. ದಡ್ಡಿಸೂರನಾಯಕ

ಹಿನ್ನೆಲೆ

ಮ್ಯಾಸಬೇಡರ ಮಲ್ಲಿನಾಯಕನ ಗೋತ್ರದ ಕೊರ‍್ಲಮಲ್ಲಿ (ಕೊಂಡ) ರಾಜನಿಗೆ ರಪ್ಪಲಸೂರಿ ಎಂಬ ಪುತ್ರನಿದ್ದ. ಪಶುಪಾಲಕನಾಗಿದ್ದ ರಪ್ಪಲಸೂರಿಗೆ ಕ್ರಮೇಣ ದಡ್ಡಿಸೂರನಾಯಕ, ದಡ್ಡಿ ಕಾಮನಾಯಕ ಮತ್ತು ದಡ್ಡಿಯರಬಲ್ಲನಾಯಕ ಎಂಬ ಮೂರು ಜನ ಪುತ್ರರು ಜನಿಸುತ್ತಾರೆ.

ಹಿರಿಯವನಾದ ದಡ್ಡಿಸೂರನಾಯಕ ಹಿರಿಯರಂತೆ ಪಶುಪಾಲನೆಯನ್ನು ಜೀವನ ಸಾಗಿಸುತ್ತಿದ್ದ. ಹೀಗೆ ಇರುವಾಗ ಗಲಗಂಟಿ ಗಾಜ (ದಿ) ನಾಯಕನ ಪತ್ನಿಯನ್ನು ಪ್ರೀತಿಸುತ್ತಾನೆ. ಅವಳ ಹೆಸರು ಓಬವ್ವ. ಪ್ರತಿರಾತ್ರಿ ಗಂಡನನ್ನು ಮಲಗಿಸಿ ದಡ್ಡಿ ಸೂರನಾಯಕನ ಹತ್ತಿರ ಹೋಗಿ ಬರುತ್ತಿದ್ದಳು. ಹೀಗೆ ಅನೇಕ ದಿನಗಳವರೆಗೆ ನಡೆಯಿತು. ಕೊನೆಗೆ ಗರ್ಭಿಣಿಯಾದರೂ ತನ್ನ ಪ್ರಿಯತಮನ ಆಲಿಂಗನವನ್ನು ಕೈಬಿಡಲಿಲ್ಲ. ಅಮವಾಸೆಯ ಕತ್ತಲಲ್ಲಿ ಮಳೆ ಸುರಿಯುತ್ತಿತ್ತು. ಅಂಥ ವೇಳೆಯಲ್ಲಿ ಕಪ್ಪು ಸೀರೆ ಧರಿಸಿ, ಕಂಬಳಿಹೊದ್ದು ದಡ್ಡಿ ಸೂರನಾಯಕನ ರೊಪ್ಪಕ್ಕೆ ಬರುತ್ತಾಳೆ.

ಮಲಗಿರುವ ದಡ್ಡಿಸೂರನಾಯಕ ಯಾವುದೋ ಕಾಡುಪ್ರಾಣಿ ಕರಡಿ ಗೋವುಗಳ ರೊಪ್ಪಕ್ಕೆ ಧಾಳಿ ಮಾಡುತ್ತದೆಂದು ತನ್ನ ಬಾಣದಿಂದ ಹೊಡೆಯುತ್ತಾನೆ. ತುಂಬು ಗರ್ಭಿಣಿಯಾದ ಓಬವ್ವ ಕಿರುಚುತ್ತಾ ನೆಲಕ್ಕೆ ಬಿದ್ದಳು. ಬಿದ್ದ ಪರಿಣಾಮ ಗರ್ಭದಿಂದ ಮಗು ಹೊರಬರುತ್ತದೆ. ನಾಯಕ ಬಂದು ನೋಡಲಾಗಿ ಓಬವ್ವ ಮರಣಶಯ್ಯಯಲ್ಲಿದ್ದಳು. ಅವಳು ಮಡಿದ ನಂತರ ಅತೀವ ದುಃಖಿತನಾದ ನಾಯಕ ಆಕೆಯನ್ನು ತನ್ನೊಂದಿಗಿನ ಕರುಗಳೊಂದಿಗೆ ಸಾಕತೊಡಗಿದ. ಇನ್ನೊಂದು ಕಥೆಯಂತೆ ಅವಳ ಸಾವಿನೊಂದಿಗೆ ನಾಯಕನು ದುರಂತಕ್ಕೆ ಸಿಕ್ಕಿ ಸಾಯುತ್ತಾನೆ.

