. ಓಬವ್ವೆಗೆ ಸಂಬಂಧಿಸಿದ ಘಟನೆಗಳ ಕಾಲಾನುಕ್ರಮಣಿಕೆ ಮತ್ತು ವಿಮರ್ಶೆ

ಪ್ರಸ್ತುತ ಅಧ್ಯಯನದಲ್ಲಿ ಗಮನಿಸಲಾದ ಕೆಲವು ದಾಖಲೆಗಳು ಹಾಗೂ ಕೃತಿಗಳು, ವಿವಿಧ ಮೂಲಗಳಿಂದ ಸಂಗ್ರಹಿಸಿಕೊಂಡಿರುವ ಓಬವ್ವೆಗೆ ಸಂಬಂಧಿಸಿದ ಘಟನೆಗಳ ಪ್ರತ್ಯೇಕ ಕಾಲಾನುಕ್ರಮಣಿಕೆಯನ್ನು ಈ ರೀತಿ ತೋರಿಸಬಹುದು:

೬.೧. ‘ಕೈಫಿಯತ್’ ಪ್ರಕಾರ –
ಕ್ರಿ.ಶ.ಸು. ೧೭೫೦ : ಓಬವ್ವೆಯ ಸಾಹಸದ ಘಟನೆ ನಡೆದದ್ದು. (ಕ್ರಿ.ಶ.೧೭೪೯ ರಿಂದ ೧೭೫೪ರವರೆಗೆ ಆಳ್ವಿಕೆ ನಡೆಸಿದ ಚಿತ್ರದುರ್ಗದ ೧೨ನೇ ದೊರೆ ಇಮ್ಮಡಿ ಕಸ್ತೂರಿ ರಂಗಪ್ಪನಾಯಕನ ಅವಧಿ).
೬.೨. ಚಿತ್ರದುರ್ಗದ ನಾಯಕ ಅರಸರ ವಂಶಸ್ಥರು ಒನಕೆ ಓಬವ್ವೆಯ ವಂಶಸ್ಥರಿಗೆ ಕೊಟ್ತಿರುವ ’ನಿರೂಪ ಅಧಿಕಾರ’ ದಾಖಲೆಯ ಪ್ರಕಾರ
– ಕ್ರಿ.ಶ…. : ರಾಜಾ ಬಿಚ್ಚುಕತ್ತಿ ಮದಕರಿನಾಯಕ (ರಾಜಾ ವೀರಮದಕರಿನಾಯಕ) ನ ರಾಜ್ಯಭಾರದಲ್ಲಿ ಮದ್ದಲೆ ಹನುಮಯ್ಯನ ಹೆಂಡತಿ ಓಬವ್ವೆಯು ತನ್ನ ಸಾಹಸ ತೋರಿಸಿದ್ದು.
ಕ್ರಿ.ಶ. ೧೭೬೬ ಸೆಪ್ಟೆಂಬರ್ : ರಾಜಾ ವೀರಮದಕರಿನಾಯಕನು ಓಬವ್ವೆಯ ಹೆಸರಿನಲ್ಲಿ ವನಿಕೆಕಂಡಿಬಾಗಿಲುಸುತ್ತಿನಕೋಟೆಯನ್ನು ಕಟ್ಟಿಸಿ ಆಕೆಯ ಪ್ರತಿಮೆಯನ್ನು ಆ ‘ಕೋಟೆಕಲ್ಲಿನಲ್ಲಿ ಕೆತ್ತಿಸಿದ್ದು’.
ಕ್ರಿ.ಶ. ೧೭೬೬ ಸೆಪ್ಟೆಂಬರ್ ೨೩ ಮಂಗಳವಾರ : ಚಿತ್ರದುರ್ಗದ ಚಲವಾದಿ ಕಟ್ಟೆಮನೆ ಯಜಮಾನ ದೊಡ್ಡಹನುಮಪ್ಪನ ಮಗ ಏಕನಾಥಪ್ಪ ಮೊದಲಾದ ಅಣ್ಣತಮ್ಮಂದಿರು ಶ್ರೀ ಕುದುರೆ ನರಸಿಂಹಸ್ವಾಮಿದೇವರು, ಶ್ರೀ ಲಕ್ಷ್ಮೀದೇವರು ಮತ್ತು ಶ್ರೀವನಕೆಕಂಡಿ ಓಬವ್ವೆ – ಇವರುಗಳ ಜಲಧಿಉತ್ಸವ ಇತ್ಯಾದಿ ಮಾಡಿದ್ದು.
ಕ್ರಿ.ಶ. ೧೭೭೯ ಫೆಬ್ರವರಿ ೨೧ ಭಾನುವಾರ : ಚಿತ್ರದುರ್ಗ ಸಂಸ್ಥಾನವು ಕೈತಪ್ಪಿ ಹೋದದ್ದು. (ಹೈದರ್ ಅಲಿಯು ವಶವಾದದ್ದು).
೬.೩ ಎ.ಡಿ. ನರಸಿಮ್ಹಯ್ಯ ಅವರಲ್ಲಿದ್ದ ಒನಕೆ ಓಬವ್ವೆಯ ಪೀಳಿಗೆಯವರ ವಿವರವುಳ್ಳ ದಾಖಲೆಯ ಪ್ರಕಾರ –
ಕ್ರಿ.ಶ. ೧೭೭೯ ಮಾರ್ಚ್ ೭ ಮಂಗಳವಾರ : ಚಿತ್ರದುರ್ಗದ ಪತನ.
ಕ್ರಿ.ಶ. ೧೭೭೯ ಏಪ್ರಿಲ್ ೫ ಸೋಮವಾರ : ಓಬವ್ವೆಯ ಪತಿ ಮದ್ದಹನುಮಪ್ಪನು ತನ್ನ ಮಗ ಆನೆಪ್ಪ ಹಾಗೂ ಕುಟುಂಬ ಪರಿವಾರ ಸಹಿತ ಈ ದಿವಸ ರಾತ್ರಿ ಸಮಯದಲ್ಲಿ ಚಿತ್ರದುರ್ಗ ಬಿಟ್ಟು ಬೆಳಗಿನ ಜಾವ ೪ ಗಂಟೆಗೆ ದೊಡ್ಡ ಸಿದ್ದವ್ವನಹಳ್ಳಿಗೆ ತೆರಳಿದ್ದು ; ಕೆಲವು ವಸ್ತುಗಳನ್ನು ಜತೆಯಲ್ಲಿ ತೆಗೆದುಕೊಂಡು ಹೋದದ್ದು.
ಕ್ರಿ.ಶ. ೧೮೦೩ : ಓಬವ್ವೆಯ ಮೊಮ್ಮಕ್ಕಳಲ್ಲಿ ಹಿರಿಯವನಾದ ದೊಡ್ಡಹನುಮಪ್ಪನು ಲಕ್ಷ್ಮೀನರಸಿಂಹದೇವರ ಪೆಟ್ಟಿಗೆಯನ್ನು ಹಾಗೂ ಚಿತ್ರದುರ್ಗಬೆಟ್ಟದ ತುಂಗಭದ್ರೇಶ್ವರ ದೇವಾಲಯದ ಎದುರಿಗೆ ನಿಲ್ಲಿಸಲಾಗಿದ್ದ ಕಂಬ (ಕಂಬದ ದೇವರು – ಕಂಬದ ನರಸಿಂಹಸ್ವಾಮಿ)ವನ್ನು ತೆಗೆದುಕೊಂಡು ಹೋಗಿ ಚಳ್ಳಕೆರೆ ತಾಲ್ಲೂಕು ಬೆಳಗೆರೆಯಲ್ಲಿ ಸ್ಥಾಪಿಸಿದ್ದು.
೬.೪. ಪ್ರೊ. ಎ.ಡಿ. ಕೃಷ್ಣಯ್ಯ ಅವರ ಪ್ರಕಾರ –
ಕ್ರಿ.ಶ.೧೭೬೧ ಮೇ ೯ ಶನಿವಾರ : ಮದ್ದಹನುಮಪ್ಪನೊಡನೆ ಓಬವ್ವೆಯ ವಿವಾಹ.
ಕ್ರಿ.ಶ. ೧೭೬೬ ಅಕ್ಟೋಬರ್ ೧ ಬುಧವಾರ : ಚಿತ್ರದುರ್ಗದಕೋಟೆಯಲ್ಲಿ ಓಬವ್ವೆ ತನ್ನ ಸಾಹಸ ತೋರಿಸಿದ್ದು.
ಕ್ರಿ.ಶ. ೧೭೬೯ ಸೆಪ್ಟೆಂಬರ್ : ಓಬವ್ವೆ ನಿಧನಳಾದದ್ದು.
ಕ್ರಿ.ಶ. ೧೭೭೭ ಸೆಪ್ಟೆಂಬರ್ : ರಾಜಾ ವೀರಮದಕರಿನಾಯಕನು ಚಿತ್ರದುರ್ಗಕೋಟೆಗೆ ಮತ್ತೊಂದು ಸುತ್ತುಕೋಟೆಯನ್ನು ಕಟ್ಟಿಸಿ ಅದರ ಒಂದು ಬಾಗಿಲಿಗೆ ‘ಒನಕೆಕಿಂಡಿಬಾಗಿಲು’ ಎಂದು ಹೆಸರಿಡುವುದರೊಡನೆ ಅದರ ಬಳಿಯಲ್ಲಿ ಓಬವ್ವೆಯ ಪ್ರತಿಮೆಯನ್ನು ಸ್ಥಾಪಿಸಿದ್ದು.
ಕ್ರಿ.ಶ. ೧೭೭೯ : ಚಿತ್ರದುರ್ಗವು ಹೈದರ್ ಅಲಿಯ ವಶವಾದದ್ದು ; ಓಬವ್ವೆಯ ಏಕಮಾತ್ರ ಪುತ್ರ ಆನೆಪ್ಪ (ಹುಚ್ಚಪ್ಪ)ನೊಡನೆ ಉಳಿದ ಕಹಳೆಯವರು ದೊಡ್ಡ ಸಿದ್ದವ್ವನಹಳ್ಳಿಗೆ ಹೋಗಿ ನೆಲೆಸಿದ್ದು.

