. ಚಿತ್ರದುರ್ಗ ನಾಯಕ ಅರಸರ ವಂಶಸ್ಥರು ಕೊಟ್ಟಿರುವ ನಿರೂಪ ಅಧಿಕಾರ ಪತ್ರ

ಶ್ರೀ

ರಾಜ ಉತ್ಸವಾಂಬೆ

ಶ್ರೀಮನ್ ಮಹಾನಾಯಕಾಚಾರ್ಯ, ನಾಯಕಶಿರೋಮಣಿ, ಕಾಮಗೇತಿಕಸ್ತೂರಿ, ಹಗಲು ಕಗ್ಗೊಲೆಯಮಾನ್ಯ, ಗಂಡುಗೊಡಲಿಯಸರ್ಜ, ಗಾಧುರಿಮಲೆಹಬ್ಬುಲಿಮಾನ್ಯ, ಚಂದ್ರಗಾವಿಯ ಛಲದಾಂಕ ಭಾರಿನಿಗಳಾಂಕ, ಧೂಳ್ಕೋಟಿವಜ್ಜೀರ ರಾಜಾಧಿರಾಜ, ಶ್ರೀಮತ್ ಸಕಲಗುಣ ಸಂಪನ್ನರಾದ ಚಿತ್ರದುರ್ಗ ಸಂಸ್ಥಾನಂ, ರಾಜ ಬಿಚ್ಚಕತ್ತಿ ದೊಡ್ಡ ಮದಕರಿನಾಯ್ಕರವರ – ಶ್ರೀ ರಾಜ ಜಿ.ಎಸ್. ಪಾಳ್ಯೇಗಾರರು ಪರಶುರಾಮನಾಯ್ಕರವರ ಸನ್ನಿಧಾನದಿಂದ –

ಚಿತ್ರದುರ್ಗ ಸಂಸ್ಥಾನದ ಆಶ್ರಿತರಾದ ವನಕೆಕಂಡಿ ಓಬವ್ವೆಯ ವಂಶೀಕರಾದ ಹಾಲಿ ಚಿತ್ರದುರ್ಗ ತಾಲ್ಕು ದೊಡ್ಡಸಿದ್ದವ್ವನಹಳ್ಳಿಯಲ್ಲಿ ವಾಸವಾಗಿರುವ ಚಲುವಾದಿಮತದ ಶ್ರೀ ಬಿ.ಸಿ. ಶ್ರೀಕಂಠಯ್ಯ, ಶ್ರೀ ಎ.ಡಿ. ನರಸಿಂಹಯ್ಯ, ಶ್ರೀ ಎ.ಡಿ. ರಾಮಯ್ಯ, ಶ್ರೀ ತಿಪ್ಪೇರುದ್ರಯ್ಯ ಮೊದಲಾದವರಿಗೆ ಬರೆಸಿ ಕಳುಹಿಸಿದ ರಹದಾರಿ –

ನೀವು ತಾರೀಖು ೧೫.೨.೧೯೫೪ರಲ್ಲಿ ಚಿತ್ರದುರ್ಗ ಟರ್ವ ಹೊರಪೇಟೆಯ ದುರ್ಗದ ಅರಮನೆಯಲ್ಲಿ ಸಂಸ್ಥಾನದವರ ರೂಬು ರೂಬು ಭೇಟಿಮಾಡಿ ವಪ್ಪಿಸಿದ ಬಿನ್ನವತ್ತಲೆ ಅಹವಾಲುಗಳು ಅಭಿಪ್ರಾಯವಾದವು –

ನಮ್ಮ ಪೂರ್ವೀಕರು ಆದಿಯಲ್ಲೇ ರಾಜಾಧಿರಾಜ, ಮಹಾರಾಜರಾಗಿ ಉತ್ಪನ್ನರಾಗಿ ಶ್ರೀ ಪರಮೇಶ್ವರನ ಅನುಗ್ರಹದಿಂದ ಜಡೆಕಲ್ಲು, ಕರೆಮಲೆ, ರಾಮದುರ್ಗ ಮೊದಲಾದ ಸೀಮೆಗಳಲ್ಲಿ ರಾಜ್ಯಭಾರ ಮಾಡುತ್ತಾ ಇದ್ದು, ಅಲ್ಲಿಯ ರಾಜಕೀಯ ದುರ್ಭಿಕ್ಷ ದೆಶೆಯಿಂದ ಶಾಲೀವಾಹನ ಶಕ ೧೨೮೦ರಲ್ಲಿ ಆ ಸ್ಥಳವನ್ನು ಬಿಟ್ಟು ರಾಜಪರಿವಾರ ಸಮೇತ, ಉಚ್ಚಂಗಿದುರ್ಗಕ್ಕೆ ಬಂದು ರಾಜ್ಯಸ್ಥಾಪನೆ ಮಾಡಿ ರಾಜ್ಯವನ್ನು ವಿಸ್ತರಿಸುತ್ತಾ ಚಿತ್ರದುರ್ಗಕ್ಕೆ ಬಂದು ಶ್ರೀಶಿದ್ಧಮಹಾ ಪುರುಷರ ಆಶೀರ್ವಾದದಿಂದ ರಾಜ್ಯಸ್ಥಾಪನೆ ಮಾಡಿ ರಾಜ್ಯಭಾರ ಮಾಡುತ್ತಿದ್ದಾಗಲೇ ಈ ಸಂಸ್ಥಾನವನ್ನು ಹಿಂಬಾಲಿಸಿಕೊಂಡು ಬಂದ ಅನೇಕ ಕೋಮುವಾರು ಜನಗಳಿಗೆ ಅವರವರ ನಿತ್ಯಕರ್ಮಗಳನ್ನು, ಹವ್ಯಕವ್ಯಗಳನ್ನು ತೀರಿಸಿಕೊಳ್ಳಲು ಗುರುಮಠಗಳನ್ನು, ದೇವಾಲಯಗಳನ್ನು, ಕಟ್ಟೆಮನೆಗಳಲ್ಲಿಯೂ, ಗುಡಿಕಟ್ಟು ಮೊದಲಾದವುಗಳಲ್ಲಿಯೂ ನಮ್ಮ ಹಿರಿಯರಿಂದ ಪಡೆದಿರುವ ಸನ್ನದು ನಿರೂಪ ಮೊದಲಾದ ಆಧಾರದ ಮೇಲೆ ಆಯಾಯ ವಂಶೀಕರಿಗೆ ಆಯಾಯ ಸ್ಥಳದಲ್ಲಿ ಅಧಿಕಾರ ನಡೆಸಲು ಈಗಲೂ ಅವಕಾಶವಿರುತ್ತದೆ. ವಿನಃ ಅನ್ಯಥಾ ಅವಕಾಶವಿಲ್ಲ.

