ಮಧ್ಯ ಕರ್ನಾಟಕದ ಪೂರ್ವದಂಚಿನ ಜಿಲ್ಲೆ – ಚಿತ್ರದುರ್ಗ. ಇದರ ಪೂರ್ವದ ಭಾಗ ಆಂಧ್ರದ ಗಡಿಯಂಚಿನ ಹೊಂದಿಕೊಂಡಿರುವುದರಿಂದ ಇದು ಕನ್ನಡ – ತೆಲುಗು ಭಾಷೆಗಳ ದ್ವಿಭಾಷಾ ಪ್ರದೇಶವಾಗಿ ರೂಪುಗೊಂಡಿದೆ. ಈ ಭಾಗದ ತೆಲುಗನ್ನಡದ ‘ಕಂದೆಲುಗು’ವಿಶಿಷ್ಟ ಸ್ವಾದದಿಂದ ಕೂಡಿದೆ. ಆದರೆ ಇಲ್ಲಿ ತೆಲುಗಿನ ಮೇಲೆ ಕನ್ನಡದ್ದೇ ಸವಾರಿ. ಹೀಗಾಗಿ ಕನ್ನಡ ತೆಲುಗು ಮಿಶ್ರಿತ ಭಾಷೆಯ ಸೊಗಡು ಕುತೂಹಲಕರ ಭಾಷಾ ಅಧ್ಯಯನಕ್ಕೆ ಗ್ರಾಸ ಒದಗಿಸುತ್ತದೆ.

ಈ ಹಿಂದಿನ ಅವಿಭಜಿತ ಚಿತ್ರದುರ್ಗ ಜಿಲ್ಲೆಯಲ್ಲಿನ ಹರಿಹರ, ದಾವಣಗೆರೆ, ಜಗಲೂರು ತಾಲ್ಲೂಕುಗಳನ್ನು ಕಳೆದುಕೊಂಡು ಈಗ ಪೂರ್ಣ ಪ್ರಮಾಣದ ‘ಬುಡಕಟ್ಟು ಜಿಲ್ಲೆ’ಯಾಗಿ ಹೊಮ್ಮಿದೆ. (ಆದರೆ ಬುಡಕಟ್ಟು ಜನಗಳಿಂದಲೇ ತುಂಬಿರುವ ‘ಜಗಲೂರು ತಾಲ್ಲೂಕು’ಕೈಬಿಟ್ಟು ಹೋಗಿರುವುದು ಒಂದು ನಷ್ಟವೇ ಸರಿ) ಜಿಲ್ಲೆಯ ಜನಸಂಖ್ಯೆಯ ಸಿಂಹಪಾಲು ಬುಡಕಟ್ಟುಗಳದೇ. ಅದರಲ್ಲೂ ಈ ಜಿಲ್ಲೆ ಬೇರೆ ಬುಡಕಟ್ಟುಗಳಿಗಿಂತ ಭಿನ್ನ. ಇಲ್ಲಿರುವ ಪಶುಪಾಲಕ ಬುಡಕಟ್ಟುಗಳು ಬೇರೆ ಜಿಲ್ಲೆಯಲ್ಲಿ ಇಲ್ಲ. ಇಲ್ಲಿರುವ ಕಾಡುಗೊಲ್ಲರು ಮತ್ತು ಮ್ಯಾಸಬೇಡರು ತಮ್ಮದೇ ಆದ ವಿಶಿಷ್ಟ ಸಾಂಸ್ಕೃತಿಕ ಲಕ್ಷಣಗಳಿಂದ ಗಮನಸೆಳೆಯುತ್ತಾರೆ. ಆದರೆ ಬೇರೆ ಪ್ರದೇಶದಲ್ಲಿ ಇರುವ ಇದೇ ಬುಡಕಟ್ಟುಗಳಿಗಿಂತ ಇವರು ತಮ್ಮ ಸಾಂಸ್ಕೃತಿಕ ಅನನ್ಯತೆಯಿಂದ ಭಿನ್ನರಾಗಿದ್ದಾರೆ. ಈ ಜಿಲ್ಲೆಯಲ್ಲಿ  ಇರುವಷ್ಟು ಹುಲ್ಲುಗಾವಲುಗಳು ಬೇರೆ ಯಾವ ಜಿಲ್ಲೆಗಳಲ್ಲೂ ಇಲ್ಲ.  ಜಿಲ್ಲೆಯ ಕುರುಚಲು ಕಾಡಿನ ಪರಿಸರ, ಬೀಳುವ ಅಲ್ಪಪ್ರಮಾಣದ ಮಳೆಯಿಂದ ಇದೊಂದು ಪಶುಪಾಲನೆಗೆ ಹೇಳಿ ಮಾಡಿಸಿದ ಜಾಗವಾಗಿರುವುದರಿಂದಲೇ  ಇಲ್ಲಿ ಪಶುಪಾಲಕ ಸಂಸ್ಕೃತಿ ಅರಳಿರುವುದು. ಹೀಗಾಗಿಯೇ ನಾನು ಚಿತ್ರದುರ್ಗ ಜಿಲ್ಲೆಯನ್ನು ‘ಪಶುಪಾಲಕ ಸಂಸ್ಕೃತಿಯ ತೂಗು ತೊಟ್ಟಿಲು’ ಎಂದು ಕರೆದಿರುವುದು. ಹಾಗೂ ಈ ಜಿಲ್ಲೆಯಲ್ಲಿ ಆಡಳಿತ ನಡೆಸಿದ ಚಿತ್ರದುರ್ಗ ಮತ್ತು ನಾಯಕನಹಟ್ಟಿಯ ಬೇಡ ಪಾಳೆಯಗಾರ ಮೂಲಪುರುಷರು ಪಶುಪಾಲರೇ ಆಗಿದ್ದಾರೆ. ಪಶುಪಾಲಕರು ಪಾಳೆಯಪಟ್ಟು ಕಟ್ಟಿ ನಿಂತು ದೇಶ ಆಳಿದ ಅಪರೂಪದ ದಾಹರಣೆ ಇದೇ ಇರಬಹುದು. ‘ಮ್ಯಾಸ’ಬೇಡರೆಂದು ಕರೆದುಕೊಳ್ಳುವ ಅವರ ಹೆಸರಿನಲ್ಲೇ ಪಶುಪಾಲನೆಯ ಕಸುಬು ಅಡಗಿರುವುದನ್ನು ಗುರುತಿಸಬಹುದು. ಮೇಯಿಸು > ಮ್ಯೇಸು ಎಂಬುದು ಪಶುಗಳನ್ನು ಹುಲ್ಲುಗಾವಲುಗಳಲ್ಲಿ ಮೇಯಿಸುವ ಕ್ರಿಯೆಯನ್ನು ಸೂಚಿಸುತ್ತದೆ. ಈ ಶಬ್ದವೇ ಕ್ರಮೇಣ ಮೇಯಿಸೋ ಬೇಡ > ಮ್ಯೆಸೋ ಬೇಡ > ಮ್ಯಾಸ ಬೇಡ ಆಗಿ ರೂಪುಗೊಂಡಿದೆ.

