.. ಯರಗಾಟನಾಯಕ

ಹಿನ್ನೆಲೆ

ಯರಗಾಟನಾಯಕ ಎಂಬ ವೀರ ಮ್ಯಾಸಬೇಡರ ಬುಡಕಟ್ಟಿನಲ್ಲಿ ಕಂಡುಬರುವನು. ಇವನಿಗೆ ಯರಗುಂಟಯ್ಯ, ಯರಗಟ್ಟವಾಡು ಎಂದೆಲ್ಲಾ ಕರೆಯುವರು. ‘ಯರಗುಂಟ’ ಎನ್ನುವ ಪಾಳೆಯಪಟ್ಟು ಇದ್ದು, ಆಂಧ್ರದ ಅನಂತಪುರ ಜಿಲ್ಲೆಯಲ್ಲಿ ಈ ಹೆಸರಿನ ಗ್ರಾಮವಿದೆ. ಆದರೆ ಇವನಿಗೆ ಮತ್ತು ಆ ಪಾಳೆಯ ಪಟ್ಟಿಗೆ ಸಂಬಂಧವಿತ್ತೋ ಇಲ್ಲವೊ ತಿಳಿಯದು. ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳ ಈ ಸಮುದಾಯದವರು ಇವನ ಬಗೆಗೆ ಅನೇಕ ವಿಧವಾದ ಕಥೆಗಳನ್ನು ಹೇಳುತ್ತಾರೆ. ಇವನ ಸಮಕಾಲೀನರಾಗಿ ಯರಗಾಟನಾಯಕ, ಯರಗೋಡ್ಲಯ್ಯ, ಯರ‍್ರಪ್ಪ ಎನ್ನುವ ಹೆಸರಿನ ವೀರರು ಸಹ ಕಂಡುಬರುತ್ತಾರೆ.

ಜನನ

ಯರಗಾಟನಾಯಕನ ಜನನದ ಕಾಲಮಾನ ತಿಳಿದುಬಂದಿಲ್ಲವಾದರೂ, ಮಧ್ಯಕಾಲವೆಂದು ಊಹಿಸಬಹುದಾಗಿದೆ. ಇದಕ್ಕೆ ಮ್ಯಾಸಬೇಡರ ಸಂಸ್ಕೃತಿಯ ದಾಖಲೆಗಳು ಪುಷ್ಠಿ ನೀಡುತ್ತವೆ. ತೆಲುಗು ಜನಪದ ಸಾಹಿತ್ಯ ಇವನ ಬಗೆಗೆ ಹೆಚ್ಚಿನ ಬೆಳಕು ಚೆಲ್ಲುತ್ತದೆ. ಮ್ಯಾಸಬೇಡರ ಸಂಸ್ಕೃತಿಯ ನಿರ್ಮಾಪಕರಾದ ಶುಕ್ಲಮಲ್ಲಿನಾಯಕನ ಹೆಂಡತಿ ದಾನಸಾಲಮ್ಮನ ಸಂತತಿಗೆ ಸೇರಿದವರಾದ ತಂಗಡಲ ತಮ್ಮವ್ವನ ಮಗನೇ ಯರಗಾಟನಾಯಕ ಎನ್ನಲಾಗುತ್ತದೆ. 

ಪಶುಗಳ ಮಂದೆ

 ವೃತ್ತಿ: ಪಶುಪಾಲನೆ

 

ತಮ್ಮ ಪೂರ್ವಜರ ವೃತ್ತಿಯಾದ ಪಶುಪಾಲನೆಯನ್ನು ಯರಗಾಟನಾಯಕ ಕೈಗೊಂಡಿದ್ದ. ಇವನು ಬೆಳೆದು ವಯಸ್ಸಿಗೆ ಬಂದಾಗ ತಾಯಿಯಾದ ತಂಗಡಲ ತಮ್ಮವ್ವಳು ಸುಂದರವಾದ ಕನ್ಯೆಯನ್ನು ಮದುವೆಮಾಡಲು ನಿರ್ಧರಿಸಿದಳು. ಅದರಂತೆ ಪುವ್ವಲು ರಾಯವ್ವ ಎಂಬುವಳನ್ನು ಇವನಿಗೂ ಮದುವೆ ಮಾಡಿದಳು.

ಯರಗಾಟನಾಯಕನು ಕಾಲಸರಿದಂತೆ ತನ್ನ ಗೆಳೆಯನಾದ ವಡಪಲ ತಮ್ಮಯ್ಯನೊಂದಿಗೆ ಮುತ್ತಿಗಾರ ದನಕರುಗಳನ್ನು

[1] ಮೇಯಿಸುವ ಸಲುವಾಗಿ ತಪಲೇಟಿಕೆರೆಯ ಹತ್ತಿರ ಹೊಡೆದುಕೊಂಡು ಹೋಗಿ ಇಬ್ಬರೂ ಕೂಡಿ ರೊಪ್ಪಗಳನ್ನು ಕಟ್ಟಿಕೊಂಡು ನೆಲಸಿದ್ದರು. ಅವರಿಬ್ಬರು ದನಕರುಗಳನ್ನು ಮೇಯಿಸುತ್ತಾ ಅಲ್ಲಿ ಇಲ್ಲಿ ಸುತ್ತಾಡಿಕೊಂಡು ಕೆಲವು ದಿನಗಳ ತರುವಾಯ ತಮಟಕಲ್ಲು ಕಡೆಗೆ ದನಕರುಗಳನ್ನು ಮೇಯಿಸಲಿಕ್ಕೆ ಹೋದರು.[2]

