ದೇವರ ಎತ್ತುಗಳು ಮತ್ತು ಕಿಲಾರಿ

ನಮ್ಮ ಸಂಸ್ಕೃತಿಯಲ್ಲಿ ದನಗಳಿಗೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಸಿಂಧೂ ಕಣಿವೆಯ ನಾಗರೀಕತೆಯಲ್ಲಿ(ಹರಪ್ಪ– ಮೊಹೆಂಜದಾರೊ) ಬಳಸುವ ‘ವೃಷಭ’ ಚಿನ್ಹೆಯ ಮುದ್ರಿಕೆಗಳಿಂದಲೂ ನಮ್ಮ ಜನಜೀವನದಲ್ಲಿ ದನಗಳು ಪ್ರಮುಖ ಪಾತ್ರ ವಹಿಸುತ್ತಲೇ ಬಂದಿವೆ.

ದೇವರ ಹೆಸರಿನಲ್ಲಿ ಗಂಡು ಕರುಗಳನ್ನು ಮಾತ್ರ ಬಿಡುವ ಸಂಪ್ರದಾಯ ನಮ್ಮಲ್ಲಿ ಬಹಳ ಹಿಂದಿನಿಂದಲೂ ಇದೆ. ಇವನ್ನು ದೇವರ ಪ್ರತಿನಿಧಿಗಳೆಂದು ಭಾವಿಸಲಾಗುತ್ತದೆ. ತಮ್ಮ ‘ಜೀವರಾಶಿಗೆ’ ಕಾಯಿಲೆಗಳು ಬಂದು ಸಾಯುವ ಸ್ಥಿತಿಯಲ್ಲಿ ಇರುವಾಗ, ಬದುಕಿದರೆ ದೇವರ ಹೆಸರಿನಲ್ಲಿ ಬದುಕಿಕೊಳ್ಳಲಿ ಎಂದು ಬಿಡುತ್ತಾರೆ. ಅದೃಷ್ಟವಶಾತ್ ಬದುಕಿಕೊಂಡವು ‘ದೇವರ ಬಸವ’ ಎಂಬ ಹೆಸರಿನಲ್ಲಿ ಸ್ವೇಚ್ಛೆಯಾಗಿ ಎಲ್ಲಿ ಬೇಕೆಂದರಲ್ಲಿ ಓಡಾಡಿಕೊಂಡಿರುತ್ತವೆ. ಅವನ್ನು ಯಾರೂ ತಡೆಯುವಂತಿಲ್ಲ, ಕಟ್ಟುವಂತಿಲ್ಲ. ತುಂಬಿದ ಹೊಲದಲ್ಲಿ ಓಡಾಡಿ ಮೇಯ್ದು ಸಗಣಿ ಹಾಕಿ, ಗಂಜಲು ಸುರಿಸಿದರೆ ಬೆಳೆ ‘ಹುಲುಸು’ ಆಗುತ್ತದೆ ಎಂದು ನಂಬುತ್ತಾರೆ.

ಈ ದನಗಳನ್ನು ವ್ಯವಸಾಯಕ್ಕೆ ಉಪಯೋಗಿಸದಿರುವುದರಿಂದ ಅವುಗಳ ಕೊರಳಿಗೆ ದಂಡೆಯಾಗಲಿ, ಮೂಗಿಗೆ ಮೂಗುದಾರವಾಗಲಿ ಹಾಕುವುದಿಲ್ಲ. ಹೆಣ್ಣು ದೇವತೆ ಮಾರಮ್ಮನಿಗೆ ಬಿಟ್ಟ ಕೋಣಗಳನ್ನು ಬಲಿಕೊಡುವ ರೀತಿಯಲ್ಲಿ ಇವುಗಳನ್ನು ಬಲಿ ಕೊಡುವುದಿಲ್ಲ. ಹೀಗೆ ‘ಬಸವ’ಗಳು ಸಾಯುವವರೆಗೂ ಅಡ್ಡಾಡಿಕೊಂಡಿರುತ್ತವೆ. ಸತ್ತಾಗ ಅವುಗಳನ್ನು ಗುಂಡಿ ತೆಗೆದು ಹೂಳುತ್ತಾರೆ. ಇಲ್ಲವೇ ಅದರ ದೇಹದ ಸುತ್ತ, ಮೇಲೆ- ಕೆಳಗೆ ಕಲ್ಲುಗಳನ್ನು ಪೇರಿಸಿ ‘ಕಲ್ಲು ಬಣವೆ’ ಮಾಡುವ ಸಂಪ್ರದಾಯವೂ ಪಶುಪಾಲಕರಲ್ಲಿ ಇದೆ.

