.೧೨. ಆಧುನಿಕನಾಯಕಮುಖಂಡರು

.೧೨. ಭೀಮಪ್ಪ ನಾಯಕ

ಜನಾಂಗದ ಸೇವೆಯಲ್ಲಿ ತೊಡಗಿಸಿಕೊಂಡು ನಾಯಕರ ಏಳಿಗೆ ಬಗ್ಗೆ ಚಿಂತಿಸಿದವರ ಪೈಕಿ ಎ. ಭೀಮಪ್ಪ ನಾಯಕ ಅವರ ಹೆಸರು ಸುಪರಿಚಿತ. ಈ ಭಾಗದ (ಚಿತ್ರದುರ್ಗ) ಬಹುದೊಡ್ಡ ರಾಜಕಾರಣಿ, ಜನಾಂಗದ ಮುಖಂಡರಾದ ಭೀಮಪ್ಪ ನಾಯಕರು ಸಚಿವರಾಗಿ ಅನೇಕ ಬಗೆಯ ಕೆಲಸ – ಕಾರ್ಯಗಳನ್ನು ಮಾಡಿತೋರಿಸಿರುವುದು ಸ್ಮರಣೀಯ.

ಈಗಿನ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಬಿಳಿಚೋಡು ಎಂಬುವುದು ಇವರ ಗ್ರಾಮ. ಇಲ್ಲಿನ ಹನುಮಪ್ಪ=ಹನುಮಕ್ಕ ದಂಪತಿಗಳಿಗೆ ೧೯೦೦ರ ಸುಮಾರಿನಲ್ಲಿ ದ್ವಿತೀಯ ಪುತ್ರನಾಗಿ ಈ ನಾಯಕ ಜನಿಸಿದ. ಇಲ್ಲಿ ಬಿಳಿಚೋಡು ಭರಮಪ್ಪ ನಾಯಕನೆಂಬ ಅರಸ ರಾಜ್ಯಾಳ್ವಿಕೆ ನಡೆಸಿದ ವಂಶಪರಂಪರೆ ಬೆಳೆದು ಬಂದಿದೆ. ಅವರಿಗೂ ಇವರ ಕುಟುಂಬಕ್ಕೂ ನಂಟಿದ್ದಂತಿದೆ. ಆರಂಭದ ಶಿಕ್ಷಣ ಅಕ್ಕಪಕ್ಕದ ಸ್ಥಳಗಳಲ್ಲಾಯಿತು. ನಂತರ ಚಿತ್ರದುರ್ಗ ಮೊದಲಾದ ಸ್ಥಳಗಳಿಗೆ ಹೊಗಿ ಬಿ.ಎ. ಮುಗಿಸಿದರು. ಹೀಗೆ ಬೆಳೆಯುವ ಹಂತದಲ್ಲೇ ಅಕ್ಕರೆಯ ಅಮ್ಮನನ್ನು ಕಳೆದುಕೊಂಡರು. ಆಗಲೇ ಮಾನಸಿಕವಾಗಿ ಕುಗ್ಗಿದ ಭೀಮಪ್ಪ ಚೇತರಿಸಿಕೊಂಡಿದ್ದು ತನ್ನ ಬಂಧುಗಳ ಸಹಕಾರದಿಂದ. ಅನೇಕ ಸವಾಲಯಗಳ ನಡುವೆ ನೌಕರಿಗೆ ಹೋಗಿ ನಂತರದಲ್ಲಿ ವಕೀಲವೃತ್ತಿ ಆರಂಭಿಸಿದರು. ಇವರ ಸಂಘಟನೆ ಪ್ರವೃತ್ತಿ, ಕ್ರಿಯಾಶೀಲನೆ ಕಂಡ ಸಮಾಜ ಇವರಿಗೆ ಚತುರ ರಾಜಕಾರಣಿ, ಪ್ರಾಮಾಣಿಕ ಆಡಳಿತಗಾರನೆಂದು ಕರೆಯಿತು. ರಾಜಕೀಯ ಕ್ಷೇತ್ರದಲ್ಲಿ ನುರಿತ ವ್ಯಕ್ತಿಯಾಗಿದ್ದ ಇವರಿಗೆ ‘Tiger of Politics’ ಎಂದು ಕರೆದರು ಈತನ ಅನುಯಾಯಿಗಳು. ವ್ಯವಸಾಯ ಕುಟುಂಬದ ಹಿನ್ನೆಲೆ ಹೊಂದಿದ ಇವರಿಗೆ ಅಂಚೆ ವೃತ್ತಿಯಿಂದ ಅಂಚೆ ಮನೆತನದವರೆಂದು ಕರೆದರು.

ಮಹತ್ವದ ಕೌಟುಂಬಿಕ ಪರಂಪರೆ ಹೊಂದಿದ ಪರಿಸರದಲ್ಲಿ ಭೀಮಪ್ಪನಾಯಕರಿಗೆ ಸ್ವಾತಂತ್ರ‍್ಯ ಸಂಗ್ರಾಮದ ಕಾಳ್ಗಿಚ್ಚು ಕೈಬೀಸಿ ಕರೆಯಿತು. ಸ್ವಾತಂತ್ರ‍್ಯ ಚಳುವಳಿಯಲ್ಲಿ ಪಾಲ್ಗೊಂಡು ಅನೇಕ ಹೋರಾಟಗಳನ್ನು ನಡೆಸಿದರು. ೧೯೩೯ರ ಅರಣ್ಯ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದಕ್ಕೆ ಒಂದು ವರ್ಷ ಕಾಲ ಜೈಲು ಶಿಕ್ಷೆ ಅನುಭವಿಸಿದರು. ಅಸಹಕಾರ ಚಳುವಳಿ, ಕ್ವಿಟ್ ಇಂಡಿಯಾ ಚಳುವಳಿ (೧೯೪೨) ಗಳಲ್ಲಿ ಭಾಗವಹಿಸಿದರು, ಅಲ್ಲದೆ ಮಹಾತ್ಮಗಾಂಧಿ, ಎಸ್. ನಿಜಲಿಂಗಪ್ಪ ಇತರ ನಾಯಕರ ಆದರ್ಶಗಳನ್ನು, ಸಲಹೆ ಸೂಚನೆಗಳನ್ನು ಪಡೆದು ಅವರ ಮಾರ್ಗದರ್ಶನದಿಂದ ಸಾಗುತ್ತಿದ್ದರು. ಹೀಗೆ ಬ್ರಿಟಿಷರ ವಿರುದ್ಧ ಭೂಗತ ಚಟುವಟಿಕೆಗಳಲ್ಲಿ ಉಗ್ರ ಹೋರಾಟಗಳನ್ನೇ ಮಾಡಿದರು. ಇವರು ಸಂಘಟನಾ ಚತುರ ಎನಿಸಿಕೊಂಡು ರಾಜಕೀಯ ಗುದ್ದುಗೆ ಏರಿದರು. ಚಿತ್ರದುರ್ಗದ ಪುರಸಭೆಯ ಅಧ್ಯಕ್ಷರಾಗಿ, ನಗರಸಭೆಯ ಅಧ್ಯಕ್ಷರಾಗಿ ನಗರದ ಸರ್ವಾಂಗಿಣ ಅಭಿವೃದ್ಧಿಗೆ ಶ್ರಮಿಸಿದರು. ಸ್ವಾತಂತ್ರ‍್ಯ ಹೋರಾಟಗಾರರಾಗಿ, ಏಕೀಕರಣದ ರೂವಾರಿಯಾಗಿ ಬೆಳೆದು ಬಂದ ನಾಯಕರ ಚರಿತ್ರೆ ಅದ್ಭುತವಾದುದು.

