ಬೆಂಗಳೂರು ನಗರ ಎಂದು ಕರ್ನಾಟಕದ ರಾಜಧಾನಿ ಅಷ್ಟೇ ಅಲ್ಲ. ಭಾರತದ ಪ್ರಸಿದ್ಧ ನಗರವೂ ಹೌದು; ದಕ್ಷಿಣ ಭಾರತದ ಕೈಗಾರಿಕೆಗಳ ಕೇಂದ್ರ. ಲಕ್ಷಾಂತರ ಜನರಿಗೆ ಜೀವನೋಪಾಯ ದೊರಕಿಸುವ ವಿಶಾಲ ನಗರ. ದಕ್ಷಿಣ ಭಾರತದ ಕಣ್ಮಣಿಯಂತಿರುವ ಈ ನಗರ ಕನ್ನಡಿಗರಿಗೆ ಉಳಿದಿದ್ದು ಒಂದು ವಿಶೇಷವೇ ಹೌದು. ಈ ನಗರವನ್ನು ಸ್ಥಾಪಿಸಿದ ಕೆಂಪೇಗೌಡ ಕನ್ನಡಿಗನಾದರೂ ಕಾಲಕ್ರಮದಲ್ಲಿ ಇದು ಮರಾಠರ ಪಾಲಾಗಿಬಿಟ್ಟಿತ್ತು. ಮೈಸೂರು ಒಡೆಯರಲ್ಲಿ ಪ್ರಸಿದ್ಧರಾದ ಚಿಕ್ಕದೇವರಾಜ ಒಡೆಯರು ಈ ಊರನ್ನು ಕೊಂಡುಕೊಂಡು ತಮ್ಮ ರಾಜ್ಯಕ್ಕೆ ಸೇರಿಸಿಕೊಳ್ಳದೆ ಹೋಗಿದ್ದರೆ ಇದು ತಮಿಳುನಾಡಿನಲ್ಲೋ ಮಹಾರಾಷ್ಟ್ರದಲ್ಲೋ ಕರಗಿ ಹೋಗಿರುತ್ತಿತ್ತು. ಎಂದೇ ಕನ್ನಡಿಗರು ಬೆಂಗಳೂರಿನ ಮಟ್ಟಿಗೆ ಕೆಂಪೇಗೌಡನಿಗೆ ಹೇಗೋ ಚಿಕ್ಕದೇವರಾಜ ಒಡೆಯರಿಗೂ ಹಾಗೇ ಋಣಿಗಳಾಗಿದ್ದಾರೆ.

ಮೈಸೂರು ಅರಸರಾಗಿದ್ದ ಒಡೆಯರ ಇತಿಹಾಸ ಸುಮಾರು ಆರುನೂರು ವರ್ಷಗಳಷ್ಟು ಹಳೆಯದು. ಆಗ ಉತ್ತರದ ದ್ವಾರಕಾ ನಗರದಿಂದ ಯದುವಂಶೀಯರಾದ ಇಬ್ಬರು ತರುಣರು ಮೇಲುಕೋಟೆಯ ಶ್ರೀಮನ್ನಾರಾಯಣನ ದರ್ಶನಾರ್ಥಿಗಳಾಗಿ ಬಂದಿದ್ದರು. ಆಗ ಇಂದಿನ ಮೈಸೂರು ನಗರ ಮತ್ತು ಅದರ ಸುತ್ತ ಮುತ್ತಲ ಹಳ್ಳಿಗಳು ಹದಿನಾಡು ಎಂಬ ಒಂದು ಸೀಮೆ ಆಗಿತ್ತು. ಈ ಸೀಮೆಯ ನಾಯಕನಿಗೆ ಹುಚ್ಚು ಹಿಡಿದಿತ್ತು. ನೆರೆಯ ಕಾರುಗಹಳ್ಳಿ ನಾಯಕ ಅಸಹಾಯಕರಾಗಿದ್ದ ಹದಿನಾಡು ನಾಯಕನ ಪತ್ನಿಯ ಬಳಿ ಹೋಗಿ ಅವರ ಮಗಳನ್ನು ತನಗೆ ಮದುವೆ ಮಾಡಿಕೊಡಬೇಕೆಂದು ಪೀಡಿಸುತ್ತಿದ್ದ. ಆ ಸಮಯದಲ್ಲಿ ಹದಿನಾಡು ಸೀಮೆಗೆ ಬಂದಿದ್ದ ಯದುವಂಶದ ಈ ಯುವಕರು ಕಾರುಗಹಳ್ಳಿ ನಾಯಕರನ್ನು ಕೊಂದರು. ಹದಿನಾಡು ನಾಯಕನ ಮಗಳನ್ನು ಹಿರಿಯಣ್ಣನು ಮದುವೆಯಾದನು. ಈ ಸಂಬಂಧ ದಿಂದ ಹದಿನಾಡು ಮತ್ತು ಕಾರುಗಹಳ್ಳಿಯ ನಾಯಕಪಟ್ಟವು ಇವರಿಗೇ ದೊರೆಯಿತು. ಇವರೇ ‘ಒಡೆಯರು’ ಎಂಬ ಬಿರುದನ್ನು ಸ್ವೀಕರಿಸಿದ ಮೈಸೂರರಸರ ಮೂಲ ಪುರುಷರು.

ಕನ್ನಡ ರಾಜ್ಯ ಉಳಿಯಿತು

ಈ ಒಡೆಯರ ಮನೆತನದಲ್ಲಿ ಒಂಬತ್ತನೆಯವರಾದ ರಾಜ ಒಡೆಯರು ಎಂಬುವರು ಶ್ರೀರಂಗಪಟ್ಟಣವನ್ನು ರಾಜಧಾನಿಯಾಗಿ ಮಾಡಿಕೊಂಡು ಅಲ್ಲಿ ವಿಜಯನಗರದ ರಾಜ ಪ್ರತಿನಿಧಿಯ ಸಿಂಹಾಸನವನ್ನು ಏರಿದರು. ಕ್ರಮೇಣ ವಿಜಯ ನಗರದ ಅವನತಿಯ ನೆರಳಿನಲ್ಲಿ ಸ್ವತಂತ್ರ ರಾಜ್ಯವನ್ನು ಕಟ್ಟಿ ಬೆಳೆಸಿದರು. ಇದೇ ಮೈಸೂರು ರಾಜ್ಯವೆಂದು ಮೊನ್ನೆ ಮೊನ್ನೆಯವರೆಗೆ ಉಳಿದು ಬಂದಿದ್ದ ಸಂಸ್ಥಾನ. ಯದುವಂಶದ ಈ ವೀರರು ಸಕಾಲದಲ್ಲಿ ತಮ್ಮ ಅಸ್ತಿತ್ವವನ್ನು ಭದ್ರಪಡಿಸಿ ಕೊಳ್ಳದಿದ್ದಲ್ಲಿ ‘ಕನ್ನಡ ರಾಜ್ಯ’ ಎಂಬುದು ಇಂದು ಕನಸಿನ ಮಾತಾಗುತ್ತಿತ್ತು. ಉತ್ತರದಲ್ಲಿ ಮರಾಠರು, ದಕ್ಷಿಣದಲ್ಲಿ ಪಾಂಡ್ಯ, ಚೋಳ, ಕೇರಳ ರಾಜ್ಯಗಳ ನಾಯಕರೂ ಕನ್ನಡ ರಾಜ್ಯವನ್ನು ಮುಕ್ಕಿ ಹರಿದು ಹಂಚಿಕೊಂಡು ಬಿಡುತ್ತಿದ್ದರು. ಇವರ ಜೊತೆಗೆ ದಕ್ಷಿಣದಲ್ಲಿ ತಮ್ಮ ಅಧಿಕಾರವನ್ನು ನೆಲೆಗೊಳಿಸಲು ಮೊಗಲರು ಕಾತರರಾಗಿದ್ದರು. ಈ ಹಿನ್ನೆಲೆಯಲ್ಲಿ ಒಡೆಯರ ಮನೆತನದ ಇತಿಹಾಸ ಕನ್ನಡನಾಡಿನ ಚರಿತ್ರೆಯಲ್ಲಿ ಒಂದು ಮೈಲಿಗಲ್ಲು. ಒಡೆಯರ ಮನೆತನದ ಅರಸರಲ್ಲಿ ಹಲವರು ಶೂರರು, ದೂರದೃಷ್ಟಿಯುಳ್ಳ ಮುತ್ಸದ್ಧಿಗಳು, ಮಹತ್ವಾಕಾಂಕ್ಷೆಯ ವೀರ ಯೋಧರು, ಪ್ರಜಾವತ್ಸಲರು, ಕನ್ನಡ ಸಂಸ್ಕೃತಿ-ಸಾಹಿತ್ಯಗಳ  ಆಧಾರ ಸ್ವರೂಪರು ಆಗಿದ್ದರೆಂದೇ ಮೈಸೂರು ವಿಶಾಲ ಕರ್ನಾಟಕದ ಬೀಜವಾಗಿ ಉಳಿಯಲು ಸಾಧ್ಯವಾಯಿತು.

ರಾಜ ಒಡೆಯರು ಸ್ವತಂತ್ರ ಮೈಸೂರು ರಾಜ್ಯಕ್ಕೆ ಭದ್ರವಾದ ತಳಹದಿ ಹಾಕಿದರು. ವಿಜಯನಗರದ ಅರಸರು ನಡೆಸುತ್ತಿದ್ದಂತೆಯೇ ವಿಜೃಂಭಣೆಯಿಂದ ನವರಾತ್ರಿ ಉತ್ಸವವನ್ನು ಪ್ರಾರಂಭಿಸಿದರು. ರಾಜ ಒಡೆಯರ ನಂತರ ಐದನೆಯವರೇ ಚಿಕ್ಕದೇವರಾಜ ಒಡೆಯರ್. ಇವರು ಮೈಸೂರು ರಾಜ್ಯದ ಇತಿಹಾಸದಲ್ಲಿ ತುಂಬಾ ಪ್ರಸಿದ್ಧರಾದ ದೊರೆ. ಇವರ ಕಾಲದಲ್ಲಿ ರಾಜ್ಯ ನಾನಾ ವಿಧವಾಗಿ ಅಭಿವೃದ್ಧಿಯಾಯಿತು. ಆಡಳಿತಕ್ಕೆ ಇವರೊಂದು ಖಚಿತ ರೂಪ ನೀಡಿದರು. ರಾಜ್ಯದ ಆದಾಯವನ್ನು ಬಹುಮುಖವಾಗಿ ಹೆಚ್ಚಿಸಿ ‘ನವಕೋಟಿ ನಾರಾಯಣ’ನೆಂಬ ಬಿರುದು ಧರಿಸಿದರು. ಉತ್ತಮ ಸಾಹಿತಿಗಳು, ಸಂಗೀತಗಾರರು ಆಗಿದ್ದರು. ಪಂಡಿತರಿಗೂ ವಿದ್ವಾಂಸರಿಗೂ ಕಲಾವಿದರಿಗೂ ಆಶ್ರಯದಾತರಾಗಿದ್ದರು. ಬೆಂಗಳೂರನ್ನು ಕನ್ನಡ ನಾಡಿಗೆ ಉಳಿಸಿದರು. ಮೊಗಲ್ ಬಾದಷಹ ಔರಂಗಜೇಬನ ಸ್ನೇಹ ಬೆಳೆಸಿ ಅವನಿಂದ ನಗಾರಿ, ನೌಪತ್ತು ಮೊದಲಾದ ಬಹುಮಾನಗಳನ್ನು ಪಡೆದು ‘ಜಗದೇವರಾಯ’ ಎಂಬ ಬಿರುದು ಪಡೆದರು. ವಿಜಯನಗರದ ದಂತದ ಸಿಂಹಾಸನದ ಮೇಲೆ ಕುಳಿತುಕೊಂಡ ಶೂರರು ಇವರು.

ಯೌವನ ಸೆರೆಮನೆಯಲ್ಲಿ

ಮೈಸೂರರಸರಲ್ಲಿ ಹನ್ನೆರಡನೆಯವರಾದ ಕಂಠೀರವ ನರಸರಾಜ ಒಡೆಯರ್‌ರವರು ಮಕ್ಕಳಿಲ್ಲದೆ ಸತ್ತರು. ಆಗಲೇ ಚಿಕ್ಕದೇವರಾಜ ಒಡೆಯರು ಪಟ್ಟಕ್ಕೆ ಬರಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ದೊಡ್ಡದೇವರಾಜ ಒಡೆಯರ್

ಎಂಬುವರು ಆರಿಸಲ್ಪಟ್ಟು ಚಿಕ್ಕದೇವರಾಜ ಒಡೆಯರು ಬಂಧನ ಕ್ಕೊಳಗಾದರು. ದೊಡ್ಡದೇವರಾಜರ ನಿಧನದನಂತರ ಬಿಡುಗಡೆಯಾಗಿ ಚಿಕ್ಕದೇವರಾಜರು ರಾಜ್ಯಾಧಿಕಾರ ಸ್ವೀಕರಿಸಿದರು.

