.. ಗಾದರಿಪಾಲನಾಯಕ

ಹಿನ್ನೆಲೆ

ಚಿತ್ರದುರ್ಗ ಜಿಲ್ಲೆಯ ಮ್ಯಾಸಬೇಡರ ಬುಡಕಟ್ಟಿನಲ್ಲಿ ಅನೇಕ ಮಂದಿ ಬುಡಕಟ್ಟು ವೀರರು ಕಂಡುಬರುತ್ತಾರೆ. ಅವರುಗಳ ಪೈಕಿ ಅತೀ ಹೆಚ್ಚು ಖ್ಯಾತಿಪಡೆದವನು ಗಾದರಿ ಪಾಲನಾಯಕ. ಮ್ಯಾಸಬೇಡರು ತಮ್ಮ ಆರಾಧ್ಯ ದೇವರೆಂದು ಈತನನ್ನು ಪೂಜಿಸುವುದುಂಟು. ಇವನ ಕಾಲಮಾನದ ಬಗ್ಗೆ ಖಚಿತವಾಗಿ ಹೇಳಲಾಗುವುದಿಲ್ಲ. ಮೌಖಿಕ ದಾಖಲೆಗಳ ಪ್ರಕಾರ ೧೦ನೇ ಶತಮಾನಕ್ಕೂ ಪೂರ್ವದಲ್ಲಿದ್ದನೆಂದು ತಿಳಿಯಲಾಗಿದೆ. ಆದರೆ ೧೬ ಮತ್ತ ೧೭ನೇ ಶತಮಾನದವೆಂದು ಹೇಳಲಾಗುವ ಕೆಲವು ಶಾಸನಗಳಲ್ಲಿ ಈ ಬಗೆಗೆ ಸ್ವಲ್ಪ ವಿವರಗಳು ದೊರೆಯುತ್ತವೆ.

[1] ಇಲ್ಲಿ ಜನನ, ಕಟ್ಟೆಮನೆ, ಪಶುಗಳ ರಕ್ಷಣೆ, ವಿವಾಹ, ಹುಲಿಮರಿಗಳ ಸಾವು, ಹುಲಿಗಳ ಕನಸು, ಗಂಗೆಯಿಂದ ಸನ್ಮಾರ್ಗಪ್ರಾಪ್ತಿ, ಅವಾಸನ, ಗಂಜಿಗಟ್ಟಿಗೆ ಪ್ರಯಾಣ, ಮರಣ, ಯರಮಂಚಿನಾಯಕನ ಅನ್ವೇಷಣೆ ಮೊದಲಾದ ಘಟನೆಗಳು ಗಾದರಿಪಾಲನಾಯಕನ ಬಗೆಗೆ ಪ್ರಮುಖ ಸಂಗತಿಗಳಾಗಿವೆ.

ಕುಟುಂಬದ ಚರಿತ್ರೆ

ಗಾದರಿಪಾಲನಾಯಕನ ಜನನದ ಕಾಲ ಹಾಗೂ ಸ್ಥಳದ ಬಗ್ಗೆ ನಿಖರವಾಗಿ ತಿಳಿದುಬಂದಿಲ್ಲ.ತಂದೆ ಸೂರಪ್ಪ, ತಾಯಿ ಮಲ್ಲಮ್ಮ, ತಮ್ಮ ಚಿನ್ನಪಾಲನಾಯಕ ಮತ್ತು ಇವನ ಮಡದಿಯರು ಕೆಂಚವ್ವ ಕಾಮವ್ವರೆಂಬ ವಿವರಗಳು ಕಥನಗೀತೆ ಮೌಖಿಕ ಸಾಹಿತ್ಯದಲ್ಲಿ ದೊರೆಯುತ್ತದೆ. ಗಾದರಿಪಾಲನಾಯಕನ ಬಗ್ಗೆ ಹೇರಳವಾದ ಜನಪದ ಪರಂಪರೆ ಲಭ್ಯವಿದ್ದರೂ ಖಚಿತವಾದ ಚಾರಿತ್ರಿಕಾಂಶಗಳು ತಿಳಿದುಬರುವುದಿಲ್ಲ. ಕಥೆ, ಲಾವಣಿ, ಸೋಬಾನೆ, ಕೋಲಾಟ ಇತರ ಜನಪದ ಸಾಹಿತ್ಯ ಪ್ರಕಾರಗಳಲ್ಲಿ ಇವನನ್ನು ವರ್ಣಮಯ ವ್ಯಕ್ತಿಯನ್ನಾಗಿ ಚಿತ್ರಿಸಲಾಗಿದೆ. ಚಾರಿತ್ರಿಕ ಸಂಗತಿಗಳ ಮೂಲಕ ಸ್ಪಷ್ಟವಾದ ಘಟನೆಗಳನ್ನು ತಿಳಿಯುವ ಅಗತ್ಯವಿದೆ. ಸಾಮಾನ್ಯವಾಗಿ ಬೇಡರು ತಮ್ಮ ಜಾತಿಯ ಸಾಹಸಿ, ವೀರ, ಋಷಿ, ಭಕ್ತಿ, ತ್ಯಾಗಿ, ಧರ್ಮಾತ್ಮನೆಂದು ಕೆಲವರನ್ನು ಹೊಗಳುತ್ತಾರೆ. ವಾಲ್ಮೀಕಿ ಬೇಡರ ಕಣ್ಣಪ್ಪ, ಏಕಲವ್ಯ ಧರ್ಮವಾದ್ಯ, ಗುಹಾ ಮುಂತಾದವರು ಸದಾ ಇವರ ನೆನಪಿನಲ್ಲಿ ಉಳಿಯುವ ವ್ಯಕ್ತಿ ಚಿತ್ರಗಳಾಗಿದ್ದಾರೆ. ಮ್ಯಾಸಬೇಡರು ಮಾತ್ರ ಯರಮಂಚಿನಾಯಕ, ಗಾದರಿಪಾಲನಾಯಕ, ಜಗಳೂರು ಪಾಪನಾಯಕ, ಯರಗಾಟನಾಯಕ, ಕೊಡಗಲುಬೊಮ್ಮ, ದಡ್ಡಿಸೂರನಾಯಕ, ಗಾಜನಾಯಕ, ಪೆದ್ದಯ್ಯ, ತಿಪ್ಪೇಸ್ವಾಮಿ ಮೊದಲಾದವರನ್ನು ತಮ್ಮ ವಂಶಗಳ ವೀರರೆಂದೂ, ನಮ್ಮ ಒಟ್ಟಾರೆ ಸಂಸ್ಕೃತಿಯ ದೇವರೆಂದೂ ಆರಾಧಿಸುತ್ತರೆ. ಅಂಥವರಲ್ಲಿ ಗಾದರಿಪಾಲನಾಯಕನೂ ಒಬ್ಬ.

