ಮ್ಯಾಸನಾಯಕರಲ್ಲಿ ಪುರುಷ ದೇವತೆಯಂತೆ ಸ್ತ್ರೀ ದೇವತೆಗೂ ಮಹತ್ವ ನೀಡಿರುವುದು ಕಂಡುಬರುತ್ತದೆ. ಮನೆದೇವತೆಯೆಂದು, ನಮ್ಮ ವಂಶಸ್ಥಳೆಂದು ಬಗೆಬಗೆಯಾಗಿ ಕಥೆಗಳನ್ನು ಕಟ್ಟಿಕೊಂಡಿದ್ದಾರೆ. ಬುಡಕಟ್ಟು ಜನರಿಗೆ ಮಾತೃದೇವತೆ ತೀರಾ ಹತ್ತಿರವಾಗಿದ್ದು, ಮಾಂಸಹಾರಿ ಭೋಜನ, ಬಲಿಗಳಿಂದ ಭಕ್ತಾಧಿಗಳಲ್ಲಿ ಪ್ರೇರಣೆ ಮತ್ತು ಆಸಕ್ತಿಗಳೆರಡು ಏಕಕಾಲಕ್ಕೆ ವ್ಯಕ್ತವಾಗುವುದು ಹಬ್ಬ – ಜಾತ್ರೆಗಳಲ್ಲಿ. ತಮ್ಮ ಹಟ್ಟಿಗಳಲ್ಲಿ ಗುಡಿಗಳನ್ನು ಕಟ್ಟಿ ಶಿಲಾಮೂರ್ತಿ ಇಲ್ಲವೆ ಮಣ್ಣಿನ ಮೂರ್ತಿಯನ್ನು ಇಡುತ್ತಾರೆ. ತೀರಾ ಸುಧಾರಿತ ಗ್ರಾಮಗಳಲ್ಲಿ ಚಿನ್ನ, ಬೆಳ್ಳಿ, ಹಿತ್ತಾಳೆಯಿಂದ (ಕಂಚು) ದೇವತೆ ಮೂರ್ತಿ ಮಾಡಿಸುವರು. ಗೌರಸಮುದ್ರದ ಮಾರಮ್ಮ, ಕೊಡದಗುಡ್ಡದ ಮಾರಮ್ಮ, ಮಲಿಯಮ್ಮ, ದುರುಗಮ್ಮ, ಹಿರಿಚಿನ್ನಮ್ಮ ಮೊದಲಾದ ದೇವತೆಗಳಿವೆ

ದೇವರೆತ್ತುಗಳು ಮತ್ತು ಕಿಲಾರಿ (ಗುರುನಾಥ ಮತ್ತು ತಿಮ್ಮಪ್ಪದೇವರು) ಪೂಜಾರಹಳ್ಳಿ

ಬಳ್ಳಾರಿ ಜಿಲ್ಲೆಯ ಹೊಸಪೇಟೆ – ತಾ, ಕಮಲಾಪುರ ಪಟ್ಟಣದಲ್ಲಿ ನಾಯಕರ ಏಳು ಕೇರಿಗಳಿದ್ದು, ಇವರು ಬಹುಸಂಖ್ಯಾತರಾಗಿರುವರು. ಮನ್ಮಥ ಕೇರಿಯಲ್ಲಿ (೫ನೇ ವಾರ್ಡ್) ಪೂಜಾರಿ ನೆರಗಲ್ಲಪ್ಪ ತಂದೆ ಪೂಜಾರಿಬೊಮ್ಮಯ್ಯ ಎಂಬುವರು ‘ಬುಟ್ಟುಗಲೋರು’ ಪಂಗಡಕ್ಕೆ ಸೇರಿದ್ದು, ಮಾರವ್ವ ಬುಟ್ಟುಗಲಾರೆಂದು ಕರೆಯುತ್ತಾರೆ. ಪುರುಷ ದೇವತೆಯಾದ ಬೊಮ್ಮದೇವರನ್ನು ಮನೆದೇವರಾಗಿ ಪೂಜಿಸುವ ಇವರು ಅವನ ಅಕ್ಕ ಗೌರಸಮುದ್ರದ ಮಾರಮ್ಮನನ್ನು ಸ್ತ್ರೀದೇವತೆಯಾಗಿ ನಡೆದುಕೊಳ್ಳುವರು. ಗೌರಸಮುದ್ರಕ್ಕೆ ಜಾತ್ರೆ ಸಮಯದಲ್ಲಿ ಇವರು ಹೋಗಿಬರುತ್ತಾರೆ. ಅಲ್ಲಿ ಅಕ್ಕಪಕ್ಕದಲ್ಲಿ ಇವೆರಡು ದೇವತೆಗಳ ಗುಡಿಗಳಿವೆ. ಕಮಲಾಪುರದಲ್ಲಿರುವ ಮಾರಮ್ಮ ದೇವತೆಯ ಪೂಜಾರಿ ಮಾರಮ್ಮ ಎಂಬುವರು. ಊರಿನ ಹಿರಿಯರಂತೆ ಪೂಜಾವಿಧಾನಗಳಲ್ಲಿ ಭಾಗವಹಿಸುವರು. ದೇವರೆತ್ತುಗಳು ಹಿಂದೆ ಇದ್ದವು. ಇಂದು ಇಲ್ಲ. ದೇವತೆ ಹೊರ ಬಂದಾಗ ಮಡಿ ಹಾಸುವುದುಂಟು. ಪೌಳಿಯಲ್ಲಿ ಬೇಟೆಯನ್ನು ಇವಳಿಗೆ ಕಡಿಯುವರು. ತುಂಗಭದ್ರಾ ನದಿ ಇವರಿಗೆ ಪೂಜನೀಯವಾದುದು. ಮಾತೃಭಾಷೆ ತೆಲುಗು ಆದರೂ ಇಂದು ಕನ್ನಡವನ್ನು ಕಲಿಯುತ್ತಿದ್ದಾರೆ.

