.. ಮಧ್ಯಕಾಲೀನ ಆರಾಧನಾ ಕ್ಷೇತ್ರಗಳು

ಬೇಡರಿಗೆ ಮಹತ್ವವನ್ನು, ಪರಿವರ್ತನೆಯನ್ನು ತಂದುಕೊಟ್ಟಿದ್ದು ಮಧ್ಯಕಾಲ. ಕ್ರಿ.ಶ.ಸು.೧೦ನೇ ಶತಮಾನದಿಂದ ೧೯ನೇ ಶತಮಾನದವರೆಗೆ ಇದರ ಕಾಲವ್ಯಾಪ್ತಿಯಿದೆ. ಈ ನಡುವೆ ಬರುವ ಸಾಂಸ್ಕೃತಿಕ ಮತ್ತು ಬುಡಕಟ್ಟು ವೀರರ ಚರಿತ್ರೆ ಅಸ್ಪಷ್ಟವಾದುದೂ ಕಾಲಾತೀತವಾದ್ದರಿಂದ ಮರುಜೋಡಣೆಯ ಅವಶ್ಯಕತೆಯಿದೆ. ಇಂಥ ವೀರರು ಸಾಂಸ್ಕೃತಿಕವಾಗಿ ಮಹತ್ವ ಪಡೆದಿದ್ದು, ಜನರ ಬಾಯಲ್ಲಿ ಜೀವಂತವಾಗಿದ್ದು ಚರಿತ್ರೆಯಲ್ಲಿ ಮಾತ್ರ ದಾಖಲಾಗದಿರುವುದು ವಿಷಾದನೀಯ. ಗಂಜಿಗಟ್ಟಿಯ ಗಾದರಿಪಾಲನಾಯಕ, ಜಗಳೂರು ಪಾಪನಾಯಕ, ವಲಸೆಯ ಯರಗಾಟನಾಯಕ, ಹಿರೇಹಳ್ಳಿಯ ದಡ್ಡಿ ಸೂರನಾಯಕ, ರುದ್ರಮ್ಮನಹಳ್ಳಿಯ ನಲುಜೆರುವಯ್ಯ, ರಾವಲುಕುಂಟ ಮುತ್ತಿಗಾರಹಳ್ಳಿಯ ಕೊಡಗಲು ಬೊಮ್ಮನಾಯಕ, ಗಲಗಲ್ಲು ಗಾಜನಾಯಕ, ನಾಯಕನಹಟ್ಟಿ ತಿಪ್ಪೇಸ್ವಾಮಿ ಮೊದಲಾದವರು ಇಲ್ಲಿ ಪ್ರಾಮುಖ್ಯತೆ ಪಡೆದಿರುವರು. ನಾಯಕಹಟ್ಟಿ ದೊರೆ ಕಾಟಮಲ್ಲಪ್ಪ ನಾಯಕನ ಸಮಾಧಿ ಜಗಳೂರು ತಾಲೂಕಿನ ಬಿದರಕೆರೆ ಬಳಿಯಿದ್ದು, ಗುಹೇಶ್ವರನ ಬೆಟ್ಟವೆಂದು ಖ್ಯಾತಿ ಪಡೆದಿದೆ. ನಾಯಕನಹಟ್ಟಿ ಹೋಬಳಿಯ ಹೊಸಗುಡ್ಡದ ಬಳಿಯ ಕಾಟಮಲ್ಲನಾಯಕನ ಸಮಾಧಿಯಿದ್ದು ಆರಾದಿಸಲಾಗುತ್ತದೆ (ಇಲ್ಲಿ ಅರಸರ ಹೆಸರು ಬೇರೆ ಬೇರೆ ಇರಬೇಕು) ಬೇಡರು ಈ ಸಮಾಧಿಗೆ ಆರಾಧಿಸುವುದು ಪ್ರಚಲಿತದಲ್ಲಿದೆ. ನೀರ್ಥಡಿ ಎಮ್ಮೆ ಹಟ್ಟಿ ಮಧ್ಯದಲ್ಲಿರುವ ಚಿತ್ರದೇವರ ಗುಡಿಯನ್ನು ಗಂಗನಾಯಕ ನಿರ್ಮಿಸಿರುವುದು ಸ್ಮರಣೀಯ. ವೈ.ಎನ್.ಹೊಸಕೋಟೆಯಲ್ಲಿ ಯಲ್ಲಪ್ಪ ನಾಯಕ ಅರಸನ ಸಮಾಧಿಯು ದೇವಾಲಯವಾಗಿ ಮಾರ್ಪಟ್ಟಿದೆ.

ಗಂಜಿಗಟ್ಟೆ: ದೇವರ ಗಂಜಿಗಟ್ಟೆಯೆಂದು ಪ್ರಸಿದ್ಧ ಪಡೆದ ಈ ಸ್ಥಳ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಸಾಸಲು – ಮುತ್ತಗನೂರು ಮತ್ತು ಅಂದನೂರುಗಳ ಮಧ್ಯೆ ಬರುತ್ತದೆ. ಸಿರಿಗೆರೆಯಿಂದ ಪಶ್ಚಿಮಕ್ಕೆ ಇಪ್ಪತ್ತು ಕಿ.ಮೀ. ದೂರದಲ್ಲಿದೆ. ಪ್ರಾಚೀನ ಗ್ರಾಮವಾದ ಇದು ಸಮೃದ್ಧ ಕಾಡು ಬೆಟ್ಟ – ಗುಡ್ಡಗಳನ್ನು ತನ್ನ ಮಡಿಲಲ್ಲಿ ಹುದುಗಿಸಿಕೊಂಡಿದೆ. ಈ ಪರಿಸರದಲ್ಲಿನ ‘ಗಾದ್ರಿಮಲೆಬೆಟ್ಟ’ವು ಧಾರ್ಮಿಕ ಆರಾಧನಾ ಕ್ಷೇತ್ರವೆಂಬುದು ಗಮನಾರ್ಹ. ಗ್ರಾಮ ಚಿಕ್ಕದಾದರೂ, ಚೊಕ್ಕವಾಗಿರುವ ಪರಿಸರ ಹಿತವೆನಿಸುವುದು. ಇಲ್ಲಿರುವ ಬೇಡರು ಮೂಲತಃ ಹಂಪೆ – ಆನೆಗುಂದಿಯಿಂದ ವಲಸೆ ಬಂದವರೆಂದು ತಿಳಿಸುವರು. ಕಂಪ್ಲಿ ನರಸಿಂಹ ದೇವರೇ ಈ ವಲಸೆಗೆ ಕಾರಣ. ಹೀಗಾಗಿ ಈ ದೇವಾಲಯವು ಇಲ್ಲಿ ಪ್ರಸಿದ್ಧವಾಗಿದೆ. ಕ್ರಿ.ಶ. ೯ ರಿಂದ ೧೬ನೇ ಶತಮಾನದ ನಡುವಿನ ಕಾಲಘಟ್ಟವು ಈ ಬೇಡರ ಸಾಂಸ್ಕೃತಿಕ ಚರಿತ್ರೆಯನ್ನು ಅನಾವರಣಗೊಳಿಸುವುದು.

ಗಾದರಿಪಾಲನಾಯಕ ದೇವಸ್ಥಾನದ ವಿಹಂಗಮನೋಟ, ಗಂಜಿಗಟ್ಟೆ

ಗಂಜಿಗಟ್ಟೆ ಬೇಡ ಜನಾಂಗದ ಪ್ರಾಚೀನ ಆರಾಧನಾಕ್ಷೇತ್ರ. ಬೇಡರು ತಮ್ಮ ಬೇಡಕಗಂಪಳದೊಂದಿಗೆ ಇಲ್ಲಿಗೆ ಬಂದು ನೆಲೆಯೂರಿದರಂತೆ. ಕಂಪಲಿನರಸಿಂಹನ ಮೂಲಕ ಇಲ್ಲಿ ಶೈವ ಮತ್ತು ವೈಷ್ಣವ ಪಂಥಗಳ ಬೇಡರಿಗೆ ಹೊಂದಾಣಿಕೆ ಏರ್ಪಟ್ಟಿದೆ. ಇಲ್ಲಿ ಬರುವ ಗಾದರಿಪಾಲನಾಯಕನೆಂಬ ಪಶುಪಾಲಕನು ಶೈವ ಪಂಥದ ಪ್ರಭಾವಕ್ಕೊಳಗಾಗಿರುವನು. ಇವನು ದನ ಕಾಯುವಾಗ ತನ್ನ ತುರುಮಂದೆಗೆ ಹುಲಿದಾಳಿಯಿಟ್ಟ ಕಾರಣ ಅದನ್ನು ತನ್ನ ಸಹೋದರ ಚಿನ್ನಪಾಲನಾಯಕನ ನೆರವಿನೊಂದಿಗೆ ಕೊಲ್ಲುವಲ್ಲಿ ಯಶಸ್ವಿಯಾದ. ಇಂಥಾ ಘಟನೆಯನ್ನು ಮೌಖಿಕ ಪರಂಪರೆಯಲ್ಲಿ ತೀರಾ ರಂಜನೆ, ವರ್ಣನೆಗೊಳಿಸಿರುವುದು ಗಮನಾರ್ಹ ಸಂಗತಿ.

