ನಮ್ಮ ಇಪ್ಪತ್ತನೇ ಶತಮಾನದ ಪೂರ್ವಭಾಗದ ನಾಲ್ಕು ದಶಕಗಳಲ್ಲಿ ಮೈಸೂರು ರಾಜ್ಯವನ್ನಾಳಿದ ಪ್ರಭು ನಾಲ್ವಡಿ ಕೃಷ್ಣರಾಜ ಒಡೆಯರು. ತಮ್ಮ ತಂದೆ, ತಾತಂದಿರ ರಾಜಧರ್ಮ ಆದರ್ಶಗಳನ್ನುಳಿಸಿಕೊಂಡು ಮೈಸೂರು ರಾಜ್ಯದ ಸರ್ವತ್ರ ಪ್ರಗತಿಯ ‘ನವೋದಯ’ ಕಟ್ಟಿ ಅದಕ್ಕೆ ಪ್ರಜಾವಾತ್ಸಲ್ಯದ ಕಳಶವನ್ನೇರಿಸಿ ಬೆಳಗಿಸಿದ ರಾಜರ್ಷಿ ಈ ಕೃಷ್ಣಭೂಪ. ಪ್ರಜೆಗಳ ಸುಖ ಕ್ಷೇಮಗಳೇ ಇವರ ಆಡಳಿತದ ಆದರ್ಶ. ಇಂತಹ ರಾಜಾಶ್ರಯದಲ್ಲಿ ನಮ್ಮ ಕಾಲಕ್ಕಿಂತ ವಿಪುಲವಾಗಿ ದೇಶದಲ್ಲಿ ಸುಭಿಕ್ಷವಿತ್ತು. ಪ್ರಜಾಜೀವನದಲ್ಲಿ ಸುಸಂಸ್ಕೃತಿಯಿತ್ತು. ಲಲಿತಕಲೆಗಳ ಸುಸೂತ್ರದ ಬೆಳವಣಿಗೆಯ ಬಂಗಾರದ ಕಾಲ. ಸಂಸ್ಥಾನದ ಈ ನವೋದಯ ನಾನಾ ಮುಖಗಳನ್ನು ಆದರಣೀಯವಾಗಿ ಕಂಡು ಮೆಚ್ಚಿದ “ಮಹಾತ್ಮಗಾಂಧಿಯವರು” ಮೈಸೂರನ್ನು ‘ಮಾದರೀ ಸಂಸ್ಥಾನ’ವೆಂದು ಸಾರಿ ಸಂತಸಪಟ್ಟ ಕಾಲವದು. ದಕ್ಷಿಣಭಾರತ ಸಂಗೀತ ಕ್ಷೇತ್ರದಲ್ಲಿ ತಂಜಾವೂರಿನಷ್ಟೇ ಪ್ರತಿಷ್ಠಿತವಾದ ಪ್ರಮುಖ ಕೇಂದ್ರವಾಗಿತ್ತು. ಆಗಿನ ನಮ್ಮ ಕೃಷ್ಣಪ್ರಭುವಿನ ರಾಜಾಸ್ಥಾನದಲ್ಲಿ ವೈಭವದಿಂದ ಮೆರೆದ ಸಂಗೀತ ವಿಭೂತಿ ಪುರುಷರು ಅನೇಕ. ಇಂತಹ ಆರಿಸಿದ ಸಾಲಿಗೆ ಸೇರಿದ ಮಹನೀಯರು ನಮ್ಮ ಗುರುಗಳಾದ “ಸಂಗೀತರತ್ನ” ಚಿಕ್ಕರಾಮರಾಯರು. ಅರಮನೆಯ ನಾಟಕ ಕಂಪನಿಯಲ್ಲಿ ಇವರಿಗಿಂತ ಹಿರಿಯ ವಯಸ್ಸಿನ ರಾಮರಾಯರೊಬ್ಬರಿದ್ದುದರಿಂದ, ಸುಲಭವಾಗಿ ಗುರುತಿಸಿ ಕೂಗಿ ಕರೆಯಲು, ಇವರ ಹೆಸರಿನ ಹಿಂದೆ “ಚಿಕ್ಕ” ಎಂಬ ‘ಪೂರ್ವಪದವನ್ನು’ ಸೇರಿಸಿದ್ದರಿಂದ ರೂಢಿಯಲ್ಲಿ ಆ ಹೆಸರೇ ನಿಂತಿತು. ದೇಹದ ಮಾಟದ ಉದ್ದ ಅಗಲ ಮಾತ್ರ ಆ ಪೂರ್ವಪದಕ್ಕೆ ಒಪ್ಪುತ್ತಿತ್ತು. ಆದರೆ ಅವರ ಕಲಾಪ್ರತಿಭೆ, ಜೀವನ ಕ್ರಮದ ಪರಿಚಯ ಇದ್ದವರಿಗೆ ಅವರು “ತ್ರಿವಿಕ್ರಮ”ರಾಗಿಯೇ ಕಂಡರು.

