ಪ್ರಾಚೀನ ಕಾಲದಿಂದಲೂ ಕರ್ನಾಟಕವು ವಿಭಿನ್ನ ಭಾಷೆ, ಸಂಸ್ಕೃತಿ, ಕಲೆಗಳ ತವರೂರಾಗಿ ಬೆಳೆದುಕೊಂಡು ಬಂದಿದೆ. ಮಾನವನ ವಿಕಸನದ ಹಲವು ಮಜಲುಗಳನ್ನು ಕಂಡಿರುವ ಕರ್ನಾಟಕವು ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ, ಧರ್ಮ ಪರಂಪರೆ ಹಾಗೂ ಲಲಿತಕಲೆಗಳ ಜೀವಂತಿಕೆಯಿಂದ ಹಲವಾರು ಕಲಾವಿದರ ಹುಟ್ಟಿಗೆ ಕಾರಣವಾಗಿದೆ. ಈ ಸಾಂಸ್ಕೃತಿಕ ಇತಿಹಾಸದ ವಿವಿಧ ಘಟ್ಟಗಳಲ್ಲಿ ನಾನಾ ಕಾರಣಗಳಿಗಾಗಿ ಹುಟ್ಟಿಕೊಂಡ ಕಲೆಗಳು, ಕರ್ನಾಟಕದ ವೈವಿಧ್ಯಮಯ ಭೌಗೋಳಿಕತೆಯ ಹಿನ್ನೆಲೆಯಲ್ಲಿ ಭಿನ್ನರೂಪಗಳನ್ನು ಪಡೆದಿದ್ದು ಆಯಾ ಪ್ರದೇಶದ ಜನಸಮುದಾಯದ ಆಶೋತ್ತರಗಳನ್ನು ಅವು ಬಿಂಬಿಸುತ್ತಿವೆ. ಕರ್ನಾಟಕದ ಕಲೆಗಳ ಮಟ್ಟಿಗೆ ಮಾತನಾಡುವಾಗ ಅದರ ಒಂದು ಪ್ರಮುಖ ಭಾಗವಾದ ಚಿತ್ರಕಲೆಯನ್ನು ನಿರ್ಲಕ್ಷಿಸುವಂತಿಲ್ಲ.ಈ ಕಲೆಗೆ ಅದರದೇ ಆದ ಶ್ರೀಮಂತಿಕೆ ಇದೆ.

ಕರ್ನಾಟಕದಲ್ಲಿ ಚಿತ್ರಕಲೆ ಸಾವಿರಾರು ವರ್ಷಗಳ ಹಿಂದೆಯೇ ಜನ್ಮ ತಾಳಿದೆ. ಶಿಲಾಯುಗದಿಂದ ಹಿಡಿದು ಇಂದಿನವರೆಗೆ ಆದಿವಾಸಿಗಳು, ಬುಡಕಟ್ಟು ಜನರು, ಈ ಚಿತ್ರಕಲೆಯ ಮೂಲಕ ತಮ್ಮ ಬದುಕನ್ನು ತೆರೆದಿಟ್ಟುಕೊಂಡು ಬಂದಿದ್ದಾರೆ. ಉದಾಹರಣೆಗೆ ಇಂದಿಗೂ ಕರ್ನಾಟಕದ ಅನೇಕ ಪ್ರದೇಶಗಳ ಬುಡಕಟ್ಟು ಮನೆಗಳಲ್ಲಿ, ಗುಹಾಲಯದ ಚಿತ್ರಗಳಲ್ಲಿ ಕಾಣಬಹುದಾಗಿದೆ. ಹೀಗೆ ಜನಪದ ಪರಂಪರೆಯ ಚಿತ್ರಕಲೆಯ ಬೆಳವಣಿಗೆಯಂತೆ ಐತಿಹಾಸಿಕ ಪರಂಪರೆಯ ಚಿತ್ರಕಲೆ ಅಜಂತಾ, ಎಲ್ಲೋರ, ಬಾದಾಮಿ, ಲೇಪಾಕ್ಷಿ ಹಂಪೆ, ಹೀಗೆ ನೂರಾರು ಕಡೆಗೆ ದೇವಾಲಯ, ಮನೆ, ಅರಮನೆ, ಮಠ, ಮಸೀದಿ, ಚರ್ಚ್‌ಗಳಲ್ಲಿ ಇಂದಿಗೂ ಉಳಿದುಕೊಂಡು ಬಂದುದನ್ನು ನೋಡಬಹುದಾಗಿದೆ. ಹಾಗಾಗಿ ಚತ್ರಕಲೆಯ ಮೂಲಕ ಕರ್ನಾಟಕದ ಸಾಂಸ್ಕೃತಿಕ ಲೋಕ ತುಂಬಾ ಶ್ರೀಮಂತವಾಗಿ ಅನಾವರಣಗೊಂಡಿದೆ. ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯ ಇತಿಹಾಸವನ್ನು ಗಮನಿಸಿದಾಗ ನಮ್ಮ ಚಿತ್ರಕಲೆಯ ಇತಿಹಾಸ ನಿಜಕ್ಕೂ ಅನನ್ಯವಾದುದಾಗಿದೆ. ‘ಒಂದು ಚಿತ್ರ ಸಾವಿರ ಪದಗಳಿಗೆ ಸಮಾನ’ ಎನ್ನುವ ಗಾದೆ ಜನಸಾಮಾನ್ಯರಲ್ಲಿ ಇದ್ದರೂ ಇಂತಹ ಚಿತ್ರಕಲೆಯ ನಿರ್ಮಾತೃಗಳು. ಕಲಾಸೃಷ್ಟಿಕಾರರು ಎಲೆಮರೆಯ ಕಾಯಿಯಂತೆ ಮರೆಯಾಗಿಯೇ ಉಳಿದಿದ್ದಾರೆ. ಅಂತವರ ಕುರಿತು ಇಂದು ಅಧ್ಯಯನಗಳು ನಡೆಯಬೇಕಾಗಿವೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ ಚಿತ್ರಕಲಾವಿದ ಡಾ. ಎಸ್.ಎಮ್. ಪಂಡಿತರ ಜೀವನ ಸಾಧನೇಯ ಸ್ಥೂಲ ನೋಟವಿಲ್ಲಿದೆ.

ಗುಲ್ಬರ್ಗಾದ ಸಾಂಸ್ಕೃತಿಕ ಪರಿಸರ.

ಗುಲ್ಬಬರ್ಗಾ ಜಿಲ್ಲೆಯು ಕರ್ನಾಟಕದ ಉಳಿದೆಲ್ಲ ಪ್ರದೇಶಗಳಿಗಿಂತ ಸಾಂಸ್ಕೃತಿಕವಾಗಿ ಸಂಪದ್ಭರಿತವಾಗಿದೆ. ಪ್ರಾಗೈತಿಹಾಸಿಕ ಅವಶೇಷಗಳ ಕುರುಹುಗಳು ಇಲ್ಲಿ ಲಭ್ಯವಾಗಿವೆ. ಕನ್ನಡ ನಾಡಿನಲ್ಲಿ ಅಶೋಕನ ಪೂರ್ವದ ಕಾಲದಲ್ಲಿಯೇ ಬೌದ್ಧಧರ್ಮ ಇತ್ತು ಎಂಬುದಕ್ಕೆ ಸಾಕ್ಷಾದಾರಗಳು ದೊರೆತಿವೆ. ಕನ್ನಡ ನಾಡಿನ ಪ್ರಮುಖ ಅರಸು ಮನೆತನಗಳಾದ ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಕಲಚೂರಿಗಳು, ಆದಿಲ್ ಶಾಹಿ ಮನೆತನದವರು ನೆಲೆಯೂರಿ ಆಳಿದ್ದು ಈ ಜೆಲ್ಲೆಯಲ್ಲಿಯೇ, ಕನ್ನಡದ ಮೊದಲ ಕೃತಿಯಾದ ಕವಿರಾಜ ಮಾರ್ಗ ರಚನೆಗೊಂಡದ್ದು ಗುಲಬರ್ಗಾ ಜಿಲ್ಲೆಯ ಮಳಖೇಡದಲ್ಲಿ. ಬಸವಾದಿ ಪ್ರಥಮರು ಪ್ರಾರಂಭಿಸಿದ ಸಮಾಜಿಕ – ಧಾರ್ಮಿಕ ಆಂದೋಲನ ನಡೆದದ್ದು, ವಚನ ಮತ್ತು ದಾಸ ಸಾಹಿತ್ಯ ಸೃಷ್ಟಿಗೊಂಡಿದ್ದು ಇಲ್ಲಿಯೇ, ಸುಮಾರು ಒಂದು ಸಾವಿರ ವರ್ಷಗಳ ಪೂರ್ವದ ಅತ್ಯಂತ ಮಹತ್ವದ ವ್ಯವಸ್ಥಿತ ಘಟಿಕಾ ಸ್ಥಾನವಿದ್ದುದು ಈ ಭಾಗದಲ್ಲಿಯೇ. ಜೈನರ ಕಾವ್ಯ, ಶರಣರ ವಚನಗಳು, ಹರಿದಾಸರ ಕೀರ್ತನೆಗಳ ಬೀಡಾದ ಈ ಜಿಲ್ಲೆ ಫಲವತ್ತಾದ ಸಾಂಸ್ಕೃತಿಕ ಪರಂಪರೆಯ ಪ್ರತೀಕವೂ ಆಗಿದೆ.

ಗುಲಬರ್ಗಾದಲ್ಲಿ ಶರಣಬಸವೇಶ್ವರ ಮತ್ತು ಹಜರತ್ ಖಾಜಾ ಬಂದೇನವಾಜ್ ಎಂಬ ಇಬ್ಬರು ಶ್ರೇಷ್ಠ ಧಾರ್ಮಿಕ ಸಂತರು ನೆಲೆಸಿದನಾಡು. ಹಿಂದೂ – ಮುಸ್ಲಿಂ ಎಂಬ ಭೇಧ – ಭಾವಗಳಿಲ್ಲದೆ ಇಲ್ಲಾ ಧರ್ಮದ ಜನರೂ ಅವರನ್ನು ಗೌರವದಿಂದ ಪೂಜಿಸುತ್ತಾರೆ. ಇಂತಹ ಒಂದು ಸಾಂಸ್ಕೃತಿಕ, ಧಾರ್ಮಿಕ, ಐತಿಹಾಸಿಕ ಪ್ರದೇಶದಲ್ಲಿ ಎಸ್.ಎಮ್. ಪಂಡಿತರು ಜನಿಸಿದ್ದುದು ಒಂದು ಯೋಗಾಯೋಗಾ.