ಪಶುಗಳಿಗೆ ಮತ್ತು ಜನರಿಗೆ ಬರಗಾಲ ಆವರಿಸಿದಾಗ ಹುಲ್ಲು ನೀರು ಮೇವಿಗಾಗಿ ಬೇಡರು ವಲಸೆ ಹೋಗುವುದು ಸಹಜ. ಒಮ್ಮೆ ಇಂಥ ಪ್ರಸಂಗದಲ್ಲಿ ಗಾದರಿಪಾಲನಾಯಕ ತನ್ನ ದನಕರುಗಳೊಂದಿಗೆ ಸಮೃದ್ಧ ಹುಲ್ಲುನೀರಿಗಾಗಿ ಮಲೆನಾಡು ಪ್ರದೇಶಕ್ಕೆ ತೆರಳುತ್ತಾನೆ. ಇವನೊಂದಿಗೆ ಬೇಡಗಂಪಳವು ಇರುತ್ತದೆ. ಹೀಗೆ ರೊಪ್ಪಕಟ್ಟಿಕೊಂಡಿರುವಾಗ ಹುಲಿ ದಂಪತಿಗಳಿಗೂ ಮತ್ತು ಗಾದರಿಪಾಲನಾಯಕನಿಗೆ ಪರಸ್ಪರ ಒಪ್ಪಂದವಾಗಿರುತ್ತದೆ. ಒಪ್ಪಂದ ಕಾರಣ ಹುಲಿಗಳು ದನಗಳನ್ನು ತಿನ್ನಬಾರದು. ಹುಲಿಮರಿಗಳನ್ನು ದನಗಳ ರೊಪ್ಪದಲ್ಲಿ ಸಾಕುವುದಾಗಿತ್ತು. ಭಾವನನ್ನು ಕಾಣಲು ಬಂದ ಚಿತ್ತಣ – ಕಾಟಣ್ಣನವರ ಕಡೆಗೆ ರೊಪ್ಪದಲ್ಲಿದ್ದ ಹುಲಿಮರಿಗಳು ಕಂಡವು. ದನಕರುಗಳನ್ನು ಇವು ತಿನ್ನುತ್ತವೆಂದು ಅವುಗಳನ್ನು ಕೊಲ್ಲುತ್ತಾರೆ. ಇನ್ನೊಂದು ಕಥೆಯ ಪ್ರಕಾರ ಕೇಡು ಅಜ್ಜಿನಾಡು ಕಡಿಯುತ್ತಾನೆ. ಹೀಗೆ ಒಪ್ಪಂದ ತಿಳಿಯದ

ಅಪರಾಧಕ್ಕೆ ಗಾದರಿಪಾಲನಾಯಕ ಗುರಿಯಾಗಿ ಹುಲಿದಂಪತಿಗಳೊಂದಿಗೆ ಕಾಳಗ ನಡೆದು ‘ಮಿಂಚೇರಿ’ ಹಳ್ಳದಲ್ಲಿ ಸಾಯುತ್ತಾನೆ. ಅಲ್ಲಿಯೇ ಹುಲಿಗುಡ್ಡ ಮತ್ತು ಗಾದರಿಪಾಲನಾಯಕನ ಸಮಾಧಿಗಳಿವೆ. ಇವನು ಸತ್ತ ನಂತರ ಮಡದಿಯರಾದ ಕಂಚವ್ವ ಕಾಮವ್ವನವರುಗಳು ಸಹಗಮನ ಕೈಗೊಳ್ಳುವರು. ಇಲ್ಲಿರುವ ಮಹಾಸತಿ ಕಲ್ಲುಗಳಿಗೆ ‘ಗಾದರಿಪಾಲನಾಯಕ’ ದೇವರೆಂದು ಕರೆಯಲಾಗುತ್ತದೆ. ಚಿತ್ರದುರ್ಗ, ತಾಳ್ಯದ ನಾಯಕರು ‘ಗಾದರಿಪಾಲನಾಯಕ’ ದೇವರ ಹೆಸರಿನಲ್ಲಿ ಎರಡು ಶಾಸನಗಳನ್ನು ಹಾಕಿಸಿದ್ದಾರೆ. ಸುಂದರ ದೇವಾಲಯ, ಶಾಸನಶಿಲ್ಪ, ಹೊಂಡ ಮೊದಲಾದವು ಪ್ರಾಮುಖ್ಯತೆ ಪಡೆದಿವೆ.

[1]

ಜಗಳೂರಿನ ಕೋಟೆ ಕೊತ್ತಲು (ಕೋಟೆ ಚೌಡಮ್ಮನ ಗುಡಿ)

ಗಂಜಿಗಟ್ಟಿಯಲ್ಲಿ ‘ಗಾದರಿದೇವರ’ ಹೆಸರಿನ ಮೇಲೆ ‘ಕಾಳನಹಬ್ಬ’ವನ್ನು ವರ್ಷಕ್ಕೊಮ್ಮೆ ‘ಭರತಹುಣ್ಣಿಮೆ’ಯಲ್ಲಿ ಆಚರಿಸುತ್ತಾರೆ. ಹೀಗೆ ವರ್ಷಕ್ಕೆ ಎರಡು ಜಾತ್ರೆಗಳು ಸಂಭವಿಸುತ್ತವೆ. ಆಗಾಗ ಭಕ್ತಾದಿಗಳ ಅಪೇಕ್ಷೆಯಂತೆ, ಪೂಜಾಕಾರ್ಯಗಳು ನಡೆಯುವುದುಂಟು. ಚಿತ್ರದುರ್ಗ ಜಿಲ್ಲೆಯ ಬೊಚ್ಚಬೋರಯ್ಯನಹಟ್ಟಿ. ಚಳ್ಳಕೆರೆ ತಾಲೂಕಿನ ನನ್ನಿವಾಳ, ಜುಂಜುರುಗುಂಟೆ, ಚೆನ್ನಬಸಯ್ಯಹಟ್ಟಿ, ರಾಮಸಾಗರ, ಬಿ.ಜಿ.ಕೆರೆ ಮೊದಲಾದ ಸ್ಥಳಗಳಲ್ಲಿ ಹಬ್ಬ ಜಾತ್ರೆಗಳನ್ನು ಮಾಡುತ್ತಿದ್ದಾರೆ. ಈ ವ್ಯಕ್ತಿಯ ಆರಾಧನಾ ಕ್ಷೇತ್ರಗಳು ಚಿತ್ರದುರ್ಗ, ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತವೆ.

ಜಗಳೂರು: ದಾವಣಗೆರೆ ಜಿಲ್ಲೆಯಲಿರುವ ಜಗಳೂರು ತಾಲೂಕು ಕೇಂದ್ರ, ಮಧ್ಯಕಾಲೀನ ಸಂದರ್ಭದಲ್ಲಿ ಜಗಳೂರು ಪಾಪನಾಯಕನೆಂಬ ಸಂತ ನೆಲಸಿ ಜೀವೈಕ್ಯಗೊಂಡ ಕ್ಷೇತ್ರವೇ ಜಗಳೂರು. ಈತನ ಪೂರ್ವ ಚರಿತ್ರೆ ಹೀಗಿದೆ. ಮೂಲತಃ ಪಶುಪಾಲಕರಾದ ಕೋರ‍್ಲಮಲ್ಲಿನಾಯಕ ಬಾಳೆದ ಪಟ್ಟಮ್ಮನಿಗೆ ಈ ಮಗ ಅಡವಿಯಲ್ಲಿ ಪವಾಡ ಸದೃಶ್ಯನಾಗಿ ಜನಿಸಿದ. ಪಿತೃಪಾಲನೆಯಂತೆ ಚಳ್ಳಕೆರೆ, ನನ್ನಿವಾಳ ಪರಿಸರದಲ್ಲಿ ದನಕಾಯುತ್ತಿದ್ದ. ಹೀಗೆ ಸ್ಥಳೀಯರ ಪ್ರಭಾವವೋ ಆಧ್ಯಾತ್ಮಿಕ ಪರಿವರ್ತನೆ ಏನೋ ಅಲ್ಲಲ್ಲಿ ಹಣ ಸಂಗ್ರಹಿಸಿ ತಿರುಪತಿಯಾತ್ರೆ ಕೈಗೊಂಡ. ಹೀಗೆ ಯಾತ್ರೆ ಹೋಗಿ ಅಲ್ಲಿ ಮಾಡಿದ, ತೋರಿದ ಪವಾಡಗಳು ಜನರನ್ನು ಬೆರಗುಗೊಳಿಸುವಂಥವು. ಶಿವ – ಪಾರ್ವತಿಯರಿಂದ ಆಶೀರ್ವಾದವನ್ನು ಪಡೆದ ಪಾಪನಾಯಕ ಜನರಿಗೆ ತನ್ನ ಬುದ್ಧಿವಾದವನ್ನು, ಪ್ರವಚನ ಮಾಡುವ ವಿಚಾರಗಳನ್ನು ಅಲ್ಲಿನ ದೊರೆ ಜಗಪತಿರಾಯ ಖಂಡಿಸುತ್ತಿದ್ದ. ಜಗಳೂರು ಪಾಪನಾಯಕನ ಪವಾಡ, ಭಕ್ತಿಯನ್ನು ಕಂಡು ಸಹಿಸದ ದೊರೆ ಅವನನ್ನು ಅನೇಕ ವಿಧಗಳಲ್ಲಿ ಪರೀಕ್ಷೆಗೆ ಒಳಪಡಿಸಿ, ಕಂದಕತೋಡಿ ಹಿಂಸಾತ್ಮಕವಾಗಿ ಕೊಲ್ಲಿಸಿದ. ತರುವಾಯ ಅಲ್ಲಿ ನೆಲಮಾಳಿಗೆ ರೂಪದ ದೇವಾಲಯವನ್ನು ಅವನ ಐಕ್ಯವಾದ ಸಮಾಧಿಯಲ್ಲಿ ಕಟ್ಟಲಾಯಿತು. ಇಲ್ಲಿರುವ ಕೋಟೆ, ಗದ್ದುಗೆ, ಪಾದಕಟ್ಟೆ ಮತ್ತು ದೇವಾಲಯ ಹಾಗೂ ವೀರಗಲ್ಲುಗಳು ಇನ್ನಷ್ಟು ಬೆಳಕು ಚೆಲ್ಲುತ್ತವೆ.

ಜಗಳೂರು ಪಾಪನಾಯಕ ಪವಾಡ ಪುರುಷನಾಗಿ, ದೈವಾಂಶಸಂಭೂತವಾಗಿ ಜನಪ್ರಿಯಗೊಂಡವನು. ಅವನ ನೆಲೆ ಧಾರ್ಮಿಕ ಕ್ಷೇತ್ರವಾಗಿ, ವೀರರಾಧನೆ ಕ್ಷೇತ್ರವಾಗಿ ಲೋಕವಿಖ್ಯಾತಿ ಪಡೆಯಿತು. ಇಂದು ಬೇಡರು ಸೂರೆದೇವ ಪಾಪನಾಯಕ, ಕೋರೇಲು ಪಾಪನಾಯಕ, ಪರದೇಶಿ ಪಾಪನಾಯಕ, ಜೋಗದೇವರು ಎಂದೆಲ್ಲಾ ಕರೆಯಲಾಗುತ್ತದೆ. ವರ್ಷಕ್ಕೊಮ್ಮೆ ಎರಡುಬಾರಿ ಹಬ್ಬ – ಜಾತ್ರೆಗಳಾಗುವಾಗ ಅಸಂಖ್ಯಾತ ಭಕ್ತಾದಿಗಳು ಸೇರುವರು.

