೧. ಎಸ್.ಎಮ್. ಪಂಡಿತರ ರೇಖಾಚಿತ್ರಗಳು

I. ದೈನಂದಿನ ರೇಖಾಚಿತ್ರಗಳು

II. ಶಿರಭಾವ ರೇಖಾಚಿತ್ರಗಳು

III. ಸಂಯೋಜನಾ ರೇಖಾಚಿತ್ರಗಳು

ಅ. ಚಲನಚಿತ್ರದ ಮತ್ತು ಕ್ಯಾಲಿಂಡರ್

ಬ. ಆಧ್ಯಾತ್ಮಿಕ, ಪೌರಾಣಿಕ ಮತ್ತು ಧಾರ್ಮಿಕ ಸಂಯೋಜನಾ ರೇಖಾಚಿತ್ರಗಳು

IV. ನಿಸರ್ಗ ರೇಖಾಚಿತ್ರಗಳೆಂದು ವಿಂಗಡಿಸಿ ಕೆಲವನ್ನು ಇಲ್ಲಿ ಚರ್ಚಿಸಬಹುದಾಗಿದೆ.

I. ದೈನಂದಿನ ರೆಖಾಚಿತ್ರಗಳು

೧. ವಿವಿಧ ಭಂಗಿಯ ಕೈಗಳು

ನೀಲಿ ಬಣ್ಣದ ಪೆನ್ನಿನಿಂದ ೧೯೭೩ ರಲ್ಲಿ ೭x೧೦ ಇಂಚು ಅಳತೆಯಲ್ಲಿ ಅಧ್ಯಯನಕ್ಕಾಗಿ ಚಿತ್ರಸಿರುವ ಚಿತ್ರಗಳಲ್ಲೊಂದಾಗಿದೆ. ಈ ಕರಡುಪ್ರತಿಯನ್ನು ಡಾ. ಎಸ್.ಎಮ್. ಪಂಡಿತರು ‘ಉಮರಖಯಾಮ’ ಕಲಾಕೃತಿ ರಚನೆಯನ್ನು ಮಾಡುವುದಕ್ಕಿಂತ ಮೊದಲು ರೂಡಿಗಾಗಿ ಮಾಡಿರುವ ಎರಡನೇ ಹಂತದ ಕರಡು ರೇಖಾಚಿತ್ರವಾಗಿದೆ.

 ತೀಕ್ಷಣವಾದ ರೇಖೆಗಳಲ್ಲಿ ವಿವಿಧ ಭಂಗಿಯ ಕೈಗಳನ್ನು ಅಧ್ಯಯನ ಮಾಡಿ ರೇಖಾಚಿತ್ರವನ್ನು ವಸ್ತುವಿನ ಸಾಂದ್ರತೆಗೆ ಅನುಗುಣವಾಗಿ ಚಿತ್ರಿಸುತ್ತಿದ್ದರು. ಕೈಯಲ್ಲಿ ಗ್ಲಾಸ್ ಹಿಡಿದಿರುವ ವಿವಿಧ ಭಂಗಿಗಳು ಇಲ್ಲಿ ಚಿತ್ರಣಗೊಂಡಿವೆ. ಪಾನಕದ ಗ್ಲಾಸ್ ಎಷ್ಟು ಹಗುರವಾಗಿ, ಎಷ್ಟು ಕಲಾತ್ಮಕವಾಗಿ ಕೈಯಲ್ಲಿ ಹಿಡಿಯಲು ಸಾಧ್ಯವಿದೆ ಎಂಬುವುದನ್ನು ಇಲ್ಲಿ ಸುಂದರವಾಗಿ ಚಿತ್ರಿಸಲಾಗಿದೆ. ಇದನ್ನು ಒಂದೆರಡೇ ಲಯಬದ್ಧವಾದ ರೇಖೆಗಳಲ್ಲಿ ಚಿತ್ರಿಸಿರುವುದು ಗಮನಿಸಬಹುದು. ಎಳೆ ಎಳೆಯಾಗಿ ರೇಖೆಗಳು ಲಯಬದ್ಧವಾಗಿ ಚಿತ್ರಿಸಿದ ಕೈ ತೋಳಿನ ಬಟ್ಟೆಯ ಮಡಿಕೆಗಳು.

ತೀಕ್ಷಣವಾದ ರೇಖೆಗಳಲ್ಲಿ ಮೂಡಿಸಿದ್ದಾರೆ. ಕೈಯಲ್ಲಿ ಹಿಡಿದಿರುವ ಎರಡು ವಸ್ತುಗಳ ವ್ಯತ್ಯಾಸಗಳನ್ನು ನಾವು ಗಮನಿಸಬಹುದು. ಮೊಳಕಾಲಿನ ಮೇಲೆ ಕೈಹಿಟ್ಟು ಕುಳಿತ ವ್ಯಕ್ತಿಯ ಬಟ್ಟೆಯ ನೈಜವಾದ ಅನುಭವವನ್ನು ಈ ರೇಖಾಚಿತ್ರ ನೀಡುತ್ತದೆ. ಇದೊಂದು ಮಹತ್ವದ ರೇಖಾಚಿತ್ರವೆನ್ನಬಹುದಾಗಿದೆ.

