.ನಾಯಕನಹಟ್ಟಿತಿಪ್ಪೇಸ್ವಾಮಿ

ಹಿನ್ನೆಲೆ :

ನಾಯಕನಹಟ್ಟಿ ತಿಪ್ಪೇಸ್ವಾಮಿ ಎಂಬ ಪ್ರಸಿದ್ಧ ಪವಾಡಪುರುಷ, ಸಂತ, ದೇವತಾ ಪುರುಷ, ನಾಯಕನಹಟ್ಟಿ ಎಂಬ ಸ್ಥಳದಲ್ಲಿ ಜೀವೈಕ್ಯ ಸಮಾಧಿಯಾಗಿರುವನು. ಮ್ಯಾಸಬೇಡರು ಈತನನ್ನು ತಮ್ಮ ಮೂಲಪುರುಷನೆಂದು, ಮನೆದೇವರೆಂದು ಆರಾಧಿಸುವರು. ಈ ತಿಪ್ಪೇಸ್ವಾಮಿ ಪೂರ್ವಾಶ್ರಮದಲ್ಲಿ ಪಶುಪಾಲಕನಾಗಿದ್ದ. ತನ್ನ ವೀರತ್ವ ಮೆರೆದು ಸಾಹಸವೆಗುವುದರ ಮೂಲಕ ಜನಮನ್ನಣೆಗೆ ಪಾತ್ರನಾಗಿದ್ದ. ಹೀಗೆ ವೀರನೆನಿಸಿಕೊಳ್ಳುವ ಹಂತದಲ್ಲಿ ಅಮೋಘ ಸಾಧನೆ, ದುರಂತಗಳಿಂದ ಪರಿವರ್ತನೆಗೊಂಡು ವೈರಾಗ್ಯ ತಾಳಿದಂತಿದೆ. ಇವನು ಆಂಧ್ರಮೂಲದವನಾಗಿದ್ದು, ಹೆಸರು ತಿಪ್ಪಯ್ಯನೆಂಬುದು ತೆಲುಗು ಭಾಷೆಯಿಂದ ಬಂದಿದೆ. ಕನ್ನಡದಲ್ಲಿ ಈ ಪದದ ಬಳಕೆ ಮಧ್ಯಕಾಲೀನ ಸಂದರ್ಭದಲ್ಲಿ ಆಗಿರಬೇಕು. ಇವನು ಬಂದಿದ್ದ ಮಾರ್ಗದಲ್ಲಿ ಈತನ ಹೆಸರಿನ ಮೇಲೆ ಗ್ರಾಮಗಳು ಉದಯವಾದವು. ರಾಯದುರ್ಗ ಮತ್ತು ಮೊಳಕಾಲ್ಮೂರುಗಳ ನಡುವಿನ ತಿಪ್ಪೇರಯ್ಯನಹಟ್ಟಿ, ಚಿನ್ನಹಗರಿ ನದಿ ದಂಡೆಯ ಮೇಲಿರುವ ತಿಪ್ಪೇಹಳ್ಳಿ ಹೀಗೆ ಕೆಲವನ್ನು ಉದಾಹರಿಸಬಹುದು.

ತಿಪ್ಪೇಸ್ವಾಮಿ ನೆಲೆನಿಂತ ಪ್ರದೇಶ ಬೆಟ್ಟಗುಡ್ಡ, ಕಾಡಿನಿಂದ ಆವೃತವಾಗಿತ್ತ. ಈ ಪರಿಸರದಲ್ಲಿ ಬುಡಕಟ್ಟು ಜನರು ಪಶುಪಾಲನೆಗೆ ತೊಡಗಿದ್ದು, ಹಟ್ಟಿಗಳನ್ನು ಕಟ್ಟಿಕೊಂಡು ನೆಲೆಗೊಂಡಿದ್ದು ಗಮನಾರ್ಹ. ಹೀಗೆ ಆರ್ಥಿಕ, ಸಾಮಾಜಿಕ, ಅಭಿವೃದ್ಧಿಯಾಗುತ್ತಾ ಹೋದಂತೆ ರಾಜಕೀಯವಾಗಿ ಆಳುವ ಪ್ರಕ್ರಿಯೆ ಉಗಮಗೊಂಡಿತು. ಈತನ ಸಮಕಾಲೀನ ಸಂದರ್ಭದಲ್ಲಿ ಕುದಾಪುರ ಬೋರೆದೇವರು, ಹಿರೇಹಳ್ಳಿ ದಡ್ಡಿಸೂರನಾಯಕ, ನನ್ನಿವಾಳ ಪ್ರದೇಶದಲ್ಲಿ ಪಾಪನಾಯಕ, ಬೊಮ್ಮಗೊಂಡನಕೆರೆ, ಮುತ್ತಿಗಾರಹಳ್ಳಿ ಪ್ರದೇಶದಲ್ಲಿ ಕೊಳಗಲುಬೊಮ್ಮ (ಕೊಡಗು) ಮೊದಲಾದ ಪ್ರದೇಶಗಳಲ್ಲಿ ಸ್ಥಳೀಯ ನಾಯಕ ವೀರರು ಪ್ರಭುತ್ವ ಹೊಂದಿದ್ದರು. ಇಂಥ ಸಂದರ್ಭದಲ್ಲಿ ತಿಪ್ಪೇಸ್ವಾಮಿ ಲೋಕಕಲ್ಯಾಣಕ್ಕಾಗಿ ಉದಯಿಸಿಬಂದನೆಂದು ಹೇಳಲಾಗುವುದು.

ತಿಪ್ಪಯ್ಯ ಯಾರು?

ದಲಿತರ ಉದ್ಧಾರಕ್ಕೆ ಶ್ರಮಿಸಿದ ಮಹಾಚೈತನ್ಯಶಾಲಿ ಈ ತಿಪ್ಪೇಸ್ವಾಮಿ. ದೀನ – ದಲಿತರ ಬದುಕಿಗೆ ಆಶಾಕಿರಣವಾಗಿ ತನ್ನ ಬದುಕನ್ನು ಮುಡುಪಾಗಿಟ್ಟುಕೊಂಡವನು. ಇವನ ಜೀವನ ಚರಿತ್ರೆ ಅಸ್ಪಷ್ಟವಾಗಿ ತಿಳಿದುಬರುವುದಲ್ಲದೆ, ಜನಪದರು ತಿಳಿಸುವಂಥ ಮಾಹಿತಿಯಿಂದ ಇವನನ್ನು ಮೇರುವ್ಯಕ್ತಿಯನ್ನಾಗಿ ಚಿತ್ರಿಸಬಹುದಾಗಿದೆ. ತೆಲುಗಿನಲ್ಲಿ ಆಕಳು ಕಾಯುವವನಿಗೆ ಆವುಲಯ್ಯ, ಎತ್ತುಕಾಯುವವನಿಗೆ ಎಡ್ಲಯ್ಯ, ಕುರಿ – ಮೇಕೆ ಕಾಯುವವರಿಗೆ ಗೊರ‍್ಲಯ್ಯ – ಮ್ಯಾಕಲಯ್ಯ ಎನ್ನುವಂತೆ ಪಶುಗಳ ಮುಂದೆಯಲ್ಲಿ ಸಗಣಿಯಿಂದ ತಿಪ್ಪೆ ನಿರ್ಮಿಸಿ, ಅಡವಿ ಮತ್ತು ತುರುಮಂದೆಯಲ್ಲಿ ಸಗಣಿ ಕೂಡಿಹಾಕಿ ತಿಪ್ಪೆ ಮಾಡುವ ಕಾಯಕವನ್ನು ಏಕೆ ಮಾಡಿರಬಾರದು? ಈ ತಿಪ್ಪೇಸ್ವಾಮಿ. ಕನ್ನಡದಲ್ಲಿ ಇತ್ತೀಚಿನ ೨ – ೩ ಶತಮಾನಗಳಲ್ಲಿ ಈ ಹೆಸರಿನ ಬಳಕೆಯಿದೆ. ಬುಡಕಟ್ಟು ಸಮುದಾಯದವರಿಗೆ ವಲಸೆ ಪ್ರಕ್ರಿಯೆಯಲ್ಲಿ ಜಾತಿ – ಧರ್ಮಗಳಿಗಿಂತ ಬದುಕಿಗಾಗಿ ಸದಾ ಹೋರಾಡುವುದು ಮುಖ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ದಾನಸಾಲಮ್ಮನ ವಂಶದ ಕುಡಿಯೊಂದಿಗೆ ತನ್ನ ವಂಶದ ಬಳ್ಳಿಯಲ್ಲಿ ಸೇರಿಸಿಕೊಳ್ಳುವ ತಿಪ್ಪೇಸ್ವಾಮಿ ಅಸಾಧಾರಣ ವ್ಯಕ್ತಿ ಎಂದು ಕರೆಸಿಕೊಳ್ಳುವುದು ಇವರಿಂದಲೇ. ಮ್ಯಾಸಬೇಡರ ಮೌಖಿಕ ಚರಿತ್ರೆಯಲ್ಲಿ ಈತನೊಬ್ಬ ವೀರನೂ, ಸಂತನೂ ಆಗಿದ್ದು ಕಂಡುಬರುತ್ತದೆ.