ಭೀಮಪ್ಪನಾಯಕರು ಚಿತ್ರದುರ್ಗ ನಗರವನ್ನು ಸುಂದರಗೊಳಿಸಿದ್ದು ಪವಾಡವೇ ಸರಿ. ವಕ್ರ ವಕ್ರವಾಗಿ, ಒಂದು ಶಿಸ್ತು, ಯೋಜನೆಗೆ ಒಳಪಡದ ನಗರಕ್ಕೆ ಬೀದಿ, ರಸ್ತೆ, ನೀರಿನ ಸೌಕರ್ಯ ಹೀಗೆ ಮೂಲಭೂತ ಸಮಸ್ಯೆಗಳತ್ತ ಗಮನಹರಿಸಿದರು. ಚಿತ್ರದುರ್ಗದ ವಿವಿಧ ಕೇರಿ, ಬಡಾವಣೆ, ಸರ್ಕಲ್‌ಗಳಿಗೆ ರಸ್ತೆ, ವಿದ್ಯುತ್‌ನಲ್ಲಿ ಮೊದಲಾದವುಗಳನ್ನು ಮಾಡಿಸಿದರು. ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣ ಮಾಡಿದ್ದು ಇವರ ಅವಧಿಯಲ್ಲೇ. ಅನೇಕ ಕೆರೆ, ಹೊಂಡಗಳ ಹೂಳನ್ನು ತೆಗೆಸಿದರು (ತಿಮ್ಮಣ್ಣ ನಾಯಕನಕೆರೆ, ಅಕ್ಕ – ತಂಗಿ ಹೊಂಡ ಇತ್ಯಾದಿ). ವಾಣಿ ವಿಲಾಸ ಸಾಗರದಿಂದ ಚಿತ್ರದುರ್ಗಕ್ಕೆ ಕೊಳವೆಗಳ ಮೂಲಕ ಕುಡಿಯುವ ನೀರನ್ನು ತರಿಸಿದರು. ತಾನು ಶೈಕ್ಷಣಿಕ ಹಂತದಲ್ಲಿ ಅನುಭವಿಸಿದ್ದ ಯಾತನೆಯನ್ನು ಸ್ಮರಿಸಿಕೊಂಡು ಚಿತ್ರದುರ್ಗದಲ್ಲಿ ವಿವಿಧ ಸಮುದಾಯಗಳಿಗೆ ಹಾಸ್ಟೆಲ್‌ಗಳನ್ನು ಕಟ್ಟಿಸಿಕೊಟ್ಟರು. ಇವರ ಕಾಲದಲ್ಲಿ ಶಾಲಾಕಾಲೇಜು ಕಟ್ಟಡಗಳ ನಿರ್ಮಾಣವಾದುದಕ್ಕೆ ಈಗಿರುವ ಸರ್ಕಾರಿ ಕಲಾ ಕಾಲೇಜು ಮೊದಲಾದವುಗಳನ್ನು ನೋಡಬಹುದಾಗಿದೆ. ಜಿಲ್ಲಾ ಆಸ್ಪತ್ರೆ, ಯೂನಿಯನ್ ಚಿತ್ರಮಂದಿರ, ಜಿಲ್ಲಾಧಿಕಾರಿಗಳ ವಸತಿ ಗೃಹಗಳಲ್ಲದೆ, ಕ್ರಿಶ್ಚಿಯನ್ ಧರ್ಮಿಯರಿಗೆ ರುದ್ರಭೂಮಿ ನಿರ್ಮಿಸಿಕೊಟ್ಟರು.

ಹೀಗೆ ಪ್ರಗತಿಪರ ಚಟುವಟಿಕೆ ಮತ್ತು ಕಾರ್ಯಗಳ ನಡುವೆ ೧೯೫೨ ರಲ್ಲಿ ಮೊಳಕಾಲ್ಮುರು ವಿಧಾನ ಸಭಾಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ನಂತರ ೧೯೫೭ ರಲ್ಲಿ ಜಗಳೂರು ಮತ್ತು ಚಳ್ಳಕೆರೆ ಜಂಟಿಕ್ಷೇತ್ರದಿಂದ ಜಯಗಳಿಸಿದ್ದಕ್ಕೆ ೧೦೧ ಜೊತೆ ಎತ್ತಿನ ಬಂಡಿಗಳ ಪ್ರದರ್ಶನವನ್ನು ಮೆರವಣಿಗೆ ಮೂಲಕ ಮಾಡಿತೋರಿಸಿ ಇವರಿಗೆ ಸ್ವಾಗತ ಕೋರಿದರು ಇಲ್ಲಿನ ನಾಯಕರು.

ಇವರಿಗೆ ಪರಮ ಮಿತ್ರರಾದ ಎಸ್. ನಿಜಲಿಂಗಪ್ಪನವರನ್ನು ಮೊಳಕಾಲ್ಮುರು ಕ್ಷೇತ್ರದಿಂದ ವಿಧಾನಸಭೆಗೆ ಆರಿಸಿದ ಕೀರ್ತಿ ಭೀಮಪ್ಪನಾಯಕರಿಗೆ ಸಲ್ಲುತ್ತದೆ. ನಿಜಲಿಂಗಪ್ಪನವರ ಸಚಿವ ಸಂಪುಟದಲ್ಲಿ ಇವರು ಸಹಕಾರಿ ಖಾತೆಯನ್ನು ವಹಿಸಿಕೊಂಡಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಅಪಾರ ಸೇವೆ ಸಲ್ಲಿಸಿದ ಭೀಮಪ್ಪ ನಾಯಕರು ವಿವಿಧ ರಂಗಗಳಲ್ಲಿ ಖ್ಯಾತಿ ಪಡೆದರು.

ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾಗಿ, ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, ಎಂ.ಎಲ್.ಸಿ. ಆಗಿ ಅನುಪಮ ಸೇವೆ ಸಲ್ಲಿಸಿದ್ದಾರೆ. ರಾಜ್ಯದ ನಾಯಕರಿಗೆ ಧೀಮಂತ ನಾಯಕರಾಗಿ, ಚಿತ್ರದುರ್ಗ ನಗರಕ್ಕೆ ಆಧುನಿಕ ಶಿಲ್ಪಿಯಾಗಿ, ಕಾಂಗ್ರೆಸ್ಸಿನ ನಿಷ್ಠಾವಂತ ರಾಜಕಾರಣಿಯಾಗಿ ಧೃವತಾರೆಯಂತೆ ಮಿಂಚಿದವರು ಈ ಭೀಮಪ್ಪ ನಾಯಕರು. ಪಕ್ಷದ, ಕ್ಷೇತ್ರದ ಮತ್ತು ತನ್ನ ಜನಾಂಗದ ಅಪಾರ ಕನಸು ಉದ್ದೇಶಗಳನ್ನಿಟ್ಟುಕೊಂಡಿದ್ದ ಭೀಮಪ್ಪ ನಾಯಕರು ೧೯೬೬ ರಲ್ಲಿ ಹೃದಯಘಾತದಿಂದ ಮೃತರಾದರು. ಅವರನ್ನು ತನ್ನ ತಾಯಿನಾಡಾದ ಚಿತ್ರದುರ್ಗದಲ್ಲಿ ಶವಸಂಸ್ಕಾರ ಮಾಡಲಾಯಿತು. ಇವರ ಸ್ಮರಣಾರ್ಥ ಅನೇಕ ಶಾಲಾಕಾಲೇಜುಗಳಿಗೆ ಇವರ ಹೆಸರನ್ನಿಡಲಾಗಿದೆ.

. ಹೊ.ಚಿ.ಬೋರಯ್ಯ

ನಾಯಕ ಜನಾಂಗದ ಬಹುದೊಡ್ಡ ರಾಜಕಾರಣಿ, ಜನಾನುರಾಗಿ ಹೊಸಮಾಳಿಗೆ ಚಿನ್ನೋಬಯ್ಯ ಬೋರಯ್ಯನವರು ಇಂದಿಲ್ಲದಿರಬಹುದು. ಆದರೆ ಅವರು ನೆನಪು ಮಾತ್ರ ಶಾಶ್ವತ. ಶಾಸಕರಾಗಿ, ಮಂತ್ರಿಯಾಗಿ ವಿವಿಧ ಸಂಘಟನೆ, ಸಮ್ಮೇಳನಗಳ ಮೂಲಕ ರಾಷ್ಟ್ರಮಟ್ಟದ ರಾಜಕೀಯ ವರ್ಚಸ್ಸನ್ನು ಬೆಳೆಸಿಕೊಂಡಿದ್ದರು. ಅವರು, ಮಾಡಿದ ಸೇವೆ ಇಂದಿಗೂ ಅವಿಸ್ಮರಣೀಯ.

ಹೊ.ಚಿ. ಬೋರಯ್ಯನವರು ೧೯೧೫ ರಲ್ಲಿ ಏಕಣ್ಣ ಅಥವಾ ಬೋರಯ್ಯ ಸೂರಮ್ಮ ದಂಪತಿಗಳಿಗೆ ಜನಿಸಿದ. ಇವರದು ನಾಯಕರ ನಲಗೇತಿ ಬೆಡಗು ಮತ್ತು ನಲಗೇತಲಹಟ್ಟಿ ಚೆನ್ನಕೇಶವ ಮನೆದೇವರು. ಕೃಷಿ, ಪಶುಪಾಲನೆ ಹಿನ್ನೆಲೆಯಿರುವ ಇವರ ಕುಟುಂಬಕ್ಕೆ ಹಿಂದಿನಿಂದಲೂ ದೊಡ್ಡ ಹೆಸರಿದೆ. ಇವರ ಬಂಧುಗಳು ಅಮೃತ ಮಹಲು ಹಸುಗಳನ್ನು ಸಾಕಿದ್ದರು. ಅತೀ ಕಿರಿಯ ವಯಸ್ಸಿನಲ್ಲೇ ತಂದೆತಾಯಿಗಳನ್ನು ಕಳೆದುಕೊಂಡ ಬೋರಯ್ಯ ಚಿಕ್ಕಪ್ಪನಾದ ದಿ. ಹೊಸಮಾಳಿಗೆ ಬಿ. ಚಿನ್ನೋಬಯ್ಯನವರ ಪೋಷಣೆಯಲ್ಲಿ ಬೆಳೆದರು. ಇವರು ಪ್ರೌಢ ಶಿಕ್ಷಣದವರೆಗೂ ಚಿತ್ರದುರ್ಗದಲ್ಲಿ, ಇಂಟರ್ ಮೀಡಿಯೇಟ್ (೧೯೩೬), ಬಿ.ಎ. ಪದವಿಗಳನ್ನು (೧೯೩೮) ಮೈಸೂರು ಮಹಾರಾಜ ಕಾಲೇಜಿನಿಂದ ಪಡೆದರು. ೧೯೪೩ ರಲ್ಲಿ ಎಲ್.ಎಲ್.ಬಿ. ಪದವಿಯನ್ನು ಬೆಳಗಾವಿ ಕೊಲ್ಲಾಪುರದಲ್ಲಿ ಮುಗಿಸಿದರು. ನಂತರ ವಕೀಲಿ ವೃತ್ತಿ ಆರಂಬಿಸಿ ಪ್ರಸಿದ್ಧ ಕ್ರಿಮಿನಲ್ ವಕೀಲರೆಂದು ಹೆಸರಾದರು. ೧೯೪೬ ರಲ್ಲಿ ಚಿತ್ರದುರ್ಗ ಪುರಸಭೆಗೆ ಇವರು ಸದಸ್ಯರಾಗಿದ್ದಾರೆ, ಭೀಮಪ್ಪ ನಾಯಕರು ಅದರ ಅಧ್ಯಕ್ಷರಾಗಿದ್ದರು. ಹೊ.ಚಿ. ಬೋರಯ್ಯ ಜಿಲ್ಲಾ ಕಾಂಗ್ರೆಸ್ ಕಮಿಟಿಯ ಕಾರ್ಯದರ್ಶಿ, ಅಧ್ಯಕ್ಷರಾಗಿ ಜಿಲ್ಲಾನಾಯಕ ಸಂಘದ ಕಾರ್ಯದರ್ಶಿ ಹಾಗೂ ಅಧ್ಯಕ್ಷರಾಗಿದ್ದರು. ಜಿಲ್ಲಾ ವಯಸ್ಕರ ಶಿಕ್ಷಣ ಸಮಿತಿಯ ಗೌರವ ಕಾರ್ಯದರ್ಶಿ, ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಹಾಗೂ ಸಿಂಡಿಕೇಟ್ ಸದಸ್ಯರಾಗಿ, ಹಲವಾರು ಸಹಕಾರಿ ಸಂಘಗಳು, ವಿದ್ಯಾ ಸಂಘಗಳ, ಕಾರ್ಮಿಕ ಸಂಘಗಳ, ಹರಿಜನ – ಗಿರಿಜನ ಹಿಂದುಳಿದವರ ಸಂಘಸಂಸ್ಥೆಗಳ ಸಂಸ್ಥಾಪಕರಾಗಿ ಶ್ರಮಿಸಿದ್ದು, ಜನ ಮನ್ನಣೆಗೆ ಪಾತ್ರವಾಯಿತು.

