ಗಂಡನ ಮನೆಗೆ ತೆರಳಿದ ಪಾಲಮ್ಮ

ಪಾಪನಾಯಕನಿಗೆ ಪಾಲಮ್ಮನ ವಿಚಾರವೆಲ್ಲವನ್ನು ತಂದೆ – ತಾಯಿಗಳು ತಿಳಿಸಿದರು. ಪಾಪನಾಯಕ ತನ್ನ ಅತ್ತೆ ಪಚ್ಚಿಪದಿ ಪಾಲಮ್ಮನನ್ನು ಕ್ಯಾಸಾಪುರಕ್ಕೆ ಕರೆದುಕೊಂಡು ಹೋದನು. ಕ್ಯಾಸಾಪುರದ ಕ್ಯಾಸನೋನು ದಂಡು – ದಳ, ಅಪಾರವಾದ ರಾಜವೈಭವದಲ್ಲಿದ್ದನು. ಪಾಪನಾಯಕ ತನ್ನ ಅತ್ತೆಯೊಂದಿಗೆ ಕ್ಯಾಸನೋನ ರಾಜಧಾನಿಗೆ ಹೋಗಿ ಅರಮನೆ ಎದುರು ನಿಂತರು. ಹೆಂಡತಿಯನ್ನು ಕಳೆದುಕೊಂಡ ಇವನು, ಷರತ್ತಿಗೆ ತಪ್ಪುಬಾರದೆಂದು ಕರೆಯಲು ಹೋಗಲಿಲ್ಲವೆಂದು ಚಿಂತಾಕ್ರಾಂತನಾಗಿದ್ದ. ಗಳಗಂಟ ಗಾದಶೆಟ್ಟಿ ಇವನ ಮನೆಯಲ್ಲಿ ಕೂಲಿ ಆಳಿನಂತೆ ದುಡಿಯುತ್ತಿದ್ದ. ಆ ಕಾಡು ಮನುಷ್ಯನ ಮಾತಿಗೆ ಶೆಟ್ಟಿ ಪ್ರೋತ್ಸಾಹಿಸಿದ್ದರಿಂದ ಶೆಟ್ಟಿಗೆ ಈ ಶಿಕ್ಷೆಯಾಯಿತು. ಈ ದೊರೆ (ರಾಜ) ಹೆಂಡತಿಯನ್ನು ಅಗಲಿಸುಮಾರು ಇಪ್ಪತ್ತು ವರ್ಷವಾಗಿತ್ತು.

ಇಪ್ಪತ್ತು ವರ್ಷಗಳ ಹಿಂದೆ ಅಣ್ಣನೊಂದಿಗೆ ಹೋದವಳು, ಇಂದು ಯಾವನೋ ಒಬ್ಬ ಬಾಲಕನೊಂದಿಗೆ ಬಂದಿದ್ದಾಳೆ. ಆಕಾಡು ಮಾನವನಿಗೆಷ್ಟು ಧೈರ್ಯ ಎಂದುಕೊಂಡ ಕ್ಯಾಸನೋನು ಪಾಲಮ್ಮ ತಪ್ಪಿತಸ್ಥಳಾಗಿ ಪತಿಯನ್ನು ನೋಡುವ ಧೈರ್ಯ ಮಾಡದಿದ್ದನ್ನು ಕ್ಯಾಸನೋನು ಕಂಡ. ಅವಳ ಸೌಂದರ್ಯ ಬಾಡಿತ್ತು, ಮುಖ ಸುಕ್ಕುಗಟ್ಟಿತ್ತು. ಇಪ್ಪತ್ತು ವರ್ಷಗಳ ಕಾಡು ಜೀವನದಿಂದ ದೈಹಿಕ ಸೌಂದರ್ಯವು ಆಕರ್ಷಣೆಯನ್ನು ಕಳೆದುಕೊಂಡಿತ್ತು. ಅಡವಿಯ ಹಳ್ಳದಲ್ಲಿ ಕಾಲಾಡಿಸಿಕೊಂಡಿದ್ದಾಗ ಅವಳ ಸೌಂದರ್ಯದ ಛಾಪು ಬೆರಗು ಗೊಳಿಸುವಂತಿತ್ತು. ಇದೆಲ್ಲವನ್ನು ಕಂಡ ಕ್ಯಾಸನೋನು ಇಪ್ಪತ್ತು ವರ್ಷಗಳಿಂದ ಬೇಕಿಲ್ಲದ ಗಂಡ ಈಗೇಕೆ? ಕಾಡುಪ್ರಾಣಿಯಂತಿರುವವಳನ್ನು ಹೇಗೆ ಸೇರಿಸಿಕೊಳ್ಳಲಿ ಎಂದು ತಿರಸ್ಕರಿಸಿ ಹೊರಡಿರೆಂದು ಇಬ್ಬರಿಗೂ ತಾಕಿತು ಮಾಡಿದ.

ದೈವಶಕ್ತಿ ಹೊಂದಿದ ಪಾಪನಾಯಕನಿಗೆ ಅವನಿಂದ ಯಾವ ಆಘಾತವಾಗಲಿಲ್ಲ. ಸಮಾಧಾನದಿಂದ ತನ್ನ ಮಾವನನ್ನು ಕುರಿತು, ಹಿಂದೆ ನಮ್ಮ ತಂದೆ ಅತ್ತೆಯನ್ನು ಕರೆತಂದಾಗ ಮುರಿದ ಹಲ್ಲನ್ನು ನೆಪ ಒಡ್ಡಿ ಹೊರದಬ್ಬಿದ್ದನ್ನು ವಿವರಿಸಿದ. ಗಾದಶೆಟ್ಟಿಯನ್ನು ಮನೆಯಾಳೆಂದು ಜೀತಕ್ಕಿಟ್ಟುಕೊಂಡಿರುವುದನ್ನು ನೆನಪಿಸಿದ. ಅದೇ ಚಿಂತೆಯಲ್ಲಿ ತಂದೆತಾಯಿ ಅತ್ತೆಯವರು ಕೊರಗಿ, ಬಳಲಿದ್ದಾರೆ. ಅವರ ಕಷ್ಟವನ್ನು ನೋಡಲಾರದೆ ನಾನೇ ಕರೆತಂದಿರುವೆ. ಗಾದಶೆಟ್ಟಿಯನ್ನು ಜೀತ ಬಂಧನದಿಂದ ಬಿಡುಗಡೆ ಮಾಡೆಂದು ವಿನಂತಿಸಿದ.

ಸರ್ವಾಧಿಕಾರಿ, ನಿರಂಕುಶಪ್ರಭುವಾಗಿದ್ದ ಕ್ಯಾಸನು ಪಾಪನಾಯಕನ ಹಿತವಚನಕ್ಕೆ ಸೊಪ್ಪು ಹಾಕಲಿಲ್ಲ. ಕೊಪೋದ್ರೇಕದಿಂದ ವಿವಿಧ ಮಾತುಗಳಿಂದ ನಿಂದಿಸಿ, ಯೋಗ್ಯತೆ, ಪ್ರತಿಷ್ಠೆಗಳ ಬಗೆಗೆ ಮಾತನಾಡಿದ. ದನಗಾಹಿ ಬಾಲಕನ ಬೋಧನೆಗೆ ಸಿಡಿಮಿಡಿಗೊಂಡು ಇಬ್ಬರನ್ನು ಊರಾಚೆ ತಳ್ಳಿ ಎಂದನು. ಅದಕ್ಕೆ ಪಾಪನಾಯಕ ಜಗ್ಗದೆ, ಮಾನವರೇ ಆ ಕೆಲಸಕ್ಕೆ ಕೈಹಾಕಬೇಡವೆಂದು ಧೈರ್ಯವಾಗಿ ಉತ್ತರ ನೀಡಿದ. ನಮ್ಮನ್ನು ಕಾಡುಜನರೆಂದು ಹಿಯಾಳಿಸಬೇಡ. ಕಾಡು ಹೆಣ್ಣಾದ ನನ್ನ ಅತ್ತೆಯನ್ನು ಅಪಹರಿಸಿದ್ದು ಏಕೆ? ಎಂದೆಲ್ಲಾ ಪ್ರಶ್ನಿಸಿದ. ದೀನವಾಗಿ ಅತ್ತೆಯನ್ನು ಕರೆದುಕೊ ಎಂದು ಬೇಡಿದರೂ ಅವನು ಕೇಳಲಿಲ್ಲ. ಕೊನೆಗೆ ತನ್ನ ಆಳುಗಳನ್ನು ಕರೆದು ಅನಾಗರಿಕ ಬಾಲಕ ಹಾಗೂ ಕಾಡುಹೆಣ್ಣನ್ನು ಊರಾಚೆ ತಳ್ಳಿರೆಂದು ಅಜ್ಞಾಪಿಸಿದ.