ಪಶುಪಾಲನ ದಂಪತಿಗಳು

ಆರಂಭದ ಬದುಕಿನಲ್ಲಿ ಅಲೆದಾಟ

 

ಗಾದರಿಪಾಲನಾಯಕ ಒಬ್ಬ ಪಶುಪಾಲಕ. ಇವನ ಪೂರ್ವಜರು ತಲೆಮಾರುಗಳಿಂದ ಸವೆಸಿದ ಬೇಟೆ ಮತ್ತು ಪಶುಪಾಲನೆಯಲ್ಲಿ ಇವನು ಸಹಾ ಮುಂದುವರೆದನು. ಚಾರಿತ್ರಿಕವಾಗಿ ಗಮನಿಸಿದರೆ ಚಿತ್ರದುರ್ಗ ಮತ್ತು ನಾಯ್ಕನಹಟ್ಟಿ ಪಾಳೆಯಗಾರರಲ್ಲಿ ಈ ಹೆಸರಿನ ವ್ಯಕ್ತಿಗಳಿದ್ದರೂ ಅವರ ಸಂತತಿ ಬೆಳೆದುಬಂದಿಲ್ಲವೆಂದು ತಿಳಿದುಬರುತ್ತದೆ. ದೊರೆತಿರುವ ಆಧಾರಗಳಿಂದ ಗಾದರಿಪಾಲನಾಯಕ ಎಂಬುವನು ನಾಯಕನಹಟ್ಟಿಯ ದೊರೆಯಾಗಿದ್ದ. ಅಸಮಾನ್ಯ ಬುಡಕಟ್ಟು ವೀರನಾಗಿದ್ದನೆಂಬುದು ಸ್ಪಷ್ಟ. ಇವರಿಬ್ಬರೂ ಬೇರೆ ಬೇರೆ ಇರಬೇಕು. ಮ್ಯಾಸಬೇಡರು ಯಾವೊಬ್ಬ ಅರಸನನ್ನು ತಮ್ಮ ಮನೆದೇವರಾಗಿ, ವೀರನೆಂದು ಪೂಜಿಸಿದ ಉದಾಹರಣೆಗಳಿಲ್ಲ. ಹೀಗಾಗಿ ರಾಜಪ್ರಭುತ್ವದಲ್ಲಿ ಇವನ ಸ್ಥಾನಮಾನವನ್ನು ಗುರುತಿಸುವ ದುಸ್ಸಾಹಸ ಅಸಮಂಜಸವೆನಿಸುವುದು.

ಇವನು ಉತ್ತರದ ಕಡೆಯಿಂದ ತನ್ನನ್ನು ನಂಬಿದ ಬೇಡಗಂಪಳ ಮತ್ತು ತುರುಮಂದೆಯೊಡನೆ ಚಿತ್ರದುರ್ಗ ಜಿಲ್ಲೆಯ ಬೆಟ್ಟಗುಡ್ಡ ಹಾಗೂ ನದಿಯ ಇಕ್ಕೆಲಗಳಲ್ಲಿ ವಾಸಿಸತೊಡಗಿದನು. ಹೀಗೆ ಸಿರಿಗೆರೆಯ ಸಮೀಪದ ಅರಣ್ಯದಲ್ಲಿ ತನ್ನ ಕಂಪಳದೊಂದಿಗೆ (ಪಶುಗಳು – ಪರಿವಾರ) ವಾಸಮಾಡತೊಡಗಿದ. ಇಲ್ಲಿಗೆ ಬಂದು ಸಹಸ್ರಾರು ಗೋವುಗಳನ್ನು ಕಾಯುವ ಮುನ್ನ ಚಳ್ಳಕೆರೆ ತಾಲೂಕಿನ ನನ್ನಿವಾಳದಲ್ಲಿ ರೊಪ್ಪ ಕಟ್ಟಿಕೊಂಡು ನೆಲೆಸಿದ್ದ. ಮೂರುನಾಲ್ಕು ವರ್ಷ ಮಳೆ ಬರಲಿಲ್ಲ, ಪ್ರಾಣಿಗಳಿಗೆ ಕುಡಿಯಲು ನೀರು ಸಿಗಲಿಲ್ಲ. ಎಲ್ಲೆಲ್ಲೂ ಬರಗಾಲ ಆವರಿಸಿತ್ತು. ಪ್ರಾಣಿ – ಪಕ್ಷಿಗಳು ವಲಸೆಹೊರಟವು. ಹೀಗಿರುವಾ ಗಾದರಿಪಾಲನಾಯಕನ ಪಶುಗಳು ವಿಪರೀತ ಬಳಲಿದ್ದವು. ಈತ ಆಹೋಬಲ ನರಸಿಂಹನ ಸಾಲಿಗ್ರಾಮವನ್ನು ಹಾಸಿದ ಕಂಬಳಿ ಗದ್ದಿಗೆಯ ಮೇಲಿಟ್ಟು, ನೂರೊಂದು ಮಣ್ಣಿನ ದೀಪಗಳನ್ನು ಹಚ್ಚಿಟ್ಟು, ದೇವರೆತ್ತುಗಳನ್ನು ಕರೆಸಿ ದೂಪವಿಟ್ಟು, ಪೂಜೆಮುಗಿಸಿ ಮಲಗಿದನು. ಆ ರಾತ್ರಿ ಅವನ ಕನಸಿನಲ್ಲಿ ಬಿಳಿಮಲೆ, ಕರಿಮಲೆ, ಒಳಮಲೆ, ಹೊರಮಲೆಗಳಿವೆ ನಿನ್ನ ಬೇಡ ಬೇಡಗಂಪಳ ಸಮೇತ ಅಲ್ಲಿಗೆ ಹೋಗು ಎಂದು ಸ್ವಾಮಿ ಹೇಳಿದನು. ಕನಸಿನಿಂದ ಎದ್ದು ನೋಡಲಾಗಿ ದನ – ಕರುಗಳು ಚೇತರಿಸಿಕೊಂಡು ನೆಮರು (ಮೆಲುಕು) ಹಾಕುತ್ತಿದ್ದವು (ತಿಂದ ಆಹಾರವನ್ನು ಜೀರ್ಣಿಸಿಕೊಳ್ಳುತ್ತಿದ್ದವು). ಆಗಿನಿಂದಲೇ ಅವನು ಚಿತ್ರದುರ್ಗ ಪ್ರದೇಶಬಿಟ್ಟು ಸಮೀಪದ ಮಿಂಚೇರಿ (ಅರೆಮಲೆನಾಡು ಪ್ರದೇಶ) ಅರಣ್ಯಕ್ಕೆ ಹೋಗಿ ನೆಲೆಸಿದನು.