ಜಗತ್ತಿನ ಕಲ್ಯಾಣಕ್ಕಾಗಿ ಪಂಚಗಣಾಧೀಶ್ವರರಾಗಿ ಅವತರಿಸಿದ ಕೋಲುಶಾಂತಯ್ಯ ಹರಪನಹಳ್ಳಿಯ ಅರಸಿಕೆರೆಯಲ್ಲಿ ಜೀವಕ್ಯನಾಗಿದ್ದನು. ಮದ್ದಾನಸ್ವಾಮಿ ಮತ್ತು ಕೆಂಪಯ್ಯ ರಾಯದುಗ್ದಲ್ಲಿ ನೆಲೆಸಿ ಜ್ಞಾನೋಪದೇಶ ಕಾಯಕದಿಂದ ಬದುಕಿದ್ದರು. ಶ್ರೀ ಚನ್ನಬಸವೇಶ್ವರರು ಗುಬ್ಬಿಯಲ್ಲಿ ನೆಲೆಸಿ ಜೀವೈಕ್ಯರಾದರು. ಕೊಟ್ಟೂರು ಬಸವೇಶ್ವರ ಮತ್ತು ನಾಯಕನಹಟ್ಟಿ ತಿಪ್ಪೇಸ್ವಾಮಿಯವರು ನೆಲೆಸಿದ ಸ್ಥಳಗಳಲ್ಲಿಯೇ ಜೀವೈಕ್ಯರಾದರು. ಮಹಾತ್ಮರ ಮೂಲವನ್ನು ಹುಡುಕಬಾರದೆಂಬ ಮಾತಿನಂತೆ ಇವರನ್ನು ಪ್ರಶ್ನಿಸದೇ ಜನಪದವನ್ನು ಹೇಳಬಹುದಾಗಿದೆ.

ಪ್ರದಕ್ಷಿಣೆ

ತನ್ನ ಅನುಭವದ ಸೊಬಗನ್ನು ಜಗತ್ತಿಗೆ ತಿಳಿಸಲು ಪ್ರದಕ್ಷಿಣೆ ಕೈಗೊಂಡ. ಭೂಮಿ ಬಹುವಿಸ್ತಾರವಾದುದೆಂದು ತಿಳಿದು ತನಗೆ ಸೀಮಿತ ಗಡಿರೇಖೆಯಲ್ಲಿ ಸಂಚರಿಸಿದ. ಪ್ರತಿಯೊಬ್ಬ ಪಂಚಗಣಾಧೀಶ್ವರನಿಗಿರುವಂತೆ ತಿಪ್ಪೇರುದ್ರಸ್ವಾಮಿಗೂ ಗುರಿ – ಉದ್ದೇಶಗಳು ನೆಲೆಯೂರಿದ್ದವು. ಈ ತಿಪ್ಪೇರುದ್ರಯ್ಯ ಕೂಡ್ಲಿಗಿ ತಾಲ್ಲೂಕಿನ ಕುಪ್ಪಿನಕೆರೆ (ಚಿಪ್ಪಿಗೆರೆ) ಗ್ರಾಮದಲ್ಲಿ ವಾಸಿಸುತ್ತಾನೆ. ಇಲ್ಲಿನ ಆಂಜನೇಯ ದೇವಾಲಯದಲ್ಲಿ ನೆಲೆಸಿರುವಾಗ ಆ ಮಾರುತಿಲಿಂಗಕ್ಕೆ ಲಿಂಗಾಧಾರಣೆ ಮಾಡಿ ರಾಯದುರ್ಗಕ್ಕೆ ಬರುತ್ತಾನೆ. ಇದು ಆರಂಭಿಕ ಬದುಕನ್ನು ತಿಳಿಸುತ್ತದೆಯೇ ಹೊರತು ಇವನ ಮೂಲ ತಂದೆತಾಯಿಗಳ ಬಗ್ಗೆ ಬೆಳಕು ಚೆಲ್ಲುವುದಿಲ್ಲ. ರಾಯದುರ್ಗದಲ್ಲಿ ನೆಲೆಸಿರುವಾಗ ಕೆಂಪಯ್ಯಗೆ ಉಪದೇಶ ಮಾಡಲಾಯಿತು. ಹೀಗೆ ಇರುವಾಗ ಹಟ್ಟಿಯ ವ್ಯಾಪಾರಿ ಫಣಿಯಪ್ಪನು ರಾಯದುರ್ಗಕ್ಕೆ ಹೋದಾಗ ಈ ವ್ಯಕ್ತಿಯ ಪರಿಚಯವಾಗುತ್ತದೆ. ಫಣಿಯಪ್ಪನ ಗಾಢವಾದ ಗೆಳೆತನದೊಂದಿಗೆ ದಾರಿಸವೆಸುತ್ತಾ ಅರ್ಚಕಪುರಿ (ಪೂಜಾರಹಳ್ಳಿ) ಗ್ರಾಮದ ಚನ್ನಪಟ್ಟಣಕ್ಕೆ ಬಂದು ನೆಲಸಿದರು.

[1] ಸ್ಥಳೀಯ ಪಾಳೆಯಗಾರರ ನಿಯೋಜಿತ ಅಧಿಕಾರಿಯ ಕಿರುಕುಳದಿಂದ ಮತ್ತು ಜೀವನಾವಶ್ಯಕ ಸೌಲಭ್ಯಗಳು, ಯೋಗ್ಯವಲ್ಲದ ವಾತಾವರಣದಿಂದ, ಕುಟಿಲ ಭೋದೋಪಾಯದ ಜನರಿಂದ ಬೇಸತ್ತು ನಾಯಕನಹಟ್ಟಿಗೆ ದಕ್ಷಿಣಾಭಿಮುಖವಾಗಿ ಪ್ರಯಾಣಿಸಿದ. ಈತನ ಬರುವಿಕೆಗೆ ಫಣಿಯಪ್ಪನ ದಂಪತಿಗಳು ಸ್ವಾಗತಿಸಲು ತುದಿಗಾಲಲ್ಲಿ ನಿಂತಿದ್ಧರು. ಅವರ ಮನೆಗೆ ಬಂದು ಫನಿಯಪ್ಪ ಮತ್ತು ಆತನ ಪತ್ನಿ ಮಾಳಮ್ಮನಿಗೆ ಲೋಕಜ್ಞಾನದ ಬಗ್ಗೆ ವಿವರಿಸಿದನು. ಸನ್ಮಾರ್ಗ ಪ್ರಾಪ್ತಿಗೆ ಅಗತ್ಯವಾದ ಎಲ್ಲಾ ಸಂಗತಿಗಳನ್ನು ತಿಳಿಯುವುದು ಅಗತ್ಯವೆಂದು ಮನವರಿಕೆಮಾಡಿಕೊಟ್ಟನು. ಅರಿಷಡ್ವರ್ಗಗಳ ನಿಗ್ರಹ, ಅತಿಥಿಸತ್ಕಾರ ಮಾಡುವುದು, ಸತ್ಯ – ಧರ್ಮ ಪ್ರಾಮಾಣಿಕತೆಯಿಂದ ಜೀವಿಸುವನ್ನು ಬೋಧಿಸಿದ.

ಪವಾಡ ಪುರುಷ

ದಿನದಿಂದ ದಿನಕ್ಕೆ ತನ್ನ ಪವಾಡದ ಕ್ಷಿತಿಜವನ್ನು ಹೆಚ್ಚಿಸಿಕೊಂಡ ತಿಪ್ಪೇಸ್ವಾಮಿ ಸುತ್ತೆಲ್ಲಾ ಗಡ್ಡೆಗೆ (ಪ್ರದೇಶ) ಲೋಕಖ್ಯಾತಿ ಪಡೆದ. ತನ್ನ ದೈವಿಶಕ್ತಿಯಿಂದ ಅನೇಕ ಪವಾಡಗಳನ್ನು ಮಾಡಿತೋರಿಸಿ ಶ್ಲಾಘನೆ ಪಡೆದ. ನಿಡಗಲ್ಲು ದೊರೆಗೆ ಆಳುವ (ಆಡಳಿತ) ಬಗ್ಗೆ ಮಾರ್ಗದರ್ಶನ ಮತ್ತು ಸಂತಾನ ಆಶೀರ್ವಾದ ಕೊಟ್ಟರು. ಆ ನಾಗತಿಯು ಸ್ವಾಮಿಯ ಕೃಪೆಗೆ ಪಾತ್ರಳಾದಳು. ದೊರೆ ಕಾಟೇಮಲ್ಲನಾಕನು ತಿಪ್ಪೇಸ್ವಾಮಿಗಳ ಪವಾಡ ಕಂಡುಬೆರಗಾಗಿ ಅವರ ಇತಿಹಾಸವನ್ನು ಕೇಳಿ ತಿಳಿದುಕೊಂಡ.[2] ಮಲ್ಲಪ್ಪನಾಯಕನು ಹಟ್ಟಿಯ ಪಾಳೆಯಪಟ್ಟನ್ನು ಕಟ್ಟಲು ಇವರ ಆಶೀರ್ವಚನ ಪಡೆದನು. ಕೋನಸಾಗರದ ಸಮೀಪ ಬಿಳಿನೀರ ಚಿಲುಮೆಯಲ್ಲಿ ಗಂಗೆ ಉಕ್ಕಿಬಂತು (ಕೊಂಡ್ಲಹಳ್ಳಿ). ಬುತ್ತಿಯಲ್ಲಿ ಅಕ್ಷಯ ಪವಾಡ ತೋರಿಸಿದ್ದು, ಒಡ್ನಳ್ಳಿಮಾರಮ್ಮನನ್ನು ನಿರ್ಗಮಿಸುವಂತೆ ಮಾಡಿದ್ದು, ಹಟ್ಟಿಮಲ್ಲಪ್ಪನಾಯಕನೊಡನೆ ಲೋಕಕಲ್ಯಾಣ ಕೆಲಸಗಳಲ್ಲಿ ಭಾಗಿಯಾಗಿದ್ದು, ಹಿರೇಕೆರೆ ನಿರ್ಮಾಣ, ಚಿಕ್ಕಕೆರೆ, ೫ ಗ್ರಾಮಗಳ ಸ್ಥಾಪನೆ (ಮಹದೇವಪುರ, ಗೌರಿಪುರ) ಫಣಿಯಪ್ಪನ ಸಂಸಾರ ಆನಂದಸಾಗರದಲ್ಲಿ ತೇಲಿಸಿದ್ದು, ಸತ್ತೆಮ್ಮ ಹಾಲು ಕರೆದದ್ದು, ಹರಿಜನರ ಗುಡಿಸಲಲ್ಲಿ ಶ್ರೀಗಳ ಶಿವಪೂಜೆ, ಮಹಿಮೆ – ಮಾಯೆಗಳ ಚಿತ್ರಣವನ್ನು ಜನಸಾಮಾನ್ಯರಿಗೆ ತೋರಿಸಿದ್ದು ಗಮನಾರ್ಹ.

