ಇತಿಹಾಸದ ಪುಟಗಳಲ್ಲಿ ಚಿತ್ರದುರ್ಗ ಜಿಲ್ಲೆ

ಕರ್ನಾಟಕ ರಾಜ್ಯವು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿದ ರಾಜ್ಯ. ನೂರಾರು ಪ್ರೇಕ್ಷಣೀಯ ಸ್ಥಳಗಳಿಂದ ಕೂಡಿರುವ ಚಿತ್ರದುರ್ಗ ಕರ್ನಾಟಕದ ಪ್ರಮುಖ ಐತಿಹಾಸಿಕ ಸ್ಥಳಗಳಲ್ಲೊಂದು. ಇಂದು ಜಿಲ್ಲಾ ಕೇಂದ್ರವಾಗಿದ್ದು ಇತಿಹಾಸ, ರಾಜಕೀಯ ಭೌಗೋಳಿಕ, ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕವಾಗಿ ಬಹುದೊಡ್ಡ ಪರಂಪರೆಯನ್ನು ಹೊಂದಿದೆ. ಹಾಗೆಯೇ ಪ್ರಾಚೀನ ಶಾಸನಗಳ, ಪುಣ್ಯಪಾವನ ಕ್ಷೇತ್ರಗಳು, ಕೋಟೆಕೊತ್ತಲಗಳ ತವರೂರೆನಿಸಿದೆ.

ಚಿತ್ರದುರ್ಗವು ಸಮುದ್ರಮಟ್ಟದಿಂದ ಸು.೮೫೪ ಮೀಟರನ್‌ನಷ್ಟು ಎತ್ತರದಲ್ಲಿದ್ದು, ರಾಷ್ಟ್ರೀಯ ಹೆದ್ದಾರಿ-೪ (ಬೆಂಗಳೂರು-ಪೂನಾ) ಹಾಗೂ ರಾಷ್ಟ್ರೀಯ ಹೆದ್ದಾರಿ-೧೩ (ಚಿತ್ರದುರ್ಗ-ಸೊಲ್ಲಾಪುರ) ರ ಸಂಗಮ ಸ್ಥಳವಾಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ವಾಯುವ್ಯಕ್ಕೆ ೨೦೦ ಕಿ.ಮೀ. ದೂರದಲ್ಲಿರುವ ಜಿಲ್ಲಾ ಕೇಂದ್ರವಾಗಿದೆ. ಇದು ೮,೩೮೮ ಚ.ಕಿ.ಮೀ. ವಿಸ್ತೀರ್ಣ ಹೊಂದಿ ಕರ್ನಾಟಕದ ೯ನೇ ದೊಡ್ಡ ಜಿಲ್ಲೆ ಎಂಬ ಖ್ಯಾತಿ ಪಡೆದಿದೆ. ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮುರು ಎಂಬ ೬ ತಾಲ್ಲೂಕುಗಳನ್ನು ಒಳಗೊಂಡಿದ್ದು ೨೦೦೧ ರ ಜನಗಣತಿ ಪ್ರಕಾರ ೧೫,೧೭,೮೯೬ ಜನಸಂಖ್ಯೆಯಿಂದಾಗಿ ೧೭೯/ಚ.ಕಿ.ಮೀ. ಜನಸಾಂದ್ರತೆ ಹೊಂದಿದೆ. ೬೪.೫% ಸಾಕ್ಷರತೆ ಪ್ರಮಾಣ ಸಾಧಿಸಿದೆ. ೭೩,೭೧೩ ಹೆಕ್ಟೇರ್‌ಅರಣ್ಯಭೂಮಿಯ ನೈಸರ್ಗಿಕ ಸಂಪತ್ತು ಹೊಂದಿದೆ.