ಮೂಲಸಮಾಧಿ ಸ್ಥಳದ ಗುಡಿಯನ್ನು ದೇವಾಲಯವಾಗಿ ಪರಿವರ್ತಿಸಿ ಕಟ್ಟಿಸಿದವರು ಕಮಲಾಪುರದ ಗಲಗಲ್ಲು ಸೂರಯ್ಯ. ವಿಶಾಲವಾದ ಮಂಟಪ, ಗರ್ಭಗೃಹಗಳನ್ನೊಳಗೊಂಡಿದೆ ಈ ದೇವಾಲಯ. ದೊರೆ ಇವನನ್ನು ಕಾಲು ಕಡಿಸಿದ ಕಾರಣಕ್ಕೋ ಏನೋ, ಬೇಡರು ಕುರಿಯನ್ನು ಬಲಿಕೊಡುವಾಗ ಶಿರವನ್ನು ಕಡಿದರೆ ಇಲ್ಲಿ ಮೊದಲು ಮುಂಗಾಲುಗಳನ್ನು ಕಡಿದು ಅದನ್ನು ಮೂರು ಹೆಜ್ಜೆ ನಡೆಸಿ ತರುವಾಯ ಕುತ್ತಿಗೆ ಕೊಯ್ಯುತ್ತಾರೆ. ಈ ರೀತಿಯ ಪದ್ಧತಿ, ಚಾರಿತ್ರಿಕ ಘಟನೆ ಮಸುಕಾಗಿದೆ. ಇಂದು ಬೇಡರ ಪಂಗಡದವರಿಗೆ ಮನೆದೇವರಾಗಿರುವ ಪಾಪನಾಯಕ, ಬೇಡರ ಮಕ್ಕಳಿಗೂ ಆ ಹೆಸರಿಟ್ಟಿರುವುದು ಸಾರ್ಥಕದ ಪ್ರತೀಕ. ವಿಶೇಷವೆಂದರೆ ಜಗಳೂರು ಪಾಪನಾಯಕ ತಿರುಪತಿಯ ವೆಂಕಟರಮಣನ ಭಕ್ತನಾದರೂ ಅವನ ಅನುಯಾಯಿಗಳು ಮಾತ್ರ ಶೈವ, ವೈಷ್ಣವ ಪಂಥದ ಬೇಡರಲ್ಲದೆ, ಲಿಂಗಾಯತ, ಬ್ರಾಹ್ಮಣರು ಸೇರಿದಂತೆ ಇತರ ಸಮುದಾಯದವರು ಆರಾಧಿಸುತ್ತಾರೆ. ಹೊಸಪೇಟೆ ತಾಲೂಕಿನ ಕಮಲಾಪುರ, ಪಾಪಿನಾಯಕನಹಳ್ಳಿ, ಕೂಡ್ಲಿಗಿ, ಸಂಡೂರು, ದಾವಣಗೆರೆ, ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮೂರು ತಾಲೂಕುಗಳ ಕೆಲವು ಗ್ರಾಮಗಳಲ್ಲಿ ಈತನ ದೇವಾಲಯಗಳಿದ್ದು ಹಬ್ಬ – ಜಾತ್ರೆಗಳಾಗುತ್ತವೆ.

ನಾಯಕನಹಟ್ಟಿ: ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲ್ಲೂಕಿನಲ್ಲಿರುವ ಪ್ರಸಿದ್ಧ ಕ್ಷೇತ್ರವೇ ನಾಯಕನಹಟ್ಟಿ. ಇಲ್ಲಿರುವ ‘ತಿಪ್ಪೇಸ್ವಾಮಿ’ ಅನೇಕ ಸಮುದಾಯಗಳಿಗೆ ಆರಾಧ್ಯ ದೈವ. ಕ್ರಿ.ಶ.ಸು.೧೬ – ೧೭ನೇ ಶತಮಾನದಲ್ಲಿ ಬಾಳಿ – ಬದುಕಿದ ಕರ್ಮಜೀವಿ – ಕಾಯಕಯೋಗಿಯಾದ ತಿಪ್ಪೇಸ್ವಾಮಿ ಮ್ಯಾಸನಾಯಕರ ದಾನ ಸಾಲಮ್ಮನ ಸಂತತಿಗೆ ಸೇರಿದವನು (ಮಗ). ಇವಳ ತಂಗಿಯ ಮಗನೆಂದು ಈತನಿಗೆ ಕರೆಯಲಾಗಿದೆ. ಹಟ್ಟಿಮಲ್ಲಪ್ಪನಾಯಕ ಇಲ್ಲಿ ಪಾಳೆಯಗಾರನಾಗಿದ್ದಾಗ ಈತ ಸಮಾಜ ಸುಧಾರಕನಾಗಿ, ಜನಕಲ್ಯಾಣಕ್ಕೆ ಅರ್ಪಿಸಿಕೊಂಡ ಮಹಾತ್ಯಾಗಿಯಾಗಿದ್ದನಂತೆ. ರಾಯದುರ್ಗದಿಂದ ನಾಯ್ಕನಹಟ್ಟಿಗೆ ಬಂದು ನೆಲೆಸಿದ್ದು, ಫಣಿಯಪ್ಪನೊಂದಿಗೆ ಸ್ನೇಹ, ಸತ್ತ ಎಮ್ಮೆಯನ್ನು ಬದುಕಿಸಿದ್ದು, ಈತನ ಕೆಲವು ಪವಾಡಗಳಾಗಿವೆ. ಮಾಡಿದವರಿಗೆ ನೀಡು ಭಿಕ್ಷೆ’ ಎಂಬ ಸಿದ್ಧಾಂತದ ಪ್ರತಿಪಾದಕನಾದ ತಿಪ್ಪೇಸ್ವಾಮಿ ಧಾರ್ಮಿಕ ಮಹಾಪುರುಷನು ಆಗಿದ್ದ. ನಾಯಕನಹಟ್ಟಿ ಸಮೀಪ ಹೊಸಗುಡ್ಡದ ಹತ್ತಿರ ‘ದೊಡ್ಡಕೆರೆ’ಯನ್ನು ಕಟ್ಟಿಸಿದ್ದು ಗಮನಾರ್ಹ. ಈ ಕೆರೆ ಕೋಡಿ ಬಿದ್ದಾಗ ತೆಪ್ಪೋತ್ಸವ ನಡೆಯುವುದು ಈ ಸ್ವಾಮಿಯ ಸ್ಮರಣೆಗಾಗಿ ಚಿಕ್ಕಕೆರೆಯು ಹೊರಮಠದ ಮುಂಭಾಗದಲ್ಲಿದೆ.

ತಿಪ್ಪೇರುದ್ರಸ್ವಾಮಿಯ ದರ್ಶನಕ್ಕೆ ನೂಕು ನುಗ್ಗುಲು, ನಾಯಕನಹಟ್ಟಿ

ಪ್ರತಿವರ್ಷ ಮಾರ್ಚ್ ತಿಂಗಳಲ್ಲಿ ಬೃಹತ್ ಜಾತ್ರೆಯಾದರೆ, ನವೆಂಬರ್ ಡಿಸೆಂಬರ್‌ನಲ್ಲಿ ಕಾರ್ತಿಕೋತ್ಸವವು ನಡೆಯುವುದು ಸ್ಪಷ್ಟ. ಅಕ್ಕಪಕ್ಕದ ಜಿಲ್ಲೆ – ನೆರೆಯ ರಾಜ್ಯದ ಭಕ್ತಾದಿಗಳು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ತಿಪ್ಪೇಸ್ವಾಮಿಯ ಲೋಕಕಲ್ಯಾಣ ಕೆಲಸಗಳಿಂದ ಆತ ಬಹುಜನಪ್ರಿಯನಾಗಿರುವನು. ಹೊರಮಠದಲ್ಲಿ ಈತನ ಜೀವೈಕ್ಯ ಸಮಾಧಿಯಿದೆ. ಬೇಡರು ಇಲ್ಲಿನ ಪೂಜಾರಿಗಳಾಗಿದ್ದು, ವಿಶೇಷ: ಸ್ವಾಮಿಯ ಮನ್ನಣೆಗೂ ಪಾತ್ರರಾಗಿರುವಂತಿದೆ. ಬೇಡರು ತಿಪ್ಪೇಸ್ವಾಮಿಗೆ ನೇರವಾಗಿ ಪ್ರಾಣಿಬಲಿ ‘ಕೊಡದೆ, ತಾವು ಬಂದು ತಂಗಿದ ಸ್ಥಳದಲ್ಲಿ ಬೇಟೆ ಕಡಿದು ‘ಪರುವು’ ಮಾಡಿಕೊಳ್ಳುತ್ತಾರೆ. ಶಕ್ತಿ, ಸಾಹಸ, ಪರಾಕ್ರಮದ ದ್ಯೋತಕವಾಗಿ ಆರಾಧನೆಗೊಳಪಡುವ ಬೇಡರ ವೀರರೇ ಹೆಚ್ಚು ಜನಪ್ರಿಯವಾಗದರೆ, ತಿಪ್ಪೇಸ್ವಾಮಿಯ ವ್ಯಕ್ತಿತ್ವವೇ ಬೇರೆ ಬಗೆಯದು. ಈ ಸಾಧು – ಸಂತನ ಪೂರ್ವ ಚರ್ಚೆಗಳು ಖಚಿತವಾಗಿ ನಡೆದಂತಿಲ್ಲ. ಈ ಬಗ್ಗೆ ಹೊಸಬೆಳಕು ಚೆಲ್ಲಬೇಕಿದೆ. ನಾಯಕನಹಟ್ಟಿ ನಾಯಕರಿಗೆ ಒಂದು ಕಟ್ಟೆಮನೆಯಾಗಿ, ದೊರೆಯನ್ನು ಹೊಂದಿದೆ. ಇಂಥ ಆಧ್ಯಾತ್ಮಿಕ ನೆಲೆ ನಾಯಕರ ನೆಲೆಯಾಗಿ ಬಹುಜನಪ್ರಿಯಗೊಳ್ಳುವಲ್ಲಿ ಅನುಮಾನವಿಲ್ಲ.

