.ಪೆದ್ದಯ್ಯ (ಯರಮಂಚಯ್ಯ)

ಹಿನ್ನೆಲೆ

ಯರಮಂಚಯ್ಯನ ವಂಶಸ್ಥನಾದ ಪೆದ್ದಯ್ಯ ಮ್ಯಾಸಬೇಡರ ಒಬ್ಬ ವೀರ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ ನೇತ್ರನಹಳ್ಳಿ ಪರಿಸರದಲ್ಲಿ ಈತನೊಬ್ಬ ದನಗಾಹಿಯಾಗಿದ್ದ. ಮಂದಲವಾರು ಗೋತ್ರಕ್ಕೆ ಸೇರಿದ ಕರಿನಾರು ಬೆಡಗಿನವರು.

[1] ಈತನನ್ನು ಸ್ಥಳೀಯರು ಪೆದ್ದಯ್ಯ (ತಾತಯ್ಯನ ಗುಡಿ) ಎಂದು ಕರೆಯುತ್ತಾರೆ. ಇವನ (ಖಾಸ) ನೇರ ಸಂತತಿ ಇಲ್ಲವಾದರೂ ಸಹೋದರ ಸಂತತಿ ಬೆಳೆದುಬಂದಿದೆ. ಈವರೆಗೆ ಯರಮಂಚಯ್ಯನೆಂದು ತಪ್ಪಾಗಿ ಈತನನ್ನು ಕರೆಯಲಾಗುತ್ತಿತ್ತು. ಶಾಸನದಲ್ಲಿ ಪೆದ್ದಯ್ಯನೆಂದು ಉಲ್ಲೇಖಿಸಲಾಗಿದೆ.[2]

ವೀರನ ಸಾಧನೆ

ಇಪ್ಪತ್ತನೆ ಶತಮಾನದ ಆರಂಭದಲ್ಲಿ ಪೆದ್ದಯ್ಯ ಬದುಕಿ ಬಾಳಿದ ಕಾಲಾವಧಿ. ಕುರಿಮಂದೆಗೆ ಬಂದು ಧಾಳಿ ಮಾಡಿದ ಚಿರತೆಯನ್ನು (ಹುಲಿ?) ಹಟ್ಟಿಯ ವೀರ ಪೆದ್ದಯ್ಯನು ಕೋನಸಾಗರ ಗುಡ್ಡದ ಹತ್ತಿರ ಕಲ್ಲಿನಿಂದ ಕಾದಾಡಿ ಕೊಂದು ತಾನು ಸಹ ಹತನಾದನು. ಈ ಸ್ಮರಣಾರ್ಥ ವೀರಗಲ್ಲನ್ನು ನೆಡಲಾಗಿದೆ. ಪಿತೃ ಆರಾಧನೆಗೆ ಭವ್ಯ ಇತಿಹಾಸವಿರುವ ಭಾರತದಲ್ಲಿ ಬೇಡರು ಇಂದಿಗೂ ಈ ಪದ್ಧತಿಯನ್ನು ಉಳಿಸಿಕೊಂಡು ಬಂದಿರುವುದನ್ನು ಗಮನಿಸಬಹುದು. ಈ ವೀರನ ವೀರಗಲ್ಲಿನ ಬಗ್ಗೆ ಡಾ. ಆರ್. ಶೇಷಶಾಸ್ತ್ರಿ ಅವರು ’ಕೋನಸಾಗರದ ಎರಮಂಚಯ್ಯನ ವೀರಗಲ್ಲಿನ ಶಿಲ್ಪ ತೀರಾ ಸಾಧಾರಣವೇ ಆಗಿದ್ದರೂ, ಬೇಟೆಯನ್ನು ತುಂಬಾ ಸಹಜವಾಗಿ ಶಿಲ್ಪಿ ಬಿಡಿಸಿದ್ದಾನೆ. ಯರಮಂಚಯ್ಯನ ಮೇಲೆ ಎರಗಿದ ಚಿರತೆ, ಅದನ್ನು ಧೈರ್ಯದಿಂದ ಎದುರಿಸುತ್ತಿರುವ ಯರಮಂಚಯ್ಯ ಅವನಿಗೆ ಸಹಾಯ ಮಾಡಲು ಚಿರತೆಯ ಮೇಲೆ ಆಕ್ರಮಣ ಮಾಡಲು ನೆಗೆಯುತ್ತಿರುವ ನಾಯಿಗಳ ಚಿತ್ರ ಪರಿಣಾಮಕಾರಿಯಾದ ರೀತಿಯಲ್ಲಿ ಮೂಡಿಬಂದಿದೆ ಎಂದಿದ್ದಾರೆ.[3]