೨. ಭುಜಗಳು

ಈ ರೇಖಾ ಚಿತ್ರವು ೧೯೭೬ ರಲ್ಲಿ ಕೆಂಪು ಲೇಖನಿಕೆಯಿಂದ ೭x೧೧ ಇಂಚು ಅಳತೆಯಲ್ಲಿ ಪೇಪರ್ ಮೇಲೆ ದೈನಂದಿನ ಅಭ್ಯಾಸಕ್ಕಾಗಿ ಚಿತ್ರಿಸಿದ್ದಾರೆ. ಪಂಡಿತರ ಈ ಚಿತ್ರದಲ್ಲಿ ಗಂಡು ಮತ್ತು ಹೆಣ್ಣಿನ ತೋಳುಗಳಲ್ಲಿ ಆಧುನಿಕವಾದ ವಸ್ತ್ರವಿನ್ಯಾಸವನ್ನು ಇಲ್ಲಿ ಕಲಾತ್ಮಕವಾಗಿ ಚಿತ್ರಿಸಿದ್ದಾರೆ. ಇಬ್ಬರ ದೇಹದ ಅರ್ಧಭಾಗ ಮಾತ್ರ ಚಿತ್ರಿಸಿರುವಂತಿದೆ. ನೈಜ ಶೈಲಿಯಲ್ಲಿ ಚಿತ್ರಿಸಿದ ಈ ರೇಖಾಚಿತ್ರಗಳು ಯುವತಿಯ ಮೈ ಆಕಾರಕ್ಕೆ ತಕ್ಕಂತೆ ಧರಿಸಿಕೊಂಡಿರುವ ಬಟ್ಟೆ, ಅದರಲ್ಲಿನ ಮಡಿಕೆಗಳು, ಸರಳ ಲಯಬದ್ಧವಾದ, ಪ್ರಮಾಣಬದ್ದವಾದ ಕೈಯ ಆಕಾರ, ಅದರ ಹಗುರತನ ಇಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಸೊಂಟದಿಂದ ಕೆಳಗೆ ಜೋತು ಬಿದ್ದಿರುವ ಬಟ್ಟೆಯನ್ನು ಅಷ್ಟೇ ಸತ್ವಶಾಲಿಯಾಗಿ ಈ ರೇಖೆಯಲ್ಲಿ ಚಿತ್ರಿಸಿದ್ದಾರೆ. ಅದೇ ಯುವಕನು ಧರಿಸಿದ ಅಂಗಿಯಿಂದ ಕಾಣುವ ದೇಹದ ರಚನೆ, ಕೈ ತೋಳಿನ ಬಟ್ಟೆಯಲ್ಲಿ ಮೂಡಿದ ಮಡಿಕೆಗಳು, ಅದು ಮೈಗೆ ಎಷ್ಟು ಹತ್ತಿರ ಅಂಟಿಕೊಂಡಿರುತ್ತದೆ, ಅದರಿಂದ ಬರುವ ಮಡಿಕೆಗಳು ನೆರಳು ಬೆಳಕಿನ ಛಾಯೆಯ, ಅನುಭವವನ್ನು ಪಂಡಿತರು ಇಲ್ಲಿ ಪರಿಣಾಮಕಾರಿಯಾಗಿ ಮೂಡಿಸಿದ್ದಾರೆ. ಅಗತ್ಯಕ್ಕೆ ತಕ್ಕಂತೆ ಮಾತ್ರ ಲೇಕನಿಯಿಂದ ರೇಖೆ ನಿಡುವುದರ ಮುಲಕ ಪಂಡಿತರು ಈ ರೇಖಾಚಿತ್ರವನ್ನು ಚಿತ್ರಿಸಿರುವುದು ಗಮನ ಸೆಲೆಯುವ ಅಂಶವಾಗಿದೆ.

೩. ವಿವಿಧ ಭಾವನೆಗಳು

ಈ ರೇಖಾ ಚಿತ್ರದಲ್ಲಿ ಹೆಣ್ನುಮಕ್ಕಳ ವಿವಿಧ ಭಾವನೆಗಳನ್ನು ಸ್ಕೆಚ್ ಪೆನ್ನಿನಿಂದ ೭x೯ ಇಂಚು ಅಳತೆಯ ಪೇಪರನ ಮೇಲೆ ದೈನಂದಿನ ಅಭ್ಯಾಸಕ್ಕಾಗಿ ಚಿತ್ರಿಸಿದ್ದಾರೆ. ಈ ಚಿತ್ರದಲ್ಲಿ ಯುವತಿಯು ಹರ್ಷದಲ್ಲಿದ್ದಾಗ ಮೂಡುವ ಮುಖದಲ್ಲಿನ ಭಾವನೆಗಳು, ಭಾವನೆಗೆ ತಕ್ಕ ತುಟಿ, ಕಣ್ಣುಗಳಲ್ಲಿನ ಸಂತೋಷ, ಪೂರ್ಣ ಭಾವನೆಗಳನ್ನು ಸ್ಕೆಚ್ ಪೆನ್ನಿನಿಂದ ಮೂಡಿಸಿರುವುದನ್ನು ಕಾಣಬಹುದು. ಮೂಗು, ಕೈ, ಕೆನ್ನೆಗಳಲ್ಲಿ ಕಂಡುಬರುವ ಎರಡೆರಡು ರೇಖೆಗಳಲ್ಲಿ ಬಂದು ಹೊರ ಮೈ ಅಂಗಾಂಗದ ರೇಖೆಯ ಕಲ್ಪನೆಯನ್ನು ನೀಡುತ್ತದೆ, ಇನ್ನೊಂದು ರೇಖೆಯೂ ಅದರ ಛಾಯೆಯ ಕಲ್ಪನೆಯ ಭಾಸ ಮೂಡಿಸುತ್ತದೆ. ಕೆಲವೇ ರೇಖೆಗಳಲ್ಲಿ ಕೂದಲು ಮತ್ತು ಅದರಲ್ಲಿ ಹೂ ಮುಡಿದಿರುವುದನ್ನು ಸೂಕ್ಷ್ಮವಾಗಿ ಅಭಿವ್ಯಕ್ತ ಪಡಿಸಿದ್ದಾರೆ.

II. ಶಿರಭಾವ ರೇಖಾಚಿತ್ರಗಳು

೧. ಹಜರತ್ ನ ಶಿರಭಾವಚಿತ್ರ

ಈ ಪಾರ್ಶ್ವ ಮುಖದ ಹಜರತ್ ನ ಅವರ ಭಾವಚಿತ್ರವು ಪೇಪರಿನ ಮೇಲೆ ೭x೯ ಇಂಚು ಅಳತೆಯಲ್ಲಿ ೧೯೭೨ ರಲ್ಲಿ ಅಧ್ಯಯನ ರೂಪದಲ್ಲಿ ಚಿತ್ರಿಸಲಾಗಿದೆ. ವ್ಯಕ್ತಿಯ ಆಕಾರ ಮತ್ತು ಉಡುಗೆ ತೊಡುಗೆಗಳಿಂದ ಮುಸ್ಲಿಂ ಧರ್ಮದವರೆಂದು ತಿಳಿಯುತ್ತದೆ. ಈ ಭಾವಚಿತ್ರದಲ್ಲಿ ನಾವು ಮೂರು ತರಹದ ನೆರಳು ಬೆಳಕಿನ ತಂತ್ರಗಾರಿಕೆಯನ್ನು ಕಾಣಬಹುದು. ಗಲ್ಲ, ಮೂಗು ಹಣೆ, ತುಟಿ ಮತ್ತು ಚರ್ಮಕ್ಕೆ ಅನುಗುಣವಾಗಿ ಪನ್ಸಿಲ್ ನ ನೆರಳಿನಿಂದ – ಬೆಳಕಿನತ್ತ ಹಗುರವಾದ ಮಿಶ್ರಛಾಯೆ ಬಳಸಿದ್ದಾರೆ. ಹಣೆಯ ಮೇಲಿನ ಕಪ್ಪು ಛಾಯೆ, ಕಣ್ನುಗಳಲ್ಲಿಯ ರೇಖೆಗಲು ಆ ವೃದ್ಧನ ವಯಸ್ಸನ್ನು ಸೂಚಿಸುತ್ತಿದೆ. ಹಣೆಯ ಮಧ್ಯದ, ಮೂಗಿನ ಕೆಳಗೆ ಹಾಕಿರುವ ದಟ್ಟ ಪೆನ್ಸಿಲ್ ರೇಖೆಯ ಆಳವನ್ನು ತೋರಿಸಿದ್ದಾರೆ. ಎಳೆ ಎಳಯಾಗಿ ಉಳಿದುಕೊಂಡಿರುವ ಹುಬ್ಬೀನ ಕೂದಲುಗಳನ್ನು ಪೆನ್ಸಿಲ್‌ನಲ್ಲಿ ದಟ್ಟವಾದ ರೇಖೆಯಲ್ಲಿ ರಚಿಸಿದ್ದಾರೆ. ಹುಬ್ಬು ಮತ್ತು ದಾಡಿ ಕೂದಲುಗಳನ್ನು ಎಷ್ಟು ಸರಳವಾಗಿ ವಿಭಜಿಸಿದ್ದಾರೆಂಬುದನ್ನು ಇಲ್ಲಿ ಕಾಣಬಹುದು. ಅದು ಘನವಸ್ತುವಾಗಿರುವ ಅನುಭವ ತೋರಿಸುತ್ತದೆ. ಕನ್ನಡಕದೊಳಗಿನಿಂದ ಕಾಣುತ್ತಿರುವ ಮಂಜು, ಮಂಜಾದ ಕಣ್ಣುಗಳು ಈ ರೇಖಾಚಿತ್ರದ ಮುಖ್ಯತಿರುಳಾಗಿದ್ದು ರೇಖಾಚಿತ್ರದ ಔಚಿತ್ಯ ಇಲ್ಲಿ ಮೇಳೈಸಿದೆ. ಪಂಡಿತರು ತಮ್ಮ ಕಲಾಕೌಶಲ್ಯವನ್ನು ಇಲ್ಲಿ ಸಹಜವಾಗಿ ಪ್ರತಿಬಿಂಬಿಸಿದ್ದಾರೆ.

