ಚಳ್ಳಕೆರೆ ತಾಲೂಕು ಕುದಾಪುರ ಹತ್ತಿರ ಬೋರೆದೇವರಹಟ್ಟಿ ಪೂಜಾರಿ ಸಣ್ಣ ಬೋರಯ್ಯ ತಂದೆ ಗೋವಿಂದಪ್ಪ ಚಿಂತಗುಂಟ್ಲ ಬೋರೆದೇವರ ಪೂಜಾರಿ. ಮ್ಯಾಸನಾಯಕರ ಗೊಡಗುದಾಸರಿ ಬೆಡಗಿಗೆ ಸೇರಿದ್ದಾನೆ. ಮ್ಯಾಸಬೇಡರ ೧೨ ಪೆಟ್ಟಿಗೆ ದೇವರುಗಳು ಇಲ್ಲಿಂದಲೇ ಹೊರಟು ಹೋದವೆಂದು ಹೇಳುತ್ತಾರೆ. ಇವರಿಗೆ ಕಟ್ಟೆಮನೆ ಗುಡಿಕಟ್ಟೆ ಕುದಾಪುರ. ಆಧುನಿಕ ದೇವಾಲಯವಿದ್ದು, ಉತ್ತಮ ಶಿಲ್ಪಗಳು ಇಲ್ಲಿವೆ. ಮಾಳಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಮುತ್ತಿಗಾರ ಎತ್ತುಗಳಿವೆ. ಪೂಜಾರಿಯನ್ನು ಅಣ್ಣತಮ್ಮಂದಿರು ನೇಮಿಸುತ್ತಿದ್ದು, ಮುತ್ತಿಗಾರ ಎತ್ತುಗಳಿಗೆ ಕಿಲಾರಿಯು ಇದ್ದಾನೆ. ಓಬನಹಟ್ಟಿ ದಾಸರಯ್ಯ ದುರುಗದ ಕೆಳಗೋಟೆ ದಾಸರಿ, ಗೌಡಗೆರೆ ಉರುಮೆಯವರು, ಗೌರೀಪುರದ ಮಡಿವಾಳರು ಬರುತ್ತಿರುವುದು ವಿಶೇಷ. ಇದು ಉದ್ಭವ ಲಿಂಗವಾದ್ದರಿಂದ ಗಂಗೆ ಸ್ನಾನಕ್ಕೆ ದೇವರು ಹೋಗುವುದಿಲ್ಲ. ಈ ಪೂಜಾರಿಗಳು ಮನೆದೇವತೆಯಾಗಿ ದಡ್ಲುಮಾರಮ್ಮನನ್ನು ಪೂಜಿಸುವರು. ಶೈವ ಸಂಪ್ರದಾಯಕ್ಕೆ ಸೇರಿದ ಇವರು ಪ್ರತಿ ಭಾನುವಾರ ವಿಶೇಷ ಹಬ್ಬ – ಪೂಜೆ ಮಾಡಿದರೆ, ಗುಗ್ಗರಿ ಹಬ್ಬಗಳನ್ನು ಮಾಡುವರು. ತೆಲುಗು ಮಾತನಾಡುವ ಇವರು ತಮ್ಮ ಹೆಂಡತಿಯರಿಗೆ ತಾಳಿ ಕಟ್ಟುವುದಿಲ್ಲ. ಕರಿಮಣಿಯನ್ನು ತವರು ಮನೆಯವರು ಮಾಡಿಸುತ್ತಾರೆ. ಹಿಂದಿನವರಂತೆ ಈ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಿನ್ನಹಗರಿ ನದಿ ದಂಡೆಯ ಮೇಲಿರುವ ಹೂಡೇಂ ಗ್ರಾಮದಲ್ಲಿಯು ಬೋರೆದೇವರ ಪ್ರಾಚೀನ ದೇವಾಲಯವಿದೆ. ಇದು ನಡುಗಡ್ಡೆ ನಾಯಕರಿಗೆ ದೇವರೆಂದು ಹೇಳುತ್ತಾರೆ. ಈ ಗ್ರಾಮದ ಯರ್ರಿಬೋರಯ್ಯ ತಂದೆ ದಾಸರೋಬಯ್ಯ ನಡುಗಡ್ಡೆ ಪಾತ ಪೂಜಾರಿಯಾಗಿದ್ದಾನೆ. ಮ್ಯಾಸನಾಯಕರ ಮಂದಲವಾರು ಬೆಡಗಿನ ನಡುಗಡ್ಡೆವಾರೆಂದು ಕರೆಸಿಕೊಳ್ಳುವರು. ಜುಮ್ಮೋಬನಹಳ್ಳಿ – ೮, ಮುಷ್ಠಲಗುಮ್ಮಿ – ೨, ದಾವಣಗೆರೆಯಲ್ಲಿ ೨ ಮನೆಗಳು ಈ ದೇವರಿಗೆ ನಡೆದುಕೊಳ್ಳುತ್ತಾರೆ. ಈ ದೇವರಿಗೆ ಮೂಲ ಚಿಂತಗುಟ್ಲ ಬೋರದೇವರೇ. ಸಹಸ್ರಾರು ವರ್ಷಗಳ ಹಿಂದಿನದು ಈ ದೇವರೆಂಬ ನಂಬಿಕೆಯಿದೆ. ಇಲ್ಲಿರುವ ದೇವಾಲಯ ಗಂಗರ ಕಾಲಕ್ಕೆ ಸೇರಿದಂತಿದ್ದು, ಕೆಲವರು ನೊಳಂಬರ ಕಾಲಕ್ಕೆ ಸೇರಿದ್ದೆಂದು ಹೇಳುತ್ತಾರೆ. ಭೈರವನಶಿಲ್ಪ, ವಿನಾಯಕ, ಸೂರ್ಯ, ಜಿನ, ವಿಷ್ಣು ಶಿಲ್ಪಗಳಿವೆ. ಇವನನ್ನು ನಡುಗಡ್ಡೆಯವರು ನೇಮಿಸುವರು. ಜುಮ್ಮೊಬನ ಹಳ್ಳಿಯಿಂದ ಉರುಮೆಯವರು ಬರುತ್ತಾರೆ. ಮಾಘಮಾಸದಲ್ಲಿ ವಾಸೆ ಕೊಯ್ಯುವುದುಂಟು. ಕಂಪಳದೇವರನ್ನು ಇವರು ಪೂಜಿಸುತ್ತಿದ್ದು ತಮ್ಮ ಏಕದೇವತಾರಾಧನೆಯನ್ನು ಕೈಬಿಟ್ಟಿದ್ದಾರೆ. ಕಾಸುಕಟ್ಟಿಕೊಳ್ಳುವ, ಬೇಟೆಯಾಡುವ, ಪಶುಪಾಲನೆ, ಬಯಲಾಟ, ಯಕ್ಷಗಾನ ಮೊದಲಾದವು ರೂಢಿಯಲ್ಲಿವೆ.

ಮ್ಯಾಸಬೇಡರ ಅನೇಕ ವೀರರ ಪಂಥಗಳು ಮರೆಯಾಗಿರುವುದುಂಟು. ಅಂಥವುಗಳು ವಿಶ್ಲೇಷಣೆ ಇಂದಿನ ಅನಿವಾರ್ಯ ಕಾರ್ಯವಾಗಿದೆ. ಬಳ್ಳಾರಿ ಜಿಲ್ಲೆ, ಕೂಡ್ಲಿಗಿ ತಾಲೂಕಿನ ಕಾತ್ರಿಕಟ್ಟೆ ಗೌಡ್ರಪಾಲಯ್ಯ ತಂದೆ ಕಾಟಯ್ಯನು ಮ್ಯಾಸನಾಯಕರ ಕಾಮಗೇತಿ ಗೋತ್ರಕ್ಕೆ ಸೇರಿರುತ್ತಾರೆ. ಹಟ್ಟಿಯಲ್ಲಿ ನೆಲೆಸಿರುವ ಈತ ಸೂರಪ್ಪನಾಯಕ (ಕಾಮಗೇತನಹಳ್ಳಿ) ನ ಅನುಯಾಯಿ ಕಾಮಗೇತನಹಳ್ಳಿ ಇವರ ಗುಡಿಕಟ್ಟು ಮತ್ತು ಕಟ್ಟೆಮನೆ. ಈ ದೇವರಲ್ಲದೆ, ಚಳ್ಳಕೆರೆ ಕಾಟಪ್ಪ, ರುದ್ರಮ್ಮನಹಳ್ಳಿ ನಲುಜೆರುವಯ್ಯ, ಉಡೆಗೊಳಂನ ಚಿತ್ರದೇವರು ಮೊದಲಾದವುಗಳನ್ನು ಕಾಮಗೇತಿಗಳು ಆರಾಧಿಸುವರು. ಇವರು ಸುಧಾರಿತ ಜನಜೀವನಕ್ಕೆ ಒಗ್ಗಿ ಹೋಗಿರುವರು. ಕಾಮಗೇತನಹಳ್ಳಿ ಜಗಳೂರು ತಾಲೂಕಿನಲ್ಲಿದ್ದು, ಬೇಡರಿಗೆ ಆಚಾರ ಕಟ್ಟೆಮನೆ ಎಂದು ಖ್ಯಾತವಾಗಿದೆ. ನಿಜಲಿಂಗಪ್ಪ ಇದರ ಪೂಜಾರಿ, ದೊಣ್ಣೆಹಳ್ಳಿ ಹತ್ತಿರ ಜನಿಗೆಹಳ್ಳಕ್ಕೆ ಈ ದೇವರು ಗಂಗೆಸ್ನಾನಕ್ಕೆ ಬರುತ್ತದೆ.

ಇದೇ ದೇವರಿಗೆ ಸೇರಿದ ಪೂಜಾರಿ ಬಸಣ್ಣ ತಂದೆ ಸೂರಯ್ಯನವರು ಬಸವಣ್ಣನ ಪೂಜಾರಿಗಳಾಗಿ ಪೂಜಾರಹಳ್ಳಿಯಲ್ಲಿದ್ದಾರೆ. ಇವರದು ಕಾಮಗೇತನಹಳ್ಳಿ ಸೂರಪ್ಪನಾಯಕ ಮನೆದೇವರು. ಕಾಮಗೇತನಹಳ್ಳಿ ಧಾರ್ಮಿಕ ಕೇಂದ್ರವಾಗಿದೆ. ಸೂರ್ಯದೇವ ಪಾಪನಾಯಕನನ್ನು ಇವರು ಪೂಜಿಸುವರು. ಕಾಮಗೇತನಹಳ್ಳಿಯಲ್ಲಿ ಸೂರಪ್ಪನ ದೇವಾಲಯವಿದೆ. ದೇವರೆತ್ತುಗಳಿದ್ದು ಬಸಪ್ಪನಹಟ್ಟಿ ಮಾಚೂರನಾಯಕ ಕಿಲಾರಿ ಆಗಿರುತ್ತಾನೆ. ಮುದುಕದಹಳ್ಳಿ ಚಲುವಾದಿಗಳು ಉರುಮೆ ಬಡಿಯುತ್ತಾರೆ.

