ಭಾರತದಲ್ಲೇ ಪ್ರಸಿದ್ಧ ವಕೀಲರೆಂದು ಹೆಸರು ಗಳಿಸಿದ್ದ ಭಾರೀ ಶ್ರೀಮಂತರೆನಿಸಿದ್ದ  ವ್ಯಕ್ತಿಯೊಬ್ಬರು ಮರುದಿನ ಬೆಳಗಾಗುವ ವೇಳೆಗೆ ಅತ್ಯಂತ ದರಿದ್ರರ ಪಂಕ್ತಿಗೆ ಸೇರಿದ ಪ್ರಸಂಗ. ಮಹಾತ್ಮಾ ಗಾಂಧಿಯವರೇ ಹೇಳಿದಂತೆ, “ರಾಜಕುಮಾರನಂತೆ ಬದುಕಿ ವೈಭವ ಶಿಖರದಲ್ಲಿದ್ದ ವ್ಯಕ್ತಿ ತನ್ನದೆಲ್ಲವನ್ನು ದೇಶಕ್ಕೆ ಅರ್ಪಿಸಿ ಬರಿಗೈ ಭಿಕ್ಷುಕನಾದ ಘಟನೆ”.

ಇದೇ ಬರಿಗೈ ಬಿಕ್ಷುಕ ಕಲ್ಕತ್ತಾ ಮಹಾನಗರದ ಪ್ರಥಮ ಮೇಯರ್  ಸ್ಥಾನಕ್ಕೆ ಆಯ್ಕೆಯಾದರು!

ಈ ವ್ಯಕ್ತಿಸ್ಮಶಾನಯಾತ್ರೆಯಲ್ಲಿ ಶವ ಸಂಸ್ಕಾರಕ್ಕೆ ಬಳಸುವ ಬೆಂಕಿಯನ್ನು ಮಹಾತ್ಮಗಾಂಧಿಯವರೇ ಹಿಡಿದು ಹೊರಟರು.

ಈ ಅಸಾಧಾರಣ ಪುರುಷ ಚಿತ್ತರಂಜನ ದಾಸ್.

“ದೇಶಬಂಧು” ಪ್ರಶಸ್ತಿಯನ್ನು ಭಾರತದ ಜನತೆ ಒಬ್ಬರಿಗೆ ಮಾತ್ರ ಕೊಟ್ಟಿತು. ಪ್ರಶಸ್ತಿಗೆ ತಕ್ಕ ಬದುಕು ನಡೆಸಿ,ಬದುಕಿಗೆ ತಕ್ಕಪ್ರಶಸ್ತಿ ಗಳಿಸಿದವರು ಚಿತ್ತರಂಜನದಾಸ್.

ತಿಂಗಳೊಂದಕ್ಕೆ ೫೦,೦೦೦ ರೂಪಾಯಿ ಆದಾಯ ತರುತ್ತಿದ್ದ ವಕೀಲ ವೃತ್ತಿಯನ್ನು ದೇಶಕ್ಕಾಗಿ ತೊರೆದು, ಸರ್ವಾರ್ಪಣೆ ಮಾಡಿದ ಚಿತ್ತರಂಜನದಾಸರು ರಾಜಕೀಯದಲ್ಲಿದ್ದುದು ಆರೇ ವರ್ಷ. ಇಷ್ಟು ಅಲ್ಪಕಾಲದಲ್ಲಿ ಅಂದಿನ ಭಾರತದ ಅಗ್ರಗಣ್ಯರೆನಿಸಿದವರು ಇವರೊಬ್ಬರೇ.

ಕವಿಯ ಭಾವಾವೇಶ, ವಕೀಲನ ವಿವೇಚನೆ, ರಾಷ್ಟ್ರಪ್ರೇಮಿಯ ನಿಷ್ಠೆ- ಈ ಮೂರು ಸದ್ಗುಣಗಳೂ ಒಂದುಗೂಡಿದ್ದು ಚಿತ್ತರಂಜನ ದಾಸರಲ್ಲಿ. ಮುಸ್ಲಿಂ ಜನಾಂಗದೆ ನಾಯಕರಲ್ಲಿ  ನಂಬಿಕೆ ಮೂಡಿಸಿ, ಹಿಂದೂ-ಮುಸ್ಲೀಂರಲ್ಲಿ ಹೊಂದಾಣಿಕೆ ಸಾಧಿಸಿ, ಅಖಂಡ ಭಾರತದ ಸ್ವಾತಂತ್ಯ್ರ ಕಲ್ಪನೆಯ ಸಲುವಾಗಿ ದುಡಿದ ಕೆಲವೇ ಕೆಲವು ಮಹಾನಾಯಕರಲ್ಲಿ ದಾಸರೂ ಒಬ್ಬರು.  ಭಾರತ ಸ್ವತಂತ್ಯ್ರಗೊಳ್ಳುವವರೆಗೆ ಚಿತ್ತರಂಜನ ದಾಸ್ ಬದುಕಿದ್ದಿದ್ದರೆ, ರಾಷ್ಟ್ರ ಒಡೆದು ಹೋಳಾಗುತ್ತಿರಲಿಲ್ಲ ಎಂಬವುದು ಅನೇಕರ ನಂಬಿಕೆ.

ದಾನಶೀಲ ಬರಿಗೈ ತಂದೆ:

ತಳಿರ್ ಬಾಗ್, ಈಗ ಬಾಂಗ್ಲಾದೇಶದಲ್ಲಿರುವ ವಿಕ್ರಮಪುರಕ್ಕೆ ಸಮೀಪದ ಹಳ್ಳಿ.  ಚಿತ್ತರಂಜನರ ತಾತ ಕಾಶಿಶ್ವರ ದಾಸ್, ತಂದೆ ಭುವನ  ಮೋಹನದಾಸ್, ದೊಡಪ್ಪಂದಿರು ಎಲ್ಲರೂ ವಕೀಲರು, ತಂದೆ ದಾನ ಮತ್ತು ಪರಹಿತ ಸಾಧನೆಗಳ್ನು ಅಳತೆ ಮೀರಿ ಮಾಡುತ್ತಿದ್ದ ಕಾರಣ ತಾವೇ ಕಷ್ಟಕ್ಕೆ ಸಿಕ್ಕಿಬಿದ್ದಿದ್ದರು.

ದಾನಶೀಲ-ಸಾಲಲೋಭ ಭುವನಮೋಹನದಾಸರು ಆಗಲೇ ಇದ್ದ ಸಾಲದ ಹೊರೆಗೆ ಇನ್ನಷ್ಟನ್ನು ಕೂಡಿಸಿಕೊಂಡರು. ತಮ್ಮ ಗುಮಾಸ್ತನ ಶಿಫಾರ‍್ಸಿನ ಮೇಲೆ ಒಬ್ಬ ವ್ಯಕ್ತಿಯು ೩೦ ಸಾವಿರ ರೂ.ಗಳ ಸಾಲಕ್ಕೆ ಖಾತರಿಯಾಗಿ ನಿಂತರು. ಈ ಅನುಕೂಲ ಪಡೆದ ವ್ಯಕ್ತಿ ಸಾಲ ತೀರಿಸಲಿಲ್ಲ. ಪರಿಣಾಮವಾಗಿ ೩೦ ಸಾವಿರ ರೂ.ಗಳ ಸಾಲದ ಹೊರೆ ಬಡ್ಡಿಸಹಿತ ಭುವನಮೋಹನ ದಾಸರ ಮೇಲೆ  ಬಂತು. ತೀರಿಸಲು ಹಣವಿದ್ದರೆ ತಾನೇ! ಈ ಕೊಡುಗೈ ದೊರೆ ಏನನ್ನು ಉಳಿಸಿದ್ಧಾರು? ಅನಿವಾರ್ಯವಾಗಿ ನ್ಯಾಯಾಲಯದ ಮುಂದೆ ನಿಂತು ತಾವು “ಪಾಪರ” ಎಂದು ಘೋಷಿಸಿಕೊಂಡರು.

ಐ.ಸಿ.ಎಸ್. ತಪ್ಪಿತು:

ಭುವನಮೋಹನ ದಾಸರಿಗೆ ಎಂಟು ಜನ ಮಕ್ಕಳು. ಚಿತ್ತರಂಜನ ಮೊದಲ ಮಗ. ಜನ್ಮ ದಿನ ೫-೧೧-೧೮೭೦. ಒಬ್ಬಳೂ ಅಕ್ಕ, ನಾಲ್ವರು ತಂಗಿಯರು ಮತ್ತು ಇಬ್ಬರು ತಮ್ಮಂದಿರು. ದೊಡ್ಡ ಕುಟುಂಬ, ಒಮ್ಮೆಲೆ ಆವರಿಸಿದ ದಾರಿದ್ಯ್ರ ಈ ಕಷ್ಟಗಳನ್ನೆಲ್ಲ ಎದುರಿಸಿ ತಾಳ್ಮೆಯಿಂದ ಇರುತ್ತಿದ್ದ ತಾಯಿ ನಿಸ್ತರಣಿದೇವಿ-ಧರ್ಮಪರಾಯಣೆ.

ತಂದೆಯಿಂದ ಧೈರ್ಯ, ದಾನಶೀಲ, ಕವಿತಾ ಪ್ರತಿಭೆಗಳನ್ನು ಬಳುವಳಿಯಾಗಿ ಪಡೆದಿದ್ದ ಚಿತ್ತರಂಜನ ದಾಸರು ತಾಯಿಯಿಂದ ಕಷ್ಟಗಳ ಎದುರಿನಲ್ಲಿಯೂ ತಾಳ್ಮೆಯಿಂದಿರುವ ಗುಣವನ್ನು ಧರ್ಮಶ್ರದ್ದೇಯನ್ನೂ ಪಡೆದುಕೊಂಡರು.

ಆಟದ ಬಯಲಿನಲ್ಲಿಯಾಗಲೀ, ಓದಿನಲ್ಲಾಗಲಿಯಾಗಲಿ ಇತರರಿಗೆ ಎಂದೂ ಮೊದಲ ಸ್ಥಾನವನ್ನು ಚಿತ್ರರಂಜನರು ಬಿಟ್ಟುಕೊಟ್ಟವರಲ್ಲ. ಪ್ರಾರಂಭದ ಶಿಕ್ಷಣದ ನಂತರ ಕಲ್ಕತ್ತೆಯಲ್ಲಿ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದಿ ಪದವಿಧರರಾದರು.

ಓದಿನ ದಿನಗಳಲ್ಲಿ ಚಿತ್ತರಂಜನರಿಗೆ ಗಣಿತದ ಮೇಲೆ ಪ್ರೀತಿ ಅಷ್ಟೇಕಷ್ಟೆ.  ಇಂಗ್ಲೀಷ ಭಾಷೆಯಲ್ಲಿ ಅಪಾರ ಶ್ರದ್ದೇ. ಅಷ್ಟೇ ಪ್ರೀತಿ ಬಂಗಾಳಿಯಲ್ಲಿ. ಹೀಗಾಗಿ ಉಭಯ ಭಾಷೆಗಳ ಹಿರಿಯರ ಬರಹಗಳ ಪ್ರಭಾವ ಅವರ ಮೇಲೆ ಮೂಡಿತ್ತು.

ಐ.ಸಿ.ಎಸ್. ಪರೀಕ್ಷೆಗಾಗಿ ಲಂಡನ್ನಿನಗೆ ೧೮೯೦ರಲ್ಲಿ ತೆರಳಿದರು.  ೧೮೯೩ರಲ್ಲಿ ಅವರ ತೇರ್ಗಡೆ ನಿಶ್ಚಿತವೇ ಆಗಿತ್ತು. ಆದರೆ ೧೮೯೨ರಲ್ಲಿ ಬ್ರಿಟಿನ್ನಿನ ಪಾರ್ಲಿಮೆಂಟ್ಗೆ ಚುನಾವಣೆ ನಡೆದಾಗ ದಾಸರು ಭಾರತದಲ್ಲಿ ಬ್ರಿಟಿಷರ ಆಡಳಿತವನ್ನು ಉಗ್ರವಾಗಿ ಟೀಕಿಸಿದ್ದರು.- ಭಾರತ ಸರಕಾರದಲ್ಲಿ ದೊಡ್ಡ ಅಧಿಕಾರಿಯಾಗಬೇಕಾಗಿದ್ದ ಈ ಯುವಕ ಅಲ್ಲಿನ ಲಿಬರಲ್ ಪಕ್ಷದ ಪರವಾಗಿ ಪರವಾಗಿ  ಪ್ರಚಾರ ನಡೆಸಿದ್ದರು.  ಇದರಿಂದ ಬ್ರಿಟಿಷರ ಸರಕಾರ ಅವರಿಗೆಕೆಲಸ ಕೊಡಲು ನಿರಾಕರಿಸಿತು.  ಇದು ಅವರ ಕುಟುಂಬಕ್ಕೆ ಹಾನಿಯುಂಟು ಮಾಡಿದ್ದು, ನಿಜ. ಆದರೆ ರಾಷ್ಟ್ರಕ್ಕೆ ಹಿತಕಾರಿಯಾಯಿತು. ಅದೇ ವರ್ಷ ಬಾರ ಅರ್ಟ ಲಾ ಪದವಿಯನ್ನು ಪಡೆದು ವಕೀಲರಾಗಿ ದಾಸ್ ಭಾರತಕ್ಕೆ ಮರಳಿದರು.