ಓಬವ್ವ

ಆಗ ತಮಟಕಲ್ಲು ಗ್ರಾಮದಲ್ಲಿ ಓಬವ್ವ ಎಂಬ ಯುವತಿ ಅಪ್ರತಿಮ ಸುಂದರಿ ಎಂದು ಖ್ಯಾತಳಾಗಿದ್ದಳು. ಅವಳ ಸೌಂದರ್ಯಕ್ಕೆ ಮರುಳಾದ ಸುತ್ತಲಿನ ಗ್ರಾಮಗಳ ರಸಿಕರ ಮನಸ್ಸು ಕನಸುಗಳನ್ನು ಕಟ್ಟುತ್ತಿದ್ದವು. ಹಾಗೆಂದು ಅವಳನ್ನು ಮದುವೆಯಾಗುವುದಾಗಿ ಪ್ರಯತ್ನಿಸಿದ ಎಲ್ಲಾ ಪುರುಷರಿಗೂ ಅವಳೊಂದು ಕಠಿಣವಾದ ಷರತ್ತಿನ ಸವಾಲನ್ನು ಹಾಕುತ್ತಿದ್ದಳು. ಅದೆಂದರೆ ಬಾಗೇನಾಳು ಕಾಮನಾಯಕನು ೨೪ ವರ್ಷ ಕಾಲ ಸಾಕಿ ಸಲುಹಿದ ಗೊಡ್ಡು ಆಕಳಿನ (ಬಂಜೆ ಹಸು) ಹೊಟ್ಟೆಯೊಳಗಿರುವ ಮಾಂಸಖಂಡಗಳನ್ನು ಸುಟ್ಟು ಕರೆಗಳಾಗಿ (ತುಂಡು) ಮಾಡಿಕೊಂಡು ಬಂದರೆ ಆನಂತರ ತನ್ನ ಒಪ್ಪಿಗೆಯನ್ನು ತಿಳಿಸುವುದಾಗಿ ಹೇಳುತ್ತಿದ್ದೂ. ಈ ಷರತ್ತನ್ನು ಕೇಳಿದ ಯಾವ ಪುರುಷನೂ ಗೋಹತ್ಯೆಯ ಪಾಪಕ್ಕೆ ಹೆದರಿ ಇವಳ ಮೋಹದಿಂದ ದೂರವಾಗುತ್ತಿದ್ದರು. ಹೀಗಿರುವಾಗ ಬಾಗೇನಾಳು ಕಾಮನಾಯಕನೂ ತಮಟಕಲ್ಲಿನ ಓಬವ್ವನ ಸೌಂದರ್ಯಕ್ಕೆ ಮನಸೋತು ವಿವಾಹವಾಗಲು ಕೇಳಿದನು. ಮರುಳಾದ ನಾಯಕನಿಗೆ ಓಬವ್ವ ತನ್ನ ಷರತ್ತನ್ನು ಮುಂದಿಟ್ಟಳು. ಹೆಣ್ಣಿನ ವ್ಯಾಮೋಹಕ್ಕೆ ಒಳಗಾದ ಪುರುಷ ಏನಾದರೊಂದು ಸಾಹಸಮಾಡಿ ಆಕೆಯ ಬೇಡಿಕೆಯನ್ನು ಈಡೇರಿಸುತ್ತಾನೆ. ಆದರೆ ನಾಯಕ ತಾನು ಸಾಕಿದ ಬಂಜೆ (ಗೊಡ್ಡು) ಆಕಳನ್ನು ಬಲಿ ಕೊಡಲಾರನೆಂದು ಕಡಾಖಂಡಿತವಾಗಿ ನಿಶ್ಚಯಿಸಿದನು. ಈ ಮೂರು ಕಾಸಿನ ಹೆಣ್ಣಿನ ಕಾಮತೃಪ್ತಿಗೆ ಸಾಕಿದ ಆಕಳನ್ನು ಕೊಲ್ಲಲಾರನೆಂದು ಹೇಳೀದನು. ಇವಳು ತನ್ನೆಲ್ಲ ಪ್ರೇಮಿಗಳಿಂದಲೂ ಇದನ್ನೇ ಬಯಸುತ್ತಿದ್ದರಿಂದ ಮುಂದೆ ಯಾರಾದರೂ ತನ್ನ ಹಸುವನ್ನು ಮೋಸದಿಂದ ಒಡೆದುಕೊಂಡು ಹೋಗಬಹುದೆಂದು ಅದನ್ನು ಭದ್ರತೆಯಲ್ಲಿಟ್ಟನು. ಅದೇ ರೀತಿ ಗುಜಗುತ್ತಲ ಖ್ಯಾತನಿಗೆ ಸಹಾ ಇವಳು ಕಾಮನಾಯಕನ ಗೊಡ್ಡು ಹಸುವಿನ ಮಾಂಸವನ್ನು ಕೇಳಿದಾಗ ಅವನು ಅಸಹಾಯಕನಾಗಿ ಹಿಂತಿರುಗಿದನು.

ಒಂದು ದಿನ ಸೂರ್ಯ ಉದಯಿಸುತ್ತಿದ್ದ ಸಮಯ ಓಬವ್ವ ಸ್ನಾನ ಮಾಡಿ ಮನೆಯ ಮೇಲುಪ್ಪರಿಗೆಯಲ್ಲಿ ತನ್ನ ತಲೆಗೂದಲನ್ನು ಬಿಸಿಲಿಗೆ ಆರಿಸಿಕೊಳ್ಳುತ್ತಿದ್ದಳು. ಅದೇ ಸಂದರ್ಭದಲ್ಲಿ ಯರಗಾಟನಾಯಕನು ತನ್ನ ಸ್ನೇಹಿತನಾದ ವಡಪಲ ತಮ್ಮಯ್ಯನೊಂದಿಗೆ ತಮ್ಮ ದನಕರುಗಳನ್ನು ಮೇಯಿಸಲೆಂದು ಬೆಟ್ಟ – ಗುಡ್ಡ, ಅಡವಿಗಳೆಲ್ಲ ಅಲೆದು ಕೊನೆಗೆ ತಮಟಕಲ್ಲಿನ ಪರಿಸರದಲ್ಲಿ ನಡೆದ. ಊರಿನ ಮಧ್ಯೆ ಹೋಗುವಾಗಲೇ ದಾರಿಯಲ್ಲಿ ನಿಂತು ಈ ಅಪೂರ್ವ ಸುಂದರಿಯನ್ನು ವೀಕ್ಷಿಸಿದನು.