ಮ್ಯಾಸಬೇಡರ ಸಂಸ್ಕೃತಿಯಲ್ಲಿ ಕಾಟಪ್ಪನಾಯಕನೆಂಬ ವೀರ ಚಳ್ಳಕೆರೆ ಪರಿಸರದಲ್ಲಿದ್ದನು. ಅವನ ಬಗೆಗೆ ಧಾರ್ಮಿಕ ಸಂಪ್ರದಾಯಗಳು ಬೆಳೆದುಬಂದಿವೆ. ಇಲ್ಲಿನ ಕಾಟಪ್ಪನಹಟ್ಟಿಯ ಯಜಮಾನ್ ನಾರಯಣಪ್ಪ (ದೊಡ್ಡಕಾಟಯ್ಯ ತಂದೆ ಅಜ್ಜಯ್ಯ) ಊರಿನ ಯಜಮಾನರ ಮನೆತನದವರು. ಮಂದಲಗೋತ್ರದ ಕಾಮಗೇತಿ (ಕಪ್ಪಗಲ್ಲು) ಪಂಗಡದವರು. ಇವರು ದನಗಾಹಿ ಕಾಟಪ್ಪ ನಾಯಕನನ್ನು ಕಾಟಮಲಿಂಗೇಶ್ವರನೆಂದು ಪೂಜಿಸುವರು. ಧಾರ್ಮಿಕ ನೆಲೆ ಕಾಟಪ್ಪನಹಟ್ಟಿ. ಇವರ ಮೂಲ ನಿಡಗಲ್ಲ. ನಿಡಗಂಟಿ ದೊರೆ ಕಾಮರಾಜನ ಮಗಳನ್ನು ಮದಕರಿ ವಂಶಸ್ಥರಿಗೆ ಕೊಟ್ಟಿದ್ದರು. ಆ ಹೆಣ್ಣಿನ ಒಡಲಿಗೆ ಪೂಜಿಸಲು ಕೊಟ್ಟಿದ್ದರು. ಆಗಿನಿಂದ ಒಡಲಿಗೆ ಬಂದು ಹೆಣ್ಣಿನ ಮೂಲಕ ದೇವರಾಯಿತು. ಇಲ್ಲಿ ಕಾಟಮಲಿಂಗೇಶ್ವರ ದೇವಾಲಯಗಳಿವೆ. ಕಾಟಮುಲಿಂಗಯ್ಯ ಇಲ್ಲಿನ ಪೂಜಾರಿ. ಕೊಟ್ಟಿಗೆ ಮನೆಗಳಲ್ಲಿ ವಾಸಿಸುವ ಇವರನ್ನು ಗೋಶಿಕೆರೆ ಜಂಗಮರು ಶುದ್ಧಿ ಮಾಡಿ ಪೂಜಾರಿಯಾಗಿ ಮಾಡುತ್ತಾರೆ. ನಲ್ಲಟಬ್ಬಾರು (ಹೆಣ್ಣಿನ ಅಧಿಕಾರದಿಂದ ಬಂದ ಹೆಸರು) ಎಂದು ಕರೆಯುವ ಇವರ ಜೀವನದಲ್ಲಿ ಕಟ್ಟುನಿಟ್ಟಿನ ನಿಯಮಗಳಿವೆ. ಭಾವಭಾಮೈದುನರಾದ ಬೇಡರೆಡ್ಡಿಹಳ್ಳಿ ಯರಮಂಚಿ ನಾಯಕನು ಇವರಿಗೆ ದೊರೆ. ವರವಿನ ಕಾವಲಿನಲ್ಲಿ ದೇವರೆತ್ತುಗಳಿವೆ. ದೀಪಾವಳಿ, ಗುಗ್ಗರಿಹಬ್ಬ, ಯುಗಾದಿಗಳಲ್ಲಿ ವಾಸಿಕೊಯ್ಯುವರು. ಪರಮೇಶಿನಾರು ಗೋವಿಂದಪ್ಪ ಕಿಲಾರಿ ಮುತ್ತಿನ ಕಾಲ್ಪೆಂಡೆಯನ್ನು ಕಂಪಳದೇವರಿಗೆ ಕೊಟ್ಟರು. ಕಾಟಯ್ಯನು ಪರಂಪರೆಯಿಂದ ಬಂದ ದಾಸಯ್ಯನಾಗಿರುವನು. ಹಿರೇಹಳ್ಳಿ ಚಲುವಾದಿಗಳು ಇಲ್ಲಿ ಉರುಮೆ ಬಡಿಯುವರು. ಗೋಶಿಕೆರೆ ಹಳ್ಳದಲ್ಲಿ ಈ ದೇವರಿಗೆ ನಿವಾಳಿ ಕೊಯ್ಯುತ್ತಾರೆ. ಶೈವ ಪಂಥಕ್ಕೆ ಸೇರಿದ ಇವರು ವೇದಾವತಿ ನದಿ ಮೂಗು ಮುತ್ತ ಚಿಲುಮೆಯನ್ನು ಆರಾಧಿಸುವರು. ೮ ಅಜ್ಜನವರಿಗೆ ಕಾಸುಮೀಸಲು ಕಟ್ಟಿಕೊಳ್ಳುತ್ತಾರೆ. ನಿಡಗಲ್ಲು, ನನ್ನಿನಾಳ, ಗೊನೂರು, ನಾಯಕನಹಟ್ಟಿಗಳು ಇವರಿಗೆ ಪವಿತ್ರ ಸ್ಥಳಗಳು. ಶಿವರಾತ್ರಿ ದಿನ ಗೋಶಿಕೆರೆ ಹಳ್ಳದಲ್ಲಿ ಬೇಟೆಯಾಡುತ್ತಾರೆ. ವಿವಿಧ ಪ್ರವೃತ್ತಿಗಳಲ್ಲಿ ನಾಟಕ, ಹಂದಿಬೇಟೆ, ಸಂಗೀತ, ಭಜನೆ, ಕೋಲುಬಡಿಯುವರು. ಕೃಷಿ ಮತ್ತು ಪಶುಪಾಲನೆಯು ಇವರಲ್ಲಿ ಪ್ರಧಾನ ವೃತ್ತಿಗಳಾಗಿವೆ.

ಬೋರೆ ದೇವರ ಪ್ರಾಚೀನ ದೇವಾಲಯ, ಹೂಡೇಂ

ಚಿತ್ರನಾಯಕನೆಂಬ ವೀರನಿದ್ದ ಕಾರಣ ಅವನ ಸಂಪ್ರದಾಯ ಬೆಳೆದುಬಂದಿದೆ. ಸೂರಮ್ಮನಹಳ್ಳಿಯ ಓಬವ್ವ ತಂದೆ ತಿಪ್ಪಯ್ಯ ಮಂದಲಗೋತ್ರದ ಬಿದ್ನಾರು ಪಂಗಡದವರು. ಇವರು ಆರಾಧಿಸುವುದು ಚಿತ್ರಲಿಂಗೇಶ್ವರನೆಂಬ ದೇವರನ್ನು. ಈತನೊಬ್ಬ ಪುರಾಣ ಪುರುಷನಲ್ಲದೆ ದಂತವ್ಯಕ್ತಿಯಾಗಿದ್ದು, ೭೪ ನೇ ಉಡೇಗೊಳಂ ರಾಯದುರ್ಗ ತಾಲೂಕು, ಅನಂತಪುರ ಜಿಲ್ಲೆಯಲ್ಲಿದ್ದನಂತೆ. ಮೊರ‍್ಲಹಳ್ಳಿಯ ಪೂಜಾರಿ ಬೋರಯ್ಯನೆಂಬುವನು ಇದರ ಪೂಜಾರಿ. ಬೇವಿನಮಠ, ಚಿನ್ನಹಗರಿ ನದಿ ಇವರಿಂದ ಆರಾಧನೆಗೊಳ್ಳುತ್ತವೆ.

ಪಾಲನಾಯಕನಕೋಟೆ (ಹಿರೇಹಳ್ಳಿ ಹತ್ತಿರ) ಯ ತಿಪ್ಪೇಸ್ವಾಮಿ ತಂದೆ ಅಪ್ಪಯ್ಯ ಮಾಳಿಗೆ ಮನೆತನದವರು. ನಾಯಕರ ಬುಲ್ಲೊಡ್ಲು (ಮಂದ) ಬೆಡಗಿಗೆ ಸೇರಿದ್ದಾರೆ. ಇವರದು ಬಂಗಾರು ದೇವರು, ನನ್ನಿವಾಳದಲ್ಲಿದೆ. ಪಶುಪಾಲನೆ ಮಾಡುವಾಗ ಬಂಗಾರು ಹುಲಿ ಮಾಡಿಸಿ ಅದನ್ನು ಪೂಜೆ ಮಾಡಿಕೊಂಡು ಹೋಗಿರೆಂದು ತಿಳಿಸಿದ್ದರಂತೆ. ಅಂದಿನಿಂದ ಮುತ್ತಿಗಾರರಲ್ಲಿ ಹುಟ್ಟಿದ ದೇವರಾಗಿ, ಬೇಟೆಯಾಡುವಾಗ ಮೊಲದಷ್ಟು ಬಂಗಾರ ಸಿಕ್ಕಿದ್ದರಿಂದ ಅವರ ಪ್ರತೀಕವೇ ಅದನ್ನು ದೇವರಾಗಿ ಮಾಡಿಕೊಂಡಿದ್ದಾರೆ. ರಂಗಶೇಡು ಬಂಗಾರು (ಆಂಧ್ರ), ನನ್ನಿವಾಳ ಬಂಗಾರದೇವರಹಟ್ಟಿಯಲ್ಲಿ ದೇವಾಲಯಗಳಿವೆ. ಹುಲ್ಲಿನ ಗುಡಿಸಲು, ಸುತ್ತಲೂ ಬಂದರಿ ಸೊಪ್ಪು ಲೆಕ್ಕಿ ಸೊಪ್ಪನ್ನು ಕಟ್ಟಿದ್ದಾರೆ ದೇವರ ಗುಡಿಗಳಿಗೆ. ಬಂಗಾರು ದೇವರಹಟ್ಟಿಯ ಬುಲ್ಲಯ್ಯ ಇದರ ಪೂಜಾರಿ. ದೇವರಿಗೆ ಸೇರಿದ ಹಿರಿಯರು ಈತನನ್ನು ನೇಮಿಸಿದ್ದಾರೆ. ದೇವರೆತ್ತುಗಳಿದ್ದು, ಬೋರಯ್ಯನೆಂಬ ಕಿಲಾರಿಯು ಇದ್ದಾನೆ. ನನ್ನಿವಾಳದಲ್ಲಿ ದೀಪಾವಳಿ, ಗುಗ್ಗರಿಹಬ್ಬ, ಶೂನ್ಯದಲ್ಲಿ, ೧೨ ಅಮವಾಸೆ ಹುಣ್ಣಿಮೆಗಳಲ್ಲಿ ಪೂಜಾಕಾರ್ಯಗಳು ನಡೆಯುತ್ತವೆ. ಕಾರಹುಣ್ಣಿಮೆಯಲ್ಲಿ ಗೊಡ್ಡು ಕುರಿಯನ್ನು (ಬಂಜೆ) ವಾಸೆ ಕೊಯ್ಯುತ್ತಾರೆ. ನನ್ನಿವಾಳದ ಗುಡ್ಡ ಮೇಲಿನ ಹಳ್ಳ, ಗುಡ್ಡ, ಪವಿತ್ರವಾಗಿವೆ. ಸ್ತ್ರೀ ದೇವತೆಯಾಗಿ ದೇವರಹಳ್ಳಿ ದಡ್ಲುಮಾರಮ್ಮನನ್ನು ಪೂಜಿಸುವರು. ನಿತ್ಯಬೇಟೆಗಾರರಾದ ಇವರು ಯಕ್ಷಗಾನ, ಕೋಲಾಟಗಳಲ್ಲಿ ಕಾಲ ಕಳೆಯುವರು.

