ವಾಸೆ ಕೊಯ್ಯೋದು

ಚಿತ್ರದುರ್ಗ ಜಿಲ್ಲೆಯ ಬುಡಕಟ್ಟುಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಅಪರೂಪಕ್ಕೆ ಆಚರಿಸುವ ಬಲಿ ಸಂಪ್ರದಾಯವೇ ಈ ‘ವಾಸೆ ಕೊಯ್ಯೋದು’. ಇದು ‘ಗಾವು ಸಿಗಿಯುವ’ಆಚರಣೆಯ ಮುಂದುವರಿದ ಭಾಗದಂತಿದೆ. ಹೆಣ್ಣು ದೇವರಿಗೆ ನಡೆಸುವ  ಈ ಆಚರಣೆಯನ್ನು ‘ಗಾವು’ಎಂದರೆ, ಗಂಡು ದೇವರಿಗೆ ನಡೆಸುವ  ಸಂಪ್ರದಾಯವನ್ನು ‘ವಾಸೆ’ ಎಂದು ಕರೆಯುತ್ತಾರೆ. ಅದನ್ನು ಎದ್ದು ನಿಂತು ಸಿಗಿಯುವುದರಿಂದ ಅದು ‘ಎದ್ದಗಾವು’ ಆದರೆ ಇದು ವಾಸೆ ಪ್ರಾಣಿಯನ್ನು ಅಂಗಾತ ಮಲಗಿಸಿ, ಮುಸ್ಲಿಮರು ‘ಹಲಾಲು’ ಮಾಡುವ ರೀತಿಯಲ್ಲಿ ಅದರ ಕತ್ತು ಕುಯ್ಯುತ್ತಾರೆ. ಮುಸ್ಲಿಮರಂತೆ ಕತ್ತನ್ನು ಅರ್ಧಕ್ಕೆ ಕತ್ತರಿಸದೇ ಅದರ ರುಂಡವನ್ನು ಮುಂಡದಿಂದ ಸಂಪೂರ್ಣ ಬೇರ್ಪಡಿಸುತ್ತಾರೆ.

ಮ್ಯಾಸಬೇಡರಲ್ಲಿ ಈ ಕಾರ್ಯಕ್ಕಾಗಿ ಬಳಸುವ ಪ್ರಾಣಿ ಅಚ್ಚ ಕಪ್ಪುಬಣ್ಣದ ಮೇಕೆ ಹೋತ(ಗಂಡು ಮೇಕೆ) ಮಾತ್ರ. ಅದರ ಮೈಯಲ್ಲಿ ಒಂದೇ ಒಂದು ಬೇರೆ ಬಣ್ಣದ ಕೂದಲು ಇರಕೂಡದು. ಆದರೆ ವಾಸೆಯಲ್ಲಿ ಇವರಿಗೆ ಸಹೋದರ ಸಂಬಂಧಿಗಳಾಗಬೇಕಾದ ಕಾಡುಗೊಲ್ಲರಲ್ಲಿ ವಾಸೆಗಾಗಿ ಬಳಸುವ ‘ಉಂಡುಗುರಿ’(ಗಂಡು ಕುರಿ-ಪಟ್ಟಿ) ವಿಶಿಷ್ಟ ಲಕ್ಷಣಗಳನ್ನು ಹೊಂದಿರುತ್ತದೆ. ಅದರ ‘ಕಾಲು ಕಣಖ, ಹೂಬಾಲ,ಹುಣೆಸುಕ್ಕ’ ಆಗಿರಬೇಕು. ಅಂದರೆ ಅದು ಕಪ್ಪು ಬಣ್ಣದ ಕುರಿಪಟ್ಲಿಯೇ ಆದರೂ ಅದರ (ಮುಂಗಾಲಿನ) ಮೊಣಕಾಲು, ಬಾಲದ ತುದಿ, ಹಣೆಯ ಮಧ್ಯಭಾಗ ‘ಸುಕ್ಕೆ’(ನಕ್ಷತ್ರದಂತೆ) ಯಂತೆ ಬಿಳಿಯ ಬಣ್ಣವನ್ನು ಹೊಂದಿರಬೇಕು. ಕಾಡುಗೊಲ್ಲರ ಪೂಜಾರಿಗೆ ಹೊಸದಾಗಿ ‘ಪಟ್ಟ’ಮಾಡುವ ಸಂದರ್ಭದಲ್ಲಿ ಈ ಆಚರಣೆಯನ್ನು ನಡೆಸುತ್ತಾರೆ. ಆದರೆ ಅವರು ಹಲವು ವರ್ಷಗಳಿಗೊಮ್ಮೆ, ತಮ್ಮಿಂದ ಅಗಲಿದ ಪೂರ್ವಿಕರ ನೆನಪಿಗಾಗಿ ಶ್ರಾದ್ಧ ಮಾಡುವ ಸಂದರ್ಭದಲ್ಲಿ ಇದನ್ನೇ ಹೋಲುವ ಆಚರಣೆಯನ್ನು ಮಾಡುತ್ತಾರೆ. ಅದನ್ನು ‘ಕಮರು (ಕರ್ಮ) ಕಳೆದು ಕೊಳ್ಳೋದು’ಅನ್ನುತ್ತಾರೆ.