ಅಪ್ಪಟ ಗ್ರಾಮೀಣ ಸೊಗಡಿನ ತಿಪ್ಪೇರುದ್ರಯ್ಯ ತನ್ನ ಪರಿಸರದ ಎಲ್ಲಾ ವ್ಯವಹಾಗಳನ್ನು ಬಲ್ಲವನಾಗಿದ್ದ. ಹೀಗೆ ಒಮ್ಮೆ ಫಣಿಯಪ್ಪನೊಂದಿಗೆ ಕಪಿಲೆ ಹೊಡೆಯುವುದು, ನೀರು ಕಟ್ಟುವುದು ಮಾಡುತ್ತಿದ್ದನು. ಕಪಿಲೆಬಾನಿಗೆ (ಚರ್ಮ) ಹರಿದಾಗ ಫಣಿಯಪ್ಪ ಹೊತ್ತು ಬೇಗಾರಹಟ್ಟಿಗೆ (ಹರಿಜನರ) ಹೋಗಿ ಹೊಲಿಸಿಕೊಂಡು ಬರುವಾಗ ಆ ಮನೆಯಲ್ಲಿ ತಿಪ್ಪಯ್ಯ ಊಟ ಮಾಡುವ ಸಂಗತಿಯನ್ನು ತನ್ನ ಮಡದಿಗೆ ತಿಳಿಸಿದ. ಕ್ಷೀರ ಪರೀಕ್ಷೆಯಲ್ಲಿ ಸತ್ತ ಎಮ್ಮೆಯನ್ನು ಬದುಕಿಸಿದಾಗ ಫಣಿಯಪ್ಪ ದಂಪತಿಗಳಿಗೆ ಆಶ್ಚರ್ಯವಾಯಿತು. ಲೋಕೋಪಯೋಗಿ ಕೆಲಸ ಕಾರ್ಯಗಳಲ್ಲಿ ಹಟ್ಟಿಮಲ್ಲಪ್ಪನಾಯಕನಿಗೆ ನೆರವು ನೀಡಿ, ಗ್ರಂಥ ರಚನೆ ಮಾಡಿದದು, ಶ್ಲಾಘನೀಯ. ಕೆರೆಗಳ ನಿರ್ಮಾಣದಲ್ಲಿ ಅಪಾರ ಆಸಕ್ತಿಹೊಂದಿದ್ದ ತಿಪ್ಪಯ್ಯ, ಮರಳುಕುಪ್ಪೆಗಳಲ್ಲಿ ಕೂಲಿಯವರಿಗೆ ಕೂಲಿಯನ್ನು ಕೊಟ್ಟಿದ್ದು, ‘ಮಾಡಿದವರಿಗೆ ನೀಡು ಭಿಕ್ಷೆ’ ಎನ್ನುವ ಸೂತ್ರದಿಂದ ಎಲ್ಲರನ್ನು ಅಳೆದು ನೋಡುತ್ತಿದ್ದರು. ಅಲ್ಲದೆ, ಹನ ಮತ್ತು ಮಳಲಿನ ಬೆಲೆ ಮೈಗಳ್ಳತನಕ್ಕೆ ಪಾಠ ಕಲಿಸಿತು. ಈತ ನಿಜವಾದ ಗ್ರಾಮೋದ್ಧಾರಕನೆಂಬುದಕ್ಕೆ ಸಾಕ್ಷಿಃ ಗೌರಿಪುರ, ಮಹಾದೇವಪುರ, ಕಾಶೀಪುರ, ಖುದಾಪುರ; ಗಿಡ್ಡಾಪುರ, ಗಂಗ್ಲಾಪುರ, ಬಸಾಪುರಗಳನ್ನು ಸ್ಥಾಪಿಸಿದ್ದು, ಅನೇಕ ಕೆರೆ, ಕಟ್ಟೆ, ಬಾವಿಗಳನ್ನು ತೋಡಿಸಿದ್ದು ಕೃಷಿಕರಿಗೆ, ದೀನದಲಿತರಿಗೆ ಸೋಪಾನವಾಯಿತು.

ತತ್ವಜ್ಞಾನಿ, ಸಮಾಜಸುಧಾರಕ ತಿಪ್ಪಯ್ಯ

ಸಮಕಾಲೀನ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವಲ್ಲಿ ತಿಪ್ಪೇಸ್ವಾಮಿ ನಿಪುಣನಾಗಿದ್ದನು. ನಿಡಗಲ್ಲು ಸಂಸ್ಥಾನದ ದಳವಾಯಿಗಳು ಕೆರೆ – ಕಾಲುವೆ ನಿರ್ಮಾಣದಲ್ಲಿ ಕೂಲಿ ಆಳುಗಳೊಂದಿಗಿರುವಾಗ ತಿಪ್ಪೇಸ್ವಾಮಿ ರಂಗಸಮುದ್ರದಲ್ಲಿ ತನ್ನ ಪವಾಡವನ್ನು ಮೆರಿಸಿ ಅರಸನಿಗೆ ಉದಾತ್ತ ಗುಣಗಳನ್ನು ಬೆಳೆಸಿಕೊಳ್ಳಲು, ಆದರ್ಶವಾಗಿ ಬಾಳಲು ತಿಳಿಸಿದರು. ಪ್ರಾಣಿ ಹಿಂಸೆಯನ್ನು ವಿರೋಧಿಸುತ್ತಿದ್ದ ತಿಪ್ಪಯ್ಯ, ಮೂಢನಂಬಿಕೆ, ಕಂದಾಚಾರಗಳನ್ನು ಲೆಕ್ಕಿಸುತ್ತಿರಲಿಲ್ಲ. ನಿಡಗಲ್ಲು ರಾಜಧಾನಿಗೆ ಹೋಗಿ ಅಲ್ಲಿನ ಅರಸನ ಹೆಂಡತಿ ನಾಗತಿಗೆ ಸಂತಾನ ಭಾಗ್ಯವನ್ನು ದಯೆಪಾಲಿಸಿದ್ದು, ನಾಗತಿಯು ನಿಮ್ಮಿಂದ ಪಾವನಳಾದೆ ಎಂದು ಕಾಲಿಗೆ ಮುಗಿಯುವಳು. ಸ್ವಾಮಿಗಳು ೭ ಜನರಾಗುತ್ತಾರೆಂದು ಹೇಳಿದಂತೆ ನಾಗತಿಗೆ ಶ್ರೀಮಲ್ಲಿಕಾರ್ಜುನಸ್ವಾಮಿಯ ನಾಮಸಂಕೇತವಾಗಿ ಮಲ್ಲಪ್ಪನಾಯಕ, ಹೀಗೆ ಅಣ್ಣತಮ್ಮಂದಿರು ರತ್ನಗಿರಿ, ಭೂದಾಳು, ಚಂದ್ರಗಿರಿ, ಹೊಸಕೋಟೆ, ನಿಡಗಲ್ಲು, ಕುಂದುರ್ಪಿ, ನಾಯಕನಹಟ್ಟಿ ಸಂಸ್ಥಾನಗಳಲ್ಲಿ ರಾಜ್ಯಾಳ್ವಿಕೆ ಮಾಡುತ್ತಾರೆ.

