. ಆಕರಗಳ ವಿಮರ್ಶೆ

ಈ ಮೇಲೆ ಪ್ರಸ್ತಾಪಿಸಲಾಗಿರುವ ಆಕರಗಳು ಒದಗಿಸುವ ಸಂಗತಿಗಳ ಹಿನ್ನೆಲೆಯಲ್ಲಿ ಓಬವ್ವೆಯ ಘಟನೆಯನ್ನು ಕುರಿತ ಕೆಲವಂಶಗಳನ್ನು ಇಲ್ಲಿ ವಿಮರ್ಶಿಸಬಹುದು :

ಓಬವ್ವೆಯ ಚಾರಿತ್ರಿಕತೆಯನ್ನು ಸಮರ್ಥಿಸಲು ಚಿತ್ರದುರ್ಗ ನಾಯಕ ಅರಸರಿಗೆ ಸಂಬಂಧಿಸಿದ ದಾಖಲೆಗಳಲ್ಲಿ ಒಂದಾದ ಹಾಗೂ ಭಿನ್ನ ಸಂಪ್ರದಾಯದ ದಾಖಲೆಯಲ್ಲಿ (ಇದನ್ನು ‘ಕೈಫಿಯತ್’ ಎಂದು ಸಂಬೋದಿಸಿದೆ) ಮಾತ್ರ ಪ್ರಸ್ತಾಪಿಸಲಾಗಿದೆ. ಇತರ ದಾಖಲೆಗಳಲ್ಲಿ ಓಬವ್ವೆಯ ಘಟನೆಯಾಗಲೀ ಈಕೆಯ ಮತ್ತು ಈಕೆಗೆ ಸಂಬಂಧಿಸಿದವರ ಹೆಸರುಗಳಾಗಲೀ ಕಂಡುಬರುವುದಿಲ್ಲ. ಪ್ರಸ್ತುತ ‘ಕೈಫಿಯತ್’ನಲ್ಲಿಯಾದರೂ ಓಬವ್ವೆಯ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ ‘ದಿಡ್ಡಿಬಾಗಿಲ ಪಹರೆಗೆ ನೇಮಿಸಿದ ಹೊಲೆಯರವನ ಹೆಂಡತಿ’ ಎಂದಷ್ಟೆ ಗುರುತಿಸಲಾಗಿದೆ. ನಾಯಕರ ಅರಸರ ವಂಶೀಕರು ಓಬವ್ವೆಯ ವಂಶಜರಿಗೆ ನೀಡಿರುವ ರಹದಾರಿಪತ್ರಗಳಲ್ಲಿ ಈಕೆಯನ್ನು ‘ವನಕೆಕಿಂಡಿ ಓಬವ್ವೆ’ಳೆಂದು ನೇರವಾಗಿಯೇ ಹೆಸರಿಸಿರುವರು.

‘ವನಕೆ ಕಿಂಡಿಬಾಗಿಲು’ (‘ಓಬವ್ವನ ಕಿಂಡಿಬಾಗಿಲು’ ಅಲ್ಲ) ನಿರ್ಮಾಣದ ಪ್ರಸ್ತಾಪವು ಈ ಎಲ್ಲ ಬರವಣಿಗೆಗಳಲ್ಲೂ ಒಂದೇ ತೆರನಾಗಿದೆ.

‘ಕೈಫಿಯತ್’ ಹೇಳುವಂತೆ, ದುರ್ಗವನ್ನಾಕ್ರಮಿಸಲು ಬಂದ ಶತ್ರುಗಳು ಪಶ್ಚಿಮದ ಕಡೆ ಮೊಕ್ಕಾಂ ಮಾಡಿದ್ದರಲ್ಲದೆ, ಸರಿಹೊತ್ತಿನಲ್ಲಿ (ಮಧ್ಯರಾತ್ರಿಯಲ್ಲಿ) ಹುಚ್ಚಂಗಮ್ಮನಹೊಂಡ (ಈಗಿನ ಸಿಹಿನೀರುಹೊಂಡ)ದ ಓಣಿ ಹಿಡಿದು ದಿಡ್ಡಿಯಲ್ಲಿ ಒಬ್ಬೊಬ್ಬರಾಗಿ ನುಸುಳಲು ಪ್ರಯತ್ನಿಸಿದರು. ಪ್ರೊ. ಕೃಷ್ಣಯ್ಯ ಅವರೂ ಪ್ರಸ್ತಾಪಿಸಿರುವಂತೆ, ಉತ್ತರದಿಕ್ಕಿನ ಕೋಟೆಯಲ್ಲಿಯ ಕಳ್ಳಂಗಡಿಯಲ್ಲಿ ಮೊಸರಿನವಳು ನುಸುಳಿ ಕೋಟೆಯನ್ನು ಪ್ರವೇಶಿಸಿದಳು; ಮತ್ತು ಶತ್ರುಗಳ ಪರವಾದ ಗೂಢಚಾರರು ಆ ಎಡೆಯನ್ನು ಪರಿಶೀಲಿಸಿದಾಗ ಅವರಿಗೆ ಸಣ್ಣದ್ವಾರವೊಂದು ಕಂಡುಬಂದಿತು. ಈ ಎರಡು ಉಲ್ಲೇಖಗಳೂ ಕಳ್ಳಂಗಡಿತಯೆಂದು ಸಂಬೋಧಿತವಾದ ಮಾರ್ಗವು ಕೋಟೆಯ ಪ್ರಾಕಾರದಲ್ಲಿ ಅಳವಡಿಸಲಾದ ‘ದಿಡ್ದಿಬಾಗಿಲು’ ಅಲ್ಲದೆ ಬೇರೆಯಲ್ಲವೆಂಬುದನ್ನು ಸೂಚಿಸುವಂತಿವೆ.

ಚಿತ್ರದುರ್ಗಬೆಟ್ಟ ಪರಿಸರದ ವಾಯುವ್ಯ ಮತ್ತು ಉತ್ತರದಿಕ್ಕಿನ ಕೋಟೆಯೆಂದರೆ ವನಕೆಕಿಂಡಿ ಬಾಗಿಲು (ಹನುಮನಬಾಗಿಲು) ಮತ್ತು ಸಿಹಿನೀರುಹೊಂದದಬಾಗಿಲುಗಳ ನಡುವಣ ಹೊರಸುತ್ತುಕೋಟೇಯೇ. ಈ ಹೊರಸುತ್ತುಕೋಟೆಯ ಪ್ರಾಕಾರದ ಮಧ್ಯಭಾಗದಲ್ಲಿರುವ ಹಾಗೂ ಕೋಟೆಯ ಒಳಭಾಗದ ಪಲ್ಗುಣೇಶ್ವರ ದೇವಾಲಯಕ್ಕೆ ಸಮೀಪದಲ್ಲಿರುವ ದಿಡ್ದಿಬಾಗಿಲು ಈ ಸಂಭಂದದಲ್ಲಿ ಪರಿಗಣಿಸಲರ್ಹವಾದುದು. ಈ ಬಾಗಿಲಿನಲ್ಲಿ ಒಂದು ಬಾರಿಗೆ ಒಬ್ಬ ವ್ಯಕ್ತಿ ಮಾತ್ರ ಸಂಚರಿಸಲು ಸಾಧ್ಯ.