ಹಾಗೂ ಈ ಎರಡೂ ಪಶುಪಾಲಕ ಬುಡಕಟ್ಟುಗಳು ಮೂಲತಃ ಒಂದೇ ಮೂಲಕ್ಕೆ ಸೇರಿದವರೆಂಬುದನ್ನು ಐತಿಹ್ಯಗಳು ಹೇಳುತ್ತವೆ. ಆದರೆ ಆಶ್ಚರ್ಯಕರವೆಂಬಂತೆ ಕಾಡು ಗೊಲ್ಲರದು ಕನ್ನಡ ಭಾಷೆಯಾದರೆ ಮ್ಯಾಸಬೇಡರದು ತೆಲುಗು! ಈ ಎರಡೂ ಬುಡಕಟ್ಟಿನವರು ಮುಖ್ಯ ಗ್ರಾಮದಿಂದ ದೂರದಲ್ಲಿ ಪ್ರತ್ಯೇಕವಾಗಿ ‘ಹಟ್ಟಿ’ (ಮನೆಗಳ/ಗುಡಿಸಲುಗಳ ಗುಂಪು) ಕಟ್ಟಿಕೊಂಡು ತಮ್ಮದೇ ಜನಗಳ ಮಧ್ಯೆ ಮಾತ್ರ ಬದುಕುವ ಇವರದು ‘ಗ್ರಾಮದ್ಬಹಿವಾಸಿಗಳ ಬದುಕು’. ಈ ಹಟ್ಟಿಗಳೊಳಗೆ ಸಾಮಾನ್ಯವಾಗಿ ಅನ್ಯ ಜಾತಿಯ ಜನಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗುತ್ತದೆ.ಅದರಲ್ಲೂ ಕಾಡುಗೊಲ್ಲರ ಹಟ್ಟಿಗಳಿಗಂತೂ ಅಸ್ಪೃಶ್ಯರೆನ್ನುವ ಮಾದಿಗರಿಗೆ ಪ್ರವೇಶ ಇಂದಿಗೂ ಇಲ್ಲವೇ ಇಲ್ಲ!.(ಇದಕ್ಕೆ ಕಾರಣ ಮುಂದಿನ ಲೇಖನ ಮಾಲೆಯಲ್ಲಿ ತಿಳಿಸುತ್ತೇನೆ.)