ಮಿಂಚೇರಿಯಲ್ಲಿ ತಳವೂರಿನ ಪಾಲನಾಯಕ

ಮಿಂಚೇರಿ ದಟ್ಟವಾದ ಅರಣ್ಯ ಪ್ರದೇಶ. ಇಲ್ಲಿ ಸಮೃದ್ಧವಾದ ಮೇವು ನೀರು ದೊರೆಯುತ್ತಿತ್ತು. ಈ ಕಾರಣಕ್ಕಾಗಿ ಗಾದರಿಪಾಲನಾಯಕ ಇಲ್ಲಿ ರೊಪ್ಪ (ಗೂಡು) ಕಟ್ಟಿಕೊಂಡು ಪತ್ನಿಯರಾದ ಕಂಚವ್ವ – ಕಾಮವ್ವರೊಡನೆ ಜೀವಿಸತೊಡಗಿದ. ಅರಣ್ಯದಲ್ಲಿ ಹುಲಿ – ದಂಪತಿಗಳೆರಡು ವಾಸವಾಗಿದ್ದವು. ಅವು ನಾವುಗಳು ನೆಲಸುವ ಕಾಡಿನಲ್ಲಿ ನೀನು, ನಿನ್ನ ದನಕರುಗಳು ನೆಲೆಸುವುದು ಒಳ್ಳೆಯದಲ್ಲ ಎಂದವು. ಪಾಲನಾಯಕನು ನಾನು ಮಾಡಿದ ಅಪರಾಧವೆನೆಂದು ಕೇಳಿದ. ಹುಲಿ ದಂಪತಿಗಳು ನಮಗೆ ಹೋರಿಕರುಗಳನ್ನು ಪ್ರತಿನಿತ್ಯ ಅಹಾರಕ್ಕೆ ಒದಗಿಸಬೇಕೆಂದವು. ಹೀಗೆ ಚರ್ಚೆ ನಡೆದು, ಹೆಣ್ಣು ಹುಲಿ ನಮಗೂ ಮಕ್ಕಳುಂಟು; ಈ ಪಶುಗಳಿಗೂ ಸಂತಾನವಿರುವುದರಿಂದ ಆಹಾರವಾಗಿ ತಿನ್ನುವುದು ಬೇಡ ಎಂದವು. ಇವರಿಬ್ಬರಲ್ಲೂ ಒಂದು ಒಪ್ಪಂದವಾದುದು ಅರಣ್ಯದಲ್ಲಿಯೇ. ಈ ಒಪ್ಪಂದದಂತೆ ಹುಲಿಮರಿಗಳನ್ನು ಕೊಲ್ಲುವುದಿಲ್ಲ. ಹುಲಿಗಳು ಹಸುಕರುಗಳನ್ನು ಬೇಟೆಯಾಡಬಾರದೆಂದು ನಿರ್ಧರಿಸದವು. ಇವನು ಹುಲಿಮರಿಗಳನ್ನು ತನ್ನ ರೊಪ್ಪದಲ್ಲಿ ಸಾಕತೊಡಗಿದ. ಕಾಡಿಗೂ ನಾಡಿಗೂ ಇರುವ ಸಂಘರ್ಷವಿಲ್ಲದ ಹೊಂದಾಣಿಕೆಯ ಕಾಲಘಟ್ಟವನ್ನು ಈ ಕಥೆ ಸಾಂಕೇತಿಸುತ್ತದೆ. ಬಹುಶಃ ಪಶುಪಾಲನಾ ಹಂತವೇ ಇಂಥಾ ಕತೆಗಳ ಸುಳಿಯಿಂದ ಸುತ್ತುವರೆದಿದ್ದು, ಕೃಷಿಗೆ ನಾಂದಿಹಾಡುವ ಮುನ್ಸೂಚನೆಯಂತೆ ಕಂಡುಬರುತ್ತವೆ ಇಲ್ಲಿನ ಕಥಾಲಕ್ಷಣಗಳು.

ಹುಲಿಮರಿಗಳ ಸಾವು

ಹೀಗೆ ಇರುವಾಗ ಹೆಣ್ಣುಹುಲಿ ಪ್ರತಿದಿನ ಹಾಲುಕುಡಿಸಿ, ಗಂಡು ಹುಲಿಯ ಜತೆಗೆ ಕಾಡಿಗೆ ಬೇಟೆಗೆ ಹೋಗುತ್ತಿತ್ತು. ನಾಯಕನು ಸಹಾ ನಿತ್ಯ ಹಾಲು ಕರೆದು ಹಸುಗಳನ್ನು ಮೇಯಿಸಲು ಕಾಡಿಗೆ ಒಡೆದುಕೊಂಡು ಹೋಗುತ್ತಿದ್ದನು. ಸಣ್ಣ ಕರುಗಳು ರೊಪ್ಪದಲ್ಲಿರುತ್ತಿದ್ದವು. ಪತ್ನಿಯರಾದ ಕಂಚವ್ವ – ಕಾಮವ್ವರು ಕರೆದ ಹಾಲನ್ನು ಹೆಪ್ಪುಹಾಕಿ, ಮೊಸರು ಮಾಡಿ ಹಾಲಿನ ಜೊತೆಗೆ ಬೆಣ್ಣೆ, ಮೊಸರು, ಮಜ್ಜಿಗೆಯನ್ನು ಮಾರಿಕೊಂಡು ಬರಲು ಮುತ್ತುಗದೂರು ಕೊಗಲೂರುಗಳಿಗೆ ಹೋಗುತ್ತಿದ್ದರು.

