ಅಖಿಲಾಂಡಕೋಟಿ ಬ್ರಹ್ಮಾಂಡನಾಯಕ ಎಂಬ ಬಿರುದು ವಿಷ್ಣುವಿನಿಂದ ನಾಯಕರಿಗೆ ವರವಾಗಿ ಬಂದಿರುತ್ತದೆ. ಕೃತಯುಗದಲ್ಲಿ ನಳಚಕ್ರವರ್ತಿಗೆ ಬೇಟೆ ಹಾಗೂ ಯುದ್ಧಕ್ಕೆ ಬೇಡರ ಪಡೆಯಿತ್ತು. ನಳನ ಪತ್ನಿ ದಮಯಂತಿ ಕಾಡಿನಲ್ಲಿ ಅನಾಥಳಾಗಿರುವಾಗ ರಕ್ಷಿಸಿದ್ದು ಬೇಡರು. ತ್ರೇತಾಯುಗದಲ್ಲಿ ಬೇಡರು ಬೇಟೆ, ದರೋಡೆಕೋರ ವೃತ್ತಿಗಳಲ್ಲಿದ್ದು, ಪಶುಪಾಲನೆಯಲ್ಲಿ ತೊಡಗಿದ್ದರು. ಬೇಡರೆಂದರೆ ಯಾರಿಗೂ ಹೆದರದವರೆಂಬುದನ್ನು ಸೂಚಿಸುತ್ತಿತ್ತು ಈ ಕಾಲಘಟ್ಟ. ಬೇಡರಿಗೆ ಗಂಗಾ, ನರ್ಮದಾ, ತಪತಿ, ಕೃಷ್ಣಾ, ಚಿನ್ನಹಗರಿ, ತುಂಗಭದ್ರಾ ಮತ್ತು ಕಾವೇರಿ ನದಿಗಳು ಪವಿತ್ರವಾದವು. ಹಾಗೆಯೇ ಹಿಮಾಲಯ, ವಿಂದ್ಯಾ, ಪೂರ್ವ ಮತ್ತು ಪಶ್ಚಿಮ ಘಟ್ಟಗಳು ಪೂಜನೀಯವೆಂದು ನಂಬಿದ್ದಾರೆ. ಸೂರ್ಯ – ಚಂದ್ರರನ್ನು ನಿತ್ಯ ದೇವರೆಂದು, ಭೂಮಿಯನ್ನು ತಾಯಿಯೆಂದು ಪ್ರೀತಿಸುವ ಬೇಡರದು ಬದುಕು ಮತ್ತು ಬವಣೆಗಳೆರಡು ಪ್ರಕೃತಿ ಮಡಿಲಲ್ಲಿಯೇ ಎಂಬುದು ನಿಜ. ಮಣ್ಣಿನ ಮಡಿಕೆ, ಮರದ ಎಲೆ, (ಬಾಳೆ, ಆಲದ ಎಲೆ) ಕಾಡು, ಹಣ್ಣು, ಕಾಯಿಗಳಿಂದ ಜೀವನ ನಡೆಸುತ್ತಿದ್ದ ಇವರಿಗೆ ಬೇಟೆಯು ಬಗ್ಗಿಕೊಂಡಿದ್ದು ಆಕಸ್ಮಿಕವೇನಲ್ಲ. ಕಾಡುಪ್ರಾಣಿ, ಮೀನು ಬೇಟೆಗಳಲ್ಲಿದ್ದ ಇವರಿಗೆ ರಾಜಪ್ರಭುತ್ವದಲ್ಲಿ ಸ್ಥಾನ ಸಿಕ್ಕಿದ್ದು ಯುಗಾಂತರಗಳಿಂದಲೇ ಎನ್ನಬಹುದು. ಗುಹಾ ಎಂಬುವನು ಶ್ರೀರಾಮನನ್ನು ತನ್ನ ದೋಣಿಯಲ್ಲಿ ಗಂಗಾ ನದಿಯನ್ನು ದಾಟಿಸುವುದು ಪುರಾಣಸತ್ಯ. ರಾಮಾಯಣ ಪ್ರಸಂಗ ಸಂಭವಿಸುವುದಕ್ಕೆ ಮೊದಲೇ ಕಥೆ ಬರೆದವನು ವಾಲ್ಮೀಕಿ. ಸವ್ಯಸಾಚಿ, ಮೂರು ಲೋಕದ ಗಂಡ, ಮಧ್ಯಮ ಪಾಂಡವನಾದ ಅರ್ಜುನನಿಗೆ ಬಿಲ್ವಿದ್ಯೆಯಲ್ಲಿ ಸಮನಾದವನು ಏಕಲವ್ಯ. ಶೋಷಣೆಗೆ ಒಳಪಟ್ಟ ಬೇಡರ ಮೊದಲ ಬಾಲಕ ಇವನು. ತನ್ನೆರಡು ಕಣ್ಣುಗಳನ್ನು ಶಿವನಿಗೆ ಅರ್ಪಿಸುವ ಬೇಡರ ಕಣ್ಣಪ್ಪನ ದಾನ ಪ್ರವೃತ್ತಿ ಪ್ರಶಂಸನೀಯವಾದದು. ಮೂಗನಾಯಕನೆಂಬ ವೀರ ದ್ವಾಪರ ಯುಗದಲ್ಲಿ ಶ್ರೀಕೃಷ್ಣ ಪರಮಾತ್ಮನ ಅವತಾರವನ್ನು ತಾಳುತ್ತಾನೆ. ಬೇಡರ ಮಹಿಳೆಯರು ತ್ಯಾಗ – ಬಲಿದಾನದ ಸಂಕೇತವಾಗಿ ಕಂಡುಬರುತ್ತಾರೆ. ನೇಪಾಳದಲ್ಲಿ ಬುಡಕಟ್ಟು ಜನರು ಶ್ರೀರಾಮನ ಹೆಂಡತಿ ಸೀತೆಯನ್ನು ಬೇಡಜನಾಂಗದವಳೆಂದು ಪೂಜಿಸುವರು. ಶ್ರೀರಾಮಚಂದ್ರನ ದರ್ಶನಕ್ಕಾಗಿ ತನ್ನ ಜೀವನವನ್ನೇ ಮುಡಿಪಿಟ್ಟುಕೊಂಡ ಮಹಾಪತಿವ್ರತ ಸ್ತ್ರೀ ಶಬರಿ. ಬೋರೆ ಹಣ್ಣುಗಳನ್ನು ಶ್ರೀರಾಮನಿಗೆ ಕೊಟ್ಟಾಗ ಆತ ಸಂತೃಪ್ತಿಗೊಂಡಿದ್ದು ಬೇಡರವಳಿಂದ. ಆಕೆಯ ನೆಲೆ ಈಗಿನ ಹಂಪಿ ಪರಿಸರ.

ಚರಿತ್ರೆಕಾಲೀನ ಬೇಡರು ವಲಸೆಯಲ್ಲಿ (ಅಲೆಮಾರಿ) ನಿರತರಾಗಿದ್ದರು. ಉತ್ತರದಲ್ಲಿ ಆರ್ಯರ ಆಕ್ರಮಣದ ನಂತರ ಇವರು ಚೆಲ್ಲಾಪಿಲ್ಲಿಯಾದಂತೆ ಕಂಡುಬರುತ್ತದೆ. ವಿಂಧ್ಯಾಪರ್ವತಗಳಿಂದ ವಲಸೆ ಆರಂಭಿಸಿ ದಕ್ಷಿಣದ ಕಡೆಗೆ ಬೇರಡು ಧಾವಿಸುವರು. ಆಗ ಗುಪ್ತರು ಉತ್ತರದಲ್ಲಿ ಪ್ರಭುತ್ವಹೊಂದಿದ್ದರು. ಬೇಡರ ‘ಬುಟ್ಟುಗಲೋರು’ ಎಂಬ ಪಶುಪಾಲಕರ ಕುಟುಂಬ ವೃದ್ಧಿಯಾಗುತ್ತಾ ಬಂದಿತು. ಅದರಲ್ಲಿ ಗುಪ್ತಬೊಮ್ಮತ್ತಿರಾಜು, ಜಡಲ ಬೊಮ್ಮತ್ತಿರಾಜು, ಹೊಟ್ಟೆ ಬೊಮ್ಮತ್ತಿರಾಜು, ಎರಿಬೊಮ್ಮೆತ್ತಿರಾಜು, ಮರಿಬೊಮ್ಮತ್ತಿರಾಜು, ಬಂಗಾರು ಬೊಮ್ಮತ್ತಿರಾಜು ಮತ್ತು ಕೊಡಗುಬೊಮ್ಮತ್ತಿರಾಜು ಎಂಬ ಅಣ್ಣ – ತಮ್ಮಂದಿರು ತಮ್ಮ ವಂಶದ ಕಟ್ಟುಪಾಡುಗಳಲ್ಲಿಯೇ ಜೀವಿಸುತ್ತಿದ್ದರು.

