.೧೧ಮರೆಯಾದಇತರವೀರರು

ಮೌಖಿಕ ಸಾಹಿತ್ಯದಲ್ಲಿಯೂ ಅಸ್ಪಷ್ಟ ಕುರುಹುಗಳಿರುವ ಕೆಲ ವೀರರು ಕಂಡು ಬರುತ್ತಾರೆ. ಇವರ ಬಗ್ಗೆ ಲಿಖಿತ ವಿವರಗಳಿಲ್ಲ. ಮತ್ತು ಮೌಖಿಕ ಪರಂಪರೆಯು ಸ್ಪಷ್ಟ ಪಡಿಸುವುದಿಲ್ಲ. ಅಪೂರ್ಣ ಮಾಹಿತಿಗಳಿಂದ ಅಲಕ್ಷೆಗೊಳಗಾದವರ ಪ್ರಸಂಗಗಳನ್ನು ಇಲ್ಲಿ ಸಮೀಕ್ಷಿಸುವುದು ಉಚಿತ. ಕಾಲಗರ್ಭದಲ್ಲಿ ಇವರು ಮರೆಯಾಗುವುದನ್ನು ಸ್ಮರಿಸುವಂತ ಕೆಲಸವು ನಡೆಯಬೇಕಾಗಿದೆ.

ಇಲ್ಲಿ ಗ್ರಾಮ, ಹಳ್ಳಿ, ಹಟ್ಟಿಯ ಮೂಲಕ ವೀರನಾಗುವುದು, ವೀರನಾಗಿ ಆ ಹಳ್ಳಿಯನ್ನು ಅಭಿವೃದ್ಧಿ ಪಡಿಸುವುದು ಒಂದಕ್ಕೊಂದು ಸಹ ಸಂಬಂಧವಿದೆ. ಚಳ್ಳಕೆರೆ ಪಟ್ಟಣಕ್ಕೆ ಸೇರಿರುವ ಕಾಟಪ್ಪನಹಟ್ಟಿ ಒಂದು ಧಾರ್ಮಿಕ ನೆಲೆ. ಇಲ್ಲಿ ಕಾಟಪ್ಪನಾಯಕನ ದೇವಾಲಯವಿದೆ. ಈ ಕಾಟಪ್ಪ ಕಿರುಪಾಳೆಯಗಾರನೆಂತಲೂ, ಬುಡಕಟ್ಟು ವೀರನೆಂತಲೂ ತಿಳಿಸುತ್ತಾರೆ. ಆದರೆ ಪಾಳೆಯಗಾರರ ಅವಧಿಯಲ್ಲಿ ’ಕಾಟನಾಯಕ’ ಎಂಬುವನು ಜಗಳೂರುಹತ್ತಿರ ಕಣಕುಪ್ಪೆ ಆಡಳಿತವನ್ನು ನೋಡಿಕೊಳ್ಳುತ್ತಿದ್ದ. ಚಿತ್ರದುರ್ಗದ ಅರಸ ಕಾಟಪ್ಪನಾಯಕನಿದ್ದನೆಂದು ತಿಳಿದುಬರುತ್ತದೆ. ಇಲ್ಲಿ ನಾಯಕ ಅರಸರ ವಂಶಸ್ಥರು ನೆಲೆಸಿದ್ದಾರೆ. ಈ ದೇವರ ಯಜಮಾನ ನಾರಾಯಣಪ್ಪ ಈ ಬಗ್ಗೆ ಮಾಹಿತಿ ಕೊಡುತ್ತಾರೆ. ಹೆಣ್ಣಿನ ಹೆಸರಿನಲ್ಲಿ ಆರಾಧನೆಯಿದೆ. ಕಾಟಮದೇವರ ಕೋಟೆ ಎಂಬುದು ವೇದಾವತಿ ನದಿ ಹತ್ತಿರವಿದೆ. ಇಲ್ಲಿ ಮ್ಯಾಸನಾಯಕ ಕುಲದೇವತೆ ಕಾಟಮ್ಮ ನೆಲೆಸಿರುವಳು.

