.ಕೊಡಗಲುಬೊಮ್ಮಯ್ಯ (ಕೊಳಗಲ)

ಹಿನ್ನೆಲೆ

ಮ್ಯಾಸಬೇಡರ ಸಂಸ್ಕೃತಿ ನಿರ್ಮಾಪಕ ಮತ್ತು ಬುಡಕಟ್ಟು ವೀರರ ಪೈಕಿ ಕೊಡಗಲುಬೊಮ್ಮನೆಂಬ ಮಹಾಶಯನು ಪ್ರಮುಖನಾಗಿರುವವನು. ಆರಂಭದಲ್ಲಿ ವೀರನಾಗಿ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಆರಾಧನೆಗೊಳ್ಳುವ ದೇವರಾಗಿರುವುದು ವಿಶೇಷ. ಇಂದಿನ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ ಮುತ್ತಿಗಾರಹಳ್ಳಿ ಅರಣ್ಯದ ಊಟವಂಕ ಮತ್ತು ವಡಕ್ಕಟ್ಟ (ರಾವಲುಕುಂಟೆ) ಇವನ ವಾಸಸ್ಥಳಗಳಾಗಿವೆ. ಈ ಸುತ್ತಮುತ್ತಲಿನ ಪ್ರದೇಶವೆಲ್ಲ ಇವನ ಆಳ್ವಿಕೆಗೊಳಪಟ್ಟಿತ್ತು.

ಕೊಡಗಲುಬೊಮ್ಮನಾಯಕನ ಜನನದ ಕಾಲಮಾನ ಖಚಿತವಾಗಿ ಸಿಗುವುದಿಲ್ಲ. ಕ್ರಿ.ಶ. ೬ ಮತ್ತು ೭ ನೇ ಶತಮಾನವೆಂದು ಗುರುತಿಸಿದರೂ ವಿಜಯನಗರ ಅಥವಾ ಅನಂತರದ ಕಾಲಮಾನಕ್ಕೆ ಇವನು ಸೇರುತ್ತಾನೆ. ಶಾಲಿವಾಹನ ಶಕೆ ೧೩೦೩ನೇ ಕೀಲಕನಾಮ ಸಂವತ್ಸರ ಮಾಘ ಶುದ್ಧ ಎಂದೆಲ್ಲಾ ದಾಖಲಿಸಲಾಗಿದೆ. ಇಲ್ಲಿ ‘ಕೊಡಗು’ ಎಂಬುದು ಮನೆತನದ ಹೆಸರು. ಬ್ರಹ್ಮನ ಭಕ್ತ, ಅನುಯಾಯಿಗಳಿಗೆ ಜನಪದರು ಬೊಮ್ಮೆ ಎಂಬ ನಾಮಾಂಕಿತದಿಂದ ಕರೆಯುವರು. ಈ ಬೊಮ್ಮನು ನಾಯಕ ಬುಟ್ಟುಗಲೋರ ಬೆಡಗಿಗೆ ಸೇರಿದ ಗುಪ್ತಬೊಮ್ಮತಿರಾಜು ಸಂತತಿಯವನು. ಗೌರಸಮುದ್ರದ ಮಾರಮ್ಮನಿಗೆ ಸಹೋದರನಾಗಬೇಕು ಈ ಬೊಮ್ಮ.

ಸಾಧನೆ

ಇವನು ನರಕಾಸುರನ ಕೋಟೆಯಲ್ಲಿರುವ ಹನ್ನೆರಡು ಪೆಟ್ಟಿಗೆ ದೇವರುಗಳು, ಒಂಬತ್ತು ಜನ ಅಜ್ಜನೋರನ್ನು ಬಿಡುಗಡೆ ಮಾಡತುತ್ತೇನೆಂದು ವೀಳ್ಯ ಪಡೆದ ಸಾಹಸವೀರಶೂರನೆಂದು ಖ್ಯಾತನಾಗಿರುವನು. ಈ ಬಗೆಯ ಪಂಥವನ್ನು ಕಟ್ಟಿಕೊಂಡು ಜಯಶಾಲಿಯಾದ ಬೇಡರು ತುಂಬಾ ವಿರಳ. ಬೊಮ್ಮನು ಮಾತ್ರ ವಿಶಿಷ್ಟವಾಗಿ ಕಂಡುಬರುವುದು ಅವನ ಸ್ಥಾನ – ಮಾನದ ಮೂಲಕ ಎಂಬುದು ನಿಜ.

ದೇವಮ್ಮ

ಈ ಕೊಡಗಲು ಬೊಮ್ಮಯ್ಯ ಒಳ್ಳೆಯ ಮೇಧಾವಿಯೂ, ಶೂರನೂ, ಅಪ್ರತಿಮ ಬಿಲ್ಲುಗಾರನೂ ಆಗಿದ್ದ. ಇವನಿಗೆ ಏಕೈಕ ಸಹೋದರಿ ದೇವಮ್ಮ ಎಂಬ ಸುಂದರಿ ಇದ್ದಳು. ತನ್ನ ತಂಗಿ ಎಂದರೆ ಇವನಿಗೆ ಅಪಾರ ಪ್ರೀತಿ; ಪಂಚಪ್ರಾಣ. ತನ್ನ ಪ್ರಾಣದ ಹಂಗುತೊರೆದು ಎಲ್ಲೇಮೀರಿ ತನ್ನ ತಂಗಿಯನ್ನು ಪೋಷಿಸುತ್ತಿದ್ದನು. ದೇವಮ್ಮ ಅಪೂರ್ವ ಸುಂದರಿಯು, ನಿಯಮಪಾಲಕಳು ಮತ್ತು ದೈವತ್ವವನ್ನು ಹೊಂದಿದ್ದಳು. ಅಂದರೆ ದೈವಸಂಭೂತಳೆಂದು ವಾಕ್‌ಶುದ್ಧಿ ಇರುವಳು. ಒಳ್ಳೆಯ ಪವಾಡ ಭೂಷಿತಳಾಗಿ ತನ್ನ ಅಣ್ಣನಿಗೆ ಅನೇಕ ವಿಧದ ಸಂಕಷ್ಟಗಳಲ್ಲಿ ಪಾಲುದಾರಳಾಗಿ ಸಹಕರಿಸುತ್ತಿದ್ದಳು.

ವೀಳ್ಯೆ ಹಿಡಿಯುವುದು

ಮೂರುನೂರು ಸಾವಿರಮ್ಯಾಸ ಮಂಡಳಿ ಜನರಿದ್ದರೂ ಲಕ್ಷಿಸದೆ, ನರಕಾಸುರನು ಇವರ ೧೨ ಪೆಟ್ಟಿಗೆ ದೇವರು ಮತ್ತು ಒಂಬತ್ತು ಅಜ್ಜನೋರನ್ನು ಒಳಗೊಂಡು ಅಪಹರಿಸಿಕೊಂಡು ಹೋಗಿ ನರಕದಕೋಟೆ ನಿರ್ಮಿಸಿರುತ್ತಾನೆ. ಈ ನರಕಸುರ ಯಾರು ಎಲ್ಲಿಯವನೆಂಬ ಸ್ಪಷ್ಟ ಚಿತ್ರಣವಿಲ್ಲ. ಆನೆಗುಂದಿ ದೊರೆಗಳನ್ನು ನರಪತಿಗಳೆಂದು, ಅವರ ರಾಜ್ಯವನ್ನು ನರಪತಿ ಸಂಸ್ಥಾನವೆಂದು ಕರೆಯುತ್ತಿದ್ದರು. ಈ ಹಿನ್ನೆಲೆಯಲ್ಲಿ, ಆನೆಗುಂದಿಯ ಅರಸನೊಬ್ಬ ಈ ಕೃತ್ಯವೆಸಗಿರಬಹುದಾಗಿದೆ.

ಸಹೋದರಿಯ ಪ್ರೋತ್ಸಾಹದಿಂದ ಕೊಡಗುಬೊಮ್ಮಯ್ಯ ನರಕಾಸುರನ ನರಕದ ಕೋಟೆಯನ್ನು ಭೇದಿಸುವ ಸಾಮರ್ಥ್ಯದಿಂದ ಮುನ್ನೂರು ಸಾವಿರ ಮ್ಯಾಸ ಮಂಡಳಿಯಲ್ಲಿ ಒಬ್ಬನಾಗಿ ವೀಳ್ಯ ಹಿಡಿಯುವನು. ಈ ವೀಳ್ಯ ಹಿಡಿದ ಮರುದಿನ ನರಕದಕೋಟೆ ಭೇದಿಸಬೇಕಾಗಿತ್ತು. ತನ್ನ ಪ್ರೀತಿಯ ತಂಗಿ ದೇವಮ್ಮನೊಂದಿಗೆ ನರಕದಕೋಟೆಯನ್ನು ಭೇದಿಸುವ ಬಗ್ಗೆ ಚಿಂತನೆ ಮಾಡಿ ಒಂಬತ್ತು ಅಜ್ಜನೋರನ್ನು ನರಕಾಸುರನ ಸೆರೆಯಿಂದ ಮುಕ್ತಗೊಳಿಸಬೇಕೆಂದು ಸಿದ್ಧನಾದ.