ಇಂಥ ಹಟ್ಟಿಗಳಿಂದ ಸಿಡಿದು ಹೋಗಿ ಊರಜನರೊಂದಿಗೆ ಬದುಕುತ್ತಿರುವ ಮ್ಯಾಸಬೇಡರನ್ನು ‘ಊರನಾಯಕರು’ ಎಂದು ಗುರುತಿಸಲಾಗುತ್ತದೆ. ಆದರೆ’ಊರು ಗೊಲ್ಲರು’ ಎಂದು ಕರೆಯುವ ಜನಕ್ಕೂ ‘ಕಾಡುಗೊಲ್ಲ’ ದು ಕರೆಯುವ ಜನಕ್ಕೂ ‘ಕಾಡುಗೊಲ್ಲ’ ಎಂದು ಕರೆಯುವ ಬುಡಕಟ್ಟಿಗೂ ಯಾವುದೇ ಸಂಬಂಧಗಳಿರುವುದಿಲ್ಲ ಎಂಬುದು ಗಮನಾರ್ಹ.

ಈ ಎರಡೂ ಬುಡಕಟ್ಟುಗಳ ಸಾಂಸ್ಕೃತಿಕ ಕೇಂದ್ರಗಳು ಹಾಗೂ ‘ಕಟ್ಟೆಮನೆಗಳು’ ಈ ಜಿಲ್ಲೆಯಾದ್ಯಂತ ಹರಡಿಕೊಂಡಿರುವುದನ್ನು ಕಾಣಬಹುದು. ಕಾಡುಗೊಲ್ಲರ ‘ಮೂಲ ಕಟ್ಟೆಮನೆ’ ಗಳು ಹಿರಿಯೂರು ತಾಲ್ಲೂಕಿನ ಕರಿಯೋಬೇನಹಳ್ಳಿ, ತಾಳವಟ್ಟಿ(ಇದು ಈಗ ಯರಬಳ್ಳಿ ಹಟ್ಟಿಗೆ ಸ್ಥಳಾಂತರಗೊಂಡಿದೆ.) ಮತ್ತು ಚಿತ್ರದುರ್ಗ ತಾಲ್ಲೂಕಿನ ರಾಮನಹಳ್ಳಿ ( ಈಗ  ಈ ಗ್ರಾಮವೂ ಬೇಚರಕ್ ಆಗಿ ಈ ಕಟ್ಟೆಮನೆ ಹಿರಿಯೂರು ತಾಲ್ಲೂಕಿನ ಮರಡಿಹಳ್ಳಿಗೆ ಸ್ಥಳಾಂತವಾಗಿದೆ.) ಗಳಲ್ಲಿ ಹರಡಿದ್ದು; ಅವರ ಪಂಚಲಿಂಗ ದೈವಗಳಾದ ಚಿತ್ರಲಿಂಗ(ಚಿತ್ರಹಳ್ಳಿ), ರಾಮಲಿಂಗ (ಬೇಚರಕ್ ರಾಮನಹಳ್ಳಿ), ಕಾಟಂಲಿಂಗ (ಇಕ್ಕನೂರು), ಪಾತೇಲಿಂಗ(ಕೂಡಲಹಳ್ಳಿ), ಕ್ಯಾತೇಲಿಂಗ (ಚೆನ್ನಮ್ಮ ನಾಗತಿಹಳ್ಳಿ) ಗಳು ಆವರಣದಲ್ಲಿ ಸೂಚಿಸಿರುವ ಗ್ರಾಮಗಳಲ್ಲಿ ನೆಲೆಸಿವೆ.

ಮ್ಯಾಸಬೇಡರ ಕಟ್ಟೆಮನೆಗಳು – ನನ್ನೀವಾಳ, ನಾಯಕನಹಟ್ಟಿ, ಗೋನೂರುಗಳಲ್ಲಿದ್ದು; ಇವರ ‘ಹನ್ನೆರಡು ದೇವರುಗಳು’ ಜಿಲ್ಲೆಯ ವಿವಿಧ ಬಾಗಗಳಲ್ಲಿ ನೆಲೆಸಿವೆ.