ಒಟ್ಟಾರೆ ಪಂಡಿತರು ಮೂರು ಹಂತಗಳಲ್ಲಿ ನೆರಳು ಬೆಳಕಿನ ಛಾಯೆಯನ್ನು ಬಳಸಿದ್ದಾರೆ. ವಿಷಯಕ್ಕೆ ತಕ್ಕಂತೆ ಬಳಸಿರುವ ಮೃದುವಾದ ಭಾಗದಲ್ಲಿ ಮಿಶ್ರಛಾಯೆ, ಸರಳವಾಗಿ ಬಳಸಿರುವ ಛಾಯೆ, ಹಗುರವಾದ ರೇಖೆಗಳಲ್ಲಿ ರಚಿಸಿದ ಹಣೆಯ ಹಾಗೂ ಕಣ್ಣಿನ ಗೆರೆಗಳು ಈ ಭಾವಚಿತ್ರದಲ್ಲಿ ಕಂಡುಬರುತ್ತಿವೆ.

೨. ವೃದ್ಧ ಸಾಧುವಿನ ಭಾವಚಿತ್ರ

ಈ ಶಿರಭಾವ ಚಿತ್ರವು ಪಾರ್ಶ್ವ ಮುಖದ ಸಾಧುವಿನ ಭಾವಚಿತ್ರವಾಗಿದೆ. ಪೇಪರಿನ ಮೇಲೆ ೭x೯ ಇಂಚು ಅಳತೆಯಲ್ಲಿ ರಚಿಸಲಾಗಿದೆ. ಮುಖ್ಯವಾಗಿ ಈ ಭಾವಚಿತ್ರದಲ್ಲಿ ಕಾಣುವುದು ಸಮಾಂತರವಾದ ರೇಖೆಗಳು. ನಂತರ ಎಳೆ ಎಳೆಯಾಗಿ ಬಿದ್ದಿರುವ ಕೂದಲಿನ ರೇಖೆಗಳಿಂದ ವಿಶೇಷವಾದ ಆಕರ್ಷಣೆಯ ಭಾವನೆಯನ್ನು ಈ ಭಾವಚಿತ್ರ ನೀಡುತ್ತಿದೆ. ಹಣೆ ಮಧ್ಯೆ ಹುಬ್ಬುಗಳನ್ನು ಎತ್ತಿಹಿಡಿದು ದೂರದೃಷ್ಟಿ ಇಟ್ಟ ವೃದ್ಧನ ಕಣ್ಣು ತೇಜೋಮಯ ಮತ್ತು ಗಾಂಭೀರ್ಯವಾದ ನೋಟವನ್ನು ಹೊಂದಿದೆ. ಹಳೆಯ ಮೇಲಿನ ಗಂಟುಗಳನ್ನು ನಾಲ್ಕಾರು ರೇಖೆಗಳಲ್ಲಿ ಚಿತ್ರಿಸಿದ್ದಾರೆ. ಹಣೆ ಮತ್ತು ಕೂದಲಿನ ಜೋಡಣೆ ಸರಳವಾದ ರೇಖೆಗಳಿಂದ ಜೋಡಿಸಲಾಗಿದೆ. ತಲೆಯ ಕೂದಲುಗಳನ್ನು ಆತ ಬಾಚಿಕೊಳ್ಳದಿರುವುದನ್ನು ರೇಖೆಗಳಲ್ಲಿ ನೈಜವಾಗಿ ಚಿತ್ರಿಸಿದ್ದಾರೆ. ಕಿವಿಯೂ ಕೂದಲಿನಲ್ಲಿ ಮುಚ್ಚಿದ್ದರೆ ಸ್ವಲ್ಪಭಾಗ ಕಾಣಲು ಕಪ್ಪುರೇಖೆ ಹಾಕಿದ್ದಾರೆ. ಕಿವಿಯ ಮೇಲಿನ ಭಾಗ ಗಡಸು ಚರ್ಮ ಹೊಂದಿದೆ ಎಂಬುವುದು ಈ ರೇಖೆಗಳಿಂದ ಗುರುತಿಸಬಹುದಾಗಿದೆ.

ಇಳಿ ವಯಸ್ಸಿನ ಮಂಜಾದ ಕಣ್ಣುಗಳು, ಹಣೆಯ ಮೇಲೆ ಜೋತು ಬಿದ್ದಿರುವ ಹುಬ್ಬುಗಳು, ಕಣ್ಣಿನ ಕೆಳಗೆ ಆಯುಷ್ಯ ರೇಖೆಗಳು ಪರಿಣಾಮಕಾರಿಯಾಗಿ ಈ ಚಿತ್ರದಲ್ಲಿ ಮೂಡಿಬಂದಿದೆ. ಕೂದಲಿನಿಂದ ಬಂದ ವಕ್ರವಾದ ದಾಡಿ ಕೊನೆಯವರೆಗೆ ಎಳೆದಿರುವ ವಕ್ರವಾದ ಕೂದಲು ಮೀಸೆಯ, ಆಕಾರ ವಿಶಿಷ್ಟ ಅನುಭವ ನೀಡುತ್ತಿದೆ. ಒಟ್ಟಾರೆ ಲೇಖನಿಕೆ ಮಾಧ್ಯಮದಲ್ಲಿ ರಚಿಸಿದ ಈ ರೇಖಾಚಿತ್ರದಲ್ಲಿ ವೃದ್ಧನ ಭಾವವನ್ನು ಭಾವನಾತ್ಮಕವಾಗಿ ಚಿತ್ರಿಸಲಾಗಿದೆ. ಲಯಬದ್ಧವಾದ ಸರಳ, ವಕ್ರರೇಖೆಗಳನ್ನು ಬಳಸಿಕೊಂಡು ತಲೆಗೂದಲು ಮೀಸೆ ಕೂದಲು, ದಾಡಿ ಕೂದಲುಗಳ ವ್ಯತ್ಯಾಸವನ್ನು ಸ್ಪಷ್ಟವಾಗಿ ಚಿತ್ರಿಸಿ ಪಂಡಿತರು ಈ ರೇಖಾಚಿತ್ರಕ್ಕೆ ಮೆರುಗುನೀಡಿದ್ದಾರೆ.