ಜಿಲ್ಲೇಯ್ಯ ಎಂಬುವರು ಕೂಡ್ಲಿಗಿ ತಾಲೂಕಿನ ದೊಂಬರಸಿದ್ಧಾಪುರ ಗ್ರಾಮದವರು. ದಾದುಗನಾರು (ಮಂದಲವಾರು) ಎಂಬುದು ಇವರ ಬೆಡಗು. ಹಿಂದೆ ಪದಿವಾರು ದೇವರನ್ನು (ಶ್ರೀಶೈಲದ ಎತ್ತುಗಳು) ಪೂಜಿಸುತ್ತಿದ್ದರು. ಇಂದು ದಡ್ಲುಮಾರಮ್ಮ (ದೇವರಹಳ್ಳಿ) ಯನ್ನು ಪೂಜಿಸುತ್ತಾರೆ. ಯುಗಾದಿಯಲ್ಲಿ ಊಟಕುಂಟೆ, ವಡಕಕಟ್ಟೆ, ಕಮರಕಾವಲಿನಲ್ಲಿ ಬೇಟೆ ಆಡುವರು. ಹಿರೇಕೆರೆಹಳ್ಳಿಯ ಮಾರಮ್ಮನಿಗೆ ಇವರು ನಡೆದುಕೊಳ್ಳುತ್ತಾರೆ. ಹಬ್ಬಗಳಲ್ಲಿ ಮಕ್ಕಳು, ಮಹಿಳೆಯರು ಬೇವಿನ ಸೀರೆ, ಬಾಯಿಗೆ ಬೀಗ ಮೊದಲಾದ ರೂಢಿಪದ್ಧತಿಗಳನ್ನು ಮಾಡುತ್ತಾ, ತಪ್ಪಡಿ, ಉರುಮೆಗಳ ಮೆರವಣಿಗೆಯಲ್ಲಿ ದೇವತೆಗೆ ಪ್ರದಕ್ಷಿಣೆ ಹಾಕುವರು. ದೇವರೆತ್ತುಗಳು ಸಂಖ್ಯೆಯಲ್ಲಿ ಕಡಿಮೆ ಇವೆ. ಇವಳಿಗೆ ಕೋಣ, ಓತ, ಕುರಿ, ಮೇಕೆ, ಕೋಳಿಗಳನ್ನು ಕಡಿಯುವರು.

ಮಲೆಯಮ್ಮ ದೇವಿ, ಕಮರಕಾವಲು ತಮಕೂರ‍್ಲಹಳ್ಳಿ ಕೆರೆ ಹತ್ತಿರ

ಓಬಯ್ಯ (ಜವಾನ) ತಂದೆ ಬುಕ್ಕಯ್ಯ ಮನ್ಮಥಕೇರಿ, ಕಮಲಾಪುರ ಇವರು ಕೂಲಿಯಿಂದ ಜೀವಿಸುತ್ತಾರೆ. ಎನುಮುಲಾರು ಎಂಬುದು ಇವರ ಬೆಡಗು. ಮನೆದೇವರಾಗಿ ಕೊಟ್ಟಗನಹಳ್ಳಿ ಭರ್ಮಪ್ಪನನ್ನು ಪೂಜಿಸುವರು. ಈತ ಐತಿಹಾಸಿಕ ವ್ಯಕ್ತಿ ಬೇಟೆಗಾರನೆಂದು ನಂಬಿಕೊಂಡಿರುವರು. ಮನೆದೇವತೆಯಾಗಿ ಕೊಟಗುಡ್ಡದ ಮಾರಮ್ಮನನ್ನು ಪೂಜಿಸುವರು. ಬರ್ಮಪ್ಪನು ಬೂವನಹಳ್ಳಿ ಹತ್ತಿರದ ಕೊಟ್ಟಗನಹಳ್ಳಿಯಿಂದ ಕಮಲಾಪುರದ ಕೆರೆಯ ಏರಿ ಮೇಲೆ ಬಂದು ನೆಲಸಿದನಂತೆ. ಅಂದಿನಿಂದ ಎನುಮುಲಾರು ದೇವರಾಗಿದ್ದಾನೆ. ಇದಕ್ಕೆ ಬೇಟೆ ಕಡಿಯುತ್ತಾರೆ. ದನಕುರಿಸಾಕಿ ದೇವರಿಗೆ ಸಾಕಿದ ಪ್ರಾಣಿಯನ್ನು ಬಲಿಕೊಡುತ್ತಾರೆ. ಮನೆಯಲ್ಲಿ ತೆಲುಗು, ಹೊರಗಡೆ ಕನ್ನಡ ಮಾತನಾಡುವ ಇವರು ಆರ್ಥಿಕವಾಗಿ ತೀರಾ ಹಿಂದುಳಿದಿದ್ದಾರೆ. ನ್ಯಾಯ – ತೀರ್ಮಾನಗಳನ್ನು ಇವರು ಚಾವಡಿಗಳಲ್ಲಿ ಮಾಡಿಕೊಳ್ಳುತ್ತಾರೆ.