ಅಂತರಾಷ್ಟ್ರೀಯ ಮಟ್ಟದಲ್ಲಿ ಚಿತ್ರಕಲೆಯ ರಸ – ಋಷಿ, ಕುಂಚಬ್ರಹ್ಮ, ಕಲಾತಪಸ್ವೀ ಎಂಬ ಹಲವಾರು ಹೆಸರುಗಳಿಂದ ಖ್ಯಾತರಾದ ಎಸ್.ಎಮ್. ಪಂಡಿತರ ಪೂರ್ಣ ಹೆಸರು ಸಾಂಬಾನಂದ ಮೊನಪ್ಪ ಪಂಡಿತ್. ಅವರು ೨೫ ಮಾರ್ಚ್ ೧೯೧೬ ರಂದು ಗುಲಬರ್ಗಾದಲ್ಲಿ ಜನಿಸಿದರು. ತಂದೆ ಮೊನಪ್ಪ ತಾಯಿ ಕಾಳಮ್ಮ. ಮನೆತನದ ಮೂಲವೃತ್ತಿ ಕುಂಚಗಾರಿಕೆ. ದೇವರಲ್ಲಿ ಅಪಾರ ನಂಬಿಕೆ, ಭಕ್ತಿಯುಳ್ಳವರಾಗಿದ್ದ ಕುಟುಂಬ. ಪ್ರತಿವರ್ಷಕ್ಕೊಮ್ಮೆ ಕಾಲುನಡುಗೆಯಿಂದ ಗುಲಬುರ್ಗಾದಿಂದ ಸುರಪುರ ಸಮೀಪದಲ್ಲಿ ಕೃಷ್ಣ ನದಿ ದಡದಲ್ಲಿರುವ ತಿಂಥಿಣಿ ಮೌನೇಶ್ವರ ದರ್ಶನಕ್ಕೆ ಹೋಗಿ ಬರುವ ಸಂಪ್ರದಾಯವನ್ನು ಹೊಂದಿದ್ದರು. ಪ್ರತಿವಾರ ಹುಣ್ನಿಮೆ ಅಮವಾಸ್ಯೆಗಳಂದು ಗುಲಬರ್ಗಾದಲ್ಲಿಯ ಕಾಳಿಕಾದೇವಿಯ ದೇವಸ್ಥಾನಕ್ಕೆ ಹೋಗಿ ಪೂಜೆಸಲ್ಲಿಸುವುದು, ಇವೆಲ್ಲ ಇವರು ದೇವರಲ್ಲಿಟ್ಟ ಭಕ್ತಿಯನ್ನು ಎತ್ತಿ ತೋರಿಸುತ್ತದೆ. ಒಮ್ಮೆ ಗುಲಬರ್ಗಾದ ಬೀದಿಯಲ್ಲಿ ಸಂತ ಲಚ್ಚಣ ಸಿದ್ಧಪ್ಪ ಮಹಾರಾಜರ ಮೆರವಣಿಗೆ ಹೊರಟ ಸಂದರ್ಭದಲ್ಲಿ ಇವರ ತಾಯಿ ಕಾಳಮ್ಮನವರು ಕೊಡಹೊತ್ತು ನೀರು ತರುತ್ತಿದ್ದರು. ಆಗ ಎಲ್ಲರಂತೆ ಇವರು ಅಜ್ಜನವರ ದರ್ಶನಕ್ಕೆ ಸಹಜವಾಗಿ ಹೊಗುತ್ತಾರೆ. ಅಜ್ಜನವರು ಕಾಳಮ್ಮನವರನ್ನು ಕರೆಯುತ್ತಾರೆ. ಸ್ವಾಮಿಜಿಯವರ ಪಲ್ಲಕ್ಕಿ ಹತ್ತಿರಕ್ಕೆ ತುಂಬಿದ ಕೊಡದೊಂದಿಗೆ ಇವರು ಆಗಮಿಸುತ್ತಾರೆ. ಅಜ್ಜನವರು ಇವರು ಹೊತ್ತಿಕೊಂಡ ತುಂಬಿದ ಕೊಡದಲ್ಲಿ ಉತ್ತತ್ತಿ ಸುರಿಸುತ್ತ ನಿನಗೊಬ್ಬ ಮಗ ಹುಟ್ಟುತ್ತಾನೆಂದು ಆಶೀರ್ವದಿಸುತ್ತಾರೆ. ಹಲವಾರು ವರ್ಷಗಳಿಂದ ಮಕ್ಕಳಾಗದ ದಂಪತಿಗಳಿಗೆ ಸಹಜವಾಗಿ ಸಂತೋಷವಾಗುತ್ತದೆ. ಕಾಕತಾಳಿಯವೆಂಬತೆ ಮುಂದೆ ಕಾಳಮ್ಮ ಮಗುವೊಂದನ್ನು ಹೆರುತ್ತಾಳೆ. ಒಂಬತ್ತು ತಿಂಗಳಲ್ಲಿ ಜನಿಸಬೇಕಾದ ಮಗು ಹನ್ನೊಂದು ತಿಂಗಳಲ್ಲಿ ಜನನವಾಯಿತಂತೆ. ಅವರೇ ಕಲಾವಿದ ಎಸ್.ಎಮ್. ಪಂಡಿತ್.

ಮನೆಯಲ್ಲಿ ಹಬ್ಬಹರಿದಿನಗಳಂದು ತಂದೆ ಎತ್ತು, ಬಸವ, ದೋಣಿ, ಗಣಪತಿ ವಿಗ್ರಹಗಳನ್ನು ಮಣ್ಣಿನಲ್ಲಿ ರಚಿಸುತ್ತಿದ್ದರು. ಮತ್ತು ಮನೆಯ ಗೋಡೆಯ ಮೇಲೆ ಪೌರಾಣಿಕ ಪ್ರತಿಕೃತಿಗಳನ್ನು ತೂಗಿಹಾಕಿದ್ದರು. ಇಂತಹ ಕಲಾ ಪರಿಸರ ಹೊಂದಿದ್ದ ಮನೆಯಲ್ಲಿ ಜನಿಸಿದ ಪಂಡಿತರಿಗೆ ಬಾಲ್ಯದಲ್ಲಿ ಕಲಾ ಅಭಿರುಚಿ ಸಹಜವಾಗಿಯೇ ಬೆಳೆಯಿತೆನ್ನಬಹುದು. ಈ ಪರಿಸರದಿಂದ ಪ್ರಭಾವಿತರಾದ ಬಾಲಕ ಪಂಡಿತರು ಸಹಜವಾಗಿ ಗೊಡೆಗಳ ಮೇಲೆ ಕರಗದ ಇದ್ದಿಲುಗಳಿಂದ ಚಿತ್ರಿಸುತ್ತಿದ್ದರು. ಮಗ ಓದಿ ವಿದ್ಯಾವಂತನಾಗಲೆಂದು ಮಗನಿಗೆ ಸಾಮಾನ್ಯ ಶಿಕ್ಷಣಕ್ಕಾಗಿ ಪ್ರವೇಶ ದೊರಕಿಸಿದರು. ಆದರೆ ಶಾಲೆಗೆಂದು ಹೋದ ಮಗ ನಿಸರ್ಗ ಸೌಂದರ್ಯ ಆಸ್ವಾದನೆಯಲ್ಲಿ ಗಂಟೆಗಟ್ಟಲೆ ಕಾಲಕಳೆಯುತ್ತಿದ್ದು ಕೆಲವೊಮ್ಮೆ ಮೈಮರೆತು ಮನೆಗೆ ಬರುತ್ತಿರಲಿಲ್ಲ. ಪಾಲಕರು ಹುಡುಕಾಡಿ ಮನೆಗೆ ಕರೆದುಕೊಂಡು ಬರುತ್ತಿದ್ದರಂತೆ, ಹಲವಾರು ಬಾರಿ ಮನೆತನ ವೃತ್ತಿಯಲ್ಲಿ ಮತ್ತು ಮಣ್ಣಿನ ಮೂರ್ತಿಗಳನ್ನು ರಚಿಸುವಾಗ ಬಾಲಕ ಪಂಡಿತರು ತುಂಬ ಆಸಕ್ತಿಯಿಂದ ಭಾಗವಹಿಸಿ ಸಹಕರಿಸುತ್ತಿದ್ದರು. ನೆಲ ಗೋಡೆಗಳ ಮೇಲೆ ಇವರು ಚಿತ್ರಿಸುತ್ತಿರುವುದನ್ನು ಗಮನಿಸಿದ ಪಾಲಕರು ಕಾಗದದ ಮೇಲೆ ಚಿತ್ರಿಸಲು ಪ್ರೋತ್ಸಾಹಿಸುತ್ತಾರೆ. ಚಿತ್ರಕಲೆಯಲ್ಲಿ ಆಸಕ್ತನಾಗಿರುವಷ್ಟು ಓದಿನಲ್ಲಿ ಆಸಕ್ತಿ ಕಂಡುಬರಲಿಲ್ಲ. ಇದನ್ನು ಗಮನಿಸಿದ ಪಾಲಕರು ಪಂಡಿತರ ಆಸಕ್ತಿಯ ಚಿತ್ರಕಲಾ ಶಿಕ್ಷಣ ನೀಡುವುದು ಸೂಕ್ತವೆಂದು ಭಾವಿಸಿದರು. ಆಗ ಅವರ ಗಮನಕ್ಕೆ ಬಂದವರು ಬೀದರನಲ್ಲಿನ ಚಿತ್ರಕಲಾ ಶಿಕ್ಷಕರಾದ ಭಾಸ್ಕರರಾವ್, ಅವರಲ್ಲಿ ಕೆಲವು ಕಾಲ ಚಿತ್ರಕಲಾ ಅಭ್ಯಾಸವನ್ನು ಮಾಡಿಸುತ್ತಾರೆ. ಭಾಸ್ಕರರಾವ್, ಅವರು ನೀನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ದೇಶದ ಹೆಸರಾಂತ ಸರ್. ಜೆ.ಜೆ. ಕಲಾಶಾಲೆ ಮುಂಬೈಯಲ್ಲಿ ವಿದ್ಯಾಭ್ಯಾಸ ಮಾಡಿದರೆ ಒಳ್ಳೆಯದೆಮದು ಸೂಚಿಸಿದರು. ಆಗ ತಾನೆ ಜೆ.ಜೆ. ಕಲಾಶಾಲೆಯಿಂದ ಶಿಕ್ಷಣ ಪಡೆದು ಬಂದಿದ್ದ ಶಂಕರರಾವ್ ಆಳಂದಕರ್ ಅವರು ಗುಲಬರ್ಗಾಕ್ಕೆ ಆಗಮಿಸಿದ್ದರು. ಇವರನ್ನು ಆಳಂದಕರ್ ಅವರಿಗೆ ಪರಿಚಯ ಮಾಡಿಸಲಾಯಿತು, ಆಳಂದಕರ್ ಅವರು ಇವರ ಕೆಲವು ಚಿತ್ರ ಕಲಾಕೃತಿಗಳನ್ನು ಗಮನಿಸಿ ಇವರಿಗೆ ಇರುವ ಕಲಾ ಆಸಕ್ತಿಯನ್ನು ಕಂಡು ಪಂಡಿತರನ್ನು ತಮ್ಮ ಶಿಷ್ಯರನ್ನಾಗಿ ಸ್ವಿಕರಿಸಿದರು.

ಕಲಾ ಶಿಕ್ಷಣ

ಗುಲಬರ್ಗಾದ ಎನ್. ವ್ಹಿ. ಶಿಕ್ಷಣ ಸಂಸ್ಥೆಯಲ್ಲಿ ಚಿತ್ರಕಲಾ ವಿಭಾಗವನ್ನು ಶಂಕರರಾವ್ ಆಳಂದಕರ ಅವರು ಆಗತಾನೆ ಆರಂಭಿಸಿದ್ದರು. ಪಂಡಿತರು ಅಲ್ಲಿ ವಿದ್ಯಾರ್ಥಿಯಾಗಿ ಸೇರುತ್ತಾರೆ ಎನ್.ವ್ಹಿ. ಸಂಸ್ಥೆ ಮೂಲಕ ೧೯೩೧ ರಲ್ಲಿ ‘ಮದ್ರಾಸ್ ಸ್ಕೂಲ್ ಆರ್ಟ್’ನಿಂದ ಡಿಪ್ಲೊಮಾ ಪದವಿಯನ್ನು ಪಂಡಿತರು ಪಡೆದುಕೊಳ್ಳುತ್ತಾರೆ. ಅಲ್ಲಿಯ ಹೆಸರಾಂತ ಕಲಾವಿದರಾದ ಡಿ.ಪಿ. ರಾಯಪ್ರಸಾದ ಚೌದರಿಯವರ ಪರಿಚಯವು ಪಂಡಿತರಿಗೆ ಆಗುತ್ತದೆ. ನಮತರ ಹೆಚ್ಚಿನ ಅಧ್ಯಯನಕ್ಕಾಗಿ ಮುಂಬೈಯಿನ ಸರ್.ಜೆ.ಜೆ. ಕಲಾಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಬೇಕೆಂಬ ಕನಸು ಮದ್ರಾಸನಿಂದ ಹಿಂದುರುಗಿದ ಮೆಲೆ ಮತ್ತಷ್ಟು ಹೆಚ್ಚಾಯಿತು. ಏನಾದರು ಮಾಡಿ ಮುಂಬೈಯಲ್ಲಿ ಚಿತ್ರಕಲಾ ಅಭ್ಯಾಸ ಮಾಡಲೇಬೇಕೆಂಬ ಉದ್ದೇಶದಿಂದ ಮುಂಬೈಯತ್ತ ಪ್ರಯಾಣ ಬೆಳೆಸುತ್ತಾರೆ.