ಚಿಕ್ಕದೇವರಾಜರ ತಂದೆಯ ಹೆಸರೂ ದೊಡ್ಡ ದೇವರಾಜ ಎಂದೇ. ತಾಯಿಯ ಹೆಸರು ಅಮೃತಾಂಬ. ಚಿಕ್ಕದೇವರಾಜರು ಹುಟ್ಟಿದಾಗಲೇ ಈತನು ಚಕ್ರವರ್ತಿಯ ಲಕ್ಷಣ ಉಳ್ಳವನು ಎಂದು ಜ್ಯೋತಿಷರು ಘೋಷಿಸಿದರು. ದೇವರಾಜನ ಮಂತ್ರಿಯಾಗಿದ್ದ ಸಿಂಗರಾರ್ಯರೆಂಬುವವರಿಗೂ ಇದೇ ಹೊತ್ತಿಗೆ ಗಂಡುಮಗುವೊಂದು ಹುಟ್ಟಿ ಆ ಮಗುವಿಗೆ ತಿರುಮಲಾರ್ಯ ಎಂದು ಹೆಸರಿಟ್ಟರು. ಈತನು ಮುಂದೆ ಚಿಕ್ಕದೇವರಾಜರ ಮಂತ್ರಿಯಾಗಿ ಮತ್ತು ಸಾಹಿತಿಯಾಗಿ ಕೆಲವಾರು ಕೃತಿಗಳನ್ನು ರಚಿಸಿ ಪ್ರಸಿದ್ಧನಾಗಿದ್ದಾನೆ. ಚಿಕ್ಕದೇವರಾಜನಿಗೆ ರಾಜವಂಶೀಯರಿಗೆ ಅಗತ್ಯವಾಗಿ ಬೇಕಾದ ಗರಡಿ ಸಾಧನೆ, ಕುದುರೆ ಸವಾರಿ, ಕತ್ತಿವರಸೆ ಮೊದಲಾದವುಗಳನ್ನು ಮಾತ್ರವಲ್ಲದೆ ಧರ್ಮಶಾಸ್ತ್ರ, ರಾಜನೀತಿ, ಸಂಗೀತಶಾಸ್ತ್ರ, ನಾಟಕ, ಅಲಂಕಾರ, ಹಲವಾರು ಬಾಷೆಗಳು ಮೊದಲಾದವುಗಳನ್ನೆಲ್ಲಾ ಕಲಿಸಲಾಯಿತು. ಶ್ರದ್ಧೆ ಯಿಂದ ರಾಜನು ಎಲ್ಲವನ್ನೂ ಕಲಿತು ರಾಜ್ಯಭಾರ ನಿರ್ವಹಣೆಗೆ ಅಗತ್ಯವಾದ ಸಾಮರ್ಥ್ಯವನ್ನು ಗಳಿಸಿಕೊಂಡನು.

ಅರಮನೆಯ ಒಳ ತಿಕ್ಕಾಟಗಳ ಫಲವಾಗಿ ಚಿಕ್ಕದೇವರಾಜ ಒಡೆಯರು ಬಂಧನಕ್ಕೆ ಸಿಕ್ಕಿಕೊಂಡರು; ತಾರುಣ್ಯವನ್ನು ಯಳಂದೂರಿನಲ್ಲಿ ಬಂಧನದಲ್ಲಿ ಕಳೆಯಬೇಕಾಯಿತು. ಆಗ ಯಳಂದೂರಿನ ವಿಶಾಲಾಕ್ಷ ಪಂಡಿತನೆಂಬ ಜೈನ ವಿದ್ವಾಂಸನು ರಾಯನ ಸ್ನೇಹ ಬೆಳೆಸಿಕೊಂಡನು. ವಿಶಾಲಾಕ್ಷ ಪಂಡಿತನು ನಿಪುಣ ಜ್ಯೋತಿಷಿಯೂ ಆಗಿದ್ದ. ಆತನು, ‘ಚಿಕ್ಕದೇವರಾಜನು ಎಂದಾದರೂ ಒಂದು ದಿನ ಪಟ್ಟಕ್ಕೇರಿ ಪ್ರಸಿದ್ಧನಾಗಿ ಮೆರೆಯುತ್ತಾನೆ’ ಎಂದು ತಿಳಿದುಕೊಂಡಿದ್ದ. ‘ನೀವು ಮುಂದೆ ರಾಜರಾಗುತ್ತೀರಿ, ತುಂಬಾ ಕೀರ್ತಿವಂತರಾಗುತ್ತೀರಿ’ ಎಂದು ತರುಣನಿಗೆ ತಿಳಿಸಿಯೂ ಇದ್ದ.

ಚಿಕ್ಕದೇವರಾಜನು ವಿಶಾಲಾಕ್ಷ ಪಂಡಿತನಿಗೆ, “ನಾನು ದೊರೆಯಾದರೆ ನಿಮ್ಮನ್ನು ಮಂತ್ರಿಯಾಗಿ ಮಾಡಿಕೊಳ್ಳುತ್ತೇನೆ” ಎಂದು ಮಾತುಕೊಟ್ಟ.

ಮಹಾರಾಜ

ಈ ಆಶ್ವಾಸನೆಯಿಂದ ವಿಶಾಲಾಕ್ಷ ಪಂಡಿತನಿಗೆ ಬಹಳ ಉತ್ಸಾಹ ಬಂದಿತು. ಆತ ಆಗಾಗ ರಾಜಧಾನಿಗೆ ಹೋಗಿ ಅಲ್ಲಿ ದಳವಾಯಿಗಳನ್ನೂ ಆಸ್ಥಾನದಲ್ಲಿ ಪ್ರತಿಷ್ಠಿತರೆನಿಸಿದವರನ್ನೂ ಕಾಣುತ್ತಿದ್ದ. ಉಪಾಯಾಂತರದಿಂದ ಚಿಕ್ಕದೇವರಾಜನ ಭವಿಷ್ಯ ವನ್ನು ಅವರ ಗಮನಕ್ಕೆ ತಂದು, ಚಿಕ್ಕದೇವರಾಜನು ರಾಜ್ಯದ ಉತ್ತರಾಧಿಕಾರಿಯಾಗುವುದು ದೇವರ ಇಚ್ಛೆ ಎಂಬ ಭಾವನೆಯನ್ನು ಮೂಡಿಸಿದ.

ಹೀಗಾಗಿ ದೊಡ್ಡದೇವರಾಜನು ನಿಧನನಾದ ಕೂಡಲೇ ದಳವಾಯಿಗಳು ಮತ್ತು ಮಂತ್ರಿಗಳು ಯಳಂದೂರಿಗೆ ಧಾವಿಸಿ ಚಿಕ್ಕದೇವರಾಜನನ್ನು ಕರೆತಂದು ಪಟ್ಟಕಟ್ಟಿದರು. ಚಿಕ್ಕ ದೇವರಾಜರು ರಾಜ್ಯಾಭಿಷಕ್ತರಾದಾಗ ದೇವರಾಜ ಒಡೆಯರೆಂಬ ಅವರ ಹಿರಿಯರು ಈ ರೀತಿ ಉಪದೇಶ ನೀಡಿದರು:

“ಯಾದವರ ವಂಶದಲ್ಲಿ ಚಂದ್ರನಂತೆ ಹುಟ್ಟಿದ್ದೀಯೆ. ಎಲ್ಲ ಶಾಸ್ತ್ರಗಳನ್ನೂ ಓದಿ ತಿಳಿಯಬೇಕಾದುದೆಲ್ಲವನ್ನೂ ತಿಳಿದಿದ್ದೀಯೆ. ನಿನಗೆ ನಾನು ಹೇಳಬೇಕಾದದ್ದು ಏನಿದೆ? ಆದರೂ ಪ್ರೀತಿ ಯಿಂದ ಹೇಳುತ್ತೇನೆ-ಪಟ್ಟಕ್ಕೆ ಬಂದದ್ದು ನೀನು ಸುಖ ಪಡುವುದಕ್ಕೆ ಎಂದುಕೊಳ್ಳಬೇಡ. ದೇವರ ಮತ್ತು ಸಜ್ಜನರ ಸೇವೆ ಮಾಡು, ಅದರಿಂದ ಬರುವ ಶಕ್ತಿ, ಕೀರ್ತಿಗಳು, ದೇಶದ ಅಭ್ಯುದಯ, ಪುಣ್ಯ ಇಂತಹವೇ ನೀನು ರಾಜನಾದುದಕ್ಕೆ ಫಲ ಎಂದು ಯೋಚಿಸು.”

ಜೈತ್ರಯಾತ್ರೆ

ಚಿಕ್ಕದೇವರಾಜ ಒಡೆಯರು ಪಟ್ಟಕ್ಕೆ ಬಂದಾಗ ಒಂದು ಕಡೆ ಮರಾಠರೂ ಮತ್ತೊಂದು ಕಡೆ ಮೊಗಲರೂ ಆಗಾಗ ತೊಂದರೆ ಕೊಡುತ್ತಿದ್ದರು. ಚಿಕ್ಕದೇವರಾಜ ಒಡೆಯರ ಹಿಂದಿನವರು ರಾಜ್ಯವನ್ನು ಸಾಕಷ್ಟು ವಿಸ್ತರಿಸಿ, ಸುಭದ್ರ ಗೊಳಿಸಿದ್ದರೂ ಸುತ್ತಮುತ್ತಲಿನ ಸಣ್ಣಪುಟ್ಟ ದೊರೆಗಳು, ಪಾಳೇಗಾರರನ್ನು ಎದುರಿಸಬೇಕಾಗಿತ್ತು. ಸಿಂಹಾಸನವನ್ನು ಏರಿ ಐದೇ ದಿನಗಳಾಗಿದ್ದವು, ಯುದ್ಧ ಒದಗಿತು. ಮಧುರೆಯ ಚೊಕ್ಕನಾಥನನ್ನು ಎದುರಿಸಲು ಹೋಗಬೇಕಾಯಿತು. ಈ ಯುದ್ಧದಲ್ಲಿ ಚೊಕ್ಕನಾಥ ನಾಯಕನನ್ನು ಗೆದ್ದು ತಿರುಚಿನಾಪಳ್ಳಿ, ಮುತ್ತಂ ಜಟ್ಟಿ, ಅನಂತಗಿರಿಗಳನ್ನು ವಶಪಡಿಸಿಕೊಂಡರು. ಅಲ್ಲಿಂದ ಮುಂದೆ ಈರೋಡು, ಸಾಂಬಳ್ಳಿ, ಧಾರಾಪುರ ಮೊದಲಾದವುಗಳನ್ನು ವಶಪಡಿಸಿಕೊಂಡರು. ಅಲ್ಲಿಂದ ಹಿಂತಿರುಗಿ ಬಂದಮೇಲೆ ಇಕ್ಕೇರಿ ನಾಯಕನನ್ನು ಎದುರಿಸಿದರು. ಇಕ್ಕೇರಿಯನ್ನು ಜಯಿಸಿದರು. ಕೆಳದಿಯ ನಾಯಕನನ್ನು ಸೋಲಿಸಿ ಸಕಲೇಶಪುರ, ಅರಕಲಗೂಡನ್ನು ವಶಪಡಿಸಿಕೊಂಡರು. ನರಸಪ್ಪ ಒಡೆಯರ್ ಎಂಬ ಪಾಳೇಗಾರನನ್ನು ಜಯಿಸಿ ಜಡಕನದುರ್ಗವನ್ನು ವಶಪಡಿಸಿಕೊಂಡು ಅದಕ್ಕೆ  ಚಿಕ್ಕದೇವರಾಜ ದುರ್ಗ ಎಂದು ಹೆಸರಿಟ್ಟರು. ಚಿಕ್ಕಪ್ಪಗೌಡನೆಂಬ ಪಾಳೇಯಗಾರನನ್ನು ಸೋಲಿಸಿ ದೊಡ್ಡದೇವನಗರಿ ಆಕ್ರಮಿಸಿಕೊಂಡರು. ತಿಮ್ಮಪ್ಪಗೌಡ ಮತ್ತು ರಾಮಪ್ಪ ಗೌಡ ಎಂಬ ಪಾಳೇಯಗಾರನನ್ನು ಸೋಲಿಸಿ ತುಮಕೂರು, ಮಧುಗಿರಿ, ಮಿಡಿಗೇಸಿ, ಚನ್ನರಾಯ ದುರ್ಗಗಳನ್ನು ವಶಪಡಿಸಿಕೊಂಡರು. ಈ ಹೊತ್ತಿಗೆ ಚೇತರಿಸಿಕೊಂಡು ಮತ್ತೆ ಮೇಲೆ ಬಿದ್ದ ಕೆಳದಿಯ ನಾಯಕನನ್ನು ಮತ್ತೆ ಸೋಲಿಸಿ ಗಂಗಾಧರನೆಂಬ ಅವನ ಪಟ್ಟದ ಆನೆಯನ್ನೂ ಹಾಸನ ಮತ್ತು ಸಕ್ಕರೆ ಪಟ್ಟಣ ಕೋಟೆಗಳನ್ನೂ ವಶಪಡಿಸಿಕೊಂಡರು. ಹೀಗೆ ಸುಮಾರು ೧೩ ವರ್ಷಗಳ ಕಾಲ ರಾಜ್ಯ ವಿಸ್ತರಣೆಯಲ್ಲಿ ಒಡೆಯರು ನಿರತರಾಗಿದ್ದರು.

ಈ ಮಧ್ಯೆ ಒಡೆಯರು ಒಂದೆರಡು ಸಾರಿ ಮರಾಠರನ್ನು ಎದುರಿಸಬೇಕಾಯಿತು. ಶಿವಾಜಿಯೂ ಮೈಸೂರಿನ ಮೇಲೆ ನೇರವಾಗಿ ದಂಡೆತ್ತಿ ಬರದಿದ್ದರೂ ಕರ್ನಾಟಕದ ಗದಗು, ಲಕ್ಷ್ಮೇಶ್ವರ, ಬಂಕಾಪುರ, ಬೆಳಗಾವಿಗಳನ್ನು ವಶಪಡಿಸಿಕೊಂಡನು. ಅಲ್ಲಿಂದ ದಕ್ಷಿಣಕ್ಕೆ ಹೊರಟು ಜಿಂಜಿಯನ್ನು ಆಕ್ರಮಿಸಿಕೊಂಡು, ಹಿಂತಿರುಗಿ ಬರುತ್ತಾ ಶ್ರೀರಂಗಪಟ್ಟಣವನ್ನು ಆಕ್ರಮಿಸುವ ಉದ್ದೇಶದಿಂದ ಅಲ್ಲಿಗೆ ಬಂದು ಇಳಿದನು. ಆದರೆ ಆಗತಾನೆ ಅಭಿವೃದ್ಧಿಗೆ ಬರುತ್ತಿದ್ದ ಚಿಕ್ಕದೇವರಾಜರನ್ನು ಎದುರುಹಾಕಿಕೊಳ್ಳಲು ಇಚ್ಛಿಸಲಿಲ್ಲ.