III. ಸಂಯೋಜನಾ ರೇಖಾಚಿತ್ರ

ಅ. ಚಲನಚಿತ್ರದ ಮತ್ತು ಕ್ಯಾಲಿಂಡರ್

೧. ನೃತ್ಯಗಾರ್ತಿ

ಈ ಭಾವಚಿತ್ರವು ಪೆನ್ಸಿಲ್ ಮಾಧ್ಯಮದಿಂದ ಪೇಪರ್ನ್ ಮೇಲೆ ೮x೧೧ ಇಂಚು ಅಳತೆಯಲ್ಲಿ ರಚಿಸಲಾಗಿದೆ. ೧೯೭೧ರಲ್ಲಿ ಚಿತ್ರಿಸಿದ ನೈಜ ಶೈಲಿಯ ಉಡುಗೆ ತೊಡುಗೆ, ನಾಟ್ಯದ ಭಂಗಿಯಲ್ಲಿ ಮುಡಿಸಿದ ಚಲನೆ, ನೃತ್ಯದಲ್ಲಿ ಲೀನಳಾಗಿರುವ ಭಾವನೆಗಳನ್ನು ಕಲಾತ್ಮಕವಾಗಿ ಪಂಡಿತರು ರೇಖೆ ಮತ್ತು ಛಾಯೆಯ ಮುಖಾಂತರ ಇಲ್ಲಿ ಜೀವ ತುಂಬಿದ್ದಾರೆ.

ತಲೆಯ ಮೇಲಿನ ಜಡೆ, ಜಡೆಗೆ ಸುತ್ತಿರುವ ಬಿಳಿ ಹೂಗಳ ಮಾಲೆ, ತಲೆಯ ಬೈತಲಿನ ಮಧ್ಯ ಕಾಣುವ ಬಿಂದಿ ಆಭರಣ, ಅಲಂಕಾರಕ್ಕಾಗಿ ತಲೆಯಲ್ಲಿ ಮುಡಿದುಕೊಂಡಿರುವ ಎಲೆ, ಹೂಗಳನ್ನು ರೇಖೆಯಲ್ಲಿ ಮೂಡಿಸಿದ್ದಾರೆ. ನೃತ್ಯ ಭಂಗಿಗೆ ತಕ್ಕ ಮುಖದ ಭಾವನೆಗಳು. ಅದರಲ್ಲಿ ಹುಬ್ಬು, ಕಣ್ಣಿನ ವಕ್ರನೋಟ, ನೆರಳು ಬೆಳಕಿನಿಂದ ತ್ರಿಆಯಾಮದಲ್ಲಿ ರಚಿಸಿದ್ದಾರೆ. ಮೈಬಣ್ಣಕ್ಕಿಂತಲೂ ಕಪ್ಪಾಗಿ ಕಾಣುವ ತುಟಿಗಳು, ದುಂಡು ಮುಖಕ್ಕಾಗಿ ಎಳೆದಿರುವ ಪೆನ್ಸಿಲ್ ಛಾಯೆ, ಅತಿ ಕಡಿಮೆ ಛಾಯೆಯಲ್ಲಿಯೇ ರಚಿಸಿದ ಕೆನ್ನೆ ಸುಂದರವಾಗಿ, ನಾಜೂಕಾಗಿ ವಿನ್ಯಾಸಗೊಂಡಿರುವುದನ್ನು ಇಲ್ಲಿ ಕಾಣಬಹುದು. ಕಿವಿಯಲ್ಲಿ ಜುಮಕಾ, ಬೆಂಡೋಲಿ ಆಕರ್ಷಕವಾದ ದೇಹದ ಮೈಕಟ್ಟು, ಕುತ್ತಿಗೆಯಿಂದ ಸೊಂಟದವರೆಗೆ ಎಳೆದಿರುವ ವಕ್ರರೇಖೆಯಲ್ಲಿ ದೇಹದ ರಚನೆ, ಆಕರ್ಷಣೆ ನೀಡುತ್ತಿದೆ. ಕೊರಳಲ್ಲಿನ ಹಾರಗಳಲ್ಲಿನ ಚಲನೆ ತನ್ನದೇ ಆದ ಗುಣಧರ್ಮಗಳನ್ನು ಹೊಂದಿದೆ. ಎಡ ತೋಳಿನಲ್ಲಿ ನೀಡಿದ ಛಾಯೆ ರೇಖೆಯಿಂದ ಕೈ ಮತ್ತು ಎದೆಗೆ ವಿಭಜನೆ ನೀಡುತ್ತಿದೆ. ಅದರ ಕೆಳಗೆ ಕುಪ್ಪಸಕ್ಕೆ ನೀಡಿದ ಕಪ್ಪು ಪನ್ಸಿಲ್ ರೇಖೆ, ಕುಪ್ಪಸದ ಏರಿಳಿತದ ಅನುಭವದ ಚಲನೆ ನೀಡುತ್ತದೆ. ಎದೆ ಕೆಳಭಾಗದಲ್ಲಿನ ಛಾಯೆ ಅವಳ ಸ್ತನದ ದುಂಡಾಕಾರ ಅನುಭವ ನೀಡುತ್ತದೆ.

ಕೈ ಬೆರಳುಗಳ ಚಲನೆ, ಕೈಗೆ ಧರಿಸಿಕೊಂಡಿರುವ ಆಭರಣಗಳು, ಹೊಟ್ಟೆ ಸೊಂಟದ ಕೆಳಗಿನ ಭಾಗಕ್ಕೆ ಧರಿಸಿದ ಬಟ್ಟೆ, ವಿವರವಾದ ಭಾವನೆಯನ್ನು ನಮಗೆ ನೀಡುತ್ತಿವೆ. ಇದೊಂದು ಪಂಡಿತರು ರಚಿಸಿದ ನೃತ್ಯಭಂಗಿಯ ಅಪೂರ್ವ ರೇಖಾವಿನ್ಯಾಸದ ಚಿತ್ರವೆಂದು ಹೇಳಬಹುದು.