ತಿಪ್ಪೇಸ್ವಾಮಿ ಜೀವೈಕ್ಯ ಸಮಾಧಿಯಾದ ಸ್ಥಳ, ನಾಯಕನಹಟ್ಟಿ

ವಲಸೆ: ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನಲ್ಲಿರುವ ಪುಟ್ಟಗ್ರಾಮ ‘ವಲಸೆ’.[2] ಚಾರಿತ್ರಿಕವಾಗಿ ತುಂಬಾ ಮಹತ್ವವುಳ್ಳದ್ದು. ಶಿಲಾಯುಗದ ಮಾನವ ಜೀವಿಸಿದ ಕುರುಹುಗಳು ಇಲ್ಲಿಗೆ ಸಮೀಪದ ಕುಮತಿ ಗ್ರಾಮದಲ್ಲಿ ದೊರೆತಿವೆ. ಚಿನ್ನಹಗರಿ ನದಿ ದಂಡೆಯ ಮೇಲಿರುವ ಈ ಗ್ರಾಮ ಯರಗಾಟನಾಯಕನ ದೇವಾಲಯ (ಸಮಾಧಿ) ಇರುವುದರಿಂದ ತುಂಬಾ ಪ್ರಸಿದ್ಧಿ. ದಾನಸಾಲಮ್ಮನ ಸಂತತಿಗೆ ಸೇರಿದ ತಂಗಡಲ ತಮ್ಮವ್ವ ಇವನ ತಾಯಿ, ಪುವ್ವಾಲು ರಾಯವ್ವ, ಇವರ ಹೆಂಡತಿ. ವಡಪಲು ತಮ್ಮಯ್ಯ ಆತ್ಮೀಯ ಗೆಳೆಯ. ಒಮ್ಮೆ ಕ್ಷಾಮ ಬಂದಾಗ ದನಕರುಗಳ ಹುಲ್ಲು ನೀರಿಗಾಗಿ ವಲಸೆ ಹೋಗುತ್ತಾ ಚಿತ್ರದುರ್ಗ ಪ್ರದೇಶದ ತಮಟಕಲ್ಲು ಪರಿಸರದಲ್ಲಿ ನೆಲೆಸುವನು. ಹೀಗಿರುವಾಗ ತಮಟಕಲ್ಲು ಪ್ರದೇಶದಲ್ಲಿ ನಾಯಕಸಾನಿ ಓಬವ್ವನ ಸೌಂದರ್ಯಕ್ಕೆ ಮರುಳಾಗಿ ಅವಳನ್ನು ಪಡೆಯುವುದಕ್ಕೆ ನಾನಾ ಬಗೆಯಾಗಿ ಹೋರಾಟ ನಡೆಸುತ್ತಾನೆ. ಈ ಹಿಂದೆ ಗುಜಗುತ್ತಲ ಖ್ಯಾತಯ್ಯನು ಇವಳನ್ನು ಮೋಹಿಸಲು ವಿಫಲನಾಗಿದ್ದು, ಯರಗಾಟನ ವಿರುದ್ಧ ಸೇಡು ತೀರಿಸಿಕೊಳ್ಳಲು ಆಗಾಗ ಹವಣಿಸುತ್ತಿದ್ದ. ತಪಲೇಟೆಕೆರೆ ಸಮೀಪದಲ್ಲಿ ಹಸುಗಳಿದ್ದವು. ಒಮ್ಮೆ ಓಬವ್ವ ತನ್ನನ್ನು ವಶಪಡಿಸಿಕೊಳ್ಳುವ ಗಂಡು ಬಾಗೇನಾಳು ಕಾಮನಾಯಕನ ಅರಮನೆಯಲ್ಲಿರುವ ಬಂಜೆ ಆಕಳಿನ ಮಾಂಸ ತಂದುಕೊಟ್ಟರೆ, ಅವನೊಡನೆ ಸಂಬಂಧ ಬೆಳೆಸುವ ಇಚ್ಛೆ ತೋರಿಸಿದ್ದಳು. ನಿಡಗಲ್ಲುಗೆ ಹೋಗಿದ್ದ ಕಾಮನಾಯಕನನ್ನು ಮರೆಮಾಚಿ ಹಸುವನ್ನು ಪಡೆಯಲು ಯರಗಾಟನಾಯಕ ಅನೇಕ ಮೂಟೆಗಳ ಬಟ್ಟೆಗಳನ್ನು ತಂದು ಹಸುವಿನ ಗಂಟೆಗೆ ಕಟ್ಟಿ ತನ್ನ ವಶಕ್ಕೆ ತೆಗೆದುಕೊಂಡ. ಈ ಸಾಹಸ ಮಾಡುವಾಗ ಕಂಚಿನ ಬಾಗಿಲಿನ ಶಬ್ದ ಅರಸನಿಗೆ ಕೇಳಿ ಅವನು ಆತುರವಾಗಿ ಧಾವಿಸುತ್ತಿರುವಷ್ಟರಲ್ಲಿ ಒಬ್ಬವ್ವನಿಗೆ ಇದರ ಮಾಂಸದ ತುಂಡುಗಳು ರುಚಿಸಿದವು. ಯರಗಾಟನಾಯಕ ಸಾಹಸದ ಮೂಲಕ ಗೆದ್ದುಕೊಂಡ ಓಬವ್ವಳೊಂದಿಗೆ ಪ್ರಣಯದಲ್ಲಿ ಬೆರೆಯುವ ಅವಕಾಶವೇ ಸಿಗಲಿಲಲ. ಇವಳ ಪ್ರೀತಿ ಕೇಳಿ ಭಗ್ನಿಯಾಗಿದ್ದ ಗುಜಗುತ್ತಲು ಖ್ಯಾತನು ಬಿಲ್ಲಿನಿಂದ ಬಾಣ ಹೊಡೆದು ಇವನನ್ನು ಸಾಯಿಸುತ್ತಾನೆ. ಬಾಣ ಬಿದ್ದ ಸ್ಥಳ ಬೆಳಗಟ್ಟ ಸಮೀಪದಲ್ಲಿರುವ ಸಾಸಲುಹಟ್ಟಿ, ಹೀಗೆ ಹೆಣ್ಣಿಗಾಗಿ ಹೋರಾಡಿ ಮಡಿದ ವೀರನ ಶವವನ್ನು ಹೊತ್ತು ತರುವಾಗ ದಿನಗಳೇ ಕಳೆದಿದ್ದಾವಂತೆ. ಕೊಳೆತು ನಾರುವ ಶರೀರವನ್ನು ಮುಸ್ವಲಗುಮ್ಮಿ ಹತ್ತಿರ ಇಟ್ಟು ‘ದಿಂಪಗುಡ್ಡೆ’ಯಾಗಿ (ಶವ ಇಳಿಸಿದ ಜಾಗ) ಮಾಡಿದ್ದಾರೆ. ನಂತರ ವಲಸೆ ಹತ್ತಿರ ಸಮಾಧಿ ಮಾಡಿರಬೇಕು. ಹೆಣ ವಲಸಾದುದರಿಂದ ‘ವಲಸೆ’ ಗ್ರಾಮದ ನಿರ್ಮಾಣ ಆಗಿರುವಂತಿದೆ. ಬೇಡ ಜನಾಂಗದ ಮೀಸಲಾರು, ನಡುಗಡ್ಡೆಯವರು ಪೂಜಿಸುತ್ತಿರುವುದನ್ನು ಇಂದಿಗೂ ನೊಡಬಹುದು. (ಪಶುಪಾಲಕ ವೀರನಾದ ಯರಗಾಟನಾಯಕನ ಸತ್ತ ಹೆಣಕ್ಕೆ ಅವನ ತಾಯಿ ಹಾಲು ಕರೆದಾಗ ಪ್ರಾಣ ಬಿಟ್ಟನೆಂಬ ನಂಬಿಕೆಯಿದೆ) ಯರಗಾಟನಾಯಕನ ದೇವಾಲಯಗಳು, ಹೆಸರಿನ ವ್ಯಕ್ತಿಗಳು ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ಕಂಡುಬರುವುದುಂಟು. ಈತನ ಆರಾಧನಾ ಸ್ಥಳಗಳು ಸಾಸಲಹಟ್ಟಿ (ಚಿತ್ರದುರ್ಗ ತಾ, ಡಿ.ಬೋರಪ್ಪನವರು ದೇವಾಲಯವನ್ನು ಕಟ್ಟಿಸಿದ್ದಾರೆ. ವಲಸೆ (ಕೂಡ್ಲಿಗಿ – ತಾ) ಮೊದಲಾದ ಸ್ಥಳಗಳಲ್ಲಿ ಕಂಡುಬರುತ್ತವೆ. ಗುಗ್ಗರಿಹಬ್ಬ, ದೀಪಾವಳಿಗಳನ್ನು ಇಲ್ಲಿ ಮಾಡಲಾಗುತ್ತದೆ.

