ಚಿಣ್ಣರ ಜಿಲ್ಲಾ ದರ್ಶನ

ಸರ್ವಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ ರಾಜ್ಯದ ಗ್ರಾಮಾಂತರ ಪ್ರದೇಶದಲ್ಲಿನ ಮಕ್ಕಳ ವ್ಯಕ್ತಿತ್ವದ ಸರ್ವತೋಮುಖ ಅಭಿವೃದ್ಧಿ, ಒಂದು ಪ್ರಮುಖ ಗುರಿಯಾಗಿದ್ದು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ೭ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ.ಜಾ/ಪ.ವ ಹಾಗೂ ಹೆಣ್ಣು ಮಕ್ಕಳಿಗಾಗಿ ’ಚಿಣ್ಣರ ವ್ಯಕ್ತಿತ್ವ ವಿಕಸನ-ಕರ್ನಾಟಕ ಪರಿಚಯ’ ಎಂಬ ಶೈಕ್ಷಣಿಕ ಪ್ರವಾಸವನ್ನು ೨೦೦೪-೦೫ ಹಾಗೂ ೨೦೦೬-೦೭, ೨೦೦೭-೦೮ ಹಾಗೂ ೨೦೦೮-೦೯ನೇ ಸಾಲಿನಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ೨೦೦೯-೧೦ ನೇ ಸಾಲಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸದರಿ ಚಟುವಟಿಕೆಯ ಫಲಾನುಭವಿಗಳನ್ನಾಗಿಸಲು ಹಾಗೂ ತಮ್ಮ ಜಿಲ್ಲೆಯನ್ನು ಸಮಗ್ರವಾಗಿ ಅರಿಯುವ ನಿಟ್ಟಿನಲ್ಲಿ ೪ ದಿನದ “ಚಿಣ್ಣರ ಕರ್ನಾಟಕ ದರ್ಶನದ” ಬದಲಿಗೆ ೨ ದಿನದ “ಚಿಣ್ಣರ ಜಿಲ್ಲಾ ದರ್ಶನ” ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.

ಚಿಣ್ಣರ ಜಿಲ್ಲಾ ದರ್ಶನದ ಸಾಮಾನ್ಯ ಉದ್ದೇಶಗಳು :-

  • ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪರಿಪೂರ್ಣವಾಗಿ ಜಿಲ್ಲೆಯ ಮುಖ್ಯವಾದ ಸ್ಥಳಗಳು ಅಂದರೆ ಸ್ಥಳೀಯ ವೈಜ್ಞಾನಿಕ, ಧಾರ್ಮಿಕ, ಭೌಗೋಳಿಕ, ನೈಸರ್ಗಿಕ, ಐತಿಹಾಸಿಕ, ವಿಜ್ಞಾನ ಮತ್ತು ಕೈಗಾರಿಕೆಗಳು, ಉತ್ತಮ ಶಾಲೆ, ಆಕಾಶವಾಣಿ ಕೇಂದ್ರ, ಗಣಿಗಳು, ಉದ್ಯಾನವನ, ಮ್ಯೂಸಿಯಂ, ಪ್ರಖ್ಯಾತ ವ್ಯಕ್ತಿಗಳು ಹುಟ್ಟಿದ ಊರು ಇತ್ಯಾದಿಯನ್ನು ಅರಿಯುವುದು.
  • ಮಕ್ಕಳು ತಮ್ಮ ಶೈಕ್ಷಣಿಕ ಜೀವನವನ್ನು ರೂಪಿಸಿಕೊಳ್ಳಲು ಸಹಕಾರಿಯಾಗುವಂತೆ ಮಾರ್ಗದರ್ಶನವನ್ನು ನೀಡುವುದು.
  • ಮಕ್ಕಳಲ್ಲಿ ಸಹಕಾರ, ಹೊಂದಾಣಿಕೆ, ನಾಯಕತ್ವ ಮನೋಭಾವವನ್ನು ಬೆಳೆಸುವುದು.
  • ತಮ್ಮ ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯ ಅರಿವು ಹಾಗೂ ಅಭಿವೃದ್ಧಿಗೊಳಿಸುವಲ್ಲಿ ಮಕ್ಕಳ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವುದು.
  • ತಮ್ಮ ಜಿಲ್ಲೆಯ ಸಾಮಾಜಿಕ ಸ್ಥಿತಿಗತಿಯ ಕುರಿತು ಅರಿವುಂಟು ಮಾಡುವುದು.
  • ಮಕ್ಕಳಿಗೆ ನೈಜ ಪರಿಸರದ ದರ್ಶನ ಮಾಡಿಸುವುದು.
  • ತರಗತಿ ಕಲಿಕೆಗೆ ಪೂರಕವಾದ ಮಾಹಿತಿ ಒದಗಿಸುವುದು.
  • ಶಾಲಾ ಚಟುವಟಿಕೆಗಳನ್ನು, ಹೊರಪ್ರಪಂಚ ಹಾಗೂ ಸಮಾಜದೊಂದಿಗೆ ಸಮನ್ವಯಗೊಳಿಸುವುದು.
  • ತಮ್ಮ ಜಿಲ್ಲೆಯ ಐತಿಹಾಸಿಕ ವಿಷಯಗಳ ನೈಜ ಸ್ಥಿತಿಯ ದರ್ಶನ ಮಾಡಿಸುವುದು.
  • ಪ್ರಾದೇಶಿಕ ಮಟ್ಟದ ಜನಜೀವನ, sಂμಇ, ಆಚಾರವಿಚಾರಗಳಲ್ಲಿನ ವೈವಿಧ್ಯತೆಯ ಅರಿವುಂಟು ಮಾಡುವುದು.

