ಕರ್ನಾಟಕದಲ್ಲಿ ಬೇಡ, ನಾಯಕ ಬುಡಕಟ್ಟಿನ ವೀರರ ಆರಾಧನೆ ಇರುವುದನ್ನು ಅವಲೋಕಿಸುವ ಅನಿವಾರ್ಯತೆ ಚಾರಿತ್ರಿಕವಾಗಿ ಮಹತ್ವದ್ದು. ವಿಶೇಷವಾಗಿ ಚಿತ್ರದುರ್ಗ ಜಿಲ್ಲೆಯ ಮತ್ತು ಅದರ ಗಡಿಪರಿಸರದಲ್ಲಿ ಮ್ಯಾಸಬೇಡರ ವೀರ ಆರಾಧನೆ, ಧಾರ್ಮಿಕ, ಸಂಪ್ರದಾಯ, ಸಾಂಸ್ಕೃತಿಕ ಆಚರಣೆಗಳು ಇಂದಿಗೂ ಪ್ರಚಲಿತದಲ್ಲಿವೆ. ಅವು ಯಾವುದೇ ಒಂದು ಪ್ರದೇಶ, ವ್ಯಕ್ತಿಗೆ ಸೀಮಿತವಾಗಿರದೆ, ಏಕತೆಯಲ್ಲಿ ಬಹು ವೈವಿಧ್ಯತೆಯನ್ನು ತಾಳುವಂತೆ ಇತರ ಸಮುದಾಯಗಳ ಮೇಲೆ ಈ ವೀರ ಪರಂಪರೆ ಪ್ರಭಾವಿಸಿದೆ.

ಮ್ಯಾಸಬೇಡರ ಮಹಾನಾಯಕನೂ, ಸಂಸ್ಕೃತಿ ನಿರ್ಮಾಪಕನಾದ ಯರಮಂಚಿನಾಯಕ ಜಾತ್ಯಾತೀತ ವ್ಯಕ್ತಿ. ತನ್ನ ಜಾತಿಗೆ ಇತರ ಅಲಕ್ಷಿತ ಅಸ್ಪೃಶ್ಯ ಮೊದಲಾದವರನ್ನು ಸೇರಿಸಿಕೊಂಡು ಬದುಕಿಗೊಂದು ಹಾದಿ ತೋರಿಸಿದ್ದು ಗಮನಾರ್ಹ. ಇವನನ್ನು ಮನೆದೇವರಾಗಿ ಹೊಂದಿರುವ ಬಿ. ಲಕ್ಷ್ಮಯ್ಯ ತಂದೆ ಬಂಜೋಬಯ್ಯ ಎಂಬುವರು ಬಿದರಕೆರೆ ಮನೆತನಕ್ಕೆ ಸೇರಿದ್ದು, ಗೌರಸಮುದ್ರದಲ್ಲಿ (ಚಳ್ಳಕೆರೆ – ತಾ) ನೆಲೆಸಿರುತ್ತಾರೆ. ಮ್ಯಾಸನಾಯಕರ ಎನುಮುಲೋರ ಎಂಬುದು ಇವರ ಬೆಡಗು. ಗ್ರಾಮದಲ್ಲಿ ನೆಲಸಿರುವ ಈತ ಯರಮಂಚಿನಾಯಕ, ಬೊಮ್ಮದೇವರನ್ನು ಆರಾಧಿಸಿದರೂ ಮೊದಲನೆಯದೇ ಮನೆದೇವರು. ಇವರಿಗೆ ಕಟ್ಟಿಮನೆ ಮತ್ತು ಗುಡಿಕಟ್ಟೆ ಬೇಡರೆಡ್ಡಿಹಳ್ಳಿ. ಯರಮಂಚಿನಾಯಕನ ದೇವಾಲಯ ಬೇಡರೆಡ್ಡಿ ಹಳ್ಳಿಯಲ್ಲಿದೆ (ಚಳ್ಳಕೆರೆ ತಾ). ಈ ದೇವರ ಭಕ್ತರು, ಪೂಜಾರಿಗಳು ನವೀನ ಮಾದರಿಯ ಮಾಳಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಗುಡಿಸಲುಗಳನ್ನು ತೊರೆದಿರುತ್ತಾರೆ. ಪೂಜಾರಿ ನೇಮಕವನ್ನು ೭ ಜನ ಅಜ್ಜನಾರು ಸೇರಿ ಮಾಡುವರು. ಯರಮಂಚಿನಾಯಕನ ದೇವರಿಗೆ ದೇವರೆತ್ತುಗಳಿದ್ದು, ಕಿಲಾರಿ ಅವುಗಳನ್ನು ಪೋಷಣೆ ಮಾಡಿದರೆ, ದಾಸಯ್ಯ ಇತರ ಆಚರಣೆಗಳನ್ನು ಮಾಡುತ್ತಾನೆ. ಇದಕ್ಕೆ ಗೌರಸಮುದ್ರದ ಚಲುವಾದಿಗಳು ಉರುಮೆ ಬಡಿಯುವರು. ವಾಸೆಕೊಯ್ಯುವ ಪದ್ಧತಿ ಇವರಲ್ಲಿದ್ದು, ಸ್ತ್ರೀ ದೇವತೆಯಾದ ಗೌರಸಮುದ್ರದ ಮಾರಮ್ಮನನ್ನು ಪೂಜಿಸುತ್ತಾರೆ. ಇವರು ವೈಷ್ಣವ ಪಂಥಕ್ಕೆ ಸೇರಿರುತ್ತಾರೆ. ಬಂಜಗೆರೆ ಸಮೀಪ ಹರಿಯುವ ವೇದಾವತಿ (B.T.B. Dam) ನದಿಯಲ್ಲಿ ಗಂಗಾಪೂಜೆಯ್ನು ನೆರವೇರಿಸಿಕೊಂಡು, ಕಾಸು, ಮೀಸಲು, ಮಣೆವುಗಳನ್ನು ಇಡುತ್ತಾರೆ. ತಮ್ಮ ಪಾರಂಪರಿಕ ವೃತ್ತಿಯಂತೆ ಇವರು ಪಶುಗಳನ್ನು ಹೆಚ್ಚಾಗಿ ಸಾಕಿರುವರು. ಈ ಲಕ್ಷ್ಮಯ್ಯ ಎಸ್.ಎಲ್.ಎಸ್.ಸಿ. ಓದಿದ್ದು ಮೊಳಕಾಲ್ಮುರುವಿನಲ್ಲಿ ಪೋಸ್ಟ್‌ಮ್ಯಾನ್ ಕೆಲಸ ಮಾಡುತ್ತಾರೆ. ಕನ್ನಡ – ತೆಲುಗು ಮಾತನಾಡುವ ಇವರ ಕುಟುಂಬದಲ್ಲಿ ಶವಸಂಸ್ಕಾರ ಪದ್ಧತಿಯಲ್ಲಿ ಶವವನ್ನು ಹೂಳುವುದುಂಟು (೧೨.೧೦.೧೯೯೮).

ಗಾದರಿಪಾಲನಾಯಕನೆಂಬ ವೀರನ ಬಗ್ಗೆ ಹಬ್ಬ, ಜಾತ್ರೆಗಳನ್ನು ದಾವಣಗೆರೆ, ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಮಾಡಿಕೊಂಡು ಬರುತ್ತಿದ್ದಾರೆ. ದೀಪಾವಳಿ, ಗುಗ್ಗರಿಹಬ್ಬ, ಕಾಳನಹಬ್ಬ ಹೀಗೆ ವಿಶೇಷ ಸಂದರ್ಭದಲ್ಲಿ ಆಚರಣೆಗಳು ನಡೆಯುತ್ತಿರುವುದು ಗಮನಾರ್ಹ. ಗಂಜಿಗಟ್ಟೆ, ಜುಂಜುರುಗಂಎ, ಚನ್ನಬಸಯ್ಯನಹಟ್ಟಿ, ನನ್ನಿವಾಳ, ರಾಮಸಾಗರ, ಬಿ.ಜಿ. ಕೆರೆ, ಪೂಜಾರಹಳ್ಳಿ, ರಾಯಪುರ ಮೊದಲಾದ ಸ್ಥಳಗಳಲ್ಲಿ, ಈ ದೇವರಗುಡಿಗಳಿವೆ. ಇವನ ಅನುಯಾಯಿಗಳು ಈ ಪರಿಸರದಲ್ಲಿ ವ್ಯಾಪಕವಾಗಿ ನೆಲೆಸಿರುವರು. ಹೀಗೆಯೇ ಹಂಪಿ ಪಕ್ಕದ ಕಮಲಾಪುರದಲ್ಲಿ ಇವರ ಧಾರ್ಮಿಕ ಪಂಥವಿದೆ.

