. ಪ್ರಸ್ತಾವನೆ

ಕರ್ನಾಟಕ ಚಾರಿತ್ರಿಕ ಕಥಾಮಂಜರಿಯಲ್ಲಿ ಚಿತ್ರದುರ್ಗದ ಒನಕೆ ಓಬವ್ವಗೂ ಮಹತ್ವದ ಸ್ಥಾನ ಕಲ್ಪಿಸಿರುವುದುಂಟು. ಚಾರಿತ್ರಿಕಯುಗದ ವೀರವನಿತೆಯರ ಸಾಲಿನಲ್ಲಿ ಈಕೆಯನ್ನೂ ಗುರುತಿಸಿ ಈಕೆಯ ಧೀರೋದಾತ್ತ ನಿಲುವನ್ನೂ ಪ್ರಶಂಸಿಸಲಾಗಿದೆ. ಮುಖ್ಯವಾಗ್, ಸ್ವಾಮಿನಿಷ್ಠೆ, ಸಮಯಸ್ಫೂರ್ತಿ, ತ್ಯಾಗ – ಇವು ಈಕೆಗೆ ಆರೋಪಿಸಿ ಕೊಂಡಾಡಲಾಗುತ್ತಿರುವ ಮೂರು ಗುಣಗಳು. ಚಿತ್ರದುರ್ಗ ನಾಯಕ ಅರಸರ ಚರಿತ್ರೆಯಲ್ಲಿ ಈಕೆ ನಿರ್ವಹಿಸಿದ ಪಾತ್ರದ ಬಗೆಗೆ ಚರಿತ್ರೆಯನ್ನಾಧರಿಸಿದ ಕೆಲವು ಗ್ರಂಥಗಳಲ್ಲೂ ಪ್ರಬಂಧಗಳಲ್ಲೂ ಶಾಲಾ ಪಠ್ಯಪುಸ್ತಕಗಳಲ್ಲೂ ಪ್ರಸ್ತಾಪಿಸಲಾಗಿದೆ.

ಈಗಾಗಲೇ ಪ್ರಚಾರದಲ್ಲಿರುವ ವೃತ್ತಾಂತದ ಪ್ರಕಾರ, ಓಬವ್ವೆಯ ಘಟನೆಯು ಚಿತ್ರದುರ್ಗದ ಕೊನೆಯ ಅರಸ ರಾಜಾ ವೀರಮದಕರಿನಾಯಕನ (ಕ್ರಿ.ಶ. ೧೭೫೪ – ೧೭೭೯) ಆಡಳಿತಾವಧಿಯಲ್ಲಿ ನಡೆಯಿತೆಂದು, ಶ್ರೀರಂಗಪಟ್ಟಣದ ನವಾಬ ಹೈದರ್ ಆಲಿಖಾನನು ದುರ್ಗವನ್ನು ಮುತ್ತಿದ ಸಂದರ್ಭದಲ್ಲಿ ಆತನ ಸೈನಿಕರು ಕೋಟೆಯ ಕಳ್ಳಂಗಡಿಯ ಮೂಲಕ ರಹಸ್ಯವಾಗಿ ಒಳನುಗ್ಗಲು ಪ್ರಯತ್ನ ನಡೆಸಿದರೆಂದು ಹಾಗೂ ಆಕಸ್ಮಿಕವಾಗಿ ಅದನ್ನು ಗಮನಿಸಿದ ಓಬವ್ವೆ ಅವರನ್ನು ತನ್ನ ಒನಕೆಯಿಂದ ಸದೆಬಡಿಯುವುದರೊಡನೆ ಅವರನ್ನು ಹಿಮ್ಮೆಟ್ಟಿಸಿ, ಆಗಿನ ಮಟ್ಟಿಗೆ ದುರ್ಗವನ್ನು ಕಾಪಾಡಿದಳೆಂದು ವ್ಯಕ್ತಪಡುತ್ತದೆ. ತನ್ನ ಈ ಸಾಹಸದ ಸಂದರ್ಭದಲ್ಲಿ ಈಕೆ ಶತ್ರುಸೈನಿಕರಿಂದ ಹತಳಾದಳೆಂಬ ಸಂಗತಿಯೂ ಪ್ರಚಾರದಲ್ಲಿದ್ದು, ಈಕೆಯ ಸಾಹಸದ ಬಗೆಗಿನ ಅಭಿಮಾನ ಮತ್ತು ಈಕೆಗೆ ಒದಗಿದ ದುರಂತದ ಬಗೆಗಿನ ಅನುಕಂಪ – ಇಂಥಾ ಭಾವನೆಗಳಿಂದ ಈಕೆಯ ಜನಪ್ರಿಯತೆ ಆಧಿಕಗೊಂಡಿದೆಯೆನ್ನಬಹುದು. ಈ ಹಿನ್ನೆಲೆಯಲ್ಲಿ, ಓಬವ್ವಯ ಘಟನೆಯು ಚಿತ್ರದುರ್ಗ ಚರಿತ್ರೆಯಿಂದ ಬೇರ್ಪಡಿಸಲಾಗದಷ್ಟು ಗಟ್ಟಿಯಾಗಿ ಬೆಸೆದುಕೊಂಡಿದೆ; ಚಿತ್ರದುರ್ಗಕೋಟೆ – ರಾಜಾ ವೀರಮದಕರಿನಾಯಕ – ಮುರಿಗಾಮಠಗಳಷ್ಟೆ ಮಹತ್ವದ ಪ್ರತೀಕವೆನಿಸಿ ಕರ್ನಾಟಕ ಚರಿತ್ರೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ.

ಓಬವ್ವೆಯ ಘಟನೆ ಕುರಿತು ವಿದ್ವಾಂಸರನೇಕರು ವಿವಿಧ ರೀತಿಯಲ್ಲಿ ನಿರೂಪಿಸಿರುವುದುಂಟು. ಎಂ.ಎಸ್. ಪುಟ್ಟಣ್ಣ ಅವರು ಬರೆದಿರುವಂತೆ, ಓಬವ್ವ ಅಥವಾ ಈಬಿಯು ಚಿತ್ರದುರ್ಗ ಬಳಿಯ ಅಗಸನಕಲ್ಲು ಗ್ರಾಮದವಳು; ಚಿತ್ರದುರ್ಗಕೋಟೆಯ ಕಳ್ಳಂಗಡಿಯಲ್ಲಿ ನುಗ್ಗಲೆತ್ನಿಸಿದ ಶತ್ರುಸೈನಿಕರನ್ನು ಹಿಮ್ಮೆಟ್ಟಿಸುವ ತನ್ನ ಸಾಹಸವನ್ನು ಅವರಿಂದ ಹತ್ಯೆಗೀಡಾದಳು; ಆಕೆಯಿಂದ ಕೊಲ್ಲಲ್ಪಟ್ಟ ಶತ್ರು ಸೈನಿಕರ ಸಂಖ್ಯೆ ೨೦೦ ರಿಂದ ೩೦೦.[1] ಇತಿಹಾಸ ಸಂಶೋಧಕ ಹುಲ್ಲೂರು ಶ್ರೀನಿವಾಸ ಜೋಯಿಸರನ್ನು ಒಳಗೊಂಡಂತೆ ಹಲವಾರು ಲೇಖಕರು ಇದೇ ಸಂಗತಿಯನ್ನು ನಾನಾ ರೀತಿಯಲ್ಲಿ ಬರೆದು ಪ್ರಕಟಿಸಿದ್ದಾರೆ. ಅಲ್ಲದೆ, ತನ್ನ ಸಾಹಸದ ನಂತರವೂ ಓಬವ್ವೆ ಬದುಕಿದ್ದಳೆಂಬುದನ್ನೂ ದುರ್ಗದ ಅರಸನು ಈಕೆಯನ್ನು ಸನ್ಮಾನಿಸಿ ಗೌರವಿಸಿದ್ದನೆಂಬುದನ್ನೂ ವ್ಯಕ್ತಪಡಿಸಿದ್ದಾರೆ. ಪರಿಶಿಷ್ಟಜಾತಿಗೆ ಸೇರಿದ ಚಲವಾದಿ ಪಂಗಡದ ಓಬವ್ವೆಯನ್ನು ಬೇಡ ಜನಾಂಗದ ಮಹಿಳೆ ಎಂಬುದಾಗಿ ತಪ್ಪಾಗಿ ದಾಖಲಿಸಿರುವುದೂ ಉಂಟು.[2] ಹಾಗೆಯೇ, ಕೆಲವು ವಿದ್ವಾಂಸರು ಈಕೆಯ ಅಸ್ತಿತ್ವವನ್ನೇ ಶಂಕಿಸಿರುವರು. ‘ಇಡೀ ನಾಡಿನಲ್ಲೇ ಮನೆಮಾತಾಗಿರುವ ಓಬವ್ವನ ಬಗ್ಗೆ ಚರಿತ್ರೆಯ ದಾಖಲೆಗಳಾಗಲಿ, ಜನಪದಸಾಹಿತ್ಯವಾಗಲಿ ಈವರೆಗೂ ದೊರೆತಿಲ್ಲವೇಕೆ?’ ಎಂಬ ಪ್ರಶ್ನೆಯನ್ನೂ ಮುಂದೊಡ್ಡಿರುವರು.[3]