ಈ ವಾಸೆ ಪ್ರಾಣಿಯನ್ನು ‘ಪೋತರಾಜ’ ಎಂದು ಕರೆಯುತ್ತಾರೆ. ಸೂರ್ಯೋದಯಕ್ಕೆ ಮೊದಲೇ ಅದನ್ನು ‘ಬಾಯಿಬತ’ದಲ್ಲಿ (ಬಾಯಿಯ ಉಗುಳು ಬೀಳದಂತೆ ಬಾಯಿಗೆ ಬಟ್ಟೆ ಕಟ್ಟಿಕೊಳ್ಳುವ ವ್ರತ) ಬಲಿಕೊಡಬೇಕು. ಅದರ ಕುತ್ತಿಗೆ ಕೊಯ್ದ ನಂತರ ‘ಸೂರ್ಯನಿ ಮೊಕ್ಕು’ (ಸೂರ್ಯನ ನಮಸ್ಕಾರ) ಮಾಡುತ್ತಾರೆ.

ಇದು ಸಂಪ್ರದಾಯಕ್ಕೆ ವಿಶಿಷ್ಟತೆ ತಂದುಕೊಟ್ಟ ‘ಯರಮಂಚನಾಯಕ’ನಿಗೆ ತೋರುವ ಗೌರವ ಎಂದು ಭಾವಿಸುತ್ತಾರೆ. ಇದನ್ನೇ ವಾಸೆ ಕೊಯ್ಯುವುದು ಅಥವಾ ನೋಮು ತೀರಿಸುವುದು’ ಎನ್ನುತ್ತಾರೆ. ಈ ಕಾರ್ಯ ನಿರ್ವಹಿಸುವಲ್ಲಿ ಅಣ್ಣತಮ್ಮಂದಿರು ಇದ್ದಾಗ – ವಾಸೆಕೊಯ್ಯು ಮೊದಲ ಹಕ್ಕು ಅಣ್ಣನದು, ನಂತರದ್ದು ತಮ್ಮನದು. ಇದರಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ದೊಡ್ಡ ರಾದ್ಧಾಂತವೇ ನಡೆದು ಬಿಡುತ್ತದೆ. ನಾಯಕನಹಟ್ಟಿ ಪಾಳೆಯಗಾರರ ಮೂಲ ಸಂತತಿಗೆ ಸೇರಿದ ಸೂರದೇವ ಪಾಪನಾಯ್ಕನಿಗೂ, ನಿಡುಗಲ್ಲಿನ ಹೊಟ್ಟೆಳನಾಯ್ಕನಿಗೂ ಈ ವಿಚಾರವಾಗಿ ಅನೇಕ ವಿವಾದಗಳು ನಡೆದ ಸೂಚನೆ ನಾಯಕನಹಟ್ಟಿ ಬಖೈರಿನಲ್ಲಿ ದೊರೆಯುತ್ತದೆ.