ನೇರ‍್ಲಗುಂಟೆಯಲ್ಲಿ ಬಂಗಾರು ದೇವಾಲಯವಿದೆ. ಬಿ. ಬೋರನಾಯಕ ತಂದೆ ಪೂಜಾರಿ ಎಂ.ಜಿ. ಓಬನಾಯಕ ಬುಲ್ಲಾಡ್ಲಾರು ಮನೆತನದವರು. ಇವರು ನಿವೃತ್ತ ಎಸ್.ಆರ್.ಟಿ.ಸಿ.ಕೆ.ಮೆನೇಜರ್. ಇವರ ಬೆಡಗು ‘ಬುಲ್ಲುಡ್ಲಾರು’ (ಮಂದ). ಇದರಲ್ಲಿ ೩ ವಿಧ ಬೋಡಿ ಬುಲ್ಲುಡ್ಲು, ಪಾಲು ಬುಲ್ಲುಡ್ಲು, ಜೋಗಿ ಬುಲ್ಲುಡ್ಲು. ಬಂಗಾರು ದೇವರು ಶಕ್ತಿಪೀಠ (ಹುಲಿಗಾಂಬಾ) ದಲ್ಲಿ ಹುಲಿಯನ್ನು ಆರಾಧಿಸುತ್ತಾರೆ. ಕಟ್ಟೆಮನೆ ನನ್ನಿವಾಳ. ಇದು ಶ್ರೀಶೈಲದ ನಲಮಲ, ಯರಮಲದಿಂದ ಬಂದಿದೆಯಂತೆ. ನೇರ‍್ಲಗುಂಟೆ ಹತ್ತಿರ ಗಾದರಿಪಾಲನಾಯಕ ಎತ್ತು ಹೊಡೆದುಕೊಂಡು ಹೋಗಿದ್ದನೆಂದು ಇಲ್ಲಿನ ಕಥೆಯಿದೆ. ಆಂಧ್ರದ ಈರಾಪುರ, ರಂಗಸೇಟ್ಲು ಕರ್ನಾಟಕದ ಸಿರಗೇರಿಹಟ್ಟಿ, ಬೂದಿಹಳ್ಳಿಗಳಲ್ಲಿ ಗುಡಿಗಳಿವೆ. ಈ ದೇವರ ಪೂಜಾತಿಯ ಹೆಸರು ಬೋರಯ್ಯ. ಮ್ಯಾಸಬೇಡರ ೩ ಜನ ಪೂಜಾರಿಗಳಾದ ನಲಗೇತಿ, ಕಾಮಗೇತಿ ಮತ್ತು ಬುಲ್ಲುಡ್ಲು ಸೇರಿ ೯ ಜನ ಅಜ್ಜನವರೊಂದಿಗೆ ಪೂಜಾರಿಯನ್ನು ನೇಮಿಸುವರು. ನನ್ನಿವಾಳ ಕಟ್ಟೆಮನೆಯಾಗಿದೆ. ದೇವರೆತ್ತುಗಳಲ್ಲದೆ ಈ ದೇವರ ಕಾರ್ಯಗಳಾವು ನಡೆಯುವುದಿಲ್ಲ. ಕಿಲಾರಿ ಬೋರಯ್ಯ ಅಣ್ಣತಮ್ಮಂದಿರ ಸಲಹೆಯಂತೆ ಪೂಜಾಕಾರ್ಯಗಳನ್ನು ನೆರವೇರಿಸುವರು. ನಾಯಕನಹಟ್ಟಿ ಚಲುವಾದಿಗರು ಮತ್ತು ನೇರ‍್ಲಗುಂಟೆ ಮಡಿವಾಳರು ಸೇವಾ ಕೆಲಸಗಳನ್ನು ಮಾಡುತ್ತಾರೆ. ವಾಸೆ ಕೊಯ್ಯುವ ಪದ್ಧತಿ ಇವರಲ್ಲಿದ್ದು, ಬಂಗಾರು ದೇವರನ್ನು ಹೆಣ್ಣು ಅಥವಾ ಸ್ತ್ರೀ ದೇವತೆಯೆಂದು ಆರಾಧಿಸುವರು. ವೈಷ್ಣವ ಪಂಥದ ಸಂಪ್ರದಾಯಗಳು ಇವರಲ್ಲಿ ಕಂಡುಬರುತ್ತವೆ. ವೇದಾವತಿ ನದಿ, ಗುಹೇಶ್ವರ ಬೆಟ್ಟ, ಕಲ್ಲೇದೇವರಪುರದ ಕಲ್ಲಪ್ಪ, ಗಾದರಿ ಮಲೆಬೆಟ್ಟ ಮೊದಲಾದವು ಆರಾಧನಾ ಕೇಂದ್ರಗಳಾಗಿವೆ. ದೇವರುಗಳಿಗೆ ಕಾಸು, ಮೀಸಲು, ಮಣೆವುಗಳನ್ನು ಗುಗ್ಗರಿಹಬ್ಬ, ಎತ್ತಿನಹಬ್ಬ, ದೀಪಾವಳಿಗಳಲ್ಲಿ ಮಾಡುವರು. ವರ್ಷದಲ್ಲಿ ಆಗಾಗ ಬೇಟೆಗೂ ಇವರು ಹೋಗುವರು. ಕೋಳಿ ನಿಷಿದ್ಧ, ಸಾಕುವುದಿಲ್ಲ ಮತ್ತು ತಿನ್ನುವುದಿಲ್ಲ. ವ್ಯವಸಾಯ ವೃತ್ತಿ ಇವರದಾಗಿದ್ದು, ಮನೆಯಲ್ಲಿ ತೆಲುಗು ಮಾತನಾಡುತ್ತಾರೆ. ಇವರಲ್ಲಿ ಪಾರಂಪರಿಕವಾಗಿ ಬಂದಂತೆ ತಮ್ಮ ಪತ್ನಿಯರಿಗೆ ತಾಳಿಕಟ್ಟದೆ ಕೇವಲ ಕರಿಮಣಿಯನ್ನು ಮಾತ್ರ ಕಟ್ಟುತ್ತಾರೆ.

ದೇವರ ಗಂಜಿಗಟ್ಟೆಯಲ್ಲಿ ಗಾದರಿಪಾಲನಾಯಕನ ಪಂಥವಲ್ಲದೆ, ಕಂಪ್ಲಿ ನರಸಿಂಹ, ಸೂರ್ಯನಾರಾಣ ದೇವರುಗಳ ಆರಾಧನೆಯು ಪ್ರಚಲಿತದಲ್ಲಿದೆ. ಇಲ್ಲಿನ ಪೂಜಾರಿ ರಾಮಚಂದ್ರಪ್ಪ ತಂದೆ ಪಟೇಲ್ ನರಸಪ್ಪ ಪೂಜಾರಿಗೆ ಮನೆತನದವನು. ಕಾಮಗೇತಲಾರು ಪಂಗಡಕ್ಕೆ ಸೇರಿದ ಇವರು ಕಂಪಳ ನರಸಿಂಹ, ಭೈರವೇಶ್ವರ, ಗಾದರಿಪಾಲನಾಯಕ, ಸೂರ್ಯನಾರಾಯಣ ಮೊದಲಾದ ದೇವತೆಗಳನ್ನು ಆರಾಧಿಸುವರು. ಗಂಜಿಗಟ್ಟೆ, ಗೋನೂರುಗಳು ಗುಡೆಕಟ್ಟೆ ಮತ್ತು ಕಟ್ಟೆಮನೆಗಳಾಗಿವೆ. ವೀರನ ದೇವಾಲಯ ಕಾಮಗೇತನಹಳ್ಳಿಯಲ್ಲಿದೆ. ಇದರ ಹೆಸರು ಸೂರಪ್ಪನಾಯಕ. ಇಲ್ಲಿರುವ (ಗಾದರಿಪಾಲ ನಾಯಕನು) ಅಹೋಬಲದೇವರನ್ನು ಬೇರೆ ಕಡೆಯಿಂದ ತಂದಿದ್ದರಂತೆ. ನಾಯಕ ಜನಾಂಗದ ಹಿರಿಯರು ಈ ಪೂಜಾರಿಯನ್ನು ನೇಮಿಸುತ್ತಾರೆ. ಅರಮನೆ ಮತ್ತು ಗುರುಮನೆ ಗಂಜಿಗಟ್ಟೆಯಾಗಿದೆ. ಗಾದರಿಪಾಲನಾಯಕನ ಕಾಲದಲ್ಲಿದ್ದ ದೇವರೆತ್ತುಗಳ ಸಂತತಿ ಈಗ ವೃದ್ಧಿಯಾಗಿಲ್ಲ. ದಾಸಯ್ಯನಿದ್ದು, ಅನೇಕ ಬಗೆಯ ರೂಢಿಸಂಪ್ರದಾಯಗಳು ಪ್ರಚಲಿತದಲ್ಲಿವೆ.

ಇದೇ ಗ್ರಾಮಕ್ಕೆ ಸೇರಿದ ಕಂಪಳಪ್ಪ ಶೇಣಜ್ಜಿ ಕಂಪಳ್ಳ ವ್ಯವಸಾಯದಿಂದ ಜೀವಿಸುತ್ತಾನೆ. ಇವರು ಕಾಮಗೇತಲಾರು ಪಂಗಡಕ್ಕೆ ಸೇರಿದ್ದಾರೆ. ಸೂರಪ್ಪನಾಯಕ (ಕಂಪಳನರಸಿಂಹ) ಇವರು ಮನೆದೇವರು. ಗೋನೂರು ಕಟ್ಟೆಮನೆಗೆ ಸೇರಿದ ಗಂಜಿಗಟ್ಟಿ ಗುಡಿಕಟ್ಟಾಗಿದ್ದು, ‘ಗಾದ್ರಿ ಸಿಂಹಾಸನ’ ಇಲ್ಲಿದೆ. ಎಲ್ಲರೂ ಸೇರಿ ಈ ದೇವರನ್ನು ಮಾಡುತ್ತಾರೆ. ವೀರನ ಹೆಸರಿನಲ್ಲಿರುವ ಕಲ್ಲುಹುಣಸೆ (ಲಕ್ಷ್ಮಿಸಾಗರ) ದೇವಾಲಯವಿದೆ. ಗಂಜಿಗಟ್ಟಿಯ ಕಂಪಳ ನರಸಿಂಹ ದೇವಾಲಯದ ಕೆಲವು ಶಿಲ್ಪಗಳು ಈ ವಂಶಸ್ಥರಿಗೆ ಸಂಬಂಧಿಸಿವೆ. ಕಾಮಗೇತಿ ರಾಮಚಂದ್ರಪ್ಪ ಈ ದೇವರ ಪೂಜಾರಿ. ಇವರಿಗೆ ಅರಮನೆ, ಗುರುಮನೆಗಳೆರಡು ಚಿತ್ರದುರ್ಗ ಮುರುಘಾಮಠವಾಗಿದೆ. ಇದಕ್ಕೆ ದೇವರೆತ್ತುಗಳಿಲ್ಲದಿದ್ದರೂ, ದಾಸಯ್ಯ ಜಾಗಟೆ, ಶಂಖು, ಬೋನಾಸೆ ಹಿಡಿದು ತನ್ನ ಕಾರ್ಯವಿಧಿಗಳನ್ನು ಪೂರೈಸುವನು. ಶಿವರಾತ್ರಿಯಲ್ಲಿ ವಾಸೆ ಎಂದು ಹುಲಿ ಹೋತವನ್ನು ಗಾದರಿದೇವರಿಗೆ ಬಲಿ ಕೊಟ್ಟರೆ, ಬೋರೆ ದೇವರಿಗೆ ವಾಸೆ ಕೊಯ್ಯುವರು. ವೈಷ್ಣವ ಧರ್ಮದ ಸಂಪ್ರದಾಯಗಳನ್ನು ಇವರು ಮೈಗೂಡಿಸಿಕೊಂಡಿದ್ದಾರೆ. ಈ ಗ್ರಾಮದಲ್ಲಿರುವ ದೇವರಹೊಂಡ ಮತ್ತು ಪಕ್ಕದ ಗಾದ್ರಿಹಳ್ಳ (ಮಿಂಚೇರಿ ಹಳ್ಳ) ಕ್ಕೆ ಪೂಜಿಸುವರು. ಗಾದರಿಮಲೆ ಬೆಟ್ಟವನ್ನು ಇವರು ಪೂಜಿಸುವರು. ಕಾಸು, ಮೀಸಲು, ಮಣೆವು, ಓಕುಳಿ, ಕೋಲು, ಭಜನೆ, ನಾಟಕ, ಛತ್ರಿ ಚಾಮರ ಇತರ ಪರಿಕರಗಳು ಮತ್ತು ಆಚರಣೆಗಳು ರೂಢಿಯಲ್ಲಿವೆ.