‘ಕೈಫಿಯತ್’ ನಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ಸಂಗತಿಯು ಇದೇ ದಿಡ್ಡಿಬಾಗಿಲಿಗೆ ಸಂಬಂಧಿಸಿದುದೆನ್ನಬಹುದು. ಈ ದಾಖಲೆಯಲ್ಲಿ ‘ಹುಚ್ಚಂಗಮ್ಮನಹೊಂಡದ ವೋಣಿ’ ಎಂಬ ಸೂಚನೆಯಿರುವುದು ಗಮನಾರ್ಹ. ಈ ಹುಚ್ಚಂಗಮ್ಮನಹೊಂಡ (ಸಿಹಿನೀರುಹೊಂಡ) ಮತ್ತು ಕೋಟೆಯ ಹೊರಸುತ್ತು ಪ್ರಾಕಾರದ ನಡುವೆ ಇರುವ ಪ್ರದೇಶವು ಭಾರಿಬಂಡೆಗಳಿಂದ ಕೂಡಿದ್ದು, ಅವುಗಳ ಮಧ್ಯೆ ಹಾದುಹೋಗಲು ಜಾಗವೂ ಇದೆ. ಇದು ಕಂದಕ ಮತ್ತು ಕೋಟೆಯ ಪ್ರಾಕಾರಗಳ ಮಧ್ಯೆ ಇರುವುದರಿಂದ ಇಲ್ಲಿಯ ದಿಡ್ಡಿಬಾಗಿಲನ್ನು ಈ ಮಾರ್ಗದಿಂದ ಸುಲಭವಾಗಿ ತಲುಪಬಹುದು. ‘ಕೈಫಿಯತ್’ನ ವೃತ್ತಾಂತವನ್ನು ಪರಿಗಣಿಸುವುದಾದರೆ, ಶತ್ರುಸೈನಿಕರು ಈ ದಿಡ್ಡಿಬಾಗಿಲಿನಿಂದಲೇ ಕೋತೆಯೊಳಗೆ ಪ್ರವೇಶಿಸಲೆತ್ನಿಸಿದರೆಂದು ಭಾವಿಸಬೇಕಾಗುತ್ತದೆ.

[1]

ಈ ದಿಡ್ಡಿಬಾಗಿಲು ಈ ಭಾಗದ ಕೋಟೆಯ ಬಹುಮುಖ್ಯ ಎಡೆಯಾಗಿದ್ದಿತೆಂದು ತೋರುತ್ತದೆ. ಕಾರಣವೇನೆಂದರೆ, ಕೋಟೆಯ ಹೊರಗಡೆಯವರಿಗೆ ಈ ಬಾಗಿಲು ಕಾಣಿಸದಂತೆ ಇದರ ಮುಂದೆ ಸ್ವಲ್ಪದೂರದಲ್ಲಿ ಅಡ್ಡಲಾಗಿ ಗೋಡೆಯನ್ನು ನಿರ್ಮಿಸಲಾಗಿದ್ದಿತು. (ಈಗ ಇದು ನಾಶಗೊಂಡಿದೆ). ಬಾಗಿಲಿಗೆ ಹೊಂದಿಕೊಂಡಂತೆ ಕಂದಕಕ್ಕೆ ಅಭಿಮುಖವಾಗಿರುವ ಮೆಟ್ಟಿಲುಗಳಿರುವ ಮಾರ್ಗವನ್ನೂ ಮಾಡಲಾಗಿದ್ದಿತು. (ಇದೂ ಮುಚ್ಚಿಹೋಗಿದೆ). ವನಕಕಿಂಡಿ ಬಾಗಿಲುಸುತ್ತಿನ ಕಂದಕವು ಸಿಹಿನೀರುಹೊಂಡದ ಕಂದಕವನ್ನು ಕೂಡುವ ಎಡೆಯ ಮೇಲ್ಭಾಗದಲ್ಲಿರುವ ಈ ದಿಡ್ಡಿಬಾಗಿಲಿನ ರಕ್ಷಣೆಗಾಗಿ ಇಲ್ಲಿಯ ಕಂದಕದ ಗೋಡೆಯಲ್ಲಿಯೇ ೨ ಬುರುಜುಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಈ ದಿಡ್ಡಿಬಾಗಿಲು ಮತ್ತು ಈ ಸುತ್ತಿನಕೋಟೆಯ ರಕ್ಷಣೆಗಾಗಿ ಪ್ರತ್ಯೇಕ ಕಾವಲು ವ್ಯವಸ್ಥೆಯೂ ಇದ್ದಿತೆನ್ನುವುದುಗಮನೀಯ ಸಂಗತಿ.[2]

ಓಬವ್ವೆಯು ತನ್ನ ಸಾಹಸವನ್ನು ತೋರಿಸಿದಳೆಂದು ನಂಬಲಾದ ಎಡೆ ಸಹಾ ಇದೇ ಹೊರಸುತ್ತುಕೋಟೆಯ ವನಕೆಕಿಂಡಿ ಅಥವಾ ಹನುಮನಬಾಗಿಲಿಗೆ ಹೊಂದಿಕೊಂಡಂತೆಯೇ ಬೃಹತ್‍ಬಂಡೆಯ ಅಡಿಯಲ್ಲಿದೆ. ಒಬ್ಬ ವ್ಯಕ್ತಿಯು ಬಾಗಿಕೊಂಡು ಸುಲಭವಾಗಿ ಒಳಹೋಗಿ ಬರಬಹುದಾದಷ್ಟು ಇರುವ ಈ ಕಲ್ಲುಪೊಟರೆಯು ಕೋಟೆಯ ಒಳಪಾರ್ಶ್ವದಲ್ಲಿ ಕಣ್ಣಿಗೆ ಸ್ಪಷ್ಟವಾಗಿ ಗೋಚರಿಸಿದರೂ ಹೊರಪಾರ್ಶ್ವದಲ್ಲಿ ಹಿಂದೆ ಇದಕ್ಕೆ ಅಡ್ಡಲಾಗಿ, ಅಂದರೆ ಈ ಪೊಟರೆಯ ಆಚೆಯ ಎರಡು ಬಂಡೆಗಳ ಮಧ್ಯದಲ್ಲಿ ಅಡ್ಡಲಾಗಿ ಗೋಡೆಯನ್ನು ನಿರ್ಮಿಸಿದ್ದ ಕುರುಹು ತೋರಿಬರುತ್ತದೆ. ಅಲ್ಲದೆ, ಈ ಭಾಗವು ಬೃಹತ್ ಬಂಡೆಗಳಿಂದಲೂ ಅಗಲವಾದ ಕಂದಕದಿಂದಲೂ ಕೂಡಿದ್ದು, ಇಲ್ಲಿಂದ ಕೋಟೆಯನ್ನು ಪ್ರವೇಶಿಸುವುದು ಸುಲಭವೆಂದು ಹೇಳಲಿಕ್ಕಾಗುವುದಿಲ್ಲ.