ಹೀಗೆ ಇವರು ನೆಲಸಿರುವ ತಾಣಕ್ಕೊಮ್ಮೆ ವಿಷ್ಣು – ಲಕ್ಷ್ಮಿಯರ ಆಗಮನವಾಗಿ ಅವರಿಂದ ಬೇಡರು ಪಾವನಗೊಳ್ಳುತ್ತಾರೆ. ತರುವಾಯ ಈ ಪರಂಪರೆಯಲ್ಲಿ ಮಂದಭೂಪಾಲನು ಪ್ರಭುತ್ವ ಸ್ಥಾಪಿಸುತ್ತಾನೆ. ಬುಟ್ಟುಗಲೋರು ವಂಶ ಅಂದಿನಿಂದ ಮಂದಲಗೋತ್ರವಾಗಿ ಪರಿವರ್ತನೆಗೊಂಡಿತು. ಬೇಡರ ಸಮುದಾಯವನ್ನು ಅಭಿವೃದ್ಧಿಗೊಳಿಸುವಲ್ಲಿ ಶ್ರಮಿಸಿದ ಮತ್ತೊಬ್ಬ ನಾಯಕನೆಂದರೆ ಅಂಭೋಜರಾಜ. ಮಧ್ಯಭಾರತದ ಗೋದಾವರಿ ಪ್ರದೇಶದಲ್ಲಿ ಶುಕ್ಲಮಲ್ಲಿನಾಯಕನ ಪ್ರಭುತ್ವವು ಉದಯವಾಯಿತು. ಪೂರ್ವಜರಂತೆ ಇವನು ನಾಯಕ ಜನಾಂಗದ ಸಂಪ್ರದಾಯ, ಪರಂಪರೆಗೆ ಇಂಬುಕೊಟ್ಟು ಕಾರ್ಯಪ್ರವೃತ್ತನಾಗಿ ಜನಮನ್ನಣೆ ಗಳಿಸಿದನು. ದಾನಸಾಲಮ್ಮನು ಬೇರೆ ಜನಾಂಗಕ್ಕೆ ನೀಡಿದ ಕೊಡುಗೆಯನ್ನು ಮರೆಯುವಂತಿಲ್ಲ. ಆಕೆಯ ಪತಿ ಸೇವೆ, ಪ್ರಜಾ ಸೇವಾ ಮನೋಭಾವಗಳಿಂದ ಬೇಡಜನಾಂಗ ತನ್ನ ನೆಲೆಯನ್ನು ವಿವಿಧ ಕ್ಷೇತ್ರಗಳಲ್ಲಿ ಭದ್ರಗೊಳಿಸಿಕೊಳ್ಳಲು ಆಸ್ಪದವಾಯಿತು. ನಂತರದ ಅಂಭೋಜರಾಜನ ಸಹೋದರ ಸಂಬಂಧಿಗಳಾದ ಕಾಮಗೇತಿ ಭೂಪಾಲನು. ಜನಾಂಗದ ನಾಯಕತ್ವವನ್ನು ವಹಿಸಿಕೊಂಡ. ದಕ್ಷಿಣಭಾರತದಲ್ಲಿ ಕಾಮಗೇತಿಗಳ ಆಡಳಿತ ಸ್ಥಾಪನೆಯಾಗಿ, ಜನರಿಂದ ಪ್ರಶಂಸೆಗೊಳಗಾಗಿರುತ್ತಾರೆ ಈ ಅರಸರು. ಇಲ್ಲಿ ಪ್ರಭುತ್ವದೊಡನೆ ಅವಿನಾಭಾವ ಸಂಬಂಧವಿತ್ತು. ಆದರೂ ಮೂಲ ವೃತ್ತಿಗಳನ್ನು ಇವರು ಕೈಬಿಟ್ಟಿರಲಿಲ್ಲ. ಶುಕ್ಲಮಲ್ಲಿನಾಯಕ ಮತ್ತು ದಾನಸಾಲಮ್ಮನಿಗೆ ಚುಂಚುಲಕ್ಷ್ಮಿಯ ಜನನವಾಗುತ್ತದೆ. ಇವಳು ಎಲ್ಲಾ ಬುಡಕಟ್ಟು ಜನರಿಗೆ ಆರಾಧನಾ ದೇವತೆಯಾಗಿರುವಳು. ಇವಳ ಪತಿ ಶ್ರೀಮನ್ನಾರಾಯಣ. ಬೇಡರಿಗೆ ವೈಷ್ಣವರ ಪ್ರಭಾವ ಹಿಂದಿನ ಕಾಲದಿಂದಲೂ ಪ್ರಭಾವಿಸಿದ್ದರಿಂದಲೇ ಏನೋ ಇಂದು ವೈಷ್ಣವರೇ ಬಹುಸಂಖ್ಯಾತರಾಗಿರುವರು. ಪೆದ್ದಕ್ಕ ರಾಯಲದೇವಿ ದಾನಸಾಲಮ್ಮನ ಮಗಳು. ಇವಳ ಪ್ರಾವದಿಂದ ‘ವಡೆಲಾರು’ ಎಂಬ ಬೆಡಗಿನವರು ದೇವಾಲಯಗಳನ್ನು ಕಟ್ಟಿ, ಹಬ್ಬ ಆಚರಣೆಗಳನ್ನು ಮಾಡುತ್ತಾರೆ. ಇವಳಿಗೆ ೭ ಜನ ಮಕ್ಕಳಾಗುವುದು ಪವಾಡ ಸಾದೃಶ್ಯಸಂಗತಿ. ಹಿರಿಯನಾದ ಭಾನುಕೋಟಿರಾಜು, ಸೂರಪ್ಪರಾಜು, ಸೆಟ್ಲಪಟ್ಟಪ್ಪರಾಜು, ಕೋರ‍್ಲಿಮಲ್ಲಿರಾಜು, ಕಾಕುಮಂಚಿರಾಜು, ಪಾಪನ್ನರಾಜು ಮತ್ತು ತಿಪ್ಪಂಡರಾಜು ಇವರು ಪ್ರಭುತ್ವದೊಡನೆ ಹೊಂದಾಣಿಕೆ ಮಾಡಿಕೊಂಡು ಜನಾಂಗವನ್ನು ಅಭಿವೃದ್ಧಿಗೊಳಿಸಿದ್ದರು. ಇವರಿಂದ ಬೇಡರ ಮತ್ತೊಂದು ಪಂಗಡವಾದ ಮಲ್ಲಿನಾಯಕನವರು ಎಂಬುದು ಉದಯವಾಗುತ್ತದೆ. ಅನೇಕ ಬಳುವಳಿ, ಬಿರುದುಗಳು ಇವರಿಗೆ ಲಭಿಸುತ್ತವೆ.

