.. ಗಲಗಲ್ಲುಗಾಜನಾಯಕ

ಹಿನ್ನೆಲೆ

ಗಾಜ (ದಿ) ನಾಯಕ ಎಂಬುವನು ಮ್ಯಾಸಬೇಡರ ನಾಯಕ ವೀರರಲ್ಲಿ ಅಗ್ರಮಾನ್ಯನಾದವನು. ಇವನ ಸ್ಥಳ ಗಲಗಲ್ಲು. ಇದು ಇಂದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ತಾಲೂಕಿನ ಗೊಲ್ಲಹಳ್ಳಿ ಸಮೀಪದಲ್ಲಿದೆ. ಮೊದಲು ಈ ತಾಲೂಕು ಬಳ್ಳಾರಿ ಜಿಲ್ಲೆಗೆ ಸೇರಿದ್ದು, ಮದ್ರಾಸ್ ಅಧಿಪತ್ಯದಲ್ಲಿತ್ತು. ಏಕೀಕರಣದ ನಂತರ ಆಂಧ್ರಕ್ಕೆ ಹೋದ ಸ್ಥಳಗಳಲ್ಲಿ ಇದು ಒಂದಾಗಿದೆ. ಈ ಸ್ಥಳದ ಅಕ್ಕಪಕ್ಕದಲ್ಲಿ ಕೈಲಾಸಕೊಂಡ, ಮೊಳಕಾಲ್ಮುರು, ತಾಟಚೆರವು (ತಾಳಿಕೆರೆ), ಗೊಲ್ಲಹಳ್ಳಿ, ರಂಗಸಮುದ್ರ, ಕೋನಸಾಗರ ಮುಂತಾದ ಸ್ಥಳಗಳು ಕಂಡುಬರುತ್ತವೆ. ಗಲಗಲ್ಲು ಗ್ರಾಮದಲ್ಲಿ ದೇವಮ್ಮನ ದೇವಾಲಯ, ಗಾಜನಾಯಕನ ಸಮಾಧಿ, ಮರಮ್ಮನ ದೇವಸ್ಥಾನ, ಆಂಜನೇಯ ಮತ್ತು ತಿರುಪತಿ ತಿಮ್ಮಪ್ಪನ ದೇವಾಲಯಗಳಿವೆ. ಪ್ರಧಾನವಾಗಿ ದೇವಮ್ಮ ಮತ್ತು ಗಾಜನಾಯಕನನ್ನು ಇಲ್ಲಿನ ಜನರು ಆರಾಧಿಸುತ್ತಾರೆ.

[1]

ಗಾಜ (ದಿ) ನಾಯಕನನ್ನು ಚಿತ್ರದುರ್ಗದ ಪಾಳೆಯಗಾರರ ಸಾಮಂತ ಅರಸನೆಂದು ಜನಪದರು ಹೇಳುತ್ತಾರೆ. ಅಲ್ಲದೆ, ರಾಯದುರ್ಗದ ಅರಸರಿಗೂ ಇವನು ಹತ್ತಿರದವನಾಗಿದ್ದ. ಮ್ಯಾಸಬೇಡರ ಮಂದಲಗೋತ್ರದ ೯ ಜನ ಅಜ್ಜನೋರಲ್ಲಿ (ಹಿರಿಯರು) ಗಜ್ಜಿಗನೋರು (ಗಜಗನವಾಡು) ಒಬ್ಬನಾಗಿರುತ್ತಾನೆ. ಇವನು ನಲ್ಲಚೆರುವು ಓಬಳ ದೇವರ ಗೋತ್ರದವರು. ಈ ದೇವರಿಗೆ ಇವರೇ ಮೊದಲಿಗರು. ಇಲ್ಲಿ ಮಳೇಲಾರು ಗೋತ್ರದವರು ಬೊಮ್ಮದೇವರನ್ನು ಪೂಜಿಸುತ್ತಾರೆ. ಪಕ್ಕದಲ್ಲಿ ವೇದಾವತಿ (ಪೆದ್ದರೇವು) ಹರಿಯುತ್ತಿದ್ದು, ಅನೇಕ ಧಾರ್ಮಿಕ ನೆಲೆಗಳನ್ನು ದಂಡೆಯ ಮೇಲೆ ಸೃಷ್ಟಿಸಿದೆ. ಸ್ಥಳೀಯರು ಆಂಧ್ರದ ನಲ್ಲಮಲ ಅಥವಾ ಕೃಷ್ಣಾನದಿ ಪೂರ್ವದಿಂದ ಬಂದವರು. ಅಲ್ಲಿ ನಲ್ಲಚೆರುವು ಗ್ರಾಮವಿದ್ದಿತು. ಅಲ್ಲಿಂದ ವಿಷ್ಣುದೇವರನ್ನು ತಂದುಪೂಜಿಸಿದರಂತೆ. ಆಗ ಮಂದ ಕಾಮಗೇತಿಗೆ ದೊರೆತ ವಿಷ್ಣು ಸಾಲಿಗ್ರಾಮವನ್ನು ಓಬಳ ದೇವರು ಎಂದು ಕರೆದರು. ಈ ಒಂಬತ್ತು ಜನ ಹಿರಿಯರೆಂದರೆ : ಗಜಗನವಾಡು (ಅವನು), ಬಿದ್ದನವಾಡು, ಬುಡ್ಡುಬೋರುನವಾಡು, ಕಗ್ಗಲ್ಲವಾಡು, ಮಲ್ಲೂರುವಾಡು, ಮಾಸಿವಾಡು, ನಲಬ್ಬವಾಡು, ಯರಬೊಮ್ಮನವಾಡು ಮತ್ತು ಪರಮೇಸಿನವಾಡು.