ಈ ಹಿಂದೆ ಚಿತ್ರದುರ್ಗವು ಹಿಡಿಂಬನ ರಾಜಧಾನಿಯಾಗಿತ್ತೆಂದು ಕ್ರಿ.ಶ. ೩ನೇ ಶತಮಾನದ ‘ಮಯೂರವರ್ಮನ’ ಶಾಸನದ ಪ್ರಕಾರ ಶಾತವಾಹನರು, ಕದಂಬರು ಆಳಿದ್ದರು. ತದನಂತರ ಚಾಲುಕ್ಯರು, ಪಲ್ಲವರು, ರಾಷ್ಟ್ರಕೂಟರು, ಚೋಳರು, ಹೊಯ್ಸಳರು ವಿಜಯನಗರದ ಅರಸರ ಆಳ್ವಿಕೆಗೆ ಒಳಪಟ್ಟಿತ್ತೆಂತಳೂ, ಪಾಳೆಯಗಾರರು ಕ್ರಿ.ಶ. ೧೫೬೮ರಿಂದ ೧೭೭೭ರವರೆಗೆ ಸು.೨೧೧ ವರ್ಷಗಳ ಕಾಲ ರಾಜ್ಯ ಆಳ್ವಿಕೆ ಮಾಡಿದ್ದರು. ಕಾಮಗೇತಿ ವಂಶದ ಮೂಲಪುರುಷ ಚಿತ್ರನಾಯಕನಿಂದ ಆರಂಭವಾಗಿ ರಾಜವೀರ ಮದಕರಿನಾಯಕನ ಕಾಲದವರೆಗೆ ಚಿತ್ರದುರ್ಗವು ಪಾಳೆಯಗಾರರ ಆಳ್ವಿಕೆಯಲ್ಲಿ ಪಾಳೆಪಟ್ಟಾಗಿದ್ದಿತು. ಮದಕರಿನಾಯಕನ ಕಾಲದಲ್ಲಿ ಹೈದರಾಲಿಯ ಸೈನಿಕರು ಕೋಟೆಗೆ ಮುತ್ತಿಗೆ ಹಾಕಿದಾಗ ವೀರಾವೇಶದಿಂದ ಗಂಡುಗಚ್ಚೆ ಕಟ್ಟಿ ಒನಕೆ ಹಿಡಿದು ಶತ್ರುಗಳೊಡನೆ ಸೆಣಸಿದ ಮಹಿಳೆ ‘ವೀರವನಿತೆ’ ಓಬವ್ವಳೆಂಬ’ ಖ್ಯಾತಿಗೆ ಪಾತ್ರಳಾದಳು. ೧೭೭೯ರಲ್ಲಿ ಕೋಟೆ ಹೈದರಾಲಿಯ ವಶವಾಗುತ್ತದೆ.

ಚಿತ್ರದುರ್ಗಕ್ಕೆ ದ್ವಾಪರದಲ್ಲಿ ‘ಹಿಡಿಂಬಪಟ್ಟಣ’, ಕದಂಬರ ಕಾಲದಲ್ಲಿ ‘ಚಂದ್ರವಳ್ಳಿ’, ಚಾಲುಕ್ಯರ ಕಾಲದಲ್ಲಿ ‘ಸೂಳ್ಗಲ್ಲು’, ಹೊಯ್ಸಳರ ಕಾಲದಲ್ಲಿ ‘ಪೆರುಮಾಳೆಪುರ’, ವಿಜಯನಗರ ಕಾಲದಲ್ಲಿ ‘ಬೆ(ಚಿ)ಮ್ಮತ್ತನಕಲ್ಲು’, ಪಾಳೆಯಗಾರರ ಕಾಲದಲ್ಲಿ ಛತ್ರಕಲ್‌ದುರ್ಗ, ಚಿತ್ರಕಲ್‌ದುರ್ಗ, ಬ್ರಿಟೀಷರ ಕಾಲದಲ್ಲಿ ‘ಚಿತ್ತಲ್‌ಡ್ರುಗ್‌’ ಆಗಿದ್ದು ಇಂದು ‘ಚಿತ್ರದುರ್ಗ’ ಎಂಬ ಹೆಸರು ಪ್ರಚಲಿತದಲ್ಲಿದೆ.