ಆಗಲೂ ಪಾಪನಾಯಕ ನಿರಪರಾಧಿ ಗಳಗಂಟಗಾದಶೆಟ್ಟಿಯನ್ನು ಮುಕ್ತಮಾಡಿ, ಮಹಾಪತಿವ್ರತೆಯಾದ ನನ್ನ ಅತ್ತೆಯನ್ನು ಕರೆದುಕೊ ಎಂದು ಬೇಡಿಕೊಂಡ. ಮದೋನ್ಮತ್ತನಾದ ಕ್ಯಾಸನೋನು ಪಾಪನಾಯಕನ ಮಾತನ್ನು ಕೇಳಿ ರೊಚ್ಚಿಗೆದ್ದನು. ನನ್ನ ರಾಜ್ಯದಲ್ಲಿ ಈವರೆಗೆ ಒಂದು ಹಸುಗೂಸು ಸಹಾ ತುಟಿ ಬಿಚ್ಚಿರಲಿಲ್ಲ. ನನ್ನ ಪರಿವಾರ ದವರೆದುರಿಗೆ ಯಕಶ್ಚಿತ ಬಾಲಕ ತನ್ನ ಮಾನ – ಮರ್ಯಾದೆಯನ್ನು ತೆಗೆದನೆಂದು ವಿಧವಿಧವಾಗಿ ಆಲೋಚಿಸುತ್ತಿದ್ದ. ಪತ್ನಿಯನ್ನು ಕರೆದು, ಗಾದಶೆಟ್ಟಿಯನ್ನು ಬಿಟ್ಟರೆ ಜನ ನನ್ನ ಸಾಮರ್ಥ್ಯದ ಬಗ್ಗೆ ಲಘುವಾಗಿ ಮಾತನಾಡಿಕೊಳ್ಳುತ್ತಾರೆ. ಅಲ್ಲದೆ, ತಾನು ಸಾವಿರಾರು ಜನರನ್ನು ಧ್ವಂಸಮಾಡಿ, ತನ್ನ ಜಯದ ಸಂಕೇತವಾಗಿ ಕಾಳಿಂಗರಾಯನ ಮಡುವಿನ ಬಳಿ ಏಳು ರಣಗಂಬಗಳನ್ನು ನಡೆಸಿದವನು. ನನ್ನಂಥವೀರ ಪರಾಕ್ರಮಿಯ ಮುಂದೆ ಮಾತನಾಡುವ ಈ ಬಾಲಕನಿಗೆ ನನ್ನ ಶೌರ್ಯ, ಸಾಮರ್ಥ್ಯ ತಿಳಿದಿಲ್ಲ ಎಂದುಕೊಂಡು ಕಾಳಿಂಗರಾಯನ ಮಡುವಿನ ಹತ್ತಿರ ನೆಟ್ಟಿರುವ ವಿಜಯದ ವೀರರಣ ಗಂಬಗಳನ್ನು ನೋಡಿ ನನ್ನನ್ನು ಅರ್ಥಮಾಡಿಕೊ ನೀವು ಹೊರಟು ಹೋಗದಿದ್ದರೆ ನಿಮ್ಮ ಅವಸಾನವು ಇಲ್ಲೇ ಆಗುತ್ತದೆಂದು ಎಚ್ಚರಿಸಿದನು.

ಪಾಪನಾಯಕನು ಕ್ಯಾಸನೋನ ಒಣಪ್ರತಿಷ್ಠೆಗಳಿಗೆ ಕಿವಿಗೊಡನೆ, ನಿನ್ನ ಬೆದರಿಕೆಗೆ ನಾ ಹೆದರುವುದಿಲ್ಲ. ನಾನು ವೀರಬೇಡರ ವಂಶದವನು. ದೈವದ ಆಶೀರ್ವಾದದ ನೆರಳಲ್ಲಿ ಬೆಳೆದಿರುವೆ. ನನ್ನ ಬಲಕ್ಕೆ ನಿನ್ನಂಥ ಸಹಸ್ರಾರು ಜನ ಬಂದರೂ ಧೂಳಿಪಟ ಮಾಡಬಲ್ಲೆ. ನೀನು ಊರು ಹಂದಿಯಾದರೆ, ನಾನು ಕಾಡುಸಿಂಹ ಎಂದನು. ಹೀಗೆಯೇ ಸಂಭಾಷಣೆ ನಡೆದು ಕ್ಯಾಸನೋನು ತನ್ನ ದಂಡುದಳಕ್ಕೆ ಆಜ್ಞೆಮಾಡಿ ಇವನನ್ನು ಕಡಿದು ತುಂಡು ತುಂಡುಮಾಡಿ ಕಾಡಿನಲ್ಲಿ ಬಿಸಾಡಿಬನ್ನಿ, ಈ ಹೆಂಗಸನ್ನು ಊರಾಚೆ ತಳ್ಳಿ ಎಂದು ಆಜ್ಞೆ ಮಾಡಿದ. ಅವರು ಸಿದ್ಧರಾದರು. ಪಾಪನಾಯಕನಿಗೆ ಪಿತ್ತ ನೆತ್ತಿಗೇರಿತು. ಮನದಲ್ಲಿ ಶಿವ – ಪಾರ್ವತಿ, ಆದಿಶೇಷನನ್ನು ನೆನೆದು, ತಿರುಪತಿಯಲ್ಲಿ ನಾರಾಯಣನಿಂದ ಪಡೆದ ಮುಕ್ಕಡ ಅಲುಗಿನಿಂದ ಅವನ ಮೈಮೇಲೇರಿ ಬಂದ ದಂಡು – ದಳವೆಲ್ಲವನ್ನು ಧ್ವಂಸಮಾಡಿ, ಅವನ ವಿಜಯದ ಕಂಬಗಳಾದ ಏಳು ರಣಗಂಬಗಳನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡನು. ಆ ನಾಯಕನೆದುರಿಗೆ ಕ್ಯಾಸನೋನ ದಂಡುದಳ ಸೋತಿತು. ಕಾದಾಟದಲ್ಲಿ ಗೆಲ್ಲಲು ಆಗಲೇ ಇಲ್ಲ. ನಂತರ ನಾಯಕ ಕ್ಯಾಸನಿಗೆ ನಿನ್ನ ದಂಡುದಳ ಇನ್ನೆಷ್ಟಿದೆ ಕಳುಹಿಸು ಎಂದನು. ನಿನ್ನನ್ನು ಮುಗಿಸಿದರೆ ನನ್ನ ಅತ್ತೆ ರಂಡೆಯಾಗುವಳು. ಸೋಲನ್ನು ಒಪ್ಪಿ ನಿರಪರಾಧಿ ಶೆಟ್ಟಿಯನ್ನು ಬಿಟ್ಟು ಅತ್ತೆಯನ್ನು ಕರೆದುಕೊ ಎಂದನು.

ಈ ಬಾಲಕನ ಶೌರ್ಯ, ಪರಾಕ್ರಮ ಕಂಡು ಜನರು ಸೋಜಿಗ ಪಟ್ಟುಬೆರಗಾದರು. ಕ್ಯಾಸನಿಗೆದುರು ಯಾರು ನಿಂತು ಮಾತನಾಡುತ್ತಿರಲಿಲ್ಲ. ಏಕೈಕ ಒಬ್ಬ ಬಾಲಕ ದಂಡುದಳವನ್ನು ಸೋಲಿಸಿದ. ಇವನು ಸಾಮಾನ್ಯನಲ್ಲ. ಇಂದ್ರ ಜಾಲಿಕನೋ, ಶೂರನೋ, ಧೀರನೋ ದೇವಮಾನವನೊ ತಿಳಿಯದು. ಎಂತೆಂಥ ಮಹಾವೀರರು ಹತರಾಗಿದ್ದರು. ಈ ಬಾಲಕನ ಗೆಲುವು ನನ್ನ ಸಾವಿಗೆ ಕುತ್ತು ತಂದಂತಿದೆ ಎಂದು ನೊಂದುಕೊಂಡು ಆದರೂ ಹೆಂಡತಿಯನ್ನು ಕಳೆದುಕೊಳ್ಳುವುದಿಲ್ಲವೆಂದೂ ಶೆಟ್ಟಿಯನ್ನು ಬಿಡಲಾಗುವುದಿಲ್ಲನೆಂದೂ ಹೇಳಿದನು.

ಗ್ರಾಮದ ಪ್ರಮುಖರು ಹದಗೆಟ್ಟಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು. ಸಂಭವಿಸುವ ಅನಾಹುತಗಳನ್ನು ತಪ್ಪಿಸಲು ಯತ್ನಿಸಿದರು. ಕ್ಯಾಸನೋನು ಬಡಾಯಿ ಬಿದ್ದರೆ ಈ ಬಾಲಕ ಉಳಿಸುವುದಿಲ್ಲವೆಂದು ಹಿರಿಯರು ಎಲ್ಲರ ಸಮ್ಮುಖದಲ್ಲಿ ಪಂಚಾಯ್ತಿ ನಡೆಸಿದರು. ಎಲ್ಲರೂ ಪಂಚಾಯ್ತಿಯಲ್ಲಿ ಶೆಟ್ಟಿಯನ್ನು ಬಿಡುಗಡೆ ಮಾಡಿ, ಹೆಂಡತಿಯನ್ನು ಕರೆದುಕೊಳ್ಳುವಂತೆ ಸೂಚಿಸಿದರು. ಅದಕ್ಕೆ ಕ್ಯಾಸನೋನು ಗ್ರಾಮದ ಹಿರಿಯರ ತೀರ್ಮಾನವನ್ನು ವಿರೋಧಿಸಿ ಹೆಂಡತಿಯು ಬೇಡ, ಶೆಟ್ಟಿಯನ್ನು ಬಿಡುವುದಿಲ್ಲ ಎಂದನು.

ಅತ್ತೆ ಮತ್ತು ಶೆಟ್ಟಿಗಳಿಬ್ಬರು ನಿರಪರಾಧಿಗಳಾಗಿದ್ದರೂ ಇಪ್ಪತ್ತು ವರ್ಷಗಳಿಂದ ಪಡಬಾರದ ಕಷ್ಟಪಡುತ್ತಿದ್ದಾರೆ. ಹೆಂಡತಿಯನ್ನು ತಿರಸ್ಕರಿಸಿದ್ದಾರೆ. ಅವಳ ಭವಿಷ್ಯ ಹೇಗಿರುವುದೋ ಯಾರಿಗೆ ಗೊತ್ತು. ಏನೇ ಆದರೂ ತವರುಮನೆಯಿದೆ. ನಾವು ಬಿಡಲು ಆಗುವುದಿಲ್ಲ. ಅತ್ತೆಯನ್ನು ನಾನೇ ಮನೆಗೆ ಕರೆದುಕೊಂಡು ಹೋಗುತ್ತೇನೆ. ಹೆಂಡತಿ ಬೇಡ ಎಂದಾಗ ಅವಳಿಗೆ ಆಸ್ತಿಯನ್ನು ಕೊಡಬೇಕೆಂದನು. ಅತ್ತೆಗೆ ಬಂದ ಆಸ್ತಿಯನ್ನು ಪಡೆದು ಅವಳನ್ನು ತವರಿಗೆ ಬಿಟ್ಟುಬಂದು, ನಾನು ಮಾವನ ಮನೆಯಲ್ಲಿ ಜೀತದಾಳಾಗಿ ದುಡಿದು ಗಾದಿಶೆಟ್ಟಿಯನ್ನು ಬಿಡುಗಡೆ ಮಾಡಿಸಿದರೆ, ನನ್ನ ತಂದೆಗೆ ಮಾಡಿದ ಉಪಕಾರಕ್ಕೆ ನಾನು ಕೃತಜ್ಞತೆ ಸಲ್ಲಿಸಿದ್ಧಂತಾಗುತ್ತದೆ ಎಂದನು. ಆ ಊರಿನ ಹಿರಿಯರಿಗೆ ಪಾಪನಾಯಕನ ಮಾತು ಹಿಡಿಸಿತು. ಅವಳಿಗೆ ದಕ್ಕಬೇಕಾದ ಹಕ್ಕುಗಳಿಗೆ ಒಪ್ಪಿಗೆಯಿತ್ತರು. ಇದನ್ನು ಕಂಡು ಕ್ಯಾಸನೋನು ರೊಚ್ಚಿಗೆದ್ದ. ಅವಳು ಕಾಡಿನ ಹೆಣ್ಣು ಅವಳದೆಂದು ಹೇಳುವ ಆಸ್ತಿ ಯಾವುದು ಇಲ್ಲ ಎಂದು ಕ್ಯಾಸನೋನು ವಾದಿಸಿದ. ಅದಕ್ಕೆ ಪಪನಾಯಕ ನಮ್ಮ ತಂದೆತಾಯಿಗಳು ಕಾಡಿನಲ್ಲಿ ಪ್ರಾಣಿಗಳನ್ನು ಮೇಯಿಸಿಕೊಂಡು ಬದುಕುವವರು. ಅವರಿಗೆ ಹೊಲಮನೆಗಳೆಲ್ಲಿ ಬರಬೇಕು. ಏನೇ ಆಗಲಿ ಹೊಲ – ಮನೆ ಬಿಟ್ಟರೆ ಬಿಡುವೆ ಅತ್ತೆಯ ಚರಸ್ವತ್ತುಗಳಿದ್ದರೆ ಕೊಡಲಿ ಎಂದು ಬೇಡಿದ. ಕೊಡುವುದಿಲ್ಲ ಎಂದರೆ ಬೇಡ ಎಂದಾಗ ಹಿರಿಯರು ಕ್ಯಾಸನೋನಿಗೆ ಹುಡುಗನ ನಿರ್ಧಾರ ತಿಳಿಸಿ ನ್ಯಾಯೋಚಿತವಾಗಿದೆ ಒಪ್ಪಿಕೊ, ಹಟಮಾಡಬೇಡ ಎಂದರು.