. ಒನಕೆಕಿಂಡಿಓಬಳಗಂಡಿಓಬವ್ವನಕಿಂಡಿ

‘ವನಕೆಕಿಂಡಿಬಾಗಿಲು’ ಎಂಬ ಹೆಸರು ಓಬವ್ವೆಯ ಘಟನೆಯು ನಡೆಯಿತೆನ್ನಲಾದ ಅವಧಿಯ ಸಾಕಷ್ಟು ಪೂರ್ವದಲ್ಲಿಯೇ ಇಲ್ಲಿಯ ಬಾಗಿಲಿಗೆ ಇದ್ದಿತೆಂಬುದನ್ನು ಚಿತ್ರದುರ್ಗ ನಾಯಕ ಅರಸರ ದಾಖಲೆಗಳು ಸೂಚಿಸಿರುವುದು ಗಮನಾರ್ಹ. ಉದಾಹರಣೆಗಗೆ, ಕ್ರಿ.ಶ. ೧೫೬೮ ರಿಂದ ೧೫೮೯ರವರೆಗೆ ಆಳ್ವಿಕೆ ನಡೆಸಿದ ದುರ್ಗದ ಮೊದಲನೆಯ ಕಾಮಗೇತಿ ಸಂತತಿಯ ಅರಸ ಮತ್ತಿತಿಮ್ಮಣ್ಣನಾಯಕನು ಕ್ರಿ.ಶ.ಸು. ೧೫೭೩ರಲ್ಲಿ ಚಿತ್ರದುರ್ಗ ಪರ್ವತದಲ್ಲಿ ಕಟ್ಟಿಸಿದ ಕೋಟೆಸುತ್ತುಗಳಲ್ಲಿ ನೆಲ್ಲಿಕಾಯಿಸಿದ್ದಪ್ಪನಗುಡ್ಡದಸುತ್ತಿನಕೋಟೆ, ರಣಮಂಡಲದಸುತ್ತಿನಕೋಟೆ ಮತ್ತು ವನಿಕೆಕಂಡಿಬಾಗಿಲುಸುತ್ತಿನಕೋಟೆ – ಇವು ಮುಖ್ಯವಾದವು. ಹಾಗೆಯೇ, ಕ್ರಿ.ಶ. ೧೬೮೯ರಿಂದ ೧೭೨೧ರವರೆವಿಗೆ ದುರ್ಗವನ್ನಾಳಿದ ಬಿಚ್ಚುಗತ್ತಿ ಭರಮಣ್ಣನಾಯಕನು ಮಾಡಿಸಿದ ಕಾಮಗಾರಿಗಳಲ್ಲಿ ವನಕೆಕಿಂಡಿಬಾಗಿಲಿನ ಪ್ರಸ್ತಾಪವೂ ಬರುತ್ತದೆ. ಈತನ ಅಧೀನದ ಅಧಿಕಾರಗಳಲ್ಲಿ ಒಬ್ಬನಾದ ಹಾಗೂ ಶಾಸನೋಕ್ತವಾಗಿರುವ ಪಂಡ್ರಳ್ಳಿಯ ಬೊಕ್ಕಸದ ತಿಮ್ಮಪ್ಪ ಎಂಬ ಪಾರುಪತ್ಯಗಾರನು[3] ವನಿಕೆಕಿಂಡಿಬಾಗಿಲು ಬಳಿಯ ಬಾವಿಯನ್ನೂ ಬಸವಣ್ಣನ ದೇವಸ್ಥಾನವನ್ನೂ ಮಾಡಿಸಿದ. ‘ವಂಶಾವಳಿ’ ಗಳಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ಚಿತ್ರದುರ್ಗ ನಾಯಕ ಅರಸರು ನಿರ್ಣಯಿಸಿದ ಆಯಗಾರರ ಪೈಕಿ,‘ಲಕ್ಕಿಮೇಲೋರ ಚಿನ್ನನಾಯ್ಕ | ಲಕ್ಕಿನಾಯ್ಕಗೆ ಸಲ್ಲತಕ್ಕ ಬಾಬು ಮರ್ಯಾದೆ’ ವಿವರವು ತಿಳಿಸುವಂತೆ, ವನಿಕೆಕಿಂಡಿಬಾಗಿಲ ಪ್ರಾಣದೇವರ (ಹನುಮಂತದೇವರ) ಪೂಜಾರಿಕೆಯನ್ನು ಈ ಲಕ್ಕಿನಾಯಕನಿಗೆ ವಹಿಸಲಾಗಿದ್ದಿತು.

ಕರ್ನಾಟಕದ ಹಲವು ಎಡೆಗಳಲ್ಲಿ ಒನಕೆಸಂಬಂಧಿ ಆಶಯಗಳು, ಕುರುಹುಗಳು, ಸ್ಥಳಗಳು, ಸ್ಮಾರಕಗಳು ಮೊದಲಾದವು ಕಂಡುಬರುತ್ತವೆ.ಈ ದೃಷ್ಠಿಯಿಂದ, ಈ ಕೆಳಗಿನಂತೆ ಕೆಲವು ಉದಾಹರಣೆಗಳನ್ನು ಗಮನಿಸಬಹುದು :

ಒನಕೆಕಿಂಡಿ  ಹಂಪಿ, ಹೊಸಪೇಟೆ ತಾಲ್ಲೂಕು, ಬಳ್ಳಾರಿ ಜಿಲ್ಲೆ
ಒನಕೆಕಿಂಡಿ  ವೀರನದುರ್ಗಕೋಟೆ, ಕೂಡ್ಲಿಗಿ ತಾಲ್ಲೂಕು, ಬಳ್ಳಾರಿ ಜಿಲ್ಲೆ
ಒನಕೆಕಿಂಡಿ  ಶಿವಗಂಗೆಬಿಟ್ಟ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ
ಒನಕೆಕಿಂಡಿಗುಡ್ದ  ಚಿಕ್ಕರಾಮಪುರದ ಬಳಿ, ಗಂಗಾವತಿ ತಾಲ್ಲೂಕು, ಕೊಪ್ಪಳ ಜಿಲ್ಲೆ
ಒ(ವ)ನಕೆಕಿಂಡಿಬಾಗಿಲು  ನುಂಕೇಮಲೆಗುಡ್ಡ, ಮೊಳಕಾಲ್ಮೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ
ಒನಕೆತೂಬು  ಸೋದೆ, ಶಿರಸಿ ತಾಲ್ಲೂಕು, ಉತ್ತರಕನ್ನಡ
ಒನಕೆಬೆಟ್ಟ  ಸಿದ್ಧರಬೆಟ್ಟ, ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ
ಒನಕೆಹೊಂಡ  ಬಳ್ಳಿಗಾವೆ, ಶಿಕಾರಿಪುರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
ಒ(ವ)ನಕೆಮರಡಿಕಾವಲು  ಹೊಳಲ್ಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ
ವಣಕಿಹಾಳ  ಸಿಂದಗಿ ತಾಲ್ಲೂಕು, ಬಿಜಾಪುರ ಜಿಲ್ಲೆ
ವನಕಿಹಾಳ  ಮುದ್ದೆಬಿಹಾಳ ತಾಲ್ಲೂಕು, ಬಿಜಾಪುರ ಜಿಲ್ಲೆ – ಇತ್ಯಾದಿ.