ಚಲಿಮಿನಾಯಕ ಎಂಬುವನು ಹರತಿ ವಂಶದ ಅರಸ. ಇವನು ಹಿರಿಯೂರು – ಚಳ್ಳಕೆರೆ ತಾಲ್ಲೂಕುಗಳ ಮಧ್ಯದ ಭೂಭಾಗವನ್ನು ಆಳಿದ ಕಾರಣಕ್ಕಾಗಿ ಇವನ ಹೆಸರಲ್ಲಿ ಗುಡಿಯನ್ನು ಕಟ್ಟಿಸಲಾಗಿದೆ. ಹೀಗೆ ಚಿತ್ರನಾಯಕ ಎಂಬ ವ್ಯಕ್ತಿ ಚಳ್ಳಕೆರೆ ತಾಲೂಕು ತಳಕು ಹೋಬಳಿಗೆ ಸೇರಿದ ಒಂದು ಗ್ರಾಮ ಚಿತ್ರಯ್ಯನಹಟ್ಟಿಯಲ್ಲಿ ನೆಲೆಸಿದ್ದ. ಇದು ವೇದಾವತಿ ನದಿ ದಂಡೆಯ ಮೇಲಿದೆ. ಚಿತ್ರನಾಯಕನ ಅನುಯಾಯಿಗಳಿದ್ದು, ಇವನು ಚಿತ್ರದುರ್ಗದ ಅರಸನೆಂದು, ಬುಡಕಟ್ಟು ದೈವವೆಂದು ಆರಾಧಿಸಲಾಗುವುದು. ಚೆನ್ನಮ್ಮನಾಗತಿಹಳ್ಳಿ, ಕಲ್ಲವ್ವನಾಗತಿಹಳ್ಳಿಗಳು ಇಲ್ಲಿನ ನಾಯಕ ವೀರವನಿತೆಯರ ಸಾಹಸವನ್ನು ಸಂಕೇತಿಸುತ್ತವೆ.

ಚಳ್ಳಕೆರೆ ತಾಲೂಕಿನಲ್ಲಿ ಕಾಲುವೆಹಳ್ಳಿ ಎಂಬ ಗ್ರಾಮವಿದೆ. ಇಲ್ಲಿ ಯಾವುದೊ ಕಾಲಘಟ್ಟದಲ್ಲಿ ನಡೆದ ಘಟನೆಯನ್ನು ಮೆಲುಕು ಹಾಕುವರು. ’ಜಾಜೂರಿನ ಸಮೀಪದ ನಾಯಕರ ಮತಕ್ಕೆ ಸೇರಿದ ಗಂಗಾಸಾಸಿಯ ಮುಲುಕುಮೋಟು ಮುಚ್ಚುಲೋರು ಒಂದು ಕಡೆ, ಮತ್ತೊಂದು ಕೊಂಡಲದವರಿಗೂ ಹೆಣ್ಣಿನ ಸಲುವಾಗಿ ಜಗಳವಾಗಿ ಗಡಿ ವ್ಯವಹಾರಗಳು ನಡೆದು, ಸಜ್ಜೆ ಮುತ್ತೆ ಎನ್ನುವ ಹಿರಿಯರು ದುರ್ಗದಲ್ಲಿ ದಪೆದಾರಿಕೆ ಕೆಲಸದಲ್ಲಿದ್ದು, ದುರ್ಗಕ್ಕೆ ಹೋದಾಗ, ಅವನ ಆರು ಜನ ತಮ್ಮಂದಿರು ಕಾಲುವೆಹಳ್ಳಿ ಕಂಚುಗಾರ ಕುಟಪ್ಪನ ಭೂಮಿಯಲ್ಲೆ ನಿಂತರು. ಗೋಸಿ ಕೆರೆಯ ತುರಕನೊಬ್ಬ ಕಾಲುವೆಹಳ್ಳಿ ಕಾಟಪ್ಪನ ಮಗಳನ್ನು ಕೊಟ್ಟು ಲಗ್ನ ಮಾಡೆಂದು ದಂಡುಕಟ್ಟಿ ಬಂದು ನಿಂತಾಗ, ತುರಕವನಿಗೆ ಹೆಣ್ಣು ಹೇಗೆ ಕೊಡಲಿ? ಅವನ ತಲೆ ಕಡಿದು ಬನ್ನಿ, ನಿಮಗೆ ಗುಡಿಹಳ್ಳಿ, ಕ್ಯಾತನಹಳ್ಳಿ, ಉಳ್ಳಾರ್ಥಿ, ಕಾಲುವೆಹಳ್ಳಿ ಮುಂತಾದ ಏಳು ಹಳ್ಳಿಗಳನ್ನು ಇನಾಮು ಕೊಡುತ್ತೇನೆಂದು, ಕಾಟಪ್ಪ ಈ ಅಣ್ಣ ತಮ್ಮಂದಿರಿಗೆ ಸಹಾಯ ಕೇಳಿದ. ಅವರು ತುರುಕನ ತಲೆ ಕಡಿದು ಬಂದರು. ಕಾಟಪ್ಪ ಮಾತಿನಂತೆ ಇನಾಂ ಕೊಟ್ಟ. ಅಲ್ಲಿಂದ ಇಲ್ಲಿ ನಾಯಕರು ನೆಲೆಯಾಗಿ ನಿಂತರೆಂದು ದಪೇದಾರ ಬಸಪ್ಪನ ವಂಶಾವಳಿಯಿಂದ ತಿಳಿದುಬರುತ್ತದೆ.