ಮಾನ್ಯ ಶ್ರೀ ವಿಷ್ಣುನಾರಾಯಣ ಭಾತ್ಕಂಡೆಯವರ ನೇತೃತ್ವದಲ್ಲಿ ಬರೋಡಾದಲ್ಲಿ ಅಖಿಲಭಾರತ ಸಂಗೀತ ಸಮ್ಮೇಳನ ಜರುಗಿತು. ಆಗ ಮೈಸೂರಿನ ಗಾಯಕ ಪ್ರತಿನಿಧಿ ೧೭ ವರ್ಷದ “ಚಿಕ್ಕರಾಮು”ವನ್ನು ಸಂಸ್ಥಾನ ಕಳುಹಿಸಿತ್ತು. ಸಮ್ಮೇಳನದ ಕೊನೆಯ ದಿನದ ಕಾರ್ಯಕ್ರಮಗಳ ಕೊನೆಯ ಭಾಗದವರೆಗೂ ಈ ತೇಜಸ್ವಿ ತರುಣನನ್ನು ಆದರಿಸಿ ಕೂಡಿಸಿದ್ದರೇ ಹೊರತು, ಈತನ ಗಾಯನಕ್ಕೆ ಅವಕಾಶವನ್ನೇ ಕೊಟ್ಟಿರಲಿಲ್ಲ, ವಯಸ್ಸಿನಲ್ಲಿ ಕಿರಿಯವನೆಂದು. ಇನ್ನೇನು ಸಮ್ಮೇಳನ ಮುಗಿಯಿತೇನೋ ಅನ್ನುವ ಹೊತ್ತಿಗೆ ಈ ತರುಣನ ಗಾಯನಕ್ಕೆ ಅವಕಾಶ ಸಿಕ್ಕಿತ್ತು.

ಸಮ್ಮೇಳನದಲ್ಲಿ ಸಂಗೀತವಿನಿಕೆ ನೀಡಿದ್ದ ಮಹಾನ್‌ಪಂಡಿತ, ಉಸ್ತಾದರ ಸಂಗೀತ ಕೇಳಿ ಸ್ಪೂರ್ತಿ ಪಡೆದಿದ್ದ, ಈ ಹದಿನೇಳು ವಯಸ್ಸಿನ ಹುಡುಗ ತನ್ನ ಗಾಯನದ ವಿನಿಕೆ ನೀಡಿದ. ಈತನ ಗಂಭೀರನಾದ, ಅಖಂಡ ಸುಸ್ವರ ಕೇಳಿದ ಹಿರಿಯರೆಲ್ಲ, ಒಕ್ಕೊರಲಿನಿಂದ ಹೊಗಳಿ ಹರಸಿದರು. ಈ ತರುಣನಿಗೆ ಬಂಗಾರದ ಪದಕ ನೀಡಿ ಆನಂದ ಪಟ್ಟರು. (ಅ.ನ.ಕೃ ತಮ್ಮ “ಕರ್ನಾಟಕದ ಕಲಾವಿದರು” ಅನ್ನುವ ಪುಸ್ತಕದ ಮೊದಲನೆಯ ಭಾಗದಲ್ಲಿ ಈ ಸಂದರ್ಭವನ್ನು ಸೊಗಸಾಗಿ ಚಿತ್ರಿಸಿದ್ದಾರೆ).

ಚಿಕ್ಕರಾಮ ರಾಯರ ಜನನವಾದದ್ದು ೧೮೯೩ರಲ್ಲಿ. ಇವರ ಸಂಗೀತ ಶಿಕ್ಷಣ ಮೊದಲು ನಡೆದದ್ದು ಆಸ್ಥಾನ ಸಂಗೀತ ವಿದ್ವಾಂಸರಾಗಿದ್ದ “ಸಂಗೀತ ಕಂಠೀರವ” ಕರಿಗಿರಿರಾಯರಲ್ಲಿ. ಸಣ್ಣ ವಯಸ್ಸಿನಲ್ಲೇ ಸಂಗೀತ ಪ್ರತಿಭೆ ಸೂಸುತ್ತಿದ್ದ ರಾಯರಿಗೆ ಗುರುಗಳು ಮನಬಿಚ್ಚಿ ಪಾಠ ಹೇಳಿದರು. ಶಿಷ್ಯನ ಸಂಗೀತ ಪ್ರಗತಿಯನ್ನು ಕಂಡು ‘ಸಂಗೀತ ಕಂಠೀರವ’ರು ಹಿಗ್ಗಿದರು, ಹೆಮ್ಮೆಪಟ್ಟರು. ಬಿಡಾರಂ ಕೃಷ್ಣಪ್ಪನವರ ಮಾರ್ಗದರ್ಶನವೂ ಇವರ ಸಂಗೀತ ಪ್ರಗತಿಗೆ ಅನುವಾಯಿತಂತೆ. ಅನಂತರ ‘ವೀಣಾ ಭಕ್ಷಿ’ ಸುಬ್ಬಣ್ಣನವರಲ್ಲಿ ಪಾಠ ಮುಂದುವರೆಸಿ ಮಹಾವಿದ್ವಾಂಸರಾಗಿ ಮೆರೆದರು. ಸಂಗೀತದಲ್ಲಿ ಇವರಿಗಿದ್ದ ವಿದ್ವತ್ತು, ಕಲಾಪ್ರತಿಭೆಯನ್ನು ಗುರುತಿಸಿದ “ನಾಲ್ವಡಿ ಕೃಷ್ಣರಾಜ” ಒಡೆಯರವರು ಅವರನ್ನು ತಮ್ಮ ಆಸ್ಥಾನ ವಿದ್ವಾಂಸರನ್ನಾಗಿ ಆರಿಸಿಕೊಂಡು ಮಾನ್ಯ ಮಾಡಿದರು. ರಾಯರ ಸಂಗೀತವೆಂದರೆ ‘ವೈಣಿಕ ಶಿಖಾಮಣಿ’ ಶೇಷಣ್ಣನವರಿಂದ ಹಿಡಿದು ಎಲ್ಲ ಸಹೃದಯ ರಸಿಕರ ಪಾಲಿಗೆ ಒಂದು ರಸದೌತಣವಿದ್ದಂತೆ! ರಾಯರ ಸಂಗೀತ ಪ್ರತಿಭೆಗೆ ಉತ್ತರ ದಕ್ಷಿಣ ಎರಡು ಭಾಗದಲ್ಲೂ ಮನ್ನಣೆ ಪುರಸ್ಕಾರ ದೊರೆತು, ಅವರ ಕೀರ್ತಿ ವಿಶಾಲವಾಗಿ ಹರಡಿತು.

