ಶ್ರೀ ಕೋದಂಡರಾಮಚಂದ್ರಸ್ವಾಮಿ ದೇವಾಲಯ ಹಿರೇಮಗಳೂರು:

ಜಿಲ್ಲೆಯಿಂದ ೪ ಕಿ.ಮೀ
ತಾಲ್ಲೂಕಿನಿಂದ ೪ ಕಿ.ಮೀ

ಕನ್ನಡನಾಡು ಸೊಬಗಿನ ನಾಡು, ಸೌಂದರ್ಯದ ಬೀಡು ಶಿಲ್ಪ ಕಲೆಗಳ ತವರೂರು, ಗಂಗಾ, ಕದಂಬ, ಚೋಳ, ಚೇರ, ಪಾಂಡ್ಯ, ಹೊಯ್ಸಳರ ಕಾಲದ ವೈಭವವನ್ನು ಕಂಡ ಈ ನಾಡಿನಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳು ಕೀರ್ತಿ ಕಳಶದಂತೆ ಶೋಭಿಸುತ್ತಿದೆ. ಇಂತಹ ಶ್ರೇಷ್ಠ ಸ್ಥಳಗಳಲ್ಲಿ ಹಿರೇಮಗಳೂರಿನ ಶ್ರೀ ಕೋದಂಡರಾಮಚಂದ್ರಸ್ವಾಮಿ ದೇವಾಲಯವು ಒಂದಾಗಿದೆ. ಪ್ರಾಚೀನ ಕಾಲದ ಈ ದೇವಾಲಯಕ್ಕೆ ಪ್ರಸಿದ್ದ ಇತಿಹಾಸವಿದೆ. ಶ್ರೀ ರಾಮನು ವನವಾಸದಲ್ಲಿದ್ದಾಗ ಒಂದುದಿನ ಇಲ್ಲಿ ಉಳಿದಿದ್ದನೆಂದು ಪ್ರತೀತಿಯಿದೆ. ಅತ್ಯಂತ ಎತ್ತರದ ಮೂರ್ತಿಗಳುಳ್ಳ ದೇವಾಲಯದ ವಿಶೇಷವೆಂದರೆ ರಾಮನ  ಬಲಭಾಗದಲ್ಲಿ ಸೀತಾಮಾತೆಯ ವಿಗ್ರಹವನ್ನು ಇಲ್ಲಿ ನಾವು ಕಾಣಬಹುದು. ಅತ್ಯಂತ ಸಮೀಪದಲ್ಲಿ ದರ್ಶನ ಪಡೆಯುವ ದೇವಾಲಯಗಳಲ್ಲಿ ಇದು ಒಂದು. ಹಿರೇಮಗಳೂರು ಅರ್ಚಕರಾದ ಶ್ರೀ ಕಣ್ಣನ್ ರವರಿಂದ ದೇವಾಲಯ ದಿನೇ ದಿನೇ ಪ್ರಸಿದ್ದಿ ಪಡೆಯುತ್ತಿದೆ. ಕನ್ನಡದ ಪೂಜಾರಿಯೆಂದೇ ಹೆಸರು ಪಡೆದಿರುವ ಅವರು ಕನ್ನಡದಲ್ಲೇ ಎಲ್ಲಾ ಶ್ಲೋಕಗಳನ್ನು ಹೇಳುತ್ತಾ ಪೂಜೆ ಮಾಡುವುದನ್ನು ಈಗಲೂ ಕಾಣಬಹುದು. ಇದನ್ನು ದಕ್ಷಿಣದ ಕಾಶಿ ಎಂದು ಕರೆಯಲಾಗುತ್ತದೆ. ದೇಶ ವಿದೇಶಗಳಿಂದ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿ ಪ್ರತಿ ಕಲ್ಲಿನ ಮೇಲು ಸೂಕ್ತಿಗಳನ್ನು ಬರೆದಿರುತ್ತಾರೆ. ಆ ಸೂಕ್ತಿಗಳು ಜೀವನಕ್ಕೆ ಮಾರ್ಗದರ್ಶನ ಮಾಡುವಂತಹ ಸೂಕ್ತಿಗಳಾಗಿವೆ.