೨. ಯಶೋಧಾ ಬಾಲಕೃಷ್ಣ

೧೯೬೯ ರಲ್ಲಿ ಪೆನ್ಸಿಲ್ ನಿಂದ ಪೇಪರ್ನ್ ಮೇಲೆ ೬*೫ ಇಂಚು ಅಳತೆಯಲ್ಲಿ ಚಿತ್ರಸಿದ ರೇಖಾಚಿತ್ರವಿದು. ಇದೊಂದು ಬಾಕೃಷ್ಣನ ಚಿತ್ರವಾಗಿದೆ. ಯಶೋದೆ ಮಾತೆಯ ಕೃಷ್ಣನ ಮೇಲಿರುವ ಪ್ರೀತಿ, ವಾತ್ಸಲ್ಯ, ಮಮತೆಯನ್ನು ತೋರಿಸುತ್ತಿರುವ ರೇಖಾಚಿತ್ರವಿದು. ನೀಳವಾದ ರೇಖೆಯಿಂದ ರಚಿಸಿದ ಅವಳ ಮೂಗು, ಲಾಲಿತ್ಯದಿಂದ ಅರಳಿದ ಅವಳ ಮುಗುಳ್ನಗೆ ಆಕರ್ಷಕವಾಗಿದೆ. ಮಗುವಿಗೆ ಆತ್ಮೀಯವಾಗಿ ತಬ್ಬಿಕೊಂಡಿರುವ ತಾಯಿಯ ಭಾವನೆ, ಆತ್ಮೀಯತೆಯಿಂದ ಅಪ್ಪಿಕೊಂಡಿರುವ ಮಗುವಿನ ಮಖದಲ್ಲಿನ ಭಾವನೆಗಳು, ವಕ್ರವಾದ ರೇಖೆಯಲ್ಲಿ ಚಿತ್ರಿಸಿದ ಬಾಲಕನ ತಲೆಕೂದಲುಗಳನ್ನು, ಸರಳವಾಗಿ ಲಯಬದ್ಧವಾದ ರೇಖೆಗಳಲ್ಲಿ ಚಿತ್ರಿಸಿದ್ದಾರೆ.

ಸಾಂಪ್ರದಾಯಿಕವಾಗಿ ಧರಿಸಿದ ವಸ್ತ್ರಾಭರಣಗಳಲ್ಲಿನ ಮಡಿಕೆಗಳು ಸರಳವಾಗಿ ರೇಖೆಗಳಲ್ಲಿ ಚಿತ್ರಿಸಿದ್ದಾರೆ. ಬಾಲಕನ ತೊಡುಗೆಯು ರೇಖೆಯಲ್ಲಿ ಅಷ್ಟೇ ಲಯಬದ್ಧವಾಗಿ ಮೂಡಿಸಿದ್ದಾರೆ. ಬಾಲಕನ ಅಂಗರಚನೆ ದೇಹ ಚಿಕ್ಕದಾಗಿ ಕಾಣುತ್ತಿದೆ. ರೇಖೆ ಛಾಯೆಯಲ್ಲಿ ಕೊರಳಿನ ಆಕಾರವು ಸ್ಪಷ್ಟವಾಗಿದೆ. ಇಲ್ಲಿ ಚಿತ್ರದ ಅಂಗಾಂಗ ರಚನೆಯಲ್ಲಿ ವ್ಯತ್ಯಾಸವೆನಿಸಿದರೂ, ರೇಖೆಗಳ ಚಲನೆಯಿಂದ ಈ ಕೊರತೆ ತಪ್ಪಾಗಿ ಕಂಡುಬರುವುದಿಲ್ಲ.

ಬ. ಆಧ್ಯಾತ್ಮಿಕ ಪೌರಾಣಿಕ ಮತ್ತು ಧಾರ್ಮಿಕ ಸಂಯೋಜನಾ ರೇಖಾಚಿತ್ರ

೧. ಅಮರಪಾಲಿ

ಈ ರೇಖಾಚಿತ್ರ ಚಾರ್ಕೋಲನಿಮದ ಲೆಟರ್ ಪ್ಯಾಡ್‌ನ ಮೇಲೆ ೮x೧೦ ಇಂಚ್ ಅಳತೆಯಲ್ಲಿ ೧೯೮೨ ರಲ್ಲಿ ರಚಿಸಿದ್ದಾರೆ. ಅಮರಪಾಲಿ ಬುದ್ಧ ಕಲಾಕೃತಿ ತೈಲವರ್ಣದಲ್ಲಿ ರಚಿಸುವುದಕ್ಕಿಂತ ಮುಂಚೆ ರಚಿಸಿದ ಕರಡು ಪ್ರತಿಗಳಲ್ಲಿ ಇದೊಂದಾಗಿದೆ. ಅಮರಪಾಲಿ ರೇಖಾ ಚಿತ್ರಗಳು ವಿವಿಧ ಭಾವ – ಭಂಗಿಯಲ್ಲಿ ಚಿತ್ರಿಸಿ ಕೊನೆಗೆ ಆಯ್ಕೆ ಮಾಡಿಕೊಂಡ ರೇಖಾಚಿತ್ರವಿದು. ಈ ಅಮರಪಾಲಿ ಬುದ್ಧನ ತೈಲವರ್ಣ ಚಿತ್ರವನ್ನು ಈಗಲೂ ಪಂಡಿತರ ಗುಲ್ಬರ್ಗಾ ಗ್ಯಾಲರಿಯಲ್ಲಿ ಕಾಣಬಹುದು.

ಅಮರಪಾಲಿಯು ಮೊಳಕಾಲೂರಿ ಕುಳಿತ್ತಿದ್ದಾಳೆ.ಈ ರೇಖಾಚಿತ್ರದಲ್ಲಿ ಅಮರಪಾಲಿಯ ಭಾವನೆಗಳು, ಅವಳ ವೈಭವ, ಆಕರ್ಷಕವಾದ ದೇಹ, ಉಡುಗೆ – ತೊಡುಗೆ, ಕೈಚಾಚಿ ಬುದ್ಧನಿಗೆ ಬೇಡಿಕೊಳ್ಳುತ್ತಿರುವ ದೃಶ್ಯವಿದು. ಅವಳ ಮುಖದ ಭಾವನೆಗಳು, ಚಾಚಿದ ಕೈಗಳು, ಕುಳಿತ ಭಂಗಿಯು ಬುದ್ಧನಿಗೆ ಸರ್ವಸ್ವವನ್ನೇ ಸಮರ್ಪಣೆ ಮಾಡುವಂತಿದೆ. ಈ ಚಿತ್ರದಲ್ಲಿ ಪಂಡಿತರು ತಮಗೆ ಬೇಕಾದ ಅನುಕೂಲವಾಗುವ ಭಾಗದಲ್ಲಿ ಛಾಯೆ ನೀಡಿದ್ದಾರೆ, ಸೀರೆಯಲ್ಲಿನ ಮಡಿಕೆಗಳು ಲಯಬಬ್ಧವಾಗಿ ರೇಖೆಗಳಲ್ಲಿ ಹರಿದಾಡುತ್ತಿರುವುದು ಕಾಣಬಹುದು. ಅಲ್ಲದೆ ತಲೆಯಿಂದ ಕಾಲಿನವರೆಗೆ ಹರಿದು ಬಂದ ಪಾರದರ್ಶಕವಾದ ಬಟ್ಟೆಯ ನೆರಿಗೆಗಳನ್ನು ಇಲ್ಲಿ ತುಂಬಾ ನೈಜವಾಗಿ ಕಲಾತ್ಮಕವಾಗಿ ಚಿತ್ರಿಸಿದ್ದಾರೆ.