ಪ್ರಸ್ತುತ ಪ್ರಯತ್ನದಲ್ಲಿ, ಓಬವ್ವೆಯ ಘಟನೆಯ ಚಾರಿತ್ರಿಕ ವಿವೇಚನೆಯನ್ನು ಈ ಕೆಳಗಿನ ಕೆಲವು ಪ್ರಶ್ನೆಗಳ ಪರಿಶೀಲನೆಯೊಡನೆ ಕೈಗೊಳ್ಳಲಾಗಿದೆ:

  • ಓಬವ್ವೆ ಚಾರಿತ್ರಿಕವ್ಯಕ್ತಿಯೆ?
  • ಚಿತ್ರದುರ್ಗಕೋಟೆಯಲ್ಲಿ ಒಬವ್ವೆ ತೋರಿದಳೆನ್ನಲಾದ ಸಾಹಸ ವಾಸ್ತವಿಕವೆ?
  • ಚಿತ್ರದುರ್ಗಕೋಟೆಯಲ್ಲಿ ಈಗಲೂ ತೋರಿಸಲಾಗುವ ಕಲ್ಲುಪೊಟರೆ ಅಥವಾ ಕಳ್ಳಂಗಡಿಯೊಡನೆ ಕಲ್ಪಿಸಲಾಗಿರುವ        ಓಬವ್ವೆಯ ಸಂಬಂಧ ಸಮರ್ಥನೀಯವೆ?
  • ಓಬವ್ವೆಯ ಅಂತ್ಯ ಆದುದು ಹೇಗೆ? – ಇತ್ಯಾದಿ.

. ಕೆಲವು ಆಕರಗಳು ಒದಗಿಸುವ ಮಾಹಿತಿ

ಪ್ರಸ್ತಾವನೆಯಲ್ಲಿ ಎತ್ತಲಾಗಿರುವ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಲಭ್ಯವಿರುವ ಮೂಲ ಮತ್ತು ಆನುಷಂಗಿಕ ಮಾಹಿತಿಯನ್ನು ಇಲ್ಲಿ ಈ ಕೆಳಕಂಡಂತೆ ಸಂಗ್ರಹಿಸಿದೆ:

೨.೧ ಓಬವ್ವೆಯು ಚಾರಿತ್ರಿಕವ್ಯಕ್ತಿಯೇ ಅಹುದೆಂಬುದಕ್ಕೆ ಈಕೆಯ ಘಟನೆಯ ಹಿನ್ನೆಲೆಯಲ್ಲಿ ಚಿತ್ರದುರ್ಗ ನಾಯಕ ಅರಸರಿಗೆ ಸಂಬಂಧಿಸಿದ ದಾಖಲೆಯೊಂದು[4] ಈ ರೀತಿ ನಿರೂಪಿಸುತ್ತದೆ.

“….ಶತೃಗಳು ದುರ್ಗಕ್ಕೆ ಪಶ್ಚಿಮದಿಕ್ಕಿನ ಕಡೆ ಮೊಕ್ಕಾಂಮಾಡಿ ವಂದಾನೊಂದು ರಾತ್ರಿ ಸರುವತ್ತಿನಲ್ಲಿ ಹುಚ್ಚಂಗಮ್ಮ ನಹೊಂಡದ ವೋಣಿಹಿಡಿದು ದಿಡ್ಡಿಯಲ್ಲಿ ವಬ್ಬೊಬ್ಬರಾಗಿ ಹೋಗಬೇಕೆಂತ ಯತ್ನಿಸುತ್ತಿರುವಲ್ಲಿ ಆ ದಿಡ್ಡಿಬಾಗಿಲ ಪಹರೆಗೆ ನೇಮಿಸಿದ ಹೊಲೆಯರವನು ಪಹರೆಗೆ ಹೋಗಬೇಕು. ಜಾಗ್ರತೆ ವೂಟಕ್ಕೆ ಬಡಿಸೆನಲಾಗಿ ಆ ಸಮಯದಲ್ಲಿ ಯಿದ್ದ ಅನ್ನ ಮೊಸರು ಯಿಟ್ಟು ವುಣ್ಣಿಸುತ್ತಿರಲಾಗಿ ಜನರು ಬರುವಂತೆ ಶಬ್ದವು ಅವನ ಹೆಂಡತಿಗೆ ಕೇಳಿಸಿ ಬರುವಲ್ಲಿ ಆಗ ಆಕೆಯು ಹೊರಗೆಹೋಗಿ ಚೆನ್ನಾಗಿ ನೋಡುವಲ್ಲಿ ಶತೃಪಕ್ಷದವರು ವಳಗೆ ಬರಬೇಕಂತ ಪ್ರಯತ್ನಿಸುತ್ತಿರುವುದಂ ಅರಿತು, ಗಂಡನಿಗೆ ಹೇಳಿದ ಕೂಡ್ಲೆ ಅನ್ನ ಬಿಟ್ಟು ಬರುವನು. ಅದರ ಪಾಪವು ನನಗೆ ಬರುವದು. ಸುಮ್ಮನೆಯಿದ್ದರೆ ರಾಜದ್ರೋಹ ಮಾಡಿದಂತೆ ಆಗುವುದೆಂದು ಯೋಚಿಸಿ ತನ್ನ ಸಾಹಸ ಯಿದ್ದಸ್ಟು ಪ್ರಯತ್ನಿಸುವೆನು. ಅಷ್ಟರಲ್ಲಿ ಗಂಡನೆ ಬರುವನೆಂದು ವಂದು ವನಕೆ ಹಸ್ತದಲ್ಲಿ ಪಿಡಿದು ದಿಡ್ಡಿಬಾಗಿಲಿಗೆ ವೋರೆಯಾಗಿ ನಿಂತು ವೀರಗಚ್ಚೆ ಹಾಕಿ ಆ ಬಾಗಿಲು ವಬ್ಬೊಬ್ಬ ಬರುವಷ್ಟು ಯಿತ್ತು. ಹೀಗಿರಲಾಗಿ ವಬ್ಬನು ತಲೆ ತೂರಿಸಿದ ಕೂಡಲೆ ಮುಸಲದಿಂದ ತಲೆಗೆ ತನ ಶಕ್ತಿಯಿದ್ದಷ್ಟು ಪೆಟ್ಟುಹಾಕಲು ಆ ಪೆಟ್ಟಿಗೆ ತಲೆ ಹೊಡದು ಸಾಯುವನು. ಆ ಶವವನ್ನು ಕಾಲುಹಿಡಿದು ತನ್ನ ಕಡೆ ಯಳಹಾಕುವುದು. ಯೀ ರೀತಿ ತಲೆಯಿಟ್ಟವರನ್ನೆಲ್ಲಾ ಕೊಲ್ಲುತಾ ನೂರಾರು ಮಂದಿಯನ್ನು ರಾಶಿಹಾಕಿದಳು. ಯೀ ಕಡೆ ಶತೃಪಕ್ಷದವರಿಗೆ ಅನುಮಾನ ತೋರಿ ವಳಗೆ ಹೊಕ್ಕವರೆಲ್ಲ ವಬ್ಬರೂ ಹಿಂದಿರುಗಲಿಲ್ಲ. ವಳಗಿನ ಮರ್ಮ ತಿಳಿಯದಂತಾಯ್ತು. ಯಿದು ಯೇನೋ ಮೋಸವಿರುತ್ತೆಂತ ಸೂಕ್ಷ್ಮೆಯಿಂದ ವಳಗಿನ ಕೃತ್ಯವನ್ನರಿತು ಪಲಾಯನವಾಗುವಷ್ಟಕ್ಕೆ ಯೀಕೆ ಗಂಡನು ವೂಟಮಾಡಿ ತನ್ನ ಸ್ತ್ರೀಯಳಿಗೆ ಬಾಗಿಲು ಭದ್ರ ಹಾಕು. ಶತೃಗಳು ಬರುವ ರಾಗಿದ್ದಾರೆಂತ ಹೇಳಿದ್ದಕ್ಕೆ ಪ್ರತಿ ಜವಾಬು ಯಿಲ್ಲದ್ದನ್ನು ಕಂಡು ಹೊರಗೆಲ್ಲಾ ಹುಡುಕಿ ಯೀ ನಿಶಿಯಲ್ಲಿ ಯಲ್ಲಿಗೆ ಹೋದಳೋ ಯಿದರ ನಿಜಸ್ಥಿತಿ ನಾಳೆ ತಿಳಕೊಂಡರೆ ಬಂದೀತು. ಯಿದು ಸಮಯವಲ್ಲ. ಪಹರೆಗೆ ಹೋಗಬೇಕಂತ ಜಾಗ್ರತೆಯಲ್ಲಿ ದಿಡ್ಡಿಬಾಗಿಲ ಬಳಿ ಬರುತ್ತಾ ಹೆಣದ ರಾಶಿಗಳನ್ನು ಮುಸಲದ ಶಬ್ದವನ್ನು ಕೇಳಿ ಗಾಬರಿಯಾಗಿ ತನ್ನ ಭಾರ್ಯಳು ಯಿರುವ ಸ್ಥಿತಿಯನ್ನು ನೋಡಿ ಭಯಪಟ್ಟು ಗದ್ದಲ ಮಾಡಲಾಗಿ ಶತೃಗಳೆಲ್ಲಾ ವೋಡಿಹೋದರು. ನಂತರ ನಡದ ವರ್ತಮಾನ ಗಂಡನಿಗೆ ಹೇಳಿ ತನ್ನ ತಪ್ಪು ಕ್ಷಮಿಸೆಂದು ಬೇಡಿಕೊಳ್ಳಲಾಗಿ ಪರಮಾನಂದದಿಂದ ಅದೇ ಸ್ಥಿತಿಯಿಂದಲೇ ಗಂಡಹೆಂಡಿರು ಧೊರೆಯ ಬಳಿಗೆ ಹೋಗಿ ನಡದ ಸಮಾಚಾರ ಅರಿಕೆ ಮಾಡಿಕೊಳ್ಳಲಾಗಿ ರಾಜನು ಸ್ತ್ರೀಯಳ ಸಾಹಸಕ್ಕೆ ಆನಂದಭರಿತನಾಗಿ ವಸ್ತ್ರಾದ್ಯಾಭರಣಗಳು ತರಿಸಿ ಮುಂದಿಡಲು ಯಿವುಗಳು ಆಶಾಶ್ವಿತವಾದವು. ನನ್ನ ಹೆಸರಿನ ಮೇಲೆ ಆ ಸ್ಥಲದಲ್ಲಿ ದೊಡ್ಡದಾಗಿ ಬಾಗಿಲು ಕಟ್ಟಿಸಿ ವರ್ಷಕೊಮ್ಮೆ ತನ್ನವರಿಂದ ಪೂಜೆಮಾಡಿಸುತ್ತಾ ಬರಬೇಕಂತ ಪ್ರಾರ್ಥಿಸಲಾಗಿ ಅರಸು ಸಂತೋಷಪಟ್ಟು ಬಾಗಿಲುಕೋಟೆ ಸಹ ಕಟ್ಟಿಸಿ ವನಿಕೆಗಂಡಿಬಾಗಲೆಂತ ಹೆಸರಿಡಿಸಿ ಅಲ್ಲಿ ಆ ಸ್ತ್ರೀಯಳ ರೂಪು ಕೆತ್ತಿಸಿ ಗಂಡಹೆಂಡರಿಗೆ ಯಿನಾಮು ಕಿಲ್ಲತ್ತು ಕೊಡಿಸಿದನು.”