ರಾಯರದ್ದು ನೋಡಲು ಸುಂದರಾಕಾರ. ತಿದ್ದಿತೀಡಿದ ತೇಜಸ್ವೀ ಮುಖಭಾವ. ಹೊಂಬಣ್ಣದ ಮೈಕಾಂತಿ. ಉಡುಪು ಧರಿಸುತ್ತಿದ್ದ ರೀತಿಯಲ್ಲೂ ಒಪ್ಪ ಓರಣ ಎದ್ದು ಕಾಣುತ್ತಿತ್ತು. ನಡೆ ನುಡಿ ನಡಿಗೆ ಎಲ್ಲದರಲ್ಲೂ ಒಂದು ವಿಶಿಷ್ಟ ಗಾಂಭೀರ್ಯ.

ದಿನನಿತ್ಯದ ಉಡಿಗೆ ತೊಡುಗೆಗಳಲ್ಲೂ, ದರ್ಬಾರ್ ಡ್ರೆಸ್ಸಿನಲ್ಲೂ ಅವರ ಮುಖದಲ್ಲಿ ಮಿಂಚುತ್ತಿದ್ದುದು ರಾಜಕಳೆ. ಶ್ರೀ ನಾಲ್ವಡಿ ಕೃಷ್ಣರಾಜೇಂದ್ರರು ರಾಯರ ಕಲಾಪ್ರತಿಭೆ ಮತ್ತು ಗಳಿಸಿದ್ದ ಕೀರ್ತಿಯಿಂದ ಸುಪ್ರೀತರಾಗಿ, “ಸಂಗೀತ ರತ್ನ” ಬಿರುದು ಕೊಟ್ಟು ಸನ್ಮಾನಿಸಿದಾಗಿನ ಭಾವಚಿತ್ರ ನೋಡಿದವರಿಗೆ ತಟ್ಟನೆ ಇದು ನಮ್ಮ ಮಹಾರಾಜರಾದ ಕೃಷ್ಣರಾಜ ಪ್ರಭುಗಳದ್ದೇ ಅಲ್ಲವೇ? ಎಂದು ಭ್ರಮಿಸುವಂತಿದೆ. ಅವರ ರಸಾಭಿಜ್ಞ ಸಂಗೀತವೂ ಅಷ್ಟೇ ರಾಗ-ಭಾವ ಲಯ ಭಾವಗಳಿಂಧ ಅಲಂಕೃತವಾದ ನವರತ್ನ ಕರಂಡದಂತೆ!

ಮಿಷನ್‌ ಸ್ಕೂಲಿನಲ್ಲಿ ಓದಿದ ರಾಯರ ಕನ್ನಡ ಮತ್ತು ಇಂಗ್ಲೀಷ್‌ ಭಾಷೆ ಅಪ್ಪಟ ದರ್ಜೆಯದು. ಆಡಿದರೂ ಅಷ್ಟೆ, ಬರೆದರೂ ಅಷ್ಟೆ ಲೋಕದ ತಿಳುವಳಿಕೆ, ಅದರ ಆಗು ಹೋಗುಗಳಲ್ಲಿ ಅವರಿಗಿದ್ದ ಆಸಕ್ತಿ, ನನಗೆ ತಿಳಿದಂತೆ ಆ ಕಾಲದ ಯಾವ ಸಂಗೀತ ವಿದ್ವಾಂಸರಿಗೂ ಇದ್ದಂತಿಲ್ಲ. ಆಧ್ಯಾತ್ಮ ಜ್ಞಾನದಿಂದ ಆಧುನಿಕ ಕಾಲದ ಎಲ್ಲ ಬೆಳವಣಿಗೆಯಿಂದಲೂ ಜ್ಞಾನ ಸಂಪಾದಿಸುವ ಕುತೂಹಲ, ಹಂಬಲ ಅವರಿಗಿತ್ತು. ನಾಟಕಗಳಲ್ಲೇ ಪಳಗಿದ ಅವರ ಆಸಕ್ತಿ ಸಿನಿಮಾ ಮಾಧ್ಯಮವನ್ನು ಕಂಡಾಗ ಅವರನ್ನು ವಿಸ್ಮಯಗೊಳಿಸಿತು. “ಏನಯ್ಯಾ, ಈ ಸಿನಿಮಾ ಮಾಧ್ಯಮ ಬರುವ ಕಾಲಕ್ಕೆ ನನಗೆ ವಯಸ್ಸಾಗಿ ಬಿಡ್ತಲ್ಲಾ!” ಎಂದು ಎಷ್ಟೋಸಾರಿ ನನಗೆ ಹೇಳಿದ್ದುಂಟು. ಒಂದು ರೀತಿಯಲ್ಲಿ ಅವರದ್ದು ‘ವರ್ಸಟೈಲ್‌’ ವ್ಯಕ್ತಿತ್ವ.