೨. ಬುದ್ಧ

 ಈ ಬುದ್ದನ ರೇಖಾಚಿತ್ರವು ಚಾರ್ಕೋಲನಿಂದ ಪೇಪರ್ ಮೆಲೆ ೮x೧೦ ಇಂಚ್ ಅಳತೆಯಲ್ಲಿ ಚಿತ್ರಿಸಲಾಗಿದೆ. ಬುದ್ಧನ ತೇಜೊಮಯವಾದ ಮುಖದಲ್ಲಿ ಸ್ಥಿರ ಚಿತ್ತವಾದ ಮನಸ್ಸಿನ ಭಾವನೆಗಳು ನಿಂತ ಭಂಗಿ, ಅದರಲ್ಲೂ ನಿರಾಜರಣೆಯ ಭಂಗಿಯನ್ನು ಪಂಡಿತರು ಈ ರೇಖೆಗಳಲ್ಲಿ ತುಂಬ ಗಂಭೀರವಾಗಿ ಚಿತ್ರಿಸಿದ್ದಾರೆ. ಬುದ್ದನು ಧರಿಸಿರುವ ಬಟ್ಟೆ, ಮೃದುವಾದ ಬಟ್ಟೆಯಲ್ಲಿ ಕಾಣುವ ಮಡಿಕೆಗಳು, ರೇಖೆಗಳಲ್ಲಿ ಸರಳವಾದ ಲಯಬದ್ಧತೆ ಇರುವುದನ್ನು ಗುರುತಿಸಬಹುದಾಗಿದೆ. ಇವೆಲ್ಲಾ ರೇಖಾಚಿತ್ರಗಳು ಅವರು ತಮ್ಮ ಕಲಾರಚನೆಯ ಪೂರ್ವಭಾವಿ ಸಿದ್ದತೆಗಾಗಿ ಚಿತ್ರಿಸದ ರೇಖಾಚಿತ್ರಗಳಾಗಿವೆ.

೩. ಗಣೇಶ ತಾರಕಾಸುರ

ಈ ರೇಖಾಚಿತ್ರವು ೧೯೬೯ ರಲ್ಲಿ ಪೆನ್ಸಿಲ್ ಮಾಧ್ಯಮದಲ್ಲಿ ಪೇಪರ್ನ ಮೇಲೆ ೯x೧೧ ಇಂಚ್ ಅಳತೆಯಲ್ಲಿ ಚಿತ್ರಿಸಲಾಗಿದೆ. ಗಣೇಶನು ತಾರಾಕಾಸುರನ ಸಂವಾರ ಮಾಡಲು ಬಂದಿರುವ ಸನ್ನಿವೇಶದ ರೇಖಾಚಿತ್ರವಿದು. ಎಸ್.ಎಮ್. ಪಂಡಿತರು ರಚಿಸಿದ ಈ ಸಂಯೋಜನೆಯಲ್ಲಿ ಸೂರ್ಯಾಸ್ತ ಸಮಯದಲ್ಲಿ ಗಣೇಶನು ಪರ್ವತದ ಮೇಲೆ ಗಂಭೀರವಾಗಿ ನಿಂತಿದ್ದಾನೆ. ಆಕಾಶದಲ್ಲಿ ತಾರಕಾಸುರನೆಂಬ ರಾಕ್ಷಸನು ತನ್ನ ವಿಶಾಲವಾದ ಆಕಾರದಲ್ಲಿ ಅಲೆದಾಡುತ್ತಿದ್ದಾನೆ. ಗಣೇಶನು ರಾಕ್ಷಸನತ್ತ ಗಮನಿಸುತ್ತಾ ಅವನ ಸಂಹಾರ ಮಾಡುವ ಕುರಿತು ಆಲೋಚಿಸುತ್ತಿರುವಂತಿದೆ. ತಾರಕಾಸುರನು ಗಣೇಶನ ಕೊಲ್ಲಲು ಕೈಯಲ್ಲಿ ಖಡ್ಗ ಹಿಡಿದುಕೊಂಡು ವಿಕೃತವಾದ ದೃಷ್ಟಿಯಿಂದ ಗಣೇಶನನ್ನೇ ನೋಡುತ್ತಿದ್ದಾನೆ.

ಚತುರ್ಭುಜಗಳುಳ್ಳ ಗಣೇಶನು ತನ್ನ ನಾಲ್ಕು ಕೈಗಳಲ್ಲಿ ಯುದ್ಧದ ಸಲಕರಣೆಗಳನ್ನು ಹಿಡಿದಿದ್ದಾನೆ. ಏಕಚಿತ್ತದಿಂದ ರಾಕ್ಷಸನನ್ನು ಗಮನಿಸುತ್ತ ತನ್ನ ಸೊಂಡೆಯನ್ನು ಮೇಲೆತ್ತಿದ್ದಾನೆ. ನಿಸರ್ಗದಲ್ಲಿ ಗಾಳಿಯ ಪ್ರವಾಹಕ್ಕೆ ಎದೆಯೊಡ್ಡಿ ಗಣೇಶನು ನಿಂತಿದ್ದಾನೆ. ಗಾಳಿಯಿಂದ ವಸ್ತ್ರವು ಲಯ – ಬದ್ಧವಾಗಿ ಹಾರಾಡುತ್ತಿವೆ. ಅದನ್ನು ಹಗುರವಾದ ಪೆನ್ಸಿಲ್‌ನ ರೇಖೆಗಳಲ್ಲಿ ಚಿತ್ರಿಸಿದ್ದಾರೆ. ತಾರಕಾಸುರನ ವಿಕೃತವಾದ ಮುಖ, ದಪ್ಪವಾದ ಹುಬ್ಬು, ಕ್ರೂರವಾದ ದೃಷ್ಟಿ ದಪ್ಪ ಮೀಸೆ, ಹರಾಡುತ್ತಿರುವ ಕೂದಲುಗಳು, ಬಲಾಡ್ಯವಾದ ಶರೀರ, ಕೈಯಲ್ಲಿ ಖಡ್ಗವನ್ನು ಹಿಡಿದಿಕೊಂಡಿರುವ ಭಂಗಿಯನ್ನು ತುಂಬಾ ನೈಜವಾಗಿ ರಾಕ್ಷಸನ ಆಕರವನ್ನು ಚಿತ್ರಿಸಿದ್ದಾರೆ. ಈ ರೇಖಾಚಿತ್ರವು ಮೈಕಲ್ ಎಂಜಿಲಿಯೋನ ರೇಖಾಚಿತ್ರಗಳನ್ನು ನೆನಪಿಗೆ ತರುತ್ತದೆ.