ದಕ್ಷಿಣ ಹಿಂದೂಸ್ತಾನದಲ್ಲಿ ಚಿತ್ರದುರ್ಗ ಸಂಸ್ಥಾನವೇ ಮೊದಲನೆಯದಾಗಿ ಪ್ರಸಿದ್ಧವಾಗಿದ್ದು, ಕ್ರಿಷ್ಣಾನದಿಯವರೆಗೆ ಖ್ಯಾತಿಯನ್ನು ಹೊಂದಿತ್ತು. ಮತ್ತೋಡು, ಹರಪನಹಳ್ಳಿ, ರತ್ನಗಿರಿ, ನಿಡಗಲ್ಲು, ಜರಿಮಲೆ, ಗುಡಿಕೋಟೆ, ಮೊದಲಾದ ಸಂಸ್ಥಾನಗಳು ಚಿತ್ರದುರ್ಗ ಸಂಸ್ಥಾನಕ್ಕೆ ಆಶ್ರಿತ ಸಂಸ್ಥಾನಗಳಾಗಿದ್ದು ಕಪ್ಪ ಕಾಣಿಕೆ ವಪ್ಪಿಸುತ್ತಿದ್ದರು. ಮತ್ತು “ಮಲೆನಾಡಿನವರ ಗಂಡ, ಎಪ್ಪತ್ತಾರು ಜನ ಪಾಳೇಗಾರರ ಮಿಂಡ, ಭಾರಿನಿಗಳಾಂಕ ವೀರ ಮದಕರಿಭೂಪ” ಎಂದು ಹೊಗಳಿಸಿಕೊಂಡಿದ್ದರು. ಈ ಚಿತ್ರದುರ್ಗವನ್ನು ಆಳಿದ ಎರಡನೆಯ ಧೊರೆ ಓಬಣ್ಣನಾಯ್ಕರು ಬಿಚ್ಚುಫಿರಂಗಿ ಮೊದಲಾದವುಗಳನ್ನು ಹಿಡಿಸಿಕೊಂಡು ಸ್ವತಂತ್ರ ರಾಜರಾಗಿ ಚಿತ್ರದುರ್ಗ ಸಣ್ಸ್ಥಾನದ ದೌಲತ್ತು ನಡೆಸಿದವರಾಗಿರುತ್ತಾರೆ. ದೆಹಲಿ ಬಾದಷಹನ ಸನ್ನಿಧಾನದಿಂದಲೂ, ಸಂಸ್ಥಾನೀಕರಿಂದಲೂ, ಗುರುಮಠಗಳಿಂದಲೂ, ಸರ್ಕಾರದಿಂದಲೂ, ಚರಿತ್ರೆ ಮೊದಲಾದವುಗಳಲ್ಲಿಯೂ ಶಿಲಾಶಾಸನಗಳಲ್ಲಿಯೂ ಚಿತ್ರದುರ್ಗ ಸಂಸ್ಥಾನವೆಂದು ಪ್ರಸಿದ್ಧಿಪಡಿಸಿದ್ದಾರೆ. ಇಂಥಾ ಸಾವಿರಾರು ದಾಖಲೆಗಳು ನಮ್ಮಲ್ಲಿವೆ. ಅಪೇಕ್ಷೆ ಉಳ್ಳವರು ಬಂದು ನೋಡಬಹುದು. ಬೆಂಗಳೂರಿನಲ್ಲಿರುವ ಕರ್ನಾಟಕ ಸಾಹಿತ್ಯ ಪರಿಷತ್ತಿನವರು ತಮ್ಮ ‘ಕನ್ನಡನುಡಿ’ ಪತ್ರಿಕೆಯಲ್ಲಿ ೧೯೫೧ ಮತ್ತು ೧೯೫೨ನೇ ಸಾಲಿನ ಮಾಸಪತ್ರಿಕೆಯಲ್ಲಿ ಅಸಲು ಪತ್ರಗಳ, ಕೆಲವು ಕಾಗದಗಳ ನಕಲುಗಳನ್ನು ಪ್ರಚುರಪಡಿಸಿದ್ದಾರೆ. ಹೀಗಿರುವಲ್ಲಿ ಅಜ್ಞಾನಿಯಾದ, ವಿವೇಚನೆಯಿಲ್ಲದ, ಯಾವನೋ ಓರ್ವನ ಅಲ್ಪನು ಅ<ದು ಹೇಳಿದ ಮಾತ್ರಕ್ಕೆ ಚಿತ್ರದುರ್ಗ ಸಂಸ್ಥಾನ ಅಲ್ಲವಾಗಲಾರದು. ಆಧಾರಭೂತವಾದ ವಂಶಪಾರಂಪರ್ಯ ಅನೇಕ ದಾಖಲೆಗಳಿರುವುದರಿಂದ ಚಿತ್ರದುರ್ಗ ಸಂಸ್ಥಾನವನ್ನು ಅಲ್ಲಗಳೆಯಲು ಯಾರಿಂದಲೂ ಸಾಧ್ಯವಿಲ್ಲ. “ಹಸುವಿನ ಕೆಚ್ಚಲಿನಲ್ಲಿ ಹುಣ್ಣೆಯು ಅಮೃತವನ್ನು ಗ್ರಹಿಸಿದೆ ರಕ್ತವನ್ನು ಗ್ರಹಿಸುತ್ತದೆ.” ಇದರಂತೆ ಸಂಸ್ಥಾನವನ್ನು ನಿರಾಕರಿಸುವುದಾದರೆ ಕೈಗೊಂಡು ಅವರ ದುರಹಂಕಾರವನ್ನು ದೂರಮಾಡಲಾಗುತ್ತೆ. ಚಿತ್ರದುರ್ಗ ಸಂಸ್ಥಾನಾಮಳೆಯಲ್ಲಿ ಆ ಸಂಸ್ಥಾನದ ಧೊರೆಗಳಿಂದ ಪಡೆದುಕೊಂಡಿರುವ ಲಾಂಚನಗಳಿಂದ ಈಗಲೂ ಜೀವಿಸುತ್ತಾಯಿದ್ದು ಅಂಥ ಸಂಸ್ಥಾನವೇ ಇಲ್ಲವೆಂದು ಹೇಳುವುದು ಈ ಸಂಸ್ಥಾನಕ್ಕೆ ಸೇರದವರಲ್ಲವಾಗಿದ್ದು ಯಾವುದೋ ಕಾರಣದಿಂದ ತಾನೊಬ್ಬನೆಂದು ಹೇಳುವ ಮನುಷ್ಯನಾಗಿರಬಹುದಾಗಿ ತೋರುತ್ತದೆ. ಚಿತ್ರದುರ್ಗ ಸಂಸ್ಥಾನಾ ಮಳೆಯಲ್ಲಿ ಇರತಕ್ಕವರಿಗೆ ಲಾಂಚನ ಮೊದಲಾದನ್ನು ಕೊಡಲು ಈ ಸಂಸ್ಥಾನ ಅಲ್ಲದೆ ಬೇರೆ ಯಾವ ಸಂಸ್ಥಾನಕ್ಕೂ ಹಕ್ಕಿರುವುದಿಲ್ಲ.