ವಾಲ್ಮೀಕಿ ಅನೇಕ ಋಷಿಗಳ ಅಪ್ಪಣೆಯಂತೆ ತಮಸ ನದಿದಂಡೆ ಮೇಲೆ ಆಶ್ರಮ ಕಟ್ಟಿಕೊಂಡು, ಗುರುಕುಲ ನಡೆಸುತ್ತಿದ್ದರು. ನಾರದ ಮಹರ್ಷಿಗಳಿಂದ ವಾಲ್ಮೀಕಿ ಅನೇಕ ವಿಚಾರ ಸಂಗತಿಗಳನ್ನು ಪಡೆದುಕೊಂಡನು. ಒಂದು ದಿನ ತನ್ನ ಶಿಷ್ಯ ಭಾರದ್ವಜನೊಡನೆ ವಾಲ್ಮೀಕಿ ವಿಹರಿಸುತ್ತಿರುವಾಗ ಬೇಡನೊಬ್ಬ ಕಾಮಲೀಲೆಯಲ್ಲಿ ತೊಡಗಿದ ಕ್ರೌಂಚ ಪಕ್ಷಿಗಳನ್ನು ಬಿಲ್ಲಿಂದ ಹೊಡೆದು ಸಾಯಿಸಿದನಂತೆ. ಅವುಗಳೆರಡರ ರಾಸಲೀಲೆ, ದಾಂಪತ್ಯ ಬದುಕಿನ ಪರಿಯನ್ನು ಅರಿತ ಋಷಿಗಳು ಬೇಡನಿಗೆ ಶಾಪಕೊಟ್ಟರಂತೆ. ಕಾಲಾಂತರದಲ್ಲಿ ವಾಲ್ಮೀಕಿ ತನ್ನ ಮಡದಿ ಮಕ್ಕಳೊಂದಿಗೆ ಕಾಡಿನಿಂದ ನಾಡಿಗೆ ಬಂದು ಜೀವಿಸುತ್ತಾನೆ. ‘ರಾಮನಾಮ’ ಜಪಿಸಿ ಮಹರ್ಷಿಯಾದ ವಾಲ್ಮೀಕಿ ತನ್ನ ಪೂರ್ವಾಶ್ರಮವನ್ನು ತೊರೆದುದರಿಂದ ಅವರು (ಮಡದಿ – ಮಕ್ಕಳು) ಊರಲ್ಲಿ ನೆಲೆಸಿದರು. ವಾಲ್ಮೀಕಿ ಎಲ್ಲರನ್ನು ತೊರೆದು ಏಕಾಂಗಿಯಾಗತೊಡಗಿದಂತೆ ಅನಾಥರಾದ ಬೇಡರು ಊರು ಸೇರಿದ ಆತನ ಪರಿವಾರದಿಂದ ಊರು ನಾಯಕರು ಉದಯಿಸಿದರೆಂದು ಹೇಳಲಾಗುತ್ತದೆ. ಇದೇ ಸಮಯಕ್ಕೆ ಕಾಡಿನಲ್ಲಿ ಮತ್ತೊಂದು ಪಂಗಡ ಅಂಭೋಜರಾಜನ ನೇತೃತ್ವದಲ್ಲಿ ನೆಲಸಿದ್ದು ಮ್ಯಾಸನಾಯಕರಾಗಿ ಕರೆಸಿಕೊಳ್ಳುತ್ತಾರೆ. ಬಹುಶಃ ವಾಲ್ಮೀಕಿಯ ಕ್ರೌಂಚಪಕ್ಷಿಗಳ ಘಟನೆಯಿಂದ ಮ್ಯಾಸಬೇಡರು ಪಕ್ಷಿ ಪೂಜನೀಯವೆಂದು ಕೋಳಿಯನ್ನು ತಿನ್ನದೆ ಇರಬಹುದು. ಹಿಂಸೆ, ಕ್ರೌರ‍್ಯದ ಗುರಿಯಾಗಿರಬೇಕು. ಕಾಡಿನ ಬೇಡರು ತಮ್ಮ ಮೂಲ ಪುರುಷರನ್ನು ದೇವತೆಗಳೆಂದು ಆರಾಧಿಸಿಕೊಂಡು ಬಂದರೆ, ಊರು ಬೇಡರು ಆಂಜನೇಯ, ಮಾರಮ್ಮದೇವತೆಗಳನ್ನು ಪೂಜಿಸಿಕೊಂಡು ಬಂದಿದ್ದಾರೆ.

ಕಲಿಯುಗದಲ್ಲಿ ಶುಕ್ಲಮಲ್ಲಿನಾಯಕನ ಸಂತತಿ ಪ್ರವರ್ಧಮಾನಕ್ಕೆ ಬರುತ್ತದೆ. ಎರಮಂಚಿನಾಯಕ ಬೇಡ ಕಂಪಳಕ್ಕೆ ದೊರೆಯಾಗಿ, ನಾಯಕನಾಗಿ ಅನೇಕ ಕಾರ್ಯಚಟುವಟಿಕೆಗಳಿಂದ ನೊಂದು ಪೆದ್ದಕ್ಕರಾಯಲದೇವಿ ಮತ್ತು ಗೌರಸಮುದ್ರದ ಮಾರಮ್ಮನ ಆಶ್ರಯದಲ್ಲಿ ಜೀವೈಕ್ಯ ಸಮಾಧಿಯಾಗುವನು. ಇವನಿಗೆ ಕಾಲಭೈರವ ಒಲಿಯುವುದು, ಹೇಮಾವತಿ ತಪ್ಪಲಿನಲ್ಲಿ ಗೋವುಗಳೊಂದಿಗೆ ವಾಸಿಸುತ್ತಾನೆ. ಇವನೊಬ್ಬ ಜಾತ್ಯಾತೀತವ್ಯಕ್ತಿ. ಸಾವಿರಾರು ವರ್ಷಗಳ ಹಿಂದೆ ಎಲ್ಲರೂ ಸಮಾನರು, ಜಾತಿ – ಭೇದವಿಲ್ಲವೆಂದು ಸಾರಿದ ಮಹಾಸಾಧಕ. ಎಲ್ಲಾ ಜಾತಿಗಳಿಗೆ ತನ್ನ ಕಂಪಳದಲ್ಲಿ ಸ್ಥಾನಮಾನ, ಗೌರವಗಳನ್ನು ಕೊಟ್ಟು ಮಹಾತ್ಮನೆಂದು ಖ್ಯಾತನಾಗಿದ್ದನು. ಒಮ್ಮೆ ನಲ್ಲ ಪೂಜಾರ‍್ಲುಪೆಲ್ಲಿ (ಹಳೆ ಪೂಜಾರಹಳ್ಳಿ) ಹತ್ತಿರದಲ್ಲಿದ್ದ ತಾತಾಚಾರಿ – ತಿರುಮಲಾಚಾರಿಯನ್ನು ಸಂದರ್ಶಿಸುತ್ತಾನೆ. ಇವನೊಂದಿಗೆ ಗಗ್ಗರಿದಾಸರಿ ಇರುತ್ತಾನೆ. ಇವನ ೭ ಜನ ತಮ್ಮಂದಿರಾದ ಪಾಮಡಲೋರನ್ನು ಸಮಾಲೋಚನೆಗೆ ಆಹ್ವಾನಿಸುವನು. ಕಂಪಳದ ಅಭಿವೃದ್ಧಿಪಥ ಉತ್ತಮವಾಗಿ ಸಾಗಿತು. ನಲ್ಲಚೆರುವು ಎಂಬಲ್ಲಿ ಓಬಳದೇವರನ್ನು ಪ್ರತಿಷ್ಠಾಪನೆ ಮಾಡುವನು. ಆಗ ೯ ಜನ ಅಜ್ಜಿನವರಿಂದ (ಹಿರಿಯ) ಪ್ರಶಂಸೆಗೊಳಗಾದ. ರುದ್ರಮ್ಮನಹಳ್ಳಿಯಲ್ಲಿರುವ ನಲ್ಲ ಚೆರುವು ಓಬಳ ದೇವರನ್ನು ಬಿದ್ದನೋರು – ಸಾಕೇಲರು ಪೂಜಿಸುತ್ತಾರೆ. ಯರಮಂಚಿನಾಯಕನ ಚಿಕ್ಕಪ್ಪಂದಿರುಗಳಿಗೆ ತಲಾ ಒಬ್ಬೊಬ್ಬ ಮಕ್ಕಳು ಜನಿಸುತ್ತಾರೆ. ಕೋರ‍್ಲಮಲ್ಲಿರಾಜನಿಗೆ ರಪ್ಪಲಸೂರಿ, ಕಾಕುಳ್ಳಮಾರನಿಗೆ ಕೋರ‍್ಲಮಲ್ಲಿನಾಯಕ, ಸೂರಪ್ಪನಾಯಕನಿಗೆ ಗಾದರಿಪಾಲ ನಾಯಕ, ಸೆಟ್ಟಪ್ಪ ರಾಜನಿಗೆ ಪರದೇಶಿ ಪಾಪನಾಯಕ ಜನಿಸಿ ಯರಮಂಚಿನಾಯಕನ ಕಾಪು ಕಂಪಳದಲ್ಲಿ ಬೆಳೆದು ದೊಡ್ಡವರಾಗುತ್ತಾರೆ. ಇವರಿಗೆ ಜನಾಂಗದ ಒಂದೊಂದು ಜವಾಬ್ದಾರಿಗಳನ್ನು ವಹಿಸುತ್ತಾರೆ. ನಾಯಕ, ಪೂಜಾರಿಗಳನ್ನು ೩ ಜನರೆಂದು ನೇಮಿಸುವರು. ಯರಮಂಚಿನಾಯಕ ಮಳೆಲಾರನ್ನು ಭೇಟಿಮಾಡುವನು. ಇವರ ೭ ಜನ ಅಣ್ಣ – ತಮ್ಮಂದಿರು ಇಂತಿದ್ದರು: ಇಮ್ಮಡಿರಾಜು, ಗುಮ್ಮಡಿರಾಜು, ಸೊಟ್ಟಪ್ಪರಾಜು, ಸೆಟ್ಟಪ್ಪರಾಜು, ಬೊಮ್ಮಪ್ಪರಾಜು ಮತ್ತು ಮಳೆಲರಾಜು. ಗೆದ್ವಾಲ್ ಸೀಮೆಯಲ್ಲಿ ಮುಸ್ಲಿಂ ರಾಜನೊಬ್ಬ ಆಳ್ವಿಕೆ ನಡೆಸುತ್ತಿದ್ದಾಗ (ನಿಜಾಮ?) ಬೇಡರ ವಿಮೋಚನೆಗಾಗಿ ಯರಮಂಚಿನಾಯಕ, ಗಗ್ಗರಿದಾಸರಿಬ್ಬರು ಹೋಗಿ ಬರುತ್ತಾರೆ. ಪೆನ್ನೋಬಳ, ಅಹೋಬಲ, ಬುಗ್ಗೋಬಳ ದೇವರುಗಳನ್ನು ನಿರ್ಮಾಣ ಮಾಡುವರು. ೮ – ೧೦ ಕಡೆ ಓಬಳದೇವರುಗಳನ್ನು ಸ್ಥಾಪಿಸುವರು. ಯರಮಂಚಿನಾಯಕ ತನ್ನ ಜನಾಂಗದ ಅಭಿವೃದ್ಧಿ ಆಗಬೇಕಾದರೆ ಎಲ್ಲರೂ ಐಕ್ಯತೆಯಿಂದ ಇರಬೇಕು ಎನ್ನುತ್ತಾರೆ. ಇದಕ್ಕೆ ಅಜ್ಜನವರೆಂಬ ಹಿರಿಯರು ಯಜಮಾನರಾಗಬೇಕು. ಅಲ್ಲದೆ, ಜಾತಿಯಲ್ಲಿ ಕಲಹ, ಸಂಘರ್ಷಗಳಾಗದಂತೆ ವ್ಯಾಜ್ಯಗಳನ್ನು ತೀರ್ಮಾನಿಸಲು ಕಟ್ಟೆಮನೆಗಳನ್ನು ಸ್ಥಾಪಿಸಿ ೩ ಜನ ನಾಯಕರನ್ನು ಅವುಗಳಿಗೆ ಗೊತ್ತುಪಡಿಸುತ್ತಾನೆ. ದೊರೆ, ದಳವಾಯಿ, ನಾಯಕ, ಹಿರಿಯ, ಪೂಜಾರಿ, ಕಿಲಾರಿಗಳು ಈ ವ್ಯಾಪ್ತಿಗೊಳಪಡುವರು.