ಕಷ್ಟದ ದಿನಗಳು:

ಕಲ್ಕತ್ತಾ ಉಚ್ಛ ನ್ಯಾಯಾಲಯದ ವಕೀಲರೇನೋ ಆದರು. ತಂದೆ ಮಾಡಿದ್ದ ಕೆಲವು ಸಾಲಗಳ ಪತ್ರಗಳ ತಂದೆ ಮತ್ತು ಮಗನ ಹೆಸರುಗಳಲ್ಲಿ ಮುಂದುವರೆದವು. ಸಾಲವನ್ನು ತೀರಿಸಲು ಸಾಧ್ಯವಾಗಲಿಲ್ಲ. ೧೮೯೬ರಂದು ಭುವನ ಮೋಹನ ಮತ್ತು ಚಿತ್ತರಂಜನ ದಾಸ ಇಬ್ಬರೂ “ಪಾಪರ” ಎಂದು ನ್ಯಾಯಾಲಯ ತೀರ್ಮಾನಿಸಿತು.  ಇದ್ದಷ್ಟು ಆಸ್ತಿಯನ್ನು ಅಧಿಕಾರಿಯೊಬ್ಬರು ವಹಿಸಿಕೊಂಡರು. ಸಾಲದ ಹೊರೆ, ದೊಡ್ಡ ಕುಟುಂಬದ ಹೊಣೆಗಳನ್ನು ಹೊತ್ತಿದ ದಾಸರಿಗೆ ಕಲ್ಕತ್ತೆಯ ಉಚ್ಛ ನ್ಯಾಯಾಲಯದಲ್ಲಿ ನೀಗುವುದು ಸುಲಭವಾಗಲಿಲ್ಲ. ಆಗ ಉಚ್ಛ ನ್ಯಾಯಾಲಯದಿಂದ ದೂರ ಸರಿದು ಸಣ್ಣ ಊರುಗಳಲ್ಲಿ ಅದೂ ಕ್ರಿಮಿನಲ್ ಮೊಕದ್ದಮ್ಮೆಗಳನ್ನಷ್ಟೇ ಹಿಡಿಯಲು ನಿಂತರು. ವಿಧಿಯಿಲ್ಲದೆ ಕಡಿಮೆ “ಪೀಸ್ ಗೆ ಕೆಲಸ ಮಾಡಲು ಒಪ್ಪುತ್ತಿದ್ದರು.  ಕುದುರೆ ಗಾಡಿಗೆ ಕೊಡಲು ಹಣವಿಲ್ಲದೆ ನಡೆದೇ ನ್ಯಾಯಾಲಯಕ್ಕೆ ಹೋಗುತ್ತಿದ್ದ ಪರಿಸ್ಥಿತಿ. ನಾಲ್ಕು ವರ್ಷಗಳ ಕಾಲ ಕಡು ಕಷ್ಟ ಅನುಭವಿಸಿದರು. ದಿನ ಕ್ರಮದಲ್ಲಿ ಎದುರಾಳಿ ಸಾಕ್ಷಿಗಳನ್ನು ತಮ್ಮ ಪಾಟಿಸವಾಲಿನ ಮೂಲಕ ದಂಗುಬಡಿಸುವ ವಕೀಲರೆಂದು ಖ್ಯಾತರಾದರು. ೧೯೦೭ರ ಹೊತ್ತಿಗೆ  ಒಳ್ಳೆಯ ವಕೀಲರೆಂದು ಹೆಸರಾಗಿ, ತಕ್ಕಷ್ಟು ವರಮಾನವೂ ಬರುವಂತಾಯಿತು.

‘ನೆನಪಿಡಿ: ಇತಿಹಾಸದ ನ್ಯಾಯಾಲಯದ ಮುಂದೆ –’

ಭಾರತದಲ್ಲಿ, ಅದರಲ್ಲಿಯೂ ಬಂಗಾಳದಲ್ಲಿ ಬ್ರಿಟಿಷ್ ವಿರೋಧಿ ಭಾವನೆ ಬಲಗೊಳ್ಳುತ್ತಿತ್ತು. ತಮ್ಮ ಆಶೋತ್ತರಗಳಿಗೆ ಅಡ್ಡಿ ಎನಿಸಿದ ಆಂಗ್ಲ ಅಧಿಕಾರಿಗಳ ಕಥೆಯನ್ನೇ ಮುಗಿಸುವ ಗುಪ್ತ ಚಟುವಟಿಕೆಗಳು ಬೆಳೆಯುತ್ತಿತ್ತು.  ಬ್ರಿಟಿಷರು ಕ್ರೂರವಾಗಿ ವರ್ತಿಸುತ್ತಿದ್ದರು. ಪ್ರತಿಯಾಗಿ ಅವರ ವಿರುದ್ಧ ಕ್ರೌರ್ಯದ ಮಾರ್ಗ ಅನುಸರಣೆ ಮಾಡುವುದು ಕ್ರಾಂತಿಕಾರಿಗಳ ಗುರಿಯಾಗಿತ್ತು.

ಅಂದಿನ ಚೀಫ್ ಪ್ರೆಸಿಡೆನ್ಸಿ ಮ್ಯಾಜಿಸ್ಟ್ರೇಟ್ ಕಿಂಗ್ಸ ಫರ್ಡ ರಾಜಕೀಯ ಅಪಾದನೆಗೆ ಒಳಪಟ್ಟವರಿಗೆ ಅತಿ ಕ್ರೂರವೇನಿಸುವ ಶಿಕ್ಷೆ ವಿಧಿಸುತ್ತಿದ್ದ. ಇದರಿಂದ ಕ್ರಾಂತಿಕಾರಿಗಳು ಅವನ ವಿರುದ್ಧ ಕುದಿಯುತ್ತಿದ್ದರು. ಈತನನ್ನು ಕೊಲೆ ಮಾಡುವ ಉದ್ದೇಶದ ಪ್ರಯತ್ನ ಒಮ್ಮೆ ವಿಫಲವಾಯಿತು. ಇನ್ನೊಂದು ಪ್ರಯತ್ನ  ನಡೆದಾಗ ಇಬ್ಬರು ಆಂಗ್ಲ ಮಹಿಳೆಯರಿಗೆ ಗುಂಡುತಗುಲಿ ಅವರ ಸಾವಿಗೆ ಕಾರಣವಾಯಿತು.

ಈ ಪ್ರಕರಣಕ್ಕೆ ಹಿನ್ನಲೆಯಾದ ಪಿತೂರಿಯನ್ನು ಪತ್ತೇ ಹಚ್ಚಬೇಕೆಂದು ಸರಕಾರ ಸರ್ವ ಸನ್ನಾಹ ನಡೆಸಿತು. ರಾಜದ್ರೋಹ, ಭಯೋತ್ಪಾದಕ ಕೃತ್ಯ ಹಾಗೂ ವಿದ್ವಂಸಕ ಕೃತ್ಯಗಳಲ್ಲಿ ತೊಡಗಿದರೆಂಬ ಅಪಾದನೆಯ ಮೇಲೆ “ಯುಗಾಂತರ ಪಕ್ಷ”ದ ಮೇಲೆ ಮೊಕದ್ದಮೆ ಹೂಡಿ ಸದಸ್ಯರನ್ನೆಲ್ಲಾ ಬಂಧಿಸಿದರು. ಅರವಿಂದ ಘೋಷರು ಈ ತಂಡದ ನಾಯಕ. ಮುಂದೆ ಮಹರ್ಷಿ ಅರವಿಂದರೆಂದು ವಿಶ್ವಮಾನ್ಯರಾದವರು ಇವರೇ.

ಸೆಷನ್ ನ್ಯಾಯಾಲಯದ ಮುಂದೆ ವಿಚಾರಣೆ ಆರಂಭವಾದಾಗ ಸರಕಾರದ ಪರ ಪ್ರಸಿದ್ಧ ಆಂಗ್ಲ ವಕೀಲ ಆರ್ಡ್ಲೆ ನಾರ್ಟನ್ ವಾದಿಸಿದರು.  ಅರವಿಂದರಂತೂ ದಾರಿದ್ರವನ್ನೇ ವರಿಸಿದ್ದರು. ನ್ಯಾಯಾಲಯದ ವೆಚ್ಚಕ್ಕಾಗಿ ಜನರು  ಕೂಡಿಸಿದ ಹಣವೂ ವೆಚ್ಚವಾಗಿ ಹೋಯಿತು.ಆಗ ಚಿತ್ತರಂಜನ ದಾಸರನ್ನುಬಿಟ್ಟು ಅರವಿಂದರ ಪರವಹಿಸಲು ಬೇರೆ ವಕೀಲರೇ ಇರಲಿಲ್ಲ.

ಹತ್ತು ತಿಂಗಳ ಕಾಲ ವಿಚಾರಣೆ ನಡೆಯಿತು. ಇನ್ನೂರಕ್ಕೂ ಹೆಚ್ಚು ಸಾಕ್ಷಿಗಳನ್ನು ತಂದು ನಿಲ್ಲಿಸಲಾಯಿತು. ಚಿತ್ತರಂಜನ ದಾಸರು ತಮ್ಮ ಕಾಲ, ಶಕ್ತಿಗಳನ್ನೆಲ್ಲ ಈ ವಿಚಾರಣೆಗೆ ಮುಡಿಪು ಮಾಡಿದರು. ಅರವಿಂದರ ಬಿಡುಗಡೆಯೂ ಆಯಿತು. ಆದರೆ ವಿಚಾರಣೆ ಮುಗಿಯುವ ಹೊತ್ತಿಗೆ ಚಿತ್ತರಂಜನರು ಸಾರೋಟು ಕುದುರೆಗಳನ್ನೂ ಮಾರಬೇಕಾಯಿತು.

ಚಿತ್ತರಂಜನರು ಒಂಬತ್ತು ದಿನಗಳ ಕಾಲ ಒಂದೇ ಸಮನೆ ಪ್ರತಿವಾದ ನಡೆಸಿ ಎದುರಾಳಿಗಳ ವಾದವನ್ನು ಖಂಡಿಸಿದರು.  ಅಸಾಮಾನ್ಯ ಕಾನೂನು ಪಾಂಡಿತ್ಯ ಮತ್ತು ತರ್ಕದಿಂದ ಕೂಡಿದ ವಾದವನ್ನು ಮುಕ್ತಾಯಗೊಳಿಸುತ್ತಾ ಅವರೆಂದರು-

ಅಪಾದಿತರು ಈ ನ್ಯಾಯಾಲಯದ ಮುಂದೆ ಮಾತ್ರ ನಿಂತಿಲ್ಲ: ಇತಿಹಾಸದ ಸರ್ವೊನ್ನತ ನ್ಯಾಯಾಲಯದ ಮುಂದೆ ನಿಂತಿದ್ದಾರೆಂದು ನೀವು ಭಾವಿಸಬೇಕು. ಇಂದಿನ ವಿವಾದ ಕೊನೆಗೊಂಡ ಮೇಲೆ, ಆಪಾದಿತರು ಈ ಲೋಕವನ್ನು ಬಿಟ್ಟ ಮೇಲೆ ಕೂಡ ಇವರು ದೇಶಪ್ರೇಮವನ್ನು ಮೂಡಿಸಿದ್ದ ಕವಿ, ರಾಷ್ಟ್ರೀಯತೆಯ ಭಾವನೆಯನ್ನು ಮೂಡಿಸಿದ ಪ್ರವಾದಿ ಮತ್ತು ಮಾನವೀಯತೆಯ ಆರಾಧಕರೆಂದು ಮಾನ್ಯರಾಗಿ ಉಳಿಯುತ್ತಾರೆಂಬುವುದನ್ನು ಮರೆಯಬಾರದು.

ಚಿತ್ತರಂಜನದಾಸರ ಪ್ರಯತ್ನ ಫಲಿಸಿತು. ಅರವಿಂದ ಘೊಷರ ಬಿಡುಗಡೆ ಆಯಿತು. ಆದರೆ ಅರವಿಂದರ ಸೋದರ ವೀರೇಂದ್ರ ಕುಮಾರ ಘೋಷ್ ಮತ್ತು ಉಲ್ಲಾಸದತ್ತರಿಗೆ ಮರಣದಂಡನೆ ವಿಧಿಸಲಾಯಿತು.

ಈ ತೀರ್ಪಿನ ವಿರುದ್ಧ ಪುನಃ ಚಿತ್ತರಂಜನ ದಾಸರೇ ಉಚ್ಛ ನ್ಯಾಯಾಲಯದಲ್ಲಿ ಅಪೀಲು ಹೂಡಿದರು. ೪೮ ದಿನಗಳ ಕಾಲವಾದಿಸಿದರು.  ಅವರ ಕಾನೂನು ಪಾಂಡಿತ್ಯ ಮತ್ತು ವಾದ ಮಂಡನೆಯ ಪ್ರತಿಭೆ ಈ ವಾದದಲ್ಲಿ ಬೆಳಗಿತು. ಅಪಾದಿತರಿಬ್ಬರಿಗೂ ನೇಣೀಗೆ ಶಿಕ್ಷೆ ತಪ್ಪಿತು. ಉಚ್ಛ ನ್ಯಾಯಾಧೀಶರೇ ಚಿತ್ತರಂಜನ ದಾಸರನ್ನು ಪ್ರಶಂಸಿಸುವವ ಮಾತುಗಳು ತಮ್ಮ ತೀರ್ಪಿನಲ್ಲಿ ಬರೆದರು.