ವೀರಗಲ್ಲಿನ ವಿವರ

ಮೊಳಕಾಲ್ಮುರು ತಾಲೂಕಿನ ಕೋನಸಾಗರ ಕೆರೆಯ ಅಂಗಳದಲ್ಲಿರುವ ನೇರ‍್ಲಹಳ್ಳಿ ಗ್ರಾಮಕ್ಕೆ ಸೇರಿದ ಕಪ್ಪಡಬಂಡಹಟ್ಟಿ ಪಕ್ಕದಲ್ಲಿ ಈ ವೀರಗಲ್ಲಿದೆ. ವೀರಗಲ್ಲನ್ನು ಸಣ್ಣದಾದ ಕಲ್ಲುಬಂಡೆಗಳ ಗುಡಿಯಲ್ಲಿ ನಿಲ್ಲಿಸಿದ್ದಾರೆ. ೪ ೧/೨ ಅಡಿ ಎತ್ತರ, ೩ ೧/೨ ಅಡಿ ಅಗಲ, ೫ ಅಡಿ ಗುಡಿಯ ಎತ್ತರವಿದ್ದು ಇದರೊಳಗೆ ೩ ಬಂಡೆಗಳಿವೆ. ವೀರಗಲ್ಲು ಪೂರ್ವಾಭಿ ಮುಖವಾಗಿದೆ. ವೀರಗಲ್ಲಿನ ಪೂರ್ವಕ್ಕೆ ಕೋನ ಸಾಗರದ ಬೆಟ್ಟದ ಸಾಲಿನ ತಿಮ್ಮಪ್ಪನ ಗುಡ್ಡವಿದೆ. ಪಶ್ಚಿಮಕ್ಕೆ ಒದ್ನೋಬಯ್ಯನಹಟ್ಟಿ ಮತ್ತು ಸುತ್ತಲೂ ಬೆಳವಿನಮರದಟ್ಟಿ, ಸುಂಕನಾರಹಟ್ಟಿ, ಕೂಡ್ಲಿಗರಹಟ್ಟಿ, ಕೊಂಡ್ಲಹಟ್ಟಿ, ಬಂಡೆಕೆಳಗಳ ಹಟ್ಟಿ, ಕಪ್ಪಡ ಬಂಡಹಟ್ಟಿ, ಸಣ್ಣ ಪಾಪಯ್ಯನ ಹಟ್ಟಿ, ಮೆಕರ‍್ಲ ಓಬಯ್ಯನಹಟ್ಟಿ ಮತ್ತು ಜಂಗಳಿ ಸೂರಯ್ಯನಹಟ್ಟಿ, ನೇರ‍್ಲಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಬರುತ್ತವೆ. ಇಲ್ಲಿನ ಬಹುತೇಕ ಸಮುದಾಯಗಳು ಪಶುಪಾಲನೆಯನ್ನು ಪ್ರಧಾನ ವೃತ್ತಿಯಾಗಿ ಅಳವಡಿಸಿಕೊಂಡಿರುತ್ತವೆ. ಕೋನಸಾಗರದಿಂದ ಓದ್ನೋಬಯ್ಯನಹಟ್ಟಿಗೆ ಹೋಗುವ ದಾರಿ (ಎಡ) ಪಕ್ಕದಲ್ಲಿ ವೀರಗಲ್ಲಿದ್ದು, ಕರಿನಾರು ಅವುಲಯ್ಯನ ಹೊಲದ ಬದುವಿನಲ್ಲಿ ಗುಡಿ ಕಟ್ಟಲಾಗಿದೆ. ಹಿಂದೆ ಇದರ ಸುತ್ತಲೂ ಕಾಡು ಬೆಳೆದಿದ್ದು, ಇಂದು ಕೃಷಿ ಚಟುವಟಿಕೆಗಳಿಂದ ಕಾಡು ಬಯಲಾಗಿದೆ.