ಹಟ್ಟಿಯ ಆಳ್ವಿಕೆಗೆ ಮಲ್ಲಪ್ಪನಾಯಕ ಅಣಿಯಾಗಲು ತಿಪ್ಪಯ್ಯನ ಪ್ರೋತ್ಸಾಹ ಮುಖ್ಯವೆನಿಸಿತ್ತು. ನಿಡಗಲ್ಲು ಸಂಸ್ಥಾನದಲ್ಲಿ ಬರಗಾಲ ಆವರಿಸಿದಾಗ ಜನರ ವಲಸೆ ಹೊರಟರು. ದೊರೆ – ಪರಿವಾರದವರು ಮನೆದೇವರಾದ ಶ್ರೀಶೈಲ ಮಲ್ಲಿಕಾರ್ಜುನನನ್ನು ಪೂಜಿಸಿದರು. ಶ್ರೀಗುಡ್ಡದ ಮಲ್ಲಯ್ಯನನ್ನು ಪೂಜಿಸಿದಾಗ ಸ್ವಪ್ನದಲ್ಲಿ ದೇವರು ಇಷ್ಟಸಿದ್ಧಿ ಪ್ರಾಪ್ತಿಸಿದ. ಇಂದಿಗೂ ಈ ಗುಹೇಶ್ವರಬೆಟ್ಟಕ್ಕೆ (ರಾಯದುರ್ಗ) ಹೋದರೆ ಒಳ್ಳೆಯದಾಗುತ್ತದೆಂಬ ನಂಬಿಕೆಯಿದೆ. ಮಲ್ಲಪ್ಪನಾಯಕ ವಿಜಯನಗರದವರೊಂದಿಗೆ ವ್ಯವಹರಿಸಲು ತಿಪ್ಪಯ್ಯನ ಪ್ರೋತ್ಸಾಹ, ಧೈರ್ಯ ಅವಿಸ್ಮರಣೀಯವೆನಿಸಿದೆ. ರಾಮಜಟ್ಟಿ – ಭೀಮಜಟ್ಟಿಗಳು ವಿಜಯನಗರದವರ ಮೆಚ್ಚಿಗೆಗೆ ಪಾತ್ರರಾಗಿದ್ದರಿಂದ, ಅವರು ಕೊಟ್ಟ ಬಹುಮಾನದಿಂದ ಭೀಮಸಾಗರ – ರಾಮಸಾಗರ ಕೆರೆಗಳನ್ನು ಕಟ್ಟಿಸಿದರು. ನಾಯಕನಹಟ್ಟಿಯನ್ನು ಸ್ಥಾಪಿಸಿದ ಮಲ್ಲಪ್ಪನಾಯಕ ಗೋನೂರು, ನ್ನನಿವಾಳದಂತೆ ಇದನ್ನು ಮ್ಯಾಸಬೇಡರ ಪ್ರಮುಖ ಕಟ್ಟೇಮನೆ ಮಾಡುತ್ತಾನೆ. ಈ ಸಂಸ್ಥಾನದಲ್ಲಿ ಕೂಲಿ, ಕಾರ್ಮಿಕರಿಗೆ ಬೆಲೆ ಕೊಡುತ್ತಿರಲಿಲ್ಲ. ತಿಪ್ಪೇಸ್ವಾಮಿ ‘ಸಮರಿಗೆ ಸಮಬಾಳು – ಸಮರಿಗೆ ಸಮಪಾಲು’ ನೀಡಿ ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದರು.

ಫಣಿಯಪ್ಪನಿಗೆ ನೀತಿ ಬೋಧಿಸಿದ್ದು ಮಹಾಪರಿವರ್ತನೆಗೆ ಸಂಕೇತವಾಯಿತು. ಪತಿ – ಪತ್ನಿ, ಮಕ್ಕಳ, ತಂದೆತಾಯಿಗಳ, ಅಣ್ಣ – ತಮ್ಮಂದಿರ ಬಾಂಧವ್ಯದ ಬಗ್ಗೆ ತಿಳಿಸಿದರು. ಪ್ರಾಣಿಗಳ ಹಿಂಸೆಯನ್ನು ತಡೆದು ಪ್ರಾಣಿಗಳ ಬಗ್ಗೆ ದಯೆ ಇಡಬೇಕೆಂದು ಸತ್ತೆಮ್ಮೆ ಹಾಲು ಕರೆಯುತ್ತಾರೆ. ಈ ಭಾಗದಲ್ಲಿ ಬೇಡರು ಬೇಟೆಯಿಂದ ಸಹಸ್ರಾರು ಪ್ರಾಣಿಗಳನ್ನು ಕೊಲ್ಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಈ ಕಾರ್ಯ ಅರ್ಥಪೂರ್ಣವಾದುದು. ಸರ್ವರೂ ಸಮಾನರು ಜಾತಿಭೇದವಿಲ್ಲವೆಂದು ಹರಿಜರ ಮನೆಯಲ್ಲಿ ಊಟ ಮಾಡುವುದು ಇತರರನ್ನು ನಿಬ್ಬೆರಗಾಗುವಂತೆ ಮಾಡಿತು.

ತಮ್ಮ ಸಾಮಾಜಿಕ ಕಳಕಳಿಯ ವ್ಯಕ್ತಿತ್ವದಿಂದ ತಿಪ್ಪಯ್ಯ ಜನಮನಗಳನ್ನು ಗೆದ್ದಿದ್ದಾರೆ. ರೈತರು, ಕಾರ್ಮಿಕರು, ವ್ಯಾಪಾರಿಗಳು, ದೀನ – ದಲಿತರು, ಅಧಿಕಾರಿಗಳು ಮತ್ತು ದೊರೆಗಳನ್ನು ಹೆಸರಿಸಬಹುದು. ತಪ್ಪು ಮಾಡುವವರಿಗೆ ಶಿಕ್ಷೆ ಕೊಡುವ ಪೂರ್ವದಲ್ಲಿ ಶಿಕ್ಷಣ ಕೊಡುವ ಹಂಬಲ ತಿಪ್ಪೇಸ್ವಾಮಿಯದು. ಇದಕ್ಕೆ ಪರ್ಯಾಯವಾಗಿ ಕಾಶಿರಾಮೇಶ್ವರಗಳಿಗೆ ಯಾತ್ರೆ ಹೋಗಲು ದೊರೆಗಳಿಗೆ ಆದೇಶಿಸುತ್ತಿದ್ದುದು ಈ ಹಿನ್ನೆಲೆಯಲ್ಲಿ. ಮೊಘಲರ ಮತ್ತು ಸ್ಥಳೀಯ ಅಕ್ಕಪಕ್ಕದ ಅರಸರು ನಾಯಕನಹಟ್ಟಿಯನ್ನು ಕಬಳಿಸಲು ಹುನ್ನಾರ ಮಾಡಿ ಯಶಸ್ವಿಯಾಗುವ ಹಂತದಲ್ಲಿ ಹಟ್ಟಿಮಲ್ಲಪ್ಪನಾಯಕನಿಗೆ ಅವರ ವಿರುದ್ಧ ಜಯಶಾಲಿಯಾಗುವ ದೀಕ್ಷೆ ನೀಡಿದರು.

ಹೀಗೆ ತನ್ನ ಸಹಸ್ರಾರು ಕನಸುಗಳ ಗೂಡಿನಲ್ಲಿ ಬೆಂದ ತಿಪ್ಪಯ್ಯ ಜನಕಲ್ಯಾಣಕ್ಕಾಗಿ ಅಪಾರ ಶ್ರಮಿಸಿ, ವಿಶ್ರಮಿಸಿಕೊಳ್ಳಲು ಏಕಾಂತಕ್ಕಾಗಿ ಚಡಪಡಿಸಿದರು. ಮುಕ್ತಿಯನ್ನು ಕಾಣಲು (ತಪಸ್ಸು ಮಾಡುವ) ಶಿವಧ್ಯಾನ ಮಗ್ನರಾಗಿ ಮನಮೈಯ್ಯನಹಟ್ಟಿ ಹತ್ತಿರ ಗವಿಯಲ್ಲಿ (ನೆಲಮಾಳಿಗೆ) ಕುಳಿತರು. ಇಂದು ಆ ಸ್ಥಳಕ್ಕೆ ಏಕಾಂತೇಶ್ವರ ಮಠವೆಂದು ಕರೆಯುತ್ತಾರೆ. ಧ್ಯಾನದಲ್ಲಿ ತೊಡಗಿದ ತಿಪ್ಪಯ್ಯನಿಗೆ ಸದಾ ತನ್ನ ಜನಸಾಮಾನ್ಯರ ಚಿಂತೆ ಮನಸ್ಸಿಂದ ಅಳೆಯಲಿಲ್ಲ. ಅನೇಕ ಬಗೆಯಲ್ಲಿ ಜನರಿಗೆ ಸ್ಪಂಧಿಸಿದರು. ತಾನು ಸಂತನಾಗುವ ಮೊದಲು ಸಮಾಜಕ್ಕೆ ಇಟ್ಟುಕೊಂಡಿದ್ದ ನಂಬಿಕೆಗಳೇ ಬೇರೆ ಮತ್ತು ಸಮಾಜ ಸುಧಾರಣೆಯಲ್ಲಿ, ತತ್ವಜ್ಞಾನವನ್ನು ಬೋಧಿಸಿದ್ದಲ್ಲಿ ಪರಿವರ್ತನೆಕಾಣದೆ ಕೊನೆಯಲ್ಲಿ, ತಪಸ್ಸು ಮಾಡುವುದು ಮಾಗಿದ ಜೀವನಕ್ಕೆ ಮರುಕಹೋಗಲಿಲ್ಲ ಎಂದು ಊಹಿಸಬಹುದು. ಒಟ್ಟಾರೆ ಜನಪ್ರತಿನಿಧಿಯಂತೆ ತಿಪ್ಪೇಸ್ವಾಮಿ ದಲಿತೋದ್ಧಾರಕ್ಕೆ ಶ್ರಮಿಸಿದ ಮಹಾನಾಯಕನೆಂದರೆ ಅತಿಶಯೋಕ್ತಿಯಲ್ಲ.