ಸೂರಯ್ಯ ಎಳಿವೆ ಪಾಲಯ್ಯ ಎಂಬುವರು ಮಲ್ಲೂರಹಳ್ಳಿ (ಚಳ್ಳಕೆರೆ ತಾ) ಯ ಮ್ಯಾಸರಹಟ್ಟಿಯ ನಿವಾಸಿಯಾಗಿದ್ದಾರೆ. ಮ್ಯಾಸನಾಯಕರ ವಡೇಲಾರು ದೇವರೆತ್ತಿನವರು ಎಂಬುದು ಇವರ ಬೆಡಗು ಮತ್ತು ದೇವರು. ಹಟ್ಟಿಯಲ್ಲಿರುವ ಇವರು ಅಕ್ಕರಾಯಮ್ಮ (ದಾನಸಾಲಮ್ಮನ ಸಂತತಿ) ನನ್ನು ಆರಾಧಿಸುವರು. ದಂತ ಕಥೆಗಳ ಪ್ರಕಾರ ಮನ್ನುಲು ಮಹದೇವಯ್ಯನ ಮಗಳು ೭ ಜನ ದಾದಿಗಳು ಇವಳನ್ನು ಸಾಕಿದ್ದರಂತೆ. ಕೆಲವರು ಉದ್ಭವಿಸಿಬಂದವಳೆಂದು ಪೂರ್ವದ ಅಡಗುಪ್ಪ (ರಾಯದುರ್ಗ) ದೇವಗಂಪಳದಲ್ಲಿದ್ವಳೆಂದು ಹೇಳುತ್ತಾರೆ. ರಾಜಲುದೇವರಿಗೂ ಇದಕ್ಕೆ ಸಂಬಂಧವಿದ್ದು, ಮಡಕಶಿರಾ, ಅಡಗುಪ್ಪ ಅಲಕಸಿರಿಗೆ ಗುಡ್ಡದಲ್ಲಿದ್ವಳಂತೆ ತೋರುತ್ತಾಳೆ ಅಕ್ಕರಾಯಮ್ಮ. ಆಂಧ್ರದ ಅಚ್ಟುವಲ್ಲಿ ಮೂಲಸ್ಥಳ. ಮಲ್ಲೂರಹಳ್ಳಿಯ ಮ್ಯಾಸರಹಟ್ಟಿ, ಮುಷ್ಠಲಗುಮ್ಮಿಯ ಮಲಬೋರಯ್ಯನ ಹಟ್ಟಿಗಳಲ್ಲಿ ದೇವಾಲಯಗಳಿವೆ. ಪೂರ್ವಕ್ಕೆ ಬಾಗಿಲು, ಕಾಂಶಿ ಹುಲ್ಲಿನಿಂದ ಇದನ್ನು ನಿರ್ಮಿಸಲಾಗಿದೆ. ಶಾಸ್ತ್ರೀ ಪಾಲಯ್ಯ ಎಂಬುವರು ವಡೇಲಾರು ದೇವರಿಗೆ ಪರಂಪರೆಯಿಂದ ಬಂದ ಪೂಜಾರಿಯಾಗಿರುವನು. ದೇವರೆತ್ತುಗಳಿಗೆ ದಾನಸಾಲಮ್ಮನ ಎತ್ತುಗಳೆಂದು ಕರೆಯುವರು. ಇವು ಕಮರ ಕಾವಲು, ಪಿಲ್ಲಿಗುಂಡ್ಲು ಅಡವಿಗಳಲ್ಲಿವೆ. ಮಲ್ಲೂರಹಳ್ಳಿಯ ಚಲುವಾದಿ ಮಲ್ಲಯ್ಯನ ಮಗ ತಿಪ್ಪಯ್ಯ ಉರುಮೆ ಬಡಿಯುತ್ತಾನೆ. ನಿವಾಳ ಬೇಟೆ ಕಡಿಯುವರಲ್ಲದೆ, ಹಬ್ಬಗಳಲ್ಲಿ ಕಾಸು, ಮೀಸಲು, ಮಣೆವುಗಳನ್ನು ಇಡುತ್ತಾರೆ. ಇವರು ಕೋಲಾಟ, ಬಯಲಾಟ, ಯಕ್ಷಗಾನ, ಸಾಮಾಜಿಕ ನಾಟಕಗಳನ್ನು ಅಭಿನಯಿಸುತ್ತಾರೆ.