ಇಲ್ಲಿಯ ವಿವಿಧ ತೇದಿಗಳ ಪೈಕಿ ಕೆಲವನ್ನಾದರೂ ಮರುಪರಿಶೀಲಿಸುವ ಅಗತ್ಯ ತೋರುತ್ತದೆ. ಓಬವ್ವೆ ತನ್ನ ಸಾಹಸ ತೋರಿದುದು ಕ್ರಿ.ಶ. ೧೭೬೬ರಲ್ಲಿ ಎಂಬುದು ಇಲ್ಲಿ ಮುಖ್ಯವಾದುದು. ಆದರೆ ಇದು ಪ್ರಶ್ನಾತೀತ ತೇದಿಯೇನಲ್ಲ. ಇದಕ್ಕೆ ಕಾರಣವಾದರೂ, ಮೇಲೆಯೇ ಗಮನಿಸಿದಂತೆ, ಹೈದರ್ ಅಲಿಯು ಮೊದಲನೇಬಾರಿಗೆ ದುರ್ಗಕ್ಕೆ ಮುತ್ತಿಗೆಹಾಕಿದ್ದು ಕ್ರಿ.ಶ. ೧೭೬೩ ಜನವರಿಯಲ್ಲಿ ; ಹಾಗೂ ಎರಡನೇ ಮುತ್ತಿಗೆಕಾರ್ಯವನ್ನು ಮುಂದುವರೆಸಿದ್ದು ಕ್ರಿ.ಶ. ೧೭೭೪ ಮಾರ್ಚ್‍ನಲ್ಲಿ. ಈ ಎರಡು ಪ್ರಯತ್ನಗಳ ನಡುವಿನ ಕಾಲಾವಧಿಯಲ್ಲಿ, ಅಂದರೆ ಕ್ರಿ.ಶ. ೧೭೬೬ ಅಕ್ಟೋಬರ್ ನಲ್ಲಿ ದುರ್ಗಕ್ಕೆ ಮುತ್ತಿಗೆ ಹಾಕಿದವರಾರು?

ಚಿತ್ರದುರ್ಗದ ಚಲವಾದಿ ಕಟ್ಟೆಮನೆಯ ಯಜಮಾನ ಹಾಗೂ ಆತನ ಅಣ್ಣತಮ್ಮಂದಿರು ಕ್ರಿ.ಶ. ೧೭೬೬ ಸೆಪ್ಟೆಂಬರ್ ತಿಂಗಳಿನಲ್ಲಿ ತಮ್ಮ ದೇವರುಗಳೊಡನೆ ‘ಒನಕೆಕಿಂಡಿ ಓಬವ್ವೆ’ಯ ಜಲವಧಿಉತ್ಸವವನ್ನೂ ಮಾಡಿದುದನ್ನು ಪರಿಗಣಿಸುವುದಾದರೆ, ಓಬವ್ವೆಯ ಸಾಹಸದ ಘಟನೆ ನಡೆದುದು ಕ್ರಿ.ಶ. ೧೭೬೬ರಲ್ಲಿಯೇ ಎಂಬುದನ್ನು ಒಪ್ಪಬೇಕಾಗುತ್ತದೆ. ಆದರೆ ಪ್ರೊ. ಎ.ಡಿ. ಕೃಷ್ಣಯ್ಯನವರು ಓಬವ್ವೆ ನಿಧನಳಾದ ತೇದಿಯನ್ನು ಕ್ರಿ.ಶ. ೧೭೬೯ ಸೆಪ್ಟೆಂಬರ್ ಎಂದು ತೋರಿಸಿರುವುದರಿಂದ, ‘ಒನಕೆಕಿಂಡಿ ಓಬವ್ವೆಯ ಜಲಧಿಉತ್ಸವ’ ದ ತರುವಾಯ ಓಬವ್ವೆಯ ಮರಣ ಉಂಟಾಯಿತೆ? – ಎಂಬ ಪ್ರಶ್ನೆ ಎದುರಾಗುತ್ತದೆ.

‘ನಿರೂಪ ಅಧಿಕಾರ’ ದಾಖಲೆಯು, ರಾಜಾ ವೀರಮದಕರಿನಾಯಕನು ಚಿತ್ರದುರ್ಗಕೋಟೆಗೆ ಮತ್ತೊಂದು ಸುತ್ತುಕೋಟೆಯನ್ನು ಕಟ್ಟಿಸಿ, ಅದರ ಒಂದು ಬಾಗಿಲಿಗೆ ‘ಒನಕೆಕಿಂಡಿಬಾಗಿಲು’ ಎಂದು ಹೆಸರಿಟ್ಟದ್ದು ಕ್ರಿ.ಶ. ೧೭೬೬ ಸೆಪ್ಟೆಂಬರ್ ನಲ್ಲಿ ಎನ್ನುತ್ತದೆ. ಆದರೆ ಇದು ನಡೆದುದು ಕ್ರಿ.ಶ. ೧೭೭೭ ಸೆಪ್ಟೆಂಬರ್ ನಲ್ಲಿ ಎಂದು ತಮ ಪುಸ್ತಕದಲ್ಲಿ ಉಲ್ಲೇಖಿಸುತ್ತಾರೆ ಪ್ರೊ. ಕೃಷ್ಣಯ್ಯ. ಚಿತ್ರದುರ್ಗದ ಚಾರಿತ್ರಿಕ ದಾಖಲೆಗಳು ಹೇಳುವಂತೆ, ರಾಜಾ ವೀರಮದಕರಿನಾಯಕನು ಕೋಟೆಯ ಪಶ್ಚಿಮದಿಕ್ಕಿನ ಒನಕೆಕಿಂಡಿಬಾಗಿಲುಸುತ್ತುಕೋಟೆಯನ್ನು ಮೊದಲಿದ್ದುದನ್ನು ಬಿಚ್ಚಿಸಿ ಕಟ್ಟಿಸಿದ್ದು ಹಾಗೂ ಅದಕ್ಕೆ ಬಾಗಿಲು ಮಾಡಿಸಿ ಜನರು ತಿರುಗಾಡುವ ಹಾಗೆ ಮಾಡಿಸಿದ್ದು ಕ್ರಿ.ಶ. ೧೭೬೪ ಸೆಪ್ಟೆಂಬರ್ ನಲ್ಲಿ. ಇದು ಖಚಿತವಾದ ತೇದಿ ಸಹಾ.

ಅಂತೆಯೇ, ಒನಕೆಕಿಂಡಿಬಾಗಿಲು ಬಳಿಯಲ್ಲಿ ‘ಓಬವ್ವೆಯ ವಿಗ್ರಹ’ ವನ್ನು ಸ್ಥಾಪಿಸಿದ ವಿಚಾರವನ್ನು ಪ್ರೊ. ಕೃಷ್ಣಯ್ಯನವರು ಪ್ರಸ್ತಾಪಿಸಿದರೆ, ‘ಆಕೆಯ ಪ್ರತಿಮೆಯನ್ನು ಆ ಕೋಟೆಕಲ್ಲಿನಲ್ಲಿ ಕೆತ್ತಿಸಿದುದನ್ನು’ ಸೂಚಿಸುತ್ತದೆ ‘ನಿರೂಪ ಅಧಿಕಾರ’ ದಾಖಲೆ. ಈ ಹೇಳಿಕೆಗಳು ‘ವಿಗ್ರಹ’ ಮತ್ತು ‘ಉಬ್ಬುಶಿಲ್ಪ’ ಗಳ ಬಗೆಗೆ ಪ್ರತ್ಯೇಕ ಸೂಚನೆ ಕೊಡುವಂತೆ ತೋರುತ್ತದೆ.

ಇನ್ನು ಚಿತ್ರದುರ್ಗ ಪತನಕ್ಕೆ ಸಂಬಂಧಿಸಿದಂತೆ ವಿಭಿನ್ನ ತೇದಿಗಳು ಕಂಡುಬರುತ್ತವೆ. ಈ ತೇದಿಗಳು ಓಬವ್ವೆಯ ಘಟನೆಗೆ ಸಂಬಂಧಿಸಿರುವುದರಿಂದ, ಇವನ್ನು ನಿರ್ದಿಷ್ಟಪಡಿಸುವುದು ಅಗತ್ಯ. ಈ ವಿಭಿನ್ನ ತೇದಿಗಳು ಇಂತಿವೆ:

 1. ಕ್ರಿ.ಶ. ೧೭೭೯ ಫೆಬ್ರವರಿ ೨೧ ಭಾನುವಾರ
 2. ಕ್ರಿ.ಶ. ೧೭೭೯ ಮಾರ್ಚ್ ೧ ಸೋಮವಾರ

iii. ಕ್ರಿ.ಶ. ೧೭೭೯ ಮಾರ್ಚ್ ೭ ಮಂಗಳವಾರ (ಇದು ತಪ್ಪು ತೇದಿ).

ಈ ಮೇಲ್ಕಂಡ ತೇದಿಗಳಲ್ಲಿ ಎರಡನೆಯದು, ಅಂದರೆ ‘ಕ್ರಿ.ಶ. ೧೭೭೯ ಮಾರ್ಚ್ ೧ ಸೋಮವಾರ’ ಎಂಬುದೇ ಸರಿಯಾದುದೆಂದು ತೋರುತ್ತದೆ. ಚಿತ್ರದುರ್ಗದ ಅಧಿಕೃತ ದಾಖಲೆಗಳೂ ಇದೇ ತೇದಿಯನ್ನು ಸಮರ್ಥಿಸುತ್ತವೆ. ಇನ್ನು ಇಲ್ಲಿಯ ಮೂರನೇ ತೇದಿಯು ತಪ್ಪಾಗಿದೆ. ಇದು ‘ಕ್ರಿ.ಶ. ೧೭೭೯ ಮಾರ್ಚ್ ೯ ಮಂಗಳವಾರ’ ಎಂದಾಗಬೇಕು.

ಒಟ್ಟಿನಲ್ಲಿ, ಓಬವ್ವೆಯ ಘಟನೆಗೆ ಸಂಬಂಧಿಸಿದಂತೆ, ಈ ಮೇಲೆ ಪ್ರಸ್ತಾಪಿಸಲಾಗಿರುವ ಆಕರಗಳು ಒದಗಿಸುವ ತೇದಿಗಳಲ್ಲಿ ಕೆಲವು ನಿರ್ದಿಷ್ಟವಾದುವಲ್ಲವೆಂಬುದು ಸ್ಪಷ್ಟ. ಇಂಥಾ ಕೆಲವು ತೇದಿಗಳ ವಿಶ್ವಸನೀಯತೆ ಕುರಿತು ಸದ್ಯಕ್ಕೆ ಏನನ್ನೂ ಹೇಳಬರುವಂತಿಲ್ಲವೆನ್ನುವುದೇ ಸೂಕ್ತ.