ಇತ್ತ ಗಲಗಂಟಿ ಗಾಜ (ದಿ) ನಾಯಕನು ನಿದ್ದೆಯಿಂದ ಎಚ್ಚೆತ್ತು ನೋಡಲಾಗಿ, ತನ್ನ ಹೆಂಡತಿ ಮನೆಯಲ್ಲಿ ಇರಲಿಲ್ಲವೆನ್ನುವುದು ತಿಳಿದು ವ್ಯಥೆ ಪಡುತ್ತಿದ್ದ. ತನ್ನ ಪರಿವಾರದವರು ಬಂದು ದಡ್ಡಿಸೂರನಾಯಕನ ರೊಪ್ಪದ ಬಳಿ ಮರಣ ಹೊಂದಿದ್ದಾಳೆಂದು ತಿಳಿಸುತ್ತಾರೆ. ತನ್ನ ಎಲ್ಲಾ ಗುಂಪಿನೊಂದಿಗೆ ಇವನು ಮೇಕೆಬಂಡೆ ಬಳಿ ಬಂದು ಮ್ಯಾಸಮಂಡಲದ ಮೇಲೆ ಕಾಳಗ ಮಾಡುತ್ತಾನೆ. ದಡ್ಡಿಸೂರನಾಯಕನಿಗೂ ಮತ್ತು ಗಲಗಂಟಿ ಗಾಜ (ದಿ) ನಾಯಕನಿಗೂ ಘೋರ ಯುದ್ಧವೇ ಜರುಗುತ್ತದೆ. ಆಗ ಬಿಲ್ಲನೋಡು ಎಂಬುವನು ಗಾಜನಾಯಕನ ಕುದುರೆಯ ಕಣ್ಣುಗುಡ್ಡೆಗಳು ಕೆಳಗೆ ಬೀಳುವಂತೆ ಬಿಲ್ಲಿನಿಂದ ಹೊಡೆದು, ಗಾಜ (ದಿ) ಕುದುರೆಯ ಕಣ್ಣುಗುಡ್ಡೆಗಳು ಕೆಳಗೆ ಬೀಳುವಂತೆ ಬಿಲ್ಲಿನಿಂದ ಹೊಡೆದು, ಗಾಜ (ದಿ) ನಾಯಕನ ದಂಡನ್ನು ಹೆದರಿಸಿದನು. ‘ಬಿಲ್ಲ’ ಎಂಬುವನು ಈ ಯುದ್ಧದಲ್ಲಿಯ ಗಲಗಂಟೆ ಗಾಜ (ದಿ) ನಾಯಕನನ್ನು ಬಿಲ್ವಿದ್ಯೆಯಿಂದ ಸೋಲಿಸಿದ್ದಕ್ಕೆ ಹಿರಿಯರಾದ ಯರಮಂಚಿನಾಯಕ ಆನಂದಪಟ್ಟನು. ಆ ಬಿಲ್ಲಿನವನ ಬಿಲ್ವಿದ್ಯೆಯ ಸಾಹಸಕ್ಕೆ ಮೆಚ್ಚಿ ವಿಷ್ಣು ಸಾಲಿಗ್ರಾಮವನ್ನು ಬಹುಮಾನವಾಗಿ ಕೊಡುತ್ತಾರೆ. ಗಾಜ (ದಿ) ನಾಯಕ ಮಡದಿಯನ್ನು ಕಳೆದುಕೊಂಡು ಹತಾಶನಾದಲ್ಲದೆ, ಅವನಿಂದ ಸೋತು ಶರಣಾಗತನಾದದು ದುರಂತದ ಚಿತ್ರಣ ಮನಮಿಡಿಯುವಂತಿದೆ. ಇವನು ಹೆಂಡತಿಯ ಶವವನ್ನು ಅಲ್ಲಿಯೇ ಸಂಸ್ಕಾರ ಮಾಡಿದ. ಆ ಸಮಾಧಿ ಸ್ಥಳಕ್ಕೆ ‘ಲಂಜಿಗುಂಟಿ ಕಣಿವೆ’ ಎಂದು ಹೆಸರಿಟ್ಟ (ಸೂಳೆಯ ಕಣಿವೆ).

ಹಿರೇಹಳ್ಳಿ ಸ್ಥಾಪನೆ

ದಡ್ಡಿ ಎಂದರೆ ಹಟ್ಟಿ. ಹಟ್ಟಿಯೊಂದಕ್ಕೆ ನಾಯಕನಾಗಿದ್ದ ದಡ್ಡಿಸೂರನಾಯಕನು ಈ ಪ್ರದೇಶವನ್ನೆಲ್ಲಾ ಆಳುತ್ತಿದ್ದ. ಈ ಗ್ರಾಮ ಸ್ಥಾಪಿಸುವ ಮೊದಲು ದಿದ್ದಿಲಾರುಹಳ್ಳಿ (ರುದ್ರಮ್ಮನಹಳ್ಳಿ) ಹತ್ತಿರ ಯರಮಂಚಿನಾಯಕ, ಗಗ್ಗರಿದಾಸರು ತಮ್ಮ ಕಂಪಳ ಸಮೇತ ಬಂದು, ಗೊಪ್ಪಗೇತಪಲ್ಲಿಗೆ ಇಳಿದುಕೊಂಡರು. ದೊಡ್ಡ ಗಾತ್ರದ ಮಲ್ಲಿಗೆ ಹೂತಂದು, ಉಗ್ಗಿಹೊಯ್ದು ಪೆದ್ದಪಲ್ಲಿ (ಹಿರೇಹಳ್ಳಿ) ಎಂದು ನಾಮಕರಣ ಮಾಡಿದರು. ಆ ಹಿರೇಹಳ್ಳಿ ಚಳ್ಳಕೆರೆ – ಬಳ್ಳಾರಿ ರಸ್ತೆಯ ಮಧ್ಯದಲ್ಲಿ (ತಳಕು) ಬರುತ್ತದೆ.