ರೂಪವಿರೂಪ, ಉಡುಗೆತೊಡುಗೆ ಇತ್ಯಾದಿ

ಶಾರೀರಿಕವಾಗಿ ತಿಪ್ಪಯ್ಯ ಅಷ್ಟೇನು ಎತ್ತರವಿದ್ದಂತಿಲ್ಲ. ಸುಂದರವಾದ ಮೈಕಟ್ಟು ದಷ್ಟಪುಷ್ಟವಾಗಿದ್ದಿತು. ಸೊಂಟದವರೆಗೆ ಪಂಚೆ (ಕಚ್ಚೆ) ಯನ್ನು, ಬರಿಮೈ ಮೇಲೊಂದ ವಸ್ತ್ರಕೊರಳಲ್ಲಿ ರುದ್ರಾಕ್ಷಿಮಾಲೆ, ಕಾಲಲ್ಲಿ ಕಟ್ಟಿಗೆ ಪಾದರಕ್ಷೆಗಳು, ತಪೋನಿರತನಂತೆ ಹಣೆಯಲ್ಲಿ ೩ ಗೆರೆ ವಿಭೂತಿ ಧ್ಯಾನಸ್ಥ ಮನಸ್ಸನ್ನು ಸಂಕೇತಿಸುತ್ತದೆ. ತಲೆಗೂದನ್ನು ಮುಡಿಕಟ್ಟಿಕೊಂಡು, ಗಡ್ಡವನ್ನು ಬಿಡಿಸಿರುತ್ತಾನೆ. ನೋಡುಗರಿಗೆ ಈತ ಸಂತ, ಪವಾಡಪುರುಷ, ತ್ಯಾಗಿಯಾಗಿ ಕಂಡುಬರುತ್ತಾನೆ.[3]

ಆರಂಭದ ಉಡುಗೆತೊಡಿಗೆಗೂ ಆನಂತರದ್ದಕ್ಕೂ ಸುಧಾರಣೆಯಿತ್ತು. ಶ್ರೇಷ್ಠಮಟ್ಟದ ಉಡುಪು ಈತನಿಗೆ ಇರಲಿಲ್ಲ – ಉಡಲಿಲ್ಲ. ಸಾಮಾನ್ಯ ಮ್ಯಾಸಬೇಡನಂತೆ ಬಾಗಿದಕೋಲು, ಹೆಗಲಲ್ಲಿ ತೆಂಗಿನ ಪರಟೆಗಳು, ಹರಕುಕಂಬಳಿ, ಸೊಂಟದಿಂದ ಮೊಳಕಾಲಿನವರೆಗೆ ದೋತಿ ಧರಿಸುತ್ತಿದ್ದ. ಪಶುಪಾಲಕರೊಂದಿಗೆ, ಬಾಲಕರೊಂದಿಗೆ ಇದ್ದು ಹುಚ್ಚನಂತೆ ಆರಂಭದಲ್ಲಿ ವರ್ತಿಸುತ್ತಿದ್ದನಂತೆ. ದಲಿತರೊಂದಿಗೆ ಬೆರೆತು ಅವರ ಉದ್ಧಾರಕ್ಕೆ ಶ್ರಮಿಸಿ ಅವರಂತೆ ಅನೇಕ ಕಷ್ಟನಷ್ಟಗಳಿಗೆ ಪಳಗಿದ ಸಂಗತಿಗಳು ಕಂಡುಬರುತ್ತವೆ.

ಜೀವೈಕ್ಯ ಸಮಾಧಿ

ತಿಪ್ಪೇರುದ್ರಪ್ಪಸ್ವಾಮಿ ಹಿರೇಕೆರೆ ಕಟ್ಟಿಸಿದ ತರುವಾಯ ಮಲ್ಲಪ್ಪನಾಯಕನು ಈತನಿಗೆ ೭೭ ಬಿರುದುಗಳನ್ನು ಅರ್ಪಿಸಿ ತೀರಿಕೊಂಡನು. ಫಣಿಯಪ್ಪನಿಗೆ ತಿಪ್ಪಯ್ಯ ಶಿವಲಿಂಗ ಪೂಜಿಸಲು ಹೇಳಿ ಅದಕ್ಕೆ ಮಹಾಂತೇಶ್ವರನೆಂದು ಹೆಸರಿಡುತ್ತಾನೆ. ಮೊದಲಿಗೆ ನಾಯಕನ ಹಟ್ಟಿಯಲ್ಲಿ ನೆಲೆಯೂರಲು ಬಂದ ತಿಪ್ಪಯ್ಯನಿಗೆ ವಾಸಸ್ಥಾನ ಎಲ್ಲೂ ಸಿಕ್ಕಿರಲಿಲ್ಲ. ಕೊನೆಗೆ ಮಾರಿಗುಡಿಯಲ್ಲಿ ಬಂದು ತನ್ನ ಬೆತ್ತ – ಜೋಳಿಗೆ ಇಡಲು ಕೇಳಿ ಸ್ವಲ್ಪ ಜಾಗ ಕೊಟ್ಟರೆ ಇಡೀ ಗುಡಿಯನ್ನು ಆಕ್ರಮಿಸಿಕೊಳ್ಳುತ್ತಾನೆ. ತನ್ನ ಪವಾಡದಿಂದ, ಅದನ್ನು ಕೊಟ್ಟ ಪ್ರತೀಕವಾಗಿ ‘ಸಿಡಿ’ ಆಡಬೇಕೆಂದು ಒಡ್ನಳ್ಳಿ ಮಾರಮ್ಮ ಎಂಬ ದೇವತೆ ತಿಳಿಸುವಳು. ಅಂದಿನಿಂದ ಅದು ಅವನ ನೆಲೆಯಾಯಿತು. ಆ ದೇವತೆಯನ್ನು ಒಡ್ನಳ್ಳಿಮಾರಮ್ಮನೆಂದು ಕರೆದು ಸು.೧೫ ವರ್ಷಕ್ಕೊಮ್ಮೆ, ೫೦ ವರ್ಷಕ್ಕೊಮ್ಮೆ ಜಾತ್ರೆ ಮಾಡುತ್ತಾರೆ. ಹೀಗೆ ಮಾಡುವಾಗ ಈ ದೇವತೆಯನ್ನು ತಿಪ್ಪೇಸ್ವಾಮಿ ಒಳಮಠದ ಮುಂದೆ ಪ್ರತ್ಯೇಕ ಕಟ್ಟೆಯನ್ನು ನಿರ್ಮಿಸಿ ಅದರ ಮೇಲಿಟ್ಟು ದೊಡ್ಡ ಪ್ರಮಾಣದ ಜಾತ್ರೆ ಮಾಡುತ್ತಾರೆ. ಬಹುಶಃ ಇವಳು ಹೀನಕುಲದ ದಲಿತರ ದೇವತೆಯಾಗಿರಬೇಕು. ಇಲ್ಲವೆ ಇವರಿಬ್ಬರೂ ಒಂದೇ ಕೋಮಿಗೆ ಸೇರಿದವರೂ ಇರಬೇಕು. ಸಂಬಂಧಿಸಿದ ಆಚರಣೆ – ಸಂಪ್ರದಾಯಗಳನ್ನು ಮಾಡಿಕೊಂಡು ಬಂದಿದ್ದಾರೆ. ಇಹಲೋಕದ ಯಾತ್ರೆ ಸಮೀಪಿಸಿದಂತೆ ಭಕ್ತರೊಂದಿಗೆ ತನ್ನೆಲ್ಲ ಭಾವನೆಗಳನ್ನು ಹಂಚಿಕೊಳ್ಳುತ್ತಾನೆ ತಿಪ್ಪಯ್ಯ. ನಾನು ಜೀವೈಕ್ಯ ಸಮಾಧಿಯಾಗುವುದು ಚಿಕ್ಕಕೆರೆ ಹಿಂದಿರುವ ಸುಂದರವಾದ ಸ್ಥಳದಲ್ಲಿ ಎಂದು ನೆಲಮಾಳಿಗೆ ನಿರ್ಮಿಸಲು ಸೂಚಿಸುತ್ತಾರೆ. ಅದರಂತೆ ಭಕ್ತರು ನಿರ್ಮಿಸಿದರು. ದೊರೆ ಈ ಸಂಗತಿ ತಿಳಿದು ಅತೀವ ದುಃಖಿತನಾದನು. ಫಣಿಯಪ್ಪನ ದೈನಂದಿನ ಪೂಜೆಯಲ್ಲಿ ಏರುಪೇರು ಮಾಡಿದ್ದಕ್ಕಾಗಿ ಸ್ವಾಮಿಯಿಂದ ಶಾಪಕ್ಕೆ ಗುರಿಯಾಗುತ್ತಾನೆ.