ಚಿತ್ರದುರ್ಗ ಜಿಲ್ಲೆಯು ಕೋಟೆ-ಕೊತ್ತಲಗಳಿಂದಲೂ, ಮಠಮಾನ್ಯಗಳಿಂದಲೂ, ಶಾಸನಗಳೂ, ಗುಹಾಂತರ ದೇವಾಲಯಗಳಿಂದಲೂ, ಭೂವೈಜ್ಞಾನಿಕ ವಿಸ್ಮಯದ ಸ್ಮಾರಕವಾದ ಮರಡಿಹಳ್ಳಿಯ ‘ದಿಂಬಿನಾಕಾರದ ಶಿಲೆ’ಗಳಿಂದಲೂ (ಪಿಲೊಲಾವ) ೧೩೨೩ ಮೀ ಎತ್ತರದಲ್ಲಿರುವ ಹಸಿರುಡುಗೆಯಟ್ಟು ಕಂಗೊಳಿಸುವ ಜೋಗಿಮಟ್ಟಿ ಗಿರಿಧಾಮದಿಂದಲೂ, ಸಿರಿಗೆರೆ, ಚಿತ್ರದುರ್ಗಗಳಲ್ಲಿರುವ ಮಠ ಮಾನ್ಯಗಳಿಂದಲೂ, ಐತಿಹಾಸಿಕ ಸ್ಮಾರಕಗಳಿಂದಲೂ, ಧಾರ್ಮಿಕ, ಸಾಮಾಜಿಕ ಶೈಕ್ಷಣಿಕವಾಗಿಯೂ ಧರ್ಮ ಸಮನ್ವಯದ ಬೀಡಾಗಿದೆ.

ಹಾಗೆಯೇ ಎಣ್ಣೆಗಿರಣಿಗಳು, ಕಂಬಳಿ ಹಾಗೂ ರೇಷ್ಮೆಯ ಉದ್ದಿಮೆ, ಕುರಿಸಾಕಣೆ ರಾಜ್ಯದ ವ್ಯಾಪಾರ ವಹಿವಾಟಿನಲ್ಲಿ ಪ್ರಮುಖ ಪಾತ್ರವಹಿಸಿವೆ. ಬಯಲುಸೀಮೆಯೆಂಬ ಹಣೆಪಟ್ಟಿಯ ಹೊತ್ತ ಚಿತ್ರದುರ್ಗ ಬೇಸಿಗೆಯ ತಾಪ, ಚಳಿಗಾಲದ ಹಿತಕರ ವಾತಾವರಣದ ಜೊತೆಗೆ ವಾರ್ಷಿಕ ಸರಾಸರಿ ೫೫೫.೭೦ ಮಿ.ಮೀ. ಮಳೆಯ ಪ್ರಮಾಣಕ್ಕೆ ತೃಪ್ತಿಪಟ್ಟುಕೊಂಡಿದೆ. ಇಲ್ಲಿನ ರೈತ ಜನರು ನೆಲಗಡಲೆ, ಸೂರ‍್ಯಕಾಂತಿ, ಹತ್ತಿ, ಮೆಕ್ಕೆಜೋಳ, ತೊಗರಿ, ಭತ್ತ, ಬಾಳೆ, ಅಡಿಕೆ, ತೆಂಗು, ಈರುಳ್ಳಿ, ಹೂವು ಹಾಗೂ ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ.

ಚಿತ್ರದುರ್ಗವು ಆದರ್ಶ ರಾಜಕಾರಣಿಯಾಗಿ ಬಾಳಿದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ|| ಎಸ್‌. ನಿಜಲಿಂಗಪ್ಪನವರ, ‘ಜಾನಪದಸಿರಿ’ ಎಂದು ಹೆಸರಾಗಿದ್ದ ದಿ|| ಸಿರಿಯಜ್ಜಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಅಪ್ಪಟಗಾಂಧಿವಾದಿ ಬೆಳಗೆರೆ ಕೃಷ್ಣಶಾಸ್ತ್ರಿ, ದುರ್ಗಾಸ್ತಮಾನದ ಕರ್ತೃ ತ.ರಾ.ಸು. ಅವರಂತಹ ಮಹಾನ್‌ಚೇತನಗಳ ಕರ್ಮಭೂಮಿಯೂ ಹೌದು.