ಮ್ಯಾಸಬೇಡರ ಮಹಾದಾರ್ಶನಿಕ ಪುರುಷ ಜಗಳೂರು ಪಾಪನಾಯಕ. ಈತನಿಗೆ ಪರದೇಶಿ ಪಾಪಯ್ಯ, ಕೋರೇಲು ಪಾಪಯ್ಯ, ಸುರದೇವ ಎಂಬೆಲ್ಲ ಹೆಸರುಗಳಿವೆ. ಈತನಿಗೆ ಸಂಬಂಧಿಸಿದ ಪಂಥ ಮಧ್ಯ ಕರ್ನಾಟಕದಲ್ಲಿರುವುದು ಸ್ಪಷ್ಟ. ಮೊಳಕಾಲ್ಮೂರು ತಾಲೂಕಿನ ನೇರ‍್ಲಹಳ್ಳಿಗೆ ಸೇರಿದ ಓದ್ನೋಬಯ್ಯನಹಟ್ಟಿ ಸಣ್ಣಪಾಪಯ್ಯ ತಂದೆ ಓದ್ನೋಬಯ್ಯನನ್ನು ಸಂದರ್ಶಿಸಲಾಯಿತು. ಮಂದವಾರು ಬೆಡಗಿನ ‘ಕರಿನಾರು’ ಎಂಬ ಪಂಗಡಕ್ಕೆ ಸೇರಿದವರಿವರು. ಹಟ್ಟಿಯಲ್ಲಿ ವಾಸಿಸುತ್ತಿದ್ದು, ಸೂರದೇವರ ಪಾಪನಾಯಕನನ್ನು (ಜಗಳೂರು ಪಾಪನಾಯಕ) ಮನೆದೇವರಾಗಿ ಹೊಂದಿರುತ್ತಾರೆ. ಈ ಪಾಪನಾಯಕ ಮೂಲದಲ್ಲಿ ಎತ್ತಿನ ಕಿಲಾರಿ, ದನಗಾಹಿ ಮತ್ತು ಪವಾಡಪುರುಷನೆಂಬುದು ಇವರ ಅಭಿಪ್ರಾಯ. ಇವರಿಗೆ ಕಂಪಳದೇವರಹಟ್ಟಿ (ಮೊಳಕಾಲ್ಮುರು ತಾ) ಗುಡಿಕಟ್ಟು ಆದರೆ, ನಾಯಕನಹಟ್ಟಿ ಕಟ್ಟೆಮನೆಯಾಗಿರುತ್ತದೆ. ಕಾಲಾಂತರದಲ್ಲಿ ಕಂಪಳ ದೇವರನ್ನು ಮನೆದೇವರಾಗಿ ಹೊಂದಿರುವರು. ಕಂಪಳದೇವರಹಟ್ಟಿಯಲ್ಲಿರುವ ಪಾಪನಾಯಕನ ದೇವಾಲಯಕ್ಕೆ ಇವರು ನಡೆದುಕೊಳ್ಳುತ್ತಿದ್ದು, ತಿರುಪತಿಯಿಂದ ಬಂದ ದೇವರು, ದೇವರೆತ್ತುಗಳ ಜೊತೆಗೆ ತಿರುಪತಿ ವೆಂಕಟೇಶ್ವರನ ಸಾಲಿಗ್ರಾಮದಿಂದ ಬಂದಿದೆ ಎಂದು ತಿಳಿಸುತ್ತಾರೆ. ಇತ್ತೀಚೆಗೆ ಹೊಸ ದೇವಾಲಯದ ಕಟ್ಟಡ ನಿರ್ಮಾಣವಾಗಿದ್ದು, ಪೂಜಾರಿ ಸಣ್ಣಬೋರಯ್ಯ ಮೊದಲಾದವರು ಮಾಳಿಗೆ ಮನೆಯಲ್ಲಿ ವಾಸಿಸುತ್ತಿರುವರು. ಈ ಪೂಜಾರಿ ಪ್ರತಿ ಶನಿವಾರ ಒಂದತ್ತು (ಉಪವಾಸ ಪಥ್ಯ) ಇರುತ್ತಾನೆ. ಈತನನ್ನು ನೇಮಿಸುವುದು ‘ನೆಗಿರಮನೆರು’ ಎಂಬುವರನ್ನು ಮಾತ್ರ. ಅರಮನೆ ಗುರುಮನೆಗಳೆರಡು ಕಂಪಳದೇವರಹಟ್ಟಿ. ದೇವರೆತ್ತುಗಳು ಕಮರಕಾವಲಿನಲ್ಲವೆ. ೩ ಹಬ್ಬಗಳು ಇಲ್ಲಾಗುವುದುಂಟು. ಎತ್ತಿನ ಕಿಲಾರಿಯನ್ನು ನನ್ನಿವಾಳ ಕಟ್ಟೆಮನೆಯ ದೊರೆ ನೇಮಿಸುತ್ತಾನಲ್ಲದೆ, ಪಟ್ಟಾಕಟ್ಟುತ್ತಾನೆ. ದಾಸಯ್ಯನು ವೈಷ್ಣವ ಸಂಪ್ರದಾಯಕ್ಕೆ ಸೇರಿದ್ದು, ವಾರ ಬರುವುದರಿಂದ ವಾರದ ದಾಸಯ್ಯನೆಂದು ಕರೆಯುವರು. ವಾರಕ್ಕೆ ೫ – ೧೦ ಮನೆಗಳನ್ನು ಬೇಡಿ ಭಿಕ್ಷೆ ಪಡೆಯುತ್ತಾನೆ. ದೇವರೆತ್ತುಗಳ ಹತ್ತಿರ ಸಹಾ ಭಿಕ್ಷೆ ಬೇಡಿ ಭಕ್ತಾದಿಗಳಿಂದ ಸಂಗ್ರಹಿಸಿಕೊಂಡು, ಪಂಜು ನುಂಗುವ ವಿಚಿತ್ರ ದೃಶ್ಯ ಅಪೂರ್ವವಾದುದು. ಈ ದೇವರಿಗೆ ತಾಯಕನಹಳ್ಳಿಯ ಮಾಲಹೊಲೆಯರ ಕೆಂಚಪ್ಪ ಚಲುಮ ಉರುಮೆ ಬಡಿಯುತ್ತಾನೆ. ಇವರು ಸಹಾ ಇದೇ ದೇವರಿಗೆ ನಡೆದುಕೊಳ್ಳುವುದರಿಂದ ಬೇಡ ಹೊಲೆಯರಿಗೂ ಪಾಪನಾಯಕ ಮನೆದೇವರಾಗಿರುವುದು ಕಂಡುಬರುವ ವಿಶೇಷ ಸಂಗತಿ. ಉರುಮೆಗಾರ ಕಾಲಿಗೆ ಗಗ್ಗರಿ ಹಾಕುತ್ತಾನೆ. ಅಗಸ ಈ ಹಬ್ಬಗಳಲ್ಲಿ ಪಂಜು ಹಿಡಿದು ಬೆಳಕು ಮಾಡಿದರೆ, ಪಾಪೇದೇವರಿಗೆ ವಾಸೆ ಕೊಯ್ಯುವುದನ್ನು ಈ ಅಗಸನಿಗೆ ಕೊಡುತ್ತಾರೆ. ಇವರು ಪುರುಷ ದೇವತೆಯಷ್ಟೇ ಅಲ್ಲದೆ, ಸ್ತ್ರೀ ದೇವತೆಯಾದ ದಡ್ಲು ಮಾರಮ್ಮನನ್ನು ಆರಾಧಿಸುವುದುಂಟು. ಇವಳನ್ನು ಚೆಂಚುಲಕ್ಷ್ಮಿ ಎಂದು ಕಂಪಳ ದೇವರಿಗೆ ಹೆಂಡತಿಯೆಂದು ನಂಬಿದ್ದಾರೆ. ವೈಷ್ಣವ ಸಾಲಿಗ್ರಾಮ ಇದಾಗಿದ್ದು, ಜನಿಗೆಹಳ್ಳ (ಚಿನ್ನಹಗರಿ), ನುಂಕಪ್ಪನ ಗುಡ್ಡಗಳನ್ನು ಪೂಜಿಸುವರು. ಮಾಘಮಾಸದಲ್ಲಿ ಗುಗ್ಗರಿಹಬ್ಬ (ದೊಡ್ಡ ಹಬ್ಬ) ನಡೆದು ಮೆಣೆವು ಇಡುತ್ತಾರೆ. ಕಂಪಳದೇವರಿಗೆ ಅಪರೂಪಕ್ಕೆ ಬಹಳ ವರ್ಷಗಳಿಗೊಮ್ಮೆ ಹೆಡೆಕಟ್ಟ (ಪೆಡಗಟ್ಟ ಪಂಡುವ) ಹಬ್ಬವಾಗುತ್ತದೆ. ಇದನ್ನು ನಾಗಾರಾಧನೆಗೆ ಹೋಲಿಸಬಹುದಾಗಿದೆ. ಯುಗಾದಿ ಹಬ್ಬದಲ್ಲಿ ಎಲ್ಲರೂ ಬೇಟೆಯಾಡಲು ಹೋಗುತ್ತಾರೆ. ಇಂದಿಗೂ ಇವರಲ್ಲಿ ಪಶುಪಾಲನೆಯಿದೆ. ಈ ಸಣ್ಣ ತಿಪ್ಪಯ್ಯ ೩ನೇ ತರಗತಿ ಓದಿದ್ದು, ಕಾಂಗ್ರೆಸ್ ಮುಖಂಡ ಮತ್ತು ಪಂಚಾಯತ್ ಸದಸ್ಯನಾಗಿದ್ದವನು. ವ್ಯವಸಾಯದಿಂದ ಜೀವಿಸುತ್ತಿದ್ದು, ಮನೆಯಲ್ಲಿ ತೆಲುಗು ಭಾಷೆಯನ್ನಾಡುತ್ತಾರೆ. ವಿಶೇಷವೆಂದರೆ ಇವರು ಹೆಂಡತಿಗೆ ತಾಳಿ ಕಟ್ಟುವುದಿಲ್ಲ, ಬದಲಾಗಿ ಕರಿಮಣಿಯನ್ನು ಕಟ್ಟುವರು (೩೦.೧೧.೯೮).