ಗಾದರಿಪಾಲನಾಯಕ ರಪ್ಪಲಸೂರಿಯೊಂದಿಗೆ ತನ್ನ ಪಶುಗಳನ್ನು ಒಡೆಸಿಕೊಂಡು ಗೋದಾವರಿ ಪ್ರದೇಶದಿಂದ ಕರ್ನಾಟಕಕ್ಕೆ ಸಂಚರಿಸಿಬಂದರು. ಬರಗಾಲಕ್ಕೆ ತುತ್ತಾಗಿ ಗಾದರಿಪಾಲನಾಯಕ ತನ್ನ ಪಶುಗಳನ್ನು ರಕ್ಷಿಸಿದ. ಸೆಟ್ಟೂರು ಕಾಡಿಗೆ ತನ್ನ ಪಶುಗಳನ್ನು ಹೊಡೆದುಕೊಂಡು ಹೋದ ಗಾದರಿ ಅಲ್ಲಿ ಸೊಟ್ಟಪ್ಪರಾಜನ ಕಪಿಮುಷ್ಠಿಗೆ ಸಿಲುಕಿ ಅವನ ರಾಜಕುಮಾರಿಯರನ್ನು ಮದುವೆಯಾದ. ಕೆಂಚವ್ವ ಕಾಮವ್ವನವರು ಪಶುಪಾಲಕ ಗಾದರಿಗೆ ಮೋಹಿಸಿ ಮದುವೆಯಾದರೂ ನಿರೀಕ್ಷಿಸಿದ ಸುಖ ಪಡೆಯುವಲ್ಲಿ ವಿಫಲರಾದರಲ್ಲದೆ, ವಿಧಿ ಆಟವೇ ಬೇರೆ ಆಗಿತ್ತು. ಹುಲಿ ದಂಪತಿಗಳೊಂದಿಗೆ ಒಪ್ಪಂದ, ಹುಲಿಮರಿಗಳ ಸಾವು, ವಚನಭ್ರಷ್ಟನಾದ ಗಾದರಿಯು ಉಳಿಗಾಲವಿಲ್ಲದೆ ಅವಸಾನ ಹೊಂದಿದ. ಗಂಗೆಯು ಸಹಾ ಇವನ ಸತ್ಯಕ್ಕೆ ಬೋರ್ಗರೆಯುವ ಹಳ್ಳವಿದ್ದರು ದಾರಿಬಿಡುತ್ತದೆ. ಸತ್ಯವಂತನಾದ ಪಾಲನಾಯಕನಿಗೆ ಚಿನ್ನಪಾಲನಾಯಕನೆಂಬ ತಮ್ಮನು, ಕಾಟಯ್ಯ – ಚಿತ್ತಯ್ಯರೆಂಬ ಭಾವಮೈದುನರು ಇದ್ದರು. ಹುಲಿಗಳೊಂದಿಗೆ ಹೊರಾಡುವಾಗ ಗಾದರಿ ಮಡಿಯುತ್ತಾನೆ. ಹೆಂಡತಿಯರು ಸಹಗಮನ ಕೈಗೊಳ್ಳುತ್ತಾರೆ. ಅಂದನೂರು, ಗಂಜಿಗಟ್ಟೆ, ಮುತ್ತುಗದೂರುಗಳಲ್ಲಿ ನಾಯಕ ಜನಾಂಗದವರು ಈ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿರುವರು. ಸೆಟ್ಟೂರು ಕಾವಲಿನ ಮುಂಡಬಂಡೆ, ಬೋರವನಗೊಂದಿ, ಮಿಂಚೇರಿ ಅರಣ್ಯದಲ್ಲಿ ಕಾಪುಕಂಪಳವಿದ್ದುದರಿಂದ ದೇವರುಗಳ ಮೂಲಸ್ಥಾನವೆಂದು ಗುರುತಿಸಲಾಗಿದೆ. ನಂತರ ಕಾಟೇಲಿಂಗ, ಸೂರಲಿಂಗ ಮತ್ತು ಚಿತ್ರಲಿಂಗ ದೇವರುಗಳನ್ನು ಪೂಜಿಸುವುದು ವಾಡಿಕೆಗೆ ಬಂದಿತು.