ಆ ಮೂಲಕ ೧೯೫೩ ಹಾಗೂ ೧೯೬೫ ರಲ್ಲಿ ಎರಡು ಸಲ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಆಯ್ಕೆಯಾದರು. ರಾಜಕೀಯದಲ್ಲಿ ಇವರಿಗೆ ಸಾಹುಕಾರ ಚಿನ್ನಯ್ಯ, ನಾಗಯ್ಯಶೆಟ್ಟಿಗಳು ಮಾರ್ಗದರ್ಶಕರಾಗಿದ್ದರು. ೧೯೬೨ ಮತ್ತು ೧೯೬೭ ರಲ್ಲಿ ಕಾಂಗ್ರೆಸ್‌ನಿಂದ ಎರಡು ಸಲ ವಿಧಾನಸಭೆಗೆ ಚಿತ್ರದುರ್ಗ ಕ್ಷೇತ್ರದಿಂದ ಆಯ್ಕೆಯಾದರು. ನಿಜಲಿಂಗಪ್ಪ ವೀರೇಂದ್ರಪಾಟೀಲರ ಮಂತ್ರಿಮಂಡಲದಲ್ಲಿ ಸಚಿವರಾಗಿ ಮುಖ್ಯ ಖಾತೆಗಳನ್ನು ಹೊಂದಿದ್ದರು. ೧೯೬೯ ರಲ್ಲಿ ಕಾಂಗ್ರೆಸ್ ವಿಭಜನೆ ಆದಾಗ ನಿಜಲಿಂಗಪ್ಪ ನೇತೃತ್ವದ ಸಂಸ್ಥಾ ಕಾಂಗ್ರೆಸ್‌ನಲ್ಲಿದ್ದರು. ಅಂದೇನಾದರೂ ದೇವರಾಜ ಅರಸು ಮಾತು ಕೇಳಿದ್ದರೇ ಹೊ.ಚಿ.ಬಿ. ಉಪಮುಖ್ಯಮಂತ್ರಿಯಾಗಿರುತ್ತಿದ್ದರು. ೧೯೭೧ ರಲ್ಲಿ ಅಖಿಲ ಭಾರತ ನಾಯಕ ಜನಾಂಗದ ಮಹಾಸಮ್ಮೇಳನ ಬೆಂಗಳೂರಿನಲ್ಲಿ ನಡೆದದ್ದು ಇವರ ನೇತೃತ್ವದಲ್ಲಿ. ಆಗಿನಿಂದಲೇ ಇವರ ರಾಜಕೀಯ ಹಿನ್ನೆಡೆಯು ಆರಂಭವಾಯಿತು. ಇವರ ಆಸಕ್ತಿ ಕ್ಷೇತ್ರವಾದ ಮೊಳಕಾಲ್ಮೂರುವಿನಿಂದ ಎರಡು ಸಲ ಸೋತರು. ಹಾಗೆಯೇ ಲೋಕಸಭೆಗೂ ಎರಡು ಸಲ ನಿಂತು ಸೋತರು.

ಗಾಂಧೀಜಿಯ ಅನುಯಾಯಿಯಾಗಿ ಅಹಿಂಸೆ, ಸತ್ಯ, ನಿಷ್ಠುರತೆ, ಪರಧರ್ಮ, ಸಹಿಷ್ಣುತೆ ಇವರ ಆದರ್ಶ ಲಕ್ಷಣಗಳಾಗಿದ್ದವು. ನಾಯಕ ಜನಾಂಗಕ್ಕೊಂದು ನೆಲೆಯನ್ನು ಕಲ್ಪಿಸುವಲ್ಲಿ ಇವರ ಪಾತ್ರ ದೊಡ್ಡದು. ಇವರ ದಾಂಪತ್ಯ ಜೀವನವು ಸುಖಮಯವಾಗಿತ್ತು. ೧೯೪೫ ರಲ್ಲಿ ಸೂರಮ್ಮನವರೊಡನೆ ಮದುವೆಯಾಗಿ ೩ ಜನ ಮಕ್ಕಳನ್ನು ಪಡೆದರು. ಕಮಲಮ್ಮನವರು ವೈದ್ಯರಾಗಿ ನಾಯಕ ಜನಾಂಗದ ಡಾ.ಕೆ.ಆರ್. ಪಾಟೀಲರ ಪತ್ನಿಯಾಗಿರುವರು. ಹಿರಿಯ ಮಗ ಚಿನ್ನೋಬಯ್ಯ ವಿಜಯ ಬ್ಯಾಂಕಿನಲ್ಲಿ ಅಧಿಕಾರಿ, ಎರಡನೇ ಮಗ ಏಕಣ್ಣ ಚಿತ್ರದುರ್ಗದಲ್ಲಿ ಪ್ರಸಿದ್ಧ ವಕೀಲರಾಗಿರುವರು.

ಜನಾಂಗದ ಕಾರ್ಯಗಳು, ಚಟುವಟಿಕೆಗಳು ಎಲ್ಲಿಯೇ ನಡೆಯಲಿ ಹೊ.ಚಿ. ಬೋರಯ್ಯನವರು ಹಾಜರಿ ಇರುತ್ತಿದ್ದರು. ಹೀಗೆ ಒಮ್ಮೆ ನಾಯಕ ಜನಾಂಗದ ಸಭೆಯಲ್ಲಿ ಭಾಷಣ ಮಾಡುತ್ತಿರುವಾಗ ೧೯೮೦ ಜೂನ್ ೨೯ ರಂದು ಹೃದಯಘಾತದಿಂದ ನಿಧನರಾದರು. ಅವರಿಲ್ಲದೆ ಇರಬಹುದು ಆದರೆ ಅವರು ಬಿಟ್ಟುಹೋದ ಮೌಲ್ಯಗಳು ಇಂದಿಗೂ ಪ್ರಸ್ತುತ. ನಿಜವಾಗಿ ನಾಯಕ ಜನಾಂಗದ ಆಧುನಿಕ ವೀರ ನಾಯಕರಲ್ಲಿ ಇವರು ಅಗ್ರಗಣ್ಯರೆಂದರೆ ತಪ್ಪಲ್ಲ.