IV. ನಿಸರ್ಗ ರೇಖಾಚಿತ್ರ

೧. ಕೋಟೆಯ ನಿಸರ್ಗ ಚಿತ್ರ

ಕೋಟೆಯ ದೃಶ್ಯವನ್ನು ಪೇಪರಿನ ಮೇಲೆ ೭x೯ ಇಂಚು ಅಳತೆಯಲ್ಲಿ ಚಿತ್ರಿಸಲಾಗಿದೆ. ಈ ಚಿತ್ರದಲ್ಲಿ ನೆರಳು ಬೆಳಕಿನ ಛಾಯೆ, ದೂರದ ಮತ್ತು ಸಮೀಪದ ವಸ್ತುಗಳಲ್ಲಿನ ವ್ಯತ್ಯಾಸ, ಒಂದು ವಸ್ತುವುನಿಂದ ಮತ್ತೊಂದು ವಸ್ತುವಿಗಿರುವ ವೈವಿಧ್ಯಮಯವಾದ ಮೈವಳಿಕೆಯಲ್ಲಿನ ವ್ಯತ್ಯಾಸವನ್ನು ಈ ಚಿತ್ರದಲ್ಲಿ ಕಾಣುತ್ತೇವೆ. ಈ ರೇಖಾಚಿತ್ರವು ಆ ಸ್ಥಳದಲ್ಲಿಯೇ ಹೋಗಿ ಕುಳಿತು ಚಿತ್ರಿಸಿದ್ದಾರೆನ್ನುವಷ್ಟು ನೈಜವಾಗಿ ಮೂಡಿಬಂದಿದೆ.

ಆಕಾಶದಲ್ಲಿ ಗುಂಪು ಗುಂಪಾಗಿ ನಿಂತಿರುವ ಮೋಡಗಳನ್ನು, ಸರಳ ಹಾಗೂ ವಕ್ರರೇಖೆಗಳಿಂದ ಮೂಡಿಸಿದ್ದಾರೆ. ಈ ನಿಸರ್ಗ ಚಿತ್ರದಲ್ಲಿ ಕೋಟೆಯ ಹಿಂದಿನ ಭಾಗ ದೂರದಲ್ಲಿ ಒಳ ಕಾಣುವ ಕೋಡೆಯು ಒಳಭಾಗಗಳನ್ನು ಲಂಬ ರೇಖೆಯಲ್ಲಿ ಚಿತ್ರಿಸಲಾಗಿದೆ. ಈ ಲಂಬ ರೇಖೆಯಲ್ಲಿ ಕೋಟೆಯ ಗೋಲಾಕಾರದ ಅನುಭವವನ್ನು ನೆರಳು ಬೆಳಕಿನ ಛಾಯೆಯಲ್ಲಿ ತಂದಿದ್ದಾರೆ. ಈ ರೇಖಾಚಿತ್ರದ ಮಧ್ಯದಲ್ಲಿ ಕಾಣುವುದು ಹಾಳಾದ ಕೋಟೆಯ ಮುಖ್ಯದ್ವಾರ. ಈ ಹಾಳಾಗಿರುವ ಮುಖ್ಯದ್ವಾರದ ಪಕ್ಕದಲ್ಲಿ ಕಾಣುವ ಚಿಕ್ಕ ಬಾಗಿಲುಗಳು ಅದರ ಗೋಡೆಗಳಲ್ಲಿಯ ಬಿರುಕುಗಳು ಕೋಟೆಯ ಮುಂದೆ ಪಾಳುಬಿದ್ದ ಸ್ಥಳದಲ್ಲಿ ಕಾಣುತ್ತಿರುವ ಕಲ್ಲು ಮುಳ್ಳು ಹುಲ್ಲುಗಳಿಂದ ಉಬ್ಬು ತಗ್ಗು ಸಮತೋಲನವಾಗಿರದ ನೆಲ ಕಾಣಿಸುತ್ತದೆ. ಮುಂಭಾಗದಲ್ಲಿ ಕಾಣುತ್ತಿರುವ ಹಾಳುಭಾವಿಯು ಎದುರಿಗೆ ಎರಡು ತೆಂಗಿನಮರಗಳನ್ನು ಕಪ್ಪು ಛಾಯೆಯಲ್ಲಿ ಚಿತ್ರಿಸಲಾಗಿದೆ, ತೆಂಗಿನ ಗಿಡಕ್ಕೆ ಕಪ್ಪು ಛಾಯೆ ನೀಡಿರುವುದರಿಂದ ಕೋಟೆ ಮತ್ತಷ್ಟು ಎದ್ದು ಕಾಣುತ್ತದೆ. ವಕ್ರ ರೇಖೆ, ಸರಳ ರೇಖೆಗಳನ್ನು, ಬಳಸಿಕೊಂಡು ರಚಿಸಿದ ಈ ನಿಸರ್ಗ ದೃಶ್ಯವು ಕಲಾತ್ಮಕವಾಗಿ ರಚನೆಗೊಂಡಿದೆ. ಪಂಡಿತರು ರಚಿಸಿದ ಈ ನಿಸರ್ಗ ದೃಶ್ಯವು ಕಲಾತ್ಮಕವಾಗಿ ರಚನೆಗೊಂಡಿದೆ. ಪಂಡಿತರು ರಚಿಸಿದ ಈ ನಿಸರ್ಗಚಿತ್ರವು ಯಾಥಾದರ್ಶನದ ಆಧಾರದ ಮೇಲೆ ಚಿತ್ರಿಸಿರುವುದು ಕಂಡುಬರುತ್ತದೆ.

೨. ಖಾಜಾ ಬಂದೇನವಾಜ್ ದರ್ಗಾ

ಈ ನಿಸರ್ಗ ಚಿತ್ರವು ೧೯೮೬ ರಲ್ಲಿ ೭x೯ ಇಂಚು ಅಳತೆಯಲ್ಲಿ ನೀಲಿಲೇಖನಿಯಿಂದ ಲೆಟರ್ ಪ್ಯಾಡ್ ನ ಮೇಲೆ ಪಂಡಿತರು ಚಿತ್ರಿಸಿದ್ದಾರೆ. ಇದು ಗುಲಬರ್ಗಾದಲ್ಲಿನ ಮುಸ್ಲೀಮ್‌ರ ಧಾರ್ಮಿಕ ಸ್ಥಳವಾದ ಹಜರತ್ ಖಾಜಾ ಬಂದೇನವಾಜ್ ದರ್ಗಾದ್ದಾಗಿದೆ. ದೂರದಿಂದ ಇದನ್ನು ಚಿತ್ರಿಸಿರುವುದರಿಂದ ದರ್ಗಾ ಎದುರಿನ ಗುಡಿಸಲು, ಮನೆ, ರಸ್ತೆ, ಮೇಲೆ ಮತ್ತು ಸುತ್ತ ಮುತ್ತಲಿನ ಕಲ್ಲು, ಮಣ್ಣು ಇತ್ಯಾದಿ ಆಕಾರಗಳನ್ನು ರೇಖೆಗಳಲ್ಲಿ ಚಿತ್ರಿಸಿದ್ದಾರೆ.