‘ಒ(ವ)ನಕೆ’ ಸಂಬಂಧಿ ಹೆಸರುಗಳ ಹಿನ್ನೆಲೆಯಲ್ಲಿ ಕೆಲವು ಆಶಯಕತೆಗಳೂ ಪ್ರಚಲಿತದಲ್ಲಿರಬಹುದು. ಆದರೆ ಈ ಹೆಸರು ನೈಸರ್ಗಿಕ ವೈಲಕ್ಷಣ್ಯದ ಕಾರಣವಾಗಿಯೂ ರೂಢಿಗೆ ಬಂದಿರುವುದು ಇಲ್ಲಿ ಸ್ಪಷ್ಟಪಡುತ್ತದೆ. ಹಂಪಿಯ ‘ಒನಕೆಕಿಂಡಿ’ ಯು ತುಂಗಭದ್ರಾನದಿಯು ಎಡಕ್ಕೆ ಹೊರಳುವ ಜಾಗದಲ್ಲಿ ಸೃಷ್ಟಿಗೊಂಡಿರುವ ಚಕ್ರತೀರ್ಥ(ಮಡು)ವನ್ನು ತಲುಪುವ ಮಾರ್ಗವಾದರೂ ಅಲ್ಲಿಯೇ ಪರಸ್ಪರ ಹೊಂದಿಕೊಂಡಂತಿರುವ ನೈಸರ್ಗಿಕ ಬಂಡೆಗಳ ನಡುವಣ ಸಂದು ಎಂಬುದು ಸರ್ವವೇದ್ಯ. ಚಿತ್ರದುರ್ಗಬೆಟ್ಟದ ‘ಒನಕೆಕಿಂಡಿ’ ಯು ಹಂಪಿಯ ‘ಒನಕೆಕಿಂಡಿ’ ಯ ಸ್ವರೂಪದ್ದಾದರೂ ಸ್ವಲ್ಪಮಟ್ಟಿಗೆ ದುರ್ಗಮವಾದುದೆನ್ನಬಹುದು. ನುಂಕೇಮಲೆ ಗುಡ್ಡದಲ್ಲಿ ಎರಡು ಬಂಡೆಗಳ ನಡುವಣ ಮಾರ್ಗವನ್ನೆ ‘ಒ(ವ)ನಿಕೆಕಿಂಡಿಬಾಗಿಲು’ ಎನ್ನಲಾಗುತ್ತದೆ. ವೀರನದುರ್ಗಕೋಟೆಯಲ್ಲಿ ಸಹಾ ಎರಡು ಬೃಹತ್‍ಬಂಡೆಗಳ ಸಂದಿಯನ್ನು ಬಳಸಿ ಕಟ್ಟಲಾದ ಬಾಗಿಲಿಗಿರುವ ಹೆಸರು ‘ಒನಕೆಕಿಂಡಿ’ ಯೆಂದೇ. ಶಿವಗಂಗೆಬೆಟ್ಟದಲ್ಲಿರುವ ‘ಒನಕೆಗಂಡಿ’ ಸಹಾ ಇದೇ ಸ್ವರೂಪದ್ದು. ಪಾಂಡವಪುರದ ಬಳಿಯಿರುವ ಕುಂತಿಬೆಟ್ಟದ ಪಕ್ಕದಲ್ಲಿ ಸಿದ್ದರಬೆಟ್ಟವಿದ್ದು, ಇದರ ತುದಿಯಲ್ಲಿ ನಿಂತಿರುವ ಒನಕೆಯನ್ನು ಹೋಲುವ ಒಂದೂವರೆ ಆಳು ಎತ್ತರದ ಕಲ್ಲಿನ ಕಾರಣವಾಗಿಯೇ ಈ ಬೆಟ್ಟಕ್ಕೆ ಒನಕೆಬೆಟ್ಟವೆಂತಲೂ ಕರೆಯಲಾಗುತ್ತದೆ. ಚಿಕ್ಕರಾಮಪುರದ ಬಳಿಯಿರುವ ಒನಕೆಕಿಂಡಿಗುಡ್ಡವಾಗಲಿ, ಹೊಳಲ್ಕೆರೆ ತಾಲ್ಲೂಕಿನ ಒನಕೆಮರಡಿ ಕಾವಲಾಗಲಿ ನೈಸರ್ಗಿಕ ಬಂಡೆ – ಗುಂಡು – ಗುಡ್ಡಗಳ ಪರಿಸರದಲ್ಲಿರುವ ನೆಲೆಗಳೆಂಬುದನ್ನು ಗುರುತಿಸಬಹುದು. ‘ಒನಕೆತೂಬು’ ಎಂಬುದು ಸೋದೆ ಮುಂಡಿಗೆಕೆರೆಯ ದಕ್ಷಿಣಭಾಗದಲ್ಲಿ ಕೆರೆಯಿಂದ ಕಾಲುವೆಗೆ ಬರುವಂಥಾ ನೀರನ್ನು ನಿಯಂತ್ರಿಸಲು ಬಳಕೆಗೊಳ್ಳುತ್ತಿರುವ ತೂಬು. ಇಲ್ಲಿ ಇಕ್ಕಟ್ಟಾದ ಜಾಗದಿಂದ ನೀರು ಹರಿದುಬರುವ ಮಾರ್ಗವನ್ನೆ ಈ ಹೆಸರಿನಿಂದ ಗುರುತಿಸಿರುವುದು ವೈಶಿಷ್ಟ್ಯಪೂರ್ಣವೆನಿಸಿದೆ.

ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯು ಕ್ರಿ.ಶ. ೧೧ ಮತ್ತು ೧೨ನೇ ಶತಮಾನಗಳಲ್ಲಿ ಶೈವಧರ್ಮದ ಪ್ರಮುಖ ಕೇಂದ್ರವಾಗಿದ್ದಂಥಾದ್ದು. ಇಲ್ಲಿಯ ಹಾಳುಕೆರೆಯನ್ನು ‘ಒನಕೆಹೊಂಡ’ ವೆಂತಲೂ ಇದರ ಸಮೀಪದಲ್ಲಿ ಹಾಳುಬಿದ್ದಿರುವ ಸ್ಥಿತಿಯಲ್ಲಿರುವ ಈಶ್ವರ ದೇವಾಲಯವನ್ನು ‘ಒನಕೆಹೊಂಡದ ಈಶ್ವರ ದೇವಾಲಯ’ ವೆಂತಲೂ ಕರೆಯಲಾಗುತ್ತದೆ.[4]