ಓಬವ್ವ ತನ್ನ ನೀಳವಾದ ಕೂದಲನ್ನು ಎಳೆಎಳೆಯಾಗಿ ವಿಂಗಡಿಸಿ ಆರಿಸಿಕೊಳ್ಳುವ ಸಂದರ್ಭದಲ್ಲಿ ಯರಗಾಟನಾಯಕನು ಎಷ್ಟೇ ತನ್ನ ಆಸೆಯನ್ನು ಒಂದು ಮಿತಿಗೆ ತರಲು ಪ್ರಯತ್ನಿಸಿದರೂ ವಿಫಲನಾದುದರ ಪರಿಣಾಮವಾಗಿ ಈ ಸುಂದರಿಯನ್ನು ಮತ್ತೆ ಮೋಹಗೊಂಡನು. ಉದ್ದವಾದ ತಲೆಗೂದಲು, ತೆಳುವಾದ – ಬಳಕುವ ದೇಹ ಕೆಂಪನೆಯ ಮೈಬಣ್ಣ ಇತ್ಯಾದಿ ಲಕ್ಷಣಗಳು ಅವಳ ಸೌಂದರ್ಯವನ್ನು ಇಮ್ಮಡಿಗೊಳಿಸಿದ್ದವು. ಚೆಲುವೆ ಮತ್ತು ಉತ್ತಮಶೀಲ ಸ್ವಭಾವದ ಓಬವ್ವಳನ್ನು ಕಂಡ ಯರಗಾಟನಾಯಕ ಸ್ಥಳದಲ್ಲಿ ವಿಚಲಿತನಾದ. ಮುಂದಕ್ಕೆ ಕಾಲೆತ್ತಿಕ್ಕಲು ಆಶಕ್ತನಾದ. ಕೊನೆಗೆ ಜಾಗ ಬದಲಾಯಿಸಿ ಗೆಳೆಯನಾದ ವಡಪಲು ತಮ್ಮಯ್ಯನಿಗೆ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿ ಅವಳೊಡನೆ ಮಾತನಾಡಿ ಬರಲು ಕಳುಹಿಸಿದನು. ಓಬವ್ವ ಅವನಿಗೂ ಸಹಾ ತನ್ನ ನೋಡಬಯಸಿದವರಿಗೆ ಹೇಳಿದ ಉತ್ತರವನ್ನೇ ತಿಳಿಸಿದಳು. ವಡಪಲು ತಮ್ಮಯ್ಯ ಮರಳಿ ಬಂದು ಯರಗಾಟನಾಯಕನಿಗೆ ಬಾಗೇನಾಳು[3] ಕಾಮನಾಯಕನ ಬಳಿಯಿರುವ ಗೊಡ್ಡು ಆಕಳ ಕರೆಗಳು (ತುಂಡು) ನನಗೆ ಬೇಕು, ಅಲ್ಲದೆ ಅದರ ಹೊಟ್ಟೆಯಲ್ಲಿರುವ ಮಾಂಸ ಖಂಡವನ್ನು ಸುಟ್ಟು ಕರೆಗಳನ್ನು (ಸುಟ್ಟತುಂಡು) ಮಾಡಿಕೊಂಡು ಬಂದರೆ ಅವನೊಂದಿಗೆ ಪ್ರೀತಿಯನ್ನು ಬೆಳೆಸುತ್ತೇನೆಂದು ಹೇಳಿ ಕಳುಹಿಸಿದಳೆಂದು ವಿವರಿಸಿದನು.[4]

ವಿಷಯ ತಿಳಿದ ಯರಗಾಟನಾಯಕನು ವಡಪಲು ತಮ್ಮಯ್ಯನೊಂದಿಗೆ ಹೊರಟು, ಮಡಿವಾಳರ ಮನೆಯ ಬಳಿ ಇದ್ದಂಥ ಮೈಲಿಗೆ ಬಟ್ಟೆಗಳನ್ನು ಗಂಟುಕಟ್ಟಿಕೊಂಡು, ಬಾಸುರ ಬಂಜೆ (ಗೊಡ್ಡು) ಹಸು ಇರುವ ನೆಲಮಾಳಿಗೆ ಹತ್ತಿರಬಂದನು. ನೆಲಮಾಳಿಗೆಯ ಏಳು ಬಾಗಿಲುಗಳಿಗೆ ಬೀಗ ಹಾಕಲಾಗಿತ್ತು. ಯರಗಾಟನಾಯಕನು ದೇವರ ಸ್ಮರಣೆಯಿಂದ ಬೀಗದ ಮೇಲೆ ಬಲಪ್ರಯೋಗ ಮಾಡಿದ ಕೂಡಲೇ ಒಂದರಿಂದ ಒಂದರಂತೆ ಎಲ್ಲಾ ಬೀಗಗಳು ಸಡಲಿ ಬಾಗಿಲುಗಳ ತೆರೆದವು.

ನಾಯಕನು ನೆಲಮಾಳಿಗೆಯಲ್ಲಿದ್ದ ಹಸಿವಿನ ಕೊರಳಿನ ಗಂಟೆಗೆ[5] ಬಟ್ಟೆಗಳನ್ನು ತುರುಕಿ ಗಂಟೆಯ ಶಬ್ದವಾಗದಂತೆ ಮಾಡಿ ಹಸುವನ್ನು ಹೊರಗೆ ನಡೆಸಿಕೊಂಡು ಬರುತ್ತಿದ್ದ. ಆಗ ಅದರ ಕಾಲಿನ ಗೊರಚು ಹೊಸ್ತಿಲಿಗೆ ತಾಕಿ ಅಗೋಚರವಾದ ಶಬ್ದದಂತೆ ಭಾಸವಾಯಿತು. ಈ ಶಬ್ದ ನಿಡಗಲ್ಲು ನಿಚ್ಚಮಲ್ಲಿಗರೆ[6] ಹತ್ತಿರವಿದ್ದ ಕಾಮನಾಯಕನಿಗೆ ಕೇಳಿಸಿತು. ಕಾಮನಾಯಕನು ನಿಡಗಲ್ಲಿನ ನಿಚ್ಚಮಲ್ಲಿಗರಿಗೆ ತಿಳಿದು ಅಲ್ಲಿಂದ ಗಾಳಿಯ ವೇಗದಲ್ಲಿ ಓಡಿ ಬಂದನು. ಅವನು ಬರುವುದರೊಳಗೆ ಯರಗಾಟನಾಯಕ ವಡಪಲ ತಮ್ಮಯ್ಯ ಇಬ್ಬರೂ ಸೇರಿ ಹಸುವನ್ನು ಊರಿನ ಪಕ್ಕದ ಬಂಡೆಯ ಮೇಲೆ ಕೊಯ್ದು ಹಸುವಿನಲ್ಲಿದ್ದ (ಗುಂಡಿಗೆ) ಸತುವಾದ ಮಾಂಸದ ಖಂಡಗಳನ್ನು ತೆಗೆದು ಅಚ್ಚುಕಟ್ಟಾಗಿ ಸುಟ್ಟು ಕರೆಗಳನ್ನು ಮಾಡಿಕೊಂಡು ತಮಟಕಲ್ಲುವಿನ ನಾಯಕ ಸುಂದರಿ (ನಾಗತಿ) ಓಬವ್ವನಿಗೆ ಷರತ್ತಿನಂತೆ ಕೊಟ್ಟರು.