ವೀರರ ಸಾಧನೆಗಳು ಜನಾಂಗದ ಅಭಿವೃದ್ಧಿಗೆ ವರವಾಗಿ ಪರಿಣಮಿಸಿದರೆ, ಕೆಲವರಿಂದ ಮಾರಕವೆಂದು ತಿಳಿಯಲಾಗಿತ್ತು. ಪರಂಪರಾಗತವಾಗಿ ದೇವರುಗಳ ಆರಾಧನೆಯು ಸಾಗುತ್ತಿತ್ತು. ರುದ್ರಮ್ಮನಹಳ್ಳಿಯಲ್ಲಿ ನಲ್ಲಚೆರುವು ಓಬಳದೇವರನ್ನು ಸ್ಥಾಪಿಸಿ ಸಾಕೇಲರ ಪೂಜಿಸುವಂತೆ ಮಾಡಿದರು. ಮಲ್ಲೂರಹಳ್ಳಿ ರಾಜಲದೇವರನ್ನು ಯರಮಂಚಿನಾಯಕ ಸ್ಥಾಪಿಸುತ್ತಾನೆ. ಗಾದರಿಪಾಲನನ್ನು ಹುಡುಕುವಾಗ ಈ ಘಟನೆ ನಡೆಯುತ್ತದೆ. ಮಂದಲೋರ ಮನ್ನಲು ಮಹದೇವಯ್ಯನ ಹಿರಿಯಮರ ‘ಮನ್ನುಲೋಡು’ ಇದರ ಪೂಜಾರಿ ಮತ್ತು ಯಜಮಾನನಾದ. ಹೀಗೆ ತಮ್ಮ ವೀರರ, ನಾಯಕರ ಆರಾಧನೆಯೊಂದಿಗೆ ಅಲೌಕಿಕ ದೇವರುಗಳನ್ನು ಪೂಜಿಸುವ ಪದ್ಧತಿಗಳು ಇವರಲ್ಲಿದ್ದವು. ದೇವರ ಇರುವಿಕೆ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದ ಬೇಡರು ಚಾರಿತ್ರಿಕ ವ್ಯಕ್ತಿಗಳಿಗಿಂತ ಪುರಾಣ ಪುರುಷ. ಆಧ್ಯಾತ್ಮಿಕ ದೇವತೆಗಳನ್ನು ಪೂರ್ವಜರನ್ನು ಹೆಚ್ಚಾಗಿ ಅವಲಂಬಿಸಿದ್ದರು.

ಪಶುಪಾಲಕರಾದ ಬೇಡರು ಪ್ರಕೃತಿಯ ವೈಪರಿತ್ಯಗಳಿಗೆ ತಮ್ಮದೇ ಆದ ನಂಬಿಕೆಗಳನ್ನು ಸೃಷ್ಟಿಸಿಕೊಂಡಿರುತ್ತಾರೆ. ಕಾಟಮಲ್ಲನಾಯಕನ ನೇತೃತ್ವದಲ್ಲಿ ಶ್ರೀಶೈಲದ ಎತ್ತುಗಳು ಬಂದು ತುರುವನೂರು ಬಳಿ ತಂಗುತ್ತವೆ. (ತುರು = ಆಕಳು) ಇಲ್ಲಿ ಮಂದೆಕಟ್ಟೆ, ಕಡಬನಕಟ್ಟೆ, ತೋರಣಗಟ್ಟೆ, ಬಿದರಕೆರೆ ಇತರ ಸ್ಥಳಗಳ ಮೂಲಕ ಗುಹೇಶ್ವರನ ಬೆಟ್ಟಕ್ಕೆ ಬಂದರು. ಹೀಗೆ ಪಶುಪಾಲನಾ ಸಂಸ್ಕೃತಿಯಲ್ಲಿ ಬೇಡರು ತಮ್ಮ ಅನನ್ಯತೆಯನ್ನು ಉಳಿಸಿಕೊಳ್ಳಲು ಶ್ರಮಿಸಿದ್ದು ತಮ್ಮ ವೀರರಿಂದ ಒಮ್ಮೆ ಮುತ್ತಿಗಾರ ಹಸುವು ಗರ್ಭವಾಗಿ ಕರು ಹಾಕದೆ ಗರ್ಭಪಾತವಾಗುತ್ತಿತ್ತು (ಕಂದು = ಮಾಸ). ಆ ಮಾಂಸದ ಕಣಗಳಿಂದ ನಾಲ್ಕು ಜನ ಮಕ್ಕಳು ಹುಟ್ಟುತ್ತಾರಂತೆ. ಅವರಿಗೆ ಮಾಸಿಲುವಾರು ಎಂದು ಹೆಸರು. ಮಂಗಪೋಟಿಮಾಸಿಲುವಾಡಿ, ವರವು ಮಾಸಿನವಾಡು, ಕೊತ್ತಕೋಟಮಾಸಿಲವಾಡು ಮತ್ತು ಕುಂಟುಮಾಸಿಲವಾಡು ಎಂಬುವರು. ಜನ್ನಿಗೆ ದನಗಳಿಗೆ ಇವರು ಪೂಜಿಸುತ್ತಿದ್ದರು. ಆ ಹಳ್ಳಗೆ ಜನ್ನಿಗೆ ಹಳ್ಳವೆಂದು (ಚಿನ್ನಹಗರಿ) ಕರೆದರು.

ಗಾದರಿಗುಡ್ಡದಿಂದ ಪಾಲಯ್ಯನ ಮುತ್ತಿಗಾರ ಎತ್ತುಗಳನ್ನು ಯರಮಂಚಿನಾಯಕ ಹೊಡೆದುಕೊಂಡು ಬಂದನು. ಹೀಗೆ ಬರುವಾಗ ಬುಲ್ಲಡವಾಡು ಬಂಗಾರ ದೇವರನ್ನು ಪೂಜಿಸಲು ಹೇಳಿದ. ಯರಮಂಚಿನಾಯಕ ನಿಡಗಂಟಿ (ನಿಡಗಲ್ಲು) ಕಡೆ ತನ್ನ ಕಾಪು ಕಂಪಳದೊಂದಿಗೆ ನಡೆದ. ಅಲ್ಲಿ ವಟ್ಟಳ್ಳ ನಾಯಕನ ಆಳ್ವಿಕೆ ಇತ್ತು (ಮೊಳಕಾಲ್ಮೂರು ತಾ ಮತ್ತು ಪಾವಗಡ ತಾಲೂಕಿನ ಮಧ್ಯದ ಭಾಗ). ಇಲ್ಲಿ ತಮ್ಮ ಸಂಪ್ರದಾಯಗಳ ವಿರುದ್ಧವೇ (ಭತ) ಮತ್ತೊಬ್ಬರು ಲೋಪ ಮಾಡುವುದುಂಟು. ವರ್ಧನಿಕುಂಟೆ, ದಡ್ಡಿಹಳ್ಳಿ, ರಂಗಸಮುದ್ರಗಳಲ್ಲಿ ಈ ಬಗ್ಗೆ ಪ್ರತಿರೋಧ ಕಂಡುಬಂತು.

ಬೇಡರ ಜನಸಂಖ್ಯೆ ಹೆಚ್ಚಾಗಿ ಒಂದು ಶಿಸ್ತಿನ ಚೌಕಟ್ಟಿನೊಳಗೆ ಪ್ರವೇಶಿಸಿತು. ಯರಮಂಚಿನಾಯಕನು ಜಾತಿ ಬಾಹಿರರಾದ ಬ್ರಾಹ್ಮಣರಿಗೆ ತನ್ನ ಜಾತಿಯಲ್ಲಿ ಸೇರಿಸಿಕೊಂಡು ಅವರಿಗೆ ‘ನಲ್ಲಬಾಪುಲು’ ಎಂದು ಕರೆದ. ಬ್ರಾಹ್ಮಣರ ಕನ್ಯೆಯರು ಅಡವಿ ಪಾಲಾಗುವುದನ್ನು ತಪ್ಪಿಸಿ ಬೇಡರೊಂದಿಗೆ ಮದುವೆ ಮಾಡಿದ. ಲಂಬಾಣಿ ತಾಂಡದ ನಾಯಕರಿಗೆ ಧರ್ಮ ದೀಕ್ಷೆ ನೀಡಿದ ನಾಯಕ ತನ್ನ ಜಾತಿಯಲ್ಲಿ ಸೇರಿಸಿಕೊಂಡನು. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನಲ್ಲಿ ಈ ಬಗ್ಗೆ ಮಾಹಿತಿ ಸಿಗುತ್ತದೆ.

ನಿಡಗಲ್ಲಿನಿಂದ ಮರಳಿ ಬಂದ ಯರಮಂಚಿನಾಯಕ ಚಿಂತಗುಟ್ಲು ಬೋರವನನ್ನು ಕುದಾಪುರದ ಬಳಿ ಸ್ಥಾಪಿಸಿದ. ದಡ್ಲುಮಾರಮ್ಮನನ್ನು ದೇವರಹಳ್ಳಿಯ ಬಳಿ ಸ್ಥಾಪನೆ ಮಾಡಿದ. ಸಿರವಾಳ ಓಬಳದೇವರು, ಬುಲ್ಲಡಲೋರ ಬಂಗಾರಿ ದೇವರುಗಳು ಈ ಮುಂಚೆಯೇ ಆರಾಧನೆಗೊಳಗಾಗಿದ್ದವು. ತನ್ನ ಪ್ರದಕ್ಷಿಣೆಯಲ್ಲಿ ಯರಮಂಚಿನಾಯಕ ಚಳ್ಳಕೆರೆ ತಾಲೂಕಿನ ಬುಕ್ಕಾಂಬೂದಿಯಲ್ಲಿ ಶುಕ್ಲಮಲ್ಲಿನಾಯಕನ ಪ್ರಾಣಲಿಂಗ ಮತ್ತು ಅಹೋಬಲ ನರಸಿಂಹನನ್ನು ಪ್ರತಿಷ್ಠಾಪನೆ ಮಾಡುತ್ತಾನೆ. ಹಾಗೆಯೇ ಮುಂದಿನ ಗ್ರಾಮ ಐವೋದಿಗೆ ಬಂದ ನಾಯಕ ಗೌರಸಮುದ್ರದ ಮಾರಮ್ಮ ಮತ್ತು ಬೊಮ್ಮದೇವರನ್ನು ಸ್ಥಾಪಿಸಿದನು.