[1]

ಚಳ್ಳಕೆರೆ ತಾಲೂಕಿನಲ್ಲಿ ಕೋಟೆಕೆರೆ ಎಂಬ ಗ್ರಾಮವಿದೆ. ಇಲ್ಲಿ ಕೋಟೆಗೆರೆ ವಂಶದ ನಾಯಕರು ಆಳಿದ ಕುರುಹುಗಳಿವೆ. ಅಬ್ಬೆಯನಾಯಕ, ಆದೆಯ್ಯ ನಾಯಕ, ಕೋಟೆಯ್ಯ ನಾಯಕ ಎಂಬ ಅಣ್ಣತಮ್ಮಂದಿರು ಪ್ರಸಿದ್ಧ ಅರಸರೆನಿಸಿಕೊಂಡಿದ್ದರು. ಇವರ ಮೂಲಪುರುಷ ಅಜ್ಜೆಯನಾಯಕ. ಕೋಟೆಯನಾಯ್ಕನ ಮಗ ಮಲ್ಲೆಯನಾಯ್ಕನು ೧೪ನೇ ಶತಮಾನದಲ್ಲಿ ಆಳುತ್ತಿದ್ದನೆಂದು ಶಾಸನ (ಚಳ್ಳಕೆರೆ) ದಲ್ಲಿ ಉಲ್ಲೇಖಿಸಲಾಗಿದೆ.