೨.೨ ಚಿತ್ರದುರ್ಗದ ಕಡೆಯ ಅರಸ ರಾಜಾ ವೀರಮದಕರಿನಾಯಕನ ಸಹೋದರಸಂಬಂಧಿ ದೊಡ್ಡಮದಕರಿನಾಯಕನ ಖಾಸಾವಂಶಸ್ಥರೂ ಚಿತ್ರದುರ್ಗ ತಾಲ್ಲೂಕು ಭರಮಸಾಗರದ ‘ಅಂಬವಿಲಾಸ’ ದ ನಿವಾಸಿಯೂ ಆಗಿದ್ದ ಬಿಚ್ಚುಗತ್ತಿ ದೊಡ್ಡಮದಕರಿನಾಯಕ (ಬಿ.ಡಿ. ಮದಕರಿನಾಯಕ)ರು, ಚಿತ್ರದುರ್ಗದ ಚಲವಾದಿಮತಸ್ಥರಿಗೆ ತಮ್ಮಸ್ವಹಸ್ತದಿಂದ ಬರೆದುಕೊಟ್ಟ ರಹದಾರಿಪತ್ರದಲ್ಲಿ[5] ಈ ಮೇಲೆ ಪ್ರಸ್ತಾಪಿಸಿದ ದಾಖಲೆಯಲ್ಲಿಯ ಅಂಶಗಳನ್ನೇ ಪ್ರಸ್ತಾಪಿಸಿದ್ದಾರೆ :

ಅ) ಈ ರಹದಾರಿಪತ್ರವು, ಶತ್ರುಗಳ ವಿರುದ್ಧ ತನ್ನ ಸಾಹಸತೋರಿದ ನಂತರ ಓಬವ್ವೆಯು ಅರಸನಿಂದ ಪುರಸ್ಕೃತಳಾದುದನ್ನು, ಕಳ್ಳಂಗಡಿಯ ರಕ್ಷಣೆಗೆಂದು ಅದನ್ನು ಆವರಿಸಿದಂತೆ ಒಂದು ಪ್ರಕಾರವನ್ನು ನಿರ್ಮಿಸಲು ಈಕೆ ಅರಸನಮ್ಮಿ ಕೇಳಿಕೊಂಡುದನ್ನು, ಅರಸನು ಸಂತೋಷದಿಂದ ಅದನ್ನು ನೆರವೇರಿಸಿದುದನ್ನು ಹಾಗೂ ಓಬವ್ವೆಯ ಮರಣಾನಂತರ ಈಕೆಯ ಜಲಧಿಉತ್ಸವ ನಡೆಯಲು ಅಪ್ಪಣೆಯಿತ್ತುದನ್ನು ಅರುಹುತ್ತದೆ.

ಆ) ಬಿ.ಡಿ. ಮದಕರಿನಾಯಕರ ಪುತ್ರರೂ ‘ಚಿತ್ರದುರ್ಗಸೀಮೆಯ ವಾಲ್ಮೀಕಿಮತ ಆಚಾರ ವಿಚಾರಕ್ಕೆ ಮೊಕ್ತೇಸರರೂ’ ಆಗಿದ್ದ ರಾಜಾ ಜಿ.ಎಸ್. ಪಾಳ್ಳೇಗಾರ್ ಪರಶುರಾಮನಾಯ್ಕರು ತಾವು ಈ ವಂಶಸ್ಥರಿಗೆ ನೀಡಿದ ರಹದಾರಿಲೇಖನ (ನಿರೂಪ ಅಧಿಕಾರಪತ್ರ)ದಲ್ಲಿ[6] ಓಬವ್ವೆಯ ಘಟನೆ ಕುರಿತು ಉಲ್ಲೇಖಿಸಿರುವುದು ಹೀಗೆ :