[1]

ಈ ಹಿರೇಹಳ್ಳಿಯಲ್ಲಿ ಸೂರಿನಂದನ ಅಲಗನ್ನು (ಕತ್ತಿ) ಪ್ರತಿಷ್ಠಾಪಿಸಿ ದಡ್ಡಿ ಸೂರನಾಕ ದೇವರೆಂದು ಕರೆದುಕೊಂಡರು. ಇದಕ್ಕೆ ದೊಡ್ಡಸೂರಯ್ಯ ಎಂಬುವರನ್ನು ನೇಮಿಸಿ ಪೂಜೆಗಳನ್ನು ಸಲ್ಲಿಸುತ್ತಿದ್ದರು.

ದಡ್ಡಿ ಸೂರನಯಕನ ಐಕ್ಯಸ್ಥಳ ದೇವರಗುಡಿ, ಹಿರೇಹಳ್ಳಿ

ದಡ್ಡಿ ಸೂರಯ್ಯನ ಪೂಜಾರಿಗಳಿಗೆ ತಲೆಬೋಳಿಸಿ ಮಂಡೆಯನ್ನು ಸೂರ‍್ಯನಿಗೆ ಅರ್ಪಿಸಿ, ದೇವರಿಗೆ ಭಾದ್ಯರಾಗಿ: ಪೂಜಾರಿ ದೊಡ್ಡ ಸೂರನಾಯಕ, ಮೊಲಕೇತಿ ಎದ್ದುಲವಾಡು, ಗುಡ್ಡಮೆದ್ದುಲವಾಡು, ನಲ್ಲದಮ್ಮ ನಾಯಕ ನೋಡು, ನಲ್ಲ ಬಾಪನವೋಡು ಈ ೫ ಮಂದಿಯನ್ನು ನೇಮಿಸಿದರು. ಇದಕ್ಕೆ ದಳಪತಿಯಾಗಿ ಪೆದ್ದಪಲ್ಲಿ ಮಾಸಿಲುವಾಡು ಎಂಬುವರನ್ನು ನೇಮಿಸಿದರು. ಶಿಲಾಶಾಸನಗಳು ಕೆತ್ತಿಸಿರುವುದು ಕಂಡುಬಂದಿಲ್ಲ. ಹಸ್ತಪ್ರತಿಗಳು ದೊರೆಯುವುದನ್ನು ಸಂಗ್ರಹಿಸಲಾಗಿದೆ. ಭಕ್ತರು ಮತ್ತು ಪೂಜಾರಿಗಳ ಜಗಳದಿಂದ ಈ ದೇವರ ಹಬ್ಬ – ಜಾತ್ರೆಗಳನ್ನು ಸುಮಾರು ವರ್ಷಗಳಿಂದ ನಿಲ್ಲಿಸಲಾಗಿದೆ.


[1] ಈ ಹಿರೇಹಳ್ಳಿ ಸಮೀಪ ರುದ್ರಮ್ಮನಹಳ್ಳಿ ಎಂಬ ಗ್ರಾಮವಿದೆ. ಇಲ್ಲಿರುವರು ಬೇಡರು ಮಾತ್ರ. ದಿದ್ದಲಾರು ಬೆಡಗಿನವರು ನಲುಜೆರುವಯ್ಯ ಎಂಬ ವೀರನ ಹೆಸರಿನ ದೇವರನ್ನು ಆರಾಧಿಸುವರು. ದೇವಾಲಯವಿದ್ದು ಇವನ ಅನುಯಾಯಿಗಳು ಚಿತ್ರದುರ್ಗ ಬಳ್ಳಾರಿ ಜಿಲ್ಲೆಗಳಲ್ಲಿಯೂ ಇದ್ದಾರೆ (೧೧.೧೧.೨೦೦೧ರಂದು ಕ್ಷೇತ್ರಕಾರ್ಯದಲ್ಲಿ ಗಿರೀಶ್, ಓಬಯ್ಯ ಮೊದಲಾದವರು ಸಹಕರಿಸಿದ್ದಾರೆ-ಕೃತಜ್ಞತೆಗಳು