ಈ ಬುಡಕಟ್ಟುಗಳಲ್ಲಿ ಅಪಾರವಾದ ಜನಪದ ಸಾಹಿತ್ಯವಿದೆ. ನೂರಾರು ಈರಗಾರರ ಖಂಡಕಾವ್ಯಗಳು, ಇಬ್ಬರು ಸಾಂಸ್ಕೃತಿಕ ವೀರರ ಜನಪದ ಖಂಡಕಾವ್ಯಗಳು ಇಲ್ಲಿ ಹುಟ್ಟಿಕೊಂಡಿವೆ. ಮ್ಯಾಸಬೇಡರ ಸಾಂಸ್ಕೃತಿಕ ನಾಯಕರಾದ ಗಾದರಿ ಪಾಲನಾಯಕ – ಜಗಲೂರು ಪಾಪನ್ನು ಕುರಿತು  ಖಂಡಕಾವ್ಯಗಳೊಂದಿಗೆ ಬಿಡಿಗೀತೆಗಳೂ ರಚಿತವಾಗಿವೆ. ಆದರೆ ಕಾಡುಗೊಲ್ಲರ ಸಮೃದ್ಧ ಜನಪದ ಸಾಹಿತ್ಯದ ಎದುರು ಮ್ಯಾಸಬೇಡರ ಜನಪದ ಸಾಹಿತಯ ಸ್ವಲ್ಪ ಬಡತನದ್ದು ಎಂದು ಹೇಳಲೇಬೇಕು. ಆದರೆ ಕಾಡುಗೊಲ್ಲರ ಇಬ್ಬರು ಸಾಂಸ್ಕೃತಿಕ ವೀರರಾದ  ಎತ್ತಪ್ಪ – ಜುಂಜಪ್ಪನವರನ್ನು ಕುರಿತು ಎರಡು ಮಹಾಕಾವ್ಯಗಳೇ ಹುಟ್ಟಿಕೊಂಡಿವೆ. ಹೀಗಾಗಿ ಕಾಡುಗೊಲ್ಲರದು ಸಾಹಿತ್ಯ ಸಮೃದ್ಧಿಯಾದರೆ ಮ್ಯಾಸಬೇಡರದು ಆಚರಣಾ ಸಮೃದ್ಧಿ ಎಂಬುದನ್ನು ಮುಂದೆ ಕಂಡುಕೊಳ್ಳಬಹುದು. ಇಂಥ ಸಮೃದ್ಧ ಸಾಹಿತ್ಯದ ನಿಧಿಯಾಗಿದ್ದ ಜನಪದ ಸಿರಿ ಎಂದೇ ಹೆಸರಾದ ಸಿರಿಯಜ್ಜಿಯನ್ನು ಇಲ್ಲಿ ನೆನೆಯಬಹುದು.

ಇಷ್ಟು ಹಿನ್ನೆಲೆಯೊಂದಿಗೆ ನಾವು ಚಿತ್ರದುರ್ಗ ಜಿಲ್ಲೆಯ ಜಾನಪದವನ್ನು ಪ್ರವೇಶಿಸಬಹುದು.

ಢಿಕ್ಕಿ ಹಬ್ಬ

ಚಿತ್ರದುರ್ಗ ಜಿಲ್ಲೆಯ ತಾಲ್ಲೂಕು ಕೇಂದ್ರವಾದ ಚಳ್ಳಕೆರೆಗೆ ಕೇವಲ ಏಳೆಂಟು ಕಿ ಮೀ ದೂರದ ನನ್ನೀವಾಳದಲ್ಲಿ ವಿಚಿತ್ರವಾದ ಹಬ್ಬವೊಂದು ನಡೆಯುತ್ತದೆ.ನನ್ನೀವಾಳ ಮ್ಯಾಸಬೇಡರ ಪ್ರಮುಖ ಸಾಂಸ್ಕೃತಿಕ ಕೇಂದ್ರವಲ್ಲದೇ, ಬೇಡ ಜನಾಂಗದ ‘ಕಟ್ಟೆ ಮನೆ’ಯೂ ಹೌದು.