“ರಾಜ್ಯಭಾರದಲ್ಲಿ ರಾಜ ಬಿಚ್ಚುಕತ್ತಿ ಮದಕರಿನಾಯ್ಕರವರ ಕಾಲದಲ್ಲಿ ನಿಮ್ಮ ವಂಶದ ಮದಲೆ ಹನುಮಯ್ಯನ ಹೆಂಡತಿ ಓಬವ್ವೆಯು ಶತೃಗಳು ದುರ್ಗದ ಕೋಟೆಯೊಳಗೆ ಪ್ರವೇಶಿಸಲು ಅವಕಾಶಕೊಡದೆ ತನ ‘ವನಕ’ ಕಟ್ಟಿಗೆಯಿಂದ ಸಾವಿರಾರು ಶತೃತಲೆಗಳನ್ನು ಸಂಹಾರಮಾಡಿ ಮೆಹನತ್ತು, ಧೈರ್ಯ, ಸಾಹಸಕೃತ್ಯಕ್ಕಾಗಿ ದುರ್ಗದ ಧೊರೆಗಳು ೧೬೮೮ರ ವ್ಯಯಸಂವತ್ಸರ ಭಾದ್ರಪದಮಾಸದಲ್ಲಿ ಆಕೆಯ ಹೆಸರಿನಲ್ಲಿ ವನಕೆಕಂಡಿ ಬಾಗಿಲುಸುತ್ತಿನಕೋಟೆ ಕಟ್ಟಿಸಿ, ಆಕೆ ಪ್ರತಿಮೆಯನ್ನು ಆ ಕೋಟೆಕಲ್ಲಿನಲ್ಲಿ ಕೆತ್ತಿಸಿದ್ದರಿಂದ ಅದೇ ಸಂವತ್ಸರ ಭಾದ್ರಪದ ಬಹುಳ ಪಂಚಮಿ ದಿವಸ ಚಿತ್ರದುರ್ಗದ ಕಟ್ಟೆಮನೆ ಯಜಮಾನ ದೊಡ್ಡಹನುಮಪ್ಪನ ಮಗ ಏಕನಾಥಪ್ಪ – ವಗೈರ ಅಣ್ಣತಮ್ಮಂದಿರು ಮೊದಲಾದವರು ಶ್ರೀ ಕುದುರೆ ನರಸಿಂಹಸ್ವಾಮಿದೇವರು ಶ್ರೀ ಲಕ್ಷ್ಮೀದೇವರು ಶ್ರೀ ವನಕೆಕಂಡಿ ಓಬವ್ವೆ – ಇವರುಗಳ ಜಲದಿಉತ್ಸವ ವಗೈರ ಮಾಡಿರುವಂತೆ ಈ ಸಂಸ್ಥಾನದಲ್ಲಿರುವ ದಾಖಲೆಗಳಿಂದ ಕಂಡುಬರುತ್ತೆ.”

೨.೩. ಓಬವ್ವೆಯ ವಂಶಜರಾದ ಪ್ರೊ.ಎ.ಡಿ. ಕೃಷ್ಣಯ್ಯ ಅವರು ಸಂಪಾದಿಸಿ ಪ್ರಕಟಿಸಿದ ‘ಭಾರತದ ಧೀರಮಹಿಳೆ ಚಿತ್ರದುರ್ಗದ ಒನಕೆ ಓಬವ್ವ’ ಎಂಬ ಪುಸ್ತಿಕೆಯಲ್ಲಿ,[7] ಮೇಲೆ ಪ್ರಸ್ತಾಪಿಸಿದ ಚಿತ್ರದುರ್ಗ ನಾಯಕ ಅರಸರ ಸಂಬಂಧಿಗಳು ನೀಡಿರುವ ನಿರೂಪ ಮತ್ತು ಇತರ ಕಾಗದಪತ್ರಗಳನ್ನೇ ವ್ಯಾಪಕವಾಗಿ ಬಳಸಿಕೊಂಡಿರುವುದನ್ನು ಹಾಗೂ ಓಬವ್ವೆಯ ಸಾಹಸಕೃತ್ಯ ಕುರಿತ ಜನಪ್ರಿಯ ಸಂಗತಿಗಳನ್ನೇ ವಿವರವಾಗಿ ನಿರೂಪಿಸಿರುವುದನ್ನು ಕಾಣಬಹುದು.

ಪ್ರೊ. ಎ.ಡಿ. ಕೃಷ್ಣಯ್ಯ ಅವರ ಪುಸ್ತಿಕೆಯಲ್ಲಿಯ ಓಬವ್ವೆಯ ಘಟನೆಯನ್ನು ಕುರಿತ ಪ್ರಮುಖ ಸಂಗತಿಗಳನ್ನು ಈ ಮುಂದಿನಂತೆ ಸಂಗ್ರಹಿಸಿದೆ:

ಅ) ಕ್ರಿ.ಶ. ೧೩೫೮ರಲ್ಲಿ ಚಿತ್ರದುರ್ಗ ಸಂಸ್ಥಾನದಲ್ಲಿ ಸ್ಥಾಪಿಸಿದ ಪೂಲಿಪುರುಷ ಚಿತ್ರನಾಯಕ ತಿಮ್ಮಣ್ಣನಾಯಕರನ್ನು ಹಿಂಬಾಲಿಸಿಕೊಂಡು ರಾಜಪರಿವಾರದ ಸೇವಕರಾಗಿ ಓಬವ್ವಳ ವಂಶಸ್ಥರಾದ ಬಾಲಪ್ಪ ಮತ್ತು ರಂಗಪ್ಪ ಎಂಬ ಸಹೋದರರು ತಮ್ಮ ಕುಲದೈವಗಳ ಸಹಿತ ಬಂದವರೆಂದೂ ಇವರು ಮೊದಲಿಗೆ ರಾಮದುರ್ಗದಲ್ಲಿದ್ದವರೆಂದೂ ಪ್ರತೀತಿ ಇದೆ (ಪು. ೫). ಓಬವ್ವೆಯು ಗುಡಿಕೋಟೆ ಸಂಸ್ಥಾನದಲ್ಲಿ ದೊರೆಗಳಿಗೆ ಅಚ್ಚುಮೆಚ್ಚಿನ ಆಪ್ತಸೇವಕನೂ ಕಹಳೆಯವನೂ ಆಗಿದ್ದ ಛಲವಾದಿ ಚಿನ್ನಪ್ಪನ ಮಗಳು; ಕದುರಪ್ಪ ಮತ್ತು ತಿಮ್ಮಣ್ಣ ಎಂಬವರು ಈಕೆಯ ಸಹೋದರರು (ಪು. ೫ – ೬).

ಆ) ಓಬವ್ವಳನ್ನು ಚಿತ್ರದುರ್ಗದ ನಾಯಕರ ಬಳಿ ಕಹಳೆಯವನಾಗಿ ಸೇವೆಸಲ್ಲಿಸುತ್ತಿದ್ದ ಕಹಳೆ ದೊಡ್ಡಹನುಮಪ್ಪನ ಮಗ ಮದ್ದಹನುಮಪ್ಪನಿಗೆ ತಂದುಕೊಂಡು ಶಕ ೧೬೮೩ ವೃಷಸಂವತ್ಸರ ವೈಶಾಖ ಶುದ್ಧ ಪಂಚಮಿಯಂದು ಇವರೀರ್ವರ ವಿವಾಹಕಾರ್ಯವನ್ನು ಚಿತ್ರದುರ್ಗದಲ್ಲಿ ಜರುಗಿಸಲಾಯಿತು. (ಪು. ೭).

ಇ) ಆ ನಂತರ ಮದ್ದಹನುಮಪ್ಪನು ತನ್ನ ತಂದೆಯ ಸ್ಥಾನದಲ್ಲಿ ಕಹಳೆಯವನಾಗಿ ನೇಮಕಗೊಂಡನು ಮತ್ತು ಚಿತ್ರದುರ್ಗಕೋಟೆಯಲ್ಲಿಯ ಕಹಳೆಬತೇರಿಯ ಕಾವಲಿನ ಕೆಲಸವನ್ನು ನಿರ್ವಹಿಸಿತೊಡಗಿದನು (ಪು. ೯).