ರಾಷ್ಟ್ರಕವಿ ಪದವಿಗೇರಿದ ಕುವೆಂಪು, ಜಿ.ಎಸ್‌. ಶಿವರುದ್ರಪ್ಪ ಇವರುಗಳ ಸ್ಪೂರ್ತಿಯ ಸೆಲೆಯಾಗಿದ್ದ ಗುರುಪರಂಪರೆ ಚಿತ್ರದುರ್ಗ ಜಿಲ್ಲೆಯದು. ಮೊಳಕಾಲ್ಮುರುವಿನ ಅಶೋಕಸಿದ್ದಾಪುರ ಶಾಸನ, ನಾಯಕನಹಟ್ಟಿ ಸಮೀಪದ ರಾಮದುರ್ಗದ ಗುಹಾಂತರದೇವಾಲಯ, ಹೊಳಲ್ಕೆರೆಯ ಒಂಟಿಕಂಬದ ಮಠ ಹಿರಿಯೂರಿನ ಕೃಷಿವಿಜ್ಞಾನ ಕೇಂದ್ರ ಹಾಗೂ ಹೊಸದುರ್ಗದ ಹಾಲರಾಮೇಶ್ವರ ಚಿತ್ರದುರ್ಗದ ಏಳುಸುತ್ತಿನ ಕೋಟೆಯ ವಿಹಂಗಮನೋಟ ಪ್ರವಾಸಿಗರನ್ನು ಸಂಶೋಧಕರನ್ನು ಹುಬ್ಬೇರಿಸುವಂತೆ ಮಾಡಿವೆ. ಗತ ಇತಿಹಾಸ ಸಾರುತ್ತಿವೆ. “ಕನ್ನಡನಾಡಿನ ವೀರರ ರಮಣಿಯ ಗಂಡುಭೂಮಿಯ ವೀರನಾರಿಯ ಚರಿತೆಯ ನಾನು ಹಾಡುವೆ”………. ಎಂದು ಸಾಗುವ ಹಾಡಿನ ಸಾಲುಗಳಿಂದಾಗಿ ಚಿತ್ರದುರ್ಗಕ್ಕೆ ಎಲ್ಲಿಲ್ಲದ ಅಭೂತಪೂರ್ವ ಮಾನ್ಯತೆ ದೊರೆತಿದೆ.

ಈ ಜಿಲ್ಲೆಯು ಬಳ್ಳಾರಿ, ದಾವಣಗೆರೆ, ಚಿಕ್ಕಮಗಳೂರು, ತುಮಕೂರು, ಅನಂತಪುರ ಜಿಲ್ಲೆಗಳಿಗೆ ಹೊಂದಿಕೊಂಡು ಭೂ ವಿಸ್ತೀರ್ಣವನ್ನು ಒಳಗೊಂಡಿದೆ. ಉತ್ತಮ ಸಾಂಸ್ಕೃತಿಕ ಬಾಂಧವ್ಯಕ್ಕೆ ಹೆಸರುವಾಸಿಯಾಗಿದೆ.

ಚಿತ್ರದುರ್ಗದ ಜನರು ವಸಂತ ಋತುವಿನಲ್ಲಿ ನೀಲಾಗಸದಡಿಯ ಗಿರಿಸಮೂಹವನ್ನು, ಗ್ರೀಷ್ಮ ಋತುವಿನಲ್ಲಿ ಮೋಡಗಳಿಂದಾವೃತವಾದ, ವರ್ಷ ಮತ್ತು ಶರತ್‌ಋತುವಿನಲ್ಲಿ ಮಳೆಯ ಸಿಂಚನದಿಂದ ಹಸಿರುಟ್ಟುನಿಂತ, ಹೇಮಂತ, ಶಿಶಿರ ಋತುಗಳಲ್ಲಿ ಮುಂಜಾವಿನ ಮಂಜುಮುಸುಕಿದಾಗ ಕೋಟೆ-ಕೊತ್ತಲಗಳ ವಿಹಂಗಮ ನೋಟವನ್ನು ಕಂಡು ಪುನೀತರಾಗುತ್ತಾರೆ, ಪುಳಕಗೊಳ್ಳುತ್ತಾರೆ.

ಈ ಎಲ್ಲಾ ವೈಶಿಷ್ಟ್ಯ ಮತ್ತು ಮಹತ್ವಪೂರ್ಣ ಅಂಶಗಳನ್ನು ತನ್ನ ಮಡಿಲಲ್ಲಿಟ್ಟುಕೊಂಡಿರುವ ಚಿತ್ರದುರ್ಗಕ್ಕೆ ಬಯಲುಸೀಮೆ ಎಂಬ ಹಣೆಪಟ್ಟಿ ಕಳಚಬೇಕಾದರೆ ವರ್ಷಧಾರೆಯಾಗಬೇಕು, ಭದ್ರೆ ಹರಿದು ಬಂದು ಹಸಿರಾಗಿಸಬೇಕೆಂಬ ಹೊಂಗನಸಿದೆ. ಈ ನಾಡಿನ ಗತವೈಭವ ಸಾರುವ ಕೋಟೆ-ಕೊತ್ತಲಗಳೂ, ಗುಡಿಗೋಪುರಗಳು, ಐತಿಹಾಸಿಕ ಸ್ಮಾರಕಗಳು, ಸಾಂಸ್ಕೃತಿಕ ಕೇಂದ್ರಗಳು ಎಲ್ಲಾ ತಾಲ್ಲೂಕುಗಳಲ್ಲೂ ಇದ್ದು ಅವುಗಳ ದರ್ಶನಕ್ಕಾಗಿ ಹೊರಟುನಿಂತವರಿಗೆ ‘ಚಿಣ್ಣರ ಚಿತ್ರದುರ್ಗ ದರ್ಶನ’ ಕೃತಿಯೊಂದು ಕೈಮರವಾಗಿ ನೆರವಾದರೆ ಅದೆಷ್ಟು ಚೆನ್ನ……………