ಚಿತ್ರದುರ್ಗ ಸಂಸ್ಥಾನಾಮಳೆ, ಇರುವ ಚಲುವಾದಿ ಜನಾಂಗದವರಿಗೆ ಲಾಂಚನ ಮೊದಲಾದುವನ್ನೂ ಮೂಲಪುರುಷ ಮತ್ತಿ ತಿಮ್ಮಣ್ಣನಾಯ್ಕರು ಇವರ ಮೊಮ್ಮಕ್ಕಳು ೩ನೇ ಧೊರೆ ರಾಜ ಕಸ್ತೂರಿರಂಗಪ್ಪನಾಯ್ಕರು ಈಶ್ವರ ಸಂವತ್ಸರದಲ್ಲಿಯೂ, ರಾಜ ಬಿಚ್ಚುಕತ್ತಿ ಭರಮಪ್ಪನಾಯ್ಕರು ಶಾಲೀವಾಹನ ಶಕ ೧೬೪೬ನೇ ಪ್ರಮಾದೀಚ ಸಂವತ್ಸರ ಚೈತ್ರ ಶುದ್ಧ ಚತುರ್ದಸಿಯಲ್ಲೂ, ರಾಜ ಬಿಚ್ಚುಕತ್ತಿ ಮದಕರಿನಾಯ್ಕರು ಧೊರೆಗಳವರು ಪಾರ್ಥಿವ ಸಂವತ್ಸರದಲ್ಲೂ ಚೈತ್ರ ಬಹುಳ ದ್ವಾದಸಿ; ಮತ್ತು ಜಯ ಸಂವತ್ಸರದಲ್ಲೂ ಸಹ ಚಲುವಾದಿ ಜನಗಳು ಆಚರಿಸಬೇಕಾದ ಕಾರ್ಯಕಲಾಪಗಳು, ಗುಡಿಕಟ್ಟಿನ ಗ್ರಾಮ ಮೊದಲಾದವುಗಳನ್ನು, ನಿಮ್ಮ ಅಣ್ಣ ತಮ್ಮಗಳಿಗೆ ಹಂಚಿಕೆ ಮಾಡಿಕೊಟ್ಟಿರ್ವ ಸನ್ನದು ಮೊದಲಾದ ದಾಖಲೆಗಳಿಂದಲೂ, ರಾಜ್ಯಭಾರದಲ್ಲಿ ರಾಜ ಬಿಚ್ಚುಕತ್ತಿ ಮದಕರಿನಾಯ್ಕರವರ ಕಾಲದಲ್ಲಿ ನಿಮ್ಮ ವಂಶದ ಮದ್ದಲೆ ಹನುಮಯ್ಯನ ಹೆಂಡತಿ ಓಬವ್ವೆಯು; ಶತೃಗಳು ದುರ್ಗದ ಕೋಟೆಯೊಳಗೆ ಪ್ರವೇಶಿಸಲು ಅವಕಾಶಕೊಡದೆ ತನ್ನ ‘ವನಕೆ’ ಕಟ್ಟಿಗೆಯಿಂದ ಸಾವಿರಾರು ಶತೃತಲೆಗಳನ್ನು ಸಂಹಾರಮಾಡಿ ಮೆಹನತ್ತು, ಧೈರ್ಯ ಸಾಹಸಕೃತ್ಯಕ್ಕಾಗಿ ದುರ್ಗದ ಧೊರೆಗಳು ೧೬೮೮ಎಅ ವ್ಯಯ ಸಂವತ್ಸರ ಭಾದ್ರಪದ ಮಾಸದಲ್ಲಿ ಆಕೆಯ ಹೆಸರಿನಲ್ಲಿ ವನಿಕೆಕಂಡಿಬಾಗಿಲುಸುತ್ತಿನ ಕೋಟೆ ಕಟ್ಟಿಸಿ, ಆಕೆ ಪ್ರತಿಮೆಯನ್ನು ಆ ಕೋಟೆಕಲ್ಲಿನಲ್ಲಿ ಕೆತ್ತಿಸಿದ್ದರಿಂದ ಅದೇ ಸಂವತ್ಸರ ಭಾದ್ರಪದ ಬಹುಳ ಪಂಚಮಿ ದಿವಸ ಚಿತ್ರದುರ್ಗದ ಕಟ್ಟಿಮೆನೆ ಯಜಮಾನ ದೊಡ್ಡಹನುಮಪ್ಪನ ಮಗ ಏಕನಾಥಪ್ಪ – ವಗೈರ ಅಣ್ಣತಮ್ಮಂದಿರು ಮೊದಲಾದವರು ಶ್ರೀ ಕುದರೆ ನರಸಿಂಹಸ್ವಾಮಿದೇವರು ಶ್ರೀ ಲಕ್ಷ್ಮೀದೇವರು ಶ್ರೀ ವನಕೆಕಂಡಿ ಓಬವ್ವೆ – ಇವರುಗಳ ಜಲದಿಉತ್ಸವ ವಗೈರ ಮಾಡಿರುವಂತೆ ಈ ಸಂಸ್ಥಾನ ದಲ್ಲಿರುವ ದಾಖಲೆಗಳಿಂದ ಕಂಡುಬರುತ್ತೆ. ಈ ಚಲುವಾದಿ ಅಣ್ಣತಮ್ಮಂದಿರು ರಾಜ ಜಂಪಳ್ಳನಾಯ್ಕರವರಲ್ಲಿ ಪ್ರಭಾವ ಸಂವತ್ಸರ ಚೈತ್ರ ಬಹುಳ ದಶಮಿಯಲ್ಲು ೭.೪.೧೮೬೬ರಲ್ಲು ಮತ್ತು ರಾಜ ವೀರತಿಮ್ಮಣ್ಣನಾಯ್ಕರವರಲ್ಲೂ ಸಹ ಮೇಲುದುರ್ಗದ ಕೊಂಡಿಕಾರ ಹನುಮಪ್ಪ, ಸೊಂಡೆಕೊಳದ ಹನುಮಪ್ಪ ಸಹ ತಮ್ಮ ತಮ್ಮ ಹಕ್ಕುದಾರಿಗಳನ್ನು ಇತ್ಯರ್ಥಮಾಡಿಕೊಂಡು ನಮ್ಮ ಸಂಸ್ಥಾನಕ್ಕೆ ಫಿರ್ಯಾದು ಮಾಡಿಕೊಂಡುಯಿದ್ದರ ಮೇಲೆ ನಮ್ಮ ತಾತಂದಿರಾದ ಮೇಲ್ಕಂಡ ಅವರ ಕೈವಾಡದವರು ಮೊದಲಾದವರಿಂದ ಮಹಜರುಗಳು ಮಾಡಿಕೊಂಡು ಫೈಸಲಾತಿಯನ್ನು ಕೊಟ್ಟಿರುತ್ತಾರೆ.