ಈ) ಚಿತ್ರದುರ್ಗಕೋಟೆಯನ್ನು ಆಕ್ರಮಿಸಲು ಬಂದ ಹೈದರ್ ಆಲಿಯು ತಿಂಗಳುಗಳು ಕಳೆದರೂ ಕೋಟೆಯನ್ನು ವಶಪಡಿಸಿಕೊಳ್ಳುವಲ್ಲಿ ವಿಫಲನಾದನು. ಕುಟಿಲಮಾರ್ಗವನ್ನು ಅನುಸರಿಸಿ ಕಳ್ಳಮಾರ್ಗದಿಂದ ಕೋಟೆಯನ್ನು ಭೇದಿಸಬೇಕೆಂದು ನಿರ್ಧರಿಸಿ ಗೂಢಚಾರರನ್ನು ನೇಮಿಸಿದನು. ಉತ್ತರದಿಕ್ಕಿನ ಕೋಟೆಯ ಕಡೆ ಒಂದುದಿನ ಒಬ್ಬ ಮೊಸರಿನವಳು ಇದ್ದಕ್ಕಿದ್ದಂತೆ ಯಾವುದೋ ಮಾರ್ಗದಿಂದ ಕೋಟೆಯೊಳಗೆ ನುಸುಳಿಹೋದುದನ್ನು ಅವರು ಗಮನಿಸಿದರು; ಹಾಗೂ ಪರಿಶೀಲನೆಯ ತರುವಾಯ ಅಲ್ಲಿ ಇದ್ದ ಒಂದು ಸಣ್ನದ್ವಾರವನ್ನು ಪತ್ತೆಹಚ್ಚಿದರು. ಹೈದರ್ ಆಲಿಯು ತನ್ನ ಸಾಮಂತರಾದ ಹರಪನಹಳ್ಳಿ ಮತ್ತು ರಾಯದುರ್ಗದ ಪಾಳೆಯಗಾರರೊಡನೆ ಸಮಾಲೋಚಿಸಿ, ಅವರ ಸೈನಿಕರು ಕಳ್ಳಂಗಡಿಯ ಮೂಲಕ ಕೋಟೆಯ ಒಳಹೊಕ್ಕು ದಾಳಿಮಾಡುತ್ತಾ ಹೆಬ್ಬಾಗಿಲು ತೆರೆಯಬೇಕೆಂತಲೂ ತನ್ನ ಸೈನ್ಯವು ಕೋಟೆಯನ್ನು ಪ್ರವೇಶಿಸಬೇಕೆಂತಲೂ ನಿರ್ಧರಿಸಿದನು. ಈ ಕಳ್ಳಗಂಡಿ ಬಳಿಯ ಬತೇರಿಯ ಮೇಲೆ ಕಾವಲು ಕಾಯುತ್ತಿದ್ದ ಮದ್ದಹನುಮಪ್ಪನು ನಿಯಮದಂತೆ ಮಧ್ಯಾಹ್ನದ ನಂತರ ಊಟಕ್ಕೆಂದು ಮನೆಗೆ ಹಿಂದಿರುಗಿದಾಗ ಸೈನಿಕರು ಕೋಟೆಯನ್ನು ಪ್ರವೇಶಿಸಬೇಕೆಂದು ತೀರ್ಮಾನಿಸಿಕೊಂಡರು. ಅವರು ನಿರೀಕ್ಷಿಸಿದಂತೆಯೇ ನಡೆಯಿತು (ಪು. ೧೦ – ೧೩).

ಉ) ಮದ್ದಹನುಮಪ್ಪನು ಮಧ್ಯಾಹ್ನ ಮನೆಗೆ ಬಂದಾಗ ಓಬವ್ವೆಯು ಆತನಿಗೆ ಊಟಕ್ಕೆ ಬಡಿಸಿದಳು. ಕುಡಿಯುವ ನೀರನ್ನು ಕೊಡಲು ಬಿಂದಿಗೆಯನ್ನು ನೋಡಿದಾಗ ಅದು ಆಕಸ್ಮಿಕವಾಗಿ ಬರಿದಾಗಿತ್ತು. ಅವಸರದಲ್ಲಿ ಈಕೆಯು ಗುಪ್ತದ್ವಾರಕ್ಕೆ ಕೆಲವೇ ಗಜಗಳ ಅಂತರದಲ್ಲಿದ್ದ ಸಿಹಿನೀರಿನೊಳಕ್ಕೆ ನೀರು ತುಂಬಿಕೊಳ್ಳಲು ಬಂದಳು. ಕಳ್ಳಂಗಡಿಯ ಕಡೆಯಿಂದ ಅಸ್ಪಷ್ಟ ಮಾತುಗಳೂ ಕತ್ತಿ – ಗುರಾಣಿಗಳ ಶಬ್ದವೂ ಈಕೆಗೆ ಕೇಳಿಬಂದವು. ಶತ್ರುಗಳ ಸುಳಿವು ಮತ್ತು ಉದ್ದೇಶಗಳು ಈಕೆಗೆ ತಿಳಿದುಹೋದವು. ಕೂಡಲೇ ಸಮಯವನ್ನು ವ್ಯರ್ಥಮಾಡದೆ ಮನೆಗೆ ಹಿಂದಿರುಗಿ ಕೈಗೆ ದೊರಕಿದ ಒನಕೆಯನ್ನು ಹಿಡಿದು ಕಳ್ಳಂಗಡಿಯ ಬಳಿಗೆ ಬಂದು ಶತ್ರುಗಳನ್ನು ಎದುರಿಸಲು ಸಿದ್ಧಳಾದಳು.ಕಳ್ಳಂಗಡಿಯಲ್ಲಿ ಒಬ್ಬೊಬ್ಬರಾಗಿ ತೂರಿಬಂದವರ ತಲೆಗೆ ಒನಕೆಪೆಟ್ಟು ಕೊಟ್ಟು ಕೊಂದುಹಾಕತೊಡಗಿದಳು. ಹರಪನಹಳ್ಳಿಯವರ ನಾಲ್ಕುಪಟಲು ದಂಡು ಮತ್ತು ರಾಯದುರ್ಗದವರ ಮೂರುಪಟಲು ದಂಡು ಈಕೆಯಿಂದ ಹತವಾಯಿತು. ಈ ಘಟನೆಯು ಕ್ರಿ.ಶ. ೧೭೬೬ ಅಕ್ಟೋಬರ್ ತಿಂಗಳ ಮೊದಲನೆಯ ದಿವಸ ಬುಧವಾರದಂದು ಮಧ್ಯಾಹ್ನದ ಉರಿಬಿಸಿಲಲ್ಲಿ ಸಂಭವಿಸಿತು (ಪು. ೧೪ – ೧೮)

ಊ) ಊಟ ಮುಗಿಸಿದ ಮದ್ದಹನುಮಪ್ಪನು ತನಗೆ ಕುಡಿಯಲು ನೀರುತರಲು ಹೋದ ಓಬವ್ವೆಯನ್ನು ಕಾಣಲು ಕೊಳದ ಬಳಿಗೆ ಬಂದಾಗ ಅಲ್ಲಿಯ ಸನ್ನಿವೇಶವು ಅವನಲ್ಲಿ ಎಚ್ಚರ ಮೂಡಿಸಿತು. ತತ್‍ಕ್ಷಣವೇ ಕಹಳೆಯಬತೇರಿಯನ್ನೇರಿ ತನ್ನ ಕಹಳೆಯನ್ನು ಮೊಳಗಿಸಿದನು. ದುರ್ಗದ ಸೈನಿಕರು ಸ್ಥಳಕ್ಕೆ ಧಾವಿಸಿಬಂದು ಶತ್ರುಗಳನ್ನು ಹೊಡೆದೋಡಿಸಿದರು. ತನ್ನ ಸಾಹಸಕಾರ್ಯದಲ್ಲಿ ಸಫಲಳಾದ ಓಬವ್ವೆಯೂ ದೈಹಿಕ ಮತ್ತು ಮಾನಸಿಕ ಆಲಸ್ಯದಿಂದಾಗಿ ಮೂರ್ಛೆಹೋಗಲು ಸೈನಿಕರು ಈಕೆಯನ್ನು ಅರಮನೆಗೆ ಸಾಗಿಸಿ ಸೂಕ್ತ ಉಪಚಾರಕ್ಕೆ ಅಣಿಮಾಡಿದರು. ಅಂದಿನ ಯುದ್ಧದಲ್ಲಿ ವೀರಮದಕರಿನಾಯಕನೇ ಜಯ ದೊರೆಯಿತು. ಹತಾಶನಾದ ಹೈದರ್ ಆಲಿಯು ನಾಯಕನೊಂದಿಗೆ ಒಪ್ಪಂದ ಮಾಡಿಕೊಂಡು ಪೊಗದಿಯನ್ನು ಪಡೆದು ಶ್ರೀರಂಗಪಟ್ಟಣಕ್ಕೆ ಹಿಂದಿರುಗಿದನು (ಪು. ೧೮ – ೨೦).