ಊರಿಗೆ ಅಂಟಿಕೊಂಡೇ ಬೃಹದಾಕಾರವಾದ ಬೆಟ್ಟವಿದೆ. ನಯನ ಮನೋಹರವಾದ  ಈ ಬೆಟ್ಟ ಒಂದು ದಿಕ್ಕಿನಿಂದ ಗಣಪತಿಯಂತೆ ಕಂಡರೆ ಮತ್ತೂಂದು ದಿಕ್ಕಿನಿಂದ ತಲೆ ನೆಲಕ್ಕಿಟ್ಟು ಸೊಂಡಿಲು ಚಾಚಿ ಮಲಗಿದ ಆನೆಯಂತೆ ಕಾಣುತ್ತದೆ; ದೂರದಿಂದ ನೋಡಿದಾಗ ಬೇಂದ್ರೆಯವರ ‘ಗುಡ್ಡ ಗುಡ್ಡ ಸ್ಥಾವರಲಿಂಗ ‘ವೆಂಬಂತೆ ಕಾಣುತ್ತದೆ. ಸುಮಾರು ಮೂರುಸಾವಿರ ಅಡಿ ಎತ್ತರವಿರುವ ಬೆಟ್ಟ ಬರುಬರುತ್ತಾ ಕಡಿದಾಗುತ್ತಾ ಹೋಗಿ ಒಂದು ಸಣ್ಣ ಬಯಲಿನಲ್ಲಿ ಅಂತ್ಯವಾಗುತ್ತದೆ. ಗುಹೆಯಾಕಾರದ ಬಂಡೆಯ ಸಂದಿಯಲ್ಲಿ ಒಂದು ಲಿಂಗವಿದೆ.

ಹಿಂದೆ ಈ ಊರಿಗೆ ‘ನಂದಿವಾಳ’ ಅಂತ ಹೆಸರಿತ್ತಂತೆ. ಈ ಬೆಟ್ಟ ನಂದಿಯ ಭುಜದ ಹಾಗೇ ಇದ್ದಿದ್ದರಿಂದ ಆ ಹೆಸರು ಬಂದಿತ್ತಂತೆ. ಆಳುತ್ತಿದ್ದ ಮ್ಯಾಸನಾಯಕ ‘ನನ್ನೆಮ್ಮ’ ಬ ಮುಸ್ಲಿಮ್ ಹೆಂಗಸಿನೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದನಂತೆ, ಈಕೆ ನಾಯಕನಲ್ಲಿ ತನ್ನ ಹೆಸರು ಶಾಶ್ವತವಾಗಿ ಉಳಿಯಬೇಕು, ಮ್ಯಾಸಬೇಡರು ಮುಸ್ಲಿಂರ ಸಂಪ್ರದಾಯ ಅನುಸರಿಸೋ ಹಾಗೆ ಮಾಡಬೇಕು ಎಂದು ಕೇಳಿದ್ದರಿಂದ ; ಆ ನಾಯಕ ಊರ ಹೆಸರನ್ನು ‘ನನ್ನೀವಾಳ’ ಎಂದು ಹೆಸರು ಬದಲಾಯಿಸಿ, ಎಲ್ಲರೂ ಮುಂಜಿ ಮಾಡಿಸಿಕೊಳ್ಳಬೇಕು ಎಂದು ಆಜ್ಞೆ ಮಾಡಿದನಂತೆ! ಈಗಲೂ ಕೆಲವು ಜನ ಮುಂಜಿ ಮಾಡಿಸಿಕೊಳ್ಳುತ್ತಾರೆ,

ಈ ಊರಿನ ‘ಹೊಲಮೇರೆ’ (ವಲಮಾರೆ) ಯಲ್ಲಿ ಒಂದೇ ಒಂದು ಕಾಗೆ ಹಾರುವುದಿಲ್ಲ. ಹಾಗೆಂದು ಬಹು ಹಿಂದೆಯೇ ಮಾಟಗಾರರು ‘ಕಟ್ಟು’ ಮಾಡಿದ್ದಾರೆಂಬ ಐತಿಹ್ಯಗಳಿವೆ.

ಊರ ಹೊರವಲಯದಲ್ಲಿ ಸಿತ್ತಿನ ಹನ್ನೆರಡು ಮ್ಯಾಸಬೇಡರ ಹಟ್ಟಿಗಳಿಂದ ಬಂದ ಪೆಟ್ಟಿಗೆ ದೇವರುಗಳಿಗೆ ಹಸಿರು ಚಪ್ಪರ ಹಾಕಿ ಗದ್ದಿಗೆಯ ಮೇಲೆ ಇಳಿಸುತ್ತಾರೆ.