ಅರಮನೆ ನಾಟಕ ಕಂಪೆನಿ ಆ ಕಾಲದಲ್ಲಿ ಬಹಳ ಹೆಸರುವಾಸಿಯಾಗಿತ್ತು. ಅದರಲ್ಲಿ ಸೇರಿ ನುರಿತವರು ರಾಯರು. ಬಿಡೃಂ ಕೃಷ್ಣಪ್ಪನವರ ಜೊತೆ ಆ ಕಂಪನಿಯಲ್ಲಿ ಪಾತ್ರ ವಹಿಸುತ್ತಿದ್ದರು. ಅದು ಹೇಗೋ ಆ ಕಂಪನಿ, “ಶಾಕುಂತಲಾ ಕರ್ನಾಟಕ ನಾಟಕ ಮಂಡಲಿ” ಎಂದು ಪರಿವರ್ತನೆ ಹೊಂದಿ, ಅರಮನೆಯಿಂಧ ಹೊರಗೆ ಬಂದಿತು. “ನವರಾತ್ರಿ” ಉತ್ಸವದ ಸಂದರ್ಭದಲ್ಲಿ, ಮೂರು ದಿನಗಳು ‘ಮೈಸೂರು ಟೌನ್‌ಹಾಲ್‌’ ಇವರ ಕಂಪೆನಿಯ ನಾಟಕಗಳಿಗೇ ಮೀಸಲು. ರಾಯರೇ ಕಂಪನಿ ಮನೆಗೆ ಬಂದು ಮಿಕ್ಕವರೆಲ್ಲರಿಗೂ ಪಾತ್ರದ ಹಾಗೂ ಸಂಗೀತದ ಅಭ್ಯಾಸ ಮಾಡಿಸುತ್ತಿದ್ದರು. “ದುಷ್ಯಂತ, ಗಯ, ಸುಧನ್ವ, ಇಂದ್ರ, ಅರ್ಜುನ, ಕೀಚಕ ಮತ್ತು ಎಸ್‌. ಪಾಲ್‌” ಈ ನಾಟಕಗಳ ಇವರ ಮುಖ್ಯ ಪಾತ್ರ ಜನಾದರಣೀಯವಾಗಿತ್ತು. ಅವುಗಳಲ್ಲಿ ಅವರು ಹಾಡುತ್ತಿದ್ದ ಹಾಡುಗಳಿಗೆ, ಕಂದ ಪದ್ಯಗಳಿಗೆ “ಒನ್ಸ್‌ಮೋರ್”ಗಳು ಬರುತ್ತಿದ್ದವೆಷ್ಟೊ! ಆ ಕಾಲದ ಪ್ರಸಿದ್ಧ ನಟರಲ್ಲಿ ರಾಯರ ಹೆಸರು ವಿಜೃಂಭಿಸುತ್ತಿತ್ತು. ಅವರ ಜೊತೆ ಎಷ್ಟೋ ನಾಟಕಗಳಲ್ಲಿ ಬಾಲಕನ ಪಾತ್ರ ಮಾಡುತ್ತಿದದ ನನಗೆ, ಅದರ ನೆನಪು ಹಚ್ಚ ಹಸಿರಾಗಿದೆ.

“ವಿದ್ವತ್ತಿನ ದುಡಿಮೆ ಮನೆಯಲ್ಲಿ, ಆದರೆ ಕಲೆಯ ಅಭಿವ್ಯಕ್ತಿ ವೇದಿಕೆಯಲ್ಲಿ” ಅನ್ನುವುದು ಅವರ ಸಂಗೀತದ ಗುರಿ. “Singing should happen in the soul. The main aim of the art is to get closer to the Lord” ಅನ್ನುವಂತಹದು. ಅವರು ಆರಿಸಿದ, ಆದರಿಸಿದ ಕಲಾಪ್ರವೃತ್ತಿ ಸಂಗೀತ ಸಾಹಿತ್ಯ ಒಂದಕ್ಕೊಂದು ಪೂರಕವಾಗಿರಬೇಕು. ಅನ್ನುವ ಕಲಾ ಸೂಕ್ಷ್ಮತೆ ಅವರಲ್ಲಿದ್ದಂತೆ ಇತರ ವಿದ್ವಾಂಸರಲ್ಲಿ ನಾನು ಕಂಡಿರುವುದು ಅಪರೂಪ.

“ವೀಣಾವಾದನ ಲೋಲುಡೌ” ಎಂದು ಅವರು ಹಾಡಿದಾಗ ಅವರು ಕೊಡುತ್ತಿದ್ದ ಕಂಠದ ನಾದ ವೀಣಾಗವಾದನದಷ್ಟೇ ಮಧುರ, ಮಂಜುಳ.

“ಬಾಯಿಯಲ್ಲಿ ವೀಣಾ ವಾದನ” ಎಂದು ಹಾಡ್ತೀಯಾ? ಆದರೆ ನಾದ ಮಟ್ಟಿಗೆ ನಾಗಸ್ವರದ ನಾದದಷ್ಟು ಕೊಟ್ಟರೆ, ಸಂಗೀತವೇ ಹೋಗಿ ಬಿಡುತ್ತಲ್ಲಯ್ಯಾ!” ಎಂದು ನವಿರಾಗಿ ಮೂದಲಿಸುವಷ್ಟು ಸೂಕ್ಷ್ಮ, ಅವರಲ್ಲಿದ್ದ ಕಲೆಯ ಒಲವು.

ಸಂಗೀತದಲ್ಲಿ ಸಾಹಿತ್ಯದ ಪದಗಳನ್ನು ಉಚ್ಚರಿಸುವಾಗ, ಕೃತಿಯ ಅಥವಾ ದೇವರ ನಾಮದ ಸಮಗ್ರ ವೈಭವ ಕಾಣುವಂತಿರಬೇಕು ಅನ್ನುವುದು ಅವರ ಕೋಮಲ ಹೃದಯದ ಕಲಾಗುರಿ. ವೀಣಾನಾದದಿಂದ ಸಿಂಹನಾದದವರೆಗೆ ಯಾವ ಪ್ರಮಾಣದಲ್ಲೂ ಬರುವಂತಿರಬೇಕು ‘ನಾದಸಂಸ್ಕರಣ’, ಅನ್ನುವುದು ಅವರ ಖಚಿತವಾದ ಅಭಿಪ್ರಾಯ. ಅಂತಹ ಸುಸಂಸ್ಕಾರಕ ನಮ್ಮ ಕಾಲದಲ್ಲಿ ಎಷ್ಟು ಮಂದಿ ಗಾಯಕರಲ್ಲಿ ಕಂಡು ಬರುತ್ತಿದೆ! ರಾಯರಂತಹ ರಸ-ಋಷಿಗಳಿಗೆ ಮಾತ್ರ ಅದು ಸಾಧ್ಯ.