ಗುಹಾಂತರ ದೇವಾಲಯ, ರಾಮದುರ್ಗ, ನಾಯಕನಹಟ್ಟಿ

ಮುತ್ತಿಗಾರಹಳ್ಳಿರಾವಲಕುಂಟ (ಉಪ್ಪುವಂಕವಡಕ್ಕಟ್ಟ)

ಮೊಳಕಾಲ್ಮೂರು ತಾಲೂಕಿನ ಬೃಹತ್ ಅರಣ್ಯವನ್ನು ಹೊಂದಿರುವುದೇ ಮುತ್ತಿಗಾರಹಳ್ಳಿ ಕಮರಕಾವಲು. ವಿಜಯನಗರದ ಅರಸರು ಮಲ್ಲಯ್ಯನ ಎತ್ತುಗಳಿಗಾಗಿ ಸು.೩೦೦ ಎಕರೆಗಳಷ್ಟು ಅರಣ್ಯವನ್ನು ಬೇಡರಿಗೆ ಇನಾಂ ನೀಡಿದ್ದೇ ಮೇಲಿನ ಕಾವಲು. ಇಲ್ಲಿ ರಾವಲಕುಂಟ, ಬೊಮ್ಮಗೊಂಡನ ಕೆರೆ, ಊಟವಂಕ, ವಡಕ್ಕಟ್ಟ ಮೊದಲಾದ ನಿವೇಶನ ನೆಲೆಗಳು ಕಂಡುಬರುತ್ತವೆ. ಇವು ಚಿತ್ರದುರ್ಗ ಮತ್ತು ರಾಯದುರ್ಗದ ಪಾಳೆಯಗಾರರಿಂದಲೂ ಧಾರ್ಮಿಕವಾಗಿ ಖ್ಯಾತಿಗೊಂಡಿದೆ. ಈ ಭಾಗವನ್ನು ಗುತ್ತಿಬೊಮ್ಮತಿರಾಜು ಎಂಬ ಸಾಮಂತ ನೋಡಿಕೊಳ್ಳುತ್ತಿದ್ದ.

ಮುತ್ತಿಗಾರಹಳ್ಳಿ ಕೋಟೆ

ಮುತ್ತಿಗಾರಹಳ್ಳಿ ಅರಣ್ಯದಲ್ಲಿ ಹಿಂದೆ ಕೊಳಗಲು (ಡಗು) ಬೊಮ್ಮನಾಯಕನೆಂಬ ನಿರಂಕುಶ ದೊರೆಯಿದ್ದ. ಇವನು ಮ್ಯಾಸಬೇಡರ ೧೨ ಪೆಟ್ಟಿಗೆ ದೇವರುಗಳನ್ನು ಆನೆಗುಂದಿ ಕೋಟೆಯಿಂದ ತೆಗೆದುಕೊಂಡು ಬಂದು ಪ್ರತಿಷ್ಠಾಪಿಸಿ ತನ್ನ ಪಂಥದಲ್ಲಿ ಗೆದ್ದ ಪ್ರಸಂಗವಿದೆ. ಹೀಗೆ ವೀಳ್ಯದಿಂದ ಜಯಶಾಲಿಯಾದವನಿಗೆ (ಪಾಳೆಯಗಾರ) ರಾಜನನ್ನಾಗಿ ಮಾಡಿದ್ದರು. ಆರಂಭದಲ್ಲಿ ಆಳ್ವಿಕೆ ಜನಪರವಾಗಿದ್ದರೂ, ಕ್ರಮೇಣ ಭೀಕರವಾಗಿ ಪರಿಣಮಿಸಿತು. ಇವನು ವಿಧಿಸಿದ ತೆರಿಗೆಗಳೆಂದರೆ: ಗಂಡು ಸಂತತಿಯಾಗಿ ಹುಟ್ಟಿದ ಪ್ರತಿ ಪ್ರಾಣಿಯ ಕರುಗಳನ್ನು, ಬೆಣ್ಣೆ, ತುಪ್ಪ, ಹಣ್ಣು, ಹಂಪಲುಗಳಲ್ಲದೆ; ಹೊಸದಾಗಿ ಮದುವೆಯಾದವರು ಮೊಗ್ಗಲು ತೆರಿಗೆ ಕೊಡುವ ಅನಿಷ್ಟ ತೆರಿಗೆಯಿತ್ತು. ಈ ತೆರಿಗೆ ಕೊಡದಿದ್ದರೆ ನೂತನ) ಮಧುಮತಿ ಇವನೊಡನೆ ಮೊದಲ ರಾತ್ರಿ ಕಳೆಯಬೇಕಿತ್ತು. ಜನರಿಗೆ ಇದು ನುಂಗಲಾರದ ತುತ್ತಾಯಿತು. ವಿರೋಧಿಗಳಿಂದ ಹತ್ತಿಕ್ಕಲು ಸತತ ಪ್ರಯತ್ನಿಸಿದ ಯರಮಂಚಿನಾಯಕ ಇವನನ್ನು ಅಧಃಪತನಗೊಳಿಸಲು ನಾಯಕನಹಟ್ಟಿ ಹತ್ತಿರವಿರುವ ಕುದಾಪುರದಲ್ಲಿ ಸಭೆ ಕರೆದ. ಎಲ್ಲಾ ನಾಯಕರು ಸೇರಿ ಅಂದು ಕೊಡಗಲು ಬೊಮ್ಮನ ಅವಾಸಾನವೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಟ್ಟಿತು. ‘ಒಣಗಿದ ಮರ ಚಿಗುರಬೇಕು – ಚಿಗುರಿದ ಮರ ಒಣಗಬೇಕು’ ಎಂಬ ನಿಯಮ ಅಳವಡಿಸಿಕೊಂಡರು. ಇದರಿಂದ ಕುಪಿತನಾದ ಬೊಮ್ಮನಾಯಕ ಪರಿಪರಿಯಾಗಿ ಆಲೋಚನೆಯಲ್ಲಿ ತೊಡಗಿದ. ಅಂದು ತನ್ನ ತಂಗಿ ದೇವಮ್ಮ ಸೊಪ್ಪು, ತರಲು ಕಾಡಿಗೆ ತೆರಳಿದ್ದಳು. ಇವನು ಸಹ ಬೇಟೆಗೆಂದು ಕಾಡಿಗೆ ಹೋಗಿ ಬೇಟೆಯಲಿ ತೊಡಗಿದಾಗ ಒಡಹುಟ್ಟಿದ ತಂಗಿ ದೇವಮ್ಮನೆಂದು ತಿಳಿಯದೇ ಕಾಡುಪ್ರಾಣಿಯೆಂದು ಬಾನಪ್ರಯೋಗಿಸಿದ. ದೇವಮ್ಮ ಸತ್ತಿದ್ದನ್ನು ಕಂಡು ಎದೆಗುಂದಿ ತಾನು ಸಹಾ ಮರಣವನ್ನುಪ್ಪುವ ದುರಂತ ಘಟನೆ ಸಂಭವಿಸುತ್ತದೆ. ಆಗ ನಾಯಕ ಮುಖಂಡರು ಸಮಾಧಾನಗೊಂಡರು. ಇವನ ಸಾವಿಗಾಗಿ ದೇವರನ್ನು ಪ್ರಾರ್ಥಿಸುವುದು ಆಶಯವೇ ಸರಿ. ಇವನ ನೆಲಸುನಾಡು ಮೊಳಕಾಲ್ಮೂರು – ರಾಯದುರ್ಗ ತಾಲೂಕುಗಳ ಮಧ್ಯಭಾಗ. ಗಲಗಲ್ಲಿನಲ್ಲಿ (ರಾಯದುರ್ಗ ತಾ) ದೇವಮ್ಮನ ದೇವಾಲಯವಿದೆ. ಜಾತ್ರೆ – ಉತ್ಸವಗಳಾಗುತ್ತವೆ. ನಾಯಕ ಮಕ್ಕಳಿಗೆ ದೇವಮ್ಮನ ಹೆಸರನ್ನಿಡುತ್ತಾರೆ. ಗೌರಸಮುದ್ರದಲ್ಲಿ ಬೊಮ್ಮನಾಯಕನ ದೇವಾಲಯವಿದೆ. ಜಾತ್ರೆ – ಉತ್ಸವಗಳಾಗುತ್ತವೆ. ನಾಯಕ ಮಕ್ಕಳಿಗೆ ದೇವಮ್ಮನ ಹೆಸರನ್ನಿಡುತ್ತಾರೆ. ಗೌರಸಮುದ್ರದಲ್ಲಿ ಬೊಮ್ಮನಾಯಕನ ದೇವಾಲಯವಿದ್ದು ಅದರ ಹೆಸರು ಬೊಮ್ಮದೇವರು. ಮಾರವ ಬುಟ್ಟುಗೋಲು, ಬೊಮ್ಮದೇವರ ಬುಟ್ಟಗಲೋರು ಇದನ್ನು ಆರಾಧಿಸುವರು. ಇತರೆ ಬೇಡರಹಟ್ಟಿಗಳಲ್ಲಿ ಇವರ ದೇವಾಲಯಗಳಿದ್ದು ಹಬ್ಬ – ಜಾತ್ರೆಗಳಾಗುತ್ತಿರುವುದು ವಿಶೇಷ.

ದಡ್ಡಿಸೂರನಾಯ್ಕನ ಹಿರೇಹಳ್ಳಿಕೋಟೆ

ಹಿರೇಹಳ್ಳಿ : ಐವೋದಿ ಕ್ಷೇತ್ರ

 

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗರಣಿಹಳ್ಳದ ಸಮೀಪದಲ್ಲಿ (ಚೆಳ್ಳಕೆರೆ ಬಳ್ಳಾರಿ ರಸ್ತೆ) ಈ ಗ್ರಾಮವಿದೆ. ಇಲ್ಲಿ ಬಹುಸಂಖ್ಯಾತರು, ನಾಯಕರು, ಸಣ್ಣಬೆಟ್ಟ ಗುಡ್ಡಗಳ ಸಾಲು, ದಿನ್ನೆಗಳಲ್ಲದೆ, ಆಂಧ್ರದ ಗಡಿ ಈ ಊರಿಗೆ ಸಮೀಪದಲ್ಲಿದೆ. ತೆಲುಗಿನಲ್ಲಿ ‘ಪೆದ್ದಪಲ್ಲಿ’ ಎಂಬ ಹೆಸರಿದೆ. ಹಿರಿಯರು ಕೂಡಿ ನಿರ್ಮಿಸಿದ ಹಳ್ಳಿ ಎಂದು ಹೇಳಲಾಗುತ್ತಿದೆ.