ಆಂಧ್ರದಲ್ಲಿರುವ ಅಹೋಬಲ, ಪೆನ್ನೋಬಳ, ಕದರಿಗಳಲ್ಲಿ ವೈಷ್ಣವ ಸಂಪ್ರದಾಯಕ್ಕೆ ಸೇರಿದ ನರಸಿಂಹದೇವಾಲಯಗಳಿವೆ. ಈ ಪ್ರಭಾವ ಕರ್ನಾಟಕದ ಬೇಡ ನಾಯಕರ ಮೇಲಾದುದು ಗಮನಾರ್ಹ. ಎನ್.ಪಿ. ಓಬಯ್ಯ (ಬ್ಯಾಟ್‌ಪ್ಯಾಟ್) – ಸಣ್ಣ ತಿಮ್ಮಯ್ಯ ಎಂಬುವರು ರಾಯದುರ್ಗ ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷರು. ಅನಂತಪುರ (ಆಂಧ್ರಪ್ರದೇಶ) ಜಿಲ್ಲೆಯಲ್ಲಿ, ಈ ಸಂಪ್ರದಾಯಕ್ಕೆ ಸೇರಿದವರಿದ್ದಾರೆ. ಇವರು ವಾಲ್ಮೀಕಿ ಜನಾಂಗದ (ಮುಚ್ಚ) ಮಳೆಲಾರು ಬೆಡಗಿಗೆ ಸೇರಿದವರು. ಚಳ್ಳಕೆರೆ ತಾಲೂಕಿನ ದಾಸರಮುತ್ತೇನಹಳ್ಳಿ ಗೆದ್ದುಲಗಟ್ಟೆ ಓಬಳದೇವರು, ಕೂಡ್ಲಿಗಿ ತಾಲೂಕಿನ ಮಾಕನಡಕು ಓಬಳದೇವರಿಗೂ ಇವರಿಗೂ ಸಂಬಂಧವಿದೆ. ಪಟ್ಟಣದಲ್ಲಿ ನೆಲಸಿರುವ ಇವರು ಚಿಂತರ ಗುಂಟನಹಳ್ಳಿ ಓಬಳ ದೇವರನ್ನು ಮನೆದೇವರಾಗಿ ಹೊಂದಿರುವರು. ಇವರು ಅಹೋಬಲ ನರಸಿಂಹನನ್ನು ಆರಾಧ್ಯ ದೇವರಾಗಿ ಕಂಡಿರುವುದು ಸ್ಥಳೀಯವಾಗಿಯೇ ಎಂಬುದು ನಿಜ. ರಾಯಾಪುರದ ದಾಸಯ್ಯ, ಕುರಿಹಟ್ಟಿ ಉರುಮೆಯವರು, ಸ್ಥಳೀಯ ಅಗಸರು ವಿವಿಧ ಕೆಲಸಗಳನ್ನು ಮಾಡುತ್ತಾರೆ. ಮಾಘಮಾಸದಲ್ಲಿ ಬೋರೆ ದೇವರಿಗೆ ವಾಸೆ ಕೊಯ್ಯುತ್ತಾರೆ. ಸ್ತ್ರೀ ದೇವತೆಯಾಗಿ ಗೌರಸಮುದ್ರದ ಮಾರಮ್ಮನನ್ನು ಪೂಜಿಸುತ್ತಾರೆ. ಇವರಲ್ಲಿ ಬೇಟೆ, ಪಶುಪಾಲನೆ ಮತ್ತು ಕೃಷಿ ವೃತ್ತಿಗಳು ಜೀವಂತವಾಗಿವೆ. ಬೋಸೆವಾರು ಬೆಡಗಿನವರು ನವಣೆ ಹೊಲದಲ್ಲಿ ಓಡಾಡುವುದಿಲ್ಲ, ತಿನ್ನುವುದಿಲ್ಲ, ರಾಯದುರ್ಗ ಮತ್ತು ಮೊಳಕಾಲ್ಮೂರು ನಡುವೆ ಇರುವ ಅಡಿಗುಪ್ಪ (ಗಲಗಲ್ಲು ಹತ್ತಿರ) ರಾಜಲು ದೇವರು ಮಾನ್ಯವಿದೆ. ಬೇಡರಿಗೆ ಇವು ಆರಾಧನೆ ನೆಲೆಗಳಾಗಿ ಇಂದು ಪರಿವರ್ತನೆಗೊಂಡಿವೆ.

ಟಿ.ಓ. ಪಾಲಣ್ಣ ಶಿಕ್ಷಕರು, ಕಾಲುವೆಹಳ್ಳಿ ಇವರು ಮಂದಲೋರು ಪಂಗಡಕ್ಕೆ ಸೇರಿದ್ದು, ಶೀತಮುತ್ತಿ ವಂಶಸ್ಥರಾಗಿರುವರು. ಚಳ್ಳಕೆರೆ ತಾಲೂಕಿನ ಕಾಲುವೆಹಳ್ಳಿಯಲ್ಲಿ ಶ್ರೀ ಓಬಳಸ್ವಾಮಿ ಗುಡಿಹಳ್ಳಿ ದೇವತೆಯಿದೆ. ಮತ್ತೊಂದು ದೇವರ ಗುಡಿ ಗಾದರಿಪಾಲನಾಯಕನಿಗೆ ಸೇರಿದ್ದಾಗಿದೆ. ಶಿಲೆ, ಹುತ್ತದಿಂದ ಉದ್ಭವದಿಂದ ಆಗಿದೆ. ಓಬಳದೇವರ ಪೂಜಾರಿ ಓಬಳಯ್ಯ, ಗಾದರಿ ದೇವರ ಪೂಜಾರಿ ಸಣ್ಣ ಪಾಲಯ್ಯನವರಿದ್ದಾರೆ. ಗುಡಿಹಳ್ಳಿ ಚಲುವಾದಿಗಳು ಉರುಮೆ ಬಡಿಯುತ್ತಾರೆ. ಇತರ ಸಣ್ಣ ಪುಟ್ಟ ಕೆಲಸಗಳನ್ನು ಇತರರು ಮಾಡುತ್ತಾರೆ. ಸ್ತ್ರೀ ದೇವತೆ ಗೌರಸಮುದ್ರದ ಮಾರಮ್ಮನನ್ನು ಪೂಜಿಸುವರು. ವೈಷ್ಣವ ಸಂಪ್ರದಾಯಕ್ಕೆ ಸೇರಿದ ಇವರು ವೇದಾವತಿ, ತಿರುಪತಿ ಕ್ಷೇತ್ರವನ್ನು, ಪಶುಗಳನ್ನು ಆರಾಧಿಸುವರು. ಬೇಟೆ, ಪಶುಪಾಲನೆ ರೂಢಿಯಲ್ಲಿದೆ. ಕೋಲಾಟ, ನಂದಿಧ್ವಜ, ಭಜನೆ, ಯಕ್ಷಗಾನ ವಿವಿಧ ರಂಗಗಳಲ್ಲಿ ಮುನ್ನಡೆದಿರುವರು. ಇವರು ಸತ್ತ ಹೆಣವನ್ನು ಹೂಳುವಾಗಿ ಉತ್ತರಕ್ಕೆ ಕಾಲು, ದಕ್ಷಿಣಕ್ಕೆ ತಲೆಯನ್ನಿಡುತ್ತಾರೆ.

ತೋಟದ ಪೆದ್ದ ಓಬಯ್ಯ ತಂದೆ ಮುಕ್ಕಣ್ಣ, ತೋಟದವರೆಂದು ಕರೆಸಿಕೊಂಡು ಪೂಜಾರಹಳ್ಳಿ ಕೆ.ಬಿ.ಹಟ್ಟಿಯಲ್ಲಿ ನೆಲಸಿರುವರು. (ಸು.೯೫) ವರ್ಷ ಇವರು ಮಾಕನಡಕು ಮಳೆಲಾರು ಪಂಗಡಕ್ಕೆ ಸೇರಿದ್ದಾರೆ. ಇವರು ಗೆದ್ದಲುಗಟ್ಟೆ ಓಬಳದೇವರು, ಮಾಕನಡಕು ಓಬಳದೇವರು, ಚಿಂತಗುಂಟ್ಲು ಬೋರೆದೇವರುಗಳನ್ನು ಪೂಜಿಸುತ್ತಾರೆ. ದಾಸರ ಮುತ್ತೇನಹಳ್ಳಿ ಓಬಳದೇವರಿಗೆ ಇಂದು ನಡೆದುಕೊಳ್ಳುವರು. ಚೌಳಕೆರೆ ಹಿರಿಯರ ಗುಂಡುಗಳು, ಅಹೋಬಲನರಸಿಂಹ, ಕಂಚೋಬಳ ನರಸಿಂಹ, ಬಂಜಗೆರೆ ಓಬಯ್ಯ, ಗೆದ್ದಲುಗಟ್ಟೆ ಓಬಳ ದೇವರು ಮೊದಲಾದವುಗಳು ಇವರಿಗೆ ಆರಾಧ್ಯ ದೇವತೆಗಳಾಗಿವೆ. ದಾಸರಮುತ್ತೇನಹಳ್ಳಿಯ ಓಬಳದೇವರ ಗುಡಿ ಚೌಕಾಕಾರದ ಕಲ್ಲಿನ ಮಂಟಪವನ್ನು ಹೊಂದಿದೆ. ಪೂಜಾರಿಯ ಹೆಸರು ಓಬಯ್ಯ. ಆಯಾ ಮನೆತನದ ಅಣ್ಣತಮ್ಮಂದಿರು ಸೇರಿ ಪುಟ್ಟಿಯವರು, ಯಜಮಾನರು ಪೂಜಾರಿಯನ್ನು ನೇಮಿಸುವರು. ಇದರ ದೇವರೆತ್ತುಗಳು ಪಲ್ಲನಾಯಕನ ತಿಪ್ಪೆ ಅರಣ್ಯದಲ್ಲಿವೆ. ಊರಿನ ಹೊರಗಿನ ರೊಪ್ಪದಲ್ಲಿ ಸಣ್ಣ ಓಬಯ್ಯ ಕಿಲಾರಿ, ದೇವರೆತ್ತುಗಳಿದ್ದು, ಪೂಜಾ – ಕೆಲಸಗಳು ಇಲ್ಲಿಯೇ ನಡೆಯುತ್ತವೆ. ದೇವರ ಭಕ್ತಾಧಿಗಳು ಮತ್ತು ನೂರೊಂದು ಜನ ಹಿರಿಯರ ಸಮ್ಮುಖದಲ್ಲಿ ಕಿಲಾರಿ ನೇಮಕ ನಡೆಯುತ್ತದೆ. ತಲೆಮಾರುಗಳಿಂದಲೂ ದಾಸಯ್ಯ ಇಲ್ಲಿಗೆ ಬಂದು ಕೆಲಸ – ಕಾರ್ಯಗಳನ್ನು ಮಾಡುತ್ತಾನೆ. ತಂದೆ, ಮಗ ಹೀಗೆ ಆ ವಂಶದವರು ದಾಸಯ್ಯರಾಗಿದ್ದಾರೆ. ಮಲ್ಲೂರಹಳ್ಳಿ ಚಲುವಾದಿ ಕುಟುಂಬದವರು (ಬಸಣ್ಣ) ದೇವರಿಗೆ ಉರುಮೆ ಬಡಿಯುವರಲ್ಲದೆ, ಈ ದೇವರ ಭಕ್ತರು ಸಹಾ ಆಗಿರುತ್ತಾರೆ. ಅಗಸರು ದೇವರಗಂಗಿಪೂಜೆ, ಬನ್ನಿಮುಡಿಯಲು ಅಥವಾ ಊರಾಡಲು ಹೊರಟಾಗ ಬಟ್ಟೆಯನ್ನು ಮಡಿಹಾಸುತ್ತಾರೆ. ಇವರು ಹಿರಿಚಿನ್ನಮ್ಮ ಎಂಬ ಪ್ರಾಚೀನತೆ ಪಡೆದ ದೇವತೆಯನ್ನು ಪೂಜಿಸುತ್ತಾರೆ. ಅಹೋಬಲ ನರಸಿಮಹನ ವಿವಿಧ ಪ್ರಕಾರದ ಗ್ರಾಮೀಣ ದೇವತೆಗಳನ್ನು ಇವರು ಪೂಜಿಸುವುದು ಹೆಚ್ಚು. ಚಿನ್ನಹಗರಿ, ವೇದಾವತಿ ನದಿಗಳಲ್ಲಿ ತಮ್ಮ ಆಚರಣೆ, ಪದ್ಧತಿಗಳನ್ನು ಮಾಡಿಕೊಳ್ಳುವರು. ಬೇವಿನಮರ, ಹೊಂಗೆಮರ, ಜಮ್ಮಿಮರ, ಆಲದ ಮರಗಳನ್ನು ಪೂಜಿಸುವರು. ಭರ್ಚಿ, ಕಂದ್ಲಿ, ಚಂದ್ರಾಯುಧ, ಕೊಡಲಿ, ಮೊಚ್ಚುಗಳಿದ್ದು ಆಗಾಗ ಬೇಟೆಗೆ ಹೋಗುವುದುಂಟು. ಕುರಿ, ದನ, ಎಮ್ಮೆಗಳನ್ನು ಸಾಕುವುದರೊಂದಿಗೆ ಕೃಷಿಯನ್ನು ಪ್ರಧಾನವಾಗಿ ಮಾಡಿಕೊಂಡು ಬಂದಿದ್ದಾರೆ. ವಾರಕ್ಕೊಮ್ಮೆ ಶನಿವಾರ ಒಂದೊತ್ತು (ಉಪವಾಸ) ಇರುವ ಪೆದ್ದ ಓಬಯ್ಯನವರು ದೇವರ ಹೆಸರಿನಲ್ಲಿ ಶಾಸ್ತ್ರ ಜೋತಿಷ್ಯ, ತಗಡು ಯಂತ್ರ, ಚೂರ್ಣಗಳನ್ನು ಕೊಟ್ಟು ಜನರಿಗೆ ಭಾದಿಸುವ ರೋಗಗಳನ್ನು ನಾಟಿ ಔಷಧಿಕೊಟ್ಟು ಗುಣ ಪಡಿಸುತ್ತಾರೆ. ಮಕ್ಕಳಿಲ್ಲದ ದಂಪತಿಗಳಿಗೆ ಗಿಡಮೂಲಿಕೆ ಕೊಟ್ಟು ಅವರಲ್ಲಿ (ಹಾರ್ಮೋನುಗಳು ಉತ್ಪಾದಿಸುವಂತೆ ಮಾಡಿ) ಮಕ್ಕಳ ಸಂತಾನ ಪಡೆದಾಗ ಅವರು ಕೊಟ್ಟ (ದಾನ) ಕುರಿಗಳೇ ಹಿಂಡಾಗಿವೆ. ಸುತ್ತಮುತ್ತಲಿನ ಪರಿಸರಕ್ಕೆ ಇವರದು ದೊಡ್ಡ ಹೆಸರು. ಕೃಷಿಯಲ್ಲಿ ಬಹುದೊಡ್ಡ ಪರಿಣಿತ ತಜ್ಞನಲ್ಲದೆ, ಲೋಕಾನುಭವಿಯಾಗಿ ಅನೇಕ ವ್ಯಾಜ್ಯಗಳನ್ನು ಇತ್ಯರ್ಥ ಮಾಡಿರುತ್ತಾರೆ. ಜೀವನದಲ್ಲಿ ನಾನಾ ಗಂಡಾಂತರಗಳನ್ನು (ಕಪಿಲೆ ಹೊಡೆಯುವುದು) ಎದುರಿಸಿದ್ದನ್ನು ಸ್ಮರಿಸಿಕೊಳ್ಳುತ್ತಾರೆ. ಇವರು ಬೇಡರ ಇತರರಿಗೆ ವಯಸ್ಸಿನಲ್ಲಿ ದೊಡ್ಡವರಾದ್ದರಿಂದ ಪ್ರತಿಯೊಂದು ವಿಷಯಕ್ಕೂ ನಿರ್ಣಾಯಕ ವ್ಯಕ್ತಿ ಆಗಿದ್ದಾರೆ. ಇವರು ದಿ. ೧೨.೪.೦೨ ರಂದು ತೀರಿಕೊಂಡಾಗ ಇಡೀ ಗ್ರಾಮವೇ ಕಂಬನಿ ಮಿಡಿದು ಮೌನ ಆಚರಿಸಿತು.