ಗಾದರಿಪಾಲನಾಯಕನ ಪತ್ನಿಯರ ಸಹಗಮನ

ಜಗಳೂರು ಪಾಪನಾಯಕನ ಪಂಥಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ತಾಲೂಕಿನ ಪೇಲೋರಹಟ್ಟಿಯಲ್ಲಿ ಬೇರೆ ಬಗೆಯ ಸಂಗತಿಗಳು ಗೋಚರಿಸುತ್ತವೆ. ನಾಯಕ ಜನಾಂಗ ಡಿ.ಸೂರಯ್ಯ (೪೫) ವ್ಯವಸಾಯದಿಂದ ಜೀವಿಸುತ್ತಾನೆ. ಈತ ಮಲ್ಲಿನಾಯಕ ಪಂಗಡದ ಪೈಲಾರು ಬೆಡಗಿನವನು. ಮನೆ ದೇವರು ಜಗಳೂರು ಪಾಪನಾಯಕ. ಈ ದೇವರನ್ನು ಶಿವಶರಣನೆಂದು ಗುಗ್ಗರಿಹಬ್ಬ, ಯುಗಾದಿಯಲ್ಲಿ ಬೇಟೆಯಾಡುವುದು, ದನಗಾಹಿ ಎಂದು ತಿಳಿದು ದೇವರೆತ್ತುಗಳನ್ನು ಮೆರೆಸುವುದು (ಓಡಿಸುವುದು) ಕಂಡುಬರುತ್ತದೆ. ಜಗಳೂರುಜ್ಜನ ದೇವಾಲಯ ಚಳ್ಳಕೆರೆ ಸಮೀಪದಲ್ಲಿದೆ. ಇವರಿಗೆ ನನ್ನಿವಾಳ ಮತ್ತು ಹಿರೇಹಳ್ಳಿ ಗುಡಿಕಟ್ಟೆ ಮತ್ತು ಕಟ್ಟೆಮನೆಗಳಾಗಿವೆ. ಜಗಳೂರು ಪಾಪನಾಯಕ ಚಳ್ಳಕೆರೆ ತಾಲೂಕಿನ ನನ್ನಿವಾಳದ ಅಡವಿಯ ಕಾಡ್ಲಕುಂಟೆ ತಿಪ್ಪೆಯಲ್ಲಿ ಜನಿಸಿದನೆಂದು ಹೇಳಲಾಗುತ್ತದೆ. ಚಳ್ಳಕೆರೆ, ನನ್ನಿವಾಳ, ಕರೆಕಾಟ್ಲಹಳ್ಳಿ, ಮುಚ್ಚುಗುಂಟೆ, ಕಲ್ಲಹಳ್ಳಿ, ಪೇಯಿಲಾರಹಟ್ಟಿ, ಚೂರುಪಾಪಯ್ಯನಹಟ್ಟಿ, ಗೋನೂರು, ಹಾಯ್ಕಲ್, ಬೆಳಗಟ್ಟ, ಕಂಪಳದೇವರಹಟ್ಟಿ ಮತ್ತು ಜಗಳೂರುಗಳಲ್ಲಿ ಈತನ ದೇವಾಲಯಗಳಿವೆ. ಜಗಳೂರು ಪಾಪನಾಯಕನದು ಕತ್ತಿದೇವರು. ಇಲ್ಲಿನ ಪೂಜಾರಿಯ ಹೆಸರು ಪೂಜಾರಿ ಪಾಪಯ್ಯ. ಈತನನ್ನು ಯಜಮಾನರು, ಊರ ಜನರು, ದೇವರೆತ್ತುಗಳಿಂದ ತೀರ್ಥಪ್ರಸಾದ, ಪೂಜೆ ಮಾಡಿದ ನಂತರ ನೇಮಿಸುತ್ತಾರೆ. ಅರಮನೆ ಗುರುಮನೆಗಳೆರಡು ಪದಿಮುತ್ತಿಗಾರು ಮತ್ತು ನನ್ನಿವಾಳ. ನಲಗೇತ್ಲ ಎತ್ತುಗಳು ಇವುಗಳ ಜೊತೆಗಿರುತ್ತವೆ. ಕಿಲಾರಿಯನ್ನು ಯಜಮಾನರು ನೇಮಿಸುತ್ತಾರೆ. ಶುಭಕಾರ್ಯಗಳಲ್ಲಿ ದಾಸಯ್ಯ ಶಂಖ ಊದುವುದು, ಜಾಗಟೆ ಬಡಿಯುವುದುಂಟು. ರಾಯಭಾರು, ಕಾಮಗೇತ್ಲು ಪಂಜುನುಂಗುವುದು, ಕಾಮಗೇತ್ಲ ದಾಸಯ್ಯನು ಜಗಳೂರಜ್ಜನ ಗುಡಿ ಮುಂದೆ ಮಾಡುತ್ತಾನೆ. ಇದಕ್ಕೆ ನನ್ನಿವಾಳ ಮೂಲದ ಬೆಳಗಟ್ಟದಲ್ಲಿರುವ ಉರುಮೆಯವರು ಬರುತ್ತಾರೆ. ಹರಕೆ ಇರುವವರು ವಿವಿಧ ಕೆಲಸಗಳನ್ನು ಮಾಡುತ್ತಾರೆ. ಊರಿನ ಹಿರಿಯರು ಜವಾಬ್ದಾರಿಗಳನ್ನು ನೋಡಿಕೊಳ್ಳುವರು. ದೇವರು ಗಂಗೆಪೂಜೆಗೆ ಹೋದಾಗ ದೇವರ ಮುಂದೆ ಪ್ರತಿಯಾಗಿ ಗಂಗಮ್ಮ ಪೂಜೆಗೆ ವಾಸೆ ಕೊಯ್ಯುತ್ತಾರೆ. ಇವರು ಸ್ತ್ರೀ ದೇವತೆಯಾದ ಕೆಂಚಮ್ಮನನ್ನು ಪೂಜಿಸಿ ಅಗ್ನಿಕುಂಡ, ಬೆಂಕಿಕುಂಡ ತುಳಿಯುವುದುಂಟು. ಇವರು ಶೈವಪಂಥಕ್ಕೆ ಸೇರಿದವರು. ತಮ್ಮೂರಿನ ಗಂಗಮ್ಮ ಬಾವಿಯನ್ನು ಆರಾಧಿಸುವರು. ಇವರು ನಿಸರ್ಗದಲ್ಲಿ ಕಪ್ಪು ಕಲ್ಲುಗಳ ಕೊರಕಲು ನೆಲವನ್ನು ಪೂಜ್ಯವೆಂದು ಭಾವಿಸಿರುವರು. ಗುಗ್ಗರಿಹಬ್ಬದಲ್ಲಿ ಕಾಸುಕಟ್ಟಿಕೊಳ್ಳುವುದು, ಊರ ಹೊರಗೆ ದೇವರು ವಾಸಮಾಡಿದ ಸ್ಥಳವೆಂದು ನಂಬಿ ೩ ದಿನ ಜಾತ್ರೆ ಮಾಡುವರು. ಗುಗ್ಗರಿ ಮತ್ತು ಯುಗಾದಿ ಹಬ್ಬಗಳು ಇಲ್ಲಿ ಪ್ರಧಾನ. ವ್ಯವಸಾಯ, ಪಶುಪಾಲನೆಯಲ್ಲಿ ಇವರು ತೊಡಗಿಸಿಕೊಂಡಿದ್ದು, ಕೋಳಿ, ಹಂದಿ ಸಾಕಾಣಿಕೆ ನಿಷಿದ್ಧವಾಗಿದೆ. ಗಟ್ಟಿಮುಟ್ಟಾದ ಜನರು ಇವರಾಗಿದ್ದು, ಬಸವಂತನ ಆಟ, ಮಂಡೆ ಆಟಗಳನ್ನು ಆಡುವರು. ಜಗಳೂರು ಪಾಪನಾಯಕನಿಗೆ ಗುಂಡೇತವಾರು ಎಂಬ ಬೆಡಗಿನ ನಾಯಕರು ಪ್ರಾಣಿ ತಲೆ ಕೊಟ್ಟಾಗ ಕಡೆಯದೆ ಗುಂಡುಕೊಟ್ಟು ವಾಸೆ ಕೊಯ್ಯುತ್ತಾರೆ. ಆದ್ದರಿಂದ ಇಂದಿಗೂ ಪ್ರಾಣಿಬಲಿ ಕೊಡುವಾಗ ಮೊದಲು ಅದರ ಮುಂಗಾಲು ಕಡಿದು ೩ ಹೆಜ್ಜೆ ನಡೆಸಿದ ಬಳಿಕ ಶಿರ ಕಡಿಯುತ್ತಾರೆ.