ಆದರೆ, ಪಶುಪಾಲಕರಾದ ಕಾಡುಗೊಲ್ಲರು ಮತ್ತು ಮ್ಯಾಸಬೇಡರಲ್ಲಿ ತಮ್ಮ ಕುಟುಂಬದ ಹಿರಿಯರು ಸತ್ತ ನಂತರ ಸ್ವರ್ಗ- ನರಕಕ್ಕೆ ಹೋಗದೆ ಪಾತಾಳ ಲೋಕಕ್ಕೆ ಹೋಗುತ್ತಾರೆ. ಅಲ್ಲಿ ದನಕರುಗಳಾಗಿ ಮರುಜನ್ಮ ಪಡೆಯುತ್ತಾರೆ ಎಂಬ ನಂಬಿಕೆ ಇದೆ. ಇವರ ಐತಿಹ್ಯಗಳೂ ಎತ್ತುಗಳು ಬಂದುದು ಪಾತಾಳಲೋಕದಿಂದಲೇ ಎಂದು ಹೇಳುತ್ತವೆ. ಹೀಗಾಗಿ ಅವರು ಎತ್ತುಗಳನ್ನು ತಮ್ಮ ಪೂರ್ವಜರಾದ ‘ಮುತ್ತೈಗಳು’ ಎಂದು ಭಾವಿಸುತ್ತಾರೆ.

ಇಂಥ ದೇವರ ಎತ್ತುಗಳು ನೆಲೆ ನಿಲ್ಲುವ ಸ್ಥಳವನ್ನು ‘ಮುತ್ತೈಗಳ ನಿಧಿ’ ಎಂದು ಕರೆಯುತ್ತಾರೆ. ಇಂಥಾ ಎತ್ತುಗಳನ್ನು ಕಾಯಲು ನೇಮಿಸಿದವನೇ ‘ಕಿಲಾರಿ.’

ಕಿಲಾರಿಗಳು

ದೇವರ ಎತ್ತುಗಳನ್ನು ಕಾಯುವ ಇವನು ‘ಸೆಳ್ಳ’(ಮೊಣಕಾಲಿನವರೆಗೂ ಇರುವ ಬಿಗಿಯಾದ ನಿಕ್ಕರ್) ಧರಿಸಿರುತ್ತಾನೆ. ತಲೆಗೆ ಬಿಳಿಯ ಪೇಟ ಸುತ್ತಿರುತ್ತಾನೆ. ಸೊಂಟಕ್ಕೆ ಪಟ್ಟೆದಟ್ಟಿಯನ್ನು ಕಟ್ಟಿರುತ್ತಾನೆ. ಬರಿಮೈಯಲ್ಲಿ ಇರುತ್ತಾನೆ. ಹೆಗಲ ಮೇಲೆ ಕರಿಯ ಕಂಬಳಿ ಇರುತ್ತದೆ. ಕೈಗೆ ಬಿಳಿ ಕಡಗ, ಕಿವಿಗೆ ಮುರ ಧರಿಸಿರುತ್ತಾನೆ. ಕೈಯಲ್ಲಿ ಕಟ್ಟಿಗೆ ‘ದಂಡ’ವನ್ನು ಹಿಡಿದಿರುತ್ತಾನೆ, ಹಗಲು- ರಾತ್ರಿ, ಬಿಸಿಲು- ಚಳಿ, ಮಳೆ- ಗಾಳಿ ಎನ್ನದೆ ಸದಾ ದೇವರ ಎತ್ತುಗಳ ಗೂಡಿನಲ್ಲೇ ಇರುತ್ತಾನೆ.

ಇವನೇನು ಸನ್ಯಾಸಿಯಲ್ಲ, ಸಂಸಾರಿ. ಊರಿನ ಹಟ್ಟಿಯೊಳಗಿರುವ ತನ್ನ ಸಂಸಾರದ ಸದಸ್ಯರನ್ನು ಆಗಾಗ್ಗೆ ಹೋಗಿ ಭೇಟಿಯಾಗಿ ಬರುತ್ತಾನೆ. ಒಕ್ಕಲು(ಭಕ್ತಾಧಿಗಳು) ಮೇಲೆ ಹೋಗಿ ತನ್ನ ಸಂಸಾರಕ್ಕೆ ಬೇಕಾದ ಹಿಟ್ಟು– ಬಟ್ಟೆ– ಭರಣಿ- ಹಣ– ಸಂಗ್ರಹಿಸಿಕೊಂಡು ಬಂದು ಕೊಡುತ್ತಾನೆ. ಆದರೆ, ಕಿಲಾರಿ ಮನೆಯ ಹೆಣ್ಣು ಮಕ್ಕಳು ‘ವಾರದ ದಿನ’(ಸಾಮಾನ್ಯವಾಗಿ ಭಾನುವಾರ) ಬಿಟ್ಟು ಬೇರೆ ‘ಬಿಡಿ ದಿನಗಳಲ್ಲಿ’ ‘ಮುತ್ತೈಗಳ ನಿಧಿ’ಯ ಬಳಿ ಹೋಗುವಂತಿಲ್ಲ!