 

ಮಹಾತ್ಮಾ ಗಾಂಧಿ ಪಾರ್ಕ್(ರತ್ನಗಿರಿ ಬೋರೆ):

ಜಿಲ್ಲೆಯಿಂದ ೨ ಕಿ.ಮೀ
ತಾಲ್ಲೂಕಿನಿಂದ ೨ ಕಿ.ಮೀ

ಜಿಕ್ಕಮಗಳೂರು ನಗರದ ಉತ್ತರ ಭಾಗದಲ್ಲಿ ರಾಮನಹಳ್ಳಿ ಪ್ರದೇಶದಲ್ಲಿ ಐತಿಹಾಸಿಕ ರತ್ನಗಿರಿ ಬೋರೆ ಇದ್ದು. ಇದನ್ನು ಇತ್ತೀಚಿಗೆ ಮಹಾತ್ಮ ಗಾಂಧಿ ಪಾರ್ಕ್ ಆಗಿ ಅಭಿವೃದ್ಧಿ ಪಡಿಸಲಾಗಿದೆ. ಈ ಬೋರೆಯು ಗಿಡ ಮರಗಳಿಂದ ಕಂಗೊಳಿಸುತ್ತಿದ್ದು, ಇಲ್ಲಿ ಮಕ್ಕಳ ಮನೋರಂಜನೆಗಾಗಿ ಸಂಗೀತ ಕಾರಂಜಿ, ಪುಟಾಣಿ ರೈಲು, ತಾವರೆ ಕೊಳ, ಔಷದಿ ವನ, ಬಾಲ ವನ ಇತ್ಯಾದಿಗಳನ್ನು ನಿರ್ಮಿಸಲಾಗಿದೆ.

 

ದತ್ತಾತ್ರೇಯ ಪೀಠ/ಬಾಬಾಬುಡನ್ ಗಿರಿ

ಜಿಲ್ಲೆಯಿಂದ ೩೨ ಕಿ.ಮೀ
ತಾಲ್ಲೂಕಿನಿಂದ ೩೨ ಕಿ.ಮೀ

ಪಶ್ಚಿಮ ಘಟ್ಟಗಳಲ್ಲಿರುವ ೧೮೫ ಮೀ. ಎತ್ತರದ ಈ ಶಿಖರ ಚಿಕ್ಕಮಗಳೂರಿನಿಂದ ೩೫ ಕಿ.ಮೀ ದೂರದಲ್ಲಿದ್ದು, ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುತ್ತಿದೆ. ೧೭ ನೇ ಶತಮಾನದಲ್ಲಿದ್ದ ಬಾಬಾ ಬುಡನ್ ಎಂಬ ಮುಸ್ಲಿಂ ಸಂತನಿಂದ ಹೆಸರು ಪಡೆದುಕೊಂಡಿದ್ದ ಬೆಟ್ಟದ  ಮೇಲಿರುವ ದತ್ತಾತ್ರೇಯ ಪೀಠ ಹಿಂದೂ ಮುಸ್ಲಿಂರಿಬ್ಬರಿಂದಲೂ ಪೂಜಿಸಲ್ಪಡುತ್ತದೆ. ದತ್ತಾತ್ರೇಯ ಸ್ವಾಮಿ ಹಾಗೂ ಹಜ್ರತ್ ದಾದಾ ಹಯಾತ್ ಮಿರ್ ಕಲಂದರ್ ರವರ ವಾಸಸ್ಥಾನವಾಗಿದ್ದು ಪಾವಿತ್ರ್ಯತೆ ಪಡೆದುಕೊಂಡಿದೆ ಹಾಗೂ ಈ ನಂಬಿಕೆಯಿಂದ ಈ ಗುಹೆಯು ಇಲ್ಲಿ ಆಕರ್ಷಣಾ ಕೇಂದ್ರವಾಗಿದ್ದು. ದತ್ತ ಜಯಂತಿ ಆಚರಣೆಯೂ ಸಹ ನಡೆಯುತ್ತಿದೆ.

