ನಾಗಾವಿ

ತಾ. ಚಿತ್ತಾಪೂರ
ದೂರ: ೪ ಕಿ.ಮೀ

ನಾಗಾವಿಯಲ್ಲಿ ಸುಮಾರು ೧೧ನೇ ಶತಮಾನಕ್ಕೆ ಸೇರಿದ ೬೦ ಕಂಭದ ಗುಡಿ ರಾಮೇಶ್ವರ, ಲಕ್ಷ್ಯಣೇಶ್ವರ, ನಂದಿಬಾವಿಗುಡಿ, ವಿಠೋಬ, ನಂದೀಶ್ವರ, ನಾಗಾಯೆ, ಎಲ್ಲಮ್ಮ, ಕಡಲೆ ಬಸವಣ್ಣ, ಈರಪ್ಪಯ್ಯನ ಹಾಗೂ ಜುಮ್ಮಾ ಮಸೀದಿ, ಜೈನ ಮಂದಿರಗಳಿದ್ದು ಇವುಗಳಲ್ಲಿ ಹೆಚ್ಚಿನ ದೇವಾಲಯಗಳಿಂದು ಜೀರ್ಣಾವಸ್ಥೆಯಲ್ಲಿವೆ. ದಸರಾ ಸಂದರ್ಭದಲ್ಲಿ ೯ ದಿನವೂ ವಿಶೇಷ ಉತ್ಸವವಿರುತ್ತದೆ. ಇಲ್ಲಿಯ ದೇವಾಲಯಗಳಲ್ಲಿ ಪುರಾತತ್ವ ಇಲಾಖೆಯಿಂದ ಪೂರ್ಣ ಸಂರಕ್ಷಣೆ ಒಳಪಟ್ಟಿರುವ ೬೦ ಕಂಬದ ದೇವಾಲಯ ಚಾರಿತ್ರಿಕ ದೃಷ್ಠಿಯಿಂದ ಮಹತ್ವದ್ದಾಗಿದೆ.

ಈ ದೇವಾಲಯ ಗರ್ಭಗೃಹ, ತೆರೆದ ಅಂತರಾಳ ವಿಶಾಲವಾದ ಸಭಾಮಂಟಪ ಹೊಂದಿದೆ. ಗರ್ಭಗೃಹದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರ ಅಖಂಡ ತ್ರೈಪುರುಷರ ಪೀಠವಿದೆ. ವಿಶಾಲ ಸಭಾ ಮಂಟಪ ೮೮ ಕಂಬಗಳನ್ನು ಹೊತ್ತು ನಿಂತಿದೆ. ಈ ದೇವಾಲಯ ಹಿಂದೆ ವೇದಾಧ್ಯಯನದಲ್ಲಿ ತೊಡಗಿದ್ದ ವಿದ್ಯಾರ್ಥಿಗಳಿಂದ ಕೂಡಿದ ಶಾಲೆಯಾಗಿದ್ದು ಘಟಿಕಾಸ್ಥಾನ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು.

 

