III. ಪ್ರಕೃತಿ ಚಿತ್ರಗಳು

. ವಸಂತ ಋತುವಿನ ಊಟಿಯ ನಿಸರ್ಗಚಿತ್ರ

ಪಂಡಿತರು ನಿಸರ್ಗ ಆಸ್ವಾದನೆಗಾಗಿ ತಮ್ಮ ಕಾರಿನಲ್ಲಿ ಕುಟುಂಬದವರೊಂದಿಗೆ ನಾಯಿಯನ್ನು ತೆಗೆದುಕೊಂಡು ಪ್ರಯಾಣಿಸುತ್ತಿದ್ದರು. ಒಮ್ಮೆ ೧೯೬೩ರಲ್ಲಿ ಊಟಿಯ ರಮಣೀಯವಾದ ನಿಸರ್ಗದ ದೃಶ್ಯವನ್ನು ನೋಡಿ ಪ್ರಭಾವಿತರಾದ ಪಂಡಿತರು ತಮ್ಮ ಕಾರನ್ನು ದಾರಿಯಲ್ಲಿಯೇ ನಿಲ್ಲಿಸಿ ರಚಿಸಿದ ಚಿತ್ರವಿದು. ಇದನ್ನು ೨೦x೩೨ ಇಂಚ್ ಅಳತೆಯಲ್ಲಿ ತೈಲವರ್ಣ ಮಾಧ್ಯಮದಲ್ಲಿ ಚಿತ್ರಿಸಲಾಗಿದೆ. ಈಗಲೂ ಗುಲಬರ್ಗಾದ ಪಂಡಿತರ ಸಂಗ್ರಹಾಲಯದಲ್ಲಿ ಇದನ್ನು ಕಾಣಬಹುದು.

ಊಟಿಯ ರಮಣೀಯವಾದ ಪರಿಸರವು ಹಸಿರಾಗಿರುವ ಮಳೆಗಾಲದ ಅನುಭವವನ್ನು ನೀಡುತ್ತದೆ.ಅದರಲ್ಲಿನ ವಿವಿಧ ಬಗೆಯ ಗಿಡ,ಮರ,ಹುಲ್ಲು, ಬಳ್ಳಿಗಳಲ್ಲಿನ ಹಸಿರು ಬಣ್ಣಗಳ ವ್ಯತ್ಯಾಸಗಳು ಸ್ಪಷ್ಟವಾಗಿದೆ. ವಿಶಾಲವಾದ ಮರಗಳು,ದೂರ ಸಮೀಪ ವಸ್ತುವಿನಲ್ಲಿರುವ ಆಕಾರದ ಮತ್ತು ಬಣ್ಣಗಳಲ್ಲಿನ ಯಥಾದರ್ಶನವನ್ನು ಸ್ಪಷ್ಟವಾಗಿ ಇಲ್ಲಿ ತೋರಿಸಿದ್ದಾರೆ. ನೆಲ, ಹಾದಿ, ಕಲ್ಲುಗಳು ಬಲಬದಿಯಲ್ಲಿ ಕಾಣುತ್ತಿರುವ ಬೂದಿ, ಕೆಂಪು, ಹಸಿರು. ನೀಲಿ ಮಿಶ್ರಿತ ಬಣ್ಣಗಳಿಂದ ಕೂಡಿದ ಮನೆ. ಮನೆಗೆ ತಕ್ಕ ಒಂದು ಬದಿಯಲ್ಲಿ ಚಿತ್ರಿಸಿದ ಹಸಿರು ವರ್ಣಗಳ ಹೂವಿನ ನೆಲ ವಿಶಾಲವಾದ ಮರಗಳ ಬುಡದಿಂದ ತುದಿಯವರೆಗೆ ಬಣ್ಣಗಳಲ್ಲಿ ಆಗುವ ಬದಲಾವಣೆಗಳನ್ನು ಇಲ್ಲಿ ವೀಕ್ಷಿಸಬಹುದು. ಮಿಶ್ರ ಬಣ್ಣಗಳಿಂದ ಹಲವಾರು ರೀತಿಯ ವಿವಿದ ಹಸಿರು ಬಣ್ಣಗಳ ಛಾಯೆಯನ್ನು ರಚಿಸಿದ್ದಾರೆ. ಆ ಊಟಿಯ ರಮಣೀಯವಾದ ಪ್ರಕೃತಿಗೆ ತಕ್ಕ ಶಾಂತವಾದ, ಬಣ್ಣಗಳ ಬಳಕೆ ನೋಡುಗರ ಕಣ್ಮನಸ್ಸಿನ ಆನಂದ ನೀಡುತ್ತದೆ. ಪಂಡಿತರು ನಿಸರ್ಗ ಚಿತ್ರಣದಲ್ಲಿ ಬಣ್ಣಗಳ ವಿನ್ಯಾಸದಲ್ಲಿ ಹೊಸ ಲೋಕಚನ್ನು ಸೃಷ್ಟಿಸಿದ್ದಾರೆ. ನೈಜತೆಯ ಅನುಭವಕ್ಕಾಗಿ ಅವರು ಬಣ್ಣಗಳಲ್ಲಿ ತೋರಿಸುವ ವಿಶಿಷ್ಟ ಪ್ರಯೋಗ ಅನನ್ಯವಾದುದ್ದಾಗಿದೆ. ಎಂಬುವುದಕ್ಕೆ ಈ ಚಿತ್ರ ನಿದರ್ಶನವಾಗಿದೆ.