ಪಟೇಲ್ ಪಾಪನಾಯಕ

ಚಳ್ಳಕೆರೆ ತಾಲೂಕಿನ ಮಹದೇವಪುರದಲ್ಲಿ ಜನಿಸಿದ ಪಟೇಲ್ ಪಾಪನಾಯಕ, ಇಡೀ ಜಿಲ್ಲೆಯ ನಾಯಕರಿಗೆ ಸ್ಪಂಧಿಸುವಂತೆ ಬೆಳೆದುಬಂದವರು. ರಾಜಕೀಯದಲ್ಲಿ ಅಪ್ರತಿಮ ಸಾಧನೆ ತೋರಲು ಹೋರಾಟ ನಡೆಸಿದರು. ಕ್ರಮೇಣ ಮಹಾಮುತ್ಸದ್ಧಿ, ಚತುರ ರಾಜಕಾರಣಿ ಆಗಿದ್ದರು. ಮೊಳಕಾಲ್ಮೂರು ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದು ಹಲವು ಸಲ ಪರಾಜಿತರಾದರು. ಪಟೇಲ್ ಪಾಪನಾಯಕರ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಆದವು. ಇವರು ಅನೇಕ ದೇವಾಲಯಗಳಿಗೆ ಭೇಟಿ ನೀಡಿ ದೇವರ ವ್ಯಾಜ್ಯಗಳನ್ನು ನಿವಾರಿಸುತ್ತಿದ್ದರು. ನಾಯ್ಕನಹಟ್ಟಿಯನ್ನು ಕೇಂದ್ರಸ್ಥಾನವಾಗಿ ಮಾಡಿಕೊಂಡಿದ್ದ ಪಾಪನಾಯಕರಿಗೆ ಊರಿಗೊಬ್ಬರಂತೆ ನೆಂಟರು ಅಣ್ಣ – ತಮ್ಮಂದಿರು ಇರುತ್ತಿದ್ದರು. ಹೀಗಾಗಿ ಇವರು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಸಹಕಾರ ನೀಡುತ್ತಿದ್ದರು. ಲೋಕೋಪಯೋಗಿ ಕೆಲಸಕಾರ್ಯಗಳು, ನೌಕರಿ, ಗುತ್ತಿಗೆ ಕೆಲಸ, ದೇವಾಲಯಗಳ ಜೀರ್ಣೋದ್ಧಾರ ಮೊದಲಾದವುಗಳ ಕಡೆ ಗಮನ ಹರಿಸುತ್ತಿದ್ದರು. ಪಾಪನಾಯಕರು ಮ್ಯಾಸನಾಯಕರ ಆಶಾಕಿರಣವಾಗಿ ನಂದಿ ಹೋಗಿರಬಹುದು, ಆದರೆ ಅವರ ಸಾಧನೆ ಜೀವಂತವಾಗಿದೆ.

೧೯೮೨ – ೮೩ ದೊಡ್ಡುಳ್ಳರ್ಥಿ ಚಳ್ಳಕೆರೆ, ಪಾಟೇಲ್, ಪಾಪನಾಯಕ ಎಂ.ಎಲ್.ಎ. ಜೆ. ರಾಮೇಗೌಡ, ಸಚಿವ, ದನಗಳ ಗಣತಿ

. ಎನ್. ಗಟ್ಟಪ್ಪ ನಾಯಕ

ಮೂಲತಃ ಅರಣ್ಯ ವಲಯ ಅಧಿಕಾರಿಗಳಾದ (ರೇಂಜ್ ಆಫಿಸರ್) ಎನ್.ಜಿ.ನಾಯಕ ಅವರು ರಾಜಕೀಯಕ್ಕೆ ಬಂದಿದ್ದೆ ಒಂದು ರೀತಿಯಲ್ಲಿ ಪವಾಡ. ಮೊಳಕಾಲ್ಮೂರು ಕ್ಷೇತ್ರದ ಜನತೆಗೆ ಉಸಿರಾಗಿದ್ದಂತವರು. ಅನೇಕ ಸಂದರ್ಭಗಳಲ್ಲಿ ಜನರ ಕನಸುಗಳಿಗೆ, ಆಶೋತ್ತರಗಳಿಗೆ ಸ್ಪಂಧಿಸಿದ ನಾಯಕ. ತನ್ನ ಅಪಾರ ಸೇವೆಯನ್ನು ಗ್ರಾಮೀಣ ಬಡತನದಲ್ಲಿರುವ ಜನತೆಗೆ ಮೀಸಲಿಟ್ಟಿದ್ದರು. ಎರಡು ಬಾರಿ ಶಾಸಕರಾಗಿ ಲೆಕ್ಕವಿಲ್ಲದಷ್ಟು ಕೆಲಸಗಳನ್ನು ಮಾಡಿತೋರಿಸಿದ್ದಾರೆ. ಅವರು ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದಾಗ ಅನೇಕರಿಗೆ ಉದ್ಯೋಗ ಒದಗಿಸಿಕೊಟ್ಟರು. ಆಶ್ರಯ ಮನೆಗಳನ್ನು, ರಸ್ತೆ, ಆಸ್ಪತ್ರೆ, ಶಾಲಾ ಕಾಲೇಜುಗಳ ನಿರ್ಮಾಣದಲ್ಲಿ ಶಾಸಕರಾಗಿ ಸಮರ್ಥ ಸೇವೆ ಸಲ್ಲಿಸಿದ ಎನ್.ಜಿ. ನಾಯಕರು ಮೊಳಕಾಲ್ಮೂರು ಕ್ಷೇತ್ರದ ಜನತೆಗೆ ಆಧುನಿಕ ನಾಯಕರಾಗಿ ಮತ್ತು ಮೊಳಕಾಲ್ಮೂರು ಪಟ್ಟಣವನ್ನು ಕಟ್ಟಿ ಬೆಳೆಸಿದ ರುವಾರಿಗಳಾಗಿದ್ದಾರೆ.

. ಪೂರ್ಣ ಮುತ್ತಪ್ಪ

ಚಳ್ಳಕೆರೆ ತಾಲೂಕಿನ ನಲಗೇತಯ್ಯನಹಟ್ಟಿಯಲ್ಲಿ ಜನಿಸಿದ ಪೂರ್ಣಮುತ್ತಪ್ಪ ಎಂ.ಎಲ್.ಎ. ಆಗುತ್ತಾರೆಂದು ಯಾರೂ ಭಾವಿಸಿರಲಿಲ್ಲ. ಅಷ್ಟೇನೂ ಉನ್ನತ ವಿದ್ಯಾಭಾಸ ಮಾಡದಿದ್ದರೂ, ಲೋಕಜ್ಞಾನ ಹೊಂದಿದ್ದ ಮುತ್ತಪ್ಪನವರು ಗ್ರಾಮೀಣ ಜನರಿಗೆ ಜೀವನವನ್ನು ಕೊಡು ವ್ಯಕ್ತಿಯಾಗಿದ್ದರು. ಇಂಥವರನ್ನು ಎರಡು ಬಾರಿ ಎಂ.ಎಲ್.ಎ. ಮಾಡಿದ ಮೊಳಕಾಲ್ಮೂರು ಕ್ಷೇತ್ರದ ಜನತೆಯಲ್ಲಿ ಇವರ ಬಗ್ಗೆ ಅಪಾರ ಅನುಕಂಪ, ಗೌರವವಿದೆ. ನಲಗೇತಿ ಗೋತ್ರದ ಇವರು ಚನ್ನಕೇಶವನನ್ನು ಮನೆದೇವರಾಗಿ ಹೊಂದಿರುತ್ತಾರೆ. ಜನತಾದಳ ಸರ್ಕಾರದಲ್ಲಿ ಸಕ್ರೀಯ ಕೆಲಸಕಾರ್ಯಗಳನ್ನು ಮಾಡಿಸಿದ್ದು ಗಮನಾರ್ಹ. ರಸ್ತೆಗಳ ನಿರ್ಮಾಣ, ಕೆರೆಗಳ ದುರಸ್ತಿ, ದೇವಾಲಯಗಳ ಜೀರ್ಣೋದ್ಧಾರ, ಆಶ್ರಯ ಮನೆಗಳ ನಿರ್ಮಾಣ ಇತ್ಯಾದಿ ಕೆಲಸಗಳನ್ನು ಶ್ರದ್ಧೆಯಿಂದ ಮಾಡಿದ್ದಾರೆ. ಇವರನ್ನು ನೆನಪಿಸಿಕೊಳ್ಳುವ ಸಂದರ್ಭವೆಂದರೆ ೫ ವರ್ಷಗಳ ಹಿಂದೆ ನಾಯಕನಹಟ್ಟಿಯಿಂದ ಕಂಪಳದೇವರಹಟ್ಟಿಗೆ ಥಾರ್‌ರೋಡ್ ಮಾಡಿಸಿದ್ದು. ಹಟ್ಟಿ ಜಾತ್ರೆಗಳಲ್ಲಿ ಪಾಲ್ಗೊಂಡು ಜನರಿಗೆ ಶುಭಹಾರೈಸುತ್ತಿದ್ದ ಮುತ್ತಪ್ಪನವರು ಎಲ್ಲಾ ಜಾತಿಯವರಿಗೂ ಬೇಕಾದ ವ್ಯಕ್ತಿಯಾಗಿದ್ದರು. ಒಮ್ಮೆ ಅನಾರೋಗ್ಯದ ನಿಮಿತ್ತ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಬೆಂಗಳೂರಿನಲ್ಲಿ ಸೇರಿದಾಗ ಇವರನ್ನು ನಾನು ಸಂದರ್ಶಿಸಿದ್ದುಂಟು. ಆಗ ಇವರು ಅನೇಕ ಸಂಗತಿಗಳನ್ನು ವಿವರಿಸಿದರು.