ಗಾಜನಾಯಕನ ಸಮಾಧಿ, ಗಲಗಲ್ಲು, ರಾಯದುರ್ಗ ತಾ, ಅನಂತಪುರ ಜಿ. ಆಂಧ್ರಪ್ರದೇಶ

ಈ ಹಿಂದೆ ಈ ಪ್ರದೇಶವನ್ನು ವಟ್ಟಳ್ಳನಾಯಕ ಎಂಬ ನಿಡಗಂಟಿ (ನಿಡಗಲ್ಲಿನ ಆಧಿನದಲ್ಲಿ ಸಾಮಂತ) ನೋಡಿಕೊಳ್ಳುತ್ತಿದ್ದನು. ಯರಮಂಚಿನಾಯಕ, ಗಗ್ಗರಿದಾಸರೊಡನೆ ಅನೇಕ ಒಪ್ಪಂದಗಳಾಗುತ್ತವೆ. ಆಗ ವಟ್ಟಳ್ಳನಾಯಕನಿಗೆ ಸೇರಿದ ಗ್ರಾಮಗಳೆಂದರೆ : ವರ್ಧನಕುಂಟೆ, ದಡ್ಡಿಹಳ್ಳಿ, ರಂಗಸಮುದ್ರ ಮುಂತಾದವು. ಈ ಎಲ್ಲಾ ಗ್ರಾಮಗಳಿಂದ ಇವನಿಗೆ ಹೆಚ್ಚಾಗಿ ಕುಂಬಳಕಾಯಿ ಕೊಡುತ್ತಿದ್ದರಂತೆ! ಎಂದಾಗ ಇವನೊಬ್ಬ ಆಡಳಿತಗಾರ ಇರಬೇಕು.

ಆರಂಭಘಟ್ಟ

ಗಲಗಂಟಿ (ಲ್ಲು) ಗಾಜನಾಯಕ ಎಂಬುವನು ಬೇಡರಿಗೆ ದೇವರ ಸಮಾನವಾಗಿ ಕಂಡುಬಂದಿದ್ದು ಬೋಸೆದೇವರ ಸಂಬಂಧಿ ಎನ್ನುತ್ತಾರೆ. ಗಾಜನಾಯಕ ರಾಜ್ಯಭಾರ ಮಾಡುತ್ತಿರುವ ಸಂದರ್ಭದಲ್ಲಿ ಪಶುಪಾಲನೆಯಿಂದ ಹೆಚ್ಚು ಆದಾಯವಿತ್ತು. ಹೆಚ್ಚಾಗಿ ಅದನ್ನೇ ಅವಲಂಬಿಸಿದ್ದುದರಿಂದ ಅವನ ಪ್ರದೇಶವು ಸಮೃದ್ಧವಾಗಿರಬೇಕು. ಹೀಗೆ ಇರುವಾಗ ಒಮ್ಮೆ ಪಶುಪಾಲಕರ ದೊರೆಯಾದ ದಡ್ಡಿಸೂರನಾಯಕನು ಈ ಕಡೆ ಪ್ರಯಾಣಿಸುತ್ತಾನೆ. ಮಲ್ಲಿಕಾಟಿ ಎದ್ದಾಡು ದಡ್ಡೆಯ (ಮರ‍್ಲಹಳ್ಳಿ, ಮೊಳಕಾಲ್ಮೂರು ತಾ) ಹತ್ತಿರ ಬಂದು ತಂಗುವನು. ಹಿಂದೊಮ್ಮೆ ದೇವರಹಳ್ಳಿ ಹತ್ತಿರ ಗಾಜನಾಯಕನ ಹೆಂಡತಿ ದಡ್ಡಿಸೂರನಾಯಕನನ್ನು ನೋಡಿ ಮೋಹಗೊಂಡಿದ್ದಳು. ತಮ್ಮ ಊರಿನ ಪಕ್ಕ ಕುರಿರೊಪ್ಪ ಕಟ್ಟಿ ಕೊಂಡಿದ್ದರಿಂದ ಭೇಟಿಮಾಡಿದಳು. ಒಮ್ಮೆ ರೊಪ್ಪಕ್ಕೆ ಬರಲು ಸಿದ್ಧಳಾದಳು.