ಸದ್ಭಕ್ತನಿಗೆ ಸಮಾಧಿ ವಾರಸುದಾರಿಕೆ

ಫಣಿಯಪ್ಪನು ತಿಪ್ಪಯ್ಯನ ನಿರೀಕ್ಷೆಗೆ ಸ್ಪಂದಿಸಲಿಲ್ಲವಾದ್ದರಿಂದ ಅವನ ಮನೆಯಲ್ಲೆ ಕೂಲಿ ಆಳಾಗಿದ್ದ ನಾಯಕರ ಲಿಂಗಣ್ಣ ಎಂಬುವನ ಶ್ರದ್ಧೆ, ಭಕ್ತಿಗೆ ಮೆಚ್ಚಿದ ತಿಪ್ಪಯ್ಯ ಸಮಾಧಿ ಪೂಜೆ ಮಾಡಲು ಹೇಳುತ್ತಾನೆ. ಅದನ್ನು ಕೇಳಿದ ಬಾಲಕ ಪುಳಿಕಿತಗೊಂಡ ಎಲ್ಲರಿಗೂ ವಿಷಯ ತಿಳಿಸುವನು. ಧಣಿಯ ಕಿವಿಗೂ ಈ ವಿಷಯ ಬೀಳುತ್ತದೆ. ಅಂದಿನಿಂದ ಇಂದಿನವರೆಗೂ ಪೂಜೆ ಹಕ್ಕನ್ನು ಮ್ಯಾಸಬೇಡರ ವಂಶಸ್ಥರು ಹೊರಮಠದಲ್ಲಿ ಮುಂದುವರೆಸಿಕೊಂಡು ಬಂದಿದ್ದಾರೆ. ಫಣಿಯಪ್ಪನ ವಂಶಸ್ಥರು ಒಳಮಠದ ಗದ್ದುಗೆಗೆ ಪೂಜಾರಿಗಳಾಗಿರುತ್ತಾರೆ. ಮಹಾಂತೇಶ ಮತ್ತು ಅಣ್ಣತಮ್ಮಂದಿರು ಇಂದು ಪೂಜಾಕಾರ್ಯಗಳನ್ನು ಮಾಡುತ್ತಿದ್ದಾರೆ. 

ತಿಪ್ಪೇಸ್ವಾಮಿ ಹೊರಮಠ, ನಾಯಕನಹಟ್ಟಿ

 ತಿಪ್ಪೇಸ್ವಾಮಿ ದೇವಾಲಯ (ಒಳಮಠ)

ನಾಯಕನಹಟ್ಟಿಯಲ್ಲಿ ತಿಪ್ಪೇಸ್ವಾಮಿಗೆ ಸಂಬಂಧಿಸಿದಂತೆ ಪ್ರಧಾನವಾಗಿ ಎರಡು ದೇವಾಲಯಗಳಿವೆ. ಒಂದು ಹೊರಮಠ, ಮತ್ತೊಂದು ಒಳಮಠ. ಇವುಗಳ ನಡುವಿನ ಅಂತರ ಸುಮಾರು ಒಂದು ಮೈಲು. ನಾಯಕನಹಟ್ಟಿಯ ದಕ್ಷಿಣ ತುದಿಗೆ ಒಳಮಠವಿದ್ದರೆ, ಉತ್ತರ ತುದಿಗೆ ಹೊರಮಠವಿದೆ.

ಈ ಒಳಮಠವಿರುವಲ್ಲಿ ಹಿಂದೆ ಒಡ್ನಳ್ಳಿಮಾರಮ್ಮ ಎಂಬ ದೇವತೆಯಿದ್ದಳು. ತಿಪ್ಪೇಸ್ವಾಮಿ ಮೊದಲು ಬಂದಾಗ ತಂಗಿದ್ದು ಇಲ್ಲಿಯೆ. ಬೆತ್ತ – ಜೋಳಿಗೆ ಮೂಲಕ ಸ್ಥಳವನ್ನು ಆಕ್ರಮಿಸಿಕೊಂಡವನು ಕದಲಲಿಲ್ಲ. ಹಾಗಾಗಿ ದೇವತೆ ಪಲಾಯನಗೈದಳು. ಈ ದೇವಾಲಯಕ್ಕೆ ಬಸೆಟ್ಟಪ್ಪನೆಂಬ ಭಕ್ತ ಜೀರ್ಣೋದ್ಧಾರ ಮಾಡಿಸಿದ್ದಾನೆ. ಗೋಪುರ ಸುಮಾರು ೮೦ ಅಡಿ ಎತ್ತರ, ಪ್ರಕಾರದ ಗೋಡೆ ೭೦ ಅಡಿ ಎತ್ತರವಿದೆ. ಇವುಗಳ ಮೇಲೆ ರಮಾಯಣ, ಮಹಾಭಾರತ ಕಥೆಗಳ ಶಿಲ್ಪ ಚಿತ್ರಕಲೆಯನ್ನು ಕೆತ್ತಲಾಗಿದೆ. ಕಿರತಾರ್ಜುನೀಯ, ಸೀತಾಪಹರಣ, ಪೌರಾಣಿಕ ನಾಟಕ ಕಥೆಗಳ ದೃಶ್ಯಾವಳಿಯನ್ನು ಕೆತ್ತಿರುವುದು ಮನಮಿಡಿಯುತ್ತದೆ. ಶಿವಲಿಂಗದ ಜೊತೆಗೆ ಪಂಚಲೋಹದಿಂದ ಮಾಡಿದ ತಿಪ್ಪೇಸ್ವಾಮಿ ವಿಗ್ರಹ ಅದ್ಭುತವಾದುದು. ಜನಕಲ್ಯಾಣದ ಸೇವಕನಾದ ತಿಪ್ಪಯ್ಯನ ವಿವಿಧ ಸೇವಾಕಾರ್ಯಗಳನ್ನು ಬಿಂಬಿಸುವ ಚಿತ್ರಗಳನ್ನು ಇತ್ತೀಚಿಗೆ ಬಿಡಿಸಿಹಾಕಿದ್ದಾರೆ. ಇಲ್ಲಿರುವ ತೇರು ಬಹುದೊಡ್ಡ ಗಾತ್ರದ್ದು. ಮೂಡಲಪಾಯ ಯಕ್ಷಗಾನದ ಸೊಗಡನ್ನು ತೇರಿನಲ್ಲಿ ಸರಳವಾಗಿ ಕೆತ್ತಿರುವುದು ಸ್ಪಷ್ಟ. ಕಾಲಾಂತರದಲ್ಲಿ ಭಕ್ತರು ಸಣ್ಣ – ಪುಟ್ಟ ಮಂಟಪಗಳನ್ನು, ದೇವಾಲಯದ ಬಿಡಿ ಭಾಗಗಳನ್ನು ಭಕ್ತಿಯಿಂದ ನಿರ್ಮಿಸಿವರು. ಗರ್ಭಗುಡಿಯಲ್ಲಿ ಶಿವಲಿಂಗವಿದ್ದು, ತಿಪ್ಪೇಸ್ವಾಮಿಯ ಭಾವಚಿತ್ರವನ್ನು ಇತ್ತೀಚಿಗೆ ಇಟ್ಟಿರುವರು. ಗಾರೆಯಿಂದ ಶಿಲ್ಪಗಳನ್ನು ನಿರ್ಮಿಸಿದ್ದು, ಪುರಾಣದ ದೃಶ್ಯಗಳ ಮನಮೋಹಕವಾಗಿ ಕಂಡುಬರುತ್ತವೆ. ಇಲ್ಲಿ ಸಸ್ಯಹಾರಿಯನ್ನು ನೈವೇದ್ಯ ಮಾಡುವರು. ವಿಶಾಲವಾದ ಬಯಲು ದೇವಾಲಯದ ಮುಂದೆ ಇದ್ದು, ಸಹಸ್ರಾರು ಭಕ್ತರು ಸೇರಲು ಅನುಕೂಲವಾಗಿದೆ. ಎಲ್ಲಾ ಜಾತಿ – ಧರ್ಮದವರೆಗೂ ಮುಕ್ತ ಪ್ರವೇಶ ಇಲ್ಲಿದೆ.

ಹೊರಮಠ

ರಕ್ತಾಕ್ಷಿನಾಮ ಸಂವತ್ಸವರದ ಫಾಲ್ಗುಣ ಬಹುಳ ತದಿಗೆ ಚಿತ್ತಾನಕ್ಷತ್ರದ ಶುಭಯೋಗದಲ್ಲಿ ಆಯಸ್ಸಿನ ಮುಪ್ಪು ಕವಿದಾಗ ಭಕ್ತರೊಂದಿಗೆ ಸಮಾಧಿಗೆ ಬಂದು ಜೀವೈಕ್ಯನಾದ ತಿಪ್ಪಯ್ಯನ ಸಮಾಧಿ ಸ್ಥಳವೇ ಹೊರಮಠ. ಈ ಶುಭ ದಿನದಂದು ಜಾತ್ರೆ ನಡೆದು, ರಥ ಎಳೆಯುವ, ಪರೀಷೆ ಮರಿಪರೀಷೆ ಮಾಡುವ ಕಾರ್ಯಗಳು ಹಲವು.