ಪೂರ್ಣಮುತ್ತಪ್ಪ ಎಂ.ಎಲ್.ಎ., ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ, ದಿ.೨೪.೫.೯೬ ಎಂ.ಎಸ್.ರಾಮಯ್ಯ ಆಸ್ಪತ್ರೆ, ಬೆಂಗಳೂರು

. ಸಮಾಜ ಸೇವಕ ದಿ.ಟಿ. ಮಾರಪ್ಪ

 

ನಾನು ೧೯೮೪ ರಲ್ಲಿ ಮೊಟ್ಟಮೊದಲು ಈ ಮಾರಪ್ಪನವರನ್ನು ನೋಡಿದ್ದು ಮಲ್ಲೂರಹಳ್ಳಿಯ ಶ್ರೀ ಶ್ರೀ ಶ್ರೀ ತಿರುಚಿಮಹಾಸ್ವಾಮಿ ಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿ. ತನ್ನ ಕೋಟಿನ ಜೇಬಿನಿಂದ ಶೇಂಗಾ ಬೀಜವನ್ನು ಒಂದೊಂದೇ ತೆಗೆದು ತಿನ್ನುತ್ತಾ ಮಾತನಾಡುತ್ತಿದ್ದರು. ಬಡಮಕ್ಕಳ ಬಗ್ಗೆ ಕರುಣೆ ತೋರಿಸಿ ನೀವೆಲ್ಲಾ, ಬೆಳೆದು ದೊಡ್ಡವರಾಗಿರಿ. ಮೊದಲು ಓದಬೇಕು, ಎಲ್ಲಾ ಮಕ್ಕಳನ್ನು ಶಾಲೆಗೆ ಕರೆತನ್ನಿ ಎಂದು ಹೇಳಿ ತಲೆ ನೀವಿದರು. ನೀವೆಲ್ಲ ಪ್ರೌಢಶಾಲೆಯನ್ನು ಕಟ್ಟಬೇಕು. ‘ನಿಮ್ಮ ವಿದ್ಯಾಮಂದಿರ ನಿಮ್ಮ ಕೈಯಲ್ಲಿದೆ’ ಎಂದು ಹೇಳಿದ ಆದಿನಗಳನ್ನು ಮರೆಯಲಾಗದು.

ದಿ.ಟಿ. ಮಾರಪ್ಪನವರು ಚಿತ್ರದುರ್ಗ ವಿದ್ಯಾ ಸಂಸ್ಥೆಯನ್ನು ಕಟ್ಟಿ ಬೆಳೆಸಿದವರು. ಇವರು ಸು. ೧೮ ಪ್ರೌಢ ಶಾಲೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಸ್ಥಾಪಿಸಿ ಬಡ (ನಾಯಕ) ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ನೆರವಾದರು. ನಿರಾಡಂಬರದ, ಸವ್ಯಸಾಚಿ ಮಾರಪ್ಪನವರ ಬದುಕು ಅನುಕರಣೀಯಷ್ಟೇ ಮಾದರಿಯಾದರು. ಪತ್ರಿಕಾ ಕ್ಷೇತ್ರದಲ್ಲಿ ಅಪಾರ ಅನುಭವ, ಸೇವೆ ಹೊಂದಿದ ಇವರು ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಹೆಸರಾದವರು. ಅತೀ ಜನಪ್ರಿಯತೆ ಮತ್ತು ಪ್ರಚಾರ ಬಯಸದ ಮಾರಪ್ಪನವರ ವ್ಯಕ್ತಿಪರಿಚಯವನ್ನು ಅವರ ಪತ್ನಿ ಪಾಲಮ್ಮನವರು ಹೇಳಲು ಇಚ್ಛಿಸಲಿಲ್ಲ. ಕಾರಣ ನಮ್ಮ ಯಜಮಾನರು ಪ್ರಚಾರ ಬಯಸಿರಲಿಲ್ಲವಾದ್ದರಿಂದ ಅವರ ಬಗ್ಗೆ ಏನೂ ಬರೆಯಬೇಡಿರೆಂಬ ಕಾರಣದಿಂದ ಅವರ ಕಾಲದ ಒಳನೋಟ, ಘಟನಾವಳಿಗಳನ್ನು ಇನ್ನಷ್ಟು ವಿಶ್ಲೇಷಿಸಲಾಗಲಿಲ್ಲ.

. ಹರತಿ ವೀರನಾಯಕ

ಕೇವಲ ಸಮಾಜಸೇವೆಯಷ್ಟೇ ಅಲ್ಲದೆ, ಶೈಕ್ಷಣಿಕ, ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಹೆಸರು ಮಾಡಿದವರು ಶ್ರೀಯುತ ದಿ. ಎಚ್.ವಿ. ವೀರನಾಯಕರು. ಇವರು ಹಿರಿಯೂರು ತಾಲೂಕಿನ ಹರ್ತಿಕೋಟೆಯಲ್ಲಿ ೧೯೧೮ ಮೇನಲ್ಲಿ ಜನಿಸಿದರು. ಇವರ ತಂದೆ ಶಿಕ್ಷಕರಾಗಿದ್ದ ವೀರಲಕ್ಷ್ಮಪ್ಪನಾಯಕ ಮತ್ತು ತಾಯಿ ಪುಟ್ಟವೀರಮ್ಮನವರು. ವೀರನಾಯಕರು ಮೆಟ್ರಿಕ್ಯುಲೇಷನ್‌ವರೆಗೆ ಶಿಕ್ಷಣ ಪಡೆದು ಅನೇಕ ಭಾಷೆ, ಕೃತಿಗಳನ್ನು ಓದುವ ಬರೆಯುವ ಹವ್ಯಾಸ ಬೆಳಸಿಕೊಂಡು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.