ಇತಿಹಾಸದ ಸರ್ವೊನ್ನತ ನ್ಯಾಯಾಲಯದ ಮುಂದೆ ನಿಂತಿದ್ದೀರೆಂದು ಭಾವಿಸಿ

ಸುವರ್ಣ ವೃಷ್ಟಿ :

ಅಂದಿನಿಂದಲೇ ಚಿತ್ತರಂಜನರಿಗೆ ಅಪಾರ ಕೀರ್ತಿ ಲಭಿಸಿತ್ತು. ರಾಷ್ಟ್ರದ ಹಿರಿಯ ವಕೀಲರೆಂದು ಖ್ಯಾತಿ ಪಡೆದರು. ಹಣದ ಸುರಿಮಳೆಯಾಗತೊಡಗಿತು. ಇದು ಕ್ರಿಮಿನಲ್ ವ್ಯವಹಾರ. ಇನ್ನೊಂದು ಸಿವಿಲ್ ದಾವೆ. ದುಮರಾನ್ ಮಹಾರಾಜರ ಉತ್ತರಾಧಿಕಾರಕ್ಕೆ ಸಂಬಂಧಿಸಿದ ತೊಡಕಿನ ವ್ಯವಹಾರ. ಇದರಲ್ಲಿ ಕೇಶವ್ ಪ್ರಸಾದ್ ಎಂಬುವರು ಒಳಗಾಗಿದ್ದರು.  ಅವರಿಗೆ ಗೆಲುವು ಸಿಕ್ಕುವುದಿಲ್ಲವೆಂದು ಅನೇಕ ಮಂದಿ ಪ್ರಖ್ಯಾತ ವಕೀಲರು ಕೈಬಿಟ್ಟಿದ್ದರು.

ತಿಂಗಳೀಗೆ ೧೦,೦೦೦ ರೂಪಾಯಿಗಳ “ಪೀಸ್ ” ಮತ್ತು ದಾವೆಯಲ್ಲಿ ಗೆದ್ದರೆ ವರ್ಷಕ್ಕೆ ೫೦,೦೦೦ ರೂಪಾಯಿಗಳ ಆದಾಯ ತರುವ ಆಸ್ತಿಯನ್ನು ಕೊಡುವ ವಾಗ್ದಾನದ ಮೇಲೆ ಕೇಶವ ಪ್ರಸಾದ ಚಿತ್ತರಂಜನ ದಾಸರನ್ನು ತನ್ನ ವಕೀಲರನ್ನಾಗಿ ನೇಮಿಸಿಕೊಂಡ. ಅಧೀನ ನ್ಯಾಯಾಲಯದಲ್ಲಿ ದಾಸರಿಗೆ ಗೆಲುವು ಲಭಿಸಿತು.  ಕಲ್ಕತ್ತಾ ಉಚ್ಛ ನ್ಯಾಯಾಲಯದ ವಿಶೇಷ ಪೀಠದ ಎದುರಿನಲ್ಲೂ ಜಯಗಳಿಸಿದರು. ಆದರೆ ಕಕ್ಷಿಗಾರ ತನ್ನ ಮಾತಿನಂತೆ ನಡೆಯಲಿಲ್ಲ. ಈ ರೀತಿ ವಚನ ಭಂಗ ಮಾಡಿದ ಇದೇಮನುಷ್ಯ ಇನ್ನೊಮ್ಮೆ ಕಷ್ಟಕ್ಕೆ ಸಿಕ್ಕಿದಾಗಲೂ ದಾಸ್ ಅವನನ್ನು ಪಾರು ಮಾಡಿದರು.

ಸ್ವಾತಂತ್ಯ್ರ ಯೋಧರಿಗಾಗಿ :

ಚಿತ್ತರಂಜನರು ತುಂಬಾ ಖ್ಯಾತಿಗಳಿದ್ದು ಬ್ರಿಟಿಷರ ಸರಕಾರ ಬಂಧಿಸಿದ ಹೋರಾಟಗಾರರ ವಕೀಲರಾಗಿ.

ಬ್ರಿಟಿಷರ ಸರಕಾರ ೧೯೦೫ರಲ್ಲಿ ಬಂಗಾಳವನ್ನು ಎರಡು ಹೋಳು ಮಾಡಿತು. ಇದರಿಂದ ಬ್ರಿಟಿಷರ ಸರಕಾರವನ್ನೆ ಕಿತ್ತಸೆಯುವ ಕ್ರಾಂತಿಕಾರಿ ಉದ್ದೇಶದ “ಅನುಶೀಲನ ಸಮಿತಿ” ಹುಟ್ಟಿಕೊಂಡಿತು. ಗುಪ್ತ ಚಟುವಟಿಕೆಯ ನಾಯಕ ಪುಲಿನ ಬಿಹಾರಿ ದಾಸರ ಮತ್ತು  ಇತರ ಅಪಾದಿತರ ಪರವಾಗಿ (೧೯೧೦) ದಾಸ ನ್ಯಾಯಲಯದಲ್ಲಿ ಹೋರಾಡಿದರು. ಢಾಕಾ ಪಿತೂರಿ ಮೊಕದ್ದಮೆ ಎಂದು ಪ್ರಸಿದ್ಧಿ ಗಳಿಸಿದ ಈ ವಿಚಾರಣೆಯಲ್ಲಿ ಕೆಳಗಿನ ನ್ಯಾಯಾಲಯದಲ್ಲಿ ಜಯಲಭಿಸದಿದ್ದರೂ ಉಚ್ಛ ನ್ಯಾಲಯದಲ್ಲಿ ಯಥೋತಚಿತ ಪರಿಹಾರ ದೊರಕಿತು.

ತಕ್ಷಣವೇ ಚಿತ್ತರಂಜನ ದಾಸರನ್ನು ದೆಹಲಿ ಪಿತೂರಿ ಮೊಕದ್ದಮೆ (೧೯೧೪) ಕಾದು ಕುಳಿತ್ತಿತ್ತು. ೧೯೧೨ ರಲ್ಲಿ ಇಡೀ ದೇಶದ ಗಮನ ಸೆಳೆದ ವಿಚಾರಣೆಯೊಂದು ಪ್ರಾರಂಭವಾಯಿತು.ವೈಸರಾಯ್ ಲಾರ್ಡ ಹಾರ್ಡಿಂಜನರನ್ನು ಕೊಲೆ ಮಾಡಲು ಪಿತೂರಿ ನಡೆಸಿದರೆಂದು ಸರಕಾರ ಹದಿನಾಲ್ಕು ಮಂದಿ ಯುವಕರ ವಿಚಾರಣೆಯನ್ನು ಪ್ರಾರಂಭಿಸಿತು. ಅಂದಿನ ಪ್ರಖ್ಯಾತ ಆಂಗ್ಲ ವಕೀಲರು ಸರಕಾರಕ್ಕೆ ಸಹಕಾರಿಗಳಾಗಿದ್ದರು. ದೆಹಲಿಯ ವಕೀಲರಿಗೆ ಅವರನ್ನು ಎದುರಿಸುವುದು ಸಾಧ್ಯವೇ ಆಗಲಿಲ್ಲ. ಅವರು ಚಿತ್ತರಂಜನರನ್ನು ಯುವಕರ ಪರ ವಕೀಲಿ ವಹಿಸಲು ಬೇಡಿದರು. ದಾಸರಿಗೆ ಆಗ ಒಂದು ದಿನ ಕಲ್ಕತ್ತೆ ಬಿಟ್ಟರೆ ಮೂರು ಸಾವಿರ ರೂಪಾಯಿ ನಷ್ಟ. ಆದರೂ ದೆಹಲಿಗೆ ಹೋದರು. ಗೆದ್ದರು.

ಇನ್ನೊಂದು ಮೊಕದ್ದಮೆ, ಐವರು ಕ್ರಾಂತಿಕಾರರ ಮೇಲೆ. ರಹಸ್ಯವನ್ನು ಬಯಲು ಮಾಡಿದನೆಂದು ತಮ್ಮ ಜೊತೆಗಾರನೊಬ್ಬನನ್ನು ಅವರು ಕೊಂದು ಹಾಕಿದರು, ಎಂದು ಸರಕಾರದ ಆರೋಪ. ಮೊದಲು ಒಬ್ಬ ಅಪಾದಿತನ ಪರ ವಕೀಲಿ ಒಪ್ಪಿಕೊಂಡಿದ್ರೂ ದಾಸ ಐದು ಮಂದಿ ಅಪದಿತರ ಪರ ವಹಿಸಿ ತಮ್ಮ ವಾದ ವೈಖರಿಯಿಂದ ಜಯಗಳಿಸಿದರು.

“ಅಮೃತ ಬಜಾರ ಪತ್ರಿಕಾ” ಇಂದು ಭಾರತದಲ್ಲೆಲ್ಲ ಪ್ರಸಿದ್ಧವಾದ ಇಂಗ್ಲೀಷ್ ದಿನಪತ್ರಿಕೆ. ಪತ್ರಿಕೆ ಒಂದು ಲೇಖನದಲ್ಲಿ ಕಲ್ಕತ್ತೆಯ ಹೈಕೋರ್ಟಿಗೆ ಅಪಮಾನ ಮಾಡಿತು ಎಂದು ಅದರ ವಿರುದ್ಧ ಮೊಕದ್ದಮೆ ಹೂಡಲಾಯಿತು. ವಿಚಾರಣೆ ಉಚ್ಛ ನ್ಯಾಯಾಲಯದ ಪೂರ್ಣ ಪೀಠದ ಸಮ್ಮುಖದಲ್ಲಿ ನಡೆಯಿತು.

“ಪತ್ರಿಕಾ ” ಪರವಾಗಿ ವಾದಿಸಲು ಅಂದಿನ ಖ್ಯಾತ ಆಂಗ್ಲ ವಕೀಲರಾದ ಜಾಕಸನ್, ನಾರ್ಟನ ಮತ್ತು ಭಾರತೀಯ ವಕೀಲ ಚಕ್ರವರ್ತಿ, ಪ್ರಯತ್ನಿಸಿದರು. ಪ್ರಯೋಜನವಾಗಲಿಲ್ಲ. ಅನಂತರ ದಾಸ ವಕೀಲಿಗೆ ನಿಂತರು. ಪತ್ರಿಕೆ ದುರುದ್ದೇಶದಿಂದ ಬರೆಯಲಿಲ್ಲವೆಂಬುವುದನ್ನು ನ್ಯಾಯಾಲಯಕ್ಕೆ ಮನವರ್‌ಇಕೆ ಮಾಡಿಕೊಡುವುದರಲ್ಲಿ ಸಫಲರಾದರು.

ಚಿತ್ತರಂಜನದರಿಗೆ ಅಸಾಧಾರಣ ಕೀರ್ತಿಯನ್ನು ತಂದುಕೊಟ್ಟ ಮೊಕದ್ದಮ್ಮೆಗಳಲ್ಲಿ ಇವು ಕೆಲವು. ಸ್ವಾತಂತ್ಯ್ರದ ಹೋರಾಗಾರರ ಪರವಾಗಿ ವಾದಿಸಿದಾಗ ಅವರಿಗೆ ಹಣ ಬರುತ್ತಿರಲಿಲ್ಲ. ಬೇರೆ ಮೊಕದ್ದಮೆಗೂ ಹೋಗಲಾಗದೆ ಸಾವಿರಾರು ರೂಪಾಯಿ ನಷ್ಟವಾಗುತ್ತಿತ್ತು. ಆದರೆ ಇತರ ಮೊಕದ್ದಮೆಗಳಿಂದ ಕೈ ತುಂಬ ಹಣ.

ನ್ಯಾಯಾಲಯದ ಇತಿಹಾಸದಲ್ಲೇ ಮೊದಲನೆಯ ಬಾರಿ !:

ಚಿತ್ತರಂಜನರ ತಂದೆ ಇತರರಿಗೆ ಉಪಕಾರ ಮಾಡುವ ಭರದಲ್ಲಿ ಬರಿಗೈಯವರಾಗಿ, ಅವರೂ ಚಿತ್ತರಂಜನರೂ “ಪಾಪರ್; ಎಂದು  ನ್ಯಾಯಾಲಯ ತೀರ್ಮಾನ ಮಾಡಿತಲ್ಲವೇ?