ಮಕ್ಕಳೇ ಹೀಗೆ ಮಾಡದಿರಿ

• ಬಸ್ಸಿನ ಕಿಟಕಿಗಳಿಂದ ತಲೆ ಅಥವಾ ಕೈಗಳನ್ನು ಹೊರಚಾಚಬೇಡಿ.

• ಅಂಗಡಿ ಅಥವಾ ಮನೆಯಿಂದ ತಂದ ಕರಿದ ತಿಂಡಿ ತಿನ್ನಬೇಡಿ.

• ಕೋಪಮಾಡಿಕೊಂಡು ಪ್ರವಾಸದ ಸುಂದರ ಅನುಭವಕ್ಕೆ ಕುತ್ತು ತಂದುಕೊಳ್ಳಬೇಡಿ.

ಶಿಕ್ಷಕರಿಗೆ ಮಾರ್ಗಸೂಚಿ ಮತ್ತು ಸೂಚನೆಗಳು

• ಎಲ್ಲಾ ಮಕ್ಕಳನ್ನು ಸಮನಾಗಿ ಕಂಡು ಸಮಾನ ಅವಕಾಶ ಕಲ್ಪಿಸಿ.

• ಬಸ್ಸ್ ಪ್ರಯಾಣದಲ್ಲಿ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ನಿಗಾವಹಿಸಿ.

• ಪ್ರತಿ ಹಂತದಲ್ಲಿ ವಿದ್ಯಾರ್ಥಿಗಳ ಹಾಜರಾತಿ ಪರೀಕ್ಷಿಸಬೇಕು.

•ಹೆಣ್ಣು ಮಕ್ಕಳ ಬಗ್ಗೆ ಸದಾ ಎಚ್ಚರಿಕೆ ವಹಿಸಬೇಕು,ಅವರ ಸಮಸ್ಯೆಗಳ ಬಗ್ಗೆ ಶಿಕ್ಷಕಿಯರು ವಿಇಂμಂ ಗಮನ ಹರಿಸಿ.

•ಯಾವುದೇ ಮಗು ಗುಂಪನ್ನು ಬಿಟ್ಟು ಹೋಗದಂತೆ ನಿಗಾವಹಿಸಿ.

•ತಂಗುವ ರಾತ್ರಿ ಆಶುಭಾಷಣ, ಹಾಡು, ಜ್ಞಾಪಕ ಶಕ್ತಿ ಪರೀಕ್ಷೆ, ರಸ ಪ್ರಶ್ನೆ ಇತ್ಯಾದಿ

ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಏರ್ಪಡಿಸಿ.

• ಪ್ರತಿ ದಿನದ ದಿನಚರಿಯನ್ನು ವಿದ್ಯಾರ್ಥಿಗಳಾದಿಯಾಗಿ ನೀವೂ ನಿರ್ವಹಿಸಬೇಕು.

• ಎಲ್ಲಾ ಶಿಕ್ಷಕರು ಸಹಕಾರ ಮನೋಭಾವದಿಂದ ಹೊಣೆಗಾರಿಕೆಯನ್ನು ನಿರ್ವಹಿಸಬೇಕು.

ಶಿಕ್ಷಕರೇ ಹೀಗೆ ಮಾಡದಿರಿ

•ಬಸ್ಸಿನಲ್ಲಿ ಎಲ್ಲಾ ಶಿಕ್ಷಕರು ಒಂದೇ ಕಡೇ ಕುಳಿತುಕೊಳ್ಳಬಾರದು.

•ಮಕ್ಕಳಿಗಿಂತ ಮೊದಲು ಸ್ಥಳಗಳನ್ನು ನೋಡಲು ಮುನ್ನುಗ್ಗಬೇಡಿ.

•ಸಂಬಂಧಿಗಳನ್ನು ನೋಡಲು ತೆರಳುವುದು ಅಥವಾ ವೈಯಕ್ತಿಕ ಕಾರ್ಯಗಳ ಸಲುವಾಗಿ

ಪ್ರವಾಸದ ಸಮಯದಲ್ಲಿ ತಂಡವನ್ನು ಬಿಟ್ಟು ತೆರಳಬಾರದು.