ವಿವಾಹ

ಈ ಯರಗಾಟನಾಯಕನ ಸಾಹಸ, ಪ್ರತಿಭೆ, ಧಿರೋಚಿತ ಹಾಗೂ ವಿರೋಚಿತವಾದ ಗುಣ ದೇಹ ಧಾರ್ಡ್ಯಗಳನ್ನು ಮನಸಾರೆ ಮೆಚ್ಚಿದ ಓಬವ್ವ ಅವನೊಂದಿಗೆ ಮದುವೆ ಮೂಲಕ ಪ್ರಣಯ ಬೆಳೆಸಿದಳು. ಅವನ ಹಸುಗಳು ತಪಲೇಟಿಕೆರೆ ಸಮೀಪ ರೊಪ್ಪದಲ್ಲಿದ್ದವು. ಜೊತೆಗೆ ಅವನ ತಾಯಿ ಮತ್ತು ಹೆಂಡತಿ ಅಲ್ಲಿಯೇ ಸ್ವಲ್ಪ ದೂರದ ಪ್ರದೇಶದಲ್ಲಿ ವಾಸವಾಗಿದ್ದರು. ತಾಯಿ, ಹೆಂಡತಿಗೆ ಪ್ರತಿನಿತ್ಯ ಹಸುಗಳ ಕಾವಲಿಗೆ ಹೋಗುತ್ತೇನೆ ಎಂದು ಸುಳ್ಳು ಹೇಳಿ ಓಬವ್ವನ ಮನೆಗೆ ಹೋಗುತ್ತಿದ್ದನು. ಇಡೀ ರಾತ್ರಿಗಳನ್ನೆಲ್ಲಾ ಓಬವ್ವನ ಮನೆಯಲ್ಲಿ ಕಳೆದು ತಾಯಿ, ಹೆಂಡತಿ ಬೆಳಿಗ್ಗೆ ಏಳುವುದರೊಳಗೆ ಬಂದು ಮನೆಗೆಲಸದಲ್ಲಿ ತೊಡಗಿ, ಹಸುಗಳ ರೊಪ್ಪಕ್ಕೆಂದು ಪುನಃ ಹೋಗುತ್ತಿದ್ದನು. ಇದೇ ರೀತಿ ಸಾಕಷ್ಟು ದಿನ ಸಾಗಿಸಿದನು. ಇಲ್ಲಿ ಸಂಪ್ರದಾಯವನ್ನು ಮುರಿದ ಕಾರಣಕ್ಕೆ ಯರಗಾಟನಾಯಕ ಸಮಾಜಕ್ಕೆ ತಲೆಬಾಗಿಸಿ ಬದುಕುವ ಸ್ಥಿತಿ ಬದಲಾಗುತ್ತದೆ.

ಅವಸಾನ

ಯರಗಾಟನಾಯಕನ ಗುಪ್ತವಾಗಿರುವ ವೈಭವ, ಅಭ್ಯುದಯವನ್ನು ಕಂಡುಸಹಿಸದ ಓಬವ್ವನ ಪ್ರೇಮದ ಭೋಗ ಕೇಳೀ ಭಗ್ನಪ್ರೇಮಿಯಾದ ಗುಜಗುತ್ತಲ ಖ್ಯಾತಯ್ಯ ಹೊಟ್ಟೆಕಿಚ್ಚಿನಿಂದ ಸಂಕಟಪಡುತ್ತಾ ಆಗಾಗ ಹಲ್ಲು ಕಡಿಯುತ್ತಿದ್ದನು. ಒಂದು ದಿನ ಯರಗಾಟನಾಯಕ ಮತ್ತು ವಡಪಲ ತಮ್ಮಯ್ಯ ತಾವು ಭೂಚಕ್ರದ ಗೊಡಗು, ಛತ್ರಿ ಹಿಡಿದುಕೊಂಡು ಬರುತ್ತಿರುವಾಗ ಗುಜಗುತ್ತಲ ಖ್ಯಾತಯ್ಯ ತನ್ನ ಬಾನದಿಂದ ಯರಗಾಟ ನಾಯಕನ ಹೊಟ್ಟೆಗೆ ಹೊಡೆದನು. ಹೊಟ್ಟೆಯಿಂದ ಹೊರಹೋದ ಬಾಣ ಗಿರಗಿರನೆ ಬಂಡೆಯ ಮೇಲೆ ತಿರುಗುತ್ತಿತ್ತು. ಬಾಣದ ಶಬ್ಧ ಕೇಳಿಸಿಕೊಂಡ ವಡಪಲ ತಮ್ಮಯ್ಯ ನಾಯಕರೇ ಏನಿದು ಗಿರಗಿರನೆ ಶಬ್ದ ಎಂದಾಗ ಯರಗಾಟನಾಯಕನು ಏನೋ ಕಲ್ಲುಗಳ ಶಬ್ದವಿರಬಹುದು ಮುಂದಕ್ಕೆ ಸಾಗೋಣ ನಡೆ ಎಂದನು. ಗುಜಗುತ್ತಲ ಖ್ಯಾತಯ್ಯ ಯರಗಾಟನಾಯಕನನ್ನು ಬಾಣದಿಂದ ಹೊಡೆದ ನಂತರ ತಾನು ಹುಣಸೆ ಮರದ ಪೊಟರಿನಿಂದ ಹೊರಗೆ ದಾವಿಸಿದೆ ನಾನು ಬಿಟ್ಟ ಬಾಣ ತಪ್ಪಿಲ್ಲ. ಯರಗಾಟನಾಯಕನು ಉಳಿಯುವುದಿಲ್ಲವೆಂದು ನಿಶ್ಚಯಿಸಿಕೊಂಡ ನಂತರ ತಾನು ಅತೃಪ್ತನಾಗಿ ಬದುಕಿ ಸಾರ್ಥಕವೇನೆಂದು ಮರಣವನ್ನಪ್ಪಿದ.