೯೫ರ ವಯೋದ್ಧರಾದ ತೋಟದ ಪೆದ್ದ ಓಬಯ್ಯ, ಪೂಜಾರಹಳ್ಳಿ

ಇದೇ ದೇವರ ಪಂಥಕ್ಕೆ ಸೇರಿದ ಪೂಜಾರಿ ಬೋರಯ್ಯ ಪಲ್ಲಯ್ಯ ಎಂಬ ಪಟ್ಟದ ಪೂಜಾರಿ ರುದ್ರಮ್ಮನಹಳ್ಳಿಯವರು. ಈ ಗ್ರಾಮದ ಹಳೆಯ ಹೆಸರುದಿದ್ದಲುಪಲ್ಲಿ. ದಿದ್ದಲಾರು ಎಂಬುದು ಮ್ಯಾಸಬೇಡರ ಒಳಪಂಗಡದಲ್ಲಿರುವ ಬೆಡಗಿನ ಹೆಸರು. ಈತ ಶಾಕೆಲಾರು ಬೆಡಗಿಗೆ ಸೇರಿದವರು. ಇವರದು ನಲುಜೆರುವ ಓಬಳದೇವರು. ಇದನ್ನು ಅಹೋಬಲನರಸಿಂಹನೆಂದು ಪರಿಭಾವಿಸಿಕೊಳ್ಳುವರು. ಗಜ್ಜಿಗಿನವಾಡು (ನಾಯಕ) ಎಂಬುವನು ಕೋರೆಯಲ್ಲಿ ಕಟ್ಟಿಕೊಂಡು ಅಲೆದು ಕೊನೆಗಿಲ್ಲಿ ಬಂದು ನೆಲಸಿದರು. ಇದರೊಂದಿಗೆ ೧೨ ಪೆಟ್ಟಿಗೆ ದೇವರು ನಾಯಕನಹಟ್ಟಿ ಕಟ್ಟೇಮನೆಗೆ ಸೇರಿವೆ. ಕಂಚಿನ ನಗಾರಿ, ಶಂಕ (ಎಡಮುರಿಶಂಖು), ಬಲಮುರಿ ಶಂಖು (ಬಿರುದಾವಳಿ), ನಾಗಮುರಿ ಬೆತ್ತ, ಒಂಟಿಕೋಡು ಬೆಲ್ಲಿ ಹಸು, ಗರುಡಗಂಭ, ಬೆಳ್ಳಿ ಗೊಡಗು, ದೊಣ್ಣೆ, ಛತ್ರಿ – ಚಾಮರ ಅಲಗು ಮೊದಲಾದ ಪರಿಕರಗಳು ಈ ದೇವರಿಗೆ ಸಂಬಂಧಿಸಿವೆ. ಆರಂಭದಲ್ಲಿ ಗುಡಿಸಲಿನಲ್ಲಿದ್ದ ದೇವರಿಗೆ ಈಗ ಆಧುನಿಕ ದೇವಾಲಯವನ್ನು ನಿರ್ಮಿಸಿದ್ದಾರೆ. ಈ ದೇವರಿಗೆ ಗಜ್ಜಿಗನವನು ಯಜಮಾನ. ಕಾಟಪ್ಪನ ಎತ್ತುಗಳು ಇವರಿಗೆ ದೇವರೆತ್ತುಗಳಾಗಿವೆ. ಇದಕ್ಕೆ ಪೂಜಾರಿಗಳೇ ದಾಸಯ್ಯರೆಂದು ಕರೆಸಿಕೊಂಡಿದ್ದಾರೆ. ಹಿರೇಹಳ್ಳಿಯ ಉರಮೆಯವರು, ಅಗಸರು ಇಲ್ಲಿಗೆ ಬರುತ್ತಾರೆ. ಗೌರಸಮುದ್ರದ ಮಾರಮ್ಮನನ್ನು ಮನೆ ದೇವರೂ (ಸ್ತ್ರೀ) ರೂಢಿಸಿಕೊಂಡು ಬಂದಿದ್ದಾರೆ. ಇವರು ದೊಡ್ಡಹಳ್ಳಿ, ಬೂದಿಹಳ್ಳಿ, ಮಂಗಲಬಾವಿಹಳ್ಳಿ (ಗಂಗಿ) ಮೊದಲಾದ ಸ್ಥಳಗಳನ್ನು ಪೂಜಿಸುವರು. ಇವರಲ್ಲಿ ಕಾಸು, ಮಣೆವು, ಜಾತ್ರೆಗಳಲ್ಲಿ ಅನೇಕ ಕೆಲಸಕಾರ್ಯಗಳಿದ್ದು, ಎತ್ತುಗಳು ಹರಿಯುತ್ತವೆ. ಪಶುಪಾಲನೆ ಇವರಲ್ಲಿದ್ದು, ಕೃಷಿಯನ್ನು ಪ್ರಧಾನವಾಗಿ ಉಳಿಸಿಕೊಂಡಿರುವರು. ಬೇಡರಲ್ಲಿರುವ ಇತರ ವಿಶೇಷತೆಗಳಂತೆ ಕೆಲವೊಂದು ಇವರಲ್ಲಿವೆ.

ಓಬಳದೇವರಿಗೆ ಸಂಬಂಧಿಸಿದ ಎಸ್.ತಿಪ್ಪನಾಯಕ ತಂದೆ ಕುಂಟ ಹನುಮಯ್ಯನವರು ಹುಲಿಮರಿತಪ್ಪೆ ಮನೆತನದವರು. ನಿವೃತ್ತ ದಪೇದಾರ್ ಆಗಿರುವ ತಿಪ್ಪನಾಯಕನು (೧೯.೯.೧೯೨೦ ಜನ್ಮದಿನ) ನಾಯಕ ಜನಾಂಗದ ಯರಬಾಮುಡ್ಲರು ಬೆಡಗಿಗೆ ಸೇರಿದ್ದಾರೆ. ಮೊಳಕಾಲ್ಮೂರು ತಾಲೂಕಿನ ಪೆದಾರಗುಡ್ಡವೆಂದು ಖ್ಯಾತವಾಗಿದ್ದ ಹುಚ್ಚಂಗಿ ದುರ್ಗವೇ (ಹಿರಾನ್ ಗುಡ್ಡ= ಹಿರೆಆರ್ಯರು ಕದಂಬ ರಾಜನ ಕಾಲದ ಸ್ಥಳ) ಇವರ ಮೂಲಸ್ಥಳವಾಗಿದೆ ಪೂಜಾರಹಳ್ಳಿ ಗುರುನಾಥ ಓಬಳದೇವರನ್ನು ಮನೆದೇವರಾಗಿ ಹೊಂದಿದ್ದು, ಸಾಧು ಸತ್ಪುರಷನೆಂದು (ಕಾರೆಕೊಳ=ತಾವರೆಕೊಳ), ಲಕ್ಕಿಮುತ್ತಿ ಓಬಳದೇವರೆಂದು ಇದನ್ನು ಕರೆದುಕೊಳ್ಳುತ್ತಾರೆ. ಆನೆಗುಂದಿ ರಾಜಮನೆಯಾದರೆ ಪೂಜಾರಹಳ್ಳಿ ಹಿರೆಮನೆ ಇವರಿಗೆ. ೯ ಜನ ನಾಥರಲ್ಲಿ ಓಬನಹಳ್ಳಿ ಗುರುನಾಥನು ಇವರ ಮೂಲಪುರುಷನಾಗಿರುವನು. ಈ ದೇವರು ನುಂಕುಮಲೆ ಸಿದ್ಧೇಶ್ವರ ಮಠಕ್ಕೆ ಸೇರಿದೆ. ಗೌರಕನಾಥ (ಉಚ್ಚಂಗಿದುರ್ಗ) ರಾಕ್ಷಸರು ನೆಲೆಸಿದ ಸ್ಥಳವೆಂದು ಈ ಪ್ರದೇಶವನ್ನು ಸಾಂಕೇತಿಸುತ್ತಾರೆ. ಇವರಲ್ಲಿ ವೀರಪರಂಪರೆಯಿದ್ದು, ವಿಷ್ಣುವಿನ ಪಂಥಕ್ಕೆ ಸೇರಿದ್ದಾರೆ. ನಾರದನನ್ನು ಇಲ್ಲಿ ಸ್ಮರಿಸಿಕೊಂಡು, ಪಾಮುಡ್ಲಾರು ಎಂದರೆ ಹಾವಿನವರು ಎಂಬುದನ್ನು ಹೇಳುತ್ತಾರೆ. ಓಬಣ್ಣ ಪೂಜಾರಿಯಾಗಿರುವನು. ಆಧುನಿಕ ಶೈಲಿಯ ದೇವಾಲಯ ಇಲ್ಲಿದೆ. ಅರಮನೆ ಗುರುಮನೆಗಳೆರಡು ಆನೆಗುಂದಿ. ದೇವರೆತ್ತುಗಳ ಕಿಲಾರಿ ಸಣ್ಣ ಬೋರಯ್ಯ, ಕೆ.ಬಿ. ಹಟ್ಟಿಯ ಪಾಮುಡ್ಲಾರುಗಳೇ ದಾಸಯ್ಯಗಳು. ದಾಸರೋಬಯ್ಯ ಎಂಬ ಹಿರಿಯ ವ್ಯಕ್ತಿ ಇವರಿಗೆ ಸಂಬಂಧಿಸಿದವನು. ಇಮಡಾಪುರದ ಉರುಮೆಯವರು, ಪೂಜಾರಹಳ್ಳಿ ಅಗಸರು ದೇವರ ಕೆಲಸಗಳನ್ನು ಮಾಡುವರು. ಗಂಗೆಪೂಜೆಗೆ ಹೋದ ದೇವರಿಗೆ ನಿವಾಳಿ ಕೊಯ್ದು ಅಗಸರು – ಉರುಮೆಯವರು ಹಂಚಿಕೊಳ್ಳುತ್ತಾರೆ. ಇಲ್ಲಿಗೆ ಸಮೀಪದ ಕಾರೆಕೊಳ್ಳ ಎಂಬ ಹಳ್ಳಕೆರೆ (ಚಿನ್ನಹಗರಿಯ ಉಪನದಿ) ಗಂಗೆಪೂಜೆಗೆ ಹೋಗುತ್ತದೆ ಈ ದೇವರು. ಹಂಪೆ ವಿರೂಪಾಕ್ಷಸ್ವಾಮಿ, ತುಂಗಭದ್ರ ನದಿಯ ಕೋಟಿಲಿಂಗ ಮುಂತಾದವು ಪೂಜಾರ್ಹ ಸ್ಥಳಗಳಾಗಿವೆ. ಪೂಜಾರಹಳ್ಳಿಯಲ್ಲಿರುವ ವೀರಗಲ್ಲನ್ನು ಇವರು ತಮ್ಮ ಪೂಜಾರಹಳ್ಳಿ ವೀರಗಲ್ಲು ಮೂಲಪುರುಷನೆಂದು ಹೇಳಿಕೊಳ್ಳುತ್ತಾರೆ. ಇವರು ರಾಜವಂಶೀರಾದ್ದರಿಂದಲೋ ಏನೋ ಹಿಂದೆ ರಾಜಕಾರ್ಯಗಳಲ್ಲಿ ಮಗ್ನನಾಗಿದ್ದರಿಂದ ವಿವಾಹ ಸಮಯದಲ್ಲಿಯೂ ಬಿಡುವುರುತ್ತಿರಲಿಲ್ಲವೇನೋ? ಹೀಗಾಗಿ ಸಾಂಕೇತಿಕವಾಗಿ ಅವನ ಕತ್ತಿಗೆ ಧಾರೆಯೆರೆಯುತ್ತಾರೆ. ಈ ಪಾಮುಡ್ಲಾರು ಪಂಗಡದವರೆಲ್ಲರೂ ತಾವು ಮದುವೆಹೆಣ್ಣಿನ ಮನೆಗೆ ಹೋಗದೆ ಕತ್ತಿಯನ್ನು ಅಲಂಕೃತಗೊಳಿಸಿ ಅದಕ್ಕೆ ಮದುಮತಿ ಜೊತೆಯಲ್ಲಿಟ್ಟು, ಮುತ್ತೈದೆಯರ ಮೂಲಕ ತಾಳಿ ಕಟ್ಟಿಸುತ್ತಾರೆ. ಸೋದರಮಾವನು ಈ ಸಂದರ್ಭದಲ್ಲಿ ಹಾಜರಿರುತ್ತಾನೆ. ಬಹುಶಃ ಮದುವೆಗೆ ಹೊರಟ ವೀರನೊಬ್ಬ ಯಾವುದೋ ಕಾರಣಕ್ಕಾಗಿ ಮಡಿದಿರಬಹುದು. (ಯುದ್ಧದಲ್ಲಿ ಹೋರಾಡಿ?) ಈ ಕಾರಣವಾಗಿ ಈ ವಂಶೀಯರು ಅಂದಿನಿಂದ ಹೆಣ್ಣಿನ ಮನೆಗೆ ಹೋಗದೆ ಕತ್ತಿಗೆ ಧಾರೆ ಎರೆಯುತ್ತಾರೆ. ಆ ಮೂಲಕ ಕ್ಷತ್ರಿಯ ಧರ್ಮಕ್ಕೆ ಇಂಥ ಆಚರಣೆಗಳು ಬಹು ಹತ್ತಿರವಾದಂಥವು. ಕಾಸು, ಮಣೆವು, ತೀರ್ಥಯಾತ್ರೆಗಳು ಇವರಲ್ಲಿ ರೂಢಿಯಲ್ಲಿವೆ. ಇತ್ತೀಚೆಗೆ ಇವರಲ್ಲಿ ಸಂಘರ್ಷಗಳು ಏರ್ಪಡುವುದುಂಟು. ಮೇಲೆ ಹೇಳಿದಂತೆ ಮದುಮಗನೇ ಮದುವೆಗೆ ಹೋಗದಿರುವಾಗ ಆ ವ್ಯಕ್ತಿ ಹೇಗಿರುವನೋ ಕುಂಟನೋ, ಕುರುಡನೋ, ನಮ್ಮ ಹೆಣ್ಣನ್ನು ಕೊಡುವುದಿಲ್ಲವೆಂದು ಸಂಪ್ರದಾಯವನ್ನೇ ವಿರೋಧಿಸಿದ ಸಂದರ್ಭಗಳಿವೆ. ಇದು ಔಚಿತ್ಯವೂ ಕೂಡ ಆಗಿದೆ.