ದಡ್ಡಿಸೂರನಾಯಕನ ದೇವಾಲಯ, ಹಿರೇಹಳ್ಳಿ

ಇಲ್ಲಿನ ಪ್ರಸಿದ್ಧ ಹಾಗೂ ಮೂಲದೇವತೆ ‘ದಡ್ಡಿಸೂರನಾಯಕ’ ಇತರ ದೇವತೆಗಳೆಂದರೆ ಗಾದರಪಾಲನಾಯಕ, ಓಬಳದೇವರು ಇದ್ದರೂ ಅತೀ ಹೆಚ್ಚಿನ ಮಹತ್ವ ಮೊದಲನೆಯದಕ್ಕಿದೆ. ದಡ್ಡಿಸೂರನಾಯಕ ಒಬ್ಬ ಪಶುಪಾಲಕ. ಬೇಡರ ಕಾಪು ಕಂಪಳದೊಂದಿಗೆ ಮೊಳಕಾಲ್ಮೂರು – ರಾಯದುರ್ಗ – ಗಲಗಲ್ಲು ಪ್ರದೇಶದಲ್ಲಿ ನೆಲೆಸಿರುವಾಗ ಗಲಗಲ್ಲು ಗಾಜನಾಯಕನ ಪತ್ನಿಗೆ ಮನಸೋತಿರುತ್ತಾನೆ. ಒಮ್ಮೆ ಕುರಿ ಮದೆಯಲ್ಲಿ ವಾಸ್ತವ ಹೂಡಿದಾಗ ಕರಿಬಣ್ಣದ ಸೀರೆಯನ್ನುಟ್ಟು ಬಂದ ತನ್ನ ಪ್ರೇಯಸಿಯನ್ನು ಕಾಡುಪ್ರಾನಿಯೆಂದು ಬಗೆದು ಬಾಣಬಿಟ್ಟ. ತುಂಬು ಗರ್ಭಿಣಿಯಾದ ಅವಳು ಸ್ಥಳದಲ್ಲಿಯೇ ಲಿಬಿಲಿಬಿ ಒದ್ದಾಡಿ ಸತ್ತಳು. ವಿಷಯ ತಿಳಿದ ಗಾಜನಾಯಕ ಸ್ಥಳಕ್ಕೆ ಬಂದು ನೋಡಲಾಗಿ ಇಬ್ಬರಿಗೂ ಕಾಳಗ ಏರ್ಪಡುತ್ತದೆ. ಅನೇಕ ಸೈನಿಕರು ಹತರಾದರು. ಕಾದಾಟದಲ್ಲಿ ಸೆಣೆಸಾಡಿದ ಗಾಜನಾಯಕ ಮರಣ ಹೊಂದಿದ. ನಂತರ ದಡ್ಡಿಸೂರನಾಯಕನು ಹಿರೇಹಳ್ಳಿಗೆ ಓಡಿಹೋಗಿ ನೆಲಮಾಳಿಗೆಯಲ್ಲಿ ಐಕ್ಯನಾದನೆಂದು, ವಿರೋಧಿಗಳು ಕೊಂದರೆಂದು ಸಹಾ ತಿಳಿದುಬರುತ್ತದೆ. ಇಂಥ ಪ್ರಸಂಗಗಳು ಬೇಡರಲ್ಲಿ ನಡೆಯುವುದು ಅಸಹಜವೇನಲ್ಲ. ಅವನ ಸಮಾಧಿ ಹಿರೇಹಳ್ಳಿಯಲ್ಲಿದ್ದು, ದಡ್ಡಿಸೂರನಾಯಕ ದೇವಾಲಯವೆಂದು ಖ್ಯಾತಿಗೊಂಡಿವೆ. ಹಬ್ಬ, ಜಾತ್ರೆ, ಉತ್ಸವಗಳು ಇಲ್ಲಿ ಜರುಗುತ್ತವೆ.

ಗೌರಸಮುದ್ರ: ಇದನ್ನು ಸಹಾ ‘ಐವೋದಿ ಮಠ’ವೆಂದು ಬೊಮ್ಮನಾಯಕನ ಸಹೋದರಿ ಮಾರಮ್ಮನ ನೆಲೆ ಬೀಡೆಂದು ತಿಳಿಯಬಹುದಾಗಿದೆ. ಬೊಮ್ಮನಾಯಕನ ವಂಶಸ್ಥರಾದ ಮಾರವ ಬುಟ್ಟುಗೊಲರು ಇಲ್ಲಿನ ಬಹುಸಂಖ್ಯಾತರು. ಇಲ್ಲಿನ ಪ್ರಧಾನ ದೇವತೆ ಮಾರಮ್ಮ. ಪಕ್ಕದಲ್ಲಿ ಬೊಮ್ಮದೇವರ ಗುಡಿಯಿದೆ. ಆಕರ್ಷಕ ತಾಣಗಳಲ್ಲಿ ಇದು ಒಂದು.

ಮಾರಮ್ಮನ ಹಬ್ಬ ಪ್ರತಿವರ್ಷ ಆಗಸ್ಟ್ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯುವಾಗ ಮ್ಯಾಸನಾಯಕರೇ ಇಲ್ಲಿನ ಬಹುಸಂಖೈಆತ ಭಕ್ತಾದಿಗಳು. ರೂಢಿ – ಸಂಪ್ರದಾಯಗಳು ಇಲ್ಲಿ ತುಂಬಾ ವಿಶಿಷ್ಟವೆನಿಸಿವೆ. ಕೋಳಿ, ಕುರಿ, ಮೇಕೆಗಳನ್ನು ಬಲಿಕೊಡಲಾಗುತ್ತದೆ. ಜಾತ್ರೆಗೆ ನೆರೆಯ ಆಂಧ್ರದವರು ಬರುತ್ತಾರೆ. ಎತ್ತಿನಗಾಡಿಗಳೇ ಸಹಸ್ರಾರು ಸಂಖ್ಯೆಯಲ್ಲಿದ್ದು ಇತರ ಎಲ್ಲಾ ಬಗೆಯ ವಾಹನಗಳು ಬರುತ್ತವೆ. ಚಿತ್ರದುರ್ಗ ಜಿಲ್ಲೆಯಲ್ಲಿ ನಡೆಯುವ ಅತೀದೊಡ್ಡ ಜಾತ್ರೆಗಳ ಪೈಕಿ ಇದು ಪ್ರಮುಕವಾದುದು. ಜಾತ್ರೆ ಆಗುವುದು ಮಲಸಮುದ್ರ ತುಮ್ಮಲದಲ್ಲಿ. ಇಲ್ಲಿಗೆ ಸಮೀಪದ ಬುಕ್ಕಾಂಬುದಿ ಕರೆಯಿದ್ದು, ಇದರಂಗಳಲ್ಲಿ ಬೊಮ್ಮನಾಯಕನ ಸಮಾಧಿಯಿದೆ. ನಾನಾ ಜಾತಿಯ ಜನರು ಇಲ್ಲಿ ಪಾಲ್ಗೊಂಡು ವಿವಿಧ ಜವಾಬ್ದಾರಿಗಳನ್ನು ಹಂಚಿಕೊಳ್ಳುತ್ತಾರೆ. ತಮ್ಮ ಪೂರ್ವಜರ ಆರಾಧನೆಗಳು ಇದರೊಂದಿಗೆ ನಡೆಯುವುದು ಗಮನಾರ್ಹ. ಊರಮಾರಮ್ಮ, ಕೊಡದ ಗುಡ್ಡದ ಮಾರಮ್ಮ, ಗೌರಸಮುದ್ರದ ಮಾರಮ್ಮನೆಂದು ಕರೆಯಲಾಗುವ ದೇವತೆಗಳ ದೇವಾಲಯಗಳು ನಾಯಕರ ಹಟ್ಟಿಗಳಲ್ಲಿ ಹೆಚ್ಚಾಗಿವೆ.

ಗೌರಸಮುದ್ರದ ಮಾರಮ್ಮ

ಬಂಡಿಗಾಡಿಗಳ ಸಮುಚ್ಚಯ, ಗೌರಸಮುದ್ರ

 ಓಬಣ್ಣನಹಳ್ಳಿ: ಮೊಳಕಾಲ್ಮೂರು ತಾಲೂಕಿನ ಓಬಣ್ಣನಹಳ್ಳಿ ಚಾರಿತ್ರಿಕ ಮಹತ್ವ ಪಡೆದ ಗ್ರಾಮ. ನಾಯಕ ಜನಾಂಗದ, ಮೂಲಪುರುಷ, ಸಂಸ್ಕೃತಿ ನಿರ್ಮಾಪಕನಾದ ದಾರ್ಶನಿಕ ಪುರುಷ, ಯರಮಂಚಿ ನಾಯಕನ ನೆಲಸು ಪ್ರದೇಶವಿದು. ಇವನ ಸಮಾಧಿ, ವೀರಗಲ್ಲುಗಳು ಇಲ್ಲಿವೆ. ಇವನು ಸಂಸ್ಕೃತಿ ನಿರ್ಮಾಪಕನಾಗಿ ‘ಜಾತಿಯಿಲ್ಲದವರಿಗೆ ಜಾತಿ, ಧರ್ಮ ಇಲ್ಲದವರಿಗೆ ಧರ್ಮದ ದೀಕ್ಷೆಕೊಟ್ಟ’ ಗುರು ಎನ್ನಲಾಗಿದೆ. ನಾಯಕರ ಮಂದಲಾರು ಬೆಡಗಿನವರು ಇವನ ಅನುಯಾಯಿಗಳು. ಯರಮಂಚಿ ನಾಯಕ ಬೇಡರ ಸಂಸ್ಕೃತಿ ನಿರ್ಮಾಣದಲ್ಲಿ ನಿರ್ಣಾಯಕ ವ್ಯಕ್ತಿಯಾಗಿರುವನು. ಪೂಜಾರಿಗಳು, ೭ ಅಜ್ಜನೋರು, ೩ ಜನ ನಾಯಕರ ಪೈಕಿ ಇವನೇ ಶ್ರೇಷ್ಟ. ತನ್ನ ನಾಯಕತ್ವಲದಲಿ ಒಮ್ಮೆ ಬೋರುವನಿಗೆ ಪರವು ಮಾಡುವಾಗ ಇವನು ಬಂದು ತಡವಾದುದರಿಂದ ಎಲ್ಲಾ ಶುದ್ದ ಕಾರ್ಯಗಳನ್ನು ಬೇರೆಯವರು ಮಾಡಿ ಮುಗಿಸುತ್ತಾರೆ. ಕೊನೆಗೆ ಬಂದು ನೋಡಿ ಕೋಪೋದ್ರೇಕಗೊಂಡ ನಾಯಕ ತನ್ನ ಹೆತ್ತ ಮಗನನ್ನೇ ಕೊಂದು ದೇವರಿಗೆ (ಕಡಿದು) ಅರ್ಪಿಸಿದ ಮಹಾದಾನಿ ಹೀಗಾಗಿ ಅಂದಿಗೆ ಅಣ್ಣ ತಮ್ಮಂದಿರಲ್ಲಿ ಬಿರುಕುಬಂತು. ಬೇರೆ ಬೇರೆ ಪಂಗಡ, ದೇವರುಗಳನ್ನು ಪ್ರತ್ಯೇಕವಾಗಿ ಮಾಡಿಕೊಂಡರು. ಹರಿಜನ, ಲಿಂಗಾಯತರೆನ್ನದೆ ಎಲ್ಲರೊಂದಿಗೂ ಇವನು ಬಾಂಧವ್ಯ ಬೆಳೆಸಿ, ಸ್ವಗೋತ್ರದಲ್ಲೇ ವಿವಾಹಕಾರ್ಯ ನಡೆಯುತ್ತದೆಯೇ ಹೊರತು ನನ್ನ ಇನ್ನೊಂದು ಪಂಗಡದೊಡನೆ ರಾಜಿಮಾಡಿಕೊಳ್ಳುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದ.