ನಮ್ಮ ಮೂಲಪುರುಷರು ನಮ್ಮ ಸಂಸ್ಥಾನದ ಹೆಡ್‍ಕ್ವಾರ್ಟರಿನಲ್ಲಿ ಅನೇಕ ಮೋಮುವಾರು ಗುರುಮಠಗಳು, ದೇವಾಲಯಗಳು, ಕಟ್ಟಿಮನೆಗಳು, ಗುಡಿಕಟ್ಟು ಮೊದಲಾದವುಗಳನ್ನು ನಿರ್ಮಿಸಿಕೊಟ್ಟಿರುವುದು ಸಾಕ್ಷಿಭೂತವಾಗಿರುತ್ತೆ. ಆರ್ಷೆಯಿಂದ ನಮ್ಮ ಹಿರಿಯರನ್ನು ಹಿಂಬಾಲಿಸಿಕೊಂಡು ಬಂದು ನಮ್ಮನ್ನು ಆಶ್ರಯಿಸಿಕೊಂಡು ನಮ್ಮ ಗುರುಮನೆ, ಅರಮನೆ, ದೇವಾಲಯಗಳಲ್ಲಿಯೂ, ದೈವದವರಲ್ಲಿಯೂ ಸೇವೆಮಾಡಿಕೊಂಡು, ನಮ್ಮ ಸಂಸ್ಥಾನದ ಬಿರುದಿನ ಕಹಳೆಯವರ ವಂಶೀಕರಾಗಿರುತ್ತಾರೆ. ಹೀಗಿರುವಲ್ಲಿ ಚಿತ್ರದುರ್ಗ ಸಂಸ್ಥಾನದಲ್ಲಿ ಚಲುವಾದಿಯವರ ಕಟ್ಟೆಮನೆ ಇಲ್ಲವೆಂದು ಹೇಳುವುದು ಸುಲಭಸಾಧ್ಯವಲ್ಲ. ಮೇಲ್ಕಂಡ ದಾಖಲಾತಿಗಳಿಂದಲೂ, ಕಟ್ಟೆಮನೆಗೆ ಸಂಭಂದಪಟ್ಟ ದೇವಾಲಯಗಳು ಮೊದಲಾದ್ದು ಹಾಲಿ ದುರ್ಗದಲ್ಲಿರುವುದರಿಂದಲೂ ಚಿತ್ರದುರ್ಗದ ಕಟ್ಟೇಮನೆ ಉಂಟೆಂದು ಸ್ಪಷ್ಟಪಟ್ಟಿರುತ್ತದೆ. ಈ ಚಲವಾದಿ ಜನಗಳ ಅಣ್ಣತಮ್ಮಗಳಲ್ಲಿ ಹಕ್ಕುದಾರಿಕೆ ವಿಚಾರದಲ್ಲಿ ಕಲಹಗಳುಂಟಾಗಿ ದಿನೇ ದಿನೇ ಹೀನಸ್ಥಿತಿಗೆ ಬಂದು ದಿಕ್ಕಾಪಾಲಾಗಿ ಹೋಗಿ ಅವರು ವಿರಳವಾಗಿದ್ದು ಕಟ್ಟೆಮನೆಯ ಕಾರ್ಯಕಲಾಪಗಳನ್ನು ದೀರ್ಘಕಾಲ ಬಿಡುವುದರಿಂದ ಆ ಕಟ್ಟೆಮನೆಯು ಕ್ಷೀಣಸ್ತಿತಿಗೆ ಕಾರಣ ವಾಗಿರುತ್ತೆ ವಿನಃ ಕಟ್ಟೆಮನೆ ಅಲ್ಲವೆಂದು ಹೇಳುವುದು ಆಧಾರವಿಲ್ಲ. ಚಿತ್ರದುರ್ಗ ಸಂಸ್ಥಾನವು ಶಾಲೀವಾಹನ ಶಕ ೧೭೦೦ ವಿಳಂಬಿ ಸಂವತ್ಸರ ಫಾಲ್ಗುಣ ಶುದ್ಧ ಪಂಚಮಿಯಲ್ಲೂ ನಮ್ಮ ಹಿರಿಯರ ಕೈತಪ್ಪಿದ ಲಾಗಾಯ್ತು ತಹಲ್‍ವರಿವಿಗೆ ಅಂದರೆ ೧೯೫೨ರವರೆವಿಗೆ ಚಿತ್ರದುರ್ಗ ಹೆಡ್‍ಕ್ವಾರ್ಟರ್ ನಲ್ಲಿ ನಾವುಗಳು ಇಲ್ಲದೆ ನಮ್ಮ ಆಚಾರ ಬಾಬಿನಲ್ಲಿ ಅದೇ ಒಂದು ಕಸುಬಾಗಿ ಇತರ ಸಂಸ್ಥಾನೀಕರಂತೆ ವರ್ತಿಸದೇ ಇರುವ ಕಾರಣ ಈಚೆಗೆ ಹಲವಾರು ಜನಗಳಿಗೆ ಸಂಸ್ಥಾನವೆಂದು ಗೊತ್ತಿಲ್ಲದೆ ಹೋಗಿಬರಬಹುದು. ನಮ್ಮ ಸಂಸ್ಥಾನಕ್ಕೆ ಸೇರಿದ ಗ್ರಾಮಾಂತರಗಳಲ್ಲಿ ನಾಯ್ಕನಹಟ್ಟಿಯಲ್ಲಿ ಮಲ್ಲಪ್ಪನಾಯ್ಕರು ಬಂದು ಪ್ರವೇಶ ಮಾಡಿದಾಗ್ಯೆ ನಮ್ಮ ತಾತಂದಿರು ಕೂಡ್ಳೆ ಹಿಮ್ಮೆಟ್ಟಿಸಿದ್ದಾರೆ. ೧೯೪೮ರಲ್ಲಿ ರತ್ನಗಿರಿ ಸಂ|| ರಂಗಪ್ಪರಾಜರು ವೇಣುಕಲ್ ಗುಡ್ಡ ಮೊದಲಾದ ಗ್ರಾಮಗಳಲ್ಲಿ ಆಚಾರ ಕಾನಿಕೆ ವಸೂಲು ಮಾಡಿಸಲು ಬಂದಾಗ್ಯೆ ಹಕ್ಕುದಾರರಲ್ಲವೆಂದು ಹಿಂದಕ್ಕೆ ಕಳುಹಿಸಿರುತ್ತೆ. ೧೪.೫.೫೧ ರಿಂದ ೧೭.೫.೫೧ರ ವರೆಗೆ ಹರ್ತಿಕೋಟೆ ಅಕ್ಕಮಾರೀದೇವಾಲಯ ಜಲಧಿಯ್ತ್ಸವ ಕಾಲದಲ್ಲಿ ರತ್ನಗಿರಿ ಸಂಸ್ಥಾನದವರಿಗೆ ಅಲ್ಲಿ ಹಕ್ಕಿಲ್ಲವೆಂದು ಆ ಕಾರ್ಯಕಲಾಪಗಳಿಗೆ ಆ ಸಂಸ್ಥಾನದವರನ್ನು ಅಲ್ಲಿಗೆ ಸೇರಲು ಅವಕಾಶ ಕೊಡದೆ ತಡದು, ಆ ಜಲಧಿ ಪೂಜಾಕಾಲದಲ್ಲಿ ನಮ್ಮ ಶಿಷ್ಯವರ್ಗದವರ ಕುಮ್ಮಕ್ಕಿನಿಂದ ಚಿತ್ರದುರ್ಗ ಸಂಸ್ಥಾನದ ವೀಳ್ಯವನ್ನು ಎತ್ತಿಸಿರುತ್ತೇವೆ. ಈ ವಿಚಾರ ಅಲ್ಲಿ ಸೇರಿದವರಿಗೆಲ್ಲಾ ಗೊತ್ತಿದ್ದ ಸಂಗತಿಯಾಗಿದೆ. ಯಾರು ಯಾವ ಸಂಸ್ಥಾನವನ್ನು ಆಳಿದರೋ ಆ ಸಂಸ್ಥಾನದಲ್ಲಿ ನಡೆಯುವ ದೇವತಾಕಾರ್ಯ ಮೊದಲಾದವುಗಳಲ್ಲಿ ಮಾನ ಮರ್ಯಾದೆಗಳು ವೀಳ್ಯ ಮೊದಲಾದವುಗಳನ್ನು ಆ ಸಂಸ್ಥಾನಕ್ಕೆ ಸಲ್ಲತಕ್ಕದೆಂದು ಸಂಸ್ಥಾನೀಕರೆಲ್ಲಾ ಸೇರಿ ವಪ್ಪಿ ಬರೆದುಕೊಟ್ಟಿರುವ ದಾಖಲಾತಿಗಳು ಇವೆ. ಮೇಲ್ಕಂಡ ಕಾರಣದಿಂದ ಚಿತ್ರದುರ್ಗ ಸಂಸ್ಥಾನಕ್ಕೂ ಆನೆಗೊಂದಿ ಸಂಸ್ಥಾನಕ್ಕೂ ಸಂಬಂಧವಿಲ್ಲ. ಚಿತ್ರದುರ್ಗ ಮಳೆಯಲ್ಲಿ ಚಿತ್ರದುರ್ಗ ಸಂಸ್ಥಾನದ ವೀಳ್ಯ ಎತ್ತಬೇಕಾದ್ದು ಪ್ರತಿಯೊಬ್ಬರ ಕರ್ತವ್ಯವಾಗಿರುತ್ತೆ. ಮಂದಲೋರು ಆದಿಯಿಂದಲೂ ಈ ಚಿತ್ರದುರ್ಗದ ಅರಮನೆ, ಗುರುಮನೆ ದೇವಾಲಯಗಳಲ್ಲೂ ಸೇವೆ ಮಾಡುತ್ತಿರುವುದರಿಂದಲೂ ಈ ಚಿತ್ರದುರ್ಗ ಸಂಸ್ಥಾನದ ವೀಳ್ಯ ಮಂದಲೋರಿಗೆ ಕೊಡಬೇಕು ಮತ್ತು ಮಳ್ಳೆಲೋನು ವೀಳ್ಯ ಪಡೆಯಲು ಹಕ್ಕುದಾರನಾಗಿದ್ದಾನೆ. ಎನುಮಲೋನು ತಕರಾರು ಮಾಡಿದಾಗ್ಯೂ ಮಂದಲೋನು ವೀಳ್ಯ ಬಿಡಕೂಡದು ಎಂದು ಮೂಲಪುರುಷ ಧೊರೆ ಚಿತ್ರನಾಯ್ಕರು – ತಿಮ್ಮಣ್ಣನಾಯ್ಕರು ತೀರ್ಮಾನ ಮಾಡಿರುವುದಾಗಿ ದಾಖಲೆಗಳಿಂದ ಕಂಡುಬರುತ್ತೆ. ನೀವು ಬಿಡುತ್ತಿರುವುದರಿಂದ ನಿಮಗೆ ಸಲ್ಲತಕ್ಕದಲ್ಲವೆಂದು ಹೇಳಿರಬಹುದು.