ಮ್ಯಾಸಬೇಡರ ಮತ್ತೊಬ್ಬ ವೀರ ಕೊ (ಡ) ಗಲು ಬೊಮ್ಮಯ್ಯನೆಂಬುವನು ತನ್ನ ಸಾಂಸ್ಕೃತಿಕ ಪರಂಪರೆಯನ್ನು ಅನುಯಾಯಿಗಳ ಮೂಲಕ ಬಿಟ್ಟುಹೋಗಿದ್ದಾನೆ. ಚಳ್ಳಕೆರೆ ತಾಲೂಕಿನ ಕಾಟಪ್ಪನಹಟ್ಟಿಯ ೬೭ ವರ್ಷದ ಜಂಬುಗುಂಪುಲು (ಆಂಧ್ರಪ್ರದೇಶ) ಬೊಮ್ಮಯ್ಯನ ಮಗ ಸಣ್ಣಬೊಮ್ಮಯ್ಯನು ಈ ಪಂಥಕ್ಕೆ ಸೇರಿದವನು. ಹಟ್ಟಿಯಲ್ಲಿ ನೆಲೆಸಿರುವ ಈತ ಮಲ್ಲಿನಾಯಕನ ಪಂಗಡ ಎನುಮುಲೋರು ಬೆಡಗಿನವನು. ಅಮವಾಸೆ ದೇವರಾಗಿ ಬೊಮ್ಮದೇವರನ್ನು ಮತ್ತು ಸುರೇಚಿನ್ನಕಾಮನಾಯಕನನ್ನು ಹುಣ್ಣಿಮೆ ದೇವರೆಂದು; ಇವರಿಬ್ಬರೂ ವೀರರೆಂದು ಪರಿಗಣಿಸಲಾಗಿದೆ. ವರವು (ಚಳ್ಳಕೆರೆ – ತಾ) ಇವರಿಗೆ ಧಾರ್ಮಿಕ ಕೇಂದ್ರವಾಗಿದೆ. ಮನೆದೇವರ ಕಥೆಯನ್ನು ಹೇಳುತ್ತಾ ರಪ್ಪಲಸೂರಿ ಮಗ ಚಿನ್ನಕಾಮನಾಯಕ, ದಡ್ಡಿಸೂರನಾಯಕ, ಚಿನ್ನಪಾಲನಾಯಕ, ಯಮಂಚಿನಾಯಕ, ಕಾಟಮಲ್ಲೆನಾಯಕ, ಬೊಡೆಮಲ್ಲನಾಯಕ, ಚಿನ್ನಮಲ್ಲೆನಾಯಕ ಎತ್ತುಗಳನ್ನು ಕಾಯುತ್ತಿದ್ದರು. ರಪ್ಪಲಸೂರಿ ತಂದೆ ಅಲಿಕೆನಾಯಕನ ಮಾವನು ಮತ್ತು ರಾಯಮ್ಮ ? (ತ) ದೊಡ್ಡೇರಿ ತವರೂರು ಸಂತೆಗೆ ಬಂದಾಗ ಮಳೆ ಬಂತು. ಆಗ ರಪ್ಪಲಸೂರಿ (ಕಷ್ಟದಲ್ಲಿ) ರೊಪ್ಪದಲ್ಲಿ ಉಳಿದರು. ರಾಯಕ್ಕ ರಪ್ಪಲಸೂರಿ ಇಬ್ಬರೂ ಪೂರ್ವದ ಕಡೆ ಜಂಪುಗುಲುಗೆ ಹೋದರು. ರಪ್ಪಲಸೂರಿಗೆ ಬಹಿಷ್ಕರಿಸಿದರೂ ೩೨ ಸಾವಿರ ಕುಲದವರು ಎತ್ತುಗಳನ್ನು ಕಳುಹಿಸುವುದಿಲ್ಲ ಎಂದರು. ಆತ ಶರಣ. ಅಕ್ಕರಾಯಮ್ಮನಿಗೆ ವಡೆಲಾರು ಎತ್ತು ಹರಿಯುತ್ತವೆಂದು ಸಾರಿದ. ಆದ್ದರಿಂದ ಹೆಣ್ಣುಮಕ್ಕಳ ದೇವರಾಗಿ ಬೆಳೆದುಬಂತು. ವರವಿನಲ್ಲಿರುವ ದೇವರ ಗುಡಿ ಕಾಂಸಿಹುಲ್ಲಿನಿಂದ ಕಟ್ಟಲ್ಪಟ್ಟಿದೆ. ತಿಪ್ಪಯ್ಯನೆಂಬ ಪೂಜಾರಿ ಗುಡಿಸಲು ಮನೆಯಲ್ಲಿ ವಾಸಿಸುತ್ತಾನೆ. ಈ ಪೂಜಾರಿಯನ್ನು ಅಣ್ಣತಮ್ಮಂದಿರು, ದೊರೆ ತೀರ್ಮಾನದಂತೆ ಪದಿಮುತ್ತಿವಾರು ಎಂದು ಕರೆದು ದೇವರೆತ್ತುಗಳ ಸನ್ನಿಧಿಯಲ್ಲಿ ಪೂಜಾರಿ ನೇಮಕವಾಗುತ್ತಿದ್ದ. ದೇವರೆತ್ತುಗಳು ಇವರಿಗೆ ಸರ್ವಸ್ವ ಎಂದು ನಂಬಿದ್ದಾರೆ. ದೇವರೆತ್ತುಗಳು ಮಲ್ಲೂರಹಳ್ಳಿ ಸಮೀಪ ಪಿಲ್ಲಿಗುಂಡ್ಲು ಅರಣ್ಯದಲ್ಲಿರುತ್ತವೆ. ಕಿಲಾರಿಯಾಗಿ ಉಜ್ಜಿನಿದಾದಜ್ಜನ ಸಂತತಿಯಿದ್ದು, ನಲದಾದಿಮುತ್ತೆನ ಯಜಮಾನನಾಗಿರುವರು. ಹಿರೇಹಳ್ಳಿಯ ಚಲುವಾದಿಗಳು ಉರುಮೆ ಬಡಿದರೆ, ಅಲ್ಲಿನ ಅಗಸರು ಮಡಿ ಹಾಸುತ್ತಾರೆ. ಕಾಟಪ್ಪನು ಸ್ತ್ರೀದೇವತೆಯಿಂದ ಬಂದವನೆಂದು ಮಾರಮ್ಮಗೌರ ಸಮುದ್ರ, ದಡ್ಲುಮಾರಮ್ಮನನ್ನು ಪೂಜಿಸುವರು. ಶೈವ ಸಂಪ್ರದಾಯದ, ಬ್ರಹ್ಮನ ಅನುಯಾಯಿಗಳೆಂದು ಪಂಥವನ್ನು ಕಲ್ಪಿಸಿಕೊಂಡಿರುವರು. ಇವರಿಗೆ ಅಕ್ಕಮ್ಮನ ಬಾವಿ, ವೇದಾವತಿ ನದಿ, ಬೂದಿಗುಮ್ಮ, ದೇವರಹಳ್ಳಿ, ಬನ್ನಿಮರ, ಬೇವು ಮರಗಳ ಆರಾಧನೆ ಪ್ರಚಲಿತದಲ್ಲಿದೆ. ಗುಗ್ಗರಿ, ದೀಪಾವಳಿ ಹಬ್ಬಗಳಲ್ಲಿ ಕಾಸು, ಮಣೆವುಗಳಿದ್ದು, ಅಹಿಂಸೆಯನ್ನು ಇವರು ಪ್ರತಿಪಾದಿಸುತ್ತಾರೆ. ಕೋಲು, ಭಜನೆ, ಬಯಲಾಟ, ನಾಟಕ ಇತ್ಯಾದಿಗಳಿಂದ ಸಮಯ ಕಳೆಯುತ್ತಾ, ಬಡಗಿ ಕೆಲಸವನ್ನು ಮುಂದುವರೆಸುತ್ತಿದ್ದಾರೆ. ಇವರ ವಂಶದಲ್ಲಿ ೭ ಗುಂಪುಗಳಿದ್ದು, ಉಜ್ಜಿನಿದಾದಜ್ಜ (ಕಿಲಾರಿ) ನಲ್ಲದಾದಜ್ಜ (ನಾಯಕ) ಎಂಬುವರಿದ್ದಾರೆ.