ಬಳ್ಳಿಗಾವೆಯಲ್ಲಿ ಪ್ರಬಲವಾಗಿದ್ದ ಕಾಳಾಮುಖಪಂಥದ ಪ್ರಭಾವವು ಈ ‘ಒನಕೆಹೊಂಡ’ ದ ಹಿನ್ನೆಲೆಯಲ್ಲಿ ಕೆಲಸಮಾಡಿದಂತೆ ತೋರಿಬರುತ್ತದೆ. ಚಿತ್ರದುರ್ಗಬೆಟ್ಟ ಪರಿಸರದಲ್ಲಿಯೂ ಕಲ್ಯಾಣ ಚಾಲುಕ್ಯರ ಅವಧಿಯಲ್ಲಿ ಕಾಳಾಮುಖಪಂಥದ ಪ್ರಭಾವ ದಟ್ಟವಾಗಿ ಇದ್ದುದಕ್ಕೆ ಹಲವಾರು ಉದಾಹರಣೆಗಳಿರುವುದರಿಂದ, ಈ ದೃಷ್ಟಿಯಿಂದ ಇಲ್ಲಿಯ ‘ಒನಕೆಕಿಂಡಿ’ ಯ ಉಗಮದ ಹಿನ್ನೆಲೆ ಮತ್ತು ಕಾಲನಿರ್ಧಾರಗಳ ಬಗೆಗೆ ಇನ್ನಷ್ಟು ಅಧ್ಯಯನಕೈಗೊಳ್ಳುವ ಅವಶ್ಯಕತೆಯಿದೆಯೆನಿಸುತ್ತದೆ.[5]

ಇನ್ನು ‘ಓಬಳಗಂಡಿ’ ಯ ಬಗೆಗೆ ಇಲ್ಲಿ ಪ್ರಸ್ತಾಪಿಸಬಹುದು. ಎರಡು ಬಂಡೆಗಳ ನಡುವಣ ಸಂದು ಅಥವಾ ಮಾರ್ಗವನ್ನು ‘ಒನಕೆಕಿಂಡಿ’ ಎಂದಿದ್ದರೆ, ಎರಡು ದೊಡ್ಡಬೆಟ್ಟಗಳ ನಡುವಣ ಹಾದಿ ಅಥವಾ ಪ್ರದೇಶವನ್ನು ‘ಓಬಳಗಂಡಿ’ ಎನ್ನಲಾಗುತ್ತದೆ. ಪ್ರಮುಖವೆನಿಸಿದ ಒಂದು ಉದಾಹರಣೆಯೆಂದರೆ, ಬಳ್ಳಾರಿ ಜಿಲ್ಲೆ, ಸೊಂಡೂರು ತಾಲ್ಲೂಕು ಧರ್ಮಪುರಕ್ಕೆ ಸುಮಾರು ೨ ಕಿ.ಮೀ. ದೂರದಲ್ಲಿರುವ ಯಶವಂತನಗರ ಸಮೀಪದಲ್ಲಿರುವ ನರಸಿಂಹಸ್ವಾಮಿ ದೇವಾಲಯವು, ಸುಮಾರು ಒಂದುನೂರು ಮೀಟರ್‍ ಗಿಂತಲೂ ಎತ್ತರದ ಎರಡು ಬಂಡೆಗಳ ಅಭಿಮುಖಸ್ಥಿಯ ‘ಓಬಳಗಂಡಿ’ ಯ ಮೇಲ್ಭಾಗದಲ್ಲಿ ನಿಂತಿದೆ. ‘ಅಹೋಬಳ ನರಸಿಂಹ’ ನ ನೆಲೆಯಿಂದಾಗಿ ಈ ಎರಡು ದೊಡ್ಡಬೆಟ್ಟಗಳ ಮಧ್ಯದ ಹಾದಿಗೆ ‘ಓಬಳಗಂಡಿ’ ಎಂದು ಹೆಸರು ಬಂದಿರುವುದು ಇದರಿಂದ ವ್ಯಕ್ತಪಡುತ್ತದೆ. ಈ ನರಸಿಂಹದೇವರನ್ನು ‘ಗಂಡಿನರಸಿಂಹ’ ನೆಂದೂ ‘ಗಂಡಿಯೊಳಗಿರುವ ಗಂಡಿನರಸಿಂಹ’ ನೆಂದೂ ಕರೆಯುವುದುಂಟು. ಕೈಫಿಯತ್ತೊಂದರಲ್ಲಿ ಈ ದೇವನೆಲೆಯನ್ನು ‘ವೋಬಳಗಂಡಿ ನರಸಿಂಹ್ಮದೇವರಗುಡಿ’ ಯೆಂದೇ ಕರೆದಿದೆ.

ಇದೇರೀತಿಯಲ್ಲಿ ಚಿತ್ರದುರ್ಗ ಬೆಟ್ಟದಲ್ಲಿಯೂ ಈಗಿನ ತುಂಗಭದ್ರೇಶ್ವರ ದೇವಾಲಯದ ಮತ್ತು ಇತರ ಇನ್ನೊಂದು ಬದಿಯಲ್ಲಿ ದಕ್ಷಿಣದಿಕ್ಕಿನಲ್ಲಿರುವ ಕಾಶಿವಿಶ್ವನಾಥ ದೇವಾಲಯದ ಮೇಲ್ಭಾಗದ ಗುಡ್ಡಗಳ ನಡುವಣ ಕಣಿವೆಪ್ರದೇಶವನ್ನು ‘ಓಬಳಗಂಡಿ’ ಯೆಂದೇ ಕರೆದಿದೆ. ಮೇಲೆಯೇ ಪ್ರಸ್ತಾಪಿಸಿರುವಂತೆ, ತುಂಗಭದ್ರೇಶ್ವರ ದೇವಾಲಯವು ಮೊದಲಿಗೆ ಲಕ್ಷ್ಮೀನರಸಿಂಹಸ್ವಾಮಿಯ ನೆಲೆಯಾಗಿದ್ದಿತೆಂದು ತಿಳಿದಿದೆ. ‘ಓಬಳ’ ಹೆಸರಿನ ಮೂಲವು ‘ಅಹೋಬಳ’ ವೇ ಆಗಿರುವುದರಿಂದ ಇಲ್ಲಿಯ ಕಣಿವೆಯನ್ನು ಅಹೋಬಳದ ಲಕ್ಷ್ಮೀನರಸಿಂಹನ ಹೆಸರಿನಿಂದಲೇ ಕರೆದಿರುವುದುಂಟು ಈ ಹಿನ್ನೆಲೆಯಲ್ಲಿ –