ಈ ಚಿತ್ರವು ದರ್ಗಾದ ಸುತ್ತಮುತ್ತಲಿನ ಆ ಪರಿಸರ ಆಗಿನ ಕಾಲದಲ್ಲಿ ಹೇಗಿತ್ತು ಎಂಬುದನ್ನು ತೋರಿಸುತ್ತದೆ. ಇದರಲ್ಲಿ ಮತ್ತೊಂದು ವಿಶೇಷತೆ ಎಂದರೆ, ಇಲ್ಲಿ ಯಾವುದೇ ಹೆಚ್ಚು ಛಾಯೆ ಬಳಸದೆ, ರೇಖೆಗಳಲ್ಲಿಯೇ ವಸ್ತುವಿನ ಸಮೀಪ ದೂರದ ವ್ಯತ್ಯಾಸ, ಕಟ್ಟಡ ವಿನ್ಯಾಸ, ಗುಡಿಸಲುಗಳ ಆಕಾರ, ಸುತ್ತಲಿನ ಪರಿಸರವನ್ನು ತುಂಬಾ ನೈಜವಾಗಿ ರೇಖೇಗಳಲ್ಲಿ ಚಿತ್ರಿಸಿದ್ದಾರೆ.

ಪಂಡಿತರು ರಚಿಸಿದ ಒಟ್ಟಾರೆ ವಿವಿಧ ಮಾಧ್ಯಮದಲ್ಲಿ ವಿಭಿನ್ನವಾದ ತಂತ್ರಶೈಲಿಯಲ್ಲಿ ರೇಖಾಚಿತ್ರಗಳು ಕಾಣುತ್ತೇವೆ. ಶಿರಭಾವ ಚಿತ್ರಗಳು ಪೂರ್ಣ ನೈಜವಾಗಿವೆ. ಕ್ಯಾಲೆಂಡರ್ ಚಿತ್ರಗಳ ಪೆನ್ಸಿಲ್‌ನ ಲಯಬದ್ಧವಾದ ರೇಖೆಗಳು ನೈಜ ಶೈಲಿಯ ಛಾಯೆಯಲ್ಲಿ ಮತ್ತು ಒಟ್ಟಾರೆ ಚಿತ್ರದಲ್ಲಿ ವಿವರವಾಗಿ ಚಿತ್ರಸಿರುವುದು ಕಾಣುತ್ತದೆ. ಆದರೆ ಸಂಯೋಜನೆ, ವಸ್ತುವಿನ್ಯಾಸ, ಸ್ಥಳವಿನ್ಯಾಸಕ್ಕೆ ವಿಶೇಷವಾಗಿದೆ. ಉದಾ. ಬುದ್ಧನ ರೇಖಾಚಿತ್ರ, ವಿಶ್ವಾಮಿತ್ರ ಮೇನಕೆಯರ ರೇಖಾಚಿತ್ರ, ರಾಮ ಲಕ್ಷ್ಮಣರ ರೇಖಾಚಿತ್ರ, ಶಿವ ಪಾರ್ವತಿ ಚಿತ್ರಗಳಲ್ಲಿ ಬಟ್ಟೆಗಲಿಗೆ ಮೂರು ನಾಲ್ಕು ರೇಖೆಗಳನ್ನು ಬಳಸಿಕೊಂಡರೆ, ಅವುಗಳ ಹಿಂದೆ ಬಳಸಿರುವ ಬುದ್ಧನ ಹಿಂದಿನ ಆಲದಮರ, ಬಟ್ಟೆಯೊಳಗಿನ ದೇಹ, ವಿಶ್ವಾಮಿತ್ರ ಮೇನಕೆಯಲ್ಲಿ ಹೊರಮೈ ಹಿಂದಿನ ಆಲದಮರ, ಶಿವ ಪಾರ್ವತಿ ರೇಖಾಚಿತ್ರದ ಹಿಂದಿನ ಪರ್ವತಗಳ ಭಾಗಗಳಲ್ಲಿ ಒಂದೊಂದೇ ರೇಖೆಯಲ್ಲಿ ಚಿತ್ರವನ್ನು ಪೂರ್ಣಗೊಳಿಸಿರುವುದು ಕಾಣಬಹುದು. ಇದು ಪಂಡಿತರ ರೇಖಾ ಚಿತ್ರದ ವಿಭಿನ್ನವಾದ ತಂತ್ರಗಾರಿಕೆ ಎನ್ನಬಹುದು.

ಒಟ್ಟಾರೆ ಪಂಡಿತರ ರೇಖಾಚಿತ್ರಗಳ ಹರವು ವೈವಿಧ್ಯತೆಯಿಂದ ಕೂಡಿದ್ದು ರೇಖೆಗಳನ್ನು ಹದವರಿತು ಬಳಸಿರುವುದು ಮತ್ತು ಅದರ ವಿವಿಧ ಸಾಧ್ಯಸಾಧ್ಯತೆಗಳನ್ನು ಸಂದರ್ಭಕ್ಕೆ ತಕ್ಕ ದುಡಿಸಿಕೊಂಡಿರುವುದು ಒಟ್ಟಾರೆಯಾಗಿ ಕಂಡು ಬರುವ ಅಂಶವಾಗಿದೆ.

೨. ವರ್ಣಚಿತ್ರಗಳು

ಎಸ್. ಎಮ್. ಪಂಡಿತರು ರಚಿಸಿದ ವರ್ಣಚಿತ್ರಗಳನ್ನು ನಾವು ಅಧ್ಯಯನ ರೂಪದಲ್ಲಿ ವಿಂಗಡಿಸಿ ನೋಡಿದಾಗ ಮಾಧ್ಯಮಗಳು ಬೇರೆ ಬೇರೆಯಾಗಿವೆ. ಪೋಸ್ಟರ್ ಜಲವರ್ಣ, ತೈಲವರ್ಣಗಳು ಮುಖ್ಯವಾಗಿ ಕಂಡು ಬಂದರೂ. ಆಕ್ರಾಲಿಕ ಮತ್ತು ಪೋಸ್ಟರ ಮಾದ್ಯಮಗಳಲ್ಲಿ ಒಂದೆರಡು ಚಿತ್ರ ರಚಿಸಿರುವುದು ಕಂಡುಬರುತ್ತದೆ. ಪಂಡಿತರ ವರ್ಣ ಮಿಶ್ರಣವನ್ನು ನಿಖರವಾಗಿ ಹೇಳುವುದು ಅಸಾಧ್ಯ. ಈ ಮುಂದೆ ವಿವರಿಸಿದ ಕಲಾಕೃತಿಗಳಲ್ಲಿನ ವರ್ಣ ಸಂಯೋಜನೆಯನ್ನು ಮೇಲ್ನೋಟಕ್ಕೆ ಮಾತ್ರ ಹೆಸರಿಸಲಾಗಿದೆ. ಅವುಗಳನ್ನು ಅಧ್ಯಯನದ ಅನುಕೂಲತೆಗಾಗಿ ಈ ಕೆಳಗಿನಂತೆ ವರ್ಗೀಕರಿಸಿ ಅಧ್ಯಯನ ಮಾಡಲಾಗಿದೆ.