ಮೊಳಕಾಲ್ಮೂರು ತಾಲೂಕಿನ ಮುತ್ತಿಗಾರಹಳ್ಳಿ ಪ್ರದೇಶವು ಕೊಳಗಲು ಬೊಮ್ಮನ ಆಳ್ವಿಕೆಗೊಳಪಟ್ಟಿದ್ದು, ಐತಿಹಾಸಿಕ ನೆಲೆಗಳನ್ನು ಇಂದಿಗೂ ನೋಡಬಹುದು. ಮುತ್ತಿಗಾರಹಳ್ಳಿಯ ಕೊಡಗುಬೊಮ್ಮನ ವಂಶಸ್ಥರೆಂದು ಹೇಳಿಕೊಳ್ಳುವ ಎನ್.ಎಂ. ಬೊಮ್ಮಯ್ಯ – ನಲ್ಲಯ್ಯನು ಕೊಡಗನಾರು ಮನೆತನಕ್ಕೆ ಸೇರಿದವನು. ಕೃಷಿಕೂಲಿಯಿಂದ ಜೀವನಮಾಡುವ ಈತನಿಗೆ ೬೮ ವರ್ಷ ವಯಸ್ಸಾಗಿದೆ. ಈತ ಮಾರವ ಬುಟಗಲೊರು ಬೆಡಗಿಗೆ ಸೇರಿದ್ದು, ಕೊಡಗನಾರುಪುಟ್ಟಿಯ ಹಕ್ಕುದಾರರು ಮತ್ತು ಮಲ್ಲಿನಾಯಕನ ಪಂಗಡದವರಾಗಿದ್ದಾರೆ. ತಮ್ಮ ಮೂಲಪುರುಷ, ಬುಡಕಟ್ಟು ವೀರನಾದಬೊಮ್ಮದೇವರೇ ಮನೆದೇವರು. ಈತನು ತಮ್ಮನಾಗಬೇಕು ಮಾರಮ್ಮ ಅಕ್ಕನಾಗಬೇಕೆಂದು ಹೇಳಲಾಗುತ್ತಾರೆ. ಐವೋದಿ ಮಠಕ್ಕೆ (ಗೌರಸಮುದ್ರ) ೧೪ ಪಟ್ಟಿಗೆಗಳಲ್ಲಿ ೧ನೆಯದು ಕೊಡಗನವನದು. ಗುಡಿಕಟ್ಟೆ – ಕಟ್ಟೇಮನೆಗಳೆರಡು ಇವರಿಗೆ ಗೌರಸಮುದ್ರವಾಗಿತ್ತು. ಈ ವಂಶಸ್ಥರು ತಮ್ಮ ಹಿರೇಮಗನಿಗೆ ಕೊಡಗುಬೊಮ್ಮನ ಹೆಸರನ್ನಿಡುತ್ತಾರೆ. ಇವರು ಪೂರ್ವದಲ್ಲಿ ವಲಸೆ ಹೋಗಿ ಮರಳಿ ಇಲ್ಲಿಗೆ ಬಂದಿರವರು. ಉನ್ನತ ಹಂತಕ್ಕೆ ತಲುಪದೆ ಇನ್ನು ಪರದಾಡುತ್ತಿದ್ದಾರೆ. ನಿಂಗಯ್ಯ ತಂದೆ ಇದರ ಪೂಜಾರಿ. ಈಗ್ಗೆ ನಾಲ್ಕು ತಲೆಮಾರುಗಳಿಂದ ಇವರೇ ಪೂಜಾರಿಗಳು. ಇವರಿಗೆ ಅತೀ ಪವಿತ್ರ ಧಾರ್ಮಿಕ ಕೇಂದ್ರ ಗೌರಸಮುದ್ರ. ದೇವರೆತ್ತುಗಳಿದ್ದು ಕಿಲಾರಿಯ ಹೆಸರು ಬೊಮ್ಮಯ್ಯ. ಗೌರಸಮುದ್ರದ ಚಲುವಾದಿಗಳು ಉರುಮೆ ಬಡಿಯುತ್ತಾರೆ. ದೇವರಹಳ್ಳಿ ಮಾರಮ್ಮನನ್ನು ಪೂಜಿಸುತ್ತಿದ್ದು, ಭಾದ್ರಪದಮಾಸದಲ್ಲಿ ವಾಸೆ ಕೊಯ್ಯುತ್ತಾರೆ. ಈ ಮಾರಮ್ಮ ನೀಡಗಲ್ಲು ಸಂಸ್ಥಾನದಿಂದ ಬಂದಿದ್ದು, ಬೊಮ್ಮನಿಗೆ ತಂಗಿಯಾಗಬೇಕೆಂದು ನಂಬುವುದುಂಟು. ಶೈವ ಸಂಪ್ರದಾಯಕ್ಕೆ ಸೇರಿದ ಇವರು, ಕಾಸು, ಮಣಿವುಗಳನ್ನು ರೂಢಿಸಿದ್ದು, ಮಾರಮ್ಮನ ಸಿಡಿ, ಎರಡು ಜತೆಗಿರುವ ದೇವತೆಗಳ ಎದುರು ಒಕುಳಿ ಆಡುವರು. ಐವೋದಿ ಮಠ ಧಾರ್ಮಿಕ ಕೇಂದ್ರ. ಪಶುಪಾಲನೆ ಇದ್ದು, ಯುಗಾದಿಯಲ್ಲಿ ಇವರು ಬೇಟೆಯಾಡುತ್ತಾರೆ.

ಇದೇ ಪಂಥಕ್ಕೆ ಸೇರಿದ ಚಿತ್ರದುರ್ಗ ತಾಲೂಕಿನ ಸುಲ್ತಾನಿಪುರದ ಬಿ.ತಿಪ್ಪೇಸ್ವಾಮಿ – ಬೊಮ್ಮಯ್ಯನು ವ್ಯವಸಾಯ ಮಾಡುತ್ತಿದ್ದು, ನಾಯಕರ ಎನುಮುಲಾರು ಬೆಡಗಿನಲ್ಲಿ ಇವರು ದೊರೆಗಳು. ಇವರ ಮನೆದೇವರು ಬೊಮ್ಮಲಿಂಗೇಶ್ವರ. ನನ್ನಿವಾಳ ಇವರ ಕಟ್ಟೆಮನೆ. ಮೊದಲಿದ್ದ ಗುಡಿಸಲನ್ನು ಪರಿವರ್ತಿಸಿ ದೇವಾಲಯ ಕಟ್ಟಿದ್ದಾರೆ. ಕೊಟ್ಟಿಗೆಯ ವಾಸದಿಂದ ಮಾಳಿಗೆ ಮನೆಗೆ ಬಂದಿರುವ ಇವರು ಪೂಜಾರಿ ಬೋರಯ್ಯನನ್ನು ಅಣ್ಣತಮ್ಮಂದಿರು ನೇಮಿಸಿದ್ದಾರೆ. ದಾಸಯ್ಯ ಬಂದು ಕೆಲಸ ಕಾರ್ಯಗಳನ್ನು ಪೂರೈಸುತ್ತಾನೆ. ವಾಸೆ ಕೊಯ್ಯುವುದು ಬೋಗನಹಳ್ಳಿಯ ಹತ್ತಿರ ಗರಣಿ ಹಳ್ಳದಲ್ಲಿ. ಶೈವಸಂಪ್ರದಾಯ ಇವರು ಕೃಷಿ ಚಟುವಟಿಕೆಗಳಲ್ಲಿದ್ದು, ಕನ್ನಡ – ತೆಲುಗು ಮಾತನಾಡುತ್ತಾರೆ. ತಮ್ಮ ಹೆಂಡತಿಯರಿಗೆ ತಾಳಿಕಟ್ಟದ ಮಣಿಮಾತ್ರ ಕಟ್ಟುವುದು ವಿಶೇಷ.

ಚಿತ್ರದುರ್ಗ ತಾಲೂಕು, ಕಸಬಾ ಕಲ್ಲೇನಹಳ್ಳಿಯ ಓಬಯ್ಯ ತಂದೆ ಬೊಮ್ಮಯ್ಯ ಗಾವುಡ್ಲಾರು ಮನೆತನದವರು. ಮ್ಯಾಸನಾಯಕರ ಬುಟ್ಚುಗಲೋರು ಬೆಡಗಿಗೆ ಇವರು ಸೇರಿದ್ದಾರೆ. ಗೌರಸಮುದ್ರದ ಬೊಮ್ಮದೇವರನ್ನು ಮನೆದೇವರನ್ನಾಗಿ ಮಾಡಿಕೊಂಡಿದ್ದಾರೆ. ನಾಯಕನಹಟ್ಟಿ ಇವರ ಕಟ್ಟೆಮನೆ. ನನ್ನಿವಾಳ ಗುಡಿಕಟ್ಟು ಇವರದಾಗಿದ್ದು, ಅನೇಕ ರೀತಿಯ ಸಂಪ್ರದಾಯಗಳಿದ್ದು ಇವರು ಕರೆಬಟ್ಟೆ, ಬಳೆ ಹೀಗೆ ಕಪ್ಪು ಬಣ್ಣದ ವಸ್ತುಗಳನ್ನು ಬಳಸುವುದಿಲ್ಲ.

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದೊಡ್ಡಬೊಮ್ಮನಹಳ್ಳಿಯ ದೊಡ್ಡಬೋರಪ್ಪನ ಮಗ ಬೋರಪ್ಪ (೬೫) ಗಣಗಟ್ಲಾರು ಮನೆತನದವನು. ನಾಯಕರ ಪುವ್ವಲಾರು ಬೆಡಗಿಗೆ ಸೇರಿದ್ದು, ಬೊಮ್ಮದೇವರು ಇವರ ಮನೆದೇವತೆ. ಕೂಡ್ಲಿಗಿ ತಾಲೂಕಿನ ಕುರಿಹಟ್ಟಿ ಇವರ ಗುಡಿಕಟ್ಟೆಯಾಗಿದೆ. ಕನ್ನಡ ಮಾತನಾಡುವ ಇವರು ಪ್ರಾಚೀನ ರೂಢಿಸಂಪ್ರದಾಯಗಳನ್ನು ಬದಲಿಸಿಕೊಂಡು ಆಧುನಿಕತೆಯತ್ತ ದಾಪುಗಾಲು ಹಾಕುತ್ತಾರೆ. ಕುರಿಹಟ್ಟಿ ಮಾಲರು ಚಲುವಾದಿಗಳು ಉರುಮೆ ಬಡಿಯುತ್ತಾರೆ. ಚೌಡಮ್ಮ, ಮಾರಮ್ಮ, ದುರುಗುಮ್ಮ ಇವರ ಸ್ತ್ರೀ ದೇವತೆಗಳು.