ಅ) ಓಬಳಗಂಡಿ

ಆ) ಒನಕೆಕಿಂಡಿ

ಇ) ಓಬವ್ವನಕಿಂಡಿ

– ಈ ಮೂರು ಎಡೆಗಳ ಬಗೆಗೆ ಸರಿಯಾದ ಹಾಗೂ ಅಧಿಕೃತ ಮಾಹಿತಿಯಿಲ್ಲದ ಕಾರಣಕ್ಕೆ, ಚಿತ್ರದುರ್ಗ ಇತಿಹಾಸಾಭ್ಯಾಸಿಗಳು, ಅಸಕ್ತರು ಹಾಗೂ ಸಂಶೋಧಕರಲ್ಲಿ ಗೊಂದಲವೇರ್ಪಟ್ಟಿದುದು ಸಹಜ. ಈ ಮೂರು ಎಡೆಗಳೂ ಕೋಟೆಯಲ್ಲಿ ಮೇಲಿನಿಂದ ಕೆಳಗಿನವರೆಗೆ ಕ್ರಮವಾಗಿ ನೆಲೆಸಿವೆ. ಇದೀಗ ಈ ಗೊಂದಲಗಳು ಪರಿಹಾರವಾಗಿ, ಓಬವ್ವಳ ಚಾರಿತ್ರಿಕತೆಯನ್ನು ಸಮರ್ಥಿಸಲು, ಮುಖ್ಯವಾಗಿ ‘ಒನಕೆಕಿಂಡಿ’ ಮತ್ತು ‘ಓಬವ್ವನಕಿಂಡಿ’ಗಳ ನಿರ್ದಿಷ್ಟ ಎಡೆಗಳನ್ನು ಗುರುತಿಸಲು ಸಾಧ್ಯವಾಗಿದೆಯೆನ್ನಬಹುದು. ಇಲ್ಲಿ ಇನ್ನೊಮ್ಮೆ ಸ್ಪಷ್ಟಪಡಿಸಬೇಕಾದ ಸಂಗತಿಯೆಂದರೆ, ಚಿತ್ರದುರ್ಗಕೋಟೆಯಲ್ಲಿ ನೆಲೆಗೊಂಡಿರುವ ಓಬಳಗಂಡಿ – ಒನಕೆಕಿಂಡಿ – ಓಬಬ್ಬನಕಿಂಡಿಗಳು ಒಂದೇ ಹೆಸರಿನ ಭಿನ್ನರೂಪಗಳಲ್ಲ ; ಹಾಗೂ ಅವು ಪರಸ್ಪರ ಸಂಬಂಧಿಸಿದವೂ ಅಲ್ಲ.

. ಘಟನೆಯ ಕಾಲಮಾನ

ಓಬವ್ವೆಯ ಘಟನೆಯು ನಡೆದ ಕಾಲಮಾನವು ನಿರ್ದಿಷ್ಟವಾಗಿರದೆ ಗೊಂದಲಕ್ಕೆಡೆ ಮಾಡಿಕೊಟ್ಟಿದೆ. ಈ ಘಟನೆಯು ಕ್ರಿ.ಶ. ೧೭೪೯ ರಿಂದ ೧೭೫೪ರವರೆಗೆ ದುರ್ಗವನ್ನಾಳಿದ (ಇಮ್ಮಡಿ) ಕಸ್ತೂರಿ ರಂಗಪ್ಪನಾಯಕನ ಅವಧಿಯಲ್ಲಿ, ಅಂದರೆ ಕ್ರಿ.ಶ.ಸು. ೧೭೫೦ರಲ್ಲಿ ಸಂಭವಿಸಿತೆಂದು ಹೇಳುತ್ತದೆ. ‘ಕೈಫಿಯತ್’. ಈ ಕುರಿತು ಪ್ರೊ. ಕೃಷ್ಣಯ್ಯ ಅವರು ಪ್ರಸ್ತಾಪಿಸಿರುವ ಕಾಲ ಕ್ರಿ.ಶ. ೧೭೬೬ರ ಅಕ್ಟೋಬರ್.

ಆದರೆ ನಾಯಕ ಅರಸರ ಇತರ ದಾಖಲೆಗಳಲ್ಲಿ, ಚಿತ್ರದುರ್ಗ ಸಂಸ್ಥಾನದ ಮೊದಲ ಅರಸ ಮತ್ತಿ ತಿಮ್ಮಣ್ಣನಾಯಕನ ಕಾಲದಲ್ಲಿ, ವಿಜಯನಗರದ ಸಾಳುವ ನರಸಿಂಗರಾಯನು ಚಿತ್ರದುರ್ಗದ ಬಳಿ ತನ್ನ ಸೇನೆಯೊಡನೆ ಬೀಡುಬಿಟ್ಟಿದ್ದನೆಂಬ ಉದಾಹರಣೆಯ ವಿನಾ ಕಡೆಯ ಅರಸ ರಾಜಾ ವೀರಮದಕರಿನಾಯಕನ ಕಾಲದವರೆಗೆ ದುರ್ಗವು ಯಾರ ದಾಳಿಗೂ ನೇರವಾಗಿ ಒಳಪಟ್ಟಿದುದರ ಪ್ರಸ್ತಾಪವಿಲ್ಲ.

ರಾಜಾ ವೀರಮದಕರಿನಾಯಕನ ಆಡಳಿತಾವಧಿಯಲ್ಲಿ ದುರ್ಗವನ್ನು ವಶಪಡಿಸಿಕೊಳ್ಳಲು ನಾನಾ ವಿಧದಲ್ಲಿ ಪ್ರಯತ್ನಿಸಿದವನು ಶ್ರೀರಂಗಪಟ್ಟಣದ ನವಾಬ ಹೈದರ್ ಅಲಿಖಾನ್ ಮಾತ್ರ. ಚರಿತ್ರೆಯಲ್ಲಿ ಗುರುತಿಸಲಾಗಿರುವಂತೆ, ಹೈದರ್ ಅಲಿಯು ಒಟ್ಟು ನಾಲ್ಕುಬಾರಿ, ಅಂದರೆ ಕ್ರಿ.ಶ. ೧೭೬೩ ಜನವರಿ, ೧೭೭೪ ಮಾರ್ಚ್, ೧೭೭೭ ಜೂನ್ ಮತ್ತು ೧೭೭೯ ಫೆಬ್ರವರಿ – ಮಾರ್ಚ್‍ಗಳಲ್ಲಿ ಚಿತ್ರದುರ್ಗದ ಮೇಲೆ ದಾಳಿನಡೆಸಿ, ತನ್ನ ನಾಲ್ಕನೇ ಹಾಗೂ ಕಡೆಯ ದಾಳಿಯಲ್ಲಿ ದುರ್ಗವನ್ನು ಹಿಡಿಯುವಲ್ಲಿ ಸಫಲನಾದ. ಅಧಿಕೃತ ದಾಖಲೆಯೆನಿಸಿರುವ ‘ಚಿತ್ರದುರ್ಗದ ಬಖೈರು’ ದಾಖಲಿಸಿರುವಂತೆ, ಈತನ ದಂಡು ಚಿತ್ರದುರ್ಗ ಪರಿಸರದ ಹೆಬ್ಬುಲಿ ಕಲ್ಲು, ಜೋಳಘಟ್ಟದ ಮುರುಗೀಮಠ ಮತ್ತು ತಮಟಕಲ್ಲು ಹಿಡಿದು ದಕ್ಷಿಣಕ್ಕೆ ಬುದ್ಧಿವಂತನ ಮರಡಿ ಮತ್ತು ಮಳಲಿಗುಡ್ದದವರೆಗೂ ಆವರಿಸಿ ದುರ್ಗವನ್ನು ಸುತ್ತುವರಿದಿದ್ದಿತು. ಅಲ್ಲದೆ, ಹೀಗೆ ಸುತ್ತುವರಿದ ಸೇನೆಯ ಸಂಖ್ಯೆಯೂ ಸ್ಥೂಲವಾಗಿ ಪ್ರಸ್ತಾಪಗೊಂಡಿದೆ.