ಯರಮಂಚಿನಾಯಕ ಸಂಸ್ಥಾನ ಗುರುನಾಥ ಓಬಳದೇವರು, ಪೂಜಾರಹಳ್ಳಿ

ದಾವಣಗೆರೆ ಜಿಲ್ಲೆ, ಜಗಳೂರು ತಾಲೂಕಿನ ದೊಡ್ಡಬೊಮ್ಮನಹಳ್ಳಿಯ ನಾಯಕರ ತಿಪ್ಪೇಸ್ವಾಮಿ ಮಳೆಲಾರು ಪಂಗಡಕ್ಕೆ ಸೇರಿದವನು. ಇವರ ಮನೆದೇವರು ಮಾಕನಡಕು ಓಬಳದೇವರು. ಇದಕ್ಕೆ ಗೆದ್ದಲುಗಟ್ಟೆ ಓಬಳದೇವರೆಂದು ಕರೆಯುವರು. ಪೂಜಾರಿ ರಾಮಸ್ವಾಮಿ ಎಂಬುವರು ಈ ದೇವರಿಗೆ ಪೂಜಾರಿ. ಎಲ್ಲದಕ್ಕೂ ಮಾಕನಡಕು ಇವರಿಗೆ ಪವಿತ್ರಸ್ಥಳ. ಹೀಗೆ ಅನೇಕ ರೂಢಿಸಂಪ್ರದಾಯಗಳು ಚಾಲ್ತಿಯಲ್ಲಿವೆ.

ಇದೇ ಗ್ರಾಮದ ಬಿ.ಟಿ.ತಿಪ್ಪೇಸ್ವಾಮಿ ತಂದೆ ಜಂಪಯ್ಯನವರು ನಾಯಕ ಜನಾಂಗದ ಮಳೆಲಾರು ಬೆಡಗಿನ ಗುಂಡಜ್ಜೆರು ಮನೆತನಕ್ಕೆ ಸೇರಿದ್ದಾರೆ. ಈ ದೊಡ್ಡಬೊಮ್ಮನಹಳ್ಳಿ ಐತಿಹಾಸಿಕ ಸ್ಥಳ. ಚಿತ್ರದುರ್ಗ ಅರಸರ ಕಾಲದಲ್ಲಿ ಇದುಗಡಿ ಗ್ರಾಮದಂತಿತ್ತು. ಹರಪನಹಳ್ಳಿ ಪಾಳೆಯಗಾರರು ಉತ್ತರ ಭಾಗದಲ್ಲಿ ಆಳ್ವಿಕೆ ನಡೆಸುತ್ತಿದ್ದರು. ಕಣಕುಪ್ಪೆ ಕಾಟಪ್ಪನಾಯಕನ ಕೆಳಗಿ ಇದ್ದ ಹನುಮನಾಗತಿಹಳ್ಳಿ, ಬಂಗಾರಿಗುಡ್ಡ ಮೊದಲಾದ ಸ್ಥಳಗಳನ್ನು ದೊಡ್ಡಬೊಮ್ಮಣ್ಣ, ಯಲ್ಲಮಲ್ಲಣ್ಣ, ಜರಮನಾಯಕ ಇತರರು ಬಿಚ್ಚುಗತ್ತಿ ಭರಮಣ್ಣನಾಯಕನ ಕಾಲದಲ್ಲಿ ಅಧೀನ ಅರಸರು ಅಥವಾ ಅಧಿಕಾರಿಗಳಾಗಿದ್ದರು. ಅಣಜಿ ಕಾಳಗದಲ್ಲಿ ಹರಪನಹಳ್ಳಿಯವರು ಬಂದಾಗ ಯುದ್ಧ ನಡೆದು ಇವರ ಯುದ್ಧ ಮಾಡಿ ಜಯತಂದು ಕೊಟ್ಟಿದ್ದರು. ಈ ಸ್ಮರಣಾರ್ಥ ಕೋಟೆಕೊತ್ತಲಗಳನ್ನು ಕಟ್ಟಿಸಿ ಜೀರ್ಣೋದ್ಧಾರ ಮಾಡಿಸಿದ್ದರಂತೆ. ಈ ಗ್ರಾಮದಲ್ಲಿ ಓಬಳದೇವರಿಗೆ ನಡೆದುಕೊಳ್ಳುವವರ ಸಂಖ್ಯೆ ಜಾಸ್ತಿ. ಮಾಕನಡಕು ಓಬಳದೇವರು ಇವರಿಗೆ ಆರಾಧ್ಯ ದೇವತೆ. ಪೂಜಾರಿ ರಾಮಸ್ವಾಮಿ ಅವರು ಹಿರಿಯರ ಆದೇಶದಂತೆ ಶಿಕ್ಷಕರಾಗಿದ್ದರೂ ಪೂಜಾರಿ ಕೆಲಸ ಮಾಡುತ್ತಾರೆ. ದೇವರೆತ್ತುಗಳಿದ್ದು, ಜರಿಮಲೆಯನ್ನು ಗುರಮನೆ – ಅರಮನೆಯಾಗಿ ಹೊಂದಿರುವರು. ಪಕ್ಕದ ಕುರಿಹಟ್ಟಿಯವರು ಉರುಮೆ ಬಡಿಯುತ್ತಾರೆ (ದಿವಂಗತ ಉರಮೆ ಓಬಯ್ಯ). ಭರತ ಹುಣ್ಣಿಮೆಯ ಗುಗ್ಗರಿಹಬ್ಬ ಮಾಡುತ್ತಾರೆ. ವೈಷ್ಣವ ಸಂಪ್ರದಾಯಗಳನ್ನು ರೂಢಿಸಿಕೊಂಡಿರುವ ಇವರು ಮನೆದೇವತೆಯಾಗಿ ಚೌಡಮ್ಮ, ಕುರಿಹಟ್ಟಿ ಮಾರಮ್ಮನನ್ನು ಪೂಜಿಸುವರು. ಯುಗಾದಿ ಬೇಟೆ, ಪಶುಪಾಲನೆ, ಕೃಷಿ ಪದ್ಧತಿಗಳು ಇವರಲ್ಲಿವೆ.

ಕೂಡ್ಲಿಗಿ ತಾಲೂಕಿನ ಹುಲಿಕೆರೆ ಗ್ರಾಮದ ವಕೀಲರಾದ ಟಿ. ಓಂಕಾರಪ್ಪ ತಂದೆ ಟಿ. ಸಿದ್ದಪ್ಪ ಅವರು ತಮ್ಮಯ್ಯನಗುಡ್ಡದ ಮನೆಯವರು. ಮ್ಯಾಸನಾಯಕರ ಮಂದ್ಲಾರು ಬೆಡಗಿಗೆ ಸೇರಿದ್ದಾರೆ. ಮನೆದೇವರಾಗಿ ತಮ್ಮ ಪೂರ್ವ ಸ್ಥಳದಲ್ಲಿದ್ದ ತಮ್ಮಯ್ಯನ ಗುಡ್ಡದ ಓಬಳದೇವರನ್ನು ಪೂಜಿಸುವರು. ಮೇಲಿನವರಂತೆ ಇವರಲ್ಲಿ ಅನೇಕ ಆಚರಣೆಗಳಿವೆ.

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಶೆಟ್ಟಿಗೊಂಡನಹಳ್ಳಿ ಗ್ರಾಮದ ನೀಲಪ್ಪ ತಂದೆ ಮಲ್ಲಪ್ಪ ಎಂಬುವರು ಉಲ್ಲಮನೇರು ಕುಟುಂಬಕ್ಕೆ ಸೇರಿದ್ದು, ವ್ಯವಸಾಯದಿಂದ ಜೀವಿಸುತ್ತಿರುವರು. ಮ್ಯಾಸನಾಯಕರ ‘ಮಳೇಲಾರು’ ಎಂಬುದು ಇವರ ಬೆಡಗು. ಮುದ್ಲಾಪುರದ ಓಬಳದೇವರನ್ನು ಮನೆದೇವರಾಗಿ ಹೊಂದಿರುವರು. ಪೆಟ್ಟಿಗೆ ದೇವರಾದ ಓಬಳದೇವರನ್ನು ಕಾಂಶಿ ಗುಡಿಯಲ್ಲಿಟ್ಟಿದ್ದಾರೆ. ಪೂರ್ವಕಾಲದಿಂದಲೂ ಮುದ್ಲಾಪುರ ಕಟ್ಟೆಮನೆ ಗುಡಿಕಟ್ಟಿಗಳಿಗಿಂತ ತನ್ನದೇ ಆದ ಧಾರ್ಮಿಕ ನೆಲೆಯನ್ನು ಹೊಂದಿದೆ. ಚೌಡಮ್ಮ, ಗೌರಮ್ಮ, ಮಾರಮ್ಮ ಇತರ ದೇವತೆಗಳನ್ನು ಪೂಜಿಸುವರು. ಬೇಟೆಯಲ್ಲಿ ಹಂದಿ, ಮೊಲಗಳನ್ನು ಕೊಲ್ಲುತ್ತಾರೆ. ಇತ್ತೀಚೆಗೆ ಇವರು ರಾಜಕೀಯ ಕ್ಷೇತ್ರಕ್ಕೆ ಪದಾರ್ಪಣೆ ಮಾಡುತ್ತಿರುವರು.