ಕರಿನಾರು ವೀರಪೆದ್ದಯ್ಯನು ಚಿರತೆಯೊಡನೆ ಹೋರಾಡುವ ದೃಶ್ಯ, ಕಪ್ಪಡಬಂಡಹಟ್ಟಿ

ಆಧುನಿಕ ಕಾಲಘಟ್ಟದಲ್ಲಿ ಬೇಡ ಸಮುದಾಯದವರು ವೀರಗಲ್ಲು ನೆಟ್ಟಿರುವುದು ಅಪೂರ್ವ ಸಂಗತಿ. ಇಲ್ಲಿನ ವಿವರವು ಅಷ್ಟೇ ಕುತೂಹಲಭರಿತವಾಗಿದೆ. ಹಟ್ಟಿಗೆ ನುಗ್ಗಿ ಕುರಿಗಳನ್ನು ಕೊಂದು ಹೊತ್ತು ಹೋಗುತ್ತಿದ್ದ ಚಿರತೆಯೊಂದಿಗೆ ಹೋರಾಡಿ ಪ್ರಾಣವನ್ನು ನೀಗಿಕೊಂಡ ಯರ್ರಪಾಪಯ್ಯನ ಹೆಸರಿನಲ್ಲಿ ಹಳ್ಳಿಯವರೆಲ್ಲ ಸೇರಿ ‘ಪರು’ ಮಾಡಿ ಕಲ್ಲನ್ನಿರಿಸಿದರು. ಚಿರತೆಯೊಂದಿಗೆ ಹೋರಾಡಿ ಎಂಟು ಹತ್ತು ದಿವಸಗಳವರೆಗೆ ಬದುಕಿದ್ದ ಯರ್ರಪಾಪಯ್ಯ ರಾವುಮಟ್ಟಿ ಪಿಂಗಳ ಸಂವತ್ಸರದ ಚೈತ್ರಮಾಸದ ಎರಡನೇ ಶುಕ್ರವಾರದಲ್ಲಿ ತೀರಿಕೊಂಡ ಸಂಗತಿ ತಿಳಿದುಬರುತ್ತದೆ.[4] ಇಲ್ಲಿ ಯರ್ರಪಾಪಯ್ಯ, ಎರಮಂಚಯ್ಯ ಎಂಬ ಹೆಸರುಗಳಿಂದ ಕರೆದರೂ, ಅವರುಗಳು ಪೆದ್ದಯ್ಯನ ತಾತನಗುಡಿ ಎನ್ನುವುದರಿಂದ ಹೋರಾಡಿ ಮಡಿದ ವೀರನ ಹೆಸರು ಪೆದ್ದಯ್ಯನೆಂಬುದು ಸ್ಪಷ್ಟ.