ಯರಮಂಚಿನಾಯಕ, ದಳವಾಯಿ ಗಗ್ಗರಿದಾಸ ಇಬ್ಬರೂ ಪವಾಡಪುರುಷರಾಗಿದ್ದರೂ ಸಹಾ ನರಕದಕೋಟೆ ಭೇದಿಸುವಲ್ಲಿ ಹೆದರಿದ್ದರು. ಇವರು ದೇವರಿಗೆ ಮತ್ತು ಅಜ್ಜಂದಿರಿಗಾಗಿ ಚಿಂತಿಸುತ್ತಿದ್ದರು. ಸಾವಿರದ ಮ್ಯಾಸಮಂಡಳಿಯವರು ನರಕದಕೋಟೆ ಒಡೆಯಲು ನಾಳೆ ಸನ್ನದ್ಧನಾಗಬೇಕು ಯರಮಂಚಿನಾಯಕ, ಗಗ್ಗರಿದಾಸರು ಸೇರಿ ಬೊಮ್ಮನಿಗೆ ತಿಳಿಸಿದರು. ಜೊತೆಗೆ ಸಹೋದರಿಯಾದ ದೇವಮ್ಮ ಅಣ್ಣನಿಗೆ ಇದು ಒಳ್ಳೆಯ ಕಾರ್ಯ, ಇದನ್ನು ನಾವು ಸಾಧಿಸಿದರೆ ಇಡೀ ನಮ್ಮ ಮ್ಯಾಸಮಂಡಲದಲ್ಲಿ ಸೂರ್ಯಚಂದ್ರರಿರುವವರೆಗೆ ನಿನ್ನ ಹೆಸರು ಅಜಾರಾಮರವಾಗಿ ಮೆರೆಯುತ್ತದೆ. ಅಲ್ಲದೆ, ಬುಟ್ಟುಗಲೋರ ಬೆಡಗಿಗೂ ಸಹ ಕೀರ್ತಿಬರುತ್ತದೆ.ಇದೊಂದು ಅವಿಸ್ಮರಣೀಯವಾದ ಸಾಧನೆ, ತಪ್ಪದೆ ಜಯಗಳಿಸಬೇಕೆಂದು ಸಮಾಲೋಚಿಸಿದಳು.

ಕೊಡಗಲುಬೊಮ್ಮನ ಬೇಟೆ

ಕೊಡಗಲುಬೊಮ್ಮನು ತನ್ನ ತಂಗಿಗೆ ನಾನು ಕಾಡಿಗೆ (ಬೇಟೆ ಪ್ರಾಣಿಗಾಗಿ) ಹೋಗಿಬರುತ್ತೇನೆ. ಅಲ್ಲಿಯವರೆಗೆ ನೀನು ಇಲ್ಲಿಯೇ ಇರು ಎಂದು ಹೇಳಿ, ಬಿಲ್ಲುಬಾಣ ಹಿಡಿದು ಕಾಡಿಗೆ ನಡೆದನು. ಇತ್ತ ಅಣ್ಣ ಹೋದ ನಂತರ ತಂಗಿಯಾದ ದೇವಮ್ಮ ಮನೆಯಲ್ಲಿ ನಿಷ್ಪ್ರಯೋಜನವಾಗಿ ಕಾಲಕಳೆಯುವುದಕ್ಕಿಂತ ಸಾಯಂಕಾಲದ ಊಟಕ್ಕೆ ಆಲೆ ಸೊಪ್ಪಾದರೂ ತರೋಣವೆಂದು ಮನೆಯಿಂದ ಕಾಡಿಗೆ ತೆರಳಿದರು.

ಹೀಗೆ ಬೇಡರ ಸ್ತ್ರೀ ಪುರುಷರಿಬ್ಬರೂ ಆದಿಕಾಲದಿಂದಲೂ ಕೂಡಿ ಆಹಾರಕ್ಕಾಗಿ ಬೇಟೆಯಾಡುವುದು ಬೆಳೆದು ಬಂದಿದೆ. ಕಾಡಿನಲ್ಲಿ ವಾಸಮಾಡಿದಾಗ ಅಲ್ಲಿ ದೊರೆಯುವ ಮರದ ಚಿಗುರೆಲೆಗಳನ್ನು, ತಮ್ಮ ವಸ್ತ್ರಗಳನ್ನಾಗಿ ಮಾಡಿಕೊಂಡು, ಸೊಂಟದಿಂದ ಮೊಣಕಾಲಿನವರೆಗೆ ಮಾತ್ರ ಸುತ್ತಿಕೊಳ್ಳುತ್ತಿದ್ದರು. ಪುರುಷರು ಬೇಟೆಯಾಡಿ ತಂದ ಪ್ರಾಣಿಗಳ ಚರ್ಮವನ್ನು ತಮ್ಮ ದೇಹಕ್ಕೆ ಉಡುಪಾಗಿ ಧರಿಸುತ್ತಿದ್ದರು. ಸೊಂಟಕ್ಕೆ ಚಲ್ಯಾಣ, ತಲೆಗೆ ಚರ್ಮದ ಪಟ್ಟಿಗಳನ್ನು ಸುತ್ತಿಕೊಳ್ಳುತ್ತಿದ್ದರು. ಪ್ರಾಣಿಗಳ ಚರ್ಮ, ಮರದ ತೊಗಟೆಯಿಂದ ಸ್ತ್ರೀ – ಪುರುಷರು ತಮ್ಮ ಮಾನ ಮುಚ್ಚಿಕೊಳ್ಳುತ್ತಿದ್ದರೆಂದು ಬೇಡರ ಹಳೆಯ ತಲೆಮಾರಿನವರ ಅಭಿಪ್ರಾಯ. ಕಾಡಿನಲ್ಲಿ ಸಿಗುವ ಗುಲಗಂಜಿಗಳಿಂದ ಮಾಲೆ ತಯಾರಿಸಿಕೊಂಡು ಕೊರಳಿಗೆ ಹಾಕಿಕೊಳ್ಳುತ್ತಿದ್ದರು. ಪಕ್ಷಿಗಳ ಚಂದದ ಗರಿಗಳನ್ನು ತಲೆಯಲ್ಲಿ ಮುಡಿದುಕೊಳ್ಳುತ್ತಿದ್ದರು. ಕಾಲಿಗೆ ಪಾದರಕ್ಷೆಗಳನ್ನು ಸಹಾ ತೊಡುತ್ತಿರಲಿಲ್ಲ. ಸ್ತ್ರೀಯರು ಬೇಟೆಯಲ್ಲಿ ನೈಪುಣ್ಯತೆ ಹೊಂದಿದ್ದರು. ಈ ರೀತಿ ಯುಗಾಂತರಗಳಿಂದಲೂ ಬೇಡರ ಪದ್ಧತಿಗಳು ವಿಕಾಸ ಹೊಂದುತ್ತಾ ಬಂದಿವೆ. ಇಂಥದೇ ರೂಢಿಗತ ಉಡುಗೆ – ತೊಡುಗೆಗಳನ್ನು ದೇವಮ್ಮ ಧರಿಸುತ್ತಿದ್ದಳು. ಆದರೂ ಕೊಡಗುಬೊಮ್ಮನು ಏಕೈಕ ತಂಗಿಯಾದ ದೇವಮ್ಮನಿಗೆ ಪ್ರೀತಿಯದ್ಯೋತಕವಾಗಿ ಕರಿಯಕಾಗಿನ ಸೀರೆ, ಬಿಳಿಯ ಕುಪ್ಪಸವನ್ನು ತಂದುಕೊಟ್ಟಿದ್ದನು. ಆಗಾಗ ಇವಳು ಅದನ್ನೇ ಉಡುತ್ತಿದ್ದಳು.