ಋ) ಶತ್ರುಗಳ ಕುಟಿಲ ಆಕ್ರಮಣವನ್ನು ಸಮಯಸ್ಫೂರ್ತಿಯಿಂದ ತಪ್ಪಿಸಿದ ಓಬವ್ವೆಯ ಸಾಹಸವು ಅರಸನಿಂದ ಮೊದಲ್ಗೊಂಡು ಎಲ್ಲ ವರ್ಗದವರಿಂದಲೂ ಪ್ರಶಂಸಿಸಲ್ಪಟ್ಟಿತು. ಮದಕರಿನಾಯಕನು ಓಬವ್ವೆಯನ್ನೂ ಈಕೆಯ ಬಂಧುಗಳನ್ನೂ ರಾಜಸಭೆಗೆ ಆಹ್ವಾನಿಸಿ, ಈಕೆಯ ಧೈರ್ಯ – ಸಾಹಸಗಳನ್ನು ಹೊಗಳಿ ಈಕೆಯು ದುರ್ಗದ ರಕ್ಷಣೆಗಾಗಿ ಮಾಡಿದ ಸೇವೆಯನ್ನು ಪರಿಗಣಿಸಿ, ತನಗೆ ಬೇಕಾದುದನ್ನು ಬೇಡಬಹುದೆಂದು ಈಕೆಯನ್ನು ಕೇಳಿದನು. ತನಗೆ ಏನೂ ಬೇಡವೆಂದು ಬಿನ್ನವಿಸಿಕೊಂಡ ಓಬವ್ವೆಯು, ತನ್ನ ಮರಣಾನಂತರ ತಾನು ತನ್ನ ವಂಶದವರಿಗೆ ಕುಲದೇವತೆಯಾಗಿರುವೆನೆಂತಲೂ ಹಿಡಿಯಲು ಅನುಮತಿ ನೀಡಿ ಇಂತಹ ಉತ್ಸವಗಳಿಗೆ ಪ್ರತಿಯೊಬ್ಬ ಪುರಪ್ರಮುಖರು ಮತ್ತು ಪ್ರಜೆಗಳಿಂದ ಅವರ ಶಕ್ತ್ಯಾನುಸಾರ ಕಾಣಿಕೆಯನ್ನು ಕೊಡಿಸಬೇಕೆಂತಲೂ ಪ್ರತಿ ಶುಭಮುಹೂರ್ತಗಳಲ್ಲಿಯೂ ತನ್ನ ಹೆಸರಿನಿಂದ ತನ್ನ ವಂಶಜರಿಗೆ ಒಂದು ವೀಳೆಯವನ್ನು ಕೊಡಿಸಬೇಕೆಂತಲೂ ಅರಸನಲ್ಲಿ ಬೇಡಿಕೊಂಡಳು. ಅರಸನು ಈಕೆಯ ಪ್ರತಿಯೊಂದು ಬೇಡಿಕೆಯನ್ನೂ ಚಾಚೂ ತಪ್ಪದೆ ನದೆಸಿಕೊಡುವುದಾಗಿ ತಾಮ್ರ ಮತ್ತು ಶಿಲಾಶಾಸನಗಳನ್ನು ಬರೆಯಿಸಿದನು. ಅಲ್ಲದೆ, ಸ್ವಯಂಪ್ರೇರಿತನಾಗಿ ಚಿತ್ರದುರ್ಗದ ಬರಿಗೆರೆಯ ಪಶ್ಚಿಮದಲ್ಲಿರುವ ಅಗಸನಕಲ್ಲು ಗ್ರಾಮವನ್ನು ಈಕೆಯ ವಂಶಜರಿಗೆ ಜಹಗೀರಿಯಾಗಿ ನೀಡಿ, ಅದನ್ನು ವಂಶಪಾರಂಪರ್ಯವಾಗಿ ಅನುಭವಿಸಿಕೊಂಡು ಬರುವಂತೆಯೂ ಶಾಸನ ಬರೆಯಿಸಿಕೊಟ್ಟನು. ಓಬವ್ವೆಯನ್ನು ಪೀತಾಂಬರಗಳಿಂದ ಅಲಂಕರಿಸಿ, ಈಕೆಯ ಮಡಿಲಲ್ಲಿ ಮೂರುಮೊರ ಹೊನ್ನುಗಳನ್ನು ಸುರಿದು ಸತ್ಕರಿಸಿ ಎಲ್ಲಾ ರಾಜಮರ್ಯಾದೆಗಳೊಡನೆ ಮೇಲುದುರ್ಗ ಮತ್ತು ಕೆಳದುರ್ಗಗಳ ಬೀದಿಗಳಲ್ಲೆಲ್ಲಾ ಮೆರವಣಿಗೆ ಮಾಡಿಸಿದನು. ಇದಲ್ಲದೆ ಈಕೆಯ ಶೌರ್ಯದ ನೆನಪಿಗಾಗಿ ಶಕವರ್ಷ ೧೬೯೯ನೇ ಹೇವಿಳಂಬಿ ಸಂವತ್ಸರದ ಭಾದ್ರಪದಮಾಸದಲ್ಲಿ ಚಿತ್ರದುರ್ಗದ ಕೋಟೆಗೆ ಮತ್ತೊಂದು ಸುತ್ತುಕೋಟೆಯನ್ನು ಕಟ್ಟಿಸಿ ಅದರ ಒಂದು ಬಾಗಿಲಿಗೆ ‘ಒನಕೆಕಿಂಡಿಬಾಗಿಲು’ ಎಂದು ಹೆಸರಿಸಿದನು. ಓಬವ್ವೆಯ ಒಂದು ಪ್ರತಿಮೆಯನ್ನು ಕರಿಯ ಕಲ್ಲಿನಲ್ಲಿ ಕೆತ್ತಿಸಿ ಕಳ್ಳಂಗಡಿ ಹತ್ತಿರದಲ್ಲಿ ಪೂರ್ವಾಭಿಮುಖನಾಗಿರುವಂತೆ ಸ್ಥಾಪಿಸಿದನು (ಪು. ೨೧ – ೨೩).

ೠ) ಓಬವ್ವೆಯು ಶಕ ೧೬೯೧ ನೇ ವಿರೋಧಿನಾಮ ಸಂವತ್ಸರದ ಭಾದ್ರಪದಮಾಸದಲ್ಲಿ (ಕ್ರಿ.ಶ. ೧೭೬೯ರ ಸೆಪ್ಟೆಂಬರ್ ನಲ್ಲಿ) ದೈವಾಧೀನಳಾದಳು. ಈಕೆಯ ಪಾರ್ಥಿವ ಶರೀರವನ್ನು ರಾಜಮರ್ಯಾದೆಯೊಡನೆ ಪೇಟೆಗಳಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದು ಬೆಟ್ಟದ ಮೆಲೆ ತಣ್ಣೀರುಚಿಲುಮೆಯ ಪೂರ್ವಕ್ಕೆ ಈಕೆಯ ಸಮಾಧಿಯನ್ನು ಮಾಡಿಸಲಾಯಿತು. ಆ ನಂತರ ಈ ಸಮಾಧಿಯ ಮೇಲೆ ಒಂದು ಚಿಕ್ಕ ಕಲ್ಲುಮಂಟಪವನ್ನು ನಿರ್ಮಿಸಲಾಯಿತು (ಪು. ೨೪ – ೨೫).

ಎ) ಕ್ರಿಸ್ತಶಕ ೧೭೭೯ರಲ್ಲಿ ಚಿತ್ರದುರ್ಗವು ಹೈದರ್ ಆಲಿಯ ವಶವಾದ ತರುವಾಯ ಓಬವ್ವೆಯ ಏಕಮಾತ್ರ ಪುತ್ರನಾದ ಆನೆಪ್ಪ (ಹುಚ್ಚಪ್ಪ) ನೊಂದಿಗೆ ಉಳಿದ ಕಹಳೆಯವರು ಚಿತ್ರದುರ್ಗಕ್ಕೆ ಐದುಮೈಲಿ ದೂರವಿರುವ ದೊಡ್ಡಸಿದ್ದವ್ವನಹಳ್ಳಿಗೆ ಹೋಗಿ ನೆಲೆಸಿದರು. ಇನ್ನುಳಿದ ಹಲವರು ಚಿತ್ರದುರ್ಗ ಮತ್ತು ಸುತ್ತಲುತ್ತಲಿನ ಪಿಳ್ಳೇಕೆರೇನಹಳ್ಳಿ, ತಮಟಕಲ್ಲು, ಕಸವನಹಳ್ಳಿ, ಅತ್ತಿಗೆರೆ, ಸಜ್ಜನಕೆರೆ, ಸೊಂಡೇಕೆರೆ, ಸಾಣೀಕೆರೆ, ದುಮ್ಮಿ ಇತ್ಯಾದಿ ಸ್ಥಳಗಳಲ್ಲಿ ನೆಲೆಸಿದರು. ಈ ವಂಶಜರಿಗೆ ನ್ಯಾಯವಾಗಿ ಲಭ್ಯವಾಗಬೇಕಾಗಿದ್ದ ಅಗಸನಕಲ್ಲು ಗ್ರಾಮದ ಜಹಗೀರಿಯು ಹಲವು ಸ್ವಾರ್ಥಿಗಳ ಕುತಂತ್ರದ ದೆಸೆಯಿಂದಾಗಿ ತಪ್ಪಿಹೋಯಿತು (ಪು. ೨೮ – ೩೧), ಇತ್ಯಾದಿ.