ಮೊಳಕಾಲ್ಮೂರು ತಾಲೂಕಿನ ಸುಲೇನಹಳ್ಳಿಯ ವಿ. ಮಾರನಾಯಕ ತಂದೆ ಈರಯ್ಯ ಚಿಲಕನವಾರು ಬೆಡಗಿನವರು. ಇವರು ಮಾರಮ್ಮನ ಬುಟ್ಟುಗುಲಾರು. ಬೊಮ್ಮದೇವರು ಇವರ ಆರಾಧ್ಯದೈವ. ಹಿರೇಹಳ್ಳಿ ಕಟ್ಟೆಮನೆ, ಐವೋದಿ ಗುಡಿಕಟ್ಟು ಇವರದು. ಬೊಮ್ಮದೇವರಿಗೆ ಅಕ್ಕನಾಗುವ ಮಾರಮ್ಮನು ನಿಡಗಲ್ಲಿನಿಂದ ಗೌರಸಮುದ್ರದ ತುಮ್ಮಲಿಗೆ ಬಂದಳಂತೆ. ಬೇಡರೆಡ್ಡಿ ಹಳ್ಳಿಯಲ್ಲಿ ಬೊಮ್ಮನ ದೇವಾಲಯವಿದೆ. ದೇವಾಲಯ ನವೀನ ಮಾದರಿಯದು. ಇಲ್ಲಿನ ಪೂಜಾರಿ ಬೊಮ್ಮಯ್ಯ (ಲಿಂಗಯ್ಯ). ೧೪ ಜನ ಅಣ್ಣ – ತಮ್ಮಂದಿರು ಪೂಜಾರಿಯನ್ನು ನೇಮಿಸುತ್ತಾರೆ. ಗೌರಸಮುದ್ರ ಇವರಿಗೆ ಕೇಂದ್ರಸ್ಥಳ (ಗುರುಮನೆ). ದೇವರೆತ್ತುಗಳಿದ್ದು, ೧೪ ಜನ ಗೌರದವರಿಂದ ನೇಮಕವಾಗಿರುತ್ತಾನೆ. ಗೌರಸಮುದ್ರದ ಚಲುವಾದಿಗಳು ಉರುಮೆ ಬಡಿಯುವರು. ಸ್ತ್ರೀ ದೇವತೆ ಗೌರಸಮುದ್ರದ ಮಾರಮ್ಮನನ್ನು ಇವರು ಆರಾಧಿಸುವರು. ಮೀಸಲು ಕಾಸು, ಮಣೆವು, ಗುಗ್ಗರಿಹಬ್ಬ, ಮಾರಮ್ಮನಹಬ್ಬಗಳಲ್ಲಿ ನಡೆ0ಯುತ್ತವೆ. ಹೀಗೆ ನಾನಾ ಬಗೆಯ ರೂಢಿ ಸಂಪ್ರದಾಯಗಳು ಕೊಡಗುಬೊಮ್ಮನ ಬಗ್ಗೆ ಪ್ರಚಲಿತದಲ್ಲಿವೆ. ಪ್ರಾದೇಶಿಕವಾಗಿ ಇವನ ಸಂಪ್ರದಾಯಗಳಲ್ಲಿ ಏಕರೂಪತೆಯಿಲ್ಲ.

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕರ್ನಾರಹಟ್ಟಿ ಪರಿಸರವು ಪ್ರಾಚೀನ ಚರಿತ್ರೆಯನ್ನು ಹೊಂದಿದೆ. ಇಲ್ಲಿ ನೆಲೆಸಿರುವ ಬೇಡರು ತಾವು ಸಾಕಿದ ಗೋವುಗಳನ್ನೇ ದೇವರೆತ್ತುಗಳೆಂದು ಪೂಜಿಸುವರು. ಘಟ್ಟಿಮುತ್ತಯ್ಯನು ಶ್ರೀಶೈಲ ಮುತ್ತಿಗಾರರಿಗೆ ಪದಿಪೂಜಾರಿ. ತಂದೆ ಗಡ್ಡಮುತ್ತಯ್ಯ ಮನೆತನಕ್ಕೆ ಘಡ್ಡಮಿತ್ತಿಗಾರು ಎನ್ನುತ್ತಾರೆ. ಇವರು ಮ್ಯಾಸನಾಯಕರ ಬೋಡೆಪಾರ‍್ಲು (ಮಂದವಾರು) ಬೆಡಗಿಗೆ ಸೇರಿರುವರು. ತಮ್ಮ ಹಿರಿಯ ಅಜ್ಜಂದಿರು ಮತ್ತು ದೇವರೆತ್ತುಗಳನ್ನು ಇವರು ಆರಾಧಿಸುತ್ತಾರೆ. ರಾಯಾಪುರದ ಸಮೀಪ ಪದ್ನಾರ ದೇವರಹಟ್ಟಿಯಲ್ಲಿ ನೆಲಸಿದ್ದು, ಹಿಂದೆ ಶ್ರೀಶೈಲದಿಂದ ಗೋವುಗಳೊಂದಿಗೆ ೧೩ ಪೆಟ್ಟಿಗೆ ದೇವರುಗಳ ಸಮೇತ ಬಂದರೆಂದು ಹೇಳಲಾಗುತ್ತದೆ. ಶ್ರೀಶೈಲದಿಂದ ಕರ್ನಾಟಕದ ಹಂಪಿ, ಆನೆಗುಂದಿಗಳ ಮೂಲಕ ವಿವಿಧ ಸ್ಥಳಗಳಿಗೆ ಚದುರಿದ್ದಾರೆ. ಇವರದು ಪದಿವಾರು ದೇವರು (ಹತ್ತು). ಇದಕ್ಕೆ ಉದಿಪದಿ ದಡ್ಡಿಮಿತ್ತೆ ದೇವರು ಗಾದರಿದೇವರು, ಕಾಡೇಲು ದೇವರು, ದಾದಗನಾರು ದೇವರು (ಹಿರೇಹಳ್ಳಿ), ಬೋಸೆದೇವರು (ರಾಯಾಪುರ), ಗಾದರಿದೇವರು, ಮಾಟಿದೇವರು (ಮುತ್ತಿಗಾರಹಳ್ಳಿ), ಸೌರುವುದು (ದೇವರು ರಾಯಪುರು) ಗಳು ಸೇರುತ್ತವೆ. ದಡ್ಲುಮಾರವ್ವ ಸಹಾ ಒಂದೇ ಹತ್ತಿರ ಇವುಗಳೊಂದಿಗೆ ಸೇರಿಕೊಳ್ಳುವುದುಂಟು. ಉಟಕುಂಟೆ, ವಡಕ್ಕಟ್ಟಿ ಕಮರಕಾವಲಿನಲ್ಲಿ ವರ್ಷಕ್ಕೊಮ್ಮೆ ೫ ದಿವಸ ಕಾರ್ತಿಕಮಾಸದಲ್ಲಿ ಹಬ್ಬ ಜರುಗುತ್ತದೆ. ಪದಿಪೂಜಾರಿ ೧೨ ಗಂಟೆ ಉಪವಾಸವಿರುತ್ತಾನೆ. ೧೨ ಜನ ಕೋಮುದಾರ, ಕುಲಸಾವಿರದವರು, ೩ ಜನ ನಾಯಕರು, ೭ ಜನ ಹಿರಿಯರು ಸೇರಿ ಪೂಜಾರಿಯನ್ನು ನೇಮಿಸುತ್ತಾರೆ. ದೇವರೆತ್ತುಗಳು ಊಟಕುಂಟೆ, ಕಮರ ಕಾವಲಿನಲ್ಲಿವೆ. ಸು. ೨೪೦ ದೇವರೆತ್ತುಗಳಿದ್ದು, ಇವುಗಳ ಬಲಭಾಗದ ಪೃಷ್ಟದ ಹತ್ತಿರ ಲಿಂಗ ಮುದ್ರೆಯನ್ನು ಹಾಕಿಸುತ್ತಾರೆ. ಕಿಲಾರಿ ಹೆಸರು ಮಚ್ಚಮಲ್ಲಯ್ಯ. ದಾಸಯ್ಯನು ಇಲ್ಲಿದ್ದಾನೆ. ತಾಯಕನಹಳ್ಳಿ ಚಲವಾದಿ ಕೆಂಚಯ್ಯ ಉರುಮೆ ಬಡಿದರೆ, ಕೊಮ್ಮನಹಳ್ಳಿ ಹರಿಜನರು ಕಾಳೆಊದುತ್ತಾರೆ. ಇವರು ನಾಯಕರಂತೆ ಸಂಪ್ರದಾಯಗಳಿಗೆ ಒಗ್ಗಿಹೋಗಿದ್ದು, ಕೋಳಿ ತಿನ್ನುವುದಿಲ್ಲ. ಎತ್ತುಗಳು ಗಂಗೆಸ್ನಾನಕ್ಕೆ ವೇದಾವತಿಗೆ ಹೋಗುತ್ತವೆ. (ಜಾನ್‌ಮದ್ದಿ). ಭೂಚಕ್ರದ ಗೊಡಗು, ಕಂಚಿನನಗಾರಿ ತೆಗೆದುಕೊಂಡು ಎಲ್ಲರೂ ಸೇರಿ ಹೊರಡುವರು. ಶೈವ ಮತ್ತು ವೈಷ್ಣವ ಸಂಪ್ರದಾಯಗಳಿವೆ ಇವರಲ್ಲಿ. ಇವರು ಊಟಕುಂಟೆ ಹತ್ತಿರದ ಬಾವಿಯನ್ನು ಪೂಜಿಸುವರು. ಎತ್ತುಗಳನ್ನೇ ದೇವರೆಂದು ಪ್ರದರ್ಶಿಸಿ, ಚಿಕ್ಕಮಕ್ಕಳಿಗೆ ಕೂದಲು ತೆಗೆಸುವುದು, ಮಣ್ಣಿನ ಕೊಡದಲ್ಲಿ ನೀರು ಕುಡಿಯುವುದು, ಆಲದ ಮರದ ಎಲೆಗಳಲ್ಲಿ ಊಟ ಮಾಡುತ್ತಾರೆ ಪೂಜಾರಿಗಳು. ಬರಿಮೈಯಲ್ಲಿರುವ ಪೂಜಾರಿ ತಲೆಗೆ ರುಮಾಲು, ಸೊಂಟದ ಕೆಳಗೆ ಚಲ್ಯಾಣ, ಹೆಗಲಲ್ಲಿ ಕರೆಕಂಬಳಿಯನ್ನು ಹೊಂದಿರುವರು.