ಗಾಜನಾಯಕನ ಪತ್ನಿ ಸಹಗಮನ, ಗಲಗಲ್ಲು

ಇವಳು ಸರ್ವಲಂಕೃತಳಾಗಿ ಕಂಬಳಿ ಹೊದ್ದು, ಮಧ್ಯರಾತ್ರಿ ಸಮಯದಲ್ಲಿ ರೊಪ್ಪಕ್ಕೆ ಬರುತ್ತಾಳೆ. ದಡ್ಡಿಸೂರನಾಯಕ ಕುರಿರೊಪ್ಪಕ್ಕೆ ಯಾವುದೋ ಕಾಡುಪ್ರಾಣಿ ದಾಳಿ ಮಾಡುತ್ತದೆಂದು ಭಾವಿಸಿ ಬಾಣದಿಂದ ಹೊಡೆದು ಅವಳನ್ನು ಸಾಯಿಸಿದನು. ಸಾಯುವ ಮುನ್ನ ಅವಳು ನನ್ನನ್ನು ಮೋಹಿಸಲು ಬಂದ ವಿಷಯ ತಿಳಿದಂತೆ ಅದೇ ಬಾಣದಿಂದ ತಿವಿದುಕೊಡು ದಡ್ಡಿಸೂರನಾಯಕ ಮರಣ ಹೊಂದಿದನೆಂದು (ಇನ್ನೊಂದು ಮೂಲದ ಪ್ರಕಾರ ಈ ನಾಯಕ ಓಬವ್ವನ ಮಗುವನ್ನು ಸಾಕುತ್ತಾನೆಂದು) ಹೇಳಲಾಗುತ್ತದೆ. ಆಗ ಅವಳು ಘಟ್ಟಪರ್ತಿ[2] ಚಿಕ್ಕಸೀರೆ ಕಟ್ಟದೆ ಹೊದೆಮುರಮಲ (ಮಿರಮಿರ) ಕ್ಯಾದಿಗ ಮುಡಿಯದೆ ಹೋದೆ’ ಎನ್ನುತ್ತಾಳೆ. ಪ್ರೇಮ ವಂಚಿತವಾದ ವಿರಹವೇದನೆಯಿಂದ ಅವಳು ಮರಣವನ್ನಪ್ಪುವಳು. ಆಕೆ ಮಡಿದ ಸ್ಥಳಕ್ಕೆ ಲಂಜಿಗುಡ್ಡ ಕಣಿವೆ ಎಂದು ಕರೆಯುತ್ತಾರೆ.[3]