ಕಲಾ ಪ್ರದರ್ಶನಗಳು

ಪಂಡಿತರು ಪ್ರಥಮವಾಗಿ ಚಿತ್ರಕಲಾ ಪ್ರದರ್ಶನವನ್ನು ೧೯೭೮ರಲ್ಲಿ ‘ದಿ ಇಂಡಿಯನ್ ಹೈ ಕಮಿಷನ್ ಆಪ್ ಮಾಂಚಿಸ್ಟರ್ ಕೊಠಡಿಯಲ್ಲಿ ನಡೆಯಿತು.ಚಿತ್ರಕಲಾ ಪ್ರದರ್ಶನವನ್ನು ಶ್ರೀ.ಎನ್.ಜಿ. ಗೋರೆ ಇಂಡಿಯನ್ ಹೈ ಕಮಿಷನರ್ ಅವರು ಆಯೋಜಿಸಿದ್ದರು. ‘ಲಂಡನ್ನಿನಲ್ಲಿ ಪಂಡಿತರ ಕಲಾಕೃತಿಗಳನ್ನು ಕಂಡ ಕಲಾ ಅಭಿಮಾನಿಗಳು, ವಿಮರ್ಶಕರು ಗೌರವದಿಂದ ಭಾರತದ Toulouse Loutric, William Blake ಮತ್ತು ರೇಂಬ್ರಾಂಟ್’ ಎಂದು ಹೊಗಳಿರುವುದನ್ನು ಲಂಡನ್ನಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