ಐತಿಹಾಸಿಕ ಚಿತ್ರದುರ್ಗದ ಕಲ್ಲಿನಕೋಟೆ

ಚಿತ್ರದುರ್ಗದ ಏಳುಸುತ್ತಿನ ಕಲ್ಲಿನಕೋಟೆಯ ಪ್ರವೇಶದ್ವಾರ. ಈ ಏಳುಸುತ್ತಿನ ಕೋಟೆಯು ತಾಂತ್ರಿಕವಾಗಿ ಅತ್ಯಂತ ಪ್ರಬುದ್ಧವಾಗಿ ನಿರ್ಮಿಸಲ್ಪಟ್ಟಿದೆ, ಫಿರಂಗಿಯಿಂದಲೂ ಇದನ್ನು ಭೇಧಿಸಲು ಸಾಧ್ಯವಿಲ್ಲವೆಂದು ಹೈದರಾಲಿಯೊಂದಿಗೆ ಬಂದಿದ್ದ ಫ್ರೆಂಚ್‌ಸೈನ್ಯಾಧಿಕಾರಿ ಕೌಂಟ್‌ಡಿ-ಲಾಲೆ ಅಭಿಪ್ರಾಯಪಟ್ಟಿದ್ದಾನೆ.

ಚಿತ್ರದುರ್ಗದ ಪಾಳೇಯಗಾರರಲ್ಲೇ ಅತ್ಯಂತ ಪ್ರಸಿದ್ಧನಾದ ದೊರೆ ಮದಕರಿ ನಾಯಕನ ಕಂಚಿನ ಪ್ರತಿಮೆ. ನಗರದ ಹೃದಯ ಭಾಗದಲ್ಲಿ ಪ್ರತಿಷ್ಠಾಪಿಸಲಾಗಿದೆ.

ತನ್ನ ಶೌರ್ಯ, ಧೈರ್ಯ, ಸ್ವಾಮಿನಿಷ್ಠೆ ಮತ್ತು ಸಮಯಸ್ಪೂರ್ತಿಯಿಂದ ಚಿತ್ರದುರ್ಗದಲ್ಲಿ ಮಾತ್ರವಲ್ಲದೇ ನಾಡಿನಾದ್ಯಂತ ಮನೆಮಾತಾಗಿರುವ ವೀರವನಿತೆ ಒನಕೆ ಓಬವ್ವನ ಪುತ್ಥಳಿ ಜಿಲ್ಲಾಧಿಕಾರಿಯವರ ಕಛೇರಿಯ ಎದುರು ಪ್ರತಿಷ್ಠಾಪಿಸಲಾಗಿದೆ.

 

ಒಂಟಿಕಲ್ಲು ಬಸವ

ಚಿತ್ರದುರ್ಗ ಕೋಟೆಯ ಒಳಭಾಗದಲ್ಲಿ ನೋಡಬಹುದಾದ ಒಂಟಿಕಲ್ಲು ಬಸವಣ್ಣನ ದೇವಾಲಯ ಶಿಲ್ಪಕಲೆಯ ದೃಷ್ಟಿಯಿಂದ ವಿಶೇಷವಲ್ಲದಿದ್ದರು ಗಮನಸೆಳೆಯುತ್ತದೆ. ಕಾರಣ ಒಂದೆ ಕಲ್ಲಿನಿಂದ ಕೆತ್ತಲಾದ ದೇವಾಲಯ ಇದಾಗಿದೆ.