ಬೇಡಗಂಪಳ ಪ್ರಸಿದ್ಧಿ ಪಡೆಯುತ್ತಿದ್ದಂತೆ ವಿರೋಧಿಗಳ ಉಪಟಳ ಶುರುವಾಗುತ್ತದೆ. ೧೨ಪೆಟ್ಟಿಗೆ ದೇವರು, ೯ ಅಜ್ಜನವರನ್ನು ನರಕಾಸುರನು ನರಕದಕೋಟೆಯಲ್ಲಿಟ್ಟಿದ್ದನಂತೆ. ಇವುಗಳನ್ನು ಬಿಡಿಸಿಕೊಂಡು ಬರಲು ಕೊಡಗುಬೊಮ್ಮಯ್ಯ ವೀಳ್ಯೆ ಹಿಡಿಯುವುದುಂಟು. ಬುಟ್ಟುಗಲೋರ ವಂಶಕ್ಕೆ ಸೇರಿದ ಇವನು ಅಸಮಬಲ ಪರಾಕ್ರಮಿಯಾಗಿದ್ದ. ಕೊಡಗುಬೊಮ್ಮನಿಂದಲೇ ತಂಗಿ ದೇವಮ್ಮ ದುರಂತ ಸಾವನ್ನಪ್ಪುತ್ತಾಳೆ. ಬೇಡಗಂಪಳಕ್ಕೆ ಇವನು ದೊರೆಯಾಗಿ ಆಳ್ವಿಕೆ ನಡೆಸುವಲ್ಲಿ ಕೆಲವು ನೀತಿಗಳಿಂದ ವಿಫಲನಾದ. ಕೈಲಾಸಕೊಂಡದ ಮೇಲಿನ ಪರ್ವತದಲ್ಲಿ ಕಾಲಭೈರವ ಸಾಲಿಗ್ರಾಮವನ್ನು ಸ್ಥಾಪಿಸಿದರು. ಹೀಗೆ ಕಂಪಳದೇವರನ್ನು (ಬುಡ್ಡೆಪಾಪಲು) ಪ್ರತಿಷ್ಠಾಪಿಸಿದರು. ಇವರ ಮೇಲೆ ರಾಯದುರ್ಗದ ಯರಬೊಮ್ಮಳನಾಯಕನ ಹಾವಳಿ ಹೆಚ್ಚಾಗಿ ಆಗಾಗ ಅವನ ಧಾಳಿಗೆ ತುತ್ತಾಗಿದ್ದರು. ಇವನ ಧಾಳಿಯನ್ನು ಎದುರಿಸಲು ಸಿದ್ಧರ ಪೂಜೆಯನ್ನು ಮಾಡುತ್ತಾರೆ.

ದಡ್ಡಿಸೂರನಾಯಕನು ಗಲಗಂಟೆ ಗಾದಿ (ಜ) ನಾಯಕನ ಪತ್ನಿಯನ್ನು ಅಪಹರಿಸಿಕೊಂಡು ಹೋಗುವುದು, ಇವರಿಬ್ಬರಿಗೆ ಕಾಳಗ ನಡೆದು ಗಾಜನಾಯಕ ಸಾಯುವುದು ಗಮನಾರ್ಹ. ಕಾಪು ಕಂಪಳ ಮುತ್ತಿಗಾರ ಎತ್ತುಗಳು ಒಂದೆಡೆ ತಂಗಿದವು. ಆ ಸ್ಥಳ ಮುತ್ತಿಗಾರ ಹಳ್ಳಿಯಾಯಿತು. ದಡ್ಡಿಸೂರನಾಯಕನ ಕಾಪು ಕಂಪಳ ತಂಗಿದ್ದು ಸೂರನಹಳ್ಳಿ (ಮ್ಮ) ಹತ್ತಿಕ್ಕಲು ಮುಂದಾದರು. ಯರಮಂಚಿನಾಯಕ ಈ ಘಟನೆಯಿಂದ ಅಜ್ಞಾತವಾಸ ಕೈಗೊಂಡನು. ಅರೆ ಬುಡಬುಡಿಕೆಯವನ (ಕಿಂದರಿಜೋಗಿಗಳಂತೆ) ಹಾಲಹಕ್ಕಿಯ (ನಿಶಾಚರ) ಸ್ವರವನ್ನು (ಅವುಲ) ಆರಿಸಿಕೊಂಡು ಭವಿಷ್ಯ ಹೇಳುತ್ತಾನೆ. ಹೀಗೆ ಹೇಳುವಾಗ ಸುರೇಶನ ಕಾಮಡು ಮರಣ ಹೊಂದುತ್ತಾನೆಂದು ತಿಳಿದುಬರುತ್ತದೆ. ಮೂಡುರ‍್ಲುಗುಡ್ಡ, ಊಡುಡ್ಲಗಡ್ಡೆ, ದಿದ್ದಿಲಾರುಪುರ (ರುದ್ರಮ್ಮನಹಳ್ಳಿ), ಹಿರೇಹಳ್ಳಿಗಳು ನಿರ್ಮಾಣಗೊಂಡವು. ಸುಂದರ ಪರಿಮಳ ಮಲ್ಲಿಗೆ ಹೂವು ತಂದು, ಉಗ್ಗಿಯನ್ನು ಹೊಯ್ದು ಪೆದ್ದಪಲ್ಲಿ (ಹಿರೇಹಳ್ಳಿ) ಯನ್ನು ಸ್ಥಾಪಿಸುವರು. ಸೂರಿನಂದನ ಅಲುಗಿನಲ್ಲಿ ದೊಡ್ಡಸೂರನಾಯಕ (ದ) ದೇವರಾಯಿತು.

ಯರಮಂಚಿನಾಯಕನ ನೇತೃತ್ವದಲ್ಲಿ ಗೂಳಮುಗೋತ್ರ ಉದ್ಭವವಾಯಿತು. ಇವರಿಗೆ ಗಂಟೆ ಪವಿತ್ರವಾದುದರಿಂದ ಗಂಟೆಬಾರಿಸಿಕೊಂಡು ಜೀವಿಸುವ ಗಂಟೆಗೂಳೆ ಮುಲಾರು ಎಂದಾದರು ಕ್ರಮ ಸಂತಾನವು ಬೇಡರಲ್ಲಾದುದನ್ನು ನೋಡಬಹುದು. ಪೆಯಿಲುನಾಯಕನ ಜೀವನ ಚರಿತ್ರೆಯಲ್ಲಿ ಈ ಅಂಶ ಅಡಕವಾಗಿದೆ. ದಡ್ಡಿಸೂರನಾಯಕನು ಗಲಗಂಟಿಗಾಜ ನಾಯಕನ ಹೆಂಡತಿ ಓಬವ್ವಳನ್ನು ಮೋಹಿಸಿದ್ದು, ಒಂದು ದಿನ ಅವಳು ತನಗಿಷ್ಟವಾದ ಸೀರೆಯಿಟ್ಟು ರಾತ್ರಿ ದಡ್ಡಿಸೂರನ ರೊಪ್ಪಕ್ಕೆಂದು ಬರುತ್ತಾಳೆ. ತುಂಬು ಗರ್ಭಿಣಿಯಾ ಇವಳನ್ನು ಕಾಡುಪ್ರಾಣಿಯೆಂದು ನಾಯಕ ಬಾಣಬಿಟ್ಟು ಕೊಲ್ಲುತ್ತಾನೆ. ಗರ್ಭಪಾತವಾಗಿ ಮಗು ಹೊರಬಂದಾಗ ಚಿಂತಾಜನಕ ಸ್ಥಿತಿಯಲ್ಲಿರುತ್ತದೆ. ದಡ್ಡಿಸೂರ ತನ್ನ ಕರುಗಳೊಂದಿಗೆ (ಪೆಯಲು) ಅವನನ್ನು ಬೆಳೆಸಿದ್ದರಿಂದ ಪೆಯಲುನಾಯಕ ಎಂದು ಹೆಸರಾಯಿತೆಂದು ಚಿತ್ರದುರ್ಗ ಪರಿಸರದ ನಾಯಕರು ತಿಳಿಸುತ್ತಾರೆ.