ರಾಯರು ಸಂಗೀತ ಮತ್ತು ಜೀವನದ ಎಲ್ಲ ಮುಖಗಳಲ್ಲೂ ಧರ್ಮ ಮತ್ತು ಸಂಪ್ರದಾಯಕ್ಕೆಕ ಕಟ್ಟುಬಿದ್ದವರು. ಇವರು ವಿನಯಸಂಪನ್ನರು. ಕಲಾ ಮರ್ಯಾದೆ ಬಲ್ಲವರು. ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ನೋಡುವಂತಹ ಸಹೃದಯರು. ಆದರೆ ಅವರ ವಿದ್ವತ್ತನ್ನು ಕೆಣಕಲು ಬಂದ ಭಂಡರನ್ನು ಅವರು ಹದಗೊಳಿಸುತ್ತಿದ್ದ ರೀತಿ ಅವರಿಗೇ ಮೀಸಲು. ಅಂತಹ ಭಂಡರಿಗೆ ವಿದ್ವತ್‌ ಸೂಜಿಮದ್ದನ್ನು ಕೊಟ್ಟು ಹತೋಟಿಗೆ ತರುತ್ತಿದ್ದ ಸಾಮರ್ಥ್ಯ ಇದ್ದವರು. ಆದರೂ ಸಾಮಾನ್ಯರಿಗೆ ಅರ್ಥವಾಗುವಂತೆ ಅವರ ಅವಿವೇಕವನ್ನು ಬಯಲಿಗೆಳೆಯುವ ಸ್ವಭಾವ ಅವರದ್ದಲ್ಲ. ಯಾರ ತೇಜೋವಧೆಯನ್ನೂ ಮಾಡದಂತಹ ಸಾತ್ವಿಕರು. “ಪಲ್ಲವಿ” ಗಾಯನದಲ್ಲಿ ಅವರಿಗಿದ್ದ ಪರಿಣತಿಯನ್ನು ಮೆಚ್ಚಿ ಅವರನ್ನು “ಲಯ-ಬ್ರಹ್ಮ” ಎಂದು ಅಭಿನಂದಿಸಿದರು ಪುದುಕೋಟೆ ದಕ್ಷಿಣಾಮೂರ್ತಿ ಪಿಳ್ಳೆಯವರು. (ಪಿಳ್ಳೆಯವರನ್ನು ಎಲ್ಲ ವಿದ್ವಾಂಸರೂ “ಕಲಿಯುಗದ ನಂದಿಕೇಶ್ವರ” ಎಂದು ಹೊಗಳುತ್ತಿದ್ದರು.)

ರಾಯರು ದೇವರನಾಮಗಳನ್ನು ಹಾಡುತ್ತಿದ್ದ ರೀತಿ ಅನುಕರಣೀಯ ಮತ್ತು ಅಭಿನಂದನೀಯ. “ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ”. “ಸಂಗೀತಪ್ರಿಯ ಮಂಗಳ ಸುಗುಣತರಂಗ ಮುನಿಕುಲೋತ್ತುಂಗ ಕಣಮ್ಮಾ”, “ಎಲ್ಲಿರುವೆ ತಂದೆ ಬಾರೋ ಮಾರುತಿ” ಮತ್ತು ‘ಜಯದೇವ ಕವಿಯ’ಯ “ನಾಥ ಹರೇ ಜಗನ್ನಾಥ ಹರೇ” ಇವುಗಳನ್ನು ಅವರು ಹಾಡುತ್ತಿದ್ದ ಶೈಲಿ ವಿಶಿಷ್ಟವಾದದ್ದು ಹೃದಯ ಸ್ಪರ್ಶಿಯಾದದ್ದು.

ಶ್ರೀರಾಮನವಮಿ ಉತ್ಸವವನ್ನು ಪ್ರತಿವರ್ಷವೂ ಅವರ ಮನೆಯಲ್ಲೇ ನಡೆಸುತ್ತಿದ್ದರು. ಒಂದೊಂದು ದಿನ ಒಬ್ಬೊಬ್ಬ ವಿದ್ವಾಂಸರ ಕಚೇರಿ. ಕರ್ನಾಟಕ ಸಂಗೀತ ವಿದ್ವಾಂಸರ ಗಾಯನ ಒಂದು ದಿನ ನಡೆದರೆ, ಮತ್ತೊಂದು ದಿನ ಹಿಂದುಸ್ತಾನಿ ಸಂಗೀತ ಪಂಡಿತರು ಹಾಡುತ್ತಿದ್ದರು. ಸಂಗೀತ ಉಸ್ತಾದರಾದ ‘ಅಮಾನತ್‌ ಅಲೀ ಖಾನ್‌’, ಬರ್ ಖತ್‌ ಉಲ್ಲಾಖಾನ್‌ ಇಂತಹ ಮಹಾನುಭಾವರ ಗಾಯನ, ವಾದನ ನಾನು ಕೇಳಿದ್ದು, ರಾಯರು ನಡೆಸುತ್ತಿದ್ದ ಶ್ರೀರಾಮನವಮಿ ಉತ್ಸವದಲ್ಲೇ! ಹಿಂದುಸ್ತಾನಿ ಸಂಗೀತ ಮಾಧುರ್ಯ ರಾಯರಿಗೆ ಅಪ್ಯಾಯಮಾನವಾಗಿತ್ತು. ರಾಯರೂ ಹಿಂದುಸ್ತಾನಿ ರಾಗಗಳನ್ನು ಬಹುವಾಗಿ ಹಾಡುತ್ತಿದ್ದರು.