ನ್ಯಾಯಾಲಯ ಯಾರಾದರೂ ಪಾಪರ್ ಎಂದು ನಿರ್ಧರಿಸಿದರೆ, ಅವರಿಗೆ ಸಾಲ ಕೊಟ್ಟವರು ಮತ್ತೇ ಕೇಳುವ ಹಾಅಗಿಲ್ಲ.  ಆದುದರಿಂದ ಸಾಲ ಕೊಟ್ಟವರು  ಮತ್ತೇ ಕೇಳುವ ಹಾಗಿಲ್ಲ. ಆದುದರಿಂದ ಸಾಲ ತೀರಿಸುವ ಯೋಚನೆ ಬಿಟ್ಟು ಬಿಡುತ್ತಾರೆ.  ಇವರಿಗೆ ಸಮಾಜದಲ್ಲಿ ಗೌರವವೂ ಇಲ್ಲ.

ಚಿತ್ತರಂಜನರು ತಮ್ಮ ಹಣಕಾಸಿನ ಪರಿಸ್ಥಿತಿ ಉತ್ತಮಗೊಂಡರೆ ಕೂಡಲೇ ತಾವೇ ತಮ್ಮ ತಂದೆಯ ಹಳೆಯಸಾಲಗಾರರನ್ನು ಹುಡುಕಿದರು. ಪ್ರತಿಯೋರ್ವರ ಸಾಲವನ್ನು ಕೊನೆಯ ಕಾಸಿನವರೆಗೆ ತೀರಿಸಿದರು. ಮತ್ತೇ ನ್ಯಾಯಾಲಯಕ್ಕೆ ಹೋಗಿ, ವಿಷಯ ತಿಳಿಸಿದರು. ಗತಿಸಿದ ತಂದೆಯನ್ನು ಮತ್ತು ತಮ್ಮನ್ನ ಪಾಪರ ಶಾಪದಿಂದ ಬಿಡುಗಡೆ ಮಾಡಿಕೊಂಡರು.

“ಪಾಪರ ಎಂದು ತೀರ್ಮಾನಿಸಲ್ಪಟ್ಟಿದ್ದ ವ್ಯಕ್ತಿಯೊಬ್ಬರು ಇಷ್ಟು ಕಾಲವಾದ ಮೇಲೆ ತಮ್ಮ ಸಾಲದ ಹೊಣೆಯನ್ನು ಒಪ್ಪಿಕೊಂಡಿದ್ದು, ಬ್ರಿಟಿಷ್  ನ್ಯಾಯಾಲಗಳ ಇತಿಹಾಸದಲ್ಲಿಯೇ ಇದು ಮೊದಲ ಘಟನೆ” ಎಂದು ನ್ಯಾಯಧೀಶ ಫ್ಲೇಚರ್ ಬರೆದರು.

ಅತ್ಮಾಭಿಮಾನ, ಪ್ರಾಮಾಣಿಕತೆಗಳಷ್ಟೆ ಅವರ ಪಿತೃಭಕ್ತಿಯೂ ಅಸಾಧಾರಣವಾಗಿತ್ತು. ಈ ರೀತಿ ಪಿತೃಋಣ ಸಲ್ಲಿಸಿದವರೆಷ್ಟು ಮಂದಿ ಮಕ್ಕಳು ?

ಕವಿ-ಪತ್ರಕರ್ತ:

ಚಿತ್ತರಂಜನರು ಬ್ರಹ್ಮಸಮಾಜ ಸೇರಿದ್ದರು. ಬ್ರಹ್ಮಸಮಾಜದವರು ವಿಚಾರ ಮಾಡಿ ಬುದ್ಧಿಗೆ ಸರಿ ಎಂದು ತೋರುವುದನ್ನು ಮಾತ್ರ ಒಪ್ಪುವವರು. ಆದರೆ ಆ ಕಾಲದಲ್ಲಿ ವೈಷ್ಣವ ಕವಿಗಳ ಹಾಡುಗಳು ತುಂಬಾ ಜನಪ್ರೀಯವಾಗಿದ್ದವು. ಈ ಹಾಡುಗಳಲ್ಲಿ ಕವಿಯ ಗಾಢವಾದ ದೈವಭಕ್ತಿ ತಾನೇತಾನಾಗಿ ಭಾಷೆಯ ರೂಪದಲ್ಲಿ ಪ್ರವಾಹವಾಗಿ ಹರಿಯುತ್ತಿ‌ತ್ತು. ಕೇಳುವವರ ಹೃದಯವನ್ನು ಮುಟ್ಟುತ್ತಿತ್ತು. ಚಿತ್ತರಂಜನರಿಗೆ ಈಹಾಡುಗಳು ಬಹುಪ್ರೀಯ.

ಚಿಕ್ಕಂದಿನಿಂದಲೇ ಕವಿತಾರಚನೆಯ ಗೀಳು ಬೆಳೆಸಿಕೊಂಡಿದ್ದ ಚಿತ್ತರಂಜನ ದಾಸರ ಮೊದಲು ಕವಿತಾ ಸಂಗ್ರಹ “ಮಾಲಾಂಚ”. ಈ ಸಂಗ್ರಹದ ಕವನಗಳಲ್ಲಿ ಬಹುಪಾಲು ಭಕ್ತಿಗೀತೆಗಳು ಮತ್ತು ಪ್ರಕೃತಿ ಗಾನ. ಆದರೆ ಸಮಾಜದಲ್ಲಿ ಕಷ್ಟಪಡುವ ಬಡಜನರ ನೋವಿಗೂ ಕವಿ ಹೃದಯ ತೆರೆದಿತ್ತು.

೧೯೧೦ರಲ್ಲಿ  ಪ್ರಕಟಿಸಿದ :ಸಾಗರ ಸಂಗೀತ” ಅವರಿಗೆ ಅಧುನಿಕ ಬಂಗಾಳಿ ಸಾಹಿತಿಗಳಲ್ಲಿ ಪ್ರತಿಷ್ಠಿತ ರ್ಸಥಾನ ತಂದು ಕೊಟ್ಟಿತು. ಇಂಗ್ಲೇಂಡಿನಿಂದ ಹಿಂದಿರುಗುವಾಗ ಸಮುದ್ರಯಾನದ ಕಾಲದಲ್ಲಿ ರಚಿಸಿದ ಕವಿತೆಗಳಿವು. ಇಲ್ಲಿ ಕವಿತಾ ವಸ್ತು ಹೊಚ್ಚ ಹೊಸದು ಅಷ್ಟೇ ಅಲ್ಲ, ಭಾವಕ್ಕೆ ಭಾಷೆಯಲ್ಲಿ ರೂಪ ಕೊಡುವ ರೀತಿಯೂ ಸೊಗಸಾದದ್ದು, ಅನಂತದ “ಅಂತರ್ಯಾಮಿ”, “ಕಿಶೋರ ಕೀಶೋರಿ”ಗಳಲ್ಲೂ ಗಾಢವಾದ ಭಕ್ತಿ ವ್ಯಕ್ತವಾಗುತ್ತದೆ.

ಚಿತ್ತರಂಜನರಿಗೆ ಕಾವ್ಯ ಬರೆಯಲು ಇನ್ನಷ್ಟು ಸಮಯ ದೊರಕಿದ್ದರೆ ಅವರು ಬಹು ದೊಡ್ಡ ಕವಿ ಆಗುತ್ತಿದ್ದರು.

ಈ ನಾಡಿನಲ್ಲಿ ಬೆಳಗುತ್ತಿರುವ ದೀಪ ನಂದಿಹೋಗುವ ಸಂಭವವಿಲ್ಲ

ತಮ್ಮಸಾಹಿತ್ಯ ಅಭಿರುಚಿಗೆ ತಕ್ಕ ನಿಯತ ಕಾಲಿಕವನ್ನೂ ಹೊರ ತಂದು ಬಂಗಾಳಿ ಸಾಹಿತ್ಯ ಸೇವೆ ಮಾಡಬೇಕೆಂದು ಅವರ ಬಯಕೆ. ಇದು ೧೯೧೪ರಲ್ಲಿ ಫಲಿಸಿ “ನಾರಾಯಣ” ಹೊರ ಬಂದಿತು. ತಮ್ಮ ವಿಚಾರಗಳ ಪ್ರತಿಪಾದನೆಗಾಗಿ ಅವರು ೧೯೨೩ರಲ್ಲಿ “ಫಾರವರ್ಡ ” ಎಂಬ ದೈನಿಕ (ಇಂಗ್ಲೀಷ್)ವನ್ನೂ ಆರಂಭಿಸಿದರು.

ಸರಸಿ :

ಇಷ್ಟೆಲ್ಲ ಹೇಳಿದಾಗ ಚಿತ್ತರಂಜನದಾಸರು ಸದಾ ಗಂಭೀರವಾಗಿರುತ್ತದ್ದರು ಎನ್ನಿಸಬಹುದು. ಆದರೆ ಅವರು ಬಹು ವಿನೋದಪ್ರೀಯರು. ಅತ್ಯಂತ ಸಪ್ಪೆ ಸನ್ನಿವೇಶದಲ್ಲಿಯೂ ನಗೆಯ ಏಲೆ ಎಬ್ಬಿಸುವಂತಹ ಮಾತುಗಾರಿಕೆ ಅವರಿಗೆ ಸಿದ್ದಿಸಿತ್ತು.

ಚಿತ್ತರಂಜನ ದಾಸರು ಕಲ್ಕತ್ತಾ ನಗರದ ಮೇಯರ್ ಆಗಿದ್ದಾಗ, ಉತ್ಸಾಹಿ ಸದಸ್ಯರೊಬ್ಬರು, ನಗರದಲ್ಲಿ ಭಿಕ್ಷಾವೃತ್ತಿ ಕೊನೆಗಾಣಿಸಬೇಕು: ಅವರನ್ನೆಲ್ಲಾ ಬಂಧಿಸಬೇಕು ಎಂದುಸಲಹೆ ಮುಂದಿಟ್ಟರು.

“ಹಾಗಾದರೆ ನಿಮ್ಮ ಮೇಯರ್ ಮೊದಲು ಅಪರಾಧಿ. ಇಡೀ ನಗರದಲ್ಲಿ ಅತಿ ದೊಡ್ಡ ಭಿಕ್ಷುಕ ಮೇಯರ್ ತಾನೇ” ಎಂದು ಉತ್ತರವಿತ್ತ ದಾಸರು ಸದಸ್ಯರನ್ನು ಸುಮ್ಮನಾಗಿರಿಸಿದರು.

ರಾಜಕಾರಣದಲ್ಲಿ :

ಚಿತ್ತರಂಜನರಿಗೆ ಚಿಕ್ಕ ವಯಸ್ಸಿನಿಂದಲೇ ದೇಶದ ಸ್ಥಿತಿಗತಿಗಳಲ್ಲಿ, ಸ್ವಾತಂತ್ಯ್ರದ ಹೋರಾಟದಲ್ಲಿ ಆಸಕ್ತಿ. ವಿದ್ಯಾರ್ಥಿ ದೆಸೆಯಿಂದಲೇ ಸಂಘಟನೆಯ ಕಲೆ ಅವರಿಗೆ ಸಾಧಿಸಿತ್ತು. ಐ.ಸಿ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಅವರು ದೊಡ್ಡ ಅಧಿಕಾರಕ್ಕೆ ಬರಬೇಕಾಗಿತ್ತು. ಆಯ್ಕೆ ಕಳೆದುಕೊಂಡಿದ್ದೂ ರಾಜಕಾರಣದ ಅಭಿರುಚಿಯ ಕಾರಣದಿಂದಲೇ. ಅವರ ಸಾಹಿತ್ಯ ಸೇವೆಯ ಅಧಾರವೂ ದೇಶ-ಧರ್ಮಗಳ ಪ್ರೀತಿಯೆ. ವಕೀಲ ವೃತ್ತಿಯಲ್ಲಿ ಅಪಾರ ಕೀರ್ತಿ ಪಡೆದಿದ್ದೂ ರಾಜಕೀಯ ಮಹತ್ವದ ಮೊಕದ್ದಮೆಗಳಿಂದಲೇ, ಇಷ್ಟೆಲ್ಲ ಹಿನ್ನೆಲೆಯುಳ್ಳ ವ್ಯಕ್ತಿ ರಾಜಕಾರಣಕ್ಕೆ ಹೆಜ್ಜೆ ಯಿಡದೆ ಹೋಗಿದ್ದರೆ ಅದು ಅತ್ಯಾಶ್ಚರ್ಯಕರವೆನಿಸುತ್ತಿತ್ತು.

ಕಾಂಗ್ರೆಸ್ಸಿನ ಯುವಜನ ಮುಂದಾಳು ಬಿಇನ್ ಚಂದ್ರಪಾಲರು ೧೯೧೦ರಲ್ಲಿ “ನ್ಯೂ ಇಂಡಿಯಾ ” ಪತ್ರಿಕೆ ಆರಂಭಿಸಿದಾಗ ಚಿತ್ತರಂಜನ ದಾಸರು ಅದಕ್ಕೆ ನೆರವಾಗತೊಡಗಿದರು. ಕ್ರಮೇಣ ಪತ್ರಿಕೆಯ ನಿರ್ವಹಣೆಯು ಹೊಣೆ ಅವರ ಹೆಗಲೇರಿತು. ಹಣಹೊಂದಿಸಿ ಕೊಟ್ಟವರು ಚಿತ್ತರಂಜನರು. ಚಿತ್ತರಂಜನ ದಾಸರು ಹಣ ಹೊಂದಿಸಿ ತಮ್ಮ ಹೊರೆಯನ್ನು ಇಳಿಸಿದ್ದರಿಂದಲೇ ಪತ್ರಿಕೆ ಉಳಿಯಲು ಸಾಧ್ಯವಾಯಿತೆಂದು ಬಿಪಿನ್ ಚಂದ್ರಪಾಲರೇ ಬರೆದಿದ್ದಾರೆ.