ಈ ಆಧುನಿಕ ಯುಗದಲ್ಲೂ ಇವರು ಕಂಚು, ಅಲ್ಯೂಮಿನಿಯಂ, ಸ್ಟೀಲು ಪಾತ್ರೆಗಳನ್ನು ಬಳಸುವಂತಿಲ್ಲ. ಏನಿದ್ದರೂ ಮಡಿಕೆ, ಕುಡಿಕೆ, ಮಗಿ, ಗಡಿಗೆ– ಹೀಗೆ ಮಣ್ಣಲ್ಲಿ ತಯಾರಿಸಿದ ಪಾತ್ರೆಗಳನ್ನೇ ಬಳಸಬೇಕು. ಬೊಮ್ಮದೇವರು, ಗಾದರಿ ದೇವರು, ಜಗಲೂರಜ್ಜ, ಕಾಟಯ್ಯ, ಚಿತ್ತಯ್ಯ– ಆಯಾಯ ದೇವರುಗಳ ಎತ್ತುಗಳನ್ನು ಕಾಯುವ ಕಿಲಾರಿಗಳು ಬೇರೆ- ಬೇರೆಯೇ ಇರುತ್ತಾರೆ, ಆಯಾ ದೇವರ ಎತ್ತುಗಳ ಹಟ್ಟಿಗಳೂ ಬೇರೆಯೇ ಇರುತ್ತವೆ.

ದೇವರಿಗೆ ಬಿಟ್ಟ ಕೆಲ ಬಸವಗಳು, ಕಾಡುಗೊಲ್ಲರ ‘ಜುಂಜಪ್ಪನ ಬಸವ’ಗಳಂತೆ ಅಲೆಮಾರಿಗಳಾಗಿ ಹಟ್ಟಿಗಳಲ್ಲೇ ನೆಲೆ ನಿಂತು ಬಿಡುವುದುಂಟು. ಆಗ ಹಟ್ಟಿಯ ಜನವೇ ಹಿಟ್ಟು, ಮುದ್ದೆ ಕೊಟ್ಟು ಸಾಕುತ್ತಾರೆ. ಭಕ್ತರು ತಮ್ಮ ಕಷ್ಟಗಳ ಪರಿಹಾರಕ್ಕೆ ‘ಮುತ್ತೈಗಳ ನಿಧಿ’ಗೆ ಬಂದು ಮಲಗುವುದಾಗಿ ಹರಕೆ ಮಾಡಿಕೊಳ್ಳುತ್ತಾರೆ. ಅವರಿಗೆ ಈ ಸ್ಥಾನ ದೇವಸ್ಥಾನವಿದ್ದಂತೆ. ಕಾಯಿಲೆ– ಕಸಾಲೆ ಇರುವವರು ವಾಸಿಯಾಗುವವರೆಗೆ ದೇವಸ್ಥಾನಗಳಲ್ಲೇ ಬೀಡು ಬಿಡುವುದು ನಮ್ಮ ಜನಪದರ ಒಂದು ಸಂಪ್ರದಾಯವೇ ಆಗಿದೆ.

ಹಟ್ಟಿಯಲ್ಲಿ ಮಲಗಲು ಬಂದವರು (ಕೆಲವರು ವಾರಗಟ್ಟಲೇ ದೇವರ ಎತ್ತುಗಳ ‘ಹಕ್ಕೆ’ಯಲ್ಲೇ ಮಲಗುತ್ತಾರೆ) ಬೆಳಿಗ್ಗೆ ಎದ್ದು ಕಂಬಳಿ ಗದ್ದಿಗೆ ಮಾಡಿ ‘ಕಾಸು- ಮೀಸಲು’ ಒಪ್ಪಿಸುತ್ತಾರೆ. ಭಕ್ತರು ತಂದ ‘ಬತ್ತೇವು’ನಿಂದ ಕಿಲಾರಿಗಳೇ ಅಡಿಗೆ ಮಾಡಿ ಬಡಿಸುತ್ತಾರೆ. ಹಸುಗಳಿಂದ ಕರೆದ ಹಾಲು– ಮೊಸರನ್ನು ಮುದ್ದೆಯೊಂದಿಗೆ ಬಡಿಸುತ್ತಾರೆ. ಅಗತ್ಯಕ್ಕಿಂತ ಹೆಚ್ಚಿನ ಹಾಲನ್ನು ಕರೆಯುವುದಿಲ್ಲ. ಯಾಕೆಂದರೆ ಹಾಲನ್ನು ಮಾರುವಂತಿಲ್ಲ ಮತ್ತು ಹಟ್ಟಿಯಿಂದ ಹೊರ ಜನಕ್ಕಾಗಲಿ ಅಥವಾ ಮನೆಗಾಗಲಿ ಕೊಡುವಂತಿಲ್ಲ! ಹೆಚ್ಚುವರಿ ಹಾಲನ್ನು ಕರುಗಳಿಗೆ ಉಂಡುಕೊಳ್ಳಲು ಬಿಡುತ್ತಾರೆ.