ಅಸಾಂಪ್ರದಾಯವಾಗಿ ನಾನು ನಡೆದುಕೊಂಡಿದ್ದರಿಂದ ಈ ಪರಿಸ್ಥಿತಿ ಎದುರಿಸ ಬೇಕಾಯಿತೆಂದು ಕ್ಯಾಸನೋನು ಹೇಳಿದ. ಹಿರಿಯರೆ ನಮ್ಮ ಮಾವನದು ಚರ – ಸ್ಥಿರ ವಸ್ತು, ಆಸ್ತಿ ಇಲ್ಲವೆಂದು ಸುಳ್ಳು ಹೇಳುತ್ತಾನೆ. ನಮ್ಮದು ಇಂತಹ ಸಂಪತ್ತು ಇಲ್ಲ, ನಾವು ಪಶುಪಾಲಕರು ದನಗಳೇ ನಮ್ಮ ಸಂಪತ್ತು ಎಂದ. ಆದರೂ ನಮ್ಮ ತಂದೆ ಒಂದು ಹಸುವನ್ನು ಬಳುವಳಿಯಾಗಿ ಕೊಟ್ಟಿದ್ದರು. ಆಗಿನಿಂದ ಸಂತತಿ ಅಭಿವೃದ್ಧಿಯಾಯಿತು. ಅತ್ತೆಯ ಗೋವುಗಳಿಂದ ಬೆಳೆದ ಸಂಪತ್ತು ಬಿಟ್ಟುಕೊಟ್ಟರೆ ನಾನು ಅತ್ತೆ ಮರಳಿ ಹೋಗುತ್ತೇನೆ ಎಂದನು. ಅವಳದಾದ ಹಸು ಸತ್ತು ಹೋಯಿತು ಎಂದ ಮೇಲೆ ಅದರಿಂದ ಹುಟ್ಟಿದ ಕರುಗಳೆಲ್ಲಿ ಬರಬೇಕೆಂದನು. ಗ್ರಾಮಸ್ಥರಿಗೆ ಚಿಂತೆ ಹೆಚ್ಚಿತು. ನಿಮ್ಮ ತಂದೆ ಕೊಟ್ಟ ಬಡಕಲ ಹಸು ಅಂದೇ ತೀರಿಕೊಂಡಿತೆಂದ ಕ್ಯಾಸನೋನು. ಅದಕ್ಕೆ ಹಿರಿಯರಿಗೆ ಪಾಪನಾಯಕನು ಕಾಡಿನಲ್ಲಿ ಮೇಯುವ ಅತ್ತೆಯ ಹಸುಗಳನ್ನು ಕರೆಯುತ್ತೇನೆ ಅವು ನಮ್ಮ ಅತ್ತೆಗೆ ಸೇರಿದ್ದರೆ ನಾನು ಕರೆದ ಕೂಡಲೆ ಬರುತ್ತವೆ. ಇಲ್ಲವಾದರೆ ಬರುವುದಿಲ್ಲ. ನಾನು ಕರೆದ ಹಸುಗಳೆಲ್ಲವು ಅತ್ತೆಗೆ ಸೇರಿದ್ದವು. ಹಸುಗಳು ಬಂದರೆ ಗಾದಿಶೆಟ್ಟಿ ಮಾವನ ಮನೆಯಲ್ಲಿ ಇರುವಂತಿಲ್ಲ. ಅತ್ತೆಯನ್ನು, ಹಸುಗಳನ್ನು ಊರಿಗೆ ಕರೆದೊಯ್ಯುತ್ತೇನೆ ಎಂದನು. ಇದರಿಂದ ಪಂಚಾಯ್ತಿದಾರರಿಗೆ ಮುಜುಗರವಾಯಿತು.

ಪಾಪಿನಾಯಕನ ಮಾತಿಗೆ ಕ್ಯಾಸನೋನು ಒಪ್ಪಿಕೊಂಡರೂ ಕಷ್ಟ, ಬಿಟ್ಟರು ಕಷ್ಟ, ಉಂಟಾಯಿತು. ಅವಳಿಗೆ ಕೊಟ್ಟ ಒಂದು ಹಸುವಿನಿಂದ ಸಹಸ್ರಾರು ಗೋಸಂಪತ್ತು ವೃದ್ಧಿಯಾಗಿತ್ತು. ನಾನು ಇದಕ್ಕೆ ಒಪ್ಪಿಕೊಂಡರೆ ಸುಲಭವಾಗಿ ಏನಾದರೂ ಮಾಡಬಹುದೆಂದು ಹೆದರಿಕೊಂಡ. ಬಂದಿದ್ದ ಹಿರಿಯರೆಲ್ಲ, ಕ್ಯಾಸನೋನನ್ನು ಕುರಿತು ಏನಯ್ಯಾ ಕ್ಯಾಸಭೂಪನೇ ಆ ಬಾಲಕನು, ಸವಾಲು ಹಾಕಿ, ಸತ್ವಪರೀಕ್ಷೆಗೆ ಸಿದ್ಧನಾಗಿದ್ದಾನೆ. ನಿನ್ನ ಅಭಿಪ್ರಾಯವೇನು? ಹೆಂಡತಿಯನ್ನು ಕರೆದುಕೊಂಡು, ಗಾದಶೆಟ್ಟಿಯನ್ನು ಬಿಡುತ್ತಿಯೋ ಹೇಗೆ ಎಂದು ಪಂಚಾಯ್ತಿ ಕೇಳಿತು. ಆ ಬಾಲಕ ನಿನ್ನನ್ನು ಸತ್ವಪರೀಕ್ಷೆ ಮಾಡುತ್ತಾನೆ. ನಿನ್ನಲ್ಲಿ ಸತ್ಯಸತ್ಯಾತೆಯನ್ನು ಅರಿಯಲು ಪರೀಕ್ಷೆಯಾಗಿದೆ. ಹೆಂಡತಿಯನ್ನು ಕರೆದುಕೊ, ಶೆಟ್ಟಿಯನ್ನು ಬಿಡು ಎಂದರು. ಮೊದಲ ಷರತ್ತಿನಂತೆ ಕ್ಯಾಸನೋನು ಪಂಚಾಯ್ತಿಯವರಿಗೆ ಈ ಬಾಲಕ ಹಸುಗಳನ್ನು ಕರೆದರೆ ನನ್ನ ಮಡದಿಯನ್ನು ಕರೆದುಕೊಳ್ಳುವ ಎಂದನು. ಸೋತರೆ ಸಾಯುವ ತನಕ ನಮ್ಮ ಮನೆಯಲ್ಲಿ ಈ ಬಾಲಕ ಜೀತದಾಳಾಗಿ ದುಡಿಯಬೇಕು. ಪಾಪನಾಯಕನು ಪಂಚಾಯ್ತಿಯ, ಹಿರಿಯರು ಹೇಳಿದಂತೆ ಕೇಳುವೆ ಎಂದು ಇದಕ್ಕೆ ಅಸತ್ಯನಾರಾಯಣ, ಶಿವಪಾರ್ವತಿ ಮತ್ತು ಆದಿಶೇಷನೇ ಸಾಕ್ಷಿ ಎಂದ. ಅದೇ ರೀತಿ ಕ್ಯಾಸನು ಒಪ್ಪಿ ಹೆತ್ತ ತಂದೆ – ತಾಯಿ, ಭೂದೇವಿ ಹಿರಿಯರಾದ ನಮ್ಮ ಪಾದಸಾಕ್ಷಿಯಾಗಿ ಒಪ್ಪಿ ನಡೆಯಲೆಂದನು.