ಶಿವಾಜಿಯ ನಂತರ ಸಾಂಬಾಜಿಯು ಪುನಃ ಮೈಸೂರಿನ ಮೇಲೆ ದಂಡೆತ್ತಿ ಬಂದನು. ಈ ನಡುವೆ ಒಡೆಯರು ಜಿಂಜಿ, ತಂಜಾವೂರುಗಳನ್ನು ಆಕ್ರಮಿಸಿ ಕೊಂಡಿದ್ದರು. ಅವನ್ನು ಹಿಂದಕ್ಕೆ ಪಡೆಯುವುದು ಅವನ ಮುಖ್ಯ ಉದ್ದೇಶವಾಗಿತ್ತು. ಈ ಅವಕಾಶವನ್ನು ಬಳಸಿಕೊಂಡು ಸಾಂಬಾಜಿಯು ಇಕ್ಕೇರಿಯ ನಾಯಕ ಚೊಕ್ಕನಾಥ ನಾಯಕ, ಗೋಲ್ಕೊಂಡದ ಸುಲ್ತಾನ ಮೊದಲಾದವರ ಸಹಾಯದಿಂದ ಒಡೆಯರನ್ನು ತೀವ್ರವಾಗಿ ಕಾಡಿಸಿದನು. ಈ ಸಂದರ್ಭದಲ್ಲಿ ಒಡೆಯರು ಅತ್ಯಂತ ಬುದ್ಧಿವಂತಿಕೆಯಿಂದ ಮೊಗಲರ ಸ್ನೇಹ ಬೆಳೆಸಿ ಶತ್ರುಗಳನ್ನು ಮೆಟ್ಟಿನಿಂತರು. ಇದೇ ಹೊತ್ತಿಗೆ ದೇಶದ ಒಳಗೂ ಅಲ್ಲಲ್ಲಿ ದಂಗೆಗಳಾಗಿ ಅದನ್ನು ಅವರು ತುಂಬಾ ಬುದ್ಧಿವಂತಿಕೆಯಿಂದ ಎದುರಿಸಿದರು.

ಶಕ್ತಿ-ಯುಕ್ತಿ

ಚಿಕ್ಕದೇವರಾಜ ಒಡೆಯರು ರಣರಂಗಕ್ಕೆ ಪ್ರತ್ಯಕ್ಷವಾಗಿ ಹೋಗಿ ಸೇನೆಯನ್ನು ನಡೆಸಿ ಯುದ್ಧ ಮಾಡುತ್ತಿದ್ದರು. ಕೇವಲ ಶೌರ್ಯ, ಸಾಹಸಗಳಿಂದ ಮಾತ್ರವೇ ಗೆಲ್ಲಲು ಸಾಧ್ಯವಿಲ್ಲವೆಂದು ತಿಳಿದಾಗ ಅತ್ಯಂತ ಉಪಾಯದ ಕ್ರಮಗಳಿಂದ ಶತ್ರು ಸೈನ್ಯವನ್ನು ಗಾಬರಿಗೊಳಿಸಿ, ಸೋತು ಓಡಿಹೋಗುವಂತೆ ಮಾಡುತ್ತಿದ್ದರು. ಒಮ್ಮೆ ಶಿವಾಜಿಯ ಎರಡನೆಯ ಮಗ ರಾಜಾರಾಮ ಜಿಂಜಿಗೆ ತೆರಳುವ ದಾರಿಯಲ್ಲಿ ಅದಷ್ಟೂ ಹಣ ಲೂಟಿ ಮಾಡುವ ಉದ್ದೇಶದಿಂದ ಶ್ರೀರಂಗಪಟ್ಟಣಕ್ಕೆ ಮುತ್ತಿಗೆ ಹಾಕಿದನು. ಹಠಾತ್ ಮೇಲೆರಗಿದ ಈ ಶತ್ರುವನ್ನು ಎದುರಿಸಲು ಶಕ್ತನಾಗಿದ್ದ ದಳವಾಯಿ ಕುಮಾರಯ್ಯನು ತಿರುಚಿನಾಪಳ್ಳಿಯ ಬಳಿ ಯುದ್ಧದಲ್ಲಿ ನಿರತನಾಗಿದ್ದನು. ರಾಜಧಾನಿಯಲ್ಲಿದ್ದ ಸೇನೆ ಅತ್ಯಲ್ಪ. ಒಡೆಯರು ತರಾತುರಿಯಿಂದ ಕಳಿಸಿದ ಆಜ್ಞೆಯನ್ನು ಅನುಸರಿಸಿ ಕುಮಾರಯ್ಯನ ಮಗ ದೊಡ್ಡಯ್ಯನು ಒಂದಿಷ್ಟು ಸೇನೆಯೊಂದಿಗೆ ರಾಜಧಾನಿಗೆ ಧಾವಿಸಿದನು.

ಆದರೂ ಶತ್ರುವನ್ನು ಎದುರಿಸಲು ಸಾಕಷ್ಟು ಸೈನ್ಯ ಇರಲಿಲ್ಲ. ಆಗ ಒಡೆಯರು ಒಂದು ಉಪಾಯ ಮಾಡಿದರು. ಶತ್ರುಸೈನ್ಯಕ್ಕೆ ಎದುರಾಗಿ ಅನತಿ ದೂರದಲ್ಲಿ ನೂರಾರು ಎತ್ತುಗಳನ್ನು ನಿಲ್ಲಿಸಿದರು. ಅವುಗಳ ಕೊಂಬುಗಳಿಗೆಲ್ಲಾ ಎರಡೆರಡು ಪಂಜುಗಳನ್ನು ಕಟ್ಟಿಸಿ ರಾತ್ರಿ ಸರಿಯಾದ ಸಮಯದಲ್ಲಿ ಅವುಗಳನ್ನೆಲ್ಲಾ ಓಡಿಸಲು ಆಜ್ಞೆಯಿತ್ತರು. ಮರಾಠ ಸೈನಿಕರು ಪಂಜಿನ ಬೆಳಕನ್ನು ನೋಡಿದರು, ಸಾವಿರಾರು ಸಂಖ್ಯೆಯಲ್ಲಿ ಶತ್ರುಸೇನೆ ತಮ್ಮ ಮೇಲೆ ಎರಗಲು ಬರುತ್ತಿದೆಯೆಂದು ಗಾಬರಿಯಾದರು, ಆ ದೊಡ್ಡ ಸೈನ್ಯವನ್ನು ಎದುರಿಸಲು ಸಿದ್ಧಮಾಡಿಕೊಳ್ಳಲು ಪ್ರಾರಂಭಿಸಿದರು. ಆಗಲೇ ದೊಡ್ಡಯ್ಯನು ತನ್ನೆಲ್ಲಾ ಸೈನ್ಯ ಬಲದಿಂದ ಮರಾಠ ಸೈನ್ಯವನ್ನು ಹಿಂದುಗಡೆಯಿಂದ ಮುತ್ತಿ ಸದೆಬಡಿದನು. ಈ ಅನಿರೀಕ್ಷಿತ ಅಘಾತದಿಂದ ಜರ್ಜರಿತನಾದ ಮರಾಠ ಸೈನಿಕರು ಶಸ್ತ್ರಾಸ್ತ್ರ ಗಳನ್ನು ಬಿಸುಟು ದಿಕ್ಕಾಪಾಲಾಗಿ ಓಡಿಹೋದರು. ಹೀಗೆ ಒಡೆಯರು ಅನೇಕ ಉಪಾಯಗಳಿಂದಲೂ ಶೌರ್ಯ ಸಾಹಸಗಳಿಂದಲೂ ಅನೇಕ ಯುದ್ಧಗಳನ್ನು ಮಾಡಿ ‘ಅಪ್ರತಿಮ ವೀರ’ ಎಂಬ ಬಿರುದು ಧರಿಸಿದರು. ದಕ್ಷಿಣದಲ್ಲಿ ‘ಕರ್ನಾಟಕ ಚಕ್ರವರ್ತಿ’ ಎಂದೂ ಕರೆಸಿಕೊಂಡರು.

ಮರಾಠ ಸೈನಿಕರು ಪಂಜಿನ ಬೆಳಕನ್ನು ನೋಡಿ ಗಾಬರಿಯಾದರು.

ರಾಜಾ ಜಗದೇವರಾಯ

ಪಟ್ಟಕ್ಕೆ ಬಂದಮೇಲೆ ಹದಿಮೂರು ವರ್ಷಕಾಲ ರಾಜ್ಯದ ನಾಲ್ಕೂ ಕಡೆ ರಾಜ್ಯವನ್ನು ವಿಸ್ತಾರ ಮಾಡಿ ಸಕ್ಕರೆಯ ಪಟ್ಟಣದಿಂದ ಪೂರ್ವಕ್ಕೂ ಸೇಲಂನಿಂದ ಪಶ್ಚಿಮಕ್ಕೂ ಚಿಕ್ಕನಾಯಕನ ಹಳ್ಳಿಯಿಂದ ದಕ್ಷಿಣಕ್ಕೂ ಧಾರಾಪುರದಿಂದ ಉತ್ತರಕ್ಕೂ ಪ್ರತಿ ಒಂಬತ್ತು ಮೈಲಿಗೆ ಒಂದರಂತೆ ಅನ್ನಛತ್ರಗಳನ್ನು ವ್ಯವಸ್ಥೆಗೊಳಿಸಿ ರಸ್ತೆಗಳನ್ನು ಮಾಡಿಸಿದರು.

ಚಿಕ್ಕದೇವರಾಜ ಒಡೆಯರು ಈ ಕಾಲದಲ್ಲಿ ಮಾಡಿದ ಬಹು ದೊಡ್ಡ ಕೆಲಸ ಎಂದರೆ ಔರಂಗಜೇಬನ ಸೇನಾಪತಿ ಖಾಸಿಂಖಾನನಿಂದ ಬೆಂಗಳೂರನ್ನು ಕೊಂಡದ್ದು; ಅದನ್ನು ಮೂರು ಲಕ್ಷ ರೂಪಾಯಿಗಳಿಗೆ ಕೊಂಡು ರಾಜ್ಯಕ್ಕೆ ಸೇರಿಸಿಕೊಂಡರು. ಈ ವ್ಯಾಪಾರದಲ್ಲಿ ಒಡೆಯರ ಉದ್ದೇಶ ಎರಡಿತ್ತು. ಮೊಗಲರು ಮತ್ತು ಮರಾಠರ ತಿಕ್ಕಾಟದಲ್ಲಿ ಬೆಂಗಳೂರು ಒಂದು ಸಲ ಇವರ ಕೈಯಲ್ಲಿ, ಇನ್ನೊಂದು ಸಲ ಅವರ ಕೈಯಲ್ಲಿ ಇರುತ್ತಿತ್ತು. ಚಿಕ್ಕದೇವರಾಜರ ರಾಜ್ಯದ ಗಡಿಯಲ್ಲಿ ಶತ್ರುಸೈನ್ಯ ಇರುವಂತಾಗಿತ್ತು. ಬೆಂಗಳೂರನ್ನು ತಮ್ಮ ವಶದಲ್ಲಿ ಇಟ್ಟುಕೊಳ್ಳುವುದರಿಂದ ಇದಕ್ಕೆ ಅವಕಾಶವಿಲ್ಲದಂತೆ ಆಗುತ್ತಿತ್ತು. ಎರಡನೆಯದಾಗಿ, ಮೊಗಲರು ಮೈಸೂರನ್ನು  ಆಕ್ರಮಿಸದಂತೆ ನೋಡಿಕೊಳ್ಳಬೇಕಾಗಿತ್ತು. ಖಾಸಿಂಖಾನನು ಚಿಕ್ಕದೇವರಾಜರ ಸ್ನೇಹಿತ. ಅವನು ಬದುಕಿರುವಾಗಲೇ ಮೊಗಲರ ಭವಿಷ್ಯದಲ್ಲಿ ಮೈಸೂರನ್ನು ಆಕ್ರಮಿಸದಂತೆ ಸುಭದ್ರ ವಾದ ವ್ಯವಸ್ಥೆ ಮಾಡಿಕೊಳ್ಳುವುದು ಎರಡನೆಯ ಉದ್ದೇಶ. ಈ ಎರಡು ಉದ್ದೇಶಗಳೂ ನೆರವೇರಿದವು.