ಕಂಪಳದೇವರಹಟ್ಟಿಯ ದಡ್ಡಿ ಮುತ್ತಿ ಪೂಜಾರಿ ಮಲ್ಲನಾಯಕನ ಪಂಗಡಕ್ಕೆ ಸೇರಿದವನು. ಇವನು ದಡ್ಡಿಮುತ್ತೆ, ಬಿಲ್ಲುದೇವರುಗಳನ್ನು ಪೂಜಿಸುವರು. ಸೂರಿಚಿನ್ನಕಾಮರು ತಮ್ಮ ವೀರನೆಂದು ಕರೆದುಕೊಂಡಿರುವರು. ಆನೆಗುಂದಿ ಇವರಿಗೆ ಅರಮನೆ ಗುರುಮನೆಯಾಗಿದೆ. ಶ್ರೀಶೈಲದ ಪದಿನಾರು ಎತ್ತುಗಳಿವೆ. ಮೇಲಿನಂತೆ ಎಲ್ಲಾ ಕಾರ್ಯಕ್ರಮಗಳನ್ನು ಇವರು ಸಹಾ ನೆರವೇರಿಸಿಕೊಂಡು ಬಂದಿದ್ದಾರೆ.

ಎರಡನೇ ತಿರುಪತಿಯೆಂದು ಕರ್ನಾಟಕದಲ್ಲಿ ಪ್ರಸಿದ್ಧವಾಗಿರುವ ಕಂಪಳದೇವರಹಟ್ಟಿ ಮ್ಯಾಸಬೇಡರಿಗೆ ಆಧ್ಯಾತ್ಮಿಕ, ಯಾತ್ರಾಸ್ಥಳವಾಗಿದೆ. ಇವರ ಮೂಲನೆಲೆಗಳಲ್ಲಿ ಇದು ಮೊದಲನೆಯದು. ಸೂರಮ್ಮನಹಳ್ಳಿಯ ಅಂಚೆಬೋರಯ್ಯ ತಂದೆ ಅಂಚೆಬಸಯ್ಯನು ಮಂದಲವಾರು ಪಂಗಡದ ಮುಂಡಾಸಿ ದಾಸರಿ (ಮುಂಡಾಸಿ, ಗೊಡಗು, ಬೋಡೆ) ಚಂದ್ರವಂಶಕ್ಕೆ ಸೇರಿದವರು. ಹಟ್ಟಿಯಲ್ಲಿರುವ ಇವರದು ಕಂಪಳರಂಗ ಮನೆದೇವರು. ಎಲ್ಲಕ್ಕೂ ಕಂಪಳದೇವರಹಟ್ಟಿ ಆವಾಸ ಕೇಂದ್ರವಾಗಿದೆ. ಕರಿನಾರು ಎತ್ತುಗಳನ್ನು ಕಾಯುವ ಜನರು. ಕಿಂದಿಕರಿನಾಡು, ಮೇಲಿನ ಕರಿನಾಡು (ಮಣಿಗಾರ ದೀಕ್ಷೆ) ಎನ್ನುವರಿದ್ದರು. ೩ ಜನ ದಾಸರೆಂದರೆ, ಮುಂಡಾಸಿದಾಸರಿ ಕಂಪಳರಂಗ, ಗೊಡಗುದಾಸರಿ – ಬೋರೆದೇವರು ಮತ್ತು ಬೋಡೆದಾಸರಿ – ಬಂಜಗೆರೆ ಓಬಳೇಶ್ವರರೆಂದು ಗುರುತಿಸಲಾಗಿದೆ. ಇದರ ಶಾಖೆಗಳು ದಾಸರಹಳ್ಳಿ, ಹೂಡೇಂ, ಜುಮ್ಮೋಬನ ಹಳ್ಳಿಗಳಾಗಿವೆ. ಪೂಜಾರಿಗೆ ಪಾತಪೂಜಾರಿ ಎನ್ನುವರು. ಬೋರೆ ದೇವರ ದೇವರೆತ್ತುಗಳಿವೆ. ಕಿಲಾರಿ ಕಂಪಳದೇವರ ಹಟ್ಟಿಯಲ್ಲಿದ್ದಾರೆ. ವೈಷ್ಣವ ಪಂಥಕ್ಕೆ ಸೇರಿದ ಇವರು ಕಂಪಳ ದೇವರನ್ನು ಹಂಪಿಗೆ ಗಂಗಾಸ್ನಾನಕ್ಕೆ ತರುತ್ತಾರೆ. ಓಬಳದೇವರು, ಗುಂಡ್ರಾಳು ಗಂಗಮ್ಮ ಇತರ ಆರಾಧನ ದೇವತೆಗಳಿವೆ. ಇವರಲ್ಲಿ ಪಶುಪಾಲನೆ ನೆಲೆಯೂರಿದ್ದು, ಅನೇಕ ರೀತಿಯ ಆಚರಣೆ ಪದ್ಧತಿಗಳು ಚಾಲ್ತಿಯಲ್ಲಿವೆ. 

ಗಾವು ಜಿಗಿಯುವ ದೃಶ್ಯ, ಕಾತ್ರಿಕೆಹಟ್ಟೆ

 ಬಳ್ಳಾರಿ ಜಿಲ್ಲೆ, ಕೂಡ್ಲಿಗಿ ತಾಲೂಕಿನ ಹೂಡೇಂಗ್ರಾಮದ ಎನ್.ಎಂ. ಬೋರಯ್ಯ ತಂದೆ ಮುದ್ದಯ್ಯ (ದಾಸರಮುದ್ದಯ್ಯ) ಇವರು ಕಂಪಳರಂಗ ಪ್ರೌಢಶಾಲೆಯಲ್ಲಿ ಜವಾನರಾಗಿದ್ದಾರೆ. ಇವರ ಬೆಡಗು ಎನುಮುಲಾರು. ಆರಾಧಿಸುವ ದೇವರು ಕಂಪಳರಂಗಸ್ವಾಮಿ. ಇವರ ಕುಟುಂಬದಲ್ಲಿ ಆಧುನಿಕ ಸಂಪ್ರದಾಯಗಳು ಬಂದಿವೆ. ಚೌಡಮ್ಮ ಸ್ತ್ರೀ ದೇವತೆ, ವೈಷ್ಣವ ಪಂಥಕ್ಕೆ ಸೇರಿದ್ದು ಅನೇಕ ಬಗೆಯ ಪದ್ಧತಿಗಳನ್ನಿಲ್ಲಿ ಅವಲೋಕಿಸಬಹುದಾಗಿದೆ.