ಇದೇ ತಾಲೂಕಿನ ಕುದಾಪುರ ಎಂಬ ಧಾರ್ಮಿಕ ನೆಲೆ ಚಳ್ಳಕೆರೆ ನಾಯಕನಹಟ್ಟಿ ರಸ್ತೆ ಮಧ್ಯದಲ್ಲಿ ಬರುತ್ತದೆ. ನಾಯಕನಹಟ್ಟಿ ಪಾಳೆಯಗಾರ ಬೋಡಿಮಲ್ಲಪ್ಪನಾಯಕ ಈ ಗ್ರಾಮವನ್ನು ಸ್ಥಾಪಿಸಿದನು.[2] ‘ಖುದಾಪುರ’ವೆಂದು ಮುಸ್ಲಿಂರು ಅಲ್ಲಾನನ್ನು ಸ್ಮರಿಸಿ ಹೀಗೆ ಕರೆಯುತ್ತಾರೆಂದು ಹೇಳಲಾಗುತ್ತದೆ. ಮ್ಯಾಸನಾಯಕರ ಆರಾಧನಾ ಕೇಂದ್ರ. ಎಲ್ಲರೂ ಕೂಡಿ ಹಬ್ಬ – ಆಚರಣೆ, ಜಾತ್ರೆಗಳನ್ನು ಮಾಡುವ ನೆಲೆ. ಹಿಂದೊಮ್ಮೆ ಈ ಬೋರೆದೇವರ ಸನ್ನಿಧಿಯಲ್ಲಿ ವ್ಯಾಸೆ ಕೊಯ್ಯುವ ಪದ್ಧತಿ ಚಾಲ್ತಿಯಲ್ಲಿತ್ತು. ಯರಮಂಚಿನಾಯಕನದು ಕೆಂಪು ಬಣ್ಣದ ಹೋತ, ಕಾಕಳಮಾರನದು (ಕು) ಕರಿ ಹೋತು. ಇವರಿಬ್ಬರೂ ಅಣ್ಣ – ತಮ್ಮಂದಿರು. ಒಮ್ಮೆ ಬಲಿಕೊಡುವಾಗ ಅಣ್ಣ ಬರುವುದು ತಡವಾಯಿತೆಂದು ಕಾಕಳನಾಯಕ ಬಲಿಕಾರ್ಯ ಮುಗಿಸಿಬಿಟ್ಟ. ಅವಮಾನಗೊಂಡ ಯರಮಂಚನಾಯಕ ೭ ಸಾರಿ ಬಲಿಕೊಟ್ಟರೂ ಕೆಂಪು ಕುರಿ ಬದುಕಿಬರುತ್ತಿತ್ತು. ಕಾಯಿ ಒಡೆದರೆ ಕಾಯಿ ಕೂಡಿಕೊಳ್ಳುತ್ತಿತ್ತು. ಇದರಿಂದ ಖುದಾಪುರದ ಬೋರೆದೇವರ ಮೊದಲ ಮೀಸಲು ಪೂಜೆ ಯರಮಂಚನ ವಂಶಸ್ಥರಿಗೆ ಸಲ್ಲಬೇಕೆಂದು ತೀರ್ಮಾನವಾಯಿತು.

ನೇರ‍್ಲಗುಂಟೆ ಬಂಗಾರುದೇವರು

ಗುಡಿಹಳ್ಳಿ ಎಂಬುದು ಮ್ಯಾಸಬೇಡರ ಸಾಂಸ್ಕೃತಿಕ ಕೇಂದ್ರ. ಓಬಳ ದೇವರು ಮತ್ತು ರಂಗನಾಥ ಗುಡಿಗಳು ಇಲ್ಲಿವೆ. ೭ ಜನ ಅಣ್ಣತಮ್ಮಂದಿರು ಇಲ್ಲಿದ್ದ ಪ್ರತೀತಿಗಳಿವೆ. ಅವರೆಂದರೆ ಬೂತಿಮುತ್ತೆ, ಸೀತಮುತ್ತೆ, ಎರಗುಂಟಮುತ್ತೆ, ಧಗಮುತ್ತೆ, ಕುರಿಮುತ್ತೆ ಮತ್ತು ಏಳಂದೆ ಮುತ್ತೆ, ಇವರೆಲ್ಲರೂ ಮಹಾಸಾಧ್ವಿ, ಸವ್ಯಸಾಚಿ ವೀರರು ಆಗಿದ್ದರು.