ಒಮ್ಮೆ ಗಾದರಿಪಾಲನಾಯಕನ ಭಾವಮೈದುನರಾದ ಚಿತ್ತಯ್ಯ – ಕಾಟಯ್ಯನವರು ತಮ್ಮ ಅಕ್ಕಂದಿರಾದ ಕೆಂಚವ್ವ – ಕಾಮವ್ವರಲ್ಲದೆ, ಭಾವನನ್ನು ನೋಡಲು ಕರಿಮಲೆಯಿಂದ ಬಿಳಿಮಲೆ ಮಾರ್ಗವಾಗಿ ಬರುತ್ತಾರೆ. ಭಾವ ದನಕರುಗಳನ್ನು ಬೆಳಿಗ್ಗೆ ಹೊಡೆದುಕೊಂಡು ಹೋದವನು ಇನ್ನೂ ಬಂದಿರಲಿಲ್ಲ. ಅಕ್ಕಂದಿರು ತಮ್ಮ ಕೆಲಸಕ್ಕೆ ತಾವು ಹೋಗಿದ್ದರು. ಯಾರು ಇಲ್ಲದ ಸಮಯದಲ್ಲಿ ಇವರು ದನದ ಗೂಡೊಳಗೆ ಬಂದರು (ರೊಪ್ಪ), ಗೂಡಿನಲ್ಲಿ ಕರುಗಳೊಂದಿಗೆ ಹುಲಿಮರಿಗಳು ಆಟವಾಡುತ್ತಿರುವುದನ್ನು ಕಂಡುಬೆರಗಾದರು. ಈ ರೀತಿ ಸ್ನೇಹದಿಂದಿರಲು ಅಸಾಧ್ಯ, ಎಂದಾದರೂ ಇವು ತಿನ್ನುತ್ತವೆಂದು ಹುಲಿಮರಿಗಳನ್ನು ಸಾಯಿಸಿ ಬಿಟ್ಟರು. ಅವು ವಿಲವಿಲ ಒದ್ದಾಡಿ ರಕ್ತಕಾರಿಕೊಂಡು ಸತ್ತವು. ಇನ್ನೊಂದು ಮೂಲಕ ಪ್ರಕಾರ ಬೇಡರ (ಒಂದು ಬೆಡಗು) ಕೇಡು ಅಜ್ಜಿನವಾಡು ಎಂಬುವನು ಚಿಪ್ಪುಕೊಡಲಿಯಿಂದ ಈ ಮರಿಗಳನ್ನು ಕೊಲ್ಲುತ್ತಾನೆ.[2]

ಎಂದಿನಂತೆ ಗಾದರಿಪಾಲನಾಯಕ ಸಂಜೆ ದನ – ಕರುಗಳನ್ನು ಗೂಡಿಗೆ ಮರಳಿ ಹೊಡೆದುಕೊಂಡು ಬಂದ. ಗೂಡಿಗೆ ಬಂದು ನೋಡಿದಾಗ ಹುಲಿಮರಿಗಳು ಸತ್ತುಬಿದ್ದವುಗಳನ್ನು ಕಂಡು ಅಪಾರ ಸಂಕಟಕ್ಕೀಡಾದ. ಹುಲಿಗಳಿಗೆ ಕೊಟ್ಟ ವಚನ ತಪ್ಪಿತೆಂದು ಅತೀವ ದುಃಖಪಟ್ಟನು. ಇವುಗಳನ್ನು ಕೊಂದವರು ಯಾರು? ಎಂಬೆಲ್ಲ ಪ್ರಶ್ನೆಗಳೊಂದಿಗೆ ಚಿಂತೆ ಮಾಡುವಾಗ, ಕಾಟಣ್ಣ – ಚಿತ್ತಣ್ಣರಿಬ್ಬರು ಬಂದುಭಾವನನ್ನು ಮಾತನಾಡಿಸಿದರು. ನಡೆದ ಘಟನೆಯನ್ನು ವಿವರಿಸಿದ ನಾಯಕನ ಚಿಂತೆಗೆ ಪರಿಹಾರ ಕಂಡುಹಿಡಿಯಲು ತಮ್ಮ ತಪ್ಪನ್ನು ಒಪ್ಪಿಕೊಂಡರು. ಹುಲಿಮರಿಗಳನ್ನು ಕೊಂದಿದ್ದು ಆಕಸ್ಮಿಕ ಘಟನೆ ಮತ್ತು ಅಪರಿಚಿತವಾದ ಸಂದರ್ಭ. ಉದ್ದೇಶಪೂರ್ವಕವಾಗಿ ಎಸಗಿದ ಘಟನೆಯಲ್ಲ. ಹುಲಿಗಳೊಂದಿಗೆ ದನಕರುಗಳು ವಾಸಿಸುವುದು ಅಪರೂಪ ಮತ್ತು ವಿಚಿತ್ರ. ಹುಲಿಮರಿಗಳು ದೊಡ್ಡವಾದಾಗ ಹಸುಗಳನ್ನು ತಿನ್ನದೆ ಬಿಡುತ್ತವೆಯೇ ಎಂದು ಕೊಂದಿರುತ್ತಾರೆ. ಆದ ಅನಾಹುತಕ್ಕೆ ಪ್ರಾಯಶ್ಚಿತ ಪಡುತ್ತಾ, ಕೊಟ್ಟ ಮಾತಿಗೆ ತಪ್ಪಿದನೆಂದು ಅಳಿಯರಿಗೆ ಹುಲಿಮರಿಗಳನ್ನು ಕಾಯುವೆನೆಂದು ಹುಲಿಗಳಿಗೆ ಭಾಷೆ ಕೊಟ್ಟಿದ್ದೆ, ನಿಮ್ಮಿಂದ ಮುರಿದುಬಿತ್ತು ಎಂದು ದುಃಖಿಸಿಕೊಂಡು ಅಳುತ್ತಾ ಭಾಷೆಗೆ ತಪ್ಪಿದನೆಂದು ನಡೆದನು.

ಆಗ ಅವರು ಭಾವ ಹೆದರಬೇಡ, ಹುಲಿಗಳನ್ನು ಕೊಲ್ಲಲು ನಮ್ಮಲ್ಲಿ ಈಗಲೂ ಬಂದೂಕವಿದೆ ಎಂದಾಗ ಗಾದರಿಪಾಲನಾಯಕ ನನ್ನ ಸತ್ಯದ ಮಾತು, ಒಪ್ಪಂದ ಬಿದ್ದು ಹೋಯಿತೆಂದು ಮರಕಪಡುತ್ತಾನೆ. ಈ ಪಾಪದ ನಿವಾರಣೆಗಾಗಿ ಇವನು ಕೆಂಗುರಿಮಾಂಸ, ಕೆಂಬಕ್ಕಿ ಅನ್ನ, ಎಡೆಮಾಡಿಸಿಟ್ಟು ಸೂರ್ಯ ದೇವನಿಗೆ ಕೈಮುಗಿದು ತಪ್ಪಾಯಿತೆಂದು ಬೇಡಿಕೊಂಡ. ಹೀಗೆ ನಾನಾ ವಿಧದ ಆಚರಣೆಗಳು ನಡೆದವು. ಗಂಡುಹುಲಿ ತನ್ನ ಬೇಟೆ ಕೆಲಸ ಮುಗಿಸಿಕೊಂಡು ಹೆಣ್ಣು ಹುಲಿಯ ಕಣ್ಣಿಗೆ ಕಾಣಿಸದಿರುವುದರಿಂದ ಹುಡುಕುತ್ತಾ ಅರಣ್ಯದಲ್ಲಿ ಅಲೆಯುತ್ತಿತ್ತು. ಹುಲಿ ಕಚ್ಚಿಕೊಂಡು ಬರುವಾಗ ಹೆಣ್ಣು ಹುಲಿ ಕರು ಹಾಕಿದ್ದ ಆಕಳನ್ನು ಕಾಯಿತಿತ್ತು. ಹೆಣ್ಣು ಹುಲಿಯು ಸಾರಗ ತೆಗೆದುಕೊಂಡು ನೀನು ಗೂಡಿನ ಕಡೆ ಹೋಗಿ ಮರಿಗಳಿಗೆ ಊಟಮಾಡಿದ ತರುವಾಯ ಪಾಲಯ್ಯನಿಗೆ ಹಸುಕರು ಹಾಕಿದೆ ಮನೆಗೊಯ್ಯಲು ತಿಳಿಸು ಎಂದಿತು. ಗಂಡುಹುಲಿ ಬರಬರನೆ ಬಂದಿತು. ಬಂದು ನೋಡಲಾಗಿ ತನ್ನೆರಡು ಮರಿಗಳು ಸತ್ತುಬಿದ್ದಿದ್ದವು.