. ಓಬವ್ವೆಯ ಸಮಾಧಿ ಹಾಗೂ ವಿಗ್ರಹಗಳ ವಿಚಾರ

ತನ್ನ ಸಾಹಸಕ್ಕಾಗಿ ದುರ್ಗದ ಅರಸನಿಂದ ಪುರಸ್ಕೃತಳಾದ ಓಬವ್ವೆಯ ಸಹಜಮೃತ್ಯುವಿನ ತರುವಾಯ ಈಕೆಯನ್ನು ಕೋಟೆಯ ತಣ್ಣೀರುದೊಣೆಯ ಬಳಿಯಲ್ಲಿ ಸಮಾಧಿ ಮಾಡಲಾಯಿತೆಂಬ ಹಾಗೂ ಸಮಾಧಿಯ ಮೇಲೆ ಚಿಕ್ಕ ಕಲ್ಲುಮಂಟಪವನ್ನು ನಿರ್ಮಿಸಲಾಯಿತೆಂಬ ಬಗೆಗೆ ‘ಕೈಫಿಯತ್’ ಮತ್ತು ನಾಯಕ ಅರಸರ ವಂಶಜರು ಓಬವ್ವೆಯ ವಂಶದವರಿಗೆ ನೀಡಿದ ರಹದಾರಿಪತ್ರಗಳು ಮೌನವಹಿಸಿವೆ. ಚಿತ್ರದುರ್ಗ ಚರಿತ್ರೆಗೆ ಸಂಬಂಧಿಸಿದ ಇತರ ದಾಖಲೆಗಳಲ್ಲಿಯೂ ಈ ಕುರಿತು ಸೂಚನೆಗಳಿಲ್ಲ.

ಹಾಗೆಯೇ, ಒನಕೆಕಿಂಡಿಬಾಗಿಲು ಬಳಿಯಲ್ಲಿ ಓಬವ್ವೆಯ ವಿಗ್ರಹ/ಪ್ರತಿಮೆಯನ್ನು ಸ್ಥಾಪಿಸಿದ ಬಗೆಗೆ ಚಿತ್ರದುರ್ಗದ ಅಧಿಕೃತ ದಾಖಲೆಗಳಲ್ಲಿ ಯಾವ ಉಲ್ಲೇಖವೂ ಇಲ್ಲ. ಈವರೆಗೆ ಈ ವಿಗ್ರಹ/ಪ್ರತಿಮೆಯ ಕುರುಹನ್ನು ಶೋಧಿಸುವ ಪ್ರಯತ್ನದಲ್ಲಿ ಸಂಶೋಧಕರಾರೂ ಸಫಲರಾದಂತಿಲ್ಲ.

. ಉಪಸಂಹಾರ

ಈ ಮೇಲಿನ ಚಾರಿತ್ರಿಕ ವಿವೇಚನೆಯ ಹಿನ್ನೆಲೆಯೊಡನೆ, ಓಬವ್ವೆಯ ಘಟನೆ ಕುರಿತ ಕೆಲವು ಸಂಗತಿಗಳನ್ನು ಈ ಕೆಳಗಿನಂತೆ ಪ್ರಸ್ತಾಪಿಸಬಹುದು:

 • ಓಬವ್ವೆಯ ಚಾರಿತ್ರಿಕತೆಯನ್ನು ಲಭ್ಯವಿರುವ ‘ಕೈಫಿಯತ್’, ದಾಖಲೆಗಳು, ಇತರ ಉದಂತಗಳು ಹಾಗೂ ಈಕೆಯ           ಪೀಳಿಗೆಯವರು ರಕ್ಷಿಸಿಕೊಂಡು ಬಂದಿರುವ ನಂಬಲರ್ಹ ‘ವಂಶವೃಕ್ಷ’ ಇತ್ಯಾದಿಗಳು, ಓಬವ್ವೆಯು ಚಿತ್ರದುರ್ಗದ ಕೊನೆಯ ಅರಸ ರಾಜಾ ವೀರಮದಕರಿನಾಯಕನ ಆಳ್ವಿಕೆಯಲ್ಲಿ ಜೀವಿಸಿದ್ದಳೆಂದು ಅಧಿಕೃತವಾಗಿ ಸಮರ್ಥಿಸುತ್ತವೆ.
 • ಓಬವ್ವೆಯ ಘಟನೆಯು ಜಾನಪದೀಯ ಸಂಗತಿ-ಸನ್ನಿವೇಶಗಳ ಹಿನ್ನೆಲೆಯಲ್ಲಿ ನಿರೂಪಿಲ್ಪಟ್ಟುದೆಂದು ಮೇಲ್ನೋಟಕ್ಕೆ ತೋರಿಬಂದರೂ ಇದು ತನ್ನ ಹಿನ್ನೆಲೆಯಲ್ಲಿ ಕೆಲವು ಅಧಿಕೃತ ಚಾರಿತ್ರಿಕ ವಾಸ್ತವಾಂಶಗಳನ್ನೂ ಒಳಗೊಂಡಿದೆಯೆಂಬುದನ್ನು ದೃಢೀಕರಿಸಬಹುದು.
 • ಚಿತ್ರದುರ್ಗ ಕೋಟೆಯಲ್ಲಿ ಅಸ್ತಿತ್ವದಲ್ಲಿರುವ ‘ಒನಕೆಕಿಂಡಿ – ಓಬಳಗಂಡಿ – ಓಬವ್ವನಕಿಂಡಿ’ಗಳು ಒಂದೇ ಆಗಿರದೆ ಪ್ರತ್ಯೇಕವಾಗಿರುವಂಥವು; ಇವುಗಳ ನಡುವಣ ವ್ಯತ್ಯಾಸವನ್ನು ತಿಳಿಯದಿರುವ ಕಾರಣಕ್ಕೆ ಸಾಮಾನ್ಯ ಜನರು, ಅಭ್ಯಾಸಿಗಳು ಹಾಗೂ ಕೆಲವು ಸಂಶೋಧಕರು ಗೊಂದಲಕ್ಕೀಡಾಗುವಂತಾಗಿದೆ; ಆದ್ದರಿಂದಲೇ ಓಬವ್ವೆಯ ಸಾಹಸದ ಘಟನೆಯನ್ನು ಚಾರಿತ್ರಿಕನೆಲೆಯಲ್ಲಿ ಅಧಿಕೃತವಾಗಿ ಸಮರ್ಥಿಸಲು ಸಾಧ್ಯವಾಗದೆ ಹೋಯಿತೆನ್ನಬಹುದು.
 • ಓಬವ್ವೆ ಕುರಿತ ಕೆಲವು ಪ್ರಕಟಣೆಗಳಲ್ಲಿ – ಜನಪ್ರಿಯತೆಯ ದೃಷ್ಟಿಯಿಂದಲೊ ಏನೊ ಅನಗತ್ಯ ಕಲ್ಪಿತ ಹಾಗೂ ಉತ್ಪ್ರೇಕ್ಷಿತ ಸನ್ನಿವೇಶಗಳನ್ನು ಸೃಷ್ಟಿಸಿ ಧಾರಾಳವಾಗಿ ಸೇರಿಸಿ ನಿರೂಪಿಸಿರುವುದು; ಹಾಗೂ ಸಂಬಂಧಪಡದ ಅನ್ಯಘಟನೆಗಳಿಗೆ ಹೊಂದಿಸಿ ಬರೆದಿರುವುದು ಕಂಡುಬರುತ್ತದಾದ್ದರಿಂದ, ಈ ವರೆಗೆ ಓಬವ್ವೆಯ ಚಾರಿತ್ರಿಕತೆಯನ್ನು          ನಿಖರವಾಗಿ ಸಮರ್ಥಿಸುವಲ್ಲಿ ಸಂಶೋಧಕರಿಗೆ ಅಡ್ಡಿಯಾದುದು ಇಂಥದೇ ಧೋರಣೇಯೆನ್ನಬಹುದು.
 • ಓಬವ್ವೆಯ ಸಾಹಸದ ಘಟನೆಯು ಚಿತ್ರದುರ್ಗದ ಕೊನೆಯ ಅರಸ ರಾಜಾ ವೀರಮದಕರಿ ನಾಯಕನ ಆಡಳಿತಾವಧಿಯಲ್ಲಿ, ಹೈದರ್ ಅಲಿಯೊಡನೆ ನಡೆದ ಯುದ್ಧ ಸಂದರ್ಭವೊಂದರಲ್ಲಿ, ನಡೆದುದು ವಾಸ್ತವಾದರೂ ಈ ಘಟನೆ ಸಂಭವಿಸಿದ ನಿರ್ದಿಷ್ಟ ತೇದಿಯನ್ನು ಮರುನಿರ್ಧರಿಸುವ ಅಗತ್ಯವಿದೆಯೆನ್ನಬಹುದು.
 • ದಾಖಲೆಗಳು, ಓಬವ್ವೆ ತನ್ನ ಸಾಹಸ ತೋರಿದ ನಂತರವೂ ಸುಮಾರು ಮೂರು ವರ್ಷಗಳವರೆಗೆ (ಕ್ರಿ.ಶ. ೧೭೬೬ ಅಕ್ಟೋಬರ್ ನಿಂದ ೧೭೬೯ ಸೆಪ್ಟೆಂಬರ್ ವರೆಗೆ) ಜೀವಿಸಿದ್ದಳೆಂದು ಸೂಚಿಸುವುದರಿಂದ, ಈಕೆ ತನ್ನ ಸಾಹಸದ ಸಂದರ್ಭದಲ್ಲಿ ಶತ್ರುಗಳಿಂದ ಹತಳಾದಳೆಂಬ ಜನಜನಿತ ಕತೆಯನ್ನು ಲೇಖಕರು ಇನ್ನು ಕೈಬಿಡಬಹುದು.
 • ಓಬವ್ವೆ ತನ್ನ ಸಾಹಸ್ವನ್ನು ತೋರಿದ ಎಡೆಯು ಈಗಾಗಲೇ ಪ್ರಸಿದ್ಧಿ ಪಡೆದಿರುವ ‘ಓ(ವ)ನಕೆಕಿಂಡಿಬಾಗಿಲು’ ಬಳಿಯ           ಕಲ್ಲುಪೊಟರೆಯಾಗಿರದೆ, ಈ ಬಾಗಿಲು ಮತ್ತು ಸಿಹಿನೀರುಹೊಂಡದಬಾಗಿಲುವರೆಗಿನ ಕೋಟೆಸುತ್ತಿನಲ್ಲಿ ಅಳವಡಿಸಲಾಗಿರುವ ಹಾಗೂ ಫಲ್ಗುಣೇಶ್ವರಗುಡಿ ಮುಂದಿನ ಕೋಟೆಯಲ್ಲಿರುವ ದಿಡ್ಡಿಬಾಗಿಲೇ ಆಗಿದೆಯೆನ್ನಬಹುದು.
 • ಫಲ್ಗುಣೇಶ್ವರ ದೇವಸ್ಥಾನದ ಸನಿಹದಲ್ಲಿರುವ ದಿಡ್ಡಿಬಾಗಿಲು ಬಳಿಯೇ ಓಬವ್ವೆಯು ತನ್ನ ಸಾಹಸ ತೋರಿದುದನ್ನು ಸಂಬಂಧಿಸಿದ ದಾಖಲೆಗಳು ಸೂಚಿಸುತ್ತಿದ್ದರೂ ಈಕೆಯ ಪೀಳಿಗೆಯವರು ‘ಒನಕೆಕಿಂಡಿ’ ಯ ಎಡೆಯನ್ನೆ ತಮ್ಮ ಆರಾಧನಾನೆಲೆಯಾಗಿ ಮಾಡಿಕೊಂಡಿರುವ ಔಚಿತ್ಯದ ಬಗೆಗೆ ಪುನರಾಲೋಚಿಸಬಹುದು.
 • ಇಷ್ಟಾದರೂ ಈಗಿನ ನೈಸರ್ಗಿಕ ಒನಕೆಕಿಂಡಿಮಾರ್ಗಕ್ಕೆ ಹೊಂದಿಕೊಂಡ ಕಲ್ಲುಪೊಟರೆಯನ್ನೆ ‘ಓಬವ್ವನ ಕಿಂಡಿಯೆಂದು ಭಾವಿಸಲಾಗಿದ್ದು, ಓಬವ್ವೆಯ ಪೀಳಿಗೆಯವರು ಈ ಎಡೆಯನ್ನು ತಮ್ಮ ಪವಿತ್ರತಾಣವೆಂದು ಗೌರವಿಸುತ್ತಾ        ಬಂದಿರುವುದರಿಂದ, ಜನರೂ ಇದನ್ನೆ ಪ್ರೀತಿ ಪೂರ್ವಕ ಒಪ್ಪಿಕೊಂಡಿರುವುದರಿಂದ, ಚರಿತ್ರಕಾರರಿಗಾಗಲೀ         ಸಂಶೋಧಕರಿಗಾಗಲೀ ಈ ನಂಬಿಕೆಯನ್ನು ನಿರಾಕರಿಸಲಾಗದ ಪರಿಸ್ಥಿತಿ ಉಂಟಾಗಿರುವುದನ್ನು ಒಪ್ಪಬಹುದು.
 • ಓಬವ್ವೆಯ ಘಟನೆಯನ್ನು ಇನ್ನಷ್ಟು ಅಧಿಕೃತವಾಗಿ ಸಮರ್ಥಿಸಲು, ವಿಸ್ತೃತವಾಗಿ ದಾಖಲಿಸಲು ಹಾಗೂ ಚರಿತ್ರೆಯಲ್ಲಿ ಈಕೆಯ ಪಾಲಿನ ನ್ಯಾಯಯುತ ಸ್ಥಾನ – ಮಾನಗಳನ್ನು ಸೂಕ್ತರೀತಿಯಲ್ಲಿ ನಿರ್ಧರಿಸಲು ಪ್ರತ್ಯೇಕ ಸಂಶೋಧನಾತ್ಮಕ ಅಧ್ಯಯನವನ್ನು ಮುಂದುವರೆಸುವುದು ಅಗತ್ಯವೆನ್ನಬೇಕು.