ನಿಮ್ಮ ವಂಶವು ಅನಾದಿಯಿಂದ ಈ ಸಂಸ್ಥಾನವನ್ನು ಅನುಮೋದಿಸಿಕೊಂಡು ಸಂಸ್ಥಾನದ ಸೇವೆಯಲ್ಲಿ ನಿರತರಾಗಿ ಇದ್ದ ಕಾರಣ ಆರ್ಷೆಯದಿಂದ ನಡೆದು ಬಂದಿರುವ ಮಾಮೂಲು ಪದ್ಧತಿಯಂತೆ ಗುರುಮಠ, ದೇವಾಲಯ, ದೈವದವರ ಸೇವೆ ಮಾಡುತ್ತಾ ಅಭಿವೃದ್ಧಿಯಾಗಿ ಸದ್ಗುಣ ಸಂಪನ್ನರಾಗಿರಬೇಕು. ಈಗಲೂ ಚಿತ್ರದುರ್ಗದಲ್ಲಿರುವ ಚಲುವಾದಿ ದೇವರ ಕಟ್ಟೆಮನೆಯನ್ನು ಜೀರ್ಣೊದ್ದಾರ ಮಾಡ್ಸಿಕೊಂಡು ನಿಮ್ಮ ದೇವತಾಕಾರ್ಯಗಳು ಮೊದಲಾದವುಗಳನ್ನು ನೀವುಗಳು ಮಾಮೂಲು ಪದ್ಧತಿಯನ್ನು ಅನುಸರಿಸಿ ಸುಲಲಿತವಾದ ಸಂಪ್ರದಾಯ ಶೀಲರಾಗಿ ಅಭಿವೃದ್ಧಿ ಮಾಡಿಕೊಂಡಿರಲು ಈ ಮೂಲ್ಕ ನಿಮ್ಮಗಳಿಗೆ ನಿರೂಪ ಅಧಿಕಾರ ಕೊಟ್ಟಿರುತ್ತದೆ.