ಇಂಗ್ಲೆಂಡಿನಲ್ಲಿ ಕಲಿಯುತ್ತಿದ್ದಾಗಲೇ ಸ್ವದೇಶಿ ತತ್ವದ ಪ್ರಚಾರ ಆರಂಭಿಸಿದ್ದ ಚಿತ್ತರಂಜನದಾಸರು ಸ್ವಾವಲಂಬನೆಯ ತತ್ವದ ಪ್ರಚಾರಕ್ಕಗಿ ತಮ್ಮ ಮನೆಯಲ್ಲಿಯೇ “ಪ್ರದೇಶಿ ಮಂಡಲಿ” (೧೯೦೪) ಯನ್ನು ಆರಂಭಿಸಿದ್ದರು.

ರಾಷ್ಟ್ರದ ಧ್ಯೇಯ, ಧರ್ಮಕ್ಕೆ ಅನುಗುಣವಾದ ಶಿಕ್ಷಣ ಅಗತ್ಯವೆಂದು ಚಿತ್ತರಂಜನ್ ದಾಸರ ನಂಬಿಕೆ. ಬಂಗಾಳ ಸರಕಾರ ವಿದ್ಯಾರ್ಥಿಗಳು ರಾಜಕೀಯ ಚಳುವಳಿಯಗಳಲ್ಲಿ ಭಾಗವಹಿಸಕೂಡದು ಎಂದು ಅಪ್ಪಣೆ ಮಾಡಿತು. ಚಿತ್ತರಂಜನರು ಉದಾರಿಗಳೊಬ್ಬರ ನೆರವಿನಿಂದ ರಾಷ್ಟ್ರೀಯ ಶಿಕ್ಷಣ ಮಂಡಲಿಯನ್ನು ಆರಂಭಿಸಿದರು. ಅದರ ಅಶ್ರಯದಲ್ಲಿ ಕಾಲೇಜನ್ನು ತೆರೆದರು (೧೯೦೫). ಮುಂದೆ ಮಹರ್ಷಿಗಳೆನಿಸಿದ ಅರವಿಂದ ಘೊಷರೇ ಮೊದಲ ಪ್ರೀನ್ಸಿಪಾಲ ಆಗಿ ನೇನಕಗೊಂಡರು.

೧೯೦೭ರಲ್ಲಿ  ಕಾಂಗ್ರೆಸ್ಸಿನ ಮಂದಗಾಮಿಗಳಿಗೂ ತೀವ್ರಗಾಮಿಗಳಿಗೂ ಬಹಿರಂಗ ಜಗಳ ನಡೆದು ಸಂಸ್ಥೆ ಒಡೆಯಿತು. ಆಗ ಚಿತ್ತರಂಜನ ದಾಸರು ಕಾಂಗ್ರೆಸ್ಸಿನ ಚಟುವಟಿಕೆಯಿಂದ ದೂರವಾಗಿ ತಟಸ್ಥರಾಗಿ ಉಳಿದರು. ಆದರೂ ಸ್ವಾತಂತ್ಯ್ರ ದ ಹೋರಾಟಗಾರರ ಮೇಲೆ ಬ್ರಿಟಿಷ್ ಸರಕಾರ ಹೂಡುತ್ತಿದ್ದ ಮೊಕದ್ದಮ್ಮೆಗಳಿಂದ ಅವರಿಗೆ ಬಿಡುವು ಸಿಗುತ್ತಲೇ ಇರಲಿಲ್ಲ.

ಹೊಸ ದಿಕ್ಕು :

ಒಡೆದುಹೋಗಿದ್ದ ಕಾಂಗ್ರೆಸ್ಸ ಒಂದು ಗೂಡಲು ಹತ್ತು ವರ್ಷಗಳೇ ಹಿಡಿದವು. ಈ ಹತ್ತು ವರ್ಷಗಳ ಕಾಲ ಕಾಂಗ್ರೆಸಿನ ನಾಯಕರಾಗಿದ್ದ ತೀವ್ರ ಹೋರಾಟಕ್ಕೆ ಒಪ್ಪುವವರಲ್ಲ. ನಿಧಾನವಾಗಿ ಸಾಧ್ಯವಾದ ಮಟ್ಟಿಗೂ ಬ್ರಿಟಿಷರಿಗೆ ನ್ಯಾಯ ತೋರಿಸಿಕೊಟ್ಟು ಒಪ್ಪಿಸಿ ಮುಂದೆ ಹೋಗೋಣ ಎನ್ನುವವರು. ಇವರ ಪ್ರಾಬಲ್ಯ ಕಡಿಮೆಯಾಯಿತು. ಚಿತ್ತರಂಜನದಾಸ, ಲೋಕಮಾನ್ಯ ತಿಲಕ, ಬಿಪಿನ್ ಚಂದ್ರಪಾಲ್, ಲಾಲಾಲಜಪತ ರಾಯರಂತಹ ಉಗ್ರಗಾಮಿಗಳ ಕೈ ಮೇಲಾಯಿತು.

೧೯೧೯ ರಾಷ್ಟ್‌ಈಯ ಬಿಡುಗಡೆ ಹೋರಾಟದ ಮಹತ್ವದ ಮಜಲು. ಹೋರಾಟವನ್ನು ತುಳಿಯಲು ಆಂಗ್ಲ ಸರಕಾರ ಅತ್ಯಂತ ಕ್ರೂರವೆನಿಸಿದ ರೌಲತ್ ಶಾಸನವನ್ನು ಜಾರಿಗೆ ತಂದಿತು. ವಿಚಾರಣೆಯನ್ನೂ ನಡೆಸದೇ ಬಂಧನದಲ್ಲಿ ಇಡುವ ಅಧಿಕಾರ ಪಡೆಯಿತು. ಮಹಾತ್ಮಾ ಗಾಂಧಿಯವರ ಕರೆಯಂತೆ ದೇಶದಾದ್ಯಂತ (೬-೪-೧೯೧೯)ಅಗ ಹರತಾಳ ನಡೆಯಿತು. ಪಂಜಾಬಿಗೆ ಹೋಗಬೇಕೆಂದಿದ್ದ ಗಾಂಧಿಯವರನ್ನು ಮಾರ್ಗದಲ್ಲಿಯೇ ಬಂಧಿಸಿ, ರಾಜ್ಯದೊಳಕ್ಕೆ ಕಾಲಿಡಕೂಡದೆಂದು ಆಜ್ಞೆ ಮಾಡಿದ್ದು, ಮಹಾದುರಂತಕ್ಕೆ ಕಾರಣವಾಯಿತು. ಜಲಿಯನ್ ವಾಲಾಬಾಗ ಮೈದಾನದಲ್ಲಿ ಸರಕಾರದ ಸೈನಿಕರು, ಪೋಲಿಸರು ಸಹಾಯಹೀಣರಾಗಿದ್ದ ಸಭಿಕರನ್ನು ಗುಂಡಿಟ್ಟುಕೊಂದರು. ದೇಶದಾದ್ಯಂತ ರೋಷ ಉಕ್ಕಿ ಹರಿಯಿತು.

ಇತಿಹಾಸದಲ್ಲಿ ಕಳಂಕಪೂರ್ವ ಘಟನೆ ಎನಿಸಿದ ಜಲಿಯನ್ ವಾಲಾಬಾಗ್ ದುರಂತದ ವಿಚಾರಣೆಗೆಂದು ಸರಕಾರ “ಹಂಟರ್” ಅಯೋಗವನ್ನೇನ್ನೋ ರಚಿಸಿತು. ಆದರೆ ಚಿತ್ತರಂಜನ ದಾಸರು ಸಾಕ್ಷಿಗಳ ಪಾಟೀ ಸವಾಲು ನಡೆಸಬೇಕೆಂಬುವುದಕ್ಕೆ ಸರಕಾರ ಒಪ್ಪಲಿಲ್ಲ. ಕೊನೆಗೆ ಯಾವ ರಿಯಾಯಿತಿಗೂ ಸರಕಾರ ಸಿದ್ಧವಾಗದಿದ್ದಾಗ, ಕಾಂಗ್ರೆಸ್ ಅಯೋಗವನ್ನು ಬಹಿಷ್ಕರಿಸಿತು. ಮಹಾತ್ಮಾಗಾಂಧಿ ಅಧ್ಯಕ್ಷರಾಗಿದ್ದು ಚಿತ್ತರಂಜನದಾಸ್, ಮೋತಿಲಾಲ್ ನೆಹರೂ ಅವರು ಸದಸ್ಯರಾಗಿರುವ ತನಿಖಾ ಆಯೋಗವನ್ನು ತಾನೇ ರಚಿಸಿತು. ದಾಸ ಮತ್ತು ಮೋತಿಲಾಲ್ ಇಬ್ಬರೂ ಪ್ರಸಿದ್ಧ ವಕೀಲರು. ಮೂರುವರೆ ತಿಂಗಳ ಕಾಲ ಇದಕ್ಕಾಗಿ ಸಮಯವನ್ನು ವಿನಿಯೋಗಿಸಬೇಕಾಯಿತು. ಇದರಿಂದ ಇಬ್ಬರಿಗೂ ವೃತ್ತಿಯ ವರಮಾನ ಲಕ್ಷಾಂತರ ರೂಪಾಯಿಗಳು ಬರುತ್ತಿದ್ದುದು ತಪ್ಪಿಹೋಐಇತು. ಜೊತೆಗೆ ಚಿತ್ತರಂಜನ ದಾಸರ ಕೈಯಿಂದ ೫೦ ಸಾವಿರ ರೂ. ಖರ್ಚಾಯಿತು. !

ಇದು ತ್ಯಾಗ :

ದೇಶದ ಸ್ವಾತಂತ್ಯ್ರದ ಹೋರಾಟಕ್ಕಾಗಿ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳನ್ನು ಬಿಡಬೇಕು, ಸರಕಾರಿ ನೌಕರರು ತಮ್ಮಕೆಲಸಗಳನ್ನು ಬಿಡಬೇಕು, ವಕೀಲರು ತಮ್ಮ ವೃತ್ತಿಯನ್ನು ಬಿಡಬೇಕು, ಎಲ್ಲರೂ ಸ್ವಾತಂತ್ಯ್ರ ಯೋಧರಾಗಬೇಕೆಂದು ಗಾಂಧೀಜಿ ಕರೆಕೊಟ್ಟರು.

ಆಗ ಚಿತ್ತರಂಜನ ದಾಸರಿಗೆ ವಕೀಲಿ ವೃತ್ತಿಯಿಂದ ತಿಂಗಳಿಗೆ ಸುಮಾರು ಐವತ್ತು ಸಾವಿರ ರೂಪಾಯಿಗಳು ಬರುತ್ತಿತ್ತು. (ಬೆಲೆಗಳ ಲೆಕ್ಕಾಚಾರ ಹಾಕಿದರೆ ಆಗಿನ ಒಂದು ರೂಪಾಯಿ ಈಗಿನ ಇಪ್ಪತ್ತು ರೂಪಾಯಿಗಳಾದರೂ ಸಮ!)

ಚಿತ್ತರಂಜನ ದಾಸರು ಪೂರ್ಣಕಾಲದ ಕಾಂಗ್ರೆಸ್ ಕಾರ್ಯಕರ್ತರಾದರು. ಕಾನೂನಿಗೆ ಸಂಬಂಧಿಸಿ ಸಲಹೆ ಕೊಡಲು ನಿರಾಕರಿಸಿದರು. ಕಾನೂನಿಗೆ ಸಂಬಂಧಿಸಿದ ಸಲಹೆ ಕೊಡಲು ನಿರಾಕರಿಸಿದರು. ಭಾರಿ ಮೊತ್ತದ “ಪೀಸ್” ತರುವಂತಹ ಹಲವು ವ್ಯವಹಾರಗಳ ಕಕ್ಷಿಗಾರರು ಅವರನ್ನು ಹುಡುಕಿಕೊಂಡು ಬಂದರು, ಆದರೆ ಚಿತ್ತರಂಜನರು ಒಪ್ಪಲಿಲ್ಲ. ರಾಜರೂ ಅಸುಯೆಪಡುವಷ್ಟು ಆದಾಯ ತರುತ್ತಿದ್ದ ಅಂದಿನ ವಿಖ್ಯಾತ ವಕೀಲರ ಕಚೇರಿಯಾಗಿದ್ದ ಅವರ ಮನೆ ರಾಜಕೀಯ ಸಮಾಲೋಚನೆ , ಸಂಘಟನೆ ಮತ್ತು ಪ್ರಚಾರ ಕಾರ್ಯಗಳ ಪ್ರಧಾನ ಕಾಯಕ್ಷೇತ್ರವೆನಿಸಿತ್ತು. ವಿಖ್ಯಾತ ವಕೀಲ ಚಿತ್ತರಂಜನ ದಾಸ, ದೇಶಬಂಧು ಚಿತ್ತರಂಜನ ದಾಸರಾದರು. 

