ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿ ಪರಂಪರೆಯನ್ನು ಹೊಂದಿರುವ ಕರ್ನಾಟಕದ ಆಧುನಿಕ ಇತಿಹಾಸದಲ್ಲಿ ಕರ್ನಾಟಕದ ಏಕೀಕರಣ ಒಂದು ಐತಿಹಾಸಿಕವೂ ಮತ್ತು ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತೊಂದು ಮಹತ್ವದ ಐತಿಹಾಸಿಕ ಘಟನೆ. ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳು ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಪರಿಮಿತಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೆ ಕನ್ನಡಿಗ ಮತ್ತು ಕನ್ನಡ ಸಂಸ್ಕೃತಿ ನೆಲೆಸಿರುವ ಎಲ್ಲ ದೇಶ ಮತ್ತು ವಿದೇಶಗಳನ್ನೂ ಒಳಗೊಂಡಿದೆ. ಈ ಕಾರಣದಿಂದ ನಮ್ಮ ವಿಶ್ವವಿದ್ಯಾಲಯದ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಮತ್ತು ವೈಶಿಷ್ಟ್ಯಪೂರ್ಣವೂ ಆಗಿವೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಜನಜೀವನದ ಸರ್ವಮುಖಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನ ಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನದ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜನಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತಮುಖಿಯಾದ ವಿಶ್ವಜ್ಞಾನವನ್ನು ಕನ್ನಡಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರೆಲ್ಲರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶಯದ ಪ್ರತಿನಿಧಿಯಾಗಿ ಸ್ಥಾಪಿತಗೊಂಡಿದೆ. ಬೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಟಿ, ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆಗಳನ್ನೊಳಗೊಂಡ ಅನನ್ಯ ಅಭಿವ್ಯಕ್ತಿ, ನಾಡಿನ ಕೋಟಿ ಕೋಟಿ ಶ್ರೀಸಾಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮರ್ಥ್ಯಗಳ ಸದ್ಭಳಕೆಯ ಮೂಲಕ ಅವರ ಅಂತಃಪ್ರಜ್ಞೆಯನ್ನು ಎಚ್ಚರಿಸುವ, ವಿಕಸಿಸುವ ಶ್ರದ್ಧಾನ್ವಿತ ಕಾಯಕ ಇದರ ದಾರಿಯಾಗಿದೆ.

ಕನ್ನಡ ನಾಡನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡು, ಕನ್ನಡ ವಿಶ್ವವಿದ್ಯಾಲಯವನ್ನು ನೋಡಿದ್ದಲ್ಲದೆ ಕನ್ನಡ ನಾಡಿನ ಯಾತ್ರೆ ಸಂಪೂರ್ಣವಾಗದು, ಸಾರ್ಥಕವಾಗದು ಎಂಬಂತೆ ರೂಪುಗೊಳ್ಳುತ್ತಿರುವ ಮತ್ತು ರೂಪುಗೊಳ್ಳಬೇಕಾದ ಮಹಾಸಂಸ್ಥೆ ಇದು. ಕನ್ನಡ ಪ್ರಜ್ಞೆ ತನ್ನ ಸತ್ವ ಮತ್ತು ಸತ್ವದೊಡನೆ ವಿಶ್ವಪ್ರಜ್ಞೆಯಾಗಿ ಅರಳಿ ನಳನಳಿಸಬೇಕು; ವಿಶ್ವಪ್ರಜ್ಞೆ ಕನ್ನಡ ದೇಶೀ ಪ್ರಜ್ಞೆಯೊಳಗೆ ಪ್ರವೇಶಿಸಿ, ಪ್ರವಹಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು, ಸಮರಸಗೊಂಡು ಸಾಕ್ಷಾತ್ಕಾರಗೊಳ್ಳಬೇಕು ಎಂಬುದೇ ಇದರ ಗುರಿ. ಈ ಗುರಿಯ ಮೂಲಕ ಕನ್ನಡ ಕರ್ನಾಟಕತ್ವದ ಉಸಿರಾಗಿ, ವಿಶ್ವಪ್ರಜ್ಞೆಯ ಹಸಿರಾಗಿ, ಕನ್ನಡ ಮಾನವ ವಿಶ್ವಮಾನವನಾಗಿ ಬೆಳೆಯಲು ಸಾಧನವಾಗಬೇಕು. ಕನ್ನಡಿಗರೆಲ್ಲರ ಸಾಮೂಹಿಕ ಶ್ರಮ ಮತ್ತು ಪ್ರತಿಭೆಗಳ ಸಮಷ್ಟಿ ಪ್ರಕ್ರಿಯೆಯಿಂದ ಬೆಳಕಿನ ಈ ಮಹಾಪಥವನ್ನು ಕ್ರಮಿಸುವುದು ನಮ್ಮ ವಿಶ್ವವಿದ್ಯಾಲಯದ ಮಹತ್ತರ ಆಶಯ.