ಯರಮಂಚಿನಾಯಕನ ವಂಶಸ್ಥರು ವಿಜಯನಗರದ ಕೊನೆ ಅವಧಿಯಲ್ಲಿ ಕಾಣಿಸಿಕೊಂಡು ಸಾಮಂತ ಅಧಿಖಾರಿಗಳಾಗಿದ್ದು, ಕಂಡುಬರುತ್ತದೆ. ಶಾಸನ, ವೀರಗಲ್ಲುಗಳು ಈ ಬಗ್ಗೆ ಸಾಕ್ಷಿಯಾಗಿವೆ. ಸಾಂಸ್ಕೃತಿಕವಾಗಿ ಆಂಧ್ರ – ಕರ್ನಾಟಕದಲ್ಲಿ ಇವನ ಆರಾಧನೆಯಿದ್ದು, ಹಬ್ಬಜಾತ್ರೆಗಳು ನಡೆಯುವುದುಂಟು. ಕಾತ್ರಿಕೆಹಟ್ಟಿಯಲ್ಲಿರುವ (ಕೂಡ್ಲಿಗಿ ತಾ) ಯರಮಂಚಯ್ಯನ ಕುಟುಂಬ ಈ ದೇವರ ಪೂಜಾರಿಗಳು, ಯರಮಂಚನಾಯಕನಿಗೆ, ಗುರುವಯ್ಯನೆಂದು ಕರೆದು ವಿಶಿಷ್ಟ ರೀತಿಯಲ್ಲಿ ಆರಾಧನೆ ಮಾಡುತ್ತಿದ್ದಾರೆ. ಗುಗ್ಗರಿಹಬ್ಬ, ದೀಪಾವಳಿ ಹಬ್ಬಗಳು ಪ್ರಮುಖವೆನಿಸಿವೆ.

ಗಲಗಲ್ಲು: ಗಾಜನಾಯಕನ ಕ್ಷೇತ್ರ

ಆಂಧ್ರಪ್ರದೇಶದ ಅನಂತಪುರ ಜಿಲ್ಲೆ, ರಾಯದುರ್ಗ ತಾಲೂಕಿನಲ್ಲಿರುವ ಸಣ್ಣಗ್ರಾಮ ‘ಗಲಗಲ್ಲು’ ಕರ್ನಾಟಕದ ಗಡಿಯೊಂದಿಗೆ ಅವಿನಾಭಾವ ಸಂಬಂಧಹೊಂದಿದ್ದು, ಚಾರಿತ್ರಿಕ ಸಂಗತಿಗಳೊಂದಿಗೆ ತಳಕು ಹಾಕಿಕೊಂಡಿವೆ. ಮದ್ರಾಸ್ ಅಧಿಪತ್ಯದಲ್ಲಿ ರಾಯದುರ್ಗ ಬಳ್ಳಾರಿ ಜಿಲ್ಲೆಯ ಒಂದು ತಾಲೂಕು ಕೇಂದ್ರವಾಗಿತ್ತು.

ದೇವಮ್ಮ ಕೊಡಗಲುಬೊಮ್ಮನ ತಂಗಿ (ಗಲಗಲ್ಲು)

ಇಲ್ಲಿನ ಪ್ರಧಾನ ದೇವತೆಗಳು ಗಾಜನಾಯಕ ಮತ್ತು ದೇವಮ್ಮ ಗಾಜನಾಯಕ ವಿಜಯ ನಗರೋತ್ತರದ ಸಾಮಂತ ಅರಸನಾಗಿದ್ದು, ಚಿತ್ರದುರ್ಗದ ಅಧೀನದಲ್ಲಿದ್ದ ಕೈಲಾಸಕೊಂಡ, ತಾಟಚೆರವು, ಗೊಲ್ಲಹಳ್ಳಿ, ರಂಗಸಮುದ್ರ, ಕೋನಸಾಗರ ಮೊದಲಾದ ಪ್ರದೇಶಗಳು ಇವನಿಗೆ ಸೇರಿದ್ದವು. ವೇದಾವತಿ ನದಿ ದಂಡೆಯ ಮೇಲಿರುವ ಈ ಗ್ರಾಮ ಚಾರಿತ್ರಿಕ ಮಹತ್ವ ಪಡೆದದ್ದು ಮಧ್ಯಕಾಲದಲ್ಲಿ.

 

ಗಲಗಂಟಿ ಗಾಜನಾಯಕ ಬೇಡರಿಗೆ ದೇವರ ಸಮಾನವಾದ ವ್ಯಕ್ತಿ. ಬೋಸೆ ದೇವರ ಸಂಬಂಧಿ ಈ ಗಾಜನಾಯಕ. ಇವನ ರಾಜ್ಯಾಳ್ವಿಕೆ ಅಷ್ಟೊಂದು ವಿಸ್ತಾರಗೊಂಡತಿಲ್ಲ. ಪಶುಪಾಲಕರ ದೊರೆ ದಡ್ಡಿಸೂರನಾಯಕ ಮತ್ತು ಇವರನಿಗೆ ಕಾಳಗ ನಡೆದದ್ದು ಈ ಹಿಂದೆ ತಿಳಿಸಲಾಗಿದೆ. ಇವರ ಹೆಂಡತಿ ಬಗ್ಗೆ ‘ಲಂಜಿ ಕಣಿವೆ’ ಎಂಬ ಪ್ರದೇಶ ಇಂದಿಗೂ ಇದೆ. ಗಾಜನಾಯಕನ ಅಡಳಿತ ಪ್ರದೇಶ ಗುಡ್ಡ, ಬೆಟ್ಟ, ಅರಣ್ಯದಿಂದ ಕೂಡಿದ್ದಿತು. ೧೮ನೇ ಶತಮಾನದ ಮದ್ದುಗುಂಡುಗಳನ್ನು ತಯಾರಿಸುವ ಘಟಕವೊಂದು ಇಲ್ಲಿತ್ತು. ಬಹುಶಃ ಹೈದರ್ ಟಿಪ್ಪುಗಳ ಆಕ್ರಮಣ ತಡೆಯಲು ಚಿತ್ರದುರ್ಗದ ಅರಸರು ಇವನ ನೆರವಿನೊಂದಿಗೆ ಇಲ್ಲಿ ಮದ್ದು ತಯಾರಿಸುತ್ತಿದ್ದಿರಬೇಕು. 

ದೇವಮ್ಮನ ಗುಡಿ, ಗಲಗಲ್ಲು

ಗಾಜನಾಯಕನ ಆಡಳಿತ ಪ್ರದೇಶದಲ್ಲಿ ಬೇಡರ ಸಂಖ್ಯೆ ವ್ಯಾಪಕವಾಗಿದ್ದಿತು. ತಿರುಪತಿಗೆ ಹೋಗುವುದು ಕಷ್ಟವೆಂದು ತಿರುಪತಿ ದೇವಾಲಯವನ್ನು ಸಾಂಕೇತಿಕವಾಗಿ ಇಲ್ಲಿ ಕಟ್ಟಿಸಲಾಗಿದೆ. ಸತ್ತ ಕೋತಿಗೂ ಕೂಡ ಶಾಸನ (೧೯೯೧) (ಮಂಗ) ಹಾಕಿರುವ ‘ಕುತೂಹಲ ಘಟನೆ’ ಇಲ್ಲಿ ಕಾಣಬಹುದಾಗಿದೆ. ಗಾಜನಾಯಕ ಟಿಪ್ಪುಸುಲ್ತಾನ್‌ನೊಂದಿಗೆ ಹೋರಾಡಿ ಮಡಿದನೆಂದು ಹೇಳುವುದುಂಟು (ದಡ್ಡಿ ಸೂರನಾಯಕನೊಂದಿಗೆ?) ಇಲ್ಲಿರುವ ಅಡಗುಪ್ಪ, ಊರುಕೊಂಡ (ಊರಿನ ಗುಡ್ಡ) ಹತ್ತಿರ ಮದ್ದುಗುಂಡು ತಯಾರಿಸುವ ಘಟಕ, ಯುದ್ಧದ ಆಯುಧಗಳು, ಇತರ ಸಲಕರಣೆಗಳನ್ನು ಕಂದಕದಲ್ಲಿಟ್ಟಿರುವುದನ್ನು ನೋಡಬಹುದಾಗಿದೆ. ಹೀಗೆ ವಿರೋಧಗಳೊಂದಿಗೆ ಕಾಳಗದಲ್ಲಿ ಹೋರಾಡಿ ಮಡಿದ ಬಗ್ಗೆ ಮೂರು ನಾಲ್ಕು ವೀರಗಲ್ಲುಗಳು ಸಾಬೀತು ಪಡಿಸುತ್ತವೆ. ನಾಯಕ ಜನಾಂಗದ ‘ಹಚ್ಚೆವಳ್ಳೆರು’ ಬೆಡಗಿನವರು ಈ ದೇವರನ್ನು ಆರಾಧಿಸುತ್ತಾರೆ.