ಇಬ್ಬರ ಅಭಿಪ್ರಾಯ ಪಡೆದ ನಂತರ, ನೀನಿನ್ನ ಬಾಲಕ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕೆಂದು, ಮುಂದೆ ನಡೆಯುವ ಕಾರ್ಯಕ್ಕೆ ಸಿದ್ಧತೆ ನಡೆಸಿದರು. ಪಾಪನಾಯಕ ಎಲ್ಲಾ ದೇವರುಗಳ ಮೇಲೆ ಆಣೆಮಾಡಿ ಹಿಡಿದ ಸಾಧನೆ ಪೂರೈಸುತ್ತೇನೆ, ಬಾಲಕನೆಂದು ಮೂದಲಿಸಬೇಡಿರೆಂದನು. ನೆರೆದ ಹಿರಿಯರಿಗೆ ದೀರ್ಘ ದಂಡ ನಮಸ್ಕಾರಗಳನ್ನು ಮಾಡಿ, ಅತ್ತೆಗೆ ಮುಗಿದು ಹೊತಟನು. ಇತ್ತ ಪಾಲಮ್ಮ ದೇವರೇ ಬಾಲಕನು ಹಟಮಾಡಿ ಪಂಥಕ್ಕೆ ಬಿದ್ದಿದ್ದಾನೆ. ಸೋತರೆ ಸಾಯುವತನಕ ಜೀತನಾಗಬೇಕು. ಪರಮಾತ್ಮನೇ ಅಳಿಯನಾಡಿದ ಮಾತು ಹುಸಿಯಾಗದಂತೆ ಮಾಡು. ಇಲ್ಲಿಯವರೆಗೆ ನಾನು ಸತ್ಯ, ಧರ್ಮ, ಪತಿವ್ರತಾಶಕ್ತಿಯಿಂದ ಇದ್ದುದೇ ನಿಜವಾದರೆ ನನ್ನ ಅಣ್ಣ ಕೊಟ್ಟ ಬಳುವಳಿಯ ಹಸುವಿನಿಂದ ಬೆಳೆದ ಹಸುಗಳ ಹಿಂಡೆಲ್ಲಾ ಅಳಿಯನ ಹತ್ತಿರ ಬಲರೆಂದು ದೇವರನ್ನು ಪ್ರಾರ್ಥಿಸಿದಳು.

ಪಾಪನಾಯಕನು ಅಡವಿಯ ಕಲ್ಲುಗುಂಡಿನ ಹತ್ತಿರ ಬಂದು ಮೊದಲು ದೇವರುಗಳನ್ನು ನೆನೆದು ಸತ್ಯತೆಯನ್ನು ಗಟ್ಟಿಮಾಡಿಕೊಂಡ. ನಂತರ ಕಲ್ಲುಗಂಡನ್ನು ಹತ್ತಿದ. ಕಾತುರರಾದ ಜನಗಳ ಸಹಸ್ರಾರು ದಂಡುಸೇರಿತು. ಎಲ್ಲರೂ ನೋಡುತ್ತಿದ್ದಂತೆ ಇವರು ಕಲ್ಲುಗುಂಡು ಹತ್ತಿ ಎಲ್ಲಾ ಕಡೆ ನೋಡಿದರೆ ಹಸುಗಳು ಕಾಣಲಿಲ್ಲ. ಮತ್ತೆ ನೋಡಲು ನಿಲುಕುವಷ್ಟು ದೂರದಲ್ಲಿ ಕಂಡವು. ನಾಯಕನು ನಾರಾಯಣ, ಗೋಪಾಲ ಎಂದು ನೆನೆದು ತಪಸ್ಸು ಮಾಡಿದರೂ ದರ್ಶನವಾಗುವುದು ಕಷ್ಟ. ಕೆಲವೇ ಸಂದರ್ಭದಲ್ಲಿ ನನಗೆ ದರ್ಶನ ನೀಡಿ ಮುಕ್ಕಡ ಅಲುಗನ್ನು ಕೊಟ್ಟೆ. ಅದರಿಂದ ನನ್ನ ಮಾವನ ದಂಡನ್ನು ಸೋಲಿಸಿದೆ. ಪಶು (ಪತಿ) ನಾಯಕನೇ ದರ್ಶನವಿತ್ತು ಹಸುಗಳನ್ನು ದರ್ಶನಮಾಡಿಸಿ ಅತ್ತೆಯ ಹಸುಗಳು ಕರೆದರೆ ಬರುವಂತೆ ಅನುಗ್ರಹಿಸೆಂದು ಮನದಲ್ಲಿ ಬೇಡಿಕೊಂಡ. ನಂತರ ದೇವರು ಪ್ರತ್ಯಕ್ಷನಾಗಿ ಚಿಂತಿಸಬೇಡ, ಅತ್ತೆಯ ಹೆಸರಿಡಿದು ಕರೆ ಎಲ್ಲವೂ ಬರುತ್ತವೆ ಎಂದು ಹೇಳಿ ಮರೆಯಾದ.

ಅವನಿಗೆ ದನಕರುಗಳು ಸ್ಪಷ್ಟವಾಗಿ ಕಂಡವು. ನಾನು ಕರೆದರೆ ನೀವೆಲ್ಲ ಬರಬೇಕೆಂದು ಎಲ್ಲ ದೇವರನ್ನು ಬೇಡಿದ. ಎಲ್ಲರಿಗೂ ಕೇಳುವಂತೆ ಅಮ್ಮ ಪಾಲಮ್ಮನ ಗೋಮಾತೆಯರೇ, ಎಲ್ಲಿದ್ದರೂ ನೀವು ಬೇಗ ಓಡಿಬಂದು ಸೇರಬೇಕು ಎಂದು ಕೂಗಿದನು. ಈ ಕೂಗು ಕೇಳಿದ ಪಾಲಮ್ಮನ ಹಸು ಕರುಗಳು ಸೆಟೆದು ನಿಂತವು. ಎರಡನೇ ಕೂಗಿಗೆ ಎಲ್ಲ ಹಸು – ಕರುಗಳು ಒಂದೊಂದಾಗಿ ಬಂದ ಒಂದೆಡೆ ಸೇರಿದವು. ಮುದಿ ಹಸುವೊಂದು ಪಾಪಿನಾಯಕನ ಕೂಗನ್ನು ಗಂಭೀರವಾಗಿ ಆಲಿಸುತ್ತಿತ್ತು. ದನಗಳು ಓಡೋಡಿ ಬಂದು ಸೇರುವುದನ್ನು ದನಗಾಹಿಗಳು ಕಂಡು ಚಿಂತಾಕ್ರಾಂತರಾದರು. ಕ್ಯಾಸನೋನ ಹಸುಗಳು ಮಾತ್ರ ಅಲ್ಲೇ ಮೆರೆಯುತ್ತಿದ್ದವು. ಪಾಲಮ್ಮನ ಹಸುಗಳ ಹಿಂದೆ ನಾಯಿಗಳಿದ್ದವು. ದನಗಾಹಿಗಳು ಗಂಗೆ, ಗೌರಿ, ಭದ್ರೆ ಎಂದು ಕರೆದರೂ ಬೆದರಿಸಿದರೂ ಹೋಗಲಿಲ್ಲ. ಶಬ್ದವನ್ನು ಆಲಿಸುತ್ತಿದ್ದವು. ಒಂದು ಮತ್ತು ಎರಡನೇ ಬಾರಿ ಕೂಗಿದಾಗ ಹಸುಗಳು ಹತ್ತಿರ ಬರಲಿಲ್ಲ. ಮೂರನೇ ಬಾರಿ ಕೂಗಿದಾಗ ಬರಲಿಲ್ಲವೆಂದರೆ ಶಿರಚ್ಛೇದನ ಮಾಡಿಕೊಳ್ಳುವೆ ಎಂದನು. ಕ್ಯಾಸನೋನು ತನ್ನ ಜನರೊಂದಿಗೆ ಈ ಹುಚ್ಚು ಹುಡುಗನಿಗೆ ಹಸುಗಳು ಬರೋಲ್ಲವೆಂದು ಹೇಳಿ ನಗುತ್ತಿದ್ದನು. ೩ನೇ ಕೂಗಿಗೆ ಬಾಲಗಳನ್ನೆತ್ತಿದ ಹಸು – ಕರುಗಳು ಜಿಗಿದು ಓಡಿಬಂದವು. ಮುಚ್ಚಿದ ಕಣ್ಣನ್ನು ತೆಗೆಯದೇ ಏಕಾಗ್ರಚಿತ್ತನಾಗಿದ್ದ ನಾಯಕ. ಹಸುಗಳ ಹಿಂದೆ ಕರುಗಳ ಹಿಂಡು ಬರುತ್ತಿತ್ತು. ಪಾಪನಾಯಕನು ನಿಂತ ಗುಂಡಿನ ಸುತ್ತ ಸೇರಿದವು. ಮುದಿಹಸುನಾಯಕನ ಹತ್ತಿರ ನಿಂತು ಅಂಬಾ ಎನ್ನುತ್ತಿತ್ತು. ನಂತರ ಎಲ್ಲ ಹಸುಗಳಿಗೆ ಸಾಷ್ಟಾಂಗ ನಮನಗಳನ್ನು ಮಾಡಿದ. ನನ್ನ ಪ್ರಾಣ ಕಾಪಾಡಿದ್ದೀರಿ ನಿಮಗೆನಾನು ಋಣಿ ಎಂದ. ದೇವರನ್ನು ಪ್ರಾರ್ಥಿಸಿ ಕರಿಯ ಕಂಬಳಿ ಕೋರಿಯನ್ನು ಹೆಗಲ ಮೇಲೆರಿಸಿಕೊಂಡು ಅಲಗನ್ನು ಸೊಂಟಕ್ಕೆ ಸಿಗಿಸಿಕೊಂಡು ಕೋಲು ಹಿಡಿದು ನಡೆದನು. ಮುಂದೆ ಪಾಪನಾಯಕ ನಡೆದರೆ ಹಿಂದೆ ಹಸುಗಳು ಹಿಂಬಾಲಿಸುತ್ತಿದ್ದವು. ಇದನ್ನು ಕಂಡ ಜನಸ್ತೋಮ ಈ ಬಾಲಕ ದೇವಮಾನವನೆಂದು ಕೊಂಡಾಡಿತು.

ಪಾಪನಾಯಕ ತನ್ನ ಜಯದ ಇಂಗಿತವನ್ನು ಪಂಚಾಯ್ತಿಗೆ ತಿಳಿಸಿದ. ಅದೇ ರೀತಿ ಕ್ಯಾಸನೋನಿಗೆ ಅವರು ಕೇಳಿದಾಗ ಅವನು ಹೆಂಡತಿಯನ್ನು ಕರೆದುಕೊಂಡು, ಗಾದಿಶೆಟ್ಟಿಯನ್ನು ಬಿಡುಗಡೆ ಮಾಡುವೆ. ನನ್ನ ಅಹಂಕಾರದಿಂದ ಮಾಡಿದ ಅಪರಾಧಗಳನ್ನು ಕ್ಷಮಿಸುವಂತೆ ಅಳಿಯನಲ್ಲಿ ಬೇಡುವೆ ಎಂದ ನಂತರ ಪಾಪನಾಯಕ ಗಳಗಂಟ ಗಾದಿಶೆಟ್ಟಿಯು ಸುಮಾರು ಇಪ್ಪತ್ತು ವರ್ಷಗಳು ವೃತ ದುಡಿದಿದ್ದಾನೆ. ಅವನಿಗೆ ಪರಿಹಾರ ರೂಪದಲ್ಲಿ ಅತ್ತೆಯ ಹಸುಗಳಲ್ಲಿ ಐವತ್ತನ್ನು ಕೊಡಲು ಮಾವ ಮತ್ತು ಅತ್ತೆಯ ಅನುಮತಿಯನ್ನು ಕೇಳಿದ. ಕ್ಯಾಸಾನೋನು ಉತ್ತಮ ಐವತ್ತು ಹಸುಗಳನ್ನು ಪಂಚಾಯ್ತಿ ಎದುರು ಕೊಟ್ಟ. ನಂತರ ಪಾಪನಾಯಕನಿಗೆ ಭೋಜನಮಾಡಿಸಿದ. ಹಿರಿಯರ, ಮಾವನ ಅಪ್ಪಣೆ ಪಡೆದು ತನ್ನ ಪೂರ್ವಸ್ಥಳಕ್ಕೆ ಹೋಗಲು ಅಲ್ಲಿಂದ ಬೀಳ್ಕೊಂಡನು. ಇವನು ಕ್ಯಾಸಪುರದಿಂದ ಬಂದವನೇ ತಂದೆತಾಯಿ ನಡೆದ ಪ್ರಸಂಗವನ್ನು ವಿವರಿಸಿದಾಗ ಅವರು ಆನಂದಿತರಾದರು. ನಂತರ ಮಗನನ್ನು ದೇವಮಾನವನೆಂದು, ಚಿರಂಜಿವಿಯಾಗಿರು ಎಂದು ಆಶೀರ್ವದಿಸಿದರು.

ಜಗಪತಿರಾಯ

ಇಂದಿನ ಜಗಳೂರು ಪಟ್ಟಣದಲ್ಲಿ ಹಿಂದೆ ಜಗಪತಿ ಎಂಬ ಅರಸ ರಾಜ್ಯಭಾರ ಮಾಡುತ್ತಿದ್ದ. ಅವನು ತನ್ನ ಪಟ್ಟಣದ ಸುತ್ತಲೂ ಕೋಟೆಗಳನ್ನು ಕಟ್ಟಿಸಿ, ನಾಲ್ಕು ದಿಕ್ಕಿಗೆ ನಾಲ್ಕು ಹೆಬ್ಬಾಗಿಲು ಕಂದಕ, ಕೊತ್ತಲು ನಾಲ್ಕು ಬತೇರಿಗಳನ್ನು ಕಟ್ಟಿ ಅಪಾರ ಸೈನಿಕರೊಂದಿಗೆ ಆಳ್ವಿಕೆ ನಡೆಸುತ್ತಿದ್ದ. ಇವನ ಅಧೀನದಲ್ಲಿ ರಾಜ್ಯಭಾರ ಮಾಡುತ್ತಿದ್ದವರಲ್ಲಿ ಕ್ಯಾಸನೋನು ಒಬ್ಬ. ಅಳಿಯನಿಗೆ ಸೋತ ಇವನು ಹಿಂದೆ ಕೊಡುತ್ತಿದ್ದಂತೆ ಕಪ್ಪಕಾಣಿಕೆಗಳನ್ನು ಜಗಪತಿರಾಯನಿಗೆ ಕೊಡಲಿಲ್ಲ. ಪಶು ಸಂಪತ್ತಿನ ಆಸೆಗಾಗಿ ಹೆಂಡತಿಯನ್ನು ಕರೆದುಕೊಂಡ. ಪಾಪನಾಯಕನೊಂದಿಗೆ ರಾಜಿಸಂಬಂಧ ಬೆಳೆಸಿದರೂ ಸೋಲಿನ ಕಹಿ ಮಾತ್ರ ಬೆಂಕಿಯಂತಿತ್ತು. ಜನರೆದುರು, ರಾಜನೆದುರು ತಲೆ ಎತ್ತಲು ನಾಚಿಕೆಯಾಯಿತು. ತಾನು ಸಾಯಬಾರದು, ಬೇರೆಯವರಿಗೂ ಗೊತ್ತಾಗಬಾರದ ಹಾಗೆ ಚಂಡಾಲ ಪಾಪನಾಯಕನನ್ನು ಮತ್ತೊಬ್ಬರಿಂದ ಕೊಲ್ಲಿಸುವ ಪ್ರಯತ್ನ ನಡೆಸಿದ. ಅವನೇ ಆ ಜಗಪತಿರಾಯನ ಮೂಲಕ ಪಾಪನಾಯಕನನ್ನು ಸಾಯಿಸಬೇಕೆಂದು ಸಂಚು ನಡೆಸಿದ.

ಜಗಪತಿರಾಯನು ಸಹಾ ಅಸಮಬಲಶಾಲಿಯಾಗಿದ್ದ. ಧೈರ್ಯ, ಶಕ್ತಿವಂತನಾಗಿದ್ದು, ಇವನಿಗೆ ಸೋತು ಅನೇಕ ಅರಸರು ಅಧೀನದಲ್ಲಿದ್ದರು. ಹೀಗಾಗಿ ಈ ಪಾಪನಾಯಕ ಯಾವ ಲೆಕ್ಕ ಎಂದ ಕ್ಯಾಸನೋನು. ಕುದುರೆ ಹತ್ತಿದ ಕ್ಯಾಸನೋನು ಜಗಪತಿರಾಯನು ದರ್ಭಾರು ನಡೆಸುತ್ತಿದ್ದ ಆಸ್ಥಾನಕ್ಕೆ ಬಂದಾಗ ಉಳಿದ ರಾಜರು ನಮಸ್ಕರಿಸಿ ಒಂದೆಡೆ ಕುಳಿತುಕೊಂಡರು. ಇವನು ಕಾಣಿಕೆ ಸಲ್ಲಿಸಿ, ನಮಸ್ಕರಿಸಿ ಕೈಕಟ್ಟಿಕೊಂಡು ನಿಂತಾಗ ರಾಜನ ಸೂಚನೆಯಂತೆ ಕುಳಿತ. ದರ್ಭಾರು ಮುಗಿದ ಕೂಡಲೇ ಎಲ್ಲಾ ಸಾಮಂತರಾಜರು ತಮ್ಮ ಊರುಗಳಿಗೆ ತೆರಳಿದರು. ಕ್ಯಾಸನು ಬಿಗಿಯಾಗಿ ಕುಂತಿದ್ದ. ಜಗಪತಿರಾಯ ಕೇಳಲಾಗಿ ಅವನು ಕಾಲಿಗೆ ಬಿದ್ದು ಕಣ್ಣೀರು ಸುರಿಸಿದ್ದ. ಆಗ ರಾಜನು ಕ್ಯಾಸನೋನೆ ನನ್ನ ಸಾಮಂತರೆಲ್ಲೆಲ್ಲಾ ವೀರಪರಾಕ್ರಮಿಯಾದ ನೀನು ಈ ರೀತಿ ದುಃಖಿಸಲು ಕಾರಣವೇನು? ಎಂದಾಗ ಪಾಪನಾಯಕನಿಗೂ ತನಗೂ ನಡೆದ ಪ್ರಸಂಗವನ್ನು ವಿವರಿಸಿದ. ‘ನನ್ನ ಗೌರವ, ಶೌರ್ಯ, ಧೈರ್ಯ ಮಣ್ಣುಪಾಲಾಯಿತು. ಬಾಲಕನಿಂದ ಅವಮಾನಿತನಾದ ನಾನು’ ಆತ್ಮಹತ್ಯೆಯೇ ಉತ್ತಮ ಮಾರ್ಗವೆಂದಿದ್ದಾನೆ. ತಾವು ಆ ಬಾಲಕನಿಗೆ ತಕ್ಕ ಶಾಸ್ತಿ ಮಾಡಿ ನನ್ನ ಮಾನ – ಮರ್ಯಾದೆಗಳನ್ನು ಕಾಪಾಡಬೇಕೆಂದು ಬೇಡಿದ.

ಜಗಪತಿರಾಯನಿಗೆ ಕ್ಯಾಸನೋನ ದುಃಖ ಅರ್ಥವಾಯಿತು. ಗಂಡುಗಲಿಗಳ ಗಂಡನಾದ ಇವನಿಗೆ ಈ ರೀತಿ ಆಗಬಾರದಿತ್ತು ಎಂದನು. ಆ ಚಿಂತೆಯನ್ನು ಬಿಟ್ಟು ನರ್ಭಯವಾಗಿರು, ಮುಂದಿನ ಕೆಲಸ ನಾನು ಮಾಡುವೆ ಎಂದು ಕಳುಹಿಸಿದನು. ಪಾಪನಾಯಕನಿಗೆ ಹಿಂದೆ ಮುಂದಿಲ್ಲ, ದಂಡು – ದಳವಿಲ್ಲ ಎಂದು ತಿಳಿಯಿತು. ಆ ಬಾಲಕ ಜಾದುಗಾರನೆ? ಪವಾಡ ಪುರುಷನೇ ಯಾರಿರಬಹುದೆಂದು ಅವನ ಇರುವಿಕೆಯನ್ನು ಪತ್ತೆ ಮಾಡಲು ರಾಜ ಆಳುಗಳನ್ನು ಕಳುಹಿಸಿದನು. ಅದರಂತೆ ಆಳುಗಳು ಕ್ಯಾಸಾಪುರಕ್ಕೆ ಹೋಗಿ ಕ್ಯಾಸನಿಂದ ಪಾಪನಾಯಕ ಯಾರು? ಯಾರ ಮಗ? ಹಿನ್ನೆಲೆ, ಸ್ಥಿತಿ – ಗತಿ ಎಲ್ಲಾ ವಿಚಾರಗಳನ್ನು ಕೇಳಿ ಬಂದು ರಾಜನಿಗೆ ತಿಳಿಸಿದರು.