ಗಾಂಧೀಜಿ , ಚಿತ್ತರಂಜನ ದಾಸ, ಸುಭಾಷ್ ಚಂದ್ರಭೋಸ್

ರಾಜಕುಮಾರನಿಗೆ ಎಂತಹ ಸ್ವಾಗತ ?

 

ಚಿತ್ತರಂಜನ ದಾಸರ ನಿಲುವು ವಿದ್ಯಾರ್ಥಿಗಳಲ್ಲಿ, ವಕೀಲರಲ್ಲಿ  ಮಾಡಿದ ಉತ್ಸಾಹ ಅಪಾರ. ಅನೇಕ ವಿದ್ಯಾರ್ಥಿಗಳು ಕಾಲೇಜು ತೊರೆದರು. ಅವರು ಆರಂಭಿಸಿದ ಬೆಂಗಾಲ ನ್ಯಾಷನಲ್ ಕಾಲೇಜನ ಪ್ರಾರಂಭೋತ್ಸವ ನೆರವೇರಿಸಿದರೆ (೩೧-೦೧-೧೯೨೧) ಮಹಾತ್ಮಾ ಗಾಂಧೀ. ಪ್ರಥಮ ಪ್ರಿನ್ಸಿಪಾಲ್ ಸುಭಾಷ ಚಂದ್ರ ಬೋಸ್.

ಅಸಾಧ್ಯವೆನಿಸಿದ್ದನ್ನೇ ಹಿಡಿದು ಸಾಧಿಸುವುದು ಚಿತ್ತರಂಜನದಾಸರಿಗೆ ಸಿದ್ದಿಸಿತು.  ತಿಲಕರ ನಿಧನರಾದ ಮೇಲೆ ಒಂದು ಕೋಟಿ ರೂಪಾಯಿಗಳ “ತಿಲಕ ಸ್ವರಾಜ್ಯ ನಿಧಿ” ಸ್ಥಾಪಿಸಲು ನಿರ್ಧರಿಸಿದಾಗ, ಬಂಗಾಳ ಒಂದಕ್ಕೆ ಗೊತ್ತು ಮಾಡಿದ ಗುರಿ ೧೫ ಲಕ್ಷ ಇಪ್ಪತ್ತು ಲಕ್ಷ ಚರಖಾಗಳ ಪ್ರಚಾರಕ್ಕಾಗಿ ರಾಷ್ಟ್ರದಲ್ಲಿ ಒಂದು ಕೋಟಿ ಸದಸ್ಯರನ್ನು ಕೂಡಿಸುವುದು ಕಾಂಗ್ರೆಸ್ಸಿನ ಗುರಿ. ಬಂಗಾಳ ಎರಡು ಗುರಿಗಳನ್ನೂ ಸಾಧಿಸಿತು.

೧೯೨೧ರಲ್ಲಿ ಇಂಗ್ಲೇಂಡಿನ ರಾಜಕುಮಾರರು ಭಾರತಕ್ಕೆ ಭೇಟಿ ಕೊಡುವುದು ನಿರ್ಧಾರವಾಗಿತ್ತು. ಭಾರತೀಯರು ಅವರನ್ನು ಸ್ವಾಗತಿಸಬಾರದು, ತಮ್ಮ ಅಸಮಾಧಾನವನ್ನು ತೋರಿಸಬೇಕು ಎಂದು ಕಾಂಗ್ರೆಸ್ ಜನತೆಗೆ ಹೇಳಿತು.

ರಾಜಕುಮಾರನಿಗೆ ಸಂಭ್ರಮದ ಸ್ವಾಗತ ದೊರೆಯಿತು ಎನ್ನಿಸಬೇಕು ಎಂದು ಬ್ರಿಟಿನ್ನಿನ ಸರಕಾರ, ಭಾರತದ ಸರಕಾರ ತಮ್ಮ ಬಲ, ಹಣ ಬುದ್ಧಿ ಎಲ್ಲವನ್ನೂ ಖರ್ಚು ಮಾಡಿದವು. ಸರಕಾರದ ಬಲದ ವಿರುದ್ಧ ಜನತೆಯ ನಾಯಕರಾಗಿ ಬಂಗಾಳದಲ್ಲಿ ನಿಂತರು ಚಿತ್ತರಂಜನರು. ಅವರ ಹೆಂಡತಿ, ಮಗ ಈ ಕೆಲಸಕ್ಕೆ ಮುಡಿಪು. ಸರಕಾರ ತಮ್ಮನ್ನು ದಸ್ತಗಿರಿ ಮಾಡುತ್ತದೆ ಎಂದು ಚಿತ್ತರಂಜನರು ನಿರೀಕ್ಷಿಸಿದರು. ಮನೆಯಲ್ಲಿದ್ದೇ ಜೈಲು ಜೀವನಕ್ಕೆ ಸಿದ್ಧತೆ ಆರಂಭಿಸಿದರು. ಜೈಲಿನ ಪಡಿತರ ಆಹಾರ ತೆಗೆದುಕೊಳ್ಳಲು ಆರಂಭಿಸಿದರು. ಚಿತ್ತರಂಜನ ದಾಸರ ಹೆಂಡತಿ ಮತ್ತು ಮಗ ಬಿಹಿಷ್ಕಾರಕ್ಕೆ ಸಿದ್ಧತೆ ಮಾಡುತ್ತಿದ್ದರು. ಅವರ ಬಂಧನ ನಡೆಯಿತು. ಹರತಾಳದ ಕರೆಯನ್ನು ಹಿಂದಕ್ಕೆ ಪಡೆಯುವಂತೆ ದಾಸರ ಮನವೊಲಿಸಲು ಗವರ್ನರ ರೋನಾಲ್ಡ್ ಪೇಬಹಳ ಪ್ರಯತ್ನಿಸಿದ. ಆದರೆ ದಾಸರು ಒಪ್ಪಲಿಲ್ಲ.

ಸೆರೆಮನೆ :

ಚಿತ್ತರಂಜನ ದಾಸರ ಬಂಧನವೂ ನಡೆಯಿತು. ಚಿತ್ತರಂಜನರು ಆಗಲೇ ಸಿದ್ಧವಾಗಿದ್ದರು. ಮನೆಯಿಂದ ಆಹಾರ ಕಳಿಸಕೂಡದೆಂದು ಮಕ್ಕಳಿಗೆ ಹೇಳಿ ಹೊರಟರು.ಹಿಂದೆ ಅಪಾರ ಜನಸಂದಣಿ. ಆ ಜನಸ್ತೋಮವನ್ನು ಉದ್ದೇಶಿಸಿ, “ಉದ್ದೇಶ ಉದ್ದಾತವಾಗಿದ್ದರೆ , ಪರಿಣಾಮ ಲೆಕ್ಕಿಸುವುದು ಬೇಡ. ಈ ನಾಡಿನಲ್ಲಿ ಬೆಳಗುತ್ತಿರುವ ದೀಪ ನಂದಿಹೋಗುವ ಸಂಭವವಿಲ್ಲ. ಫಲಾಫಲಗಳೇನಿದ್ದರೂ ಅದು ದೈವಕ್ಕೆ ಸೇರಿದ್ದು. ಅಹಿಂಸೆಯನ್ನು ಮಾತ್ರ ನಿಷ್ಠೆಯಿಂದ ಅಚರಿಸಿದರೆ ಗುರಿಸಾಧನೆಯಂತೂ ಖಚಿತ. ದೇಶ ಬಾಂಧವರೇ, ಇದು ನನ್ನ ಸಂದೇಶ. ಕಷ್ಟ ಸಹಿಸಲು ನೀವುಸಿದ್ಧರಾಗಿದ್ದರೆ, ಗೆಲುವು ಕಣ್ಣೆದುರಿಗೆ ಗೋಚರಿಸುತ್ತದೆ ಎಂದು ಹೇಳಿದರು.

ಸರಕಾರಕ್ಕೆ ಭಯ, ದಾಸರ ವಿಚಾರಣೆ ನ್ಯಾಯಾಲಯದಲ್ಲಿ ನಡೆದರೆ ಸಹಸ್ರಾರು ಜನ ಸೇರುತ್ತಾರೆ ಎಂದು ಜೈಲಿನಲ್ಲಿಯೇ ವಿಚಾರಣೆಯ ನಾಟಕ  ನಡೆಸಿ ಚಿತ್ತರಂಜನದಾಸರಿಗೆ ಆರು ತಿಂಗಳ ಸೆರೆವಾಸ ವಿಧಿಸಿತು.

ಇಷ್ಟಾದರೂ ಬ್ರಿಟನ್ನಿನ ರಾಜಕುಮಾರನ ಭೇಟಿಯನ್ನು ಯಶಸ್ವಿ ಗೊಳಿಸುವ ಭಾರತ ಸರಕಾರದ ಪ್ರಯತ್ನ ಫಲಿಸಲಿಲ್ಲ.  ಡಿಸೆಂಬರ ೨೪ ರಂದು ರಾಜಕುಮಾರ ಆಗಮಿಸಿದಾಗ ಕಂಡಿದ್ದು ಸ್ಮಶಾನದಂತಿದ್ದ ಕಲ್ಕತ್ತಾ ನಗರವನ್ನು ಮಾತ್ರ.

ಮೊದಲೇ ಅನಾರೋಗ್ಯದಿಂದಿದ್ದ ಚಿತ್ತರಂಜನ ದಾಸರಿಗೆ ಜೈಲಿನಲ್ಲಿ ಜ್ವರದ ಬಾಧೆ, ಡಯಾಬಿಟಿಸ್ ಮತ್ತು ತೂಕದ ಇಳೀತದ ಸಮಸ್ಯೆಗಳು ಎದುರಾದವು. ಆಗಿನ ಯೂರೋಪಯನ್ ಖೈದಿಗಳಿಗೆ ಸಿಗುತಿದ್ದ ಸೌಲಭ್ಯಗಳು ಬೇಕೇ ಎಂದು ಅವರನ್ನು  ಅಧಿಕಾರಿಗಳು ಕೇಳಿದರು. “ಉಹುಂ” ಎಂದರು ದಾಸರು.” ಓದುವುದಕ್ಕೆ, ಬರೆಯುವುದಕ್ಕೆ ಅವಕಾಶ ಕೊಡಿ, ಸಾಕು” ಎಂದರು. ರಂಜನೆಗೆಂದು ನಾಟಕವೊಂದನ್ನು ಖೈದಿಗಳ ನೆರವಿನಿಂದಲೇ ಜೈಲು ಅವರಣದಲ್ಲಿ ಪ್ರದರ್ಶಿಸಿದರು.  ಭರತೀಯ ಜೈಲುಗಳ ಇತಿಹಾಸದಲ್ಲಿ ನಾಟಕ ಪ್ರದರ್ಶನ ನಡೆದದ್ದು ಇದೇ ಮೊದಲ ಬಾರಿ.

ಇದೇ ಅವಧಿಯಲ್ಲಿ ಜರುಗಿದ ಅಹ್ಮದಾಬಾದ ಕಾಂಗ್ರೆಸ್ ಅಧಿವೇಶನಕ್ಕೆ ಅವರನ್ನು ಅಧ್ಯಕ್ಷರನ್ನಾಗಿ ಆರಿಸಲಾಗಿತ್ತು. ಸೆರೆಯಲ್ಲಿದ್ದ ದಾಸ ತಮ್ಮ ಭಾಷಣವನ್ನು ಕಳೂಹಿಸಿದರು: ಹಕೀಂ ಅಜಮಲ್ ಖಾನ್ ಎಂಬುವರು ಅಧ್ಯಕ್ಷತೆಯ ಕಾರ್ಯ ನಿರ್ವಹಿಸಿದರು.

ಬೇಸರದ ದಿನಗಳು :

ದಾಸ್ ಜೈಲಿನಿಂದ ಬಿಡುಗಡೆ ಹೊಂದಿದರು. ಅವರ ಆರೋಗ್ಯ ಸುಧಾರಣೆಗಾಗಿ ಕಾಶ್ಮೀರಕ್ಕೆ ಹೋಗಬೇಕೆಂಬುವುದು ಎಲ್ಲರ ಸಲಹೆಯಾಗಿತ್ತು ಆದರೆ ಅಲ್ಲಿನ ಮಹಾರಾಜರು ಹೇಳಿದರು: “ರಾಜಕೀಯದ ಬಗ್ಗೆ ಉಸಿರೆತ್ತುವುದಿಲ್ಲ ಎಂದು ಚಿತ್ತರಂಜನರು ಮುಚ್ಚಳಿಕೆ ಬರೆದುಕೊಟ್ಟರೆ ಮಾತ್ರ ಕಾಶ್ಮೀರಕ್ಕೆ ಬರಬಹುದು. ಮುಚ್ಚಳಿಕೆ ಬರೆದುಕೊಡಿ ಎಂದು ಕೇಳಲು ಬಂದಿದ್ದ ಅಧಿಕಾರಿಗೆ ಚಿತ್ತರಂಜನರು, “ನೀವು ಕಳ್ಳತನ ಮಾಡುವುದಿಲ್ಲ ಗೊತ್ತಿದೆ ಆದರೆ ಹಾಗೆಂದು ಬರೆದುಕೊಡುತ್ತೀರಾ?” ಎಂದು ಹೇಳಿ ಬಾಯಿ ಮುಚ್ಚಿಸಿದರು.