ಆರ್ಥಿಕವಾಗಿ ಹಲವಾರು ತೊಂದರೆಗಳಿದ್ದರೂ ಚಿತ್ರಕಲೆ ಕಲಿಯುವ ಸಂಕಲ್ಪ ದೃಡವಾಗಿತ್ತು, ಮುಂಬೈಯಿಗೆ ಬಂದ ಪಂಡಿತರಿಗೆ ಮೊದಲ ವರ್ಷ ಸರ್. ಜೆ.ಜೆ. ಕಲಾಶಾಲೆಯಲ್ಲಿ ಪ್ರವೇಶ ದೊರೆಯಲಿಲ್ಲ. ಕರ್ನಾಟಕದವರಾದ ಜೆ. ಎಸ್. ದಂಡಾವತಿಮಠ ಮತ್ತು ಡಿ.ಜಿ. ಬಡಿಗೇರ ಅವರು ಸ್ಥಾಪಿಸಿದ ನೂತನ ಕಲಾಶಾಲೆಯಲ್ಲಿ ದಂಡಾವತಿಮಠ ಅವರ ವಿಶೇಷ ಕಾಳಜಿಯಿಂದ ಪಂಡಿತರಿಗೆ ಪ್ರವೇಶ ಸಿಗುತ್ತದೆ. ಅದರೊಂದಿಗೆ ಅರೇಕಾಲಿಕ ನೌಕರರಿಗೂ ಸಹಕಾರ ಮಾಡುತ್ತಾರೆ. ಹಗಲು ಹೊತ್ತು ನೌಕರಿಗೆ ಹೋದರೆ ರಾತ್ರಿ ಚಿತ್ರಕಲಾ ಅಧ್ಯಯನ ಮಾಡಲು ದಂಡಾವತಿಮಠರು ಅನುಕೂಲಮಾಡಿಕೊಡುತ್ತಾರೆ. ಹೀಗೆ ಚಿತ್ರಕಲಾ ಅಧ್ಯಯನ ಮುಂದುವರಿಯುತ್ತದೆ.

ನೂತನ ಕಲಾಶಾಲೆ ಮತ್ತು ಜೆ.ಜೆ.ಕಲಾಶಾಲೆ ಇವು ಆಗ ನಿಕಟವಾದ ಒಳ್ಳೆಯ ಸಂಬಂಧವನ್ನು ಹೊಂದಿದ್ದವು. ಹೀಗಾಗಿ ಜೆ.ಜೆ. ಕಲಾಶಾಲೆಯ ನಿರ್ದೇಶಕರಾದ ಕ್ಯಾಪ್ಟನ್ ಗ್ಲಾಡಸ್ಟನ್ ಸೋಲೆಮನ್ನರು ನೂತನ ಕಲಾಶಾಲೆಗೆ ಆಗಾಗ ಬಂದು ಮಕ್ಕಳ ಕಲಾಕೃತಿಗಳನ್ನು ವೀಕ್ಷಿಸುತ್ತಿದ್ದರು. ಒಮ್ಮೆ ಪಂಡಿತರ ಕಲಾಕೃತಿ ಸೋಲೆಮನ್ನರ ಗಮನಕ್ಕೆ ಬಂದಿತು. ಸೋಲೆಮನ್ನರು ದಂಡಾವತಿಮಠರೊಂದಿಗೆ ಚರ್ಚಿಸಿ ಮರುವರ್ಷ ಪಂಡಿತರಿಗೆ ಜೆ.ಜೆ ಕಲಾಶಾಲೆಯಲ್ಲಿ ಶಿಕ್ಷಣ ಪಡೆದುಕೊಳ್ಳವ ಅವಕಾಶ ಮಾಡಿಕೊಡುತ್ತಾರೆ. ಮುಂದೆ ಪಂಡಿತರು ಕ್ಯಾಪ್ಟನ್ ಗ್ಲಾಡಸ್ಟನ್ ಸೋಲೆಮನ್ನರ ನೆಚ್ಚಿನ ಶಿಷ್ಯರಾದರು. ಅವರಿಂದ ಬಹಮಾನಗಳನ್ನು ಪಡೆದುಕೊಳ್ಳುವುದರೊಂದಿಗೆ ಕಲಾಶಾಲೆಯಿಂದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ನಿಡುವ ಭಿತ್ತಿ ಚಿತ್ರರಚನೆಯ ಶಿಷ್ಯವೇತನವನ್ನು ಪಡೆದುಕೊಂಡರು. ಈ ಹಂತದಲ್ಲಿ ಎ.ಎ.ಭೊಸ್ಲೆ, ಕೆ.ಬಿ.ಚೂಡೆಕರ್, ಎಂ.ವ್ಹಿ. ಧುರಂದರಂತಹ ಪ್ರತಿಭಾನ್ವಿತ ಹೆಸರಾಂತ ಕಲಾ ಉಪನ್ಯಾಸಕರ ಮಾರ್ಗದರ್ಶನವು ಪಂಡಿತರಿಗೆ ದೊರೆಯಿತು. ಜೆ.ಜೆ. ಶಾಲೆಯ ಅಧ್ಯಾಪಕರು ಕ್ಯಾನ್ವಾಸಿನ ಮೇಲೆ ಎಳೆಯುವ ಕುಂಚದ ಏಳೆತಗಳು, ವರ್ಣಸಂಯೋಜನೆ, ರೇಖಾಚಿತ್ರಕಲೆ, ತಂತ್ರಗಾರಿಕೆಗಳು ಭಾವಚಿತ್ರ, ಸಮಯೋಜನಾಚಿತ್ರ, ವಸ್ತುಚಿತ್ರಣ, ನಿಸರ್ಗಚಿತ್ರಣ, ಹೀಗೆ ಮುಂತಾದ ವಿಷಯಗಳ ಕುರಿತು ಹೆಚ್ಚು ಅರಿತುಕೊಳ್ಳುವ ಅವಕಾಶ ಜೆ.ಜೆ. ಕಲಾಶಾಲೆಯ ಪರಿಸರ ಪಂಡಿತರಿಗೆ ನೀಡಿತು. ಅವರೊಬ್ಬ ದೊಡ್ಡ ಕಲಾವಿದರಾಗುವ ಪೂರ್ವಭಾವಿ ಸಿದ್ಧತೆ ಇಲ್ಲಿಯೇ ಆಗುತ್ತದೆ.

ಕೌಟಂಬಿಕ ಜೀವನ

೧೯೩೮ರಲ್ಲಿ ಎಸ್ ಎಮ್ ಪಂಡಿತರು ತಮ್ಮ ೨೨ನೇಯ ವಯಸ್ಸಿನಲ್ಲಿ ಪುಣೆಯ ಬಾಳಶಾಸ್ತ್ರಿ ಕ್ಷೀರಸಾಗರ ಅವರ ಮಗಳಾದ ನಳಿನಿ ಎಂಬವರೊಂದಿಗೆ ಮದುವೆಯಾಗುತ್ತಾರೆ. ಮುಂದೆ ಚಿತ್ರಕಲಾ ಕ್ಷೇತ್ರದಲ್ಲಿ ಹೆಸರು ವಾಸಿಯಾದ ಪಂಡಿತರಲ್ಲಿ ಚಿತ್ರಕಲೆಯ ಶಿಕ್ಷಣ ಪಡೆಯಲು ಬಂದ ಕುಮಾರಿ ರಾಜಲಕ್ಷ್ಮೀಯವರೊಂದಿಗೆ ಪ್ರೇಮಾಂಕುರವಾಗಿ ೧೯೫೧ ರಲ್ಲಿ ಪಂಡಿತರು ಎರಡನೆಯ ಮದುವೆಯಾಗುತ್ತಾರೆ. ರಾಜಲಕ್ಷ್ಮೀ ಭರತನಾಟ್ಯಗಾರ್ತಿಯಾಗಿದ್ದರು. ಇವರಿಗೆ ಮೂರು ಮತ್ತು ನಳಿನಿಯವರಿಗೆ ೧೧ ಮಕ್ಕಳು, ಹೀಗೆ ಪಂಡಿತರಿಗೆ ಗಂಡು ಹೆಣ್ಣು ಸೇರಿ ೧೪ ಜನ ಮಕ್ಕಳು. ಸಂಘಜೀವಿಗಳಾದ ಪಂಡಿತರು ವಾಯುವಿಹಾರಕ್ಕೆ, ನಿಸರ್ಗ ವೀಕ್ಷಣೆಗಾಗಿ ಕುಟುಂಬದವರೆಲ್ಲರನ್ನು ಕರೆದೊಯ್ಯುತ್ತಿದ್ದರಂತೆ ದೊಡ್ಡ ಕುಂಟುಬದ ದೊಡ್ಡ ಜವಾಬ್ದಾರಿಯನ್ನು ಪಂಡಿತರು ನಿಭಾಯಿಸಬೇಕಾದ ಅನಿವಾರ್ಯತೆ ಬರುತ್ತದೆ.

೧೯೯೧ರಲ್ಲಿ ಪಂಡಿತರ ಚಿತ್ರಕಲಾ ಪ್ರದರ್ಶನವು ಪುಣೆಯಲ್ಲಿ ನಡೆದಿತ್ತು. ಅದೇ ಸಂದರ್ಭದಲ್ಲಿ ರಾಜಲಕ್ಷ್ಮೀ ತೀರಿಕೊಳ್ಳುತ್ತಾರೆ. ಮುಂದೆ ಮೊದಲನೆಯ ಪತ್ನಿ ನಳಿನಿಯವರು ೨೦೦೬ರಲ್ಲಿ ತೀರಿಕೊಳ್ಳುತ್ತಾರೆ. ಇಬ್ಬರು ಹೆಂಡಂದಿರು ಇದ್ದರೂ ಇವರದೊಂದು ಅನ್ಯೋನ್ಯವಾದ ದಾಂಪತ್ಯ ಜೀವನವಾಗಿತ್ತೆಂದು ತಿಳಿದುಬರುತ್ತದೆ.

ಕಲಾ ಬದುಕು

ಎಸ್. ಎಮ್. ಪಂಡಿತರು ಸರ್.ಜೆ. ಜೆ. ಸ್ಕೂಲ್ ಆಪ್ ಆರ್ಟ್‌ನಲ್ಲಿ ಕಲಾ ಶಿಕ್ಷಣ ಪಡೆದು ಹಲವಾರು ವಿದ್ಯಾರ್ಥಿಗಳಂತೆ ತಮ್ಮ ತಾಯಿ ನಾಡಿಗೆ ಹಿಂತಿರುಗಲಿಲ್ಲ. ಮುಂಬೈಯಂತಹ ವಿಶಾಲವಾದ ಪಟ್ಟಣದಲ್ಲಿ ತಮ್ಮ ಬದುಕನ್ನು ರೂಪಿಸಿಕೊಳ್ಳಲು ಶ್ರಮಿಸತೊಡಗಿದರು. ಪದವಿ ನಂತರದಲ್ಲಿ ವೃತ್ತಿಯತ್ತ ಗಮನ ಹರಿಸುತ್ತಾರೆ. ಆದರೆ ಪಂಡಿತರ ಸ್ಥಿತಿ ಕಲಾಶಿಕ್ಷಣದೊಂದಿಗೆ ವೃತಿ ಮಾಡುವುದು ಅನಿವಾರ್ಯವಾಯಿತು. ಈ ಹಂತದಲ್ಲಿ ಆನಂದ ಪಾಲ್, ಮುಕ್ತಾಗಿರಿ ಪೆಂಟರ‍್ಸ್, ರತನ್ ಬಾತ್ರಾ ಸ್ಟುಡಿಯೋ ಹೀಗೆ ಬೇರೆ ಬೇರೆ ವಾಣಿಜ್ಯ ಸ್ಟುಡಿಯೋಗಳಲ್ಲಿ ಪಂಡಿತರು ನೌಕರಿ ಮಾಡುತ್ತಾರೆ. ಮುಂದೆ ಇವರೆ ಸ್ವತಂತ್ರವಾಗಿ ಸ್ಟುಡಿಯೋ ಆರಂಭಿಸುತ್ತಾರೆ. ಪರಿಶ್ರಮಕ್ಕೆ ತಕ್ಕ ಅನೇಕ ಅವಕಾಶಗಳು ಪಂಡಿತರಿಗೆ ದೊರೆತವು ಸರ್. ಜೆ. ಜೆ. ಕಲಾಶಾಲೆಯ ನಿರ್ದೇಶಕರಾದ ಕ್ಯಾಪ್ಟನ್ ಗ್ಲಾಡಸ್ಟನ್ ಸೋಲೆಮನ್ನರ ಸ್ಥಳದಲ್ಲಿ ಜೆರಾರ್ಡ ಎನ್ನುವವರು ನಿರ್ದೇಶಕರಾಗಿ ಬರುತ್ತಾರೆ. ಜೆರಾರ್ಡಅವರಿಗೆ ಮುಂಬೈನ ಹೆಸರಾಂತ ಮೆಟ್ರೋ ಚಲನಚಿತ್ರ ಮಂದಿರದ ಭಿತ್ತಿಚಿತ್ರಗಳನ್ನು ರಚಿಸಲು ಅವಕಾಶ ದೊರೆತಿತ್ತು. ಅದಕ್ಕಾಗಿ ಅವರು ನಾಲ್ಕು ಜನ ಯುವ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲಿ ಎಸ್.ಎಮ್. ಪಂಡಿತರು ಒಬ್ಬರು. ಪಂಡಿತರಿಗೆ ಇದೊಂದು ಅದೃಷ್ಟದ ಅವಕಾಶವಾಗುತ್ತದೆ. ಇಲ್ಲಿಂದ ಹೊರಪ್ರಪಂಚಕ್ಕೆ ಪಂಡಿತರು ಗುರುತಿಸಲ್ಪಡುತ್ತಾರೆ.

ಮೆಟ್ರೋ ಚಲನಚಿತ್ರ ಭಿತ್ತಿಚಿತ್ರ ರಚನೆಯಲ್ಲಿ ತಮ್ಮ ಸೃಜನಾತ್ಮಕ ಕಲಾಕೌಶಲ್ಯವನ್ನು ಅತ್ಯಂತ ಜವಾಬ್ದಾರಿಯಿಂದ ಪಂಡಿತರು ಅಭಿವ್ಯಕ್ತಪಡಿಸುತ್ತಾರೆ. ಇಲ್ಲಿ ರಚಿಸಿದ ಭಿತ್ತಿಚಿತ್ರಗಳು ಮುಂಬೈಯಲ್ಲಿ ತುಂಬಾ ಹೆಸರುವಾಸಿಯಾದವು. ಭಿತ್ತಿಚಿತ್ರಗಳನ್ನು ವೀಕ್ಷಣೆಗೋಸ್ಕರ ಜನಸಾಮಾನ್ಯರು, ಕಲಾ ಆಸಕ್ತರು, ಕಲಾ ಶಾಲೆಯ ವಿದ್ಯಾರ್ಥಿಗಳು ಮತ್ತು ಕಲಾವಿದರು ಸಾಲು ಸಾಲಾಗಿ ಬಂದು ಗಂಟೆಗಟ್ಟಲೆ ನಿಂತು ವೀಕ್ಷಿಸುತ್ತಿದ್ದರು. ಇದರಿಂದ ಪಂಡಿತರ ಹೆಸರು ಇಡೀ ಮುಂಬೈ ಸುತ್ತಮುತ್ತ ಹರಡಲು ಹೆಚ್ಚು ಕಾಲಾವಕಾಶ ಬೇಕಾಗಲಿಲ್ಲ.

ವಿವಿಧ ವಾಣಿಜ್ಯ ಸ್ಟುಡಿಯೋಗಳಲ್ಲಿ ಚಲನಚಿತ್ರದ ಭಿತ್ತಿಚಿತ್ರಗಳನ್ನು ರಚಿಸಿದ ಅನುಭವ ಹೊಂದಿದ್ದ ಪಂಡಿತರು, ತಾವೇ ಮೂರು ಜನ ಗೆಳೆಯರು ಸೇರಿ ೧೯೩೯ ರಲ್ಲಿ ‘ಯಂಗ್ ಕಮರ್ಷಿಯಲ್ ಆರ್ಟಿಸ್ಟ್ ಸ್ಟುಡಿಯೋ’ವನ್ನು ಮುಂಬೈಯಲ್ಲಿ ನೂತನವಾಗಿ ಪ್ರಾರಂಭಿಸುತ್ತಾರೆ. ಇದಾದ ಮೇಲೆ ಸಹಪಾಠಿ ವಿದ್ಯಾರ್ಥಿಯೊಂದಿಗೆ ಮತ್ತೆ ‘ಪಠಾರೆ ಆಯಂಡ್ ಪಂಡಿತ್ ಸ್ಟುಡಿಯೋ’ ಆರಂಭಿಸಿದರು. ಇದು ಕೂಡ ಕೆಲವು ವರ್ಷಗಳ ನಂತರ ಮುಚ್ಚಲಾಯಿತು. ಬೇಸತ್ತ ಪಂಡಿತರು ಕೊನೆಗೆ ೧೯೪೪ ರಲ್ಲಿ ಮುಂಬೈನ ತಮ್ಮ ಮನೆಯಲ್ಲಿ ‘ಸ್ಟುಡಿಯೋ ಡಸ್. ಎಮ್. ಪಂಡಿತ್’ ಎಂದು ಆರಂಭಿಸುತ್ತಾರೆ. ಇದನ್ನು ಖ್ಯಾತ ಚಲನಚಿತ್ರ ನಾಯಕ, ನಿರ್ಮಾಪಕ, ನಿರ್ದೇಶಕರಾದ ವ್ಹಿ. ಶಾಂತಾರಾಮ ಉದ್ಘಾಟಿಸಿ ಶುಭವನ್ನು ಹಾರೈಸುತ್ತಾರೆ. ಇಲ್ಲಿಂದ ಹಲವಾರು ಚಲನಚಿತ್ರಗಳ ಸಂಯೋಜನಾ ಚಿತ್ರಗಳು, ಭಾವಚಿತ್ರಗಳನ್ನು ವೈವಿಧ್ಯಮಯವಾಗಿ ಸುಮಾರು ದಶಕಗಳ ಕಾಲ ಪಂಡಿತರು ಇಲ್ಲಿಯೇ ಗಟ್ಟಿಯಾಗಿ ನಿಂತು ಕಲಾಕೃತಿ ರಚಿಸುತ್ತರೆ. ಈ ಹಂತದಲ್ಲೆ ಪಂಡಿತರು ಪೋಸ್ಟರ್ ಜಲವರ್ಣದಲ್ಲಿ ಸಂಯೋಜನ ಚಿತ್ರ ರಚಿಸುವುದನ್ನು ಪ್ರಪ್ರಥಮವಾಗಿ ಕಂಡುಹಿಡಿದರು. ಪೋಸ್ಟರ್ ಜಲವರ್ಣವನ್ನು ವೈವಿಧ್ಯಮಯವಾಗಿ ಅನೆಕ ತಂತ್ರ – ಶೈಲಿಗಳಲ್ಲಿ ಬಳಸಬಹುದೆಂದು ಕಲಾವಿದರಿಗೆ ತೋರಿಸಿಕೊಟ್ಟರು. ಇದಕ್ಕಿಂತಲೂ ಪೂರ್ವದಲ್ಲಿ ಪೋಸ್ಟರ್ ಜಲವರ್ಣಗಳು ವಾಣಿಜ್ಯ ಕಲಾವಿದರು ಕೇವಲ ಅಕ್ಷರ ಲೇಖನಕ್ಕೆ ಮಾತ್ರ ಬಳಸುತ್ತಿದ್ದರು. ಎಸ್. ಎಮ್. ಪಂಡಿತರಿಂದ ಒಂದು ಹೊಸ ಕಲಾಪರಂಪರೆ ಹುಟ್ಟಿಕೊಳ್ಳುತ್ತದೆ. ಈ ಕೀರ್ತಿ ಪಂಡಿತರಿಗೆ ಸೇರಬೇಕು.

ರಾಜಕಪೂರ್, ವ್ಹಿ. ಶಾಂತಾರಾಮರಂತಹ ಖ್ಯಾತ ನಿರ್ದೇಶಕ ನಿರ್ಮಾಪಕರು ಸುಶೀಲಾರಾಣಿ ಪಟೇಲ, ಶೀತಾಬಾಲಿ, ಜೈಶ್ರೀ ಸುರೈಯಾ, ಸಂಧ್ಯಾ, ಜೈರಾಜು, ಮಹಿಪಾಲರಂತಹ ಚಲನಚಿತ್ರ ನಾಯಕ, ನಾಯಕಿಯರು ಪಂಡಿತರು ಸ್ಟುಡಿಯೋದೊಂದಿಗೆ ನಿಕಟವಾದ ಸಂಪರ್ಕ ಹೊಂದಿದ್ದರು. ನಟ ನಟಿಯರು ಭಾವಚಿತ್ರಗಳನ್ನು ವಾಸ್ತವ ಸೌಂದರ್ಯಕ್ಕಿಂತ ಸುಂದರವಾಗಿ ಪಂಡಿತರ ಕಲಾಕೌಶಲ್ಯದಿಂದ ಅಭಿವ್ಯಕ್ತಪಡಿಸುತ್ತದ್ದರು. ಹೀಗಾಗಿ ಯಾವ ಭಾವಚಿತ್ರವನ್ನು ಚಲನಚಿತ್ರದ ವಿನ್ಯಾಸದಲ್ಲಿ ಬಳಸಿದ್ದಾರೆ ಹಾಗೂ ಎಷ್ಟು ಸುಂದರವಾಗಿ ಚಿತ್ರಿಸಿದ್ದರೆಂದು ನೋಡಲು ಉತ್ಸಕರಾಗಿ ನಾಯಕ – ನಾಯಕಿಯರು. ಪಂಡಿತರು ಹಗಲು – ರಾತ್ರಿ ಕಲಾಕೃತಿಗಳನ್ನು ರಚಿಸುತ್ತಿದ್ದರು ಪಂಡಿತರು ನೀಡಿದ ದಿನಾಂಕದವರೆಗೆ ಕಾದು ತಮ್ಮ ಚಿತ್ರಗಳನ್ನು ತೆಗೆದುಕೊಂಡು ಹೋಗುವ ಅನಿವಾರ್ಯ ಸಂದರ್ಭವಿತ್ತು. ಕೆಲವೊಮ್ಮೆ ಕೃತಿರಚನೆ ಮುಗಿಯದಿದ್ದುದ್ದಕ್ಕೆ ಚಲನಚಿತ್ರದ ಬಿಡುಗಡೆ ಸಮಾರಂಭದ ದಿನಾಂಕವನ್ನು ಮುಂದುಸಿದ ಉದಾಹರಣೆಗಳು ಸಾಕಷ್ಟಿವೆ.