ಗಾಜನಾಯಕನ ಅವಸಾನ

ಇವನಿಗೆ ತೆಲುಗಿನಲ್ಲಿ ಗಾಜನಾಯಕುಡು ಎನ್ನುತ್ತಾರೆ. ಪ್ರತಿವ್ಯಕ್ತಿನಾಮವನ್ನು ವಿಚಾರ ಮಾಡುವಾಗ ಕೊನೆಯಲ್ಲಿ ‘ಡು’ ಅಥವಾ ‘ಲು’ ಎಂಬ ಏಕವಚನ ಪ್ರತ್ಯಯ ಅಥವಾ ಬಹುವಚನ ಪ್ರತ್ಯಯವನ್ನು ಸೇರಿಸುವುದು ವಾಡಿಕೆ. ಗಾಜನಾಯಕನ ಆಳ್ವಿಕೆಯ ಪ್ರದೇಶ ಗುಡ್ಡ – ಬೆಟ್ಟ ಅರಣ್ಯದಿಂದ ಕೂಡಿತ್ತು. ಸುಮಾರು ೧೪ನೇ ಶತಮಾನಕ್ಕೆ ಇವನು ಸೇರಿದವನೆಂದು ಊಹಿಸಬಹುದು. ಸ್ಥಳೀಯರು ಟಿಪ್ಪುಸುಲ್ತಾನ್‌ನ ವಿರುದ್ಧ ಹೋರಾಡಿ ಮಡಿದ ಸಾಮಂತ ದೊರೆ ಅಥವಾ ಸೈನಿಕ ಅಧಿಕಾರಿಯಾಗಿದ್ದನೆಂದು ಹೇಳುತ್ತಾರೆ. ಇಂದಿಗೂ ಈ ಗ್ರಾಮದ ಪಕ್ಕ ಅಡಗುಪ್ಪ, ಊರುಕೊಂಡ (ಊರಿಗುಡ್ಡಮು) ಹತ್ತಿರ ಮುದ್ದುಗುಂಡು ತಯಾರಿಸುವ ಘಟಕ, ಯುದ್ಧದ ಆಯುಧಗಳು ಇತರ ಸಲಕರಣೆಗಳನ್ನು ಕಂದಕದಲ್ಲಿಟ್ಟಿರುವುದನ್ನು ನೋಡಬಹುದು. ಇವನು ವಿರೋಧಿ ಸೈನಿಕರೊಡನೆ ಹೋರಾಡಿ ಮಡಿದವನಾಗಿದ್ದು, ರಾಯದುರ್ಗ, ಮೊಳಕಾಲ್ಮೂರು ಮತ್ತು ಚಿತ್ರದುರ್ಗ ಪಾಳೆಯಗಾರರಿಗೆ ಒಬ್ಬ ಸಾಮಂತ ರಾಜನಾಗಿದ್ದನೆಂದು ತಿಳಿಸುತ್ತಾರೆ.

ಸಮಾಧಿ

ಮಡಿದ ಗಾಜನಾಯನನ್ನು ಗಲಗಲ್ಲು ಗ್ರಾಮದ ಊರುಬಾಗಿಲಹತ್ತಿರ ಸಮಾಧಿ ಮಾಡಲಾಗಿದೆ. ಗ್ರಾಮದ ಪೂರ್ವಭಾಗಕ್ಕೆ ಊರಿನ ಹೆಬ್ಬಾಗಿಲಿದ್ದು, ಊರಿನ ‘ಬುಡ್ಡೆಕಲ್ಲು’ ಇತ್ಯಾದಿ ಅವಶೇಷಗಳು ದಕ್ಷಿಣ ದಿಕ್ಕಿಗಿವೆ. ಇದರ ಹಿಂದೆ ಗ್ರಾಮದೇವತೆಗಳ ಗುಡಿಗಳಿವೆ. ಇವೆಲ್ಲವುಗಳ ಪೈಕಿ ಐತಿಹಾಸಿಕವಾಗಿ ಕಾಣುವುದು ಗಾಜನಾಯಕನ ಸಮಾಧಿ ಮತ್ತು ವೀರಗಲ್ಲು ಮಾತ್ರ.

ಸ್ಥಳೀಯ ಕಣಶಿಲೆಯಿಂದ ಕಟ್ಟೆಯನ್ನು ಕಟ್ಟಿ, ದೊಡ್ಡಗಾತ್ರದ ಬಂಡೆಗಳಿಂದ ಗುಡಿಯನ್ನು ನಿರ್ಮಿಸಿದ್ದಾರೆ. ೩ ಅಡಿ ಎತ್ತರದ ಕಲ್ಲಿನ ಚಪ್ಪಡಿಯ ಮೇಲೆ ೩ ಭಾಗದ ಬಂಡೆಗಳಲ್ಲಿ ೩ ವಿಧವಾದ ಕಥಾಚಿತ್ರವನ್ನು ಕೆತ್ತಲಾಗಿದೆ.

೧. ಒಂದನೇ ವೀರಗಲ್ಲಿನ ದೃಶ್ಯದಲ್ಲಿ ಯೋಧ ಬಲಗೈಯಲ್ಲಿ ಭರ್ಜಿ ಹಿಡಿದು ಎಡಗೈಯಿಂದ ಅಲಂಕೃತವಾದ ಕುದುರೆ ಜೀನು ಹಿಡಿದು ನಿಂತಿದ್ದಾನೆ.