ಹಟ್ಟಿ ಪಾಳೆಯಪಟ್ಟಿಗೆ ಸಂಬಂಧಿಸಿದ ದಸ್ತಾವೇಜೊಂದರ ಪ್ರಕಾರ ಕೋರಿ ಯರ್ರಮಂಚ ನಾಯಕ, ಕಾಕಳ ಕುಮಾರ (ಇವನನ್ನು) ದಾಖಲೆಗಳಲ್ಲಿ ಕಾಕುಮಂಚಿ ಕುಮಾರ ಎಂದು ಹೆಸರಿಸಲಾಗಿದೆ. ಇವನೇ ಹಟ್ಟಿ ಪಾಳೆಯಪಟ್ಟಿನ ಮೂಲಪುರುಷ). ಇಬ್ಬರೂ ಅಣ್ಣತಮ್ಮಂದಿರು. ಯರ್ರಮಂಚಿನಾಯಕನಿಗೆ ‘ಕೋರಿಯರ್ರಮಂಚನಾಯಕ’ನೆಂಬ ಹೆಸರೂ ಇದೆ. ಅವನ ಹೆಗಲ ಮೇಲೆ ಪಶುಪಾಲಕರು ಧರಿಸುವ ಕಂಬಳಿ ಕೋರಿ ಇರುತ್ತಿದ್ದರಿಂದ ಅವನಿಗೆ ಈ ಹೆಸರು ಬಂದಿರಬೇಕು. ಯರ್ರಮಂಚಿನಾಯಕನ ವಾಸೆ ಕೊಯ್ಯಲು ಕೆಂಪುಬಣ್ಣದ ಹೋತವನ್ನೇ ಬಳಸುತ್ತಿದ್ದರಿಂದ ಅವನ ಹೆಸರಿನೊಂದಿಗೆ ‘ಯರ್ರ’ತಳಕು ಹಾಕಿಕೊಂಡಿದೆ. ‘ಯರ್ರ’ ಎಂದರೆ ತೆಲುಗಿನಲ್ಲಿ ‘ಕೆಂಪು’ ಎಂದು ಅರ್ಥ. ಕಾಕಳ ಕುಮಾರ ವಾಸೆಗೆ ಬಳಸುತ್ತಿದ್ದ ಹೋತ ಕಪ್ಪುಬಣ್ಣದು. ಅಣ್ಣ ವಾಸೆಕೊಯ್ದ ನಂತರ ಇವನು ವಾಸೆ ಕೊಯ್ಯುತ್ತಿದ್ದ.

ಇವರು ವಾಸೆ ಕೊಯ್ಯುತ್ತಿದ್ದುದು ತಮ್ಮ ಮನೆದೈವವಾದ ‘ಕಾಡ್ಲಕುಂಟ ತಿಪ್ಪೆ’(ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ನಾಯಕಹಟ್ಟಿ ಬಳಿ ಇರುವ ಇಂದಿನ ಕುದಾಪುರ ಗ್ರಾಮ) ಭೈರವನಿಗೆ. ಅದು ‘ಉದ್ಭವ ದೇವರು’. (ನೆಲದಿಂದ ಮೇಲಕ್ಕೆ ಒರಟೊರಟಾದ ಕಲ್ಲೊಂದು ಎದ್ದಿದ್ದು ಸ್ಥೂಲವಾಗಿ ಲಿಂಗವನ್ನು ಹೋಲುತ್ತದೆ).