ಬೇಟೆಗೆ ಬಲಿಯಾದ ದೇವಮ್ಮ

ಕೊಡಗಲುಬೊಮ್ಮನು ಬೇಟೆಗೆ ಹೋದ ನಂತರ ದೇವಮ್ಮನು ತನ್ನ ಪ್ರೀತಿಯ ಅಣ್ಣನ ಉಡುಗೊರೆಗಳಾದ ಕರಿಯ ಕಾಗಿನ ಸೀರೆಯನ್ನುಟ್ಟು ಬಿಳಿಯ ಕುಪ್ಪುಸ ತೊಟ್ಟು. ಅಂದಗಾತಿಯಾಗಿ ಅಡವಿಗೆ ಸೊಪ್ಪು ತರಲು ಹೊರಟಳು. ಯೌವನಕ್ಕೆ ಕಾಲಿಟ್ಟ ದೇವಮ್ಮ ಸುಂದರವಾಗಿ ಕಾಣುತ್ತಿದ್ದಳು. ಇವಳು ಕರಿಯ ಕಾಗಿನಸೀರೆ, ಬಿಳಿಯ ಕುಪ್ಪಸತೊಟ್ಟು ಸುರಸುಂದರಿಯಂತೆ ಮನೆಯಿಂದ ನೀರಿಗೆ ಹೊರಟರೆ ಅಣ್ಣ ಕೊಡಗುಬೊಮ್ಮನು ದೂರದಿಂದ ತನ್ನ ತಂಗಿಯ ಸೌಂದರ್ಯವನ್ನುಕಂಡು ಹಿಗ್ಗಿ ಆನಂದಪಡುತ್ತಿದ್ದನು. ದೇವಮ್ಮ ಅಷ್ಟೇ ಗುಣವಂತೆ, ಶೀಲವಂತೆ, ವಾಕ್‌ಶುದ್ಧಿಯುಳ್ಳವಳಾಗಿದ್ದಳು. ಜ್ಯೋತಿಯಂತೆ ಮನೆಗೆ ದಾರಿ ದೀಪವಾಗಿದ್ದ ದೇವಮ್ಮ ಅಪ್ಪಟ ಬುಡಕಟ್ಟಿನ ಮಹಿಳೆ ಲಕ್ಷಣಗಳನ್ನು ಹೊಂದಿದ್ದಳು. ಮೊದಲೇ ತಿಳಿಸಿದಂತೆ ಸೊಪ್ಪಿಗಾಗಿ ಅಡವಿಗೆ ಬಂದ ದೇವಮ್ಮ ಸೀಗೆಪಳೆಯಲ್ಲಿ ಸೊಪ್ಪು ಬಿಡಿಸುತ್ತಿದ್ದಳು. ಬೇಟೆಗೆಂದು ಕಾಡಿಗೆ ಹೋದ ಕೊಡಗಲುಬೊಮ್ಮನು ಈ ಕಡೆ ಬಂದು ಸೀಗೆ ಪೊದೆಯಲ್ಲಿ ಸಪ್ಪಳವಾದುದನ್ನು ಗಮನಿಸಿದ. ಕಪ್ಪುಬಣ್ಣ ಎದ್ದು ಕಂಡಿತು. ಬೇಟೆಯ ವ್ಯಸನಕ್ಕೀಡಾದ ಬೊಮ್ಮನು ಪೊದೆಯಲ್ಲಿರುವುದು ಕಾಡುಪ್ರಾಣಿಯೆಂದು ತಿಳಿದು ಬಿಲ್ಲಿಗೆ ಬಾಣ ಏರಿಸಿ ಗುರಿಯಿಟ್ಟು ಶಬ್ದಬರುವ ಕಡೆ ಬಿಟ್ಟ. ಬಿಟ್ಟ ಬಾಣ ಹುಸಿಯಾಗಲಿಲ್ಲ. ನೇರವಾಗಿ ಪೊದೆಯಲ್ಲಿದ್ದ ತನ್ನ ತಂಗಿ ದೇವಮ್ಮನ ಎದೆಗೆ ಬಾಣ ತಾಗಿದಾಕ್ಷಣ ಅಣ್ಣಾ! ಎಂದು ಕಿರುಚಿಕೊಂಡಳು. ಅಣ್ಣಾ! ಎಂಬ ಶಬ್ದ ಕೇಳುತ್ತಲೆ ಕೊಡಗಲುಬೊಮ್ಮನು ಹೌಹಾರಿ ರಭಸದಿಂದ ಓಡಿಬಂದನು. ಪೊದೆಯಲ್ಲಿ ವಿಲಿವಿಲಿ ಒದ್ದಾಡುತ್ತಾ ಅಣ್ಣಾ! ಅಣ್ಣಾ!! ಎಂದು ಕನವರಿಸುತ್ತಿದ್ದ ತಂಗಿಯನ್ನು ಕಂಡು ಅವಳು ಸೆರಗಿನಿಂದ ಮುಖಮುಚ್ಚಿಕೊಂಡಿದ್ದರಿಂದ ಗುರುತು ಸಿಗಲಿಲ್ಲ. ಕೊಡಗಲುಬೊಮ್ಮನು ಅವಳ ಎದೆಯಲ್ಲಿ ನಾಟಿದ್ದ ಬಾಣವನ್ನು ಕಿತ್ತು, ಬಾಚಿ ತಬ್ಬಿಕೊಂಡು ಪೊದೆಯಿಂದ ಹೊರತಂದನು. ಬಾಣನಾಟಿದ ಜಾಗದಲ್ಲಿ ರಕ್ತ ಸುರಿಯುತ್ತಿತ್ತು. ನೋವಿನ ಭಾದೆಯಿಂದ ದೇವಮ್ಮ ತತ್ತರಿಸಿ ಹೋಗಿದ್ದಳು. ಅಪರಿಚಿತ ಹೆಣ್ಣನ್ನು ಕೊಂದು ಸ್ತ್ರೀಹತ್ಯೆಯಿಂದ ಪಾಪಕ್ಕೆ ಗುರಿಯಾದನೆಂದು ತಿಳಿದು ತೀವ್ರವಾಗಿ ಪಶ್ಚಾತ್ತಾಪ ಪಟ್ಟನು. ಮುಖದ ಮೇಲಿನ ಸೆರಗು ತೆಗದು ನೋಡಿದಾಗ ‘ಬೇಟೆಯ ಪ್ರಾಣಿ’ ಮತ್ಯಾರೂ ಅಲ್ಲ, ತನ್ನ ತಂಗಿ ದೇವಮ್ಮನೇ ಆಗಿದ್ದಳು.

ದೇವತೆಗೆ ಸಮಾನಳಾದ ತನ್ನ ತಂಗಿ ದೇವಮ್ಮನ ಸಾವಿಗೆ ಕಾರಣನಾದೆನೆಂದು ಮರುಗುತ್ತಾ ಮೂರ್ಛೆ ಹೋದ. ಎಚ್ಚರವಾದ ತಕ್ಷಣ ತಂಗಿಯನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ತಾಯಿ ದೇವಮ್ಮ ನಾನು ಎಂಥಾ ಪಾಪದ ಕೆಲಸ ಮಾಡಿಬಿಟ್ಟೆ. ಬೇಟೆಯ ವ್ಯಸನದಲ್ಲಿ ನಾನು ಯಾವುದೋ ಕಾಡುಪ್ರಾಣಿಯೆಂದು ತಿಳಿದು ನಿನ್ನನ್ನು ಕೊಂದುಬಿಟ್ಟೆನಲ್ಲಾ ಎಂದು ದಾರುಣವಾಗಿ ಕಿರುಚಾಡತೊಡಗಿದನು. ನಾನೊಬ್ಬನೆ ಈ ಲೋಕದಲ್ಲಿದ್ದು, ಪ್ರಯೋಜನವೇನು, ನಾನು ನಿನ್ನೊಡನೆ ಬರುವೆನೆಂದು ಆತ್ಮಹತ್ಯೆ ಮಾಡಿಕೊಳ್ಳಲು ಹಾತೊರೆಯುತ್ತಾನೆ. ಆದರೆ ದೇವಮ್ಮ ದಿವ್ಯಸ್ಮರಣೆಯಿಂದ ಕೊನೆಯುಸಿರೆಳೆಯುವ ಮುನ್ನ ತನ್ನ ಹಣೆಬರಹ ಬಗ್ಗೆ ತಿಳಿಸುತ್ತಾ ‘ವೀಳ್ಯಾವಾಗ್ದಾನ ಮರೆಯಬೇಡ’, ಕೊಟ್ಟ ಮಾತು ಕಳೆದುಕೊಳ್ಳಬೇಡ, ದೇವರುಗಳನ್ನು, ಅಜ್ಜನವರನ್ನು ಕಾಪಾಡಿ ರಕ್ಷಿಸು ಎಂದು ಹೇಳಿ ಅಣ್ಣನ ತೊಡೆಯ ಮೇಲೆ ಪ್ರಾಣಬಿಟ್ಟಿದ್ದನ್ನು ನೆನಪಿಸಿಕೊಂಡು ಧೈರ್ಯ ತಂದುಕೊಂಡ.

ಸಮಾಧಿ ಮತ್ತು ದಿವ್ಯಸಂದೇಶ

ಅತೀವ ದುಃಖದ ಮನಸ್ಸಿನಿಂದ ಕೊಡಗಲುಬೊಮ್ಮನು ತಂಗಿಯ ಶವವನ್ನು ಊಟಕುಂಟೆ ಸಮೀಪದಲ್ಲಿ ಸಮಾಧಿ ಮಾಡಿದನು. ಈ ಊಟಕುಂಟೆ ಎಂಬ ಸ್ಥಳ ಚಿತ್ರದುರ್ಗ ಜಿಲ್ಲೆ, ಮೊಳಕಾಲ್ಮುರು ತಾಲೂಕಿನ ಮುತ್ತಿಗಾರಹಳ್ಳಿ ಅರಣ್ಯದ ನಡುಭಾಗದಲ್ಲಿದೆ. ಇದಕ್ಕೆ ಕಮರದ ಕಾವಲು ಎಂದು ಕರೆಯುತ್ತಾರೆ. ಬೊಮ್ಮನು ತನ್ನ ತಂಗಿ ಹೇಳಿದ ಮಾತುಗಳನ್ನು ಆಗಾಗ ನೆನಪಿಸಿಕೊಳ್ಳುತ್ತಿದ್ದ. ಸದಾ ಅದೇ ಚಿಂತೆಯಲ್ಲಿ ತೊಡಗಿದಾಗ ತೂಕಡಿಕೆ ಬಂದಂತಾಗಿ ಕಣ್ಣು ಮುಚ್ಚಿದನು. ಬೆಳಗಿನ ಜಾವದ ಸಮಯ ಅಣ್ಣನ ಕನಸಿನಲ್ಲಿ ಕಾಣಿಸಿಕೊಂಡು ‘ಅಣ್ಣಾ ಅಂದು ನೀನು ಮ್ಯಾಸಮಂಡಲಕ್ಕೆ ಮಾತುಕೊಟ್ಟು ವೀಳ್ಯೆ ಹಿಡಿದಿದ್ದೀಯಾ, ನಾಳೆ ನರಕಾಸುರನ ನರಕದ ಕೋಟೆಯನ್ನು ಒಡೆದು ದೇವರ ಪೆಟ್ಟಿಗೆಗಳನ್ನು, ಒಂಬತ್ತು ಅಜ್ಜನೋರನ್ನು ಹೊರಗೆ ತರಬೇಕೆಂದು ಹೇಳಿದಳು. ನಾನು ಶಾರೀರಿಕವಾಗಿ ಇಲ್ಲದಿರಬಹುದು. ಆದರೆ ಆತ್ಮಧಾರಿಯಾಗಿ ನಿನ್ನ ಸಕಲ ಕಾರ್ಯಗಳಲ್ಲಿ ನೆರವಾಗುವೆ. ಒಟ್ಟಾರೆ ನರಕಾಸುರನ ಕೋಟೆಯನ್ನು ನಾಳೆ ಒಡೆಯಬೇಕು. ಬಂಧಿತರನ್ನು ಮುಕ್ತಗೊಳಿಸಬೇಕೆಂದಳು.’

ಮುಂದುವರೆದು ಅಣ್ಣಾ ನಿರುತ್ಸಾಹಿಯಾಗದೆ, ಕಾರ್ಯಮಗ್ನನಾಗಿರು. ನಾಳೆ ಮಧ್ಯಾಹ್ನದ ವೇಳೆಯಲ್ಲಿ ನೀನು ನರಕದ ಕೋಟೆಯ ಬಳಿ ನನಗೆ ಕಾದಿರು. ಮಟ ಮಟ ಮಧ್ಯಾಹ್ನದಲ್ಲಿ ನಾನು ಕೆಂದೂಳಿನ ಸ್ವರೂಪದಲ್ಲಿ ಕಾಣಿಸಿಕೊಂಡು ಭಯಂಕರ ಬಿರುಗಾಳಿಯಾಗಿ ವರಾಹ ರೂಪದಲ್ಲಿ ಬಂದು ನರಕದ ಕೋಟೆಯನ್ನು ಹೊಡೆದು ಕೊಟ್ಟ ಮಾತನ್ನು ಉಳಿಸಿಕೊಳ್ಳುವೆನೆಂದು ಹೇಳಿದಾಗ ಕೊಡಗಲುಬೊಮ್ಮನು ಕನಸಿನಲ್ಲಿ ಕಂಡ ದೃಶ್ಯವನ್ನು ಜ್ಞಾಪಿಸಿಕೊಳ್ಳುತ್ತಾ ನಿತ್ಯ ಕರ್ಮಗಳನ್ನು ಮುಗಿಸಿ ತಂಗಿ ಹೇಳಿದ ಸ್ಥಳಕ್ಕೆ ಹೋದನು.