ಈ ಪ್ರದರ್ಶನದಿಂದ ಪಂಡಿತರಿಗೆ ನಿರೀಕ್ಷೆಗೆ ಮೀರಿ ಪ್ರೋತ್ಸಾಹ ದೊರಕಿದ್ದಕ್ಕೆ ‘I want to hold a much bigger exhibition as i was enjoyed this so much’ ಎಂದು ಪಂಡಿತರು ತಮಗಾದ ಆನಂದವನ್ನು ಅಭಿವ್ಯಕ್ತಪಡಿಸಿದ್ದಾರೆ. ಈ ಏಕವ್ಯಕ್ತಿ ಪ್ರದರ್ಶನದಿಂದ ಪಂಡಿತರು ವಿಶ್ವದಾದ್ಯಂತ ಉನ್ನತವಾದ ಕೀರ್ತಿ ಮತ್ತು ಮನ್ನಣೆಗೆ ಪಾತ್ರರಾದವರು. ಇದರ ಪರಿಣಾಮವಾಗಿ ಲಂಡನ್ನಿನ ರಾಯಲ್ ಸೊಸೈಟಿ ಆಪ್ ಆರ್ಟ್ ಸಂಸ್ಥೆಯ ಫೆಲೋಶಿಪ್ ನೀಡಿ ಎಸ್.ಎಮ್. ಪಂಡಿತರನ್ನು ಗೌರವಿಸಿತು. ಈ ಫೆಲೋಶಿಪ್ ಭಾರತದಲ್ಲಿ ಬೆರಳೆಣಿಕೆಯಷ್ಟು ಕಲಾವಿದರಿಗೆ ಮಾತ್ರ ದೊರಕಿದೆ ಎನ್ನಬಹುದು. ಭಾರತದಲ್ಲಿ ಮೊಟ್ಟಮೊದಲಿಗೆ ೧೯೯೧ ಆಗಸ್ಟ್ ತಿಂಗಳಲ್ಲಿ ಜಾಹಂಗೀರ ಆರ್ಟ್ ಗ್ಯಾಲರಿಯಲ್ಲಿ ಏಕವ್ಯಕ್ತಿ ಪ್ರದರ್ಶನವನ್ನು ಹಮ್ಮಿಕೊಂಡಿದ್ದರು. ಇದನ್ನು ಮಹಾರಾಷ್ಟ್ರದ ರಾಜ್ಯಪಾಲರಾದ ಸನ್ಮಾನ್ಯ ಸಿ. ಸುಬ್ರಮಣ್ಯಂ ಉದ್ಘಾಟಿಸಿದರು. ಶಿವಸೇನೆ ಮುಖ್ಯಸ್ಥ ಶ್ರೀ ಬಾಳಠಾಕ್ರೆ ಅವರು ಮುಖ್ಯ ಅತಿಥಿಗಳಾಗಿದ್ದರು. ಮುಂಬೈಯಲ್ಲಿನ ಚಿತ್ರಕಲಾ ಪ್ರದರ್ಶನದ ಬೆನ್ನೆಲುಬಾಗಿ ಪಂಡಿತರ ಗೆಳೆಯರು ಮತ್ತು ಬಾಳಠಾಕ್ರೆಯವರಿದ್ದರು.

ಮಂಬೈನ ಪ್ರದರ್ಶನ ಮುಗಿದ ಕೆಲವು ತಿಂಗಳಲ್ಲಿ ಪುಣೆಯ ಬಾಲಗಂಧರ್ವ ಹಾಲ್‌ನಲ್ಲಿ ಪ್ರದರ್ಶನವನ್ನು ಅಯೋಜಿಸಿದ್ದರು. ಈ ಪ್ರದರ್ಶನವನ್ನು ನೋಡಲು ಗಣ್ಯರು ಶ್ರೀಮಂತರು ಕಲಾಸಕ್ತರು ಅಲ್ಲದೆ ಸುತ್ತಮುತ್ತಲಿನ ಹಳ್ಳಿಯ ಜನರು ಏತ್ತಿನ ಚಕ್ಕಡಿ ಮಾಡಿಕೊಂಡು ಬಂದು ಚಿತ್ರಕಲಾಪ್ರದರ್ಶನವನ್ನು ನೋಡಿದ್ದು ಅವರ ಖ್ಯಾತಿಗೆ ನಿದರ್ಶನವಾಗಿದೆ. ಭಾರತದ ಮೂಲೆ ಮೂಲೆಯಲ್ಲಿ ಪಂಡಿತರ ಕಲಾಕೃತಿಗಳನ್ನು ಮಾತ್ರ ನೋಡಿದ ಜನರು ಪಂಡಿತರನ್ನು ನೋಡಿರಲಿಲ್ಲ. ಅವರನ್ನು ನೋಡಲು ಜನಸಾಮಾನ್ಯರು ಕಲಾವಿದರು ಸಾಲುಸಾಲಾಗಿ ಬರಲಾರಂಭಿಸಿದರು.