• ಶಿಕ್ಷಕರು ಧೂಮಪಾನ ಮಾಡುವುದು ಅಥವಾ ಇನ್ನಿತರೆ ದುಶ್ಚಟಗಳಲ್ಲಿ ತೊಡಗಬಾರದು.

•ಮಕ್ಕಳ ಮನಸ್ಸಿಗೆ ಘಾಸಿಯಾಗುವಂತೆ ನಡೆದುಕೊಳ್ಳಬಾರದು.

ಸುಂದರ ಪ್ರಕೃತಿ ತಾಣಗಳು ಮನಕ್ಕೆ ಮುದ ನೀಡಿದರೆ, ಕೆರೆಕಾಲುವೆಗಳು ಜನೋಪಕಾರಿ ಕಾರ್ಯಗಳ ಪರಿಚಯವನ್ನು ಮಾಡಿಸುತ್ತವೆ. ಅಲ್ಲಮಪ್ರಭುಗಳು ಹೇಳುವಂತೆ “ಹಿಂದಣ ಹೆಜ್ಜೆಯನರಿತಲ್ಲದೆ, ನಿಂದ ಹೆಜ್ಜೆಯನರಿಯಲಾಗದು” ಅಂದರೆ ನಮ್ಮ ಸುತ್ತಮತ್ತಲಿನ ವಿಚಾರಗಳ ಪರಿಚಯ ಹೊಂದಿರುವುದು ಜ್ಞಾನಕ್ಕೆ ಪೂರಕ. ಈ ಹಿನ್ನೆಲೆಯಲ್ಲಿ ಚಿಣ್ಣರ ಜಿಲ್ಲಾ ದರ್ಶನವು ವಿಶೇಷ, ವಿಶಿಷ್ಟ ಅನುಭವಗಳನ್ನು ಒದಗಿಸುತ್ತವೆ. ಜಿಲ್ಲಾ ಪ್ರವಾಸಕ್ಕೆ ಹೆಚ್ಚು ಮಹತ್ವ ನೀಡಿರುವುದರ ಹಿಂದೆ ಮೂರ್ತದಿಂದ ಅಮೂರ್ತದ ಕಡೆಗೆ ಕಲಿಕೆ ಎಂಬ ತತ್ವವಿದೆ. ಹೇಗೆಂದರೆ ಮನೆಯ ಪರಿಚಯವಿಲ್ಲದವನಿಗೆ ಊರಿನ ಪರಿಚಯವಾಗುವುದು ಕಷ್ಟ.ಆದುದರಿಂದ ಸ್ಥಳೀಯ ವಸ್ತು ಚಿತ್ರಣ ಸ್ಪಷ್ಟವಾದಾಗ ಹೊಸ ಪ್ರದೇಶವನ್ನು ಇದರ  ಮೂಲಕ ಅರಿಯುವ ಮಾರ್ಗ ನಿರ್ಮಾಣಗೊಳ್ಳುತ್ತದೆ. ಹಾಗಾಗಿ ಜಿಲ್ಲಾ ಪ್ರವಾಸ ಹೆಚ್ಚು ಆಪ್ತವೂ ಮತ್ತು ಪ್ರೇರಕವೂ ಆಗುತ್ತದೆ.

ವಿದ್ಯಾರ್ಥಿಗಳು ಪ್ರವಾಸ ಸಮಯದಲ್ಲಿ ಪಾಲಿಸಬೇಕಾದ ಅಂಶಗಳು

• ಮಕ್ಕಳೇ ಬಸ್ಸಿನಲ್ಲಿ ಪ್ರಯಾಣಿಸುವಾಗ ಸುತ್ತಲಿನ ಪರಿಸರವನ್ನು ತಪ್ಪದೇ ಗಮನಿಸಿ.

• ಪ್ರತಿ ದಿನದ ದಿನಚರಿಯನ್ನು ಅಂದೇ ಬರೆಯಿರಿ.

• ಸ್ಥಳಗಳ ಬಗ್ಗೆ ಮಾಹಿತಿಯನ್ನು ಶಿಕ್ಷಕರಿಂದ ಕೇಳಿ ಪಡೆಯರಿ.

• ನೀರು ಅಥವಾ ಇಳಿಜಾರು ಸ್ಥಳಕ್ಕೆ ಭೇಟಿನೀಡಿದಾಗ ಶಿಕ್ಷಕರು ನೀಡುವ ಸಲಹೆ ಪಾಲಿಸಿರಿ

• ಶುದ್ಧ ಕುಡಿಯುವ ನೀರು, ಕೈ ಒರೆಸುವ ಬಟ್ಟೆ ಸದಾ ನಿಮ್ಮೊಂದಿಗೆ ಇರಲಿ.

• ಶಿಸ್ತು ಸಂಯಮದಿಂದ ಪ್ರವಾಸದಲ್ಲಿ ಭಾಗವಹಿಸಿ.