ಫಿಲ್ಮ್ ಇಂಡಿಯಾ ಮಾಸ ಪತ್ರಿಕೆಗೆ ಚಲನಚಿತ್ರದ ಬಿಡುಗಡೆಗೆ ಮುನ್ನ ವರ್ಣರಂಜಿತವಾದ ಜಾಹೀರಾತನ್ನು ನೀಡುತ್ತಿದ್ದರು. ಈ ಜಾಹೀರಾತು ಕಡ್ಡಾವಾಗಿ ಎಸ್. ಎಮ್. ಪಂಡಿತರಿಂದಲೆ ರಚಿಸಿಕೊಂಡು ಬರಬೇಕೆಂದು ಸಂಪಾದಕರಾದ ಬಾಬುರಾವ್ ಪಟೇಲರು ಜಾಹಿರಾತುದಾರರಿಗೆ ತಿಳಿಸುತ್ತಿದ್ದರಂತೆ ಆಗಿನ ಸಂದರ್ಭದಲ್ಲಿ ಪಂಡಿತರಿಂದ ಚಲನಚಿತ್ರದ ನಟ ನಟಿಯರು ಸಂಯೋಜನಾ ಚಿತ್ರಗಳನ್ನು ರಚಿಸಿಕೊಳ್ಳುವುದು ಪ್ರತಿಷ್ಠೆಯ ಸಂಗತಿಯಾಗುವಷ್ಟು ಪಂಡಿತರು ಪ್ರಸಿದ್ಧಿಯಾಗಿದ್ದರು.

ಚಲನಚಿತ್ರ ಕ್ಷೇತ್ರ ಎಲ್ಲರ ನೆಚ್ಚಿನ ಕ್ಷೇತ್ರವಾಗಿದ್ದು ಮತ್ತು ಬೇಗನೆ ಪ್ರಚಾರಗೊಳಿಸುವ ಮಾಧ್ಯಮವಾಗಿದ್ದರಿಂದ ಪಂಡಿತರ ಹೆಸರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹರಡಿತು. ೧೯೪೬ರಲ್ಲಿ ಡೊರೆಂಟೊದಲ್ಲಿ ಅಂತರಾಷ್ಟ್ರೀಯ ಚಿತ್ರಕಲಾ ಪ್ರದರ್ಶನದಲ್ಲಿ ಪಂಡಿತರು ರಚಿಸಿದ ಫಿಲ್ಮ್ ಇಂಡಿಯಾ ಪತ್ರಕೆಯ ಮುಖಪುಟ ವಿನ್ಯಸದ ಸಂಯೋಜನೆಗೆ ದ್ವೀತಿಯ ಪ್ರಶಸ್ತಿ ದೊರೆಯಿತು.

ಚಲನಚಿತ್ರ ಕ್ಷೇತ್ರದ ನಂತರ ಪಂಡಿತರು ರಚಿಸಲಾದ ಕಲಾಕೃತಿಗಳನ್ನು ಹೆಚ್ಚಾಗಿ ಕ್ಯಾಲೆಂಡರ್ ಮುದ್ರಣಕ್ಕಾಗಿ ಬಳಸಿರುವಂತೆ ಕಂಡುಬರುತ್ತದೆ. ರಾಮಾಯಣ, ಮಹಾಭಾರತ.ವಿಷ್ಣುಧರ್ಮೊತ್ತರ ಪುರಾಣದ ಮತ್ತು ರೂಪದರ್ಶಿಗಳ ಭಾವಚಿತ್ರಗಳ ವಸ್ತುವಿಷಯಗಳಿಂದಾಯ್ದ ಕಲಾಕೃತಿಗಳನ್ನು ಪಂಡಿತರು ರಚಿಸಿದ್ದಾರೆ. ಇವುಗಳನ್ನು ಕಂಪನಿಯವರು ಜಾಹಿರಾತಿಗಾಗಿ ಕ್ಯಾಲಂಡರಿನ ವಿನ್ಯಾಸಕ್ಕಾಗಿ ಬಳಸುತ್ತಿದ್ದರು. ಕಂಪನಿಯವರು ಜಾಹಿರಾತುಗಳನ್ನು ಜನಸಂದಣಿ ಇರುವ ಸ್ಥಳಗಳಲ್ಲಿ ತೂಗುಹಾಕುತ್ತಿದ್ದರು. ಇವು ಈ ಭಿತ್ತಿಚಿತ್ರ ಚಿತ್ರವೋ ಅಥವಾ ಛಾಯಾಚಿತ್ರವೋ ಎಂದು ಜನರಿಗೆ ಕಂಡುಹಿಡಿಯಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟು ನೈಜವಾಗಿ ಮುದ್ರಿತ ಪ್ರತಿಯಂತೆ ಪಂಡಿತರು ರಚಿಸುತ್ತಿದ್ದರು.ಜನರು ಪೋಷ್ಟರಿನ ಮುಂದೆ ನಿಂತು ನೋಡಿ ಆನಂದ ಪಡುತ್ತಿದ್ದರು. ಜನರ ಮನಸ್ಸನ್ನು ಆಕರ್ಷಿಸುವ ಶಕ್ತಿ ಪಂಡಿತರ ಕಲಾಕೃತಿಗಳಲ್ಲಿತ್ತು. ಹೀಗಾಗಿ ಮುಂಬೈನ ಕಲಾ ರಸಿಕರು ಈ ಕಲಾವಿದ ಸಾಮಾನ್ಯ ಮಾನವನಲ್ಲ ಇವನೊಬ್ಬ ‘ಗಾಡ್ ಗಿಪ್ಟಟೆಡ್’ ಕಲಾವಿದನೆಂದು ಕರೆಯುತ್ತಿದ್ದರು.

ಪಾರ್ಲೆ-ಜಿ ಕಂಪನಿಯವರು ತಮ್ಮ ಬಿಸ್ಕಿಟ್ ಪ್ರಚಾರ ಮಾಡಲು ಕ್ಯಾಲೆಂಡರ್ ಮಾಧ್ಯಮವನ್ನು ಆಯ್ಕೆ ಮಾಡಿಕೊಂಡಿದ್ದರು. ಅದಕ್ಕೆ ಪಂಡಿತರು ರಚಿಸಿದ ರಾಮ, ಸೀತೆಯ ಸಂಯೋಜನ ಕೃತಿಯನ್ನು ಕ್ಯಾಲೆಂಡರನಲ್ಲಿ ಮುದ್ರಿಸುತ್ತಾರೆ. ಈ ಸಂಯೋಜನೆಯಲ್ಲಿ ನದಿಯ ದಡದಲ್ಲಿ ಮರದ ಕೆಳಗೆ ರಾಮ, ಸೀತೆ ಕುಳಿತ್ತಿದ್ದಾರೆ, ಸೀತೆಯು ಕೈಮಾಡಿ ರಾಮನಿಗೆ ನಿಸರ್ಗ ಸೌಂದರ್ಯದ ರಮಣೀಯತೆ ತೋರಿಸುವಂತಿದೆ. ಈ ಸುಂದರವಾದ ಕ್ಯಾಲೆಂಡರಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತದೆ. ಕಂಪನಿಯವರು ಮುದ್ರಿಸಿದ ಸಂಯೋಜನೆಯ ಎಲ್ಲಾ ಪ್ರತಿಕೃತಿಗಳನ್ನು ಖಾಲಿಯಾದರೂ ಬೇಡಿಕೆ ಮಾತ್ರ ನಿಲ್ಲಲಿಲ್ಲ. ಜನರಿಗೆ ಎಲ್ಲೂ ಕ್ಯಾಲೆಂಡರ್ ದೊರೆಯದಿದ್ದಕ್ಕೆ ನೇರ ಕಂಪನಿಯವರಿಗೆ ಪತ್ರಗಳನ್ನು ಬರೆಯಲಾರಂಭಿಸಿದರು. ಕೊನೆಗೆ ಕಂಪನಿಯವರು ಬೇಸತ್ತು ಹೋದರು. ಕ್ಯಾಲೆಂಡರ‍್ಗೆ ಕಲಾಭಿಮಾನಿಗಳು ದುಬಾರಿ ಹಣ ನೀಡಿ ಖರೀದಿಸುತ್ತಿದ್ದರು. ಜನರು ಕ್ಯಾಲೆಂಡರ್ ಲಭ್ಯವಾಗದಿದ್ದಕ್ಕೆ ಸಣ್ಣಪುಟ್ಟ ಕಲಾವಿದರಿಂದ ಅದನ್ನು ರಚಿಸಿಕೊಳ್ಳುತ್ತಿದ್ದರು. ಇದೇ ಸಂದರ್ಭದಲ್ಲಿ ಕ್ಯಾಲೆಂಡರ್ ಮಾಧ್ಯಮ ಹೆಚ್ಚು ಬೆಳವಣಿಗೆಗೆ ಬಂದಿತೆಂದು ಹೇಳಬಹುದು.ಪ್ರತಿಯೊಂದು ಕಂಪನಿಯವರು ಕ್ಯಾಲೆಂಡರಿನ ಮೂಲಕ ಜಾಹಿರಾತು ನೀಡಲು ಆರಂಭಿಸಿದರು. ಪಂಡಿತರ ಕೃತಿಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಎಲ್ಲರೂ ಪಂಡಿತರಿಂದ ಕಲಾಕೃತಿಗಳನ್ನು ರಚಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅನೇಕ ಸಣ್ಣ – ಪುಟ್ಟ ಕಲಾವಿದರಿಂದ ಕಲಾಕೃತಿಗಳನ್ನು ಕಂಪನಿಯವರು ರಚಿಸಿಕೊಳ್ಳಲಾರಂಭಿಸಿದರು.ಬೇಡಿಕೆ ಹೆಚ್ಚಾದಂತೆಲ್ಲ ಮುಂಬೈ, ಶಿವಕಾಶಿ, ನಾಗಪೂರ, ಮುಂತಾದ ಸ್ಥಳಗಳಲ್ಲಿ ಮುದ್ರಣಾಲಯಗಳು ಹೆಚ್ಚಾಗ ಹತ್ತಿದವು. ನಾಗಪುರದ ಮುದ್ರಣಾಲಯದ ಬಾಬುರಾವ ಧನವಟ್ಟೆ ಎಂಬವವರು ಪಂಡಿತರ ಪ್ರತಿಯೊಂದು ಕಲಾಕೃತಿಗಳನ್ನು ಮುದ್ರಿಸಲು ಮುಂದಾದರು. ಹಲವು ವರ್ಷಗಳ ಕಾಲ ಅವರಿಬ್ಬರ ಆತ್ಮೀಯ ಸಂಬಂಧ ಮುಂದುವರಿದುಕೊಂಡು ಬಂದಿತು. ಮುಂದೆ ಪಂಡಿತರು ರಚಿಸಿದ ಪ್ರತಿಯೊಂದು ಕೃತಿಯನ್ನು ಪ್ರಕಟಿಸಲು ಅನೇಕ ಜನ ಮುಂದೆ ಬರುತ್ತಾರೆ. ಏಕೆಂದರೆ ಪಂಡಿತರ ಕಲಾಕೃತಿ ಜನರಲ್ಲಿ ಅಂತಹ ಮೋಡಿಯನ್ನು ಮಾಡುತ್ತದೆ. ಇವರ ಕೈಚಳಕದ ಮೇಲೆ ಅಷ್ಟರಮಟ್ಟಿಗೆ ವಿಶ್ವಾಸ ಜನರಲ್ಲಿ ಬರುತ್ತದೆ. ಭಾರತದ ಹಲವಾರು ಪ್ರದೇಶಗಳಲ್ಲಿ ಮುದ್ರಣಾಲಯಗಳೂ ಹೆಚ್ಚಾದಂತೆಲ್ಲಾ ಈ ಕಲಾವಿದರ ಬೇಡಿಕೆಯೂ ಹೆಚ್ಚಾಗಲಾರಂಭಿಸಿತು. ಪಂಡಿತರಿಗೆ ಆಗ ಸ್ಟಾರ್ ನ ಮೌಲ್ಯ ಪ್ರಾಪ್ತವಾಯಿತು.