ಓರ್ವ ವ್ಯಕ್ತಿ ಚಿರತೆ ಬಾಯಿಗೆ, ಕೊರಳಿಗೆ ಕೈಹಾಕಿ ಎಡಗಾಲನ್ನು ಚಿರತೆಯ ಬಲಗಾಲಿನ ಬೆರಳುಗಳ ಮೇಲೆ ಇಟ್ಟಿದ್ದಾರೆ. ಎರಡು ನಾಯಿಗಳು ಚಿರತೆಯನ್ನು ಅಲ್ಲಲ್ಲಿ ಕಚ್ಚಿ ಬೊಗಳುವ ದೃಶ್ಯವಿದೆ. ಸ್ಥಳೀಯ ಕಣಶಿಲೆಯಿಂದ ವೀರಗಲ್ಲನ್ನು ನೆಟ್ಟು ಶಾಸನವನ್ನು ಬರೆಸಲಾಗಿದೆ. ಇದರ ಕಾಲಮಾನವನ್ನು ಸುಮಾರು ೭೦ ವರ್ಷಗಳೆಂದು ಹೇಳಲಾಗಿದೆ.[5] ವೀರಗಲ್ಲು ಕೆತ್ತಿದವರಿಗೆ ಒಂದು ಹಸುವನ್ನು ಕೊಟ್ಟಿದ್ದರಂತೆ. ಈ ಹಿನ್ನೆಲೆಯಲ್ಲಿ ಆಲೊಚಿಸುವುದಾದರೆ ಬೇಡರ ಬುಡಕಟ್ಟಿನಲ್ಲಿ ಇಂಥ ಎಷ್ಟೋ ಪ್ರಸಂಗಗಳು ನಡೆದಿರಬೇಕು. ವೀರಗಲ್ಲು ಕೆತ್ತುವವರು ಮತ್ತು ದಾಖಲೆ ಮಾಡುವವರು ವಿರಳವಾಗಿದ್ದರಿಂದ, ಮೇಲ್ವರ್ಗದವರೇ ಬರೆಯಬೇಕಾಗಿದ್ದರಿಂದ ಈ ಜನಾಂಗದ ಅಪೂರ್ವ ಸಂಗತಿಗಳನ್ನು ಮರೆಮಾಚಿರಬಹುದು. ‘ಎರಮಂಚಯ್ಯನ ತಂಗಿ (ಪೆದ್ದಯ್ಯ) ಹಿರೇಹಳ್ಳಿ ಪಾಪಮ್ಮ ಎಂಬುವರು ಈಗ್ಗೆ ೧೫ ವರ್ಷಗಳ ಹಿಂದೆ ಮೃತಳಾದಳಂತೆ. ಯರಮಂಚಯ್ಯನ ಮೊಮ್ಮಕ್ಕಳಾದ ಸಣ್ಣಬೋರಯ್ಯ ಮತ್ತು ಕಾಟಯ್ಯ ಎಂಬುವರು ಈಗಲೂ ಇದ್ದಾರೆ.[6] ಈ ಪೆದ್ದಯ್ಯ ಅಜ್ಜನ ಮೊಮ್ಮಗನೇ ಇಂದಿನ ಪೂಜಾರಿ. ಆತನ ಹೆಸರು ಓಬಯ್ಯ, ಪತ್ನಿ ಮಾರಕ್ಕ. ಈ ವೀರಗಲ್ಲನ್ನು ನಾಯಕ ಜನಾಂಗದವರು ಪೂಜಿಸುತ್ತಾರೆ.[7] ಹಬ್ಬ – ಹರಿದಿನಗಳಲ್ಲಿ ಹೊಸಬಟ್ಟೆ ಉಟ್ಟು ಹಣ್ಣು, ಕಾಯಿ ಬಡಿಸಿಕೊಂಡು ಹೋಗುವರು.[8] ಈ ವೀರನ ಸ್ಮರಣಾರ್ಥ ಇಂದಿಗೂ ರೂಢಿ – ಸಂಪ್ರದಾಯಗಳನ್ನು ಉಳಿಸಿಕೊಂಡು ಬಂದಿದ್ದಾನೆ. ಎರಡು ತಲೆಮಾರುಗಳಿಂದಲೂ ಸ್ಥಳೀಯ ಚರಿತ್ರೆಯನ್ನು ಹೊಂದಿರುವ ಈ ಕರಿನಾರಿನ ವಂಶವು ಅಷ್ಟೇ ಪ್ರಮುಖವಾದುದು.