೨.೪. ಎ.ಡಿ. ನರಸಿಂಹಯ್ಯ ಅವರು ಒದಗಿಸಿದ ಮಾಹಿತಿಯ ಪ್ರಕಾರ –

ಅ) ಚಿತ್ರದುರ್ಗಕೋಟೆಯಲ್ಲಿ ಓಬವ್ವೆಯ ಘಟನೆಯು ‘ಫಿರಂಗಿಯುದ್ಧ’ ದಮ್ದು ನಡೆಯಿತು. ಈ ಘಟನೆಯಲ್ಲಿ ಈಕೆಯು ಮಡಿಯಲಿಲ್ಲ. ಚಿತ್ರದುರ್ಗದ ಪತನದ ತರುವಾಯು, ಶಕ ೧೭೧೧ ಫಾಲ್ಗುಣಮಾಸದಲ್ಲಿ ಅಂದರೆ ಕ್ರಿ.ಶ. ೧೭೭೯ರಲ್ಲಿ ಓಬವ್ವೆಯ ಪತಿ ಮದ್ದ ಹನುಮಪ್ಪನು ತನ್ನ ಮಗ ಆನೆಪ್ಪನ ಸಹಿತ ದೊಡ್ದಸಿದ್ದವ್ವನಹಳ್ಳಿಗೆ ತೆರಳುವಾಗ ತನ್ನ ಸಂಗಡ ಈ ಕೆಳಗಿನ ವಸ್ತುಗಳನ್ನು ತೆಗೆದುಕೊಂಡು ಹೋದನು :

೪,೦೦೦ ವರಹ

೧೨, ೦೦೦ ಬೆಳ್ಳಿಯ ಪುಲಿಸೆ ರೂಪಾಯಿ

೩೦,೦೦೦ ಹೊನ್ನು, ಚಿನ್ನ ಮತ್ತು ಬೆಳ್ಳಿಯ ಒಡವೆಗಳು

೨ ಕಂಚಿನ ಕಹಳೆಗಳು

೧ ಉಕ್ಕಿನ ಯುದ್ಧಕವಚ

೧೬ ಸುರಾಯಿ ಕತ್ತಿಗಳು

೨ ಗುರಾಣಿಗಳು.

ಆನೆಪ್ಪನು ತನ್ನ ಸೋದರಮಾವ ಈಟಿ ಕದರಪ್ಪನ ಮಗ ನರಸಿಂಹಪ್ಪನ ಮಗಳು ಲಕ್ಷ್ಮೀದೇವಿಯನ್ನು ನಿಡುಗಲ್ಲಿನಲ್ಲಿ ಮದುವೆಯಾದನು. ಈತನ ನಾಲ್ಕು ಗಂಡುಮಕ್ಕಳ ಹೆಸರುಗಳೆಂದರೆ, ದೊಡ್ಡಹನುಮಪ್ಪ, ಬಾಲಪ್ಪ, ಏಕನಾಥಪ್ಪ ಮತ್ತು ಚಿಕ್ಕಹನುಮಪ್ಪ, ಇವರ ಪೀಳಿಗೆಯವರು ಚಿತ್ರದುರ್ಗ ತಾಲ್ಲೂಕು ದೊಡ್ಡ ಸಿದ್ದವ್ವನಹಳ್ಳಿ, ಆಂಧ್ರದ ಹಿಂದೂಪುರ, ಅನಂತಪುರ, ಮಡಕಸಿರಾ ತಾಲ್ಲೂಕು ಗುಡಿಬಂಡೆ ಮತ್ತು ಮಂದಲಹಳ್ಳಿಗಳಲ್ಲೂ ಓಬವ್ವೆಯ ಗೋತ್ರ – ಕುಲದವರು ಚಳ್ಳಕೆರೆ ತಾಲ್ಲೂಕು ಪರಶುರಾಂಪುರದ ಅಗ್ರಹಾರದಲ್ಲಿಯೂ ನೆಲೆಸಿರುವರು. (ವಿವರವಾದ ವಂಶವೃಕ್ಷಕ್ಕೆ ಅನುಬಂಧ ನೋಡಿ).

ಆ) ಚಿತ್ರದುರ್ಗಬೆಟ್ಟದ ಮೇಲೆ ಅಕ್ಕ – ತಂಗಿಹೊಂಡದ ಉತ್ತರಕ್ಕೆ ಎತ್ತರದ ಸ್ಥಳದಲ್ಲಿರುವ ಈಗಿನ ತುಂಗಭದ್ರೇಶ್ವರ ದೇವಾಲಯವು ಹಿಂದೆ ನಾಯಕ ಅರಸರ ಕಾಲದಲ್ಲಿ ಲಕ್ಷ್ಮೀನರಸಿಂಹ ಸ್ವಾಮಿಯ ನೆಲೆಯಾಗಿದ್ದು, ಇಲ್ಲಿ ಆ ದೇವರ ‘ಕೇಲು’ ಇದ್ದಿತು.[8] ಚಿತ್ರದುರ್ಗ ಸಂಸ್ಥಾನದ ಪತನಾನಂತರ, ಕ್ರಿ.ಶ. ೧೮೦೩ರಲ್ಲಿ ಓಬವ್ವೆಯ ಮೊಮ್ಮಕ್ಕಳಲ್ಲಿ ಹಿರಿಯವನಾದ ದೊಡ್ಡ ಹನುಮಪ್ಪನು ಈ ದೇವರ ಪೆಟ್ಟಿಗೆಯನ್ನೂ ದೇವಾಲಯದ ಎದುರಿಗೆ ನಿಲ್ಲಿಸಲಾಗಿದ್ದ ಕಂಬ (ಕಂಬದದೇವರು – ಕಂಬದ ನರಸಿಂಹಸ್ವಾಮಿ) ವನ್ನೂ ತೆಗೆದುಕೊಂಡು ಹೋಗಿ ಚಳ್ಳಕೆರೆ ತಾಲ್ಲೂಕು ಬೆಳಗೆರೆಯಲ್ಲಿ ಸ್ಥಾಪಿಸಿದನು.[9] ತುಂಗಭದ್ರೇಶ್ವರ ದೇವಾಲಯದ ಎಡಬದಿಯ ಬೃಹತ್ ಬಂಡೆಗಳ ಅಡಿಯಲ್ಲಿರುವ ನಿಸರ್ಗದತ್ತ ಗುಹೆಯಲ್ಲಿ ನಿರ್ಮಿಸಿರುವ ಕಟ್ಟೆಯನ್ನು ಹಿಂದೆ ‘ಯಜಮಾನನಕಟ್ಟೆ’ ಹಾಗೂ ‘ಪಂಚಾಯಿತಿಕಟ್ಟೆ’ ಯೆಂದು ಕರೆಯುತ್ತಿದ್ದರು. ‘ಸಭಾಗೃಹ’ ಹಾಗೂ ‘ಉಗ್ರಾಣದಕಟ್ಟೆ’ ಯೆಂತಲೂ ಕರೆದಿರುವ ಸಾಧ್ಯತೆಯಿದೆ. ಇಲ್ಲಿ ಚಲವಾದಿ ಮತಾಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಿ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತಿದ್ದಿತು – ಇತ್ಯಾದಿ.