ಇದೇ ಸಂದರ್ಭದಲ್ಲಿ ಚಿಕ್ಕದೇವರಾಜರು ಕೈಗೊಂಡ ಇನ್ನೊಂದು ಮುಖ್ಯ ಕಾರ್ಯ: ದೆಹಲಿಗೆ ಕಳಿಸಿದ ರಾಯಭಾರ, ಕರಣಿಕ ಲಿಂಗಪ್ಪಯ್ಯನವರ ನೇತೃತ್ವದಲ್ಲಿ ಅಪಾರ ಧನಕನಕ, ವಸ್ತುವಾಹನಗಳನ್ನಿತ್ತು ಔರಂಗಜೇಬನಲ್ಲಿಗೆ ರಾಯಭಾರವನ್ನು ಕಳಿಸಿದರು. ಈ ರಾಯಭಾರ ನಿಯೋಗದಿಂದ ಔರಂಗಜೇಬನಿಗೆ ವಿಶೇಷ ಸಂತೋಷವೇನೂ ಆಗಲಿಲ್ಲ. ಆದರೆ ಚಿಕ್ಕದೇವ ರಾಜರು ದಕ್ಷಿಣದಲ್ಲಿ ಮರಾಠರನ್ನು ಎದುರು ಹಾಕಿಕೊಳ್ಳುವುದು ಬುದ್ಧಿವಂತಿಕೆಯಲ್ಲ ಎಂಬ ಕಾರಣ ದಿಂದಲೂ ಮೈಸೂರರಸರು ಕಳಿಸಿದ್ದ ಅಮೂಲ್ಯವಾದ ಉಡುಗೊರೆಗಳಿಂದ ಆಕರ್ಷಿತ ನಾಗಿಯೂ ಈ ರಾಯಭಾರವನ್ನು ಮನ್ನಿಸಿದ. ‘ರಾಜಾ ಜಗದೇವರಾಯ’ ಎಂಬ ಬಿರುದುಳ್ಳ ಉಂಗುರನ್ನು ಉಡುಗೊರೆಯಾಗಿ ಕಳುಹಿಸಿದ. ವಿಜಯನಗರದ ಅರಸರು ಉಪಯೋಗಿಸುತ್ತಿದ್ದರೆಂದು ಹೇಳಲಾದ ದಂತದ ಸಿಂಹಾಸನವನ್ನೂ ಉಡುಗೊರೆಯಾಗಿ ಕಳಿಸಿದ. ಒಡೆಯರ ಸ್ನೇಹ ಹಸ್ತವನ್ನು ಸ್ವೀಕರಿಸಿದ.

ಈ ರಾಯಭಾರದಿಂದ ಚಿಕ್ಕದೇವರಾಜರ ಕೀರ್ತಿ ಪ್ರತಿಷ್ಠೆಗಳು ಬೆಳೆದವು. ಇವರು ಮೊಗಲ್ ಬಾದಷಹರ ಮಿತ್ರರಾದ ಸ್ವತಂತ್ರ ಸಾರ್ವಭೌಮರೆಂದು ಸಣ್ಣಪುಟ್ಟ ರಾಜಮಹಾರಾಜರು ಇವರಿಗೆ ಭಯಪಟ್ಟು ದೂರವಿರುವಂತೆ ಆಯಿತು. ರಾಜ್ಯದ ಒಳಗಿನ ಮತ್ತು ಹೊರಗಿನ ಶತ್ರುಗಳು ಇಲ್ಲವಾದರು. ಇದರಿಂದ ಒಡೆಯರು ರಾಜ್ಯದಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೆ ತಂದರು ಪ್ರಜೋಪಕಾರಿ ಧರ್ಮಕಾರ್ಯಗಳನ್ನು ಮಾಡಲು, ಸಂಗೀತ, ಸಾಹಿತ್ಯಾದಿಗಳಿಗೆ ಪ್ರೋತ್ಸಾಹ ನೀಡಲು ಅವಕಾಶವಾಯಿತು.

ಆಡಳಿತ ಸುಧಾರಣೆ

ರಾಜ್ಯ ವಿಸ್ತರಣೆ ಒಂದೇ ರಾಜನ ಕರ್ತವ್ಯವಲ್ಲ. ವಿಸ್ತರಿಸಿದ ರಾಜ್ಯದ ಎಲ್ಲ ಜನತೆಯು ಸುಖ ಸಂತೃಪ್ತರಾಗಿರುವಂತೆ ನೋಡಿಕೊಳ್ಳುವುದೂ ರಾಜನ ಕರ್ತವ್ಯವೇ. ಭದ್ರತೆಯ ದೃಷ್ಟಿಯಿಂದ ಸದಾ ಸೈನ್ಯವನ್ನು ಇಟ್ಟುಕೊಂಡು ಜನೋಪಕಾರದ ಕಾರ್ಯಗಳನ್ನೆಲ್ಲಾ ನಿರ್ವಹಿಸಿ ಕ್ಷಾಮ-ಡಾಮರಗಳು ಉಂಟಾದಾಗ ಜನ ಕಂಗಾಲಾಗಿ ಧೃತಿಕೆಡದಂತೆ ನೋಡಿಕೊಳ್ಳಲು ಅಗತ್ಯವಾದ ವ್ಯವಸ್ಥೆ ಮಾಡುವುದೂ ರಾಜನ ಕೆಲಸವೇ.

ಚಿಕ್ಕದೇವರಾಜ ಒಡೆಯರು ರಾಜ್ಯಭಾರವನ್ನು ಸುವ್ಯವಸ್ಥಿತವಾಗಿ ನಡೆಸಲು ಆರಂಭಿಸಿದ ಕೂಡಲೇ ಮೊದಲು ಗಮನ ನೀಡಿದ್ದು ಹಣಕಾಸಿನ ಭದ್ರತೆಯ ವ್ಯವಸ್ಥೆಗೆ. ರಾಜ್ಯದ  ಹಣಕಾಸಿನ ಸ್ಥಿತಿಯನ್ನು ಸುಭದ್ರವಾಗಿ ಕಾಪಾಡಿಕೊಂಡು ಬರಲು ಅವರು ಹಲವಾರು ಕ್ರಮಗಳನ್ನು ಕೈಗೊಂಡರು. ಕಂದಾಯ ಪದ್ಧತಿಯಲ್ಲಿ ಹೆಚ್ಚಿನ ಸುಧಾರಣೆಗಳನ್ನು ಮಾಡಿದರು. ಜಮೀನು ಇರುವವರಿಂದ ಕಂದಾಯ ವಸೂಲು ಮಾಡಬೇಕು. ಕಂದಾಯ ಇಷ್ಟು ಎಂದು ನಿರ್ಧರಿಸುವುದು ಹೇಗೆ? ಮೈಸೂರು ರಾಜ್ಯದಲ್ಲಿ ಮೊದಲ ಬಾರಿಗೆ ರಾಜ್ಯದ ಎಲ್ಲ ವ್ಯವಸಾಯ ಭೂಮಿಯನ್ನೂ ಸರ್ವೆ ಮಾಡಿಸಿದರು; ಭೂಮಿಯ ಗುಣ ನೋಡಿಕೊಂಡು, ಅದರಲ್ಲಿ ಬರುವ ಬೆಳೆಗೆ ಅನುಗುಣವಾಗಿ ಇಷ್ಟು ಕಂದಾಯ ಎಂದು ನಿರ್ಧರಿಸಿದರು. ಇಂತಹ ಪದ್ಧತಿಯನ್ನು ಜಾರಿಗೆ ತಂದವರು ಇವರೇ. ಬೇಸಾಯದ ಭೂಮಿಯನ್ನು ರಾಜ ಭೂಮಿ, ಸಾರ್ವಜನಿಕ ಭೂಮಿ ಎಂದು ವಿಭಾಗ ಮಾಡಿದರು, ಈ ಎರಡು ಭಾಗಗಳಿಗೂ ಬೇರೆಬೇರೆ ಅಧಿಕಾರಿಗಳನ್ನು ನೇಮಿಸಿದರು. ಕಂದಾಯವನ್ನು ಹಣದ ರೂಪದಲ್ಲಿ ಕೊಡದೆ ಧಾನ್ಯದ ರೂಪದಲ್ಲಿ ಕೊಡಬಹುದಾಗಿತ್ತು. ಈ ಕಂದಾಯಕ್ಕೆ ‘ಧಾನ್ಯಾದಾಯ’ ಎಂದು ಹೆಸರು. ಹಣದ ರೂಪದಲ್ಲಿ ಕೊಡುವ ಕಂದಾಯಕ್ಕೆ ‘ಸುವರ್ಣಾದಾಯ’ ಎಂದು ಹೆಸರು. ಕೇವಲ ಕಂದಾಯ ವಸೂಲಿ ಮಾಡುವುದಷ್ಟೆ ಅಲ್ಲದೆ ಕೆರೆ-ಕಟ್ಟೆಗಳಿಂದ ನೀರು ಪೂರೈಕೆಯಾಗುವ ಭೂಮಿಯಲ್ಲಿ ಭತ್ತವೇ ಮೊದಲಾದ ಧಾನ್ಯಗಳನ್ನು ಬೆಳೆಯಬೇಕೆಂದು ಆಜ್ಞೆ ಮಾಡಿದ್ದರು. ರಾಜ್ಯದಲ್ಲಿ ಆದಷ್ಟು ಭೂಮಿಯನ್ನು ಬೆಳೆ ತೆಗೆಯಲು ಉಪಯೋಗಿಸಬೇಕು. ಬಂಜರು ಭೂಮಿಯನ್ನು ಮೊದಲಬಾರಿಗೆ ಕೃಷಿ ಮಾಡುವುದು ಕಷ್ಟ. ಅಂತಹ ಭೂಮಿಯನ್ನು ಉತ್ತು, ಹಸನುಮಾಡಿ ಬೆಳೆ ಬೆಳೆಯುವ ಉತ್ಸಾಹಶಾಲಿ ರೈತರಿಗೆ ಕಂದಾಯ ವಿನಾಯಿತಿ ಮೊದಲಾದ ಸೌಲಭ್ಯಗಳನ್ನು ಕೊಡುತ್ತಿದ್ದರು.

ರಾಜ್ಯಾದಾಯ ಕೇವಲ ಭೂ ಕಂದಾಯವನ್ನೇ ಅವಲಂಬಿಸಿರಲಿಲ್ಲ. ಸಮಾಯಾಚಾರ, ಕೂಟಾಚಾರ, ಜಾತಿ ಮಾನ್ಯ, ವೃತ್ತಿ ತೆರಿಗೆಗಳನ್ನು ವಿಧಿಸಿದ್ದರು. ಸೇನೆಯನ್ನು ಸುವ್ಯವಸ್ಥಿತವಾಗಿ ಇಟ್ಟುಕೊಂಡಿರಲು ದಂಡಿನ ಕಾಣಿಕೆ ಎಂಬ ವಿಶೇಷವಾದ ತೆರಿಗೆ ವಿಧಿಸಿದ್ದರು. ಈ ರೀತಿಯಾಗಿ ಹಲವಾರು ವಿಧದಲ್ಲಿ ರಾಜ್ಯದ ಆದಾಯವನ್ನು ಸುಭದ್ರಗೊಳಿಸಿ ಪ್ರತಿವರ್ಷ ರಾಜ್ಯ ಭಂಡಾರಕ್ಕೆ ಏಳು ಲಕ್ಷದ ಇಪ್ಪತ್ತು ಸಾವಿರ ಪಗೋಡಾ (ಆಗಿನ ಕಾಲದ ಚಿನ್ನದ ನಾಣ್ಯ) ಆದಾಯ ಬರುವಂತೆ ಮಾಡಿದ್ದರು. ಇಷ್ಟು ಹಣ ಕಟ್ಟು ನಿಟ್ಟಾಗಿ ವಸೂಲು ಆಗುವಂತೆ ವ್ಯವಸ್ಥೆ ಮಾಡಿದ್ದರು. ಅಷ್ಟೇ ಅಲ್ಲ, ಪ್ರತಿದಿನ ಮಧ್ಯಾಹ್ನ ಎರಡು ಸಾವಿರ ಪಗೋಡಾಗಳನ್ನು ರಾಜ್ಯದ ಭಂಡಾರಕ್ಕೆ ಸಲ್ಲಿಸಿರುವ ಲೆಕ್ಕ ಕೊಡುವವರೆಗೂ ಊಟ ಮಾಡುತ್ತಿರಲಿಲ್ಲ. ಹೀಗೆ ರಾಜ್ಯದ ಸಂಪನ್ಮೂಲಗಳನ್ನು ಕಟ್ಟುನಿಟ್ಟಾಗಿ ರೂಢಿಸಿ ನಾಣ್ಯ, ವಜ್ರ, ವೈಡೂರ್ಯಗಳ ರೂಪದಲ್ಲಿ ಒಂಬತ್ತು ಕೋಟಿ ಪಗೋಡಗಳಿಗೂ ಮಿಕ್ಕ ಮೀಸಲು ಭಂಡಾರವನ್ನು ಕೂಡಿಟ್ಟು ‘ನವಕೋಟಿ ನಾರಾಯಣ’ ಎಂದು ಪ್ರಸಿದ್ಧರಾಗಿದ್ದರು.

ಬೆಂಗಳೂರಿನಲ್ಲಿ ಈಗ ರಾಜ್ಯ ಸರ್ಕಾರದ ಆಡಳಿತ ಭವನವನ್ನು ‘ವಿಧಾನಸೌಧ’ ಎಂದು ಕರೆಯುತ್ತಾರೆ. ಇದಕ್ಕೆ ಮೊದಲು ‘ಅಠಾರ ಕಚೇರಿ’ ಎಂಬುದು ಇತ್ತು. ಈ ಹೆಸರು ಚಿಕ್ಕದೇವ ರಾಜ ಒಡೆಯರ ಕಾಲದಲ್ಲಿ ಆರಂಭವಾದದ್ದು. ಸರ್ಕಾರದ ಆಡಳಿತವನ್ನು ಹದಿನೆಂಟು ಇಲಾಖೆಗಳಾಗಿ ವಿಂಗಡಿಸಿ ನಡೆಸುವುದಕ್ಕೆ ಈ ಹೆಸರು. ಚಿಕ್ಕದೇವರಾಜ ಒಡೆಯರ ಕಾಲ ದಲ್ಲಿ ದೆಹಲಿಯಲ್ಲಿ ಆಳುತ್ತಿದ್ದ ಔರಂಗಜೇಬನು ಇಂತಹ ವ್ಯವಸ್ಥೆಯನ್ನು ಕಲ್ಪಿಸಿದ್ದನೆಂದೂ ಅದನ್ನು ಅನುಸರಿಸಿ ಚಿಕ್ಕ ದೇವರಾಜ ಒಡೆಯರು ಅದನ್ನು ಜಾರಿಗೆ ತಂದರೆಂದೂ ಹೇಳುತ್ತಾರೆ. ಆದರೆ ಔರಂಗಜೇಬನಿಗೂ ಎಷ್ಟೋ ಶತಮಾನಗಳ ಮೊದಲು ಕೌಟಿಲ್ಯನೆಂಬ ರಾಜನೀತಿಜ್ಞನು ಹದಿನೆಂಟು ಇಲಾಖೆಗಳ ಆಡಳಿತ ವಿಧಾನವನ್ನು ಸೂಚಿಸಿದ್ದಾನೆ. ಚಿಕ್ಕ ದೇವರಾಜ ಒಡೆಯರು ಕೌಟಿಲ್ಯನು ಹೇಳಿದ್ದ ರೀತಿ, ಮೊಗಲರ ಆಡಳಿತ ರೀತಿ ಎರಡನ್ನೂ ತಿಳಿದುಕೊಂಡರು. ಎರಡರಲ್ಲಿಯೂ ಉತ್ತಮವಾದ ಅಂಶಗಳನ್ನು ಸೇರಿಸಿ ತಾವು ಹದಿನೆಂಟು ಇಲಾಖೆಗಳ ಆಡಳಿತವನ್ನು ರೂಪಿಸಿದರು.