ಬಂಜಗೆರೆ ಓಬಳದೇವರು ತುಂಬಾ ಪ್ರಸಿದ್ಧಿ. ಇದರಂತೆ ಗೋಸಿಕೆರೆಯೂ ಇದೆ. ಇದು ತಿಮ್ಮಣ್ಣನಾಯಕನ ಕೋಟೆ ಎಂಬ ಗ್ರಾಮದ ಹತ್ತಿರ ಬರುತ್ತದೆ. ಪಕ್ಕದಲ್ಲಿ ವೇದಾವತಿ ನದಿ ಹರಿಯುತ್ತಿದ್ದು, ಅನೇಕ ಪ್ರಾಚ್ಯಾವಶೇಷಗಳ ಆವಾಸ ಕೇಂದ್ರವು ಆಗಿದೆ ಈ ಗೋಸಿಕೆರೆ. ತಿಮ್ಮಣ್ಣನಾಯಕನೆಂಬುವರು ಕ್ರಿ.ಶ.೧೫೦೬ – ೧೫೨೯ ರಲ್ಲಿ ವಿಜಯನಗರದವರ ಅಧೀನದಲ್ಲಿ ಆಳುತ್ತಿದ್ದ. ಅವನ ಪ್ರದೇಶವೇ ಚಿತ್ರದುರ್ಗ ಜಿಲ್ಲೆಯ ಪೂರ್ವಭಾಗವಾಗಿತ್ತು. ಉಳ್ಳಾರ್ಥಿ, ಘಟಪರ್ತಿ, ನನ್ನಿವಾಳ ಮೊದಲಾದವು ಸಾಂಸ್ಕೃತಿಕ ಕೇಂದ್ರಗಳಾಗಿವೆ. ಚಳ್ಳಕೆರೆಗೆ ಪ್ರಾಚೀನ ಕಾಲದಲ್ಲಿ ಓರಗಲ್ಲು ಪಟ್ಟಣವೆಂದು ಹೆಸರಿತ್ತು. ಇದು ಮಲ್ಲಿಕಾಫರನ ದಂಡೆಯಾತ್ರೆಗೆ ತುತ್ತಾಗಿ ನಾಶಗೊಂಡು ಚಳ್ಳಕೆರೆ ಎಂದಾಯಿತಂತೆ. ಎಲ್ಲಿ ಮ್ಯಾಸನಾಯಕರ ವೀರರು ಬದುಕಿ ಬಾಳಿದ್ದುಂಟು. ದೊಡ್ಡೇರಿಯು ಒಂದು ಚಾರಿತ್ರಿಕ ಸ್ಥಳ. ಇಲ್ಲಿ ಪಾಳೆಯಗಾರರು ಆಳ್ವಿಕೆ ನಡೆಸುತ್ತಿದ್ದಾಗ ತಿಪ್ಪಳ್ಳನಾಯ್ಕ ಎಂಬುವನು ವಿಜಯನಗರದ ಕೃಷ್ಣದೇವರಾಯನ ಆಧೀನದಲ್ಲಿ ಆಳುತ್ತಿದ್ದ. ದೊಡ್ಡ ಉಳ್ಳಾರ್ಥಿಯಲ್ಲಿ ನೊಳಂಬರ ಕಾಲದ ಅವಶೇಷಗಳಿವೆ. 

ಕಾಮಗೇತನಹಳ್ಳಿ ಸೂರಪ್ಪನಾಯಕ

ಪರಶುರಾಂಪುರದಲ್ಲಿ – ಅಬ್ಬೆನಾಯಕ, ಸೂರನಹಳ್ಳಿ – ಸೂರಪ್ಪ, ಹೊಟ್ಟೆಪ್ಪನಹಳ್ಳಿ – ಹೊಟ್ಟೆಪ್ಪನಾಯ್ಕ (ನಹಳ್ಳಿ), ಕಾಟನಾಯಕನಹಳ್ಳಿ – ಕಾಟನಾಯಕ, ಬೊಮ್ಮಗೊಂಡನಕೆರೆ – ಬೊಮ್ಮನಾಯಕ (ಬೊಮ್ಮದೇವರಹಳ್ಳಿ = ಬೊಮ್ಮಲಿಂಗನಹಳ್ಳಿ, ಕಣಕುಪ್ಪೆ – ಕೊಮರಪ್ಪನಾಯಕ (ಜಗಳೂರು), ನೇತ್ರಯ್ಯನಹಳ್ಳಿ – ನೇತ್ರಯ್ಯ, ಜುಂಜುರುಗುಂಟೆ – ಗಾದರಿಪಾಲಯ್ಯ, ಜಂಪಣ್ಣನಾಯ್ಕನ ಕೋಟೆ – ಜಂಪಳ್ಳಿನಾಯಕ, ಮೊದಲಾದ ಸ್ಥಳಗಳಲ್ಲಿ ಸ್ಥಳೀಯ ನಾಯಕರು ಕಂಡುಬರುತ್ತಾರೆ. ಜಗಳೂರು ತಾಲೂಕಿನ ದೊಡ್ಡ ಬೊಮ್ಮನಹಳ್ಳಿಯಲ್ಲಿ ನಾಯಕ ಜನಾಂಗವಿದೆ. ಅಣಬೂರಿನ ವೀರನೊಬ್ಬ ಕಣಕುಪ್ಪೆಕೋಟೆ ಕಟ್ಟುವಾಗ ಹಿರೇಬೊಮ್ಮಯ್ಯ ಎನ್ನುವ ಗುರಿಕಾರ ತನ್ನ ೫೦ ಮಂದಿ ಸೈನಿಕರೊಂದಿಗೆ ಈ ಗ್ರಾಮವನ್ನು ಸ್ಥಾಪಿಸಿದ.