ಮಳೆಲಾರು ಬೆಡಗಿನವರೇ ಹೆಚ್ಚಾಗಿ ಪೂಜಿಸುವ ಓಬಳದೇವರಿಗೆ ಮಂದಲಾರು ಸಹ ಪೂಜಿಸುವುದುಂಟು. ಶೈವ ದೇವತೆಗಳಿಗೆ ಬಿಲ್ಲು, ಬಾಣ ಇತರ ಪರಿಕರಗಳನ್ನು ಪೂಜಿಸುವುದು ಸಾಂಕೇತಿಕವಾಗಿ ಎಂಬುದು ನಿಜ. ವೈಷ್ಣವ ದೇವತೆಗಳಿಗೆ ಪೆಟ್ಟಿಗೆ ದೇವರನ್ನು ಪೂಜಿಸುತ್ತಿದ್ದು ಅದರಲ್ಲಿ ನಂದಿ ವಿಗ್ರಹ, ಸಾಲಿಗ್ರಾಮಗಳಿರುತ್ತವೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ದೇವರಗಂಜಿಗಟ್ಟೆಯ ಗೋಪನಾಳ ಓಬಳಪ್ಪ ತಂದೆ ಕರಿಯಪ್ಪ ನಾಯಕ ಜನಾಂಗದ ಮಳೆಲಾರು ಬೆಡಗಿಗೆ ಸೇರಿದವರು. ಅಹೋಬಲ ನರಸಿಂಹನನ್ನು ಆರಾಧಿಸುವರು. ಮನೆದೇವರಾಗಿ ಓಬಳದೇವರನ್ನು ಪೂಜಿಸಿದವರು. ಅಮವಾಸೆ ದೇವರಾಗಿ ಚಿತ್ರದೇವರಿಗೆ ನಡೆದುಕೊಳ್ಳುವರು. ಮೊದಲನೆಯದಕ್ಕೆ ಬೇಟೆ ಕಡಿಯುವುದಿಲ್ಲ. ಎರಡನೆಯದಕ್ಕೆ ಕಡಿಯುವರು. ಈ ದೇವರನ್ನು ಹೊಳೆಯಲ್ಲಿ ಸಿಕ್ಕಿದೆ ಎನ್ನುವರು. ಗಂಜಿಗಟ್ಟೆ ಹೊಂಡದ ಮುಂಭಾಗದಲ್ಲಿರುವ ದೇವಾಲಯವೇ ಓಬಳದೇವರು. ಇದು ಪ್ರಾಚೀನಕಾಲದ ಕಟ್ಟಡವಾಗಿದೆ. ಭೈರವಶಿಲ್ಪ, ವೀರಗಲ್ಲುಗಳು ಇಲ್ಲಿವೆ. ಪಾಮುಡ್ಲಾರು ಓಬಣ್ಣನೆಂಬುವನು ಇದಕ್ಕೆ ಪೂಜಾರಿ. ಅರಮನೆ – ಗುರುಮನೆ ಕೊಡಿಹಳ್ಳಿಯಾಗಿದೆ. ದಾಸಯ್ಯ, ಉರುಮೆಯವರು, ಅಗಸರು ಇರುತ್ತಾರೆ. ವಾಸೆಕೊಯ್ಯುವ ಪದ್ಧತಿ ಇದ್ದು, ಕರಿಯಮ್ಮ ಎಂಬ ಸ್ತ್ರೀ ದೇವತೆಗೆ ನಡೆದುಕೊಳ್ಳುತ್ತಾರೆ. ಗಾದ್ರಿಹಳ್ಳ ಗಾದ್ರಿಗುಡ್ಡಗಳನ್ನು ಆರಾಧಿಸುವರು. ಬೇಟೆ, ಪಶುಪಾಲನೆ, ಕೃಷಿ ವೃತ್ತಿಗಳು ಇವರಲ್ಲಿ ಪ್ರಧಾನವಾಗಿವೆ.

ಕೂಡ್ಲಿಗಿ ತಾಲೂಕಿನ ಪೂಜಾರಹಳ್ಳಿ ಓಬಳದೇವರು ಈ ಭಾಗಕ್ಕೆ ತುಂಬಾ ಪ್ರಸಿದ್ಧವಾದದು. ಇದಕ್ಕೆ ಸುತ್ತೆಲ್ಲ ಜನರು ನಡೆದುಕೊಳ್ಳುವರು. ಇದರ ಪೂಜಾರಿ ಓಬಣ್ಣ ತಂದೆ ಗುರವಯ್ಯನವರು ತಲೆಮಾರಿನಿಂದ ಪೂಜಾರಿಗೆ ಮಾಡಿಕೊಂಡು ಬಂದಿದ್ದಾರೆ. ಇವರು ಪಾಮುಡ್ಲಾರು ಬೆಡಗಿಗೆ ಸೇರಿದ್ದಾರೆ. ಎನುಮುಲಾರು, ಗುಂಡತೇಲಾರು ಇವರಿಗೆ ಅಣ್ಣ – ತಮ್ಮಂದಿರಾಗಬೇಕು. ಗಾದರಿಪಾಲನಾಯಕನನ್ನು ಜನಾಂಗದ ಮಹಾಪುರುಷನೆಂದು ತಿಳಿದಿರುವರು. ಮನೆದೇವರಾಗಿ ಶ್ರೀ ಓಬಳೇಶ್ವರಸ್ವಾಮಿ ಜಗದ್ಗುರು ಪಾಮುಡ್ಲು ಗುರುನಾಥನನ್ನು ಪವಾಡ ಪುರುಷನೆಂದು ಪೂಜಿಸುವರು. ಎಲ್ಲದಕ್ಕೂ ಪೂಜಾರಹಳ್ಳಿ ಕೇಂದ್ರಸ್ಥಳ. ಈತನನ್ನು ಕೋರಿ, ಕೋಲು ಹಿಡಿದು ೭ + ೭ = ೧೪ ದಿನ ಹಾಕಿ ಬಂಡೆಯಲ್ಲಿ ೭ ಮಣ ಸುಣ್ಣ ಹಗೆಯಲ್ಲಿ ಹಾಕಿ ಆತ ಹೋಗಿದ್ದ. ೧೪ ದಿವಸ ಉರುಮೆ ಮತ್ತು ಗುಂಡುಟ್ಲಾರು ಕಾಯುತ್ತಿದ್ದರು. ೧೪ ದಿವಸ ನಂತರ ನಾಗರಹಾವು ಶಿರಕ್ಕೆ ಧರಿಸಿ ಪೆಂಜರೆ ಹೊಟ್ಟಿಗೆ ಸುತ್ತಿಕೊಂಡು, ಕಮಂಡಲ, ಕಾ (ಹಾ) ವುಗಳನ್ನು, ಚೇಳು ಮೊಂಡರೆಗಬ್ಬೆಗಳಿಂದ ಅಲಂಕೃತನಾಗಿದ್ದ. ಎರಡು ನಾಗರಹಾವುಗಳನ್ನಿಡಿದು ಗ್ರಾಮಸ್ಥರಿಗೆ ಹಾಲು ಕುಡಿರಿ ಎಂದಾಗ ಕುಡಿಯಲಿಲ್ಲ. ತಮ್ಮ ಮೂಲ ನೆಲೆ ಚೌಳಕೆರೆ ಹತ್ತಿರ ಕೋಟಿಲಿಂಗವನ್ನು ಆಗಾಗ ಪೂಜಿಸುವರು. ವೀರನ ಹೆಸರಿನಲ್ಲಿ ಹಳೆ ಪೂಜಾರಹಳ್ಳಿ ಕಾರಕೆನ್ನಿಹಳ್ಳಿಗಳಲ್ಲಿ ಕುರುಹುಗಳಿವೆ. ಪೂಜಾರಹಳ್ಳಿಯಲ್ಲಿ ಈತ ಸಮಾಧಿಯಾದನೆಂದು ದೇವಾಲಯ ನಿರ್ಮಿಸಲಾಗಿದೆ. ದೇವಾಲಯವು ಕಲ್ಲಿನಬಂಡೆ, ಕಲ್ಲುಗಳಿಂದ ಆಧುನಿಕವಾಗಿ ನಿರ್ಮಿಸಿದ್ದು, ವಿಷ್ಣುವಿನ ಸಾಲಿಗ್ರಾಮಗಳಿವೆ. ಪೂಜಾರಹಳ್ಳಿಯ ವೀರಗಲ್ಲಿಗೆ ಪೂಜೆ ಮಾಡಿದ ನಂತರ ಈ ದೇವರಿಗೆ ಪೂಜಿಸುವರು. ಈ ಹಿಂದೆ ತಿಳಿಸಿದಂತೆ ಪಾಮುಡ್ಲಾರು ವೀರನೊಬ್ಬ ಹೋರಾಡಿ ಮಡಿದ ಸ್ಮಾರಕ ಅದಾಗಿದೆ. ಅಣ್ಣತಮ್ಮಂದಿರು ೭ ದಿನ ಅಜ್ಜನವರು ಎತ್ತಿನಬೊಮ್ಮಯ್ಯ, ಜಮ್ಮೋಬನಹಳ್ಳಿ ಓಬಣ್ಣ, ಧರ್ಮಾಪುರಂ ಓಬಣ್ಣ, ನಾಕಿಡ್ಲಾರು ಮತ್ತು ಗೌಡ್ರ ಲಕ್ಕಯ್ಯ ಇದರ ಯಜಮಾನರು. ಅರಮನೆ ಗುರುಮನೆ ಆನೆಗುಂದಿ. ದೇವರೆತ್ತುಗಳಿದ್ದು, ವರ್ಷಕ್ಕೆರಡು ಬಾರಿ ದೇವರ ಮುಂದೆ ಹೊಡಿಸುವರು. ಗದ್ದಿಗೆ ಹಾಕಿ, ಕಾಳು ಕಡಿ, ಎಡೆಯಿಟ್ಟು, ಮುಸರೆ ಹಾಕಿ ಪೂಜೆ ಮಾಡುತ್ತಾರೆ. ಅರಿಷಿಣ ನೀರು ಚೆಲ್ಲುತ್ತಾರೆ. ಕಿಲಾರಿ ಹಿಂದೆ ಹಿಂದೆ ಚೆಲ್ಲಿದಾಗ ದೂಪ ದೀಪಗಳನ್ನು ಹಂಚಿ, ಮುದ್ರೆ, ಕೋಲು, ಕೊಡ್ಲಿ, ಕಂಬಳಿಗಳನ್ನಿಡಿದ ಕಿಲಾರಿಗೆ ಕಾಸು ಮೀಸಲನ್ನು ಭಕ್ತಾಧಿಗಳು ಸಲ್ಲಿಸುತ್ತಾರೆ. ಎತ್ತಿನಬೊಮ್ಮಯ್ಯ ಮನೆತನದವರು ಕಿಲಾರಿಯನ್ನು ನೇಮಿಸುತ್ತಾರೆ. ಈಗ ಕೆ.ಬಿ. ಹಟ್ಟಿ ಸಣ್ಣ ಬೋರಯ್ಯನ ಮಕ್ಕಳು ದೇವರೆತ್ತುಗಳನ್ನು ಮೇಯಿಸುತ್ತಾರೆ. ಕುಕ್ಕಲಾರು ಮನೆತನದವರನ್ನು ದಾಸಯ್ಯನಾಗಿ ನೇಮಿಸುವರು. ಕೋಗುಂಡಿ ಮನೆತನದವರನ್ನು ದಾಸಯ್ಯನೆಂದು ಮೈಗೆ ಮುದ್ರೆಹಾಕುತ್ತಾರೆ. ಇಮಡಾಪುರದ ಬೊಮ್ಮಯ್ಯ ಉರುಮೆ ಬಡಿಯುತ್ತಾನೆ. ಆಯಗಾರರಿಗೂ, ಉರುಮೆಯವರಿಗೂ ಇದೇ ಮನೆದೇವರು. ಅಗಸರು ನಡುಮಡಿ ಹಾಸುವುದು ಪಂಜು ಹಿಡಿಯುವ ಕೆಲಸಗಳನ್ನು ಮಾಡುತ್ತಾರೆ. ಗಂಗೆ ಪೂಜೆಗೆ ಹೋದಾಗ ಚೌಳಕೆರೆಗೆ ಹೋಗಿ ದೇವರಿಗೆ ಊರು ಮಾರಮ್ಮನನ್ನು ಮಾಡುತ್ತಾರೆ. ಸ್ತ್ರೀ ದೇವತೆಯಾಗಿ ೭ ಜನ ಅಕ್ಕಮ್ಮನವರು ಬೊಮ್ಮಯ್ಯನನ್ನು ಜುಟ್ಟು ಜನಿವಾರ ಹಿಡಿದು, ಕುಲ ಕೆಡಿಸಲು ಹೋಗುತ್ತಾರೆ. ಗುರುನಾಥಸ್ವಾಮಿ ಹಿರೆಕೆಡಜರಿಗೆ (ಕಡಿಜಿರಣಗೆ) ಮಾಡಿ ಬಿಡುತ್ತಾರೆ. ಬಾಳೆಎಲೆ ಹಾಕಿ, ಬನ್ನಿ ಎಲೆ ಹಾಕಿ, ಸಜ್ಜೆ, ಅಂಬಲಿಮಾಡಿ, ಮೊಣಕೈಯಿಂದ ಕುಟ್ಟಿ, ಅಚ್ಚು ಇಲ್ಲದ ಬಂಡೆ ಹೊಡೆದು ಬಂದರೆ ನಾನು ಬಂದರೆ ಮುದ್ದಿನ ಬೊಮ್ಮಯ್ಯ ಪಂಚಾಂಗಮು ಬೊಮ್ಮಯ್ಯ ೭ ಜನ ಅಕ್ಕಮಂದಿರು ಹುಟ್ಟುತ್ತಾರೆ. ಇವರದು ವೈಷ್ಣವ ಪಂಥ. ಸಾಲಿಗ್ರಾಮ, ಬಲಿಮುರಿ ಶಂಖು, ನಾಗಮುರಿಬೆತ್ತ, ಜಾಗಟೆ, ಬೊನಾಸಿ, ಗಂಟೆ, ಧೂಪಾರ್ತಿ ಇತ್ಯಾದಿ ವಸ್ತುಗಳಿರುತ್ತವೆ. ಹಂಪೆ ಪುಣ್ಯ ಸ್ಥಳದ ತಿರುಗಿನ ಮಡುವಿನಲ್ಲಿ (ಚಕ್ರತೀರ್ಥ) ಸ್ನಾನ ಮಾಡುವುದು. ಚೌಳಕೆರೆ ಹತ್ತಿರ ಹಾಲು ಹರಿಸಲು ಹೋಗುತ್ತದೆ. ಅಲ್ಲಿಂದ ಕಾರೆ ಕೆನ್ನಿ ಹಳ್ಳಕ್ಕೆ ಹೋಗಿ ಮಣೆವು, ಪೂಜೆ, ದೇವರೆತ್ತುಗಳನ್ನು ಬಡಿಸಿ ಊರಿಗೆ ಬರುತ್ತಾರೆ. ಈ ದೇವರಾಗುವ ದಿನಗಳು ಶನಿವಾರ ಮತ್ತು ಭಾನುವಾರ. ಹಂಪೆ ಇವರಿಗೆ ತೀರ್ಥಕ್ಷೇತ್ರ. ಬೇಟೆ, ಪಶುಪಾಲನೆ ಮತ್ತು ಕೃಷಿ ವೃತ್ತಿಗಳು ಇವರಲ್ಲಿವೆ. ಇತರರೊಡನೆ ಉತ್ತಮ ಭಾಂದವ್ಯವನ್ನು ಇವರು ಹೊಂದಿದ್ದಾರೆ.