ನರಕದ ಕೋಟೆ ಧ್ವಂಸ

ಮಟಮಟ ಮಧ್ಯಾಹ್ನವಾಗುತ್ತ ಬರಲಾಗಿ ಧೂಳೆದ್ದು, ಕ್ರಮೇಣವಾಗಿ ಸುಂಟರಗಾಳಿಯಾಗಿ ಕೆಂದೂಳು ಮಿಶ್ರಗೊಂಡು ಬೋರ್ಗರೆಯುತ್ತಾ ಬಂದಾಗ, ಆ ಗಾಳಿಯ ರಭಸಕ್ಕೆ ಯಾವುದರ ತಡೆ ಇರಲಿಲ್ಲ. ನರಕದ ಕೋಟೆಯ ಶಿಖರದಲ್ಲಿದ್ದ ನರಕಾಸುರನು ಆ ಸುಂಟರಗಾಳಿ ರಭಸಕ್ಕೆ ತತ್ತರಿಸಿ ಹೆದರಿ ಅಲ್ಲಿಂದ ಪಲಾಯನಗೈದನು.

ಭಯಂಕರವಾದ ಕೆಂಧೂಳಿ ಮಿಶ್ರಿತ ಬಿರುಗಾಳಿಯಲ್ಲಿ ಕಪ್ಪನೆಯ ಬಣ್ಣದ ಹಂದಿ ಕಾಣಿಸಿಕೊಂಡು ನರಕಸುರನ ಕೋಟೆಗೆ ಲಗ್ಗೆಯಿಟ್ಟು ಅದನ್ನು ನಿರ್ನಾಮಮಾಡಿತು. ಸಮಯ ಕಾಯುತ್ತಿದ್ದ ಕೊಡಗುಬೊಮ್ಮನು ಒಳಗಡೆ ಹೋಗಿ ಹನ್ನೆರಡು ಪೆಟ್ಟಿಗೆ ದೇವರೊಂದಿಗೆ ಒಂಬತ್ತು ಅಜ್ಜನೋರನ್ನು ಕರೆದುಕೊಂಡು ಬಂದು ಯರಮಂಚಿನಾಯಕನಿಗೆ ತನ್ನ ಷರತ್ತಿನಂತೆ ಒಪ್ಪಿಸಿದನು. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ತಾಲೂಕಿನಲ್ಲಿರುವ ‘ಗಲಗಲ್ಲು’ ದೇವಮ್ಮನ ಆವಾಸಗ್ರಾಮ. ಅಲ್ಲಿ ದೇವಮ್ಮನ ಭವ್ಯ ದೇವಾಲಯವಿದೆ. ನರಕಸುರನದು ಆನೆಗುಂದಿ (ಅಥವಾ ಮೊಳಕಾಲ್ಮುರುವಿನ ನುಂಕಮಲೆ ಪ್ರದೇಶ) ಇರಬೇಕು.

ಹನ್ನೆರಡು ಪೆಟ್ಟಿಗೆ ದೇವರುಗಳನ್ನು, ಒಂಬತ್ತು ಜನ ಅಜ್ಜನೋರನ್ನು ದೊರೆಗೆ ಒಪ್ಪಿಸಿದ ತರುವಾಯ ಕೊಡಗಲುಬೊಮ್ಮನು ದೊರೆಯನ್ನು ಕುರಿತು ದೊರೆಗಳೇ ನೀವು ಡಂಗುರ ಹೊಡಿಸಿದಂತೆ, ನಾನು ಕೆಲಸವನ್ನು ಮುಗಿಸಿರುತ್ತೇನೆ. ನೀವು ನನಗೆ ಸಲ್ಲಬೇಕಾಗಿರುವ ಮಾಮೂಲುಗಳನ್ನು ಕೊಡಿಸಿಕೊಡಬೇಕೆಂದು ಕೇಳಿದನು. ಇತ್ತ ಯರಮಂಚಿನಾಯಕ ೧೨ ಪೆಟ್ಟಿಗೆ ದೇವರನ್ನು, ೯ ಅಜ್ಜಿನೋರಿಗೆ ಸಾಂತ್ವನ ಹೇಳಿ ನದಿ ತೀರದ (ಚಿನ್ನಹಗರಿ ಅಥವಾ ವೇದಾವತಿ) ಬಳಿ ಅವುಗಳಿಗೆ ಗಂಗಾಸ್ನಾನ ಮಾಡಿಸಿ ಎಲ್ಲಾ ಪೂಜೆ, ಪುನಸ್ಕಾರಗಳನ್ನು ಮಾಡಿ ಮುಗಿಸಿದರು. 

ಕೊಡಗುಬೊಮ್ಮನ ಕೋಟೆ, ಮುಷ್ಠಲಗುಮ್ಮಿ

ಬೊಮ್ಮನ ದುರಾಡಳಿತ (ಬರ್ಬರ)

ಸವಾಲಿನಲ್ಲಿ ಜಯಸಿದ ಕೊಡಗಲುಬೊಮ್ಮನಿಗೆ ಹಿಂದೆ ಡಂಗೂರ ಬಡಿಸಿದಂತೆ ಇಂದಿನಿಂದ ಮೊಗ್ಗಲ ತೆರಿಗೆ, ಬೆಣ್ಣೆಮುದ್ದೆಗಳು, ಮೊದಲು ಹುಟ್ಟಿದ ಗಂಡುಕರುಗಳು, ಟಗರುಗಳು, ಹೋತುಗಳು ಮುಂತಾದವುಗಳನ್ನು ಪ್ರತಿಯೊಬ್ಬರೂ ಕೊಡಬೇಕೆಂದು ಮತ್ತೆ ತಾಕಿತು ಮಾಡಿದ. ಅಲ್ಲದೆ, ಋತುಮತಿಯರಾದ ಊರಿನ ಹೆಣ್ಣುಗಳನ್ನು, ಹೊಸದಾಗಿ ಮದುವೆಯಾಗಿ ಊರಿಗೆ ಬಂದ ಮಧುವಣಗಿತ್ತಿಯರು ಮೊದಲ ರಾತ್ರಿಗಳನ್ನು ಕೊಡಗಲುಬೊಮ್ಮನೊಡನೆ ಕಳೆಯಬೇಕಾಗಿತ್ತು. (ಇದನ್ನು ನಿಷೇಕಪ್ರಸ್ಥವೆಂತಾಗಲಿ, ನಿಯೋಗಪದ್ಧತಿಯಂತಾಗಲಿ ಕರೆಯಲಾಗದು). ಹೆಣ್ಣು ಒತ್ತಾಯಪೂರ್ವಕವಾಗಿ ಅನುಭೋಗಿಸುವ ಬರ್ಬರ ಕೃತ್ಯದಂತಿದೆ. ಈ ವ್ಯವಸ್ಥೆ ಮುಂದುವರೆದ ಜನಾಂಗದಲ್ಲಿದ್ದು, ಬೇಡರ ದೊರೆ ಇಂಥ ವ್ಯವಸ್ಥೆಗೊಳಪಟ್ಟಿದ್ದು ದುರಂತವೆನ್ನಬಹುದು.

[1]

ಆಳ್ವಿಕೆಯ ವಿರುದ್ಧ ಅಪಸ್ವರ

ಡಂಗೂರದ ನಿಯಮದಂತೆ ಬೊಮ್ಮನಿಗೆ ಎಲ್ಲಾ ರೀತಿಯ ಸವಲತ್ತುಗಳು ಕೆಲವು ದಿನಗಳು ಮಾತ್ರ ದೊರೆತವು. ಕ್ರಮೇಣವಾಗಿ ಉತ್ಕೃಷ್ಟತೆ ಎಲ್ಲಾ ಕಾಲದಲ್ಲೂ ಇರಲಿಕ್ಕಿಲ್ಲ. ಬರುಬರುತ್ತಾ ಜನ ಬೇಸತ್ತರಲ್ಲದೆ, ಮನೆಗಳಲ್ಲಿ ಬೆಣ್ಣೆ – ತುಪ್ಪ ತಿನ್ನುವಂತಿಲ್ಲ. ಹೋರಿ, ಟಗರು, ಹೋತುಗಳನ್ನು ಮಾರಾಟ ಮಾಡುವಂತಿಲ್ಲ. ಪ್ರತಿಯೊಂದಕ್ಕೂ ದೊರೆಯ ಅಪ್ಪಣೆ ಬೇಕಾಗಿತ್ತು. ಜನರು ಇವನಿಂದ ತತ್ತರಿಸಿ, ಬವಣೆ – ಶೋಷಣೆಯಿಂದ ವಿಮುಕ್ತರಾಗಲು ಹಾತೊರೆದರು.