೧೯೧೯ರ ಏಪ್ರೀಲ್ ೬ ರಂದು ಡೆಹ್ರಾಡೂನ್ನಲ್ಲಿ ಭಾಷಣ ಮಾಡುತ್ತ ಅವರು ಹೇಳಿದರು. “ಮದ್ಯಮ ವರ್ಗದವರಿಗೆ ಮಾತ್ರ ತೃಪ್ತಿಯಾಗುವಂತಹ ಸ್ವರಾಜ್ಯ ನನಗೆ ಬೇಡ. ಜನಸಾಮಾನ್ಯರಿಗೆ ಸ್ವರಾಜ್ಯ ಬರಬೇಕು ಎಂದು ನನ್ನ ಆಸೆ, ಮೇಲಿನ ವರ್ಗಗಳವರೆಗೆ ಮಾತ್ರವಲ್ಲ.

ಹಿರಿಯ ಕಾಂಗ್ರೆಸ ನಾಯಕರರೊಬ್ಬರು ಸ್ಪಷ್ಟವಾಗಿ ಈ ಮಾತನ್ನು ಹೇಳಿದ್ದು ಅದೇ ಮೊದಲು ಎಂದು ಕಾಣುತ್ತದೆ.

ವಕೀಲ ತೊರೆದದ್ದರಿಂದ ಇದಕ್ಕಿದ್ದಂತೆಯೇ ಸಹಸ್ರಾರು ರಾಪಾಯಿಗಳ ವರಮಾನ ಹೋಯಿತು. ಈ ತೊಂದರೆ ಒಂದು ಕಡೆಯಾದರೆ, ಎಡೆಬಿಡದೆ ಕಾಡುತ್ತಿದ್ದ ಅನಾರೋಗ್ಯ ಇನ್ನೊಂದು ಕಡೆ, ಇಷ್ಟೇ ಸಾಲದೆಂಬಂತೆ ಅವರ ಕೆಲವು ಅಭಿಪ್ರಾಯಗಳನ್ನು ಕಾಂಗ್ರೆಸ್ಸಿನ ಅಂದಿನ ಕೆಲವರು ಅತಿರಥ ಮಹಾರಥರೇ ವಿರೋಧಿಸಿದರು. ಕಾಂಗ್ರೆಸ್ಸಿನವರು ಚುನಾವಣೆಗೆ ನಿಂತು ಗೆದ್ದು ಜನ ತಮ್ಮ ಹಿಂದೆ ಇದ್ದಾರೆ ಎಂಬುವುದನ್ನು ತೋರಿಸಿಕೊಡಬೇಕು ಎಂದು ದಾಸರ ಅಭಿಪ್ರಾಯ. ಅನೇಕರು ಇದನ್ನು ತಪ್ಪು ಅರ್ಥಮಾಡಿಕೊಂಡರು. ತಾವು ಮಂತ್ರಿಯಾಗಬೇಕು ಎಂದು ದಾಸ್ ಹೀಗೆ ವಾದಿಸುತ್ತಾರೆ ಎಂದರು. ಸಾರ್ವಜನಿಕ ಸಭೆಗಳಲ್ಲಿಯೂ ಅವರನ್ನು ಬೈದರು. ಎಲ್ಲವನ್ನು ಸಹಿಸಿಕೊಂಡು ಚಿತ್ತರಂಜನರು ಹೋರಾಟಕ್ಕೆ ಸಿದ್ಧರಾದರು.

ಸ್ವರಾಜ್ಯ ಪಕ್ಷ :

ಕಾಂಗ್ರೆಸ್ಸಿನ ಗಯಾ ಅಧಿವೇಶನ (೧೯೨೨)ಕ್ಕೂ ಅವರನ್ನೇ ಮತ್ತೇ ಅಧ್ಯಕ್ಷರನ್ನಾಗಿ ಆರಿಸಲಾಯಿತು. ಅಧಿವೇಶನದಲ್ಲಿ ಶಾಸನ ಸಭೆಗಳನ್ನು ಕಾಂಗ್ರೆಸ್ಸಿನವರು ಪ್ರವೇಶಿಸಬೇಕೆಂದು ದಾಸರು ನಿರ್ಣಯ ತಂದರು: ಅದಕ್ಕೆ ೮೯೦-೧೭೪೮ರ ಮತಗಳಿಂದ ಸೋಳಾಯಿತು.ತಕ್ಷಣವೇ ಅಧ್ಯಕ್ಷ ದಾಸ ಮತ್ತು ಕಾರ್ಯದರ್ಶಿ ಮೋತಿಲಾಲ್ ನೆಹರು  ತಮ್ಮ ಹುದೆದೆಗಳಿಗೆ ರಾಜೀನಾಮೆ ನೀಡಿದರು. ಮರುದಿನವೇ (೧-೧-೧೯೨೩) ಅವರು ಸ್ವರಾಜ್ಯ ಪಕ್ಷವನ್ನು ಸ್ಥಾಪಿಸಿದರು.

ಕಾಂಗ್ರೆಸ್ಸನ್ನೇ ತಮ್ಮ ನಿಲುವಿಗೆ ಹೊಂದಿಸಿಕೊಳ್ಳುವ ಪ್ರಯತ್ನವನ್ನು ಚಿತ್ತರಂಜನದಾಸರು ಬಿರುಸಿನಿಂದ ನಡೆಸಿದರು. ತಮ್ಮ ಪ್ರಚಾರದಲ್ಲಿ ಅವರು, “ಕಾಂಗ್ರೆಸ್ಸಿಗಿಂತ ಪವಿತ್ರವಾದದ್ದು ಇನ್ನೊಂದಿದೆ. ಅದು ದೆಶದ ಜನರ ಬಿಡುಗಡೆ. ನನ್ನ ಕಾಂಗ್ರೆಸ್ ಪ್ರೇಮ ಕಡಿಮೆಯಲ್ಲ. ಆದರೆ ದೇಶಪ್ರೇಮ ದೊಡ್ಡದು”  ಎಂದು ಸ್ಪಷ್ಟಪಡಿಸಿದರು.

“ಬಂಡುಕೋರನೇ ನಾನು? ನನಗೆ ಸ್ವರಾಜ್ಯಬೇಕು. ಸ್ವರಾಜ್ಯದ ಬೇಡಿಕೆ ಕಾರ್ಯಗತವಾಗುವುದಿದ್ದರೆ, ಕಾಂಗ್ರೆಸ್ಸನ್ನೂ ಒಳಗೊಂಡು ಯಾವ ಸಂಸ್ಥೆಯ ಮೇಲೆ ಬೇಕಾದರೂ ನಾನು ಬಂಡೇಳಲು ಸಿದ್ಧ. ಬಿಡಗುಡೆ ಬೇಕು ನನಗೆ. ಹೋರಾಟಕ್ಕೆ ನಾನು ಸಿದ್ಧ. ನನ್ನ ಜೀವನದಲ್ಲಿ ನಾನೆಂದೂ ಹೇಡಿಯಂತೆ ವರ್ತಿಸಿಲ್ಲ. ಜೀವ ಕೊಡಲು ಸಿದ್ಧ. ಇಂದಿನಿಂದಲೇ ಆರಂಭಿಸಿ ನನ್ನನ್ನು ಪರೀಕ್ಷಿಸಿ” ಎಂದು ನೇರವಾಗಿ ಹೇಳಿದರು.

ಕಲ್ಕತ್ತೆಯ ಮೇಯರ್:

ಚುನಾವಣೆಗಳು ನಡೆದಾಗ ತಮ್ಮನ್ನು ವಿರೋಧಿಸಿದ ಅತಿರಥ ಮಹಾರಥರನ್ನು ಕಿತ್ತೊಗೆದು ಕಾಂಗ್ರೆಸ ಅಭ್ಯರ್ಥಿಗಳು ಜಯಗಳಿಸಿ ಬಹುಮತ ಸಾಧಿಸಿದರು. ಒಂದೇ ವರ್ಷದ ಅವಧಿಯಲ್ಲಿ ಕಾಂಗ್ರೆಸ್ಸನ್ನು ತಮ್ಮ  ನಿಲುವಿಗೆ ಮಣಿಸಿ ಚುನಾವಣೆಯಲ್ಲಿಯೂ ಜಯ ಗಳಿಸಿದ ಕೀರ್ತಿ ದಾಸರಿಗೆ ಲಭಿಸಿತು.

೧೯೧೯ರ ಶಾಸನ ಸುಧಾರಣೆಯಂತೆ ಗವರ್ನರರಿಗೆ ಜವಾಬ್ದಾರಿಯಾದ ಮಂತ್ರಿಮಂಡಲ ರಚಿಸಲು ಅವಕಾಶವಿತ್ತು. ಬಹುಮತ ಪಡೆದ ದಾಸರನ್ನು ಸರಕಾರ ರಚಿಸುವಂತೆ ಗವರ್ನರ ಲಾರ್ಡ ಲಿಟ್ಟನ್ ಆಹ್ವಾನಿಸಿದಾಗ, “ಈಗಿರುವಂತೆ ಸರಕಾರ ಮನಸ್ಸು ಬಂದಂತೆ ನಡೆಯಬಹುದು. ಆದುದರಿಂದ ಈ ದಿನ ಆಡಳಿತದ ವಿಧಾನದಲ್ಲಿ ಮಾರ್ಪಾಟು ಆಗುವವರೆಗೆ ಸರಕಾರಕ್ಕೆ ಸಹಕಾರ ನೀಡಲು ಸಾಧ್ಯವಿಲ್ಲ” ಎಂದರು ದಾಸರು.

೧೯೨೩ರಲ್ಲಿ ಕಲ್ಕತ್ತಾ ನಗರಕ್ಕೆ ನಗರ ಕಾರ್ಪೊರೇಷನ್ ಸ್ಥಾನ ಲಭಿಸಿತು. ಕಾಂಗ್ರೆಸ್ ಪರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಅದ್ಭುತ ಜಯಳಿಸಿದ ಚಿತ್ತರಂಜನ ದಾಸರೇ ಕೌನ್ಸಿಲ್‌ನಲ್ಲಿ ಸರಕಾರದ ನೀತಿಯನ್ನು ಉಗ್ರವಾಗಿ ವಿರೋಧಿಸುತ್ತಿದ್ದ ಅವರಿಗೆ ಇಲ್ಲಿ ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತರಲು ಅವಕಾಶ ಸಿಕ್ಕಿತು. ಉಚಿತ ಪ್ರಾಥಮಿಕ ಶಿಕ್ಷಣ, ಬಡವರಿಗೆ ಉಚಿತ ವೈದ್ಯಕೀಯ ನೆರವು, ರಿಯಾಯಿತಿ ದರದ ಹಾಲು ಸರಬರಾಜು, ನೈರ್ಮಲ್ಯ ಪಾಲನೆ, ಉಪನಗರಗಳ ನಿರ್ಮಾಣ , ಬಡವರಿಗೆ ಉಚಿತ ವಸತಿ, ಸುಧಾರಿತ ಸಾರಿಗೆ ವ್ಯವಸ್ಥೆಗಳ ಮೂಲಕ ದರಿದ್ರ ನಾರಾಯಣನ ಸೇವೆಗೆ ಸೊಂಟಕಟ್ಟಿ ನಿಂತರು. ಜಲಗಾರರು ಮುಷ್ಕರ  ಹೂಡಿದಾಗ ಕರುಣೆ ಕಾಠೀಣ್ಯಗಳನ್ನೂ ಪ್ರದರ್ಶಿಸಿ ಗೆಲುವು ಸಾಧಿಸಿದರು.

ಮಹಾನಾಯಕ :

ಬ್ರಿಟಿಷರು ತಮ್ಮ ಆಡಳಿತವನ್ನು ಭಾರತದಲ್ಲಿ ಭದ್ರಗೊಳಿಸಲು ಬಿತ್ತಿದ ವಿಷ ಬೀಜ ಹಿಂದೂ- ಮುಸ್ಲಿಂರಲ್ಲಿ ಜಗಳ.

ಹಿಂದೂ-ಮುಸ್ಲೀಮ ಒಡಕಿನಿಂದ ಬ್ರಿಟಿಷರಿಗೆ ಲಾಭವೆಂದು ದಾಸರಿಗೆ ಗೊತ್ತು. ಈ ಅನಿಷ್ಠವನ್ನು ಕೊನೆಗಾಣಿಸಲು ತುಂಬ ಪ್ರಯತ್ನಿಸಿದರು.ಬಂಗಾಳದ ಮಟ್ಟಿಗಂತೂ ಒಂದು  ಒಪ್ಪಂದವೇ ಕುದುರಿಸಿದರು. ಅವರ ಜೀವನ ಕಾಲದಲ್ಲಿ ಬಂಗಾಳದಲ್ಲಿ ಒಮ್ಮತ ಸಾಧಿಸಿತು. ಇಡೀ ದೇಶದಲ್ಲಿಯೇ ಹಿಂದೂ-ಮುಸ್ಲಿಂ ಒಗ್ಗಟನ್ನು ಸಾಧಿಸಲು ಶ್ರಮಿಸಿದರು ಅವರು.