. ಅನುಬಂಧಗಳು

. ಒನಕೆ ಓಬವ್ವಳ ಪೀಳಿಗೆಯವರ ವಿವರವುಳ್ಳ ದಾಖಲೆ

|| ಶ್ರೀ ಉತ್ಸವಾಂಬೆಯೇ ನಮಃ ||

ಶ್ರೀಮನೃಪ ಶಾಲಿವಾಯನ ಶಕವರ್ಷಂಗಳು ೧೨೮೯ ಮತ್ತು ಕ್ರಿ.ಶಕ ವರ್ಷಂಗಳು ೧೩೬೭ರಂದು ಚಿತ್ರನಾಯಕರು ಜಡವಿನಾಯಕರು, ಗಬ್ಬಗುಡಿ ಓಬನಾಯಕರು ಮತ್ತು ಓಬಳನಾಯಕರೊಡನೆ ಹಿಂಬಾಲಿಸಿಕೊಂಡು ಬಂದ ಕಹಳೆಯವರಾದ ಮೂಲಪುರುಷರು ಬಾಲಪ್ಪ ಮತ್ತು ರಂಗಪ್ಪರು ತಮ್ಮ ಪರಿವಾರದೊಡನೆ ರಾಮದುರ್ಗ ಬಿಟ್ಟು ಚಿತ್ರದುರ್ಗಕ್ಕೆ ಬಂದು ನೆಲಸಿ, ಈ ರಾಜರ ಸಂಸ್ಥಾನದ ಸೇವೆಯಲ್ಲಿ ಕಾರ್ಯನಿರುತರಾಗಿದ್ದು ಚಿತ್ರನಾಯಕರ ದೊರೆಗಳ ಆಸ್ಥಾನದ ಸೇವೆಯಲ್ಲಿ ನಿರುತರಾಗಿ ಕೊನೆಯ ದೊರೆ ರಾಜ ವೀರಮದಕರಿನಾಯಕ ಆಳ್ವಿಕೆಯ ಕೊನೆಯವರೆಗೆ ಇವರ ಮಕ್ಕಳು ಮುಮ್ಮೊಕ್ಕಳು ಪರಿಯಂತ ಅನೂಚೀನಾಗಿ, ಅರಮನೆ, ಗುರುಮಠ ದೈವದವರಲ್ಲಿ ಕೋಟೆಯ ಕಾವಲಿನಲ್ಲಿ ಕಾರ್ಯನಿರುತರಾಗಿದ್ದು ಬಿರುದು ಬಹುಮಾನಗಳನ್ನು ಪಡೆದು ಧನಕನಕ ವಸ್ತುಗಳನ್ನು ಗಳಿಸಿದ ಒಂದು ದೊಡ್ಡ ಮನೆತನವಾಗಿದ್ದು ದೊರೆಗಳಿಗೆ ಅಚ್ಚುಮೆಚ್ಚಿನ ಸೇವಕರಾಗಿದ್ದರು. ಇವರಲ್ಲಿ ಮದ್ದಹನುಮಪ್ಪನ ಹೆಂಡತಿಓಬವ್ವ ಒಂದು ಒನಕೆಯಿಂದ ಶತೃಗಳ ಸೈನಿಕರು ಕೋಟೆಯ ಒಳಗೆ ಬರದಂತೆ ತಡೆದು ಕಂಡಿಯ ಪಕ್ಕದಲ್ಲಿದ್ದು ಅನೇಕ ಸೈನಿಕರನ್ನು ಹೊಡೆದುಹಾಕಿ, ದೊರೆಯಿಂದ ಜಾಗೀರು ಬಹುಮಾನ ಪಡೆದು ತನ್ನ ವಂಶಕ್ಕೂ, ಮನೆಗೂ ಕೀರ್ತಿ ತಂದಳು.

ಶಾಲಿವಾಹನ ಶಕವರ್ಷಂಗಳು ೧೭೧೧ ವಿಕಾರಿ ಸಂವತ್ಸರ ಫಾಲ್ಗುಣ ಮಾಸ ಮಂಗಳವಾರದಲ್ಲಿ ಚಿತ್ರದುರ್ಗ ಪಥನವಾಯಿತು. ಇವರ ಬೆಂಬಲಿಗರಾದ ದುರ್ಗದ ಸೈನ್ಯಾಧಿಪತಿಗಳು ಮೈಸೂರು ನವಾಬ ಹೈದರಾಲಿಯ ಸೈನಿಕರೊದನೆ ಹೋರಾಡಿ ಶಿವಪ್ರಸಾದ್ ಧನಪಾಲಸಿಂಗ್, ರಾಮಸಿಂಗ್, ಲಕ್ಷ್ಮಣಸಿಂಗ್ ರಣದಲ್ಲಿ ಮಡಿದರು. ರಾಜವೀರಮದಕರಿ ದೊರೆಗಳು ಕೈಸೆರೆಯಾಳಾಗಿ ಶ್ರೀರಂಗಪಟ್ಟಣಕ್ಕೆ ಹೋದರು. ಅರಮನೆಯ ರಾಜಸ್ತ್ರೀಯರು ಗೋಪಾಲಸ್ವಾಮಿ ಹೊಂಡದಲ್ಲಿ ನಗನಾಣ್ಯಗಳ ಸಹಿತ ಬಿದ್ದರು. ಮೇಲುದುರ್ಗವೂ ಶತೃಗಳಿಂದ ಲೂಟಿಯಾಯಿತು. ಅಂದಿನ ರಾತ್ರಿ ಪಟ್ಟವೇರಿದ ಮಗ ಭರಮಣ್ಣನನ್ನು ಪ್ರತಿ ಮನೆಗೆ ನುಗ್ಗಿ ದೋಚಿಕೊಂಡು ಹೋಗುವರೆಂಬ ಭಯದಿಂದ ಪುರಜನರು ತಲ್ಲಣಿಸಿದರು. ಈ ಭೀತಿಯಿಂದ ಕಹಳೆಯವರು ಮತ್ತು ಎಂಟು ಜನರೆಲ್ಲಾ ಒಂದೆ ಕಡೆ ಸೇರಿ ಗುಪ್ತಾಲೋಚನೆ ಮಾಡಿ ದುರ್ಗ ಬಿಟ್ಟು ಬೇರೆ ಹಳ್ಳಿಗಳಲ್ಲಿರಲು ನಿರ್ಣಯಿಸಿದರು. ಮಾರನೆಯ ದಿವಸ ದುರ್ಗಬಿಟ್ಟು ಮುನ್ನೂರು ಜನ ಚಲವಾದಿಗಳು ಬೇರೆ ಹಳ್ಳಿಗಳಿಗೆ ಹೋಗಿ ನೆಲಸಿದರು. ಕಹಳೆಯವರು ಬಂದ ಕಷ್ಟ ಸೈರಿಸುತ ಒಂದು ವಾರ ಇಲ್ಲಿಯೇ ಇದ್ದು ದಿಕ್ಕಾಪಾಲಾಗಿ ಹೋಗಿದ್ದ ಮದ್ದ ಆನೆಪ್ಪ ಮತ್ತು ರಣಕಹಳೆ ಬಾಲಪ್ಪನವರನ್ನು ಹುಡುಕಲು ಬಾಲಪ್ಪನು ಶತೃಗಳ ಕೈಗೆ ಸಿಕ್ಕು ಕುಂಚಿಗನಹಾಳು ಕಣಿವೆಯಲ್ಲಿ ಮೃತಪಟ್ಟಿದನು. ಆನೆಪ್ಪನಿರುವ ಸ್ಥಳ ಪತ್ತೆ ಹಚ್ಚಿ ಅಲ್ಲಿಗೆ ಹೋಗಿ ಆತನನ್ನು ಕರೆದುಕೊಂಡು ಬಂದು ಎರೆನಾಡು ದೊಡ್ಡಸಿದ್ದವ್ವನಹಳ್ಳಿಯಲ್ಲಿ ವಾಸಮಾಡಲು ಇಷ್ಟಪಟ್ಟವರಾಗಿ ಆ ಊರಿನ ಗೌಡ ನಾಡಿಗರ ಐಯ್ಯಣ್ಣನ ಅಪ್ಪಣೆ ಪಡೆದು, ಸೇಂದಿ ಮಾರುವ ಈಡಿಗರ ಯಲ್ಲಪ್ಪ, ವಸೂರಪ್ಪ ಮತ್ತು ಓಬಳಪ್ಪ, ಇವರ ಸಂಗಡ ಕುಟುಂಬ ಪರಿವಾರದೊಡನೆ, ಗಳಿಸಿದ ನಗನಾಣ್ಯಗಳನ್ನು ಅನೇಕ ಸಾಮಾನುಗಳ ಸಹಿತ ದೊಡ್ಡಸಿದ್ದವ್ವನಹಳ್ಳಿಗೆ ಬಂದು ಸೇರಿದ ತಪಸೀಲು ವಿವರಗಳು –