ಕಲಾಲೋಕ ವಿಹಾರದಲ್ಲಿ ಅವರು ಕಂಡ ವೈಭವಕ್ಕೂ, ಕಠಿನ ಭವಜೀವನದಲ್ಲಿ ಉಂಡ ನೋವಿಗೂ ಸಂಬಂಧವೇ ಇಲ್ಲ. ಹತ್ತು ಹನ್ನೆರಡು ವರ್ಷಗಳು ವಾತ್ಸಲ್ಯದಿಂದ ಬೆಳೆಸಿದ, ದಂತದ ಗೊಂಬೆಗಳಂತೆ ಅಂದವಾಗಿದ್ದ ಅವರ ಇಬ್ಬರು ಹೆಣ್ಣು ಮಕ್ಕಳು “ಪೋಲಿಯೋ” ಖಾಯಿಲೆಗೆ ತುತ್ತಾಗಿ ಅಸುನೀಗಿದರು. ಆ ಖಾಯಿಲೆಯನ್ನು ವಾಸಿಮಾಡುವಂತಹ ಮದ್ದು ಆಗ ಇರಲಿಲ್ಲವೇನೊ> ತಮ್ಮ ಹೃದಯದ ಸಂಕಟವನ್ನು ತಾವೇ ನುಂಗಿಕೊಂಡರು. ನಂಜು ನುಂಗಿದ ನಂಜುಂಡನಂತೆ! ಇಷ್ಟಾದರೂ ಹೊರಗೆ ಬಂದರೆ ಮಾತ್ರ, ಇವರಷ್ಟು ಸುಖಿ ರಾಜ್ಯದಲ್ಲೇ ಇಲ್ಲವೇನೋ ಅನ್ನುವ ಮಟ್ಟಿಗೆ ನಡೆದುಕೊಳ್ಳುತ್ತಿದ್ದರು.

ರಾಯರಿಗೆ ಸೊಗಸಾದ `Sense of humour’ ಇತ್ತು. ಪಾಠದಲ್ಲಿ ತಪ್ಪುಮಾಡಿದ ಹುಡುಗರನ್ನು ಬಯ್ಯದೆ, ನವಿರಾಗಿ ಗೇಲಿ ಮಾಡಿ, ಅನಂತರ ಅವರ ತಪ್ಪುಗಳನ್ನು ತಿದ್ದುತ್ತಿದ್ದರು. ಅವರ ಸಂಗೀತದ ಜಾಡನ್ನು ಹಿಡಿಯ ಬಯಸುವ ಶಿಷ್ಯನಿಗೆ ತಕ್ಕಮಟ್ಟಿಗೆ ಒಳ್ಳೆಯ ಸಂಗೀತದ ಪೂರ್ವಜನ್ಮದ ಸುಕೃತ ಅಗತ್ಯವಾಗಿ ಬೇಕಾಗಿತ್ತು.

ಗುರುಗಳಾದ ಭಕ್ತಿ ಸುಬ್ಬಣ್ಣನವರ ಕೊನೆಯ ದಿನಗಳಲ್ಲಿ ಪ್ರತಿನಿತ್ಯವೂ ಹೋಗಿ ನೋಡಿಕೊಂಡು ಸಾಧ್ಯವಾದಷ್ಟು ಸೇವೆ ಮಾಡಿ ಬರುತ್ತಿದ್ದರು.

ಸಂಗೀತವನ್ನು ಹಾಡುವಗ ಅವರ ಅಂತರಂಗ, ಭಾವತರಂಗಗಳನ್ನು ಮಿಡುಯುತ್ತಿತ್ತು. ಜೀವನದಲ್ಲಿ ಅವರು ಅನುಭವಿಸಿದ ನೋವುಗಳೇ ಹಾಗೆ ಮಿಡಿಸುತ್ತಿದ್ದವೇನೊ! “The finest music often comes out of the saddest moments in life” ಅನ್ನುವ ಕವಿವಾಣಿ ಇವರಿಗಾಗಿಯೇ ಬಂದುದೇನೊ!

ಗಾನವಿಶಾರದ, ಗಾಯಕ ಶಿಖಾಮಣಿ ಬಿಡಾರಂ ಕೃಷ್ಣಪ್ಪನವರ ಪ್ರಸನ್ನ ಸೀತಾರಾಮ ಮಂದಿರದಲ್ಲಿ ಒಂದು ಸಲ ರಾಯರ ಕಚೇರಿ ಆಯಿತು. ಆರಂಭದಲ್ಲಿಯೇ ಆದಿತಾಳದ ವರ್ಣ ಹಾಡಿದ ರೀತಿಗೆ ನೆರೆದಿದ್ದ ವಿದ್ವಾಂಸರು ತಾಳ ಹುಡುಕುತ್ತ ಕಣ್ಣುಕಣ್ಣು ಬಿಟ್ಟರಂತೆ. ಕೃಷ್ಣಪ್ಪನವರು ತರುಣ ವಿದ್ವಾಂಸನನ್ನು ಮೆಚ್ಚಿಕೊಂಡು, “ನಮ್ಮ ನಂತರ ದೊಡ್ಡ ಸಂಗೀತವೇ ಹೋಗಿ ಬಿಡುತ್ತದೆಂದು ಭಾವಿಸಿದ್ದೆವು. ನಿಮ್ಮಂತಹ ತರುಣರಿರುವವರೆಗೆ ಆ ಭಯವಿಲ್ಲವಾಗಿದೆ” ಎಂದು ರಾಯರನ್ನು ಹರಸಿದರಂತೆ.