ನಮ್ಮ ಚರಿತ್ರೆ ಕ್ಷೇತ್ರಕ್ಕೆ ಅನುಪಮ ಕಾಣಿಕೆ ನೀಡಬೇಕೆಂಬ ಉದ್ದೇಶದಿಂದ ಚಾರಿತ್ರಿಕ ನೆಲೆ, ಪಾಳೆಯಗಾರರ ಬಗ್ಗೆ, ಕಥೆ, ಕಾದಂಬರಿ, ನಾಟಕ, ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ‘ಹರತಿ’ ಕಾವ್ಯನಾಮದಿಂದಲೇ ಪ್ರಸಿದ್ಧಿ ಪಡೆದ ವೀರನಾಯಕರು ‘ಇತಿಹಾಸಜ್ಞ ಶ್ರೀ’ ಎಂಬ ಬಿರುದನ್ನು ಪಡೆದಿದ್ದರು. ದುರ್ಗದ ಧವಳಕೀರ್ತಿ, ಬಲೆಯಲ್ಲಿ ದುರ್ಗದಹುಲಿ, ಕಣ್ಮರೆಯಾದ ಕನ್ನಡದ ಕಲಿನಾಡು ಎಂಬ ಕಾದಂಬರಿಗಳು, ದುರ್ಗದ ಸಿಂಹಿಣಿ ಓಬವ್ವ, ವೀರ ಮತ್ತಿ ತಿಮ್ಮಣ್ಣನಾಯಕ (ಐತಿಹಾಸಿಕ), ದ್ರೋಣ ಶಪಥಮ್ – (ಪೌರಾಣಿಕ), ಭಿಕಾರಿ (ಸಾಮಾಜಿಕ) ಇತರ ನಾಟಕಗಳನ್ನು ಬರೆದಿರುತ್ತಾರೆ. ನಾಯಕ ಜನಾಂಗದ ವಾಲ್ಮೀಕಿ ಜಯಂತಿಗಳಲ್ಲಿ ‘ವಾಲ್ಮೀಕಿ’ ಎಂಬ ಸ್ಮರಣ ಸಂಚಿಕೆಯನ್ನು ಸಂಪಾದಿಸಿದ್ದಾರೆ. ಸಂಶೋಧನಾ ಶೈಲಿಯಲ್ಲಿ ಕ್ಷಾತ್ರಾಂಶ ಪ್ರಭೋದ ರಾಷ್ಟ್ರ ಸೇವೆಯಲ್ಲಿ ನಾಯಕ ಜನಾಂಗ, ಗುಮ್ನಳ್ಳಿ ಕದನ, ಸೀರ‍್ಯಾ ಲಾವಣಿ ಪದಗಳು ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ಇಂಥಾ ಮಹಾ ಪಂಡಿತನನ್ನು ಪಡೆದ ನಾಯಕ ಸಮಾಜ ಭಾಗ್ಯಶಾಲಿಯೆಂದು ಹೇಳಬಹುದು. ವೀರನಾಯಕರ ‘ಬದುಕು – ಬರಹ’ ಕುರಿತ ನೆನಪಿನ ಸಂಪುಟ ‘ಹರತಿಸಿರಿ’ ಪ್ರಕಟವಾಗಿದೆ. ಇದರ ಸಂಪಾದಕರು ಪ್ರೊ. ಲಕ್ಷ್ಮಣ್ ತೆಲಗಾವಿ ಅವರು. ೧೯೯೮ ರಿಂದ ಹರತಿ ವೀರನಾಯಕರ ಹೆಸರಿನಲ್ಲಿ ‘ಹರತಿ ವೀರನಾಯಕ ಪ್ರಶಸ್ತಿ’ಯನ್ನು ಸ್ಥಾಪಿಸಿದ್ದಾರೆ. ಈಗಾಗಲೇ ಎರಡು ಕೃತಿಗಳಿಗೆ (ತರೀಕೆರೆ) ಪಾಳೆಯಗಾರರು, ಗಾದರಿಪಾಲನಾಯಕ ಪ್ರಶಸ್ತಿ ನೀಡಲಾಗಿದೆ. ಒಟ್ಟಾರೆ ಹೇಳುವುದಾದರೆ ವೀರನಾಯಕರು ಸಮಾಜಸೇವೆಯನ್ನು ಮಾಡುವುದರ ಜೊತೆಗೆ ಜನಾಂಗದ ಚರಿತ್ರೆಯನ್ನು ದಾಖಲಿಸುವಲ್ಲಿ ಮಹಾಸಾಹಸಿಗರಾಗಿದ್ದಾರೆ. ನಿಜವಾದ ನಾಯಕರ ನಾಯಕನಾಗಿ ಪ್ರಸ್ತುತವಾಗಿದ್ದಾರೆ ಇವರು.

. ಮಲೆಸಿದ್ದಪ್ಪ

‘ಗಟ್ಟಿ ಹೊಸಹಳ್ಳಿಯ ಗಟ್ಟಿಗ’ನೆಂದು ಖ್ಯಾತರಾದ ಗಟ್ಟಿಹೊಸಹಳ್ಳಿಯ ಮಲೆಸಿದ್ದಪ್ಪನವರ ಹೆಸರು ನಾಯಕ ಜನಾಂಗದಲ್ಲಿ ಮನೆಮಾತಾಗಿದೆ. ಇವರು ಸ್ವಾತಂತ್ರ್ಯ ಹೋರಾಟಗಾರರು. ಸಮಾಜವಾದಿ ಧುರೀಣರು ಆಗಿದ್ದರ ಬಗ್ಗೆ ರೋಮಾಂತನ ಸಂಗತಿಗಳು ಪ್ರಚಲಿತವಾಗಿವೆ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಘಟ್ಟಿ ಹೊಸಹಳ್ಳಿಯ ಚಿಕ್ಕಣ್ಣ ಮತ್ತು ರಂಗಮ್ಮ ದಂಪತಿಗಳಿಗೆ (೭ ಜನ ಮಕ್ಕಳಲ್ಲಿ ದಿ. ೫.೭.೧೯೧೭ರಂದು) ೭ನೇಯವರಾಗಿ ಜನಿಸಿದವರೇ ಮಲೆಸಿದ್ದಪ್ಪನವರು. ಇವರು ಪೂರ್ವದಲ್ಲಿ ಅನ್ನೆಹಾಳ್‌ನವರು. ಪಟೇಲ್ ಮನೆತನವೆಂದು ಹೆಸರಾಗಿದ್ದು, ಘಟ್ಟಿಲೋಹದಿಂದ ಕತ್ತಿ, ಕಠಾರಿ ತಯಾರಿಸುತ್ತಿದ್ದರಂತೆ. ಇವರದು ಸುಶಿಕ್ಷಿತ ಕುಟುಂಬ. ೧೯೪೬ ಜೂನ್ ೫ರಂದು ತನ್ನ ಮಾವ ಆಡನೂರು ಶಿವಪ್ಪನವರ ಮಗಳು ಶಾರದಮ್ಮನವರನ್ನು ಮದುವೆಯಾದರು. ಇವರಿಗೆ ಒಂದು ಡಜನ್ ಮಕ್ಕಳು ೬ ಗಂಡು ೬ ಹೆಣ್ಣು.