ನಾಗಾಲೋಟದಿಂದ ಕ್ರಮಿಸುತ್ತಿರುವ ಜಗತ್ತಿನ ವ್ಯಾಪಕ ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನಗಳ ಶೋಧನೆ ಮತ್ತು ಚಿಂತನೆಗಳನ್ನು ಕನ್ನಡದಲ್ಲಿ ಸತ್ವಪೂರ್ಣವಾಗಿ ದಾಖಲಿಸಿ ಕನ್ನಡ ಓದುಗರ ಜ್ಞಾನವನ್ನು ವಿಸ್ತರಿಸಿ ಅವರಲ್ಲಿ ಪುಸ್ತಕ ಸಂಸ್ಕೃತಿಯನ್ನು ಪ್ರಸರಿಸುವ ವಿಶೇಷ ಹೊಣೆಯನ್ನು ಹೊತ್ತು ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಅಸ್ತಿತ್ವಕ್ಕೆ ಬಂದಿದೆ. ಶ್ರವ್ಯ, ದೃಶ್ಯ ಮತ್ತು ವಾಚನ ಸಾಮಗ್ರಿಗಳ ಸಮರ್ಪಕ ಉತ್ಪಾದನೆ ಮತ್ತು ವಿತರಣಾ ಪ್ರಕ್ರಿಯೆಗಳ ಮೂಲಕ ಇದು ಈ ಗುರಿಯನ್ನು ತಲುಪಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಈಗಾಗಲೇ ೬೦೦ ಕ್ಕೂ ಹೆಚ್ಚು ವೈವಿಧ್ಯಮಯ ಮತ್ತು ವೈಶಿಷ್ಟ್ಯಮಯ ಕೃತಿಗಳ ಮೂಲಕ ಕನ್ನಡ ಗ್ರಂಥಲೋಕದ ಅಂತರಂಗ ಮತ್ತು ಬಹಿರಂಗ ಸೌಂದರ್ಯಗಳನ್ನು ಉಜ್ವಲಿಸಿರುವ ಇದು ತನ್ನ ಮುಂದಿನ ಗುರಿಯ ಕಡೆಗೆ ಆಶಾದಾಯಕವಾಗಿ ಚಲಿಸುತ್ತಿದೆ.

ಯಾವುದೇ ರಾಷ್ಟ್ರದ ಅತ್ಯಂತ ಪ್ರಾಚೀನ ಜನಾಂಗವನ್ನು ಅಥವಾ ಅತ್ಯಂತ ಪ್ರಾಚೀನವಾದ ನುಡಿ, ನಡೆ, ಜೀವನ ವಿಧಾನಗಳನ್ನು ಇನ್ನೂ ತಮ್ಮ ಪ್ರತಿನಿತ್ಯದ ಜೀವನ ಕ್ರಮದಲ್ಲಿ ಉಳಿಸಿಕೊಂಡು ಬಂದಿರುವ, ಆಧುನಿಕ ಜ್ಞಾನವಿಜ್ಞಾನಗಳ ಹಾಗೂ ನಾಗರೀಕತೆಗಳ ಪ್ರಬಲ ದಾಳಿಯ ತೀವ್ರ ಒತ್ತಡದಲ್ಲೂ ತಮ್ಮ ಸಂಸ್ಕೃತಿಯ ಬೇರುಗಳನ್ನು ಉಳಿಸಿಕೊಂಡು ಬಂದಿರುವ ಮತ್ತು ನಾಗರಿಕ ಜನಾಂಗವೆಂದು ತಮ್ಮನ್ನು ತಾವೇ ಕರೆದುಕೊಳ್ಳುವ ಜನರಿಂದ ದೂರವಾಗಿಯೇ ಬದುಕುವ ಮತ್ತು ಬದುಕಲಿಚ್ಚಿಸುವ ಜನಸಮುದಾಯವನ್ನು ಬುಡಕಟ್ಟು ಎಂದು ಹೇಳಲಾಗುತ್ತದೆ.

