್ತಾನನ ಸಮಕಾಲೀನದಾಗಿದೆ. ಇಲ್ಲಿ ನಡೆಯುವ ವಾರ್ಷಿಕ ಉರುಸ್ಗೆ ಕರ್ನಾಟಕ ಮಾತ್ರವಲ್ಲದೇ ನೆರೆರಾಜ್ಯಗಳಿಂದಲೂ ಭಾಗವಹಿಸುತ್ತಾರೆ.ಇದು ಹಿಂದು ಮುಸಲ್ಮಾನರ ಭಾವೈಕ್ಯದ ಸಂಕೇತವಾಗಿದೆ.

 

ಅಂಬಾಜಿದುರ್ಗ/ ಕೈಲಾಸ ಗಿರಿ :

ತಾಲ್ಲೂಕು ಕೇಂದ್ರದಿಂದ : ೭ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೪೯ ಕಿ.ಮೀ

29_Kolar

ಅಂಬಾಜಿದುರ್ಗವು ಸಮುದ್ರ ಮಟ್ಟಕ್ಕಿಂತ ಸುಮಾರು ೪೩೭೯ ಅಡಿ ಎತ್ತರದಲ್ಲಿದ್ದು ಪ್ರಶಾಂತ ತಾಣವಾಗಿದೆ. ೧೭೯೦ರಲ್ಲಿ ಟಿಪ್ಪು ಸುಲ್ತಾನ್ ತನ್ನ ವಶಕ್ಕೆ ತೆಗೆದುಕೊಂಡು ಕೋಟೆಯನ್ನು ನಿರ್ಮಿಸುವುದರ ಮೂಲಕ ಭದ್ರಪಡಿಸಿದನು. ೧೭೯೧ರಲ್ಲಿ ಕಾರ್ನವಾಲಿಸನು ವಶಕ್ಕೆ ತೆಗೆದುಕೊಂಡು ಕೋಟೆ ಹಾಗೂ ಕಟ್ಟಡಗಳನ್ನು ನಾಶಪಡಿಸಿದನು. ಬೆಟ್ಟದಲ್ಲಿ ಮೂರು ಸುತ್ತಿನ ಕೋಟೆಯನ್ನು ಅತ್ಯಂತ ಯೋಜಿತ ಸ್ಥಳಗಳಲ್ಲಿ ನಿರ್ಮಿಸಲಾಗಿದೆ.

ಸಮತಟ್ಟಾದ ಬೆಟ್ಟದ ವಿಶಾಲವಾದ ನಿವೇಶನದಲ್ಲಿ ಒಳಕೋಟೆಯ ಆವರಣದೊಳಗೆ   ಒಂದು ಚಿಕ್ಕ ಶಿವಾಲಯವಿದೆ ಹಾಗೂ ವಿಶಾಲವಾದ ಕೊಳವಿದೆ. ಎತ್ತರವಾದ ಬೆಟ್ಟದ ಮೇಲ್ಭಾಗದಲ್ಲಿ ನಿಂತು ಪ್ರಕೃತಿ ಸೌಂದರ್ಯ ವೀಕ್ಷಿಸಿದರೆ ಮನೋಲ್ಲಾಸವುಂಟು ಮಾಡುವ ಪ್ರಕೃತಿ ಸೌಂದರ್ಯ ದರ್ಶನವಾಗುತ್ತದೆ. ಬೆಟ್ಟಕ್ಕೆ ಹತ್ತಿ ಹೋಗಲು ಸುಲಭ ಮಾರ್ಗವನ್ನು ರೂಪಿಸಿದರೆ ಇದೊಂದು ನಿಸರ್ಗ ಯಾತ್ರಿಕರ ತಾಣವಾಗುವುದರಲ್ಲಿ ಸಂಶಯವಿಲ್ಲ. ಮಹಾಕೈಲಾಸಗಿರಿ ಚಿಂತಾಮಣಿಯಿಂದ ೭ ಕಿ.ಮೀ ದೂರದಲ್ಲಿರುವ ಅಂಬಾಜಿದುರ್ಗದ ಮಹಾ ಕೈಲಾಸಗಿರಿಯು ಆಧುನಿಕ ತಂತ್ರಜ್ಞಾನವನ್ನು ಬಳಸಿ ಇತ್ತೀಚೆಗೆ ಕೊರೆಯಲಾಗಿರುವ ಪ್ರಸಿದ್ಧ ಗುಹಾಂತರ ದೇವಾಲಯ. ಗರ್ಭ ಗೃಹದಲ್ಲಿ ವಲ್ಲಭ ಗಣಪತಿಯ ಆಸೀನ ವಿಗ್ರಹ ಚೌರಸ ಪಾಣಿ ಪೀಠದ ಮೇಲೆ ಚತುರ್ಮುಖ ಶಿವಲಿಂಗ ಎದುರಿಗೆ ಆಸೀನ ನಂದಿಯ ಶಿಲ್ಪವಿದೆ. ಅನ್ನಪೂರ್ಣೇಶ್ವರಿ ನಿಲಯವಿದೆ. ೨೭೯ ಅಡಿ ಎತ್ತರ ಗಂಗಾಧರೇಶ್ವರ ಶಿಲಮೂರ್ತಿ ಬೆಟ್ಟಗುಡ್ಡಗಳ ಮಧ್ಯೆ ಆಕರ್ಷಣೀಯ ನಿಸರ್ಗ ಸೌಂದರ್ಯದೊಂದಿಗೆ ವಿಶ್ರಮಿಸುವ ಭಕ್ತರಿಗೆ ಆಹ್ಲಾದಕಾರವೂ ಹಾಗೂ ಮನಮೋಹಕವೂ ಆದ ರೀತಿಯಲ್ಲಿದೆ.