ರಾಜ ಇಬ್ಬರು ಆಳುಗಳನ್ನು ಕರೆದು, ಪಾಪನಾಯಕನನ್ನು ಕರೆಸುವ ಪ್ರಯತ್ನ ಮಾಡಿದನು. ಸೋಲಿಸುವ, ಸಾಯಿಸುವ ತಂತ್ರದಲ್ಲಿ ನಿರತನಾಗಿ ಅರಮನೆಯ ಆಲೋಚನಾಗೃಹಕ್ಕೆ ತೆರಳಿ ಆಪ್ತರನ್ನು ಕರೆಸಿಕೊಂಡು ಯೋಜನಾತಂತ್ರವನ್ನು ರೂಪಿಸಿದ. ಇತ್ತ ಕೋರ‍್ಲಮಲ್ಲಿನಾಯಕ ಮತ್ತು ಬಾಳಪಟ್ಟಮ್ಮ ತನ್ನ ಮಗನ ಸಾಹಸವನ್ನು ಕಂಡು ಬೆರಗಾಗಿ ಆನಂದಪಟ್ಟರು. ತಂದೆ – ತಾಯಿಗಳಿಬ್ಬರೂ ಕೂಡಿ ಪಾಪನಾಯಕನಿಗೆ ಕ್ಯಾಸನೋನು ಸಾಮಾನ್ಯನಲ್ಲ, ನೀನು ಈ ರೀತಿ ಮಾಡಿರುವುದರಿಂದ ತುಂಬಾ ಅಪಮಾನವಾಗಿ ಸೇಡು ತೀರಿಸಿಕೊಳ್ಳಲು ಹವಣಿಸುತ್ತಾನೆ. ಪರರಿಂದಲಾದರೂ ಮಾಡಿಸುತ್ತಾನೆಂದು ಎಚ್ಚರಿಸಿದರು. ಪಾಪನಾಯಕನಿಗೆ ಸಾವು – ನೋವುಗಳ ಆತಂಕವಿರಲಿಲ್ಲ. ದೈವ ಸಂಭೂತನಾದ ಇವನು ಹುಟ್ಟಿದವನು ಸಾಯಲೇಬೇಕೆಂಬ ನಿಯಮಕ್ಕೆ ಸೇರಿದವನು. ತನ್ನ ಅದೃಷ್ಟದಲ್ಲಿದ್ದಂತೆ ಆಗುತ್ತದೆ. ಎಲ್ಲದಕ್ಕೂ ದೇವರಿದ್ದಾನೆ, ಚಿಂತೆ ಏಕೆ? ಎಂದು ತಂದೆತಾಯಿಗಳಿಗೆ ನಮಸ್ಕರಿಸಿ ಕಾಡಿಗೆ ನಡೆದ.

ಪಾಪನಾಯಕ ಕಾಡಿಗೆ ಹೋದನಂತರ ಕೋರ‍್ಲಮಲ್ಲಿನಾಯಕ ಬಾಳಪಟ್ಟಮ್ಮ ಇಬ್ಬರೂ ತಮ್ಮ ಕುಟೀರದ ಮುಂದಿನ ಮರದಡಿಯಲ್ಲಿ ಕುಳಿತಿದ್ದರು. ರಾಜನು ಕಳುಹಿಸಿದ ಇಬ್ಬರು ಆಳುಗಳು ಬಂದು ಅವರ ಮುಂದೆ ನಿಂತರು. ಕೋರ‍್ಲಮಲ್ಲಿನಾಯಕ ಯಾರಪ್ಪ ನೀವು ಎಂದಾಗ ಆಳುಗಳು ಸೂರ್ಯಪಾಪನಾಯಕನ ತಂದೆ – ತಾಯಿಗಳ ನೀವೆ ತಾನೆ. ಹೌದು ಎಂದು ವಿಚಾರಿಸಿದರು. ಏಕೆ ನಮ್ಮಿಂದ ಏನಾಗಬೇಕು? ಎಂದು ಕೇಳುವಾಗಲೇ ಪಟ್ಟಣದವರಂತೆ ಕಾಣುವ ಇವರ ಪರಿನೋಡಿ ದಂಪತಿಗಳಿಬ್ಬರೂ ಗಾಬರಿಗೊಂಡರು. ನಮ್ಮನ್ನು ನೋಡಿ ಹೆದರಬೇಡಿ, ನಾವು ಪಟ್ಟಣಿಗರು, ನೀವು ಕಾಡು ಜನರು ಆದರೆ ಇಬ್ಬರೂ ಮನುಷ್ಯರು ತಾನೆ ಎಂದರವರು. ಆದರೂ ಇವರಿಗೆ ಕ್ಯಾಸನೋನ ಮೇಲೆ ಅನುಮಾನವಿತ್ತು, ಆದ್ದರಿಂದ ಅತಿಯಾದ ಹೆದರಿಕೆಯಾಯಿತು. ನಂತರ ಅವರು ನಾವು ಜಗಳೂರು ಜಗಪತಿರಾಜನ ಆಳುಗಳು ನಿಮ್ಮ ಕುಮಾರನನ್ನು ರಾಜನಿಗೆ ನೋಡಬೇಕೆಂಬ ಆಸೆಯಿದೆ, ನೀವು ಹೆದರುವ ಅಗತ್ಯವಿಲ್ಲ. ಪಾಪನಾಯಕ ಎಲ್ಲಿ ಎಂದಾಗ ಮಲ್ಲಿನಾಯಕ ಕಾಡಿಗೆ ಹೋಗಿದ್ದಾನೆಂದು ಹೇಳುತ್ತಾನೆ.

ಇಬ್ಬರು ಆಳುಗಳು ‘ನಾಳೆ ಪಾಪನಾಯಕನನ್ನು, ಜಗಳೂರು ಜಗಪತಿರಾಜನ ಹತ್ತಿರ ಕಳುಹಿಸಿರಿ, ಆಜ್ಞೆಯಾಗಿದೆ’ ಎಂದು ಹೇಳಿಬಂದರು. ಕೋರ‍್ಲಮಲ್ಲಿನಾಯಕ ಬಾಳದ ಪಟ್ಟಮ್ಮ ಜಗಪತಿರಾಯ ಏಕೆ ಕರೆಸಿರಬೇಕು ಕ್ಯಾಸನೋನು ಏನಾದರೂ ತಂತ್ರ ಹೂಡಿರಬಹುದೆಂದು ಚಿಂತಿಸಿದರು. ಸಂಜೆ ಮನೆಗೆ ಬಂದ ಪಾಪನಾಯಕನಿಗೆ ತಂದೆತಾಯಿಗಳಿಬ್ಬರೂ ‘ಜಗಪತಿರಾಜನು ಜಗಳೂರಿಗೆ ಬರಲು ಹೇಳಿ ಕಳುಹಿಸಿದ್ದಾನೆ’ ಎಂಬ ಆಳುಗಳ ವಿಚಾರವನ್ನು ತಿಳಿಸಿದರು. ಪಾಪನಾಯಕನಿಗೂ ಸಹಾ ಯೋಚನೆಯಾಯಿತು. ನನ್ನ ಮಾವ ಕ್ಯಾಸನು ಈ ರೀತಿ ದೂರು ಸಲ್ಲಿಸಿರಬೇಕು ಎಂದು ಆಲೋಚಿಸಿದ. ಬೆಳಿಗ್ಗೆ ಜಗಪತಿರಾಯನ ಹತ್ತಿರ ಹೋಗುವುದಾಗಿ ತಂದೆತಾಯಿಗಳಿಗೆ ಹೇಳಿದ.

ತಂದೆ – ತಾಯಿಗಳಿಬ್ಬರೂ ಏನಾದರೂ ಸಂಭವಿಸಬಹುದೆಂದು ಹೋಗುವುದನ್ನು ತಡೆದರು. ಹೋಗುವುದು ಕಷ್ಟ ಇರುವುದು ಕಷ್ಟವೆಂದು ಸಂಕಟಪಟ್ಟರು. ಪಾಪನಾಯಕ ಮೂರನೇ ದಿನ ಜಗಳೂರಿಗೆ ಹೊರಟು, ಎಲ್ಲದಕ್ಕೂ ಸಿದ್ಧನಾಗಿದ್ದನು. ಸ್ನೇಹಕ್ಕೆ ಸ್ನೇಹ ವಿರೋಧಕ್ಕೆ ಮುಕ್ಕಡ ಅಲುಗಿನಿಂದ ಧ್ವಂಸ ಮಾಡುವೆ ಎಂದನು.