೨. ಗುಡಿಯ ದ್ವಾರದ (ಭವಾವಳಿಯಂತೆ) ಕೆಳಗೆ ವೀರಕತ್ತಿ, ಗುರಾಣಿ ಹಿಡಿದು ಆತನ ಪತ್ನಿಸಮೇತ ಕೈಯಲ್ಲಿ ಕಿರಿದಾದ ಆಯುಧವಿದೆ.

೩. ಓರ್ವ ಮಹಿಳೆ (ಯೋಧನ ಪತ್ನಿ) ಕೈಯಲ್ಲಿ ಪಾಣಿಬಟ್ಲನ್ನು ಹಿಡಿದಿದ್ದಾಳೆ. ಅವಳ ಎದುರಿಗೆ ನಂದಿವಿಗ್ರಹ ಕೆತ್ತಲಾಗಿದೆ.

ಮತ್ತೊಂದು ವೀರಗಲ್ಲಿನಲ್ಲಿ ಯೋಧನಿಂತಿದ್ದು, ಕೈಯಲ್ಲಿ ಗಿಂಡಿಯಿದೆ. ಕಠಾರಿ, ಕತ್ತಿ, ಬಾಕು ಎಡಗೈಯಲ್ಲಿವೆ. ಪಕ್ಕದಲ್ಲಿ ಪತ್ನಿ ಕೈಮುಗಿದು ನಿಂತಿದ್ದಾಳೆ. ಕೆಳಗಡೆ ಕುದುರೆಯಿದೆ. ಕುದುರೆಕಾಳಗ ಅಥವಾ ಕುದುರೆ ರಕ್ಷಣೆಗಲ್ಲದೆ, ಸ್ತ್ರೀಯ ಮಾನಪಮಾನ ಕಾಪಾಡಲು ವೀರ ಹೋರಾಡಿ ಮಡಿದಂತಿದೆ. ಇದು ಗಾಜನಾಯಕನ ಸಮಾಧಿಕಟ್ಟೆಯ ಬಳಿ ಇರುವುದರಿಂದ ಅವನಿಗೆ ಮೇಲಿನ ಪಾಠ ಅನ್ವಯಿಸುತ್ತದೆ. ನಾಯಕ ಜನಾಂಗದ ಹಚ್ಚೆವಳ್ಳೆಯ ಬೆಡಗಿನವರು ಇವನನ್ನು ಪೂಜಿಸುತ್ತಾರೆ.

ಗಾಜನಾಯಕನ ಸಮಾಧಿ ಸಮೀಪದಲ್ಲಿ ಆಂಜನೇಯಸ್ವಾಮಿ ದೇವಾಲಯವಿದೆ. ಇಲ್ಲಿನ ಒಂದನೇ ಶಾಸನದ ಪಾಠ ಹೀಗಿದೆ.

ಶ್ರೀರಾಮುಲು
ಶ್ರೀಮುಖನಾಮಸ
ಮ್ವಾತ್ಸರ ಪುಷ್ಯ ಶು ||
೧೦ ಲು ನಾಟ (? ಪಿ) ತಿ
ಅಮರಾವತಿ ಅನುಮಂತಪ್ಪ ಅತಡು
ಳಿನ ಮಂಚುಂಚಿ
ತಿಂಮಂಪ ಯಿಡು ಮುಗ್ಗುರು
ಸಂಪಾದಿಂಚಿನ
ಪಾದರ್ತಂಖ ಮಶದ ಶಿಗುಡಿ
ಕಟಿಂಚಿ ವುನ್ನಾಮು (ಲಿಪಿ: ಕನ್ನಡ, ಭಾಷೆತೆಲುಗು)