ಕೊಡಗುಬೊಮ್ಮನ ಆಳ್ವಿಕೆ ತೀವ್ರ ದುಃಖವನ್ನುಂಟುಮಾಡಿತ್ತು. ದೊರೆಗಳು – ದಳವಾಯಿ ಇವನ ಬಗ್ಗೆ ಚಿಂತನೆ ನಡೆಸಿದರು. ಆ ಸ್ಥಳವೇ ಚಿಂತಗುಂಟ್ಲು. ಅಲ್ಲಿ ಭೈರವನ ಪಾಡ್ಯ ಮಾಡಲಾಗಿ ಬೊಮ್ಮನ ಅವಸಾನವನ್ನು ಎಲ್ಲರೂ ಬಯಿಸಿದರು. ಅದರಂತೆ ಬೊಮ್ಮ ಊಟಕುಂಟೆಯಲ್ಲಿ ಮರಣ ಹೊಂದುತ್ತಾನೆ. ಅವನನ್ನು ಬುಕ್ಕಾಂಬೂದಿ ಕೆರೆ ಅಂಗಳದಲ್ಲಿ ಸಮಾಧಿ ಮಾಡಿದರು. ನಂತರ ಮಂಗಪೋಟಿ ಮಾಸಿಲುವಾಡು ಅವನ ತಮ್ಮ ಕುಂಟಿಮಾಸಿಲು ವಾಡು ಎಂಬುವರು ಮಂಗಪೋಟಿ ಓಬಳದೇವರನ್ನು ನಿರ್ಮಿಸಿದರು. ಮಂಗಪೋಟಿ ಮಾಸಿಲುವಾಡು ಹಂಪೆಯ ಚಕ್ರತೀರ್ಥದಲ್ಲಿ ಮಂಗಪೋಟಿ ಓಬಳ ದೇವರನ್ನು ಹಾಕಿ, ಕೇವಲ ಬಿರುದಾವಳಿಗಳನ್ನಷ್ಟೇ ಮರಳಿ ತರುತ್ತಾನೆ. ಯರಮಂಚಿನಾಯಕ ೧೨ ಪೆಟ್ಟಿಗೆ ದೇವರುಗಳ ಪೈಕಿ ದೊಡ್ಡತಿರಮಲ ದೇವರನ್ನು ಆನೆಗುಂದಿಯಿಂದ ತರುತ್ತಾನೆ. ಈ ದೇವರನ್ನು ತಂದಾಗ ಆನೆಗುಂದಿ ಅರಸರಿಗೂ ಮತ್ತು ಬೇಡರಿಗೆ ಯುದ್ಧವಾಗುತ್ತದೆ. ದೇವರನ್ನ ತಂದು ಕೆರೆ ನೀರಲ್ಲಿ ಬಚ್ಚಿಡುತ್ತಾರೆ. ಬಂಜಿಗೆರೆ ಕೆರೆ ನೀರಿನಲ್ಲಿದ್ದ ದೊಡ್ಡ ತಿರುಮಲ ದೇವರನ್ನು ಕಾಲೆತ್ತಿನವನು ಕರೆತರುತ್ತಾನೆ. ತಂದು ಬೇಡರೆಡ್ಡಿಹಳ್ಳಿಯಲ್ಲಿ ಪ್ರತಿಷ್ಠಾಪಿಸಿದರು. ಈ ದೇವರ ಮೊದಲ ಪೂಜೆ ಕಾಲೋರಗೋತ್ರದವರಿಗೆ ಸಲ್ಲುತ್ತದೆ.

ದನಗಾಹಿ ಯರಗಾಟನಾಯಕ, ಬಾಗೇನಾಳು ಕಾಮನಾಯಕ, ಗುಜಗುತ್ತಲ ಖ್ಯಾತಯ್ಯ ತಮಟಕಲ್ಲು ಓಬವ್ವನಿಗೆ ಮರುಳಾಗಿ ಸಾವನ್ನಪ್ಪಿದ ದುರಂತ ನಾಯಕರಾಗಿದ್ದಾರೆ. ವಲಸೆ ನಿರ್ಮಾಣ, ಯರಗಾಟನ ದೇವಾಲಯ ಇಲ್ಲಿದೆ. ಸಿನ್ನಪಲ್ಲಿದಿದ್ದಲೋರು, ಪಾಮಡ ಲೋರು, ಅಲಿಕಿಶಿರಿ ನಾಯಕ, ರಪ್ಪಲಸೂರಿ ಮ್ಯಾಸಮಂಡಳಿಯಿಂದ ದೂರಾದುದು, ಮುತ್ತಿಗಾರ ಎತ್ತುಗಳ ಪ್ರದರ್ಶನ, ನದಿಯಲ್ಲಿ ತಂದ ನೀರು ಹಾಲಾಗಿದ್ದು ಇವೆಲ್ಲ ಘಟನೆಗಳು – ವ್ಯಕ್ತಿಗಳನ್ನು ಆರಾಧಿಸುವುದರ ಮೂಲಕ ಮ್ಯಾಸಮಂಡಳಿ ಅಭಿವೃದ್ಧಿ ಹೊಂದುತ್ತಾ ಬಂತು.

ಅಲಿಕಿಸಿರಿ ನಾಯಕನ ದೊರೆಸಾನಿಗೆ (ಪತ್ನಿ) ಅಚ್ಚವಲ್ಲಿನಾಯಕ ಎಂಬ ಮಗು ಜನಿಸುತ್ತದೆ. ರಪ್ಪಲಸೂರಿ ತಂದೆಯಿಲ್ಲದೆ, ಇತರರಿಗೆ (ಗಂಡಬಿಟ್ಟ ಹೆಣ್ಣು) ಹುಟ್ಟಿದವನೆಂದು ದ್ಯಾವುಡ್ಲಾಡು ಬೆಡಗಿನವರನ್ನು ಗಡಿಪಾರಾದವರೆಂದು ಕರೆಯುವರು. ಮಲ್ಲಿನಾಯಕನಗೋತ್ರಕ್ಕೆ ಅಮವಾಸೆ ದೇವರು ಬೊಮ್ಮದೇವರಾಗಿತ್ತು. ಇದಕ್ಕೆ ಮಲ್ಲಿನಾಯಕನ ಬೊಮ್ಮ ದೇವರೆಂದು ಹೆಸರು. ಕುಂಡುಲರವಾಡು ಗುಡಿಪಲ್ಲಿ ಓಬಳದೇವರು, ಮಂದಲೋರ ಅಮವಾಸೆ ದೇವರು ಮಂದಬೊಮ್ಮ ದೇವರಾಗಿತ್ತು. ಮಲಕೇಟಿ ಎದ್ದುಲವಾಡು, ಗುಡ್ಡಮು ಎದ್ದುಲುವಾಡಿ, ಕೋರ‍್ಲಮಲ್ಲಿ ನಾಯಕ, ಕ್ಯಾಸಾಪುರದ ಕ್ಯಾಸನು, ಬಾಳೆದ ಪಟ್ಟಮ್ಮ ಮೊದಲಾದವರು ಕಕ್ಕಲಬೆಂಚು, ಕಾರಚೆರುವು (ಗೋಶಿಕೆರೆ ಹಳ್ಳ) ಪ್ರದೇಶದಲ್ಲಿ ನೆಲೆಸಿದ್ದರು. ಕೋರ‍್ಲಮಲ್ಲಿನಾಯಕನಿಗೆ (ಧಾರ್ಮಿಕ ಪುರುಷ) ಜಗಳೂರು ಪಾಪನಾಯಕ, ಜನಿಸಿ ಪವಾಡ ಪುರುಷನಾಗುತ್ತಾನೆ. ಇವನಿಗೆ ಸೂರ್ದೇ ಪಾಪನಾಯಕ, ಪರದೇಶಿ ಪಾಪನಾಯಕ, ಕೋರೇಲು ಪಾಪನಾಯಕನೆಂದು ಹೆಸರು. ಈತನ ಪವಾಡಗಳು ಅನೇಕ, ಹೊಂಡದಲ್ಲಿ ಸ್ನಾನ, ದನಗಳು ಕಾಯುವುದು, ತಿರುಪತಿಯಾತ್ರೆ, ಜಗಪತಿಗೆ ಬುದ್ಧಿವಾದ ಹೇಳಿದ್ದು ಹೀಗೆ ಅನೇಕ ಕಾರ್ಯ ಚಟುವಟಿಕೆಗಳು ನಡೆಯುತ್ತವೆ. ಬಂಜಗೆರೆ ಓಬಳದೇವರು ಕಾಮಗೇತನಹಳ್ಳಿ ಕಟ್ಟೆಮನೆ (ಆಚಾರ), ಸೂರಪ್ಪದೇವರು ಕಾಮಗೇತಿಗಳಿಗೆ ಮನೆದೇವರಾಗಿದೆ.