 

ಮಾಣಿಕ್ಯ ಧಾರಾ

ಜಿಲ್ಲೆಯಿಂದ ೩೫ ಕಿ.ಮೀ
ತಾಲ್ಲೂಕಿನಿಂದ ೩೫ ಕಿ.ಮೀ

ಬಾಬಾ ಬುಡನ್ ಗಿರಿಯಿಂದ ೩ ಕಿ.ಮೀ ದೂರದ ಮಾಣಿಕ್ಯಧಾರಾ ಜಲಪಾತ ಮನಕ್ಕೆ ಮುದ ನೀಡುತ್ತದೆ. ಎತ್ತರದಿಂದ ಬೀಳುವ ನೀರಿನ ದೃಶ್ಯವನ್ನು ನೋಡಲು ನಯನಮನೋಹರವಾಗಿದೆ.

 

ಮುತ್ತೋಡಿ ಅಭಯಾರಣ್ಯ

ಜಿಲ್ಲೆಯಿಂದ ೩೨ ಕಿ.ಮೀ
ತಾಲ್ಲೂಕಿನಿಂದ ೩೨ ಕಿ.ಮೀ

ಮುತ್ತೋಡಿ, ವನ್ಯಜೀವಿಗಳ ಧಾಮವಾಗಿದೆ. ತನ್ನ ಜೀವ ರೇಖೆಯಾಗಿರುವ ಭದ್ರಾನದಿಯಿಂದ ಈ ಹೆಸರನ್ನು ಪಡೆದುಕೊಂಡಿರುವ ಈ ಅಭಯಾರಣ್ಯವು ಬೆಟ್ಟ ಗುಡ್ಡಗಳಿಂದ ಕೂಡಿದ್ದು ೧೯೬೮ ಚ.ಕಿ.ಮೀ ವಿಸ್ತೀರ್ಣ ಹೊಂದಿದ್ದು ಭದ್ರಾ ನದಿಯು ಈ ಪ್ರದೇಶದಲ್ಲಿ ಹರಿಯುತ್ತಿದೆ. ಈ ಮುತ್ತೋಡಿ ಅಭಯಾರಣ್ಯ ಅನೇಕ ವಿಧವಾದ, ಬೆಲೆಬಾಳುವ ಮರಗಿಡಗಳಿಂದ ಕೂಡಿದ್ದು ಹಚ್ಚ ಹಸಿರಿನಿಂದ ತುಂಬಿದೆ. ಅಭಯಾರಣ್ಯದಲ್ಲಿ ಉಗ್ರವಾದ ಹುಲಿ, ಇಂಡಿಯನ್ ಕಾಡೆಮ್ಮೆ, ಪಟ್ಟೆಕಿರುಬದ ವಿಚಿತ್ರ ಕೂಗು ಕೇಳಲು, ದೈತ್ಯ ಮರಗಳ ನಡುವೆ ಜಾರಿಕೊಂಡು ಹೋಗುವ ಹಲ್ಲಿಗಳನ್ನು ನೋಡಲು ಇದೊಂದು ಉತ್ತಮ ಸ್ಥಳ. ಈ ಧಾಮದ ದಕ್ಷಿಣ ಭಾಗದಲ್ಲಿ ಪಕ್ಷಿಗಳು, ಚಿಟ್ಟೆಗಳು, ಉರಗಗಳು  ಯಥೇಚ್ಚವಾಗಿವೆ. ಪಶ್ಚಿಮ ಘಟ್ಟಗಳಲ್ಲೇ ವಿಶೇಷವಾಗಿ ಕಂಡುಬರುವ ೨೫೦ ಕ್ಕೂ ಮೀರಿದ ಪಕ್ಷಿ ಪ್ರಭೇದವನ್ನು ಇಲ್ಲಿ ಗುರುತಿಸಲಾಗಿದೆ.