ಒಮ್ಮೆ ಯರಮಂಚಿನಾಯಕನು ತಡವಾಗಿ ಬಂದನೆಂದು ನೆಪಮಾಡಿಕೊಂಡ ತಮ್ಮ ಕಾಕಳ ಕುಮಾರ ಅಣ್ಣನ ವಾಸೆ ಕೊಯ್ಯುವ ಪ್ರಥಮ ಹಕ್ಕನ್ನು ಉಲ್ಲಂಘಿಸಿ ವಾಸೆಕೊಯ್ದ. ಇದಕ್ಕೆ ಒಂದು ಕಾರಣವೂ ಇತ್ತು. ಯರ್ರಮಂಚಿನಾಯಕನಿಗೆ ಕೊಳಗಲು ಬೊಮ್ಮ ಎಂಬ ಭಾವಮೈದುನನಿದ್ದ. ಅವನು ದರ್ಪ-ದೌರ್ಜನ್ಯಗಳಿಂದ ಮೆರೆಯುತ್ತಿದ್ದ. ಮ್ಯಾಸಮಂಡಲದಲ್ಲಿ ‘ರಜಸ್ಸು’(ಪುಷ್ಪವತಿ) ಆದ ಕನ್ಯೆಯನ್ನು, ಈದ (ಕರು ಹಾಕಿದ) ಪ್ರತಿ ಹಸುವಿನ ಗಿಣ್ಣವನ್ನು ಮತ್ತು ಮದುವೆಯಾಗುವವರು ಬೆಳ್ಳಿರೂಪಾಯಿಯನ್ನು ಅವನಿಗೆ ಅರ್ಪಿಸಬೇಕಿತ್ತು. ಜೊತೆಗೆ ಪಶುಪಾಲಕರು ತಮ್ಮೊಂದಿಗೆ ತಂದಿದ್ದ ಹನ್ನೆರಡು ಪೆಟ್ಟಿಗೆ ದೇವರುಗಳನ್ನು ತೆಗೆದುಕೊಂಡು ಹೋಗಿ ‘ನರಕದ ಕೋಟೆ’ (ಮನುಷ್ಯ ಮಲ)ಯೊಳಗೆ ಇಟ್ಟು ಅವುಗಳಿಗೆ ಪೂಜೆ ಇಲ್ಲದಂತೆ ಮಾಡಿದ್ದ. ಇವನ ಕಾಟದಿಂದ ಇಡೀ ಮ್ಯಾಸಮಂಡಲವೇ ಬೇಸತ್ತು ಹೋಗಿತ್ತು. ಯರ್ರಮಂಚಿನಾಯಕ ಇವನನ್ನು ನಿಯಂತ್ರಿಸಿ ಹದ್ದುಬಸ್ತಿನಲ್ಲಿಡದೆ ಸಡಿಲಬಿಟ್ಟಿದ್ದ. ಇದರಿಂದ ಒಳಗೊಳಗೇ ಕುದಿಯುತ್ತದ್ದ ಮ್ಯಾಸಬೇಡ ಹಿರಿಯರು ಕಾಕಳು ನಾಯಕನಿಗೆ ಕುಮ್ಮಕ್ಕು ಕೊಟ್ಟು ಯರ್ರಮಂಚಿನಾಯಕನ ಪ್ರಥಮ ವಾಸೆ ಹಕ್ಕನ್ನು ಉಲ್ಲಂಘಿಸುವಂತೆ ಮಾಡಿದ್ದರು. ಇದರಿಂದ ಯರಮಂಚನಾಯಕ ತನಗೆ ಅವಮಾನವಾಯಿತು ಎಂದು ದುಃಖಿತನಾಗಿ ‘ಒಂದೇ ಕಾಯಿ- ಒಂದೇ ಹೋತ- ಒಬ್ಬನೇ ಹುಡುಗನಿಂದ ಏಳು ಬಾರಿ ವಾಸೆಕೊಯ್ದ’. ಪ್ರತಿಸಾರಿ ವಾಸೆ ಕೊಯ್ದಾಗಲೂ ಹೋತ ಬದುಕಿ ಬರುತ್ತಿತ್ತು, ಒಡೆದ ಕಾಯಿ ಕೂಡಿಕೊಳ್ಳುತ್ತಿತ್ತು. ಸತ್ತ ಹುಡುಗ ಬದುಕಿ ಬರುತ್ತಿದ್ದ! ಹುಡುಗ ಕೆಂಗುರಿ ಗೊಲ್ಲರವನಾಗಿದ್ದನು. ಆದರೆ ಅವನು ಸಾಯದ ಕೆಂದಕುರಿ ಅವನ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿತ್ತು. ಅದಕ್ಕೋಸ್ಕರ ಖುದಾಪುರದ ಬೋರೆದೇವರ ಮೊದಲ ಮೀಸಲು ಪೂಜೆ ಗೊಲ್ಲ ಜನಾಂಗದವರಿಗೇ ಸಲ್ಲಬೇಕೆಂದು ಶಾಸನ ಮಾಡಿದ.