ಗೌರಸಮುದ್ರದಲ್ಲಿ ಐವೋದಿಮಠ ನಿರ್ಮಾಣ, ಕುಕ್ಕನವಾಡು ಚಿತ್ರದೇವರು, ಬೋಸೆ ನಾಯಕರ ಬೋಸೆ ದೇವರು, ಪದಿಪೂಜಾರಿ ಬೋಡೆ ಪಡ್ಲವಾಡು, ಬೆಲ್ಲಲುವಾಡು, ಕೊತ್ತಕೋಟಮಾಸಿಲುವಾಡು, ವರುವು ಮಾಸಿಲವಾಡು, ಮಾಕನಡಕು ಓಬಳ ದೇವರು, ಪುವ್ವಲಾರು ಪೆನ್ನೋಬಳ ದೇವರು, ನನ್ನುಲ ಮುತ್ತಿಗಾರು, ಎದ್ದುಲುವಾಡು, ದಡ್ಡಿಮುತ್ತಿ ದೇವರು, ಕ್ಯಾತಪುಲುವಾಡು, ಮೊನ್ನುಲುವಾರು, ದ್ಯಾವರಗೊರ‍್ಲುವಾರು, ಕರಿನಾರು, ಎನುಮುಲುವಾರು ಬೆಡಗುಗಳು, ಬೂದುಗುಮ್ಮಿಯಲ್ಲಿ ಮುತ್ತಿಗಾರ ಎತ್ತುಗಳು ಮುಳುಗುತ್ತವೆಂಬ ಸಂಗತಿಗಳು ಮುಖ್ಯವಾದವು.

ಹಿರೇಹಳ್ಳಿ ದಡ್ಡಿಸೂರನಾಯಕನ ಪೂಜಾರಿಗಳು, ಪದ್ದನಾಡು, ಬೊಗ್ಗುಲುವಾರು, ಪೆದ್ದಳ್ಳನಾಯಕಡು, ದೊರೆ ಅಧಿಕಾರದ ಹಂಚಿಕೆ, ೩ ಜನ ನಾಯಕ, ಪೂಜಾರಿಗಳ ನೇಮಕವಾಗುತ್ತದೆ. ಐವೋದಿ, ನಿಡಗಲ್ಲು, ನಾಯಕನಹಟ್ಟಿ, ಗೋನೂರು, ನನ್ನಿವಾಳ ಗುಡಿಕಟ್ಟೆ ಮತ್ತು ಕಟ್ಟೆಮನೆಗಳಾದವು. ಹಟ್ಟಿಮಲ್ಲಪ್ಪನಾಯಕನಿಂದ ನಾಯಕನಹಟ್ಟಿ ಕಟ್ಟೆಮನೆ ಅಭಿವೃದ್ಧಿಗೊಂಡಿದ್ದುಂಟು. ಯರಮಂಚಿನಾಯಕ ಒಮ್ಮೆ ಹೊರದೇಶಗಳಿಗೆ ಸಂಚಾರ ಹೊರಡುತ್ತಾನೆ. ಹೀಗೆ ಮ್ಯಾಸಮಂಡಳಿಯಲ್ಲಿ ಒಬ್ಬನಾಯಕ, ವೀರನ ಸ್ಥಾನಮಾನಗಳು ಹೇಗಿರುತ್ತವೆಂಬುದನ್ನು ತಿಳಿಯಬಹುದಾಗಿದೆ. ಪ್ರತಿ ಬೆಡಗಿಗೊಂದು ದೇವರು, ರೂಢಿ – ಸಂಪ್ರದಾಯಗಳು ಇರುತ್ತವೆ. ಮ್ಯಾಸಬೇಡರ ಸಾಂಸ್ಕೃತಿಕ ಚರಿತ್ರೆಯನ್ನು ಮೌಖಿಕ ಮಾಹಿತಿಯಿಂದಲೇ ವಿಶ್ಲೇಷಿಸಿದರೆ ಸಾಲದು. ಪುರಾತತ್ವ ಅವಶೇಷ: ಶಾಸನ, ದೇವಾಲಯ, ಶಿಲ್ಪಗಳ ಮೂಲಕವು ತಿಳಿಸಿಕೊಡುವ ಅಗತ್ಯವುಂಟು. ಈ ಹಿನ್ನೆಲೆಯಲ್ಲಿ ಒಂದು ಕಾಲಘಟ್ಟದ ಅಥವಾ ತಲೆಮಾರಿನವರು ಕಟ್ಟಿಕೊಟ್ಟ ಚರಿತ್ರೆಯು ಕಾಲಾಂತರದಲ್ಲಿ ಸಾಂಸ್ಕೃತಿಕ ಅನನ್ಯತೆ ಮತ್ತು ಪಲ್ಲಟಗಳ ಮೂಲಕ ಸ್ಥಿತ್ಯಂತರಕ್ಕೊಳಗಾಗಬಹುದು. ಹೀಗಾಗಿ ಒಂದು ಹಂತಕ್ಕೆ ಇದನ್ನು ವಾಸ್ತವವೆಂದು ಜನಪದರಿಂದ ಕರೆಸಿಕೊಂಡು ಸಂಶೋಧನಾ ದೃಷ್ಟಿಯಿಂದ ನೋಡಿದಾಗ ಅನೇಕ ಸಂಗತಿಗಳು ಮರೆಯಾಗಿರುವುದುಂಟು. ಇಂದು ತಮ್ಮ ಸಂಸ್ಕೃತಿಯಲ್ಲಿ ತೀವ್ರ ಬದಲಾವಣೆಗೊಂಡಿರುವ ನಾಯಕರು ಪೂಜಿಸುವ ಕ್ರಮ, ಆಚರಿಸುವ ವಿಧಾನಗಳಿಂದ ಬುಡಕಟ್ಟು ವೀರರನ್ನು ಆರಾಧಿಸುವುದರೊಂದಿಗೆ ಇತರ ಶೈವ, ವೈಷ್ಣವ ದೇವತೆಗಳ ಅನುಯಾಯಿಗಳಾಗಿದ್ದಾರೆ. ಅಲ್ಲದೆ, ಸಂದರ್ಭಾನುಸಾರ ಜಾತಿಯ ಕಟ್ಟುಪಾಡುಗಳಲ್ಲಿ, ಸಡಲಿಕೆಯನ್ನು ಮಾಡಿಕೊಂಡಿದ್ದಾರೆ. ತಮ್ಮ ಏನೆಲ್ಲಾ ಭಕ್ತಿ ಭಾವನೆಗಳಿದ್ದರೂ ಅವುಗಳನ್ನು ತಮ್ಮ ಸಮುದಾಯದೊಂದಿಗೂ ಗುಂಪಾಗಿ ಮಾಡುವ ಕಾರ್ಯವಿಧಾನಗಳು ತಮ್ಮ ಅನನ್ಯತೆಯನ್ನು ಉಳಿಸಿಕೊಳ್ಳುವುದು ಒಂದೆಡೆಯಾದರೆ, ಅಸ್ತಿತ್ವದೊಂದಿಗೆ ಪ್ರಭುತ್ವ ಪಡೆದು ಆಳುವ ವರ್ಗವಾಗಬೇಕೆಂದು ಹವಣಿಸುವುದು ಮತ್ತೊಂದು ಬಗೆಯದಲ್ಲಿ ಶ್ಲಾಘನೀಯ.