 

ಮುಳ್ಳಯ್ಯನ ಗಿರಿ

ಜಿಲ್ಲೆಯಿಂದ ೨೭ ಕಿ.ಮೀ
ತಾಲ್ಲೂಕಿನಿಂದ ೨೭ ಕಿ.ಮೀ

ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿ ಕರ್ನಾಟಕದಲ್ಲೇ ಅತ್ಯಂತ ಎತ್ತರವಾದ ಶಿಖರ ಮುಳ್ಳಯ್ಯನಗಿರಿ. ಇದು ಚಿಕ್ಕಮಗಳೂರಿನಿಂದ ೨೭ ಕಿ.ಮೀ ಗಳ ದೂರದಲ್ಲಿದೆ. ಇಲ್ಲಿ ಮುಳಯ್ಯಸ್ವಾಮಿ ದೇವಸ್ಥಾನವಿದ್ದು, ಇದು ಚಾರಣಕ್ಕೆ ಪ್ರಸಿದ್ದವಾಗಿದೆ.

 

ಬೆಳವಾಡಿ ದೇವಾಲಯ

ಜಿಲ್ಲೆಯಿಂದ ೨೫ ಕಿ.ಮೀ
ತಾಲ್ಲೂಕಿನಿಂದ ೨೫ ಕಿ.ಮೀ

ಬೆಳವಾಡಿಯು ಚಿಕ್ಕಮಗಳೂರಿನಿಂದ ಆಗ್ನೇಯ ದಿಕ್ಕಿಗೆ ೨೫ ಕಿ.ಮೀ ದೂರ. ಹಾಗೂ ಹಳೇಬೀಡಿನಿಂಡ ೧೦ ಕಿ.ಮೀ ಅಂತರದಲ್ಲಿದೆ. ಬೆಳವಾಡಿಯಲ್ಲಿ ವೀರನಾರಾಯಣ ದೇವಸ್ಥಾನವಿದ್ದು. ಈ ದೇವಾಲಯವು ಅದ್ಭುತ ಹೊಯ್ಸಳ ಶಿಲ್ಪಕಲೆಯನ್ನು ಒಳಗೊಂಡಿದೆ. ವೀರನಾರಾಯಣ, ಯೋಗಾನರಸಿಂಹ, ವೇಣುಗೋಪಾಲ ಸ್ವಾಮಿಯ ವಿಗ್ರಹಗಳನ್ನು ಒಂದೇ ಆಲಯ ಸಂಕೀರ್ಣದೊಳಗೆ ಪ್ರತಿಷ್ಠಾಪಿಸಿರುವ ವಿಖ್ಯಾತ ತ್ರಿಕೂಟ ದೇವಸ್ಥಾನ ನೋಡಲು ಭವ್ಯವಾಗಿದೆ. ಇದೇ ಗ್ರಾಮದಲ್ಲಿ ಉದ್ಭವ ಗಣಪತಿ ದೇವಾಲಯವಿದ್ದು ಭಕ್ತಿಯ ಕೇಂದ್ರವಾಗಿದೆ.