[1] ‘ಕರಿನಾರು’ ಎನ್ನುವ ಜನರು ಕರ್ನಾಟಕದ ಮೂಲನಿವಾಸಿಗಳು. ಬೇಡ ಬುಡಕಟ್ಟಿನ ಒಂದು ಬೆಡಗಿನ ಕರಿನಾರು ಎಂದು ಆ ನಾಯಕನಿಗೆ ಕರಿನಾಡು ಎಂದು ಕರೆಯುತ್ತಾರೆ. ಇವರು ಬೇಟೆ ಮತ್ತು ಪಶುಪಾಲಕ ವೃತ್ತಿಗಳಲ್ಲಿದ್ದರು. ಇತ್ತೀಚಿಗೆ ಕೃಷಿಯನ್ನವ ಲಂಬಿಸಿದ್ದಾರೆ. ಇವರು ನೀಳವಾದ ದೇಹ, ಉದ್ದವಾದ ಮೂಗು, ಬಲವಾದ ಮೈಕಟ್ಟನ್ನು ಹೊಂದಿದ್ದು, ಎಂಥಾ ಅಸಾಧ್ಯವಾದ ಕೆಲಸವನ್ನು ಕ್ಷಣಾರ್ಧದಲ್ಲಿ ಪೂರೈಸುವ ಸಾಮರ್ಥ್ಯವುಳ್ಳವರಾಗಿದ್ದಾರೆ. ಪುರಾಣ, ಕಾವ್ಯಗಳಲ್ಲಿ ಈ ಪದದ ಉಲ್ಲೇಖವಿದ್ದು, ಕರ್ನಾಟಕದ ನಾಮನಿಷ್ಪತ್ತಿಯ ಹಿನ್ನೆಲೆಯಲ್ಲಿ ಕರಿನಾರು>ಕರುನಾಡು ಜನಸಮುದಾಯದ ಪ್ರಭಾವ ಇದ್ದಂತಿದೆ. ಪ್ರಾಚೀನ ಕಾಲದಿಂದಲೂ ಜೀವಂತವಿರುವ ಗ್ರಾಮಗಳಾದ ಕರೆನಹಳ್ಳಿ, ಕರ್ನಾರಹಟ್ಟಿ, ಮ್ಯಾಸರಹಟ್ಟಿ, ವಲಸೆ, ಮೇಗಳ ಕರ್ನಾರಹಟ್ಟಿ, ಮ್ಯಾಸರಹಟ್ಟಿ, ವಲಸೆ, ಕರ್ನಾರಹಟ್ಟಿ (೩) ಎಂಬಂಥವು ಹಲವಾರು ಕಂಡುಬರುತ್ತವೆ. ಕರಿನಾರು ಶ್ರೀಶೈಲ ಮಲ್ಲಿಕಾರ್ಜುನನ ಆರಾಧಕರು. ಇದರ ಪ್ರತೀಕ ದೇವರೆತ್ತು (ಮಲ್ಲಯ್ಯನ ಎತ್ತುಗಳು) ಗಳನ್ನು ಪಾಲನೆ ಮಾಡುತ್ತಾರೆ. ಈ ವಂಶದ ಮಹಿಳೆಯರು ಅಷ್ಟೇ ವೀರವನಿತೆಯರು. ಚಿಕ್ಕುಂತಿ (ದೇವರಹಟ್ಟಿ) ಯ ಕಂಪಳರಂಗಸ್ವಾಮಿ ಇವರಿಗೆ ಆರಾಧ್ಯ ದೇವರು. ಈ ಸ್ಥಳವನ್ನು ಎರಡನೆ ತಿರುಪತಿ ಎನ್ನುವುದುಂಟು. ಇಂಥ ಪ್ರಸಿದ್ಧ ಪರಂಪರೆಯುಳ್ಳ ಕರಿನಾರಿನ ವೀರ ಪೆದ್ದಯ್ಯ.