ಚಿಕ್ಕದೇವರಾಜ ಒಡೆಯರು ಮಂತ್ರಾಲೋಚನ ಸಭೆ ಎಂಬ ಮಂತ್ರಿಮಂಡಲವನ್ನು ರಚಿಸಿಕೊಂಡಿದ್ದರು. ಅವರು ಪಟ್ಟಾಧಿಕಾರಕ್ಕೆ ಬರುವ ಮುಂಚೆ ವಾಗ್ದಾನ ಮಾಡಿದ್ದಂತೆ ಯಳಂದೂರಿನ ವಿಶಾಲಾಕ್ಷ ಪಂಡಿತನನ್ನು ಮಂತ್ರಿಯನ್ನಾಗಿ ನೇಮಿಸಿಕೊಂಡಿದ್ದರು. ಅವನ ಜೊತೆಗೆ ಸಹಪಾಠಿಯಾಗಿ ತಿರುಮಲಾರ್ಯ ಮತ್ತು ಷಡಕ್ಷರಯ್ಯ, ಚಿಕ್ಕುಪಾಧ್ಯಾಯ, ಕರಣಿಕ ಲಿಂಗಣ್ಣಯ್ಯ ಎಂಬ ಮಂತ್ರಿಗಳಿದ್ದರು. ಇವರಲ್ಲಿ ವಿಶಾಲಾಕ್ಷ ಪಂಡಿತ ಮತ್ತು ತಿರುಮಲಾರ್ಯರನ್ನು ಪ್ರಧಾನಿ ಗಳೆಂದು ಕರೆಯಲಾಗುತ್ತಿತ್ತು. ದಳವಾಯಿ ಕುಮಾರಯ್ಯ ಮೈಸೂರಿನ ಮುಖ್ಯ ಸೇನಾಧಿಕಾರಿಯಾಗಿದ್ದ. ಇವನೂ ಇವನ ಮಗ ದಳವಾಯಿ ದೊಡ್ಡಯ್ಯನೂ ಅಪಾರ ನಿಸ್ವಾರ್ಥ ಸೇವೆ ಯಿಂದ ರಾಜ್ಯ ವಿಸ್ತರಣೆಗೆ ನೆರವಾದರು.

ಆಡಳಿತ ವ್ಯವಸ್ಥೆ

ಚಿಕ್ಕದೇವರಾಜ ಒಡೆಯರು ರಾಜ್ಯಾಡಳಿತ ನಿರ್ವಹಿಸಲು ಅಧಿಕಾರಿಗಳನ್ನು ನೇಮಿಸುವಾಗ ಅವರು ಯಾವ ಮನೆತನದವರು, ನಡತೆ ಹೇಗೆ, ರಾಜರಲ್ಲಿ ನಿಷ್ಠೆ ಇದೆಯೆ, ಪ್ರಾಮಾಣಿಕರೆ ಎಂದೆಲ್ಲ ಕೂಲಂಕಷವಾಗಿ ವಿಚಾರಿಸಿ ನೇಮಿಸಿಕೊಳ್ಳುತ್ತಿದ್ದರು. ಸರ್ಕಾರಿ ಅಧಿಕಾರಿಗಳಿಗೆ ಸಲ್ಲುವ ವೇತನದಲ್ಲಿ ಅರ್ಧಭಾಗವನ್ನು ಧಾನ್ಯರೂಪದಲ್ಲಿಯೂ ಇನ್ನರ್ಧ ಭಾಗವನ್ನು ಹಣದ ರೂಪದಲ್ಲಿಯೂ ಕೊಡ ಲಾಗುತ್ತಿತ್ತು.

ತಮ್ಮ ಅಧಿಕಾರಿಗಳು ಲಂಚಕ್ಕೆ ಕೈಯೊಡ್ಡಬಾರದು ಎಂದು ಚಿಕ್ಕದೇವರಾಜ ಒಡೆಯರ ಅಪೇಕ್ಷೆ. ಅಧಿಕಾರಿಗಳು ಮದುವೆ, ಮುಂಜಿ ಮೊದಲಾದ ಸಮಾರಂಭಗಳಿಗೆ ತಮ್ಮ ಆದಾಯಕ್ಕೆ ಮೀರಿ ಹಣ ಖರ್ಚು ಮಾಡುಕೂಡದೆಂದು ವಿಧಿಸಲಾಗಿತ್ತು.

ಮದುವೆ, ಮುಂಜಿ ಮುಂತಾದ ಸಮಾರಂಭಗಳಲ್ಲಿ ತಮ್ಮ ವೈಭವ ಮೆರೆಸಲು ಅಧಿಕಾರಿಗಳು ಬಹಳ ಹಣ ಖರ್ಚು ಮಾಡಬಹುದು; ಈ ಹಣ ಅವರಿಗೆ ಬರುವುದು ಹೇಗೆ? ಲಂಚಕ್ಕೆ ಕೈ ಒಡ್ಡುತ್ತಾರೆ, ಅಥವಾ ಸಾಲ ಮಾಡುತ್ತಾರೆ. ಸಾಲ ಕೊಟ್ಟವರು ಹೇಳಿದ ಹಾಗೆ ಕೇಳಬೇಕಾಗುತ್ತದೆ. ಇದೆಲ್ಲವನ್ನೂ ಯೋಚಿಸಿಯೇ ಚಿಕ್ಕದೇವರಾಜರು ಈ ಕಟ್ಟುಪಾಡನ್ನು ಮಾಡಿದ್ದು. ಒಂದೆರಡು ಸಂದರ್ಭಗಳಲ್ಲಿ ಕೆಲವು ಅಧಿಕಾರಿಗಳು ಹೆಚ್ಚು ಹಣ ಖರ್ಚು ಮಾಡಿದರು; ರಾಜರಿಗೆ ಇದು ತಿಳಿಯಿತು. ಅವರು ಆ ಅಧಿಕಾರಿಗಳನ್ನೂ ಸಾಲ ಕೊಟ್ಟವರನ್ನೂ ವಿಚಾರಿಸಿ, ಇಬ್ಬರಿಗೂ ಶಿಕ್ಷೆ ವಿಧಿಸಿದರು. ಒಡೆಯರ ಈ ನಿರ್ದಾಕ್ಷಿಣ್ಯ ಕಟ್ಟು ಪಾಡಿನಿಂದ ಅಧಿಕಾರಿಗಳು ಭಯಭೀತಿಯಿಂದಲೂ ನಿಷ್ಠೆ ದಕ್ಷತೆಗಳಿಂದಲೂ ಪ್ರಾಮಾಣಿಕತೆ ಯಿಂದಲೂ ತಮ್ಮ ಕೆಲಸಗಳನ್ನು ನಿರ್ವಹಿಸುತ್ತಿದ್ದರು.

ಹೆಚ್ಚು ಹಣ ಖರ್ಚು ಮಾಡಿದ ಅಧಿಕಾರಿಗಳನ್ನೂ ಸಾಲ ಕೊಟ್ಟವರನ್ನೂ

ಚಿಕ್ಕದೇವರಾಜರು ಶಿಕ್ಷಿಸಿದರು.

ಒಂದು ರಾಜ್ಯದ ಆಡಳಿತಕ್ಕೆ ಅಧಿಕಾರಿಗಳೂ ಬಹು ಮುಖ್ಯ. ಆದರೆ ಆ ಅಧಿಕಾರಿಗಳು ಸರಿಯಾಗಿ, ಪ್ರಾಮಾಣಿಕರಾಗಿ ಕೆಲಸ ಮಾಡುತ್ತಾರೆಯೇ ಎಂದು ಸದಾ ಗಮನಿಸುವುದೂ ಬಹು ಮುಖ್ಯ. ಚಿಕ್ಕದೇವರಾಜ ಒಡೆಯರು ಆಡಳಿತದ ಪ್ರತಿ ಇಲಾಖೆಯನ್ನೂ ತಾವೇ ಸ್ವತಃ ಪರಿಶೀಲಿಸುತ್ತಿದ್ದರು. ಹದಿನೆಂಟು ಇಲಾಖೆಗಳ ಮುಖ್ಯ ಅಧಿಕಾರಿಗಳು ಪ್ರತಿದಿನ ಮುಂಜಾನೆ ಅರಮನೆಗೆ ಬಂದು ಒಡೆಯರಿಗೆ ಹಿಂದಿನ ದಿನದ ತಮ್ಮ ಇಲಾಖೆಯ ಕೆಲಸದ ವರದಿಯನ್ನು ಒಪ್ಪಿಸಬೇಕಾಗಿತ್ತು.

ಚಿಕ್ಕದೇವರಾಜ ಒಡೆಯರು ಆಡಳಿತ ವಹಿಸಿಕೊಂಡ ಹೊಸದರಲ್ಲಿಯೇ ಮಾಡಿದ ಅತ್ಯಂತ ಪ್ರಗತಿಪರ ಕಾರ್ಯವೆಂದರೆ ಅಂಚೆಯ ವ್ಯವಸ್ಥೆ. ಈ ವ್ಯವಸ್ಥೆ ವಿಶೇಷವಾಗಿ ಸರ್ಕಾರಿ ಕಾರ್ಯಕ್ಕೆ ವಿನಿಯೋಗವಾಗುತ್ತಿತ್ತು. ದೇಶದ ಮೂಲೆ ಮೂಲೆಗಳಲ್ಲಿ ಏನಾಗುತ್ತಿದೆ ಎಂಬುದು ರಾಜರಿಗೆ ತಿಳಿಯಬೇಕಲ್ಲವೆ? ಆಗಿನ ಕಾಲದಲ್ಲಿ ರೈಲಿಲ್ಲ, ಬಸ್ಸಿಲ್ಲ, ರೇಡಿಯೋ ಇಲ್ಲ. ಓಡುವ ಅಂಚೆಯ ಬಂಟರು ಅಥವಾ ಕುದುರೆಯ ಸವಾರರು ಪ್ರತಿದಿನ ವರದಿಯನ್ನು ರಾಜಧಾನಿಗೆ ತಂದುಕೊಡುವಂತೆ ಏರ್ಪಾಟು ಆಗಿದ್ದಿತು. ಈ ವ್ಯವಸ್ಥೆಯಿಂದ ದೇಶದ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗಳ ದಕ್ಷತೆ, ಪ್ರಾಮಾಣಿಕತೆ, ನಿಷ್ಠೆ ಮತ್ತು ನಡತೆಗಳ ವರದಿ ಅರಸರಿಗೆ ಪ್ರತಿದಿನವೂ ಬರುತ್ತಿದ್ದಿತು. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಲಿಲ್ಲವೆಂದು ತಿಳಿದರೆ ಮತ್ತು ಸನ್ನಡತೆಯಿಂದ ವರ್ತಿಸುತ್ತಿಲ್ಲವೆಂದಾಗಲಿ ಅಥವಾ ಪ್ರಾಮಾಣಿಕರಲ್ಲವೆಂದಾಗಲಿ ತಿಳಿದರೆ ತಕ್ಷಣವೇ ಅವರನ್ನು ವಿಚಾರಿಸಿ, ತಪ್ಪು ಸಿದ್ಧವಾದರೆ ಉಗ್ರ ಶಿಕ್ಷೆಯನ್ನು ವಿಧಿಸುತ್ತಿದ್ದರು. ದೊಡ್ಡ ಅಪರಾಧಗಳನ್ನು ಮಾಡಿದ ಅಧಿಕಾರಿಗಳು ಕಾಶಿ, ರಾಮೇಶ್ವರಗಳಿಗೆ ಯಾತ್ರೆ ಹೋಗಿಬರಬೇಕೆಂದು ವಿಧಿಸಲಾಗುತ್ತಿತ್ತು. ಹಾಗೆ ಯಾತ್ರೆ ಮುಗಿಸಿಕೊಂಡು ವಾಪಸು ಬಂದ ಅಪರಾಧಿಗಳನ್ನು ಕ್ಷಮಿಸಿ ಮತ್ತೆ ಅಧಿಕಾರಕ್ಕೆ ತೆಗೆದುಕೊಂಡ ನಿದರ್ಶನಗಳು ಇವೆ. ದಕ್ಷರು, ಪ್ರಾಮಾಣಿಕರು ಆದ ಅಧಿಕಾರಿಗಳನ್ನು ಗೌರವಿಸಿ ವಿಶೇಷ ಉಡುಗೊರೆಗಳನ್ನು, ಬಿರುದುಗಳನ್ನು ನೀಡಲಾಗುತ್ತಿತ್ತು.