ಚಿತ್ತರಂಜನದಾಸರು ಇನ್ನೂ ಕೆಲವು ವರ್ಷಗಳ ಬದುಕಿದ್ದರೆ ದೇಶ ಹೋಳಾಗುವುದು ತಪ್ಪುತ್ತಿತ್ತೇನೋ!

ತ್ಯಾಗದ ಸೀಮೆ :

ಚಿತ್ತರಂಜನ ದಾಸರು ವಕೀಲಿ ವೃತ್ತಿ ತೊರೆದ ಮೇಲೂ ಅವರ ಆಶ್ರಿತರ ಸಂಖ್ಯೆ ಕಡಿಮೆಯಾಗಿರಲಿಲ್ಲ. ಅವರಿಗಿದ್ದ ಆಸ್ತಿ ಭವ್ಯವಾದ ಮನೆಯೊಂದೆ. ಈ ಮನೆಯನ್ನೂ ರಾಷ್ಟ್ರಕ್ಕಾಗಿ ಅರ್ಪಿಸಬೇಕೆಂದು ಅವರು ನಿರ್ಧರಿಸಿದರು. ಮನೆಯ ಬೆಲೆ ೩ ಲಕ್ಷ ೨೬ ಸಾವಿರ ರೂಪಾಯಿಗಳು. ದೇಶದ ಕೆಲಸಕ್ಕಾಗಿ ಚಿತ್ತರಂಜನರು ಅದರ ಮೇಲೆ ಮಾಡಿದ್ದ ಸಾಲ ಒಂದು ಲಕ್ಷ ರೂಪಾಯಿ. ಸಾಲ ತೀರಿಸಿದ ಮೇಲೆ ಉಳಿದ ಹಣದಲ್ಲಿ ಸಾರ್ವಜನಿಕ “ಟ್ರಸ್ಟ್” ರಚಿಸಿದರು. ದೇಶಬಂಧು ಚಿತ್ತರಂಜನರ ನಿವಾಸ :ಚಿತ್ತರಂಜನ್ ಸೇವಾಸದನ” ವಾಯಿತು. ಬಡರೋಗಿಗಳ ಆಸ್ಪತ್ರೆಯಾಯಿತು. ಟ್ರಸ್ಟ್  ಆಶ್ರಯದಲ್ಲಿ ಶಾಲಾ ಶಿಕ್ಷಣ ಹಿಂದೂ ಮಕ್ಕಳಿಗೆ ಧಾರ್ಮಿಕ ಶಿಕ್ಷಣ, ಮುಂತಾದ ಚಟುವಟಿಕೆಗಳು ಇಂದೂ ಜರುಗುತ್ತಿವೆ. ಎಲ್ಲ ಜಾತಿಗಳ ಅನಾಥ ಮಕ್ಕಳು, ಹುಡುಗಿಯರು-ಇವರ ಪೋಷಣೆ ನಡೆಯುತ್ತದೆ. ದಾಸರ ನಿಧನದ ಅನಂತರ ಮಹಾತ್ಮಾ ಗಾಂಧಿಯವರೇ ಶ್ರಮಿಸಿ ೮ ಲಕ್ಷ ರೂಪಾಯಿಗಳ ಸ್ಮಾರಕ ನಿಧಿ ಕೂಡಿಸಿ ಟ್ರಸ್ಟಿಗೆ ಕೊಟ್ಟರು. ಇಂದೂ ಆ ಸಂಸ್ಥೆಗಳು ಸೇವೆಯಲ್ಲಿ ತೊಡಗಿವೆ. ಬೆಳಗಾವಿ ಅಧಿವೇಶನದಿಂದ ಹಿಂದಿರುಗಿದ ಚಿತ್ತರಂಜನ ದಾಸರ ವ್ಯಾಧಿ ಪ್ರಬಲಿಸಿತು. ವಿಶ್ರಾಂತಿ ಅಗತ್ಯವಿತ್ತು. ಆದರೆ ಅಗಲೇ ಬಂಗಾಳ ಸರಕಾರ ಒಂದು ಉಗ್ರವಾದ ಶಾಸನವನ್ನು ಮಾಡಲು ಶಸನ ಸಭೆಯ ಮುಂದೆ ಮಸೂದೆಯೊಂದನ್ನು ತಂದಿತು. ದಾಸರು ಸ್ಟ್ರೇಚರ್ ಮೇಲೆ ಮಲಗಿ ಹೋಗಿ ಅದರ ವಿರುದ್ಧ ಮತಕೊಟ್ಟರು, ಸರಕಾರದ ಮಸೂದೆ ಬಿದ್ದು ಹೋಯಿತು. ಸರಕಾರ ತನ್ನ ಪರಾಭವವನ್ನು ಒಪ್ಪಲೇಬೇಕಾಯಿತು.

ಭಾರತ ಸ್ವತಂತ್ರವಾಗುವುದು ನಿಶ್ಚಿತವೆನಿಸಿದ್ದರಿಂದ ಭಾವೀ ಭಾರತದ ಬೆಳವಣಿಗೆಯ ಮಾರ್ಗಗಳನ್ನು ಹಸನುಗೊಳಿಸಲು ಚಿತ್ತರಂಜನರು ಆರಂಭಿಸಿದರು. ಖಾಸಗಿ ನೌಕಾಯಾನ ಮತ್ತು ರೇಲ್ವೆ ಸಂಸ್ಥೆಗಳಿಗೆ ಬಂಡವಾಳ ಕೂಡಿಸಿಕೊಟ್ಟರು.  ರೈತರ ಕಲ್ಯಾಣಕ್ಕೆಂದು ರಾಷ್ವ್ರ ವ್ಯಾಪಿ ಬ್ಯಾಂಕ್ ಆರಂಭಿಸುವ ಇಚ್ಛೆ ಅವರಿಗಿತ್ತು. ಆದರೆ ಎಲ್ಲ ಪ್ರಯತ್ನಗಳಿಗೂ ಅನಾರೋಗ್ಯ ಅಡ್ಡಿಯಾಗಿತ್ತು.

ಜೀವನ ನಶ್ವರ, ಮನುಷ್ಯ ಯಾವಾಗ ಸಾಯುವನೋ ಹೇಳುವಂತಿಲ್ಲ ಎಂಬ ಭಾವನೆ ಅವರಲ್ಲಿ ಗಾಢವಾಗತೊಡಗಿತು. ಹೆಚ್ಚು ಹೆಚ್ಚು ದೈವಿ ಚಿಂತನೆ ಅವರ ಪ್ರವೃತ್ತಿಯಾಯಿತು.  ಭಾರತ ಬಿಡುಗಡೆ ಹೊಂದಿದ ಮೇಲೆ ಕಾಂಗ್ರೆಸ್ ತಮಗಾಗಿ ಗಂಗಾ ತೀರದಲ್ಲಿ ಒಂದು ಕುಟೀರವನ್ನು ನಿರ್ಮಿಸಿಕೊಟ್ಟರೆ ಅಲ್ಲಿ ನೆಲೆಸುವ ಆಸೆಯು ಅವರಲ್ಲಿ ಮೂಡಿತ್ತು. ಮಹಾತ್ಮಾ ಗಾಂಧೀಯವರ ಅಧ್ಯಕ್ಷತೆಲ್ಲಿ ಫರೀದಪುರದಲ್ಲಿ ಜರುಗಿದ ಪ್ರಾಂತೀಯ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿದ್ದೇ (೨-೨-೧೯೨೫) ಅವರ ಕೊನೆಯ ಸಾರ್ವಜನಿಕ ಕಾರ್ಯಕ್ರಮ. ಅಲ್ಲಿಯೇ ಅವರಿಗೆ ದೇಹಾಯಾಸ ಆರಂಭವಾಗಿತ್ತು.

ಇತಿಹಾಸದಲ್ಲಿಯೇ ಅಮರರು :

ಚಿತ್ತರಂಜನರು ವಿಶ್ರಾಂತಿಗೆಂದು ಡಾರ್ಜಲಿಂಗ್‌ಗೆ ಹೋದರು. ಮಹಾತ್ಮಾ ಗಾಂಧಿ ಆಗ ಬಂಗಾಳದಲ್ಲಿ ಪ್ರವಾಸ ಮಾಡುತ್ತಿದ್ದರು. ತಮ್ಮ ಕೆಲಸ ಕಾರ್ಯ ಮುಗಿಸಿ ಗಾಂಧೀಜಿ ಎರಡು ದಿನಗಳು ತಂಗುವುದಕ್ಕಾಗಿ ಡಾರ್ಜಲಿಂಗ್ಗೆ ಬಂದರು: ಆದರೆ ಒತ್ತಾಯಕ್ಕೆ ಕಟ್ಟುಬಿದ್ದು, ೫ ದಿನ ದಾಸರ ಜೊತೆಗೆ ಉಳಿದರು.

ಆಗಾಗ ಜ್ವರ ಬರುತ್ತಿದ್ದು, ೧೯೨೫ರ ಜೂನ್ ೧೫ರ ಬೆಳಿಗ್ಗೆ ಅವರಿಗೆ ಜ್ವರ ಕಂಡಿತು. ಮಧ್ಯಾಹ್ನ ೪-೪೫ರ ವೇಳೆಗೆ ಅವರ ಜೀವನ ಲೀಲೆ ಮುಕ್ತಾಯಗೊಂಡಿತು. ಆಗ ಅವರಿಗೆ ಐವತ್ತೈದೇ ವರ್ಷ.

ಏಕಾಂತದಲ್ಲಿ ಅತ್ತು, ನೂರಾರು ಜನರೆದುರಿನಲ್ಲಿ ನಕ್ಕು ನಗಿಸುತ್ತಿದ್ದ. ಒಡನಾಡಿಗಳಲ್ಲಿ ಧೈರ್ಯ ತುಂಬುತ್ತಿದ್ದ ತ್ಯಾಗಕ್ಕೂ ಉದಾಹರಣೆಯಾಗಿದ್ದ, ಹೋರಾಟಕ್ಕೆ ಎದೆಗೊಟ್ಟು ನಿಲ್ಲುತ್ತಿದ್ದ ಪರಮ ದೇಶಭಕ್ತನ ಕಣ್ಮರೆಯಾಯಿತು.

ವಿಶೇಷ ರೈಲಿನಲ್ಲಿ ದಾಸರ ಶವವನ್ನು ಕಲ್ಕತ್ತೆಗೆ ಸಾಗಿಸಲಾಯಿತು. ಹೌರಾ ನಿಲ್ದಾಣದ ಸುತ್ತ ಜನಸಾಗರವೇ ನಿರ್ಮಾಣವಾಗಿತ್ತು. ಭಾರತವೇ ಅಂದು ಅತ್ತಿತು. ಐದು ಲಕ್ಷ ಮಂದಿ ಪಾಲ್ಗೊಂಡು ಶವಯಾತ್ರೆ ಕೊರತಾಲಾ ಸ್ಮಶಾನ ತಲುಪಲು ೮ ಗಂಟೆಗಳ ಕಾಲಹಿಡಿಯಿತು. ಗಾಂಧೀಜಿ, ಮೋತಿಲಾಲರಲ್ಲದೆ ನೂರಾರು ಐರೋಪ್ಯರು ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

ಅನಂತರ ನಡೆದ ಸಂತಾಪಸಭೆಯಲ್ಲಿ ಐದು  ಲಕ್ಷ ಜನ ಸೇರಿದ್ದರು.  ಮಾತನಾಡಿದವರು ಗಾಂಧೀಯವರೊಬ್ಬರೇ, ಅವರೆಂದರು:

ಅವರ ಆತ್ಮವಷ್ಟೇ ಅಲ್ಲ: ತ್ಯಾಗಕ್ಕೂ ಸೇವೆಗೂ ಆದರ್ಶವೆನಿಸುವ ಅವರ ಹೆಸರು ಅಮರವಾಗಿ ಉಳಿಯುತ್ತದೆ. ಅವರು ನಿರ್ಭೀತರು, ಸಾಹಸಿಗಳು, ಇಂಗ್ಲೀಷರ ಸರಕಾರದ ವಿರುದ್ಧ ಹೋರಾಡಿದರೂ ಇಂಗ್ಲೀಷ್ ಜನರ ಬಗ್ಗೆ ದ್ವೇಷವಿರಲಿಲ್ಲ. ಹಿಂದೂ-ಮುಸ್ಲಿಮರಲ್ಲಿ ಅವರು ಬೇಧವೆಸಗಲಿಲ್ಲ. ಇತಿಹಾಸದ ಪುಟಗಳಲ್ಲಿ ಅವರ ಹೆಸರು ಶಾಶ್ವತವಾಗಿ  ಉಳಿಯುತ್ತದೆ.