ಈ ದೇವಾಲಯವು ಹಿಂದೂಮುಸ್ಲಿಂ ಶೈಲಿಯನ್ನು ಹೊಂದಿದೆ. ಲಿಂಗಪ್ಪ ಎಂಬ ಹೈದರಾಲಿಯ ನಿಯೋಜಿತ ಅಧಿಕಾರಿ ಇಲ್ಲಿನ ಉಸ್ತುವಾರಿ ನೋಡಿಕೊಳ್ಳುವಾಗ ತನಗೆ ಪುತ್ರಸಂತಾನ ಪ್ರಾಪ್ತಿಸಿದ್ಧಕ್ಕಾಗಿ ಹೈದರನ ಆದೇಶದಂತೆ ಗುಮ್ಮಟ, ಕಮನಾಕಾರದ ಲಕ್ಷಣಗಳಿರುವ ದೇವಾಲಯವನ್ನು ನಿರ್ಮಿಸಿದರು. ಹೈದರಾಲಿ ಈ ನೆನಪಿಗಾಗಿ ತನ್ನ ಮಗನಿಗೆ ಟಿಪ್ಪುಸುಲ್ತಾನ್ ಎಂದು ಕರೆದನಂತೆ. ಇಲ್ಲಿ ಪ್ರತಿ ಸೋಮವಾರ ವಿಶೇಷ ಪೂಜೆ ನಡೆಯುತ್ತದೆ. ಪ್ರತಿವರ್ಷ ಚಿತ್ತಾ ನಕ್ಷತ್ರದಲ್ಲಿ ರಥೋತ್ಸವ ಜರುಗಿದಾಗ ಇಲ್ಲಿನ ಸಂಭ್ರಮ, ಭಕ್ತರ ಅಡಿಗೆ, ಹರಿಕೆಗಳನ್ನು ತೀರಿಸುವ ಕ್ರಮ ವೈಭವಯುತವಾದುದು. ಮ್ಯಾಸನಾಯಕರು ಹೊರಮಠದ ಪೂಜಾರಿಗಳು. ಎಲ್ಲಾ ಜಾತಿ – ಧರ್ಮೀಯರು ಮುಕ್ತವಾಗಿ ಪ್ರವೇಶಿಸುತ್ತಿದ್ದು, ಮಾಂಸಹಾರವನ್ನು ಈ ದೇವಾಲಯದ ಹೊರಗೆ ಮಾಡುತ್ತಾರೆ. ಸಣ್ಣ – ಪುಟ್ಟ ಕೊಠಡಿ, ದಾಸೋಹದ ಮನೆ, ಕಲ್ಯಾಣಮಂಟಪ, ಹೊಂಡ ಮೊದಲಾದವು ಇಲ್ಲಿ ಕಂಡುಬರುತ್ತವೆ.

ತೆಪ್ಪೋತ್ಸವ

ಹಿರೇಕೆರೆಯಲ್ಲಿ ಈ ಒಂದು ಆಚರಣೆಯನ್ನು ಇಂದಿನವರೆಗೂ ಮಾಡಿಕೊಂಡು ಬಂದಿದ್ದಾರೆ. ಮಳೆ ಬರಲಿಲ್ಲವೆಂದಾಗ ಶ್ರಾವಣಮಾಸದಲ್ಲಿ ತೆಪ್ಪೋತ್ಸವ ಆಚರಿಸಲು ನಿರ್ಧರಿಸುವರು. ಕೋರಿಕೆಯಂತೆ ಮಳೆಯಾದ ಕೆಲಕಾಲದಲ್ಲಿ (ಸಮೃದ್ಧ ಮಳೆ ಬಂದು) ಕೆರೆ ಕೋಡಿ ಬಿದ್ದರೆ ತೆಪ್ಪೋತ್ಸವ ಮಾಡುವರು. ಬಹುತೇಕ ಕಾರ್ತಿಕಮಾಸದಲ್ಲಿ ಈ ಕಾರ್ಯವನ್ನು ಕೈಗೊಳ್ಳುವರು. ೩೩ ಹಳ್ಳಿಯವರು ಸೇರಿ ಇತರ ಲಕ್ಷಾಂತರ ಭಕ್ತಾಧಿಗಳ ಮಧ್ಯೆ ಈ ತೆಪ್ಪವನ್ನು ನೋಡುವುದೇ ಒಂದು ವಿಶೇಷ ಅನುಭವ.

ಜಾತ್ರೆ ಮತ್ತು ರಥೋತ್ಸವ

ಪ್ರತಿವರ್ಷ ಚಿತ್ತಾನಕ್ಷತ್ರದಲ್ಲಿ ರಥ ಎಳೆಯುತ್ತಾರೆ. ಹಿಂದೊಮ್ಮೆ ೧೯೭೮ರಲ್ಲಿ ರಥ ಮುರಿದು ಹೋಗಿತ್ತು. ನಂತರ ಹೊಸತೇರನ್ನು ನಿರ್ಮಿಸಿದ್ದು ಸುಗಮವಾಗಿ ಕೆಲಸಕಾರ್ಯಗಳು ನಡೆಯುತ್ತವೆ. ತೇರನ್ನು ಎಳೆಯುವ ಮುನ್ನ ಅಂಜನೇಯನ ಪೂಜೆ ಮಾಡುವರು. ಪರುಷೆ ಸುಮಾರು ೭ ದಿನ ನಡೆದು, ಮರುಪರಿಷೆಯಲ್ಲಿ ಕೊನೆಗೊಳ್ಳುತ್ತದೆ. ಗೋನೂರಿನ ತಿಪ್ಪೇಸ್ವಾಮಿ ಜಾತ್ರೆಯು ಇದೇ ದಿನ ನಡೆಯುವುದು.

ರಾಷ್ಟ್ರೀಯ ಭಾವೈಕ್ಯತೆಯ ಸಂಕೇತವಾಗಿ ಎಲ್ಲಾ ಸಮುದಾಯದವರು ತಮ್ಮ ತಮ್ಮ ಪಾಲಿನ ಕೆಲಸಕಾರ್ಯಗಳನ್ನು ಮಾಡುವುದು ಇಲ್ಲಿನ ವಿಶೇಷ. ಫಾಲ್ಗುಣಮಾಸ ಚಿತ್ತಾ ನಕ್ಷತ್ರದಲ್ಲಿ ರಥೋತ್ಸವ ಜರುಗುವ ೫ ದಿನ ಮೊದಲು ರಥಕ್ಕೆ ಕಳಸವಿಡುತ್ತಾರೆ. ಪಲ್ಲಕ್ಕಿಯಲ್ಲಿ ಉತ್ಸವಮೂರ್ತಿಯನ್ನು ಇಟ್ಟು ಡೊಳ್ಳು, ನಗಾರಿ, ಕರಡಿವಾದ್ಯ, ಓಲಗ ಮುಂತಾದ ವಾದ್ಯಗಳ ಹಾಗೂ ಛತ್ರಿಚಾಮರ ಸಮೇತ ಹಾಜರಿರುವರು. ಇದಕ್ಕೆ ನಾಯಕನಹಟ್ಟಿಯ ಗೊಂಚಗೇರರ ಮನೆಯ ಅನ್ನ, ಜೋಗೇರಹಟ್ಟಿ ಗೊಲ್ಲರ ಮನೆಯ ಮೊಸರು ತಂದಾಗ ರಥದ ಗಾಲಿಗೆ ಎಡೆಹಾಕಿ ಎಳೆಯುತ್ತಾರೆ. ಪೂಜೆಯ ನಂತರ ಬೇಡರು, ತಳವಾರರು, ಹರಿಜನರು, ಮಡಿವಾಳರು, ಬಡಿಗೇರರು ಎಡೆಯ ಅನ್ನವನ್ನು, ತೇರಿಗೆ ಎಸೆಯುವ ಹಣ್ಣುಹಂಪಲುಗಳನ್ನು ತೆಗೆದುಕೊಳ್ಳುವರು. ರಥದ ಮುಂದೆ ಕುಪ್ಪಿನಕೆರೆ ಆಂಜನೇಯರನಿಗೆ ಎಡೆಹಾಕುವುದುಂಟು. ಸುಮಾರು ೬೦ ಅಡಿ ಎತ್ತರದ ತೇರು, ಒಂಬತ್ತು ಅಂತಸ್ತುಗಳನ್ನು ಹೊಂದಿದೆ. ತುದಿಯಲ್ಲಿ ಕಳಸವು ಶಿಖರಪ್ರಾಯವಾಗಿದೆ. ತೇರಿಗೆ ಸಾಮಾನ್ಯವಾಗಿ ೪ ಚಕ್ರಗಳಿದ್ದರೆ, ಇದಕ್ಕೆ ೫ ಗಾಲಿಗಳಿರುವುದು ವಿಶೇಷ. ತೇರು ಎಳೆಯುವ ಸಂದರ್ಭದಲ್ಲಿ ದೊಡ್ಡದಾದ ಪಂಜನ್ನು ಬಳಸುತ್ತಾರೆ. ಎಲ್ಲ ವಿಧವಾದ ವಾದ್ಯಗಳು ಪ್ರದರ್ಶನಗಳು, ಮನೋರಂಜನ ತಂಡಗಳು ಭಾಗವಹಿಸುತ್ತವೆ. ರಥದ ಮರುದಿನದ ಸಂಜೆ ಓಕುಳಿ ಆಡುತ್ತಾರೆ. ಅದೇ ರಾತ್ರಿ ೯ – ೧೦ ಗಂಟೆ ಸುಮಾರಿಗೆ ಒಣಕೊಬ್ಬರಿಯನ್ನು ಸುಡುವರು. ಬೇಡರು ಕುರಿ, ಟಗರು, ಮೇಕೆ, ಹೋತು (ಕೋಳಿ?) ಇತರ ಪ್ರಾಣಿಗಳನ್ನು ಕಡಿದು ಮಾಂಸಹಾರಿ ಅಡುಗೆ ಮಾಡುತ್ತಾರೆ. ದೇವರಿಗೆ ಹೊರಗಡೆ ಎಡೆಹಾಕುವ ಪದ್ಧತಿಯಿದೆ.