ಜಗಳೂರಿನ ಜಗಪತಿರಾಯನು ಆ ಕಾಡು ಬಾಲಕನನ್ನು ಸರ್ವ ಪ್ರಯತ್ನದಿಂದ ಕೊಲ್ಲಬೇಕೆಂದು ತಿಳಿಸಿದ. ಕ್ಯಾಸನಿಗೆ ಕೊಟ್ಟ ಮಾತು ಉಳಿಸಬೇಕೆಂದನು. ತನ್ನ ಆಳುಗಳಿಂದ ಪಟ್ಟಣದ ಮೂರುಕೋಟೆ ಬಾಗಿಲುಗಳನ್ನು ಮುಚ್ಚಿಸಿದ, ಕೋಟೆಯ ಹೊರಭಾಗದ ಕಂದಕದಲ್ಲಿ ಸುತ್ತಲೂ ಕತ್ತಿಗಳನ್ನು ಇಡಿಸಿದ. ದಂಡಿಗೆ ಎಲ್ಲ ಪೂರ್ವಸಿದ್ಧತೆ ಹೇಳಿ, ಪೂರ್ವದಿಕ್ಕಿನ ಕೋಟೆಯ ಬಾಗಿಲಿನಲ್ಲಿ ತಳವಾರನೊಬ್ಬನನ್ನು ನಿಲ್ಲಿಸಿ ಸೂರ್ಯ ಪಾಪನಾಯಕನು ಬಂದ ಕೂಡಲೇ ಅವನನ್ನು ಒಳಗೆ ಬಿಟ್ಟು ಕೋಟೆಯ ಬಾಗಿಲು ಮುಚ್ಚಿರೆಂದು ಹೇಳಿದನು. ಸ್ವಲ್ಪ ಸಮಯದ ನಂತರ ದ್ವಾರಪಾಲಕನೊಬ್ಬ ಬಂದು ಪಾಪನಾಯಕ ಬರುವ ಸಂಗತಿ ತಿಳಿಸಿದ. ರಾಜನು ತನ್ನ ದಂಡಿಗೆ ಭಟ್ಟರಿಗೆ ಪಾಪನಾಯಕ ಕೋಟೆಗೆ ಬಂದ ಮೇಲೆ ಅವನ ಕೈಕಾಲುಗಳನ್ನು ತುಂಡುತುಂಡು ಮಾಡಿರೆಂದು ಹೇಳಿದಾಗ ಅವರು ಕೋಟೆ ದ್ವಾರದ ಪಕ್ಕದಲ್ಲಿ ಕಾಯುತ್ತಿದ್ದರು. ಪಾಪನಾಯಕ ಮುತ್ತಿನ ಕಾಲುಪೆಂಡೆಯನ್ನು ಕಾಲಲ್ಲಿ ಧರಿಸಿ ಮುಕ್ಕಡಲ ಅಲಗನ್ನು ಸೊಂಟದಲ್ಲಿ ಧರಿಸಿಕೊಂಡು ಜಗಪತಿರಾಯನ ಕೋಟೆಗೆ ಪ್ರವೇಶಿಸಿದ. ತಳವಾರು ಇವನನ್ನು ಒಳಗೆ ಬಿಟ್ಟ ಕೋಟೆಬಾಗಿಲು ಭದ್ರಪಡಿಸಿ ಅವನೊಂದಿಗೆ ನಡೆದ. ಭಟ್ಟರು ಬಂದು ಪಾಪನಾಯಕನ ಮೇಲೆ ಎರಗಿದರು. ದೇವರನ್ನು ನೆನೆದು ತನ್ನ ಅಲಗಿನಿಂದ ಎಲ್ಲರನ್ನು ಧ್ವಂಸಮಾಡಿದ ಪಾಪನಾಯಕ, ದಂಡುದಳದ ನಾಶ ಕಂಡು ಹೆದರಿದ ರಾಜನ ಭಟ್ಟರು ನಾಲ್ಕು ಕಡೆಯಿಂದ ಮುತ್ತಿಗೆ ಹಾಕಿದರು. ಇವನೊಬ್ಬನೆ, ದಂಡಿನವರು ಮಾತ್ರ ಸಹಸ್ರಾರು ನೆರೆದಿದ್ದರು. ಪಾಪನಾಯಕನ ಹೊಡೆತಕ್ಕ ತತ್ತರಿಸಿ ಅನೇಕ ಜನ ಕಾಲ್ಕಿತ್ತರು.

ಜಗಪತಿರಾಯನು ಸುತ್ತುಗಟ್ಟಿರೆಂದು ಆಜ್ಞೆಮಾಡಿದ. ದಂಡಿನವರಿಗೆ ಆ ಧೈರ್ಯ ಬರಲಿಲ್ಲ. ಪಪನಾಯಕನು ಇವರ ಕೈಯಿಂದ ತೊಂದರೆ ಪಡುವುದು ಬೇಡವೆಂದು ಕಾಡಿಗೆ ಹೋಗಲು ನಿರ್ಧರಿಸಿದ. ಕೋಟೆಯ ಮೇಲಿಂದ ಕೆಳಗೆ ಹಾರಿ ಕಂದಕದಲ್ಲಿ ಬಿದ್ದ. ರಾಜನು ಮೊದಲೇ ಏರ್ಪಡಿಸಿದ್ದ ಕಂದಕದಲ್ಲಿ ನೆಟ್ಟ ಕತ್ತಿಗಳ ಮೇಲೆ ಬಿದ್ದಾಗ ಮೊಳಕಾಲು, ಚಿಪ್ಪುಗಳು ಒಡೆದು ಹೋದವು. ಪಯಣಿಸಲು ಆಗಲಿಲ್ಲ. ಅಲ್ಲೇ ಬಿದ್ದು ದೇವರನ್ನು ಪ್ರಾರ್ಥಿಸಿದ. ನಾರಾಯಣ, ಪರಶಿವ, ಆದಿಶೇಷನನ್ನು ಸ್ಮರಿಸಿ ಭೂತಾಯಿ ಗರ್ಭದಲ್ಲಿ ಅಡಗಿಕೊಳ್ಳಲು ಅವಕಾಶ ಕೇಳಿದನು. ಆಗ ಕಾಲಲ್ಲಿದ್ದ ಮುತ್ತಿನಕಾಲು ಪೆಂಡೆಯನ್ನು ಬಿಚ್ಚಿ, ಮುಕ್ಕಡ ಅಲುಗನ್ನು ಒಂದೆಡೆ ಇಟ್ಟ. ಎರಡು ಕೈ ಜೋಡಿಸಿ ತಪಸ್ಸು ಮಾಡಲು ನಿರತನಾದ, ಆಗ ಭೂದೇವಿ ಬಿರುಕು ಬಿಡಲು ನಾಯಕನು ಆ ಬಿರುಕಿನಲ್ಲಿ ಇಳಿದು ಭೂತಾಯಿಯ ಗರ್ಭದಲ್ಲಿ ಐಕ್ಯನಾದನೆಂಬ ಪ್ರತೀತಿಗಳಿವೆ.

ಪಾಪನಾಯಕನ ಕೊನೆಯ ದಿನಗಳು

ಹೋದ ಮಗ ರಾತ್ರಿಯಾದರೂ ಬರಲಿಲ್ಲವೆಂದು ಕೋರ‍್ಲಮಲ್ಲಿನಾಯಕನಿಗೆ ಆತಂಕವಾಯಿತು. ಕ್ಯಾಸನೋನು ನನ್ನ ಮಗನಿಗೆ ತೊಂದರೆ ಕೊಟ್ಟಿರಬಹುದೆಂದು ಅಣ್ಣನಾದ ದೊರೆ ಯರಮಂಚಿನಾಯಕನ ಬಳಿ ಹೋದ. ಅಂದು ಬೇಡರು ಜಗಳೂರು ಪಟ್ಟಣದಿಂದ ಆಂಧ್ರದ ರಾಯದುರ್ಗ, ವೇದಾವತಿ ನದಿ ತೀರದವರೆಗೂ ವಿಸ್ತಾರಗೊಂಡಿದ್ದರು. ತಲೆಮಾರುಗಳಿಂದಲೂ ಯರಮಂಚಿ (ಎರಿಮಿಂಚು – ಕೆಂಪು ಬೆಳಕು) ನಾಯಕನ ವಂಶಸ್ಥರು ದೊರೆತನವನ್ನು ಪರಿಪಾಲಿಸುತ್ತಾ ಬಂದಿದ್ದರು. ಸದ್ಗುಣ ಸಂಪನ್ನ, ವಾಕ್‌ಶುದ್ದಿಯುಳ್ಳ ನಾಯಕನಿಗೆ ಎಲ್ಲಾ ಬೇಡರನ್ನು ಒಂದೆಡೆ ಕೂಡಿಸಬೇಕೆನ್ನುವ ಹಂಬಲವಿತ್ತು. ಜಾತಿ ಬಹಿಷ್ಕೃತರಾದವರನ್ನು ಗೋಮೂತ್ರ ಸಿಂಪಡಿಸಿ ಕುಲಕ್ಕೆ ಸೇರಿಸಿಕೊಳ್ಳುತ್ತಿದ್ದ. ಹೀಗಾಗಿ ನಡುಗಡ್ಡೆಯ ಮೇಸೋಬೇಡರೆಲ್ಲಾ ಯರಮಂಚಿನಾಯಕನನ್ನು ದೊರೆಯನ್ನಾಗಿ ಮಾಡಿಕೊಂಡು ಅವನ ಆಜ್ಞೆಯಂತೆ ಇದ್ದರು. ಗುಡಿಕಟ್ಟುಗಳು, ಕಟ್ಟೆಮನೆಗಳು, ಪೆಟ್ಟಿಗೆ ದೇವರುಗಳು, ಕುಲ – ಗೋತ್ರಗಳು, ಆಚಾರ – ವಿಚಾರಗಳನ್ನು ಹೊಸದಾಗಿ ಚಾಲ್ತಿಗೆ ತಂದು ಶಾಂತಿ, ಶಿಸ್ತು, ಪರಿಪಾಲಿಸುತ್ತಿದ್ದರು.

ಕೋರ‍್ಲಮಲ್ಲಿನಾಯಕ ಮಗ ಬಾರದಿರುವ ಸಂಗತಿ ಹಿಂದೆ ನಡೆದ ಪ್ರಸಂಗವನ್ನು ದೊರೆಗೆ ತಿಳಿಸಿದನು. ಆಗ ದೊರೆಯೊಂದಿಗೆ ಕೋರ‍್ಲಮಲ್ಲಿನಾಯಕ, ಬಾಳೇಪಟ್ಟಮ್ಮ ಇತರೆ ಅನೇಕ ಮಂದಿ ಜಗಳೂರಿಗೆ ಬಂದರು. ಎಲ್ಲಾ ಕಡೆ ಶೋಧನೆ ನಡೆಸಿದರು. ಪಾಪನಾಯಕ ಪತ್ತೆಯಾಗಲಿಲ್ಲ. ಕೊನೆಗೆ ಪಶ್ಚಿಮ ದಿಕ್ಕಿನ ಕಡೆ ನಡೆದಾಗ ಮುತ್ತಿನ ಕಾಲುಪೆಂಡೆ, ಮುಕ್ಕಡ ಅಲುಗುಕೋರಿ ಕಾಣಿಸತೊಡಗಿದವು. ಹಾಗೇ ನೋಡಿದಾಗ ಯರಮಂಚಿನಾಯಕನ ಕಣ್ಣಿಗೆ ಭೂಮಿ ಬಿರುಕು ಬಿಟ್ಟಿದನ್ನು ಕಂಡು, ಪಾಪನಾಯಕ ಭೂಮಿಯಲ್ಲಿ ಐಕ್ಯನಾಗಿದ್ದಾನೆಂದು ಅಲ್ಲಿ, ಸಮಾಧಿ ನಿರ್ಮಿಸಿ, ಮುಕ್ಕಡ ಅಲಗನ್ನು ನೆಟ್ಟ. ಅಲ್ಲಿಯೇ ಒಂದು ಗುಡಿಯನ್ನು ಕಟ್ಟಿಸಿ ಅದರ ಬಾಗಿಲನ್ನು ಯಾರು ತೆಗೆಯದಂತೆ ಹೇಳಿದ. ಹೊರಗಿನಿಂದಲೇ ಪೂಜಾ ಕಾರ್ಯಗಳನ್ನು ಪೂರೈಸಿಕೊಳ್ಳಬೇಕಾಗಿತ್ತು. ಯಾರಾದರೂ ನಾಯಕನು ಸಮಾಧಿ ಸ್ಥಳಕ್ಕೆ ಹೋಗಬೇಕಾದರೆ ಎರಡು ಕಣ್ಣುಗಳನ್ನು ಮುಚ್ಚಿಕೊಳ್ಳಬೇಕಾಗಿತ್ತು.