ಬೇಸತ್ತ ಪ್ರಜೆಗಳ ಪಯಣ

ಮ್ಯಾಸಬೇಡರ ಸಮುದಾಯದ ನಾಯಕ ಮತ್ತು ದೊರೆ ಯರಮಂಚಿನಾಯಕರಲ್ಲಿ ತಮ್ಮದುಃಖವನ್ನು ವಿವರಿಸಿದರು. ಕೊಡಗಲು ಬೊಮ್ಮನಿಗೆ ಇನ್ನು ಮುಂದೆ ಮಾಮೂಲಿ ತೆರಿಗೆಯನ್ನು ಕೊಡುವುದಿಲ್ಲ. ಹಲವು ವರ್ಷಗಳಿಂದ ಕೊಟ್ಟು ಅವನತಿ ಹಾದಿಯಲ್ಲಿದ್ದೇವೆ. ದಯಮಾಡಿ ಏನು ತಿಳಿದುಕೊಳ್ಳಬೇಡಿರಿ ಎಂದು ನಿರ್ಧಾಕ್ಷಿಣ್ಯವಾಗಿ ಹೇಳಿದರು. ಇದನ್ನರಿತ ಯಮಂಚಿನಾಯಕ, ಗಗ್ಗರಿದಾಸ ಮ್ಯಾಸಮಂಡಲದ ಪ್ರಜೆಗಳ ಕಷ್ಟ ನೋಡಿ ಮರುಕುಗೊಂಡರು. ಹೌದು ನಾವು ತಪ್ಪು ಮಾಡಿದ್ದೇವೆ. ಬೊಮ್ಮನಿಗೆ ತೆರಿಗೆ ಕೊಡುವಾಗ ನಿರ್ದಿಷ್ಟ ವರ್ಷಗಳನ್ನು ತಿಳಿಸಬೇಕಿತ್ತು. ಸುಮಾರು ವರ್ಷಗಳಿಂದ ಕೊಡುತ್ತಾ ಬಂದಿರುವ ನಾವುಗಳು ಏಳಿಗೆ ಹೊಂದಲೂ ಆಗಲಿಲ್ಲ. ಆದ್ದರಿಂದ ಅವನ ಸಂಗಬಿಟ್ಟು ಪಯಣಿಸಬೇಕೆಂದು ನಿಶ್ಚಯಿಸಿದರು. ಅದರಂತೆ ಒಂದು ರಾತ್ರಿ ಮ್ಯಾಸಮಂಡಳಿಯ ಕಾಪುಕಂಪಳದೊಂದಿಗೆ ಯರಮಂಚಿನಾಯಕ, ಗಗ್ಗರಿದಾಸ ಸೇರಿ ಸಿದ್ದಿಹಳ್ಳಿ ವಾಸಸ್ಥಳ ಬಿಟ್ಟು ರೇತಲಕುಂಟೆ (ರಾವಲುಕುಂಟೆ) ಗಡಿಪ್ರದೇಶಕ್ಕೆ ಹೋದರು.

ಮ್ಯಾಸಮಂಡಳಿಯ ಜನಸಮುದಾಯ ಆಕಳು ಇತರ ಪರಿಕರಗಳೊಂದಿಗೆ ಕಾಪುಕಂಪಳವು ರೇವಲುಕುಂಟೆ ಹತ್ತಿರ ಬೊಮ್ಮದೇವರಿಗೆ ಅಂಬುವಾಸಿಗಳನ್ನು ಕೊಯ್ದು ಎದುರು ನೋಮುಗಳನ್ನು ಪೂರೈಸಿಕೊಂಡು ಪೂಜೆಮಾಡಿ, ಧಾನಕಾರ್ಯ ಮುಗಿಸಿ ತಾವು ಹೊರಡುವ ಪ್ರಯಾಣಕ್ಕೆ ದೇವರ ಆಶೀರ್ವಾದವನ್ನು ಬೇಡಿ ಪಯಣಿಸಿದರು. ಜೊತೆಗೆ ಕೊಡಗುಬೊಮ್ಮನ ಹಾವಳಿ ತಪ್ಪಬೇಕೆಂದು ದೇವರನ್ನು ಪ್ರಾರ್ಥಿಸಿ ಮುಂದೆ ಕೈಲಾಸಕೊಂಡ (ಮೊಳಕಾಲ್ಮುರು ಸಮೀಪ) ಎಂಬಲ್ಲಿಗೆ ತಳವೂರಲು ಹೋದರು. ಅವರು ಕೈಲಾಸಕೊಂಡದಲ್ಲಿ ಗುಂಪು ಗುಂಪುಗಳಾಗಿ ರೊಪ್ಪಗಳನ್ನು ಹಾಕಿ ತಮ್ಮ ವಾಸಕ್ಕೆ ಹುಲ್ಲು ಜೋಪಡಿಗಳನ್ನು ನಿರ್ಮಿಸಿಕೊಂಡು ವಾಸಮಾಡುತ್ತಾ ಗುಂಪು ಗುಂಪಾಗಿ ಕಟ್ಟಿಕೊಂಡಿದ್ದ ಪಾಳೆಯಗಳಿಗೆ ರೇಪುಪಲ್ಲಿ (ನಾಳೆಯಹಳ್ಳಿ), ಮಾಪುಪಲ್ಲಿ (ರಾತ್ರಿಹಳ್ಳೀ), ಉನ್ನಮುದ್ದಲುಪೆಲ್ಲಿ, (ಬೆಣ್ಣೆಮುದ್ದೆಗಳಹಳ್ಳಿ) ಎಂಬ ಹೆಸರುಗಳನ್ನಿಟ್ಟುಕೊಂಡು ಮೊಳಕಾಲ್ಮುರು ಪಟ್ಟಣದ ಆಗ್ನೇಯ ದಿಕ್ಕಿಗೆ ಜೀವನ ಮಾಡುತ್ತಿದ್ದರು.

ಇಲ್ಲಿರುವ ಕೈಲಾಸಕೊಂಡ ಮ್ಯಾಸಬೇಡರಿಗೆ ಪವಿತ್ರಸ್ಥಳ. ಇದು ಮೊಳಕಾಲ್ಮುರುವಿನ ಪೂರ್ವಕ್ಕೆ ಮತ್ತು ಗಾಳಿಮಾರಮ್ಮನ ಗುಡಿಯ ದಕ್ಷಿಣಕ್ಕೆ ಇದೆ. ಇದರಂತೆ ನುಂಕುಮಲೆ ಪರ್ವತವು ಪ್ರಸಿದ್ಧವಾಗಿದೆ. ಈ ಬೇಡನಾಯಕನ ಹಬ್ಬ – ಜಾತ್ರೆಗಳು ಜರುಗುವಾಗ ಎಲ್ಲಾ ಪೂಜಾಕಾರ್ಯಗಳು, ಆಚರಣೆಗಳಾದ ಸಿಡಿ, ಓಕುಳಿ ಇತ್ಯಾದಿಗಳನ್ನು ಮಾಡುವವರು ಇವನಿಗೆ ಸಂಬಂಧಿಸಿದ ಬೇಡರು.

ರಾಜ್ಯ ವಿಸ್ತಾರ

ಕೊಡಗುಬೊಮ್ಮನ ಆಡಳಿತ ಪ್ರದೇಶತಾಲೂಕಿನ ಮುಸ್ಟಲಗುಮ್ಮಿಯವರೆಗೆ ಪಶ್ಚಿಮದ ಗಡಿಯಾಗಿತ್ತು. ಪೂರ್ವಕ್ಕೆ ರಾಯದುರ್ಗ ಪ್ರದೇಶ ಒಳಗೊಂಡಿತ್ತು. ಉತ್ತರಕ್ಕೆ ರಾಂಪುರ, ಗುಡೆಕೋಟೆಯಾದರೆ, ದಕ್ಷಿಣಕ್ಕೆ ತಳುಕು, ನನ್ನಿವಾಳ ನಾಯ್ಕನಹಟ್ಟಿಯವರಿಗೆ ವಿಸ್ತಾರವಾಗಿತ್ತು. ಚಿನ್ನಹಗರಿನದಿ ಪ್ರದೇಶವು ಅವನಿಗೆ ಕೇಂದ್ರಸ್ಥಾನವಾಗಿತ್ತು. ಮೊಳಕಾಲ್ಮುರು ತಾಲೂಕು ಮುತ್ತಿಗಾರಹಳ್ಳಿ ಅರಣ್ಯದ ನಡುಭಾಗದಲ್ಲಿ ಇವನ ವಾಸಸ್ಥಳವಿತ್ತು. ಅದಕ್ಕೆ ಊಟಕುಂಟೆ, ವಡಕ್ಕಟ್ಟೆ ಎನ್ನುತ್ತಾರೆ. ಅಲ್ಲಿ ಕೊಡಗಲುಬೊಮ್ಮನಕೋಟೆ, ಅರಮನೆ, ಗುಹೆಗಳು, ಆಹಾರತಯಾರಿಕಾ ಘಟಕ, ಕಳ್ಳದನಗಳನ್ನು ತರುಬುವ ಬಂಡೆಮುಂತಾದ ಕುರುಹುಗಳು ಕಂಡುಬರುತ್ತವೆ.

ಕೊಡುಗಲುಬೊಮ್ಮನ ಬರ್ಬರ ಆಳ್ವಿಕೆಗೆ ತತ್ತರಿಸಿ ಅಜ್ಞಾತವಾಸದಲ್ಲಿದ್ದ ಯಮಂಚಿನಾಯಕ, ಗಗ್ಗರಿದಾಸರು ಸೇರಿ ಯಾರಗುಂಟಿ (ಉರವಕೊಂಡ – ತಾ ಅನಂತಪುರ ಜಿಲ್ಲೆ) ಎಂಬಲ್ಲಿ ತಂಗಿದರು. ಅಲ್ಲಿಗೂ ಎಡಬಿಡದೆ ಇವನು ಸತತವಾಗಿ ದಾಳಿ ಮಾಡಿದನು.

