೬.೧೦. ಬಳ್ಳಾರಿಗೋಣೆಯ್ಯ

ಬಳ್ಳಾರಿ ಗೋಣೆಯ್ಯ ಎಂಬುವನು ೧೬ನೇ ಶತಮಾನಕ್ಕೆ ಸೇರಿದ ಒಬ್ಬ ಬುಡಕಟ್ಟು ವೀರ. ಇವನು ಮುಸ್ಲಿಮರ ವಿರುದ್ಧ ಹೋರಾಡಿದನೆಂದು ಜನಪದ ಕಾವ್ಯದಿಂದ ತಿಳಿದುಬರುತ್ತದೆ. ಕಾವ್ಯದಲ್ಲಿ ಮುಗಲದೇಶ ಎಂದು ಬರುವುದು. ಹೀಗೆಂದರೆ ಉತ್ತರ ಭಾರತವಿರಬೇಕು. ಮೊಗಲರ ಆಳ್ವಿಕೆ ಇದ್ದುದು ಅಭಾಗದಲ್ಲಿ ಆದ್ದರಿಂದ ಮೇಲಿನಂತೆ ಹೇಳಬಹುದು. ಮುಸಲ್ಮಾನರ ಸೈನ್ಯ ತನ್ನ ರಾಜ್ಯದ ಮೇಲೆ ಧಾಳಿ ಮಾಡುವಾಗ ರಾಜ ನಿದ್ರಾವಸ್ಥೆಯಲ್ಲಿರುತ್ತಾನೆ. ಸಂದರ್ಭವರಿತ ತಾಯಿ ಮಂಚಕ್ಕೆ ಧಾವಿಸಿ ವಿದೇಶಿ ದಂಡು (ಮುಗಲ) ಮುತ್ತಿಗೆ ಹಾಕಿದೆ, ಅವರನ್ನ ಹಿಮ್ಮೆಟ್ಟಿ ರಾಜ್ಯವನ್ನು ರಕ್ಷಿಸಿ ಎಂದು ಎಚ್ಚರಿಸುತ್ತಾಳೆ.

ಇವನ ಸ್ಥಳ, ಮನೆತನ, ಕಾಲಮಾನ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಯ ಗಡಿಭಾಗದ ಮ್ಯಾಸಬೇಡರು ಇವನು ತಮ್ಮವೀರನೆಂದು ಕಾವ್ಯ ಕಟ್ಟಿ ಹಾಡುತ್ತಾರೆ. ಈ ಭಾಗದಲ್ಲಿ ಜನಪದಕಾವ್ಯ ಸಿಗುವುದರಿಂದ ಇವನು ಈ ಭಾಗಕ್ಕೆ ಸೇರಿದವನೆಂದು ಊಹಿಸಬಹುದು. ಬೇಡರಲ್ಲಿ ಗೋಣೆಯ ಎಂಬ ವ್ಯಕ್ತಿ ನಾಮಗಳಿವೆ ಹೊರತು ದೇವರಿಲ್ಲ. ಮತ್ತು ಇವನನ್ನು ವೀರನೆಂದು ಒಪ್ಪಿಕೊಂಡಿದ್ದಾರೆ. ಆಳ್ವಿಕೆ ನಡೆಸಿದ ಯಾವೊಬ್ಬ ವ್ಯಕ್ತಿಯನ್ನು ಮ್ಯಾಸಬೇಡರು ಆರಾಧಿಸುವುದಿಲ್ಲ ಮತ್ತು ದೇವರೆಂದು ಒಪ್ಪಿಕೊಳ್ಳುವುದಿಲ್ಲ. ಗೋಣೆಯ್ಯ ಪಶುಪಾಲಕನಾಗಿ, ಜನಾಂಗವನ್ನು ಸಂಘಟಿಸಿ, ರಾಜ್ಯ ಕಟ್ಟುವುದರ ಮೂಲಕ ವಿಶೇಷ ಸ್ಥಾನ ಪಡೆದವನಿರಬೇಕು. ಇವನ ಬಗೆಗೆ ಲಭ್ಯವಿರುವ ಜನಪದ ಕಾವ್ಯ ಇಂತಿದೆ:

ಮಟ ಮಟ ಮಧ್ಯಾಹ್ನದ ಗೋಣೆ
ಮಲಗಿರುವ ಮಂಚಾದು ಮ್ಯಾಲೆ
ತಿದ್ದಾನೆ ಎಳಮೀಸೇನ
ಬಳ್ಳಾರಿ ಗೋಣೆ ತಿರುವತ ಎಳಮೀಸೆನು ||
ಅರಮನೆಲಿಂದ ತಾಯಿ ಬಂದು
ತೊಳಬಡಿದೆಂದು ಎಬ್ಬಿಸ್ಯಾಳೋ
ದಡ್ಡುಗ್ಗುನಾದರೆದ್ದು ಕುಂತ್ಯಾನೊ
ಬಲ್ಲಾರಗೋಣೆ ದುಡುಗ್ಗುನಾದರೆದ್ದು ಕುಂತವುನೋ ||