ಎಂದರೆ ಆ ದಿವಸ ಬೆಳಿಗ್ಗೆ ಎಲ್ಲಾ ದೇವಸ್ಥಾನಗಳಿಗೆ ಹೋಗಿ ದೇವರುಗಳಿಗೆ ಮಹಾಮಮ್ಗಳಾರತಿ ಪೂಜೆಮಾಡಿಸಿ, ಮುಂದೆ ಹೋಗುವ ಪ್ರಯಾಣಕ್ಕೆ ಸುಖವನ್ನು ಬೇಡಿದರು. ಸಾಯಂಕಾಲ ವೀರಮಾತೆ ಒನಕೆ ಓಬವ್ವಳ ಸಮಾದಿಗೆ ಹೋಗಿ ಎಡೆ ಬಿಡಾರದಿಂದ ಪೂಜೆಗೈದು ಪ್ರಸಾದ ಸ್ವೀಕರಿಸಿ ಮನೆಗೆ ಬಂದರು. ಹಗಲು ಅಳಿದು ರಾತ್ರಿ ಬರಲು ದೊಡ್ಡಹನುಮಪ್ಪ, ವಟ್ಟೇಬಾಲಪ್ಪ, ಏಕನಾಥಪ್ಪ, ಮದ್ದಹನುಮಪ್ಪ, ಗಡ್ಡದಹುಚ್ಚಪ್ಪ, ಆನೆಪ್ಪ ಇವರು ತಮ್ಮ ಹೆಂಡರು ಮಕ್ಕಳು ಸಹಿತವಾಗಿ ಹೊರಟು ೪೦೦೦ ನಾಲ್ಕುಸಾವಿರ ವರಹಗಳು, ೧೨೦೦೦ ಹನ್ನೆರಡುಸಾವಿರ ರೂಪಾಯಿಗಳು, ೩೦೦೦೦ ಮುವತ್ತುಸಾವಿರ ಹೊನ್ನುಗಳು, ಚಿನ್ನ ಮತ್ತು ಬೆಳ್ಳಿಯ ಒಡವೆಗಳು ಎರಡು ಕಂಚಿನ ಕಹಳೆಗಳು ೨ ಎರಡು ತಗಡಿನ ಕಹಳೆಗಳು ಯುದ್ಧದ ಕವಚ, ಉಕ್ಕಿನದು ೧ ಒಂದು ಸುರಾಯಿ ಕತ್ತಿಗಳು ೧೬ ಹದಿನಾರು, ಗುರಾಣಿಗಳು ೨ ಎರಡು ಇನ್ನು ಕೆಲವು ಬಿರುದು ಬಹುಮಾನಗಳಿಂದ ಕೂಡಿದ ಕಾಗದಪತ್ರಗಳು ಸಹಿತ ೪ ನಾಲ್ಕು ಕುದುರೆಗಳ ಮೇಲೆ ಹೇರಿಕೊಂಡು ಶಾಲಿವಾಹನ ಶಕ ೧೭೦೦ ಫಾಲ್ಗುಣ ಮಾಸ…ರಂದು ವಾರದಲ್ಲಿ ಕ್ರಿ.ಶ. ೧೭೭೯ ಏಪ್ರಿಲ್ ೫ನೇ ತಾರೀಕ ರಾತ್ರಿ ೨ ಗಂಟೆ ಸಮಯದಲ್ಲಿ ಚಿತ್ರದುರ್ಗ ಬಿಟ್ಟು ಬೆಳಗಿನ ಜಾವ ೪ ಘಂಟೆಗೆ ಕುಟುಂಬ ಪರಿವಾರದೊಡನೆ ದೊಡ್ಡ ಸಿದ್ದವ್ವನಹಳ್ಳಿಗೆ ಬಂದು ಈಡಿಗರ ತೋಟದಲ್ಲಿ ಇಳಿದಿಕೊಂಡು, ಕೆಲವು ದಿವಸವಿಸ್ಸು ಈ ಊರಿನ ಮೂಡಲದಿಕ್ಕಿನಲ್ಲಿರುವ ಕೆಂಗಲುದಿನ್ನೆಯ ಮೇಲಿದ್ದ ಕುರುಬರ ಜೋಗಿನ ಮಲ್ಲಪ್ಪನೆಂಬುವನ ಜಮೀನಿನ ಪಕ್ಕದಲ್ಲಿ ಒಂದು ಗೃಹವನ್ನು, ಬೆನ್ನುಹತ್ತಿ ಬಂದ ದೇವತೆಗೆ ಒಂದು ಸಣ್ಣ ದೇವಾಲಯವನ್ನು ನಿರ್ಮಿಸಿಕೊಂಡು, ನಂತರ ಕಣಿವೆಯಲ್ಲಿ ಮಡಿದ ಬಾಲಪ್ಪನ ಅಂತ್ಯಕರ್ಮಾದಿಗಳನ್ನು ಮಾಡಿದರು. ದರೋಡೆಕಾಲವಾದ್ದರಿಂದ ಮನೆಯ ಸುತ್ತಲು ಏಳುಸುತ್ತಿನ ಕಳ್ಳೆಬೇಲಿಯನ್ನು ಕಟ್ಟಿದರು. ಇವರು ಗಿಡಮೂಲಿಕೆಗಳಿಂದ ತಯಾರಿಸಿದ ಔಷದಗಳನ್ನು ಜನರಿಗೆ ಕೊಟ್ಟು ಕಾಯಿಲೆಗಳನ್ನು ಗುಣಪಡಿಸುವುದು, ಕೈರಾಟೆಗಳಿಂದ ಹತ್ತಿಬೀಜಗಳನ್ನು ಬೇರ್ಪಡಿಸಿ ಹರಳೆಯಿಂದ ದಾರ ತೆಗೆದು ಬಿಳಿಬಟ್ಟೆಗಳನ್ನು ಕೈಮಗ್ಗಗಳಿಂದ ತಯಾರಿಸಿ ಮಾರುವುದು ನಿತ್ಯಜೀವನದ ಕಸುಬಾಗಿತ್ತು. ಹೀಗೆ ಹತ್ತುವರ್ಷಗಳು ಕಳೆಯುವುದರಲ್ಲಿ ವಯಸ್ಸಾಗಿದ್ದ ದೊಡ್ಡಹನುಮಪ್ಪ ಮತ್ತು ವಟ್ಟೇಬಾಲಪನು ಇಬ್ಬರು ಸ್ವರ್ಗಸ್ಥರಾದರು. ಇದರಿಂದ ಮನೆಗೆ ದೊಡ್ಡ ಕುಂದುಕ ಬಂದಿತು. ಉಳಿದವರು ಇವರ ಅಂತ್ಯಕರ್ಮಾದಿಗಳನ್ನು