ತೆರಿಗೆ ಕೊಡುವುದು

ಏನೆಲ್ಲಾ ವಿಫಲ ಪ್ರಯತ್ನಗಳು ನಡೆಸಿದರೂ ಬೊಮ್ಮನ ದುರಾಡಳಿತದ ಕಾಟದಿಂದ ಯರಮಂಚಿನಾಯಕ, ಗಗ್ಗರಿದಾಸರು ಮುಕ್ತರಾಗಲಿಲ್ಲ. ಕೊಡಗುಬೊಮ್ಮನಿಗೆ ಹಿಂದಿನಿಂದ ಕೊಡಬೇಕಾಗಿದ್ದ ಕಾಣಿಕೆಯನ್ನು ಸಲ್ಲಿಸಬೇಕಾಯಿತು. ಅಲ್ಲಿಂದ ಇವನಿಗೆ ಮುಚ್ಚಲಗುಮ್ಮಿ (ಷ್ಠ) ಹತ್ತಿರಕ್ಕೆ ಕಳ್ಳತನದಿಂದ (ಮುಚ್ಚುತನದಿಂದ ( ಯಾರಿಗೂ ಗೊತ್ತಾಗದಂತೆ ಕಾಣಿಕೆಗಳನ್ನು ಒಪ್ಪಿಸಿದರು. ಅಂದಿನಿಂದ ಅದಕ್ಕೆ ‘ಮುಚ್ಚಲಗುಮ್ಮಿ’ ಎಂದು ಕರೆದರು (ಚಳ್ಳಕೆರೆ ತಾ). ಈ ಗ್ರಾಮದಲ್ಲಿ ಬೊಮ್ಮ ನಿರ್ಮಿಸಿದ ಪ್ರಾಚ್ಯಾವಶೇಷಗಳು ಕಂಡುಬರುತ್ತವೆ.

ಹೀಗೆ ಯರಮಂಚಿನಾಯಕ ಉಳಿದವರಿಗೆ ಗೊತ್ತಿಲ್ಲದಂತೆ ಗುಪ್ತವಾಗಿ ಬೆಣ್ಣೆ ಮುದ್ದೆ, ಟಗರು, ಹೋತು, ಹೋರಿಕರುಗಳು, ಮೊಗ್ಗಲು ತೆರಿಗೆ ಮುಂತಾದವುಗಳನ್ನು ಕೊಡಗುಬೊಮ್ಮನಿಗೆ ಅರ್ಪಿಸಿದನು. ಈ ಕಾಣಿಕೆಯನ್ನು ಪಡೆದ ಕೊಡಗುಬೊಮ್ಮನು ತೃಪ್ತನಾದನು. ತರುವಾಯ ಯರಮಂಚಿನಾಯಕ ಜಾಗ ಬದಲಿಸಿ ಊಡಡ್ಲಗಡ್ಡ (ಮೂಡುರ್ಲು ಗುಡ್ಡ= ಮೂರು ಊರಿನ ಗಡ್ಡೆ) ಎಂಬಲ್ಲಿಗೆ ತಮ್ಮಕಾಪು – ಕಂಪಳದೊಂದಿಗೆ ಬಂದನು. ಉಳಿದ ಮ್ಯಾಸಮಂಡಳಿಯ ಪ್ರಮುಖರು ಕೊಡಗುಬೊಮ್ಮನಿಗೆ ಕೊಡುತ್ತಿದ್ದ ಮಾಮೂಲುಗಳನ್ನು ವಿರೋಧೀಸಿ, ಎಲ್ಲರೂ ಕೂಡಿ ಒಂದೆಡೆ ಸಭೆ ಸೇರಿ ಚಿಂತನೆ ನಡೆಸಲು ಸಿದ್ಧರಾದರು.[2]

ವಿಮೋಚನೆಗಾಗಿ ಚಿಂತನಸಭೆ

ಕೊಡಗುಬೊಮ್ಮನ ಹಾವಳಿ, ಬರ್ಬರ ಆಳ್ವಿಕೆ ವಿರೋಧಿಸಿ ಚಿಂತಗುಟ್ಲ ಬೋರುವುನ ಬಳಿ (ಚಳ್ಳಕೆರೆ ತಾ) ಎಲ್ಲಾ ನಾಯಕ ಜನಾಂಗದವರು ಸೇರಿ ಚಿಂತನೆ ಮಾಡಿದರು. ಇವನ ಕಾಟದಿಂದ ಪಾರಾಗಲು ೯ ಮುತ್ತಿಗಾರರನ್ನು ಗುರು – ಪೂಜಾರಿಗಳನ್ನು, ನಾಯಕ, ದಾಸ, ಮನ್ನೆಗಾರರನ್ನು ಕರೆಸಿದರು. ದೊರೆ ದಳವಾಯಿಗಳು, ಕಾಲಭೈರವೇಶ್ವರ ಗುಂಡುಗಳು ಹತ್ತಿರ ಸಭೆ ಸೇರಿದರು. ಇವರೆಲ್ಲ ಕೂತು ಮಾತನಡಿದ ಸ್ಥಳಕ್ಕೆ ಚಿಂತಗುಟ್ಲ (ಚಿಂತೆಯಕಟ್ಟೆ) ಎಂದು ಕರೆದರು. ‘ಚಿಂತ’ ಎಂದರೆ ಚಿಂತೆ. ಗುಟ್ಲು ಎಂದರೆ ಗುಟ್ಟೆ, ಗುಟ್ಟು, ರಹಸ್ಯ ಎಂಬರ್ಥಗಳಿವೆ. ಇವರುಗಳು ಭೈರವೇಶ್ವರನನ್ನು ತೆಲುಗಿನಲ್ಲಿ ಬೋರುವುಡು ಎಂದು ಕರೆಯುತ್ತಾರೆ. ಎಲ್ಲರೂ ಸೇರಿಭೈರವೇಶ್ವರನ ಸನ್ನಿಧಿಯಲ್ಲಿ ಗುಟ್ಟಾಗಿ ಚಿಂತನೆ ಮಾಡಿದ್ದರಿಂದ ಚಿಂತಗುಟ್ಲು ಎಂದು ಖ್ಯಾತಿ ಪಡೆಯಿತು. ಕೊನೆಗೆ ಭೈರವನನ್ನು ಬೇಡಿಕೊಂಡು ಕೊಡಗುಬೊಮ್ಮನ ವಿನಾಶಕ್ಕೆ ಅವನ ಹತ್ತಿರ ಮೊರೆ ಹೋದರು. ಆ ದೇವರನ್ನು ಇಂದು ಚಿಂತಗುಟ್ಟ ಭೈರವನೆಂದು ಕರೆಯುವ ರೂಢಿಯಿದೆ. ಕೊಡಗುಬೊಮ್ಮನ ಸಾವಿಗೆ ಸತತ ಪ್ರಯತ್ನಿಸಿ, ಎಲ್ಲಾ ಸಮಸ್ಯೆಗಳನ್ನು ಚರ್ಚಿಸಿದರು. ನಾಯಕ ಜನಾಂಗದ ಪ್ರಮುಖರೊಂದಿಗೆ ಎಲ್ಲರೂ ಸೇರಿ ಯರಮಂಚಿನಾಯಕನ ನೇತೃತ್ವದಲ್ಲಿ ಭೈರವೇಶ್ವರನನ್ನು ಪ್ರದಕ್ಷಣೆ ಹಾಕಿದರು. ಅಡ್ಡಬಿದ್ದು ವಿವಿಧ ರೀತಿಯ ಪ್ರಮಾಣ ವಚನಗಳನ್ನು ಹಾಕಿಕೊಂಡರಲ್ಲದೆ, ಭೈರವೇಶ್ವರನಿಂದ ಕೊನೆಗೆ ಅನುಮತಿ ಪಡೆದರು. ನೇರ‍್ಲಗುಂಟೆ ಸಮೀಪದ ಕುದಾಪುರ ಬೋರೆದೇವರಹಟ್ಟಿಯಲ್ಲಿ ಈ ದೇವಾಲಯವಿದೆ. ಇಲ್ಲಿ ರಸಸಿದ್ಧರ ಸಮಾಧಿ, ಉದ್ಬವಲಿಂಗ ಮುಂತಾದ ಶಿಲ್ಪಿಗಳಿವೆ. ಮ್ಯಾಸಬೇಡರ ಗೊಡಗುದಾಸರಿಗಳು ಇದಕ್ಕೆ ಪೂಜಾರಿಗಳಾಗಿದ್ದಾರೆ.