ಅಂದಿಗಿಂದಿಗೆ ಬರುವಳಲ್ಲ
ಇಂದಿಗ್ಯಾಕೆ ಬಂದೆ ತಾಯಿ
ಬಂದ ಕಾರಣವೇನು ಬೇಗನೇಳಮ್ಮ
ಹಡದಮ್ಮ ತಾಯಿ, ಆಕಾಶವೇಣಿ, ಭೂಲೋಕತಾಯಿ
ಮತ್ತೇ ಕಾರಣವೇನು ಹೇಳಮ್ಮೊ ||

ಮುಗಲ ದೇಸದ ದಂಡುಮಗನೇ
ಕಾರಕಂಬ ರಾಡು ತಾವೆ
ಊರಗೋಲಂದಾಡು ತಾವಲ್ಲೊ
ಬಲ್ಲಾರಿ ಗೋಣಿ||
ಊರುಗೋಲಂದು ತಾವಲ್ಲೊ||
ಅಂಗ ಹಂಬುವ ಸುದ್ಧಿ ಕೇಳಿ
ಪಳ್ಳನೆ ಕ್ಯಾಕ್ಯನೆ ಒಡಿದು
ಬಾಕು ಬಿಲ್ಲಲ ಕೈಯಲಿಡುದಾನೋ
ಬಲ್ಲಾರಿ ಗೋಣಿ ಬಾಕು ಬಿಲ್ಲಲು ಕೈಯಲಿಡುದಾನೋ||
ಮುಂದಕ್ಕೆ ಮುಂದಿಟ್ಟಕಾಲು
ಹಿಂದುಕಾದರೆ ಯಿಟ್ಟಾರೆ
ನಾಯಿಗೋಣಿಗೆ (ಹಗಲು) ಕೂಳರ ಹಾಕ್ಯರೋ
ಬಲ್ಲಾರಿ ಗೋಣಿ ನಾಯಿಗೋಣಿ ಕುಳಾನಾಕ್ಯನೋ||
ಮೂರುಕಾಸಿನ ಹೆಂಗಸು ನೀನು
ಎಂಥ ಮಾತನ್ನಾಡತಿಯೆ
ಪಳ್ಳನೆ ಕ್ಯಾಕೆಯ್ಯ ಒಡಿದಾನೊ
ಬಲ್ಲಾರಿ ಗೋಣೆ ಬಾಕುಬಿಲ್ಲಿಲ ಕೈಯಲ್ಲಿಡುದಾನೆ||
ಹತ್ತು ಲಕ್ಸ ನಮ್ಮದಯ್ಯ
ಒಂದು ಲಕ್ಸ ನಮ್ಮದಯ್ಯ
ದಂಡುಗಾದರೆ ಸ್ಯಾಲೆ ಹೊಡಿಯಯ್ಯ
ಬಲ್ಲಾರ ಗೋಣಿ ದಂಡಿಗಾದರೆ ಸ್ಯಾಲೆಹೊಡಿಯಯ್ಯೊ||
ಅಂಗ ಅಂಬವ ಸುದ್ದಿ ಕೇಳಿ
ಪಳ್ಳನೆ ಕ್ಯಾಕೆಯ ಒಡಿದು
ಬಾಕುಬಿಲ್ಲಲು ಕೈಯಲಿಡುದಾನೋ
ಬಲ್ಲಾರಿ ಗೋಣಿ ಬಾಕ ಬಿಲ್ಲಲಿ ಕೈಯಲಿಡುತಾನೆ||
ಸೂಳೆರಗೇರಿಗೆ ಹೋದನಯ್ಯ
ಹತ್ತು ಮಂದಿ ಸೂಳೆರಯ್ಯ
ಒಬ್ಬರೂ ಗಂಡನ ಹೇಳಲಿಲ್ಲಯ್ಯ
ಶಿವಲಿಂಗದೊಡೆಯ ಒಬ್ಬರ ಗಂಡನ ಹೇಳಲಿಲ್ಲಯ್ಯೊ
ಇಂದಕ್ಕೆ ಇಂಗಣ್ಣಿ ಬಡಿದು
ಮುಂದಕ್ಕೆ ಮುಂಗಣ್ಣಿ ಒಡಿದು
ಸೀತಲ ಪಲಕೆ ಬಿದ್ದನಲ್ಲಯ್ಯ (ಸಿರುಪಲಕೆ)
ಬಲ್ಲಾರಿ ಗೋಣಿ ಸೀಳು ಪದಲಕೆ ಬಿದ್ದನಲ್ಲಯ್ಯೋ ||

[1]


[1] ವಕ್ತೃ: ಗುಗ್ಗಪಾಪಯ್ಯ : ೪೫. ಕೃಷಿ (ಅವಿದ್ಯಾವಂತ) ಕನ್ನಬೋರಯ್ಯನಹಟ್ಟಿ, ಪೂಜಾರಹಳ್ಳಿ ಅಂಚೆ, ಕೂಡ್ಲಿಗಿ ತಾ, ಬಳ್ಳಾರಿ ಜಿಲ್ಲೆ.