ದೇವರಿಗೆ ಬಿಡುವ ಎತ್ತು- ಹಸು ಮತ್ತು ಹಟ್ಟಿಯಲ್ಲೇ ಹೊಸದಾಗಿ ಹುಟ್ಟುವ ಕರುಗಳಿಗೆ ಗಂಡಾದರೆ– ಬಾಲದ ಅಕ್ಕ– ಪಕ್ಕದ ಎರಡೂ ಕುಂಡೆ ಪಿರ್ರೆಗಳಿಗೆ ಒಂದು ಕಡೆ ಚಂದ್ರ ಮತ್ತೊಂದು ಕಡೆ ಸೂರ್ಯ, ಇಲ್ಲದಿದ್ದರೆ ತ್ರಿಶೂಲ- ಸೂರ್ಯರ ಮುದ್ರೆಯನ್ನು ಹಾಕುತ್ತಾರೆ. ಕಬ್ಬಿಣದ ಮುದ್ರೆಗಳನ್ನು ಕಾಯಿಸಿ ಹಾಕಿದಾಗ ಗಾಯವಾದರೂ, ಗಾಯ ಮಾದ ಮೇಲೆ ಮುದ್ರೆಗಳು ಎದ್ದು ಕಾಣುತ್ತದೆ. ಹೆಣ್ಣಾದಲ್ಲಿ ಬಲ ಕಿವಿಯನ್ನು ನಾಲ್ಕು ಸೀಳುಗಳು ಆಗುವಂತೆ ಸೀಳುತ್ತಾರೆ.

ಈ ದೇವರ ಎತ್ತುಗಳ ಸಗಣಿ ಗೊಬ್ಬರವನ್ನು ಈ ಹಿಂದೆ ಬಳಸುವಂತಿರಲಿಲ್ಲ! ರಾಶಿ ಬಿದ್ದ ಬಳಿಯೇ ಪುಡಿಯಾಗಿ, ಮಣ್ಣಾಗಿ ಹೋಗುತ್ತಿತ್ತು. ಏಕೆಂದರೆ ಅದನ್ನು ಭಸ್ಮದಂತೆ, ವಿಭೂತಿಯಂತೆ ಬಳಸುವ ಕಾರಣ, ವ್ಯವಸಾಯದ ಭೂಮಿಗೆ ಚೆಲ್ಲಿದಾಗ ಮೆಟ್ಟುಗಾಲಲ್ಲಿ ತುಳಿಯುವುದರಿಂದ ಒಳ್ಳೆಯದಾಗುವುದಿಲ್ಲ, ಇಂಥ ಗೊಬ್ಬರ ಹಾಕಿದ ಹೊಲದಲ್ಲಿ ಬೆಳೆಯೂ ಆಗುವುದಿಲ್ಲ ಎಂಬ ನಂಬಿಕೆ ಇತ್ತು.

ಸುತ್ತಿನ ಮ್ಯಾಸಬೇಡರಾರೂ ಇದನ್ನು ಬಳಸುವುದಿಲ್ಲ. ದೂರದ ‘ಹೊರಜನ’ ಇತ್ತೀಚಿನ ದಿನಗಳಲ್ಲಿ ಈ ಗೊಬ್ಬರವನ್ನು ಖರೀದಿಸುತ್ತಿದ್ದಾರೆ. ‘ಮೀಸಲು’ ಹರಕೆ ಮಾಡಿಕೊಂಡು ‘ಬ್ಯಾಟೆ’(ಬಲಿಗಾಗಿ ಮೀಸಲಾದ ಕುರಿ, ಮೇಕೆ) ಕೊಟ್ಟು ಹೋಗುತ್ತಾರೆ. ‘ಮುತ್ತೈಗಳ ನಿಧಿ’ಯನ್ನು ದೇವಸ್ಥಾನವೆಂದೇ ಭಾವಿಸುವುದರಿಂದ ಕೆಲವರು ತಮ್ಮ ಮಕ್ಕಳ ‘ಜವಳ’(ತಲೆಕೂದಲು) ಕೂಡ ಅಲ್ಲಿಯೇ ತೆಗೆಸುತ್ತಾರೆ.