[1]

ಮುತ್ತಿನ ಕಾಲುಪೆಂಡೆಯನ್ನು ನಾರಾಯಣನ ಅವತಾರಿ ಕಂಪಳರಂಗಸ್ವಾಮಿಗೆ ಅರ್ಪಿಸಿದ. ಆಗಿನಿಂದ ಈ ನಡುಗಡ್ಡೆ ಮ್ಯಾಸಬೇಡರು ಒಂದು ವರ್ಷ, ಮೂರು ವರ್ಷಕ್ಕೊಮ್ಮೆ ಪಾಪನಾಯಕನ ಸಮಾಧಿ ಸ್ಥಳಕ್ಕೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಯಾರು ಸಮಾಧಿ ಸ್ಥಳದ ಬಾಗಿಲು ತೆಗೆಯುವುದಿಲ್ಲ, ತೆಗೆದರೆ ಕಣ್ಣುಗಳು ಹೋಗುತ್ತವೆಂಬ ನಂಬಿಕೆಯಿತ್ತು. ಜೆ.ಆರ್. ಹಾಲಸ್ವಾಮಿ ಇಲ್ಲಿನ ಶಾಸಕರಾಗಿದ್ದ ಅವಧಿಯಲ್ಲಿ ಉತ್ತರ ಪ್ರದೇಶದ ಕಪಟ ಸನ್ಯಾಸಿಯೊಬ್ಬರು ಇದರ ಬಾಗಿಲನ್ನು ತೆಗೆದರು. ಅಲ್ಲಿ ಯರಮಂಚಿನಾಯಕ ನೆಟ್ಟಿದ್ದ ಮುಕ್ಕಡ ಅಲಗು ಕಾಣಲಿಲ್ಲ. ಜಗಳೂರಲ್ಲಿ ಪಾಪದೇವರೆಂದು, ಜಗಳೂರು ಪರಿಸರದಲ್ಲಿ ಜಗಳೂರಜ್ಜನೆಂದು ಕರೆಯುತ್ತಾರೆ. ಚಳ್ಳಕೆರೆಗೆ ಸಮೀಪದಲ್ಲಿ ಪುಣ್ಯಕ್ಷೇತ್ರವಿದ್ದು, ಪ್ರತಿನಿತ್ಯ ಪೂಜಾಕಾರ್ಯಗಳು ನಡೆಯುತ್ತವೆ. ಅದು ಹಿಂದೆ ಬಾಲಕನಾಗಿದ್ದಾಗ ಏಳೆಡೆ ಸರ್ಪ ದರ್ಶನಕೊಟ್ಟ ಸ್ಥಳ. ಹುತ್ತ ಇಂದಿಗೂ ಇದೆ. ಈ ಸಮಾಧಿಗೆ ಬಂದು ಹೋಗುವ ಭಕ್ತರು ದೇವಾಲಯ ನಿರ್ಮಿಸಿದ್ದಾರೆ. ಸಮೀಪದಲ್ಲಿ ಹರಿಯುವ ಹಳ್ಳಕ್ಕೆ ಒಂದು ಕೆರೆಯನ್ನು ಕಟ್ಟಲಾಗಿದೆ. ಪ್ರತಿ ಸೋಮವಾರ ಪರವು ಮಾಡುವುದನ್ನು ನೋಡಬಹುದು. ಪಾಪನಾಯಕನಿಗೆ ಕುರಿ, (ಕೋಳಿ) ಗಳನ್ನು ಬಲಿಕೊಡುವುದು ಹೆಚ್ಚು. ಹುತ್ತದ ಸಮಾಧಿ ಅಕ್ಕಪಕ್ಕ ಸಣ್ಣ – ಪುಟ್ಟ ಕಲ್ಲುಗುಡ್ಡಗಳಿವೆ. ಮರಗಿಡಗಳನ್ನು ಬೆಳೆಸುವ ಕಾರ್ಯಗಳು ಇತ್ತೀಚಿಗೆ ನೆಡೆಯುತ್ತಿವೆ. ಬೇಡರಲ್ಲಿ ಹುಟ್ಟಿ ಪವಾಡ ಪುರುಷನಾದರೂ ಬೇಡ ಜನಾಂಗಕ್ಕೆ ಪಾಪಯ್ಯ ಸೀಮಿತವಾಗಲಿಲ್ಲ. ಎಲ್ಲ ಮತ, ಧರ್ಮ, ಪಂಥದವರು ಪೂಜಿಸುತ್ತಾರೆ. ಜಗಳೂರಜ್ಜನಿಗೆ ಪ್ರತಿಯೊಂದು ಜನಾಂಗದಲ್ಲಿ ಭಕ್ತರಿದ್ದಾರೆ. ಚಳ್ಳಕೆರೆಯಲ್ಲಿ ಪವಾಡ ನಡೆಯುತ್ತದೆ. ಭಕ್ತರ ಅನುಕೂಲಕ್ಕಾಗಿ ಕಲ್ಯಾಣಮಂಟಪ, ಇತರೆ ಮಂಟಪಗಳನ್ನು ಕಟ್ಟಿಸಿದ್ದಾರೆ. ಜಗಳೂರಜ್ಜನ ಕಥೆಯನ್ನು ಮೊಳಕಾಲ್ಮೂರು, ಚಳ್ಳಕೆರೆ ಮತ್ತು ಜಗಳೂರು ತಾಲೂಕುಗಳಲ್ಲಿ ಹೇಳುತ್ತಾರೆ. ಜಗಳೂರು ತಾಲೂಕಿನ ಕಾನನಕಟ್ಟೆ ಗ್ರಾಮದ ಮಹದೇವಪ್ಪ ಎಂಬ ವೃದ್ಧನು ಕಥೆ ಹೇಳುತ್ತಿದ್ದ, ಕೆಲವೇ ವರ್ಷಗಳ ಹಿಂದೆ ಆತ ತೀರಿಕೊಂಡನು. ಈಗ ಈ ನಾಯಕನ ಬಗ್ಗೆ ನಿಖರವಾಗಿ ಕಥೆ ಹೇಳುವವರೇ ವಿರಳ. ಕಾನಕಟ್ಟೆಯ ನಿವೃತ್ತ ಶಿಕ್ಷಕ ತಿಪ್ಪನಾಯಕ (ಎಸ್.ಬಿ) ಅವರು ಜಗಳೂರಜ್ಜನ ಬಗ್ಗೆ ಮಾಹಿತಿ ಹೊಂದಿದ್ದು, ಸುಲಭವಾಗಿ ವಿಶ್ಲೇಷಿಸುತ್ತಾರೆ.

ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿರುವ ಪಾಪನಾಯಕ ದೇವಾಲಯ, ಕೋಟೆ, ಪಾದಕಟ್ಟೆ, ಸಮಾಧಿ, ವೀರಗಲ್ಲು ಮೊದಲಾದ ಪ್ರಾಚ್ಯಾವಶೇಷಗಳ ಸಮಚ್ಚಯವನ್ನು ಈ ಪ್ರದೇಶದಲ್ಲಿ ನೋಡಬಹುದು. ಈ ಊರಿನ ಜನರು ಜಾತಿಭೇದವಿಲ್ಲದೆ ಪ್ರತಿಯೊಬ್ಬರೂ ಈತನನ್ನು ಪೂಜಿಸುವರು. ಓಬಯ್ಯ ಎಂಬ ಪೂಜಾರಿ ಈ ದೇವಾಲಯದ ಪ್ರತಿಯೊಂದು ಜವಾಬ್ದಾರಿಯನ್ನು ಕೈಗೊಂಡಿದ್ದಾರೆ.

ಜಗಳೂರಜ್ಜನ ಗದ್ದುಗೆ, ಜಗಳೂರು


[1] ಇಂದಿಗೂ ಕೋಟೆ, ಕಂದಕ, ಪಾದಕಟ್ಟೆ, ಗದ್ದಿಗೆ, ತಪಸ್ಸಿನ ಸ್ಥಳಗಳು, ಇತರ ಅವಶೇಷಗಳನ್ನು ಜಗಳೂರಿನ ಪಶ್ಚಿಮ ಭಾಗದ (ವಾಯುವ್ಯ) ಕೆರೆಯ ಬದಿಯಲ್ಲಿ ಕಾಣಬಹುದು. ಬೇಟೆ ಕಡಿದರೆ ಮೊದಲು ಮೊಣಕಾಲು ಕಡಿದು ಬೇಟೆಯನ್ನು ೩ ಹೆಜ್ಜೆ ನಡೆಸಿ ಆನಂತರ ತಲೆ ಕಡಿಯುತ್ತಾರೆ.

ಎರಡು ವರ್ಷಗಳ ಕಾಲ ಪಿ.ಯು.ಸಿ. ವಿದ್ಯಾಭ್ಯಾಸ ಮಾಡುವಾಗ ನಾನು ಜಗಳೂರಜ್ಜನ ಗುಡಿಗೆ ಹೋದರೂ ದೇವರ ಮೂರ್ತಿಯನ್ನು ನೋಡಲಿಲ್ಲ. ದಿನಂಪ್ರತಿ ಎರಡೂ ಬಾರಿ ಗುಡಿ ಹತ್ತಿರ ಕುಳಿತುಕೊಳ್ಳುತ್ತಿದ್ದೆ. ಇಲ್ಲಿನ ಲಿಂಗಾಯತರು ಇದರ ಪರಮಭಕ್ತರು. ಹೊರಕೆರೆಯ ಸಾಕಮ್ಮಜ್ಜಿ, ನಿಂಗಮ್ಮಜ್ಜಿ ಮೊದಲಾದವರು ನನಗೆ ಆಗಲೇ ಈತನ ಕಥೆಯನ್ನು ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಂಡಿರುವೆ. ಅವರಿಗೆ ಕೃತಜ್ಞತೆಗಳು.