ಇದೇ ಹೂಡೇಂ ಗ್ರಾಮಕ್ಕೆ ಸೇರಿದನಾಯಕ ಮನೆತನದವರು ಪಾಪನಾಯಕ ತಂದೆ ಬೋಸಮಲ್ಲಯ್ಯನವರು, ಗೋನೂರು ಕಟ್ಟೆಮನೆಯವರು. ಬೋಸೆ ವಾರು ಬೆಡಗಿಗೆ ಸೇರಿದ ಇವರು ತೋಟದಲ್ಲಿ ನೆಲೆಸಿರುವರು. ಈತ ನಾಯಕನಾದ್ದರಿಂದ ಸಾವಿರ ದೇವರಿಗೆ ಹಕ್ಕಿದೆ. ರಾಯಾಪುರದ ಬೋಸೆದೇವರನ್ನು ಇವರು ಆರಾಧಿಸುವರು. ಮುತ್ತಿಗಾರರ ೧೦೧ ಅಣ್ಣತಮ್ಮಂದಿರಂತೆ ಇವರು ಜನಾಂಗದ ಕೆಲಸವನ್ನು ನೆರವೇರಿಸುತ್ತಾರೆ. ಮನೆಯಲ್ಲಿ ಸ್ತ್ರೀದೇವತೆಗಳ ಆರಾಧನೆಯಿದ್ದು, ದಡ್ಲುಮಾರಮ್ಮ, ದೇವರಹಳ್ಳಿ ಮಾರಮ್ಮ ದೇವತೆಗಳು ಮುತ್ತಿಗಾರರಲ್ಲಿ ಹುಟ್ಟಿದಂಥವು. ಚಿನ್ನಹಗರಿ ನದಿ ಇವರಿಗೆ ಪವಿತ್ರವಾದುದು. ವೈಷ್ಣವ ಸಂಪ್ರದಾಯ ಇವರಲ್ಲಿದ್ದು, ಪ್ರಾಣಿಬಲಿ (ಕಾತ್ರಿಕೆಹಟ್ಟಿ) ಇತರೆ ರೂಢಿ ಸಂಪ್ರದಾಯಗಳು ಪ್ರಚಲಿತದಲ್ಲಿವೆ.

ಬಲಿಮುನ್ನ ಮಂತ್ರ, ಕಾತ್ರಿಕೆಹಟ್ಟೆ

ಚಳ್ಳಕೆರೆ ತಾಲೂಕು ಬೋಸೆದೇವರಹಟ್ಟಿ ಬಿ.ಓ. ಬೋರಯ್ಯ ತಂದೆ ಸಣ್ಣ ಓಬಯ್ಯ ಮ್ಯಾಸನಾಯಕರ ಬೋಸೆವಾರು ಬೆಡಗಿಗೆ ಸೇರಿದವರು. ಇವರ ಮನೆದೇವರಾದ ಬೋಸೆರಂಗಸ್ವಾಮಿಯನ್ನು ಪುರಾಣ ಪುರುಷನೆಂದು ನಂಬಿದ್ದಾರೆ. ಇದರ ಮೂಲಸ್ಥಳ ಮದ್ದನಕುಂಟೆ. ಅಲ್ಲಿಂದ ಬೋಸೆದೇವರಹಟ್ಟಿಗೆ ಬಂದಿದೆ. ಗುಡಿಸಿಲಿನಲ್ಲಿ ದೇವರ ವಿಗ್ರಹಗಳಿದ್ದು, ಮಲ್ಲಿಕಾರ್ಜುನ ಎಂಬ ವ್ಯಕ್ತಿ ಇದರ ಪೂಜಾರಿ. ಇವನನ್ನು ಮುತ್ತಿಗಾರು ನೇಮಿಸುವರು. ಬೋಸೆದೇವರ ಎತ್ತುಗಳಿಗೆ ರಂಗಸ್ವಾಮಿ ಎಂಬ ಕಿಲಾರಿ ಇದ್ದಾರೆ. ಇದೇ ಗ್ರಾಮದ ದಾಸರಯ್ಯನು ಮಾದಿಗ ಜನಾಂಗಕ್ಕೆ ಸೇರಿದ್ದು ನಾಯಕರ ದೇವತೆಗಳ ಆರಾಧನೆಯಲ್ಲಿ ಪ್ರಮುಖ ಪಾತ್ರವಹಿಸುವನು. ಬೆಳಗಟ್ಟದ ಉರುಮೆಯವರು, ನಾಯಕನಹಟ್ಟಿ ಅಗಸರು ಬರುತ್ತಾರೆ. ಸ್ತ್ರೀ ದೇವತೆ ದಡ್ಲು ಮಾರಮ್ಮ, ವೈಷ್ಣವ ಪಂಥಕ್ಕೆ ಸೇರಿದ ಇವರು ಹಂಪೆ ಹತ್ತಿರ ತುಂಗಭದ್ರಾ ನದಿಗೆ ಬಂದು ದೇವರ ಸ್ನಾನ ಮಾಡಿಸಿಕೊಂಡು ಹೋಗುತ್ತಾರೆ. ಇವರ ಕುಟುಂಬವು ವಿದ್ಯಾವಂತರನ್ನು ಹೊಂದಿದೆ. ಇವರ ಸಂಸ್ಕೃತಿ ಸಾಕಷ್ಟು ಸುಧಾರಣೆಯಾಗಿರುವುದು ಕಂಡುಬರುತ್ತದೆ. 

ಬಲಿವಿಧಾನ, ಕಾತ್ರಿಕೆಹಟ್ಟೆ

 

ಬಲಿವಿಧಾನ, ಕಾತ್ರಿಕೆಹಟ್ಟಿ

ಭೈರವನ ಆರಾಧನೆ ಬೇಡರಲ್ಲಿ ಪ್ರಾಚೀನ ಕಾಲದಿಂದಲೂ ಬೆಳೆದುಬಂದಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಶೈವ ಮತ್ತು ವೈಷ್ಣವ ಪಂಥಗಳೆರಡು ಸಮವಾಗಿ ಕಂಡುಬರುತ್ತವೆ. ನಲಗೇತಯ್ಯನಹಟ್ಟಿಯ ತಿಪ್ಪೇಸ್ವಾಮಿ ಮ್ಯಾಸ ನಾಯಕರ ಕಾರಕೆನ್ನೇರು (ಬೋರುಗುಲು) ಬೆಡಗಿಗೆ ಸೇರಿದ್ದು, ಮಂದವಾರು ಪಂಗಡದಲ್ಲಿದ್ದಾರೆ. ನಾಯಕನಹಟ್ಟಿ ಕಟ್ಟೆಮನೆಯಾದರೆ, ನಲಗೇತಯ್ಯನಹಟ್ಟಿ ಗುಡಿಕಟ್ಟೆ ಇವರದು. ಮನೆದೇವರು ಕುದಾಪುರದ ಚಿಂತಗುಂಟ್ಲ ಬೋರೆದೇವರು. ಇದಕ್ಕೆ ದೇವರೆತ್ತುಗಳಿದ್ದು, ಕಿಲಾರಿ, ದಾಸಯ್ಯನವರು ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿದ್ದಾರೆ.

ಹೊಳಲ್ಕೆರೆ ತಾಲೂಕಿನ ಗಂಜಿಗಟ್ಟೆಯ ರಾಜಪ್ಪ ತಂದೆ ಕಂಪಳಪ್ಪ (ಚಿನ್ನಪ್ಪರ ಕಂಪಳಪ್ಪ) ಎಂಬುವರು ನಾಯಕ ಜನಾಂಗದ ಲೆಕ್ಕಿಮಲೆರು, ಪೂವುಲಾರು ಮತ್ತು ಅನಂತಪುವುಲಾರು ಎಂಬ ೩ ಜನ ಅಣ್ಣತಮ್ಮಂದಿರ ಬೆಡಗಿಗೆ ಸೇರಿದವರು. ಇವರದು ಭೈರವೇಶ್ವರ (ಬೋರೆದೇವರು) ದೇವಾಲಯ ಗಂಜಿಗಟ್ಟೆಯಲ್ಲಿದೆ. ಗುಡಿಕಟ್ಟೆ ಗಂಜಿಗಟ್ಟೆಯಾದರೆ ಕಟ್ಟೆಮನೆ ಗೋನೂರು. ಈ ದೇವರು ಗಾದರಿಪಾಲನಾಯಕನ ಜೊತೆ ಬಂದಿದೆ ಎಂದು ಹೇಳಲಾಗುತ್ತದೆ. ಕಾಮಗೇತಲಾರು ರಾಮಚಂದ್ರಪ್ಪ ಇದರ ಪೂಜಾತಿಗಳು. ಸ್ಥಳೀಯರು ಉರುಮೆ ಬಡಿದರೆ, ಇತರರು ಬೇರೆ ಬೇರೆ ಕೆಲಸ ಮಾಡುತ್ತಾರೆ. ವ್ಯಾಸೆ ಕೊಯ್ಯುವ ಸಂಪ್ರದಾಯವಿದ್ದು, ಕಂಪಳಮಾರಮ್ಮನು (ಚಾಮುಂಡಿ) ಸ್ತ್ರೀ ದೇವತೆಯಾಗಿದ್ದಾಳೆ. ಶೈವ ಪಂಥಕ್ಕೆ ಸೇರಿದ ಇವರು ಗಾದ್ರಿಹಳ್ಳವನ್ನು ಪವಿತ್ರವೆಂದು ನಂಬಿರುವರು. ಕಾಸು, ಮಣಿವು, ಓಕುಳಿ, ಬೇಟೆ ಇವರಲ್ಲಿ ಪ್ರಚಲಿತವಿರುವ ಇತರ ಪ್ರವೃತ್ತಿಗಳು ಮತ್ತು ಆಚರಣೆಗಳು.