ದುರಂತ ಸಾವು

ಬಾಣದ ಏಟಿನಿಂದ ಯರಗಾಟನಾಯಕನಿಗೆ ನೋವು ಸಂಕಟಗಳು ಉಲ್ಬಣವಾದವು. ಹೊಟ್ಟೆಯನ್ನು ಎರಡು ಕೈಗಳಿಂದ ಹಿಡಿದುಕೊಂಡು ತಮಟಕಲ್ಲಿನಿಂದ ನಾನಾ ದಾರಿಗಳನ್ನು ಬದಲಿಸಿ, ನೇರವಾಗಿ ಬೆಳಗಟ್ಟದವರೆಗೆ ಪ್ರಯಾಣಿಸಿದನು. ಬೆಳಗಟ್ಟ ಸಮೀಪದವರೆಗೆ ಬಂದಿದ್ದೆ ದೊಡ್ಡ ಸಾಧನೆಯಾಗಿ, ಹಿಂದಕ್ಕೂ – ಮುಂದಕ್ಕೂ ಹೋಗಲರದೇ ಬದುಕುವ ಆಸೆಯಿಂದ ವಿಧಿಗೆ ಸೋತು ಮರಣ ಹೊಂದುವ ಹಂತದಲ್ಲಿದ್ದನು.

ಇತ್ತ ಕಡೆ ಆತ್ಮೀಯನಾದ ವಡಪಲ ತಮ್ಮಯ್ಯ ಕೈಯಲ್ಲಿದ್ದ ಭೂಚಕ್ರದ ಗೊಡಗನ್ನು ಅಲ್ಲಿಯೇ ಬಿಸಾಡಿ ತಪಲೇಟು ಕೆರೆಯ ಬಳಿ[7] ಮೂಗು ಮಾಲಿಯಲ್ಲಿದ್ದ ಯರಗಾಟನಾಯಕನ ತಾಯಿ ಮತ್ತು ಹೆಂಡತಿಗೆ ನಿಮ್ಮ ಮಗ ಬೆಳಗಟ್ಟದ ಸಮೀಪ ಮರಣಶೆಯ್ಯೆಯಲ್ಲಿರುವನು ತಾವು ಧಾವಿಸಬೇಕೆಂದು ಬೇಡಿಕೊಂಡನು. ತಕ್ಷಣ ತಾಯಿ ತಂಗಠಲು ತಮ್ಮವ್ವ, ಪತ್ನಿ ಪುವ್ವಲರಾಯವ್ವ ಕೂಡಿ ದುಃಖಿಸುತ್ತಾ, ತೀವ್ರವಾಗಿ ಕಣ್ಣೀರು ಸುರಿಸಿಕೊಂಡು, ಬೆಳಗಟ್ಟದ ಕಡೆ ನಡೆದು ಯರಗಾಟನಾಯಕನು ನಿತ್ರಾಣನಾಗಿ ಬಿದ್ದಿರುವ ಸ್ಥಳಕ್ಕೆ ಬಂದರು. ಆ ಸ್ಥಳ ಚಿತ್ರದುರ್ಗದಿಂದ ನಾಯಕನಹಟ್ಟಿಗೆ ಬರುವಾಗ ಗೋನೂರು ಮೂಲಕ ಬಂದರೆ ಸಾಸಲಹಟ್ಟಿ ಸಿಗುತ್ತದೆ. ಇಲ್ಲಿಯೇ ಯರಗಾಟನಾಯಕ ಮರಣಹೊಂದಿದ್ದನೆಂಬುದಕ್ಕೆ ಅಲ್ಲಿರುವ ಅವನ ದೇವಾಲಯವೇ ಸಾಕ್ಷಿ.

ಹಡೆದ ತಾಯಿಗೆ ಸತ್ವಪರೀಕ್ಷೆ

ಯರಗಾಟನಾಯಕನ ಅವಸಾನವು ಅಂತಿಮ ಘಳಿಗೆಯಲ್ಲಿ ತೂಗಾಡುತ್ತಿತ್ತು. ಬಾಯಿಬಿದ್ದು, ಸುಮ್ಮನೆ ಪಿಳಿಪಿಳಿ ಕಣ್ಣುಗಳನ್ನು ಮಾತ್ರ ಬಿಡುತ್ತಿದ್ದನು. ಕೂಡಲೆ ಯರಗಾಟನಾಯಕ ಏಳು ಹಚ್ಚಡಗಳನ್ನು (ವಸ್ತ್ರ) ಸುತ್ತಲೂ ಪರದೆ ಕಟ್ಟಿಸಿ, ತಾಯಿ ತಮ್ಮವ್ವನಿಗೆ ಪೂರ್ವದಿಕ್ಕಿನಲ್ಲಿ ನಿಲ್ಲಲು ಹೇಳೀ ಮಹಾತಾಯಿ ‘ನೀನು ನಿನ್ನ ಮಗ ಸತ್ಯವಂತರಾಗಿದ್ದರೆ ಮತ್ತು ನಿನ್ನಲ್ಲಿ ಅಸತ್ಯ ಅಡಗಿದ್ದರೆ ನಿನ್ನ ಮಗನ ಬಾಯಲ್ಲಿ ನಿನ್ನ ಎದೆಯ ಹಾಲನ್ನು ಬೀಳುವಂತೆ ಕರೆಯಬೇಕು. ನೀನು ಕರೆದ ಎದೆಹಾಲು ಏಳು ಹಚ್ಚಡಗಳ ಮಡಿಕೆಯಲ್ಲಿ ದಾಟಿ ನಿನ್ನ ಮಗನ ಬಾಯಲ್ಲಿ ಬೀಳಬೇಕೆಂದು ತಿಳಿಸಿದರು. ತಬ್ಬಿಬ್ಬಾದ ತಮ್ಮವ್ವ ಏನು ತೋಚದೆ ತನ್ನ ಇಷ್ಟ ದೈವವನ್ನು ಪ್ರಾಥಿಸುತ್ತಾ ‘ಸ್ವಾಮಿ ನಾನು ಸತ್ಯವತಿಯಾಗಿದ್ದು, ನನ್ನ ಮಗನು ಸತ್ಯವಂತನಾಗಿದ್ದರೆ, ನನ್ನ ಎದೆಯಿಂದ ಕರೆಯುವ ಹಾಲು ಮಗನ ಬಾಯಲ್ಲಿ ಬಿದ್ದು ಅವನ ಸ್ವರ್ಗ ಸೇರಲಿ’ ಎಂದು ದೇವರನ್ನು ಪ್ರಾರ್ಥಿಸಿ ಗುರುಹಿರಿಯರಿಗೆ ನಮಸ್ಕರಿಸಿ ಹಾಲು ಕರೆದಳು. ಎದೆಹಾಲು ಕರೆದುದು ಏಳು ಹಚ್ಚಡಗಳ ಮಡಿಕೆಯನ್ನು ತೂರಿಕೊಂಡು ಹೋಗಿ ಅಮೃತದಂತೆ ಯರಗಾಟನಾಯಕನ ಬಾಯೊಳಕ್ಕೆ ಬಿತ್ತು. ಆಗ ಅವನ ಆತ್ಮ ದೇಹವನ್ನು ಬಿಟ್ಟು ದೈವವನ್ನು ಸೇರಿಕೊಂಡಿತು. ಇದರಿಂದ ಯರಗಾಟನಾಯಕ ದೈವತ್ವಕ್ಕೇರಿದ. ಮಹಾಪುರುಷನಾದನೆಂದು ನಂಬಲಾಗಿದೆ.

ಶವ ಹೊತ್ತು ಪ್ರಯಾಣ ಬೆಳೆಸಿದ್ದು

ನಂತರ ದೊರೆಗಳೂ, ದಳವಾಯಿಗಳು ಮ್ಯಾಸಮಂಡಲದ ಎಲ್ಲರೂ ಕೂಡಿ ಏಳು ಜನ ಪ್ರಮುಖರಾದ ಮಳೇಲಾರು ಬೆಡಗಿನವರನ್ನು ಕರೆದರು. ನಾಲ್ಕು ಜನರು ಬಂದು ಯರಗಾಟನಾಯಕನ ಶವವನ್ನು ಒತ್ತುಕೊಂಡರು. ಅವರಲ್ಲಿಬ್ಬರು ಗುದ್ದಲಿ, ಚಲಿಕೆ, ತೆಗೆದುಕೊಂಡರು. ಒಬ್ಬನು ಬೆಂಕಿ ಪಂಜನ್ನು ಕೈಯಲ್ಲಿಟ್ಟುಕೊಂಡು ಮುಂದೆ ಸಾಗಿದನು. ಮೊದಲನೆಯ ಸಾಲಿನಲ್ಲಿ ಮ್ಯಾಸಮಂಡಲ, ಅದರ ಹಿಂದೆ ವಡಪಲು ತಮ್ಮಯ್ಯ ಹೀಗೆ ಮುಂದುವರೆದಾಗ ಯರಗಾಟನಾಯಕನ ಬಳಿಯಲ್ಲಿದ್ದ ಬಿರುದಾವಳಿಗಳಾದ ಭೂಚಕ್ರದ ಗೊಡಗು ಲಿಂಗಗಳು ಬೆಳಗಟ್ಟದ ಹತ್ತಿರ ಬಿಟ್ಟು ಬಂದಿದ್ದ ನೆನಪಾಯಿತು. ಮತ್ತೆ ಹೆಣವನ್ನು ಇಳಿಸಿಕೊಂಡು ಕೆಲವರು ಹಿಂದಕ್ಕೆ ಹೋಗಿ ಮರೆತು ಬಿಟ್ಟು ಬಂದಿದ್ದ ಭೂಚಕ್ರದ ಗೊಡಗು, ಲಿಂಗಗಳನ್ನು ತೆಗೆದುಕೊಂಡುಬಂದರು. ಸಾಕಷ್ಟು ಸಮಯ ಆಗಲೇ ಆಗಿತ್ತು. ಯರಗಾಟನಾಯಕನ ಶವವನ್ನು ಹೊತ್ತು ಸ್ವಲ್ಪ ದೂರ ಬಂದ ಮೇಲೆ ಅವನು ಮುದ್ರೆ ಹಾಕಿಕೊಳ್ಳುತ್ತಿದ್ದ ಮತ್ತು ಹಾಕುವ ಕೀಲುಗಳು ಬಿದ್ದು ಹೋಗಿದ್ದವು. ಮೊದಲಿನಂತೆ ಪುನಃ ಇವುಗಳನ್ನು ಹುಡುಕಿಕೊಂಡು ಬರುವ ವೇಳೆಗೆ ಸಾಕಷ್ಟು ಹೊತ್ತು ಕಳೆದು ದಿನಗಳೇ ಉರುಳಿದವು. ದಾರಿಯ ಮಧ್ಯದಲ್ಲಿ ಸಮಯದೊಂದಿಗೆ ಸಮರವಾಡುತ್ತಾ ಹೆಣವು ಕೊಳೆತು ವಾಸನೆ ಬರುತ್ತಾ ಇರಲಾಗಿ ಹೆಣದ ಶರೀರವೆಲ್ಲ ಹೊಲಸಾಗಿತ್ತು. ಅಲ್ಲಿಂದ ಹೆಣವನ್ನು ಹೊತ್ತುಕೊಂಡು ಬೇರೆ ಸ್ಥಳಕ್ಕೆ ಬಂದರು. ಮುಸ್ಠಲಗುಮ್ಮಿ ಬಳಿ ಚಿನ್ನಹಗರಿನದಿ ದಂಡೆಯ ಮೇಲೆ ಶವವನ್ನು ಇಳಿಸಿದರು. ‘ಆ ಸ್ಥಳವನ್ನು ಇಂದಿಗೂ ದಿಂಪಗುಡ್ಡೆ’ (ಇಳಿಸಿದ ಗುಡ್ಡೆ) ಎಂದು ಕರೆಯುತ್ತಾರೆ.[8]

