ಒಲ್ಲೆ ಅನ್ನೋನಿಗೆ ನಾನು ಸತಿಯನೇಳವ್ವ ಜನನೀ
ಒಲ್ಲೆ ಅನ್ನೋನಿಗೆ ನಾನು ಒಗೆತಾನ ||
ಗಂಡನೆಂದರೆ ನನ್ನ ಜೀವ
ಕೆಂಡ ತುಳಿದಂತಾಯಿತವ್ವ
ಉಂಡುಉಟ್ಟು ಊರು ಒಳಗೆ
ಒಳ್ಳೆ ಗಂಡನ ಹುಡುಕ ಬಂದೆ || ಒಲ್ಲೆ ||
ಇಂಥ ಊರು ಯಾರಿಗೆ ಬೇಕವ್ವ
ಬರು ಬಾರುದವ್ವ ಇಂಥ ಊರು ಯಾರಿಗೆ ಬೇಕವ್ವ
ಇಂಥ ಊರು ಯಾರಿಗೆ ಬೇಕು ಇಂಥ ಗಂಡನ ಬಾಳ್ಯೇವು ಸಾಕು
ಮತ್ತೆ ತಿರುಗಿ ಬಾರದಂಥ ಊರಿಗೆ ನಾನು ಹೋಗಬೇಕು

ಆರು ಮೂರು ಮಂದಿ ಕೂಡಿದರು
ಒಂಬತ್ತು ಮಂದಿ ಕೂಡಿ ನನ್ನ ನಿಶ್ಚಯ ಮಾಡಿದರು
ಎಂಟು ಹತ್ತು ಮಂದಿ ಕೂಡಿದರು
ಹದಿನೆಂಟು ಮಂದಿ ಕೂಡಿ ನನ್ನ ಲಗ್ನ ಮಾಡಿದರು
ಕೈಗೆ ಕಂಕಣಕಟ್ಟಿ ಹಣೆಗೆ ಮುಡಿದಂಡೆಯ ಸೂಡಿ
ಐದು ಮಂದಿ ಮುತ್ತೈದೆಯರು ಉಯ್ದು ಸಾಸೇವೆ ಇಟ್ಟಿರವ್ವ

ಆರು ಮಂದಿ ಮಕ್ಳನ ಹಡೆದಿದ್ದೆ
ಮಣ್ಣಾಕೆ ಇಟ್ಟು ನುಣ್ಣಗೆ ನಾನು ಸಂಸಾರ ಮಾಡಿದ್ದೆ
ಚಿಕ್ಕ ಪ್ರಾಯದೆಣ್ಣು ನಾನು ಸುಟ್ಟಸುಣ್ಣದಂಗಾದೆ
ಸಿಟ್ಟಗೆಟ್ಟು ತಿರ್ರನೆ ತಿರುವಿ ಚಿದಾನಂದನ ಪಾದವ ಕಂಡೆ