ಜಾತ್ರೆಯ ನಂತರದ ಸೋಮವಾರದಂದು ’ಮರುಪರಿಸೆ’ (ಮರಪರಿಷೆ) ಆಗುತ್ತದೆ. ದೊಡ್ಡ ಪರಿಸೆಗೆ ಬಾರದಿರುವವರು ಆಕಸ್ಮಿಕವಾಗಿ ತಪ್ಪಿಸಿಕೊಂಡವರು ಇದಕ್ಕೆ ತಪ್ಪದೆ ಬರುತ್ತಾರೆ. ಪ್ರತಿ ಸೋಮವಾರ ಎರಡು ದೇವಾಲಯಗಳಲ್ಲಿ ಪೂಜೆ ನಡೆಯುವುದಕ್ಕೆ ವಾರೋತ್ಸವ ಎನ್ನುವರು. ನವದಂಪತಿಗಳು ತೇರು ನೋಡಲು ಬಂದರೆ, ರೈತರು ತೇರಿನ ದಿನ ಕೃಷಿಯನ್ನು ಪ್ರಾರಂಭಿಸಲು ಭೂಮಿ ಪೂಜೆ ಮಾಡುವುದು ಆ ಭಾಗದ ಬೇಡರ ಇತರ ಸಮುದಾಯಗಳಲ್ಲಿ ಪ್ರಚಲಿತದಲ್ಲಿದೆ. ಈ ನಡುಗಡ್ಡೆಯಲ್ಲಿ ತಿಪ್ಪೇಸ್ವಾಮಿ ಜಾತ್ರೆಯೆಂದರೆ ಸುಗ್ಗಿ ಶಿವರಾತ್ರಿ ಎನ್ನುವರು. ಹುಣ್ಣಿಮೆಯ ಬೆಳದಿಂಗಳಲ್ಲಿ ಎತ್ತಿನಗಾಡಿಗಳನ್ನು ಒಡೆದುಕೊಂಡು ಹೋದರೆ ಆ ಮೋಜಿನ ಪಯಣ ವರ್ಣಿಸಲು ಕಣ್‌ಮನ ಸೆಳೆಯುತ್ತದೆ. ಆ ಧೂಳಿನಲ್ಲಿ ನಾಮುಂದು, ತಾಮುಂದು ಎತ್ತಿನ ಗಾಡಿಗಳನ್ನು ಓಡಿಸುತ್ತಾರೆ. ಗಾಡಿಯಲ್ಲಿ ಬಂಧುಗಳನ್ನು ಹತ್ತಿಸಿಕೊಂಡು ಹೋಗುವಾಗ ವಿವಿಧ ಬಗೆಯ ಜನಪದ ಗೀತೆಗಳನ್ನು ಹಾಡುವರು. ಮೈಮರೆತು ಕೋಲಾಟ, ಭಜನೆ ಮೊದಲಾದ ಪದಗಳಲ್ಲಿ ಭಾವಪರಶವರಾಗುವರು. ’ಬರುತಿರೆನ್ರಮ್ಮ ತಂಗಿ ಜಾತ್ರೆಗೆ, ಹಟ್ಟಿತಿಪ್ಪಯ್ಯನ ತೇರಿಗೆ’ ಎಂಬ ಹಾಡಿನ ಧಾಟಿ ಪ್ರಚಲಿತ. ಚಿತ್ರದುರ್ಗ ಜಿಲ್ಲೆಯ ಅತೀ ದೊಡ್ಡಜಾತ್ರೆಗಳ ಪೈಕಿ ಇದು ಅಗ್ರಗಣ್ಯವಾದುದು.


[1] ಮಧ್ಯಕಾಲೀನ ನಗರ ನೋಡಿ: ಇತಿಹಾಸ ದರ್ಶನ, ಸಂ. ೯೭ ಪುಟ : ೨೨ ಮತ್ತು ಈ ನಮ್ಮ ಕನ್ನಡನಾಡ ೫.೧೦.೧೯೯೮

[2] ಕಾಟೆಮಲ್ಲನಾಯಕನಿಗೆ ತಿಪ್ಪೇಸ್ವಾಮಿಯವರು ಹೀಗೆ ಹೇಳುತ್ತಾರೆ. ಹಿಂದೊಮ್ಮೆ ನಿಮ್ಮ ಸಂಸ್ಥಾನಕ್ಕೆ ಬಂದಿದ್ದೆವು. ನಿಮ್ಮ ಪೂರ್ವಜರಾದ ಮಂದಭೂಪಾಲನು ತನ್ನ ಮಗಳನ್ನು ಅಮಾನವೀಯತೆಯಿಂದ ಆಕೆಯ ಮಗನನ್ನು ಮರಣದಂಡನೆಗೆ ಗುರಿಮಾಡಿದ. ಕಾರಣ ನಿನ್ನ ಮಗಳು ದಾನಸಾಲಮ್ಮ ಸಾದ್ಧಿ ಶಿರೋಮಣಿ, ಸೂರ್ಯೋಪಾಸಕಳಾಗಿ ಸೂರ್ಯನ ಕಿರಣಗಳನ್ನು ಅಲಿಂಗಿಸಿಕೊಂಡು ಗರ್ಭಿಣಿಯಾಗಿ ಮಗುವೊಂದಕ್ಕೆ ಜನ್ಮಕೊಡುತ್ತಾಳೆ. ಮದುವೆಯಾಗುವ ಮೊದಲು ಜನ್ಮ ನೀಡಿದೆ ಎಂದು ಮಗುವನ್ನು ತಿಪ್ಪೆಯಲ್ಲಿ ಎಸೆಯುತ್ತಾರೆ. ೫ ತಿಂಗಳವರೆಗೆ ಎಮ್ಮೆಯ ಹಾಲು ಕುಡಿದ ಮಗು ಬೆಳೆಯತೊಡಗಿತು. ಈತನೇ ಎನುಮುಲು ವಂಶದ ಮೂಲ ಪುರುಷ. ರುದ್ರ, ತಿಪ್ಪೇರುದ್ರನೆಂದು ಹೇಳುತ್ತಾರೆ.

[3] ಹುಟ್ಟಿದ ಮಕ್ಕಳೆಲ್ಲ ಸಾಯುತ್ತಿರುವ ಸಂದರ್ಭದಲ್ಲಿ ಸತ್ತ ಹಸುಳೆಗಳನ್ನು ತಿಪ್ಪೆಯಲ್ಲಿ ಹೂಳುವುದು ಗ್ರಾಮೀಣ ಸಂಪ್ರದಾಯ. ತಿಪ್ಪೆಯ ಗೊಬ್ಬರ ಬೆಳೆಗೆ ಆಧಾರವಾಗುವ ಹಾಗೆ (ಫಲವತ್ತಾಗು) ಸತ್ತ ಕೂಸು ಸಹಾ ಮತ್ತೆ ತಾಯಿಗೆ ಫಲವಾಗಿ ಮೂಡಲಿ ಎಂಬುದು ಆಶಯ. ಹೀಗೆ ಹುಟ್ಟಿದ್ದ ಮಗುವನ್ನು ತಿಪ್ಪೆಯ ಮೇಲೆ ಮಲಗಿ ಮೂಗಿಗೆ ಮೂರೇ ಹಾಕುತ್ತಾರೆ. ಮುರ ಎಂದರೆ ಪಂಚಲೋಹದಿಂದ ತಯಾರಿಸಿದ, ಮೂಗು ಬಳೆ, ಇದನ್ನು ಹತ್ತಾರು ಜನರಿಂದ ತಿರುಪೆ ಎತ್ತಿ ತಂದು ಹಾಕುತ್ತಾರೆ.