ಹುಲಿಗಳೊಂದಿಗೆ ಕಾಳಗ

ಕಾಟಣ್ಣ – ಚಿತ್ತಣ್ಣರಿಬ್ಬರೂ ಸೀಗೆಪಳೆಯಲ್ಲಿ ಅವಿತುಕೊಂಡು ಗಂಡುಹುಲಿಗೆ ಬಿಲ್ಲಿನಿಂದ ಹೊಡೆದರು. ಏಟು ಅದಕ್ಕೆ ತಾಗಲಿಲ್ಲ. ನರಮಾನವನಿಂದ ಅಪಾಯ ತಪ್ಪಿದ್ದಲ್ಲವೆಂದು ಹೆಣ್ಣು ಹುಲಿ ಹತ್ತಿರ ಹೋಯಿತು. ಹೆಣ್ಣುಲಿ ನೀನೊಬ್ಬನೆ ಬಂದೆಯಲ್ಲ ಪಾಲಯ್ಯ ಬರಲಿಲ್ಲವೆ? ಎಂದಿತು. ಮೊದಲೇ ನಾನು ಹೇಳಿದಂತೆ ನೀನು ಕೇಳಲಿಲ್ಲ. ಗಾದರಿಪಾಲಯ್ಯ ಬಿಲ್ಲು – ಬಾಣಗಿಂದ ನಮ್ಮ ಮರಿಗಳನ್ನು ಕೊಂದುಹಾಕಿದ್ದಾನೆಂದು ಹೇಳಿದಾಗ, ಅದು ನಂಬಲಿಲ್ಲ! ಹುಲಿದಂಪತಿಗಳು ಗೂಡಿಗೆ ಬಂದು ತೀವ್ರ ದುಃಖಕ್ಕೊಳಗಾದವು.

ಹುಲಿದಂಪತಿಗಳು ಪಾಲಯ್ಯನನ್ನು ಹುಡುಕುತ್ತಾ ಅರಣ್ಯವನ್ನೆಲ್ಲ ಭೇದಿಸಿದವು. ನಿರಪರಾಧಿಯಾದ ಪಾಲಯ್ಯನು ಏನೂ ತಪ್ಪು ಮಾಡಿರದಿದ್ದರೂ, ಹುಲಿಗಳು ಬಿಡಲಾರವೆಂದು ನಿಶ್ಚಯಿಸಿ ಜರಿಮಲೆ ಪ್ರದೇಶಕ್ಕೆ ಹೋಗಿ ತಪಸ್ಸು ಮಾಡಿ ಭಗವಂತನ ವರಪಡೆದು ಮರಿಗಳನ್ನು ಬದುಕಿಸುವೆ ಎಂದನು. ಹುಲಿಗಳು ಹಿಂಬಾಲಿಸಿ ಅವನನ್ನು ಪರಿಪರಿಯಾಗಿ ನಿಂದಿಸಿದವು. ನಾನು ಹುಲಿಮರಿಗಳನ್ನು ಸಾಯಿಸಿಲ್ಲ! ತಪ್ಪು ನನ್ನದಲ್ಲ ಏನೇ ಆದರೂ ನಾನು ಬದುಕಿಸುವೆನೆಂದು ಜರಿಮಲೆಗೆ ಪ್ರಯಾಣ ಬೆಳೆಸುತ್ತಾನೆ.[3] ಇವನ ಪ್ರಯಾಣಕ್ಕೆ ಇಂಬುಕೊಡದ ಹುಲಿಗಳು ದಾರಿಗೆ ಅಡ್ಡಕಟ್ಟಿದ್ದವು. ನರಮನುಷ್ಯನನ್ನು ನಂಬಿದ್ದು ಮಹಾಪರಾಧ. ತಪ್ಪಿಸಿಕೊಳ್ಳಲು ಸುಳ್ಳು ನುಡಿಯುವ ಪಾಲಯ್ಯನನ್ನು ಛೀಮಾರಿ ಹಾಕಿ ಥಳಿಸಿದವು. ಹುಲಿಗಳು ಅವನನ್ನು ಕೊಲ್ಲಲು ರೇಗಿದಾಗ, ಪಾಲನಾಯಕ ಹುಲಿಗಳೊಂದಿಗಿನ ಹೋರಾಟಕ್ಕೆ ಅನ್ಯ ಮನುಷ್ಯನಾಗಿ ಅಣಿಯಾದ. ಸತತವಾಗಿ ೩ – ೪ ದಿನಗಳ ಕಾದಾಟದಲ್ಲಿ ಗಾದರಿಪಾಲನಾಯಕ ೩ನೇ ದಿನ ಮುಸ್ಸಂಜೆಯಲ್ಲಿ ಮಿಂಚೇರಿಹಳ್ಳದ ದಡದಲ್ಲಿ ಹೋರಾಡುತ್ತಲೇ ನೆಲ್ಕೆ ಬಿದ್ದು ನಿತ್ರಾಣನಾದನು. ಆಗ ಚಿತ್ತಣ್ಣ ಕಾಟಣ್ಣನವರು ಬಂದು ದೇವರೆತ್ತಿಗೆ ಸಮನಾದ ಒಂದು ಗಬ್ಬವಾದ ಹಸುವಿನ ಹಾಲನ್ನು ತಂದು ಗಾದರಿಪಾಲನಾಯಕನ ಬಾಯಿಗೆ ಬಿಟ್ಟರು. ಒಂದು ಹನಿಯನ್ನು ಗುಟುಕರಿಸಿ ಪ್ರಾಣಬಿಟ್ಟ. ಇವನೊಂದಿಗೆ ಹೋರಾಡಿದ ಹುಲಿಗಳೆರಡು ಮೀಂಚೇರಿಹಳ್ಳದ ದಂಡೆಯಲ್ಲಿ ಸತ್ತುಬಿದ್ದವು.