ನಾಯಕರ ಪಂಚಾಯ್ತಿ ಚಾವಡಿ, ಕಮಲಾಪುರ

ಇದೇ ದೇವರಿಗೆ ಸೇರಿದ ನಾಯಕನಹಟ್ಟಿಯ ಶ್ರೀಮತಿ ಕಾಟಮ್ಮ ದಿ. ತಿಪ್ಪಸೂರಯ್ಯ (ತಂದೆ ಪೂಜಾರಿ ಬೋರಯ್ಯ) ನವರು ವ್ಯವಸಾಯ ಕುಟುಂಬದವರು. ‘ಎನುಮುಲಾರು’ ಬೆಡಗಿಗೆ ಸೇರಿದ್ದು, ’ವಡೇಲು ದೇವರು’ ನಮ್ಮ ಮನೆದೇವರೆಂದು ಹೇಳುತ್ತಾರೆ. ಇದಕ್ಕೆ ಇನ್ನೊಂದು ಹೆಸರು ’ಅಡವಿ ಮ್ಯಾಸರು’. ಅಂದರೆ ಪೆಟ್ಟಿಗೆ ದೇವರೆಂದು ತಿಳಿಯಬಹುದು. ಈ ದೇವರು ನಿಡಗಲ್ಲು ಬೆಟ್ಟದ ಭೂಮಿಯಿಂದ ಹುಟ್ಟಿ, ಅಲ್ಲಿಂದ ವಲಸೆ ಬಂದಿದ್ದು, ಗಾದರಿಪಾಲನಾಯಕನ ಸೋದರಿ ಪೆದ್ದರಾಯಮ್ಮನಿಗೆ ಸಂಬಂದಿಸಿದ್ದೆಂದು ಹೇಳಲಾಗುತ್ತದೆ. ತಂಗಡಿಗಿಡದಿಂದ ನನ್ನಿವಾಳಕ್ಕೆ ಹೋಗಿ ನಂತರ ಗೊಣೂ (ನೂ) ರುನಿಂದ ಜನ್ನಿಗೆ ಹಳ್ಳ (ಚಿನ್ನಹಗರಿ) ದ ಮೂಲಕ ಮ್ಯಾಸರಹಟ್ಟಿಗೆ ಬಂದಿದೆಯಂತೆ. ಇವಳಿಗೆ ಮೊನ್ನಲು ಮಹದೇವನ ಮಗಳೆಂದು ಕರೆಯುವರು. ಪೆದ್ದಕ್ಕನಿಗೆ ಏಳು ಮಲ್ಲಿಗೆ ತೂಕದ ರಾಜಕುಮಾರಿ ಮಲ್ಲಿಗೆ ದೇವಿ ಎಂದು ಎನುಮುಲಾರು ಕರೆದುಕೊಳ್ಳುವರು. ಮಂದಲಾರು ಇವಳಿಗೆ ನಡೆದುಕೊಳ್ಳುವರು. ದೇವಾಲಯ ಅಷ್ಟು ಭದ್ರವಾಗಿಲ್ಲ. ನಿಡಗಲ್ಲು ಬೆಟ್ಟದಲ್ಲಿ ಇವರ ಕುರುಹಗಳಿವೆಯಂತೆ. ನಾಯಕನಹಟ್ಟಿಯ ಹತ್ತಿರ ಮಾದಯ್ಯನಹಟ್ಟಿಯಲ್ಲಿ ಅಕ್ಕರಾಯಮ್ಮನ ತಮ್ಮಂದಿರು ಇವನನ್ನು ನೇಮಿಸುವರು. ನನ್ನಿವಾಳ, ಗೋನೂರು ಇವರಿಗೆ ಅರಮನೆ ಮತ್ತು ಕಟ್ಟೆಮನೆ. ದೇವರೆತ್ತುಗಳು ಸು. ೧೦೦ ಇದ್ದು, ಹುಣ್ಣಿಮೆ, ಅಮವಾಸೆಗೆ ಪೂಜೆ ಮಾಡುತ್ತಾರೆ. ಕಿಲಾರಿ ಹೆಸರು ಚಿನ್ನಯ್ಯ, ಇವರ ಯಜಮಾನ ತಿಪ್ಪಯ್ಯ. ಆಯಗಾರರು ವಿವಿದ ಕೆಲಸಗಳನ್ನು ಮಾಡುತ್ತಾರೆ. ಶೂನ್ಯದಲ್ಲಿ ಈ ದೇವರಿಗೆ ವಾಸೆ ಕೊಯ್ದು, ಸ್ವರ್ಗ (ಸೊರಗ – ಚರಗ) ಹಾಕುತ್ತಾರೆ. ೫ವರ್ಷಕ್ಕೊಮ್ಮೆ ಚಿನ್ನಹಗರಿಗೆ ಗಂಗೆಪೂಜೆಗೆ ಹೋಗುತ್ತದೆ ಈ ದೇವರು. ಪೆದ್ದಕ್ಕರಾಯಮ್ಮ ದಾನಸಾಲಮ್ಮನ ತಂಗಿಯೆಂದು, ಶೈವ ಪಂಥದವಳೆಂದು ಕರೆಯುವರು. ಬೇವಿನಮರ ಇವರಿಗೆ ಪವಿತ್ರವಾದುದು. ಜರಿಮಲೆ ಕಡೆ ಹಿಂದೆ ಬೇಟೆಗೆ ಬರುತ್ತಿದ್ದರೂ, ಈಗ ಇಲ್ಲ. ತೆಲುಗು ಭಾಷೆಯಾಡುವ ಇವರು ಕೂಲಿಯಿಂದ ಜೀವಿಸುತ್ತಿದ್ದು, ತವರುಮನೆಯವರಿಂದ ತಾಳಿ ತರಿಸಿಕೊಳ್ಳುತ್ತಾರೆ. ಹೊರತು ಗಂಡನಿಂದ ಮಣಿಸರವನ್ನಷ್ಟೇ ಕಟ್ಟಿಸಿಕೊಳ್ಲುತ್ತಾರೆ ಈ ದೇವರ ವಿಶಿಷ್ಟ ಸಂಪ್ರದಾಯಗಳಿವೆ. ಕುಂಬಳಕಾಯಿ ತಿನ್ನುವುದಿಲ್ಲ. ಅದನ್ನು ಹಾಕಿದರೆ ಕಾಯಿ ಬಿಡುವುದಿಲ್ಲವೆಂಬ ನಂಬಿಕೆಯಿದೆ. ಮಲ್ಲಿಗೆ ದೇವಿ ಅಥವಾ ಅಕ್ಕರಾಯಮ್ಮನ ಬಗ್ಗೆ ಕಥೆಯೊಂದು ಹೀಗೆ: ೭ ಅಂತಸ್ಥಿನ ಮಾಳಿಗೆ ಮೇಲೆ ಕೂದಲು ಹಾರಿಸಿಕೊಳ್ಳುವಾಗ ಸೂತಕವಾಗಿ ಸೂರ್ಯನನ್ನು ಹುಟ್ಟುವುದನ್ನು ಕಂಡು ಮೋಹಿಸಿದಳಂತೆ. ಸುತ್ತೆಲ್ಲ ಗಂಡುಗಳು ಬಂದು ನೋಡಲಾಗಿ ನಿನ್ನಂಥ ಗಂಡ ಸಿಗಲಿಲ್ಲ. ನೀನಾದರೂ ಮದುವೆ ಆಗು ಎನ್ನುತ್ತಾಲೆ. ಗರ್ಭಿಣಿಯಾಗಿ ೯ ತಿಂಗಳಲ್ಲಿ ಮಗು ಹಡೆದಳು. ಹಡೆದ ಮಗುವನ್ನು ತಿಪ್ಪೆಯಲ್ಲಿ ಹಾಕಿದಾಗ ಅದು ಅನಾಥವಾಗಿ ರೋಧನೆ ಪಡುತ್ತಿತ್ತು. ಜೇನುಹನಿಗಳು ಬಾಯಲ್ಲಿ ಬೀಳುತ್ತಿದ್ದರಿಂದ ಚೇತರಿಸಿಕೊಂಡು ಮಗ ಅಲ್ಲೇ ಉಳಿಯಿತು. ಬಡವರಾದ ಮಂದಲವಾರು ರಾಜ್ಯಾಳ್ವಿಕೆ ನಡೆಸುತ್ತಿದ್ದರು. ಒಮ್ಮೆ ಬೇಟೆಗೆ ಹೋಗಾದ ಆ ಬೇಟೆಗಾರನಿಗೆ ಈ ಮಗು ಸಿಕ್ಕಾಗ ಅವನು ಸಾಹುಕಾರನಾದನಂತೆ. ಅಲ್ಲಿದ್ದ ಮುನ್ನುಲು ಮಹದೇವನ ಮನೆಗೆ ತಂದರು. ಆತನ ಹೆಂಡತಿ ಮಗುವನ್ನು ಪಡೆದು, ಮಗು ತಂದ ಬಡವನಿಗೆ ಅರ್ಧ ರಾಜ್ಯವನ್ನು ಕೊಡಲು ರಾಜನಿಗೆ ಗೌಡ ಒಪ್ಪಿಸಲು ತಿಳಿಸಿದಳು. ಅದರಂತೆ ೩೩ ಹಳ್ಳಿಗಳು ಇವನಿಗೆ ಬರಬೇಕು. ಈ ಮಗು ಬೆಳೆದಾದ ಮೇಲೆ ‘ಎನುಮುಲುಡ’, ‘ಅಡಿವಿಮ್ಯಾಸ’ ಎಂದು ಕರೆದರು. ಈ ವಂಶೀಯರು ಕೋಣ, ಎಮ್ಮೆ, ಕೋಳಿ ಸಾಕುವುದಿಲ್ಲ. ಮತ್ತು ನವಣೆ, ಕುಂಬಳಕಾಯಿಗಳನ್ನು ಮುಟ್ಟುವುದಿಲ್ಲ. ಇವರ ಪುರಾಣ ನಂಬಿಕೆ (ಕಥೆ) ಗಳಿಗೂ ಇಂದಿನ ಆಚರಣೆಗಳಿಗೂ ಅಲ್ಪಸ್ವಲ್ಪ ಸಂಬಂಧವಿದ್ದಂತಿದೆ.

ಆಂಧ್ರದ ಧಾರ್ಮಿಕ ಕ್ಷೇತ್ರಗಳ ಪ್ರಭಾವ ಪ್ರಾಚೀನ ಸಂದರ್ಭದಲ್ಲಿ ಕರ್ನಾಟಕದ ಮೇಲಾದುದನ್ನು ಅಲ್ಲಗಳೆಯುವಂತಿಲ್ಲ. ಉದಾ: ತಿರುಪತಿ, ಶ್ರೀಶೈಲ, ಕಾಳಹಸ್ತಿ ಇತ್ಯಾದಿ. ಚಳ್ಳಕೆರೆ ತಾಲೂಕಿನ ಮಲ್ಲೂರಹಳ್ಳಿಯ ಪಿ. ಮುದಿಯಣ್ಣ ತಂದೆ ಪರ್ವತಯ್ಯನವರು ಅಜ್ಜಯ್ಯನ ಕಪಿಲೆಯಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ಇವರು ಶಿಕ್ಷಕರು. ಮಂದಲವಾರು ಎಂಬುದು ಇವರ ಬೆಡಗು. ಇವರ ಮನೆದೇವರು ಹುಚ್ಚಮಲ್ಲಯ್ಯ (ಆಡುಮಲ್ಲೇಶ್ವರ) ಎರಡನೇಯದು ರಾಜಲದೇವರು. ರಾಯದುರ್ಗದ ಹತ್ತಿರ ಜುಂಜುರಮ್ಮನಹಳ್ಳಿ ಬೆಟ್ಟದ ಮೇಲೆ ಘರ್ಷಣೆಯಾಗಿ ವೇದಾವತಿ ಹತ್ತಿರ ಹುಚ್ಚುಮಲ್ಲಪ್ಪ ನೆಲೆಸಿದನಂತೆ. ಅಲ್ಲಿ ೪೦ ಎಕರೆಯ ಒಂದೇ ಕಲ್ಲಿನ ಗುಡ್ಡವಿತ್ತು. ೨ ಗುಡ್ಡಗಳನ್ನು ಪೂಜಿಸುವುದು ಇಂದಿಗೂ ಇದೆ. ಹಳೆಯ ಕಾಲದ ಇಟ್ಟಿಗೆಗಳಿಂದ ಕಟ್ಟಿದ ದೇವಾಲಯವು ಮಲ್ಲಿಕಾರ್ಜುನಸ್ವಾಮಿ, ಬಸವಣ್ಣನ ವಿಗ್ರಹಗಳಿವೆ. ರಾಜಣ್ಣ ಎಂಬುವರು ಇದರ ಪೂಜಾರಿ. ವಂಶಪರಂಪರೆಯಿಂದ ದೇವರ ಕಾರ್ಯಚಟುವಟಿಕೆಗಳು ನಡೆಯುವವು. ನನ್ನಿವಾಳ ಮತ್ತು ಜುಂಜುರುಮ್ಮನಃಳ್ಳಿ ಅರಮನೆ ಗುರುಮನೆಗಳಾಗಿದ್ದವು. ಆಯಗಾರರು ಇತರ ಕೆಲಸಗಳನ್ನು ಮಾಡುತ್ತಾರೆ. ಓಬಳದೇವರೆಇಗೆ ವಾಸೆ ಕೊಯ್ಯುತ್ತಿದ್ದು, ದಡ್ಲುಮಾರಮ್ಮನನ್ನು ಸ್ತ್ರೀ ದೇವತೆಯಾಗಿ ಪೂಜಿಸುವರು. ಶೈವಪಂಥದವರಾದ ಇವರು ವೇದಾವತಿ ನದಿ, ತಂಗಡೆಗಿಡಗಳನ್ನು ಪವಿತ್ರವೆಂದು ತಿಳಿದಿರುವರು. ಶಿವರಾತ್ರಿಯಲ್ಲಿ ಈ ದೇವರ ದೊಡ್ಡ ಹಬ್ಬವಾಗುವುದು.

ಮೂಲದಲ್ಲಿ ನಾಯಕ, ಪಾಳೆಯಗಾರರೆಂದು ಹೇಳಿಕೊಳ್ಳುವ ಸಂಸ್ಥಾನಗಳಿರುವುದು ವಿರಳ. ಆನೆಗುಂದಿಯವರು ಕ್ಷತ್ರಿಯರೆಂದು, ರಾಯದುರ್ಗದವರು ಕ್ಷತ್ರಿಯರೆಂದು ತಮ್ಮನ್ನು ಗುರುತಿಸಿಕೊಳ್ಳುವುದು ವಿಪರ್ಯಾಸ. ಉಳಿದ ಪಾಳೆಯಪಟ್ಟುಗಳು ನಾಯಕರೆಂದು ಹೇಳಿಕೊಳ್ಳಲು ಅಂಜುವುದಿಲ್ಲ. ನಾಯಕನಹಟ್ಟಿ, ಚಿತ್ರದುರ್ಗ, ಹರ್ತಿಕೋಟೆ, ಜರಿಮಲೆ ಮತ್ತು ಗುಡೆಕೋಟೆ, ರಾಯದುರ್ಗದ ರಾಜವಂಶೀಯರಾದ ತಿಪ್ಪೇಸ್ವಾಮಿ ನಾಯಕ (ಕೋನೆ ಟಿ. ನಾಯಕನ ವಂಶ) ಮಗ ಆರ್.ಪಿ. ವೆಂಕಟಪತಿ ಅವರು ಪಾಳೆಯಗಾರರ ಮನೆತನದ ಕೊನೆಯದ ವ್ಯಕ್ತಿ. ಈತ ನಿವೃತ್ತಿ ಬ್ಯಾಂಕ್ ಮೇನೇಜರ್. ರಾಯದುರ್ಗದ ಕೋಟೆಯೊಳಗೆ ದೊರೆಮನೆಯಲ್ಲಿ ವಾಸಿಸುವವರು. ಇವನ ಮೂಲ ಪುರುಷರು ವೆಂಕಟಪತಿನಾಯುಡು, ಗೌರಿಶಂಕರರಾಜು ಎಂದು ಹೇಳುತ್ತಾರೆ. ಇರದು ಸೂರ್ಯವಂಶ, ಅಗ್ನಿಕುಲದ ಕ್ಷತ್ರಿಯ ಧರ್ವವಾಗಿದ್ದು, ವಿಷ್ಣುಗೋತ್ರವಗಿದೆ. ಹಳೆಯ ಅರಮನೆಯಲ್ಲಿ ವಾಸ. ಮನೆದೇವರು ತಿರುಪತೆ ವೆಂಕಟೇಶ್ವರಸ್ವಾಮಿ. ಯಾತ್ರಾಸ್ಥಳ ಪ್ರತಿಯೊಂದು ವ್ಯವಹಾರಕ್ಕೂ ತಿರುಪತಿ ಕೇಂದ್ರಸ್ಥಳ. ರಾಯದುರ್ಗದ ಕೋಟೆಯೊಳಗೆ ತಿರುಪತೆ ವೆಂಕಟೇಶ್ವರ ದೇವಾಲಯವಿದೆ. ಇದಕ್ಕೆ ಸು. ೫೦೦ ವರ್ಷಗಳ ಇತಿಹಾಸವಿದೆ. ಪೂಜಾರಿಯ ಹೆಸರು ಬ್ರಾಹ್ಣರ ರಂಗನಾಥಚಾರ್ಯ. ದೇವಾಲಯದ ಸಮಿತಿ ರಚಿಸಲಾಗಿದೆ. ದಾಸಯ್ಯ, ಉರುಮೆಯವರು ಮೊದಲಾದವರಿದ್ದಾರೆ. ಇವರು ಮನೆಯಲ್ಲಿ ಉಚ್ಚಂಗಿ ಇಲ್ಲಮ್ಮ, ಮಾರಮ್ಮ, ದುಗದಗಲಮ್ಮ ರಾಯದುರ್ಗದಲ್ಲಿರುವ ಇತರ ದೇವತೆಗಳನ್ನು ಪೂಜಿಸುವರು. ವೈಷ್ಣವ ಸಂಪ್ರದಾಯವಿರು ಇವರಲ್ಲಿ ಬೇವಿನಮರಕ್ಕೆ ಪೂಜಿಸುವುದುಂಟು. ಮಾರಮ್ಮನ ಸಿಟಿ ಅಘುತ್ತಿದ್ದು, ಬೇಟೆ ಸಂಪ್ರದಾಯವು ರೂಢಿಯಲ್ಲಿದೆ. ಇವರು ತೆಲುಗು ಭಾಷಿಕರು, ಸತ್ತವ್ಯಕ್ತಿಯ ಶವವನ್ನು ಹೂಳದೆ ಸುಡುತ್ತಾರೆ. ಇವರ ಸಂಬಂಧ ಉನ್ನತ ಮನೆಗನಗಳೊಂದಿಗಿದೆ: ಬಾಗಲಕೋಟೆ, ಬೆಂಗಳೂರು, ಕಲ್ಲಯಾಣದುರ್ಗ, ಚಿನ್ನಪಲ್ಲಿ ಇತ್ಯಾದಿ.

ಖಾಸ ಬೇಡರ ಪಡೆ, ಸೊಂಡೆ ಕೋಳ

ಬೇಡರಲ್ಲಿ ಮಾತ್ರವಲ್ಲದ, ಕಾಡುಗೊಲ್ಲರಲ್ಲಿಯೂ ವೀರಪಂಥ ಊರುಗೊಲ್ಲರು ಪೆನ್ನೋಬಳೇಶನನ್ನು ಪೂಜಿಸುವವರು. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಸೊಂಡೆಕೆರೆ ಗೊಲ್ಲರು ನಡುಗಡ್ಡೇರು ಎನಿಸಿಕೊಂಡಿದ್ದಾರೆ. ಇವರಲ್ಲಿ ಕೆಲವರು ಮೈಲಾರಲಿಂಗೇಶ್ವರನನ್ನು ಪೂಜಿಸವರು. ಸೊಂಡೂರು ತಾಲೂಕಿನ ಚಿತ್ತಪ್ಪ. ತಂದೆ ತಮ್ಮಯ್ಯ ೬೫ ವರ್ಷದ ವಯೋವೃದ್ಧ. ಚೋರನೂರು ಬೊಮ್ಮಗಟ್ಟದಲ್ಲಿ ನೆಲೆಸಿರುವರು. ಕರಡಿಗೊಲ್ಲರು ಅಥವಾ ಚಿತ್ತಗೊಲ್ಲರೆಂದು ಇವರೆಗೆ ಕರೆಯುವರು. ಮನೆದೇವರು ಚಿತ್ರದೇವರು. ಇವನು ಮೊಲವನ್ನು ಬೇಟೆಯಾಡುತ್ತಿದ್ದಾಗ ದಂಡು – ದಳ ಸಮೇತ ಅಡಗಿದ್ದಾನಂತೆ. ಗುಡಿಹಳ್ಳಿ, ಮುಪ್ಪಲಕುಂಟೆ ಕಟ್ಟೆಮನೆ ಮತ್ತು ಗುಡಿಕಟ್ಟೆಗಳಾಗಿವೆ. ಇವರಿಗೆ ಕರೋಬನಹಳ್ಳಿ ಹಿರಿಯೂರು, ತಾಳವಟ್ಟಿ, (ಹಿರಿಯೂರು), ರಾಮನಹಳ್ಳಿ (ಹಿರಿಯೂರು) ಈ ೩ ಕಟ್ಟೆಮನೆಗಳು. ಈ ಪರಿಸರದಲ್ಲಿರುವ ಇತ್ತಪ್ಪ, ಜುಂಜುಪ್ಪ, ಚಿತ್ರಯ್ಯ, ಕಾಟಯ್ಯ ಮೊದಲಾದವರ ದೇವಾಲಯಗಳು ಬೆಳಕು ಚೆಲ್ಲುತ್ತವೆ. ಇಲ್ಲಿ ದಾಸಯ್ಯ, ಉರುಮೆಯವರು, ಅಗಸರು ಇತರ ಆಯಾಗಾರರು ಇದ್ದಾರೆ. ಎಲ್ಲಮ್ಮನನ್ನು ಪೂಜಿಸುವರು. ಚಿನ್ನಹಗರಿ ಪೂಜಾರ್ಹವಾಗಿದೆ. ತಳುಕಿನ ಗುಡ್ಡ, ಚಿತ್ತರುಬಂಡೆಗಳು ಆರಾಧನೆ ಸ್ಥಳಗಳಾಗಿವೆ. ಕಾಸು, ಮೀಸಲು, ಮಣೆವು, ಯುಗಾದಿಬೇಟೆ, ಕೋಲಾಟ, ನಾಟಕ ಮೊದಲಾದವು ಪ್ರಚಲಿತದಲ್ಲಿವೆ.