ಸನ್ನತಿ

ಸನ್ನತಿಯು ತಾಲೂಕಾ ಕೇಂದ್ರ ಚಿತ್ತಪೂರದಿಂದ ೪೮ ಕಿ.ಮೀ ಹಾಗೂ ಶಹಾಪೂರದಿಂದ ಪೂರ್ವಕ್ಕೆ ೧೯ ಕಿ.ಮೀ ದೂರದಲ್ಲಿದೆ. ಇದನ್ನು ಶಿರವಾಳದ ಹೊಳೆಯ ದಂಡೆಯಲ್ಲಿರುವ ದೋಣಿಯ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ಪ್ರಾದೇಶಿಕವಾಗಿ ಸೊಂಥಿ ಎಂದೇ ಕರೆಯಲ್ಪಡುವ ಈ ಊರು ಭೀಮಾ ನದಿಯ ಎಡ ದಂಡೆಯ ಮೇಲಿರುವ ಚಾರಿತ್ರಿಕ ಮಹತ್ವದ ಪ್ರಾಚೀನ ನೆಲೆಯಾಗಿದೆ. ಸನ್ನತಿಯಿಂದ ಈವರೀ ಅಶೋಕನ ಕಾಲಕ್ಕೆ ಸೇರಿದ ನಾಲ್ಕು ಶಾತವಾಹನರ ಕಾಲಕ್ಕೆ ಸೇರಿದ ೭೭ ಪ್ರಾಕೃತ ಭಾಷೆಯಲ್ಲಿರುವ ಬ್ರಾಹ್ಮಿ ಶಾಸನಗಳು ವರದಿಯಾಗಿದ್ದು ಅಧಿಕ ಬ್ರಾಹ್ಮಿ ಶಾಸನಗಳು ದೊರೆತ ಏಕೈಕ ಸ್ಥಳ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಇಲ್ಲಿರುವ “ಚಂದ್ರಲಾ ಪರಮೇಶ್ವರಿ” ದೇವಾಲಯವೇ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಊರಿನಿಂದ ಒಂದುವರೆ ಕಿ.ಮೀ ದೂರದಲ್ಲಿರುವ ಈ ದೇವಾಲಯ ದ್ರಾವಿಡ ಶೈಲಿಯಲ್ಲಿರುವ ಈ ಗೋಪುರವು ಸುಂದರ ಶಿಲ್ಪಗಳಿಂದಾಗಿ ಚಿತ್ತಾಕರ್ಷಕವಾಗಿದೆ. ಈ ದೇವಾಲಯವು ಗರ್ಭಗೃಹ ತೆರೆದ ಅಂತರಾಳ ಹಾಗೂ ನವರಂಗಗಳನ್ನು ಹೊಂದಿದ್ದು, ಶ್ರೀ ಚಕ್ರದ ತಳವಿನ್ಯಾಸವಿರುವ ಗರ್ಭಗೃಹವನ್ನು ಪದ್ಮಾಕಾರದ ಶಿಖರದಿಂದ ಅಲಂಕರಿಸಿದೆ. ಗರ್ಭಗೃಹದಲ್ಲಿ ಸರ್ಪ, ಮಹಾಕಾಳಿ, ಲಕ್ಷ್ಮಿ ಹಾಗೂ ಸರಸ್ವತಿಯರ ಕೆತ್ತನೆಯುಳ್ಳ ಕಂಚಿನ ಪ್ರಭಾವಳಿ ಇದ್ದು ಪ್ರಭಾವಳಿಯಲ್ಲಿ ಧ್ವಜ, ಶಂಖ, ಚಕ್ರಗಳಿವೆ. ಇದರ ಮುಂದೆ ಬಲತುದಿಯಲ್ಲಿ ಮಹಾಕಾಳಿ, ನಡುವೆ ಶ್ರೀ ಚಕ್ರ ಹಾಗೂ ಎಡಕ್ಕೆ ಚಂದ್ರಲಾ ಪರಮೇಶ್ವರಿಯ ಕಿರು ಶಿಲ್ಪಗಳಿದ್ದು ಈ ದೇವಿಯೇ ಇಲ್ಲಿಯ ಪ್ರಧಾನ ದೇವತೆಯಾಗಿದ್ದಾಳೆ.

 

ಕಾಳಗಿ

ತಾಲೂಕು ಕೇಂದ್ರವಾದ ಚಿತ್ತಾಪೂರದಿಂದ ೫೦ ಕಿ.ಮೀ. ಗುಲ್ಬರ್ಗಾದಿಂದ ಪೂರ್ವಕ್ಕೆ ೬೦ ಕಿ.ಮೀ. ದೂರದಲ್ಲಿದೆ. ಪ್ರಾಚೀನ ಶಾಸನಗಳಲ್ಲಿ ಇದರ ಹೆಸರು “ಕಾಳುಗೆ” ಎಂದೇ ಇದೆ. ಇಲ್ಲಿಯ ಶಾಸನಗಳಲ್ಲಿ ಉಲ್ಲೇಖವಾಗಿರುವ ಸೋಮೇಶ್ವರ, ಬಿಬ್ಬೇಶ್ವರ, ಕಾಳೇಶ್ವರ, ಜಯಲಿಂಗೇಶ್ವರ ಹಾಗೂ ಗೊಂಕೇಶ್ವರ ದೇವಾಲಯಗಳು ಇಂದು ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುತ್ತಿವೆ. ಊರ ಹೊರಗೆ ಇರುವ ಮಲ್ಲಿಕಾರ್ಜುನ ದೇವಾಲಯವೇ ಶಾಸನೋಕ್ತ ಗೊಂಕೇಶ್ವರ ದೇವಸ್ಥಾನವಾಗಿದ್ದು ೧೧೬೩ ರಲ್ಲಿ ಮಹಾಮಂಡಳೇಶ್ವರ ಬಾಣವೀರ ಕೊಂಕರಸನು ಇದನ್ನು ನಿರ್ಮಿಸಿದ್ದಾನೆ. ಗರ್ಭಗೃಹದಲ್ಲಿ ಬೃಹತ್ತಾದ ಶಿವಲಿಂಗವಿದ್ದು ಇದರ ದ್ವಾರಪಾಲಕರು, ಲಲಾಟದಲ್ಲಿ ಗಜಲಕ್ಷ್ಮಿಯಿದ್ದು, ಉತ್ತರಾಂಗವನ್ನು ಪಂಚ ದಿಕ್ಕಿನಿಂದಲೂ ಪ್ರವೇಶಿಸ ಬಹುದಾಗಿದ್ದು ಅದರ ಅಧಿಷ್ಠಾನದಲ್ಲಿ ವಜ್ರಪಟ್ಟಿಕೆಯ ಅಲಂಕಾರವಿದೆ.

ಊರ ಹೊರಗೆ ಇರುವ ಹನುಮಂತನ ಗುಡಿಯಲ್ಲಿ ಸುಮಾರು ೧೦ ಅಡಿ ಎತ್ತರ ೬ ಅಡಿ ಅಗಲದ ಗಣಪತಿಯು ಬೃಹತ್ ಶಿಲ್ಪವಿದೆ. ಅಲ್ಲೇ ಗುಡಿಯ ಮುಂದೆ ಪೀಠಸ್ಥದ ಚತುರ್ಮುಖ ಬ್ರಹ್ಮನಶಿಲ್ಪವಿದೆ. ಎರಡು ಅಡಿ ಉದ್ದ ಮತ್ತು ಒಂದಡಿ ಅಗಲವಿರುವ ಫಲಕದ ತುಂಡೊಂದರ ಮೇಲಿರುವ ಮೂವರು ಮಹಿಳೆಯರು, ಜಿಂಕೆ, ಗಿಳಿ ಹಾಗೂ ಹೂವುಗಳ ರೇಖಾ ಚಿತ್ರಗಳು ವಿದೇಶಿ ಅಂಶಗಳನ್ನು ಒಳಗೊಂಡಿದ್ದು ಪ್ರಾಯಶಃ ರೋಮನ್ನರೊಂದಗಿದ್ದ ಸಂಪರ್ಕವನ್ನು ಇದು ಸೂಚಿಸುತ್ತದೆಂಬ ಅಭಿಪ್ರಾಯವಿದೆ. ಈಗ ಇದು ಗುಲ್ಬರ್ಗಾ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಲ್ಲಿದೆ.

 

ಮರತೂರ

ಮರತೂರು ತಾಲೂಕು ಕೇಂದ್ರವಾದ ಚಿತಾಪುರದಿಂದ ವಾಯುವ್ಯಕ್ಕೆ ೨೫ ಕಿ.ಮೀ. ಗುಲಬರ್ಗಾದಿಂದ ಆಗ್ನೆಯಕ್ಕೆ ೧೬ ಕಿ.ಮೀ ದೂರದಲ್ಲಿರುವ ಚಾರಿತ್ರಿಕ ಮಹತ್ವದ ಸ್ಥಳವಾಗಿದೆ. ಈ ಸ್ಥಳದಿಂದ ಈವರೆಗೆ ವರದಿಯಾಗಿರುವ ಶಾಸನಗಳಲ್ಲಿ ಒಂದು ಆರನೆಯ ವಿಕ್ರಮಾದಿತ್ಯನ ಗುರು ಆಸ್ಥಾನ ಪಂಡಿತ ವಿಜ್ಞಾನೇಶ್ವರರನ್ನು ದಾಖಲಿಸುವುದರೊಂದಿಗೆ ಪ್ರಾಮುಖ್ಯತೆ ಗಳಿಸಿದ್ದರೆ, ಇನ್ನೊಂದು ನಾಯಕನೊಬ್ಬ ಭೂದಾನ ಮಾಡಿದ ಅಂಶವನು ದಾಖಲಿಸಿದ್ದು ಅಸ್ಪಷ್ಟವಾಗಿದೆ. ಮಿತಾಕ್ಷರವೆಂಬ ಧರ್ಮಶಾಸ್ತ್ರದ ಕರ್ತೃವಾದ ವಿಜ್ಞಾನೇಶ್ವರರು ಈ ಊರಿನವರೆ ಎಂಬ ಅಭಿಪ್ರಾಯವಿದೆ. ವಿಜ್ಞಾನೇಶ್ವರರ ಮಗ ಹೆಗ್ಗಡೆ ಬೀಚಿರಾಜ ಮತ್ತು ಅವನ ಸತಿ ಚಾಮಲಾ ದೇವಿಯರು ಮರತೂರಿನಲ್ಲಿ ಮಹಾದೇವ, ಕೇಶವದೇವ ಹಾಗೂ ಬಿಜ್ಜೇಶ್ವರ ದೇವರುಗಳುಳ್ಳ ದೇವಾಲಯವನ್ನು ನಿರ್ಮಿಸಿದಾಗ, ಮಹಾಮಂಡಳೇಶ್ವರರಾದ ಬಿಬ್ಬರಸ, ಗೊಂದರಸ ಹಾಗೂ ಇತರರು ದೇವರ ಪೂಜಾ ವಿಧಿ ಕಾರ್ಯಗಳಿಗಾಗಿ ಭೂದಾನ ಮಾಡಿದ ಅಂಶ ಶಾಸನದಲ್ಲಿ ಉಲ್ಲೇಖಿತವಾಗಿದೆ.