.. ಆಧುನಿಕ ಆರಾಧನಾ ಕ್ಷೇತ್ರಗಳು

ಕಪ್ಪಡ ಬಂಡಹಟ್ಟಿ: ಮೊಳಕಾಲ್ಮೂರು ತಾಲೂಕಿನಲ್ಲಿರುವ ಸಾಮಾನ್ಯ ಸಮಾಧಿಕ್ಷೇತ್ರ, ನೇರ‍್ಲಹಳ್ಳಿ ಕೋನಸಾಗರದ ಮಧ್ಯೆ ಇರುವ ಕಪ್ಪಡಬಂಡಹಟ್ಟಿಯಲ್ಲಿ ಇಪ್ಪತ್ತನೇಯ ಶತಮಾನದ ಯರಮಂಚಯ್ಯನ ಮಗ ‘ಪೆದ್ದಯ್ಯ’ನೆಂಬ ವೀರನ ವೀರಗಲ್ಲಿದೆ. ಇದರ ವಿವರವೆಂದರೆ: ಚಿರತೆಯೊಡನೆ ಹೋರಾಡಿ ಸಮಾಧಿಯಾದ ಪೆದ್ದಯ್ಯನ ಸ್ಮಾರಕ ಇಂದು ಆರಾಧನಾ ದೇವತೆಯಾಗಿದೆ. ಪೂರ್ವಜರ ಪ್ರತೀಕವೆಂಬಂತೆ ‘ಕರಿನಾರು’ ಬೆಡಗಿನವರು ಇದಕ್ಕೆ ಹಬ್ಬ, ಆಚರಣೆಗಳನ್ನು ಮಾಡುತ್ತಿರುವರು. ನಾಲ್ಕು ಬಂಡೆಗಳ ನಡುವೆ ವೀರಗಲ್ಲಿದ್ದು, ಕಾಯಿ, ಹಣ್ಣು, ಎಡೆಯನ್ನು ನೈವೇದ್ಯೆ ಮಾಡಲಾಗುತ್ತದೆ. ಮ್ಯಾಸನಾಯಕರ ಮಂದಲಗೋತ್ರದ ‘ಕರಿನಾರು’ ಬೆಡಗಿನವರು ಪೂಜಿಸುತ್ತಿರುವ ಈ ವೀರಗಲ್ಲಿನ ಕಥೆಯನ್ನು ಕುರಿಮಂದೆಗೆ ಧಾಳಿ ಮಾಡಿದ ಚಿರತೆಯನ್ನು ಕೊಂದದ್ದು, ಕೋನಸಾಗರ ಗುಡ್ಡದಲ್ಲಿ ಈ ಘಟನೆ ಜರುಗಿದೆ. ಈ ಪ್ರದೇಶ ಅಷ್ಟೇ ಮಹತ್ವವಾಗಿದ್ದು, ಇಲ್ಲಿರುವ ಬೆಟ್ಟಕ್ಕೂ ಪೂಜಿಸುವುದುಂಟು. ಇಲ್ಲಿಗೆ ಸಮೀಪದ ತಿಪ್ಪೇರುದ್ರಸ್ವಾಮಿ ಬಿಳಿನೀರು ಚಿಲುಮೆ ಇದೆ.

ಕೈಲಾಸಕೊಂಡ ಪರ್ವತ ಪ್ರದೇಶ, ಮೊಳಕಾಲ್ಮುರು

ಹೀಗೆ ನಲುಜೆರುವಯ್ಯನೆಂಬ ವೀರನ ರುದ್ರಮ್ಮಹಳ್ಳಿ; ಗೋನೂರು, ನನ್ನಿವಾಳ ಮೊದಲಾದ ಸ್ಥಳಗಳಲಿ ಇತರೆ ವೀರರ ಆರಾಧನಾಕ್ಷೇತ್ರಗಳಿವೆ. ವೀರರ ಹೆಸರಿನಲ್ಲಿರುವ ಕೆಲವು ದೇವಾಲಯಗಳು ಇಂತಿವೆ: ಪಚ್ಚಿಪದಿ ದೊಡ್ಡ ತಿರುಮಲ ದೇವರು – ಬೇಡರೆಡ್ಡಿಹಳ್ಳಿ (ಚಳ್ಳಕೆರೆ ತಾ) ದಡ್ಲುಮಾರಮ್ಮ – ದೇವರಹಳ್ಳಿ (ನಾಯಕನಹಟ್ಟಿ – ಚಳ್ಳಕೆರೆ ತಾ), ಸ್ಥಳೀಯ ದೇವತೆ ಒಡ್ನಳ್ಳಿ ಮಾರಮ್ಮ – ನಾಯಕನಹಟ್ಟಿ, ಚಿಂತಗುಟ್ಲು ಬೋರೇ ದೇವರು – ಕುದಾಪುರ, (ಚಳ್ಳಕೆರೆ ತಾ) ಮಂದಬೊಮ್ಮದೇವರು – ದೊಣಮಂಡಲಹಟ್ಟಿ (ಚಳ್ಳಕೆರೆ ತಾ) ಮಂಗಪೋಟಿ ಓಬಳ ದೇವರು ಮತ್ತು ನಲ್ಲ ಚೆರುವು ಓಬಳದೇವರು – ರುದ್ರಮ್ಮನಹಳ್ಳಿ (ಚಳ್ಳಕೆರೆ ತಾ) ಮಲ್ಲಿನಾಯಕ ಬೊಮ್ಮದೇವರು – ವರವು (ಚಳ್ಳಕೆರೆ ತಾ) ಬಂಗಾರು ದೇವರು ನನ್ನಿವಾಳ ಚಳ್ಳಕೆರೆ ಬೋಸೆದೇವರು – ಬೋಸೆದೇವರಹಟ್ಟಿ (ಚಳ್ಳಕೆರೆ ತಾ) ಮಾಕನಡಕು ಓಬಳದೇವರು – (ಕೂಡ್ಲಿಗಿ – ತಾ), ನಲಗೇತಲಹಟ್ಟಿ, ಚನ್ನಕೇಶವ ಮತ್ತು ಚಿತ್ರದೇವರುಗಳನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದಾಗಿದೆ. ಚಳ್ಳಕೆರೆ ಕಾಟಪ್ಪನಹಟ್ಟಿಯ ಕಾಟಮುಲಿಂಗೇಶ್ವರ, ವೇದಾವತಿ ನದಿ ದಂಡೆಯ ಮೇಲಿರುವ ಜುಂಜುರುಗುಂಟೆ, ಬುಕ್ಕಾಂಬುಧಿ, ಸೆಟ್ಟೂರು, ಸಿರವಾಳ, ಪಾವಗಡ, ನೀಡಗಲ್ಲು ಮೊದಲಾದ ಸ್ಥಳಗಳಲ್ಲಿ ವೀರರ ಆರಾಧನೆ ಕಂಡುಬರುತ್ತದೆ.

ಒಟ್ಟಾರೆ ಹೇಳುವುದಾದರೆ, ಪ್ರಾಚೀನ ಪರಂಪರೆ ಪಡೆದ ಬೇಡ ಜನಾಂಗ ತನ್ನನ್ನು ಅರ್ಪಿಸಿಕೊಂಡಿರುವ ಹಲವು ಕ್ಷೇತ್ರಗಳಲ್ಲಿ ‘ಧಾರ್ಮಿಕಕ್ಷೇತ್ರ’ ಮಹತ್ವದ್ದು. ತಮ್ಮ ಸಂಸ್ಕೃತಿಯ ನಿರ್ಮಾಣಕ್ಕಾಗಿ ತಮ್ಮ ಪ್ರಾಣವನ್ನೇ ಮುಡುಪಾಗಿಡುವುದು ಗಮನಾರ್ಹ. ಸ್ಥಳೀಯ ಮತ್ತು ಪ್ರಾದೇಶಿಕ ನೆಲೆಗಳಲ್ಲಿ ಇಂಥ ಕ್ಷೇತ್ರಗಳು ಜನಮನ್ನಣೆ ಪಡೆದರೂ, ಚಾರಿತ್ರಿಕ ಮಹತ್ವ ಕಳೆದುಕೊಂಡಿವೆ. ಕೇವಲ ಜನಪದ ಕಥೆಗಳಲ್ಲಿಯೇ ರಂಜನೀಯಗೊಳ್ಳುತ್ತಿರುವುದು ವಿಪರ್ಯಾಸ. ಈ ಹಿನ್ನೆಲೆಯಲ್ಲಿ ಬೇಡನಾಯಕ ವೀರರು ಕನ್ನಡನಾಡು, ನುಡಿ, ಸಂಸ್ಕೃತಿಗೆ ತಮ್ಮ ಅನುಪಮ ಸೇವೆ, ಕಾಣಿಕೆ ಮೂಲಕ ಬಲಿದಾನವಾಗಿರುವುದು ಚಿರಸ್ಮರಣೆ ಸಂಗತಿ ಎನ್ನಬೇಕು. ಇಂಥ ವೀರರ ನೆಲೆಗಳು ಕ್ಷೇತ್ರಗಳಾಗಿ, ಸಮಾಧಿಗಳು ದೇವಾಲಯಗಳಾಗಿವೆ. ವಿವಿದ ಬಗೆಯಲ್ಲಿ ಬೇಡರಿಗೆ ಪವಿತ್ರ ಕ್ಷೇತ್ರಗಳಾಗಿರುವುದು, ಚಾರಿತ್ರಿಕ ಮಹತ್ವ ದೊರೆತಿರುವುದು ಗಮನಾರ್ಹ.

* * *


[1] ನೋಡಿ : ವಿರೂಪಾಕ್ಷಿ ಪೂಜಾರಹಳ್ಳಿ : ಗಾದರಿಪಾಲನಾಯಕ, ೧೯೯೯

[2] ಚಿತ್ರದುರ್ಗ ಜಿಲ್ಲೆಯಲ್ಲಿ ಎರಡು -ಮೂರು ಸ್ಥಳಗಳಿಗೆ ’ವಲಸೆ’ ಎಂಬ ಹೆಸರುಗಳಿವೆ