ತಿಮ್ಮಪ್ಪ ದೇವಸ್ಥಾನದ ಬಳಿಯಿರುವ ಈ ಶಾಸನದಲ್ಲಿ ‘ಅಮರಾವತಿ’ ಹನುಮಂತಪ್ಪ ಇದನ್ನು ನಿರ್ಮಾಣ ಮಾಡಿದನೆಂದು ತಿಳಿದುಬರುತ್ತದೆ. ಇದೇ ದೇವಾಲಯದ ಹತ್ತಿರ ಇತ್ತೀಚಿನ ಶಾಸನವೊಂದು ಇದೆ. ಕೋತಿ ಸತ್ತ ಕಾರಣ ಭಕ್ತರು ೧೧.೩.೧೯೯೩ ಎಂದು ಕೋತಿ ಚಿತ್ರವನ್ನು ಬರೆಸಿ ಶಾಸನ ಹಾಕಿಸಿದ್ದಾರೆ. ಈ ಎಲ್ಲಾ ಲಕ್ಷಣಗಳನ್ನು ನೋಡುತ್ತಿದ್ದರೆ ಈ ಭಾಗದಲ್ಲಿ ಪ್ರಾಣಿ ಹಿಂಸೆ ನಡೆದುದರ ಬಗ್ಗೆ ಅನುಮಾನವುಂಟು. ಇಲ್ಲಿನ ನಾಯಕರು ಈ ಎಲ್ಲಾ ದೇವತೆಗಳನ್ನು ಪೂಜಿಸುತ್ತಾರೆ.

ಒಟ್ಟಾರೆ ಗಾಜನಾಯಕನು ಇಂದು ಒಬ್ಬ ದೇವರಾಗಿ ಬೇಡಜನಾಂಗದಲ್ಲಿ ಪೂಜಾರ್ಹನಾಗಿರುವನು. ವರ್ಷಕ್ಕೆ ಅನೇಕ ಹಬ್ಬ, ಜಾತ್ರೆಗಳು ಜರುಗುತ್ತವೆ. ಕೂಡ್ಲಿಗಿ ತಾಲೂಕಿನ ಚಿರತಗುಂಡ ಗ್ರಾಮದ ಗಾಜನಾಯಕನರೋರು ಇದರ ಭಕ್ತರು ಮತ್ತು ಪೂಜಾರಿಗಳು.


[1] ದೇವಮ್ಮನ ಪೂಜಾರಿ ಈರಣ್ಣ, ಹೊನ್ನೂರಪ್ಪ, ತಲಾಡಿ ಪೆನ್ನಜ್ಜ ಮೊದಲಾದ ನಾಯಕ ಜನಾಂಗದ ಮುಖಂಡರನ್ನು ಗಲಗಲ್ಲನಲ್ಲಿ ಭೇಟಿಮಾಡಿದಾಗ ಕೆಲಸಂಗತಿಗಳು ತಿಳಿದುಬಂದವು. ಮೂಲ ಆಧಾರಗಳು, ದಾಖಲೆ ಗೌರಸಮುದ್ರದ ಕಿಲಾರಿ ಹತ್ತಿರ ಮುತ್ತುಗೊಲ್ಲಹಳ್ಳಿ ಗುಡ್ಲುತಿಪ್ಪಯ್ಯ, ಕುಮಾರ ಮತ್ತು ಕೃಷ್ಣಪ್ಪನವರ ಬಳಿಯಿವೆ.

[2] ಘಟ್ಟಪರ್ತಿ ಚಳ್ಳಕೆರೆ ತಾಲೂಕಿನ ಒಂದು ಗ್ರಾಮ, ಬಹುಶಃ ಗಾಜನಾಯಕನ ಹೆಂಡತಿಯ ತವರೂರು ಇರಬೇಕು. ಅವರಿಬ್ಬರು ಮರಣಹೊಂದಿದ ಸ್ಥಳವೇ ಇಂದಿನ ಹಿರೇಹಳ್ಳಿ ಪರಿಸರದಲ್ಲಿ. ಅಲ್ಲಿ ದಡ್ಡಿಸೂರನಾಯಕನ ದೇವಾಲಯ, ನೆಲಮಾಳಿಗೆ, ಕೋಟೆ ಇತರ ಅವಶೇಷಗಳಿವೆ.

[3] ತುಮಡ್ಲು ಪಾಲಯ್ಯ, ೭೫, ನಾಯಕ, ಪದ್ನಿದೇವರಹಟ್ಟಿ (ಮ್ಯಾಸಹಟ್ಟಿ) ಮೊಳಕಾಲ್ಮೂರು ತಾ|| ಇವರ ಅಭಿಪ್ರಾಯದಂತೆ ಕೋನಸಾಗರದ ಕೆಳಗಡೆ ಅಡವಿಯಲ್ಲಿದೆ ಈ ಲಂಜಿಗುಡ್ಡ ಕಣಿವೆ, ಲಂಜಿ ಎಂದರೆ ತೆಲುಗಿನಲ್ಲಿ ಸೂಳೆ ನಡೆದ ತಪ್ಪಿದವಳು ಎಂದರ್ಥ.