ಓಬಳ ದೇವರು ಮತ್ತು ಬಸವಣ್ಣನ ದೇವರುಗಳು ಜೊತೆ ಜೊತೆಗಿರುವುದು ಕೆ.ಬಿ. ಹಟ್ಟಿಯಲ್ಲಿ ಕಂಡುಬರುವುದು ವಿಶೇಷ. ಬಸವಣ್ಣ ದೇವರ ಪೂಜಾರಿ ಗಿಡ್ಡಬಸಣ್ಣ ತಂದೆ ಸೂರಯ್ಯ ಕೃಷಿ ಕುಟುಂಬದವರು. ಇವರ ಮನೆದೇವರು ಬಸವಣ್ಣ. ಇಡೀ ಜಗತ್ತಿಗೆ ದೇವರು ಈ ಬಸವಣ್ಣ ಎನ್ನುತ್ತಾರೆ ಪೂಜಾರಿ. ಎಲ್ಲ ಧರ್ಮ, ಜಾತಿ ಸಮುದಾಯಗಳವರು ಈ ದೇವರಿಗೆ ನಡೆದುಕೊಳ್ಳುತ್ತಾರೆ. ಮಂದಲಗೋತ್ರದ ಕಾಮಗೇತಿಯವರು ಇದರ ಆರಾಧಕರು. ಇಂದು ವೀರಶೈವ ಲಿಂಗಾಯತರು, ರೆಡ್ಡಿಗರು, ಮೊದಲಾದವರು ಹೆಚ್ಚಾಗಿ ನಡೆದುಕೊಂಡರು ಮುಂದಾಳತ್ವ, ಯಜಮಾನಿಕೆ ಪೂಜಾರಿಗಳದೆ. ಇದು ಸ್ವಾತಂತ್ರ್ಯ ದೇವರಾದ್ದರಿಂದ ಗುಡಿಕಟ್ಟೆ ಕಟ್ಟೆಮೆಗಳಿಲ್ಲ. ಈ ದೇವರ ಕಥೆ ಹೀಗಿದೆ: ಚಿತ್ತಕ್ಕನಿಗೆ ದನ ಕಾಯುವಾಗ ಒಡಿಗೆ (ಸೀರೆ ಸೆರಗು) ಬಂದು ಸೇರಿಕೊಂಡಿತಂತೆ. ತಂದೆ ಇದ್ದು, ತಾಯಿಯಿಲ್ಲದ ಚಿತ್ತಕ್ಕನಿಗೆ ಲಿಂಗ ಬಂದಂಗೆಲ್ಲ ಹಿಂದಕ್ಕೆ ಒಸೆದರೂ ಮತ್ತೆ ಬಂದು ಒಡಲು ಸೇರುತ್ತಿತ್ತು. ಮಾಡ್ಲನಾಯಕನಹಳ್ಳಿ, ಬೆಣಣೆಹಳ್ಳಿ ಬಸವಣ್ಣ, ೧೦೧ ಬಿಲ್ಲೆಪುತ್ರಮರದ ಹತ್ತಿರ ಗುಡಿ ಇದೆ (ಜರಿಮಲೆ). ದೇವರು ಅಲ್ಲಿಮದ ಹುಟ್ಟಿ ಉದ್ಭವಗೊಂಡು ಇಲ್ಲಿಗೆ ಬಂದಿದೆ. ಮತ್ತೊಂದು ಮೂಲಕ ಪ್ರಕಾರ ಕಲ್ಯಾಣದಿಂದ ಉಳುವಿಗೆ ಬಂದು ಅಲ್ಲಿಂದ ಕೊಟ್ಟೂರು, ೭ ಮಂಡಾಳ ರಾಯಪುರ ನಂತರ ಶನ್ಯೇಶಿಗುಡ್ಡದ (ಗುಡೆಕೋಟೆ) ಹತ್ತಿರ ಬಂದು ಪವಾಡ ತೋರಿ ಸಿದ್ದಯ್ಯನಕೋಟೆಗೆ ಬಂದು ಅಲ್ಲಿಂದ ಪೂಜಾರಹಳ್ಳಿಗೆ ಬಂದಿತಂತೆ. ದೇವಾಲಯಗಳು ೭ ಮಂಡಲ ರಾಯಾಪುರ, ಚನ್ನೇಶಪ್ಪನ ಮಠ, ಸಿದ್ಧಯ್ಯನ ಕೋಟೆ, ಪೂಜಾರಹಳ್ಳಿಗಳಲ್ಲಿವೆ. ಇವರು ಕೊಟ್ಟಿಗೆ ಮನೆಗಳಲ್ಲಿ ವಾಸಿಸಿದರೆ ಒಳ್ಳೆಯದೆಂದು, ಮಾಂಸಹಾರವನ್ನು ಸೇವಿಸುವುದಿಲ್ಲ. ಹೆಣ್ಣುಮಗಳಿಗೆ ಒಲಿದ ದೇವರು ಇದಾಗಿದ್ದು, ಆಕೆಯ ಸಂತತಿ ಬೆಳೆದು ಬಂದಿದೆ. ಚಿತ್ತಕ್ಕನಿಗೆ ಮದುವೆಯಾಗಿರಲಿಲ್ಲವಾದ್ದರಿಂದ ಆಕೆಯ ಸಹೋದರ ಸಂತತಿ ಇಂದಿದೆ ಎನ್ನುವುದು ನಿಜ. ಶುಭಕಾರ್ಯಗಳನ್ನು ಮಾಡುವಾಗ ಗುಡೆಕೋಟೆಯ ಹಿರೇಮಠದ ಸ್ವಾಮಿಗಳನ್ನು ಇವರು ಆಹ್ವಾನಿಸುವರು. ಕುರಿಹಟ್ಟಿ ಉರುಮೆಯವರು ಬರುತ್ತಾರೆ. ಮಡಿವಾಳರು ಮಡಿಹಾಸುವರು. ಕೊಡದಗುಡ್ಡದ ಮಾರಮ್ಮ, ಮಲಿಯಮ್ಮ ದೇವತೆಗಳನ್ನು ಪೂಜಿಸುವರು. ಪರಿವಾರ ದೇವತೆ ಇವರಿಗಿಲ್ಲ. ಕುಮತಿ ಹತ್ತಿರ ಮಧ್ಯಮರದ ಗಂಗಮ್ಮನಿಗೆ ಮಾಳೆಹಳ್ಳಿ ಹತ್ತಿರ ಚಿನ್ನಹಗರಿ ನದಿಗೆ ದೇವರನ್ನು ಗಂಗೆಸ್ನಾನಕ್ಕೆ ಒಯ್ಯುತ್ತಾರೆ. ೫೦ ವರ್ಷಕ್ಕೊಮ್ಮೆ ಹಂಪೆಗೆ ಹೋಗಿಬರುತ್ತಾರೆ. ಶೈವಪಂಥಕ್ಕೆ ಸೇರಿದ ಇವರು ಕಟ್ಟುನಿಟ್ಟಿನ ಜೀವನ ನಡೆಸುವರು. ಪೂಜಾರಹಳ್ಳಿ ಅರಣ್ಯದಲ್ಲಿ ಬಸವಣ್ಣನ ಕೆರೆ ಇದೆ ಎನ್ನುತ್ತಾರೆ. ಸನ್ಯಾಸಪ್ಪನ ಮಠಕ್ಕೆ ಹೋಗಿ ಬಂದ ಮೇಲೆ ಹಬ್ಬಜಾತ್ರೆಗಳಾಗಿವೆ. ದೀಪಾವಳಿ, ಗುಗ್ಗರಿಹಬ್ಬಗಳಾಗುತ್ತವೆ. ಊರಬಾಗಿಲು ಹತ್ತಿರ ಅಥವಾ ಹಳ್ಳದಲ್ಲಿ ನಿವಾಳಿ ಕಡಿಯುತ್ತಾರೆ. ಈ ದೃಶ್ಯ ದೇವರಿಗೆ ಕಾಣುವುದಿಲ್ಲ. ಇರುವ ರಕ್ತ ಕಾಣಿಸಿದಂತೆ ನೀರು ಹಾಕುವರು. ಈ ದೇವರ ಕಾಲಿಗೆ ಬಿದ್ದು ಅನೇಕ ರೀತಿಯ ಇಷ್ಟಾಸಿದ್ಧಿಗಳನ್ನು ಭಕ್ತಾಧಿಗಳು ಪಡೆದುಕೊಳ್ಳುವರು. ಮಳೆ, ಫಲಸಂತಾನ, ದರಿದ್ರ್ಯ, ಅನಿಷ್ಟ ನಿವಾರಣೆ; ಮೊದಲಾದವುಗಳನ್ನು ಭಕ್ತಾಧಿಗಳು ಕೇಳಿಕೊಳ್ಳುತ್ತಾರೆ.