ಪಂಡಿತರು ಸ್ವರ್ಗವಾಸಿಯಾದ ನಂತರ ೧೯೯೪ ರಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ ಬೆಂಗಳೂರಿನಲ್ಲಿ, ೧೯೯೪ರಲ್ಲಿ ಅರಮನೆ ಕಟ್ಟಡ ಮೈಸೂರು ಹಾಗೂ ೨೦೦೩ ರಲ್ಲಿ ೧೦ ನೆಯ ಪುಣ್ಯತಿಥಿಯ ಅಂಗವಾಗಿ ಎಸ್. ಎಂ. ಪಂಡಿತ್ ಟ್ರಸ್ಟ್ ಮತ್ತು ಗಲಬರ್ಗಾ ಅಕಾಡೆಮಿ ಆಫ್ ಆರ್ಟ್‌ನವರು ಸಹಯೋಗದಿಂದ ರೇಖಾಚಿತ್ರ ಮತ್ತು ಚಿತ್ರಕಲೆ ಪ್ರದರ್ಶನವನ್ನು ಗುಲ್ಬರ್ಗಾದಲ್ಲಿ ಆಯೋಜಿಸಿ ಅವರ ನೆನಪನ್ನು ಹಸಿರಾಗಿಸಿದ್ದಾರೆ.

ಪ್ರಶಸ್ತಿ ಸನ್ಮಾನಗಳು

೧೯೪೬ರಲ್ಲಿ ಟೊರೆಂಟೊದಲ್ಲಿ ನಡೆದ ಅಂತರಾಷ್ಟ್ರೀಯ ಚಿತ್ರಕಲಾ ಪ್ರದರ್ಶನದಲ್ಲಿ ಫಿಲ್ಮ್ ಇಂಡಿಯಾ ಮುಖಪುಟಕ್ಕೆ ಮೊದಲ ಪ್ರಶಸ್ತಿ ಪಂಡಿತರಿಗೆ ದೊರಕಿತು. ೧೯೮೨ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು ಹಿರಿಯ ಕಲಾವಿದರ ಪ್ರಶಸ್ತಿ, ೧೯೮೪ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಜೀವನವನ್ನೇ ಕಲೆಗಾಗಿ ಮುಡಿಪಾಗಿಟ್ಟ ಎಸ್. ಎಂ. ಪಂಡಿತರ ಕಲಾಸಾಧನೆ ಕಂಡು ೧೯೮೬ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು.

೧೯೭೮ರಲ್ಲಿ ಲಂಡನ್ನಿನಲ್ಲಿ ನಡೆದ ಚಿತ್ರಕಲಾ ಪ್ರದರ್ಶನ, ೧೯೮೧ರಲ್ಲಿ ಮುಂಬೈಯಲ್ಲಿ ವಿಶ್ವಬ್ರಾಹ್ಮಣ ಕಾಳಿಕಾದೇವಿ ಸೇವಾಮಂಡಲ ಮತ್ತು ಸೋಲಾಪುರ ಜಿಲ್ಲಾ ಸುವರ್ಣಕಾರ ಸಂಘ, ಸೋಲಾಪುರ ೧೯೯೦ರಲ್ಲಿ ಲತಾ ಮಂಗೇಶ್ಕರ್ ರ ತಂದೆ ದಿನನಾಥ ಮಂಗೇಶ್ಕರ್ ಪುಣ್ಯತಿಥಿಯ ಅಂಗವಾಗಿ ಭಾವಚಿತ್ರ ರಚಿಸುವುದಕ್ಕೆ, ವಿವೇಕಾನಂದ ಮೆಮರಿಯಲ್ ಟ್ರಸ್ಟ್ ಕನ್ಯಾಕುಮಾರಿ, ಎನ್.ವಿ.ಸಂಸ್ಥೆಯ ಬೆಳ್ಳಿಹಬ್ಬದ ಅಂಗವಾಗಿ ಗುಲಬರ್ಗಾದಲ್ಲಿ, ೧೯೯೧ರಲ್ಲಿ ಆರ್ಟ್ ಸೊಸೈಟಿ ಆಫ್ ಇಂಡಿಯಾ ಮುಂಬೈನವರು, ಜೆ.ಸಿ. ಗ್ರೂಪ್ ಮುಂಬೈ, ಸಂವೇದನಾ ಗ್ರೂಪ್ ಮುಂಬೈ ಹೀಗೆ ಅನೇಕ ಸಂಘಸಂಸ್ಥೆಯವರು ಪಂಡಿತರನ್ನು ಸನ್ಮಾನಿಸಿದ್ದಾರೆ.