ಚಿತ್ರದುರ್ಗ ಟವನ್ ಹೊರಪೇಟೆ
‘ದುರ್ಗದ ಅರಮನೆ’
ತಾ|| ೨೫ – ೫ – ೧೯೫೪
R.T.No.675, IR.15.2.54,
21.5.54

. ಒನಕೆ ಓಬವ್ವಳ ಉತ್ಸವದ ಆಹ್ವಾನ ಪತ್ರಿಕೆ (೧೯೬೨)

|| ಶುಭಮಸ್ತು ||

ವನಕೆಕಿಂಡಿ ಓಬವ್ವನ ಉತ್ಸವಾಹ್ವಾನ ಪತ್ರಿಕಾ ಮಹನೀಯರೇ,

ಚಿನ್ಮೂಲಾದ್ರಿಗಿರಿ, ಚಿತ್ರದುರ್ಗದ ರಾಜ ವೀರಮದಕರಿನಾಯಕರ ಆಳ್ವಿಕೆಯಲ್ಲಿ, ಹೈದರನು ಚಿತ್ರದುರ್ಗವನ್ನು ಮುತ್ತಿದಂತೆ, ಐತಿಹಾಸಿಕ ವಿಷಯ ಎಲ್ಲಾರಿಗೂ ತಿಳಿದಮ್ತಹ ವಿಷಯವೇ ಸರಿ. ಆ ಸಮಯದಲ್ಲಿ ಚಿತ್ರದುರ್ಗವನ್ನು ಪರಕೀಯರು ಪ್ರವೇಶಿಸದಂತೆ ತಾನು ಸ್ತ್ರೀಯಾದರೂ ತನ್ನ ಪ್ರಾಣದ ಮೇಲಿನ ಹಂಗನ್ನು ಸಹ ತೊರೆದು ದುರ್ಗವನ್ನು ರಕ್ಷಿಸಿದ ವೀರಮಹಿಳೆ ಒಣಕೆಕಿಂಡಿ ಓಬವ್ವ ಈ ಮಹಿಳೆಯನ್ನು ನೆನೆಸಿಕೊಂಡರೆ ಈಗಲೂ ರೋಮಾಂಚನವಾಗುತ್ತದೆ. ಇಂತಹ ವೀರಮಾತೆಯ ಉತ್ಸವಗಳು, ಬಹಳ ದಿನದಿಂದ ನಿಂತಿರುತ್ತವೆ.

ಈಗ ಇಲ್ಲಿನ ಪುರಪ್ರಮುಖರುಗಳು ಮತ್ತು ಭಕ್ತಾದಿಗಳು ಪುನಃ ಈ ಕಾರ್ಯಕ್ರಮಗಳನ್ನು ಪ್ರಾರಂಭಿಸಬೇಕೆಂದು ಇಷ್ಟಪಟ್ಟಿರುತ್ತಾರೆ. ಆದುದರಿಂದ ನಾವುಗಳು ಓಬವ್ವನ ವಂಶಸ್ಥರು ಕೆಲಸವನ್ನು ಕೈಗೊಂಡಿರುತ್ತೇವೆ. ಆದುದರಿಂದ ನೀವುಗಳೆಲ್ಲರೂ ಈ ಮಹತ್ ಕೆಲಸಕ್ಕೆ ಧನ, ಧಾನ್ಯ ಸಹಾಯಮಾಡಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿ.