‘ಎತ್ತಿನ ಕಿಲಾರಿ’ ಯ ನೇತೃತ್ವದಲ್ಲಿ ‘ದೇವರ ಬಸವ’ ಗಳ ಓಟದ ಕಾರ್ಯಕ್ರಮ ಪ್ರಾರಂಭ. ಜನಗಳ ಕೇಕೆ, ಉರುಮೆಗಳ ಆರ್ಭಟ ಮುಗಿಲುಮುಟ್ಟಿ, ಒಂದೊಂದೇ ದೇವರುಗಳ ಪೂಜೆಗಳು ನಡೆದ ಮೇಲೆ ಬಂಗಾರ ದೇವರ ಪೂಜೆ ಪ್ರಾರಂಭ. ಅಲ್ಲಿ ಸೇರಿದ್ದ ನೆಂಟರು – ಭಂಟರಾದ ಅತ್ತೆ ಸೊಸೆಯರು ಒಬ್ಬರ ಜುಟ್ಟು ಮತ್ತೊಬ್ಬರು ಹಿಡಿದುಕೊಂಡು ಒಬ್ಬರ ತಲೆಗೊಬ್ಬರು ‘ಫಟ್ ಫಟ್’ ಎಂದು ‘ಢೀ’ ಕುಟ್ಟಿಕೊಳ್ಳತೊಡಗುತ್ತಾರೆ. ಇಷ್ಟೊತ್ತು ಚೆನ್ನಗೇ ಇದ್ದ ಜನ ಹೀಗೇಕೆ ಮಾಡುತ್ತಿದ್ದಾರೆ. ಅತ್ತೆ – ಸೊಸೆಯರು ಎಲ್ಲ ಅಂತರಂಗಗಳನ್ನು ಮರೆತು, ಹೃದಯದಲ್ಲಿನ ಕಲ್ಮಷವನ್ನು ತೊಳೆದುಕೊಂಡು ಶುದ್ಧಿಯಾಗುವ ಕಾರ್ಉಕ್ರಮ ದಾಗಿರಬಹುದೇ? ಅನ್ನಿಸುತ್ತದೆ. ತಮೊಳಿನ ಸಂಗಂ ಕಾಲದ ಸಾಹಿತ್ಯದಲ್ಲಿ ಈ ಬಗೆಯ ಘಟನೆಯ ಉಲ್ಲೇಖವೂ ಉಂಟು. ಅಂದರೆ ಇದೊಂದು ಪರಂಪರೆಯಿಂದ ಬಂದ ಪ್ರಾಚೀನ ಆಚರಣೆ. ಹನ್ನೆರಡು ಪೆಟ್ಟಿಗೆ ದೇವರುಗಳಲ್ಲೊಂದಾದ ಬಂಗಾರ ದೇವರಿಗೆ ತೆಂಗಿನಕಾಯಿ ಸೇರುವುದಿಲ್ಲವಂತೆ! ಅದಕ್ಕಾಗಿ ಹರಕೆ ಹೊತ್ತ ಭಕ್ತರು ತೆಂಗಿನಕಾಯಿ ಸಲ್ಲಿಸುವುದಕ್ಕೆ ಬದಲಾಗಿ ‘ತಲೆ’ಯನ್ನೇ ತೆಂಗಿನಕಾಯಿ ಎಂದು ಭಾವಿಸಿ, ‘ಫಟ್’ ಎಂದು ತಲೆ ಘಟ್ಟಿಸಿಕೊಳ್ಳುವ ಕ್ರಿಯೆಯ ಮೂಲಕ ಕಾಯಿ ಒಪ್ಪಿಸಿದ ಸಂತೃಪ್ತಿ ಪಡೆಯುತ್ತಾರೆ ಎಂದು ಹಿರಿಯರೊಬ್ಬರು ಹೇಳುತ್ತಾರೆ.

‘ಢಿಕ್ಕಿ’ಯ ನಂತರ ಅತ್ತೆ – ಸೊಸೆಯರು ನಗುನಗುತ್ತಾ ಸೋತವರು ಗೆದ್ದವರಿಗೆ ಕಜ್ಜಾಯ ಕೊಡಿಸುತ್ತಾರೆ.ಇದನ್ನು ನೋಡಿದಾಗ ಅವರು ಬದುಕನ್ನು ಒಂದು ಸೋಲು ಗೆಲುವಿನಾಟ ಎಂದು ಭಾವಿಸಿದಂತೆ ಕಾಣುತ್ತದೆ.