ಮ್ಯಾಸನಾಯಕರು ಹಿಂದೂಧರ್ಮದ ತಳಹದಿಯಲ್ಲಿಯೇ ತಮ್ಮ ಪ್ರತ್ಯೇಕ ಧರ್ಮ, ರೀತಿ, ನೀತಿ, ಆಚಾರವಿಚಾರಗಳನ್ನು ಉಳಿಸಿಕೊಂಡಿರುವರು. ಇಲ್ಲಿ ಸೂರ್ಯ ಮತ್ತು ಚಂದ್ರ ವಂಶೀಯರಿಗೆ ಸಂಪ್ರದಾಯ, ಆಚರಣೆಗಳಲ್ಲಿನ ವ್ಯತ್ಯಾಸಗಳನ್ನು ಗುರುತಿಸಬಹುದು. ಎರಡು ಪಂಗಡಗಳಾದ ಮಂದವಾರು ಮತ್ತು ಮಲ್ಲಿನಾಯದನವರು ಶೈವ ಮತ್ತು ವೈಷ್ಣವ ಸಂಪ್ರದಾಯಗಳನ್ನು ಉಳಿಸಿಕೊಂಡು ಬಂದಿದ್ದಾರೆ. ಪ್ರಮುಖವಾಗಿ ಎನುಮುಲಾರು, ಪಾಮುಡ್ಲಾರು, ಕಾಮಗೇತಲಾರು, ನಲಬಲ್ಲಾರು, ಮಳೆಲಾರು, ಗುಂಡೇತಲಾರು, ಪಟ್ಟುಪಲ್ಲಾರು ತಮ್ಮ ತಮ್ಮ ಮೂಲಪುರುಷರನ್ನು ಆರಾಧಿಸಿಕೊಂಡು ಬಂದಿರುವುದನ್ನು ನೋಡಬಹುದು. ಕೆಲವರಿಗೆ ಪ್ರಾಣಿ ಬೇಟೆಗಳ ಸಂಕೇತದಿಂದ ಕುಲನಾಮಗಳು ಬಂದಿವೆ. ಕುಕ್ಕಲಾರು, ಜಿಂಕಲಾರು, ತೊಡ್ಲ್ಯಾರು, ಮ್ಯಾಕಲಾರು, ಗಂಪಲಾರು, ಎದ್ಲಾರು, ಪಾಮಿಡ್ಲಾರು ಇತ್ಯಾದಿ.

ಚಿತ್ರದುರ್ಗ ಜಿಲ್ಲೆ ಮತ್ತು ಇದರ ಗಡಿ ಜಿಲ್ಲೆಗಳಲ್ಲಿ ನಾಯಕರು ವ್ಯಾಪಕವಾಗಿ ನೆಲಸಿರುವುದು ಕಂಡುಬರುತ್ತದೆ. ಬುಡಕಟ್ಟು ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿರುವ ಮ್ಯಾಸಬೇಡರು ಗಿರಿಕಂದರ, ನದಿ ಇಕ್ಕೆಲಗಳಲ್ಲಿ ವಾಸಿಸುವುದುಂಟು. ತಾವು ನೆಲಸಿರುವ ಹಟ್ಟಿಗಳಿಗೆ ತಮ್ಮ ವಂಶದ ವೀರನ ಹೆಸರನ್ನು ಇಟ್ಟಿರುತ್ತಾರೆ. ಆ ವೀರನ ಸಾಧನೆಯನ್ನು ಕಥೆ, ಜನಪದ ಕಾವ್ಯಗಳಲ್ಲಿ ಹಾಡುತ್ತಾರೆ. ಸಂಕೇತವಾಗಿ ವೀರಗಲ್ಲಿಗೆ ದೇವಾಲಯ ಕಟ್ಟಿ ಹಬ್ಬ ಜಾತ್ರೆಗಳನ್ನು ಮಾಡುವರು. ಒಂದು ವಂಶದ, ಜಾತಿಗೆ ಸೀಮಿತವಾದ ವೀರನನ್ನು ಆನಂತರ ಇತರರು ಪೂಜಿಸುವುದು ಗಮನಾರ್ಹ. ಪಿತೃ ಆರಾಧನೆಯನ್ನು ಇದು ಹೋಲುತ್ತಿದ್ದರೂ ವೀರರ ಸಂಪ್ರದಾಯ, ಧಾರ್ಮಿಕ ಪಂಥವಾಗಿ ಬೆಳೆದುಬಂದಿದೆ. ಮ್ಯಾಸಬೇಡರ ಸಂಸ್ಕೃತಿಯಲ್ಲಿ ತಮ್ಮ ಪೂರ್ವಜರನ್ನು ಆರಾಧಿಸುವ ದಟ್ಟ ಸಂಪ್ರದಾಯ. ದಿನದಿಂದ ದಿನಕ್ಕೆ ಮಹತ್ವ ಪಡೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಇವರ ಧಾರ್ಮಿಕ ಪಂಥ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಅನೇಕ ಪಲ್ಲಟಗಳಾಗಿರುವುದು ಗಮನಾರ್ಹ.