ಗಾದರಿಪಾಲನಾಯಕನ ಕ್ಷೇತ್ರ, ಗಂಜಿಗಟ್ಟೆ

ಪತ್ನಿಯರ ಸಹಗಮನ

 

ಕಂಚವ್ವ – ಕಾಮವ್ವರಿಬ್ಬರೂ ಕೋಗಲೂರು, ಮುತ್ತುಗದೂರುಗಳಿಗೆ ಹಾಲುಮಾರಲು ಹೋಗಿ ಸಾಯಂಕಾಲದವರೆಗೆ ಪೂರೈಸಿಕೊಂಡು ಕಾಡಿನೊಳಗಿದ್ದ ಗೂಡಿನ ಹತ್ತಿರ ಬರುತ್ತಾರೆ. ಮಿಂಚೇರಿಹಳ್ಳದಲ್ಲಿ ಬಾಯಾರಿಸಿಕೊಳ್ಳಲು ನೀರಿಗಾಗಿ ಬಂದು ಚಿಲುಮೆ ತೋಡಿಗಾಗಿ ರಕ್ತ ಊಟೆಯಲ್ಲಿ (ಬುಗ್ಗೆ) ಬರುತ್ತಿತ್ತು. ಇದು ಅಪಶಕುನವೆಂದು ಬಗೆದು ಅಕ್ಕತಂಗಿಯರು ಸರಸರನೆ ಬಂದು ರೊಪ್ಪವನ್ನು ನೋಡಿದರೆ ಹುಲಿಮರಿಗಳು ಸತ್ತುಬಿದ್ದಿದ್ದವು. ಏನೋ ಅನಾಹುತ ನಡೆದಿದೆ ಎಂದು ಪರಿಪರಿ ಚಿಂತಿಸತೊಡಗಿದರು. ದನಕರುಗಳು ಕಿವಿಗಳನ್ನು ಇಳಿಬಿಟ್ಟುಕೊಂಡಿದ್ದ ಚಿನ್ಹೆಗಳು ದುರಂತವನ್ನು ಪ್ರತಿನಿಧಿಸಿದ್ದವು. ಆಗ ತಾನೆ ಬಂದ ಚಿತ್ತಯ್ಯಕಾಟಣ್ಣನವರು ಗಾದರಿಪಾಲನಾಯಕ ತೀರಿಕೊಂಡ ಸಂಗತಿಯನ್ನು ತಿಳಿಸಿದರು.

ಅಕ್ಕ – ತಂಗಿಯರಿಗೆ ಆಕಾಶವೇ ಕಳಚಿ ಬಿದ್ದಂತಾಯಿತು. ಗಂಡನೆಂಬ ದೇವರೇ ಸತ್ತಮೇಲೆ ನಾವು ಈ ಭೂಮಿಯ ಮೇಲಿದ್ದು ಫಲವೇನು, ಯಾವ ಸಾರ್ಥಕ ಬದುಕು ಸಾಗಿಸಬೇಕೆಂದು ನಾನಾ ಬಗೆಯಾಗಿ ಚಿಂತಿಸತೊಡಗಿದರು. ಕೊನೆಗೆ ಗಂಡನ ಸಮಾಧಿಗೆ ಪೂಜೆ ಮಾಡಿ ಸಾಯಲು (ಸಹಗಮನ) ಸಿದ್ಧರಾಗುತ್ತಾರೆ. ಗಂಜಿಗಟ್ಟಿ ಗ್ರಾಮದ ಪುರೋಹಿತನಿಂದ ಕುಂಕುಮ – ಬಳೆಗಳನ್ನು ಅಳಿಸಿ ಒಡಿಸಿ ತಮ್ಮ ಪತಿವ್ರತಾ ಬದುಕು ಭಂಗವಾಗಬಾರೆಂದು ಊರಮುಂದಿರುವ ಹೊಂಡಕ್ಕೆ ಹಾರಿ ಸಾಯುತ್ತಾರೆ. ಹೀಗೆ ಕಥೆ ಇಲ್ಲಿಗೆ ಮುಕ್ತಾಯವಾಗುತ್ತದೆ. ಇವನ ವಂಶಪರಂಪರೆಯ ಬಗ್ಗೆ ಎಲ್ಲೂ ವಿವರಗಳು ದೊರೆಯಲಾರವು. ಗಂಜಿಗಟ್ಟೆಯಲ್ಲಿ ಇವರಿಬ್ಬರು ಸಹಗಮನ ಕೈಗೊಂಡ ಬಗ್ಗೆ ಮಾಸ್ತಿಕಲ್ಲನ್ನು ಹಾಕಿದ್ದಾರೆ. ಇದರಲ್ಲಿ ಗಾದರಿಪಾಲನಾಯಕ – ಸಣ್ಣ (ಚಿನ್ನ) ಪಾಲನಾಯಕ ಹುಲಿಗಳೊಡನೆ ಹೋರಾಡಿದರೆ, ಪತ್ನಿಯರಿಬ್ಬರು ಸಹಗಮನ ಕೈಗೊಳ್ಳುವರು, ಮೇಲೆ ಪಶುಕರುಗಳು ನಿಂತಿವೆ. ಈ ಮಾಸ್ತಿಕಲ್ಲನ್ನೇ ಗಾದರಿಪಾಲನಾಯಕ ದೇವರೆಂದು ಗುಡಿಕಟ್ಟಿ ಪೂಜಿಸುತ್ತಾರೆ. ಇದಕ್ಕೆ ಅನೇಕ ಅರಸರು ಕಾಣಿಕೆ ಸಲ್ಲಿಸಿ, ದೇವಾಲಯವನ್ನು ಕಟ್ಟಿಸಿದ್ದಾರೆ. ಈ ಗ್ರಾಮದಲ್ಲಿ ಕಂಪ್ಲಿನರಸಿಂಹ, ಗಾದರಿಪಾಲನಾಯಕನ ದೇವಾಲಯಗಳಿವೆ. ಇವೆರಡು ದೇವಾಲಯಗಳಲ್ಲಿಯೂ ಪಶುಪಾಲನೆಗೆ ಸಂಬಂಧಿಸಿದ ಶಿಲ್ಪಗಳಿವೆ. ಒಬ್ಬ ಪಶುಪಾಲಕ ಮಂಡಲ, ಜಪಮಾಲೆ, ಯಜ್ಞೋಪವೀತ, ಕೋಲನ್ನು ಹೊಂದಿದರೆ; ಮತ್ತೊಂದರಲ್ಲಿ ಸುತ್ತಲೂ ಪಶುಗಳು ತಾನೊಪ್ಪನೇ ಕೋಲು ಮತ್ತು ತಂಬಿಗೆಯನ್ನು ಕೈಯಲ್ಲಿಡಿದಿರುವುದು ಕಂಡುಬರುತ್ತದೆ. ಇವುಗಳನ್ನು ಸಮೀಕ್ಷಿಸಿದರೆ ಗಾದರಿಪಾಲನಾಯಕನ ಕಥೆ ಪಶುಪಾಲನೆಯ ಉತ್ತುಂಗಸ್ಥಿತಿಯನ್ನು ಸಾಬೀತುಪಡಿಸುತ್ತದೆ. ಅಲ್ಲದೆ, ವಲಸೆಗಾರರು ಕೃಷಿಕರಾಗಿ ಪರಿವರ್ತನೆ ಹೊಂದಿದ ಕಾಲಘಟ್ಟವೊಂದನ್ನು ಅನಾವರಣಗೊಳಿಸುವುದು. ಈ ಮಹಾತ್ಮನ ಸ್ಮರಣೆಗಾಗಿ ತಾಳೆದ (ತಾಳ್ಯ) ಕರಿಯಪ್ಪನಾಯಕನೆಂಬ ಪಾಳೆಯಗಾರ ಮತ್ತು ಚಿತ್ರದುರ್ಗದ ಅರಸ ಕಸ್ತೂರಿ ರಂಗಪ್ಪನಾಯಕ ಈ ಗಾದರಿಪಾಲನಾಯಕ ದೇವಾಲಯಕ್ಕೆ ಅಪಾರದೇಣಿಗೆ, ದತ್ತಿದಾನ ಮೂಲಕ ಗ್ರಾಮಗಳನ್ನು ಉಂಬಳಿಯಾಗಿ ಬಿಟ್ಟುಕೊಟ್ಟಿದ್ದರು