ಪಂಡಿತರು ಪ್ರಶಸ್ತಿ ಪುರಸ್ಕಾರಗಳಿಗಾಗಲಿ, ಸನ್ಮಾನಗಳಿಗಾಗಲಿ ಆಸೆ ಪಡುತ್ತಿರಲಿಲ್ಲ. ಪ್ರಶಸ್ತಿ ಸಿಗಬೇಕೆಂದು ಎಂದೂ ಸ್ಪರ್ಧೆ ಪ್ರದರ್ಶನಗಳಲ್ಲಿ ಭಾಗವಹಿಸತ್ತಿರಲಿಲ್ಲ. ಅವರ ಸಾಧನೆಯಿಂದ ಅವು ಅವರನ್ನು ಹುಡುಕಿಕೊಂಡು ಬಂದಿವೆ. ಜೀವನದಲ್ಲಿ ನೈಜಚಿತ್ರ ಶೈಲಿಯಲ್ಲಿ ಸಾಧನೆ ಮಾಡಬೇಕೆಂಬ ಅವರ ಕನಸನ್ನು ಅವರು ನನಸಾಗಿ ಮಾಡಿಕೊಂಡವರು. ರಾಜಾರವಿವರ್ಮನ ನಂತರ ಭಾರತದಲ್ಲಿ ದೊಡ್ಡ ಹೆಸರನ್ನು ಮಾಡಿದ ಅಗ್ರ ಪಂಕ್ತಿಯ ಕಲಾವಿದರಲ್ಲಿ ಡಾ.ಎಸ್.ಎಮ್. ಪಂಡಿತರು ಒಬ್ಬರಾಗಿದ್ದಾರೆ. ಚಿತ್ರಕಲಾ ಪ್ರಪಂಚದಲ್ಲಿ ಪಂಡಿತರು ಮಾಡಿದ ಸಾಧನೆ, ಹೊಸ ಪ್ರಯೋಗಗಳು ವಿನೂತನವಾದ ಕಲಾಶೈಲಿಯಿಂದಾಗಿ ಅವರು ಯಾವ ಕಾಲಕ್ಕೂ ಉಳಿಯುವ ಗೌರವಿಸಿಕೊಳ್ಳುವ ಕಲಾವಿದನೆಂದರೆ ಅತಿಶಯೋಕ್ತಿಯಾಗಲಾರದು.

ಅಂತಿಮ ದಿನಗಳು

 ಕೊನೆಯ ದಿನಗಳಲ್ಲಿ ಆಧ್ಯಾತ್ಮವಾದಿಯಂತೆ ಕಾಣುತ್ತಿದ್ದ ಪಂಡಿತರು, ಮುಂಬೈನ ಆಸ್ಪತ್ರೆಯಲ್ಲಿ ೧೯೯೩ ಮಾರ್ಚ್ ೩೧ ರಂದು ಅವರು ಹೃದಯಘಾತದಿಂದ ದೈವಾಧೀನರಾದರು. ಚಿತ್ರಕಲಾ ಪ್ರಪಂಚದಲ್ಲಿ ತಮ್ಮದೇ ಆದ ವಿಶಿಷ್ಟವಾದ ಛಾಪನ್ನು ಮೂಡಿಸಿದ ಡಾ, ಎಸ್. ಎಮ್. ಪಂಡಿತರು ನಮ್ಮನ್ನಗಲಿದರೂ ಅವರು ಬಿಟ್ಟುಹೋದ ಅಪಾರವಾದ ಕಲಾಸಂಪತ್ತಿನ ಮೂಲಕ ಮತ್ತೆ ಜೀವಂತವಾಗಿ ನಮ್ಮೊಂದಿಗೆ ಸಂವಾದಿಸುತ್ತಲೇ ಇರುತ್ತಾರೆ.