ಈ ಹಂತದಲ್ಲಿ ದೃಶ್ಯಕಲಾ ಕ್ಷೇತ್ರದಲ್ಲಾದ ಮತ್ತೊಂದು ವಿಶೇಷವಾದ ಬದಲಾವಣೆ ಎಂದರೆ ಜನರು ಕಲಾವಿದರಿಗೆ ಮುಂಗಡ ಹಣ ನೀಡಿ ಕಲಾಕೃತಿಗಳನ್ನು ರಚಿಸಿಕೊಳ್ಳಲಾರಂಭಿಸಿದರು. ಇದಕ್ಕಿಂತಲೂ ಮೊದಲು ಕಲಾವಿದರಿಗೆ ಕೃತಿರಚನೆಗೆ ಮುಂಗಡ ಹಣ ನೀಡುತ್ತಿರಲಿಲ್ಲ. ಕೃತಿರಚನೆಯ ನಂತರ ಏನನ್ನಾದರು ಲೋಪದೋಷಗಳನ್ನು ಹೇಳಿ ಅಲ್ಪ ಸ್ವಲ್ಪ ಹಣ ನೀಡಿ ಕೃತಿ ತೆಗೆದುಕೊಂಡು ಹೋಗುತ್ತಿದ್ದರು. ಇಂತಹ ಒಂದು ಪ್ರಮುಖ ಬದಲಾವಣೆ ಪಂಡಿತರಿಂದ ಪ್ರಾರಂಭವಾಯಿತು ಈಗಲೂ ಅನೇಕ ಕಲಾವಿದರು ಸ್ಮರಿಸಿಕೊಳ್ಳುತ್ತಾರೆ.

ಎಸ್. ಎಂ. ಪಂಡಿತರು ಯಾವುದೇ ಒಂದು ಶೈಲಿಗೆ, ಸಿಮೀತವಾಗಿ ಕಲಾಕೃತಿ ರಚಿಸಿದೆ. ಅನೇಕ ಶೈಲಿಗಳಲ್ಲಿ ಕಲಾಕೃತಿಗಳನ್ನು ರಚಿಸಿ ಹೊಸ – ಹೊಸ ತಂತ್ರಗಳನ್ನು ಶೋಧಿಸುತ್ತಿದ್ದರು. ಚಲನಚಿತ್ರ, ಕ್ಯಾಲೆಂಡರ್ ಮಾಧ್ಯಮದ ಚಿತ್ರಗಳ ನಂತರ ನಮಗೆ ಕಂಡುಬರುವುದು ವೈವಿದ್ಯಮಯವಾದ ಭಾವಚಿತ್ರಗಳ ರಚನೆ. ಅವರು ರಚಿಸಿದ ಭಾವಚಿತ್ರಗಳು ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿವೆ. ವಿದೇಶಿಯರ ಪ್ರಶಂಸೆಗೆ ಪಾತ್ರವಾಗಿವೆ. ಉದಾಹರಣೆ ೧೯೭೮ ರಲ್ಲಿ ರಚಿಸಿದ ಸ್ವಾಮಿ ವಿವೇಕಾನಂದರ ಭಾವಚಿತ್ರವನ್ನು ಹೆಸರಿಸಬಹುದಾಗಿದೆ. ಈ ಭಾವಚಿತ್ರವನ್ನು ಆಧಾರವಾಗಿಟ್ಟುಕೊಂಡು ತೈಲವರ್ಣ ಮಾಧ್ಯಮದ ಕಮಚಿನ ಮೂರ್ತಿ ರಚಿಸಲಾಗಿದೆ. ಈ ಮೂರ್ತಿಶಿಲ್ಪ ರಚನೆಗೆ ಮಾರ್ಗದರ್ಶಕರಾಗಿ ಪಂಡಿತರು ಕಾರ್ಯನಿರ್ವಹಿಸಿದ್ದಾರೆ. ಇಂದು ಕನ್ಯಾಕುಮಾರಿಯಲ್ಲಿ ನಾವು ನೋಡುವ ಸ್ವಾಮಿವಿವೇಕಾನಂದರ ಕಂಚಿನ ಮೂರ್ತಿ ಶಿಲ್ಪವು ಎಸ್. ಎಂ. ಪಂಡಿತರ ಮಾರ್ಗದರ್ಶನದಲ್ಲಿ ಶಿಲ್ಪಕಲಾವಿದ ಸೋನಾವಾಡೆಕರ ಅವರು ರಚಿಸಿದ್ದಾರೆ.

ಮಹಾತ್ಮ ಗಾಂಧೀಜಿ ಮತ್ತು ಅವರ ಸಹಪಾಠಿಗಳನ್ನು ಪೂಣೆಯ ಅಗಾಖಾನ್ ಪ್ಯಾಲೆಸಿನಲ್ಲಿ ಬಂಧಿಸಿ ಸೆರೆಮನೆಯಲ್ಲಿಟ್ಟಿದ್ದರು. ಕಸ್ತೂರಬಾ ಜೊತೆಯಲ್ಲಿದ್ದ ಅನಾರೋಗ್ಯದಿಂದ ಮರಣಹೊಂದಿದ ಸಂದರ್ಭದಲ್ಲಿ ನೆನಪಿಗಾಗಿ ಎಸ್. ಎಂ. ಪಂಡಿತರಿಂದ ಎರಡು ಕಲಾಕೃತಿ ಮಾಡಿಸಿಕೊಳ್ಳಲಾಯಿತು. ಗಾಂಧೀಜಿಯವರು ಬುದ್ದನ ಕುರಿತು ಕಸ್ತೂರಬಾ ಅವರೊಂದಿಗೆ ಚರ್ಚಿಸುತ್ತಿರುವುದು, ಮತ್ತೊಂದು ಕಸ್ತೂರಿಬಾ ಅವರ ಮಹದಾಸೆಯಂತೆ ಗಾಂಧೀಜಿವರ ತೊಡೆಯ ಮೇಲೆ ಮಲಗಿಕೊಂಡು ಪ್ರಾಣತ್ಯಾಗ ಮಾಡುತ್ತಿರುವುದು. ಈ ಎರಡು ಕಲಾಕೃತಿಗಳು ಅತ್ಯಂತ ಸುವ್ಯವಸ್ಥಿತವಾಗಿ ಪ್ಯಾಲೆಸ್ ನಲ್ಲಿ ಸಂಗ್ರಹಿಸಲಾಗಿದೆ.

ಶಿವಸೇನ ಪ್ರಮುಖ ಬಾಳಠಾಕ್ರೆ. ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ, ಮಹಾರಾಷ್ಟ್ರದ ಗವರ್ನರ್ ಸಿ. ಸುಬ್ರಹ್ಮಣ್ಯಂ, ಪ್ರಧಾನಿ ಇಂದಿರಾಗಾಂಧಿ, ದೀನಾನಾಥ ಮಂಗೇಸ್ಕರ್, ಸುಶೀಲಾರಾಣಿ ಪಟೇಲ್ ಹಾಗೂ ಅಂಥೊನಿ ಮಾಸ್ಕರನ್ ಹೆನ್ಸ್, ಹೀಗೆ ಮುಂತಾದ ದೇಶ ವಿದೇಶದ ಗಣ್ಯವ್ಯಕ್ತಿಗಳ, ನಾಯಕ ನಾಯಕಿಯರ ಭಾವಚಿತ್ರಗಳನ್ನು ಎಸ್.ಎಂ. ಪಂಡಿತರು ಚಿತ್ರಿಸಿದ್ದಾರೆ. ಇವರು ರಚಿಸಿದ ಭಾವಚಿತ್ರ, ಸಂಯೋಜನಾಚಿತ್ರ, ನಿಸರ್ಗಚಿತ್ರ, ಆಧ್ಯಾತ್ಮಿಕ, ಪೌರಾಣಿಕ ಕಲಾಕೃತಿಗಳು ಮುಂಬೈ,ದೆಹಲಿ, ಕಲ್ಕತ್ತಾ, ನಾಗಪೂರ, ಪ್ಯಾರೀಸ್, ಇರಾನ್, ಇರಾಕ್, ಬೆಂಗಳೂರು, ಗುಲ್ಬರ್ಗಾ, ರಾಜಸ್ಥಾನ, ಸಿಮ್ಲಾ ಮತ್ತು ಲಂಡನ್, ಸಿಂಗಪೂರ್, ಯೂ.ಎಸ್.ಎ. ಹೀಗೆ ಮುಂತಾದ ದೇಶಗಳಲ್ಲಿ ಕಲಾಭಿಮಾನಿಗಳು ಸಂಗ್ರಹಿಸಿಕೊಂಡಿದ್ದಾರೆ.

ಹೀಗೆ ಅನೇಕ ಮಾಧ್ಯಮ ಶೈಲಿ, ಕ್ಷೇತ್ರಗಳಲ್ಲಿ ಕಲಾಕೃತಿಗಳನ್ನು ರಚಿಸಿದ ಪಂಡಿತರು ತಮ್ಮ ಸಾಧನೆಯ ಮೂಲಕ ವಿಶ್ವಮಾನವರಾಗಿ ಬೆಳೆದಿದ್ದಾರೆ. ಇವರು ನಡೆದು ಸಾಧಿಸಿದ ಸಾಧನೆ ಇಂದು ಅನೇಕ ಜನರ ಜೀವನೋಪಾಯಕ್ಕೆ ಸ್ಪೂರ್ತಿಯಾಗಿದೆ. ನೈಜಶೈಲಿಯಲ್ಲಿ ಚಿತ್ರಕಲೆ ಅಧ್ಯಯನ ಮಾಡುವ ಕಲಾಶಾಲೆಯ ವಿದ್ಯಾರ್ಥಿಗಳು, ಯುವಕಲಾವಿದರು, ಹಿರಿಯಕಲಾವಿದರು,ರಾಜರವಿವರ್ಮ ಮತ್ತು ಎಸ್.ಎಂ. ಪಂಡಿತರ ಕಲಾಕೃತಿಗಳಿಂದಲೇ ಸ್ಪೂರ್ತಿ ಹೊಂದಿದ್ದಾರೆ ಎನ್ನಬಹುದು. ಸುಮಾರು ಕಲಾಶಾಲೆಗಳಲ್ಲಿ ಇಂದಿಗೂ ಎಸ್.ಎಂ. ಪಂಡಿತರ ಕಲಾಕೃತಿಗಳು ಪ್ರತಿಕೃತಿಗಳ ಅಥವಾ ಅದರಂತೆ ಸಂಯೋಜನೆಗೊಳಿಸಿ ವರ್ಣವಿನ್ಯಾಸ ಮಾಡಲು ವಿದ್ಯಾರ್ಥಿಗಳಿಗೆ ಸೂಚಿಸುತ್ತಾರೆ. ದೇಶದ ಅನೇಕ ಕಲಾವಿದರು ಇಂದಿಗೂ ಪಂಡಿತರ ಪ್ರತಿಕೃತಿಗಳ ಸ್ಪೂರ್ತಿಯಿಂದ ಕಲಾಕೃತಿ ರಚಿಸುತ್ತಾರೆ.ಹೀಗೆ ಭಾರತದಲ್ಲಿ ಚಿತ್ರಗಳ ಪ್ರತಿಕೃತಿ ಮಾಡುವ ಮಟ್ಟಕ್ಕೆ ಬೆಳೆದುನಿಂತ ದೈತ್ಯ ಪ್ರತಿಭೆ ಎಸ್. ಎಮ್. ಪಂಡಿತರಾಗಿದ್ದಾರೆ.

ಕಲಾ ಗ್ಯಾಲರಿ

ಗುಲಬರ್ಗಾ ಪಟ್ಟಣದ ಚೌಕ ಪೋಲಿಸ್ ಠಾಣೆಯಿಂದ ಪುಟಾಣಿ ಓಣಿಯಲ್ಲಿನ ನಗರೇಶ್ವರ ದೇವಸ್ಥಾನದ ಹತ್ತಿರ ಎರಡು ಮಹಡಿಯ ವಿಶಾಲವಾದ ಕಟ್ಟಡದ ಮೇಲೆ ‘ವಿಶ್ವ ಕರ್ಮ ಪ್ರಿಂಟರ್ಸ್’ ಎಂಬ ಹೆಸರಿನ ಬೋರ್ಡ್ ತೂಗುಹಾಕಲಾಗಿದೆ. ಈ ಕಟ್ಟಡವೇ ವಿಶ್ವವಿಖ್ಯಾತ ಕಲಾವಿದ ಎಸ್.ಎಮ್. ಪಂಡಿತರ ಮನೆ. ಮನೆಯ ಮುಖ್ಯದ್ವಾರದಿಂದ ಪ್ರವೇಶಿಸಿದಾಗ ವಿಶಾಲವಾದ ಒಳಾಂಗಣ ಪ್ರವೇಶದ ಬಲಭಾಗದಲ್ಲಿ ಕಾಳಿಕಾದೇವಿಯ ರಥ, ಎಡಭಾಗದಲ್ಲಿ ಪಂಡಿತರ ಗ್ಯಾಲರಿಗೆ ಹತ್ತಿ ಹೋಗುವ ಏಣಿಗಳಿವೆ. ಒಳಾಂಗಣದ ಎದುರಿಗೆ ವಿಶಾಲವಾದ ಕೋಣೆ ಅದರ ಬಲಭಾಗದಲ್ಲಿ ಕಾಳಿಕಾದೇವಿಯ ಮೂರ್ತಿ ಪೂಜಿಸುವ ಕೊಟ್ಟಡಿ,ಈ ಮೂರ್ತಿ ಕಾಳೀಕಾದೇವಿಯ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ರಥದಲ್ಲಿ ಮೇಲಿಟ್ಟುಕೊಂಡು ಶೃಂಗರಿಸಿ ಕಾಳಿಕಾದೇವಸ್ಥಾನದವರೆಗೆ ಮೆರವಣಿಗೆ ಮಾಡುವ ವಾಡಿಕೆಯಿದೆ.

ಈ ಮನೆಯ ಮೇಲ್ಮಹಡಿಯಲ್ಲಿ ಮೂರು ವಿಶಾಲವಾದ ಕೊಠಡಿಗಳಿವೆ. ಇವುಗಳಲ್ಲಿ ಪಂಡಿತರು ಕಲಾಕೃತಿ ರಚಿಸುತ್ತಿದ್ದರು. ಇಂದು ಕೊಠಡಿಗಳಲ್ಲಿ ಪಂಡಿತರ ಕಲಾಕೃತಿಗಳನ್ನ ತೂಗುಹಾಕಲಾಗಿದೆ. ಗ್ಯಾಲರಿಯ ಪ್ರಥಮ ಕೊಠಡಿಯಲ್ಲಿ ಲಚ್ಚಾಣ ಸಿದ್ದಪ್ಪ ಮಹಾರಾಜರ ಕಲಾಕೃತಿಯನ್ನು ಕಾಣುತ್ತೇವೆ. ಕೊಠಡಿಯಲ್ಲಿ ಎದುರಿಗೆ ಹಗುರವಾದ ವರ್ಣಗಳಲ್ಲಿ ರಚಿತವಾದ ಸುಜಾತ ಬುದ್ದ ಕಲಾಕೃತಿ ನೋಡುಗರ ಮನ ಸೆಳೆಯುತ್ತದೆ. ಈ ಕೊಠಡಿಯಲ್ಲಿ ಅತ್ಯಂತ ಆಕರ್ಷಕವಾದ ಮತ್ತು ವಿಶಾಲವಾದ ಕ್ಯಾನ್ವಾಸ್ ಮೇಲೆ ರಚಿಸಿದ ಕರ್ಣಾರ್ಜುನರ ಯುದ್ಧದ ಸನ್ನಿವೇಶದ ಕಲಾಕೃತಿ. ಈ ಕಲಾಕೃತಿ ಎಂತವರನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತದೆ. ರಣರಂಗದ ಯುದ್ಧದ ಸನ್ನಿವೇಶ, ಪರಿಣಾಮಗಳು ತುಂಬಾ ಪರಿಣಾಮಕಾರಿಯಾಗಿ ರಚಿಸಿದ್ದಾರೆ.ಕೊಠಡಿಯಲ್ಲಿ ಎರಡು ಕಿಟಕಿಯ ಮಧ್ಯದಲ್ಲಿ ಹಗುರವಾದ ನೀಲಿ, ಹಳದಿ ವರ್ಣದಲ್ಲಿ ರಚಿಸಿದ ಕೃಷ್ಣನ ಸಂಯೋಜನೆಯು ಇನ್ನೊಂದು ಚಿತ್ರ ಕಣ್ಣಿಗೆ ತಂಪು ನೀಡುತ್ತದೆ ಮತ್ತು ಇದೇ ಕೊಠಡಿಯಲ್ಲಿ ಪ್ರಕೃತಿ ಚಿತ್ರಗಳು, ಶಿರಭಾವಚಿತ್ರಗಳು ಹೀಗೆ ಮುಂತಾದ ಕಲಾಕೃತಿಗಳನ್ನು ಕಾಣಬಹುದು.

ಮೊದಲನೆಯ ಕೊಠಡಿಗಿಂತ ಸ್ವಲ್ಪ ಚಿಕ್ಕದಾದ ಇನ್ನೊಂದು ಕೊಠಡಿಯನ್ನು ಪ್ರವೇಶಿಸಿದಾಗ ತಲೆ ಎತ್ತಿ ನೋಡಬೇಕಾದ ಕಲಾಕೃತಿ ಶಂಕರಭಗವಾನ್ ಚಿತ್ರ. ಈ ಚಿತ್ರ ಸಂಯೋಜನೆಯು ಎಂಥವರನ್ನೂ ಭಕ್ತಿಭಾವ ಪರವಶವನ್ನಾಗಿಸುತ್ತದೆ. ಅತೀ ಹಗುರವಾದ ವರ್ಣ ಮಿಶ್ರಣದಲ್ಲಿ ಈ ಚಿತ್ರವನ್ನು ಚಿತ್ರಿಸಲಾಗಿದೆ. ಈ ಕೊಠಡಿಯಲ್ಲಿ ಚಿಕ್ಕದಾದ ಮಹಾತ್ಮಗಾಂಧಿಚಿತ್ರ ಕಲಾಸಕ್ತರನ್ನು ಮಂತ್ರಮುಗ್ಧರನ್ನಾಗಿಸುವ ಪೋಸ್ಟರ್ ಜಲವರ್ಣಚಿತ್ರದ ಸಂಯೋಜನಾ ಚಿತ್ರಗಳು ಸಂಗ್ರಹಗೊಂಡಿದ್ದು ಅವುಗಳ ರಚನಾ ವಿಧಾನದ ಕುರಿತು ಆಲೋಚಿಸದೆ ಮುಂದೆ ಹೆಜ್ಜೆಯಿಡಲು ಬಿಡುವುದಿಲ್ಲ.ಹೀಗೆ ಎರಡು ಕೊಠಡಿಗಳನ್ನು ನೋಡಿದ ಮೇಲೆ ಮೂರನೆಯ ಈ ಕೊಠಡಿಯಲ್ಲಿ ಎದುರಿಗೆ ಕಾಣುವುದು ಶಾಕುಂತಲಾ ಪತ್ರಲೇಖನ ಕಲಾಕೃತಿ. ಈ ಸಂಯೋಜನಾ ಕಲಾಕೃತಿ ಎಂಥವರನ್ನೂ ಆಕರ್ಷಿಸುವುದು ಸಹಜ. ಶಾಕುಂತಲೆ ಕಮಲದ ಹೂವಿನ ಎಲೆಯನ್ನು ಹಿಡಿದುಕೊಂಡು ಪ್ರೇಮಪತ್ರ ಬರೆಯುವ ಸನ್ನಿವೇಷವನ್ನು ಕಾಣಬಹುದು.

ಇಲ್ಲಿಯೇ ಮುಂಭಾಗದ ಗೋಡೆಯ ಮೇಲೆ ವಿಶ್ವಾಮಿತ್ರ ಮೇನಕೆಯರ ಪ್ರಸಿದ್ದ ಕಲಾಕೃತಿಗಳಿವೆ. ತಪೋಭಂಗಗೊಂಡ ವಿಶ್ವಾಮಿತ್ರ ಮೇನಕೆಯರ ದೇಹದ ರಚನೆ, ಒಳ ವಿನ್ಯಾಸ, ಪಾರದರ್ಶಕತೆಯ ನೈಜ ಶೈಲಿಯ ಕಲಾಕೃತಿಗಳು ಕಲಾಸಕ್ತರನ್ನು ಮಂತ್ರಮಗ್ನರನ್ನಾಗಿಸುತ್ತವೆ.

ಈ ಸಾಲಿನಲ್ಲಿ ಮನಸೆಳೆಯುವ ಇನ್ನೊಂದು ಚಿತ್ರವೆಂದರೆ ಕಲಾಗುರು ದಂಡಾವತಿಮಠರ ಭಾವಚಿತ್ರ. ಈ ಭಾವಚಿತ್ರದಲ್ಲಿನ ಭಾವನೆಗಳು ಕಲಾವಿದನ ಅಧ್ಯಯನದ ಆಳವನ್ನು ಅನುಭವವನ್ನು ತೋರಿಸುತ್ತದೆ. ಮೈವಳಿಕೆ ಅತ್ಯಂತ ನೈಜವಾಗಿದೆ. ಕೈಹಿಡಿದು ನೋಡಬೇಕೆಂಬ ಭಾವನೆ ವೀಕ್ಷಕನಿಗೆ ಬರುತ್ತದೆ.