ಪಾಪದೇವರಹಳ್ಳಿ – ಪಾಪೇದೇವರು, ಬಿಳಿಚೋಡು – ಎರ‍್ರಕೃಷ್ಣಪ್ಪನಾಯಕ, ಪಾಲವ್ವನಹಳ್ಳಿ – ಪಾಲನಾಯಕ, ಐಮಂಗಲ – ಬೊಮ್ಮನಾಯಕ, ಹೀಗೆ ಆಯಾ ಸ್ಥಳಗಳ ಬಗ್ಗೆ ಸ್ಥಳೀಯ ನಾಯಕರು ಖ್ಯಾತಿಪಡೆದಿರುವುದು ಗಮನಾರ್ಹ.

ಮಧ್ಯಕರ್ನಾಟಕವನ್ನು ಅಥವಾ ಆನೆಗುಂದಿಯಿಂದ ಮೈಸೂರಿನವರೆಗೆ ’ಬೇಡರನಾಡು’ ಎಂದು ಕರೆಯುತ್ತಿದ್ದರು. ಇಂದು ತೀರಾ ಸಂಕುಚಿತಗೊಂಡು ತುಂಗಭದ್ರಾ – ವೇದಾವತಿ ನದಿಗಳ ಮಧ್ಯದ ಪ್ರದೇಶಕ್ಕೆ ಬೇಡರನಾಡೆಂದು ಕರೆಯುವರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ್ತು ಪ್ರತಿಯೊಂದು ಜಾತಿಯವರು ವಾಸಿಸುವುದರಿಂದ ಮೇಲಿನಂತೆ ಕರೆಯುವುದು ಉಚಿತವಲ್ಲವೆನೋ ಆದರೆ ಈ ಪ್ರದೇಶದಲ್ಲಿ ಬೇಡರಹಟ್ಟಿಗಳು ವೀರನ ಹೆಸರಿನಲ್ಲಿ ಸ್ಥಾಪನೆಗೊಂಡಿರುವುದಕ್ಕೆ ನೂರಾರು ಸ್ಥಳಗಳು ದೊರೆಯುತ್ತವೆ.[3] ಉದಾ: ಬೈಯ್ಯನಾಯಕನಹಟ್ಟಿ, ಓಬವ್ವನಹಟ್ಟಿ, ಕನ್ನಬೋರಯ್ಯನಹಟ್ಟಿ ಮತ್ತು ಚನ್ನಬಸಯ್ಯನಹಟ್ಟಿ.


[1] ಟಿ.ಗಿರಿಜ, ಚಿತ್ರದುರ್ಗ ಜಿಲ್ಲಾ ದರ್ಶಿನಿ, ಪು.೧೪೫

[2] ಗಗ್ಗರಿದಾಸ, ರಪ್ಪಲಸೂರಿ, ಯರಗೊಡ್ಲಯ್ಯ, ಕಾಮಗೇತನಹಳ್ಳಿ ಸೂರಪ್ಪನಾಯಕ ಇತರರು ಮ್ಯಾಸಬೇಡರ ವೀರರು.

[3] ನೋಡಿ : ಚಿನ್ನಹಗರಿ ನದಿ ಪರಿಸರದ ಪ್ರಾಚ್ಯಾವಶೇಷಗಳು : ಒಂದು ಶೋಧನೆ, ಇತಿಹಾಸ ದರ್ಶನ, ಸಂ. ೧೨, ಪು.೨೩ – ೨೪