ಕೊಡಗುಬೊಮ್ಮನ ಅವಸಾನಕ್ಕಾಗಿ ಆಚರಣೆಗಳು

ಊಟಕುಂಟೆಯಲ್ಲಿ ಮೂರುಸಾವಿರ ಮ್ಯಾಸಮಂಡಳಿ ಯರಮಂಚಿನಾಯಕ, ಗಗ್ಗರಿದಾಸರ ನೇತೃತ್ವದಿಂದ ಚಿಂತಗುಟ್ಲ ಭೈರವನ ಬಳಿ ಸೇರಿದರು. ವಡೇರ ಅಥವಾ ವಡೇಲಾರು ಎತ್ತುಗಳಲ್ಲಿ ಒಂದು ಗೊಡ್ಡು ಹಸುವಿನ ಚರ್ಮವನ್ನು ತೆಗೆದು ೧೦೧ ಧಗಂ (ನಗಾರಿ) ಕಟ್ಟಿ. ಒಂಟಿಕೋಡು ಬೆಳ್ಳಿ ಹಸುವಿನ ಕೆಚ್ಚಲಿನ ಹಾಲು ಕರೆದು, ಹೆಪ್ಪು ಹಾಕಿ, ಮಜ್ಜಿಗೆ, ಬೆಣ್ಣಿ, ತುಪ್ಪಮಾಡಿ ೧೦೧ ತುಪ್ಪದ ದೀಪಗಳನ್ನು ಹಚ್ಚಿ ಅಂಬುವಾಸಿಗಳನ್ನು (ನಿಂಬೆಹಣ್ಣು, ಕರೆಬಣ್ಣದ ಕುರಿ ಅಥವಾ ಮೇಕೆಮರಿ ಕೊಯ್ದು, ಎದುರು ನೋಮುಗಳನ್ನು ವ್ರತ) ಮಾಡಿದರು. ಭೈರವನಿಗೆ ಎಲ್ಲರೂ ಬೆತ್ತಲಸೇವೆ ಮಾಡಿ, ಹರಕೆ ಕಟ್ಟಿಸಿದರು. ಆಗ ಒಣಗಿದ ಮರ ಚಿಗುರಬೇಕು. ಚಿಗುರಿದ ಮರ ಒಣಗಬೇಕು ಎಂದು ಪಂಥಕಟ್ಟಿಕೊಂಡು ಸತ್ತಬೊಮ್ಮನ ಸುಡುವ ಹೊಗೆ ಕಾಣಬೇಕೆಂದು ಹಟಹಿಡಿದರು. ಹೀಗೆ ಯರಮಂಚಿನಾಯಕ ಮತ್ತು ಉಳಿದವರು ಭೈರವನನ್ನು ಪರಿಪರಿಯಾಗಿ ಬೇಡಿಕೊಂಡನು. ಅವರು ಕೊಡಗುಬೊಮ್ಮನಿಂದ ತತ್ತರಿಸಿದ್ದು, ವಿಮೋಚನೆಗಾಗಿ ಕಾಯುತ್ತಿದ್ದರು. ಸಾವಿರಾರು ದನ, ಕುರಿ, ಮೇಕೆಗಳ ಸಂತತಿಯನ್ನು ಕಳೆದುಕೊಂಡ ಅವರು ಬೊಮ್ಮನ ಅವಸಾನಕ್ಕಾಗಿ ಕನವರಿಸಿ ಕುಳಿತರು. ಕೊಡಗುಬೊಮ್ಮ ಕೊನೆಗೆ ಸಾವನ್ನಪ್ಪಿದನು. ಅದು ವೀರಮರಣವಲ್ಲ. ಗುಪ್ತಸಾವು, ಕ್ರೋಧಗೊಂಡ ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗಿ ಸತ್ತನೆಂದು ಹೇಳಲಾಗಿದೆ. ಜನಪದ ಹಾಡುಗಳಲ್ಲಿ ಅತಿರೇಕದಿಂದ ಮೋಸಮಾಡಿ ಸಾಯಿಸಿದರು ಎಂದಿದೆ. ಸತ್ತ ವ್ಯಕ್ತಿಯನ್ನು ರಾವಲುಕುಂಟೆಯಿಂದ ಬುಕ್ಕಂಬೂದಿ ಕೆರೆಯ ಅಂಗಳದಲ್ಲಿ ಹೂತು ಸಮಾಧಿಮಾಡಿದ್ದಾರೆ. ಇಂದಿಗೂ ಅಲ್ಲಿ ಕಲ್ಲುಗುಡ್ಡಗಳಿವೆ. ಬುಟ್ಟಗಲೋರು ಬೆಡಗಿನವರು ಇಂದಿಗೂ ಇಲ್ಲಿ ತಪ್ಪದೆ ಹಿರಿಯರ ಹಬ್ಬವನ್ನು ಮಾಡುತ್ತಾರೆ. ಕೊಡಗುಬೊಮ್ಮನ ವಂಶಸ್ಥರು ಬೊಮ್ಮಗೊಂಡನಕೆರೆಯ ಬಳಿಯಿರುವ ರಾವಲುಕುಂಟೆಯಲ್ಲಿದ್ದಾರೆ.

ಸ್ಮಾರಕಗಳು

ಕೊಡಗುಬೊಮ್ಮನು ಸತ್ತ ನಂತರ ಅವನನ್ನು ದೈವತ್ವಕ್ಕೇರಿಸಿದ ಮ್ಯಾಸಬೇಡರ ಬುಟ್ಟಗಲೋರು ಬೆಡಗಿನವರು ದೇವರೆಂದು ಪರಿಗಣಿಸಿ ಇಂದಿಗೂ ಆರಾಧಿಸುತ್ತಾರೆ. ಅವನ ಸ್ಮರಣಾರ್ಥ ಗುಡಿ, ದೇವಾಲಯಗಳನ್ನು ನಿರ್ಮಿಸಿಕೊಂಡಿದ್ದಾರೆ. ಕೂಡ್ಲಿಗಿ, ಚಳ್ಳಕೆರೆ, ಮೊಳಕಾಲ್ಮುರು, ಚಿತ್ರದುರ್ಗ ಮತ್ತು ಜಗಳೂರು ತಾಲೂಕುಗಳಲ್ಲಿ ಇವನ ದೇವಾಲಯಗಳಿವೆ. ಕಾಂಶಿ ಹುಲ್ಲಿನಿಂದ ನಿರ್ಮಿಸಿದ ಹಳೆಯ ಕಾಲದ ದೇವಾಲಯ, ಇತ್ತೀಚಿನ ಬೆಣಚುಕಲ್ಲಿನ ದೇವಾಲಯಗಳು ಸೇರಿದಂತೆ ಆಧುನಿಕತೆಗೆ ಮಾರುಹೋಗಿ ಸಿಮೆಂಟ್ ಕಟ್ಟಡಗಳು ಹೆಚ್ಚಾಗಿವೆ. ಕೂಡ್ಲಿಗಿ ತಾಲೂಕಿನ ಕುರಿಹಟ್ಟಿಯ ಬೊಮ್ಮದೇವರು, ಗೌರಸಮುದ್ರದ ಬೊಮ್ಮದೇವರು ಪ್ರಮುಖ ದೇವಾಲಯಗಳಾಗಿವೆ. ನೂರಾರು ಊರುಗಳಲ್ಲಿ ಬೇಡರ ಕೇರಿಯೊಳಗೆ ಈತನ ದೇವಾಲಯಗಳಿರುವುದುಂಟು.

ಕೊಡಗುಬೊಮ್ಮನು ವಾಸಿಸಿದ ಸ್ಥಳವಾದ ಊಟಕುಂಟೆಯಲ್ಲಿ ಅವನು ಕಟ್ಟಿಸಿದ ಬೃಹತ್‌ಕೋಟೆ, ಅರಮನೆ, ಕೆರೆ, ಬಾವಿ, ಮನೆಗಳು ಪ್ರಮುಖವಾದವು. ಬೃಹತ್ ಗಾತ್ರದ ಬೆಟ್ಟದ ಮೇಲೆ ಕೋಟೆಕಟ್ಟೆ, ಅದರೊಳಗಿನ ಗವಿಗಳನ್ನು ಅರಮನೆ, ವಾಸದ ಮನೆಗಳನ್ನು ಮಾಡಿಕೊಂಡಿದ್ದನೆಂದು ಕಾಣುತ್ತದೆ. ಕೋಟೆಯ ೪ ದಿಕ್ಕುಗಳಿಗೆ ರಕ್ಷಕರ ಅಥವಾ ಕಾವಲುಗಾರರ ನಿವೇಶನಗಳಿವೆ. ಕಳ್ಳತನದ ಆಕಳುಗಳನ್ನು ತರುಬುವ ಬಂಡೆಯಿದೆ. ಹೀಗೆ ವಿವಿಧ ರೀತಿಯ ಸ್ಮಾರಕಗಳು ಕಂಡುಬರುತ್ತವೆ.

ಹಬ್ಬಜಾತ್ರೆ

ಪ್ರತಿವರ್ಷ ದೀಪಾವಳಿ ಮತ್ತು ಗುಗ್ಗರಿ ಹಬ್ಬದಲ್ಲಿ ಇವನ ಬಗೆಗೆ ಹಬ್ಬ – ಜಾತ್ರೆಗಳು ಜರುಗುತ್ತವೆ. ಬುಡಕಟ್ಟಿನ ಸಂಪ್ರದಾಯದಂತೆ ಗಂಗೆಸ್ನಾನ, ಗುಗ್ಗರಿ ಹಾಕಿ, ಮಣೆವು, ದೇವರೆತ್ತುಗಳ ಸಮ್ಮುಖದಲ್ಲಿ ಕಾರ್ಯಕ್ರಮಗಳನ್ನು ನೆರವೇರಿಸುತ್ತಾರೆ. ಕುರಿಹಟ್ಟಿ ಬೊಮ್ಮದೇವರ ಜಾತ್ರೆ, ಭರತ ಹುಣ್ಣಿಮೆಯಾದ ನಂತರ ಆಗುತ್ತದೆ (ಉದಾ: ೬.೨.೧೯೯೯ ರಂದು ವೀಕ್ಷಿಸಲಾಗಿದೆ). ಅದೇ ರೀತಿ ಗೌರಸಮುದ್ರದ ಬೊಮ್ಮದೇವರು ಜಾತ್ರೆ, ಕಂಪಳದೇವರ ಜಾತ್ರೆ ಆದನಂತರ ಈ ಜಾತ್ರೆಯಾಗುವುದು.

ಸಂಪ್ರದಾಯ

ಕೊಡಗುಬೊಮ್ಮನಿಗೆ ಸಂಬಂಧಿಸಿದ ಜಾತ್ರೆ, ಹಬ್ಬ ತಲೆಮಾರುಗಳಿಂದ ಆಚರಣೆ, ಸಂಪ್ರದಾಯಗಳನ್ನು ಉಳಿಸಿಕೊಂಡು ಬಂದಿದ್ದಾರೆ. ಮಕ್ಕಳಿಗೆ ಬೊಮ್ಮಣ್ಣ, ಬೊಮ್ಮಕ್ಕನೆಂದು ನಾಮಕರಣ ಮಾಡುತ್ತಾರೆ. ಕಷ್ಟ ಬಂದಾಗ ಕಾಸುಕಟ್ಟಿಕೊಂಡು ಮೀಸಲು ಹರಕೆ ಹೊರುತ್ತಾರೆ. ಮಕ್ಕಳಿಲ್ಲದವರು ಸಂತಾನಭಾಗ್ಯಕ್ಕಾಗಿ ಹರಕೆಹೊತ್ತು ಹುಟ್ಟಿದ ಮಗುವಿಗೆ ಅವನ ಹೆಸರಿಡುವಂತೆ ಕೋರಿಕೊಳ್ಳುವ ಸಂಪ್ರದಾಯವಿದೆ. ಶೈವಿಕರಣಗೊಂಡ ಬೊಮ್ಮನು ಹೆಸರನ್ನು ಇಂದು ಬೊಮ್ಮಲಿಂಗೇಶ್ವರನೆಂದು ಜನಪ್ರಿಯಗೊಳಿಸಿದ್ದಾರೆ.