ತನ್ನ ಸತ್ಯ ತೋರಿದ ಯರಮಂಚನಾಯಕ, ಅವಮಾನವಾದ ಮೇಲೆ ಇಲ್ಲಿ ಇರಬಾರದೆಂದು ಹೊರಟು ವೇದಾವತಿ ನದಿ ದಾಟುತ್ತಿರುವಾಗ, ಈ ಸುದ್ದಿ ತಿಳಿದ ಸಮೀಪದ ಗೌರಸಮುದ್ರದ (ಆಗ ಇದು ಐವೋಜಿ ಮಠ ಎಂದು ಕರೆಯಲ್ಪಡುತ್ತಿದ್ದು, ಮ್ಯಾಸ ಮಂಡಲಿಯ ಒಂದು ಪ್ರಮುಖ ಕಟ್ಟೆಮನೆಯಾಗಿತ್ತು) ಮ್ಯಾಸರು – ‘ಯರಮಂಚ ನಾಯಕನನ್ನು ಹೀಗೇ ಬಿಟ್ಟರೆ ‘ಊರು ನಾಯಕರಲ್ಲಿ ಸೇರಿ ಬಿಡುತ್ತಾನೆಂದು ಭಾವಿಸಿ, ಹೋಗಿ ಹಿಂದಿರುಗುವಂತೆ ಬೇಡಿಕೊಂಡರು. ಆಗ ಅವನು ‘ನನ್ನ ಮಾತಿಗೆ ಎದುರು ಆಡುವುದಿಲ್ಲವೆಂದರೆ ಮಾತ್ರ ನಾನು ನಿಮ್ಮನ್ನು ಸೇರುತ್ತೇನೆ’ಎಂದ. ಅದಕ್ಕೆ ಅವರು ಒಪ್ಪಿದ್ದಲ್ಲದೆ ತಮ್ಮ ಮ್ಯಾಸಮಂಡಲಿಗೆ ನಾಯಕನನ್ನಾಗಿ ಮಾಡಿಕೊಂಡರು.

ವಿಭೂತಿಪುರುಷನಾದ ಯರಮಂಚನಾಯಕ “ಒಂದೇ ಜ್ಯೋತಿ ಕುಲಗೋತ್ರ ಬೇಧವಿಲ್ಲದೆ ಎಲ್ಲರನ್ನೂ ಒಂದೇ ‘ಮುಕ್ಕು’(ನಮಸ್ಕಾರ) ಮುಗಿಸ್ತೀನಿ” ಎಂದು ಪ್ರತಿಜ್ಞೆ ಮಾಡಿದ. ಗೌರಸಮುದ್ರದಲ್ಲಿ ನಡೆಯುವ ಮಾರಮ್ಮನ ಜಾತ್ರೆಯ ಸಂದರ್ಭದಲ್ಲಿ ಗೌರಸಮುದ್ರದ ಊರೊಳಗಿನಿಂದ ತುಮ್ಮಲಿಗೆ ಮಾರಮ್ಮ ಬಂದು ಕೂತಾಗ, ಆಕೆಯ ಎದುರಿಗೆ ಕಾಣುವಂತೆ ಏಳುಸ್ತಂಭದ ದೀಪಸ್ತಂಭ ನಡೆಸಿ, ಅದರ ಮೇಲೆ ‘ಜ್ಯೋತಿ’ ಇಟ್ಟಾಗ ಕುಲಗೋತ್ರ ಭೇದವಿಲ್ಲದೆ ಎಲ್ಲರೂ ಕೈಮುಗಿಯುವಂತೆ ಮಾಡಿ ತನ್ನ ಮಹಿಮೆಯನ್ನು ಮೆರೆದ. ವಾಸೆ ಕೊಯ್ದಾಗ ಮಾಡುವ ಸಾಂಕೇತಿಕವಾದ ‘ಸ್ಯೂರುನಿ ಮೊಕ್ಕು’ಸಂಪ್ರದಾಯದ ಹಿಂದೆ ಈ ಕತೆ ಇರುವುದನ್ನು ಅರಿಯಬಹುದು. ವಾಸೆ ಕೊಯ್ದ ನಂತರ ಮಾಡಿದ ಮಾಂಸದ ಅಡುಗೆಯಲ್ಲಿ ಅಣ್ಣ ತಮ್ಮಂದಿರಿಗೆ ಬಿಟ್ಟು, ಬೇರೆ ಯಾರಿಗೂ ಒಂದು ಸಣ್ಣ ತುಂಡು ಮಾಂಸವನ್ನೂ ಕೊಡುವುದಿಲ್ಲ. ಸಂಪೂರ್ಣವಾಗಿ ತಾವೇ ತಿನ್ನುತ್ತಾರೆ! ಈ ಮಾಂಸವನ್ನು ಇವರು ‘ಬಂಗಾರದ ತುಂಡು’ ಎಂದು ಭಾವಿಸಿ ತಿನ್ನುತ್ತಾರೆ. ಮಾಂಸವನ್ನು ಪೂರ್ಣವಾಗಿ ತಿಂದ ನಂತರ ಉಳಿಯುವ ಎಲುಬು ಮೂಳೆಗಳನ್ನು ಬಿಸಾಕುವುದಿಲ್ಲ! ಸಮೀಪದಲ್ಲಿಯೇ ಒಂದು ಗುಂಡಿತೆಗೆದು ಅದರಲ್ಲಿ ಹೋತನ ತೊಗಲು (ಚರ್ಮ), ಮೂಳೆ, ತಟ್ಟೆ ತೊಳೆದ ನೀರು, ವಾಸೆ ಕೊಯ್ಯುವಾಗ ಮಣ್ಣಿನ ಮೇಲೆ ಚೆಲ್ಲಿದ ರಕ್ತದ ಮಣ್ಣನ್ನು, ಕೊನೆಗೆ ಕೈಯಲ್ಲಿಯ ಜಿಡ್ಡನ್ನು ತೊಳೆದ ಸೋಪಿನ ನೀರನ್ನು ಸಹ ಆ ಗುಂಡಿಗೆ ಬಿಟ್ಟು, ಮಣ್ಣು ಮುಚ್ಚಿ ಅದರ ಮೇಲೆ ಕಳ್ಳೇ ಆಸೆ ಹಾಕಿ ಗುಂಡು ಹೇರುತ್ತಾರೆ. ವಾಸೆ ಕ್ರಿಯೆ ಅತ್ಯಂತ ಪವಿತ್ರವಾದುದು ಎಂಬ ಭಾವನೆ ಇರುವುದರಿಂದ, ಹೂಳಿದ ಮೂಳೆಗಳನ್ನು ನಾಯಿ-ನರಿ ಮುಟ್ಟಿ ಅಪವಿತ್ರಗೊಳಿಸಬಾರದು ಎಂಬುದೇ ಈ ಕಟ್ಟುನಿಟ್ಟಿನ ನಡವಳಿಕೆಗೆ ಕಾರಣ.

ವಾಸೆ ಕೊಯ್ಯುವ ಸಂಪ್ರದಾಯವನ್ನು ಗೌರಸಮುದ್ರದಲ್ಲಿ ಪ್ರತಿವರ್ಷವೂ ತಪ್ಪದೆ ಆಚರಿಸುತ್ತಾರೆ. ಗೌರಸಮುದ್ರದ ಮಾರಮ್ಮನ ಹಬ್ಬ ಮಂಗಳವಾರವಾದರೆ, ಅದರ ಹಿಂದಿನ ಗುರುವಾರವೇ ಇವರು ಬೊಮ್ಮೆಲಿಂಗ ದೇವರ (ಈತನನ್ನು ಮಾರಮ್ಮನ ತಮ್ಮ ಎನ್ನುತ್ತಾರೆ.  ಇವನೇ ಕೊಳಗಲು ಬೊಮ್ಮ ರಬಹದೇ?) ನೇತೃತ್ವದಲ್ಲಿ ‘ಲಿಂಗದ ಗುಡಿ’ಯ ಬಳಿ ವಾಸೆ ಕೊಯ್ಯುತ್ತಾರೆ.