ಬನಶಂಕರಿ ದೇವಾಲಯ

ಕಲ್ಲುಬಂಡೆಯನ್ನು ಕೊರೆದು ನಿರ್ಮಿಸಲಾದ ಎಣ್ಣೆಕೊಳ

 

ಮದ್ದುಬೀಸುವ ಕಲ್ಲುಗಳು

ಚಿತ್ರದುರ್ಗದ ಕೋಟೆಗೆ ಪ್ರವೇಶಿಸಿದೊಡನೆಯೆ ಎಡಭಾಗದಲ್ಲಿ ನೋಡಬಹುದಾದ ಸ್ಥಳ, ಹಿಂದೆ ಫಿರಂಗಿಗಳಿಗೆ ಅಗತ್ಯವಾದ ಸಿಡಿಮದ್ದನ್ನು ಆನೆ, ಕುದುರೆಗಳ ಸಹಾಯದಿಂದ ಬೀಸಲಾಗುತ್ತಿತ್ತು.

ದುರ್ಗದ ಇತಿಹಾಸದ ಮೂಕಸಾಕ್ಷಿ !

 

ಶ್ರೀ ಏಕನಾಥೇಶ್ವರಿ ದೇವಾಲಯ

ಕೋಟೆಯ ಮಧ್ಯಭಾಗದಲ್ಲಿ ಚಿತ್ರದುರ್ಗ ಅರಸರ ಕುಲದೇವತೆ ಏಕನಾಥೇಶ್ವರಿ ದೇವಾಲಯ. ಐತಿಹಾಸಿಕವಾಗಿ ಭಾವನಾತ್ಮಕವಾಗಿ ಏಕನಾಥೇಶ್ವರಿ ಇಂದಿಗೂ ಚಿತ್ರದುರ್ಗ ಜನತೆಗೆ ಸ್ಪೂರ್ತಿಯಾಗಿದ್ದಾಳೆ.

ಕೋಟೆಯ ಮಧ್ಯಭಾಗದಲ್ಲಿ ಏಕನಾಥೇಶ್ವರಿ ದೇವಾಲಯದ ಮುಂದೆ ಓಕುಳಿ ಉತ್ಸವಕ್ಕಾಗಿ ಸಂಪೂರ್ಣ ಗ್ರಾನೈಟ್‌ಕಲ್ಲಿನಿಂದ ನಿರ್ಮಿಸಲಾಗಿರುವ ಪುಷ್ಕರಣಿ

 

ಠಂಕಸಾಲೆ

ಏಕನಾಥೇಶ್ವರಿ ದೇವಾಲಯದಿಂದ ಪಶ್ಚಿಮಕ್ಕೆ ಮುಂದೆ ಸಾಗಿದರೆ ಮಣ್ಣಿನ ಗೋಡೆಗಳಿಂದ ನಿರ್ಮಾಣವಾಗಿರುವ ಈ ಠಂಕಸಾಲೆ ನಿಮ್ಮ ಗಮನ ಸೆಳೆಯುತ್ತದೆ.

ಶಸ್ತ್ರಾಗಾರ

ಶ್ರೀ ಮುರುಘರಾಜೇಂದ್ರ ಪ್ರಾಚೀನ ಮಠ

ಸಂಪಿಗೆ ಸಿದ್ದೇಶ್ವರ ದೇವಾಲಯದ ಮುಂಭಾಗದಲ್ಲಿರುವ ಚಿತ್ರದುರ್ಗ ಪಾಳೇಯಗಾರರ ರಾಜಗುರುಗಳ ಈ ಮಠವು ಹಿಂದೆ ಶ್ರದ್ಧಾಭಕ್ತಿಗಳ ಕೇಂದ್ರವೇ ಅಲ್ಲದೆ ರಾಜತಾಂತ್ರಿಕತೆಯ ಶಿಕ್ಷಣಕೇಂದ್ರವೂ ಆಗಿತ್ತು.

ವಾಸ್ತುಶಿಲ್ಪ ದೃಷ್ಟಿಯಿಂದಲೂ ನಿರ್ಮಾಣ ಕೌಶಲದ ದೃಷ್ಟಿಯಿಂದ ವಿಶಾಲವಾದ ಪ್ರಾಂಗಣ ಹೊಂದಿರುವ ಮುರುಘಾ ಮಠದ ಒಳನೋಟ