ಕಾರ್ಯಕ್ರಮಗಳು

ತಾ|| ೨ – ೩ – ೬೨ ಶುಕ್ರವಾರ : ಮದವಣಗಿತ್ತಿಯ ಶಾಸ್ತ್ರ

ತಾ|| ೬ – ೩ – ೬೨ ಮಂಗಳವಾರ : ಜಲಧಿಪೂಜೆ ಮತ್ತು ಮುಖ್ಯಬೀದಿಗಳಲ್ಲಿ ಉತ್ಸವ

ತಾ|| ೭ – ೩ – ೬೨ರಲ್ಲಿ ಅಗ್ನಿಕೊಂಡ ಮತ್ತು ಮಹಾಮಂಗಳಾರತಿ.

ಕಾರ್ಯದರ್ಶಿಗಳು

ಪೂಜಾರಿ ಮುರಿಗೆಪ್ಪ: ಜಿ.ಹೆಚ್.ಚನ್ನಬಸಪ್ಪ

ಗೌಡ ಹನುಮಂತಪ್ಪ: ಜೂಗಪ್ಳ ದುಗ್ಗಣ್ಣ

ಸಿ. ಹನುಮಣ್ಣ: ಗಾರೆ ಓಬಯ್ಯ

ಸಣ್ಣವುಲುಗಪ್ಪ: ಮುದ್ದಾಪುರದ ಓಬಯ್ಯ

ಹೆಚ್. ಲಕ್ಷ್ಮಪ್ಪ: ಚಂದ್ರಪ್ಪ

ದಫೇದಾರ್ ಹನುಮಪ್ಪ ರಿಟೈರ್ಡ್: ನಿಂಗಪ್ಪ

ಹೆಚ್. ನರಸಿಂಹಪ್ಪ: ಜಿ. ಅಂಜಿನಪ್ಪ

ಮಾರಪ್ಪ: ದೊಡ್ಡಹನುಮಂತಪ್ಪ

ಕಂಟ್ರಾಕ್ಟರ್ ದೊಡ್ಡನಿಂಗಣ್ಣ: ಕ || ಹನುಮಯ್ಯ

ತಮ್ಮ ವಿಧೇಯರು,

ಓಬವ್ವನ ಸಂತತಿಯವರು, ಹೊಳಲ್ಕೆರೆ ರೋಡು, ಬುರುಜನಹಟ್ಟಿ,
ಚಿತ್ರದುರ್ಗ ಟೌನ್
ಜಯಲಕ್ಷ್ಮಿ ಪ್ರೆಸ್, ಚಿತ್ರದುರ್ಗ

 

೯.೪. ಬನಕೆ ಓಬವ್ವಳ ವಂಶಾವಳಿ

ಚಿತ್ರದುರ್ಗ ಸಂಸ್ಥಾನದ ಬಿರುದಿನ ಹದಿಮೂರು ಗಡಿ ಕಹಳೆಯವರ ಹಾಗೂ ಓಬವ್ವಳ ಮೂಲ ವಂಶವೃಕ್ಷ: ಕ್ರಿ.ಶ. ೧೩೫೮ ರಿಂದ ೧೯೯೨ರವರೆಗೆ

೯.೪.೧ ಒನಕೆ ಓಬವ್ವಳ ನೇರ ವಂಶವೃಕ್ಷ

01_181_COO-KUH

೯.೪.೨ ಓಬವ್ವಳ ಮೂರುಜನ ಭಾವಂದಿರು ಮತ್ತು ಒಬ್ಬ ಮೈದುನನ ವಂಶವೃಕ್ಷ

02_181_COO-KUH

 

೯.೪.೩ ನಗಾರಿ ಬಾಲಪ್ಪನ ಮನೆತನದವರು ಮತ್ತು ಅವರ ವಂಶಸ್ಥರ ಭರಮಪುರ, ಕೊಳಹಾಳು, ರಾಮಗಿರಿ, ಚಿಲ್ದೋಣಿ, ಪಾಂಡುಮಟ್ಟಿ, ಅಬ್ನಾಯಕನಹಳ್ಳಿ, ಬಸಾಪುರ, ಅಲಟ್ಟಿ, ಬ್ಯಾಡಿಗೆರೆ, ಕಂಚೆನಹಳ್ಳಿ, ಬೊಮ್ಮನಹಳ್ಳಿ, ಹುಲೇಮಳಲಿ, ಬೂದಾಳು (ಶಿವಪುರ), ಕುನುಗಲು, ಸಮುದ್ರದಹಳ್ಳಿ, ಮ್ಯಾದನಹೊಳೆ, ಚನ್ನಾಪುರ, ದೊಡ್ಡಘಟ್ಟ, ನೆಹರೂನಗರ ಮೊದಲಾದೆಡೆಗಳಲ್ಲಿ ವಾಸಿಸುತ್ತಿರುವರು:

03_181_COO-KUH

 

೯.೪.೪ ಮೂರನೆಯ ಗಡ್ಡದ ಹುಚ್ಚಪ್ಪನ ಸಂತತಿ

04_181_COO-KUH

 

ಕೃತಜ್ಞತೆ:

ಈ ಅಧ್ಯಯನ ಸಂಬಂಧಿಸಿದಂತೆ ಉಪಯುಕ್ತ ಸಲಹೆಗಳನ್ನಿತ್ತು ಸಹಕರಿಸಿದ ಛಲವಾದಿ ಮಹಾಸಂಸ್ಥಾನಮಠದ ಶ್ರೀ ಶ್ರೀ ಬಸವನಾಗಿದೇವ ಶರಣರು, ಚಿತ್ರದುರ್ಗ – ಅವರಿಗೆ; ಕ್ಷೇತ್ರಕಾರ್ಯದಲ್ಲಿ ನನ್ನೊಡನಿದ್ದು ಉಪಕರಿಸಿದ ದಿವಂಗತ ಎ.ಡಿ. ನರಸಿಂಹಯ್ಯ, ದಿವಂಗತ ಎಸ್.ಎನ್. ರುದ್ರೇಶ್ ಪೂಜಾರ್, ದಿವಂಗತ ಟಿ. ಎನ್. ಗಂಡುಗಲಿ ಮತ್ತು ಪ್ರೊ. ಎ.ಡಿ. ಕೃಷ್ಣಯ್ಯ ಅವರುಗಳಿಗೆ; ಕೆಲವು ಮಾಹಿತಿಯನ್ನೊದಗಿಸಿದ ಡಾ. ಸ.ಚಿ. ರಮೇಶ್, ಡಾ. ಎಸ್. ವೈ. ಸೋಮಶೇಖರ,ನಾ. ಪ್ರಭಾಕರ್, ಲಕ್ಷ್ಮೀಶ ಹೆಗಡೆ, ದಿವಂಗತ ಕೆ.ಎಲ್. ಅಣ್ಣಗೇರಿ ಮೊದಲಾದವರಿಗೆ; ಆಸಕ್ತಿ ತೋರಿದ ಡಾ. ಡಿ. ರಾಮಚಂದ್ರನಾಯಕ್, ಹರ್ತಿಕೋಟೆ ವೀರೇಂದ್ರಸಿಂಹ, ಆನಂದ ಪಿ.ರಾಜು ಅವರಿಗೆ; ಹಾಗೂ ಚಿತ್ರದುರ್ಗ ಸಂಶೋಧನ ತಂಡದ ಲ.ನಾಗರಾಜ ಹೊಯ್ಸಳ, ಭೀ. ಉಮೇಶ್, ಕ.ಮ. ರವಿಶಂಕರ ಮತ್ತಿತರ ಒಡನಾಡಿಗಳಿಗೆ ಕೃತಜ್ಞತನಾಗಿದ್ದೇನೆ.

 

ನಿವೇದನೆ:

ಎ.ಡಿ. ನರಸಿಂಹಯ್ಯ ಮತ್ತು ಸಿ.ತಿಪ್ಪೇರುದ್ರಯ್ಯ ಅವರುಗಳು ಸಂಗ್ರಹಿಸಿ ಸಿದ್ಧಪಡಿಸಿದ (ದಿನಾಂಕ ೨.೯.೧೯೮೯) ಚಿತ್ರದುರ್ಗಸಂಸ್ಥಾನದ ಬಿರುದಿನ ಹದಿಮೂರು ಗಡಿ ಕಹಳೆಯವರ ವಂಶವೃಕ್ಷದ ನಕ್ಷೆ : ಕ್ರಿ. ೧೩೫೮ ರಿಂದ ೧೯೮೦– ಇದನ್ನು ಪರಿಷ್ಕರಿಸಿ ಪ್ರೊ. ಎ.ಡಿ. ಕೃಷ್ಣಯ್ಯ ಅವರು ಪ್ರತ್ಯೇಕವಾಗಿ ಸಿದ್ಧಪಡಿಸಿರುವ ಕ್ರಿ.ಶ. ೧೩೫೮ ರಿಂದ ೧೯೯೨ರ ವರೆಗಿನ ಮೇಲ್ಕಂಡ ವಂಶವೃಕ್ಷವನ್ನು ಇಲ್ಲಿ ಯಥಾವತ್ತಾಗಿ ಕೊಟ್ಟಿದೆ. ಇದನ್ನು ವಿಶ್ವಾಸದಿಂದ ಒದಗಿಸಿ ಪ್ರಕಟಣೆಗೂ ಅವಕಾಶ ನೀಡಿದ ಪ್ರೊ. ಕೃಷ್ಣಯ್ಯ ಅವರಿಗೆ ನಾನು ಋಣಿಯಾಗಿದ್ದೇನೆ.

 

ಓಬವ್ವೆ ಕುರಿತ ಕೆಲವು ಪುಸ್ತಕಗಳು

೧. ೧೯೭೧ : ವೀರವನಿತೆ ಓಬವ್ವೆ (ಕಮಲಾ ಹಂಪನಾ), ಐ.ಬಿ.ಎಚ್. ಪ್ರಕಾಶನ, ಬೆಂಗಳೂರು

೨. ೧೯೭೯ : ಭಾರತದ ಧೀರಮಹಿಳೆ ಚಿತ್ರದುರ್ಗದ ಒನಕೆ ಓಬವ್ವೆ (ಸಂ. : ಎ.ಡಿ. ಕೃಷ್ಣಯ್ಯ), ಹೇಮಂತ ಪ್ರಕಾಶನ, ಬೆಂಗಳೂರು

೩. ೧೯೯೭ : Bharatada Dheera Mahile Chitradurgade Onake Obavva (A.D. Krishnaiah), Hemantha Prakashana, Bangalore

೪. ೨೦೦೧ : ವೀರವನಿತೆ ಒನಕೆ ಓಬವ್ವ (ಐತಿಹಾಸಿಕ ಕಾದಂಬರಿ) (ಬಿ.ಎಲ್. ವೇಣು), ದೀಪಕ್ ಬುಕ್ ಹೌಸ್, ಚಿತ್ರದುರ್ಗ

೫. ೨೦೦೭ : The Valour Lady Onake Obavva & The Two Glorius Women (G.N. HarishkumarGowda), Harish Publications, Bangalore

೬.೨೦೦೭ : ಭಾರತದ ಧೀರಮಹಿಳೆ ಚಿತ್ರದುರ್ಗದ ಒನಕೆ ಓಬವ್ವ (ಎ.ಡಿ. ಕೃಷ್ಣಯ್ಯ ; ಸಂಪಾದಕರು: ನೆಲ್ಲಿಕಟ್ಟೆ ಎಸ್. ಸಿದ್ದೇಶ್), ಬೆಳಗುಶ್ರೀ ಪ್ರಕಾಶನ, ನೆಲ್ಲಿಕಟ್ಟೆ, ಚಿತ್ರದುರ್ಗ ತಾಲ್ಲೂಕು