ಚಿಕ್ಕದೇವರಾಜ ಒಡೆಯರು ತುಂಬಾ ದೂರದೃಷ್ಟಿಯುಳ್ಳ ಅತ್ಯಂತ ಚಾಣಾಕ್ಷರಾದ ದೊರೆ. ಬೆಂಗಳೂರನ್ನು ಕೊಂಡು ಕೊಂಡಮೇಲೆ, ಮುನ್ನೂರು ವರ್ಷಗಳ ಕೆಳಗೇ ಅದನ್ನು ಒಂದು ಕೈಗಾರಿಕಾ ಕೇಂದ್ರವನ್ನಾಗಿ ಮಾಡಬಹುದೆಂದು ಅವರು ಯೋಚಿಸಿದ್ದರು. ಎಂತಹ ದೂರದೃಷ್ಟಿ! ದೇಶದ ಬೇರೆಬೇರೆ ಕಡೆಗಳಿಂದ ಹನ್ನೆರಡು ಸಾವಿರ ನೇಕಾರರನ್ನು ಕರೆಯಿಸಿ ಬೆಂಗಳೂರಿನಲ್ಲಿ ನೆಲೆಸಲು ಅನುವು ಮಾಡಿಕೊಟ್ಟರು. ಮತ್ತು ಅವರು ತಯಾರಿಸಿದ ಬಟ್ಟೆಯನ್ನು ಭಾರತದ ನಾನಾ ಭಾಗಗಳಲ್ಲಿ ಮಾರಾಟ ಮಾಡಲು ವ್ಯವಸ್ಥೆ ಮಾಡಿದರು. ಶ್ರೀರಂಗಪಟ್ಟಣದಲ್ಲಿ ಮದ್ದುಗುಂಡು ಮೊದಲಾದ ಸೇನೋಪಯುಕ್ತ ಉಪಕರಣಗಳನ್ನು ತಯಾರಿಸುವ ಕೇಂದ್ರಗಳನ್ನು ಅಚ್ಚುಕಟ್ಟುಗೊಳಿಸಿದರು. ರಾಜ್ಯದಾದ್ಯಂತ ಒಂದೇ ಬಗೆಯ ತೂಕದ ವ್ಯವಸ್ಥೆಯಿರಬೇಕೆಂದು ಅಳತೆ-ತೂಕದ ಉಪಕರಣಗಳನ್ನು ನಿರ್ದಿಷ್ಟಗೊಳಿಸಿ ಮಾರಾಟದ ವ್ಯವಸ್ಥೆಯನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಂಡಿದ್ದರು. ಕಾವೇರಿ ನದಿಗೆ ಅಣೆಕಟ್ಟನ್ನು ಕಟ್ಟಿ ಚಿಕ್ಕದೇವರಾಜ ನಾಲೆ ಮತ್ತು ದೇವರಾಜ ನಾಲೆ ಎಂಬ ಎರಡು ಕಾಲುವೆಗಳನ್ನು ನಿರ್ಮಿಸಿ ಮೈಸೂರಿನ ಹೆಚ್ಚಿನ ಪ್ರದೇಶವನ್ನು ನೀರಾವರಿಯಾಗುವಂತೆ ವ್ಯವಸ್ಥೆ ಮಾಡಿದ್ದರು.

ನ್ಯಾಯದಾನ

ಚಿಕ್ಕದೇವರಾಜ ಒಡೆಯರು ತುಂಬಾ ನ್ಯಾಯ ನಿಷ್ಠ ರಾಗಿದ್ದರು. ಯಾವುದೇ ಬಗೆಯ ಅಪರಾಧ ಪಾತಕಗಳನ್ನು ಅವರು ಸಹಿಸುತ್ತಿರಲಿಲ್ಲ. ವಿವಾದಗಳು ಉದ್ಭವಿಸಿದಾಗ ಅನೇಕ ವೇಳೆ ಅವರೇ ಸ್ವತಃ ವಾದಿ, ಪ್ರತಿವಾದಿಗಳನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದರು. ಅವರ ನ್ಯಾಯ ನಿರ್ಣಯ ಪದ್ಧತಿ ಅವಸರದ್ದಾಗಿರಲಿಲ್ಲ. ಏಕಪಕ್ಷೀಯವಾಗಿರಲಿಲ್ಲ. ಸಾಮಾನ್ಯವಾಗಿ ಸಾಕ್ಷ್ಯವನ್ನು ತೂಗಿನೋಡಿ ತೀರ್ಮಾನ ಕೊಡುತ್ತಿದ್ದರು. ಆದರೆ ಸಾಕ್ಷ್ಯ ಸ್ಪಷ್ಟವಾಗಿಲ್ಲದಾಗ ಆಗ ಪ್ರಚಾರದಲ್ಲಿದ್ದ ‘ತಪ್ತದಿವ್ಯ ಪ್ರಮಾಣ’ವೆಂಬ ರೀತಿಯನ್ನು ಅನುಸರಿಸುತ್ತಿದ್ದರೆಂಬುದಕ್ಕೆ ಕೆಲವು ಆಧಾರಗಳು ದೊರಕಿವೆ. ಒಮ್ಮೆ ಅರಕಲಗೂಡಿನ ಶಾನಭೋಗನಾದ ವೆಂಕಟಪತಯ್ಯ ಎಂಬುವನು ರಾಜದ್ರೋಹಿ ಎಂದೂ ಅವನಿಗೆ ಶಿಕ್ಷೆ ವಿಧಿಸಿ ಆ ಶಾನಭೋಗಿಕೆ ಯನ್ನು ಬದಲಾಯಿಸಬೇಕೆಂದೂ ನಂಜಯ್ಯನೆಂಬುವನು ಒಡೆಯರ ಬಳಿ ದೂರಿಕೊಂಡನಂತೆ. ಒಡೆಯರು ಆ ಶಾನಭೋಗನನ್ನು ಕರೆಸಿ ಅವನು ತನ್ನ ಪ್ರಾಮಾಣಿಕತೆಯನ್ನು, ನಿರಪರಾಧಿತ್ವವನ್ನು ಅರ್ಕೇಶ್ವರ ದೇವರ ಸನ್ನಿದಿಯಲ್ಲಿ ಕುದಿಯುವ ತುಪ್ಪದಲ್ಲಿ ಬೆರಳದ್ದಿ ಸಾಬೀತು ಪಡಿಸಿಕೊಳ್ಳುವಂತೆ ಆಜ್ಞಾಪಿಸಿದರಂತೆ. ಇದೇ ‘ತಪ್ತದಿವ್ಯ ಪ್ರಮಾಣ’ ಎನ್ನುವುದು. ಒಡೆಯರ ಆ ಆಜ್ಞೆಯನ್ನು ಅವನು ಅನುಸರಿಸಿ ಶಾನಭೋಗಿಕೆಯನ್ನು ಉಳಿಸಿಕೊಂಡ ಶಾಸನ ಒಂದುಂಟು.

ಚಿಕ್ಕದೇವರಾಜ ಒಡೆಯರ ಕಾಲದಲ್ಲಿ ಪ್ರತಿ ಪಟ್ಟಣ, ಜಿಲ್ಲೆಗಳಿಗೂ ವಿಶೇಷ ಸಿಬ್ಬಂದಿ ನೇಮಿಸುವ ಪದ್ಧತಿ ಇತ್ತು. ಈ ಸಿಬ್ಬಂದಿಯಲ್ಲಿ ಒಬ್ಬ ಕೊತ್ವಾಲನೂ ಅವನ ಅಧಿಕಾರ ಕ್ಷೇತ್ರದ ವಿಸ್ತೀರ್ಣವನ ಅನುಸರಿಸಿ ಒಬ್ಬರಿಂದ ಮೂವರವರೆಗೆ ಶಾನಭೋಗರೂ ಇರುತ್ತಿದ್ದರು. ಇವರ ಕೈಕೆಳಗೆ ಕೆಲವು ಸಂಬಳದ ನೌಕರರು, ಪೇಟೆಶೆಟ್ಟಿ, ಯಜಮಾನ ಮೊದಲಾದ ಸ್ಥಳೀಯರನ್ನು ಒಳಗೊಂಡ ಒಂದು ಮಂಡಳಿ ಇರುತ್ತಿತ್ತು. ಶಾನುಭೋಗ, ಡಂಗುರದವರು, ನಗಾರಿಯವರು,

ಕಹಳೆಯವರು, ಖಾಣೆದಾರರು, ಆಯಾ ಊರಿನ ಶಾಂತಿ ಮತ್ತು ಸುವ್ಯವಸ್ಥೆಗೆ ಹೊಣೆಗಾರರಾಗಿದ್ದರು. ಈಗಿನ ಪೊಲೀಸರಂತೆ ಇವರು ರಾತ್ರಿ ಹೊತ್ತು ಗಸ್ತು ತಿರುಗಿ ಕಳ್ಳತನವೇ ಮುಂತಾದ ಕತ್ತಲ ಹೊತ್ತಿನ ನಿರಪರಾಧಗಳನ್ನು ಪತ್ತೆ ಹಚ್ಚುತ್ತಿದ್ದರು.

ಸಾಹಿತ್ಯ ಪ್ರೀತಿ

ಹೀಗೆ ಚಿಕ್ಕದೇವರಾಜ ಒಡೆಯರು ಆದರ್ಶ ಗುಣಸಂಪನ್ನ ರಾದ ದೊರೆಯಾಗಿ ಆಡಳಿತದ ಎಲ್ಲ ವಿಭಾಗಗಳಲ್ಲಿಯೂ ಪ್ರಜಾಹಿತವನ್ನೇ ಗಮನದಲ್ಲಿಟುಕೊಂಡು ಸುವ್ಯವಸ್ಥೆಯನ್ನು ರೂಢಿಸಿದ್ದರು. ಕೇವಲ ರಾಜನೀತಿ ವಿಚಕ್ಷಣರಾಗಿ ರಾಜ್ಯಾಡಳಿತವನ್ನು ಸುಭದ್ರವಾಗಿಯೂ ಸಕ್ರಮವಾಗಿಯೂ ರೂಪಿಸುವಷ್ಟರ ಲ್ಲಿಯೇ ಅವರು ತಮ್ಮ ಜೀವಮಾನವನ್ನು ಕಳೆಯಲಿಲ್ಲ. ಸ್ವಯಂ ಸಾಹಿತಿಗಳೂ ಸಂಗೀತಗಾರರೂ ಆಗಿದ್ದ ಒಡೆಯರು ವಿದ್ವತ್‌ಜನ ಪೋಷಕರಾಗಿ ಸಾಹಿತ್ಯ, ಸಂಗೀತಗಳನ್ನು ಪೋಷಿಸಿದರು. ಒಡೆಯರ ಆಸ್ಥಾನದಲ್ಲಿ ಕವಿ ತಿರುಮಲಾರ್ಯ, ಅವರ ಸಹೋದರ ಸಿಂಗರಾರ್ಯ, ಚಿಕ್ಕುಪಾಧ್ಯಾಯ, ತಿಮ್ಮಕವಿ, ಮಲ್ಲಿಕಾರ್ಜುನ, ವೇಣುಗೋಪಾಲ, ವರಪ್ರಸಾದ, ಮಲ್ಲರಸ ಮೊದಲಾದ ಕವಿಗಳು ಹಾಗೂ ಶೃಂಗಾರಮ್ಮ, ಹೊನ್ನಮ್ಮ ಮೊದಲಾದ ಕವಯಿತ್ರಿಯರು ಇದ್ದರು. ವೀರಶೈವ ಕವಿಗಳಲ್ಲಿ ಒಬ್ಬನಾದ ಕವಿಶೇಖರ ಷಡಕ್ಷರ ಒಡೆಯರ ಮಂತ್ರಿಯಾಗಿದ್ದನು. ಈ ಕನ್ನಡ ಕವಿಗಳು, ಕವಯಿತ್ರಿಯರು ಕನ್ನಡ ಸಾಹಿತ್ಯಕ್ಕೆ ಅಪಾರ ಕಾಣಿಕೆಯಿತ್ತಿದ್ದಾರೆ. ಒಡೆಯರ ಮಂತ್ರಿಯಾಗಿದ್ದ ತಿರುಮಲಾರ್ಯನು ‘ಅಪ್ರತಿಮ ವೀರ ಚರಿತೆ’ ಎಂಬ ಲಕ್ಷಣ ಗ್ರಂಥವನ್ನು, ‘ಚಿಕ್ಕದೇವರಾಜ ವಿಜಯ’ ಎಂಬ ಚಂಪೂ ಗ್ರಂಥವನ್ನು, ‘ಚಿಕ್ಕದೇವರಾಜ ವಂಶಾವಳಿ’ ಎಂಬ ಗ್ರಂಥವನ್ನು ರಚಿಸಿದ್ದಾರೆ. ಈ ಗ್ರಂಥಗಳಲ್ಲಿ ಚಿಕ್ಕದೇವರಾಜ ಒಡೆಯರ ಜೈತ್ರ ಯಾತ್ರೆಗಳೂ ಒಡೆಯರ ಮತ್ತು ಅವರ ವಂಶಜರ ಚರಿತ್ರೆಯೂ ನಿರೂಪಿತವಾಗಿದೆ.

ತೆರಕಾಣಾಂಬಿಯ ಚಿಕ್ಕುಪಾಧ್ಯಾಯನೆಂಬ ಇನ್ನೊಬ್ಬ ಕವಿ ಆ ಕಾಲಕ್ಕೆ ಅತಿ ಹೆಚ್ಚಿನ ಗ್ರಂಥಗಳನ್ನು ರಚಿಸಿದವನೆಂದು ತಿಳಿದುಬರುತ್ತದೆ. ತಿರುಮಲಾರ್ಯನ ಸಹೋದರನಾದ ಸಿಂಗರಾರ್ಯನು ಸಂಸ್ಕೃತದ ರತ್ನಾವಳಿ ನಾಟಕವನ್ನು ಆಧರಿಸಿ ‘ಮಿತ್ರವಿಂದಾ ಗೋವಿಂದಾ’ ಎಂಬ ನಾಟಕವನ್ನು ರಚಿಸಿದ್ದಾನೆ. ಇದೇ ಕನ್ನಡದಲ್ಲಿ ಮೊಟ್ಟಮೊದಲನೆಯ ಹಳೆಗನ್ನಡದ ನಾಟಕ.