[2] ೧. ಕರನಿ ಗುಡ್ಡಂ ಬೋರಣ || ||ಮಗ ಯರಪಾಪಯ||
೨. ನುಂ ಮಗ|| ||ಪೆದ್ದ (ನ್ನ?) ಯ್ಯ||
೩. ಪಯಿಂಗಳ ನಂಮಸರದ ಚೆಯಿತ್ರ ಸುದ್ಧ||
೪. ಸುಕ್ರವಾರ || ಪೆದ್ದೆ (ನ್ನೆ?) ಯ್ಯ ಮೃತ್ಯು|| ಎಂದಿದೆ. ಆದ್ದರಿಂದ ಯರಮಂಚಯ್ಯ ಎಂಬ ವ್ಯಕ್ತಿಯಿಲ್ಲದೆ, ಪೆದ್ದಯ್ಯನು ಚಿರತೆಯನ್ನು ಕೊಂದ ಧೀರನು ಆಗಿರುವನು.

[3] ಡಾ.ಆರ್. ಶೇಷಶಾಸ್ತ್ರಿ: ಕರ್ನಾಟಕದ ವೀರಗಲ್ಲುಗಳು, ಕ.ಸಾ.ಪ. ಬೆಂಗಳೂರು, ೧೯೮೨, ಪು.೨೮೭, ಅಲ್ಲದೆ, ಪು.೪೯, ೧೩೭ ನ್ನು ಗಮನಿಸಬಹುದು.

[4] ಎ. ಕೃಷ್ಣಮೂರ್ತಿ: ಈರ ಸಿರಿಯಣ್ಣ, ಕನ್ನಡ ಸಾಹಿತ್ಯ ಪರಿಷ್ಪತ್ರಿಕೆ, ಸಂಪುಟ: ೬೧, ಸಂಚಿಕೆ: ೨, ಡಿಸೆಂಬರ್‌ ೧೯೭೬, ಕ.ಸಾ.ಪ ಬೆಂಗಳೂರು, ಪು.೬೧

[5] ಪೂರ್ವೋಕ್ತ : ೩, ಪು.೦೮

[6] ಜೆ.ಆರ್. ರಾಮಮೂರ್ತಿ, (ಸಂ) : ’ಮೊಳಗುವ ಕಲ್ಲು’ ೭ನೇ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಮೊಳಕಾಲ್ಮುರು ೩ ಮತ್ತು ೪ ಜನವರಿ ೧೯೯೮, (ಸ್ಮರಣ ಸಂಚಿಕೆ) ಕೋ.ಶ. ವಿಶ್ವನಾಥ ಅವರು ಕಪ್ಪಡ ಬಂಡಹಟ್ಟಿಯ ಒಂದು ವೈಶಿಷ್ಟ ವೀರಗಲ್ಲು ಲೇಖನದಲ್ಲಿ ಚರ್ಚಿಸಿದ್ದಾರೆ.

[7] ವಿರೂಪಾಕ್ಷಿ : ಮಧ್ಯಕಾಲೀನ ಕನ್ನಡ ಕಾವ್ಯಗಳಲ್ಲಿ ನಿರೂಪಿತವಾಗಿರುವ ಬೇಟೆ ಮತ್ತು ಬೇಡರ ಸಂದರ್ಭಗಳು : ಒಂದು ಚಾರಿತ್ರಿಕ ಅಧ್ಯಯನ (ಅಪ್ರಕಟಿತ ಪಿಎಚ್.ಡಿ. ಪ್ರಬಂಧ) ಕನ್ನಡ ವಿ.ವಿ. ಹಂಪಿ, ೨೦೦೦

[8] ವಿರೂಪಾಕ್ಷಿ ಪೂಜಾರಹಳ್ಳಿ: ಕರಿನಾರು>ಕರಿನಾಡು: ಒಂದು ಟಿಪ್ಪಣಿ, ವಾಲ್ಮೀಕಿ ಬಂಧು, ಜನವರಿ ೨೦೦೧, ಧಾರವಾಡ ಪು.೧೮