ಮಾಡಿದರು. ಆದರೆ ಅಣ್ಣತಮ್ಮಗಳ ಒಳಜಗಳದಿಂದ ಒಂದೇ ಊರಿನಲ್ಲಿರಲು ಇಷ್ಟಪಡದೆ ಕೆಲವರು ಚಿತ್ರದುರ್ಗದ ಅಕ್ಕಪಕ್ಕ ಹಳ್ಳಿಗಳಲ್ಲಿ ಜೀವನ ಮಾಡಲು ಬಯಸಿ ವಟ್ಟೇಬಾಲಪ್ಪನ ಮಕ್ಕಳು ದ್ಯಾಮವ್ವನಹಳ್ಳಿಗೆ ಹೋಗಿ ಸೇರಿದರು. ಗಡ್ಡದ ಹುಚ್ಚಪ್ಪ ಮತ್ತು ಮಕ್ಕಳು ಪಿಳ್ಳೆಕೆರೆನಹಳ್ಳಿ, ಕಸವನಹಳ್ಳಿ, ಸೊಂಡೆಕೊಳಕ್ಕೆ ಹೋಗಿ ಸೇರಿದರು. ಮದ್ದಹನುಮಪ್ಪನು ದೊಡ್ಡಸಿದ್ದವ್ವನ ಹಳ್ಳಿಯಲ್ಲಿದ್ದು ತನ್ನ ಸಾಂಪ್ರಾದಾಯಕ ವೃತ್ತಿಯಿಂದ ಜೀವಿಸುತ್ತಿರುವಾಗೈ ತನ್ನ ಮಗ ಮದ್ದಆನೆಪ್ಪ (ಹುಚ್ಚಪ್ಪ) ಓಬವ್ವನ ಏಕಪುತ್ರನು ಪ್ರಾಪ್ತವಯಸ್ಸಿಗೆ ಬರಲು, ನಿಡುಗಲುವಾಸಿ ಓಬವ್ವನ ಅಣ್ಣ ಈಟಿಕದುರಪ್ಪನ ಪುತ್ರ ನರಸಿಂಹನ ಮಗಳು ಲಕ್ಷ್ಮಮ್ಮನೊಡನೆ ವಿವಾಹ ಮಾಡಿದನು. ಹುಚ್ಚಪ್ಪನು ತಂದೆಯಂತೆಯೆ ಕಲಿತ ವಿದ್ಯಮಾನದಿಂದ ಹಳ್ಳಿಯ ಜನರಿಗೆ ಬೇಕಾದ ವ್ಯಕ್ತಿಯಾಗಿದ್ದನು. ಇವರಿಗೆ ದೊಡ್ಡ ಹನುಮಪ್ಪ, ಬಾಲಪ್ಪ, ಚಿಕ್ಕಹನುಮಪ್ಪ, ಸಂಜೀವಪ್ಪ ಎಂಬ ನಾಲ್ಕು ಜನ ಗಂಡುಮಕ್ಕಳು ಮತ್ತು ಕೆಂಚಮ್ಮನೆಂಬ ಪುತ್ರಿಯು ಜನಿಸಿದರು. ಈ ಮಕ್ಕಳೆಲ್ಲ ಪ್ರಾಪ್ತ ವಯಸ್ಸಿಗೆ ಬರಲು, ಮದ್ದಹನುಮಪ್ಪನು ತನ್ನ ಸ್ವಾಧೀನದಲ್ಲಿದ್ದ ಗುಪ್ತನಿಧಿಯನ್ನು ತೆಗೆದು ಮಗ ಹುಚ್ಚಪ್ಪನಿಗೆ ಕೊಡಲು, ಹಳೆಯ ಬಂದುಗಳಾದ ನರೇನಾಳು ವೀರಹನುಮಪ್ಪನಿಗೆ ಕೆಂಚಮ್ಮಳನ್ನು ಕೊಟ್ಟು ಲಗ್ನಮಾಡಿದರು. ನಂತರ ಹಿರೇಮಗ ದೊಡ್ಡಹನುಮಪ್ಪನಿಗೆ ನರೇನಾಳು ವೀರಮ್ಮಳನ್ನು ಎರಡನೆ ಮಗ ಬಾಲಪ್ಪನಿಗೆ ಮಳ್ಳೆಲೋರು ಗೋತ್ರದ ಸಂಜೀವಮ್ಮಳಮ್ಮ ಮೂರನೇ ಮಗ ಚಿಕ್ಕಹನುಮಪ್ಪನಿಗೆ ಗುಡಿಬಂಡೆಯ ಮುಚ್ಚಲವರ ಗೋತ್ರದ ಕರಿಯಪ್ಪನ ಮಗಳು ಲಕ್ಷ್ಮಮ್ಮಳನ್ನು ನಾಲ್ಕನೇ ಮಗ ಸಂಜೀವಪ್ಪನಿಗೆ ಮಂದಲಹಳ್ಳಿ ನರಸಪ್ಪನ ಮಗಳು ವೀರಮ್ಮಳನ್ನು ಕಂಡು ವಿವಾಹಗಳನ್ನು ಮಾಡಿದರು. ಎಲ್ಲರೂ ಸುಖವಾಗಿರುವಾಗ್ಯೆ ತನ್ನ ಎಂಬತ್ತನೇ ವರ್ಷದಲ್ಲಿ ಮದ್ದನಹನುಮಪ್ಪನು ಸ್ವರ್ಗಸ್ಥನಾಗಲು, ಹುಚ್ಚಪ್ಪನು ತನ್ನ ವಂಶಜರನ್ನು, ಬಂದುಗಳು ನೆಂಟರಿಷ್ಟರನ್ನು ದೊಡ್ಡಸಿದ್ದವ್ವನಹಳ್ಳಿಗೆ ಬರಮಾಡಿಕೊಂಡು ತನ್ನ ತಂದೆಯ ಅಂತ್ಯಕರ್ಮಾದಿಗಳನ್ನು ವಿಧಿಪೂರ್ವಕವಾಗಿ ಬಹು ವೈಭವದಿಂದ ಮಾಡಿದನು. ಕೆಲವು ದಿವಸ ಹುಚ್ಚಪ್ಪನು ತನ್ನ ಮಕಳೊಡನೆ ಸುಖವಾಗಿ ಬಾಳಿದನು. ಇದು ಈ ವಂಶಜರ ಮುಂದಿನ ಪೀಳಿಗೆಗೆ ಆದರ್ಶ ನಿರೂಪಣೆಯಾಗಿರಲೆಂದು ಹರಸಿ ಶ್ರೀಉತ್ಸವಾಂಬೆಯಲ್ಲಿ ಪ್ರಾರ್ಥನೆ.

ಶ್ರೀ ಶ್ರೀ ಶ್ರೀ ಉತ್ಸವಾಂಬೆಯೇ ನಮಃ.