ಆಚರಣೆ ಸಂಪ್ರದಾಯಗಳು

ನಾಯಕ ಜನಾಂಗದವರು ‘ಗಾದರಿ’ಯನ್ನು ಪ್ರಧಾನ ದೇವರೆಂದು ಚಿತ್ರದುರ್ಗ – ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಪೂಜಿಸುವರು. ಚಿತ್ರದುರ್ಗ ಜಿಲ್ಲೆಯಲ್ಲಿ ಮಾತ್ರ ಬೇಡರಷ್ಟೇ ಅಲ್ಲದೆ, ಇತರ ಸಮುದಾಯದವರು ಈತನನ್ನು ಪೂಜಿಸುವ ಅನುಯಾಯಿಗಳಾಗಿರುತ್ತಾರೆ. ದಾವಣಗೆರೆ ಜಿಲ್ಲೆಯಲ್ಲಿ ದಲಿತ ಸಮುದಾಯಗಳು ಗಾದರಿಪಾಲನಾಯಕನನ್ನು ಭಕ್ತಿಪ್ರಧಾನ ದೇವರೆಂದು ಪೂಜಿಸುವರು. ಮಧ್ಯಕರ್ನಾಟಕದ ಬೇಡರ ಪ್ರತಿಯೊಂದು ಹಟ್ಟಿ, ಗ್ರಾಮಗಳಲ್ಲಿಯೂ ಈತನ ದೇವಾಲಯಗಳಿವೆ. ಇವನ ಪ್ರತೀಕವಾಗಿ ದೀಪಾವಳಿ, ಗುಗ್ಗರಿಹಬ್ಬ, ಕಾಳನಹಬ್ಬ ಇತರ ಹಬ್ಬ – ಜಾತ್ರೆಗಳನ್ನು ಗ್ರಾಮಸ್ಥರು ಆಚರಿಸುತ್ತಾರೆ. ಇಂದಿಗೂ ಗಂಗಾಪೂಜೆ, ದಾಸಯ್ಯಪಂಜು ನುಂಗುವುದು, ಮಣೆವು, ಕಾಸು – ಮೀಸಲು ಕಲೆಯುವುದು, ಅಲಗು ಹೊರಡುವುದು, ಇತರ ಆಚರಣೆಗಳು ರೂಢಿಯಲ್ಲಿವೆ. ಗಂಜಿಗಟ್ಟೆ ಪ್ರಧಾನ ಸ್ಥಳವಾದರೆ, ಉಪಶಾಖೆಗಳು ಹಲವಾರು. ನಾಯಕನಹಟ್ಟಿ ಹೋಬಳಿಯ ಚನ್ನಬಸಯ್ಯನಹಟ್ಟಿ, ರಾಮಸಾಗರ, ಮೊಳಕಾಲ್ಮುರು ತಾಲೂಕಿನ ಬಿ.ಜಿ. ಕೆರೆ, ಮೊಗಲಹಳ್ಳಿ, ಮ್ಯಾಸರಹಟ್ಟಿ, ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ, ಕೂಡ್ಲಿಗಿ ತಾಲೂಕಿನ ಪೂಜಾರಹಳ್ಳಿ, ಕಾತ್ರಿಕೆಹಟ್ಟಿ, ಹುಲಿಕೆರೆ, ಕುಮತಿ, ಕರ್ನಾರಹಟ್ಟಿ ಮೊದಲಾದ ಸ್ಥಳಗಳಲ್ಲಿ ಗಾದರಿಪಾಲನಾಯಕನ ದೇವಾಲಯಗಳಿವೆ.

ನೀತಿ, ಸತ್ಯ, ಪ್ರಮಾಣಿಕತೆ, ಅಹಿಂಸೆಯ ಸಂಕೇತಗಳು ಈ ಕಥೆಯ ಆಶಯ. ಗಾದರಿಪಾಲನಾಯಕನಿಗೆ ಮತ್ತು ಹುಲಿದಂಪತಿಗಳಿಗೆ ಏರ್ಪಟ್ಟ ಒಪ್ಪಂದದ ವಿಪರ್ಯಾಸ ಇದರ ವಸ್ತ. ಗಾದರಿಪಾಲನಾಯಕ ಅವನ ತಮ್ಮ ಚಿನ್ನಪಾಲನಾಯಕ ಇಬ್ಬರೂ ಸೇರಿ ತುರುಮಂದೆ ಮೇಲೆ ದಾಳಿ ಮಾಡಿದ ಹುಲಿಗಳೊಂದಿಗೆ ಹೋರಾಡಿ ಕೊಂದು ತಾವೂ ಮಡಿದದ್ದು, ಮಡದಿಯರು ಮಹಾತಿಯರಾಗಿದ್ದು ಇವು ಮ್ಯಾಸಬೇಡ ಸಮುದಾಯದ ವೈವಿಧ್ಯಮಯ ಸಾಹಸಕ್ಕೆ ಮೊಟ್ಟಮೊದಲ ಉದಾಹರಣೆ. ಇಂಥದ್ದೇ ಒಂದು, ಇದಕ್ಕೆ ಕಾಡುಗೊಲ್ಲರ ಕಳಿಂಗರಾಯ ಕತೆ ಹೋಲುತ್ತದೆ.