 

ಕೈವಾರ ಕ್ಷೇತ್ರ :

ತಾಲ್ಲೂಕು ಕೇಂದ್ರದಿಂದ : ೧೩ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೫೨ ಕಿ.ಮೀ

ಅಮರನಾರಾಯಣ ಸ್ವಾಮಿ ದೇವಾಲಯ

ಅಮರನಾರಾಯಣ ಸ್ವಾಮಿ ದೇವಾಲಯ

ಚಿಂತಾಮಣಿಯಿಂದ ಬೆಂಗಳೂರಿಗೆ ಹೋಗುವ ಮಾರ್ಗದಲ್ಲಿ ತಾಲ್ಲೂಕು ಕೇಂದ್ರದಿಂದ ೧೩ ಕಿ.ಮೀ ದೂರದಲ್ಲಿದೆ. ನೊಳಂಬರ, ಗಂಗರ, ಚೋಳರ, ಬಾಣರ ಕಾಲಕ್ಕೆ ವೈಭವ ಇತಿಹಾಸವನ್ನು ಪಡೆದು “ಕೈವಾರನಾಡು” ಎಂದು ಶಾಸನಗಳಲ್ಲಿ ಹೆಸರಿಸಲ್ಪಟ್ಟಿದೆ. ಚೋಳಮಂಡಳದಲ್ಲಿ ಕೈವಾರವು ಶ್ರೀಮಂತ ರಾಜ್ಯವಾಗಿದ್ದು, ಸುಗಟೂರು ತಿಮ್ಮೇಗೌಡ ಕೈವಾರವನ್ನು ಆಳಿದನೆಂದು ಶಾಸನಗಳಿಂದ ತಿಳಿದುಬರುತ್ತೆ. ಪಾಂಡವರು ಕೆಲಕಾಲ ಇಲ್ಲಿದ್ದರೆಂದು ಚಿದಂಬರ ಬೆಟ್ಟದಲ್ಲಿದ್ದ ಬಕಾಸುರನನ್ನು ಭೀಮನು ಕೊಂದನೆಂದು ಕೈವಾರವನ್ನು ಏಕಚಕ್ರಪುರವೆಂದು ಸ್ಥಳಪುರಾಣದಿಂದ ತಿಳಿದು ಬರುತ್ತದೆ. ಶಾಸನ ಮತ್ತು ಸಾಹಿತ್ಯ ಕೃತಿಗಳಲ್ಲಿ  ಕೈವಾರ ಹೆಸರನ್ನು ಕಯ್ವರ, ಕಯಾವರ, ಕೈವರ, ಕಯವಾರ, ಕೈವಲ್ಯಪುರಿ ಎಂದು ಗುರ್ತಿಸಿರುವುದು ಕಂಡು ಬರುತ್ತದೆ. ಕೈವಾರ ನಾರಾಣಪ್ಪ ಎಂಬ ಪ್ರಸಿದ್ದ ಸಂತರು ಈ ಗ್ರಾಮದಲ್ಲಿ ಜನಿಸಿ ಯೋಗಿನಾರಾಯಣರೆಂದು ಖ್ಯಾತಿ ಪಡೆದು ಕೈವಾರದ ತಾತಯ್ಯ ಎಂದು ಪ್ರಸಿದ್ದ ಪಡೆದು ಕಾಲಜ್ಞಾನವೂ ಸೇರಿದಂತೆ ಹತ್ತಾರು ಕೃತಿಗಳನ್ನು ರಚಿಸಿದ್ದಾರೆ. ಈ ರೀತಿ ಕೈವಾರ ಕ್ಷೇತ್ರವು ಪ್ರಸಿದ್ದ ಯಾತ್ರಾ ಸ್ಥಳವೆನಿಸಿದ್ದು, ರಾಜ್ಯದ ನಾನಾಕಡೆಗಳಿಂದ ಭಕ್ತರು ಆಗಮಿಸುತ್ತಾರೆ. ಚಿಂತಾಮಣಿ ತಾಲ್ಲೂಕಿನ ಪ್ರವಾಸ ಪ್ರಸಿದ್ದ ಕೇಂದ್ರವೂ ಆಗಿದೆ.