ಸಿಂಗರಾರ್ಯನ ಪ್ರೋತ್ಸಾಹದಿಂದ ಮಹಾರಾಣಿ ಯವರ ಸೇವೆಯಲ್ಲಿದ್ದ ಸಂಚಿಯ ಹೊನ್ನಮ್ಮ ಎಂಬಾಕೆ ’ಹದಿಬದೆಯ ಧರ್ಮ’ ಎಂಬ ಗ್ರಂಥವನ್ನು ರಚಿಸಿದ್ದಾಳೆ. ಇನ್ನೊಬ್ಬ ಕವಿಯಿತ್ರಿ ಶೃಂಗಾರಮ್ಮನು ತಿರುಪತಿ ಶ್ರೀನಿವಾಸ ದೇವರನ್ನು ಕುರಿತ ’ಪದ್ಮಿನಿ ಕಲ್ಯಾಣ’ ಎಂಬ ಕೃತಿಯನ್ನು ರಚಿಸಿದ್ದಾಳೆ. ಷಡಕ್ಷರ ಕವಿಯ ’ರಾಜಶೇಖರ ವಿಳಾಸ’, ‘ವೃಷಭೇಂದ್ರ ವಿಜಯ’, ‘ಶಬರ ಶಂಕರ ವಿಳಾಸ’ ಚಂಪೂ ಕಾವ್ಯಗಳು ಕನ್ನಡ ಸಾಹಿತ್ಯದಲ್ಲಿ ಸುಪ್ರಸಿದ್ಧವಾಗಿವೆ.

ಈ ದೊಡ್ಡ ಕವಿಗಳಲ್ಲದೆ ಸಣ್ಣ ಪುಟ್ಟ ಕವಿಗಳು ಅನೇಕರು ಇದ್ದರು. ಒಡೆಯರ ಸಾಮಂತ ಪಾಳೇಗಾರರಲ್ಲಿಯೂ ಕೆಲವರು ಕವಿಗಳು ಇದ್ದರೆಂದು ತಿಳಿದುಬರುತ್ತದೆ. ಸುಗಟೂರು ಪಾಳೇ ಗಾರ ಮುಮ್ಮಡಿ ತಮ್ಮೇಗೌಡ ಎಂಬುವನು ಇಂತಹವರಲ್ಲಿ ಒಬ್ಬನಾಗಿದ್ದು ಸಂಸ್ಕೃತ, ತೆಲುಗು, ಕನ್ನಡ ಭಾಷೆಗಳಲ್ಲಿ ಗ್ರಂಥ ರಚನೆ ಮಾಡಿದ್ದ.

ಗೀತ ಗೋಪಾಲ

ಡಿಳ್ಳಿಯ ಬಾಗಿಲೋಳ್ ಪರಿದು ಕೊಳ್ಳೆಯ ಕೊಂಡರೆ ಗೋಲಕೊಂಡೆಯಂ |
ಜಳ್ಳಿಸಿಯೊಕ್ಕ ಲಿಕ್ಕಿ ವಿಜಯಾಪುರಮಂ ಬರಿಗೆಯ್ದ ಸೊರ್ಕಿನಿಂ ||
ದಳ್ಳಿರಿವಾ ಶಿವಾಜಿಸುತ ಶಂಭುಜಿಯೇಳ್ಗೆಯನುರ್ಬು  ಕೊರ್ಬುಮಂ |
ತೆಳ್ಳನೆಗೆಯ್ದನದ್ಭುತ ಪರಾಕ್ರಮದಿ ಚಿಕ್ಕದೇವ ಭೂಪಂ ||

ಈ ಪದ್ಯ ಚಿಕ್ಕದೇವರಾಜೇಂದ್ರರೇ ರಚಿಸಿದ ‘ಗೀತ ಗೋಪಾಲ’ ಎಂಬ ಕಾವ್ಯದ್ದು. ಚಿಕ್ಕದೇವರಾಜ ಒಡೆಯರು ಕೇವಲ ಪಂಡಿತ ಪೋಷಕರೂ ಸಾಹಿತ್ಯಪ್ರಿಯರೂ ಮಾತ್ರವಲ್ಲ, ಸ್ವತಃ ಘನ ವಿದ್ವಾಂಸರು, ಕವಿಗಳು ಆಗಿದ್ದರು. ತಿರುಮಲಾರ್ಯರು ಬರೆದ ‘ಚಿಕ್ಕದೇವರಾಜ ವಂಶಾವಳಿ’ ಎಂಬ ಗ್ರಂಥದಲ್ಲಿ ಒಡೆಯರು ಅವರ ಚಿಕ್ಕ ವಯಸ್ಸಿನಲ್ಲಿಯೇ ಪಾಠಪ್ರವಚನಗಳಲ್ಲಿ ತೋರಿಸಿದ ಅತ್ಯಂತ ಬುದ್ಧಿ ಕೌಶಲವನ್ನು ಹೀಗೆ ಬಣ್ಣಿಸಲಾಗಿದೆ:

“……ಕುಮಾರ ಚಿಕ್ಕದೇವರಾಯನು ಓದುವಾಗ ಉಸಿರು, ಶಬ್ದ, ಅಲ್ಪಪ್ರಾಣ, ಮಹಾಪ್ರಾಣಗಳನ್ನು ತೋರುವ ಅಕ್ಷರಗಳನ್ನು ಉಚಿತ ಸ್ಥಾನದಲ್ಲಿ ಉಚ್ಚರಿಸುವ ವಾಕ್ ಪಟುತ್ವವೂ ಅಕ್ಷರಗಳು ಒಂದರೊಳಗೊಂದು ಬೆರೆತು ಅಸಂಗತವಾಗದಂತೆ ತೀರಾ ವೇಗವಾಗಿಯೂ ಅಥವಾ ನಿಧಾನವಾಗಿಯೂ ಓದದೆ ಮಧ್ಯರೀತಿಯಲ್ಲಿ ಓದುವ ವಾಚನ ಶಕ್ತಿಯೂ ಓದಿದ್ದನ್ನು ಮರೆಯದಿರುವ ಧಾರಣಶಕ್ತಿಯೂ ಹೇಳಿದುದನ್ನು ಬೇಗ ಕಲಿಯುವ ಸಾಮರ್ಥ್ಯವೂ ಅತ್ಯದ್ಭುತವಾಗಿದ್ದಿತು.”

‘ಬಾಲ್ಯದಲ್ಲೇ ಈ ಬಗೆಯ ಶಕ್ತಿಯನ್ನು ತೋರಿಸಿದ ಬಾಲಕನು ದೊಡ್ಡವನಾಗುತ್ತಾ ಪಂಡಿತರೂ ವಿದ್ವಾಂಸರೂ ಆದವರ ಸಹವಾಸದಿಂದಲೂ ವೇದೋಪನಿಷತ್ತು ಪುರಾಣಾದಿ ಗ್ರಂಥಗಳನ್ನು ಅಭ್ಯಾಸ ಮಾಡಿದುದರಿಂದಲೂ ಲೋಕಾಡಳಿತದ ಅನುಭವದಿಂದಲೂ ಅದ್ಭುತವಾದ ಕಾವ್ಯಶಕ್ತಿಯನ್ನು ರೂಢಿಸಿಕೊಂಡ.

ಚಿಕ್ಕದೇವರಾಜ ಒಡೆಯರು ‘ಚಿಕ್ಕದೇವರಾಜ ಬಿನ್ನಪ’, ‘ಗೀತ ಗೋಪಾಲ’, ‘ಭಾಗವತ’, ‘ಶೇಷಧರ್ಮ’, ‘ಭಾರತ’ ಎಂಬ ಐದು ಗ್ರಂಥಗಳನ್ನು ರಚಿಸಿದ್ದಾರೆ. ವಿಶಿಷ್ಟಾದ್ವೈತ ತತ್ತ್ವದ ಸಾರವನ್ನು ನಿರೂಪಿಸುವ ರೀತಿಯಲ್ಲಿ ಮೇಲುಕೋಟೆಯ ನಾರಾಯಣಸ್ವಾಮಿಗೆ ಮಾಡಿಕೊಂಡ ಮೂವತ್ತು ಬಿನ್ನಪಗಳು ’ಚಿಕ್ಕದೇವರಾಜ ಬಿನ್ನಪ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿವೆ. ’ಭಾಗವತ’ವು ಸಂಸ್ಕೃತ ಭಾಗವತದ ಕನ್ನಡದ ಟೀಕೆ. ಭಾರತವೂ ಸಹ ಸಂಸ್ಕೃತ ಮಹಾಭಾರತದ ಕೆಲವು ಪರ್ವಗಳ ಟೀಕಾರೂಪದ ಕನ್ನಡದ ಅನುವಾದ. ’ಗೀತ ಗೋಪಾಲ’ ಜಯದೇವ ಕವಿಯ ’ಗೀತ ಗೋವಿಂದ’ ಎಂಬ ಸಂಸ್ಕೃತ ಕಾವ್ಯದ ಮಾದರಿಯಲ್ಲಿ ರಚಿಸಿರುವ ಶ್ರೀಕೃಷ್ಣನನ್ನು ಕುರಿತ ಹಾಡುಗಬ್ಬ. ಇದರಲ್ಲಿ ಎರಡು ಭಾಗಗಳಿವೆ. ಪ್ರತಿ ಭಾಗ ದಲ್ಲಿಯೂ ಏಳು ಖಂಡಗಳಿವೆ. ಪ್ರತಿ ಖಂಡದಲ್ಲಿಯೂ ಏಳು ಪದಗಳು ಅಥವಾ ಹಾಡುಗಳು ಇವೆ. ಹೀಗೆ ಏಳು ಖಂಡಗಳೂ ಏಳು ಪದಗಳೂ ಅಥವಾ ಹಾಡುಗಳು ಇರುವು ದರಿಂದ ಪ್ರತಿ ಭಾಗವನ್ನು ಸಪ್ತಪದಿ ಎಂದು ಕರೆಯಲಾಗಿದೆ. ’ಎರಡುಂ ಭಾಗದೊಳ್ ಶ್ರೀಮನ್ ನಾರಾಯಣನ ಗುಣಾನುಭವಮಾದ ನಿತ್ಯ ಫಲಮಂ ಅವನಡಿದಾವರೆಯೋಳ್ ನಂಬುಗೆ ಎಂಬ ತದುಪಾಯ ಮುಮಂ ನಿರೂಪಿಸುವರ್’ ಎಂದು ವಿವರಿಸಿದೆ. ತಿರುಮಲಾರ್ಯನು ರಚಿಸಿರುವ ’ಚಿಕ್ಕದೇವರಾಯ ವಿಜಯ’ ಎಂಬ ಗ್ರಂಥದಲ್ಲಿರುವ ಅನೇಕ ಪದ್ಯಗಳೇ ಇಲ್ಲಿ ಇರುವುದರಿಂದ ಈ ಗ್ರಂಥವನ್ನು ತಿರುಮಲಾರ್ಯನೇ ತನ್ನ ಪ್ರಭುಮಿನ ಹೆಸರಿನಲ್ಲಿ ಬರೆದಿರ ಬಹುದೆಂದು ವಿಮರ್ಶಕರು ಸಂದೇಹಿಸುತ್ತಾರೆ.

ಸಾಹಿತ್ಯ ಕಲೆಗಳ ಆಶ್ರಯದಾತ

ಚಿಕ್ಕದೇವರಾಜ ಒಡೆಯರ ಆಸ್ಥಾನವು ಕಾವ್ಯ, ಸಂಗೀತ, ನೃತ್ಯ, ಕಲೆಗಳ ತವರಾಗಿತ್ತು ಎಂದು ಇತಿಹಾಸಕಾರರು ಬಣ್ಣಿಸುತ್ತಾರೆ. ಚಿಕ್ಕದೇವರಾಜ ಒಡೆಯರು ಸ್ವಯಂ ವೀಣಾ ವಾದನ ಪಟುಗಳಾಗಿದ್ದರು. ಒಡೆಯರ ಭವ್ಯ ಸಭಾ ಮಂಟಪಕ್ಕೆ ಸೌಂದರ್ಯವಿಲಾಸ ಎಂಬ ಹೆಸರಿದ್ದಿತು. ಒಡೆಯರು ತಮ್ಮ ಆ ಓಲಗ ಶಾಲೆಯಲ್ಲಿ ಸಂಗೀತ ವಿದ್ವನ್ಮಣಿಗಳ ಕಛೇರಿಗಳನ್ನು ಆಗಾಗ ಏರ್ಪಡಿಸುತ್ತಿದ್ದರು. ಕೆಲವೊಮ್ಮೆ ವೀಣೆ ನುಡಿಸಿ ಆಶ್ರಿತ ಪಂಡಿತವರ್ಗಕ್ಕೆ ಆನಂದವನ್ನು ಉಂಟುಮಾಡುತ್ತಿದ್ದರಂತೆ. ’ಪಾಡುವ ಗಾಯಕರು’ ಎಂಬ ಸಂಗೀತ ವಿದ್ವನ್ಮಣಿಗಳಿಗೆ ಅವರು ವಿಶೇಷ ಪ್ರೋತ್ಸಾಹ ನೀಡಿದ್ದರು. ’ಪಂಚಮಹಾ ವಾದ್ಯಗೋಷ್ಠಿ’ ಎಂಬ ವಾದ್ಯ ಗೋಷ್ಠಿಯ ಉಲ್ಲೇಖ ಅಲ್ಲಲ್ಲಿ ಕಾಣಬರುತ್ತದೆ. ಇದು ಇಂದಿನ ’ಅರ್ಕೆಸ್ಟ್ರ’ ಎಂಬ ವಾದ್ಯ ಗೋಷ್ಠಿಗಳ ಪ್ರಾಚೀನ ರೂಪವಿರಬಹುದೆ ಎಂಬುದು ಕುತೂಹಲಕಾರಿಯಾದ ವಿಷಯ.