ತಂಜಾವೂರಿಗೆ ರಾಯರು ೧೯೩೧ ರಲ್ಲಿ ಶ್ರೀ ತ್ಯಾಗರಾಜರ ಆರಾಧನಾ ಉತ್ಸವಕ್ಕೆ ಆಹ್ವಾನಿತರಾಗಿ ಹೋಗಿದ್ದರು. ದೊಡ್ಡವಿದ್ವಾಂಸರು ಕೂಡ ತಮ್ಮ ಸೇವೆಯನ್ನು ಹತ್ತು ನಿಮಿಷಗಳಲ್ಲಿ ಮುಗಿಸಬೇಕಾಗಿತ್ತು. ಆದರೆ ಶ್ರೋತೃವರ್ಗ ನಾಲ್ಕೂವರೆ ಗಂಟೆ ಕಾಲ ರಾಯರ ಗಾನಸುಧಾರಸವನ್ನು ಸವಿಯಿತು. ಗಾಯನ ಮುಗಿದಾಗ ರಾತ್ರೆ ಹನ್ನೊಂದು ಗಂಟೆ. ಅಭಿನವ ತ್ಯಾಗರಾಜರನ್ನು ಕಂಡೆವೆಂದು ಸಭೆ ಹರ್ಷಿಸಿತು.

ರಾಯರ ಜೀವನದಲ್ಲಿ ಬಹಳ ದುಃಖದ ಪ್ರಸಂಗವೊಂದು ಕಾರ್ಮೋಡದಂತೆ ಕವಿಯುತ್ತ ಬರುತ್ತಿತ್ತು. ೧೯೩೭ರಲ್ಲಿ ರಾಯರ ಮನೆಯಲ್ಲಿ ನಡೆದ ರಾಮೋತ್ಸವಕ್ಕೆ ಅವರ ಗುರುಗಳು ದಯಮಾಡಿಸಿದ್ದರು. ಶಿಷ್ಯನಿಂದ, “ಮಂಚ ಬಾರದು, ಮಡದಿ ಬಾರಳು” ಎಂಬ ದೇವರ ನಾಮ ಹಾಡಿಸಿ ಕೇಳಿ ಆನಂದ ತುಂದಿಲರಾಗಿ “ಪ್ರಾಯಶಃ ಹೀಗೆ ನಾನು ನೋಡುವುದು ಇದೇ ಕೊನೆಯ ರಾಮೋತ್ಸವ, ರಾಮು.” ಎಂದರು. ಮಾರನೆಯ ವರ್ಷ ಸುಬ್ಬಣ್ಣನವರು ಹಾಸಿಗೆ ಹಿಡಿದು ಮಲಗಿಬಿಟ್ಟರು. ಶಿಷ್ಯನಿಂದ ಪುರಂದರದಾಸರ ಕೆಲವು ದೇವರನಾಮ ಹಾಡಿಸಿ ಕೇಳಿ, “ರಾಮು, ನಿನಗೆ ಕೊಡಬೇಕಾದುದೆಲ್ಲವನ್ನೂ ಕೊಟ್ಟಿದ್ದೇನೆ. ನಮ್ಮ ಗುರು-ಶಿಷ್ಯ ಬಾಂಧವ್ಯ ಜನ್ಮ ಜನ್ಮಾಂತರಗಳಲ್ಲೂ ಇರಲಿ” ಎಂದು ಮೈದಡವಿ ಹರಸಿದರು. ಅದೇ ಅವರ ಕೊನೆಯುಸಿರಾಯಿತು. ರಾಯರು ಅನಾಥರಾದರು.

ರಾಯರು ಕರ್ನಾಟಕ ಸಂಗೀತ ವಿದ್ವಾಂಸರಲ್ಲಿ ಹಿರಿಯ ಸ್ಥಾನ ಪಡೆದುಕೊಂಡಿದ್ದವರು. ಇವರ ರಾಗ ವಿಸ್ತಾರ, ತಾಳ ಯೋಜನೆ, ಶ್ರುತಿ ಪ್ರಾಧಾನ್ಯ ಅಸಮಾನ್ಯ ವ್ಯಕ್ತಿತ್ವವನ್ನು ತೋರುತ್ತಿದ್ದವು. ಒಮ್ಮೆ ಕೇಳಿದರೆ ಮರೆಯಲಾಗದಂತಹ ಗಂಡು ಸಂಗೀತ, ಶಾರೀರವೂ ಅಷ್ಟೆ, ಸಶಕ್ತ ಸಂಗೀತ ಚಿತ್ತವನ್ನು ಮುತ್ತಿಬಿಡುವ ಸ್ವರ-ತಾನಗಳ ಲಾಸ್ಯ, ರಾಯರ ಗಾನ ಪರ್ವತಧಾರೆಯಂತೆ ಗಹನವೂ ಗಂಭೀರವೂ ಆದುದು. ಅದರ ವೈಖರಿ, ರಾಜವೈಖರಿ.