 

ಬುದ್ಧ ಸ್ತೂಪಗಳು

ಚಿತ್ತಾಪೂರ ತಾಲೂಕಾ ಕೇಂದ್ರದಿಂದ ೪೮ ಕಿ.ಮೀ ದೂರದ ಸನ್ನತಿಯ ಚಂದ್ರಲಾ ಪರಮೇಶ್ವರಿಯ ಗುಡಿಯ ಮುಂದಿರುವ ಬೌದ್ಧ ಶಿಲ್ಪ ಫಲಕ ಹಾಗೂ ಅದರ ಸನಿಹವೇ ಇರ್ವ ಬೋಧಿ ವೃಕ್ಷ ಬರಿದಾದ ಸಿಂಹಾಸನ ಹಾಗೂ ಪಾರುಕೆಯ ಸುಂದರ ಕೆತ್ತನೆಯಿರುವ ಶಿಲ್ಪ ಫಲಕ ಹಾಗೂ ಅದರ ಶಾಸನವಿರುವ ವೀರಗಲ್ಲುಗಳಿವೆ.

ಅಶೋಕನ ಪೂರ್ವ ಕಾಲಕ್ಕೆ ಸೇರಿದ ಬೌದ್ಧ ಯಕ್ಷೀಯ ಕೆತ್ತನೆಯುಳ್ಳ ಕಲ್ಲಿನ ಪದಕ ರೋಮನ್ ಚಕ್ರವರ್ತಿ ಟೈಬಿರಿಯಷನ ಚಿತ್ರವುಳ್ಳ ಜೇಡಿ ಮಣ್ಣಿನ ಪದಕಗಳು ಪತ್ತೆಯಾಗಿವೆ. ಸನ್ನತಿಯ ಎದುರು ದಂಡೆಯ ಮೇಲಿರುವ ಹಸರಗುಂಡಿಗೆಯಲ್ಲಿ ಬೌದ್ಧ ಸಂಬಂಧವುಳ್ಳ ಎರಡು ದಿಬ್ಬಗಳಿವೆ. ಇಲ್ಲಿ ಬೌದ್ಧ ಅವಶೇಷಗಳಲ್ಲಿ ಆಸೀನ ಭಂಗಿಯಲ್ಲಿರುವ ಗಜಲಕ್ಷ್ಮಿಯ ಉದಾಹರಣೆ ಎಂಬ ಅಂಶ ಗಮನಾರ್ಹ. ಉತ್ಖನನಗಳಿಂದಾಗಿ ಸನ್ನತಿ ಹಾಗೂ ಕನಗನ ಹಳ್ಳಿಯಲ್ಲಿ ಸ್ತೂಪಗಳಿದ್ದ ಅಂಶ ಸ್ಥಿರಪಡಿಸಿವೆ.

 

ವಾಡಿ

ತಾ. ಚಿತ್ತಾಪೂರ
ದೂರ: ೧೫ ಕಿ.ಮೀ

ವಾಡಿಯು ತಾಲೂಕಾ ಕೇಂದ್ರವಾದ ಚಿತ್ತಾಪೂರದಿಂದ ೧೫ ಕಿ.ಮೀ. ದೂರದಲ್ಲಿರುವ ದೊಡ್ಡ ರೈಲ್ವೆ ಜಂಕ್ಷನ್ ಆಗಿದ್ದು ಹೈದ್ರಾಬಾದ, ಸೊಲ್ಲಾಪೂರ ಮದ್ರಾಸ್ ರೈಲು ಮಾರ್ಗಗಳ ಕೂಡು ಸ್ಥಳವಾಗಿದೆ. ೧೮೭೪ ರ ವರೆಗೆ ಇದೊಂದು ಅರಣ್ಯ ಗ್ರಾಮವಾಗಿತ್ತು. ಆದರೆ ಹೈದರಾಬಾದ ರೈಲು ಮಾರ್ಗಗಳ ಜೋಡಣೆಯಿಂದ ಮಹತ್ವ ಪಡೆಯಿತು. ವಾಡಿಯು ಇಂದು ಎ.ಸಿ.ಸಿ ಕಂಪನಿಯ ಸಿಮೆಂಟ ಕಾರ್ಖಾನೆಯಿಂದ ಪ್ರಸಿದ್ಧಿ ಹೊಂದಿದೆ.