ಚಿತ್ರದುರ್ಗಕೋಟೆಯ ಕಳ್ಳಂಗಡಿಯಲ್ಲಿ ತೂರಲೆತ್ನಿಸಿದವರ್ನ್ನು ‘ಶತ್ರುಪಕ್ಷದವರು’ ಎಂದಷ್ಟೆ ಸಂಬೋಧಿಸುತ್ತದೆ ‘ಕೈಫಿಯತ್’. ಆದರೆ ‘ಚಿತ್ರದುರ್ಗದ ಬಖೈರು’ ಸೂಚಿಸುವಂತೆ, ತನ್ನ ಪರವಾಗಿದ್ದ ಹರಪನಹಳ್ಳಿ ಮತ್ತು ರಾಯದುರ್ಗದ ಪಾಳೆಗಾರಾರಿಗೆ ದುರ್ಗದ ಕೋಟೆಯ ರಹಸ್ಯವು ತಿಳಿದಿದೆಯೆಂಬುದನ್ನು ಹೈದರ್ ಅಲಿಯು ಚೆನ್ನಾಗಿ ಅರಿತಿದ್ದ. ಈ ಈರ್ವರು ಪಾಳೆಯಗಾರರ ಸೇನೆಯು ಚೋಳಘಟ್ಟ ಮತ್ತು ಅಗಸನಕಲ್ಲು ಪರಿಸರದಲ್ಲಿ ಗುಡ್ಡದ ಆಸರೆಹಿಡಿದು ಶಿಬಿರಹೂಡಿದ್ದಿತಲ್ಲದೆ, ಆಗಲೇ ದುರ್ಗದ ಪಶ್ಚಿಮ ಮತ್ತು ಉತ್ತರದಿಕ್ಕಿನ ಕೋಟೆಸಾಲಿನ ಮೇಲೆ ಫಿರಂಗಿದಾಳಿಯೂ ನಡೆಯಿತು.[6] ಹೀಗಿದ್ದರೂ ಈ ಯುದ್ಧ ಸಂದರ್ಭದಲ್ಲಿ ರಾಜಾ ವೀರಮದಕರಿನಾಯಕನ ಪಕ್ಷದಿಂದ ಹೊರಬಿದ್ದು ಹೈದರ್ ಅಲಿಯೊಡನೆ ಸೇರಿಕೊಂಡ ಜರಿಮಲೆಸಂಸ್ಥಾನದ ಸೈನಿಕರು, ದುರ್ಗದ ಮುಖ್ಯವಾದ ಐಬುಜಾಗಗಳನ್ನು ಕಂಡಿದ್ದು ಅವುಗಳ ಬಗೆಗೆ ಹೈದರ್ ಅಲಿಗೆ ಮಾಹಿತಿ ಒದಗಿಸಿದರೆಂಬುದು ಮಹತ್ವದ ಅಂಶವಾಗುತ್ತದೆ. ಕ್ರಿ.ಶ. ೧೭೭೯ರಲ್ಲಿ ನಡೆದ ಈ ಕಡೆಯ ಯುದ್ಧಾರಂಭದಲ್ಲಿ ದುರ್ಗದವರಿಗೆ ಜಯವು ದೊರೆತಾಗ ಮದಕರಿನಾಯಕನು ಅದನ್ನು ಸಂತೋಷದಿಂದ ಆಚರಿಸಲು ನಿರ್ಧರಿಸಿದ. ಆ ಸಂದರ್ಭದಲ್ಲಿ, ಒಂದು ಕಾರಣಕ್ಕಾಗಿ ನಾಯಕನ ಬಗೆಗೆ ಅಸಮಾಧಾನ ಹೊಂದಿದ ಜರಿಮಲೆಯವರು ಆ ನಂತರ ಹೈದರ್ ಅಲಿಯೊಡನೆ ಸಹಕರಿಸಿ, ಹೆಬ್ಬುಲಿಕಲ್ಲು ಕಡೆಯ ಕಳ್ಳದಾರಿಯಿಂದ ೧೨,೦೦೦ ಸೈನಿಕರನ್ನು ತೆಗೆದುಕೊಂಡು ಕೋಟೆಯ ಒಳಗೆ ಇಳಿದು ದುರ್ಗದವರ ವಿರುದ್ಧ ಭೀಕರವಾಗಿ ಕಾದಾಡಿದರು.

ಓಬವ್ವೆಯ ಘಟನೆಯು ‘ಫಿರಂಗಿಯುದ್ಧ’ ದಂದು ನಡೆಯಿತೆನ್ನುವ ಮಾತನ್ನು ಪರಿಗಣಿಸಿಸುವುದಾದರೆ, ಹೈದರ್ ಅಲಿಯು ದುರ್ಗವನ್ನು ಕಡೆಯಬಾರಿಗೆ ಮುತ್ತಿದ ಮೇಲಿನ ಸಂದರ್ಭವನ್ನು ಇದು ಸೂಚಿಸುವಂತೆ ತೋರುತ್ತದೆ. ಆದರೆ ‘ದಾಖಲೆಗಳು’ ಇದನ್ನು ಸಮರ್ಥಿಸುವುದಿಲ್ಲವೆನ್ನುವುದು ಗಮನಾರ್ಹ. (ಈ ಕುರಿತು ಮುಂದೆ ಪ್ರಸ್ತಾಪಿಸಿದೆ). ಈ ಕಾಲಘಟ್ಟದಲ್ಲಿ ಓಬವ್ವೆ ತನ್ನ ಸಾಹಸ ತೋರಿದಳೆಂದು ನಿರೂಪಿಸುವವರು ಘಟನೆಯ ದಿವಸದ ಕಾಲಮಾನವನ್ನು ಹಿಂದುಮುಂದಾಗಿ ಗುರುತಿಸಿರುವ ಸಾಧ್ಯತೆಯೂ ಇಲ್ಲದಿಲ್ಲ. ಏಕೆಂದರೆ, ‘ಕೈಫಿಯತ್’ ತಿಳಿಸುವಂತೆ, ಓಬವ್ವೆಯು ತನ್ನ ಸಾಹಸವನ್ನು ತೋರಿದುದು ನಟ್ಟಿರುಳಿನಲ್ಲಿ ; ಮಧ್ಯಾಹ್ನದ ಉರಿಬಿಸಿಲಿನಲ್ಲಿ ಅಲ್ಲ !

[1] ೧೯೭೩ರಲ್ಲಿ ಸಂಶೋಧನಕಾರ್ಯನಿಮಿತ್ತ ನಾನು ಈ ಕೋಟೆಯ ಸರ್ವೇಕ್ಷಣೆಯನ್ನು ಕೈಗೊಂಡಿದ್ದಾಗ, ಚಿತ್ರದುರ್ಗದ ಟಿ.ಎನ್. ಗಂಡುಗಲಿ ಅವರು (ಈಗ ದಿವಂಗತರು) ಈ ದಿಡ್ಡಿಬಾಗಿಲಲ್ಲಿಯೇ ಓಬವ್ವೆಯು ತನ್ನ ಸಾಹಸವನ್ನು ತೋರಿದ್ದಳೆಂಬ ತಮ್ಮ ಹಿರಿಯರ ಹೇಳಿಕೆಯನ್ನು ಉಲ್ಲೇಖಿಸಿ ಅತಿ ವಿಶ್ವಾಸದಿಂದ ಹೇಳಿದ್ದುದುಂಟು. ಈ ಸಂದರ್ಭದಲ್ಲಿ ನಮ್ಮೊಡನಿದ್ದವರು ಕೆಳಕೋಟೆಯ ರಾಜಶೇಖರಗೌಡ.