ವಲಸೆ ನಿರ್ಮಾಣ

ನಂತರ ಶವವನ್ನು ವಲಸೆ ಮೀಸಲಾರು ದೊಡ್ಡಿ ಎಂಬ ಸ್ಥಳಕ್ಕೆ ತಂದರು. ಆ ಸಮಯಕ್ಕೆ ಹೆಣ ಅಲ್ಲಿಗೆ ಹೊಲಸಾಗಿ ಹೋಗಿತ್ತು. ಆ ಹೆಣವನ್ನು ಚಳ್ಳಕೆರೆ ತಾಲೂಕು ನೇರ‍್ಲಗುಂಟೆ ಹತ್ತಿರವಿರುವ ಹೊಲಸೆ>ವಲಸೆ> ವಲಸೆ (ತೆಲುಗು) ಗೆ ತಂದು ಸಮಾಧಿ ಮಾಡಿದರೆಂದು ಹೇಳುತ್ತಾರೆ.[9] ಆದರೆ ಇತ್ತೀಚಿಗೆ ಕೆಲವು ಶೋಧನೆಗಳ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ, ಕೂಡ್ಲಿಗಿ ತಾಲೂಕಿನ ಹುರುಳಿಹಾಳು ಸಮೀಪವಿರುವ ‘ವಲಸೆ’ ಎಂಬ ಗ್ರಾಮವೇ ಯರಗಾಟನಾಯಕನು ಸಮಾಧಿಯಾಗಿರುವ ಸ್ಥಳವೆಂದು ತಿಳಿದುಬಂದಿದೆ. ಇದಕ್ಕೆ ಆಧಾರ ಅಲ್ಲಿರುವ ಪ್ರಾಚೀನವಾದ ಏಳುಸುತ್ತಿನ ಕಿರದಾದ ಭಗ್ನಗೊಂಡ ಕೋಟೆ, ಮಹಾದ್ವಾರ ಹಾಗೂ ಯರಗಾಟನಾಯಕನು ಸಮಾಧಿಯಾದ ಬೃಹತ್ ದೇವಾಲಯವನ್ನು ತೋರಿಸುತ್ತಾರೆ. ಆದ್ದರಿಂದ ಯರಗಾಟನಾಯಕನ ಮೂಲಸ್ಥಳ ಇದೇ ಇರಬಹುದು.[10]

ಯರಗಾಟನಾಯಕನು ಸಮಾಧಿ ಹೊಂದಿದ ಮೇಲೆ ಒಂಟಿಕೋಡು ಬೆಳ್ಳಿ ಹಸುವಿನ ಕೆಚ್ಚಲಿನ ಹಾಲನ್ನು ಸಮಾಧಿಗೆ ಅಮೃತವೆಂದು ಅರ್ಪಿಸಿ ಧೂಪ ದೀಪಾದಿಗಳಿಂದ ನಾನಾ ವಿಧದ ಪೂಜೆ ಮಾಡಿದರಲ್ಲದೆ, ತುಪ್ಪ ದೀಪಗಳನ್ನು ಬೆಳಗಿಸಿ ಎಲ್ಲರೂ ಸಮಾಧಿಗೆ ಸಾಷ್ಠಾಂಗ ದಿವ್ಯ ನಮಸ್ಕಾರಗಳನ್ನು ಸಲ್ಲಿಸಿ ಮ್ಯಾಸಮಂಡಲದ ಸದಸ್ಯರು ಮತ್ತು ತಂಗಡಲ ತಮ್ಮವ್ವ, ಪುವ್ವಲ ರಾಯವ್ವರೂಗಳು ಸೇರಿ ಪ್ರಯಾಣ ಬೆಳೆಸಿದರು.

ನಂಬಿಕೆ, ಆಚರಣೆ

ಆದಿಕಾಲದಿಂದಲೂ ಬೇಟೆಯನ್ನು ಜೀವನದ ಉಸಿರು ಎಂದು ನಂಬಿದ್ದ ಬೇಡರು, ಪಶುಪಾಲನೆಯಲ್ಲಿಯೂ, ಅಪಾರವಾದ ಸಾಧನೆ ತೋರಿರುವುದು ಗಮನೀಯ ಸಂಗತಿ. ಪಶುಪಾಲನೆ ಎಂದ ಮೇಲೆ ಮೇವು ನೀರಿಗಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವ ಪ್ರಸಂಗ ಒದಗಿ ಬರುತ್ತದೆ. ಪಶುಪಾಲನಾ ಹಂತದಲ್ಲಿ ಒಂದು ಹೆಣ್ಣಿನಿಂದ ಮರಣಹೊಂದಿದ ದುರಂತ ಯರಗಾಟನಾಯಕನ ಮಟ್ಟಿಗೆ ತೀರಾ ಅನಿವಾರ್ಯವಲ್ಲ. ಈ ರೀತಿ ಮ್ಯಾಸಬೇಡರ ಅನೇಕ ಸಾಂಸ್ಕೃತಿಕ ವೀರರು ಹೆಣ್ಣಿಗಾಗಿ ತಮ್ಮ ತನುಮನ ಧನಗಳನ್ನು ಅರ್ಪಿಸಿರುವುದು ಗಮನಾರ್ಹ.

ಗುಡಿದೇವಾಲಯ

ಯರಗಾಟನಾಯಕ ಬಾಳಿಬದುಕಿದ ಸ್ಥಳ ಇಂದು ಆಧ್ಯಾತ್ಮಿಕ ನೆಲೆಯಾಗಿದೆ. ಅವನು ಒಡಾಡಿದ ಜಾಗಗಳಲ್ಲಿ ದೇವಾಲಯ – ಗುಡಿಗಳನ್ನು ನಿರ್ಮಿಸಿದ್ದಾರೆ. ಚಿತ್ರದುರ್ಗಕ್ಕೆ ಸಮೀಪವಿರುವ ಸಾಸಲಹಟ್ಟಿಯಲ್ಲಿ ಬಹು ಸುಂದರವಾದ ಯರಗಾಟನಾಯಕನ ದೇವಾಲಯವಿದೆ. ಎಲ್ಲಾ ಸಮುದಾಯದ ಭಕ್ತರು ಇವನಿಗೆ ನಡೆದುಕೊಳ್ಳುತ್ತಾರೆ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿರುವ ವಲಸೆಯ ಯರಗಾಟನಾಯಕನ ದೇವಸ್ಥಾನವು ಎಲ್ಲಾ ದೇವಾಲಯಗಳಿಗಿಂತ ಪುರಾತನವಾದುದು. ಅದೇ ರೀತಿ ಇತರ ಮ್ಯಾಸಬೇಡರ ಹಟ್ಟಿಗಳಲ್ಲಿ ಇವನ ಭಕ್ತರು ನಿರ್ಮಿಸಿಕೊಂಡಿದ್ದಾರೆ.[11]