ಕಾಳಿಕಾದೇವಿ, ಸುಭಾಷ್ ಚಂದ್ರಭೋಸ್, ಉಮರ್ ಖಯಾಂ, ಏಸು ಕ್ರೈಸ್ತ,ಶಿವ ಮತ್ತು ಚಲನಚಿತ್ರದ ಅನೇಕ ಸಂಯೋಜನಾ ಕಲಾಕೃತಿಗಳನ್ನು ಈ ಕೊಠಡಿಯಲ್ಲಿ ಕಾಣಬಹುದಾಗಿದೆ. ಒಂದಕ್ಕಿಂತಲೂ ಒಂದು ಕಲಾಕೃತಿಗಳು ವಿಶಾಲವಾಗಿದ್ದು ಕಲಾ ರಸಿಕರನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತದೆ. ಎಷ್ಟು ಹೊತ್ತು ನೋಡಿದರು ಇನ್ನು ಹೆಚ್ಚು ಹೆಚ್ಚು ನೋಡಬೇಕೆಂಬ ಭಾವನೆ ಮೂಡಿಸುತ್ತದೆ. ಸ್ಥಳಾವಕಾಶದ ಕೊರತೆ ಇರುವುದರಿಂದ ಎಲ್ಲಾ ಕಲಾಕೃತಿಗಳು ತೂಗುಹಾಕಲು ಸಾಧ್ಯವಾಗಿಲ್ಲ ಇನ್ನೂ ಹಲವಾರು ಕಲಾಕೃತಿಗಳನ್ನು ಮುಚ್ಚಿಡಲಾಗಿದೆ. ಅಲ್ಲದೆ ರೇಖಾ ಚಿತ್ರಗಳು, ಭಾವಚಿತ್ರಗಳು, ವರ್ಣಚಿತ್ರಗಳನ್ನು ಮೌಂಟ್ ಮಾಡಿ ಸಂಗ್ರಹಿಸಿದ್ದಾರೆ.

ಕಲಾವಿದ್ಯಾರ್ಥಿಗಳೊಂದಿಗಿನ ಅನ್ಯೋನ್ಯ ಸಂಬಂಧ

ಪಂಡಿತರು ವಿದ್ಯಾರ್ಥಿಗಳೊಂದಿಗೆ ಒಳ್ಳೆಯ ಸಂಬಂಧವನ್ನು ಹೊಂದಿದ್ದರು ವಿದ್ಯಾರ್ಥಿಗಳ ಪ್ರಗತಿಗಾಗಿ ಅವರು ಅನೇಕ ಸಲಹೆಗಳನ್ನು ಆಗಾಗ ನೀಡುತ್ತಿದ್ದರು. ಸುಮ್ಮನೆ ಅಭಿಮಾನಕ್ಕೆ ಬೀಳಬಾರದು ಕಲಾಕೃತಿ ಸೃಜನಾತ್ಮಕ ಅಭಿವ್ಯಕ್ತಿಯಾಗಿರಬೇಕು. ರಮ್ಯತೆ ಇರಬೇಕು, ಸರಸ್ವಾದ ಇರಬೇಕು, ರಸವಿಲ್ಲದ ಕಬ್ಬಿನ ಸಿಪ್ಪೆಯಂತೆ ಮಾಡಬೇಡಿ. ಸ್ವತಃ ನೀವೇ ವಿಷಯದಲ್ಲಿ ಪೂರ್ಣ ಮುಳುಗಿರಿ. ವಿದ್ಯಾರ್ಥಿಗಳು ದಿನಾಲು ಸ್ಕೆಚ್ಚ್ ಮಾಡುವುದರಿಂದ ಅವರಲ್ಲಿ ಪ್ರಬುದ್ಧತೆ ಬರುತ್ತದೆ. ಸತತವಾಗಿ ರೇಖಾಚಿತ್ರ ಬಿಡಿಸುತ್ತಿದ್ದರೆ ಒಳ್ಳೆಯ ಕಲಾವಿದನಾಗುತ್ತಾನೆ. ನಿಮ್ಮ ಹೃದಯ ಮತ್ತು ಕಣ್ಣುಗಳಿಗೆ ಒಳ್ಳೆಯ ಶ್ರೇಷ್ಠವಾದ ಚಿತ್ರಗಳನ್ನು ನೋಡುವ ಅಭ್ಯಾಸ ಕಲಿಸಿರಿ, ಒಮ್ಮಲೆ ಹೊಸ ಸ್ಟೈಲ್ ಕಡೆ ಒಲಿಯದೇ, ಚಿತ್ರಕಲೆಯ ಪ್ರಾಥಮಿಕ ಹಂತ ವಿದ್ಯಾಭ್ಯಾಸ ಚೆನ್ನಾಗಿ ಮಾಡಿರಿ, ಎಂದು ಪಂಡಿತರು ಯುವ ಕಲಾವಿದರಿಗೆ ಸಭೆ ಸಮಾರಂಭಗಳಲ್ಲಿ ಬೋಧಿಸುತ್ತಿದ್ದರು.

ಚಿತ್ರಕಲಾ ವಿದ್ಯಾರ್ಥಿಗಳಿಗೆ ಕಲಾವಿದರಿಗೆ ಸಹಕಾರವಾಗಲೆಂದು ಮುಂಬೈ, ದಾದರ್ದಲ್ಲಿ “ಭಾರತೀಯ ವ್ಯವಸಾಯಿಕ ಕಲಾಮಂಡಳಿ”ಯನ್ನು ಎಸ್. ಎಮ್. ಪಂಡಿತರು, ರವಿ ಪರಂಜಪೆ ಮತ್ತು ವಿ.ಎ. ಮಾಳಿಯವರು ಈ ಮೂರು ಜನ ಕಲಾವಿದರು ಸೇರಿ ಸ್ಥಾಪಿಸಿದರು. ದಿನನಿತ್ಯ ಒಂದು ರೂಪದರ್ಶಿಯನ್ನು ಕೂಡಿಸಿ ಚಿತ್ರಕಲಾವಿದರು ಸೇರಿ ಸ್ಥಾಪಿಸಿದರು. ದಿನನಿತ್ಯ ಒಂದು ರೂಪದರ್ಶಿಯನ್ನು ಕೂಡಿಸಿ ಚಿತ್ರಕಲೆಯ ಅಧ್ಯಯನ ಮಾಡಿಸುತ್ತಿದ್ದರು. ಪ್ರತಿ ಶನಿವಾರ, ರವಿವಾರ ಒಬ್ಬ ಹಿರಿಯ ಕಲಾವಿದರ ಕಲಾ ಪ್ರಾತ್ಯಕ್ಷಿಕೆ ನೀಡುವ ವ್ಯವಸ್ಥೆ ಮಾಡಲಾಗುತ್ತಿತ್ತು. ಹಾಗೂ ಕಲಾವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿತ್ತು. ಇಲ್ಲಿ ಪಂಡಿತರು ಅನೇಕ ಸಲ ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಲ್ಲದೇ ಅನೇಕ ರೇಖಾಚಿತ್ರ ವರ್ಣಚಿತ್ರಗಳನ್ನು ರಚಿಸಿದ್ದಾರೆ.

ನನ್ನಲ್ಲಿ ಚಿತ್ರಕಲಾ ಅಧ್ಯಯನ ಮಾಡುವ ಆಸಕ್ತಿಯುಳ್ಳವವರು ಕೆಲವು ನಿಯಮಗಳಿಗೆ ಬದ್ಧನಾಗಿರಬೇಕು. ಬೆಳ್ಳಿಗ್ಗೆ ೮ ಗಂಟೆಗೆ ಬರಬೇಕು, ಸಾಯಂಕಾಲ ಮನೆಗೆ ಹೋಗು ಎನ್ನುವವರೆಗೆ ಹೋಗುವಂತಿಲ್ಲ. ಎರಡನೆಯದು ಯಾವ ರಜೆ ನೀಡಲಾಗುವುದಿಲ್ಲ, ಊರಿಗೆ ನಾನು ಹೋಗು ಎನ್ನುವವರೆಗೆ ಹೋಗುವಂತಿಲ್ಲ. ಮೂರನೆಯದು ನಾನು ವರ್ಣಚಿತ್ರ ಬಿಡಿಸಲು ಹೇಳುವವರೆಗೆ ಹೋಗುವಂತಿಲ್ಲ. ಮೂರನೆಯದು ನಾನು ವರ್ಣಚಿತ್ರ ಬಿಡಿಸಲು ಹೇಳುವವರೆಗೆ ಬರೀ ರೇಖಾಚಿತ್ರಗಳು ಮಾತ್ರ ಬಿಡಿಸಬೇಕು. ರೇಖಾಚಿತ್ರದಲ್ಲಿ ಪರಿಪೂರ್ಣತೆ ಪಡೆದರೆ ವರ್ಣಗಳನ್ನು ತುಂಬುವುದಕ್ಕೆ ಅಷ್ಟು ಸಮಯ ಹಿಡಿಯುವುದಿಲ್ಲ ಹೀಗೆ ತಪಸ್ಸಿನಂತೆ ಶ್ರಮಿಸಿದಾಗ ಮಾತ್ರ ಚಿತ್ರಕಲೆಯ ಸಿದ್ದಿಯನ್ನು ಸಾಧಿಸಬಹುದೆಂದು ತಮ್ಮ ಅನುಭವದ ಮಾತುಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಿದ್ದ ವಿವರಗಳು ಅವರ ಕುರಿತುಬಂದ ಅನೇಕ ಲೇಖನಗಳಲ್ಲಿ ಕಾಣುತ್ತೇವೆ. ಒಟ್ಟಾರೆ ಶಿಸ್ತುಬದ್ಧವಾದ ಶೈಲಿ ಪಂಡಿತರದಾಗಿತ್ತು.

ಎಸ್. ಎಂ. ಪಂಡಿತರ ಕಲಾಕೃತಿಗಳು ಎರಡು ರೀತಿಯಲ್ಲಿವೆ.

೧. ರೇಖಾಚಿತ್ರಕಲೆ

೨. ವರ್ಣಚಿತ್ರಕಲೆಗಳು

ರೇಖಾ ಚಿತ್ರಗಳು

ವಿಶಿಷ್ಟ ತಂತ್ರ ಶೈಲಿ, ವಿಧಾನಗಳನ್ನು ಬಳಸಿಕೊಂಡು ರೇಖಾ ಚಿತ್ರಗಳನ್ನು ರಚಿಸಿ ಹೆಸರುವಾಸಿಯಾದ ಕಲಾವಿದ ಎಸ್. ಎಮ್. ಪಂಡಿತರು. ಒಂದು ಕಲಾಕೃತಿ ರಚನೆಯ ಮುನ್ನ ಹಲವಾರು ಕರಡು ರೇಖಾಚಿತ್ರಗಳನ್ನು ರಚಿಸಿ ನಂತರ ಅದರಲ್ಲಿ ಒಂದು ಕರಡು ಪ್ರತಿಯನ್ನು ಅಂತಿಮವಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು. ರಚಿಸಿದ ಕರಡು ಪ್ರತಿ ಪೂರ್ಣ ವಿವರವಾಗಿರದೇ ಕೇವಲ ಭಾವ ಭಂಗಿ, ಆಕಾರ ಮಾತ್ರ ಸೂಚಿಸುತ್ತದೆ. ಅಂತಿಮವಾಗಿ ಆಯ್ಕೆ ಮಡಿದ ಕರಡು ರೇಖಾಚಿತ್ರವನ್ನು ಮತ್ತೆ ಅನುಕೂಲಕ್ಕೆ ತಕ್ಕಂತೆ ಬಿಡಿಬಿಡಿ ಭಾಗಗಳನ್ನು ವಿವರವಾಗಿ ಚಿತ್ರಿಸಿಕೊಳ್ಳುತ್ತಿದ್ದರು. ಹೀಗೆ ಪಂಡಿತರು ರೇಖಾಚಿತ್ರವನ್ನು ಹಲವಾರು ವಿಧದಲ್ಲಿ ಬಳಸಿಕೊಂಡಿರುವುದು ನಮಗೆ ಕಂಡುಬರುತ್ತದೆ. ಪಂಡಿತರ ರೇಖಾಚಿತ್ರಗಳ ವಸ್ತು ವಿಷಯ, ಇಲ್ಲಿ ಗಮನ ಸೆಳೆಯುತ್ತವೆ.