 

ಶ್ರೀ ಕ್ಷೇತ್ರ ಕಾಲ ಬೈರವೇಶ್ವರ ಸ್ವಾಮಿ ( ತೋರಣಮಾವು )

ಜಿಲ್ಲೆಯಿಂದ ೩೩ ಕಿ.ಮೀ
ತಾಲ್ಲೂಕಿನಿಂದ ೩೩ ಕಿ.ಮೀ

ಶ್ರೀ ಕ್ಷೇತ್ರ ಕಾಲಬೈರವೇಶ್ವರ ಸ್ವಾಮಿ ದೇವಾಲಯವು ತೋರಣ ಮಾವು ಗ್ರಾಮದಲ್ಲಿ ನಿರ್ಮಾಣವಾಗಿದ್ದು ಚಿಕ್ಕಮಗಳೂರಿನಿಂದ ಆಲ್ದೂರು ಮಾರ್ಗದಲ್ಲಿ ಸುಮಾರು ೧೫ ಕಿ.ಮೀ ಅಂತರದಲ್ಲಿದೆ. ಈ ದೇವಾಲಯಕ್ಕೆ ಸುಮಾರು ೮೦೦ ವರ್ಷಕ್ಕೂ ಹಿಂದಿನ ಇತಿಹಾಸವಿದೆ. ಈ ದೇವರನ್ನು ಚಿಕ್ಕಮಗಳೂರು ಜಿಲ್ಲೆ ಸುತ್ತಮುತ್ತಲ್ಲಿನ ೩೨ ಹಳ್ಳಿಯವರು ತಮ್ಮ ಮನೆದೇವರನ್ನಾಗಿ ಪೂಜಿಸುತ್ತಿದ್ದು ಭಕ್ತರ ಇಷ್ಠಾರ್ಥಗಳನ್ನು ಭೈರವೇಶ್ವರ ಸಿದ್ದಿಗೊಳಿಸುತ್ತಾನೆಂಬ ನಂಬಿಕೆ ಇದೆ. ಈ ದೇವಾಲಯ ನೋಡಲು ತುಂಬ ಸುಂದರವಾಗಿದೆ.

 

ಕಾಫಿ ಕ್ಯೂರಿಂಗ್

ಜಿಲ್ಲೆಯಿಂದ ೨ ಕಿ.ಮೀ
ತಾಲ್ಲೂಕಿನಿಂದ ೨ ಕಿ.ಮೀ

ಚಿಕ್ಕಮಗಳೂರು ಜಿಲ್ಲೆ ವಿಶ್ವದಲ್ಲೇ ಕಾಫಿ ಬೆಳೆಗೆ ಪ್ರಸಿದ್ದವಾಗಿದೆ. ಇಲ್ಲಿಯ ಮುಖ್ಯ ವಾಣಿಜ್ಯ ಬೆಳೆ ಕಾಫಿ. ಅರೇಬಿಕ, ರೊಬಸ್ಟ, ಕಾವೇರಿ, ಪ್ರಮುಖ ತಳಿಗಳು ಮಲೆನಾಡಿನ ಬೆಟ್ಟ ಗುಡ್ಡಗಳ ಪ್ರದೇಶದಲ್ಲಿ ಬೆಳೆಯುವ ಈ ಬೆಳೆ ಪ್ರಮುಖ ಕೃಷಿ ಉತ್ಪನ್ನ. ಕಾಫಿಯನ್ನು ಸಂಸ್ಕರಿಸಿ ರಫ್ತು ಮಾಡುವುದು ಇಲ್ಲಿನ ಪ್ರಮುಖ ಉದ್ಯೋಗ ಕೂಡ. ಈ ರೀತಿ ಸಂಸ್ಕರಿಸುವ ಕಾಫಿ ಕ್ಯೂರಿಂಗ್ ಗಳು ನಗರದಲ್ಲಿ ಸುಮಾರು ೧೫ ಕ್ಕೂ ಹೆಚ್ಚಿದ್ದು ಸಾವಿರಾರು ಜನರಿಗೆ ಉದ್ಯೋಗ ಒದಗಿಸಿದೆ.

ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯ

ಜಿಲ್ಲೆಯಿಂದ ೪ ಕಿ.ಮೀ
ತಾಲ್ಲೂಕಿನಿಂದ ೪ ಕಿ.ಮೀ

ಚಿಕ್ಕಮಗಳೂರಿನ ಮಲೆನಾಡಿನ ನಿಸರ್ಗರಮಣೀಯ ಸುಂದರ ಪರಿಸರದಲ್ಲಿ ಸ್ಥಾಪಿತವಾಗಿರುವ ಆದಿ ಚುಂಚನಗಿರಿ ತಾಂತ್ರಿಕ ಮಹಾ ವಿದ್ಯಾಲಯವು- ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಾ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಕರ್ನಾಟಕದ ಪ್ರತಿಷ್ಟಿತ ತಾಂತ್ರಿಕ ಮಾಹಾ ವಿದ್ಯಾಲಯ. ಈ ವಿದ್ಯಾಲಯವು ೬೫ ಎಕರೆ ಪ್ರದೇಶದಲ್ಲಿ ಆಧುನಿಕ ತಾಂತ್ರಿಕ ಶಿಕ್ಷಣಕ್ಕನುಗುಣವಾಗಿ ತರಗತಿ ಕೊಠಡಿಗಳು, ಆಡಳಿತ ಕಛೇರಿ, ಗಣಕೀಕೃತ ಗ್ರಂಥಾಲಯ, ಸಭಾಂಗಣಗಳು ವಿಶಾಲ ಪ್ರಯೋಗಾಲಯಗಳು, ಮಾಹಿತಿಜಾಲಕೊಠಡಿಗಳು, ರಂಗಮಂದಿರ, ವಿದ್ಯಾರ್ಥಿ ವಿದ್ಯಾರ್ಥಿನಿಯರ ನಿಲಯಗಳು ಇತ್ಯಾದಿ ಕೊಠಡಿಗಳನ್ನೊಳಗೊಂಡಿರುವ ಸುಸಜ್ಜಿತ ಕಟ್ಟಡಗಳ ನಿರ್ಮಾಣವಾಗಿದೆ. ಈ ಸಂಸ್ಥೆಯಲ್ಲಿ ತಾಂತ್ರಿಕ ಶಿಕ್ಷಣದಲ್ಲಿ ಅತ್ಯುನ್ನತ ಪದವಿ ಪಡೆದಿರುವ ಉಪನ್ಯಾಸಕ ವರ್ಗವೂ ಇದೆ. ಈ ಸಂಸ್ಥೆಗೆ ಪ್ರತೀ ವರ್ಷ ಅತ್ಯುತ್ತಮ ಫಲಿತಾಂಶ ದೊರಕುತ್ತಿದ್ದು ಇಲ್ಲಿ ವಿದ್ಯಾರ್ಥಿಗಳ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೂ ಹೆಚ್ಚಿನ ಉತ್ತೇಜನ ನೀಡಲಾಗುತ್ತದೆ.

ಈ ಸಂಸ್ಥೆಯಲ್ಲಿ ತಾಂತ್ರಿಕ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ಇಂಡಸ್ಟ್ರಿಯಲ್ ಪ್ರೊಡಕ್ಷನ್, ಕಂಪ್ಯೂಟರ್ ಸೈನ್ಸ್, ಮೆಕಾನಿಕಲ್, ಇನ್ಫಾರ್ಮೆಷನ್ ಸೈನ್ಸ್ ಮತ್ತು ಎನ್ವಿರಾನ್ಮೆಂಟಲ್ ಎಂಜಿನಿಯರಿಂಗ್‌ನ ಕೋರ್ಸುಗಳು, ಹಾಗೂ ಎಂ.ಬಿ.ಎ. ಕೋರ್ಸುಗಳು ಲಭ್ಯವಿದೆ. ಈ ಸಂಸ್ಥೆ ಕರ್ನಾಟಕ ಸರ್ಕಾರದಿಂದ ಅಂಗೀಕೃತಗೊಂಡು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾನಿಲಯದ ಸಂಯೋಜನೆ ಪಡೆದಿದೆ.