ಭಾರತ ಮೂಲತಃ ಬುಡಕಟ್ಟುಗಳ ಮಾತೃಭೂಮಿ. ಪ್ರಪಂಚದ ಬೇರೆ ಬೇರೆ ಕಡೆಗಳಿಂದ ಆರ್ಯರು ಮುಂತಾದ ಜನಾಂಗಗಳು ಈ ಭೂ ಭಾಗವನ್ನು ತಮ್ಮ ನಾಗರಿಕ ಶಕ್ತಿಯಿಂದ ಆಕ್ರಮಿಸಿತೊಡಗಿದ ಕೂಡಲೇ ಈ ದೇಶದ ಮೂಲನಿವಾಸಿಗಳಾದ ಬುಡಕಟ್ಟು ವರ್ಗದವರು ಅವರ ಆಧುನಿಕ ಶಸ್ತ್ರಾಸ್ತ್ರಗಳ ಮತ್ತು ಬಹುಸಂಖ್ಯೆಯ ಜನಪರಿವಾರದ ದಾಳಿಗೆ ಹೆದರಿ ಕಾಡಿನ ಅಜ್ಞಾನ ಮೂಲೆಗಳಲ್ಲಿ ಪ್ರಾಣ ರಕ್ಷಣೆ ಮಾಡಿಕೊಳ್ಳುತ್ತಾ ಬದುಕನ್ನು ದೂಡತೊಡಗಿದರು. ಈ ದಾಳಿ ಇಂದಿಗೂ ಬೇರೆ ಬೇರೆಯ ರೂಪದಲ್ಲಿ ಈ ಬುಡಕಟ್ಟು ಜನರನ್ನು ಕಾಡುತ್ತಲೇ ಬಂದಿದೆ. ಬೇಟೆಯಾಡುತ್ತಲೇ ಬಂದಿದೆ. ಕರ್ನಾಟಕದಲ್ಲೂ ಆಧುನಿಕತೆಯ ಗಂಧಗಾಳಿ ಸೋಕದ, ಸೋಕಿದರೂ ಜೀವನದ ಆಳದ ಸ್ತರಗಳಿಗೆ ಇಳಿಯದ ಪರಿಸ್ಥಿತಿಯಲ್ಲಿ ಮತ್ತು ತಾವೂ ಹಾಗೂ ತಮ್ಮವರು ಕೂಡಿಕೊಂಡು ಕಟ್ಟಿದ ಮಿತಪರಿಕಲ್ಪನೆಗಳ, ಮಿತವಾದ ಆಶೋತ್ತರಗಳ, ಮಿತವಾದ ಅಗತ್ಯಗಳ ಬದುಕನ್ನು ನಗರಗಳಿಂದ ದೂರವಾಗಿಯೇ ನಡೆಸುತ್ತಾ ತಮ್ಮ ಮೂಲತನವನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಅಕ್ಷರಜ್ಞಾನ, ಯಂತ್ರ ನಾಗರೀಕತೆ, ಸುಖ ಜೀವನದ ಆಕರ್ಷಣೆಗಳು ಅವರ ಮೇಲೆ ಪ್ರಬಲ ಬಲೆಯನ್ನು ಬೀಸುತ್ತಿದ್ದರೂ ಅವರಲ್ಲೇ ಕೆಲವರು ಈ ಅಪ್ರತಿಹತ ಆಕರ್ಷಣೆಗೆ ಬಲಿಯಾಗುತ್ತಿದ್ದರೂ ಸಾಧ್ಯವಾದಷ್ಟು ಮಟ್ಟಿಗೆ ತಮ್ಮ ಮೂಲಕ ಸೊಗಡುಗಳನ್ನು ಉಳಿಸಿಕೊಂಡಿದ್ದಾರೆ. ಸರ್ಕಾರ ನೀಡುವ ಸವಲತ್ತುಗಳಲ್ಲಿ ಬಹುಪಾಲು ಮಧ್ಯವರ್ತಿಗಳ ಪಾಲಾಗುತ್ತಿರುವುದರಿಂದ ಅವುಗಳ ಸಂಪೂರ್ಣ ಅರಿವು ಮತ್ತು ಉಪಯೋಗ ಅವರಿಗೆ ದೊರೆಯುತ್ತಿಲ್ಲ ಬದಲಾಗಿ ಮತ್ತಷ್ಟು ಶೋಷಣೆಗೆ ಮತ್ತು ಆಮಿಷಗಳಿಗೆ ಅವರು ತುತ್ತಾಗುತ್ತಿದ್ದಾರೆ. ರಾಮಾಯಣ, ಮಹಾಭಾರತ ಮುಂತಾದ ನಮ್ಮ ಪ್ರಾಚೀನ ಗ್ರಂಥಗಳು ಒಂದಲ್ಲ ಒಂದು ರೀತಿಯಲ್ಲಿ ಈ ಬುಡಕಟ್ಟು ಜನರ ರೀತಿ, ನೀತಿಗಳನ್ನು ಸಾಂದ್ರವಾಗಿ ಚಿತ್ರಿಸುವ ಗ್ರಂಥಗಳೇ ಆಗಿವೆ.