[2] ಇಲ್ಲಿಯ ಕಂದಕದ ಬುರುಜಿನಿಂದ ದಿಡ್ಡಿಬಾಗಿಲಿಗೆ ಹೋಗುವ ಮೂಲಮಾರ್ಗದ ಎಡಬದಿಯ ಬೃಹತ್‍ಬಂಡೆಯ ಅಡಿಯಲ್ಲಿ ಕಾವಲಿನವರ ಗುಹೆ ಇದ್ದುದು ಬೆಳಕಿಗೆ ಬಂದಿದೆ. ಈ ಗುಹೆಯ ಪಕ್ಕದ ಬಂಡೆಯ ಮೇಲೆ ‘ಕುಮಾರ ಹೂರಿಕನಯಾಕನವರೂ ಗೂಎಯಾ ತಗಿದರೂ’ ಎಂಬ ಒಂದುಸಾಲಿನ ೧.೭೫ ಮೀಟರ್ ಉದ್ದದ ಬರಹ ಸಹಾ ಬೆಳಕಿಗೆ ಬಂದಿದ್ದು, ಈ ಗುಹೆಯನ್ನು ತೆಗೆಯಿಸಿದವನು ಕುಮಾರ ಹೊರಕೆನಾಯಕನೆಂಬುದು ಇದರಿಂದ ಸ್ಪಷ್ಟಪಡುತ್ತದೆ. ಈತ ಚಿತ್ರದುರ್ಗ ನಾಯಕ ಅರಸರ ಸಮೀಪಬಂಧುವೂ ಆಗಿದ್ದಿರಬಹುದು.

ಕಸ್ತೂರಿ ಚಿಕ್ಕಣ್ಣನಾಯಕನ (ಕ್ರಿ.ಶ. ೧೬೭೫ – ೧೬೮೬) ಅವಧಿಯಲ್ಲಿ ದಳವಾಯಿ ಹೊರಕೀನಾಯಕನೆಂಬವನ ಪ್ರಸ್ತಾಪ ಬರುತ್ತದೆ. ಕ್ರಿ.ಶ. ೧೬೭೭ ರಿಂದ ೧೬೮೦ರ ಅವಧಿಯಲ್ಲಿ, ಮೇಲುದುರ್ಗದಲ್ಲಿ, ಈತ ಚಿಕ್ಕಣ್ಣನಾಯಕನಸುತ್ತುಕೋಟೆ ಕಲ್ಲುಬಾಗಿಲು ಬಳಿಯಣ ಅರಮನೆ ಹಾಗೂ ಹೊರಕೇರಿಗುಡಿಗಳ ನಿರ್ಮಾಣಕಾರ್ಯದ ಹೊಣೆಗಾರಿಕೆಯನ್ನು ನಿರ್ವಹಿಸಿದ. ಈ ಗುಹೆಯನ್ನು ತೆಗೆಯಿಸಿದ ಅಥವಾ ರೂಪಿಸಿದ ಕುಮಾರ ಹೊರಕೆನಾಯಕ ಈತನೇ ಆಗಿರಬಹುದೇನೊ.

[3] Epigrahia Carnatica, Vol.XI, Challakere 58 (Gosikere), 1711 A.D

[4] ವಿವರಗಳಿಗೆ : ಅ. ಸುಂದರ: “ಬಳ್ಳಿಗಾವೆಯ ಒಂದು ಪ್ರಾಚೀನ ಶಿವ ದೇವಾಲಯ ಹಾಗೂ ‘ಮಹಾಕಾಳಿ’ ಮೂರ್ತಿ”, ಶ್ರೀಕಂಠತೀರ್ಥ (ತೀ.ನಂ.ಶ್ರೀ. ಸ್ಮಾರಕಗ್ರಂಥ), ಬೆಂಗಳೂರು, ೧೯೭೬, ಪು. ೬೯೩ – ೬೯೮

[5] ಶೈವಸಂಸ್ಕೃತಿಯ ‘ಲಿಂಗ’, ಅಂದರೆ ‘ಜ್ಯೋತಿಸ್ತಂಭ’ ಕಲ್ಪನೆಯ ಜನಪದೀಕರಣವೇ ‘ಒನಕೆ’ ಎಂದಾಗಿರಬಹುದೆಂದು ಹಿರಿಯ ವಿದ್ವಾಂಸ ಡಾ. ಎಂ.ಜಿ. ನಾಗರಾಜ್ ಅಭಿಪ್ರಾಯ ಪಟ್ಟಿರುವರು. ಇನ್ನೋರ್ವ ವಿದ್ವಾಂಸ ಡಾ. ಎಚ್.ಎಸ್. ಗೋಪಾಲರಾವ್ ಪ್ರಕಾರ, ಕಾಳಾಮುಖ – ಲಾಕುಳ ಸಂಬಂಧದ ಹಿನ್ನೆಲೆಯಲ್ಲಿ ಲಾಕುಳದಂಡವು ಒನಕೆಯನ್ನು ಹೋಲಬಹುದಾದ್ದರಿಂದ ಒನಕೆಸಂಬಂಧಿಯಾದ ಸ್ಥಳಗಳು ಕಾಳಾಮುಖಸಂಬಂಧವನ್ನು ಹೊಂದಿರುವ ಸಾಧ್ಯತೆಗಳಿವೆ.

ನನ್ನ ಈ ನಿಲುವನ್ನು ಸಮರ್ಥಿಸಿದ ಈ ಈರ್ವರು ವಿದ್ವಾಂಸರಿಗೆ ನಾನು ಆಭಾರಿಯಾಗಿದ್ದೇನೆ.

[6] ಸಿಹಿನೀರುಹೊಂಡದಬಾಗಿಲಿನಿಂದ ಫಲ್ಗುಣೇಶ್ವರಗುಡಿಯ ಮುಂದಿನ ದಿಡ್ಡಿಬಾಗಿಲಿನವರೆಗಿನ ಕೋಟೆಯ ಹೊರಭಾಗದ ಬಂಡೆಗಳ ಮೇಲೆ ಫಿರಂಗಿಗಳ ಹೊಡೆತನದಿಂದ ಮೂಡಿರುವ ಹಲವಾರು ಗುರುತುಗಳು ಇಂದಿಗೂ ಕಂಡುಬರುತ್ತವೆ. ಹೈದರ‍್ ಅಲಿಯ ಪರವಾಗಿ ಹೋರಾಡಲು ಇಲ್ಲಿಗೆ ಬಂದಿದ್ದ ಫ್ರೆಂಚರ ಸೇನಾದಳಪತಿ ಕೌಂಟ್ ಡಿ ಲಾಲಿಯು ಈ ದಿಕ್ಕಿನ ಬರಗೇರಮ್ಮನ ದೇವಸ್ಥಾನದ ಬಳಿ ೧೨ ತೋಪುಗಳನ್ನು ಇಡಿಸಿ ಕೋಟೆಗೆ ಒಂದೇ ಬಾರಿಗೆ ಹೊಡೆಸಿದನೆಂದು ‘ಚಿತ್ರದುರ್ಗದ ಬಖೈರು’ (ಪು. ೮೩) ವರ್ಣಿಸುತ್ತದೆ.