ಪಶುಪಾಲಕನಾಗಿದ್ದ ಗಾದರಿಪಾಲನಾಯಕ ಸಾಂಸ್ಕರತಿಕ ನಾಯಕನೆಂಬುದು ಸ್ಪಷ್ಟ. ಈತ ತನ್ನ ಸಂಘಟನೆಯೊಂದಿಗೆ ತನ್ನ ಜನಾಂಗವನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊಂದಿರಬೇಕು. ತುರುಮಂದೆಗೆ ನುಗ್ಗಿದ ಹುಲಿಗಳನ್ನು ಕೊಲ್ಲುವಾಗ ಧೈರ್ಯಗುಂದದೆ ಹೋರಾಡಿ ಮಡಿದ ವೀರನಾದ್ದರಿಂದ ಜನಮನಗಳಲ್ಲಿ ಅಮರನಾಗಿದ್ದಾನೆ. ಹೊಯ್ಸಳರ ಸಳ, ಲಾಂಬಾಣಿಗರ ರಾಮೋಜಿ, ಮೈಸೂರಿನ ಟಿಪ್ಪುಸುಲ್ತಾನ ಮುಂತಾದವರ ಇಂಥ ಹೋರಾಟಗಳಿಗೆ ಗಾದರಿಪಾಲನಾಯಕನ ಸಾಹಸವನ್ನು ಹೋಲಿಸಬಹುದು. ಇವನದು ಅವರೆಲ್ಲರಿಗಿಂತಲೂ ಭಿನ್ನವಾದ ಮಹಾಸಾಹಸದ ಘಟನೆ. ಸಂಬಂಧಿಸಿದ ಶಾಸನ ಹಾಗೂ ಶಿಲ್ಪಗಳು ಇದರ ಬಗ್ಗೆ ಬೆಳಕು ಚೆಲ್ಲುತ್ತವೆ. ಸೆಟ್ಟೂರು ಸೆಟ್ಟಪ್ಪರಾಜನಂಥ ಪಾಳೆಯಗಾರನ ಮಕ್ಕಳನ್ನು ಮದುವೆಯಾದರೂ ರಾಜಕೀಯ ಆಳ್ವಿಕೆಯ ಇವನಿಗೆ ಸೋಂಕಲಿಲ್ಲ. ರಾಜಪ್ರಭುತ್ವದ ಸಾಧನೆಗಿಂತಲೂ ಇವನ ಸಾಹಸ – ಸಾಧನೆಗಳು ಅವಸ್ಮರಣೀಯವಾದವು. ಆದುದರಿಂದಲೇ ಜನಮನದಲ್ಲಿ ಜೀವಂತಗೊಂಡ ಗಾದರಿಪಾಲನಾಯಕನನ್ನು ತಲೆಮಾರುಗಳಿಂದಲೂ ಮಂದಲವಾರು, ಗುಂಡೇತಲಾರು ಎಂಬ ಮ್ಯಾಸಬೇಡರ ಬೆಡಗಿನವರು ಆರಾಧಿಸಿಕೊಂಡು ಬಂದಿದ್ದಾರೆ. ಹುಟ್ಟಿದ ಮಕ್ಕಳಿಗೆ ಗಾದರಮ್ಮ, ಗಾದಿರಪ್ಪ, ಗಾದಿ ಎಂದೆಲ್ಲ ಹೆಸರಿಡುವುದುಂಟು. ಇಂದು ಶೈವಿಕರಣಗೊಳಿಸಿದ ನಾಯಕನಿಗೆ ‘ಗಾದ್ರಿಲಿಂಗೇಶ್ವರ’ ನೆಂದು ಕೆಲವು ಕಡೆ ಕರೆಯುವರು. ಹೀಗೆ ಮಧ್ಯಕರ್ನಾಟಕದ ಮ್ಯಾಸಬೇಡರ ಸಾಂಸ್ಕೃತಿಕ ಲೋಕದಲ್ಲಿ ಧೃವತಾರೆಯಂತೆ ಮಿಂಚು ಮರೆಯಾದವರ ಪೈಕಿ ಗಾದರಪಾಲನಾಯಕನ ವ್ಯಕ್ತಿತ್ವ ಅಪರಿಮಿತವಾದುದು.[4] 

ಗಾದರಿಪಾಲನಾಯಕ ದೇವರ ಪೂಜಾರಿಯ ಪಟ್ಟಾಭಿಷೇಕ

[1] ನೋಡಿ :ಗಾದರಿಪಾಲನಾಯಕ ೧೯೯೯, ಪುಟ:೫೬

[2] ಚಳ್ಳಕೆರೆ ಭಾಗದ ಜನಪದರು ಚಿನ್ನಪಾಲನಾಯಕನು ಅಣ್ಣನನ್ನು ನೋಡಲು ಮಿಂಚೇರಿ ಅರಣ್ಯದ ಕಡೆ ಬಂದನು. ಹುಲಿಮರಿಗಳು ಹಸುವಿನ ಕರುಗಳೊಂದಿಗೆ ಗೂಡಿನಲ್ಲಿ ಆಟವಾಡುತ್ತಿದ್ದವು. ಇವನು ಭಯಗೊಂಡು ಅಪಾಯಬರಬಹುದೆಂದು ಬಂದೂಕಿನಿಂದ ಕೊಂದನೆಂದು ಹೇಳುತ್ತಾರೆ. ಭಾರತಕ್ಕೆ ವಿದೇಶಿಯರು ಬಂದ ನಂತರದ ಕಥಾಬೆಳವಣಿಗೆಯಲ್ಲಿ ಬಂದೂಕಿನ ಪ್ರಯೋಗ ಸೇರಿ ಇಂದಿನ ಜನಪದರು ಆ ರೀತಿ ಹೇಳಿರಬಹುದು.

[3] ಜರಿಮಲೆ ಕೂಡ್ಲಿಗಿ ತಾಲೂಕಿನಲ್ಲಿರುವ ಒಂದು ಐತಿಹಾಸಿಕ ಸ್ಥಳ

[4] ನೋಡಿ: ಗಾದರಿಪಾಲನಾಯಕ, ೧೯೯೯, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.