ಭಾರತದ ಮೊದಲ ಆದಿ ಕವಿಯೇ ಬುಡಕಟ್ಟು ಮೂಲಕ್ಕೆ ಸೇರಿರುವಂತದ್ದು, ಸೋಜಿಗದ ಮತ್ತು ಕುತೂಹಲದ ಸಂಗತಿಯಾಗಿದೆ. ಈ ಬುಡಕಟ್ಟುಗಳ ಬಗೆಗೆ ಅಧ್ಯಯನಗಳನ್ನು ಮಾಡಲು ಮೊದಲು ಮನತೆತ್ತವರು ಪಾಶ್ಚಾತ್ಯರು, ಅವರು ಸಮಾಜವಿಜ್ಞಾನದ ದೃಷ್ಟಿಯಿಂದ ಮುಖ್ಯವಾಗಿ ಇವರ ಜೀವನ ವಿವರಗಳನ್ನು ಸಂಗ್ರಹಿಸಲು, ಸಂಶೋಧಿಸಲು ಮತ್ತು ವಿಶ್ಲೇಷಿಸಲು ಮೊದಲು ಮಾಡಿದರು. ಆ ಲಭ್ಯ ಮಾಹಿತಿಗಳನ್ನು ಮೂಲವಾಗಿಟ್ಟುಕೊಂಡು ಸ್ವತಃ ತಮ್ಮ ಅಧ್ಯಯನದ ಫಲಗಳನ್ನು ಒಂದುಗೂಡಿಸಿ ಕರ್ನಾಟಕದಲ್ಲೂ ಹಲವಾರು ಬುಡಕಟ್ಟುಗಳ ಅಧ್ಯಯನವನ್ನು ಕೈಗೊಂಡಿದ್ದಾರೆ. ವಿಶ್ವವಿದ್ಯಾಲಯಗಳ ಸಮಾಜ ವಿಜ್ಞಾನಿಗಳು ಈ ಬಗೆಯ ಎಚ್ಚರ ಮತ್ತು ಜಿಜ್ಞಾಸೆಯಿಂದ ಬುಡಕಟ್ಟುಗಳ ಬಗ್ಗೆ ಹಲವು ಮುಖ್ಯ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಉಪಸಂಸ್ಕೃತಿ ಮಾಲೆ, ಕರ್ನಾಟಕ ಜಾನಪದ ಅಕಾಡೆಮಿ ಪ್ರಕಟಿಸಿದ ಕರ್ನಾಟಕದ ಬುಡಕಟ್ಟುಗಳು ಎಂಬ ಎರಡು ಬೃಹತ್ ಗ್ರಂಥಗಳು ಹೀಗೆ ದೊರೆತ ಮಾಹಿತಿಗಳನ್ನು ಒಂದೆಡೆ ಸಂಕಲ್ಪಿಸಿಕೊಟ್ಟಿವೆ. ಆದರೂ ಅತ್ಯಂತ ಸೂಕ್ಷ್ಮವಾಗಿ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಹಾಗೂ ವೈಚಾರಿಕವಾಗಿ ಇವುಗಳ ಕೂಲಂಕಷ ಅಧ್ಯಯನ ನಡೆಯಬೇಕಾಗಿದೆ. ಇಂತಹ ಸಂದರ್ಭದಲ್ಲಿ ನಮ್ಮ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಮತ್ತು ಇತಿಹಾಸ ವಿಭಾಗಗಳ ಕೆಲವು ವಿದ್ಯಾಂಸರು ಈ ಬಗೆಯ ಗಂಭೀರ ಕ್ಷೇತ್ರ ಕಾರ್ಯ, ಅಧ್ಯಯನ, ಚಿಂತನೆ ಮತ್ತು ಪ್ರಕಟಣೆಗಳಲ್ಲಿ ತಮ್ಮನ್ನು ಪ್ರಾಮಾಣಿಕವಾಗಿ ತೊಡಗಿಸಿಕೊಂಡ ಫಲವಾಗಿ ನಮ್ಮ ಪ್ರಸಾರಾಂಗ ಈ ಶೋಧನೆಯ ಫಲಿತಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿದೆ. ಇಂತಹ ಪ್ರಕಟಣೆಗಳಲ್ಲಿ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಅವರ ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ವೀರರು ಎಂಬ ಈ ಕೃತಿ ಕರ್ನಾಟಕದ ಬಹುಸಂಖ್ಯಾತ ಬೇಡ ಬುಡಕಟ್ಟು ಜನಾಂಗದ ವಿಶಿಷ್ಟ ಅಧ್ಯಯನವನ್ನು ಮತ್ತು ಚಿಂತನೆಯನ್ನು ಒಳಗೊಂಡಿದೆ. ಚಿತ್ರದುರ್ಗ ಜಿಲ್ಲೆಯ ಮುಖ್ಯ ಬುಡಕಟ್ಟುಗಳಲ್ಲಿ ಒಂದಾದ ಮ್ಯಾಸಬೇಡರ ಚರಿತ್ರೆ ಮತ್ತು ಸಾಂಸ್ಕೃತಿಕ ವಿವರಗಳನ್ನು ಈ ಅಧ್ಯಯನ ಒಳಗೊಂಡಿದೆ. ಈ ಜನಾಂಗದ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಈಗಾಗಲೇ ಕೆಲವು ಕೃತಿಗಳು ಪ್ರಕಟವಾಗಿದ್ದರೂ ಈ ಬುಡಕಟ್ಟಿನ ವೀರರನ್ನು ಮತ್ತು ಅವರ ಕಾರಣದಿಂದಾಗಿ ಹುಟ್ಟಿಕೊಂಡ ಸಾಂಸ್ಕೃತಿಕ ನಡವಳಿಕೆಗಳ ವಿವರಗಳನ್ನು ಈ ಕೃತಿ ಇಲ್ಲಿ ಪ್ರಾಮಾಣಿಕವಾಗಿ ದಾಖಲಿಸಿದೆ. ಶ್ರದ್ಧಾಪೂರ್ವವಾದ ಮತ್ತು ಪ್ರಾಮಾಣಿಕವಾದ ಕ್ಷೇತ್ರ ಕಾರ್ಯ ಹಾಗೂ ಅವುಗಳ ಅತಿ ಸಮೀಪದ ಸಂಬಂಧ ಹಾಗೂ ತಿಳುವಳಿಕೆಗಳ ಕಾರಣಗಳಿಂದ ಈ ಕೃತಿಗೆ ಒಂದು ಅಧಿಕೃತತೆ ದೊರಕಿದಂತಾಗಿದೆ. ಚಿತ್ರದುರ್ಗ ಜಿಲ್ಲೆಯ ಎಲ್ಲ ಮುಖ್ಯ ಸ್ಥಳಗಳನ್ನು, ಅಲ್ಲಿನ ಇತಿಹಾಸ ಹೇಳುವ ಕಥೆಗಳನ್ನು, ಜನಾಂಗದ ಹಿರಿಯರು ತಮ್ಮ ನೆನಪಿನ ಗಣಿಯಲ್ಲಿ ತುಂಬಿಕೊಂಡ ಅಪರೂಪದ ಮಾಹಿತಿಗಳನ್ನು ಹಾಗೂ ಪ್ರತ್ಯಕ್ಷ ಸಂದರ್ಶದಿಂದ ಲಭ್ಯವಾದ ಮುಖ್ಯಾಂಶಗಳನ್ನು ಈ ಅಧ್ಯಯನ ತನ್ನಲ್ಲಿ ಗರ್ಭೀಕರಿಸಿ ಕೊಂಡಿದೆ. ಶ್ರೀ ವಿರೂಪಾಕ್ಷಿ ಪೂಜಾರಹಳ್ಳಿ ಅವರು ಮ್ಯಾಸಬೇಡರ ಬಗೆಗೆ ದೊರೆಯುವ ಹಳೆಯ ಮತ್ತು ಹೊಸದಾದ ಎಲ್ಲ ಸಂಗತಿಗಳನ್ನು ಸಾಹಿತ್ಯದ ಮೂಲದಿಂದ ಮಾತ್ರವಲ್ಲದೆ ವ್ಯಕ್ತಿ ಸಂದರ್ಶನ, ದಿನಪತ್ರಿಕೆಗಳು, ನ್ಯಾಯಾಲಯದ ದಾಖಲೆಗಳು, ದೇವ ತಾಣಗಳಲ್ಲಿ ದೊರೆಯುವ ಹಾಗೂ ಜನಾಂಗಕ್ಕೆ ಸಂಬಂಧಿಸಿದ ಸಮಾಲೋಚನೆ, ವ್ಯಾಜ್ಯ ಹಾಗೂ ನ್ಯಾಯತೀರ್ಮಾನಗಳ ಬಗೆಗಿನ ಲಿಖಿತ ದಾಖಲೆಗಳು ಇತ್ಯಾದಿಗಳ ಮೂಲಕ ಕೂಡ ವಾಸ್ತವತೆಗೆ ಹತ್ತಿರವಾದ ದಾಖಲೆಗಳನ್ನು ಸಂಗ್ರಹಿಸಲು ಪರಿಶ್ರಮವಹಿಸಿದ್ದಾರೆ. ಒಂದೇ ಮಾಹಿತಿಗಾಗಿ ಹತ್ತಾರು ಬಾರಿ ಹತ್ತಾರು ಜನರನ್ನು ಸತ್ಯಶೋಧಕ್ಕಾಗಿ ಸಂಪರ್ಕಿಸುವುದು ಅವರಿಗಿರುವ ಗಂಭೀರ ಶ್ರದ್ಧೆಯನ್ನು ಅಭಿವ್ಯಕ್ತಿಸುತ್ತದೆ. ನಾಗರಿಕತೆಯ ಇಷ್ಟಾನಿಷ್ಟ ತೆಕ್ಕೆಗೆ ತನ್ನನ್ನು ಒಳಗುಗೊಳಿಸುತ್ತಿರುವ ಈ ವಿಶಿಷ್ಟ ಬುಡಕಟ್ಟು ಜನಾಂಗ ಬದಲಾವಣೆಗೊಳ್ಳುತ್ತಿರುವ ಬಗೆಗೂ ಈ ಸಂಶೋಧಕರ ಕಣ್ಣು ಹರಿದಿದೆ. ಆದರೂ ಈ ನಾಗರಿಕತೆಯ ಸೂಕ್ಷ್ಮ ಆಕ್ರಮಣದ ನಡುವೆಯೂ ತಮ್ಮ ಮೂಲ ಲಕ್ಷಣಗಳನ್ನು ಸಾಕಷ್ಟು ಮಟ್ಟಿಗೆ ಉಳಿಸಿಕೊಂಡಿರುವ ಈ ಜನಾಂಗದ ಆಧುನಿಕ ಪರಿಸ್ಥಿತಿಯನ್ನು ಮೂಲಪರಿಸ್ಥಿತಿಯೊಡನೆ ತಾಳೆ ನೋಡುವ ಪ್ರಜ್ಞೆಯೂ ಸಹ ಇಲ್ಲಿ ಕೆಲಸ ಮಾಡಿದೆ. ಒಟ್ಟಿನಲ್ಲಿ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಅವರು ಮ್ಯಾಸಬೇಡರ ಅಧ್ಯಯನಕ್ಕೆ ಸಂಬಂಧಿಸಿದ ಅಭ್ಯಾಸಪೂರ್ಣವಾದ ಹಾಗೂ ಮಾಹಿತಿ ಪೂರ್ಣವಾದ ಒಂದು ವಿಶೇಷ ಕೃತಿಯನ್ನು ಜನಾಂಗದ ಅಧ್ಯಯನಕಾರರಿಗೆ ಈ ಮೂಲಕ ಒದಗಿಸಿದ್ದಾರೆ. ಅವರಿಗೆ ನನ್ನ ಹಾರ್ದಿಕ ಅಭಿನಂದನೆಗಳು.

ಡಾ.ಎಚ್.ಜೆ. ಲಕ್ಕಪ್ಪಗೌಡ,
ಕುಲಪತಿಗಳು.