ಅನುಯಾಯಿಗಳು

ಈ ಯರಗಾಟನಾಯಕನು ತಮ್ಮ ಮನೆದೇವರೆಂದು ಅವನ ಅನುಯಾಯಿಗಳು ಕಟ್ಟಿಕೊಂಡ ಪಂಥವಿದೆ. ಅವರನ್ನು ಯರಗಟ್ಟವಾರು ಎನ್ನುತ್ತಾರೆ. ಚಿತ್ರದುರ್ಗದ ಮದಕರಿ ವಿದ್ಯಾಸಂಸ್ಥೆಯ ಸ್ಥಾಪಕರು, ನಾಯಕ ಜನಾಂಗದ ಮುಖಂಡರಾದ ಡಿ. ಬೋರಪ್ಪನವರು ಮತ್ತು ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಕಮಲಾಪುರ ಪಟ್ಟಣದ ಮೀಸಲಾರು ಕುಟುಂಬದ ಜೋಗಯ್ಯ ಅಣ್ಣ – ತಮ್ಮಂದಿರುಗಳು ಇವನ ಅನುಯಾಯಿಗಳು. ತಮ್ಮ ಮನೆದೇವರೆಂದು ಇಂದಿಗೂ ಪೂಜಿಸುತ್ತಾರೆ.[12]

ಇಂದಿನ ಸಂಪ್ರದಾಯ

ಯರಗಟವಾರು, ಮೀಸಲಾರು ಎಂಬ ಬೆಡಗಿನವರು ಇಂದು ಪ್ರಧಾನವಾಗಿ ಇವನನ್ನು ಆರಾಧಿಸುತ್ತಾರೆ. ಪ್ರತಿವರ್ಷ ದೀಪಾವಳಿ, ಗುಗ್ಗರಿಹಬ್ಬ ಇತರ ಸಣ್ಣಪುಟ್ಟ ಹಬ್ಬಗಳನ್ನು ಅಮವಾಸೆ, ಹುಣ್ಣಿಮೆಗಳಂದು ಈತನ ಹಬ್ಬಗಳು ಜರುಗುತ್ತವೆ.


[1] ಮುತ್ತಿಗಾರರ ದನಕರುಗಳು ಶ್ರೀಶೈಲ ಮಲ್ಲಿಕಾರ್ಜುನನಿಂದ ಬಂದಂಥ ದೇವರೆತ್ತುಗಳು.

[2] ತಮಟಕಲ್ಲು ಚಿತ್ರದುರ್ಗ ಸಮೀಪವಿರುವ ಚಾರಿತ್ರಿಕ ಮಹತ್ವ ಪಡೆದ ಗ್ರಾಮ ಕ್ರಿ.ಶ. ೫೦೦ರ ಶಾಸನ ಇಲ್ಲಿದೆ.

[3] ಬಾಗೇನಾಳು ಕಾಮನಾಯಕ ಸಣ್ಣ ಪಾಳೆಯಗಾರ

[4] ಸತುವಾದ ಮಾಂಸದ ತುಂಡುಗಳನ್ನು ಸುಟ್ಟು ಕಡ್ಡಿಗೆ ಏರಿಸುವುದನ್ನು ಕರೆ ಎನ್ನುತ್ತಾರೆ.

[5] ತೆಲುಗಿನಲ್ಲಿ ಪುಟ್ಟಡು ಗುಂಡ ಅಗಸರ ಬಟ್ಟೆ ಮೂಟೆಯಷ್ಟು ಗಾತ್ರ ಎಂದಾಗುತ್ತದೆ.

[6] ನಿಡಗಲ್ಲು ಪಾಳೆಯಗಾರರು, ಪಾವಗಡ ತಾಲೂಕು, ತುಮಕೂರು ಜಿಲ್ಲೆ.

[7] ತಾಳಿಕೆರೆ ಎಂಬ ಗ್ರಾಮ ಆಂಧ್ರದ ರಾಯದುರ್ಗ ತಾಲೂಕಿನಲ್ಲಿದೆ. ತಪಲೇಟು ಕೆರೆ ಎಂಬುದು ಚಿತ್ರದುರ್ಗ ಜಿಲ್ಲೆಯಲ್ಲಿರುವ ಒಂದು ಬೆಚರಾಕ್ ಗ್ರಾಮವಿರಬೇಕು.

[8] ವಿದ್ಯಾಭೂಷಣ ರಾಜಶೇಖರಪ್ಪ, ವಕೀಲರು, ೪೮ ನಾಯಕರು, ಮುಸ್ಠಲಗುಮ್ಮಿ ಇವರು ಇದರ ಬಗ್ಗೆ ತಿಳಿಸುತ್ತಾ: ಮುಷ್ಠಲಗುಮ್ಮಿಯಲ್ಲಿ ಪ್ರಾಚೀನವಾದ ಕೋಟೆಯಿದ್ದು, ಯರಗಾಟನಾಯಕನ ದಿಂಪಗುಡ್ಡೆ ಇದೆ. ಜನಪದ ಕಥೆಗಳು ಈ ಬಗ್ಗೆ ಬೆಳಕು ಚೆಲ್ಲುತ್ತವೆ.

[9] ಡಿ. ಬೋರಪ್ಪ, ಕಾಮನ ಬಾವಿ ಬಡಾವಣೆ, ಚಿತ್ರದುರ್ಗ, ೭೦ ನಾಯಕರು ಈ ಬಗ್ಗೆ ಕಥೆಯನ್ನು ಹೇಳುತ್ತಾರೆ.

[10] ಆಂಧ್ರಪ್ರದೇಶದ ಕಡಪಾಜಿಲ್ಲೆ ಕಮಲಾಪುರ ತಾಲೂಕಿನ ಯರಗುಂಟಲ ಎಂಬ ಗ್ರಾಮ ಬೃಹತ್‌ಶಿಲಾ ಸಂಸ್ಕೃತಿ ನೆಲೆ. ಯರಗಾಟನ ಮೂಲವನ್ನು ಈ ಸ್ಥಳದ ಹಿನ್ನೆಲೆಯಲ್ಲಿ ಪರಿಶೀಲಿಸಬಹುದು.

[11] ಯರಗಟ್ಟಿನಾಯಕನು ಕೋರೇಲು ಮಲ್ಲನಾಯ್ಕನಿಗೆ ದೊಡ್ಡಪ್ಪನಾಗಬೇಕು (ಎರ‍್ರಿವಾಡು) ಎಂದು ಮ್ಯಾಸಬೇಡರ ಹಿರಿಯರು ಮೊಳಕಾಲ್ಮುರು ಪ್ರದೇಶದಲ್ಲಿ ತಿಳಿಸುತ್ತಾರೆ.

[12] ಎಸ್.ಬಿ.ತಿಪ್ಪನಾಯಕ, ನಾಯಕ ಜನಾಂಗದ ಇತಿಹಾಸ ಎಂಬ ಹಸ್ತಪ್ರತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.