[1] ಡಾ. ಬಾಬಾ ಸಾಹೇಬ್ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು, ೧೯೯೮, ಸಂ., ಪು: ೨೩೧ ರಲ್ಲಿ ವ್ಯವಸ್ಥೆಯನ್ನು ಹೋಲುವ ಅಂಶಗಳ ಬಗ್ಗೆ ತಿಳಿಸುತ್ತಾರೆ. “ಬ್ರಾಹ್ಮಣರು ಆಳುವ ವರ್ಗವಲ್ಲದೆ, ಆಡಳಿತದಲ್ಲಿ ಅವರಿಗಿರುವ ಹಿಡಿತ ಮಿಗಿಲಾದುದು. ಜನಸಾಮಾನ್ಯರ ದೃಷ್ಟಿಯಲ್ಲಿ ‘ಬ್ರಾಹ್ಮಣ ಪೂಜನೀಯ ವ್ಯಕ್ತಿ’. ಪ್ರಾಚೀನ ಕಾಲದಲ್ಲಿ ಈ ಜಾತಿಯ ವ್ಯಕ್ತಿ ಎಂಥಾ ಘೋರಾ ಅಪರಾಧ ಮಾಡಿದರೂ ಕೂಡ ಆತನಿಗೆ ಮರಣದಂಡನೆ ಶಿಕ್ಷೆ ಇರಲಿಲ್ಲ. ಆತ ಪೂಜನೀಯ ವ್ಯಕ್ತಿಯಾಗಿದ್ದರಿಂದ ಆತನಿಗೆ ಅನೇಕ ವಿಶೇಷ ಸೌಲಭ್ಯ ಮತ್ತು ಅಧಿಕಾರಗಳು ಲಭ್ಯವಿದ್ದವು. ಇಂತಹ ಯಾವುದೇ ವಿಷಯ ರಿಯಾಯಿತಿಗಳು ಆಗ ಜನಸಾಮಾನ್ಯರಿಗೆ ಇರಲಿಲ್ಲ. ಮೊದಲ ಫಲ ಆತನಿಗೆ ಮೀಸಲಾಗಿರುತ್ತಿತ್ತು. ಸಂಬಂಧದದ ವಿವಾಹ ಪದ್ಧತಿ ಪ್ರಚಲಿತವಿದ್ದ ಮಲಬಾರಿನ ತಳಜಾತಿಯ ನಾಯರುಗಳು ತಮ್ಮ ಮಹಿಳೆಯರು ಬ್ರಾಹ್ಮಣ ಉಪಪತ್ನಿಯರಾದರೆ ತಾವು ಧನ್ಯರೆಂದು ಭಾವಿಸುತ್ತಿದ್ದರು. ರಾಜರುಗಳೂ ಕೂಡ ತಮ್ಮ ಪತ್ನಿಯರ ಕೌಮಾರ‍್ಯ ಭಂಗ ಮಾಡಲು ಪ್ರಥಮ ಸಂಭೋಗಕ್ಕಾಗಿ ಬ್ರಾಹ್ಮಣರನ್ನು ಆಮಂತ್ರಿಸುತ್ತಿದ್ದರು. ಹೀಗೆ ನಾನಾ ಬಗೆಯ ಶೋಷಣೆ ಮುಖಗಳಿದ್ದವು. ತಳವರ್ಗದ ಜನರು ಬ್ರಾಹ್ಮಣರ ಪಾದತೊಳೆದು ನೀರು ಕುಡಿಯುತ್ತಿದ್ದರು.”

೧೬ನೇಯ ಶತಮಾನದ ಮಧ್ಯದಲ್ಲಿ ಮಲಬಾರಕ್ಕೆ ಭೇಟಿಕೊಟ್ಟ ಪ್ರವಾಸಿ ಲುಡ್ವಿಕೊಡಿ ವರ್ತೆಮಾನನು ಹೀಗೆ ಬರೆಯುತ್ತಾರೆ: ಬ್ರಾಹ್ಮಣರ ಬಗ್ಗೆ ತಿಳಿಯುವುದು ತುಂಬಾ ಉಲ್ಲಾಸದ ಸಂಗತಿ. ನಮ್ಮಲ್ಲಿರುವ ಪಾದ್ರಿಗಳ ತರಹವೇ ಇವರೂ ಇಲ್ಲಿನ ಧರ್ಮಗುರುಗಳು. ರಾಜನು ತನ್ನ ಮದುವೆಯಾದ ಮೇಲೆ ರಾಣಿಯನ್ನು ಮೊದಲು ಒಬ್ಬ ಬ್ರಾಹ್ಮಣನ ಜೊತೆಯಲ್ಲಿ ಮಲಗಿಸಿ ಆಕೆಯ ಮೀಸಲನ್ನು ಮುರಿಯುವ ವ್ಯವಸ್ಥೆ ಮಾಡುತ್ತಾನೆ. ಇದಕ್ಕಾಗಿ ಯೋಗ್ಯ ಮತ್ತು ಪ್ರಸಿದ್ಧ ಬ್ರಾಹ್ಮಣನನ್ನು ಆರಿಸಿಕೊಳ್ಳಲಾಗುತ್ತದೆ. ಈ ಕಾರ್ಯಕ್ರವನ್ನು ಬ್ರಾಹ್ಮಣನು ಖುಷಿಯಿಂದ ಮಾಡುತ್ತಾನೆ ಎಂದು ತಿಳಿಯಬಾರದು. ಈ ಕಾರ್ಯಮಾಡುವುದಕ್ಕಾಗಿ ರಾಜನು ಬ್ರಾಹ್ಮಣನಿಗೆ ೪೦೦ರಿಂದ ೫೦೦ರಷ್ಟು ವರಹ (ಹಣ) ಕೊಡಬೇಕಾಗುತ್ತದೆ. ಕಲ್ಲಿಕೋಟೆಯ ರಾಜನನ್ನು ಹೊರತುಪಡಿಸಿ ಉಳಿದವರಾರೂ ಇಂತಹ ಪದ್ದತಿಯನ್ನು ಅನುಸರಿಸುವುದಿಲ್ಲ (ವಾಯೇಜಸ್ ಆಪ್ ವರ್ತಮಾ ಹುಕ್ಲುಯಾತ್ ಸೊಸಾಯಿಟಿ, ಸಂ.೧, ಪು: ೧೪೧).

ಇದೇ ಕೃತಿ ಪುಟ: ೧೩೨ರಲ್ಲಿ ಹೀಗೆ: ಗ್ಯಾಮಿಲ್ಟನ್ ಕೌಂಟ್ ಆಫ್ ದಿ ಈಸ್ಟ್ ಇಂಡೀಸ್ ಕೃತಿಯಲ್ಲಿನ ಉಲ್ಲೇಖವನ್ನು ಲೇಖಕರು ತಿಳಿಸುತ್ತಾರೆ. ‘ಸೆಮೋರಿಯನ್ನರು ಮದುವೆಯಾದ ಮೇಲೆ ತಮ್ಮ ಹೆಂಡತಿಯನ್ನು ಕೂಡುವ ಹಾಗಿಲ್ಲ. ಮೊದಲು ಆಚಾರ್ಯರಾದ ನಂಬೂದರಿಗಳು ಅವಳನ್ನು ಮೂರು ದಿವಸಗಳವರೆಗೂ ತನ್ನೊಡನೆಯೇ ಇಟ್ಟುಕೊಳ್ಳಬಹುದು.’

ಫ್ರಾನ್ಸೀಸ್ ಬುಚನನ್ ಪದ್ಧತಿಯನ್ನು ಹೀಗೆ ಹೇಳಿರುತ್ತಾರೆ: ‘ತಮುರಿ ಜಾತಿಯ ಮಹಿಳೆಯರಿಗೆ ಸಾಮಾನ್ಯವಾಗಿ ನಂಬೂದರಿಗಳಿಂದಲೇ ಗರ್ಭದಾನವಾಗುತ್ತದೆ. ಅವಶ್ಯವೆನಿಸಿದರೆ ನಾಯರ್‌ಗಳಲ್ಲಿನ ಉನ್ನತ ದರ್ಜೆಯವರನ್ನು ಆಮಂತ್ರಿಸಬಹುದು. ಮಳೆಯಾಳಿಗಳಲ್ಲಿ ಮದುವೆಯಾದ ತರುಣಿಯನ್ನು ಮೇಲ್ವರ್ಗದವ ಸಂಭೋಗ ಮಾಡುವುದು ಇದೆ. ಒಟ್ಟಾರೆ ಈ ಹಿಂದಿನ ಚರಿತ್ರೆಯ ಪುಟಗಳನ್ನು ಅವಲೋಕಿಸಿದರೆ ‘ತಳಜಾತಿಯ ಸ್ತ್ರೀಯ ಉನ್ನತ ವರ್ಗದವರಿಗೆ ಪ್ರಥಮ ಅರ್ಪಣೆ’ ಎಂಬ ತತ್ವದ ಆಧಾರದ ಮೇಲೆ ರೂಢಿಯಲ್ಲಿತ್ತು. ಪ್ರಾಚೀನ ಕಾಲದಲ್ಲಿ ಇಂಥ ನೀಚತನ ಇದ್ದಂತಿಲ್ಲ. ರಾಮನು ಅಸ್ಪೃಶ್ಯನ ದೋಣಿಯಲ್ಲಿ ಗಂಗಾನದಿಯನ್ನು ದಾಟುತ್ತಾನೆ. ಎಂದಾಗ ಮಧ್ಯಾಕಾಲದಲ್ಲಿ ಈ ಪದ್ಧತಿ ಪ್ರಬಲವಾಗಿ ಬೆಳೆದಿತ್ತು ಎನ್ನಲಾಗಿದೆ.

[2] ಮೊಳಕಾಲ್ಮೂರು ಮತ್ತು ರಾಯದುರ್ಘದ ಪಾಳೆಯಗಾರರಲ್ಲಿ ಬೊಮ್ಮ ನಾಯಕನೆಂಬ ಅರಸನಿದ್ದ.