ಚಿಕ್ಕದೇವರಾಜ ಒಡೆಯರು ’ಪಟ್ಟಾಂಬರದು ಕೂಲಗಳನ್ನು ಉಟ್ಟು ನಾನಾ ಚಿತ್ರಿತ ಕಂಚುಕಗಳನ್ನು ತೊಟ್ಟು, ತಲೆಗೆ ಕಿರೀಟವಿಟ್ಟು, ಹಣೆಗೆ ತಿಲಕವಿಟ್ಟು, ವಿಶೇಷ ಸಂಭ್ರಮದಿಂದ ರತ್ನಸಿಂಹಾಸನದಲ್ಲಿ ಕುಳಿತು ಆಸ್ಥಾನ ಕಲಾಪಗಳನ್ನು ನಡೆಸು ತ್ತಿದ್ದರು. ಆಸ್ಥಾನದಲ್ಲಿ ಪುರಾಣ, ವೈಷ್ಣಮತ ಸಿದ್ಧಾಂತದ ಮೇಲೆ ಚರ್ಚೆ ನಡೆಸುತ್ತಿದ್ದರು. ಅರ್ಥಶಾಸ್ತ್ರ, ರಾಜನೀತಿ, ಕಾವ್ಯಗಳನ್ನು ಕುರಿತು ಆಯಾ ಶಾಸ್ತ್ರ ಬಲ್ಲರಿಂದ ಜಿಜ್ಞಾಸೆ ನಡೆಯುತ್ತಿದ್ದಿತು. ಅಧೀನ ಸಾಮಂತರು, ಆಶ್ರಿತ ಪಾಳೇಗಾರರು, ಕಪ್ಪಕಾಣಿಕೆ ಗಳನ್ನು ಒಪ್ಪಿಸಿ ತಮ್ಮ ಭಕ್ತಿ ಗೌರವಗಳನ್ನು ಸೂಚಿಸುತ್ತಿದ್ದರು. ಸಭೆಯಲ್ಲಿ ಭಾಗವಹಿಸಿದ ಗಾಯಕರೂ ನರ್ತಕರೂ ವಿದ್ವಾಂಸ ರುಗಳಿಗೂ ಒಡೆಯರು ಬೆಲೆಬಾಳುವ ಉಡುಗೊರೆಗಳನ್ನು ಕೊಟ್ಟು ಸಭೆ ಮುಗಿಸುತ್ತಿದ್ದರು. ಇವರ ಕಾಲದಲ್ಲಿ ಸಾಹಿತ್ಯ, ಕಲೆಗಳ ಅಭಿವೃದ್ಧಿ ತುಂಬಾ ಉತ್ಸಾಹದಿಂದ ನಡೆಯಿತು.

ಧರ್ಮಕಾರ್ಯಗಳು

ಚಿಕ್ಕದೇವರಾಜ ಒಡೆಯರಿಗೆ ’ಶ್ರೀವೈಷ್ಣವ ಮತ ಪ್ರತಿಷ್ಠಾಪಕ’ ಎಂಬ ಬಿರುದು ಇದ್ದಿತು. ಒಡೆಯರು ನಿಷ್ಠಾವಂತ ಶ್ರೀವೈಷ್ಣವರಾಗಿದ್ದರು. ಆದರೆ ಸಂಕುಚಿತ ಮನೋಭಾವದವ ರಾಗಿರಲಿಲ್ಲ. ಸಾಂಖ್ಯ, ಮೀಮಾಂಸೆ, ಜೈನಧರ್ಮಗಳ ಬಗೆಗೂ ವಿಶೇಷ ಆಸಕ್ತರಾಗಿ ಸಾಕಷ್ಟು ಅಭ್ಯಾಸ ಮಾಡಿದ್ದರು. ಅವರ ಮಂತ್ರಾಲೋಚನ ಸಭೆಯಲ್ಲಿ ಬ್ರಾಹ್ಮಣ, ಜೈನ, ವೀರಶೈವ ವಿದ್ವನ್ಮಣಿಗಳು ಇದ್ದುದು ಅವರ ವಿಶಾಲ ಮನೋಭಾವಕ್ಕೆ ನಿದರ್ಶನವಾಗಿದೆ. ಒಡೆಯರು ಮೈಸೂರಿನಲ್ಲಿ ಶ್ವೇತವರಾಹ, ಹರದನಹಳ್ಳಿಯಲ್ಲಿ ಗೋಪಾಲಕೃಷ್ಣ, ವರ್ಕೋಡಿಯಲ್ಲಿ ವರದರಾಜಸ್ವಾಮಿಯ ದೇವಾಲಯಗಳನ್ನು ನಿರ್ಮಿಸಿ ಅವುಗಳು ಶಾಶ್ವತವಾಗಿ ನಡೆದುಕೊಂಡು ಬರಲು ದತ್ತಿಗಳನ್ನು ಸ್ಥಾಪಿಸಿದ್ದರು. ಮೇಲುಕೋಟೆಯಲ್ಲಿ ಶ್ರೀ ನಾರಾಯಣ ಸ್ವಾಮಿಯ ವೈರಮುಡಿ ಉತ್ಸವಕ್ಕೆ ವಿಶೇಷ ಪ್ರಾಧಾನ್ಯ ನೀಡಿದ್ದರಲ್ಲದೆ ಗಜೇಂದ್ರೋತ್ಸವವೆಂಬ ಹೊಸ ಉತ್ಸವವನ್ನು ನಡೆಸಲು ಆರಂಭಿಸಿದರು. ಶ್ರವಣಬೆಳಗೊಳದಲ್ಲಿ ಯಾತ್ರಾರ್ಥಿಗಳಿಗಾಗಿ ಸರೋವರ ಒಂದನ್ನು ನಿರ್ಮಿಸಿದರು. ನಿಷ್ಠ ಶ್ರೀವೈಷ್ಣವರಾದರೂ ಅವರ ಪೂರ್ವಿಕರಂತೆ ಶೈವ ಸಂಪ್ರದಾಯವನ್ನು ಪರಿಪಾಲಿಸಿ ಕೊಂಡು ಜಂಗಮರನ್ನು ಸತ್ಕರಿಸುತ್ತಿದ್ದರು. ದೇವಸ್ಥಾನಗಳಲ್ಲಿ ದೇವರ ಹೆಸರಿನಲ್ಲಿ ಪ್ರಾಣಿಬಲಿ ನಡೆಯುವುದನ್ನು ನಿಷೇಧಿಸಿ ಅದರ ಬದಲಾಗಿ ಬಲಿಪೀಠದ ಮುಂದೆ ತೆಂಗಿನಕಾಯಿಗಳನ್ನು ಒಡೆಯಬೇಕೆಂದು ಆಜ್ಞಾಪಿಸಿದರು. ಅತ್ಯಂತ ಉದಾರಿಗಳಾಗಿದ್ದ ಒಡೆಯರು ಷೋಡಶ ಮಹಾದಾನಗಳನ್ನು ಮಾಡಿ ವಿದ್ವಾಂಸ ರಿಗೆ ಅಗ್ರಹಾರಗಳನ್ನು ಮಾಡಿಸಿಕೊಟ್ಟಿದ್ದರು.

ಚಿಕ್ಕದೇವರಾಜ ಒಡೆಯರಿಗೆ ಅವರ ರಾಜಧಾನಿ ಶ್ರೀರಂಗ ಪಟ್ಟಣದ ಬಗ್ಗೆ ವಿಶೇಷವಾದ ಅಭಿಮಾನವಿದ್ದಿತು. ಅವರು ಪದೇಪದೇ ನಗರದಲ್ಲಿ ಸುತ್ತಾಡುತ್ತಿದ್ದರು. ಕಾವೇರಿಯಿಂದ ಸುತ್ತಲ್ಪಟ್ಟ ಶ್ರೀರಂಗಪಟ್ಟಣವು ಗುರುಕವಿ ಪ್ರಾಜ್ಞರಿಂದ ತುಂಬಿತ್ತಂತೆ. ಆಗಿನ ಕಾಲದ ಇನ್ನೊಂದು ಮುಖ್ಯ ನಗರ ಮಳವಳ್ಳಿ. ಅಲ್ಲಿ ವೇದಾಂತ, ಶ್ರುತಿ, ಸ್ಮೃತಿ, ಧರ್ಮಶಾಸ್ತ್ರಗಳನ್ನು ಅರಿತ ಪಂಡಿತವರೇಣ್ಯರು ತುಂಬಿದ್ದರೆಂದೂ ಒಡೆಯರು ಅಲ್ಲೊಂದು ವಿಶಾಲವಾದ ಸರೋವರವನ್ನು ನಿರ್ಮಿಸಿದ್ದ ರೆಂದೂ ತಿಳಿದುಬರುತ್ತದೆ.

ಮಹೋಜ್ವಲ ವ್ಯಕ್ತಿ

ಸುಮಾರು ೧೬೨೮ ರಲ್ಲಿ ಜನಿಸಿ ರಾಜಯೋಗ್ಯವಾದ ಶಿಕ್ಷಣವನ್ನು ಪಡೆದರೂ ವಿಧಿಯ ವಂಚನೆಯಿಂದ ಹಲವು ವರ್ಷಗಳ ಕಾಲ ಬಂಧನದಲ್ಲಿ ಕಳೆದು ತಮ್ಮ ೪೫ ನೆಯ ವರ್ಷದಲ್ಲಿ ಪಟ್ಟಕ್ಕೆ ಏರಿದ ಚಿಕ್ಕದೇವರಾಜ ಒಡೆಯರು ಎಲ್ಲ ರೀತಿಯಿಂದಲೂ ‘ಪೃಥ್ವೀಪತಿ’ ಎಂಬ ಬಿರುದಿಗೆ ಅತ್ಯಂತ ಅರ್ಹ ದೊರೆಯಾಗಿದ್ದರು. ಮೂವತ್ತೊಂದು ವರ್ಷಗಳ ಕಾಲ ಯಶಸ್ವಿಯಾಗಿ ರಾಜ್ಯಭಾರ ನಡೆಸಿದ ಈ ಮಹೋಜ್ವಲ ವ್ಯಕ್ತಿ ಮೈಸೂರಿನ ಇತಿಹಾಸದಲ್ಲಿ ಅಭೂತಪೂರ್ವರೆನಿಸಿದ್ದಾರೆ.

ಚಿಕ್ಕದೇವರಾಜ ಒಡೆಯರು ಪಟ್ಟಕ್ಕೆ ಬಂದಾಗ ದಕ್ಷಿಣ ಭಾರತ ಒಡೆದು ಛಿದ್ರವಾಗುವ ಅವ್ಯವಸ್ಥೆಯಲ್ಲಿ ಇದ್ದಿತು. ಮೈಸೂರು ಅದಕ್ಕೆ ಹೊರತಾಗಿರಲಿಲ್ಲ. ಚಿಕ್ಕದೇವರಾಜ ಒಡೆಯರಲ್ಲದೆ ಬೇರೆ ಯಾರಾದರೂ ಆಗಿದ್ದರೆ ಮೈಸೂರು ಸಂಸ್ಥಾನವಾಗಿ ಉಳಿಯುವ ಭರವಸೆಯೇ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪಟ್ಟಕ್ಕೆ ಬಂದ ಒಡೆಯರು ತಮ್ಮ ಶಕ್ತಿ ಸಾಮರ್ಥ್ಯಗಳಿಂದ ತಮ್ಮ ಗದ್ದುಗೆಯನ್ನು ಭದ್ರಪಡಿಸಿ ಕೊಂಡರಷ್ಟೇ ಅಲ್ಲದೆ ಒಳಹೊರಗಿನ ಶತ್ರುಗಳನ್ನು ಸದೆಬಡಿದು ದಕ್ಷಿಣದಲ್ಲಿ ಪಳಿನಿ, ಅಣ್ಣಾಮಲೈಗಳಿಂದ ಉತ್ತರದಲ್ಲಿ ಮಿಡಿಗೇಸಿಯವರೆಗೆ, ಪೂರ್ವದಲ್ಲಿ ಬಾರಾಮಹಲ್‌ನಿಂದ ಪಶ್ಚಿಮದಲ್ಲಿ ಕೊಡಗಿನವರೆಗೂ ರಾಜ್ಯವನ್ನು ವಿಸ್ತರಿಸಿ ‘ಕರ್ನಾಟಕ ಚಕ್ರವರ್ತಿ’ ಎಂಬ ಸಾರ್ಥಕ ಬಿರುದನ್ನು ಪಡೆದರು. ರಾಜ್ಯವನ್ನು ವಿಸ್ತರಿಸಿದ್ದು ಮಾತ್ರವಲ್ಲದೆ ಪ್ರಜೆಗಳು ಸುಖ ಸಂತೋಷಗಳಿಂದಲೂ ರಾಜ್ಯವು ಸಮೃದ್ಧ ಸುಸ್ಥಿತಿಯಿಂದಲೂ ಇರುವಂತೆ ಪ್ರಶಸ್ತವಾದ ವ್ಯವಸ್ಥೆಗಳನ್ನು ಮಾಡಿ ತಮ್ಮ ಎಪ್ಪತ್ತಾರನೆಯ ವಯಸ್ಸಿನಲ್ಲಿ ದಿವಂಗತರಾದರು.

ಮೈಸೂರಿನ ಇತಿಹಾಸದಲ್ಲಿ ಚಿಕ್ಕದೇವರಾಜ ಒಡೆಯರು ಚಿರಸ್ಮರಣೀಯ ಮಹಾವ್ಯಕ್ತಿಯಾಗಿದ್ದಾರೆ.