ದಕ್ಷಿಣಾದಿ ಸಂಗೀತದಲ್ಲಿ ಅನೇಕ ಸಂಪ್ರದಾಯಗಳ ಪರಿಚಯವಿದ್ದುದರಿಂದ, ರಾಯರ ಸಂಗ್ರಹ ಅಪಾರವಾಗಿತ್ತು. ಶಾಸ್ತ್ರ ಭಾಗದಲ್ಲಿಯಾಗಲೀ, ಕಲಾಭಾಗದಲ್ಲಿಯಾಗಲೀ ಅಧಿಕಾರವಾಣಿಯಿಂದ ತಮ್ಮ ಅಭಿಪ್ರಾ:ಯವನ್ನು ಮಂಡಿಸಬಲ್ಲ ಸಾಮರ್ಥ್ಯವಿತ್ತು. ಅದಕ್ಕನುಗುಣವಾದ ವಿದ್ವತ್ತಿನ ಕೆಚ್ಚೂ ಇತ್ತು. ರಾಯರಿಗೆ ಕರ್ನಾಟಕ ಸಂಗೀತವೇ ಅಲ್ಲದೆ, ಹಿಂದೂಸ್ತಾನಿ ಪದ್ಧತಿ ಸಾಕಷ್ಟು ಗೊತ್ತಿತ್ತು. ಚೀಜುಗಳನ್ನು ಗವಾಯ್‌ಗಳಂತೆಯೇ ಹಾಡಲು ರಾಯರು ಸಮರ್ಥರಾಗಿದ್ದರು.

ರಾಯರು ಕರ್ನಾಟಕದ ಉತ್ಕಟ ಅಭಿಮಾನಿಗಳು. ವಿಜಯನಗರದ ಸ್ಮಾರಕೋತ್ಸವದಲ್ಲಿ ಇವರು ಹಾಡಿದ ಕನ್ನಡ ಕೀರ್ತನೆಗಳು ಇಂದಿಗೂ ಶ್ರಾವಕರ ಕಿವಿಯಲ್ಲಿ ಪ್ರತಿಧ್ವನಿಸುತ್ತಿದೆ. ಕನ್ನಡ ದೇವರನಾಮ, ಕೀರ್ತನೆಗಳನ್ನು ರಾಯರು ಒಂದು ವೈಶಿಷ್ಟದಿಂದ ಹಾಡುತ್ತಿದ್ದರು.

ಚಿಕ್ಕರಾಮರಾಯರು ಸಂಗೀತ ಕಲೆಯಲ್ಲಿ ದೊಡ್ಡವರು, ಶಾಸ್ತ್ರದಲ್ಲಿ ನಿಪುಣರು. ಶಿಷ್ಯರಿಗೆ ಧಾರಾಳವಾಗಿ ಹೇಳಿಕೊಡುವ ಬುದ್ದಿ, ಹೊಸಹೊಸ ಅಂಶಗಳನ್ನು ಕಲೆಯಲ್ಲಿ ಶೋಧಿಸುವ ಪ್ರಾಯೋಗಿಕ ಮನೋಭಾವ. ಈ ಎಲ್ಲ ಗುಣಗಳಿಂದ ಹಿಂದೂಸ್ಥಾನದ ಕಲಾವಿದರ ಪಂಕ್ತಿಯಲ್ಲಿ ರಾಯರು ಹಿರಿಯ ಸ್ಥಾನ ಗಳಿಸಿಕೊಂಡವರು. ಇವರು ಕನ್ನಡಿಗರೆಂದ ಮೇಲೆ ನಮ್ಮ ಹೆಮ್ಮೆಗೆ ಅಡ್ಡಿಯೇನುಂಟು? ಎಂದು “ಅ.ನ.ಕೃ” ಹಾಡಿ ಹೊಗಳಿದ್ದಾರೆ. ಶ್ರೀಯುತರ ಶಿಷ್ಯರು ಅವರ ಪರಂಪರೆಯನ್ನು ಕಾಪಾಡಿಕೊಂಡು ಬಂದು ಅವರ ಹೆಸರು ಅಚ್ಚಳಿಯದಂತೆ ಉಳಿಸಲೆಂದು ನಮ್ಮ ಹಾರೈಕೆ.

ಅರಕೆರೆ ನಾರಾಯಣರಾವ್‌, ಆರ್.ಆರ್.ಕೇಶವಮೂರ್ತಿ, ಬಿ.ವಿ.ಕೆ. ಶಾಸ್ತ್ರಿ, ಬಿ.ಎನ್‌.ಶ್ರೀನಿವಾಸನ್‌, ಎ.ಸುಬ್ಬರಾವ್‌ ಹೀಗೆ ಅನೇಕ ಮಂದಿಗೆ ವಿದ್ಯಾದಾನ ಮಾಡಿದ ಉದಾರಿಗಳು. ಇವರನ್ನು ಗುರುವಾಗಿ ಪಡೆದ ನಾವೆಲ್ಲರೂ ಪುಣ್ಯವಂತರಲ್ಲವೆ?

ರಾಯರ ಸಂಗೀತ ರಚನೆಗಳನ್ನು ಪಾಠ ಮಾಡಿದವರಿಗೆ ಅವರ ಮಹಿಮೆ ಅರ್ಥವಾಗುತ್ತದೆ.

ಈ ಸಂಗೀತ ರಸ-ಋಷಿ, ೧೯೪೫ ರ ಜನವರಿ ೮ ರಂದು ತಮ್ಮ ಇಹಲೋಕ ವ್ಯಾಪಾರ ಮುಗಿಸಿದರು. ಆದರೆ ಅವರು ನಮ್ಮ ಶಿಷ್ಯರೆಲ್ಲರ ಪಾಲಿಗೆ ಬಿಟ್ಟುಹೋದ ಸಂಗೀತ, ಪ್ರೀತಿ-ವಾತ್ಸಲ್ಯಗಳು ಅಮರವಾಗಿ ಉಳಿದಿವೆ.