[1] ಚಿತ್ರದುರ್ಗದ ಪಾಳಯಗಾರರು, ಬೆಂಗಳೂರು, ೧೯೨೪, ಪು. ೯೧ – ೯೪

[2] B.N. Sri Sathyan(Ed.): 1967, Mysore State Gazetter – Chitradurga District, Bangalore, p.393

[3] ಬಿ. ರಾಜಶೇಖರಪ್ಪ, ‘ಚಿತ್ರದುರ್ಗಜಿಲ್ಲೆಯ ಇತಿಹಾಸ ಸಂಶೋಧನೆಯ ಸವಾಲುಗಳು’, ತರಳುವಾಳು, ೨೬ – ೨, ನವೆಂಬರ್/ಡಿಸೆಂಬರ್/ಜನವರಿ ೨೦೦೧, ಪು. ೧ – ೬

[4] ಇದು ಕಾಗದದ ದಾಖಲೆ ; ವಂಶಾವಳಿ ಪ್ರತಿಗಳಲ್ಲಿ ಭಿನ್ನಸಂಪ್ರದಾಯದ್ದು, ಚಿತ್ರದುರ್ಗದ ಟಿ. ಜಯಣ್ಣ ಅವರಲ್ಲಿದ್ದ ಕೈಬರಹದ ಈ ದಾಖಲೆಯ ನಕಲನ್ನು ನನ್ನ ಅಧ್ಯಯನಕ್ಕೆ ಒದಗಿಸಿದವರು ಚಿತ್ರದುರ್ಗದ ಪ್ರೊ. ಎಚ್. ಶ್ರೀಶೈಲ ಆರಾಧ್ಯ ಮತ್ತು ಪಾಂಡವಪುರದ ನಾ. ಪ್ರಭಾಕರ್.

ಈ ದಾಖಲೆಯ ವೃತ್ತಾಂತವನ್ನೇ ಹೋಲುವ ಇನ್ನೊಂದು ಹಸ್ತಪ್ರತಿ (ಕೈಫಿಯತ್)ಯು ಚಿತ್ರದುರ್ಗ ನಾಯಕ ಅರಸರ ಮಂತ್ರಿಯಾಗಿದ್ದ ಪರಶುರಾಮಪ್ಪನ ಸಂತತಿಗೆ ಸೇರಿದವರೆಂದು ಹೇಳಲಾದ ಮತ್ತು ಬೆಂಗಳೂರು ಗ್ರಾಮಾಂತರಜಿಲ್ಲೆ ರಾಮನಗರದ ನಿವಾಸಿಯಾಗಿದ್ದ ‘ಪೋಸ್ಟ್’ ರಂಗಪ್ಪ ಅವರ ವಶದಲ್ಲಿದ್ದಂಥದು. ಅದರಲ್ಲಿ ಕೆಲ ಆಯ್ದಭಾಗಗಳನ್ನು ಡಾ. ಎಂ.ವಿ. ಶ್ರೀನಿವಾಸ್ ಮತ್ತು ಪ್ರೊ. ಎಂ.ವಿ. ಚಿತ್ರಲಿಂಗಯ್ಯ ಅವರುಗಳು ಸಂಯುಕ್ತವಾಗಿ ಸಂಪಾದಿಸಿ ‘ಇತಿಹಾಸ ಚಂದ್ರಿಕೆ’ ಮಾಸಪತ್ರಿಕೆಯಲ್ಲಿ (೩ – ೧೨ ರಿಂದ ೫.೧೦, ೧೧ ಡಿಸೆಂಬರ್ ೧೯೮೨ ರಿಂದ ನವೆಂಬರ್ ೧೯೮೩) ಪ್ರಕಟಿಸಿದರು. ಈ ಎರಡು ಪಾಠಗಳಲ್ಲಿಯ ಓಬವ್ವೆಯನ್ನು ಕುರಿತ ವೃತ್ತಾಂತವು ಭಾಷೆಯ ವ್ಯತ್ಯಾಸದ ವಿನಾ ಉಳಿದಂತೆ ಒಂದೇ ರೀತಿಯದಾಗಿದೆ.

[5] ಈ ರಹದಾರಿಪತ್ರವನ್ನು ೧೯೭೩ರಲ್ಲಿ ನನ್ನ ಪರಾಮರ್ಶೆಗೆ ನೀಡಿ ಸಹಕರಿಸಿದವರು ಚಿತ್ರದುರ್ಗದ ಏಕಾಂತಪ್ಪ (ಏಕಣ್ಣ) ಮತ್ತು ದಿವಂಗತ ಎಸ್.ಎನ್. ರುದ್ರೇಶ್‍ಪೂಜಾರ್.

[6] “ಚಿತ್ರದುರ್ಗ ಸಂಸ್ಥಾನದ ಆಶ್ರಿತರಾದ ವನಕೆಕಿಂಡಿ ಓಬವ್ವೆಯ ವಂಶೀಕರಾದ ಹಾಲಿ ಚಿತ್ರದುರ್ಗ ತಾಲ್ಕು ದೊಡ್ಡಸಿದ್ದವನಹಳ್ಳಿಯಲ್ಲಿ ವಾಸವಾಗಿರುವ ಚಲುವಾದಿಮತದ ಶ್ರೀ ಬಿ.ಸಿ. ಶ್ರೀಕಂಠಯ್ಯ, ಶ್ರೀ ಎ.ಡಿ. ನರಸಿಂಹಯ್ಯ, ಶ್ರೀ ಎ.ಡಿ. ರಾಮಯ್ಯ, ಶ್ರೀ ಸಿ. ತಿಪ್ಪೇರುದ್ರಯ್ಯ ಮೊದಲಾದವರಿಗೆ ಬರೆಸಿ ಕಳುಹಿಸಿದ ರಹದಾರಿ” – ಚಿತ್ರದುರ್ಗ ಟವನ್ ಹೊರಪೇಟೆ ‘ದುರ್ಗದ ಅರಮನೆ’, ತಾ. ೨೧.೫.೧೯೫೪ (R.T.NO.675 – IR – 15.2.54). ಈ ಪತ್ರದ ನಕಲನ್ನು ನನಗೆ ನೀಡಿ ಸಹಕರಿಸಿದವರು ಚಿತ್ರದುರ್ಗದ ಎ.ಡಿ. ನರಸಿಂಹಯ್ಯ (ಈಗ ದಿವಂಗತರು).

[7] ಬೆಂಗಳೂರಿನ ಹೇಮಂತ ಪ್ರಕಾಶನದ ಪ್ರಕಟಣೆ, ೧೯೭೯, ಪುಟಗಳು ೫೫

[8] ಎ.ಡಿ. ನರಸಿಂಹಯ್ಯ ಅವರಿಂದ ತಿಳಿದುಬಂದ ಸಂಗತಿಯೆಂದರೆ, ಈ (೨೦ನೇ) ಶತಮಾನದ ಮೂರನೆಯ ದಶಕದ ಸುಮಾರಿನಲ್ಲಿ ಸ್ವಾಮಿಯೊಬ್ಬರು ಹಾಳುಬಿದ್ದಿದ್ದ ಈ ಗುಡಿಯಲ್ಲಿ ’ತುಂಗಭದ್ರೇಶ್ವರಲಿಂಗ’ ವನ್ನು ಪ್ರತಿಷ್ಠಾಪಿಸಿದರು; ಅವರು ಲಿಂಗೈಕ್ಯರಾದ ತರುವಾಯ ಅವರ ಸಮಾಧಿಯನ್ನು ಈ ದೇವಾಲಯದ ಎದುರಿಗೇ ಮಾಡಲಾಯಿತು. ಇಲ್ಲಿ ಈಗಲೂ ಸಣ್ಣಕಟ್ಟೆಯೊಂದನ್ನು ಕಾಣಬಹುದು.

[9] ಎ.ಡಿ, ನರಸಿಂಹಯ್ಯ ಅವರೇ ತಿಳಿಸಿರುವಂತೆ, ಕಂಬದ ನರಸಿಂಹ ಮತ್ತು ಲಕ್ಷ್ಮೀದೇವರುಗಳ ಪ್ರತಿಷ್ಠಾಪನೆಯು ಬೆಳಗೆರೆಯಲ್ಲಿ ಆಂಧ್ರದ ದುತ್ತಲೂರು ಗುರು ರಂಗನಾಥಾಚಾರ್ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು. ಚಿತ್ರದುರ್ಗದಲ್ಲಿ ನಡೆಯಬೇಕಿದ್ದ ಈ ದೇವರ ಉತ್ಸವವು ಈಗ ಪ್ರತಿವರುಷವೂ ಬೆಳಗೆರೆಯಲ್ಲೆ ನಡೆಯುತ್ತಿದೆ. ದೊಡ್ಡಹನುಮಂತಪ್ಪ, ಚಿಕ್ಕಹನುಮಂತಪ್ಪ, ಸಂಜೀವಪ್ಪ, ಸಾಣೀಕೆರೆಯ ಹನುಮಂತಪ್ಪ, ಕೆಳಗಲಹಟ್ಟಿ, ಪರಶುರಾಮಣ್ಣ ಮೊದಲಾದವರು ಇದಕ್ಕೆ ಸಂಬಂಧಿಸಿದ ಅಣ್ಣತಮ್ಮಂದಿರು.