ಬಾಲ್ಯ, ಶಿಕ್ಷಣ, ವೃತ್ತಿಗಳು ಭಿನ್ನದಾರಿಯಲ್ಲಿ ಸಾಗಿದ್ದವು. ಘಟ್ಟಿ ಹೊಸಹಳ್ಳಿ, ಗೊಡಬನಹಾಳ್, ದೇವಪುರಗಳಲ್ಲಿ ಪ್ರೌಢಶಿಕ್ಷಣದವರೆಗೆ ಅಭ್ಯಾಸ ಮಾಡಿದರು. ನಂತರ ಚಿತ್ರದುರ್ಗ, ೧೯೩೭ ರಲ್ಲಿ ಬೆಂಗಳೂರಿಗೆ ಇಂಟರ್‌ಮಿಡಿಯಟ್ ಸೇರಿದರು. ೧೯೩೯ ರಲ್ಲಿ ಮುಗಿಸಿದರು. ತಂದೆ ತೀರಿದ ನಂತರ ಶಿಕ್ಷಕರಾದ ಬಿ. ಮರಿಸಿದ್ದಪ್ಪನವರ ಪೋಷಣೆಯ ಫಲ ಇವರಿಗೆ ದೊರೆಯಿತು. ಬಿ.ಎಸ್.ಸಿ. ಪದವಿವರೆಗೂ ಶಿಕ್ಷಣ ಪಡೆದರು.

ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಇವರು ಧುಮುಕಿದರು. ೧೯೩೯ ರಲ್ಲಿ ಅನೇಕ ಹೋರಾಟಗಳಲ್ಲಿ ಗುರುತಿಸಿಕೊಂಡು ಸ್ವಾತಂತ್ರ್ಯ ಹೋರಾಟಗಾರನೆಂದು ಕರೆಸಿಕೊಂಡರು. ಜೊತೆಗೆ ರಾಜಕೀಯಕ್ಕೂ ಪ್ರವೇಶವಾಗಿ ಕಾಂಗ್ರೆಸ್ ಪಕ್ಷ ಸೇರಿದರು. ೧೯೪೨ ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಗಳಲ್ಲಿ ಭಾಗವಹಿಸಿದ್ದರು. ಅನೇಕ ಚಳುವಳಿಗಳಲ್ಲಿ ಭಾಗವಹಿಸಿ ಬ್ರಿಟಿಷರ ವಿರುದ್ಧ ಭೂಗತ ಕೆಲಸಗಳಲ್ಲಿ ತೊಡಗಿ ಕೂಗು ಎಬ್ಬಿಸಿದ್ದಕ್ಕೆ ಜೈಲಿಗೆ ಹೋಗಬೇಕಾಯಿತು. ೧೯೪೫ ರಲ್ಲಿ ಘಟ್ಟಿಹೊಸಹಳ್ಳಿಗೆ ಒಂದು ಗ್ರಾಮಪಂಚಾಯ್ತಿ ಅಧ್ಯಕ್ಷರಾಗಿ ಕಾಲು ಶತಮಾನವಿದ್ದರು. ೧೯೫೦ ರಲ್ಲಿ ಸಮಾಜವಾದಿ ಚಳುವಳಿಯಲ್ಲಿ ಗುರುತಿಸಿಕೊಂಡರು. ೩ ಬಾರಿ ವಿಧಾನ ಸಭೆಗೆ ನಿಂತು ೧೯೫೨ ರಲ್ಲಿ ಸೋತ ಕಹಿ ನೆನಪು ಇದೆ. ಎಸ್. ನಿಜಲಿಂಗಪ್ಪ, ಜೆ.ಎಚ್. ಪಾಟೇಲ್, ಶಾಂತವೇರಿ ಗೋಪಾಲಗೌಡ ಇವರ ಸಹಪಾಠಿಗಳು. ೧೯೬೮ ರಲ್ಲಿ ತಾಲ್ಲೂಕು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದು, ಅನೇಕ ಕೆಲಸಕಾರ್ಯಗಳನ್ನು ಉತ್ತಮವಾಗಿ ಮಾಡಿದ್ದರು. ಹೊ.ಚಿ. ಬೋರಯ್ಯ, ಎ.ಭೀಮಪ್ಪ ಗೆಳೆಯರ ಜೊತೆ ವಾಲ್ಮೀಕಿ ಜಯಂತಿ ಆದಾಗ ಇವರು ಪ್ರಮುಖ ಪಾತ್ರ ವಹಿಸಿದ್ದರು. ಜನಾಂಗಕ್ಕಾಗಿ ಅಪಾರವಾಗಿ ಶ್ರಮಿಸಿ ತಮ್ಮ ಅನುಪಮ ಕಾಣಿಕೆಯನ್ನು ಸಾರ್ವಜನಿಕ ಕ್ಷೇತ್ರಕ್ಕೆ ಬಿಟ್ಟು ಹೋಗಿದ್ದಾರೆ.

ರಾಜಕೀಯ ಧುರೀಣರಾದ ಎನ್.ಟಿ. ಬೊಮ್ಮಣ್ಣ ಮತ್ತು ತಿಪ್ಪೇಸ್ವಾಮಿ

 

ಚಿತ್ರದುರ್ಗ ಜಿಲ್ಲೆ ಮತ್ತು ಅದರ ಗಡಿ ಭಾಗಗಳಲ್ಲಿ ಅನೇಕ ಮಂದಿ ನಾಯಕ ಮುಖಂಡರು, ರಾಜಕಾರಣಿಗಳಿದ್ದಾರೆ. ಚಳ್ಳಕೆರೆಯ ಮಾಜಿ ಸಚಿವ ತಿಪ್ಪೇಸ್ವಾಮಿ, ಕೂಡ್ಲಿಗಿ ಮಾಜಿ ಶಾಸಕ ಎನ್.ಟಿ. ಬೋಮ್ಮಣ್ಣ ಅಲ್ಲೀಪುರದ ದಿ.ಜಿ. ಹನುಮಂತಪ್ಪ, ಜಗಳೂರಿನ ಮಾಜಿ ಶಾಸಕ ಎಂ. ಬಸಪ್ಪ, ಚಿತ್ರದುರ್ಗದ ಮದಕರಿ ವಿದ್ಯಾ ಸಂಸ್ಥೆಯ ಡಿ. ಬೋರಪ್ಪ ಮೊದಲಾದವರು ಇಲ್ಲಿ ಪ್ರಮುಖ ಮುಖಂಡರಾಗಿ, ರಾಜಕಾರಣಿಗಳಾಗಿ ಕಂಡುಬರುತ್ತಾರೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)